ಮತ್ತೆ ದೃಷ್ಟಿ ಜನರಿಂದ ದೂರ ಹೋಯಿತು. ಇಬ್ಬನಿಯ ಅವಕುಂಠನವನ್ನು ಕಳೆದುಕೊಂಡು ಹೂಗಳು ಮುಗ್ಧತೆಯನ್ನು ಕಳೆದುಕೊಂಡು ಕಠಿಣರಾದ ನಿರಸನಿಗಳಂತೆ ರಾವು ಬಡಿಯುವ ಬಣ್ಣಗಳನ್ನು ತೋರುತ್ತಿದ್ದವು. ಬಾವುಟ ಬಿಸಿಲಿನ ತೀಕ್ಷ್ಣತೆಗೆ ಸೋತು ಮಲಗಿತ್ತು. ಆಕಾಶದ ಒಂದು ಭಾಗದಲ್ಲಿ ಬೂದು ಬಣ್ಣದ ಮೋಡಗಳು ಇಕ್ಕಟ್ಟಾಗಿ ಮಲಗಿದ್ದವು. ಸ್ಲಮ್ ಪ್ರದೇಶ, ಇಂದೊಂದೇ ದಿನ ಆಕಾಶದಲ್ಲಿ ಈ ಮೋಡಗಳಿಗೆ ಜಾಗ, ಮತ್ತೆ ನಾಳಿನಿಂದ ಆಕಾಶದ ತುಂಬ ಕಾರ್ಖಾನೆ ಹೊಗೆಯ ಮೋಡಗಳು, ನಾಳಿನಿಂದ ಆಕಾಶ ತಿಪ್ಪೆ…
ಹಿರಿಯ ಕತೆಗಾರ್ತಿ ರಾಜಲಕ್ಷ್ಮಿ ಎನ್. ರಾವ್ ಬರೆದ ಸಮಗ್ರ ಕತೆಗಳನ್ನು ಚಂದನ್ ಗೌಡ “ಸಂಗಮ” ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿದ್ದು, ಈ ಸಂಕಲನದ “ಸ್ವಾತಂತ್ರ್ಯ ದಿನ” ಕತೆ ನಿಮ್ಮ ಓದಿಗೆ
‘ಜನ ಗಣ ಮನ ಅಧಿನಾಯಕ ಜಯಹೇ
ಭಾರತ ಭಾಗ್ಯವಿಧಾತ’
ಎಲ್ಲರ ಜೊತೆಗೆ ಅವನೂ ಹಾಡಿದ.
‘ಬೋಲೋ ಭಾರತ್ ಮಾತಾಕಿ ಜೈ!’
ಎಲ್ಲರೊಡನೆ ಅವನೂ ಕೂಗಿದ.
ಕಚೇರಿಯ ಕೆಲಸಗಾರರ ಪರವಾಗಿ ಮುಖ್ಯಾಧಿಕಾರಿಯನ್ನು ಧ್ವಜಾರೋಹಣ ಮಾಡಬೇಕೆಂದು ಬಿನ್ನವಿಸಿಕೊಳ್ಳಲಾಯಿತು. ಪ್ರಾರ್ಥಿಸಿದವನು ಅವನ ತಂದೆ; ಮುಖ್ಯ ಗುಮಾಸ್ತ. ಒಗೆದು, ಅವಸರದಲ್ಲಿ ಇಸ್ತ್ರೀ ಮಾಡಿದ ಪಂಚೆ, ಕಾಲರಿನ ಹತ್ತಿರ ಜೀರ್ಣವಾಗಿದ್ದ ಬೂದು ಬಣ್ಣದ ಹತ್ತಿಯ ಕೋಟು, ಒಂದೂವರೆ ವರ್ಷದ ಹಿಂದೆ ಕೊಂಡಿದ್ದ ಕಂದು ಬಣ್ಣದ ದಪ್ಪ ಚಪ್ಪಲಿ; ತಡವರಿಸುತ್ತ ಮಾತನ್ನಾಡಿದ. ಮುಖದಲ್ಲಿನ ದೈನ್ಯಭಾವ, ನರೆತ ಮೀಸೆಯ ಬೆನ್ನೆಲುಬನ್ನು ಕರಗಿಸಿ ನೆಲದತ್ತ ಬಾಗಿಸಿತ್ತು. ಸವೆದ ಬೆಳ್ಳಿಯ ಕಟ್ಟಿನ ದಪ್ಪ ಗಾಜಿನ ವರ್ತುಲಗಳ ಹಿಂದೆ ಹೊಳಪಿಲ್ಲದ ಕಣ್ಣುಗಳು ಮೂಕವಾಗಿದ್ದವು. ಪದಗಳನ್ನು ಪ್ರಯಾಸದಿಂದ ಹೊರದೂಡುತ್ತಿದ್ದ ನಾಲಿಗೆಗೂ, ತಮಗೂ ಸಂಬಂಧವೇ ಇಲ್ಲ ಎಂದುಕೊಂಡು ಮೌನದಿಂದಿದ್ದವು.
ಬಿನ್ನಹ ಕೊನೆಗೊಂಡಿತು. ಕಿರಿ ಗುಮಾಸ್ತರುಗಳು ಕೆಲವರು ವಿನಯದಿಂದ ಚಪ್ಪಾಳೆ ತಟ್ಟಿದರು.
