ಹೊರಗೆ ಕುಳಿತಿದ್ದ ಸ್ವಾಮಿ, ಮಣಿ ಮತ್ತು ಕಾರ್‌ಅನ್ನು ರಸ್ತೆಯಲ್ಲಿ ಬರುವವರು ಹೋಗುವವರು ವಿಚಿತ್ರವಾಗಿ ನೋಡಿಕೊಂಡು ಹೋಗುತ್ತಿದ್ದರು. ಹತ್ತಿರದಲ್ಲಿ ನೀರಿನ ಟ್ಯಾಂಕ್ ಬರುವುದಕ್ಕೆ ಮುಂಚೆ ಮಹಿಳೆಯರು ಸರತಿಯಲ್ಲಿ ನಿಂತುಕೊಂಡು ಪ್ಲ್ಯಾಸ್ಟಿಕ್ ಬಿಂದಿಗೆಗಳೊಂದಿಗೆ ಜಗಳವಾಡುತ್ತಿದ್ದರು. ಸ್ವಾಮಿ, “ಮಣಿ ನಿನಗೆ ಎಷ್ಟು ಜನ ಮಕ್ಕಳು?” ಎಂದ. ಮಣಿ, “ಸ್ವಾಮಿ ಒಬ್ಬ ಮಗ, ಒಬ್ಬಳು ಮಗಳು. ಹುಡುಗ ಕಾಲೇಜ್ ಓದ್ತಾ ಇದ್ದಾಗಲೇ ಸತ್ತೋಗಿಬಿಟ್ಟ. ನಿನಗೆ ಸುಳ್ಳೇನು ಹೇಳುವುದು. ನನಗೆ ಗೊತ್ತಿಲ್ಲದೆ ಪೋಕರಿ ಹುಡುಗರ ಜೊತೆಗೆ ಸೇರಿಕೊಂಡು ಗಣಿಯಲ್ಲಿ ಕಳ್ಳತನ ಮಾಡುವುದಕ್ಕೋಗಿ ಅಪಘಾತದಲ್ಲಿ ಸತ್ತೋದ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಇಪ್ಪತ್ತೆಂಟನೆಯ ಕಂತು ನಿಮ್ಮ ಓದಿಗೆ
ಸೆಲ್ವಿ ಇಬ್ಬರ ನಡುವೆ ಅರೆಕುಕ್ಕರು ಕಾಲುಗಳಲ್ಲಿ ಕುಳಿತುಕೊಂಡು ಇಬ್ಬರ ಮಾತುಗಳನನ್ನು ಸುಮ್ಮನೆ ಆಲಿಸುತ್ತಿದ್ದಳು. ಸ್ವಾಮಿ, “ಮಣಿ, ನೀನೂ ಸೆಲ್ವಿ ಆ ಕಾಲದಲ್ಲಿ ಬಹಳ ದೊಡ್ಡ ಲವರ್ಸ್ ಅಲ್ವ ಕಾಲೇಜ್‌ನಲ್ಲಿ?” ಎಂದು ಕೆಣಕಿದ. ಮಣಿ, “ಓ ಅದಾ? ಅದೊಂದು ದೊಡ್ಡ ಕಥೆ ಬಿಡು. ನಮ್ಮ ಮದುವೆಗೆ ನೀನೂ ಬಂದಿದ್ದಿಯಲ್ಲ?” ಎಂದ ಮಣಿ ನಕ್ಕ. ಮಣಿಯ ಆರೋಗ್ಯ ಸರಿಯಾಗಿ ನಗಲಾರದಷ್ಟು ಕ್ಷೀಣಿಸಿತ್ತು. ಸ್ವಾಮಿ ನಗುತ್ತಾ “ಓ ಬಂದಿದ್ದನಲ್ಲಪ್ಪ ನಿಮ್ಮ ಸ್ಪೆಷಲ್ ಮದುವೆಗೆ?” ಎಂದ. ಸೆಲ್ವಿ ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡು ನಕ್ಕಳು. ಸೆಲ್ವಿಯ ದೇಹ ನಾಲ್ಕು ಕೋಲುಗಳನ್ನು ಸೀರೆ ಸುತ್ತಿಕೊಂಡಂತೆ ಕಾಣಿಸುತ್ತಿತ್ತು. ಮಣಿ, “ನಾನು ಆರ್ಟ್ಸ್ ಓದ್ತಾ ಇದ್ದಾಗ ನೀನು ಸೈನ್ಸ್ ಓದ್ತಾ ಇದ್ದೆ ಅಲ್ವ? ನಾನು ಒಂದು ವರ್ಷ ಪಿಯುಸಿ ಫೇಲ್ ಆಗಿಬಿಟ್ಟೆ. ಮುಂದಿನ ವರ್ಷ ಇವಳು ಸೆಕೆಂಡ್ ಪಿಯುಸಿ ಓದ್ತಾ ಇದ್ದಾಗ ಇಡೀ ವರ್ಷ ಅವಳ ಜೊತೆ ಬೆಳಿಗ್ಗೆ ಕಾಲೇಜ್‌ಗೆ ಹೋಗುವುದು, ಸಾಯಂಕಾಲ ಅವಳ ಜೊತೆಗೆ ವಾಪಸ್ ಬರುವುದು, ಇದೆ ಕೆಲಸ ಮಾಡ್ತಾ ಇದ್ದೆ ನೋಡು” ಎಂದ.
