ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ಬಲವಾದ ಅಸ್ಮಿತೆ ಇಲ್ಲದಿರುವುದು, ಎಲ್ಲಾ ವಿಷಯಗಳಲ್ಲೂ ದೂರದ ಬ್ರಿಟನ್, ಅಮೆರಿಕಾ, ಯುರೋಪ್ ರಾಷ್ಟ್ರಗಳ ನಡೆ-ನುಡಿಗಳನ್ನು ಚಾಚೂತಪ್ಪದೆ ಪಾಲಿಸುತ್ತಾ, ಅವರ ನಿಲುವುಗಳನ್ನೆ ತನ್ನದಾಗಿಸಿಕೊಂಡು ಗುಲಾಮಗಿರಿ ತೋರುವುದು, ತಾವಿರುವ ಏಷ್ಯಾ-ಪೆಸಿಫಿಕ್ ವಲಯದಲ್ಲಿ ತಮ್ಮನ್ನು ಗುರುತಿಸಿಕೊಳ್ಳದೆ ಹೇಡಿತನ ತೋರುವುದು ಕೂಡ ಸಮಸ್ಯೆಯೆ. ಆಸ್ಟ್ರೇಲಿಯಾ ಅಧಿಕೃತವಾಗಿ ಬ್ರಿಟನ್ನಿನ ಅಧಿಪತ್ಯವನ್ನು ಒಪ್ಪಿಕೊಂಡು ಅದರ ಒಂದು ತುಣುಕಾಗಿದ್ದು, ವಸಾಹತುಶಾಹಿ ಬಿಳಿಯರ ದೇಶವಾಗಿದ್ದುಕೊಂಡೆ ಬಾಳುತ್ತಿದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಪ್ರಿಯ ಓದುಗರೆ,
ಒಂದು ಸಮಸ್ಯೆಯ ನಿವಾರಣೆಗೆ ಒಂದೇ ಒಂದು ಪರಿಹಾರ ಸಾಕೆ? ಅಥವಾ ನಾವೆಲ್ಲಾ ಬೇರೆಬೇರೆ ಬಗೆಗಳಲ್ಲಿ ಹಲವಾರು ಪರಿಹಾರಗಳನ್ನು ರೂಢಿ ಮಾಡಿಕೊಂಡರೆ ಮಾತ್ರ ಆ ಸಮಸ್ಯೆಯ ನಿವಾರಣೆ ಸಾಧ್ಯವಾಗುತ್ತದೆಯೆ? ಅಂದರೆ ಒಂದು ಮಟ್ಟದಲ್ಲಿ ಒಬ್ಬ ವ್ಯಕ್ತಿ ಪರಿಹಾರವನ್ನು ರೂಢಿಗೆ ತರಬೇಕು. ಅಂತಹ ಹಲವಾರು ಪರಿಹಾರಗಳನ್ನು ಜನರು ಅನುಷ್ಠಾನಕ್ಕೆ ತಂದರೆ ಸಮಸ್ಯೆಯ ಪರಿಣಾಮದ ತೀವ್ರತೆ ಕಡಿಮೆಯಾಗಬಹುದು.
ಇದೇನಿದು, ಈ ಮಾತು ಸ್ವಲ್ಪ ಫಿಲಾಸಫಿಕಲ್ ಆಯ್ತಲ್ಲಾ ಅನಿಸಬಹುದು. ಆದರೆ ಇದು ಕೆಲದಿನಗಳ ಹಿಂದೆ ನಿಜವಾಗಿ ನಡೆದ ಮಾತುಕತೆ. ಯೂನಿವರ್ಸಿಟಿಯಲ್ಲಿ ಮಧ್ಯಾಹ್ನ ಊಟದ ವೇಳೆಯಲ್ಲಿ ನಮ್ಮನಮ್ಮಲ್ಲಿ ನಡೆದಿದ್ದು ಇದು. ನಾನು ಕೇಳಿದ್ದು ಒಂದೇಒಂದು ಪ್ರಶ್ನೆ -ಈಗಿನ ದಿನಗಳಲ್ಲಿ ಯಾವೊಂದು ಸಮಸ್ಯೆಯ ನಿವಾರಣೆಯಿಂದ ಆಸ್ಟ್ರೇಲಿಯಾದ ಸಮಾಜಕ್ಕೆ ಒಳಿತಾಗುತ್ತದೆ? ಸಹೋದ್ಯೋಗಿಗಳು ಹೇಳಿದ ಕೆಲ ವಿಷಯಗಳು, ಅಭಿಪ್ರಾಯಗಳು ಆಸಕ್ತಿ ಹುಟ್ಟಿಸಿತು.