ಅಧಿಕಾರಿ ಕುರ್ಚಿಯಿಂದೆದ್ದು ಧ್ವಜಸ್ತಂಭದ ಬಳಿ ಬಂದ. ಅವನ ಜೊತೆಗೇ ಅವನ ಹೆಂಡತಿಯೂ ನಡೆದಳು. ಕಡ್ಡಿ ಕೊರೆದು ಸೊಡರುಗಳಿಗೆ ಬೆಂಕಿ ಸೋಕಿಸಿದಳು, ಊದುಬತ್ತಿಗಳನ್ನು ದೀಪದ ಮುಖಕ್ಕೆ ಹಿಡಿದಳು. ಗಂಧದಪುಡಿ ಹೊಗೆಯ ರೂಪ ತಾಳಿ ಆಕಾಶದೆಡೆಗೆ ಹರಿಯಿತು. ಧ್ವಜಸ್ತಂಭಕ್ಕೆ ಅರಿಸಿನ, ಕುಂಕುಮ, ಹೂ ಮಾಲೆಗಳ ನಿವೇದನೆಯಾಯಿತು. ತೆಂಗಿನಕಾಯಿ ನೀರು ಅದರ ಪಾದವನ್ನು ತೊಳೆಯಿತು. ತನ್ನ ಬೆಲೆ ಬಾಳುವ ಜಲಾಪತ್ತಿನ ಸೀರೆಯ ಮೇಲೆ ಹಾರಿದ ಎಳೆನೀರಿನ ಹನಿಗಳನ್ನು ಕರವಸ್ತ್ರದಿಂದ ಒರೆಸಿಕೊಳ್ಳುತ್ತ, ಅಧಿಕಾರಿಯ ಹೆಂಡತಿ ತನ್ನ ಜಾಗಕ್ಕೆ ಹಿಂತಿರುಗಿದಳು.
ಅಧಿಕಾರಿಯ ಕೈ ನೂಲು ಹಗ್ಗವನ್ನು ಹಿಡಿಯಿತು. ಮುದುರಿ ಕುಳಿತಿದ್ದ ಬಾವುಟದ ಸುರುಳಿಗೆ ಜೀವ ಬಂದು ಮೇಲೇರಿತು. ಕೇಸರಿ, ಬಿಳಿ, ಹಸಿರು ಬಣ್ಣದ ಹೂವು ಅರಳಿ ದಳಗಳನ್ನು ಹೊರಚಾಚಿತು. ನೆರೆದಿದ್ದವರ ಕರತಾಡನದ ತಾಳಕ್ಕೆ ಸರಿಯಾಗಿ ಕುಣಿಯಿತು.
ಚಪ್ಪಾಳೆಯ ಸದ್ದು ಕರಗುತ್ತಲೂ ಅಧಿಕಾರಿ ಮಾತನಾಡತೊಡಗಿದ. ಹೆಜ್ಜೆ ಹೆಜ್ಜೆಗೂ ಅಧಿಕಾರ ವರ್ಗದವರು ಚಪ್ಪಾಳೆಯ ಮೆಚ್ಚುಗೆಯನ್ನು ಸಲ್ಲಿಸುತ್ತ ಬಂದರು.
ಮುಖ್ಯ ಗುಮಾಸ್ತ ಇದ್ದಕ್ಕಿದ್ದಂತೆ ಮಗನ ಕಡೆಗೆ ನೋಡಿದ. ಅವನ ಕಣ್ಣುಗಳು ಅಧಿಕಾರಿಯ ಮುಖದಲ್ಲಿ ಲೀನವಾಗಿದ್ದವು. ಮನಸ್ಸು ಮಾತಿನ ಹರಿವಿನಲ್ಲಿ ಮುಳುಗಿತ್ತು. ‘ಸ್ವಾತಂತ್ರ್ಯ-ಇದಕ್ಕಾಗಿ ದೇಶನಾಯಕರ, ಪ್ರಜೆಗಳ ಹೋರಾಟ-ಕಡೆಗೆ ಗೆಲವು-ದೇಸ ನಂದನ-’ ಧಾರೆಯ ಪ್ರತಿಯೊಂದು ಸುಳಿಗೆ ಸಿಕ್ಕಾಗಲೂ ಅವನ ಹೃದಯ ಮತ್ತಷ್ಟು ಅರಳುತ್ತಿತ್ತು. ಸ್ವಾತಂತ್ರ್ಯ-ದೇಶ-ಗೆಲವು-ನಂದನ-ಒಗ್ಗಟ್ಟು! ಹೌದು. ಒಗ್ಗಟ್ಟಿಲ್ಲದೆ ಮತ್ತೇನು? 1500 ರೂಪಾಯಿ ಸಂಬಳದ ಮುಖ್ಯಾಧಿಕಾರಿಯಿಂದ ಮೊದಲುಗೊಂಡು 15 ರೂಪಾಯಿನ ಹಂಗಾಮಿ ಕೆಲಸದ ಹುಡುಗನವರೆಗೂ ಎಲ್ಲರೂ ಒಟ್ಟಿಗೆ ಸೇರಿ ಧ್ವಜಾರಾಧನೆ ಮಾಡುವುದೆಂದರೆ! ಅವರ ಮನೆಯವರೆಲ್ಲರೂ ಒಟ್ಟಿಗೆ ಕಲೆತು ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸುವುದೆಂದರೆ! ಇದೇ ಒಗ್ಗಟ್ಟು, ಸಮತೆ, ಗೆಲುವು!
ಪೂರ್ವದಿಂದ ಚಳಿಗಾಳಿ ಬೀಸಿತು. ಹರಿತವಾದ, ನೀಲಿಬಣ್ಣದ ಚಳಿಗಾಳಿ. ಕಡುನೀಲಿ ಬಣ್ಣದ ಜಿಲೆಟ್ ಬ್ಲೇಡಿನ ಸ್ಪರ್ಶ. ಅವನ ಮೈ ಸಂಕುಚಿತವಾಯಿತು. ಮೈಕಿಗೆ ಮುಖವಿಟ್ಟು ನಿಂತಿದ್ದ ಅಧಿಕಾರಿಯ ದೇಹವನ್ನು ಸೋಕಲು ಗಾಳಿಗೆ ಅವಕಾಶವಿರಲಿಲ್ಲ. ಬೆಲೆ ಬಾಳುವ ಉಣ್ಣಿಯ ಬಟ್ಟೆ ದೇಹಕ್ಕೆ ಕೋಟೆ ಕಟ್ಟಿತ್ತು. ನಿರಾಶೆಗೊಂಡು ಹಿಂತಿರುಗಿದ ಗಾಳಿ ಬಿಳಿ ಹತ್ತಿ ಬಟ್ಟೆಯನ್ನು ಧರಿಸಿದವರ ದೇಹಗಳೊಡನೆಯೇ ಸರಸವಾಡತೊಡಗಿತು.