ಸೆಲ್ವಿ, “ಲವ್ ಸ್ವಾಮಿ. ಲವ್ವು. ಆ ತರಹ ನನ್ನ ಹಿಂದೆ ಬಿದ್ದು ನನ್ನನ್ನ ಯಾಮಾರಿಸಿ ಮದುವೆ ಮಾಡಿಕೊಂಡುಬಿಟ್ಟ” ಎಂದಳು. ಸ್ವಾಮಿ ಸಣ್ಣದಾಗಿ ನಕ್ಕ. ಮಣಿ, “ನನ್ನ ದುರದೃಷ್ಟ. ಆ ವರ್ಷ ನಮ್ಮಪ್ಪ ಮೈನಿಂಗ್‌ನಲ್ಲಿ ರಾಕ್‌ಬರ್ಸ್ಟ್ ಆಗಿ ಸತ್ತೋದರು. ನಮ್ಮವರೆಲ್ಲ ನಿಮ್ಮಪ್ಪನ ಜಾಗದಲ್ಲಿ ನಿನಗೆ ಕೆಲಸ ಸಿಕ್ಕುತ್ತೆ. ಸೇರಿಕೊಂಡುಬಿಡು. ಬೇಕೆಂದರೆ ಕಾಲೇಜಿಗೂ ಹೋಗಿ ಓದಿಕೊಂಡರೆ ಆಯಿತು ಅಂದರು. ನಾನು ಆಗ ಸರಿಯಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಲಿಲ್ಲ. ಈಗ ನೋಡು ಮೈನಿಂಗ್ ನಿಂತುಹೋಯಿತು. ನನ್ನಿಂದ ಯಾವ ಕೆಲಸಾನೂ ಮಾಡುವುದಕ್ಕೂ ಆಗ್ತಾಇಲ್ಲ” ಎಂದು ಗೋಡೆಯ ಕಡೆಗೆ ನೋಡಿದ. ಮಣಿ ಕಣ್ಣಲ್ಲಿ ನೀರು ಬರಲಿಲ್ಲ. ಇದ್ದರೆ ತಾನೆ? ಸ್ವಾಮಿಗೆ ಸ್ವಲ್ಪ ಕಸಿವಿಯಾಯಿತು. ಸೆಲ್ವಿ, “ಎಲ್ಲಾ ಸರಿಯಾಗಿತ್ತು ಸ್ವಾಮಿ. ಗಣಿಗಳು ನಿಂತೋದವು. ಅನಂತರ ನಮ್ಮ ಕಷ್ಟಗಳು ದೇವರಿಗೆ ಪ್ರೀತಿ ನೋಡು” ಎಂದಳು.
