Advertisement
ಮಳೆ ಹಿಡಿಯೋ ಮೊದ್ಲು…..: ಭವ್ಯ ಟಿ‌. ಎಸ್. ಸರಣಿ

ಮಳೆ ಹಿಡಿಯೋ ಮೊದ್ಲು…..: ಭವ್ಯ ಟಿ‌. ಎಸ್. ಸರಣಿ

ಮಳೆಗಾಲ ಬಂತೆಂದರೆ ಮೀನುಗಳ ಕಾಲವೂ ಬಂದಂತೆಯೇ. ಹತ್ ಮೀನು, ಅವ್ಲು, ಗೌರಿ ಮೊದಲಾದ ಹೊಳೆ ಮೀನುಗಳು ಸಿಗುವಾಗ ರುಚಿಕರವಾದ ಮೀನು ಸಾರಿಗೆ ಬೇಕಾದ ತರತರದ ಹುಳಿಗಳು ಈ ಮೇ ತಿಂಗಳಲ್ಲಿ ತಯಾರಾಗಬೇಕು. ಮಲೆನಾಡಿನ ಕಾಡುಗಳಲ್ಲಿ ವಾಟೆ ಮರ ಇರುತ್ತದೆ. ಈ ವಾಟೆ ಕಾಯಿಗಳನ್ನು ಉದುರಿಸಿ ತಂದು ಸಣ್ಣಗೆ ಹೆಚ್ಚಿ, ಒಣಗಿಸಿ, ಬೀಜ ತೆಗೆದು ಉಪ್ಪು ಹಾಕಿ ಡಬ್ಬಿಗಳಲ್ಲಿ ಸಂಗ್ರಹಿಸಿಡುತ್ತಾರೆ. ಈ ವಾಟೆ ಹುಳಿ ಔಷಧೀಯ ಗುಣಗಳಿಂದ ಕೂಡಿದ್ದು ಮೀನು ಸಾರಿಗೆ ಒಳ್ಳೆಯ ರುಚಿ ನೀಡುತ್ತದೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿಯಲ್ಲಿ ಮಳೆ ಶುರುವಾಗುವ ಮುಂಚೆ ಮಾಡಿಟ್ಟುಕೊಳ್ಳುವ ಸಿದ್ಧತೆಗಳ ಕುರಿತ ಬರಹ ಇಲ್ಲಿದೆ

ಆಗಸದಲ್ಲಿ ಆಗಾಗ ಕಾರ್ಮೋಡಗಳ ಹಿಂಡು ದಂಡೆತ್ತಿ ಹೊರಟಿವೆ. ಗುಡುಗು, ಸಿಡಿಲಿನ ಹಿಮ್ಮೇಳದೊಂದಿಗೆ ಮಿಂಚಿ ಮರೆಯಾಗುವ ಸಂಚಿನೊಂದಿಗೆ ವರುಣನ ತಾಜಾ ಹನಿಗಳು ಕಾದ ಭೂರಮೆಯ ಮೈ ನೇವರಿಸಿ ಮಣ್ಣಿನ ಘಮದ ಸೊಂಪಾದ ಕಂಪನ್ನು ಮಲೆನಾಡಿನ ಪರಿಸರದಲ್ಲಿ ಪಸರಿಸಿ ಮುಂಗಾರಿನ ಹಬ್ಬದ ಮುನ್ಸೂಚನೆ ನೀಡುತ್ತಿದೆ.

ಮಲೆನಾಡಿಗರ ಭಾಷೆಯಲ್ಲಿ ಹೇಳಬೇಕೆಂದರೆ ಮಳೆ ಹಿಡಿಯಂಗದೆ. ಮಳೆಗಾಲ್ದ್ ಕೆಲ್ಸ ಒಂದೂ ಆಗ್ಲ. ಮಳೆಗಾಲ ಆರಂಭವಾಗೋ ಮೊದಲೇ ದರಗು ಗುಡಿಸಿ ತರೋದು, ಕಟ್ಟಿಗೆ ಕಡಿಸಿ ಮನೆಗೆ ತಂದು ಕೂಡೋದು, ಮನೆ, ಕೊಟ್ಟಿಗೆಗೆ ಮಳೆ ತಡೆಯುವಂತಹ ಮರೆ ಕಟ್ಟೋದು, ಹಾಳಾದ ಹೆಂಚು ತೆಗೆದು ಹೊಸ ಹೆಂಚು ಹಾಕೋದು, ತೋಟದ ಬೇಸಾಯ, ತೋಟಕ್ಕೆ ಔಷಧಿ ಹೊಡೆಯುವುದು, ಕಳೆ ಸವರುವುದು ಹೀಗೆ ಹತ್ತು ಹಲವು ಕೃಷಿ ಮತ್ತು ಮನೆಗೆ ಸಂಬಂಧಿಸಿದ ಕೆಲಸಗಳು ಆಗಿರಬೇಕು. ಮೇ ತಿಂಗಳು ಈ ಕೆಲಸಗಳ ಕಾಲ.