ಅಧಿಕಾರಿ ಮನೆಯಲ್ಲಿ ಬಾಯಿಪಾಠ ಮಾಡಿಕೊಂಡು ಬಂದಿದ್ದ ಭಾಷಣವನ್ನು ಒಪ್ಪಿಸುತ್ತಿದ್ದ.
ಅವನ ಮನಸ್ಸು ಮೈದಾನದ ಸುತ್ತ ಸಂಚರಿಸತೊಡಗಿತು. ದೃಷ್ಟಿ ಧ್ವಜಸ್ತಂಭವನ್ನುಬಳಸಿತು. ತಾನವನ್ನು ಹಾಡುವುದರಲ್ಲಿ ಮೈ ಮರೆತಿದ್ದ ಬಾವುಟದ ಚೆಲುವನ್ನು ಕಂಡಿತು. ಧ್ವಜಸ್ತಂಭವನ್ನೇ ಕೇಂದ್ರವಾಗಿಟ್ಟುಕೊಂಡು ದೃಷ್ಟಿ ಒಂದು ದೊಡ್ಡ ವೃತ್ತವನ್ನು ರಚಿಸಿತು. ವೃತ್ತದ ಪವಿತ್ರ ಪ್ರದೇಶದಲ್ಲಿ ಭಕ್ತಿಯಿಂದ, ಆನಂದದಿಂದ, ಅಭಿಮಾನದಿಂದ ಓಡಾಡತೊಡಗಿತು. ಧ್ವಜಸ್ತಂಭ, ಸುತ್ತಲೂ ಎಳೆಹುಲ್ಲಿನ ಜಮಖಾನೆ, ಸಣ್ಣ ಹೂ ಗಿಡಗಳು, ಚಿಟ್ಟೆಗಳು, ಯಂತ್ರದಿಂದ ಕತ್ತರಿಸಿ ಸಮನಾದ ಹುಲ್ಲಿನ ಹರವು. ಸಮತೆ, ಅದಕ್ಕೆ ಯಂತ್ರದ-ಯಂತ್ರದ ಅಲುಗಿನ-ಸಹಾಯ ಅವಶ್ಯಕ. ಅವಶ್ಯಕವೆ? ಅಲ್ಲವೆ? ಕರ್ಣಕುಂಡಲದ ಗಿಡಗಳ ಪಾತಿಗಳು, ಗಿಡದ ತುಂಬ ಹೂಗಳು, ಮೈ ತುಂಬ ಒಡವೆ ಹಾಕಿಕೊಂಡ ಮೊಗಲ್ ರಾಜಕುವರಿಯರು, ನಸುಕೆಂಪು ದೇಟಿಗೆ ಕಟ್ಟಿದ ಬಣ್ಣ ಬಣ್ಣದ ರೇಶಿಮೆ ಗೆಜ್ಜೆಗಳು, ನಾಲಿಗೆಯಿಲ್ಲದ ಗೆಜ್ಜೆಗಳು, ಲಚ್ಚಾಯುಕ್ತ ಗೆಜ್ಜೆಗಳು, ಹುಲ್ಲಿನ ನಡುವೆ ಅಲ್ಲಲ್ಲಿ ಸಣ್ಣ ಬಿಳಿ ಹೂ ಬಿಟ್ಟ ಗಿಡಗಳು, ಯಂತ್ರದ ನಾಲಿಗೆಯನ್ನು ತಪ್ಪಿಸಿಕೊಂಡ ಅನಾಮಧೇಯ ಸಾತ್ವಿಕವು, ಗದ್ದೆಗೆ ಅಂಚುಕಟ್ಟಿದ ಕೊಕ್ಕರೆಗಳು, ಸ್ವಲ್ಪ ದೂರದಲ್ಲಿ ಎತ್ತರದ ಗಿಡಗಳು, ತಿಳಿನೇರಳೆ ಬಣ್ಣದ, ಗಂಟೆಯ ಆಕಾರದ, ಸೂಕ್ಷ್ಮ ಪುಷ್ಪಗಳು; ಗಲ್ಲದ ಮೇಲೆ ಪಾಟಲ ವರ್ಣ ದೃಷ್ಟಿ ಬಟ್ಟು, ಕಚೇರಿಯ ಮುಂದಿನ ಕಮಾನಿಗೆ ಹಬ್ಬಿಸಿದ ಪರದೇಶದ ಬಳ್ಳಿ, ಅದರಲ್ಲೂ ಹೂವು, ಹಳದಿ ಕಿತ್ತಲೆ, ಕೆಂಪು, ತೆಳುವಾದ, ವಕ್ರ ಅಂಚಿನ ದಳಗಳು, ಮಾಯಾಂಗನೆಯ ಬೆರಳು, ವಿಜಯಿಯ ಬಾಗುತತ್ತಿ, ವ್ಯಾಗ್ರನಖ, ಹೂವಿನಿಂದ ಹೂವಿಗೆ ಶುಭಾಶಯಗಳನ್ನು ಕೋರುತ್ತ ನಡೆದಿದ್ದ ಚಿಟ್ಟೆ, ದುಂಬಿಗಳ ತಂಡ. ಹಳದಿ ಚಿಟ್ಟೆ, ಮಿರುಗು ಕಪ್ಪಿನ ದುಂಬಿ, ಸುಂದರವಾದ ಜೀವಿಗಳು, ಸುಂದರವಾದ ಸಂಕೇತಗಳು, ಪತಂಗ ರೆಕ್ಕೆಯ ಮೇಲೆ ಬಾವುಟದಲ್ಲಿರುವಂತೆ ಬಣ್ಣದ ಪಟ್ಟಿಗಳು; ಮೇಲೆ, ಕೆಳಗೆ ಕಪ್ಪು, ಮಧ್ಯೆ ಹಳದಿ! ಯಾವ ದೇಶದ, ಅಥವಾ ಯಾವ ಪಂಗಡದ ನಿಶಾನೆ ಇದು?
