ಅದರ ಮಾರನೇ ದಿವಸ ಹೋಗಿ ಭರಮಪ್ಪನ ಎದುರು ನಿಂತೆ. ಒಂದು ಗಂಟೆ ಕಾದೆ. ನನ್ನ ಕಡೆ ತಿರುಗಿ ನೋಡಲು ಸಹ ಅವರಿಗೆ ಪುರುಸೊತ್ತು ಇಲ್ಲರ. ಐದನೇ ದಿವಸವೂ ಇದೇ ರಿಪೀಟ್ ಆಯ್ತು. ಆರನೇ ದಿವಸ ಭಾನುವಾರ. ತೆಪ್ಪಗೆ ಮನೇಲೆ ಇದ್ದು ನನ್ನ ಅದೃಷ್ಟಕ್ಕೆ ಗಂಟೆ ಗಂಟೆಗೂ ಕೋಲಿನಿಂದ ಬಾರಿಸುತ್ತಾ ಕಳೆದೆ. ಸೋಮವಾರ ಬೆಳಿಗ್ಗೆ ಮತ್ತೆ ಕೆಇಬಿ ಆಫೀಸಿಗೆ ದಂಡ ಯಾತ್ರೆ ಮಾಡಿದೆ. ಜಗನ್ನಾಥ, ಅದೇ ಲೈನ್ ಮ್ಯಾನ್ ದಾರೀಲಿ ಸಿಕ್ಕಿದ. ನನ್ನನ್ನು ನೋಡಿ ಅವನ ಲೂನಾ ನಿಲ್ಲಿಸಿದ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಅರವತ್ತೈದನೆಯ ಕಂತು
ಹಿಂದಿನ ಎಪಿಸೋಡು ಹೀಗೆ ಅಂತ್ಯ ಕಂಡಿತ್ತು..
ಮೇಲಿನ ವರ್ಗೀಕರಣಕ್ಕೆ ಮೊದಲು ನಮ್ಮ ಕಾಲದಲ್ಲಿ ಇವೆಲ್ಲಾ ಸೇರಿ KEB ಅಂತ ಇತ್ತು ಮತ್ತು ಎಲ್ಲಾ ಕೆಲಸ ಅದು ಮಾಡುತ್ತಿತ್ತು! ಎಲೆಕ್ಟ್ರಿಸಿಟಿ ಆಫೀಸುಗಳು ಹೇಗೆ ಕೆಲಸ ಮಾಡುತ್ತಿತ್ತು ಅನ್ನುವುದನ್ನು ನೋಡಿಯೇ ತಿಳಿಯಬೇಕಾದ ದಿನಗಳು ಅವು. ಇದು ಅಂದಿನ ಒಂದು ನೋಟ, ಈಗ ಅಂತಹ ಬದಲಾವಣೆ ಏನೂ ಆಗಿಲ್ಲ ಎಂದು ಬಲ್ಲವರು ಹೇಳುತ್ತಾರೆ. ಮೊದಲು ಕೆಳ ಹಂತದ ಕೆಲಸಗಾರರು ಬಂದು ಅವರವರ ವ್ಯವಹಾರದಲ್ಲಿ ತೊಡಗುತ್ತಿದ್ದರು. ವ್ಯವಹಾರ ಅಂದರೆ ಒಂದು ರೀತಿ ಪರ್ಸನಲ್ ಕಮಿಟ್‌ಮೆಂಟ್. ಯಾರ ಬಳಿಯೋ ಯಾವುದೋ ಕೆಲಸಕ್ಕೆ ಇಷ್ಟು ಕಾಸು ಅಂತ ಮಾತುಕತೆ ನಡೆದಿರುತ್ತೆ ನೋಡಿ; ಅಂತಹ ವ್ಯವಹಾರ ಅದು. ಎಲ್ಲಾ ನೌಕರರೂ ಹೀಗೆ ಕಮಿಟ್ ಆದವರು ಅಲ್ಲ ಅಂದರೂ ಹೆಚ್ಚಿನವರು ಇದೇ ಗುಂಪು. ಅರಸನ ಅಂಕೆ ಮತ್ತು ದೆವ್ವದ ಕಾಟ ಇಲ್ಲವಾದ್ದರಿಂದ ಯತೇಚ್ಛವಾಗಿ ಸಂಪಾದನೆ, ಕಳ್ಳ ಸಂಪಾದನೆ…!
ಇಂತಹವರ ಕಡೆಯಿಂದ ನನ್ನ ಮನೆಗೆ ಕರೆಂಟ್ ಪಡೆಯಲು ಪಟ್ಟ ಹರಸಾಹಸ ನಿಮಗೆ ಹೇಳಲೇ ಬೇಕು. ಈಗ ಅದಕ್ಕೇ ಬರ್ತೀನಿ…..
ಈಗ ಮುಂದೆ…
ಮನೆಗೆ ಎಲೆಕ್ಟ್ರಿಕಲ್ ಫಿಟ್ಟಿಂಗ್ ತಂದ ಕತೆ ಹೇಳಿದೆ. KEB ಕತೆಗೆ ಬಂದಿದ್ದೆ ತಾನೇ. ಈಗ ಅದರ ಬಗ್ಗೆ. ಆ ಕಾಲದಲ್ಲಿ ಹೇಗಿತ್ತು ಅನ್ನುವುದನ್ನು ಕುರಿತು.
ಬೆಂಗಳೂರಿನಲ್ಲಿ ಹೊಸಾ ಬಡಾವಣೆಗಳ ಹುಟ್ಟು ಆರಂಭವಾಗಿ ಒಂದೆರೆಡು ವರ್ಷವಾಗಿತ್ತು ಅಂತ ಕಾಣುತ್ತೆ. ನಗರದಲ್ಲಿ ಆಗಲೇ ಬೆಳವಣಿಗೆ ಹೊಂದಿದ್ದ ಪ್ರದೇಶಗಳಲ್ಲಿ ಕಾಣದ ವ್ಯವಸ್ಥೆ, ವ್ಯವಸ್ಥೆ ಎಲ್ಲಿ ಅವ್ಯವಸ್ಥೆ ಅನ್ನಿ ಹೊಸದಾಗಿ ಶುರು ಆದ ಬಡಾವಣೆಗಳಲ್ಲಿ ವಿಜೃಂಭಿಸಿತ್ತು. ಅದರಲ್ಲಿ ಪ್ರಮುಖವಾದದ್ದು ವಿದ್ಯುಚ್ಛಕ್ತಿ, ನಂತರ ನೀರೂ, ನಂತರ ರೋಡು ಪಾಡು…. ಹೀಗೆ ಒಂದು ರೀತಿ ಚೈನ್ ರಿಯಾಕ್ಷನ್‌ಗಳ ಸರಮಾಲೆ. ಅವುಗಳ ಬಗ್ಗೆ ನಿಮಗೆ ಸ್ಥೂಲವಾಗಿ ಹೇಳಿಬಿಡುತ್ತೇನೆ! ಇಲ್ಲಿ ಸುಮಾರು ಅಧಿಕಾರಿಗಳ ಹೆಸರು ಅವರವರ ಹೆಸರಲ್ಲ. ಯಾಕೆ ಹೀಗೆ ಅಂದರೆ ಆ ಕಾಲದ ಅಧಿಕಾರಿಗಳಲ್ಲಿ ಸುಮಾರು ಜನ ದೇವರ ಪಾದ ಸೇರಿದ್ದಾರೆ ಮತ್ತು ಅವರ ಮಕ್ಕಳು ಮೊಮ್ಮಕ್ಕಳು ಬದುಕಿದ್ದಾರೆ. ತಾತನ ಬಗ್ಗೆ ಆಗಲೇ ಸಾಕಷ್ಟು ಚರಿತ್ರೆ ಕೇಳಿರುವ ಅವರ ಹೃದಯವನ್ನು ಮತ್ತೆ ಮತ್ತೆ ಹಿಂಡಲು ನಾನು ತಯಾರಿಲ್ಲ! ಬದುಕಿರುವ ಅಂದಿನ ಅಧಿಕಾರಿಗಳು ಈಗ ಸಾವಿನ ಅಂಚಿನಲ್ಲಿ ಯಮನ ಅದರಲ್ಲೂ ಘನ ಘೋರ ಶಿಕ್ಷೆಗೆ ಹೆಸರಾದ ನರಕದ ಕರೆ ಕಾಯುತ್ತಾ ಇರುವವರು. (ನರಕದ ಹೆಸರು ಯಾಕೆ ಹೇಳ್ತೀರಿ? ಸ್ವರ್ಗಕ್ಕೆ ಹೋಗುವ ಪುಣ್ಯ ಅಥವಾ ಯೋಗ್ಯತೆ ಅವರಲ್ಲಿ ಯಾರಿಗೂ ಇಲ್ಲವೇ ಅಂತ ನೀವು ಸಪ್ಲಿಮೆಂಟರಿ ಹಾಕ್ತೀರಿ ಅಂತ ನನಗೆ ಗೊತ್ತು. ನನ್ನ ಉತ್ತರ ಏನು ಅಂದರೆ ಅಂಥವರು ಕೋಟಿಗೆ ಅಥವಾ ಹತ್ತು ಕೋಟಿಗೆ ಒಬ್ಬರೋ ಇಬ್ಬರೋ ಸಿಗಬಹುದು, ಜರಡಿ ಆಡಿಸಿ ಕಂದೀಲು ಹಿಡಿದು ಹುಡುಕಿದರೆ, ಖಂಡಿತ ಅಂತಹ ಪುಣ್ಯವಂತರು ಸ್ವರ್ಗ ಸೇರಲಿ!).ಅವರ ಹೆಸರು ಹೇಳಿ ಅವರ ಚರಿತ್ರೆ ಬಿಚ್ಚಿಟ್ಟು ಅವರು ಖುಷಿ ಪಡುವ ಕ್ಷಣಗಳನ್ನು ಕೊಡಲು ನನ್ನ ತೋರು ಬೆರಳು ತಯಾರಿಲ್ಲ. ಇಲ್ಲಿ ನನ್ನ ಲೇಖನಿ ಎಂದು ಬರೆಯುವ ಥಾಟ್ಸ್ ಬಂತು. ಆದರೆ ನಾನು ಲೇಖನಿ ಅಥವಾ ಪೆನ್ ಹಿಡಿದು ಅದೆಷ್ಟೋ ಶತಮಾನಗಳ ಕಾಲ ಸಂದಿದೆ. ತೋರು ಬೆರಳು ಅಂತ ಯಾಕೆ ಹೇಳಿದೆ ಅಂದರೆ ನನ್ನ ಸೃಜನಶೀಲತೆ(ಅಂದರೆ ಸರಸ್ವತೀ ಸೇವೆ)ಈಗ ನಡೆಯುತ್ತಿರುವುದೇ ನನ್ನ ತೋರು ಬೆರಳಿನ ಮೂಲಕ. ಸೃಜನ ಶೀಲತೆ ಅಂದರೆ ಗೊತ್ತು ತಾನೇ?
