Advertisement
ಆನಂದ ಈ. ಕುಂಚನೂರ ಬರೆದ ಈ ಭಾನುವಾರದ ಕತೆ

ಆನಂದ ಈ. ಕುಂಚನೂರ ಬರೆದ ಈ ಭಾನುವಾರದ ಕತೆ

ನಿದ್ರೆಯಿಲ್ಲದೆ ಬಳಲಿಕೆಯಲ್ಲಿ ಅಸಾಧ್ಯ ಆಕಳಿಕೆ ಬರುತ್ತಿದ್ದರೂ ಕಣ್ರೆಪ್ಪೆ ಒಂದನ್ನೊಂದು ತಾಕುತ್ತಿರಲಿಲ್ಲ. ಯಾವಾಗಲೂ ನುಂಗುವ ನಿದ್ದೆ ಗುಳಿಗೆ ಕೂಡ ಈಗೀಗ ಕೆಲಸ ಮಾಡುತ್ತಿಲ್ಲ. ಹೀಗೆ ಎಲ್ಲ ಅಸಂಖ್ಯ ಕಾರ್ಮೋಡಗಳ ಮಧ್ಯೆ ಬೆಳ್ಳಿರೇಖೆಯೊಂದು ಮಿಂಚಿದಂತಾಗಿ ಗೆಲುವಾದರು. ತಮಗೆ ಹೊಳೆದ ವಿಚಾರಕ್ಕೆ ಖುಷಿಯಾಯಿತು. ತಕ್ಷಣ ಕಾರ್ಯಕರ್ತ ಶ್ರೀಕಾಂತನಿಗೆ ಫೋನ್ ಮಾಡಿ ದಾಕ್ಷಾಯಿಣಿ ಮನೆಯಲ್ಲಿ ಇದ್ದರೆ ಬರೋಕೆ ಹೇಳು ಎಂದು ಕಾಯುತ್ತ ಕುಳಿತರು.
ಆನಂದ . ಕುಂಚನೂರ ಹೊಸ ಕಥಾ ಸಂಕಲನ “ನಿರೂಪ”ದ ಒಂದು ಕತೆ “ನಕ್ಷತ್ರ ದಾನ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

ನಾವಿನಿಂದ ಬಂದಿದಿಳಿದ ಜಯಶ್ರೀ ಮೇಡಂನನ್ನು ನೋಡಿದ ತಕ್ಷಣ, ಅಳು ಒತ್ತರಿಸಿ ಬಂದು ದಾಕ್ಷಾಯಿಣಿ ಅವರ ಕಾಲಿಗೆ ಬಿದ್ದಳು. ಅವರ ಮೇಲಿನ ದ್ವೇಷವೆಲ್ಲ ಕರಗಿ, ಅಪರಾಧಿ ಪ್ರಜ್ಞೆಯಲಿ ತಾನು ಹೀಗೆ ಅಚಾನಕ್ ಕಾಲಿಗೆರಗಿದ್ದು ಸರಿಯೇ ಎಂದು ಒಂದು ಕ್ಷಣ ಅನಿಸಿದರೂ ದಿಕ್ಕುಗೆಟ್ಟ ಅವಳ ಜೀವಕ್ಕೀಗ ಆಸರೆಯೊಂದು ಬೇಕಿತ್ತು; ಜಯಶ್ರೀ ಮೇಡಂ ಅಮ್ಮನಂತೆಯೇ ಕಂಡರು. ಜಯಶ್ರೀ ಮೇಡಂಗೂ ದಾಕ್ಷಾಯಿಣಿ ಬಗ್ಗೆ ಯಾವ ದ್ವೇಷವಾಗಲೀ, ಪ್ರೀತಿಯಾಗಲಿ ಇರಲಿಲ್ಲವಾದರೂ ತನ್ನ ಮತ್ತು ನಿಜಗುಣಿ ನಡುವಿನ ಬಾಂಧವ್ಯ ಹಾಳಾಗಿದ್ದು, ಬೇರೊಬ್ಬನ ಮದುವೆಯಾಗಿ ಊರಿನ ಪ್ರತಿಷ್ಠಿತ ಸಾಹುಕಾರನ ಮನೆಯ ಸೊಸೆಯಾಗಿದ್ದರೂ ನಿಜಗುಣಿಯಂತಹ ಮುಗ್ಧ ಹುಡುಗನನ್ನು ತನ್ನ ಬಲೆಗೆ ಬೀಳಿಸಿಕೊಂಡು