Advertisement
ಒಂದು ಕೊನೇ ರೌಂಡು…: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಒಂದು ಕೊನೇ ರೌಂಡು…: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಸ್ವಾಮಿಗೆ ದುಃಖ ತಡೆದುಕೊಳ್ಳಲು ಆಗಲಿಲ್ಲ. ಮಣಿ, “ಕಾರ್ ಚೆನ್ನಾಗಿದೆ. ತಿಂಡಿ ತಿಂದ ಮೇಲೆ ನನ್ನನ್ನು ಒಂದು ರೌಂಡ್ ಹಾಕಪ್ಪ ಸ್ವಾಮಿ” ಎಂದಿದ್ದು ಸ್ವಾಮಿ, “ಅದೇನು ದೊಡ್ಡ ವಿಷಯ. ಒಂದಲ್ಲ ಎರಡು ರೌಂಡ್ ಹಾಕೋಣ ಬಿಡು” ಎಂಬ ಮಾತುಗಳು ಜ್ಞಾಪಕಕ್ಕೆ ಬಂದವು. ಸ್ವಾಮಿ ಕೈಕೈ ಹಿಸುಕಿಕೊಂಡು ನನ್ನಿಂದ ಅಪಾರಾಧ ನಡೆದು ಹೋಯಿತಲ್ಲ ಎಂದುಕೊಳ್ಳುತ್ತ.. ಸ್ವಾಮಿ, “ದೇವರೆ ಈ ದಿನ ಬೆಳಿಗ್ಗೆ ನನ್ನನ್ನು ಯಾಕಪ್ಪ ಇಲ್ಲಿಗೆ ಕರೆದುಕೊಂಡು ಬಂದೆ?” ಎಂದು ಅಳತೊಡಗಿದರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಕೊನೆಯ ಕಂತು

ಅರ್ಧ ಗಂಟೆ ಎಂದ ಸೆಲ್ವಿ ಸುಮಾರು ಒಂದು ಗಂಟೆಯಾದ ಮೇಲೆ ಕೆಲಸ ಮುಗಿಸಿಕೊಂಡು ಓಡೋಡಿ ಬಂದಳು. ಬಂದಿದ್ದೆ ಬಾಗಿಲಲ್ಲೇ ಇದ್ದ ಬೂಟುಗಳನ್ನು ನೋಡಿ “ಸ್ವಾಮಿ ಸದ್ಯ ಇದ್ದೀರಾ ನೀವು? ಎಲ್ಲಿ ಹೋಗಿಬಿಟ್ಟಿದ್ದೀರೊ ಎಂದು ಆತಂಕದಿಂದಲೇ ಓಡೋಡಿ ಬಂದೆ” ಎಂದಳು. ಮಣಿ, “ನಿಧಾನ.. ನಿಧಾನ.. ಮೊದಲೇ ಗಾಳಿಗೆ ಹಾರಿಕೊಂಡು ಹೋಗುವ ರೀತಿಯಲ್ಲಿದ್ದೀಯಾ?” ಎಂದು ನಕ್ಕ. ಕೈಯಲ್ಲಿ ಒಂದು ಸಣ್ಣ ಕಪ್ಪು ಪಾಲಿಥೀನ್ ಬ್ಯಾಗ್ ಹಿಡಿದುಕೊಂಡು ಬಂದಿದ್ದಳು. ಮಣಿ, “ಏನು ಬ್ಯಾಗಲ್ಲಿ?” ಎಂದ. ಸೆಲ್ವಿ “ಅರ್ಧ ಕೆಜಿ ಮಟನ್ ತಂದಿದ್ದೀನಿ. ಬಹಳ ದಿನಗಳಾಯಿತಲ್ಲ ಮಟನ್ ತಿಂದು. ನಲವತ್ತು ವರ್ಷಗಳಾದ ಮೇಲೆ ಸ್ವಾಮಿ ಬೇರೆ ಸಿಕ್ಕಿದ್ದಾರೆ” ಎಂದಳು. ಸೆಲ್ವಿ ಮಟನ್ ಸಾರಿಗೆ ಬೇಕಾದ ಎಲ್ಲ ಮಸಾಲೆಯನ್ನು ಹೊಂದಿಸಿಕೊಳ್ಳುತ್ತ “ಮಣಿ ಸ್ವಲ್ಪ ಹೊತ್ತು ಮನೆ ಹೊರಗಡೆ ಕುಳಿತುಕೊಳ್ಳಿ. ಇಲ್ಲ ಅಂದರೆ ಅಷ್ಟು ದೂರ ಓಡಾಡಿಕೊಂಡು ಬನ್ನಿ ಬಿಸಿಲಿನಲ್ಲಿ” ಎಂದಳು.