ಸೆಲ್ವಿ, “ಸ್ವಾಮಿ ಸ್ವಲ್ಪ ಟೀ ಮಾಡ್ಲಾ?” ಎಂದಳು. ಸ್ವಾಮಿ, “ಬೇಡ ಸೆಲ್ವಿ. ನಿನ್ನ ಎದುರಿಗೇನೆ ಅಂಗಡಿಯಲ್ಲಿ ಕುಡಿದೆನಲ್ಲ” ಎಂದ. ಸೆಲ್ವಿ, “ಆಯಿತು ತಿಂಡಿ ಮಾಡ್ತೀನಿ. ತಿಂದುಕೊಂಡೇ ಹೋಗಬೇಕು ನೀವು” ಎಂದಳು. ಮಣಿ ಅವಳ ಕಡೆಗೆ ನೋಡಿದ. ಸೆಲ್ವಿ, ಮಣಿ ಕಡೆಗೆ ನೋಡಿ ಪಕ್ಕಕ್ಕೆ ತಿರುಗಿಕೊಂಡಳು. ಸ್ವಾಮಿ ಏನೂ ಹೇಳಲಿಲ್ಲ. ಸೆಲ್ವಿ ಮುಂದುವರಿಯುತ್ತ “ಮಣಿಗೆ ರಾತ್ರಿಯೆಲ್ಲ ಕೆಮ್ಮು ಬರ್ತಾನೇ ಇರುತ್ತೆ ಪಾಪ! ಕೆಮ್ಮು ಬಂದರೆ ಮಾತನಾಡುವುಕ್ಕೂ ಆಗುವುದಿಲ್ಲ. ಬಂದರೆ ಅದು ನಿಲ್ಲುವುದೇ ಇಲ್ಲ. ಆಗ ನನಗೆ ತುಂಬಾ ಭಯಾ ಆಗಿ ಕೈಕಾಲುಗಳೆಲ್ಲ ನಡುಕ ಶುರು ಆಗಿಬಿಡುತ್ತೆ” ಎಂದಳು. ಸ್ವಾಮಿ ಇಬ್ಬರ ಮಾತುಗಳನ್ನು ಕೇಳುತ್ತಲೇ ಇದ್ದರು.
ಸೆಲ್ವಿ ಏನೋ ಯೋಚಿಸುತ್ತ “ಸ್ವಾಮಿ..” ಎಂದಳು. ಸ್ವಾಮಿ, “ಹೇಳು ಸೆಲ್ವಿ” ಎಂದ. ಸೆಲ್ವಿ, “ಸೆಲ್ವಿ, ನಾನು ನಿನ್ನ ಕ್ಲಾಸ್‌ಮೇಟು ಅಲ್ವೆ?” ಎಂದಳು. ಸಣ್ಣದಾಗಿ ನಗುತ್ತಾ ಸ್ವಾಮಿ, “ಪರವಾಗಿಲ್ಲ ಹೇಳು ಸೆಲ್ವಿ” ಎಂದ. ಸೆಲ್ವಿ, “ನಿಮ್ಮತ್ತಿರ ಸುಳ್ಳು ಯಾಕೆ ಹೇಳಬೇಕು? ನಾನು ಎರಡು ಮನೆಗಳಲ್ಲಿ ಮುಸುರೆ ತೊಳೆಯುವುದಕ್ಕೆ ಹೋಗ್ತೀನಿ. ಆಗ ನನಗೆ ಎದೆ ಢವಢವ ಅಂತ ಹೊಡೆದುಕೊಳ್ತಾನೆ ಇರುತ್ತೆ. ಮಣಿಗೆ ಕೆಮ್ಮು ಬಂದುಬಿಟ್ಟರೆ ಏನು ಮಾಡುವುದು ಅಂತ. ಪ್ರಾಣ ಎಲ್ಲಾ ಇಲ್ಲೇ ಇರುತ್ತೆ. ಅದಕ್ಕೆ ದೂರ ಹೋಗುವುದಿಲ್ಲ. ಇಲ್ಲೇ ಹತ್ತಿರದಲ್ಲಿರುವ ಎರಡು ಮನೆಗಳಲ್ಲಿ ಕೆಲಸ ಮಾಡಿಕೊಂಡು ಬಂದುಬಿಡ್ತೀನಿ. ಅವರು ಕೊಡುವುದು ಯಾತಕ್ಕೂ ಸಾಕಾಗುವುದಿಲ್ಲ. ಏನು ಮಾಡುವುದು?” ಸ್ವಲ್ಪ ಹೊತ್ತು ಸುಮ್ಮನಾದಳು.