ಎಲ್ಲರನ್ನು ಎದುರು ಹಾಕಿಕೊಂಡು ಅವನನ್ನೂ ಮದುವೆಯಾದ ಈ ಹುಡುಗಿ ಬಗ್ಗೆ ಸಣ್ಣ ಕೋಪವೂ, ಕುತೂಹಲವೂ ಇತ್ತು. ಕಾಲಿಗೆ ಬಿದ್ದವಳನ್ನು ಮೆಲ್ಲನೆ ಭುಜ ಎತ್ತಿ ಅಕ್ಕರೆಯಿಂದ ನೋಡಿದರು – ಸಂಜೆಮಲ್ಲಿಗೆಯಂತೆ ಬಾಡಿದ ದುಂಡುಮುಖ, ಬದುಕಿನ ಹತಾಶೆಗಳಲಿ ಬಿಳುಚಿಕೊಂಡ ಕಣ್ಣು, ಸೊರಗಿದ ದೇಹ, ಆದರೂ ಇವಳು ಪ್ರೀತಿಯಲ್ಲಿ ಬಿದ್ದಾಗ ಇದ್ದಿರಬಹುದಾದ ಸೌಂದರ್ಯವನ್ನು ನೆನೆಸಿಕೊಂಡುಹರೆಯದಲ್ಲಿದ್ದ ತನ್ನದೇ ಮುಖ ಇದು ಎನಿಸಿ, ವಾತ್ಸಲ್ಯವುಕ್ಕಿ ಅಪ್ಪಿಕೊಂಡರು. ಇವಳ ಯಾವ ಅಂಶ ನಿಜಗುಣಿಯನ್ನು ಆ ಪರಿ ಕಾಡಿರಬಹುದು ಎಂದು ಮನಸು ಒಂದು ಕ್ಷಣ ಜಿಜ್ಞಾಸೆಗೆ ಬಿದ್ದರೂ, ಸಾವರಿಸಿಕೊಂಡು, ‘ಅಳಬ್ಯಾಡ್ವಾ ಮಗಳs, ಗಟ್ಟಿ ಹೆಣ್ಮಗಳ ಅದಿ ನೀ. ನಿನ್ನ ಧೈರೇದ ಬಗ್ಗೆ ಭಾಳ ಅಭಿಮಾನ ಐತಿ. ನಿಜಗುಣಿನ್ನ ಹುಡಕಾಕ ನಾನೂ ಭಾಳ ಪ್ರಯತ್ನಾ ಮಾಡಾಕತ್ತೀನಿ. ನೋಡೂಣು, ಅಲ್ಲೀತನ ನಿನಗ ನಾ ಇರ್ತನ. ನಿನ್ನ ಮಗಳ ಸಲುವಾಗೇರೆ ನೀ ಧೈರ್ಯಾ ತುಗೋಬೇಕ‘ ಎಂದು ಪೆಚ್ಚುಮೋರೆಯಲ್ಲಿ ನಿಂತಿದ್ದ ರತ್ನಾಕ್ಷಿಯನ್ನೂ ಬಳಿಗೆ ಕರೆದು ಅಪ್ಪಿದರು. ದಾಕ್ಷಾಯಣಿ ನೋಡಿದಳು, ‘ಸಣ್ಣಾಗಿದ್ದಾಗಿಂದಾನೂ ಸಿನಿಮಾದಾಗ ನೋಡಿ ಖುಷಿ ಪಡ್ತಿದ್ದ ಕಲಾವಿದೆ, ಇವತ್ತ ಸಾಕ್ಷಾತ್ ಕಣ್ಮುಂದ ಅದಾರ. ಸ್ವಲ್ಪ ವಯಸ್ಸಾಗೇತೆನ್ನೂದ ಬಿಟ್ರ ಮಾರಿ ಮ್ಯಾಲ ಕಳಾ ಹಂಗ ಐತಿ. ನೋಡಿದ್ರ ನನಗs ಹೊಟ್ಟಿಕಿಚ್ಚ ಆಕ್ಕತಿ. ಅಪ್ಪಗೊಂಡಾಗೂ ಅವ್ರ ಮೈಯಿಂದ ಬಂದ ಘಮಾ, ಆ ಕಕ್ಕುಲಾತಿ, ಜಲಮದಾಗ ಯಾವತ್ತೂ ನೋಡಿಲ್ಲ ಬಿಡ ಯವ್ವಾ! ಇಂಥಾವ್ರನ್ನ ಸುಮ್ಸುಮ್ನ ಶತ್ರುಗತೆ ಕಾಣ್ತಿದ್ನಿ ಇಷ್ಟ ದಿನಾ’ ಎಂದು ಒಳದುಟಿಯನ್ನು ಕಚ್ಚಿಕೊಂಡಳು ಪೆಚ್ಚಾಗಿ.