ಮಣಿ, “ಸ್ವಾಮಿ ಬನ್ನಿ. ಮನೆ ಒಳಗೆ ಹೊಗೆ ಬಂದರೆ ನನಗೆ ಕಷ್ಟ ಆಗುತ್ತೆ. ಏನೂ ಅರ್ಜೆಂಟ್ ಕೆಲಸ ಇಲ್ಲ ತಾನೇ?” ಎಂದ. ಸ್ವಾಮಿ, “ಇಲ್ಲ. ಅಂತಹ ಕೆಲಸ ಏನೂ ಇಲ್ಲ” ಎಂದ. ಇಬ್ಬರೂ ಎದ್ದು ನಿಧಾನವಾಗಿ ನಡೆದು ಮುಖ್ಯ ರಸ್ತೆಗೆ ಬಂದರು. ಸ್ವಲ್ಪ ದೂರದಲ್ಲಿ ಕಾಣಿಸುತ್ತಿದ್ದ ಗಣಿ ಶ್ಯಾಫ್ಟ್ ಕಾಂಪೌಂಡ್ ಪಕ್ಕದಲ್ಲಿ ಗುಲ್‌ಮೊಹರ್ ಮರಗಳಿದ್ದು ಒಂದು ಮರದ ಕೆಳಗೆ ಗರಿಕೆ ಹುಲ್ಲಿನ ಮೇಲೆ ಇಬ್ಬರೂ ಕುಳಿತುಕೊಂಡರು. ಮೇ ತಿಂಗಳಾದ್ದರಿಂದ ಮರಗಳು ಮೈ ತುಂಬಾ ಬಣ್ಣಬಣ್ಣದ ಹೂವುಗಳನ್ನು ಅರಳಿಸಿಕೊಂಡು ನಳಿನಳಿಸುತ್ತ ನಿಂತಿದ್ದವು. ನಿಧಾನವಾಗಿ ಗಾಳಿ ಬೀಸುತ್ತಿದ್ದು ಆಹ್ಲಾದಕಾರವಾಗಿತ್ತು. ನೆಲವನ್ನು ಹಸಿರು ಗರಿಕೆ ಹುಲ್ಲಿನ ಕಾರ್ಪೆಟ್ ಹಾಸಿಕೊಂಡಿದ್ದು ಮೆತ್ತನೆ ಹಾಸಿಗೆ ಮೇಲೆ ಕುಳಿತಂತೆಯೆ ಇತ್ತು. ಎರಡು ದಿನಗಳ ಹಿಂದೆ ಮಳೆಯಾದ ಕಾರಣ ನೆಲ ಕೂಡ ತಂಪಾಗಿತ್ತು. ಸ್ವಾಮಿ, “ಮಣಿ ಬ್ರಿಟಷರು ಕೆಜಿಎಫ್‌ಅನ್ನು ಸುಮ್ಮನೇ ಲಿಟ್ಲ್ ಇಂಗ್ಲೆಂಡ್ ಎಂದು ಕರೆಯಲಿಲ್ಲ” ಎಂದ. ಮಣಿ, ಸ್ವಾಮಿಯ ಕಡೆಗೆ ನೋಡಿ ಮುಗುಳು ನಕ್ಕ. ಸ್ವಾಮಿ, “ಮಣಿ ಈ ಮರಗಳ ಕಥೆ ನಿನಗೆ ಗೊತ್ತೆ?” ಎಂದ. ಮಣಿ “ಗೊತ್ತಿಲ್ಲ” ಎಂದ. ಬೆಳಿಗ್ಗೆಯಿಂದ ಬರೀ ಅಪಘಾತಗಳು, ಕಷ್ಟದ ಮಾತುಗಳನ್ನೇ ಕೇಳಿಕೇಳಿ ಆತಂಕಗೊಂಡಿದ್ದ ಸ್ವಾಮಿ ಈಗ ಗುಲ್‌ಮೊಹರ್ ಮರಗಳ ಕಥೆ ಹೇಳತೊಡಗಿದರು.

“…ಈ ಅಂದವಾದ ಮರಗಳು ಸಾವಿರಾರು ಕಿ.ಮೀ. ದೂರದ ಮಡಗಾಸ್ಕರ್ ದ್ವೀಪದಿಂದ ಕೆಜಿಎಫ್‌ಗೆ ನಡೆದು ಬಂದಿವೆ. ಗಣಿಗಳು ಪ್ರಾರಂಭವಾದ ದಿನಗಳಲ್ಲಿ ಜಾನ್ ಟೇಲರ್ ಅವರು ಬ್ರಿಟನ್ ಮತ್ತು ಯುರೋಪ್ ದೇಶಗಳಿಂದ ಅನೇಕ ಅಧಿಕಾರಿಗಳನ್ನು ಕರೆದುಕೊಂಡು ಬಂದು ಗಣಿಗಳಲ್ಲಿ ಸೇರಿಸಿದ್ದರು. ಈ ಅಧಿಕಾರಿಗಳು ಇಂಗ್ಲೆಂಡಿಗೆ ಆಗಾಗ ಹಡಗುಗಳಲ್ಲಿ ಹೋಗಿ ಬರುತ್ತಿದ್ದರು. ಒಮ್ಮೆ ಹಡಗುಗಳು ಆಫ್ರಿಕಾದ ಗುಡ್‌ಹೋಪ್ ಭೂಶಿರ ದಾಟಿ ಭಾರತಕ್ಕೆ ಬರಬೇಕಾಗಿತ್ತು. ಆದರೆ ಸಮುದ್ರದಲ್ಲಿ ಎದ್ದ ಬಿರುಗಾಳಿಯಿಂದ ಹಡಗು ಮಡಗಾಸ್ಕರ್ ದ್ವೀಪದ ಹತ್ತಿರಕ್ಕೆ ಹೋಗಿ ಬಹಳ ದಿನಗಳ ಕಾಲ ನಿಂತುಕೊಳ್ಳಬೇಕಾಯಿತು. ಅಧಿಕಾರಿಗಳು ಹಲವು ದಿನಗಳು ಕಾಲ ಅಲ್ಲಿ ಉಳಿದುಕೊಳ್ಳಬೇಕಾಗಿ ಬಂದಾಗ ಅವರು ಕಾಲ ಕಳೆಯಲು ಹಡಗಿನಿಂದ ಇಳಿದು ದ್ವೀಪದಲ್ಲಿ ಸುತ್ತಿಬರಲು ಹೋದರು.

