Advertisement
ಮನೆಗೆ ಮಾರಿ… ಊರಿಗೆ ಉಪಕಾರಿ: ಎಸ್.‌ ನಾಗಶ್ರೀ ಅಜಯ್ ಅಂಕಣ

ಮನೆಗೆ ಮಾರಿ… ಊರಿಗೆ ಉಪಕಾರಿ: ಎಸ್.‌ ನಾಗಶ್ರೀ ಅಜಯ್ ಅಂಕಣ

ಪ್ರಪಂಚದ ಕಣ್ಣಿಗೆ ಬೀಳುವಾಗಿನ ನಾಟಕವನ್ನಾದರೂ ಸಹಿಸಬಹುದು. ಕುಟುಂಬದೊಳಗೂ ಸಹಜವಾಗಿ ಬೆರೆಯಲಾಗದ ಸ್ಥಿತಿಯೀಗ ಪ್ರತಿ ಮನೆಯ ದುರಂತ. ತೊಟ್ಟಿಲ ಕೂಸು ಕಿಟಾರೆಂದರೆ ಗೂಗಲ್ ರಿಸರ್ಚ್ ಮಾಡುವ, ನಿಂಗೇನ್ಗೊತ್ತು ಈ ಕಾಲದ ಕಷ್ಟಸುಖ ಸುಮ್ಮನಿರಮ್ಮ ಎಂದು ಮೂರು ಮಕ್ಕಳು ಹೆತ್ತಾಕೆಯನ್ನೇ ಮೂಲೆಗೆ ಕೂರಿಸುವ ದಿನ. ಮೊಮ್ಮಕ್ಕಳಿಗೆ ಬಾಯಿಪಾಠ ಹೇಳಿಕೊಡಲು, ಚದುರಂಗ, ಚೌಕಾಬಾರ, ಹುಲಿ ಕರಡಿ ಆಡಿಸಲು, ಅಡುಗೆಯ ಪ್ರಾಥಮಿಕ ತರಬೇತಿ ನೀಡಲು, ರಂಗೋಲಿ, ಕಸೂತಿ, ಹಾಡುಹಸೆ ಕಲಿಸಲು ಹಾತೊರೆಯುವ ಅಜ್ಜ ಅಜ್ಜಿಯರು ಇನ್ನೂ ಇದ್ದಾರೆ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ

“ನಾವು ಹೊರಗಿನವರಿಗೆ ಕೊಡುವ ಪ್ರಾಶಸ್ತ್ಯದಲ್ಲಿನ ಹತ್ತು ಪರ್ಸೆಂಟ್ ಕೂಡ ಮನೆಯವರಿಗೆ, ಹತ್ತಿರದವರಿಗೆ ಕೊಡಲ್ಲ. ಹಣ ಸಿಗತ್ತೆ ಅಂದರೆ ಊಟ, ನಿದ್ದೆ ಬಿಟ್ಟು ಹೆಚ್ಚುವರಿ ಕೆಲಸ ಮಾಡ್ತೀವಿ. ಎಲ್ಲೋ ಅವಕಾಶ ಸಿಗಬಹುದು ಅಂತ ಭಾನುವಾರದ ಫ್ಯಾಮಿಲಿ ಟೈಂ ತ್ಯಾಗ ಮಾಡಿ ಸ್ವಂತ ಖರ್ಚಿನಲ್ಲಿ ನಗರದ ಇನ್ನೊಂದು ಮೂಲೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಧಾವಿಸುತ್ತೇವೆ. ದೊಡ್ಡವರು ಎನ್ನಿಸಿಕೊಂಡವರ ಕಣ್ಣ ಇಷಾರೆಗೆ, ತುಟಿ ಕೊಂಕಿಸಿ ನುಡಿಯಬಹುದಾದ ಅರೆಕ್ಷಣದ ಮೆಚ್ಚುಗೆಗೆ ಹಂಬಲಿಸುತ್ತೇವೆ. ನಮ್ಮ ಸಾಧನೆ, ಸಂತೋಷ, ಸಾರ್ಥಕತೆಯ ಬಗ್ಗೆ ಉದ್ದುದ್ದ ಪೋಸ್ಟ್ ಬರೆದೋ, ನೂರಾರು ಫೋಟೋದ ಮೂಲಕ ಕತೆ ಹೇಳಿಯೋ ಸೋಷಿಯಲ್ ಮೀಡಿಯಾದ ಮೈಲೇಜಿನ ಮೋಹದಲ್ಲಿ ಮುಳುಗೇಳುತ್ತೇವೆ. ಆದರೆ ಸ್ವಂತದವರ ಆಸೆ, ಆಕಾಂಕ್ಷೆ, ನಿರೀಕ್ಷೆಗಳು ಸಿಟ್ಟಿಗೆಬ್ಬಿಸತ್ತೆ. ಮನೆಯಲ್ಲಿ ಮಾಡಿದ ಬಿಸಿಬೇಳೆಬಾತ್ ತಿಂದು ಯಾವ ಕಾಲವಾಯ್ತು ಎಂದ ಗಂಡನ ಬಯಕೆ ಅತಿಯೆನ್ನಿಸುತ್ತೆ. ಜತೆಗಾರರ ಮುಂದೆ ಸಪ್ಪೆ ಕಾಣುವ ಮಕ್ಕಳು ವೇಸ್ಟುಬಾಡಿಗಳೆನ್ನಿಸುತ್ತೆ. ಮನೆ ಸೇರಿದಾಕ್ಷಣ ಕುಶಲ ಕೇಳುವ, ಆ ದಿನದ ವಿಶೇಷದ ಬಗ್ಗೆ ಕೇಳಲು ಕಾತರಿಸುವ ಅಮ್ಮ ವೈಯಕ್ತಿಕ ವಿಷಯದಲ್ಲಿ ಮೂಗು ತೂರಿಸುವ ಸೂಕ್ಷ್ಮವಿಲ್ಲದ ಮುದುಕಿ ಎನಿಸುತ್ತಾಳೆ. ಎಂದಿನದೋ ಕಷ್ಟದ ಕತೆ ಹೇಳುವ ಅಪ್ಪ ಬೋರಿಂಗ್ ವ್ಯಕ್ತಿಯೆನಿಸುತ್ತಾರೆ. ನಮ್ಮದೇ ಬದುಕು ಬಣ್ಣ ಕಳೆದುಕೊಂಡ ಹಳೆಯ ಗೋಡೆಯಂತೆ ಭಾಸವಾಗತ್ತೆ. ಏನೋ ಬೇಕೆಂಬ ಹುಚ್ಚು ನೂರು ಆಟ ಆಡಿಸುತ್ತೆ. ಆಟದಲ್ಲೇ ಕಳೆದುಹೋದರೆ ವರ್ಷಗಳೊಂದಿಗೆ ವ್ಯಕ್ತಿತ್ವವೂ ಕಳೆದುಹೋಗತ್ತೆ. ಹಾಗಾಗಬಾರದಲ್ವಾ?” ಎಂದು ಯಾವ ಕಾಲದ್ದೋ ಗೆಳತಿ ಹಲವು ವರ್ಷದ ಮೇಲೆ ಸಿಕ್ಕಾಗ ಪ್ರಶ್ನಿಸುತ್ತಿದ್ದಳು. ಆ ಪ್ರಶ್ನೆ ಯಾರೊಬ್ಬರನ್ನೋ ಉದ್ದೇಶಿಸಿ ಕೇಳಿದ್ದಾಗಿರಲಿಲ್ಲ. ಎಷ್ಟೋ ಸಲ ಯಾರದ್ದೋ ಅನುಭವ ನಮಗೆ ಪಾಠ ಕಲಿಸುತ್ತೆ. ನಮ್ಮ ಅನುಭವಗಳೇ ಗಾಳಿ ಸೋಕಿದಂತೆ ನಾಜೂಕಾಗಿ ಸವರಿ ಏನೂ ಹೇಳದೆ ದಿಗಂತಕ್ಕೆ ಸರಿದುಹೋಗಿರತ್ತೆ.