ಹಡ್ಡೆಯಲ್ಲಿ ದರಗು ಗುಡಿಸುವ ದರಬರ ಸದ್ದು. ಗಡಿಬಿಡಿಯ ಹೆಂಗಳೆಯರು ಉಟ್ಟು ಬೇಸರಾಗಿ ಪೆಟ್ಟಿಗೆಯಲ್ಲಿ ಇಟ್ಟ ವರ್ಷಗಳು ಕಳೆದರೂ ಹರಿಯದ ಸೀರೆಗಳ ಸಂಗಡ ಹಡ್ಡೆಗೆ ಹೋಗಿ ರಾಶಿ ರಾಶಿ ಬಿದ್ದ ಒಣಗಿದೆಲೆಗಳನ್ನು‌ ಗುಡಿಸಿ ಒಟ್ಟು ಮಾಡಿ ಈ ಸೀರೆಗಳಲ್ಲಿ ಕಟ್ಟಿ ದೊಡ್ಡ ದೊಡ್ಡ ಮೂಟೆಗಳಂತಹ ದರಗಿನ ಕಟ್ಟುಗಳನ್ನು ತಲೆ ಮೇಲೆ ಹೊತ್ತು ತಂದು ಮನೆಯ ಸಮೀಪದ ದರಗಿನ ಕೊಟ್ಟಿಗೆಯೊಳಗೆ ಸುರಿಯುತ್ತಿದ್ದಾರೆ. ಮಳೆಗಾಲದಲ್ಲಿ ಕೊಟ್ಟಿಗೆಗೆ ಹಾಕುವ ಈ ದರಗು ಹಸುಗಳಿಗೆ ಮಲಗಲು ಬೆಚ್ಚಗಿರುವ ಜೊತೆಗೆ ಸಗಣಿಯೊಂದಿಗೆ ಬೆರೆತು ಫಲವತ್ತಾದ ಗೊಬ್ಬರವಾಗುತ್ತದೆ. ಕಾಡಿನಲ್ಲಿ ಕಡಿದು ಹಾಕಿದ ಕಟ್ಟಿಗೆಯನ್ನು ತಂದು ಮನೆ ಬಳಿ ಹಾಕಲಾಗಿದೆ.

ಸ್ವಲ್ಪ ಸ್ವಲ್ಪ ಕಟ್ಟಿಗೆಗಳನ್ನು ಒಟ್ಟು ಮಾಡಿಕೊಂಡು ಸೌದೆ ಕೊಟ್ಟಿಗೆಯಲ್ಲಿ ವ್ಯವಸ್ಥಿತವಾಗಿ ಜೋಡಿಸಿಡುತ್ತಾರೆ. ಮನೆಯ ಮಕ್ಕಳಾದಿಯಾಗಿ ಎಲ್ಲರೂ ಕೈ ಹಾಕಿದರೆ ಮಳೆ ಬೀಳೋ ಮೊದಲೇ ಕಟ್ಟಿಗೆ ಸುರಕ್ಷಿತವಾಗಿ ಕೊಟ್ಟಿಗೆ ಸೇರಿ ಮನಸ್ಸು ನಿರಾಳವಾಗುತ್ತದೆ.

ಈಗಂತೂ ಮಾವಿನ ಸುಗ್ಗಿ. ಮಾವಿನ ಮಿಡಿಗಳನ್ನು ತಂದು ಆಯ್ದು ಉಪ್ಪಿನ ನೀರಿಗೆ ಹಾಕಿಡಲಾಗುತ್ತದೆ. ಮಿಡಿ ಬತ್ತಿದ ಮೇಲೆ ಉಪ್ಪಿನ ಕಾಯಿ ಹಾಕಿ ಜಾಡಿಯಲ್ಲಿ ತುಂಬಿಟ್ಟರೆ ಮಳೆಗಾಲದಲ್ಲಿ ನೆಂಚಿಕೊಳ್ಳಲು ಖುಷಿ. ಸ್ವಲ್ಪವೂ ಹದ ತಪ್ಪದಂತೆ ಅಮ್ಮಂದಿರು ಜತನದಿಂದ ಹಾಕುವ ಈ ಉಪ್ಪಿನ ಕಾಯಿ ವರ್ಷಗಳ ಕಾಲ ಕೆಡುವುದಿಲ್ಲ. ಖಾರ, ಒಗ್ಗರಣೆ, ಜಾಡಿಗೆ ತುಂಬುವ ಪ್ರತಿ ಪ್ರಕ್ರಿಯೆ ಕ್ರಮಬದ್ಧವಾಗಿರುವುದೇ ಇದರ ರಹಸ್ಯ.