ಆಗ ಮೇ ತಿಂಗಳ ಕಾಲವಾದ್ದರಿಂದ ಗುಲ್‌ಮೊಹರ್ ಮರಗಳು ಹೂವುಗಳಿಂದ ಸಂಭ್ರಮದಿಂದ ಕಂಗೊಳಿಸುತ್ತಿದ್ದವು. ಈ ಮರಗಳ ಅಂದವನ್ನು ಕಂಡು ಬೆರಗಾದ ಅಧಿಕಾರಿಗಳು ಅಲ್ಲಿನ ಜನರನ್ನು ಕಾಡಿ ಬೇಡಿ ಅದರ ಬೀಜಗಳನ್ನು ತಂದು ಮೊದಲಿಗೆ ಕೆಜಿಎಫ್ ಬಂಗಲೆಗಳ ಸುತ್ತಲೂ ನೆಟ್ಟರು. ನಂತರ ನಗರದ ರಸ್ತೆಗಳ ಇಕ್ಕೆಲಗಳಲ್ಲಿ ಬೆಳೆಸಿದರು. ಈ ಮರಗಳು ಇಲ್ಲಿಂದ ಕೋಲಾರ ಜಿಲ್ಲೆ, ಬೆಂಗಳೂರು, ಮೈಸೂರು ಮೈಸೂರು ರಾಜ್ಯ ಕೊನೆಗೆ ದೇಶವನ್ನೆಲ್ಲ ಹರಡಿಕೊಂಡವು” ಎಂದರು. ಮಣಿ, “ಹೌದಾ! ಸ್ವಾಮಿ? ನನಗೆ ಇದೆಲ್ಲ ಎಲ್ಲಿ ಗೊತ್ತಪ್ಪ. ನೀನು ಚೆನ್ನಾಗಿ ಓದಿ ತಿಳಿದುಕೊಂಡಿದ್ದೀಯ” ಎನ್ನುತ್ತಾ, ಕುಳಿತಿದ್ದ ಮರದ ಕಡೆಗೆ ತಲೆ ಎತ್ತಿ ನೋಡಿ ಏನು ಸೊಬಗು? ಏನು ಬಣ್ಣಗಳು? ಎಂದುಕೊಂಡ.

*****

ಹಾಗೇ ಸ್ವಲ್ಪ ದೂರದಲ್ಲಿ ಕಾಣಿಸುತ್ತಿದ್ದ ಶ್ಯಾಫ್ಟ್ಅನ್ನು ನೋಡಿದ ಮಣಿ, “ಸ್ವಾಮಿ ಈ ಶ್ಯಾಫ್ಟ್ ಕಾಂಪೌಂಡ್ ಒಳಗೆ ಒಂದು ಕಥೆಯಾಗಿತ್ತು” ಎಂದ. ಸ್ವಾಮಿ, “ಏನು ಕತೆ”? ಎಂದು ಮಣಿ ಕಡೆಗೆ ನೋಡಿದ. ಮಣಿ, “ನೋಡು ಆ ಶ್ಯಾಫ್ಟ್ ಸುತ್ತಲೂ ಕಲ್ಲು ರಾಶಿ ಕಾಣಿಸುತ್ತಿದೆಯಲ್ಲ?” ಎಂದ. ಸ್ವಾಮಿ, ಆ ಕಡೆಗೆ ನೋಡಿ “ಹೌದು! ಕಾಣಿಸುತ್ತಿದೆ” ಎಂದರು. ಮಣಿ, “ಮೂವರು ಯುವಕರು ಅಲ್ಲಿ ಸುತ್ತಲೂ ಬಿದ್ದಿದೆಯಲ್ಲ. ಆ ಕಲ್ಲುಗಳಲ್ಲಿ ಸ್ವಲ್ಪ ಬಂಗಾರದ ಅಂಶ ಇರುವ ಚಿನ್ನದ ಅದಿರಿನ ಕಲ್ಲುಗಳು ಇವೆ. ಆ ಕಲ್ಲುಗಳನ್ನು ಆಯ್ದುಕೊಂಡು ಹೊರಕ್ಕೆ ತರುವುದು ಯುವಕರ ಉಪಾಯ. ಕಲ್ಲುಗಳ ರಾಶಿ ಎತ್ತರ ಇರುವುದರಿಂದ ಈ ಕಡೆ ಇರುವ ಸೆಕ್ಯೂರಿಟಿಗೆ ಕಾಣಿಸುವುದಿಲ್ಲ. ಸುತ್ತಲೂ ಎತ್ತರವಾದ ಕಬ್ಬಿಣ ಬೇಲಿ ಇದೆಯಲ್ಲ. ಅದನ್ನು ಹತ್ತಿಯೋ ಇಲ್ಲ ಕಂಬಿಗಳನ್ನು ಕತ್ತರಿಸಿಯೊ ಕಾಂಪೌಂಡ್ ಒಳಕ್ಕೆ ಹೋಗಿಬಿಟ್ಟಿದ್ದಾರೆ. ಆ ಕಡೆ ರಾತ್ರಿ ಕತ್ತಲಾಗಿದ್ದೆ, ಏನೂ ಕಾಣಿಸುವುದಿಲ್ಲ. ಆದರೆ ಏನೋ ಸದ್ದಾಗಿದೆ.