ಇದು ಈ ಕಾಲದ ಎಲ್ಲರ ಪಡಿಪಾಟಲು. ಹೊರಗಿನ ಜಗತ್ತಿಗೆ ಒಳ್ಳೆಯವರಾಗಿ, ಪ್ರಾಮಾಣಿಕರಾಗಿ, ಸಭ್ಯಸ್ತರಾಗಿ, ಸುಂದರ ವ್ಯಕ್ತಿತ್ವದವರಾಗಿ, ಪ್ರತಿಭಾನ್ವಿತರಾಗಿ ‘ತೋರಬೇಕೆಂಬ’ ಆಸೆ ಆಡಿಸದ ಆಟಗಳಿಲ್ಲ. ತೋರಿಕೆಯ ಪ್ರಪಂಚದಲ್ಲಿ ನಮ್ಮೊಳಗಿನ ಕೊಳೆ ತೊಳೆಯಲು ಸಮಯವಾಗುವುದೇ ಇಲ್ಲ. ಹೆಚ್ಚಾದ ತೂಕ ಕಾಣಿಸದ ಹಾಗೆ ಶೇಪ್ ವೇರ್ ತೊಟ್ಟು, ಹೊರಗಿನ ಅಡುಗೆಯನ್ನೇ ಮನೆಪಾತ್ರೆಗೆ ಸುರುವಿ ನಾವೇ ಮಾಡಿದಂತೆ ನಟಿಸಿ, ಯಾರೋ ಬರೆದ ರಂಗೋಲಿಯ ಮುಂದೆ ನಾವು ಕುಳಿತು ಫೋಟೋ ಕ್ಲಿಕ್ಕಿಸಿ, ಮಾಡಿದ ಸಣ್ಣಪುಟ್ಟ ಸಹಾಯಗಳಿಗೆ ಭೂತಗನ್ನಡಿ ಹಿಡಿದು ತೋರಿ, ಕಲಿತ ನಾಲ್ಕು ಮಾತುಗಳನ್ನೇ ಸರ್ವಜ್ಞರಂತೆ ನುಡಿದು, ಇರುವ ಐಶ್ವರ್ಯದ ಲೆಕ್ಕವನ್ನೇ ನೂರೆಂಟು ಸಲ ನೆನೆದು… ಈ ನಾಟಕಕ್ಕೆ ಕೊನೆಯಿದೆಯೆ? ಬದುಕಿನ ಓಟದಲ್ಲಿ ಎಷ್ಟು ಮಗ್ನರಾಗಿದ್ದೇವೆಂದರೆ ಇವೆಲ್ಲವೂ ಸರಿಯೋ ತಪ್ಪೋ? ಯಾರಿಗಾಗಿ ಇಷ್ಟೆಲ್ಲ ವೇಷ? ಕಡೆಗೆ ಸಾಧಿಸುವುದೇನು? ಎಂಬ ಪ್ರಶ್ನೆಗಳು ಗಾಳಿಯಲ್ಲಿ ತೂರಿ ಹೋಗುತ್ತವೆ.

ಪ್ರಪಂಚದ ಕಣ್ಣಿಗೆ ಬೀಳುವಾಗಿನ ನಾಟಕವನ್ನಾದರೂ ಸಹಿಸಬಹುದು. ಕುಟುಂಬದೊಳಗೂ ಸಹಜವಾಗಿ ಬೆರೆಯಲಾಗದ ಸ್ಥಿತಿಯೀಗ ಪ್ರತಿ ಮನೆಯ ದುರಂತ. ತೊಟ್ಟಿಲ ಕೂಸು ಕಿಟಾರೆಂದರೆ ಗೂಗಲ್ ರಿಸರ್ಚ್ ಮಾಡುವ, ನಿಂಗೇನ್ಗೊತ್ತು ಈ ಕಾಲದ ಕಷ್ಟಸುಖ ಸುಮ್ಮನಿರಮ್ಮ ಎಂದು ಮೂರು ಮಕ್ಕಳು ಹೆತ್ತಾಕೆಯನ್ನೇ ಮೂಲೆಗೆ ಕೂರಿಸುವ ದಿನ. ಮೊಮ್ಮಕ್ಕಳಿಗೆ ಬಾಯಿಪಾಠ ಹೇಳಿಕೊಡಲು, ಚದುರಂಗ, ಚೌಕಾಬಾರ, ಹುಲಿ ಕರಡಿ ಆಡಿಸಲು, ಅಡುಗೆಯ ಪ್ರಾಥಮಿಕ ತರಬೇತಿ ನೀಡಲು, ರಂಗೋಲಿ, ಕಸೂತಿ, ಹಾಡುಹಸೆ ಕಲಿಸಲು ಹಾತೊರೆಯುವ ಅಜ್ಜ ಅಜ್ಜಿಯರು ಇನ್ನೂ ಇದ್ದಾರೆ. ಆದರೆ ಶಾಲೆಯಲ್ಲೇ ಸ್ವಿಮ್ಮಿಂಗ್, ಜರ್ಮನ್, ಫ್ರೆಂಚ್, ಅಬ್ಯಾಕಸ್, ಬ್ಯಾಸ್ಕೆಟ್ಬಾಲ್ ಕಲಿಯಲು ಅವಕಾಶವಿರುವಾಗ ಅಡಗೂಲಜ್ಜಿ ಕಾಲದ ಆಟ-ಪಾಠ ನೀವು ಕಲಿಸಬೇಕಾಗಿಲ್ಲ ಎಂಬ ನಿರ್ದೇಶನ ಸ್ವಂತ ಮಕ್ಕಳಿಂದಲೇ ರವಾನೆಯಾಗುತ್ತದೆ. ಹೊರಗೆ ಸಾಕಾಗಿ ಮನೆಗೆ ಬಂದರೆ “ಏನು ತಿಂದೆ? ಯಾಕೆ ತಡವಾಯ್ತು? ಹಬ್ಬದ ಕೆಲಸ ಶುರು ಮಾಡಿದೆ. ಮಂಡಿನೋವಿಗೆ ಮುಲಾಮು ಹಚ್ಚಿದೆ.” ಎಂದು ಕಾಳಜಿ ತೋರುವ, ಕತೆ ಹೇಳುವ ಅಪ್ಪ ಅಮ್ಮನ ಸಹವಾಸ ಸಾಕೆನ್ನಿಸುತ್ತದೆ. ಎಲ್ಲರಿಂದ ಎಲ್ಲದರಿಂದ ದೂರವುಳಿಯೋಣ ಎನ್ನಿಸುತ್ತದೆ. ಮತ್ಯಾವುದೋ ಸಂಜೆ, ಒಂಟಿತನ ಸುಡುವ ಕೆಂಡವಾಗಿ ಒಡಲು, ಒಲವು ಸುಡುವಾಗ ಎಲ್ಲರೂ ಎಲ್ಲವೂ ಬೇಕೆಂಬ ಆಸೆ.