ಸಮಯ ನೋಡಿಕೊಂಡು, ಮೇಡಂನ ಹಿಂಬಾಲಕ, ಪಕ್ಷದ ಪ್ರಧಾನ ಕಾರ್ಯಕರ್ತ ರಾಜೂ ವಂಕಬಾಂವಿ, ಮೇಡಂ ಕಿವಿಹತ್ತಿರ ಬಂದು, ‘ಮೆಡಮ್ಮ್, ಮದಲs ಊರಾಗ ಪಕ್ಷದ ಪರಿಸ್ಥಿತಿ ಬರಬ್ಬರಿಲ್ಲ. ಅಂಥಾದ್ರಾಗ ಇಂಥ ಅಡತಾರ ಕೇಸೆಲ್ಲಾ ಮೈಮ್ಯಾಲ್ ಹಾಕೋಬ್ಯಾಡ್ರಿ‘ ಎಂದು ಕಿವಿಮಾತು ಹೇಳಲು ಬಂದವನನ್ನು ದೂರ ತಳ್ಳಿ, ‘ನನಗೇನ ಮಾಡಬೇಕೋ ಗೊತ್ತತಿ, ನೀ ಒಂದೀಟ ದೂರ ನಿಂದರ್ರು‘ ಎಂದರು ಸಿಟ್ಟಿನಲಿ. ಈ ವಂಕಬಾಂವಿಗೂ ನಿಜಗುಣಿಗೂ ಆಗಿಬರ್ತಿದ್ದಿಲ್ಲ ಎನ್ನುವುದು ಮೇಡಂಗೆ ಗೊತ್ತಿತ್ತು. ಕಾರ್ಯಕರ್ತರನ್ನು, ಗಾರ್ಡಗಳನ್ನು ಬಿಟ್ಟು ತುಸು ದೂರ ಬಂದು ದಾಕ್ಷಾಯಣಿಯ ಎಲ್ಲ ಕತೆ ಕೇಳಿದ ಮೇಲೆ ಜಯಶ್ರೀ ಮೇಡಂ, ‘ನೋಡು, ಯಾವಾಗ ನೀ ಗಂಡಸರನ್ನ ಸರಿಯಾಗಿ ಎದುರಿಸೂದನ್ನ ಕಲೀತಿಯೋ ಅವತ್ತ ನಿನ್ನೊಳಗಿನ ಖರೆ ಹೆಣ್ಣ ಹೊರಗ ಬರ್ತಾಳ. ನನ್ನ ಇಡೀ ಜೀವನಾನ ಹೋತ, ಈ ಮಾತ ಅರ್ಥಾ ಮಾಡ್ಕೊಳ್ಳಾಕ. ನೀ ಗುರಾಪ್ಪನ ಜೋಡಿ ಹೋಗು. ಅಂವಾ ಏನೇನ್ ಮಾಡ್ತಾನ್ ನೋಡ. ಆದ್ರ ನೀ ಜ್ವಾಕಿಲೆ ಇರ್ಬೇಕ. ಹೊಳ್ಳಿ ಬಂದ್ಮ್ಯಾಲ ನನ್ನಂತೇಕ ಬಾ. ಆಮ್ಯಾಲ ಏನ್ ಮಾಡೋದಂತ ನೋಡೂಣು‘ ಎಂದು ಅಭಯವಿತ್ತು ಕಳಿಸಿದಾಗ ತನ್ನ ಬೆನ್ನಿಗೆ ಈಗ ಪರ್ವತವೇ ಆಸರೆಯಾಗಿ ನಿಂತಂತೆನಿಸಿತು ದಾಕ್ಷಾಯಿಣಿಗೆ.

