ಪತ್ರಿಕೆಗಳಿಗೆ ಬರಹ ರವಾನೆ ಆದಾಗ ಅಸ್ವೀಕೃತ ಆದರೆ ವಾಪಸ್ ಕಳಿಸಲು ಅಂಚೆ ಚೀಟಿ ಹಚ್ಚಿದ ಕವರ ಸಂಗಡ ಹೋಗುತ್ತಿತ್ತು. ಆಗ ಅರವತ್ತು ಎಪ್ಪತ್ತರ ದಶಕದಲ್ಲಿ “ಅಸ್ವೀಕೃತ ಲೇಖನಗಳನ್ನು ವಾಪಸ್ ಪಡೆಯಲು ಅಂಚೆ ಚೀಟಿ ಹಚ್ಚಿದ ಸ್ವ ವಿಳಾಸದ ಕವರ್ ಸಂಗಡ ಇರಲಿ” ಎಂದು ಎಲ್ಲಾ ಪತ್ರಿಕೆಗಳೂ ಬರಹಗಾರ ಪ್ರಭುಗಳಿಗೆ ವಿನಂತಿ ಮಾಡುತ್ತಿದ್ದರು. ಅದರಂತೆ ನಾವು ಬರಹಗಾರ ಪ್ರಭುಗಳು ಅವರ ವಿನಂತಿಯನ್ನು ಶಿರಸಾ ವಹಿಸಿ ಪಾಲಿಸುತ್ತಿದ್ದೆವು. ಕೆಲವು ಸಲ ಅಂಚೆ ಚೀಟಿ ಹತ್ತಿಸಿದ ಕವರ್ ಇಡದೇ ಬರಹ ಕಳಿಸಿ ಅವು ಮುದ್ರಣ ಆಗುವಂತೆ ಮಾಡುವುದು ಎನ್ನುವ ಅಡ್ಡ ಯೋಚನೆ ಬರುತ್ತಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೨ನೇ ಬರಹ ನಿಮ್ಮ ಓದಿಗೆ
ಕಳೆದ ಸಂಚಿಕೆ ಅಂತ್ಯವನ್ನು ಹೀಗೆ ದಾಖಲಿಸಿದೆ ತಾನೇ.. ಅದಕ್ಕೊಂದು ಚೂರು ಈಚಿನ ಆಫ್ಟರ್ ಥಾಟ್ಸ್ ಸೇರಿಸಿ ಬಿಡುವೆ.
ಈಗ ಯೋಚಿಸಿದರೆ ಕತೆ ಪ್ರಕಟ ಆದ ನಂತರದ ನನ್ನ ಪರ್ಸನಲ್ ಗ್ರೋಥ್ ನನಗೆ ದಿಗ್ಭ್ರಮೆ ಹುಟ್ಟಿಸಿತು ಅನ್ನಬೇಕು!
ಬರೆಯೋ ಚಟ ಹತ್ತಿಬಿಟ್ಟ ಅಂದರೆ ಅದನ್ನು ಬಿಡಿಸೋದು ಬಾರೀ ಕಷ್ಟ. ಇದರ ಅನುಭವ ಮುಂದೆ ನನಗೆ ಹೇಗಾಯಿತು ಅಂದರೆ ದಿವಸಕ್ಕೆ ಕನಿಷ್ಠ ಇಷ್ಟು ಪದಗಳನ್ನು ಬರೆಯಲೇಬೇಕು ಅನಿಸುವಷ್ಟು. ವಾಕಿಂಗ್ ಪ್ಯಾಕಿಂಗ್ ಅಂತ ಹೋಗುವ ಜನ ಇರ್ತಾರೆ ನೋಡಿ. ತೋಳಿನ ಅಂಚಿಗೆ ಒಂದು ಅಗಲದ ಪಟ್ಟಿ ಇರುವ ಪೋನು ಅಥವಾ ವಾಚ್ ಕಟ್ಟಿಕೊಂಡು ಮಿಕ್ಕವರಿಗಿಂತಲೂ ತಾವು ಬಿನ್ನರು ವಿಭಿನ್ನರು ಎನ್ನುವ ಮುಖವಾಡ ಹೊತ್ತು ಗಂಟು ಮೋರ್ ಹಾಕಿಕೊಂಡು ನಡೆಯುತ್ತಾರಲ್ಲ ಅವರನ್ನು ಗಮನಿಸಿ. ಪ್ರತಿ ಆರು ನಿಮಿಷಕ್ಕೆ ಒಮ್ಮೆ ನಿಂತು ತಮ್ಮ ಮೊಬೈಲ್, ವಾಚು ಪರೀಕ್ಷಿಸುತ್ತಾರೆ. ಇದು ಯಾಕೆ ಗೊತ್ತಾ? ಎಷ್ಟು ಸ್ಟೆಪ್ಸ್ ಹಾಕಿದ್ದೀನಿ ಎಂದು ನೋಡಿಕೊಳ್ಳಲು. ದಿವಸಕ್ಕೆ ಇಷ್ಟು ಸ್ಟೆಪ್ಸ್ ಹಾಕಬೇಕು ಅಂತ ನಿರ್ಧಾರ ಮಾಡಿರುತ್ತಾರೆ. ಕೆಲವು ಸಲ ವಾಕಿಂಗ್ ಹೋಗಲು ಇಷ್ಟ ಇರುವುದಿಲ್ಲ. ಆದರೆ ಈ ಹಾಳಾದ ಸ್ಟೆಪ್ಸ್ ಅನ್ನುವ ಭೂತ ಬಿಡಬೇಕೇ? ಬೇತಾಳದ ಹಾಗೆ ಹೆಗಲ ಮೇಲೆ ಕೂತಿರುತ್ತೆ! ಅದು ತಲೆಯೊಳಗೆ ನುಗ್ಗಿ ಎಷ್ಟು ಸ್ಟೆಪ್ಸ್ ನೋಡು ನೋಡು ಅಂತ ತಿವಿಯುತ್ತೆ. ಅದರಿಂದ ಆಗಾಗ ನಿಂತು ವಾಚ್ ನೋಡುವುದು ಅವರು. ಬಲವಂತವಾಗಿ ವಾಕಿಂಗ್ ಬಂದು ಎಷ್ಟು ಸ್ಟೆಪ್ಸ್ ಆಯಿತು ಎಂದು ಆಗಾಗ್ಗೆ ನೋಡಿಕೊಂಡು ಟಾರ್ಗೆಟ್ ಮುಟ್ಟಿತು ಅಂತ ಖಾತ್ರಿಯಾದ ಕೂಡಲೇ ಇದ್ದಕ್ಕಿದ್ದ ಹಾಗೆ ಪಾರ್ಕ್‌ನಿಂದ ಮಾಯಾ ಆಗುತ್ತಾರೆ. ಇದೇ ಚಟ ಬರೆಯುವ ಹವ್ಯಾಸ ಹೊಂದಿರುವವರಿಗೆ!