ಇನ್ನೂ ಅರ್ಥ ಆಗಲಿಲ್ಲವೇ? ನಾನು ಲ್ಯಾಪ್ ಟಾಪ್ ಉಪಯೋಗಿಸಲ್ಲ, ಕಾರಣ ಇದ್ದ ಲ್ಯಾಪ್ ಟಾಪ್ ಕೆಟ್ಟು ಕೆರ ಹಿಡಿದು ಕೆಸರಾಯಿತು. ಮೊಬೈಲ್‌ನಲ್ಲಿ ನನ್ನ ಭುವನೇಶ್ವರಿ ಸೇವೆ, ಸರಸ್ವತೀ ಸೇವೆ ನಡೆಯುತ್ತಾ ಇರುವುದು. ಅದು ಹೇಗೆ ಅಂದರೆ ಮೊಬೈಲ್ ಎಡಗೈಯಲ್ಲಿ ಇರುತ್ತೆ. ಬಲಗೈನ ಹೆಬ್ಬೆರಳನ್ನು ಮೊಬೈಲ್‌ನ ಎಡ ಅಂಚಿಗೆ ಒತ್ತಿ ಹಿಡಿಯುತ್ತೇನೆ. ನಾಲ್ಕು ಬೆರಳು ಫ್ರೀ ಆಗುತ್ತೆ ತಾನೇ? ತೋರು ಬೆರಳಿನಿಂದ ಅಕ್ಷರ ಕುಟ್ಟುತ್ತಾ ಹೋಗುತ್ತೇನೆ. ಇದು ಈಗೊಂದು ಐದಾರು ವರ್ಷದ ಅಭ್ಯಾಸ. ಅದರಿಂದಲೇ ನಾನು ಹೇಳಿದ್ದು… ಅವರ ಚರಿತ್ರೆ ಬಿಚ್ಚಿಟ್ಟು ಅವರು ಖುಷಿ ಪಡುವ ಕ್ಷಣಗಳನ್ನು ಕೊಡಲು ನನ್ನ ತೋರು ಬೆರಳು ತಯಾರಿಲ್ಲ ಅಂತ. ಇದ್ದಕ್ಕಿದ್ದ ಹಾಗೆ ಮಹಾಭಾರತ ಮತ್ತು ಅಲ್ಲಿನ ದ್ರೋಣ ನೆನಪಾದರ? ಯಾಕೆ ಅಂದರೆ ಹೋದವಾರ ಪಟ್ಟು ಹಿಡಿದು (ಈ ವಯಸ್ಸಿನಲ್ಲಿ)ಚೌಡಯ್ಯ ಹಾಲ್‌ನಲ್ಲಿ ಎಂಟು ಹತ್ತು ಗಂಟೆ ಕೂತು ಪರ್ವ ನಾಟಕ ನೋಡಿದೆನಾ. ಇನ್ನೂ ಅದರ ಗುಂಗಿನಿಂದ ಆಚೆ ಬಂದಿಲ್ಲ. ಅದರಲ್ಲಿ ದ್ರೋಣ ಬರುತ್ತೆ, ಏಕಲವ್ಯವೂ ಬರತ್ತೆ, ಮಿಕ್ಕ ಸಾವಿರಾರು ಕ್ಯಾರೆಕ್ಟರ್‌ಗಳು ಬರ್ತವೆ. ದ್ರೋಣ ಏಕಲವ್ಯನಿಂದ ಬಲಗೈ ಹೆಬ್ಬೆರಳನ್ನ ಗುರುದಕ್ಷಿಣೆ ಅಂತ ಪಡೀತಾನೆ ನೋಡಿ ಅದು ನೆನಪಾಗುತ್ತೆ. ಯಾರಾದರೂ ಬಂದು ನಾನೇ ನಿನಗೆ ಅಕ್ಷರ ಕಲಿಸಿದ್ದು, ಗುರುದಕ್ಷಿಣೆ ಕೊಡು ಅಂತ ಕೇಳೋದು. ನಾನೂ ಪೆದ್ದು ಪೆದ್ದಾಗಿ ಆಗಲಿ ಸರ ಅನ್ನೋದು. ಏನು ಕೊಡಲಿ ಗುರುವೇ? ಗುರುಭ್ಯೋ ನಮಃ ಅನ್ನೋದು… ಗುರು ಮತ್ತೆ ನನಗೆ ಗುರು ದಕ್ಷಿಣೆ ಕೊಡು, ಇಲ್ಲ ಅನ್ನಬಾರದು ಅನ್ನೋದು. ನಾನು ಮತ್ತೆ ಗುರುದೇವ ಗುರು ಬ್ರಹ್ಮ ಗುರು ಸಾಕ್ಷಾತ್ ಪರಬ್ರಹ್ಮ ಅಂತ ಹೇಳಿ ಏನು ಬೇಕಾದರೂ ಕೇಳಿ ಗುರುವೇ, ಖಂಡಿತ ಕೊಟ್ಟೆ ಕೊಡುತ್ತೇನೆ, ಏನ ಕೊಡಲಿ ಗುರುವೇ ಕೊಡಲೇನುಂಟು ಎನ್ನಲಿ… ಅಂತ ನಾಟಕದ ಡೈಲಾಗು ಹೊಡೆಯೋದು… ಗುರು ಇದೇ ಚಾನ್ಸ್ ಅಂತ ಶಿಷ್ಯಾ ನಿನ್ನ ಬಲಗೈ ತೋರುಬೆರಳು ಕೊಡು ಅನ್ನೋದು…… ನಾನು ಕೊಡ್ತೀನಿ ಅಥವಾ ಇಲ್ಲ ಅನ್ನೋದು ಬೇರೆ ವಿಷಯ. ಆದರೆ ಎಂಟು ಹತ್ತು ಗಂಟೆ ಕೂತು ಪರ್ವ ನೋಡಿ ಬಂದಾಗಿನಿಂದ ಈ ಸೀನ್ ತಲೆಯಲ್ಲಿ ಓಡಿ ಓಡಿ ಯಾರನ್ನೂ ಗುರು ಅಂತ ಕೂಗಲೇಬಾರದು ಅಂತ ಡಿಸೈಡ್ ಮಾಡಿದ್ದೇನೆ…! ಮೊದಲು ತರಕಾರಿ ಮಾರುವನಿಂದ ಹಿಡಿದು ಬಸ್ ಕಂಡಕ್ಟರ್, ರಿಕ್ಷಾ ಡ್ರೈವರ್… ಇವರಿಗೆಲ್ಲಾ ಗುರು ಅನ್ನುತ್ತ ಇದ್ದವನು ಈಗ ಗುರು ಪದ ಉಪಯೋಗಿಸುವುದನ್ನು ಕಡಿಮೆ ಮಾಡಿದ್ದೇನೆ, ಕಡಿಮೆ ಏನು ನಿಲ್ಲಿಸಿಬಿಟ್ಟಿದ್ದೇನೆ! ಇದು ಹಾಗಿರಲಿ.
ನಾನು ಏನು ಹೇಳುತ್ತಾ ಇದ್ದದ್ದು? ಆಗ ಸರ್ವಿಸ್‌ನಲ್ಲಿದ್ದ ಕೆಇಬಿ ಅಧಿಕಾರಿಗಳ ನೆನೆಸಿಕೊಂಡಿದ್ದೆ. ಅಷ್ಟರಲ್ಲಿ ಕತೆ ಡಿವಿಯೇಟ್ ಆಗಿತ್ತು ತಾನೇ?