(ಆನಂದ ಈ. ಕುಂಚನೂರ)

ದಾಕ್ಷಾಯಿಣಿ ಹೋದಮೇಲೆ ಎರಡ್ಮೂರು ದಿನ ಮೇಡಂ ಚಿಂತೆಗೆ ಬಿದ್ದಿದ್ದರು. ಆತ್ಮವಿಮರ್ಶೆಯ ತೆಕ್ಕೆಗೆ ಬಿದ್ದು ಸಮಾಧಾನವಿಲ್ಲದೆ ನರಳಾಡುತ್ತಿದ್ದರು; ಬಳಲಿಕೆಯಲ್ಲಿ ಯಾವ ಕೆಲಸವನ್ನೂ ಮಾಡಲಾಗುತ್ತಿರಲಿಲ್ಲ. ನಿಯೋಜಿತ ಸಭೆ, ಭೇಟಿ, ಪರಿಶೀಲನೆ, ವಿಚಾರಣೆ, ಎಲ್ಲವನ್ನೂ ಬದಿಗೊತ್ತಿದರು. ವೈಯಕ್ತಿಕ ಬದುಕಿನಲ್ಲಿ ತಾವು ಅನುಭವಿಸಿದ ನೋವು, ನಿಂದನೆಗಳೆಲ್ಲ ಸುರುಳಿಯಾಗಿ ಮತ್ತೆ ಹೊಗೆಯಂತೆ ಮೇಲೆದ್ದು ಉಸಿರುಗಟ್ಟಿಸಿದಂತೆನಿಸಿತು. ತಮ್ಮ ಬದುಕಿನಲ್ಲಿ ಯಾವುದೂ ಸುಲಭವಿರಲೇ ಇಲ್ಲ – ಬಾಲ್ಯದಲ್ಲಿನ ನಿಂದನೆ, ಹತಾಶೆ, ಹರೆಯದ ಅಭದ್ರತೆ, ಮದುವೆಯಿಂದ ಮುರಿದ ಕನಸುಗಳು, ಬದುಕು ಕಟ್ಟಿಕೊಳ್ಳಲು ರಂಗಭೂಮಿ, ಸಿನಿಮಾರಂಗದಲ್ಲಿ ಅನುಭವಿಸಿದ ತುಳಿತ, ಅವಮಾನಗಳು.. ಹೀಗೆ ಸಾಲು ಸಾಲು ಕಲ್ಲುಗಳು ತನ್ನ ಮೇಲೆ ಬೀಳುತ್ತಿದ್ದರೂ ಎಲ್ಲವನ್ನೂ ಸಹಿಸುತ್ತಲೇ, ಎದುರಿಸುತ್ತಲೇ ಬಂದೆ. ಮತ್ತೆ ಈಗ, ದೂರದ ತನ್ನೂರಿನಿಂದ ಗೊತ್ತೇ ಇರದ ಈ ಊರಿಗೆ ಬಂದು, ಇಲ್ಲಿನ ಜನಗಳ ವಿಶ್ವಾಸ ಗಳಿಸಿ, ಸೋತು, ಗೆದ್ದು, ಮತ್ತೆ ಸೋತು ಈಗ ಹೀಗೆ ಅಂತರಂಗ ಕೆದಕುತ್ತಿದ್ದೇನೆ. ತನ್ನ ಸ್ವಂತ ಪರಿಶ್ರಮ, ಆತ್ಮವಿಶ್ವಾಸದಿಂದಲೇ ಇದೆಲ್ಲ ಸಾಧ್ಯವಾದದ್ದು ನಿಜ. ಒಮ್ಮೆ ಎಲ್ಲ ತುಳಿತಗಳನ್ನು ಮೆಟ್ಟಿ ನಿಂತು ಬೀಗಿದ ಮೇಲೆ ಮತ್ತೆ ಸೋತು ಅವಮಾನಕ್ಕೊಳಗಾಗುವುದಿದೆಯಲ್ಲ, ಅದಕ್ಕಿಂತ ಹೇಯವಿಲ್ಲ ಎನಿಸಿತು. ಹೌದು, ಜನ ಮೊದಲು ತನ್ನ ಮೇಲಿಟ್ಟಿದ್ದ ವಿಶ್ವಾಸ ಕಡಿಮೆಯಾಗಿದೆ ಎನಿಸಿತು. ಇದಕ್ಕೆ ಆಂತರಿಕ, ಬಾಹ್ಯ ಎರಡೂ ಕಾರಣಗಳಿದ್ದವು. ಮೇಲುನೋಟಕ್ಕೆ ಬರಿಯ ನೇಕಾರಿಕೆಯ ದುಡಿತ ವರ್ಗ ತುಂಬಿರುವ ಸರಳವಾದ ಊರು ಇದು ಎಂದುಕೊಂಡಿದ್ದು, ಬರಬರುತ್ತ ಇಲ್ಲಿನ ಪ್ರತಿಯೊಂದು ಓಣಿ, ಗಲ್ಲಿಗಳಲ್ಲಿ ಓಡಾಡಿದಾಗಲೇ ಇಲ್ಲಿನ ಸಂಕೀರ್ಣತೆ ಅರಿವಾಗಿದ್ದು. ಇಲ್ಲಿನ ಮುಖಗಳಿಗೆ ಬೇರೆಯದೇ ಚಹರೆಗಳಿವೆ. ತಾನು ಇದನ್ನೆಲ್ಲ ಸರಿಯಾಗಿ ಗುರುತಿಸಲಿಲ್ಲವೇನೋ ಎಂದು ತುಂಬ ಸಲ ಅನಿಸಿದ್ದಿದೆ. ಐತಿಹಾಸಿಕವೆನಿಸುವಂತಹ ಕೆಲವು ಕಾರ್ಯಗಳು ತನ್ನಿಂದ ಜರುಗಿವೆ. ಆದರೆ ಅವ್ಯಾವುವೂ ತಾನು ಇಲ್ಲಿನವಳೇ ಆಗಲು ಸಾಲುತ್ತಿಲ್ಲ; ಮೊದಲಿನ ವಿಶ್ವಾಸದಲ್ಲಿ ಮುಂದುವರೆದು ಕೆಲವರ್ಷ ಭದ್ರವಾಗಿ ನೆಲೆಯೂರಬೇಕೆಂದು ಬಯಸಿದ್ದು ಅಷ್ಟು ಸುಲಭವಲ್ಲ ಎನಿಸುತ್ತಿದೆ. ತನ್ನ ಅವಧಿಯಲ್ಲಿ ಆದ, ಜರುಗಿದ, ಮಾಡಿದ ಕೆಲವು ಪ್ರಮಾದಗಳೂ ಸೇರಿ ತಾಳತಪ್ಪಿತ್ತು; ಕಾರ್ಯಕರ್ತರೆಲ್ಲ ನಿಧಾನವಾಗಿ ಚದುರಿ ಹೋಗಿದ್ದರು; ಬೆಂಬಲಕ್ಕೆ ನಿಂತಿದ್ದ ಕೆಲವು ದೊಡ್ಡವರು ವಿರೋಧಿ ಬಣಗಳಲ್ಲಿ ತೂರಿಕೊಂಡರು. ನೀರಿನಿಂದ ಬೆಣ್ಣೆ ತೆಗೆದಿದ್ದಾಗಿತ್ತು; ಒಂದಿಷ್ಟು ತಿಂದೂ ಆಗಿತ್ತು. ಖಾಲಿಯಾದಾಗ ಮತ್ತೆ ಬೆಣ್ಣೆ ತೆಗೆಯಲು ಹರಸಾಹಸ ಮಾಡಬೇಕಿತ್ತು

