೧
ಆ ಊರ ಬೀದಿಯಲ್ಲೊಂದು ಒಂಟಿ ಮನೆ ಇದೆ
ಇರುಳೆಂಬ ಹಣತೆಯಲಿ, ರಕುತದ ದೀಪ ಹಚ್ಚಿ
ಕಣ್ಣ ರೆಪ್ಪೆ ಚಿಗುರು ನಾಲಿಗೆ
ಹೊಕ್ಕುಳಾಳದ ಬಳ್ಳಿ ತೊಟ್ಟಿಲಾಗಿ ತೂಗಿ
ಕಂಕುಳ ಘಮಲು ಊರೆಲ್ಲ ಪಸರಿ
ನೆರಳ ವೀರ್ಯವನ್ನುಂಡು ಬಸುರಿಯಾಗಿ
ಬೆಳಕನ್ನು ಹೆತ್ತವಳು.
ಅವಳೊಡಲ ಕಡಲೊಳಗೆ ಬೆಂಕಿ ಉಂಡೆಯ ನಾವೆ
ಕಾದ ಬಂಡೆ, ಹಸಿವಿನ ಬುರುಡೆ
ಅವಳ ಹಿಮಪಾದದಡಿ ನಿಮಿರಿ ನಿಂತ
ಸೀಳು ಸೀಳು ಬಿದಿರಿನ ಕಂಟೆ
ಅವಳೋ.. ಬೆತ್ತಲೆ ತೊಗಲಿಗೆ
ಬೆಂಕಿಯ ಬಟ್ಟೆ ತೊಟ್ಟ ತಾಯೆ…
ಇರುಳ ಹಾಸಿಗೆಯ ಮೇಲೆ
ನೆತ್ತರ ದಿಂಬ ಕೆಳಗೆ
ಸುರುಳಿ ಸುತ್ತಿ ಕರುಳ ಬಿಟ್ಟ
ಮಗುವೊಂದು ಗೋಗರೆಯುತಿದೆ
ಅವಳ ನೆತ್ತರ ಬಿಸಿ ಮಯ್ಯ ಮೇಲೆ
ಕಂದಿಲ ಬೆಳಕ ಬಿಡುವ
ಸೂರ್ಯನಿಗೊಂದು ಶಾಪವಿದೆ.
ಅವಳ ಕಣ್ಣ ನಕ್ಷತ್ರಗಳಿಗೆ
ಬೇರಾಗಿ…
ಬೇರೊಂದು ಕಾಂಡವಾಗಿ ಹೂ ಬಿಟ್ಟು
ಆ ನೆಲವು ನಕ್ಕಿತ್ತು
ಕಡಿದಷ್ಟು ಚಿಗುರೊಡೆದು
ಸೊಂಪಾಗಿ ಬೆಳೆದ ಆ ವೃಕ್ಷದ ಬುಡ
ನೂರಾರು ಪಾಪದ ಹೂವುಗಳು
ನಿಟ್ಟುಸಿರು ಬಿಟ್ಟಿದ್ದವು.
೨. ನೀ ಬರಬೇಕಿತ್ತು
ಲಜ್ಜೆಗೆಟ್ಟ ಕತ್ತಲಿಗೆ
ಕಾವ್ಯವನ್ನೋದಿಸುವ ಸಮಯದಲ್ಲಾದರೂ
ನೀ ಬರಬೇಕಿತ್ತು
ಇನ್ನೂ ಹೇಳದೆ ಉಳಿದ ಎಷ್ಟೋ ಸಾಲುಗಳ
ಕಣ್ಣ ಗರ್ಭದಿಂದ ತೊಟ್ಟಿಕ್ಕಿದ
ಕನಸುಗಳ ಜತನಕ್ಕಾದರೂ
ನೀ ಬರಬೇಕಿತ್ತು.
ದುಂಬಿ ಕೂತ ಸಾಕ್ಷಿಗೆ
ಹೂದಳದ ಮಾತನ್ನು ಕೇಳಿಸಿಕೊಳ್ಳುವದಕ್ಕಾದರೂ
ನಿನ್ನದೊಂದು ಕಿವಿ ಇರಬೇಕಿತ್ತು
ನನ್ನ ಮುದಿ ನಾಯಿಯ ಬಾಯಿಂದ
ಸ್ಖಲಿಸಿದ ಹಸಿವಿಗಾದರೂ
ನಿನ್ನ ನೆನಪಿನ ಉರಿಗಣ್ಣ ಕೆಂಡದಲಿ
ಬೆಂದ ಈ ಎದೆ ಮೇಲೆ
ತುಂಡು ರೊಟ್ಟಿಯಾದರೂ
ಬೇಯಿಸಬೇಕಿತ್ತು.
ಸತ್ತ ಹರಪ್ಪ, ಮೆಹೆಂಜೊದಾರೊ ಕಥೆ
ಮಾಸಿದ ಬಣ್ಣದಿಂದ ಇತಿಹಾಸ ಸೇರಿರುವಾಗ
ಮುಗಿಲ ಚಿತ್ರದಲಿ
ಬಾಯಾರಿದ ಕೊಕ್ಕರೆಯಂತೆ ಮೂಡಿದ
ಮಾತುಗಳ ಜೀವಂತಿಕೆಗಾದರೂ
ನೀನಿರಬೇಕಿತ್ತು.
ಕೊನೆಯ ಘಳಿಗೆಯಲಿ
ನನ್ನ ನೆರಳಲ್ಲಿ ಅರಳಿದ ನಿನ್ನ ಕಣ್ಣ ಬಯಲ ದಾರಿಗೆ
ಬಿಸಿಲ ಸೋಕಿಸದೆ ಅಡ್ಡಗಟ್ಟಿ ನಿಂದ
ನನ್ನ ಬೆನ್ನಿನಿಂದಾದರೂ
ನೀ ನಲಿಯಬೇಕಿತ್ತು.
ವಿರೇಶ ನಾಯಕ ಗದಗ್ ಜಿಲ್ಲೆ, ಗಜೆಂದ್ರಗಡ ತಾಲೂಕು ಬೆಣಚಮಟ್ಟಿ ಗ್ರಾಮದವರು
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಜೀವರಸಾಯನ ಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ
ಇವರ ಹಲವು ಕವಿತೆಗಳು ಹಲವಾರು ಕವನ ಸಂಕಲನಗಳಲ್ಲಿ ಪ್ರಕಟವಾಗಿವೆ ಹಾಗು ಆನ್ಲೈನ್ ವೆಬ್ ಮ್ಯಾಗಜೀನ್ ಹಾಗು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಸಧ್ಯಕ್ಕೆ ಭಾರತೀಯ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