ತಲೆ ಮೇಲೆ ತಲೆ ಬೀಳಲಿ, ಆಸ್ಪತ್ರೆಯಲ್ಲಿ ಮೈ-ಕೈಗಳಿಗೆ ಚುಚ್ಚಿಸಿಕೊಂಡು ಸುತ್ತಲೂ ನಲಿಕೆಗಳ ಪ್ರಪಂಚದಲ್ಲಿರಲಿ ಕೈಗೆ ಒಂದು ಪೆನ್ನು ಪೇಪರ್ ಪ್ಯಾಡ್ ಮತ್ತು ಪೇಪರು ಕೊಡಿ. ಅವರ ಪ್ರತಿಕ್ರಿಯೆ ನೋಡಿ….! ಒಬ್ಬ ಪ್ರಖ್ಯಾತ ಲೇಖಕನಿಗೆ ಅವನ ಅಂತ್ಯ ಹೇಗಿರಬೇಕು ಎಂದು ಇಷ್ಟಪಡುವಿರಿ ಎಂದು ಒಬ್ಬ ಸಂದರ್ಶಕ ಕೇಳಿದ. ದೇಹದ ಮಿಕ್ಕ ಭಾಗ ಹೇಗೇ ಇರಲಿ, ತಲೆ ಓಡುತ್ತಿರಬೇಕು ಮತ್ತು ಕೈಯಲ್ಲಿ ಪೆನ್ನು ಹಿಡಿಯುವ ಶಕ್ತಿ ಇರಬೇಕು ಎಂದು ಆತ ಉತ್ತರಿಸಿದನಂತೆ!
ಮೊದಲನೇ ಕತೆ ಹೀಗೆ ಒಂದು ಪ್ರತಿಷ್ಠಿತ ಪತ್ರಿಕೆಯಲ್ಲಿ ಪ್ರಕಟ ಆದನಂತರ ನನ್ನ ಮನಃಸ್ಥಿತಿ ಹೇಗೆ ಬದಲಾಯಿತು, ಹೇಗೆ ಮೆಟಮಾರ್ಫಸಿಸ್‌ಗೆ ಒಳಗಾಯಿತು ಅಂತ ತಮಗೆ ಖಂಡಿತ ತಿಳಿಸಲೇಬೇಕು. ನನ್ನ ಚಿಕ್ಕ ನೋಟ್ ಹಾಕಿ ಆಯಿತಾ?
ಈ ಮೆಟಮಾರ್ಫಸಿಸ್ ಕತೆಗೆ ಹೆಜ್ಜೆ ಹಾಕುತ್ತೇನೆ. ಸರಿ ತಾನೇ ಸರ ಸರಿ ತಾನೇ ಮೇಡಂ?
ಈಗ ಇನ್ನು ಮುಂದೆ ತಮ್ಮನ್ನು ಕತೆಯ ಮತ್ತೊಂದು ಪಾರ್ಶ್ವಕ್ಕೆ ಒಯ್ಯುತ್ತೇನೆ. ರೆಡಿ ತಾನೇ ಸರ, ರೆಡಿ ತಾನೇ ಮೇಡಮ್ಮೋ ರೆ…
ಕತೆ ಹುಚ್ಚು ಬರೆಯೋ ಹುಚ್ಚು ಹತ್ತಿಸಿ ಬಿಟ್ಟಿತು ಮತ್ತೂ ಮೂರೂ ಹೊತ್ತು ತಲೆಯಲ್ಲಿ ಕತೆಗಳು ಹುಟ್ಟಲು ಶುರುವಾಯಿತು. ಈ ಜೋಶ್‌ನಲ್ಲೇ ಕತೆ ಬರೆಯೋದು (ಆಗಿನ್ನೂ ಕಂಪ್ಯೂಟರು ನಮ್ಮ ತನಕ ಬಂದಿರಲಿಲ್ಲ ಮತ್ತು ನನ್ನ ಪೀಳಿಗೆಯವರೆಲ್ಲರೂ ಹಾಳೆಯಲ್ಲಿ ಬರೆದು ರವಾನಿಸುತ್ತಾ ಇದ್ದರು) ಅದನ್ನ ಪಿನ್ ಮಾಡೋದು, ಕವರ್ ಕೊಂಡುಕೊಳ್ಳೋದು, ಪೋಸ್ಟ್ ಆಫೀಸಿಗೆ ಹೋಗಿ ತೂಕ ಹಾಕಿಸಿ ಅದಕ್ಕೆ ಸರಿಯಾಗಿ ಸ್ಟ್ಯಾಂಪ್ ಅಂಟಿಸಿಸಿ ಕಳಿಸೋದು…. ಇದು ನಡೆಯುತ್ತಾ ಇತ್ತು. ಪೋಸ್ಟ್ ಆಫೀಸಿನ ಕೌಂಟರ್ ಬಳಿ ನಿಂತು ತೂಕ ಹಾಕಿಸಬೇಕಾದರೆ ಹೊಟ್ಟೆ ಉರಿದುಹೋಗೋದು, ಅಷ್ಟೊಂದು ಸ್ಟ್ಯಾಂಪ್ ಹಚ್ಚಬೇಕು ಅಂತ. ಜತೆಗೆ ಮೂರು ಹಾಳೆ ಆದರೆ ನಿಗದಿತ ದರ, ನಾಲ್ಕು ಹಾಳೆ ಆದರೆ ಮುಂದಿನ ಹತ್ತು, ಇಪ್ಪತ್ತೈದು ಗ್ರಾಂ ಗಳ ದರ! ಮೊದಮೊದಲು ಈ ದರಪಟ್ಟಿ ಬಗ್ಗೆ ತಲೆ ಕೆಡಿಸಿಕೊಳ್ಳದೆ ತೂಕ ಹಾಕಿ ಸ್ಟ್ಯಾಂಪ್ ಅಂಟಿಸುತ್ತಿದ್ದೆ. ಕೆಲವು ಸಲ ಪೋಸ್ಟ್ ಆಫೀಸ್‌ನವರು ಅಷ್ಟು ವಿಜಿಲೆಂಟ್ ಇರಲ್ಲ ಅಂತ ಅಂದುಕೊಂಡು ಡಬ್ಬಕ್ಕೇ ಹಾಕಿ ಬಿಡ್ತಾ ಇದ್ದದ್ದು ಉಂಟು. ಅದು ಹಾಗೇ ರವಾನೆ ಸಹ ಆಗಿದೆ ಅಂದುಕೊಳ್ತಾ ಇದ್ದೇ ಮತ್ತು ಮರೆತೂ ಸಹ ಹೋಗುತ್ತಿದ್ದೆ. ಕೆಲವು ಸಲ ಅಂಡರ್ ಪೋಸ್ಟ್ ಅಂತ ವಾಪಸ್ ಬಂದ ಕವರಿಗೆ ದಂಡ ತೆತ್ತು ಪಡೆಯುತ್ತಿದ್ದೆ. ಹೀಗೆ ವಾಪಸ್ ಬಂದ ಕಂತೆ ಕಂತೆ ಮೊನ್ನೆ ಮೊನ್ನೆಯವರೆಗೂ ಮನೆಯ ಅಟ್ಟದ ಮೇಲೆ ವಿಶ್ರಾಂತಿ ತಗೋತಾ ಇತ್ತು. ಮನೆಯಲ್ಲಿ ಕಸ ಜಾಸ್ತಿ ಕಸ ಜಾಸ್ತಿ ಅಂತ ಹೆಂಡತಿ ಒಂದು ಇಪ್ಪತ್ತು ಮೂವತ್ತು ವರ್ಷ ವರಾತ ಹಚ್ಚಿದ ಮೇಲೆ ಒಂದು ಕಡತ ಯಜ್ಞ ಮಾಡಿ ಅಗ್ನಿದೇವತೆಗೆ ಆಹುತಿ ಕೊಟ್ಟೆ. ಪೋಸ್ಟ್ ವಾಪಸ್ ಬರ್ತಾ ಇತ್ತು, ಅದೂ ಕಡಿಮೆ ಸ್ಟ್ಯಾಂಪ್ ಹಾಕಿದೆ ಅಂತ ಹೇಳಿದೆ ತಾನೇ?