ಆಗ ಬೆಂಗಳೂರಿನಲ್ಲಿ ಬಡಾವಣೆಗಳು ಹುಟ್ಟುತ್ತಿದ್ದ ಮತ್ತು ಬೆಳೆಯುತ್ತಿದ್ದ ಕಾಲ. ಸಹಜವಾಗಿ ಸರ್ಕಾರೀ, ಅರೆ ಸರ್ಕಾರೀ ಇಲಾಖೆಗಳು ಓವರ್ ವರ್ಕ್ ಮಾಡ್ತಾ ಇದ್ದವು. ಅಂದರೆ ಕೆಲಸದ ಹೊರೆ ಹೆಚ್ಚು. ಅಂತಹ ಸಂಕೀರ್ಣ (ಖಂಡಿತ ಈ ಪದದ ಅರ್ಥ ನನಗೆ ಈಗಲೂ ತಿಳಿಯದು. ಹಲವು ಕಗ್ಗಂಟಿನ ಸನ್ನಿವೇಶಗಳಿಗೆ ಸಂಕೀರ್ಣ ಅನ್ನುತ್ತಾರೆ ಅಂತ ಓದಿದ್ದೆ!) ಸಮಯದಲ್ಲಿ ನನ್ನ ಮತ್ತು ನನ್ನಂಥ ಅದೆಷ್ಟೋ ಲೆಕ್ಕವಿಲ್ಲದಷ್ಟು ಜನ ಮನೆ ನಿರ್ಮಾಣದಲ್ಲಿ ತೊಡಗಿದ್ದರು. ಓವರ್ ವರ್ಕ್ ಅಂದರೆ ಕಚೇರಿ ಸಮಯ ಬಿಟ್ಟು ಬೇರೆ ಸಮಯದಲ್ಲಿ ದೇಶ ಮುಂದೆ ತರಲು ದುಡಿಯುವುದು! ದುಡಿಯುವುದು ಮತ್ತು ದುಡಿಯುವುದು. ಜೇಬು ತುಂಬಿಸಿಕೊಳ್ಳುವುದು ಇದಕ್ಕೆ ನೇರ ಲಿಂಕ್ ಇಲ್ಲದವು.
ನಮ್ಮ ಸೈಟು ಅಂತ ಇತ್ತಲ್ಲಾ ನಾನೂ ಮನೆ ಕಟ್ಟಿಸುತ್ತಾ ಇದ್ದದ್ದು? ಅದು ರಸ್ತೆಯ ಎಡ ಕೊನೆ ಕೊನೆಗೆ ಇದ್ದದ್ದು. ಅಂದರೆ ರಸ್ತೆಯ ಶುರುವಿನಿಂದ ತಳಕ್ಕೆ ಬರಬೇಕು. ನನ್ನ ಮನೆಗೆ ಕರೆಂಟು ಬರಬೇಕು ಅಂದರೆ ಕಂಬ ಇರಬೇಕು, ಅದರ ಮೇಲೆ ವಿದ್ಯುತ್ ಹರಿಸುವ ವೈರು ಬರಬೇಕು… ಹೊಸ ಬಡಾವಣೆ ಅಂದೆ ಅಲ್ಲವಾ? ಇಲ್ಲಿಗೆ ಬೇಕಾದ ಕಂಬಗಳು ಮತ್ತು ಇತರೆ ಸಂಬಂಧಿತ ಉಪಕರಣಗಳನ್ನು ಆಗಲೇ ತಂದು ಇಟ್ಟುಕೊಂಡಿರುವ ವ್ಯವಸ್ಥೆ ಆಗಿನ ಕಾರ್ಯ ವಿಧಾನದ ಒಂದು ಭಾಗ.(ಈ ಕಾರ್ಯ ವಿಧಾನದ ಇನ್ನೊಂದು ಭಾಗ ಅಂದರೆ ಇಲ್ಲಿಗೆ ಸ್ಯಾಂಕ್ಷನ್ ಆಗಿರುವ ಕಂಬಗಳು ಬೇರೆಲ್ಲೋ ಹೋಗುವುದು ಮತ್ತು ಬೇಕಾದವರಿಗೆ ಸಿಗದೇ ಇರುವುದು) ಮೊದಮೊದಲು ಈ ವಿದ್ಯುತ್ ವೈರುಗಳನ್ನು ಮರದ ಕಂಬಗಳಿಗೆ ಸಿಕ್ಕಿಸಿದ್ದ ತೂತುಗಳಿರುವ ಕಬ್ಬಿಣದ ಅಡ್ಡ ಪಟ್ಟಿ ಅಥವಾ ಸಲಾಕೆಗಳ ಮೂಲಕ ತೂರಿಸಿ ಎಳೆಯುತ್ತಾ ಇದ್ದರು. ಇದು ಅರವತ್ತರ ದಶಕದಲ್ಲಿ. ಅದಕ್ಕೂ ಮೊದಲು ಇನ್ನೂ ಶಿವನ ಸಮುದ್ರದ ವಿದ್ಯುತ್ ಉತ್ಪಾದನೆಗೆ ಮೊದಲು ಕಂಬಗಳಿಗೆ (ಇದೂ ಮರದ ಕಾಂಡ. ಆಗಿನ್ನೂ ಪರಿಸರವಾದಿಗಳಿಂದ ಮರ ಉಳಿಸಿ ಚಳವಳಿ ಶುರು ಆಗಿರಲಿಲ್ಲ.) ಒಂದು ಸೀಮೆ ಎಣ್ಣೆ ಲಾಂಟರ್ನ್ ಕಟ್ಟುತ್ತಾ ಇದ್ದರಂತೆ. ಆಗ ವೈರ್ ಇರುತ್ತಿರಲಿಲ್ಲ. ಇದು ನಮಗೆ ಹಳೇ ಕಾದಂಬರಿಗಳ ಮೂಲಕ ಓದಿ ಗೊತ್ತಿರೋದು, ಆರ್ಟ್ ಸಿನಿಮಾ ಮೂಲಕ ನೋಡಿ ಗೊತ್ತಿರುವುದು. ಈಗ ಅದನ್ನು ನೆನೆಸಿಕೊಂಡು ಹೇಳುವ ಯಾವ ಚಿರಂಜೀವಿಯೂ ಇಲ್ಲ (ಮತ್ತೆ ಪರ್ವ ಕತೆಗೆ. ಅಲ್ಲಿ ಅಶ್ವತ್ಥಾಮ ಒಂದು ಚಿರಂಜೀವಿ!)ಮರದ ಕಂಬದ ನಂತರ ಕಬ್ಬಿಣದ ಕಂಬ ಬಂದಿದ್ದು. ಕಬ್ಬಿಣದ ಕಂಬ ನಾನೂ ನೋಡಿದ ನೆನಪಿದೆ. ನೆಕ್ಸ್ಟ್ ಆವಿಷ್ಕಾರ ಅಂದರೆ ಸಿಮೆಂಟ್ ಪೋಲುಗಳು. ಪೋಲುಗಳು ಅಂದರೆ poles ಅಂತ, ಅಂದರೆ ಅರ್ಥಾತ್ ಕಂಬಗಳು! ಮುಂದೆ ಕಂಬ ರಹಿತ ವಿದ್ಯುತ್ ಬರಬಹುದು. ಈಗ ಅಂತರ್ ಭೂಮಿ ವಿದ್ಯುತ್ ಯೋಜನೆ ಇದೆಯಂತೆ. ಅದರಂತೆ ವಿದ್ಯುತ್ ಸಾಗಿಸುವ ಕೇಬಲ್‌ಗಳು ಭೂಮಿ ಒಳಗಡೆ ಹಾಕುವುದು. ಇದು ನಮ್ಮೂರಲ್ಲಿ ಮೊದಲು ಆಗ್ತದೆ ಅಂತ ಸರ್ಕಾರದ ಯಾವುದೋ ಮಂತ್ರಿ ಐದಾರು ವರ್ಷ ಹಿಂದೆ ಹೇಳಿತ್ತು, ಇನ್ನೂ ಅದರ ಓ ನಾಮ ಶುರು ಆದಂತಿಲ್ಲ. ಸರ್ಕಾರದ ಕೆಲಸ ತಾನೇ? ನಿಧಾನಕ್ಕೆ ಆಗೋದು… ಸಿಮೆಂಟ್ ಕಂಬದ ನಂತರ ಪ್ಲಾಸ್ಟಿಕ್ ಕಂಬ, ನಂತರ ರಿ ಸೈಕಲ್ಡ್ ತ್ಯಾಜ್ಯದಿಂದ ಕಂಬ, ನಂತರ…… ನಂತರ ಏನು ಅಂತ ಯೋಚಿಸಬೇಕು.
ವಿದ್ಯುತ್ ಕಂಬ ಅಂದರೆ ಅದನ್ನು ತಯಾರಿಸುವ ಒಂದು ನೆನಪು ಈಗ ನಿಮಗೆ. ಇದು ಯಾಕೆ ಈಗ ಅಂದರೆ ಅದಕ್ಕೆ ಮುಂದೆ ಬರ್ತೇನೆ!