ಒಬ್ಬರು ಹೇಳಿದ್ದು ನಮ್ಮ ಸಮಾಜದಲ್ಲಿ ಪ್ರತಿದಿನವೂ ಬಹಿರಂಗವಾಗಿ ಮತ್ತು ಪರೋಕ್ಷವಾಗಿ ನಡೆಯುವ ರೇಸಿಸಮ್ ಕಡಿಮೆಯಾಗಬೇಕು. ಇದರ ನಿವಾರಣೆ ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ. ಸರ್ಕಾರದಿಂದ ಹಿಡಿದು ಸಾರ್ವಜನಿಕರ ತನಕ ಎಲ್ಲರೂ ರೇಸಿಸಮ್ ನಿವಾರಣೆಗೆ ಕೈಜೋಡಿಸಬೇಕು. ಎಷ್ಟೋ ಮಂದಿ ಅದರ ಬಗ್ಗೆ ಮಾತನಾಡಲೂ ಕೂಡ ಹಿಂದೇಟು ಹೊಡೆಯುತ್ತಾರೆ. ಈ ಸಂವಾದವನ್ನು ಶುರುಮಾಡಿದ್ದು ಕಾನೂನು ವಿಷಯಗಳ ಲೆಕ್ಚರರ್. ಅರರೇ, ಇವರು ರೇಸಿಸಮ್ ವಿಷಯದ ಬಗ್ಗೆ ಇಷ್ಟೊಂದು ಆಲೋಚಿಸುತ್ತಿದ್ದಾರೆ ಎಂದು ನನಗೆ ಗೊತ್ತೇ ಇರಲಿಲ್ಲ ಎಂದೆನಿಸಿತು. ಅಥವಾ, ನನ್ನ ಮುಖ ನೋಡುತ್ತಾ ನಾನು ಕೇಳಿದ ಪ್ರಶ್ನೆಗೆ ಹೀಗೆ ಉತ್ತರ ಕೊಟ್ಟರೇ ಅನ್ನೋ ಸಂಶಯ ಕೂಡ ಬಂತು. ಇರಲಿ, ಸಂಶಯದ ಸಂಶೋಧನೆ ಬೇಡ. ಸ್ಟಾಫ್ ಕಿಚನ್-ಲಂಚ್ ಟೈಮಿನಲ್ಲಿ ರೇಸಿಸಮ್ ವಿಷಯವನ್ನು ಎತ್ತಿದರಲ್ಲಾ, ಅದೇ ನನಗೆ ಸಾಕಾಗಿತ್ತು, ಖುಷಿಯಾಯ್ತು.
