ಪಾತ್ರೆ ತೊಳೆಯುವುದು
ಅಮ್ಮ ಪಾತ್ರೆ ತೊಳೆಯಲು ಬಿಡುತ್ತಿರಲಿಲ್ಲ,
ಹೆಂಡತಿಗೆ ಇದರ ಬಗ್ಗೆ ಯಾವ ಅಳುಕೂ ಇಲ್ಲ.
ನನಗೂ ಗುಡಿಸಿ-ಸಾರಿಸುವುದಕ್ಕಿಂತ
ಪಾತ್ರೆ ತೊಳೆಯುವುದೇ ಮೇಲು ಅಂತ.
ಶ್ಯಾಮಲಾ ರಜ ಹಾಕಿದ ದಿನಗಳಲ್ಲಿ
ನನ್ನದೇ ಪಾತ್ರೆ ಮಂಜನ.
ಹೀಗಿರುವಾಗ, ಕೊರೊನಾ ಭೀತಿ ಬಂದು
ಮನುಜರೆಲ್ಲರೂ ಮನೆಸೆರೆಯಾದಾಗ,
ನನಗೆ ಈ ಕೆಲಸ ಪರ್ಮನೆಂಟಾಯಿತು.
ಎರಡು ಅಥವಾ ಮೂರು ದಿನಕ್ಕೊಮ್ಮೆ
ನೆಲ ಸಾರಿಸುವುದು,
ದಿನಾ ಪಾತ್ರೆ ತೊಳೆಯುವುದು.
ಕೆಲದಿನ ಮಧ್ಯಾಹ್ನ ನಾಲ್ಕು ಘಂಟೆಗೆ.
ಪಾತ್ರೆಯೆಲ್ಲ ತೊಳೆದ ಮೇಲೆ
ಒಂದು ಚಾ ಬಹುಮಾನ.
ಕೆಲದಿನ ಸಂಜೆ ಏಳು-ಏಳೂವರೆಯಷ್ಟ್ಹೊತ್ತಿಗೆ.
ಪಾತ್ರೆಯೆಲ್ಲ ತೊಳೆದ ಮೇಲೆ
ಊಟ ಬಹುಮಾನ.
ಕೆಲಸಲ ರಾತ್ರಿ ಊಟದ ನಂತರ.
ಪಾತ್ರೆಯೆಲ್ಲ ತೊಳೆದ ಮೇಲೆ
ನಿದ್ದೆ ಬಹುಮಾನ.
ಹಿನ್ನೆಲೆ ಸಂಗೀತ-ಗಾಯನವೂ ಇರುತ್ತಿತ್ತು,
ದಿನಾ ಬೇರೆ ಬೇರೆ ತರದ ಸಂಗೀತ.
ಮರಾಠಿ ರಂಗಗೀತೆ ಬಹಳ ಇಷ್ಟ,
ಸುಮಾರು ದಿನ ಇದನ್ನೇ ಕೇಳುತ್ತಿದ್ದೆ.
ಕೆಲದಿನ ಜ್ಯಾಜ಼್-ನ ಹಿನ್ನೆಲೆ,
ಕೆಲದಿನ ಮಧ್ಯಾಹ್ನಗಳಲ್ಲಿ ಭೀಮಣ್ಣನ ಭೀಮ್‌ಪಲಾಸಿ,
ಕುಮಾರ ಗಂಧರ್ವರ ನಿರ್ಗುಣಿ ಹಾಡುಗಳು,
ಕಿಶೋರ್ ಕುಮಾರ್ ಜತೆ ನಾನೂ ಹಾಡುತ್ತಿದ್ದೆ ಕೆಲದಿನ.
ಹೇಗೂ ಪಾತ್ರೆ ತೊಳೆಯಲೇ ಬೇಕು,
ಇವತ್ತು ಯಾವ ಸಂಗೀತ ಅಂತ
ನಿರ್ಧರಿಸುವುದೇ ಒಂದು ವಿನೋದ,
ಅದರಲ್ಲೊಂದು ಆನಂದ.
ಪಾತ್ರೆ ತೊಳೆಯುತ್ತಿರುವಾಗ,
ಓಹೋ … ಇವತ್ತು ಇಕ್ಕಳ ಕೈಜೋಡಿಸಿ
ನಮಸ್ಕಾರ ಮಾಡುತ್ತಿದೆ;
ನಮಸ್ಕಾರ, ಮಿಸ್ಟರ್ ಇಕ್ಕಳ, ಹೇಗಿದ್ದೀರಿ?
ಈ ಹಾಲಿನ ಕರೆ, ಎಣ್ಣೆಯ ಪಸೆ,
ತಿಕ್ಕುವುದು ಬಲು ತ್ರಾಸು.