ನಾವು ರಾಜಾಜಿನಗರ ಹೊಕ್ಕ ಕತೆ ನಿಮಗೆ ತುಂಬಾ ಹಿಂದೆ, ನನ್ನ ನಿಮ್ಮ ಪರಿಚಯ ಆದ ಹೊಸದರಲ್ಲಿ ಹೇಳಿದ್ದೆ ತಾನೇ? ಈಗ ಅದರ ಒಂದು ತುಣುಕು ನೆನಪಿಗೆ ಬಂದಿದೆ. ರಾಜಾಜಿನಗರದಲ್ಲಿ ಒಂದು ಪವರ್ ಹೌಸ್ ಅಂತ ಇತ್ತು ಮತ್ತು ಈಗಲೂ ಇದೆ. ಶಿವನ ಹಳ್ಳಿ (ಇದು ಈಗ ಶಿವನಗರ ಆಗಿದೆ. ಗಂಗೇನಹಳ್ಳಿ ಗಂಗಾನಗರ, ತಾಯಪ್ಪನ ಕೆರೆ ಟಿ ಬ್ಲಾಕ್…… ಅಂದಹಾಗೇ..) ಹೋಗಲು ಪವರ್ ಹೌಸ್ ದಾಟಿ ಹೋಗಬೇಕು. ಅಲ್ಲಿ ಪವರ್ ಹೌಸ್ ಸುತ್ತ ಮುಳ್ಳು ಬೇಲಿಯ ಕಾಂಪೌಂಡು, ಅದರೊಳಗೆ ನಡೆಯುವ ಕಾಮಗಾರಿ ರಸ್ತೆಯಲ್ಲಿ ಓಡಾಡುವ ಎಲ್ಲರಿಗೂ ಕಾಣುತ್ತಿತ್ತು. ಈಗಲೂ ಕಣ್ಣಿಗೆ ಕಟ್ಟಿರುವ ಹಾಗೆ ನೆನಪಿರುವ ಒಂದು ದೃಶ್ಯ ಅಂದರೆ ಈ ಸಿಮೆಂಟ್ ಕಂಬಗಳದ್ದು. ಉದ್ದನೆ ತೆರೆದ ಬಾಯಿಯ ನೀರಿನ ತೊಟ್ಟಿಗಳು ಸಾಲಾಗಿ ಇದ್ದವು. ಅದರಲ್ಲಿ ನೀರಿನಲ್ಲಿ ಮುಳುಗಿ ಇರುತ್ತಿದ್ದ ಸಿಮೆಂಟಿನ ಕಂಬಗಳು ಇರುತ್ತಿತ್ತು. ಸ್ವಿಮ್ಮಿಂಗ್ ಪೂಲ್ ನೆನೆಸಿಕೊಳ್ಳಿ, ಅಂತಹ ದೊಡ್ಡ ತೊಟ್ಟಿ, ಅದರೊಳಗೆ ಶೀರ್ಶಾಸನ ಹಾಕಿ ಅಂಗಾತ ಮಲಗಿರುವ ಯೋಗ ಪಟುಗಳ ಹಾಗೆ ನಿಶ್ಚಿಂತೆಯಿಂದ ಮಲಗಿರುವ ಸಿಮೆಂಟ್ ಕಂಬಗಳು… ಈ ದೃಶ್ಯಕ್ಕೆ ಸಾಮ್ಯ ತನ್ನಿ! ಅಲ್ಲೇ ಪಕ್ಕದಲ್ಲಿ ಈ ಸಿಮೆಂಟ್ ಕಂಬಗಳ ತಯಾರಿಕೆ ನಡೆದು ತೊಟ್ಟಿಯಲ್ಲಿನ ನೀರಿನಲ್ಲಿ ಅದನ್ನು ಕ್ಯೂರಿಂಗ್ ಮಾಡುತ್ತಿದ್ದರು ಎಂದು ಕಾಣುತ್ತದೆ. ತೊಟ್ಟಿಯಲ್ಲಿ ಉದ್ದುದ್ದ ತಣ್ಣಗೆ ಮಲಗಿರುತ್ತಿದ್ದ ಸಿಮೆಂಟ್ ಕಂಬಗಳು ಆಗ ಅರವತ್ತರ ಸುಮಾರಿನಲ್ಲಿ ಅಂದರೆ ಈಗೊಂದು ಆರೇಳು ದಶಕಗಳ ಹಿಂದೆ ಒಂದು ಪ್ರತಿನಿತ್ಯದ ದೃಶ್ಯ. ಅಲ್ಲಿ ಕ್ಯೂರಿಂಗ್ ಆದ ನಂತರ ಈ ಕಂಬಗಳನ್ನು ಲಾರಿಗೆ ತುಂಬಿ ಅದನ್ನು ಬೇರೆ ಬೇರೆ ಕಡೆ ರವಾನಿಸುತ್ತಿದ್ದರು. ಈಗ ಅಲ್ಲಿ ಕಂಬ ತಯಾರಾಗುತ್ತದೆಯೋ ಇಲ್ಲವೋ ತಿಳಿಯದು. ಆಗ ಕೆಲಸಗಾರರು ಹೇಳುತ್ತಿದ್ದ ಕೆಲವು ಭಾರ ಹೊರುವ ಸ್ಲೋಗನ್‌ಗಳು ನಮಗೆ ಶುಕ್ಲಾಂ ಭರಧರಂ , ಶಶಿವರ್ಣಂ ನಂತೆ ಬಾಯಿಪಾಠ ಆಗಿತ್ತು. ಕೆಲವು ಸ್ಲೋಗನ್ ಈಗಲೂ ನೆನಪಲ್ಲಿ ಇದೆ.
ರಾಮಪ್ಪನ ಕರೀ ಪ್ಯಾಂಟು ಐಸಾ
ಅಕ್ಕಯ್ಯಮ್ಮನ ನೀಲಿ ಸೀರೆ ಐಸಾ
ಆಂಜನೇಯನ ಹಸಿರು ಟೋಪಿ ಐಸಾ
ದೇವೇಂದ್ರನ ಹಳದಿ ಕಿರೀಟ ಐಸಾ…
ಹೀಗೆ ಅವರು ಭಾರ ಹೊತ್ತು ಐಸಾ ಐಸಾ ಹೇಳುತ್ತಾ ಹುಮ್ಮಸ್ಸಿನಿಂದ ಲಾರಿಗೆ ಕಂಬಗಳನ್ನು ಏರಿಸುತ್ತಾ ಇದ್ದರು.
ರಾಮಪ್ಪನ ಕರೀ ಪ್ಯಾಂಟು ಅಂತ ಅವರಲ್ಲೇ ಒಬ್ಬ ಕೂಗುತ್ತಿದ್ದ. ಮಿಕ್ಕವರು ಅದಕ್ಕೆ ಐಸಾ ಎಂದು ಸೇರಿಸುತ್ತಿದ್ದರು. ಸಲೀಸಾಗಿ ಭಾರದ ಕಂಬಗಳು ಲಾರಿಗೆ ಸೇರುತ್ತಿತ್ತು. ಸುಮಾರು ಸಲ ಗುಂಪು ಪೋಲಿಗಳಿಂದ ತುಂಬಿದ್ದರೆ, ಪೋಲಿ ಐಸಾಗಳು ಹರಿದಾಡುತ್ತಿತ್ತು. ಅದರಲ್ಲಿ ನೆನಪಿರೋ ಕೆಲವು ಅಂದರೆ ರಂಗಮ್ಮನ ಹರಿದ ಲಂಗ ಐಸಾ, ಭೀಮಕ್ಕನ ಗುಂಡಿ ಕಿತ್ತ ಬ್ಲೌಸು ಐಸಾ, ಹನುಮಪ್ಪನ ತೂತು ಬಿದ್ದ ಕಾಚಾ ಐಸಾ…. ಹೀಗೇ ಮುಂದುವರೆದು ಅರ್ಥ ಪರ್ಥ ಇಲ್ಲದ ಅಶ್ಲೀಲದ ಐಸಾಗಳು, ಅದರ ಜತೆ ನಗುಗಳು ಆಕಾಶದ ತುಂಬಾ ಹರಡುತ್ತಿತ್ತು!
ನಾನು ಫ್ಯಾಕ್ಟರಿಗೆ ಸೇರಿದ ಮೇಲೆ ನಮ್ಮನ್ನು ಸಾಗಿಸುತ್ತಿದ್ದ ಬಸ್ಸುಗಳು ಕೆಟ್ಟು ನಿಂತು ಹೋದಾಗ ಡ್ರೈವರ್ ನಮಗೆ ಬಸ್ ತಳ್ಳಲು ರಿಕ್ವೆಸ್ಟ್ ಮಾಡುತ್ತಿದ್ದ. ನಮಗೆ ತಳ್ಳಲು ಈ ಐಸಾ ಮಂತ್ರ ತುಂಬಾ ನೆರವಾಗುತ್ತಿತ್ತು ಮತ್ತು ಎಲ್ಲರೂ ಹದಿವಯಸ್ಸಿನ ಹುಡುಗರೇ ಆದ್ದರಿಂದ ಹೇರಳವಾಗಿ ಆನ್ ಪಾರ್ಲಿಮೆಂಟರಿ ಪದಗಳು ಹರಿದಾಡಿ ನಗು ಕೇಕೆ ಉಕ್ಕಿ ಹರಿಯುತ್ತಿತ್ತು. ಈಚೆಗೆ ಅಂದರೆ ಇಪ್ಪತ್ತು ಮೂವತ್ತು ವರ್ಷದಿಂದ ಈ ಐಸಾ ಪದ ನನ್ನ ಕಿವಿಗೆ ಬಿದ್ದಿಲ್ಲ.