ಅವರನ್ನೇ ಮತ್ತೆ ಕೇಳಿದೆ, ಯಾಕೆ ಈ ವಿಷಯದ ಬಗ್ಗೆ ನಿಮಗೆ ಆಸಕ್ತಿಯಿದೆ, ಅಂತ. ನೇರವಾಗಿ ಅವರ ಮಾತು ಹೊರಳಿದ್ದು ಆಸ್ಟ್ರೇಲಿಯಾ ಎಂಬ ದೇಶ ಹುಟ್ಟಿದ್ದು ವಸಾಹತುಶಾಹಿಗಳಿಂದ ಅಲ್ಲವೇ, ಹತ್ತೊಂಬತ್ತನೆ ಶತಮಾನದಿಂದ ಇಲ್ಲಿಯವರೆಗೆ ನಮ್ಮ ಸಮಾಜವು ಬಿಳಿಯರು-ಮೂಲನಿವಾಸಿಗಳು (First Nations ಜನರು) ಅನ್ನೊ ವಿಭಜನೆಯಿಂದಲೆ ನಡೆಯುತ್ತಿದೆ. ರೇಸಿಸಮ್ ನಮ್ಮ ಸಮಾಜದ ಕರಾಳ ನಿತ್ಯಸತ್ಯ. ನಾನಾ ಕಾರಣಗಳಿಂದ ವಲಸೆ ಬಂದಿರುವ ಬಿಳಿಯರಲ್ಲದ ಜನರಿಗೂ ಇದರ ಬಿಸಿ ತಾಕುತ್ತದೆ, ಇದೆಲ್ಲಾ ಪ್ರತಿದಿನದ ಚರ್ಚೆಗೆ ಬರುವುದಿಲ್ಲ, ಅಂದರು. ಅಯ್ಯಯ್ಯೋ, ಬಿಳಿಯ ಬಣ್ಣದ ಚರ್ಮ ಇರುವ ಈ ನನ್ನ ಸಹೋದ್ಯೋಗಿ ರೇಸಿಸಮ್ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಿದ್ದಾರಲ್ಲ ಎಂದು ಸಖೇದಾಶ್ಚರ್ಯವಾಯ್ತು. ಏನು ನಿಮ್ಮ ಕತೆ ಅಂತ ಕೇಳಿಯೇಬಿಟ್ಟೆ. ನಸುನಗುತ್ತಾ ಅವರು ಹೇಳಿದ್ದು ಅವರ ಮೂಲಜರು ಮೂರು ತಲೆಮಾರುಗಳ ಹಿಂದೆ ಏಷ್ಯಾ ಖಂಡದಿಂದ ಆಸ್ಟ್ರೇಲಿಯಾಕ್ಕೆ ವಲಸೆ ಬಂದವರು. ಅವರ ಮುತ್ತಜ್ಜಿ-ಮುತ್ತಾತ ಯುದ್ಧದ ಘೋರಗಳಿಂದ ತಪ್ಪಿಸಿಕೊಂಡು ಬಂದು ಹೊಸ ಜೀವನ ಕಟ್ಟಿಕೊಂಡವರು. ತವರು ಬಿಟ್ಟುಬಂದ ನೋವು ಸ್ಥಿರವಾಗಿತ್ತು. ಬಡತನದ ಜೊತೆಗೆ ರೇಸಿಸಮ್ ಬರೆ ಹಾಕುತ್ತಿತ್ತು.
ಆ ಹಿನ್ನೆಲೆಯಲ್ಲಿ ಸಾವಿರಾರು ಕಥೆಗಳು ಹುಟ್ಟಿ, ಅವರ ಜನರಲ್ಲಿ ಸಮುದಾಯಪ್ರಜ್ಞೆ ಬಲವಾಗಿ, ರೇಸಿಸಮ್ ತಡೆಗಟ್ಟಲು ತಾವು ಸಮಾಜದ ಮುಂಚೂಣಿಯಲ್ಲಿರಬೇಕು ಎನ್ನುವ ನಿರ್ಧಾರ ತಳೆದು ಅದು ಬಲವಾಯ್ತಂತೆ. ಶತಾಯಗತಾಯ ಪ್ರಯತ್ನಗಳಿಂದ ಕಷ್ಟಪಟ್ಟು ದುಡಿದು ಮುಂದಿನ ತಲೆಮಾರುಗಳು ಆರ್ಥಿಕವಾಗಿ ಸುಧಾರಿಸುತ್ತಾ, ಕಿರಿಯರಿಗೆ ಅತ್ಯುತ್ತಮ ಶಿಕ್ಷಣ ಸಿಗುವಂತೆ ಶ್ರಮಿಸಿದ ಫಲವಾಗಿ ಈಗ ಅನೇಕರು