ಹೀಗೆ ಒಟ್ಟೊಟ್ಟಿಗೆ ಧಿಕ್ಕರಿಸುವ ದಯನೀಯವಾಗುವ, ಬೇಕೆನ್ನುವ ಬೇಡವೆನ್ನುವ ತುದಿಗಳ ನಡುವೆ ಓಟ ಕೀಳುವ ನಾವೇಕೆ ಸಾವಧಾನ, ಸಮಾಧಾನ ಕಲಿಯಬಾರದು? ಮನುಷ್ಯನ ಸರಾಸರಿ ಆಯಸ್ಸು ಹೆಚ್ಚಾಗಿದೆ ಎನ್ನುವುದು ನಿಜವಾದರೂ, ದಿನಂಪ್ರತಿ ಇಪ್ಪತ್ತು ಮುವ್ವತ್ತರ ಹರೆಯದವರು ಇಲ್ಲವಾಗುತ್ತಿರುವುದು ಕಣ್ಮುಂದೆಯೇ ಇದೆ. ಇರುವಷ್ಟು ಕಾಲವೂ ಸಂಗ್ರಹಿಸುವುದರಲ್ಲಿ, ಪ್ರದರ್ಶಿಸುವುದರಲ್ಲಿ, ಹಪಹಪಿಸುವುದರಲ್ಲಿ ಕಳೆದುಹೋದರೆ ಅನುಭವಿಸಿದ್ದು, ಅರಳಿದ್ದು, ಮುದಗೊಂಡಿದ್ದು ಯಾವಾಗ? ನಮಗಾಗಿಯಾದರೂ ಬದಲಾಗಲೇಬೇಕಲ್ಲವೆ?

About The Author

ಎಸ್. ನಾಗಶ್ರೀ ಅಜಯ್

ನಾಗಶ್ರೀ ಎಂ.ಕಾಂ ಹಾಗೂ ICWAI Intermediate ಪದವೀಧರೆ. ಆಕಾಶವಾಣಿ ಎಫ್.ಎಂ ರೈನ್ಬೋದಲ್ಲಿ ರೇಡಿಯೋ ಜಾಕಿಯಾಗಿ ಕಳೆದ ಒಂಭತ್ತು ವರ್ಷಗಳಿಂದ ಹಾಗೂ ದೂರದರ್ಶನ ಚಂದನ ವಾಹಿನಿಯಲ್ಲಿ ನಿರೂಪಕಿಯಾಗಿ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯದ ಓದು ಹಾಗೂ ನಿರೂಪಣೆ ಅವರ ಆಸಕ್ತಿಯ ಕ್ಷೇತ್ರಗಳು.

3 Comments

  1. Sowmyashree

    ಸತ್ಯ 100%ಸತ್ಯ….ಚೆನ್ನಾಗಿ ಇದ್ದೆ

    Reply
  2. Malathi Ramesh

    Very close to reality nagashree, very nicely penned

    Reply
  3. Anjana Yatanoor

    This is the reality of every home. Sensitive depiction. Very nice.

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