ನಮ್ಮದು ಹೊಸ ಬಡಾವಣೆ ಅಂದೆ ಅಲ್ಲವಾ? ಇಲ್ಲಿಗೆ ಬೇಕಾದ ಕಂಬಗಳು ಮತ್ತು ಇತರೆ ಸಂಬಂಧಿತ ಉಪಕರಣಗಳನ್ನು ಆಗಲೇ ತಂದು ಇಟ್ಟುಕೊಂಡಿರುವ ವ್ಯವಸ್ಥೆ ಆಗಿನ ಕಾರ್ಯ ವಿಧಾನದ ಒಂದು ಭಾಗ. ಅದಕ್ಕೆ ಆಗಿನ ಕೆಇಬಿ ಪರಿಭಾಷೆಯಲ್ಲಿ ವರ್ಕ್ ಆರ್ಡರ್ ಅಂತೇನೋ ಪಾರಿಭಾಷಿಕ ಪದವಂತೆ. ನೀವು ಕಂಬಕ್ಕೆ ಬೇಕು ಅಂತ ಬೇಡಿಕೆ ಸಲ್ಲಿಸಬೇಕು. ಕಾಂಟ್ರಾಕ್ಟರ್‌ರ ಮೂಲಕ ಆದರೆ ಅವನಿಗೆ ಒಳ ಹೊರಗೂ ಗೊತ್ತಿದ್ದು ಇದರ ಕಷ್ಟ ನಿಮ್ಮ ಅರಿವಿಗೆ ಬರುತ್ತಿರಲಿಲ್ಲ. ನಾನು ಮುಂದೆ ಕಂಟ್ರಾಕ್ಟರ್ ಆಗುವ ಮಹದಾಸೆ ಹೊತ್ತಿದ್ದವನು, ಅದರಿಂದ ನಾನೇ ಹೋಗುತ್ತಿದ್ದೆ, ನನ್ನ ಗೈಡ್ ಅಶ್ವತ್ಥ ಮೂಲಕ.
ನಮ್ಮ ರಸ್ತೆ ಮೊದಲಲ್ಲಿ ಒಂದೇ ಕಂಬ ಇತ್ತು. ನನ್ನ ಸೈಟ್‌ವರೆಗೆ ವಿದ್ಯುತ್ ವೈರ್ ಎಳೆಯಲು ಇನ್ನೂ ನಾಲ್ಕು ಕಂಬ ಬೇಕಿತ್ತು. ಸರಿ ಅದಕ್ಕೆ ಇಂಜಿನಿಯರ್ ನೋಡಬೇಕಲ್ಲ ಅವರ ಆಫೀಸಿಗೆ ಬೆಳಿಗ್ಗೆ ಹನ್ನೊಂದಕ್ಕೆ ಎಂಟ್ರಿ ಹಾಕಿದೆ. ಆಫೀಸಿನ ಕಳೆ ಇರಲಿಲ್ಲ..! ನಾಲ್ಕೈದು ಜನ ಕ್ಲಾಸ್ ಫೋರ್ ಸಿಬ್ಬಂದಿ ಅಲ್ಲೊಂದು ಕಡೆ ಬೀಡಿ ಸೇದುತ್ತಿದ್ದರು, ಮೂರು ನಾಲ್ಕು ಜನ ಹೆಂಗಸರು ಕ್ಲರ್ಕ್ ಇರಬೇಕು, ನಿಂತು ಯಾವುದೋ ತಮಿಳು ಸಿನಿಮಾ ಬಗ್ಗೆ ಗಹನವಾದ ಚರ್ಚೆ ನಡೆಸಿದ್ದರು. ಒಂದು ಗುಂಪು ಅವರು ನೌಕರರು ಹೌದೋ ಅಲ್ಲವೋ ತಿಳಿಯದು; ಹುಲಿ ಕುರಿ ಆಟ ಆಡುತ್ತಿದ್ದರು.
ಎಂಜಿನಿಯರ್ ಹೆಸರಿನ ಬೋರ್ಡ್ ಯಾವುದಾದರೂ ರೂಮಿನ ಎದುರು ಕಾಣುತ್ತಾ ಅಂತ ಸುತ್ತಲೂ ಕಣ್ಣಾಡಿಸಿದೆ. ಎಲ್ಲೂ ಯಾವ ಬೋರ್ಡು ಇಲ್ಲ, ಎಲ್ಲಾ ಬೋಳು ಬೋಳು!
ಎಲ್ಲಾ ಬೋಳು ಬೋಳು ಆದರೇನು? ಭಗವಂತ ಬಾಯಿ ಕೊಟ್ಟಿರೋದು ಬರೀ ತಿನ್ನೋಕ್ಕೆ ಮಾತ್ರವೇ? ಮಾತೂ ಆಡುಕ್ಕೆ ತಾನೇ… ನನಗೆ ಖಂಡಿತ ಆಗ ಭಗವಂತನಲ್ಲಿ ನಂಬಿಕೆ ಅನ್ನೋದು ಇರಲಿಲ್ಲ ಅನ್ನಿ. ವ್ಯವಸ್ಥೆ ಜತೆಗೆ ಹೊಂದಾಣಿಕೆ ಆಗುತ್ತಾ ಬಂದಹಾಗೆ ನಮ್ಮ ಸೀನಿಯರ್ಸ್ ಅವರ ಸರ್ಕಾರಿ ಕಚೇರಿಗಳ ಅನುಭವದ ಮೇಲೆ ಭಗವಂತನ ಮೇಲೆ ನಂಬಿಕೆ ಹುಟ್ಟಿಸಿಕೊಂಡರು ಎನ್ನುವ ತೀರ್ಮಾನಕ್ಕೆ ನಾನು ತೀರಾ ಈಚೆಗೆ ಬಂದಿರೋದು.
ಬಾಯಿಗೆ ಬರವೇ ಅಂತ ಸೀದಾ ಹೆಂಗಸರು ಚರ್ಚಿಸುತ್ತಾ ಮೈಮರೆತು ಇದ್ದರು ನೋಡಿ ಅಲ್ಲಿಗೆ ನಡೆದೆ.
ನನ್ನತ್ತ ಯಾರೂ ಕಣ್ಣು ಹಾಯಿಸಲಿಲ್ಲ. ನಾನು ಅಷ್ಟಕ್ಕೇ ಬಿಡೋನಲ್ಲ. ಎರಡು ಮೂರು ಸಲ ಕ್ಕೆಕ್ಕೆ, ಕ್ಕೆಕ್ಕೆ ಕ್ಕೆಕ್ಕೆ ಮಾಡಿದೆ. ಅವರು ಡೋಂಟ್ ಕೇರ್..
ಮೇಡಂ ಮೇಡಂ ಮೇಡಂ… ಅಂತ ಹಲವು ಬಾರಿ ಕೂಗಿದ ಮೇಲೆ ಒಬ್ಬರ ಕಣ್ಣು ನನ್ನ ಮೇಲೆ ಬಿತ್ತು.
ಎನ್ನ…… ಅಂದರು
ಇವರು ಇವರು ಅಂತ ಎಂಜಿನಿಯರ್ ಹೆಸರು ನೆನೆಸಿಕೊಳ್ಳಲು ಯತ್ನಿಸಿದೆ. ಆಕೆಯ ಅಸಹನೆ ಹೆಚ್ಚಿತು, ಚರ್ಚೆಯ ನಡುವೆ ಆಕೆಯ ಗಮನ ಸೆಳೆದಿದೆ, ಅದಕ್ಕೆ ಅಂತ ಕಾಣುತ್ತೆ..
ಶೀಘ್ರಮಾ ಚೋಳ್ಳು… ಅಂದಳು.
ಭರಮಪ್ಪ ಇಲ್ಲಿ ಯಾವ ರೂಮು… ಅಂದೆ.
ಭರಮಪ್ಪ ಅನ್ನೋದು ನಮಗೆ ಕಂಬ ಕೊಡುವ ಎಂಜಿನಿಯರ್ ಹೆಸರು ಅಂತ ತಿಳಿದಿದ್ದೆ. ಆಕೆ ಮುಖ ಗಂಟು ಹಾಕಿಕೊಂಡು ಅವಳ ಸೆರಗು ಸಿಕ್ಕಿಕೊಂಡಳು. ಜಗಳಕ್ಕೆ ಬರ್ತಾಳೆ, ಅವಳಿಗೆ ನಾನೇನಾದರೂ ಕೆಟ್ಟ ಮಾತು ಆಡಿದೇನಾ ಅಂತ ಭಯ ಹುಟ್ಟಿತು. ಹಾಗೇ ನಿಂತೆ. ಹತ್ತಿರ ಬಂದಳು.
ಬೀಡಿ ಸೇದುತ್ತಾ ನಿಂತಿದ್ದ ಐದಾರು ಜನರ ಗುಂಪಿನತ್ತ ಬಲಗೈ ಎತ್ತಿ ತೋರಿಸಿ ಅಂಗೆ ಪೋ ಅಂದಳು!
ಅಂಗೆ ಪೋ…ದೆ. ಅವರನ್ನು ನನ್ನ ಗಮನ ಸೆಳೆಯುವಲ್ಲಿ ಏಳೆಂಟು ಪ್ರಯತ್ನದ ನಂತರ ಯಶಸ್ವಿಯಾದೆ.