ಸ್ವಾಮಿ, ಸೆಲ್ವಿಯನ್ನೇ ನೋಡುತ್ತಿದ್ದ. ಸುಧಾರಿಸಿಕೊಂಡ ಸೆಲ್ವಿ, “ಏನೂ ಇಲ್ಲ. ಮಣಿಗೆ ಆಸ್ಪತ್ರೆಯಲ್ಲಿ ತೋರಿಸಬೇಕು. ಹಣ ಒಂದು ಸಾವಿರ ಕೊಡುವುದಕ್ಕಾಗುತ್ತ?” ಎಂದಳು. ಆಗ ಅವಳಿಗೆ ಪ್ರಾಣ ಹೋದಂತೆ ಅನಿಸುತ್ತಿತ್ತು. ಸ್ವಾಮಿ, “ಅಷ್ಟೇ ತಾನೇ. ಕೊಡ್ತೀನಿ ಬಿಡು ಸೆಲ್ವಿ” ಎಂದ, ಮಣಿ, “ಸ್ವಾಮಿ, ನಲವತ್ತು ವರ್ಷಗಳಾದ ಮೇಲೆ ಸಿಕ್ಕಿದ್ದಾರೆ ಅವರನ್ನು ಹಣ ಕೇಳಿದರೆ ಹೇಗೆ? ಸೆಲ್ವಿ” ಎಂದು ಮುಖವನ್ನು ಗೋಡೆಯ ಕಡೆಗೆ ತಿರುಗಿಸಿಕೊಂಡ. ಸ್ವಾಮಿ, “ಮಣಿ, ನಾನು ಸೆಲ್ವಿ ಇಬ್ಬರೂ ಕ್ಲಾಸ್‌ಮೇಟ್ಸ್. ನೀನು ನಮ್ಮ ಮಧ್ಯೆ ಬರಬೇಡ” ಎಂದಿದ್ದೆ ಮಣಿ ನಗುತ್ತ “ಆಯಿತಪ್ಪ ನಿಮ್ಮಿಷ್ಟ. ನಾನು ನಿಮ್ಮ ಮಧ್ಯೆ ಬರುವುದಿಲ್ಲ. ಹೇಗಿದ್ರೂ ನೀವು ಕ್ಲಾಸ್‌ಮೇಟ್ಸ್ ಅಲ್ಲವೇ?” ಎಂದ. ಸ್ವಾಮಿ, “ಇಂತಹ ಸಮಯದಲ್ಲಿ ನನ್ನಂತವನು ಸಹಾಯ ಮಾಡದೇ ಬೇರೆ ಯಾರು ಮಾಡಬೇಕು?” ಎನ್ನುತ್ತ ಸ್ವಾಮಿ ಪಾಕೆಟ್‌ನಿಂದ ೫೦೦ ರೂಪಾಯಿಗಳ ನಾಲ್ಕು ನೋಟುಗಳನ್ನ ತೆಗೆದು ಸೆಲ್ವಿ ಕೈಗೆ ಕೊಡಲು ಹೋದ. ಸೆಲ್ವಿ ಏನೋ ತಪ್ಪು ಮಾಡಿದಂತೆ ಮಣಿ ಕಡೆಗೆ ನೋಡಿದಳು. ಮಣಿ ಪಕ್ಕಕ್ಕೆ ತಿರುಗಿಕೊಂಡ. ಸೆಲ್ವಿ ಹಣ ತೆಗೆದುಕೊಳ್ಳುತ್ತ “ಥ್ಯಾಂಕ್ಸ್ ಸ್ವಾಮಿ” ಎಂದಳು. ಸೆಲ್ವಿ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ಮಾತುಗಳ ಮಧ್ಯೆ ಸೀಮೆಎಣ್ಣೆ ಸ್ಟೌವ್‌ನಲ್ಲಿ ನೀರನ್ನು ಬಿಸಿ ಮಾಡಿದ ಸೆಲ್ವಿ ಮನೆ ಹೊರಗೆ ತಂದಿಡುತ್ತಾ “ಮಣಿ ಹೊರಕ್ಕೆ ಬಂದು ಮುಖ ತೊಳೆದುಕೊ” ಎಂದಳು. ಮಣಿ, “ಸ್ವಾಮಿ ನೀವೂ ಬನ್ನಿ ಹೊರಗಡೆ ಬಿಸಿಲಿದೆ ಸ್ವಲ್ಪ ಹೊತ್ತು ಕುಳಿತುಕೊಂಡು ಮಾತಾಡೋಣ” ಎಂದ. ಮಣಿ ಎದ್ದು ನಿಂತುಕೊಳ್ಳಲು ಸೆಲ್ವಿ ಸಹಾಯ ಮಾಡಿದಳು.