ಅಧಿಕಾರಿ ಇನ್ನೂ ಮಾತಾಡುತ್ತಲೇ ಇದ್ದ. ಸ್ತ್ರೀಯರು ಕೆಲವರು ಆಕಳಿಸಿದರು. ಹಿಗ್ಗಿಯ ಬಾಯನ್ನು ಮರೆಮಾಡಲು ಎದ್ದ ಕೈಯಿನ ಬಳೆಗಳು ಜಣಜಣಿಸಿದವು.
ದೃಷ್ಟಿ ವೃತ್ತದ ಅಂಚಿಗೆ ಬಂತು. ಮೈದಾನ, ಸುತ್ತಲೂ ಬೆಟ್ಟ, ಮೋಡ, ಬೆಟ್ಟ ಎಲ್ಲಿ ಕೊನೆಗೊಳ್ಳುತ್ತದೆ, ಮೋಡ ಎಲ್ಲಿ ಮೊದಲಾಗುತ್ತದೆ ಎಂದು ನಿರ್ಣಯಿಸಲಾಗದಂತೆ ಹಬ್ಬಿದ ಬಿಳಿ, ಕರಿ ಮೋಡಗಳು, ಧ್ವಜಾರೋಹಣ ಮಾಡಿದ ಗಳಿಗೆಯಲ್ಲಿ ಮೋಡಗಳು ಇಬ್ಭಾಗವಾಗಿ ಬೆಳಗಿನಿಂದಲೂ ಸೆರೆಯಲ್ಲಿದ್ದ ಸೂರ್ಯನನ್ನು ವಿಮುಕ್ತಗೊಳಿಸಿದ್ದವು. ಈಗ ಸೂರ್ಯ ಹೊಸದಾಗಿ ದೊರಕಿದ ಸ್ವಾತಂತ್ರ್ಯದ ಅಮೃತವನ್ನುಂಡು ತೇಜಸ್ವಿಯಾಗಿದ್ದ.
ಸ್ವಾತಂತ್ರ್ಯ! ಅಮೃತ! ತೇಜಸ್ಸು! ನೆನೆದ ಮನ ಉಬ್ಬಿತು, ಅರಳಿತು, ದೃಷ್ಟಿ ಆಕಾಶವನ್ನು ಬಿಟ್ಟು ನೆಲದೆಡೆಗೆ ಬಂತು, ಜನದೆಡೆಗೆ ಬಂತು. ಅಧಿಕಾರಿ ಭಾಷಣದ ಕೊನೆಯ ಪುಟದಲ್ಲಿದ್ದ; ಸುದೀರ್ಘ ಭಾಷಣದಿಂದಾದ ಬೇಸರ ಎಲ್ಲರ ಮುಖಕ್ಕೂ ಮುಸುಕಿಟ್ಟಿತ್ತು. ಅವನ ತಂದೆಯ ಕಡೆ ನೋಡಿದ. ಕೋಟಿನ ಬಣ್ಣಕ್ಕೇ ಇದ್ದ ಮುಖ ಕೊಡೆಯ ಕಡ್ಡಿಗಳ ತುರಾಯಂತೆ ಗೀರುಕಟ್ಟಿತ್ತು. ದೃಷ್ಟಿ ದಿಗಂತಕ್ಕೆ ಶರಣಾಗತವಾಗಿತ್ತು, ಅವರಿಗೆ ಭಾಷಣ ಕೇಳಿಸುತ್ತಿತ್ತೊ ಇಲ್ಲವೊ! ಕೇಳಿಸುತ್ತಿದ್ದುದಾದರೂ ಏನು? ‘ಅಪ್ಪ, ನಾಳೇನಾದ್ರೂ ಫೀಸ್ ಕೊಡಲೇಬೇಕಪ್ಪ, ಇಲ್ಲದೇ ಇದ್ರೆ ಫಸ್ಟ್ ಟರ್ಮ್ ಪರೀಕ್ಷೆಗೆ ಕೂರಿಸೋದಿಲ್ಲವಂತೆ,’ ‘ಅಯ್ಯೋ, ನೋಡಪ್ಪ, ಇವನು ನನ್ನ ಹೊಸ ನೋಟ್‌ಬುಕ್ಕನ್ನು ಕದ್ದು ಉಪಯೋಗಿಸಿಬಿಟ್ಟಿದ್ದಾನೆ, ಹೋದ ವಾರ ತಾನೆ ತನ್ನ ಪೆನ್ಸಿಲ್ ಕಳೆದುಕೊಂಡ್ಬಿಟ್ಟು ನಿನ್ನದನ್ನ ಹೇಳದೆ ಕೇಳದೆ ತೊಗೊಂಡ್ಬಿಟ್ಟಿದ್ದ. ನನಗೆ ಹೊಸ ಪುಸ್ತಕ, ಪೆನ್ಸಿಲ್ ಕೊಡಿಸಪ್ಪ,’ ‘ಥೂ, ಈ ಸೀರೇನೇ ಎಷ್ಟು ದಿನಾಂತ ಉಡೋದೋ? ಗೌರಿ ಹಬ್ಬಕ್ಕೆ ಒಂದು ಜಾರ್ಜಿಟ್ ಸೀರೆ ತೆಗೆಸಿಕೊಡಮ್ಮ,’ ‘ಈ ತಿಂಗಳು ಹಬ್ಬಗಳು ಹೆಚ್ಚೂಂದ್ರೆ, ಸಾಮಾನು ಸ್ವಲ್ಪ ಜಾಸ್ತಿ ತೊಗೊಂಡ್ಬನ್ನಿ,’ ‘ಏನ್ರೀ ಇದು ಎಸ್ಟಿಮೇಟ್‌ನಲ್ಲಿ ಹೀಗೆ ತಪ್ಪು ಮಾಡಿದೀರಲ್ಲ, ಏನು ನಿದ್ರೆಗಿದ್ರೆ ಮಾಡ್ತಿದ್ರೋ? ನಾನು ಈಗ ನೋಡದೇ ಇದ್ದಿದ್ರೆ ಎಂಥಾ ಪ್ರಮಾದ ಆಗ್ಹೋಗ್ತಿತ್ತು!’ ‘ಹತ್ತು ರೂಪಾಯಿ ಸಾಲ? ಅಯ್ಯೋ, ಎಲ್ಲಿ ಬಂತು, ನರಸಿಂಗರಾಯರೆ? ನನಗೂ ತಾಪತ್ರಯ, ಮಗಳು ಹೆರಿಗೆಗೋಸ್ಕರ ಮನೆಗೆ ಬಂದಿದಾಳೆ, ನಾನೇ ಯಾರ್ನಾದ್ರೂ ಕೇಳೋ ಸ್ಥಿತೀಲಿದೀನಿ!…’
ತಂದೆಯ ಬಳಿಯಲ್ಲಿ ನಿಂತವರಿಗೆಲ್ಲ ಹೆಚ್ಚು ಕಡಿಮೆ ಅವರಂತಹದೇ ಮುಖಭಾವ. ಅಲ್ಲಿಂದ ಮುಂದೆ ಅಧಿಕಾರಿಗಳು, ವಿದೇಶಿಯ ಉಡುಪು, ವಿದೇಶಿಯ ಮಾತು, ವಿದೇಶಿಯ ನಡವಳಿಕೆ, ಮಧ್ಯದಲ್ಲಿ ಮುಖ್ಯಾಧಿಕಾರಿ, ಆ ಕಡೆಗೆ ಹೆಂಗಸರು, ರೇಶಿಮೆ, ಜರತಾರಿ, ಬಂಗಾರ, ವಜ್ರ ಅಧಿಕಾರಿಗಳ ಮನೆಯವರು, ಅವರಿಗೆ ಅನತಿ ದೂರದಲ್ಲಿ ಸಣ್ಣ ಕೆಲಸದವರ ಮನೆಯವರು ಕೃತಕ ರೇಶಿಮೆ, ನೂಲು, ಹಿತ್ತಾಳೆ, ರೋಲ್ಡ್‌ಗೋಲ್ಡ್, ಗಾಜು; ಅಲ್ಲಿ ನಿಂತಿದ್ದರು ಅವನ ಮನೆಯವರು, ತಾಯಿ, ಅಕ್ಕ, ತಮ್ಮಂದಿರು, ತಂಗಿ, ಹೊಳಪನ್ನು ಮರೆತ ತಾಯ ಕಣ್ಣು ಬಂಗಾರ, ವಜ್ರಗಳನ್ನು ತೀಕ್ಷ್ಣವಾಗಿ ಪ್ರತಿಬಿಂಬಿಸಿತ್ತು. ಅಕ್ಕ-ಅಸಮಾಧಾನದಿಂದಲೇ ಹಳೆಯ ಹಸಿರು ಬಣ್ಣದ ಕೃತಕ ರೇಶಿಮೆಯ ಸೀರೆಯನ್ನು ಉಟ್ಟುಕೊಂಡು ಬಂದಿದ್ದ ಅಕ್ಕ-ಮುಖ್ಯಾಧಿಕಾರಿಯ ಮಗ್ಗುಲಿಗೇ ನಿಂತಿದ್ದ ಅವನ ಮಗನನ್ನು ಸಂಕೋಚ-ಮರೆತು ನೋಡುತ್ತಿದ್ದಳು. ಕಡ್ಡಿ ಮೀಸೆಯ ಕೆಳಗಿನ ಅವನ ಕೆಂಪು-ಕಪ್ಪು ತುಟಿ ತಾಯಿಯ ಗೆಳತಿಯೊಬ್ಬರ ಮಗಳತ್ತ ನಸುನಗೆಯನ್ನು ತೇಲಿಬಿಡುತ್ತಿತ್ತು. ಕಣ್ಣೋಟ ಯುವತಿಯ ಎದೆ-ರೇಶಿಮೆಯನ್ನು ಹೊದೆದ ಅಲೆಯ ಸುತ್ತಮುತ್ತ ಓಡಾಡುತ್ತಿತ್ತು.
ಸಿಡಿಲಿನ ಮಾಲೆಯಂತೆ ಚಪ್ಪಾಳೆಯ ಸದ್ದು ಮೊಳಗಿತು. ಅವನೂ ಕೈಗೆ ಕೈ ಸೋಕಿಸಿದ. ಹೊರಬಂದ ಶಬ್ದ ಕ್ಷೀಣವಾಗಿತ್ತು.