ಉತ್ತಮ ಉದ್ಯೋಗಗಳಲ್ಲಿದ್ದಾರಂತೆ. ಅವರ ಸಮುದಾಯವು ಬಲಿಷ್ಠವಾಗಿದೆ. ಅವರ ಕುಟುಂಬಗಳಲ್ಲಿ ತಮ್ಮ ಹಿರೀಕರ ತ್ಯಾಗ, ನೋವು, ಧೈರ್ಯಗಳ ಕತೆಗಳು ಇಂದಿಗೂ ದಾರಿದೀಪವಾಗಿವೆ. ತಾವೆಲ್ಲಾ ಸಮಾನತೆ, ವ್ಯಕ್ತಿಗತ ಗೌರವಗಳ ಪರವಾಗಿ ಧೈರ್ಯದಿಂದ ಮಾತನಾಡಲು ಹಿಂಜರಿಯುವುದಿಲ್ಲ, ಅಂದರು. ಬಿಳಿಚರ್ಮ ಬಂದದ್ದು ಅಂತರ-ಜನಾಂಗೀಯ ಮದುವೆಗಳಿಂದ, ಎನ್ನುತ್ತಾ ನಕ್ಕರು. ಈ ಬಗೆಯ ಅಂತರ-ಸಂಸ್ಕೃತಿಗಳ ಮಿಲನ ಮತ್ತು ಬಹು-ಸಂಸ್ಕೃತಿಗಳ ಬೆಳವಣಿಗೆಯಿಂದ ಆಸ್ಟ್ರೇಲಿಯಾದ ರೇಸಿಸಂ ಸಮಸ್ಯೆಗೆ ಉತ್ತರ ಸಿಗಬಹುದು.
ಅಲ್ಲಿಂದ ಮಾತು ಹಾರಿದ್ದು ಆಸ್ಟ್ರೇಲಿಯನ್ ಅಥ್ಲೀಟ್‌ಗಳ ಆರೋಗ್ಯದ ಬಗ್ಗೆ. ಸಮಸ್ಯೆ ಏನಪ್ಪಾ ಅಂದರೆ ಆಸ್ಟ್ರೇಲಿಯಾದಲ್ಲಿ ಫಿಸಿಕಲ್ ಆಕ್ಟಿವಿಟಿ ಮತ್ತು ವ್ಯಾಯಾಮದ ಬಗ್ಗೆ ವಿಪರೀತ ವ್ಯಾಮೋಹವಿದೆ. ಆಸ್ಟ್ರೇಲಿಯನ್ ಅಥ್ಲೀಟ್‌ಗಳು ಈಜು, ರೋಯಿಂಗ್, ರನ್ನಿಂಗ್, ಮುಂತಾದ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ವಿಶ್ವಪ್ರಸಿದ್ಧರು. ಶಾಲಾ ಕಲಿಕೆಯಲ್ಲಿ ಫಿಸಿಕಲ್ ಎಜುಕೇಶನ್, ಸ್ಪೋರ್ಟ್ಸ್ ವಿಷಯಗಳು ಕಡ್ಡಾಯ. ಶಾಲಾ ವರ್ಷದ ಮೊದಲನೇ ಮತ್ತು ನಾಲ್ಕನೇ ಟರ್ಮ್‌ಗಳಲ್ಲಿ ಈಜುಕಲಿಕೆ ಇರುತ್ತದೆ. ಸ್ಪರ್ಧಾತ್ಮಕ ಕ್ರೀಡೆಗಳಲ್ಲಿ ತರಬೇತಿ ಪಡೆಯುವ ಸಾವಿರಾರು ಶಾಲಾ ಮಕ್ಕಳು ಮುಂದೆ ತಮ್ಮ ಫಿಸಿಕಲ್ ಫಿಟ್ನೆಸ್ ಕಡೆ ಗಮನ ಕೊಡುವುದು ಸ್ವಾಭಾವಿಕ. ಅದರಲ್ಲೂ ಕ್ರೀಡೆಗಳಲ್ಲಿ ಮುಂದುವರೆದರೆ ಇಂತಹ ಫಿಟ್ನೆಸ್ ಕಡ್ಡಾಯವಾಗುತ್ತದೆ. ಆಸ್ಟ್ರೇಲಿಯನ್ ಸರಕಾರ ಹೇಳುವಂತೆ ಪ್ರತಿಯೊಬ್ಬ ವಯಸ್ಕರೂ ದಿನಕ್ಕೆ ಕಡೇಪಕ್ಷ ಅರ್ಧಗಂಟೆಯಾದರೂ ಫಿಸಿಕಲ್ ಆಕ್ಟಿವಿಟಿ ಮಾಡಲೇಬೇಕು. ಎದೆಬಡಿತ ಜೋರಾಗಬೇಕು, ರಕ್ತಸಂಚಲನೆ ಚುರುಕಾಗಬೇಕು, ಸ್ನಾಯುಗಳು ಬಲವಾಗಬೇಕು.