ಇನ್ನೂ ಹಲಸಿನಕಾಯಿ ಎಲ್ಲಾ ಕಡೆ ಸಿಗುತ್ತಿರುವಾಗ ಹಲಸಿನಕಾಯಿ ಹಪ್ಪಳ, ಚಿಪ್ಸ್ ಮಾಡಲೇಬೇಕು. ಹಾಗೆ ಈ ಬೇಸಿಗೆಯಲ್ಲಿ ಅವಾಗಾವಾಗ ಹಲಸಿನ ಕಡ್ಗಿ (ಚಿಕ್ಕ ಚಿಕ್ಕ ಹಲಸಿನಕಾಯಿ)‌‌ ಸಾರಿನ ರುಚಿ ನೋಡಲೇಬೇಕು. ಆಹಾ ಈ ತರ ಪ್ರಾಕೃತಿಕ ತರಕಾರಿಲಿರೋ ರುಚಿ ಕೃತಕವಾಗಿ ಬೆಳೆದ ತರಕಾರಿಗೆ ಎಲ್ಲಿ ಬರಬೇಕು.

ಮಳೆಗಾಲ ಬಂತೆಂದರೆ ಮೀನುಗಳ ಕಾಲವೂ ಬಂದಂತೆಯೇ. ಹತ್ ಮೀನು, ಅವ್ಲು, ಗೌರಿ ಮೊದಲಾದ ಹೊಳೆ ಮೀನುಗಳು ಸಿಗುವಾಗ ರುಚಿಕರವಾದ ಮೀನು ಸಾರಿಗೆ ಬೇಕಾದ ತರತರದ ಹುಳಿಗಳು ಈ ಮೇ ತಿಂಗಳಲ್ಲಿ ತಯಾರಾಗಬೇಕು. ಮಲೆನಾಡಿನ ಕಾಡುಗಳಲ್ಲಿ ವಾಟೆ ಮರ ಇರುತ್ತದೆ. ಈ ವಾಟೆ ಕಾಯಿಗಳನ್ನು ಉದುರಿಸಿ ತಂದು ಸಣ್ಣಗೆ ಹೆಚ್ಚಿ, ಒಣಗಿಸಿ, ಬೀಜ ತೆಗೆದು ಉಪ್ಪು ಹಾಕಿ ಡಬ್ಬಿಗಳಲ್ಲಿ ಸಂಗ್ರಹಿಸಿಡುತ್ತಾರೆ. ಈ ವಾಟೆ ಹುಳಿ ಔಷಧೀಯ ಗುಣಗಳಿಂದ ಕೂಡಿದ್ದು ಮೀನು ಸಾರಿಗೆ ಒಳ್ಳೆಯ ರುಚಿ ನೀಡುತ್ತದೆ.

(ಜೀರ್ಕುಲ ಹುಳಿ)

ಹಾಗೆ ಇನ್ನೊಂದು ಹುಳಿ ಕಾಯಿಯೆಂದರೆ ಜೀರ್ಕುಲ ಹುಳಿ. ಈ ಹಣ್ಣು ಅಥವಾ ಕಾಯಿಗಳನ್ನು ಉದುರಿಸಿ ತಂದು ನೀರಲ್ಲಿ ತೊಳೆದು ಒಣಗಿಸಿ, ಹೆಚ್ಚಿ ನಂತರ ನೀರಿನಲ್ಲಿ ಬೇಯಿಸಿ, ಬತ್ತಿಸಿ ದ್ರವರೂಪದ ಕಪ್ಪು ಬಣ್ಣದ ಹುಳಿ ಮಾಡಿ ಬಾಟಲಿಗಳಲ್ಲಿ ಸಂಗ್ರಹಿಸಿಡುತ್ತಾರೆ. ಇದನ್ನು ಅಡ್ಡುಳಿ ಎನ್ನುತ್ತಾರೆ. ಮಣ್ಣಿನ ಗಡಿಗೆಗಳಲ್ಲಿ ಬತ್ತಿಸಿ ಮಾಡುವ ಮೀನು ಸಾರಿಗೆ ಇದನ್ನು ಬಳಸುತ್ತಾರೆ. ಈ ಹುಳಿ ಮೀನಿನ ಖಾದ್ಯಗಳ ರುಚಿ ಹೆಚ್ಚಿಸುವ ಜೊತೆಗೆ ಮೀನಿನ ಗೌವ್ಲು ಅಂದರೆ ವಾಸನೆ ತೆಗೆಯುತ್ತದೆ.