ಇದಕ್ಕೆ ನಾನೇ ಒಂದು ನಿಯಮ ಮಾಡಿಕೊಳ್ಳಬೇಕಾದ ಸಂಭವ ಹುಟ್ಟಿತು. ಅದು ಹೇಗೆ ಅಂದರೆ ಸೆಕೆಂಡ್ ಶಿಫ್ಟ್ ಮುಗಿಸಿ ಮನೆಗೆ ಬಂದು ಹಾ ಲಕ್ಷ್ಮಣ ಅಂತ ಬಿದ್ದುಕೊಂಡೆ ತಾನೇ. ಬೆಳಿಗ್ಗೆ ಎದ್ದು ನೋಡಿದರೆ ಮನೆಯಲ್ಲಿ ಒಂದು ಈ ತರಹದ ನಾನು ಕಳಿಸಿದ್ದ ಒಂದು ಕವರ್ ಬಂದು ಬಿದ್ದಿತ್ತು. ಅದರ ಮೇಲೆ ಅಂಡರ್ ಪೋಸ್ಟೇಜ್ ಅಂತ ಸ್ಟ್ಯಾಂಪ್ ಹೊಡೆದು ಅದೆಷ್ಟೋ ದುಡ್ಡು ಬರೆದಿದ್ದರು. ಈ ತರಹ ಅಂಡರ್ ಪೋಸ್ಟೇಜ್ ಆಗಿ ಕವರ್‌ಗಳು ವಾಪಸ್ ಬಂದರೆ ಕಳಿಸಿದವರು ದಂಡ ಕೊಡಬೇಕು ಅನ್ನುವ ತಿಳುವಳಿಕೆ ಇತ್ತು ಮತ್ತು ಅದರ ಅನುಭವ ಸಹ ಆಗಿತ್ತು. ಮತ್ತೆ ದಂಡ ತೆಗೆದುಕೊಳ್ಳದೆ ಈ ಕವರ್ ಹೇಗೆ ಬಂತು? ಹೆಂಡತಿ ದಂಡ ಕಟ್ಟಿ ಕವರ್ ತಗೊಳ್ತಾ ಇದೇನು ಈ ಕವರ್ ಇಲ್ಲಿ….. ಅಂತ ಹೆಂಡತಿನ ಕೇಳಿದೆ.
ಹೆಂಡತಿ ಉತ್ತರಿಸಿದರು ಹೀಗೆ.. ಬೆಳಿಗ್ಗೆ ಪೋಸ್ಟ್ ಮ್ಯಾನ್ ಬಂದರು, ಆಚೆ ನಿಂತಿದ್ದೆ. ಕವರ್ ಕೊಟ್ಟರು, ಹೋದರು ಅಂತ ಉತ್ತರ ಬಂತಾ? ಫೈನ್ ಇಸ್ಕೊಂಡ್ರಾ…. ಇಲ್ಲ ಅದೇನಿಲ್ಲ ಹಾಗೇ ಕೊಟ್ಟರು ಹೋದರು. ಇದು ಅಂದರೆ ಈ ರೀತಿಯ ಪ್ರಸಂಗ ಅದೇ ತಿಂಗಳಲ್ಲಿ ಮೂರು ನಾಲ್ಕು ಸಲ ರಿಪೀಟ್ ಆಗಬೇಕೇ? ಅದೂ ನಾನು ಫ್ಯಾಕ್ಟರಿಯಲ್ಲಿ ಆನ್ ಡ್ಯೂಟಿ ಇದ್ದಾಗ ಕವರ್ ಬಂದಿದ್ದು!

ನಾನು ಸೆಕೆಂಡ್ ಶಿಫ್ಟ್ ಇದ್ದು ಬೆಳಿಗ್ಗೆ ಮನೇಲೆ ಇದ್ದಾಗ ಪೋಸ್ಟ್ ಮ್ಯಾನ್ ಬಂದರು. ಅವತ್ತೂ ಸಹ ಒಂದು ಅಂಡರ್ ಪೋಸ್ಟೇಜ್ ಆಗಿ ವಾಪಸ ಬಂದ ಕಂತೆ, ಕಂತೆ ಕವರೊಳಗೆ ಜೋಪಾನವಾಗಿ ಮಡಿಸಿಕೊಂಡು ಹೊಟ್ಟೆ ಬಿರಿಯ ಉಂಡು ಮಲಗಿರುವ ಗಂಡಸಿನ ಹಾಗೆ ಮಲಗಿತ್ತು, ನಾನು ಕಳಿಸಿದ ಹಾಗೇ… ಗರಿಕೆ ಬಿಚ್ಚದ ಸೀರೆ ಅಂತಲೇನೋ ಹೇಳುತ್ತಾರೆ ನೋಡಿ ಹಾಗೆ. ಪೋಸ್ಟ್ ಮ್ಯಾನ್ ಕವರ್ ವಿಲೇವಾರಿ ಮಾಡಿ ಉಭಯ ಕುಶಲೋಪರಿ ಮಾಡಿ ಸೈಕಲ್ ಹತ್ತಲು ಹೊರಟರು. ಅವರ ಹೆಸರು ಗೊತ್ತಿಲ್ಲ ನನಗೆ. ಸ್ವಲ್ಪ ಇರಿ ಇವರೇ ಅಂದೆ. ಏನ್ ಸಾರ್ ಅಂತ ನಿಂತರು. ಇದು ಅಂಡರ್ ಪೋಸ್ಟೇಜ್ ಆಗಿದೆ ಅಲ್ವಾ? ನಾನು ಫೈನ್ ಕಟ್ಟಬೇಕು ಅಲ್ವಾ? ನೀವು ಫೈನ್ ತಗೊಳ್ಳದೆ ಹಾಗೇ ಡೆಲಿವರಿ ಕೊಟ್ಟು ಹೋಗ್ತಾ ಇದೀರಿ….. ಅಂದೆ.