ಆಸ್ಟ್ರೇಲಿಯನ್ ಕ್ರೀಡಾಪಟುಗಳು ಅತಿಯಾಗಿ ವ್ಯಾಯಾಮ ಮಾಡುತ್ತಿದ್ದಾರೆ, ಇದರಿಂದ ಹೃದಯ-ಸಂಬಂಧಿತ Atrial fibrillation ಅನ್ನೋ ಆರೋಗ್ಯ ಸಮಸ್ಯೆ ಕಾಣಿಸುತ್ತಿದೆ ಎಂದು ಇತ್ತೀಚಿನ ವರದಿಗಳು ಹೇಳಿವೆ. ಆಸ್ಟ್ರೇಲಿಯಾ ಮಟ್ಟಿಗೆ ಇದು ಗಂಭೀರವಾದ ಸಮಸ್ಯೆ. ಏಕೆಂದರೆ ಕ್ರೀಡೆಗಳಿಗೆಂದು ವಿನಿಯೋಗಿಸುವ ಹಣ ಅಪಾರವಾದದ್ದು. ಕ್ರೀಡಾಪಟುಗಳ ಮೇಲೆ ಹೂಡುವ ಬಂಡವಾಳ, ಅವರುಗಳು ತಾವೇ ಮಾಡುವ ಖಾಸಗಿ ಖರ್ಚುವೆಚ್ಚ ಇವೆಲ್ಲವೂ ಬಿಲಿಯನ್ ಡಾಲರುಗಳ ದೊಡ್ಡ ವಹಿವಾಟು. ವಿಷಯ ಹೀಗಿರುವಾಗ, ಅತಿ-ವ್ಯಾಯಾಮದಿಂದ ಅನಾರೋಗ್ಯ ಅದರಲ್ಲೂ ಹೃದಯದ ಸಮಸ್ಯೆ ಉಂಟಾಗುತ್ತಿದೆ ಎನ್ನುವುದು ಆತಂಕ ಮೂಡಿಸಿದೆ. ಕಡ್ಡಾಯ ವ್ಯಾಯಾಮ ಎನ್ನುವ ಪಾಲಿಸಿ ಬದಲಾಗಬೇಕೆ ಎನ್ನುವುದು ಚರ್ಚಿತವಾಗುತ್ತಿದೆ. ಸಮಾಧಾನದ ಸಂಗತಿಯೆಂದರೆ ಈ ಸಮಸ್ಯೆಯ ನಿವಾರಣೆ ಅಸಾಧ್ಯವೇನಲ್ಲ.