ಮುಖ್ಯಾಧಿಕಾರಿಯನ್ನು ಗೆಳೆಯರು ಅಭಿನಂದಿಸಿದರು. ಕಚೇರಿಯ ಪರವಾಗಿ ಅಧಿಕಾರಿಯೊಬ್ಬ ವಂದನೆಗಳನ್ನು ಅರ್ಪಿಸಿದ. ಹತ್ತಿರದ ಮೇಜಿನ ಮೇಲಿಟ್ಟಿದ್ದ ಸಿಹಿ ತಿಂಡಿಯ ತಟ್ಟೆಗಳ ಕಡೆಗೆ ನಾಲ್ಕೈದು ಕೈಗಳು ಸರಿದವು. ಮಕ್ಕಳ ಕಣ್ಣಿಗೆ ಹೊಳಪು ಬಂತು. ಒಂದೊಂದು ಗುಂಪಿಗೆ ಒಂದೊಂದು ಕೈ, ಒಂದೊಂದು ತಟ್ಟೆ, ಗುಂಪು, ಗುಂಪಿನಲ್ಲಿದ್ದ ವ್ಯತ್ಯಾಸದ ಪ್ರತೀಕವಾಗಿ ಕೈಗಳಲ್ಲಿನ ವ್ಯತ್ಯಾಸ, ಕಪ್ಪು ಕೈ, ಬಿಳುಪು ಕೈ, ಒರಟು ಕೈ, ಮೃದು ಕೈ, ಸವೆದು ಕಪ್ಪಾದ ಉಗುರಿನ ಕೈ, ಉದ್ದದ, ಕೆಂಪು ಬಳೆದ ಉಗುರಿನ ಕೈ, ಬಂಗಾರವನ್ನು ತೊಟ್ಟ ಕೈ, ಹಿತ್ತಾಳೆ, ಗಾಜುಗಳಲ್ಲೇ ತೃಪ್ತಿಯನ್ನು ಕಂಡ ಕೈ, ಅವನ ಬಳಿಗೂ ಒಂದು ಕೈ ಬಂತು. ತಟ್ಟೆಯಲ್ಲಿದ್ದ ಸಿಹಿತಿಂಡಿಯ ಚೂರು ಅವನ ಕೈ ಸೇರಿತು. ಕೈ, ಬಾಯ ಬಳಿ ಬರಲಿಲ್ಲ. ಜನರ ಸುತ್ತ ಸುತ್ತುತ್ತಿದ್ದ ದೃಷ್ಟಿ ಎಡವಿಬಿದ್ದು ಕಾಲು ಮುರಿದುಕೊಂಡು ತೆವಳತೊಡಗಿತು.
ತಮ್ಮಂದಿರು, ತಂಗಿ, ಅವರ ಜೊತೆಗಾರರು ಎಲ್ಲರೂ ಅತ್ಯುತ್ಸಾಹದಿಂದ ತಿಂಡಿ ತಿನ್ನುತ್ತಿದ್ದರು. ತಾಯಿಯ ಮುಷ್ಟಿ ಬಿಗಿದಿತ್ತು, ಮನೆಯಲ್ಲಿ ಜ್ವರದಿಂದ ಮಲಗಿದ್ದ ಚಿಕ್ಕ ಮಗಳಿಗೆಂದು ತಮ್ಮ ಪಾಲಿನ ತಿಂಡಿಯನ್ನು ಅವರು ಕಾದಿರಿಸಿದ್ದಾರೆಂದು ಅವನಿಗೆ ಗೊತ್ತಿತ್ತು. ಅಕ್ಕ ಬಹಿರಂಗವಾಗಿ ತಿನ್ನುವುದು ಗಾಂಭೀರ್ಯಕ್ಕೆ ಹೊರತೆಂದು ಬಗೆದು ಸುಮ್ಮನಿದ್ದಳು. ಸಿರಿವಂತ ಸ್ತ್ರೀಯರ ಏರುಧ್ವನಿಯ ಮಾತುಕತೆ ಅವನ ಕಿವಿಯನ್ನು ಕೊರೆಯಿತು. ನೆನ್ನೆ ಡಿ.ಸಿ. ಮನೇಲಿ ಪಾರ್ಟಿ ಇತ್ತು, ಹೋಗಿದ್ದು… ‘ನಾವೂ ಹೋಗಿದ್ದು, ಅವರ ಹೆಂಡತಿ ಒಂದು ಹೊಸ ನೆಕ್‌ಲೇಸ್ ಮಾಡಿಸಿಕೊಂಡಿದ್ದಾರೆ, ಎಷ್ಟು ಚೆನ್ನಾಗಿದೆ ಅಂತೀರಾ?…’
ರೇಶಿಮೆ, ಉಲ್ಲನ್ ಥಾನುಗಳ ಹಿಂದೆ ಬೆರಗು ಬಡೆದ ಚಿಂದಿಗಳ ಗಂಟು, ಮೃದುವಾದ ಕೆಂಪು ನಗುವಿನ ಹಿಂದೆ-ನಗು; ಸುರುಳಿ ಬಿಚ್ಚಿದ ಕೆಂಪು ರೇಶಿಮೆ ದಾರದ ಉಂಡೆ-ಹರಿತವಾದ, ಕಠೋರವಾದ, ಹಳದಿ ಮುತ್ಸರ, ಧ್ವನಿವರ್ಧಕ ಯಂತ್ರದಿಂದ ಬಿತ್ತರಿಸಲ್ಪಟ್ಟ ವೈಭವಗಳ ಹಿಂದೆ ಗಿಡಗದ ಕಣ್ಣಿನ ಸ್ವಾರ್ಥಪರತೆ.
ಹೆಳವಾದ ದೃಷ್ಟಿ ಮುಸಕಾಯಿತು, ನಿರಾಸೆ ಕುದಿದು ಕ್ರೋಧವಾಗಿ, ಕಲ್ಲಾಗಿ ಹತಾಶೆಯಾಗಿ, ಕಲ್ಲು ಧೂಳಾಗಿ, ದುಃಖವಾಗಿ ಹಾರಿಹೋಯಿತು. ಹಾರಿಹೋಗದೆ ಹಾರಿ ಹೋಗಲಾರದೆ ಉಳಿದ ಮರಳು ಗರಗಸವಾಗಿ ಕರುಳನ್ನು ಕೊಯ್ಯತೊಡಗಿತು.