ಕಾಂಪೌಂಡ್ ಒಳಗಿದ್ದ ಸೆಕ್ಯೂರಿಟಿ ಆ ಕಡೆಗೋಗಿ ದೂರದಿಂದ ಗನ್‌ನಲ್ಲಿ ಶೂಟ್ ಮಾಡಿದ್ದಾನೆ. ಗುಂಡುಗಳು ಕಲ್ಲುಗಳಿಗೆ ಬಡಿದು ಅವು ಚೂರುಗಳಾಗಿ ಕೆಲವು ಚೂರುಗಳು ಈ ಯುವಕರ ದೇಹದೊಳಕ್ಕೆ ತೂರಿಕೊಂಡಿವೆ. ಯುವಕರು ಉಸಿರುಬಿಡದೇ ಅಲ್ಲೇ ಕುಳಿತುಕೊಂಡಿದ್ದಾರೆ. ಒಬ್ಬನ ಎದೆಗೆ ಗುಂಡು ತೂರಿ ಅಲ್ಲೇ ಸತ್ತುಹೋಗಿದ್ದಾನೆ. ಮತ್ತೊಬ್ಬನಿಗೆ ಏನೂ ಆಗಿರಲಿಲ್ಲ. ಇನ್ನು ಗಾಯಗೊಂಡ ಮೂರನೇಯವನು ಉಸಿರುಬಿಡದೇ ರಾತ್ರಿಯೆಲ್ಲ ಅಲ್ಲೇ ಕುಳಿತಿದ್ದು ಅನಂತರ ಹೇಗೊ ಹೊರಕ್ಕೆ ಬಂದು ಆಸ್ಪತ್ರೆ ಸೇರಿಕೊಂಡಿದ್ದ. ಸ್ಥಳೀಯ ಮುಖಂಡರು ಹೋಗಿ ಅವನಿಗೆ ಆಸ್ಪತ್ರೆಯಲ್ಲಿ ಶುಶ್ರೂಷೆ ಮಾಡಿಸಿ ಕರೆದುಕೊಂಡು ಬಂದರು. ಅವನ ತೊಡೆಯಲ್ಲಿ ಗುಂಡುಗಳು ಸ್ಪ್ರೇಯಾಗಿ ಹತ್ತಾರು ಕಡೆ ತೂರಿಕೊಂಡುಬಿಟ್ಟಿದ್ದವು” ಎಂದ. ಸ್ವಾಮಿ, ಹೊಟ್ಟೆಗಾಗಿ ಬಡವರು ಎಂತೆಂತಹ ಅಪಾಯಗಳಿಗೆ ತಮ್ಮನ್ನು ತಾವೇ ಒಡ್ಡಿಕೊಳ್ಳುತ್ತಾರೆ ಎಂದುಕೊಂಡರು. ಬೆನ್ನ ಹಿಂದೆ ಕಾಣಿಸುತ್ತಿದ್ದ ದೈತ್ಯ ಉಕ್ಕು ಗಣಿ ಹೆಡ್‌ಗೇರ್ ಕಡೆಗೆ ನೋಡಿದ ಮಣಿ “ಇದು ನಮಗೆ ಬದುಕೂ ಕೊಟ್ಟಿದೆ. ವಿಷವನ್ನೂ ಉಣಿಸಿದೆ” ಎಂದ. ಮಣಿ ಮಾತುಗಳಲ್ಲಿ ಬರಿ ಗಾಯಗಳೆ ತುಂಬಿಕೊಂಡಿದ್ದವು.

*****

ಮಣಿ, “ಸ್ವಾಮಿ ನಡಿ ನನಗೆ ಹಸಿವಾಗ್ತಾ ಇದೆ” ಎಂದ. ಇಬ್ಬರೂ ಎದ್ದು ಅಲ್ಲಿಂದ ಮನೆ ಕಡೆಗೆ ನಡೆಯುತ್ತಾ ಬಂದರು. ಬಾಗಿಲು ಹತ್ತಿರಕ್ಕೆ ಬಂದ ಮಣಿ, “ಮಟನ್ ಸಾರು ವಾಸನೆ ಚೆನ್ನಾಗಿ ಬರ್ತಾಇದೆ” ಎಂದ. ಸ್ವಾಮಿ, ಮನೆ ಬಾಗಿಲಲ್ಲಿ ನಿಂತುಕೊಂಡು “ಇದೆಲ್ಲ ಯಾಕೆ ಮಾಡಿದೆ ಸೆಲ್ವಿ?” ಎಂದ. ಸೆಲ್ವಿ, “ಮೊದಲು ಕೈ ತೊಳೆದುಕೊಳ್ಳಿ” ಎಂದು ಮನೆ ಹೊರಕ್ಕೆ ನೀರು ತಂದುಕೊಟ್ಟಳು. ಮಣಿ, ಸ್ವಾಮಿ ಇಬ್ಬರೂ ಕೈತೊಳೆದುಕೊಂಡು ಮನೆ ಒಳಗೆ ಬಂದರು. ಸೆಲ್ವಿ, “ಸ್ವಾಮಿ, ಯಾಕೆ ನೀವು ಮಟನ್ ತಿನ್ನುವುದಿಲ್ಲವೆ?” ಎಂದಳು. ಸ್ವಾಮಿ, “ನಾನು ಇದುವರೆಗೂ ಅಂತಹ ನಿರ್ಬಂಧಗಳನ್ನೇನು ಇಟ್ಟುಕೊಂಡಿಲ್ಲ” ಎಂದ. ಸೆಲ್ವಿ, “ನಾವು ಮಟನ್ ತಿಂದು ಬಹಳ ದಿನ ಆಗಿದೆ. ನೀವು ಮೊದಲ ಬಾರಿಗೆ ನಮ್ಮ ಮನೆಗೆ ಬಂದಿದ್ದೀರಿ. ಮತ್ತೆ ಯಾವಾಗ ಬರುತ್ತೀರೊ ಏನೊ?” ಎಂದಳು. ಸ್ವಾಮಿ, “ಈಗ ಮನೆ ಗೊತ್ತಿದೆಯಲ್ಲ ಬರ್ತೀನಿ ಬಿಡು” ಎಂದ.