ಅವರಲ್ಲಿ ಒಬ್ಬರು ನನ್ನ ನೋಡಿದರು.
ಏನ್ ಸಾ… ಅಂತ ಕೇಳಿದರು.
ಭರಮಪ್ಪ ಇಲ್ಲಿ ಯಾವ ರೂಮು… ಅಂದೆ. ಇಲ್ಲಿ ಯಾವ ರೂಮು… ಅಂತಾ ಮತ್ತೆ ರಿಪೀಟಿಸಿದೆ.
ಯಾಕೆ ಸಾ…. ಅಂತ ಕೇಳಿದ.
ಕಂಬ ಎಲೆಕ್ಟ್ರಿಕ್ ಕಂಬ ಹಾಕಿಸಬೇಕು ಮನೆ ಹತ್ರ, ಮನೆ ಕಟ್ಟುತ್ತಾ ಇದೀನಿ….. ಅಂತ ಕತೆ ಬಿಚ್ಚಿದೆ. ಅವರನ್ನು ನೋಡಬೇಕು ಅಂದರೆ ಬೆಳಿಗ್ಗೆನೆ ಬರ್ಬೇಕು.. ಅಂದ.
ಅವರ ಮನೆ ಏನಾದರೂ ನನ್ನ ಮನೆ ಹತ್ತಿರವೇ ಇದೆ ಅಂದರೆ ಅಲ್ಲೇ ನೋಡಬಹುದು ಅನಿಸಿತು.
ಅವರ ಮನೆ ಎಲ್ಲಪ್ಪಾ… ಅಂದೆ.
ಯಾವತ್ತು ಹೋಗಬೇಕು ಅಂತ ಇದ್ದೀರಿ?…. ಅವನು.
ನಾಳೆ ನಾಳಿದ್ದು…… ಇದು ನಾನು.
ನಾಳೆ ಆದರೆ ಬೊಂಸಾಂದರ, ನಾಳಿದ್ದು ಅಂದರೆ ಬೆಟ್ಟಹಳ್ಳಿ……
ಅದೇನು ಎರಡು ಎರಡು ಕಡೆ ಅವರಿಗೆ ಮನೆ ಐತ….. ಇದು ನಾನು
ಕಿಸಕ್ ಅಂತ ನಕ್ಕರು. ಹೌದು ಸಾರ್ ಅದು ಹಂಗೇನೇ ಅಂದ.
ನಂತರ ತಿಳಿದುಬಂದಿದ್ದು ಪಾಪ ಅವನಿಗೆ ಇಬ್ಬರು ಹೆಂಡತಿಯರು ಮತ್ತು ಅವರ ಒಪ್ಪಂದದಂತೆ ನಾಲ್ಕು ದಿವಸ ಮೂರು ದಿವಸ ಈ ಯಪ್ಪ ಎಲ್ಲೆಲ್ಲಿ ಇರೋದು ಅಂತ ಅಗ್ರಿಮೆಂಟ್ ಅಂತೆ! ಪಾಪ ಅವನ ಪಾಡು ಅಯ್ಯೋ ಅನಿಸಿತಾ? ಇದು ಬೇಗ ಅವನಿಗೆ ಶಾಪ ಆಗಿ ಕನ್ವರ್ಟ್ ಆಯ್ತು. ಈಗ ಅದರ ಕತೆ! ಆಗ ಅಂದರೆ ಮನೆ ಕಟ್ಟ ಬೇಕಾದರೆ ಸುಮಾರು ಜನ ಎರಡೆರಡು ಸಂಸಾರದವರು ಗೊತ್ತಾದರು!
ಅವರ ಮನೆಗೆ ಹೋಗುವ ಐಡಿಯ ಡ್ರಾಪ್ ಆಯಿತು. ಆಫೀಸ್ ಹತ್ರ ಮಾರನೇ ದಿವಸ ಬೆಳಿಗ್ಗೆ ಬೆಳಿಗ್ಗೆ ಹತ್ತು ಹದಿನೈದು ಕಿಮೀ ಸೈಕಲ್ ತುಳಕೊಂಡು ಬೆವರು ಹರಿಸುತ್ತಾ ಹೊಕ್ಕೆ. ಒಂದು ಕುರ್ಚಿ ಮೇಲೆ ಅವನು ಬಾಯಲ್ಲಿ ಮೊಳ ಉದ್ದದ ಸಿಗರೇಟು, ಸುತ್ತಲೂ ಕೈಲಿ ಫೈಲ್ ಹಿಡಿದ ಕಂಟ್ರಾಕ್ಟರ್ ಹಿಂಡು ಇವರೂ ಕುರ್ಚಿ ಮೇಲೆ, ಅವರ ಹಿಂದೆ ಸೆಕೆಂಡ್ ರೌಂಡ್‌ನಲ್ಲಿ ಹಸಿರು ನೀಲಿ ಮಿಶ್ರಿತ ಪ್ಯಾಂಟು ಶರ್ಟ್ ತೊಟ್ಟ ಲೈನ್ ಮ್ಯಾನ್‌ಗಳು. ಅವನ ಸುತ್ತ ಜನ ಖಾಲಿ ಆಗಲಿ ಅಂತ ನಿಂತೆ, ನಿಂತೆ ಮತ್ತು ನಿಂತೆ! ಜನ ಖಾಲಿ ಆಗಲಿಲ್ಲ. ನಿನ್ನೆ ನನ್ನ ಕೈಲಿ ಮಾತಾಡಿದ್ದ ಲೈನ್ ಮ್ಯಾನ್, (ಅವನ ಹೆಸರು ಜಗನ್ನಾಥ ಅಂತ) ಸಾರ್ ನೀವು ಇಲ್ಲಿ ನಿಂತ್ರೆ ಇಲ್ಲೇ ಇರ್ಬೇಕು ಬರ್ರಿ ಅಂತ ಎಳ್ಕೊಂಡು ಮುಂದೆ ನುಗ್ಗಿದ.
ಸಾರ್ ಇವರ ಕೆಲಸ ಐತಂತೆ. ನಿನ್ನೇನೂ ಬಂದಿದ್ರು… ಅಂತ ಮುಂದೆ ತಳ್ಳಿದ.
ಭರಮಪ್ಪ ತಲೆ ಎತ್ತಿ ನನ್ನನ್ನು ನೋಡಿದ, ಹುಬ್ಬು ಹಾರಿಸಿದ ಏನು ಅಂತ.
ಇನ್ನೊಂದು ಡಿವಿಯೇಷನ್ ಈಗ. ನನ್ನ ಬಂಧು ಒಬ್ಬರು ಆಗಿನ keb ನಲ್ಲಿ ದೊಡ್ಡ ಸ್ಥಾನದಲ್ಲಿದ್ದು ಒಂದು ವರ್ಷ ಹಿಂದೆ ರಿಟೈರ್ ಆಗಿದ್ದರು. ಸರ್ವಿಸ್‌ನಲ್ಲಿದ್ದಾಗ ಶುದ್ಧ ಹಸ್ತ, ಪ್ರಾಮಾಣಿಕ , ಪುಣ್ಯಕೋಟಿ, ಸಭ್ಯ ಮೊದಲಾದ ಅಪರೂಪದ ಹೆಸರು ಸಂಪಾದನೆ ಮಾಡಿದ್ದರು. ಅವರ ಭೇಟಿ ನಾನು ಮನೆ ಕಟ್ಟುವ ಸಮಯದಲ್ಲಿ ಆಗಿತ್ತು. ಇವರ ಹೆಸರು ಹೇಳಿ ನನ್ನ ಕೆಲಸ ಮಾಡಿಸಿಕೊಳ್ಳುವುದು ಸುಲಭ ಆಗುತ್ತೆ ಅಂತ ಅನಿಸಿತ್ತು. ಸರಿ ಸಂದರ್ಭ ನೋಡಿ ಈ ಟ್ರಂಪ್ ಕಾರ್ಡ್ ಚಾಲೂ ಮಾಡಲು ನಿರ್ಧರಿಸಿದ್ದೆ. ಇದು ಮುಂದಿನ ಕತೆಗೆ ಪ್ರೀ ಲೋಗು ಅಂದರೆ ಹಿನ್ನೆಲೆ.
ಸಾರ್ ನಮಸ್ಕಾರ. ನಾನು ರಾಘವೇಂದ್ರ ರಾಯರ ಸೋದರಳಿಯ… ಅಂದೆ.(ಪ್ರಿಯ ಓದುಗ ಮಹಾಶಯ, ಹೆಸರು ಬದಲಾಯಿಸಿದ್ದೀನಿ ಹಿಂದೆ ಹೇಳಿದ ಹಾಗೆ. ನನ್ನ ಬಂಧು ಹೆಸರು ರಾಘವೇಂದ್ರ ರಾವ್ ಅಂತ ಖಂಡಿತ ಅಲ್ಲ.)
ಓಹ್ ಹೌದಾ ನನಗೆ ತುಂಬಾ ಲೈಕ್ ಮಾಡ್ತಾ ಇದ್ರು ಅವರು. ಎಲ್ಲಾ ಕೆಲಸ ನಂಗೇ ಹೇಳೋರು. ಹೇಗಿದ್ದಾರೆ…. ಅಂತೆಲ್ಲಾ ವಿಚಾರಿಸಿದರು.