ಸ್ವಾತಂತ್ರ್ಯ! ಅಮೃತ! ತೇಜಸ್ಸು! ಸುಪರಿಚಿತಳಲ್ಲದ ತರುಣಿಯ ಮೈಯನ್ನು ದಿಟ್ಟಿಸುವ ಸ್ವಾತಂತ್ರ್ಯ! ದಪ್ಪ ಅಕ್ಕಿಯನ್ನೇ ಚಪ್ಪರಿಸಿ ರೂಢಿಯಾದ ನಾಲಿಗೆಗೆ ಅಪರೂಪದ ಸಿಹಿ ತಿಂಡಿಯ ಅಮೃತ! ರತ್ನಖಚಿತವಾದ ಬಂಗಾರದ ಸಂಕೋಲೆಗಳ, ಕೋಟೆಗಳ ತೇಜಸ್ಸು! ಇದು ಸ್ವಾತಂತ್ರ್ಯ! ಇದು ಅಮೃತ! ಇದು ತೇಜಸ್ಸು!
ಮತ್ತೆ ದೃಷ್ಟಿ ಜನರಿಂದ ದೂರ ಹೋಯಿತು. ಇಬ್ಬನಿಯ ಅವಕುಂಠನವನ್ನು ಕಳೆದುಕೊಂಡು ಹೂಗಳು ಮುಗ್ಧತೆಯನ್ನು ಕಳೆದುಕೊಂಡು ಕಠಿಣರಾದ ನಿರಸನಿಗಳಂತೆ ರಾವು ಬಡಿಯುವ ಬಣ್ಣಗಳನ್ನು ತೋರುತ್ತಿದ್ದವು. ಬಾವುಟ ಬಿಸಿಲಿನ ತೀಕ್ಷ್ಣತೆಗೆ ಸೋತು ಮಲಗಿತ್ತು. ಆಕಾಶದ ಒಂದು ಭಾಗದಲ್ಲಿ ಬೂದು ಬಣ್ಣದ ಮೋಡಗಳು ಇಕ್ಕಟ್ಟಾಗಿ ಮಲಗಿದ್ದವು. ಸ್ಲಮ್ ಪ್ರದೇಶ, ಇಂದೊಂದೇ ದಿನ ಆಕಾಶದಲ್ಲಿ ಈ ಮೋಡಗಳಿಗೆ ಜಾಗ, ಮತ್ತೆ ನಾಳಿನಿಂದ ಆಕಾಶದ ತುಂಬ ಕಾರ್ಖಾನೆ ಹೊಗೆಯ ಮೋಡಗಳು, ನಾಳಿನಿಂದ ಆಕಾಶ ತಿಪ್ಪೆ; ಕಾರ್ಖಾನೆಯ ಕೊಳವೆ, ಗಣಿಯ ಕೊಳವೆ ಎಲ್ಲ ಕೆಲಸವಿಲ್ಲದೆ ನಿಂತಿವೆ, ನೇಣುಗಂಬಗಳಂತೆ, ನಾಳಿನಿಂದ ಕೆಲಸ ಮತ್ತೆ ಪ್ರಾರಂಭ, ವಧೆ ಮತ್ತು ಪ್ರಾರಂಭ, ಗಣಿ ಧಣಿ; ಧಣಿ, ಮಣಿ; ಧಣಿ, ಫಣಿ…
ತಂದೆಯ ಧ್ವನಿ ಅವನನ್ನೆಚ್ಚರಿಸಿತು. ಅವರ ಕೈಯ ಸಂಜ್ಞೆಯನ್ನನುಸರಿಸಿ ಅವರ ಬಳಿಗೆ ಹೋದ ತಂದೆ ಅವನನ್ನು, ತಮ್ಮ ಮೇಲಧಿಕಾರಿಗೆ ಪರಿಚಯ ಮಾಡಿಕೊಟ್ಟರು. ಯಾಂತ್ರಿಕವಾಗಿ ಕೈ ಮುಗಿದ. ಆತ ಗಾಂಭೀರ್ಯದಿಂದ, ದರ್ಪದಿಂದ ತಲೆ ಆಡಿಸಿದರು, ತಂದೆ ಬಿನ್ನವಿಸಿದ: ‘ಈ ಸರ್ತಿ ಪರೀಕ್ಷೇಲಿ ಇವನೇ, ಸಾರ್, ಐದನೇ ರ‍್ಯಾಂಕು!’ ಧ್ವನಿಯಲ್ಲಿ ಅಭಿಮಾನ, ನಮ್ರತೆಗಳೆರಡೂ ಬೆರೆತಿದ್ದವು. ‘ಹಾಗೇನು? ಸಂತೋಷ ಕಾಲೇಜು ಓದ್ತಿದ್ದೀಯೇನು?… ಅಂದಹಾಗೆ, ನಿನ್ನ ಮಾತೃಭಾಷೆ ಯಾವುದು?’ ಇಂಗ್ಲಿಷನ್ನು ಬಿಟ್ಟು ಬೇರೆ ಭಾಷೆಯಲ್ಲಿ ಮಾತನಾಡುವುದು ಗೌರವಕ್ಕೆ ಕುಂದು ಎಂದು ಭಾವಿಸಿದ್ದ ಅಧಿಕಾರಿ ಕೇಳಿದ.