ಸ್ವಾಮಿ ಕುರ್ಚಿ ಮೇಲೆ ಕುಳಿತುಕೊಂಡಿದ್ದೆ ಸೆಲ್ವಿ ಸ್ಟೂಲನ್ನು ಸ್ವಾಮಿಯ ಮುಂದಕ್ಕೆ ಸರಿಸಿದಳು. ಮಣಿ ಮಂಚದ ಮೇಲೆ ಕುಳಿತುಕೊಂಡು ಗೋಡೆಗೆ ಒರಗಿಕೊಂಡ. ಸ್ವಾಮಿ, “ಸೆಲ್ವಿ, ನಾನು ಜಾಸ್ತಿ ತಿನ್ನುವುದಿಲ್ಲ. ಸ್ವಲ್ಪ ಹಾಕು” ಎಂದ. ಮತ್ತೆ ಸ್ವಾಮಿ, “ಮಣಿ, ನೀನು ಆರೋಗ್ಯ ಸರಿಯಾಗಿ ನೋಡಿಕೊಳ್ಳಬೇಕು” ಎಂದ. ಮಣಿ, “ಏನು ಆರೋಗ್ಯ ನೋಡಿಕೊಳ್ಳುವುದು ಸ್ವಾಮಿ. ಮೈನಿಂಗ್ ಆಸ್ಪತ್ರೆ ಮುಚ್ಚಿಬಿಟ್ಟರು. ಆ ಸಿವಿಲ್ ಆಸ್ಪತ್ರೆಗೋದರೆ ಏನೋ ಒಂದಷ್ಟು ಮಾತ್ರೆ ಕೊಡ್ತಾರೆ. ಅದಕ್ಕೆ ಲೇಬಲ್ ಕೂಡ ಇರುವುದಿಲ್ಲ. ಅದನ್ನು ತಿಂದುಕೊಂಡು ಬದುಕಿದ್ದೀನಿ. ನಮ್ಮ ಲೈನ್‌ನಲ್ಲಿ ಉಳಿದುಕೊಂಡಿರುವುದು ನಾನೊಬ್ಬನೇ. ನನ್ನ ಜೊತೆಗಾರರೆಲ್ಲ ಹೋಗಿಬಿಟ್ಟರು” ಎಂದ ನಗುತ್ತಾ. ಅದು ನಗುವೊ ವಿಷಾದವೊ ಸ್ವಾಮಿಗೆ ಅರ್ಥವಾಗಲಿಲ್ಲ.

ಸ್ವಾಮಿ, “ಸೆಲ್ವಿ, ನಮ್ಮ ಕ್ಲಾಸ್‌ಮೇಟ್ಸ್ ಯಾರಾದರೂ ಸಿಗ್ತಾರಾ?” ಎಂದ. ಸೆಲ್ವಿ, “ರಾಜಿ, ಪಾರ್ವತಿ ಬೆಂಗಳೂರಿನಲ್ಲಿದ್ದಾರೆ. ಇಬ್ಬರೂ ಸರ್ಕಾರಿ ಕೆಲಸದಲ್ಲಿದ್ದಾರೆ. ಅವರ ಗಂಡಂದಿರೂ ಒಳ್ಳೆ ಕೆಲಸದಲ್ಲಿದ್ದಾರೆ. ಯಾವಾಗಾದರೂ ಕೆಜಿಎಫ್‌ಗೆ ಬಂದರೆ ಅಪರೂಪವಾಗಿ ಬಂದು ಮಾತನಾಡಿಸಿಕೊಂಡು ಹೋಗ್ತಾರೆ. ಇನ್ನೂ ಕೆಲವರು ಕೆಜಿಫ್‌ನಲ್ಲೆ ಇದ್ದಾರೆ. ಅಲ್ಲಿಇಲ್ಲಿ ಸಿಕ್ಕಿದರೆ ಮಾತನಾಡಿಸ್ತಾರೆ. ಕೆಲವು ಕ್ಲಾಸ್‌ಮೇಟ್ಸ್ ಹೆಸರುಗಳನ್ನೇಳಿ ಎಲ್ಲಾ ಸ್ವಂತ ಮನೆಗಳನ್ನು ಕಟ್ಟಿಕೊಂಡು ಚೆನ್ನಾಗಿದ್ದಾರೆ. ನಾವೇ ಹೀಗಾಗಿದ್ದು. ನಾನು ಯಾರ ಮನೆಗಳಿಗೂ ಹೋಗುವುದಿಲ್ಲ ಸ್ವಾಮಿ” ಎಂದಳು. ಸ್ವಾಮಿ ತನ್ನ ಸಂಪರ್ಕದಲ್ಲಿರುವ ಕೆಲವು ಕ್ಲಾಸ್‌ಮೇಟ್ಸ್ ಬಗ್ಗೆ ಹೇಳಿದರು. ಮಣಿ ತನ್ನ ಸಂಪರ್ಕದಲ್ಲಿರುವ ಕೆಲವು ಗೆಳೆಯರ ಬಗ್ಗೆ ಹೇಳಿದ. ಕಾಲೇಜಿನ ಕೆಲವು ಸ್ವಾರಸ್ಯಕರ ಘಟನೆಗಳನ್ನು ನೆನೆಪಿಸಿಕೊಂಡು ಮಾತನಾಡಿಕೊಂಡರು.