ಕೆಲದಿನ ಮೊದಲು ಚಮಚ-ಸೌಟುಗಳು,
ನಂತರ ಪ್ಲೇಟುಗಳು, ಬಾಣಲೆ, ಕಾವಲಿ,
ದೊಡ್ಡ ಪಾತ್ರೆಗಳು, ಸಣ್ಣ ಪಾತ್ರೆಗಳು,
ಲೋಟಗಳು, ಕೊನೆಗೆ ಬಟ್ಟಲುಗಳು.
ಈ ಬಟ್ಟಲುಗಳು ತುಂಬಾ ಕಿರಿಕಿರಿ.
ಈ ಬಟ್ಟಲುಗಳ ಕಿರಿಕಿರಿ ಮುಗಿಸಿ ಬಿಡುವ
ಅಂತ ಕೆಲದಿನ ಮೊದಲು ಬಟ್ಟಲುಗಳು.
ಪ್ಲೇಟುಗಳು, ಬಾಣಲೆ, ಕಾವಲಿ
ತೊಳೆಯುವುದು ಸುಲಭ.
ಚಮಚ-ಸೌಟುಗಳು
ಒಂದೇ ಸಲ ತೊಳೆದುಬಿಡಬಹುದು.
ಆಹಾ, ಮಿಸ್ಟರ್ ಇಕ್ಕಳ,
ಇವತ್ತು ನೀವು ಮೊಸಳೆನಾ?
ಕೆಲವೊಂದು ದಿನ ದೊಡ್ಡ ಪಾತ್ರೆಗಳಿಂದ
ಮಂಜನ ಪ್ರಾರಂಭ.
ಕಿರಿಕಿರಿ ಬಟ್ಟಲುಗಳು ನಡುವಿನಲ್ಲಿ ತೂರಿಸಿಬಿಡುವುದು,
ಕೊನೆಗೆ ಚಮಚ-ಸೌಟುಗಳು.
ಹೇಗೂ ಪಾತ್ರೆ ತೊಳೆಯಲೇ ಬೇಕು.
04 September 2023
ಬುಧವಾರದ ಅತಿಥಿ
ಕಾಸು ಕಾಸು ಕೂಡಿಸಿ
ಮನೆ ಕಟ್ಟುವುದು,
ಅಲ್ಲ,
ಕಟ್ಟಿಸುವುದು;
ಮನೆಯ ಸುತ್ತ
ಕಾಂಪೌಂಡ್ ವಾಲ್
ಏರಿಸುವುದು;
ಗೋಡೆ ಮತ್ತು ಮನೆಯ
ಮಧ್ಯ ಜಾಗದಲ್ಲಿ
ಗಿಡ ಮರ ಬೆಳೆಸುವುದು;
ಸಣ್ಣ ಉದ್ಯಾನವೊಂದು ಏಳುವುದು;
ಚಿಟ್ಟೆಗಳು ಹಕ್ಕಿಗಳು ದುಂಬಿಗಳು
ಹಾರಾಡುವುದು;
ಕ್ರಿಮಿ ಕೀಟ ಹುಳ ಹುಪ್ಪಟೆ
ಇವೂ ಇರುವುದು.
ಇವೆಲ್ಲಕ್ಕಿಂತ ಮಜಾಂದ್ರೆ
ಪ್ರತಿ ಬುಧವಾರ ಮಧ್ಯಾಹ್ನ ಒಂದೂವರೆಗೆ
ಅಲಾರಮ್ ಇಟ್ಟುಕೊಂಡು
ಬಂದಹಾಗೆ ಬರುವ ಓತಿಕೇತ.
ಒಂದೊಂದು ಕಣ್ಣು ಒಂದೊಂದು ಕಡೆ
ಸ್ವತಂತ್ರವಾಗಿ ಗಿರ್ರನೆ ತಿರುಗುವುದು;
ಎಡ ಬಲ ಮೇಲೆ ಕೆಳಗೆ
ನೃತ್ಯವಾಗಿ ತಲೆ ಕೊಂಕಿಸುವುದು;
ಬಾಲ ಬೇರೆಯಾಗಿ ಆಡುವುದು;
ನಾಲಿಗೆ ಛಾವಟಿಯ ಹಾಗೆ
ರಪ್ ರಪ್ ಅಂತ ಫಕ್ಕನೆ ಚಲಿಸುವುದು;
ನಿಂತಲ್ಲೆ ಮೇಲೆ ಕೆಳಗೆ ಮುಂದೆ ಹಿಂದೆ
ಕಾಲುಗಳ ಏರಿಸುವುದು ಇಳಿಸುವುದು
ಮಡಚುವುದು ಚಾಚುವುದು;
ಬಣ್ಣ ಬಣ್ಣ ಬದಲಾಯಿಸಿ ತೋರಿಸುವುದು;
ಏಳೆಂಟು ನಿಮಿಷ ಹೀಗೆ ಪ್ರದರ್ಶನ
ಕೊಟ್ಟು ಲಂಚ್ ಮಾಡಿಕೊಂಡು
ಹೋಗಿಬಿಡುವುದು.