ಇನ್ನೂ ರೈತರು ಮಳೆಗಾಲದಲ್ಲಿ ಆರಂಭವಾಗುವ ಭತ್ತದ ಗದ್ದೆ ಕೆಲಸಗಳಿಗೆ ಈಗಿಂದಲೇ ಸಿದ್ಧತೆ ಶುರು ಮಾಡುತ್ತಾರೆ. ಮೇ ತಿಂಗಳ ಕೊನೆಯ ವಾರ ಕಾಲಿಡುವ ಮಳೆ ಸೆಪ್ಟೆಂಬರ್ ಅಂತ್ಯದವರೆಗೂ ತನ್ನ ನಾನಾ ಅವತಾರಗಳನ್ನು ತೋರಿಸುವುದರಿಂದ ಬೆಚ್ಚನೆಯ ಕಂಬಳಿ ಕೊಪ್ಪೆ ಮಾಡಿ ಅದರ ಕರೆ ಕಟ್ಟಿ, ಒಗೆದು ಹದ ಮಾಡಿ ಕಂಬಳಿ ಕಡ್ಡಿ ಸುರಿದು ಇಡುತ್ತಾರೆ. ಎಂತಹ ಬಿರುಗಾಳಿಗೂ ಜಗ್ಗದ ಈ ಕಂಬಳಿಕೊಪ್ಪೆ ಇಲ್ಲದೆ ಮಲೆನಾಡಿನ ಜಡಿಮಳೆ ಎದುರಿಸಿ ಬೇಸಾಯ ಮಾಡೋದು ಸಾಧ್ಯವೇ??

ಓ ಇದೇನು ಮಳೆಗಾಲದ ಸಿದ್ಧತೆಯೋ ಯುದ್ಧ ಸಿದ್ಧತೆಯೋ ಎಂದು ಅಚ್ಚರಿನಾ?? ನಾಲ್ಕರಿಂದ ಐದು ತಿಂಗಳು ಬಿಟ್ಟು ಬಿಡದೆ ಸುರಿವ ಮಳೆಯಲ್ಲಿ ಇವೆಲ್ಲವೂ ಸಿದ್ಧವಾಗಿದ್ದರೆ ಸರ್ವಜ್ಞನ ವಚನದಂತೆ ಮಳೆಗಾಲದಲ್ಲಿ ಸ್ವರ್ಗಕ್ಕೆ ಕಿಚ್ಚು ಹಚ್ಚಬಹುದು.

ಆಹಾ… ಅಲ್ನೋಡ್ರೀ ದರಗು ಗುಡಿಸಕೆ ಹೋದ್ ಹೆಂಗ್ಸ್ರೀಗೆ ಮನ್ನೆಯಷ್ಟೇ ಗುಡ್ಗು ಮಳೀಗೆ ಎದ್ದ ಅಣಬೆ ಸಿಗ್ತಾ ಅದಾವೆ. ನಮ್ಮನೆ ತಮ್ಮಣಿಗೆ ಅಣಬೆ ಪಲ್ಲೆ ಅಂದ್ರೆ ಪ್ರಾಣ. ನಾನೂ ಹೋಗಿ ಅವರ್ ಜತಿಗೆ ಅಣಬೆ ಹೆರ್ಕು ಬತ್ತೀನಿ ಆತಾ‌…? ಮುಂದಿನ್ ಕಂತು ಬರೆಯೋಷ್ಟತ್ತಿಗೆ ಮಳೆ ಹಿಡ್ದಿರ್ತದೆ. ಮಳೆ ಬಗ್ಗೆ ಹೇಳ್ ಮುಗ್ಸಾಕೆ ಆಗ್ದಿರಷ್ಟು ವಿಸ್ಯ ಅದಾವೆ.
ಕಾದು ನೋಡ್ತೀರಿ!!

About The Author

ಭವ್ಯ ಟಿ.ಎಸ್.

ಭವ್ಯ ಟಿ.ಎಸ್. ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಕಾನುಗೋಡಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕತೆ, ಕವಿತೆ, ಲೇಖನಗಳನ್ನು ಬರೆಯುವುದು ಹವ್ಯಾಸ. ಹಲವು ಪ್ರಮುಖ ಪತ್ರಿಕೆಗಳು ಹಾಗೂ ವೆಬ್ ಮ್ಯಾಗಜೀನ್‌ಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. "ವಸುಂಧರೆ" ಇವರ ಪ್ರಕಟಿತ ಚೊಚ್ಚಲ ಕವನ ಸಂಕಲನ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