ಮಣಿ ಮೈಮೇಲಿದ್ದ ಹಳೆ ಹೊದಿಕೆಯನ್ನು ಮಂಚದ ಮೇಲೆ ಹಾಕಿ ಮನೆ ಹೊರಕ್ಕೆ ಬಂದು ಗೋಡೆಯ ಪಕ್ಕದಲ್ಲಿ ಹಾಕಿದ್ದ ಗ್ರನೈಟ್ ಕಲ್ಲುಬಂಡೆಯ ಮೇಲೆ ಕುಳಿತುಕೊಂಡ. ಸ್ವಾಮಿ ಕೂಡ ಎದ್ದು ಬಂದು ಹೊರಗಡೆ ಮಣಿ ಪಕ್ಕದಲ್ಲಿ ಕುಳಿತುಕೊಂಡ. ಮಣಿ, “ಕಾರು ನಿನ್ನದಾ ಸ್ವಾಮಿ?” ಎಂದ. ಸ್ವಾಮಿ, “ಹೌದು ಮಣಿ” ಎಂದರು. ಮಣಿ, “ನೀನೇ ಓಡಿಸ್ತೀಯಾ?” ಎಂದಿದ್ದೆ, ಸೆಲ್ವಿ ಮನೆ ಒಳಗಿಂದ “ಈಗ ಯಾರು ಓಡಿಸಿಕೊಂಡು ಬಂದರು?” ಎಂದಳು. ಮಣಿ, “ಯಾವುದೋ ಯೋಚನೆ ಸ್ವಾಮಿ” ಎಂದ. ಸೆಲ್ವಿ, “ಈ ನಡುವೆ ಈಗ ಮಾತನಾಡಿದ್ದು ಇನ್ನೆರಡು ನಿಮಿಷದಲ್ಲಿ ಮರೆತೋಗಿರ‍್ತಾರೆ ಸ್ವಾಮಿ” ಎಂದಳು. ಮಣಿ, “ಚೆನ್ನಾಗಿದೆ ಕಾರು. ತಿಂಡಿ ತಿಂದ ಮೇಲೆ ನನ್ನನ್ನ ಒಂದು ರೌಂಡ್ ಹಾಕಬೇಕು ಸ್ವಾಮಿ” ಎಂದ. ಸ್ವಾಮಿ “ಅದೇನು ದೊಡ್ಡ ವಿಷಯ. ಒಂದಲ್ಲ ಎರಡು ರೌಂಡ್ ಹಾಕೋಣ ಬಿಡು” ಎಂದರು.
ಮಣಿ ಬಗ್ಗಿ ನೀರನ್ನು ಮಗ್‌ನಲ್ಲಿ ತೆಗೆದುಕೊಂಡು ಕೈಯಿಗೆ ಸುರಿದುಕೊಂಡು ಗಡ್ಡ ಮೀಸೆಯನ್ನು ಸವರಿಕೊಂಡ. ನಂತರ ಹಲ್ಲು ಹುಜ್ಜಿ ಬಾಯಿಗೆ ಹಾಕಿಕೊಂಡು ಒಂದೆರಡು ಸಲ ಕುಪ್ಪಳಿಸಿ ಸೂರ್ಯನ ಕಡೆಗೆ ನೋಡಿ ಉಗುಳಿದ. ಉಗುಳಿದ ರೀತಿಗೆ ನೀರು ಲಕ್ಷಾಂತರ ಕಣಗಳಾಗಿ ಒಡೆದುಕೊಂಡು ಸ್ವಲ್ಪ ದೂರಕ್ಕೆ ಹಾರಿ ನೆಲದ ಕಡೆಗೆ ಮುಖ ಮಾಡಿ ಬಿದ್ದಿತು. ಸ್ವಾಮಿ, ಮಣಿ ಕಾಲೇಜಿನಲ್ಲಿದ್ದಾಗಿನ ಕೆಲವು ದೃಶ್ಯಗಳನ್ನು ಊಹಿಸಿಕೊಂಡು ಬದುಕು ಎಷ್ಟೊಂದು ಅನಿಶ್ಚಿತ ಎಂದುಕೊಂಡ. ಒಂದು ಬಟ್ಟೆ ಬ್ಯಾಗಿನ ಸಮೇತ ಹೊರಕ್ಕೆ ಬಂದ ಸೆಲ್ವಿ “ಇಬ್ಬರೂ ಮಾತಾಡ್ತಾ ಇರಿ. ಅಂಗಡಿಗೋಗಿ ಈಗಲೇ ಬಂದುಬಿಡ್ತೀನಿ” ಎಂದು ಹೊರಟುಹೋದಳು.