ಸೆಲ್ವಿ ಮೊದಲಿಗೆ ಒಂದು ತಟ್ಟೆಯಲ್ಲಿ ಎರಡು ಸೌಟು ಬಿಸಿಬಿಸಿ ಅನ್ನ ಹಾಕಿ ಅದರ ಮೇಲೆ ಮಾಂಸದ ಸಾರು ಸುರಿದು ಸ್ವಾಮಿಗೆ ಕೊಟ್ಟಳು. ಬಿಸಿ ಇದ್ದ ಕಾರಣ ಸ್ವಾಮಿ ನಿಧಾನವಾಗಿ ಬೆರಳುಗಳಲ್ಲಿ ಅನ್ನವನ್ನು ಸರಿಸಿ ಬಿಸಿಯನ್ನು ಆರಿಸತೊಡಗಿದರು. ನಂತರ ಸೆಲ್ವಿ, ಮಣಿಗೂ ಅದೇ ರೀತಿ ತಟ್ಟೆಯಲ್ಲಿ ಅನ್ನ ಸಾರು ಹಾಕಿಕೊಟ್ಟಳು. ಮಣಿ ಕೂಡ ಹಾಗೇ ಮಾಡತೊಡಗಿದ. ಮಣಿ ಮತ್ತು ಸ್ವಾಮಿ ಇಬ್ಬರೂ ಮಾತನಾಡುತ್ತಾ ತಿನ್ನತೊಡಗಿದರು. ಸೆಲ್ವಿ ಮೂರನೇ ಸಲ ಪಾತ್ರೆಯಿಂದ ಮಾಂಸದ ಸಾರನ್ನು ಸೌಟಿನಲ್ಲಿ ತೆಗೆದು ಮಣಿ ತಟ್ಟೆಗೆ ಹಾಕಿದಳು. ಮಣಿ ಒಂದು ಮೂಳೆಯನ್ನು ತೆಗೆದು ಬಾಯಲ್ಲಿ ಇಟ್ಟುಕೊಂಡು ಜೋರಾಗಿ ಎಳೆದ ಅಷ್ಟೇ. ಜೋರಾಗಿ ಕೆಮ್ಮು ಬಂದು ಬಿಟ್ಟಿತು. ಸೆಲ್ವಿ ಎದ್ದು ನಿಂತುಕೊಂಡು ಮಣಿ ಕೈಯಲ್ಲಿದ್ದ ತಟ್ಟೆಯನ್ನು ತೆಗೆದು ಪಕ್ಕಕ್ಕಿಟ್ಟು ತಲೆಯ ಮೇಲೆ ನಿಧಾನವಾಗಿ ತಟ್ಟಿ ಬೆನ್ನು ಹಿಂದೆ ಸವರಿದಳು. ಕೆಮ್ಮು ನಿಲ್ಲಲಿಲ್ಲ. ಮಣಿಯ ಮುಖವೆಲ್ಲ ಒಂದೇ ಸಮನೇ ಬೆವರುತಿತ್ತು.

ಸೆಲ್ವಿ, “ಅಯ್ಯೋ ಇದೇನು ಇಷ್ಟು ಬೆವರ‍್ತಾ ಇದ್ದೀಯಾ?” ಎಂದು ಗ್ಲಾಸ್‌ನಲ್ಲಿ ನೀರು ತೆಗೆದುಕೊಂಡು ಕುಡಿಸಲೋಗಿ ಮಣಿ ಕೈಯಿಂದ ಪಕ್ಕಕ್ಕೆ ತಳ್ಳಿದ. ಅನಂತರ ಒಂದು ಸಲ ಜೋರಾಗಿ ಕೆಮ್ಮಿ ಬಾಯಿ ತೆರೆದುಕೊಂಡು ಹಾಗೇ ಇದ್ದುಬಿಟ್ಟ. ಹೊಟ್ಟೆಯ ಒಳಗಿಂದ ಒಮ್ಮೆಲೇ ಪ್ರಾಣವಾಯು ಹೊರಕ್ಕೆ ಹೋದ ಸದ್ದಾಯಿತು. ಸೆಲ್ವಿ ಬಾಗಿಲಿಗೆ ಬಂದು ಎದೆಎದೆ ಬಡಿದುಕೊಳ್ಳುತ್ತಾ ಕೂಗಿಕೊಂಡಳು. ಅಕ್ಕಪಕ್ಕದ ಜನರು ಓಡಿಬಂದರು. ಕೆಲವರು ಯುವಕರು ಓಡಿಬಂದು ಮನೆ ಒಳಕ್ಕೆ ಇಣಿಕಿ ನೋಡಿದರು. ಬಂದವರು ಮಣಿಯನ್ನು ನೋಡಿ ಏನೇನೊ ಮಾಡಿ ನೋಡಿದರು.

ಒಬ್ಬ ಯುವಕ, “ಸರ್. ಆಸ್ಪತ್ರೆ ಇಲ್ಲೇ ಇದೆ. ಬನ್ನಿ ಕಾರ್‌ನಲ್ಲಿ ಹಾಕಿಕೊಂಡು ಹೋಗೋಣ” ಎಂದ. ಸ್ವಾಮಿ, ಕಾರ್ ಆನ್ ಮಾಡಿ ಬಾಗಿಲು ತೆರೆದಿದ್ದೆ ಇಬ್ಬರು ಯುವಕರು ಮಣಿಯನ್ನು ಗುಬ್ಬಚ್ಚಿಯಂತೆ ಎತ್ತಿಕೊಂಡು ಬಂದು ಹಿಂದಿನ ಸೀಟುಗಳಲ್ಲಿ ಕುಳಿತುಕೊಂಡು ಮಣಿಯನ್ನು ಮಧ್ಯದಲ್ಲಿ ಕೂರಿಸಿಕೊಂಡರು. ಸೆಲ್ವಿ, ಸ್ವಾಮಿಯ ಪಕ್ಕದಲ್ಲಿ ಮುಂದಿನ ಸೀಟಿನಲ್ಲಿ ಕುಳಿತುಕೊಂಡು ಹಿಂದಿನ ಸೀಟಿನಲ್ಲಿದ್ದ ಮಣಿ ಕಡೆಗೆ ನೋಡುತ್ತ “ಸ್ವಾಮಿ, ಅಪ್ಪ ಬೇಗನೆ ನಡಿಯಪ್ಪ” ಎಂದು ಅಳುತ್ತಿದ್ದಳು. ಎರಡೇ ನಿಮಿಷಗಳಲ್ಲಿ ಎರಡು ಕಿ.ಮೀ. ದೂರವಿದ್ದ ಸಿವಿಲ್ ಆಸ್ಪತ್ರೆ ಮುಂದೆ ಕಾರು ನಿಂತುಕೊಂಡಿತು. ಯುವಕರು ಮಣಿಯನ್ನ ಸ್ಟ್ರೆಚರ್ ಮೇಲೆ ಮಲಗಿಸಿಕೊಂಡು ತಪಾಸಣೆ ಕೋಣೆಯ ಒಳಕ್ಕೆ ಸಾಗಿಸಿದರು. ಅಷ್ಟರಲ್ಲಿ ವೈದ್ಯರು ಬಂದು ನಾಡಿಯನ್ನು ಹಿಡಿದುಕೊಂಡು ನೋಡಿ “ಸಾರಿ” ಎಂದು ಮುಖವನ್ನು ಸಿಂಡರಿಸಿಕೊಂಡರು.