ಅಯ್ಯೋ ಬಿಡಿ ಸಾರ್. ಅದೇನು ನೀವು ಬೇಕಂತ ಮಾಡ್ತೀರಾ? ಒಂದು ಒಂದೊಂದು ಸಲ ಆಗುತ್ತೆ… ಅವರನ್ನ ನಿಲ್ಲಿಸಿ ಮಾತು ಮುಂದುವರೆಸಿದೆ. ಉತ್ತರ ಕರ್ನಾಟಕದ ಸೇಡಂ ಕಡೆ ಹುಡುಗ, ಈಗ ಕೆಲಸಕ್ಕೆ ಸೇರಿ ಒಂದು ವರ್ಷ ಆಗಿದೆ. ಈ ರೀತಿಯ ಅಂಡರ್ ಪೋಸ್ಟೇಜ್ ಫೈನ್ ಆತನೇ ಕೈಯಿಂದ ಕಟ್ಟುತ್ತಾನೆ ಅಂತ ತಿಳಿಯಿತು. ನನಗೆ ಆಗ ಕೆಲಸಕ್ಕೆ ಸೇರಿ ಹದಿನೈದು ಇಪ್ಪತ್ತು ವರ್ಷ ಆಗಿ ಹೊಟ್ಟೆ ಬಟ್ಟೆಗೆ ಸಾಕಾಗುವಷ್ಟು ಮತ್ತು ತಿಂಗಳ ಕೊನೆಯಲ್ಲಿ ಕೊಂಚ ಅಂದರೆ ನೂರು ಐವತ್ತು ಮಿಕ್ಕಿರುತ್ತಿದ್ದ ಕಾಲ. ಕೆಲವರಿಗೆ ಬಡ್ಡಿ ಇಲ್ಲದೆ ಸಾಲ ಕೊಡುವಷ್ಟು ಶ್ರೀಮಂತ ಬೇರೆ!
ಆಗ ನನಗೆ ಹೋಲಿಸಿದರೆ ಆ ಪೋಸ್ಟ್ ಮ್ಯಾನ್‌ಗೆ ಕಾಲು ಭಾಗ ಅಥವಾ ಹತ್ತನೇ ಒಂದು ಭಾಗ ಸಂಬಳ ಇರಬಹುದೇನೋ…. ಪಾಪ ನನ್ನ ಫೈನ್ ಅವನು ಕಟ್ಟುತ್ತಾ ಇದಾನೆ ಅನಿಸಿ ಮನಸು ಪಿಚ್ ಅನಿಸಿಬಿಟ್ಟಿತು. ಜೇಬಿನಿಂದ ಒಂದು ಹತ್ತು ರೂಪಾಯಿ ತೆಗೆದು ಅವನಿಗೆ ಕೊಡುವ ಪ್ರಯತ್ನ ಮಾಡಿದೆ. ಬೇಡ ಸಾರ್ ಬೇಡ ಸಾರ್ ಅಂತ ಸೈಕಲ್ ಏರಿ ಆತ ಹೊರಟೇ ಹೋದ. ಪೋಸ್ಟ್ ಆಫೀಸ್‌ನ ಒಬ್ಬ ಪೋಸ್ಟ್ ಮ್ಯಾನ್‌ಗೆ ನನಗಿಂತ ಕಡಿಮೆ ಓದಿರುವ, ನನಗಿಂತ ಕಡಿಮೆ ಸಂಬಳ ಪಡೆಯುವ, ನನಗಿಂತ ವಯಸ್ಸಿನಲ್ಲಿ ಚಿಕ್ಕವ….. ಹೀಗೆ ಇರುವಂತಹ ಪೋಸ್ಟ್ ಮ್ಯಾನ್‌ಗೆ ಇರುವ ಬುದ್ಧಿ ಇಷ್ಟು ಓದಿರುವ ಬೆಂಗಳೂರಿನಲ್ಲಿ ಇರುವ ನನಗಿಲ್ಲವೇ ಅಂತ ಬೇಜಾರು ಆಗಿಹೋಯಿತು! ಇನ್ನುಮುಂದೆ ಈ ರೀತಿಯ ಅಂಡರ್ ಪೋಸ್ಟೇಜ್ ಪತ್ರ ಕಳಿಸಬಾರದು ಎಂದು ನಿರ್ಧಾರ ಮಾಡಿದೆ ನೋಡಿ. ನಾನೇನು ಭೀಷ್ಮ ಅಲ್ಲ ಅಥವಾ ಅವರ ರೀತಿಯ ಪುರಾಣ ಪುರುಷ ಅಂತೂ ಖಂಡಿತ ಅಲ್ಲ, ಆದರೂ ಅವತ್ತಿಂದ ಕಡಿಮೆ ಸ್ಟ್ಯಾಂಪ್ ಅಂಟಿಸಿ ಅಂಚೆ ಡಬ್ಬಕ್ಕೆ ಹಾಕುವ ಒಂದು ಅನಾಗರಿಕ ಅಭ್ಯಾಸದಿಂದ ಹೊರಬಂದೆ! ಅನಾಗರಿಕ ಅಂತ ನನಗೆ ಅನಿಸಿದ್ದು ಆ ಕ್ಷಣಕ್ಕೆ ಅಷ್ಟೇ. ನನ್ನ ಗೆಳೆಯರೊಬ್ಬರು ಮನೆಗೆ ಬರುವ ಅಂಚೆಯ ಕವರಿನ ಮೇಲಿನ ಮುದ್ರೆ ಹೊಡೆದಿರದ ಸ್ಟ್ಯಾಂಪ್‌ಗಳನ್ನ ಜೋಪಾನವಾಗಿ ತೆಗೆದಿರಿಸಿ ಉಪಯೋಗಿಸುತ್ತಾ ಇದ್ದರು….! ಕಂಪ್ಯೂಟರು ಬಂತು, ಮೇಲ್ ವ್ಯವಸ್ಥೆ ಬಂತು. ಈಚೆಗೆ ಕೈನಲ್ಲಿ ಬರೆದು ಅಂಚೆ ಕಚೇರಿಗೆ ಹೋಗಿ ಅದನ್ನು ತೂಗಿಸಿ ಸಾಕಷ್ಟು ಸ್ಟ್ಯಾಂಪ್ ಅಂಟಿಸಿ ಅಂಚೆ ಡಬ್ಬಕ್ಕೆ ಹಾಕುವ ಜನ ಇಲ್ಲವೇ ಇಲ್ಲ. ರಸ್ತೆಯಲ್ಲಿನ ಕಂಬದ ಮೇಲೆ ಕಟ್ಟಿರುತ್ತಿದ್ದ ಅಂಚೆ ಡಬ್ಬಗಳು ಈಗ ಒಂದು ರೀತಿಯ ಪಳೆಯುಳಿಕೆ ಹಾಗೆ ಕಾಣುತ್ತವೆ. ಕೆಲವು ಅದರ ಒರಿಜಿನಲ್ ಕೆಂಪು ಬಣ್ಣ ಕಳೆದುಕೊಂಡು ಮಳೆ ಹಾಲಿ ಹೊಡೆತಕ್ಕೆ ಸಿಕ್ಕಿ ತೊನ್ನು ಹತ್ತಿರುವ ಹಾಗೆ ಕಾಣುತ್ತೆ. ಹೊಸಹೊಸ ಬಡಾವಣೆಗಳಲ್ಲಿ ಈ ರೀತಿಯ ಅಂಚೆ ಡಬ್ಬಗಳು ಕಾಣಲು ಸಿಗದು. ಕಳೆದ ವರ್ಷ ಮನೆ ಹತ್ತಿರದ ಪೋಸ್ಟ್ ಬಾಕ್ಸ್ ನೋಡಿ ಮೊಮ್ಮಕ್ಕಳು ಅದೇನು ತಾತಾ ಅಂತ ಕೇಳಿದವು. ಅವಕ್ಕೆ ಅದೇನು ಅಂತ ಹೇಳಿದೆ. ಅದನ್ನು ಪ್ರಾಕ್ಟಿಕಲ್ ಆಗಿ ತೋರಿಸಲು ಅಂಚೆ ಕಾರ್ಡ್ ತರಲು ಪೋಸ್ಟ್ ಆಫೀಸಿಗೆ ಹೋದೆ. ಪೋಸ್ಟ್ ಕಾರ್ಡ್ ಬೇಕು ಅಂದೆ. ಅಲ್ಲಿದ್ದ ಕ್ಲಾರ್ಕ್ ತಲೆ ಎತ್ತಿ ಆಶ್ಚರ್ಯದ ಮುಖ ಮಾಡಿ ಕೊನೆ ಕೌಂಟರ್ ತೋರಿಸಿ ಅಲ್ಲಿ ಹೋಗಿ ಎಂದರು.
ಹತ್ತೋ ಹದಿನೈದು ವರ್ಷದ ಹಿಂದೆ ಹದಿನೈದು ಪೈಸೆ ಇದ್ದ ಪೋಸ್ಟ್ ಕಾರ್ಡ್ ಈಗ ಐವತ್ತು ಪೈಸೆ. ಪೋಸ್ಟ್ ಕಾರ್ಡ್ ಬಡವರು ಉಪಯೋಗಿಸುವುದು ಅದರ ಬೆಲೆ ಏರಿಸಬಾರದು ಅಂತ ಸರ್ಕಾರ ಸುಮಾರು ವರ್ಷ ಅದರ ಬೆಲೆ ಹಾಗೇ ಸ್ಥಾಯಿಯಾಗಿ ಇಟ್ಟಿತ್ತು. ಬಾಂಗ್ಲಾ ದೇಶವನ್ನು ಪಾಕಿಸ್ತಾನದಿಂದ ನಮ್ಮ ವಶಕ್ಕೆ ತೆಗೆದು ಕೊಂಡಾಗ ಅವರನ್ನು ಅಂದರೆ ಬಾಂಗ್ಲಾ ದೇಶೀಯರನ್ನು ಸಾಕಲು ಅಂಚೆ ಪರಿಕರಗಳ ಮೇಲೆ ತೆರಿಗೆ ಹಾಕಿದ್ದರು. ಅದು ಈಗ ಎಲ್ಲರಿಗೂ ಮರೆತಿದೆ! ಅದನ್ನು ಅಂದರೆ ಪೋಸ್ಟ್ ಕಾರ್ಡ್ ತಂದು ಮೊಮ್ಮಕ್ಕಳ ಕೈಲಿ ಅದರ ಮೇಲೆ ವಿಳಾಸ ಒಕ್ಕಣೆ ಬರೆಸಿ ಅವುಗಳ ಕೈಲೇ ಡಬ್ಬಕ್ಕೆ ಹಾಕಿಸಿದೆ. ಎರಡು ದಿವಸದ ನಂತರ ನಮ್ಮ ಪೋಸ್ಟ್ ಮ್ಯಾನ್ ಬಂದು ನಗುನಗುತ್ತಾ my loving ajji ಅಂತ ಬರೆದಿದ್ದಾರೆ ಸರ್ ಅಂತ ಹೇಳಿ ಮೊಮ್ಮಗು ಪೋಸ್ಟ್ ಕೊಟ್ಟರು! ಒಂದು ಹಳೇ ಕತೆ ನಮ್ಮ ತಾತ ನಮ್ಮ ಕೈಲೆ ಪೋಸ್ಟ್ ಕಾರ್ಡ್ ತರಿಸಿ ಕ್ಷೇಮ, ಶ್ರೀ, ದಿನಾಂಕ… ಇವೆಲ್ಲ ಬರೆಸಿ ಪೋಸ್ಟ್ ಮಾಡಿಸಿದ್ದು ನೆನಪಿಗೆ ಬಂತು. ಆಗ ಆರುಕಾಸಿಗೆ ಒಂದು ಪೋಸ್ಟ್ ಕಾರ್ಡ್ ಎಂದು ನೆನಪು.
ಈ ಪ್ರಸಂಗ ಬಂದಾಗ ಇನ್ನೊಂದು ವಿಷಯವೂ ನೆನಪಿಗೆ ಬಂತು. ಪತ್ರಿಕೆಗಳಿಗೆ ಬರಹ ರವಾನೆ ಆದಾಗ ಅಸ್ವೀಕೃತ ಆದರೆ ವಾಪಸ್ ಕಳಿಸಲು ಅಂಚೆ ಚೀಟಿ ಹಚ್ಚಿದ ಕವರ ಸಂಗಡ ಹೋಗುತ್ತಿತ್ತು. ಆಗ ಅರವತ್ತು ಎಪ್ಪತ್ತರ ದಶಕದಲ್ಲಿ “ಅಸ್ವೀಕೃತ ಲೇಖನಗಳನ್ನು ವಾಪಸ್ ಪಡೆಯಲು ಅಂಚೆ ಚೀಟಿ ಹಚ್ಚಿದ ಸ್ವ ವಿಳಾಸದ ಕವರ್ ಸಂಗಡ ಇರಲಿ” ಎಂದು ಎಲ್ಲಾ ಪತ್ರಿಕೆಗಳೂ ಬರಹಗಾರ ಪ್ರಭುಗಳಿಗೆ ವಿನಂತಿ ಮಾಡುತ್ತಿದ್ದರು. ಅದರಂತೆ ನಾವು ಬರಹಗಾರ ಪ್ರಭುಗಳು ಅವರ ವಿನಂತಿಯನ್ನು ಶಿರಸಾ ವಹಿಸಿ ಪಾಲಿಸುತ್ತಿದ್ದೆವು. ಕೆಲವು ಸಲ ಅಂಚೆ ಚೀಟಿ ಹತ್ತಿಸಿದ ಕವರ್ ಇಡದೇ ಬರಹ ಕಳಿಸಿ ಅವು ಮುದ್ರಣ ಆಗುವಂತೆ ಮಾಡುವುದು ಎನ್ನುವ ಅಡ್ಡ ಯೋಚನೆ ಬರುತ್ತಿತ್ತು. ಆದರೆ ಒಂದು ಕತೆ ಬರೆಯಲು ತಗೊಂಡ ಸಮಯ, ಪಟ್ಟ ಶ್ರಮ ಮತ್ತು ಉಪಯೋಗಿಸಿದ ತಲೆ ನೆನೆದು ಅಂಚೆ ಚೀಟಿ ಹಚ್ಚಿದ ಕವರ ಸಮೇತವೇ ಹೋಗಲಿ ಎಂದದ್ದುಂಟು…!