ಹೊರಗೆ ಕುಳಿತಿದ್ದ ಸ್ವಾಮಿ, ಮಣಿ ಮತ್ತು ಕಾರ್‌ಅನ್ನು ರಸ್ತೆಯಲ್ಲಿ ಬರುವವರು ಹೋಗುವವರು ವಿಚಿತ್ರವಾಗಿ ನೋಡಿಕೊಂಡು ಹೋಗುತ್ತಿದ್ದರು. ಹತ್ತಿರದಲ್ಲಿ ನೀರಿನ ಟ್ಯಾಂಕ್ ಬರುವುದಕ್ಕೆ ಮುಂಚೆ ಮಹಿಳೆಯರು ಸರತಿಯಲ್ಲಿ ನಿಂತುಕೊಂಡು ಪ್ಲ್ಯಾಸ್ಟಿಕ್ ಬಿಂದಿಗೆಗಳೊಂದಿಗೆ ಜಗಳವಾಡುತ್ತಿದ್ದರು. ಸ್ವಾಮಿ, “ಮಣಿ ನಿನಗೆ ಎಷ್ಟು ಜನ ಮಕ್ಕಳು?” ಎಂದ. ಮಣಿ, “ಸ್ವಾಮಿ ಒಬ್ಬ ಮಗ, ಒಬ್ಬಳು ಮಗಳು. ಹುಡುಗ ಕಾಲೇಜ್ ಓದ್ತಾ ಇದ್ದಾಗಲೇ ಸತ್ತೋಗಿಬಿಟ್ಟ. ನಿನಗೆ ಸುಳ್ಳೇನು ಹೇಳುವುದು. ನನಗೆ ಗೊತ್ತಿಲ್ಲದೆ ಪೋಕರಿ ಹುಡುಗರ ಜೊತೆಗೆ ಸೇರಿಕೊಂಡು ಗಣಿಯಲ್ಲಿ ಕಳ್ಳತನ ಮಾಡುವುದಕ್ಕೋಗಿ ಅಪಘಾತದಲ್ಲಿ ಸತ್ತೋದ. ಅವನು ಬದುಕಿದ್ದರೆ ನಮಗೆ ಈ ಗತಿ ಬರ್ತಾ ಇಲ್ಲವೇನೊ?” ಸ್ವಲ್ಪ ಹೊತ್ತು ಸುಮ್ಮನಾದ.
ಮತ್ತೆ “ಹುಡುಗೀನಾ ವೆಲ್ಲೂರು ಹತ್ತಿರದ ಸೇನೂರು ಎಂಬ ಹಳ್ಳಿಗೆ ಕೊಟ್ಟು ಮದುವೆ ಮಾಡಿದ್ದೀನಿ. ನಮ್ಮದು ಆಕಡೆ ತಾನೆ? ದೇವರಂತಹ ಅಳಿಯ. ಅವನಿಗೆ ಇಬ್ಬರು ಮಕ್ಳು. ನೋಡಿದರೆ ಆಸೆ ತೀರೋಗುತ್ತೆ. ಆರು ತಿಂಗಳು ಹಿಂದೆಯಷ್ಟೇ ಎಲ್ಲರೂ ಕೆಜಿಎಫ್‌ಗೆ ಬಂದು ಹೋದರು. ಅಳಿಯನಿಗೆ ಮೂರುನಾಲ್ಕು ಎಕರೆ ಹೊಲ ಇದೆ. ಚೆನ್ನಾಗಿದ್ದರು ಸ್ವಾಮಿ. ಅದೇನೊ ಚರ್ಮದ ಕಾರ್ಖಾನೆಯಂತೆ. ಕಾರ್ಖಾನೆಯಿಂದ ಹರಿದುಬರುವ ಕ್ರೋಮಿಯಂ ರಾಸಾಯನಿಕ ವಿಷ ಹೊಲಗಳಿಗೆ ಹರಿದುಬಂದು ಎಲ್ಲಾ ಹಾಳಾಗೋಗಿವೆ. ಈಗ ಕೂಲಿನಾಲಿ ಮಾಡಿಕೊಂಡು ಬದುಕು ನಡೆಸ್ತಾ ಇದ್ದಾರೆ” ಎಂದ. ಸ್ವಾಮಿಗೆ ಏನು ಹೇಳಬೇಕೊ ಅರ್ಥವಾಗದೆ ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದರು. ಬಡವರ ಬದುಕು ಎಲ್ಲಾ ಕಡೆಯಿಂದಲೂ ಮುಳ್ಳುಗಳಿಂದಲೇ ಕೂಡಿದೆಯೇನೊ ಎನ್ನುವ ಮಾತುಗಳ ತುಟಿಗಳವರೆಗೂ ಬಂದರೂ ಸ್ವಾಮಿ ತಡೆದುಕೊಂಡು ಸುಮ್ಮನಾದರು.