ಸ್ವಾಮಿ, “ಡಾಕ್ಟರೇ ದಯವಿಟ್ಟು ನೋಡಿ. ಇನ್ನೂ ಹತ್ತು ನಿಮಿಷಾನೂ ಆಗಿಲ್ಲ. ವೆಂಟಿಲೇಟರ್ ಹಾಕಿದರೆ ಬದುಕಿಕೊಳ್ತಾರೆ ನೋಡಿ” ಎಂದರು. ವೈದ್ಯರು, “ಇಲ್ಲ ಸರ್. ಏನೂ ಪ್ರಯೋಜನ ಇಲ್ಲ. ಮ್ಯಾಸೀವ್ಹ್ ಹಾರ್ಟ್ ಅಟ್ಯಾಕ್ ಆಗಿದೆ” ಎಂದುಬಿಟ್ಟರು. ಸೆಲ್ವಿ ಜೋರಾಗಿ ಕೂಗಿಕೊಳ್ಳುತ್ತಿದ್ದಳು. ಅಷ್ಟರಲ್ಲಿ ಇನ್ನಷ್ಟು ಮಹಿಳೆಯರು ಅಲ್ಲಿಗೆ ಓಡೋಡಿ ಬಂದು ಸುತ್ತಲೂ ನಿಂತುಕೊಂಡು ಅಳತೊಡಗಿದರು. ಸೆಲ್ವಿ, “ಅಯ್ಯೋ ನನಗೆ ಇನ್ನ ಯಾರು ಗತಿ? ಒಂಟಿ ಆಗೋದನಲ್ಲ” ಎಂದು ಅಳುವುದನ್ನು ನೋಡಿ ಸುತ್ತಲಿದ್ದವರ ಕಣ್ಣುಗಳಲ್ಲೂ ನೀರು ಬರುತ್ತಿತ್ತು. ಹತ್ತು ನಿಮಿಷಗಳ ಹಿಂದೆ ಬದುಕಿದ್ದ ಮಣಿ ಈಗ ಹೆಣವಾಗಿ ಎದುರಿಗೆ ಬಿದ್ದುಕೊಂಡಿದ್ದನು.

ಮತ್ತೆ ಮತ್ತೆ ವೈದ್ಯರನ್ನು ವಿನಂತಿಸಿಕೊಂಡಾಗ, ವೈದ್ಯರು “ನಮಗೇನು! ವೆಂಟಿಲೇಟರ್ ಹಾಕ್ತೀವಿ. ಅರ್ಧ ದಿನ ಇಟ್ಟುಕೊಂಡು ಸತ್ತೋಗಿದ್ದಾರೆ ಅಂತೀವಿ. ಆ ಮೇಲೆ ನಿಮಗೆ ಹೆಣ ಸಿಗುವುದಕ್ಕೆ ಅರ್ಧ ದಿನಾ ಆಗುತ್ತೆ. ಸಾಲದ್ದಕ್ಕೆ ಪೋಸ್ಟ್ ಮಾರ್ಟಮ್ ಬೇರೆ ಮಾಡಬೇಕಾಗುತ್ತೆ. ಇದೆಲ್ಲ ಬೇಕು ಅಂದರೆ ನಮಗೇನೂ ಅಭ್ಯಂತರ ಇಲ್ಲ” ಎಂದರು. ಸ್ವಾಮಿ ಯುವಕರ ಕಡೆಗೆ ನೋಡಿದ. ಎಲ್ಲರೂ ಆಗಿದ್ದು ಆಗಿಹೋಯಿತು ನಡೆಯಿರಿ ಎಂದು ಹೆಣವನ್ನು ಮತ್ತೆ ಸ್ವಾಮಿ ಕಾರ್‌ನಲ್ಲಿ ಹಾಕಿಕೊಂಡು ಬಂದರು. ಜನ ಗುಂಪುಗುಂಪಾಗಿ ಸೇರತೊಡಗಿದರು. ಬಂದವರೆಲ್ಲ ಹೇಗಾಯಿತು? ಏನಾಯಿತು? ಎಂದು ಕೇಳುತ್ತಿದ್ದರು. “ಅಂಡರ್‌ಗ್ರೌಂಡ್ ವರ್ಕ್! ಸಿಲಿಕೋಸಿಸ್ ಡೆಥ್! ಇನ್ನ ಏನಾಗುತ್ತೆ ಮೈನಿಂಗ್ ವರ್ಕರ್‌ಗೆ? ಜೊತೆಗೆ ಕುಡಿತ ಬೇರೆ.” ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಿದ್ದರು. ಗುಂಪಿನಲ್ಲಿದ್ದವರಲ್ಲಿ ಒಬ್ಬರು, “ಇದು ಕೋಲಾರ್ ಗೋಲ್ಡ್ ಮೈನಿಂಗ್ ನಿಂತೋದ ಮೇಲೆ ನೂರಾ ಹತ್ತನೇ ಸಿಲಿಕೋಸಿಸ್ ಡೆಥ್ ಆಗಿದೆ” ಎಂದು ಘೋಷಿಸಿದರು.