ಪೋಸ್ಟ್ ಕವರ್, ಬರೆಯುವ ಬಿಳಿಯ ಪೇಪರ್ ಇವುಗಳಿಗೆ ಪರ್ಯಾಯ ವ್ಯವಸ್ಥೆ ಒಂದು ಕಂಡು ಹಿಡಿದಿದ್ದೆ. ಆಗ ಕಂಪ್ಯೂಟರ್ ಪೇಪರ್ ಒಂದು ಕಡೆ ಮುದ್ರಣ ಆಗಿರೋದು ಅಂದರೆ one side printed ಹೇರಳವಾಗಿ ಸಿಗುತ್ತಿತ್ತು. ಅದರಲ್ಲೇ ಕವರ್ ತಯಾರಿಸಿ ಅದರದ್ದೇ ಪೇಪರ್‌ನಲ್ಲಿ ಲೇಖನಗಳು ಹೋಗುತ್ತಿದ್ದವು. ಪೇಪರ್ ತೂಕ ಕಡಿಮೆ ಆದರೆ ಅಂಚೆ ವೆಚ್ಚ ಕಡಿಮೆ ಎನ್ನುವ ಸಂಶೋಧನೆ ಮಾಡಿದ್ದೆ. ಅದರ ಪ್ರಯೋಗ ಇನ್ನೊಂದು ರೀತಿ ಆಯಿತು. ಜೆಲ್ಲಿ ಪೇಪರ್ ಗೊತ್ತಲ್ಲ. ಚಿನ್ನ ಬೆಳ್ಳಿ ಕೊಂಡರೆ ಅದನ್ನು ಜೆಲ್ಲಿ ಪೇಪರ್‌ನಲ್ಲಿ ಸುತ್ತಿ ಕೊಡುತ್ತಾರೆ. ಅದರ ತೂಕ ಮಾಮೂಲಿ ಪೇಪರ್ ಗಿಂತಲೂ ತುಂಬಾ ಅಂದರೆ ತುಂಬಾ ಕಡಿಮೆ. ಈ ತರಹದ ಜೆಲ್ಲಿ ಪೇಪರ್ ಹುಡುಕಿ ಅದನ್ನು ಸರಿಯಾದ ಆಕಾರಕ್ಕೆ ಕತ್ತರಿಸಿಕೊಂಡು ಅದರಲ್ಲಿ ಸಾಹಿತ್ಯ ಸೇವೆ ಮಾಡಿದೆ. ಇದೂ ಸುಮಾರು ವರ್ಷ ನಡೆಯಿತು. ಎರಡು ಮೂರು ವರ್ಷ ಹಿಂದೆ ಒಂದು ಪತ್ರಿಕೆಯ ಮಾಜಿ ಸಂಪಾದಕರು ಸಿಕ್ಕಿದ್ದರು. ಅವರ ಜತೆ ಮಾತಾಡಬೇಕಾದರೆ ನೀವು ಜೆಲ್ಲಿ ಪೇಪರ್‌ನಲ್ಲಿ ಲೇಖನ ಬರೀತೀರಿ ಅಲ್ಲವಾ ಅಂದರು! ಇಲ್ಲ ಸಾರ್ ಅದು ಭೂತಕಾಲಕ್ಕೆ ಸೇರಿಬಿಡ್ತು. ಈಗ ಕಂಪ್ಯೂಟರು ಮೊಬೈಲ್ ಇವನ್ನ ಉಪಯೋಗಿಸ್ತೀನಿ. ಮೇಲ್ ಮಾಡಿಬಿಡ್ತೀನಿ… ಅಂದೆ! ಹೊಸಾ ಯುಗಕ್ಕೆ ನಾವೂ ತೆರೆದು ಕೊಂಡಿದ್ದೇವೆ ಅನ್ನುವ ಹಮ್ಮು! ಹೀಗೆ ತನ್ನ ವೈಶಿಷ್ಟ್ಯಗಳಿಂದ ಹೆಸರು ಮಾಡಿದ ಸುಪ್ರಸಿದ್ಧರ ಗುಂಪಿಗೆ ನಾನು ಸೇರಿದೆ ಅಂತ ಮೂರು ಗೇಣು ಬೆಳೆದಿದ್ದೆ, ಆಗ!
ಬರೆದು ಬರೆದೂ ಅಂಚೆ ಡಬ್ಬಕ್ಕೆ ಹಾಕಿ ಅವು ಪುನಃ ನನಗೆ ವಾಪಸ ದಂಡಯಾತ್ರೆ ಆಗುತ್ತಾ ಇತ್ತಲ್ಲ ಆಗ ಒಂದು ಐಡಿಯಾ ಹೊಳೆಯಿತು.
ಮೊದಲ ಕತೆ ಪ್ರಕಟವಾಗಿ, ಬರವಣಿಗೆಯ ಹುಚ್ಚು ಹತ್ತಿಸಿತಾ? ಫ್ಯಾಕ್ಟರಿಯಲ್ಲಿ ಸಮಯ ಸಿಕ್ಕಾಗಲೆಲ್ಲ ಬರೆಯೋದು ಶುರು ಆಯಿತು. ಒಂದು ಕಡೆ ಅಪ್ರಕಟವಾದರೆ ಅದು ಇನ್ನೊಂದು ಪತ್ರಿಕೆಗೆ, ಅಲ್ಲೂ ಆಗಲಿಲ್ಲವಾ ಮತ್ತೊಂದು ಕಡೆ.. ಹೀಗೆ ಒಂದು ರೀತಿ ತ್ರಿಲೋಕ ಸಂಚಾರಿ ಪಟ್ಟವನ್ನು ನನ್ನ ಕತೆಗಳು ಗಿಟ್ಟಿಸಿಕೊಂಡು ಎಲ್ಲೋ ಒಂದು ಕಡೆ ಬೆಳಕು ಕಾಣಲು ಶುರು ಹಚ್ಚಿಕೊಂಡಿತು. ಹೀಗೇ ನಾನು ನಾಡಿನ ಎಲ್ಲಾ ಪತ್ರಿಕೆಗಳಿಗೆ ಬರೆದ ಎನ್ನುವ ವಾಕ್ಯ ನನ್ನ ಸನ್ಮಾನ ಪತ್ರಗಳಿಗೆ ಅಂಟಿಸುವ ವಿಶೇಷಣವಾದೆ.