ಮಾತೃಭಾಷೆ, ತಾಯ್ನುಡಿ, ತಾಯಿಯ ನುಡಿ. ‘ಏಳೋ, ಎಷ್ಟ್ಹೊತ್ತು ಮಲಗಿರೋದು? ಸ್ಕೂಲಿಗೆ ಹೊತ್ತಾಯ್ತು, ಏಳು. ರಾತ್ರಿ ಬೇಗ ಮಲಕ್ಕೊಂಡು ಬೆಳಿಗ್ಗೆ ಬೇಗ ಏಳು ಅಂದರೆ ಕೇಳಲ್ಲ, ಅದೂ, ಇದೂ, ಹಾಳು, ಮೂಳು ಓದ್ತಾ ಕೂತಿರೋದು… ಸ್ಕೂಲಿಗೆ ಹೋಗೋರು ಹೀಗಾದ್ರೆ ವಿದ್ಯೆ ಹತ್ತಿದ್ಹಾಗೇ ಸರಿ…’ ‘ಅನ್ನ ಸಾಕೋ, ಇನ್ನು ಸ್ವಲ್ಪ ಹಾಕಲೋ?… ಕೇಳಿಸ್ಲಿಲ್ಲವೇನೋ? ನಿಂಗೇ ಹೇಳ್ತಿರೋದು. ಅದೇನು ಕನಸು ಕಾಣ್ತಾ ಕೂತಿರ್ತಿಯೋ ದೇವರಿಗೇ ಗೊತ್ತು…’ ‘ಅಯ್ಯೋ, ಆಗಲೇ ಹೊಸ ಶರ್ಟ್ ಹರಕೊಂಡ್ಬಿಟ್ಯೇನೋ? ಇನ್ನೂ ಎರಡು ತಿಂಗಳಾಗಿಲ್ಲವಲ್ಲೋ ಹೊಲಿಸಿ! ಹೀಗಾದ್ರಾಯ್ತು, ಪೂರೈಸಿದ ಹಾಗೇ ಸರಿ!…’ ತಾಯಿಯ ನುಡಿ. ತಾಯ್ನುಡಿ. ಮಾತೃಭಾಷೆ.
‘ಯಾಕೋ? ಕೇಳಿಸ್ಲಿಲ್ವೆ ಅವರು ಹೇಳಿದ್ದು? ನಿನ್ನ ಮಾತೃಭಾಷೆ ಏನೂಂತ ಕೇಳಿದ್ರು’ ತಂದೆ ಗದರಿದರು.
ಉತ್ತರ ಕೊಡುವಷ್ಟರಲ್ಲಿ ಯಾರೋ ಬಂದು ಆತನನ್ನು ಕರೆದರು. ಆತನ ಮುಖ ಅತ್ತ ಹೊರಳಿತು. ಮತ್ತೆ ಈ ಕಡೆ ತಿರುಗಲಿಲ್ಲ. ತಂದೆ, ಮಗ ತಮ್ಮ ಜಾಗಕ್ಕೆ ತಿರುಗಿ ಹೋದರು.
ಗೇಟು ಕರ‍್ರೆಂದಿತು. ಅಧಿಕಾರಿಯ ಕಾರು ಒಳಗೆ ಬರುತ್ತಿತ್ತು. ವ್ಯವಸ್ಥಾಪಕರ ಪ್ರಾರ್ಥನೆಯ ಮೇರೆಗೆ ಎಲ್ಲರೂ ಸಾಲಾಗಿ ನಿಂತರು. ಕಾರಿನಿಂದಿಳಿದ ಡ್ರೈವರು ಮೈದಾನವನ್ನು ಬಳಸಿ ನಿಂತ ಮುಳ್ಳುಬೇಲಿಯ ಆಚೆಗೆ ಬೀಡಿಯ ತುಂಡನ್ನು ಬಿಸಾಡಿದ.
ಮುಳ್ಳುಬೇಲಿ. ಹುಲ್ಲು ಮೈದಾನಕ್ಕೆ ಮುಳ್ಳು-ಬೇಲಿ. ಮನೆ, ಮನೆಯ ನಡುವೆ ಮುಳ್ಳುಬೇಲಿ. ಗುಂಪು, ಗುಂಪಿನ ನಡುವೆ, ವರ್ಗ, ವರ್ಗದ ನಡುವೆ, ವ್ಯಕ್ತಿ, ವ್ಯಕ್ತಿಯ ನಡುವೆ ಮುಳ್ಳು ಬೇಲಿ. ಬಲವಾದ ಕಂಬಗಳಿಗೆ ಬಿಗಿದ ಮುಳ್ಳು ತಂತಿ. ಯಾವುದಾದರೂ ಒಂದು ಹಸು ಹಾರಿಬರಬಾರದೆ?
ಹಾರಿಬಂದು, ಮುಳ್ಳನ್ನು ನೇವರಿಸಿ, ವೀಣೆ ತಂತಿಯನ್ನಾಗಿ ಮಾಡಿ ಅದರಿಂದ ಗಾನವನ್ನು ಹೊರಹೊಮ್ಮಿಸಬಾರದೆ?
ಜನರೆಲ್ಲ ಹಾಡುತ್ತಿದ್ದರು; ‘ವಂದೇ ಮಾತರಂ.’
ಮತ್ತಾರಿಗೂ ಸೋಕದ ಮುಳ್ಳು ನನ್ನ ಕಣ್ಣನ್ನೇ ಚುಚ್ಚಬೇಕೆ? ಆತ್ಮತೃಪ್ತ ಇಬ್ಬನಿ ನನ್ನನ್ನು ಬಿಟ್ಟು ಕರಗಿಹೋಗಬೇಕೆ? ಗೋಡೆಯನ್ನು ಉರುಳಿಸಲಾಗದ ಕೈಯ ಉಗುರು, ಕೈಯನ್ನೇ ಪರಚಬೇಕೆ?
ನನಗೇಕೆ ವಸಂತ ಎಂದು ಹೆಸರಿಟ್ಟರು? ನನ್ನ ಎದೆಯಲ್ಲಿರುವವನು ಹೇಮಂತ.
ಜನರೆಲ್ಲ ಹಾಡಿದರು: ‘ವಂದೇ ಮಾತರಂ.’ ಅವನು ಹಾಡಲಿಲ್ಲ.
(1955 ರಲ್ಲಿ ಬರೆದ ಕತೆ)
(ಕೃತಿ: ಸಂಗಮ-Pastorale (ರಾಜಲಕ್ಷ್ಮೀ ಎನ್ ರಾವ್ ಸಮಗ್ರ ಕತೆಗಳು-ದ್ವೈಭಾಷಿಕ ಸಂಪುಟ), ಸಂಪಾದಕರು: ಚಂದನ್ ಗೌಡ, ಪ್ರಕಾಶಕರು: ಸಂಕಥನ, ಬೆಲೆ: 320/-)

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