ಸೆಲ್ವಿ ಬ್ಯಾಗ್ ಹಿಡಿದುಕೊಂಡು ಬಂದು ಒಳಕ್ಕೆ ಹೋಗುತ್ತ “ಸ್ವಲ್ಪ ಹೊತ್ತು ಕೂತಿರಿ. ಅಡಿಗೆ ಮಾಡಿಬಿಡ್ತೀನಿ” ಎಂದಳು. ಒಳಕ್ಕೆ ಹೋದ ಸೆಲ್ವಿ ಸಾಮಾನುಗಳನ್ನೆಲ್ಲ ನೆಲದಲ್ಲಿ ಹರಡಿಕೊಂಡು ಎಷ್ಟೊ ದಿನಗಳಾದ ಮೇಲೆ ಸಾಮಾನುಗಳನ್ನು ನೋಡಿದವಳಂತೆ ಒಂದೊಂದನ್ನೇ ನೋಡುತ್ತ ಮಡಿಕೆ ಕುಡಿಕೆಗಳಲ್ಲಿ ತುಂಬಿದಳು. ನಂತರ ಸೀಮೆಎಣ್ಣೆ ಸ್ಟೌಟ್‌ಅನ್ನು ಬುಸ್‌ಬುಸ್ ಎಂದು ಹೊತ್ತಿಸಿ ಟೀ ಮಾಡಿಕೊಂಡು ಬಂದು ಕೊಟ್ಟಳು. ಇಬ್ಬರೂ ಕುಡಿಯುತ್ತಿದ್ದಂತೆ ಸೆಲ್ವಿ, “ಸ್ವಾಮಿ ಇಬ್ಬರೂ ಮಾತಾಡ್ತಾ ಇರಿ. ಇಲ್ಲೇ ಹತ್ತಿರದಲ್ಲಿ ಎರಡು ಮನೆಗಳಲ್ಲಿ ಅರ್ಧ ಗಂಟೆಯಲ್ಲಿ ಕೆಲಸ ಮಾಡಿಕೊಂಡು ಬಂದುಬಿಡ್ತೀನಿ. ಇಬ್ಬರೂ ವಯಸ್ಸಾದವರು ನಾನು ಹೋಗಲಿಲ್ಲ ಅಂದರೆ ಅವರಿಗೆ ತೊಂದರೆ ಆಗಿಬಿಡುತ್ತೆ” ಎಂದು ಬಿರಬಿರನೇ ಹೊರಟುಹೋದಳು. ಹೋಗುತ್ತಿದ್ದವಳು ಮತ್ತೆ ಹಿಂದಕ್ಕೆ ಬಂದು “ಸ್ವಾಮಿ ಎಲ್ಲಿಯಾದರೂ ಹೊರಟೋಗಿಬಿಟ್ಟೀಯ? ನಾನು ಬರುವವರೆಗೂ ಹೋಗಬೇಡಿ” ಎಂದು ಎಚ್ಚರಿಕೆ ಕೊಟ್ಟು ಹೋದಳು. ಮಣಿ ಮತ್ತು ಸ್ವಾಮಿ ಮತ್ತೆ ಮನೆ ಒಳಕ್ಕೆ ಹೋಗಿ ಕುಳಿತುಕೊಂಡರು.
(ಹಿಂದಿನ ಕಂತು: ಗಣಿ ಇತಿಹಾಸದ ಪುಸ್ತಕ ಸೇರಿಕೊಂಡ ಮಣಿಯ ಸಿಲಿಕೋಸಿಸ್ ಸಾವು)

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ.
3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.