ಬಹುಶಃ ನನ್ನ ಎರಡನೇ ಕತೆ ಇರಬೇಕು. ಆವರೆಗೆ ಎಷ್ಟು ಕತೆ ಬರೆದು ಹಾಕಿದ್ದೀನಿ ಅನ್ನುವ ಲೆಕ್ಕ ಇಟ್ಟಿರಲಿಲ್ಲ… ಲೆಕ್ಕದ ಬಗ್ಗೆ (ಬಹುಶಃ )ವೈ ಎನ್ಕೆ ಅವರ ಒಂದು ಲಿಮರಿಕ್ ನೆನಪಿಗೆ ಬರುತ್ತೆ.. ನಾ ಸುಟ್ಟ ಸಿಗರೇಟಿನ ಲೆಕ್ಕ ಕೇಳಿ ಬಿದ್ದು ಬಿದ್ದು ನಕ್ಕ ಯಮ. ಇನ್ನೊಂದು ಲೆಕ್ಕದ ಹಾಡು ಅಂದರೆ ನಾಕ್ ಒಂದಲಾ ನಾಕು… ಇಷ್ಟೇ ಲೆಕ್ಕದ ನಂಟು…ಶ್ರೀನಾಥ್ ಮತ್ತು ಆರತಿ ತಾರಾಗಣದ ಪುಟ್ಟಣ್ಣ ನಿರ್ದೇಶನದ ಶುಭಮಂಗಳ ಚಿತ್ರದ್ದು. ಇನ್ನೂ ಒಂದು ಲೆಕ್ಕದ ಹಾಡು ಅಂದರೆ ಕಿಶೋರ್ ಕುಮಾರನ ಪಾಂಚೆ ರೂಪಯ್ಯ ಬಾರಾ ಆನಾ ಮಾರೆಗಾ ಭಯ್ಯಾ ತಾನಾ ನಾ!
ನನ್ನ ಲೆಕ್ಕದ ವಿಷಯಕ್ಕೆ ಬಂದರೆ ಈಗಲೂ ನನಗೆ ನೂರು ರೂಪಾಯಿ ಕೊಟ್ಟು ಹದಿನೆಂಟು ರೂಪಾಯಿ ಸಾಮಾನು ಕೊಂಡಿದ್ದರೆ ಎಷ್ಟು ಚಿಲ್ರೆ ಬರಬೇಕು ಅಂತ ಗೊತ್ತಿಲ್ಲ. ಚಿಲ್ರೆ ಸರಿಯಾಗಿ ಕೊಟ್ಟಿದ್ದೀಯಾ ಸಾರ್ ಹೆಚ್ಚು ಕೊಟ್ಟು ಬಿಟ್ಟು ಆಮೇಲೆ ಒದ್ದಾಡಬೇಡ ಅಂತ ಅಂಗಡಿ ಅವರಿಗೆ ಹೇಳಿ ಅವನು ಮತ್ತೊಮ್ಮೆ ಲೆಕ್ಕ ಹಾಕುವ ಹಾಗೆ ಮಾಡುತ್ತೇನೆ. ಅವರು ಎರಡು ಸಲ ಕ್ರಾಸ್ ಚೆಕ್ ಮಾಡ್ತಾರೆ ನೋಡಿ ಅದರಿಂದ ಲೆಕ್ಕ ಸರಿ ಇದೆ ಎನ್ನುವ ಭಯಂಕರ ಆತ್ಮ ವಿಶ್ವಾಸ ನನ್ನದು. ಇದಕ್ಕಿಂತ ಒಂದು ವಿಷಯ ಜೀವಮಾನ ಪರ್ಯಂತ ಮರೆಯಲೇ ಆಗದಿರುವುದು ಎಂದರೆ ನಾನು ಕಾಲೇಜು ವ್ಯಾಸಂಗ ಮಾಡುತ್ತಿದ್ದ ಶತಮಾನದ್ದು. ಮ್ಯಾಥಮ್ಯಾಟಿಕ್ಸ್ ನನ್ನ ಕಾಲದಲ್ಲಿ ನಾವು ಮೈನರ್ ಆಗಿ ಓದಿದ್ದು. ಅಂದರೆ ಫಿಸಿಕ್ಸು. ಕೆಮಿಸ್ಟ್ರಿ ಮೇಜರ್ ಮತ್ತು ಮ್ಯಾಥಮ್ಯಾಟಿಕ್ಸ್ ಮೈನರ್! ಅದು ಯಾರು ಯಾವ ಕಾರಣಕ್ಕೆ ಈ ರೀತಿಯ ಹೆಸರು ಇಟ್ಟಿದ್ದರು ಅಂತ ಆಶ್ಚರ್ಯ ಆಗುತ್ತಿತ್ತ…. ಹಾಗೆ ನೋಡಿದರೆ bsc ಓದುವ ಸಮಯಕ್ಕೆ ನಾವು ಹದಿನೆಂಟರ ಹೊಸ್ತಿಲಿನ ಮೇಲೆ ನಿಂತವರು!
ಮೇಜರ್ ಸಬ್ಜೆಕ್ಟ್ ಅಂದರೆ ಡಿಗ್ರೀ ತರಗತಿಯಲ್ಲಿ ಮೂರುವರ್ಷ ಓದುವುದು, ಮೈನರ್ ಸಬ್ಜೆಕ್ಟ್ ಎರಡು ವರ್ಷ ಅಷ್ಟೇ. ಲೆಕ್ಕದಲ್ಲಿ ಪೂರ್ ಆದ ನಾನು ಮ್ಯಾಥಮ್ಯಾಟಿಕ್ಸ್ ಮೈನರ್ ಆಗಿ ಆರಿಸಿಕೊಂಡೆ. ಎರಡು ವರ್ಷಕ್ಕೆ ಏಳು ರಾಟದ ಶನಿ ಕಾಟ ತಪ್ಪುತ್ತೆ ಅಂತ. ಮ್ಯಾಥಮ್ಯಾಟಿಕ್ಸ್‌ನಲ್ಲಿ ನನಗೆ ಎಷ್ಟು ಮಾರ್ಕ್ಸ್ ಬಂತು ಅಂದರೆ.. ಎಪ್ಪತ್ತು ಇನ್ನೂರಕ್ಕೆ! ಅಂದರೆ ನೂರಕ್ಕೆ ಮೂವತ್ತೈದು, ಜಸ್ಟ್ ಪಾಸ್. ಪಾಪ ಯಾರೋ ಪುಣ್ಯಾತ್ಮ ಅವನೇ ಒಂದು ಇಪ್ಪತ್ತೋ ಮೂವತ್ತು ನಂಬರು ಹಾಕಿ ತಳ್ಳಿಬಿಟ್ಟಿದ್ದ ಮುಂದಕ್ಕೆ. ಈಗ ಅವನು ದೇವರ ಪಾದ ಸೇರಿ ಎರಡು ಜನ್ಮ ತಳೆದಿರಬಹುದು. ಅವನ ಈ ಒಳ್ಳೆಯ ಕೆಲಸಕ್ಕೆ ಅವನ ಏಳು ಜನ್ಮಗಳು ಒಳ್ಳೇ ಹೆಂಡತಿ, ಒಳ್ಳೇ ಮಕ್ಕಳು, ಒಳ್ಳೇ ನೆರೆಹೊರೆ, ಕೈ ತುಂಬಾ ನ್ಯಾಯವಾಗಿ ಸಂಪಾದಿಸಿದ ಹಣ ಮತ್ತು ಒಳ್ಳೆಯ ಹೆಚ್ಚು ಹೊರೆ ಹಾಕದ ಸರ್ಕಾರ ಸಿಗಲಿ ಅಂತ ನನ್ನ ಹಾರೈಕೆ, ಆ ಪುಣ್ಯಾತ್ಮನಿಗೆ..!