ಆಸ್ಟ್ರೇಲಿಯಾ ಸಮಾಜವನ್ನು ಕಾಡುತ್ತಿರುವ ಮತ್ತೊಂದು ಸಮಸ್ಯೆ ಸ್ವಲ್ಪ ಫಿಲಾಸಫಿಕಲ್ ಆದದ್ದು. ಅದೇನೆಂದರೆ, ಸಾರ್ವಜನಿಕರ ದನಿ (voice) ಬರೀ ರಾಜಕೀಯ ವಿಷಯಗಳಿಗೆ, ಪಕ್ಷಗಳ ಜಗಳಗಳಿಗೆ ಮೀಸಲು. ಹವಾಮಾನ ಬದಲಾವಣೆ, ಮಾನವಹಕ್ಕುಗಳ ಬಗ್ಗೆ, ಯುದ್ಧಗಳ ಬಗ್ಗೆ, ಅಮೆರಿಕೆಯ ಮಹಾಶಯರ ವಾಣಿಜ್ಯ ನೀತಿಗಳ ಬಗ್ಗೆ, ನೆರೆಹೊರೆಯಲ್ಲಿರುವ ಪುಟ್ಟಪುಟ್ಟ ದೇಶಗಳ ಸೌಖ್ಯ-ಕ್ಷೇಮದ ಬಗ್ಗೆ ಇರುವ ಅಲಕ್ಷ್ಯ, ಇವುಗಳಿಂದ ಆಸ್ಟ್ರೇಲಿಯನ್ನರ ಅಭಿಪ್ರಾಯ/ದನಿ ಎನ್ನುವುದೊಂದು ಇದೆಯೇ, ಇದ್ದರೂ ಅದು ಯಾತಕ್ಕೂ ಬೆಲೆಯಿಲ್ಲವಾದದ್ದು ಎಂತಾಗಿರುವುದು ದೊಡ್ಡ ಸಮಸ್ಯೆಯೇ ಹೌದು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ಬಲವಾದ ಅಸ್ಮಿತೆ ಇಲ್ಲದಿರುವುದು, ಎಲ್ಲಾ ವಿಷಯಗಳಲ್ಲೂ ದೂರದ ಬ್ರಿಟನ್, ಅಮೆರಿಕಾ, ಯುರೋಪ್ ರಾಷ್ಟ್ರಗಳ ನಡೆ-ನುಡಿಗಳನ್ನು ಚಾಚೂತಪ್ಪದೆ ಪಾಲಿಸುತ್ತಾ, ಅವರ ನಿಲುವುಗಳನ್ನೆ ತನ್ನದಾಗಿಸಿಕೊಂಡು ಗುಲಾಮಗಿರಿ ತೋರುವುದು, ತಾವಿರುವ ಏಷ್ಯಾ-ಪೆಸಿಫಿಕ್ ವಲಯದಲ್ಲಿ ತಮ್ಮನ್ನು ಗುರುತಿಸಿಕೊಳ್ಳದೆ ಹೇಡಿತನ ತೋರುವುದು ಕೂಡ ಸಮಸ್ಯೆಯೆ. ಈಗಿರುವ ಪ್ರಧಾನಮಂತ್ರಿ ಅಂತೋನಿ ಆಲ್ಬಾನೀಸಿ ಅಷ್ಟೊಇಷ್ಟೊ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಆಸ್ಟ್ರೇಲಿಯಾ ಅಧಿಕೃತವಾಗಿ ಬ್ರಿಟನ್ನಿನ ಅಧಿಪತ್ಯವನ್ನು ಒಪ್ಪಿಕೊಂಡು ಅದರ ಒಂದು ತುಣುಕಾಗಿದ್ದು, ವಸಾಹತುಶಾಹಿ ಬಿಳಿಯರ ದೇಶವಾಗಿದ್ದುಕೊಂಡೆ ಬಾಳುತ್ತಿದೆ. ಈ ನಿಲುವುಗಳೂ ಕೂಡ ಸಮಸ್ಯೆಯಾಗಿದ್ದು, ಅವು ಆಸ್ಟ್ರೇಲಿಯಾದ ಮೂಲಜನರ ಮೂಲಭೂತ ಹಕ್ಕುಗಳನ್ನು, ಅವರ ಅಸ್ಮಿತೆಯನ್ನು ಅಳಿಸಿಹಾಕಿದೆ. ಹಾಗಾಗಿ ಇದು ಆಸ್ಟ್ರೇಲಿಯಾದಲ್ಲಿರುವ ಸಮಸ್ತ ಜನರ ಸಮಗ್ರ ಸಮಸ್ಯೆ. ಇದರ ನಿವಾರಣೆ ಹೇಗೆಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.