ಮತ್ತೆ ಮುಂದಿನ ಬುಧವಾರದ
ವರೆಗೆ ಕಾಯುವುದು.
14 November 2023
ಕಿಂದರಿಜೋಗಿ
ಶಿವಮೊಗ್ಗದ ಗಾಂಧಿ ಪಾರ್ಕಿನ ಎದುರು
ಲಾಟ್ರಿ ಟಿಕೆಟ್ ಮಾರುತ್ತಿದ್ದ ಅವನು
ಆಟೋದಲ್ಲಿ ಕೂತು
ಲೌಡ್ ಸ್ಪೀಕರ್-ನಲ್ಲಿ ದನಿಯವನದು
ಮೊಳಗುತ್ತಿತ್ತು:
“ಬನ್ನಿ ಸಾರ್ ಬನ್ನಿ
ಪಂಚ ಪಾಂಡವರಂತೆ
ಐದು ಬಣ್ಣಗಳಲ್ಲಿ
ಐದು ಶ್ರೇಣಿಗಳಲ್ಲಿ
ಕರ್ನಾಟಕ ರಾಜ್ಯ ಲಾಟ್ರಿ
ಬನ್ನಿ ಸಾರ್ ಬನ್ನಿ.”
(ಯಾವಾಗಲೂ ‘ಸಾರ್’ …😃)
“ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ
ಬನ್ನಿ ತೊಗೊಳ್ಳಿ ಸಾರ್
ಯಾರಿಗ್ಗೊತ್ತು
ಇವತ್ತು ಸೈಕಲ್ ಹೊಡಿತಿದ್ದೀರಾ
ನಾಳೆ ಕಾರ್-ನಲ್ಲಿ ಓಡಾಡಬಹುದು
ನಾಳೆ ಯಾರು ಕಂಡಿದ್ದಾರೆ
ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ
ಬನ್ನಿ ಸಾರ್ ಬನ್ನಿ.”
ನಲವತ್ತು ವರ್ಷಗಳ ಹಿಂದೆ
ಹೊಸದಾಗಿ ಬಂದಿದ್ದೆ ಶಿವಮೊಗ್ಗಕ್ಕೆ
ಕೇಳಿದ್ದೆ ಈ ಮಂತ್ರವ ಮೊದಲ ಸಲ ಆಗ.
ಶಿವಮೊಗ್ಗದಲ್ಲಿದ್ದ ಏಳು ವರ್ಷ
ಗಾಂಧಿ ಪಾರ್ಕಿನೊಳಗಿನಿಂದ
ಶಾರ್ಟ್-ಕಟ್ ತಗೊಂಡು
ಕಾಲೇಜಿಗೆ ಹೋಗುತ್ತಿದ್ದೆ,
ಲಾಟ್ರಿಯಂವ
ಮೊಳೆ ಹೊಡೆದ ಹಾಗೆ
ಅಲ್ಲೇ ಇರುತ್ತಿದ್ದ,
ಅದೇ ಮಂತ್ರ ಜಪಿಸುತ್ತಿದ್ದ.
ನಲವತ್ತು ವರ್ಷಗಳ ನಂತರ
ಆ ಮಂತ್ರ
ಉರು ಹೊಡೆದ ಹಾಗೆ
ಹಾಗೇ ನೆನಪಾಗುತ್ತಿದೆ
ಈಗ ಇಲ್ಲಿ
ಹೈದರಾಬಾದಿನಲ್ಲಿ.
ಈಗ ಅಲ್ಲಿ
ಬಹು ದೊಡ್ಡ ಬಂಗಾರ
ಮಾರುವ ಅಂಗಡಿ ಬಂದಿದೆ.
ಅದೂ ಒಂದು ಕನಸು,
ಇದೂ ಒಂದು ಕನಸು.
ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ!
04 January 2024

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು. ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು” (ಪೋಲೀಷ್ ಕವಿತೆಗಳ ಕನ್ನಡಾನುವಾದಿತ ಸಂಕಲನ). ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ. ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ. ಎಸ್ಟೋನಿಯಾ, ಲ್ಯಾಟ್ವಿಯಾ ಹಾಗೂಲಿಥುವೇನಿಯಾ ದೇಶದ ಕವಿತೆಗಳ ಸಂಕಲನ ‘ಬಾಲ್ಟಿಕ್ ಕಡಲ ಗಾಳಿ’ ಇತ್ತೀಚೆಗೆ ಪ್ರಕಟವಾಗಿದೆ.