ಮಯೂರದಲ್ಲಿ ಎರಡನೇ ಕತೆ ಪ್ರಕಟ ಆಯಿತು. ಅದರ ಹೆಸರು ಆಕ್ಸಿಡೆಂಟ್ ಅಂತ. ಅದನ್ನು ಓದಿ ಗೆಳೆಯರು ಅದರಲ್ಲಿನ ಪಾತ್ರಗಳು ನಾವೇ ಅಂದುಕೊಂಡಿರಬೇಕು. ಮೊದಲನೇ ಕತೆಗೂ ಇದಕ್ಕೂ ಐದಾರು ತಿಂಗಳ ಗ್ಯಾಪ್ ಇತ್ತು ಅಂತ ಕಾಣ್ಸುತ್ತೆ. ಎರಡನೇ ಕತೆ ಮೊದಲಿಗಿಂತ ಹೆಚ್ಚು ಉದ್ದ. ಅದರಿಂದ ಹೆಚ್ಚುಪುಟ, ಸುಮಾರು ಇಪ್ಪತ್ತು ಪುಟ ಆಕ್ರಮಿಸಿತ್ತು. ಈಗ ಆ ಕತೆ ನೋಡಿದರೆ ಅಷ್ಟೊಂದು ಬರೆಯುವ ಪೇಷೆನ್ಸ್ ನನಗಿತ್ತೇ ಎಂದು ಮೂಗಿನ ಮೇಲೆ ಬೆರಳು ಮಡುಗುವ ಹಾಗೆ ಆಗುತ್ತೆ.
ಬಹುಶಃ ಇದೇ ಸಮಯ ಅಂತ ಕಾಣುತ್ತೆ. ಬೇರೆ ಡಿಪಾರ್ಟ್ಮೆಂಟ್‌ನಿಂದ ಒಬ್ಬರು ಇಂಜಿನಿಯರು ನಮ್ಮ ಡಿಪಾರ್ಟ್ಮೆಂಟ್‌ಗೆ ವರ್ಗ ಆಗಿ ಬಂದರು.
ಯಾವಾಗಲೂ ನನ್ನ ಸುತ್ತ ಜನ ತುಂಬಿ ಕೂತಿರೋದು ನೋಡಿದರು. ಜನ ಇಲ್ಲದೇ ಇದ್ದಾಗ ಏನೋ ಗೀಚುತ್ತಾ ಕುಳಿತಿರೋದು ಕಂಡರು. ಗುಂಪು ಸೇರಿಸಿಕೊಂಡು ಅದೇನು ಮಾಡ್ತಾನೆ ಅನಿಸಿರಬೇಕು. ಅದಕ್ಕಿಂತ ಹೆಚ್ಚಾಗಿ ಪೇಪರ್ ಪೇರಿಸಿಕೊಂಡು ಉದ್ದು ಉದ್ದ ಗೀಚ್ತಾನೆ ಅದೇನು ಎನ್ನುವ ಕುತೂಹಲ ಹುಟ್ಟಿರಬೇಕು. ಹಾಗೇ ನಾನು ಏನು ಎತ್ತ ತಿಳಿದುಕೊಂಡಿರಬೇಕು..(ಇದು ಬರೀ ನನ್ನ ಊಹೆ ಅಷ್ಟೇ)…
ಒಂದು ನಾಲ್ಕೈದು ಸಲ ನನ್ನ ಕೊಠಡಿಯಿಂದ ಆಚೆ ನನ್ನನ್ನು ನೋಡಿ ಇವಾಗ ಇವನನ್ನು ಮಾತಾಡಿಸಬಹುದು ಅಂತ ನಿರ್ಧರಿಸಿ ಒಳಗೆ ಬಂದರು (*ಇದೂ ಸಹ ಬರೀ ನನ್ನ ಊಹೆ ಅಷ್ಟೇ)…
ಎದುರಿದ್ದ ಖುರ್ಚಿ ಪಕ್ಕ ನಿಂತರು.
… ಡಿಸ್ಟರ್ಬ್ ಆಯ್ತಾ? ಎಂದರು. ಏನೋ ಗೀಚುತ್ತಾ ಇದ್ದವನು ತಲೆ ಎತ್ತಿ ನೋಡಿದೆ. ಬನ್ನಿ ಕೂತುಕಳಿ ಡಿಸ್ಟರ್ಬ್ ಏನು ಬಂತು… ಅಂದೆ.

ಬಹುಶಃ ಅವರ ಜತೆ ಆದ ಅವತ್ತಿನ ಭೇಟಿ ನನ್ನ ಮುಂದಿನ ಜೀವನದ ಬಹು ಮುಖ್ಯ ತಿರುವಿಗೆ ಕಾರಣ ಆಯಿತು ಅಂತ ಈಗ ನಲವತ್ತು ವರ್ಷದ ನಂತರ ಹಿಂದಕ್ಕೆ ತಿರುಗಿ ನೋಡಿದರೆ ಅನಿಸಿತು. ಇದು ಹೇಗಾಯಿತು ಎಂದರೆ ನೀವು ಮುಂದಿನ ಕೊರೆತ ಅಂದರೆ ಬೈರಿಗೆಗೆ ಕಾಯಬೇಕು. ಕಾಯೋದರಲ್ಲಿ ಇರೋ ಸುಖ ಅಂತ ಅದೇನೋ ಹಾಡಿದೆಯಂತೆ. ಅದರ ಪೂರ್ಣ ಪಾಠ ಊಹೂಂ ನನ್ನ ಬಳಿ ಇಲ್ಲ….!
ಮುಂದಕ್ಕೆ…

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.