ಮೃತ ದೇಹವನ್ನು ಮನೆ ಮುಂದೆ ಒಂದು ಹಳೆ ಮಂಚದ ಮೇಲೆ ಬಟ್ಟೆಯಾಕಿ ಮಲಗಿಸಲಾಯಿತು. ಸೆಲ್ವಿ ದಿಕ್ಕು ತೋಚದಂತೆ ಮಣಿಯ ಹೆಣದ ಪಕ್ಕದಲ್ಲಿ ಉರುಳಾಡುತ್ತ ರೋದನೆ ಮಾಡುತ್ತಿದ್ದಳು. ಮಹಿಳೆಯರು ಕೆಲವರು ಅವಳನ್ನು ಸುಧಾರಿಸುತ್ತಿದ್ದರು. ಸೆಲ್ವಿ ಮನೆ ಒಳಕ್ಕೆ ಹೋಗಿ ಬಂದು “ಅಪ್ಪ ಯಾರಾದರು ನನ್ನ ಮಗಳು, ಅಳಿಯನಿಗೆ ಫೋನ್ ಮಾಡ್ರಪ್ಪ” ಎಂದು ಫೋನ್ ಸಂಖ್ಯೆ ಇದ್ದ ತುಂಡು ಕಾಗದವನ್ನು ಒಬ್ಬ ಯುವಕನ ಕೈಗೆ ಕೊಟ್ಟಳು. ಯುವಕ ಸುತ್ತಲೂ ನೋಡಿ ಕೊನೆಗೆ ಸ್ವಾಮಿಯ ಕೈಯಲ್ಲಿದ್ದ ಫೋನ್ ತೆಗೆದುಕೊಂಡು, ಫೋನ್ ಸಂಖ್ಯೆ ಒತ್ತಿ “ಕೋಮಲ ನಿಮ್ಮಪ್ಪ ಸೀರಿಯಸ್ ಆಗಿದ್ದಾರೆ. ನಿಮ್ಮ ಗಂಡ, ಮಕ್ಕಳನ್ನು ಕರೆದುಕೊಂಡು ಬೇಗನೆ ಬಂದುಬಿಡು” ಎಂದ. ಪಕ್ಕದಲ್ಲಿದ್ದವರು, “ಯೊ ಸೀರಿಯಸ್ ಅಂತ ಯಾಕೇಳ್ತಿಯ. ನಿಜ ಹೇಳಿಬಿಡು. ಆಮೇಲೆ ನಾಳೆ ನಾಳೆದ್ದು ಹೋಗೋಣ ಅಂತ ಸುಮ್ಮನೇ ಇದ್ದುಬಿಟ್ಟರೆ ಏನು ಮಾಡ್ತೀಯ?” ಎಂದರು. ಸೆಲ್ವಿ ಫೋನ್ ತೆಗೆದುಕೊಂಡು ಗೊಳೋ ಎಂದು ಅಳುತ್ತಾ, “ಕೋಮಲ ನಿಮ್ಮಪ್ಪ ನಮ್ಮನ್ನೆಲ್ಲ ಬಿಟ್ಟು ಹೋಗಿಬಿಟ್ಟರಮ್ಮ, ಬೇಗನೆ ಬಾ” ಎಂದಳು.

ಯುವಕ ಸ್ವಾಮಿಗೆ ಫೋನ್ ವಾಪಸ್ ತಂದು ಕೊಟ್ಟ. ಸ್ವಾಮಿ ಫೋನ್ ತೆಗೆದುಕೊಂಡು ಒಂದು ಸಲ ಅದನ್ನೇ ದಿಟ್ಟಿಸಿ ನೋಡಿ ಕಾರಿನ ಬಾಗಿಲು ತೆರೆದು ಒಳಕ್ಕೆ ಎಸೆದು ಬಾಗಿಲು ಮುಚ್ಚಿ ಕಾರಿಗೆ ಒರಗಿ ನಿಂತುಕೊಂಡ. ಸ್ವಾಮಿಗೆ ದುಃಖ ತಡೆದುಕೊಳ್ಳಲು ಆಗಲಿಲ್ಲ. ಮಣಿ, “ಕಾರ್ ಚೆನ್ನಾಗಿದೆ. ತಿಂಡಿ ತಿಂದ ಮೇಲೆ ನನ್ನನ್ನು ಒಂದು ರೌಂಡ್ ಹಾಕಪ್ಪ ಸ್ವಾಮಿ” ಎಂದಿದ್ದು ಸ್ವಾಮಿ, “ಅದೇನು ದೊಡ್ಡ ವಿಷಯ. ಒಂದಲ್ಲ ಎರಡು ರೌಂಡ್ ಹಾಕೋಣ ಬಿಡು” ಎಂಬ ಮಾತುಗಳು ಜ್ಞಾಪಕಕ್ಕೆ ಬಂದವು. ಸ್ವಾಮಿ ಕೈಕೈ ಹಿಸುಕಿಕೊಂಡು ನನ್ನಿಂದ ಅಪಾರಾಧ ನಡೆದು ಹೋಯಿತಲ್ಲ ಎಂದುಕೊಳ್ಳುತ್ತ.. ಸ್ವಾಮಿ, “ದೇವರೆ ಈ ದಿನ ಬೆಳಿಗ್ಗೆ ನನ್ನನ್ನು ಯಾಕಪ್ಪ ಇಲ್ಲಿಗೆ ಕರೆದುಕೊಂಡು ಬಂದೆ?” ಎಂದು ಅಳತೊಡಗಿದರು. ಸುತ್ತಲಿದ್ದವರು ಸ್ವಾಮಿಯ ಕಡೆಗೆ ನೋಡತೊಡಗಿದರು. ಭೂಮಿಯೇ ಗಾಯಗೊಂಡಂತೆ ಸುತ್ತಲೂ ಬಿದ್ದಿದ್ದ ಸೈನಾಟ್ ಗುಡ್ಡಗಳೂ ಕೂಡ ಸ್ವಾಮಿಯ ಕಡೆಗೆ ನೋಡುತ್ತಿದ್ದವು.

(ಹಿಂದಿನ ಕಂತು: ಬಾಗಿಲಿಗೆ ಬಂದ ಸ್ನೇಹಿತ)

ಮುಕ್ತಾಯ…

About The Author

ಡಾ. ಎಂ. ವೆಂಕಟಸ್ವಾಮಿ

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ. 3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