ಸಾರ್ ಹೀಗೆ ಕಂಬ ಬೇಕಿತ್ತು, ಮನೆ ಕಟ್ಟಿಸ್ತಾ ಇದೀನಿ… ಅಂತ ಕತೆ ಹೇಳಿ ಫೈಲ್ ಮುಂದೆ ಇಟ್ಟೆ.
ಸರಿ ನಾಳೆ ಬನ್ನಿ… ಅಂದರಾ. ಕೆಲಸ ಆದ ಹಾಗೇ ಅಂತ ಖುಷಿಯಾಯಿತು.
ಮಾರನೇ ದಿವಸ ಸಾಹೇಬ್ರು ತುಂಬ ಬಿಸಿ ಅವ್ರೆ. ಇವತ್ತು ಬರಾಕಿಲ್ಲ ಅಂತ ಬಾಗಿಲಲ್ಲೇ ಅವರ ಶಿಷ್ಯ ಹೇಳಿದ.
ಅದರ ಮಾರನೇ ದಿವಸ ಹೋಗಿ ಭರಮಪ್ಪನ ಎದುರು ನಿಂತೆ. ಒಂದು ಗಂಟೆ ಕಾದೆ. ನನ್ನ ಕಡೆ ತಿರುಗಿ ನೋಡಲು ಸಹ ಅವರಿಗೆ ಪುರುಸೊತ್ತು ಇಲ್ಲರ. ಐದನೇ ದಿವಸವೂ ಇದೇ ರಿಪೀಟ್ ಆಯ್ತು. ಆರನೇ ದಿವಸ ಭಾನುವಾರ. ತೆಪ್ಪಗೆ ಮನೇಲೆ ಇದ್ದು ನನ್ನ ಅದೃಷ್ಟಕ್ಕೆ ಗಂಟೆ ಗಂಟೆಗೂ ಕೋಲಿನಿಂದ ಬಾರಿಸುತ್ತಾ ಕಳೆದೆ. ಸೋಮವಾರ ಬೆಳಿಗ್ಗೆ ಮತ್ತೆ ಕೆಇಬಿ ಆಫೀಸಿಗೆ ದಂಡ ಯಾತ್ರೆ ಮಾಡಿದೆ. ಜಗನ್ನಾಥ, ಅದೇ ಲೈನ್ ಮ್ಯಾನ್ ದಾರೀಲಿ ಸಿಕ್ಕಿದ. ನನ್ನನ್ನು ನೋಡಿ ಅವನ ಲೂನಾ ನಿಲ್ಲಿಸಿದ.
ನನ್ನ ಬಂಧುಗಳ ಹೆಸರು ಭರಮಪ್ಪನ ಮುಂದೆ ಹೇಳಿದ್ದು ಅದಕ್ಕೆ ಅವರ ಉತ್ತರ ಎಲ್ಲವೂ ಇವನೆದುರೇ ಆಗಿದ್ದು.
ಬನ್ನಿ ಸಾ ಕಾಪಿ ಕುಡಿಯೋಣ….. ಅಂತ ಅಲ್ಲೇ ಪೆಟ್ಟಿಗೆ ಅಂಗಡಿ ಕಡೆ ನಡೆದ. ಇಬ್ಬರೂ ಕಾಪಿ ಕುಡಿದಾತೂ..
ನೀವು ದಿನಾ ಇಂಗೆ ಬಂದು ಹೋಯ್ತಾ ಇದ್ರೆ ಕೆಲ್ಸ ಆಗಾಕಿಲ್ಲ. ಅದೆಷ್ಟೋ ಬಿಸಾಕಿ ಕೆಲ್ಸ ಆಗ್ತದೆ.. ಅಂದ!
ಅದು ಹೇಗಪ್ಪಾ ಕೇಳೋದು… ಅಂತ ನನ್ನ ಹಿಂಜರಿಕೆ ಹೇಳಿದೆ. ಒಂದು ವಿಷಯ ಮತ್ತೆ ಟ್ರ್ಯಾಕ್‌ನಿಂದಾ ಆಚೆಗೆ. ನಾನು ಫ್ಯಾಕ್ಟರಿ ಕೆಲಸದೋನು ಅಂತ ಹೇಳಿದ್ದೆ ತಾನೇ? ಫ್ಯಾಕ್ಟರಿಗಳಲ್ಲಿ ನಾವು ಹೇಗೆ ಬೆಳೆದಿರ್ತೀವಿ ಅಂದರೆ ಲಂಚ ಕೊಡೋದು ತೆಗೆದುಕೊಳ್ಳೋದು ಇದು ನಮಗೆ ಗೊತ್ತೇ ಇರೋಲ್ಲ. ಎಲ್ಲಾ ಕೆಲಸವು ಟೈಮ್ ಟೈಮ್‌ಗೆ ಸರಿಯಾಗಿ ಗಡಿಯಾರದ ಮುಳ್ಳಿನ ಹಾಗೆ ಆಗಿಬಿಡುತ್ತೆ. ನೀವು ರಿಟೈರ್ ಆದಾಗ ನಿಮ್ಮ ಹಣಕಾಸು ಸಹ ಚುಕ್ತಾ ಆಗಿರುತ್ತೆ. ನಮ್ಮನ್ನು ಸಭ್ಯರನ್ನಾಗಿ, ಪ್ರಾಮಾಣಿಕರನ್ನಾಗಿ ಮತ್ತು ದೇಶದ ಮಾದರಿ ನಾಗರಿಕರನ್ನಾಗಿ ನಮ್ಮ ಕಾರ್ಖಾನೆಗಳು ನಮ್ಮನ್ನು ರೂಪಿಸಿವೆ. ಈ ಹಿನ್ನೆಲೆಯಲ್ಲಿ ನನ್ನಂಥ ಗುಲ್ಡುಗಳಿಗೆ ಲಂಚ ಕೊಡಬೇಕಾದರೆ ಮೈ ಉರಿಯುತ್ತೆ. ಇದು ಆಗಲೂ ಈಗಲೂ ನಮ್ಮ ಮನೋ ಭೂಮಿಕೆ.
ಜಗನ್ನಾಥ ಅದಕ್ಕೆ ಪರಿಹಾರ ಅವನೇ ಹೇಳಿದ. ನಾನು ಮಾತಾಡ್ತೀನಿ. ನೀವು ಇಲ್ಲೇ ಇರಿ ಅಂತ ಒಳಗೆ ಹೋದ. ಸಾರ್ ನಿಮ್ಮ ಮನೆವರೆಗೂ ಕೇಬಲ್ ಎಳೆಯೋಕ್ಕೆ ನಾಲ್ಕು ಕಂಬ ಬೇಕು. ಒಂದು ಕಂಬಕ್ಕೆ ಮುನ್ನೂರು ರೇಟು. ನೀವು ಗೊತ್ತಿರೋರು ಅಂತ ಇನ್ನೂರಕ್ಕೆ ಮಾಡ್ತಾರಂತೆ….
ಇನ್ನೂರು ಇಂಟು ನಾಲ್ಕು ಅಂದರೆ ಎಂಟುನೂರು! ನನ್ನ ಒಂದೂ ಮುಕ್ಕಾಲು ತಿಂಗಳ ಸಂಬಳ! ತಲೆ ಗಿರ್ ಅಂದಿತು. ಬಂಧುಗಳಿಗೆ ಈ ಸಂಗತಿ ಹೇಳೋಣ ಅಂದರೆ ಮತ್ತೆ ಅವರ ಮನೆಗೆ ಹೋಗಬೇಕು ಮೂವತ್ತು ಮೈಲಿ ದೂರ. ಹೋದರೂ ಸಹ ಕೆಲಸ ಆಗುವ ಗ್ಯಾರಂಟಿ ಇಲ್ಲ.. ನನ್ನ ಯೋಚನೆ ರೀತಿ ನೋಡಿ ಜಗನ್ನಾಥ ನಾಳೆ ದುಡ್ಡು ರೆಡಿ ಮಾಡ್ಕಂಡು ಬನ್ನಿ. ನಾನೂ ನಿಮ್ಮ ಜತೆ ಬರ್ತೀನಿ. ಕಂಬ ಹಾಕ್ಕೊಂಡು ಬರೋಣ ಅಂದ!
ಸಾವಿರದ ಇನ್ನೂರು ಹೋಗೋ ಕಡೆ ಎಂಟುನೂರು ಹೋಗಿ ನಾನೂರು ಮಿಕ್ಕರೆ ಯಾರಿಗೆ ತಾನೇ ಖುಷಿ ಆಗೋಲ್ಲ ಹೇಳಿ? ನಾನು ಪಾಸಿಟಿವ್ ಥಿಂಕರ್ ಅಂತ ನಮ್ಮ ಬಾಸು ಹೊಗಳುತ್ತಿದ್ದ, ನಾನು ಸರ್ವಿಸ್‌ನಲ್ಲಿ ಇರಬೇಕಾದರೆ, ಬಹುಶಃ ಇಂತಹ ಕಾರಣಕ್ಕೇ ಇರಬೇಕು! ತಲೆ ಆಡಿಸಿ ಮನೆಗೆ ಬಂದೆ. ಮನೆ ತಲಾಯಿಸಿ ಎಂಟುನೂರು ಸೇರಿಸಿದೆನಾ? ನೂರು ನೂರು ಕೊಡೋದರ ಬದಲಿಗೆ ಐವತ್ತರ ನೋಟು ಕವರಲ್ಲಿ ಕೊಟ್ಟರೆ ಆಯ್ತಲ್ಲವಾ ಅನಿಸಿತಾ. ಐವತ್ತರ ಹನ್ನೆರೆಡು ನೋಟು ಎಣಿಸಿ ಒಂದು ಕವರ್‌ಗೆ ಹಾಕಿದೆ. ಮಿಕ್ಕ ನಾಲ್ಕು ನೋಟು ಬೇರೆ ಇರಿಸಿದೆ.
ಮಾರನೇ ದಿವಸ ಭರಮಪ್ಪನ ಭೇಟಿಗೆ.
ನೀವೇ ಕೊಟ್ಬುಡಿ ಅಂದ ಜಗನ್ನಾಥ.
ಭರಮಪ್ಪ ಕವರ್ ತೆಗೆದುಕೊಂಡ ಬಾಯಿಂದ ಬಾಯಿಗೆ ಕಿಸಿದ. ಇವರಿಗೆ ಕಂಬ ಲೋಡ್ ಮಾಡೋ ಅಂತ ಯಾರೋ ಲೈನ್ ಮ್ಯಾನ್‌ಗೆ ಹೇಳಿದ. ಇವನ ಆಪಿಸಿಂದ ಅದು ಆರೂವರೆ ಕಿಮೀ ದೂರ.
ಸಾರ್ ಅಲ್ಲಿಗೆ ಬಂದುಬಿಡಿ.. ಅಂತ ಜಗನ್ನಾಥ ಲಾರಿಗೆ ಕಾಯ್ದು ಕೂತ. ಸೈಕಲ್ ಏರಿ ಸಿಮೆಂಟ್ ಕಂಬ ಕೊಡುವ ಆಫೀಸಿಗೆ ನಾನು ಬಂದೆ!
ಮದ್ಯಾಹ್ನ ನಾಲ್ಕರ ಸುಮಾರಿಗೆ ಲಾರಿ ಬಂತು. ಲಾರಿಗೆ ಕಂಬ ಹಾಕಿದರು. ನೋಡಿದರೆ ನಾಲ್ಕಕ್ಕೆ ಬದಲು ಮೂರೇ ಇದೆ!
ಇದೇನು ಮೂರೇ ಇದೆ…. ಅಂದೆ.
ಅಷ್ಟೇ ಅಂತೆ ಇರೋದು. ನಾಲ್ಕು ಬೇಕು ಅಂದರೆ ಇನ್ನೂ ಮೂರುವಾರ ಆಗತ್ತೆ ಅಂದ ಅಂತ ಜಗನ್ನಾಥ ವಿವರಿಸಿದ. ಬನ್ನಿ ಇದರಲ್ಲೇ ಮ್ಯಾನೇಜ್ ಮಾಡಬೋದು…. ಅಂದ.
ಸೈಕಲ್ ಲಾರಿಗೆ ಹಾಕಿ ಕಂಬದ ಪಕ್ಕ ನಾನೂ ಕುಕ್ಕರ ಗಾಲಿನಲ್ಲಿ ಕೂತೆ. ಡ್ರೈವರ್ ಪಕ್ಕ ಅವನ ದೋಸ್ತಿಗಳು ಬೀಡಿ ಸೇದುತ್ತಾ ಯಾವುದೋ ಗಹನವಾದ ವಿಷಯ ಮಾತಾಡುತ್ತಾ ಕೂತಿದ್ದರು. ಲಾರಿ ಹೊರಟಿತಾ?
ಸಾರ್ ಡೀಸೆಲ್ ಹಾಕಿಸಿ ಅಂದ ಲಾರಿ ಡ್ರೈವರ್.
ಜಗನ್ನಾಥ ಮುಖ ನೋಡಿದೆ. ಹೌದು ಹಾಕಿಸಬೇಕು, ಹಂಗೇನರಾ ರೂಲ್ಸ್.. ಅಂದ…!
ಲಾರಿಗೆ ಡೀಸೆಲ್ ಹಾಕಿಸಿದ್ದು ಆಯ್ತಾ. ಲಾರಿ ಮನೆ ಹತ್ತಿರ ಬಂತು. ಕಂಬ ಇಳಿಸಿದರು. ಒಂದು ಕಂಬ ಸೊಟ್ಟಗೆ ಕ್ವೆಶ್ಚನ್ ಮಾರ್ಕ್ ಇದ್ದ ಹಾಗಿದೆ!
ಏನಪ್ಪಾ ನೋಡಿ ಅಲ್ವೇ ತರೋದು..? ಅಂದೆ.
ಸಾರ್ ಇದ್ದದ್ದು ಮೂರೇ ಅಲ್ಲಿ. ಅದನ್ನು ತಂದು ಬಿಟ್ಟೀವಿ. ನಾಳೆ ಅಂದರೆ ಅದುನೂ ಸಿಕ್ತಾ ಇರ್ಲಿಲ್ಲ.
ಪರಿಸ್ಥಿತಿ ಅನ್ನುವ ಶನಿದೇವರ ಕೈಲಿ ಸಿಕ್ಕಿ ಹಾಕಿಕೊಂಡಿದ್ದೆ. ಶನಿ ದೇವರು ಸಖತ್ ಆಟ ಆಡಿಸುತ್ತಾ ಇತ್ತು.
ನಾಳೆ ಬಂದು ಕಂಬ ಹುಂತೀವಿ ಅಂತಾರೆ. ನಾಳೆ ಅಂದರೆ ಮತ್ತೆ ಒಂದು ವಾರ ಎಳೀತಾರೆ… ಅಂದ ಜಗನ್ನಾಥ.
ಈಗಲೇ ಮಾಡೋದಕ್ಕೆ ಒಪ್ಪಿಸಿ ಬಿಡು. ಎಲ್ಲಾರೂ ನಿನ್ನ ಮಚ್ಚಾಗಳು ತಾನೇ ಅಂದೆ. ತಲೆ ಆಡಿಸಿ ಹೋದ. ನಾಲ್ಕು ಕಂಬದ ಬದಲಿಗೆ ಮೂರು ಬಂತು. ಅದರಲ್ಲಿ ಒಂದು ಸೊಟ್ಟ ಪಟ್ಟ. ಎರಡೇ ಕಂಬ ಅಡ್ಜೆಸ್ಟ್ ಮಾಡಿ ನಿಲ್ಲಿಸಿದರು.
ಪಾಪ ಲೈನ್ ಮ್ಯಾನ್ ಕಷ್ಟಪಟ್ಟು ಗುಂಡಿ ತೋಡಿದಾರೆ ಸಾರ್….. ಅಂತ ಜಗನ್ನಾಥ ಅವರಿಗೆ ನೂರು ಕೊಡಿಸಿದ….!
ಅದೇ ಕಂಬ ಈಗ ನಲವತ್ತು ಪ್ಲಸ್ ವರ್ಷಗಳಿಂದ ನನ್ನ ಮನೆ ಮುಂದಿದೆ ಮತ್ತು ಹಲವು ಮನೆಗಳಿಗೆ ಇಲ್ಲಿನಿಂದ ವಿದ್ಯುತ್ ಸಂಪರ್ಕ ಕೊಟ್ಟಿದೆ. ಅಂದ ಹಾಗೆ ಕೊಸ್ಚನ್ ಮಾರ್ಕ್ ಆಕಾರದ ಸಿಮೆಂಟ್ ಲೈಟ್ ಕಂಬ ಸುಮಾರು ವರ್ಷ ರಸ್ತೆಯ ಒಂದು ಮೂಲೆಯಲ್ಲಿ ಬಿದ್ದಿತ್ತು. ಪುರಾಣದ ಶಾಪಗ್ರಸ್ತ ಅಹಲ್ಯೆಯ ಕಾರ್ಯ ನಿರ್ವಹಿಸುತ್ತಿತ್ತು. ಅಹಲ್ಯೆ ಯಾಕೆ ಬಂದಳು ಇಲ್ಲಿ ಅಂತ ನಿಮ್ಮ ಯೋಚನೆ ತಾನೇ? ಬರ್ತೀನಿ ಅದಕ್ಕೇ ಬಂದೆ ಮುಂದೆ…
ಕೆಇಬಿ ಕತೆ ಬಂದಾಗ ಇದನ್ನು ಸೇರಿಸಿಬಿಟ್ಟೆ ಮಧ್ಯೆ. ಆಕ್ಟುಯಲ್ಲಾಗಿ ಈ ಪ್ರಸಂಗ ನನ್ನ ಮನೆ ಗೃಹ ಪ್ರವೇಶದ ನಂತರ ಬರಬೇಕಿತ್ತು…! ಅದು ಇನ್ನೂ ಒಂದು ಸಾಹಸ ಪುರಾಣ, ಸಾಹಸ ಭೀಮ ವಿಜಯ ಇದ್ದ ಹಾಗೆ! ಅದನ್ನು ಮುಂದೆ ವಿವರಿಸುತ್ತೇನೆ. ಸರಿ ತಾನೇ ಮೇಡಂ, ಸರ?
ಮುಂದಕ್ಕೆ…

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.