ರಂಗಭೂಮಿ ದಿನಗಳಿಂದಲೂ ತಾನು ಆರಾಧಿಸಿಕೊಂಡು ಬಂದ ತನ್ನ ನೆಚ್ಚಿನ ಪಾತ್ರ – ಶರ್ಮಿಷ್ಠೆನೆನಪಾದಳು. ಅವಳಿಗಿಂತ ತನ್ನ ಬದುಕು ಭಿನ್ನವಿಲ್ಲ ಎಂತಲೇ ಅವಳ ಪಾತ್ರವನ್ನು ತಾನು ಅಷ್ಟು ಭಾವಪೂರ್ಣವಾಗಿ ಅಭಿನಯಿಸಿ ಎಲ್ಲರಿಂದ ಮೆಚ್ಚುಗೆ ಗಳಿಸಲು ಸಾಧ್ಯವಾದದ್ದು. ಅಸುರಕುಲ ಮಗಳಾದರೂ ತನ್ನ ಮೇಲಿನ ಅಪವಾದಗಳನ್ನು, ಅವಮಾನಗಳನ್ನು ಸಹನೆಯಿಂದ ತಾಳಿಕೊಂಡು ಸಾಧಿಸಿದಳು, ಸಾರ್ಥಕವಾದಳು. ಅವಳ ಪಾತ್ರವೇ ತನ್ನನ್ನೂ ಮುನ್ನಡೆಸಿಕೊಂಡು ಬಂದಿದೆಯೆಂದು ಬಲವಾದ ನಂಬಿಕೆ ಬಂದಿತು. ನಿದ್ರೆಯಿಲ್ಲದೆ ಬಳಲಿಕೆಯಲ್ಲಿ ಅಸಾಧ್ಯ ಆಕಳಿಕೆ ಬರುತ್ತಿದ್ದರೂ ಕಣ್ರೆಪ್ಪೆ ಒಂದನ್ನೊಂದು ತಾಕುತ್ತಿರಲಿಲ್ಲ. ಯಾವಾಗಲೂ ನುಂಗುವ ನಿದ್ದೆ ಗುಳಿಗೆ ಕೂಡ ಈಗೀಗ ಕೆಲಸ ಮಾಡುತ್ತಿಲ್ಲ. ಹೀಗೆ ಎಲ್ಲ ಅಸಂಖ್ಯ ಕಾರ್ಮೋಡಗಳ ಮಧ್ಯೆ ಬೆಳ್ಳಿರೇಖೆಯೊಂದು ಮಿಂಚಿದಂತಾಗಿ ಗೆಲುವಾದರು. ತಮಗೆ ಹೊಳೆದ ವಿಚಾರಕ್ಕೆ ಖುಷಿಯಾಯಿತು. ತಕ್ಷಣ ಕಾರ್ಯಕರ್ತ ಶ್ರೀಕಾಂತನಿಗೆ ಫೋನ್ ಮಾಡಿ ದಾಕ್ಷಾಯಿಣಿ ಮನೆಯಲ್ಲಿ ಇದ್ದರೆ ಬರೋಕೆ ಹೇಳು ಎಂದು ಕಾಯುತ್ತ ಕುಳಿತರು.

ದಾಕ್ಷಾಯಿಣಿ ಮನೆಗೆ ಬಂದಾಗ ಸಂಜೆಯಾಗಿತ್ತು. ಜಯಶ್ರೀ ಮೇಡಂ ತಮ್ಮ ಪ್ರೈವೇಟ್ ಕೋಣೆಗೆ ಕರೆದೊಯ್ದರು. ಒಪ್ಪವಾಗಿ ಬನಹಟ್ಟಿ ಕಾಟನ್ ಸೀರೆಯುಟ್ಟು ಹೊಳೆಯುತ್ತಿದ್ದರು. ನಮ್ಮೂರ ಹೆಂಗಸರೇ ಇಲ್ಲಿನ ಕಾಟನ್ ಸೀರೆ ಉಡುವುದು ಕಡಿಮೆ. ಆದರೆ ಜಯಶ್ರೀ ಮೇಡಂಗೆ ಅದು ಅಚ್ಚುಮೆಚ್ಚು. ಅವರ ಮೇಲೆ ಮತ್ತೊಮ್ಮೆ ಅಭಿಮಾನವುಕ್ಕಿತು ದಾಕ್ಷಾಯಿಣಿಗೆ. ಮನೆಯ ಕೆಲಸದವಳು ಅವಲಕ್ಕಿ ತಂದುಕೊಟ್ಟು ಹೋದಳು. ಮೆತ್ತಗಿನ ಹೂವಿನಂಥ ಅವಲಕ್ಕಿಗೆ ರುಚಿ ಹೆಚ್ಚಿಸುವಂತೆ ಕಲಿಸಿದ ವಗ್ಗರಣೆ, ಹುರಿದ ಶೇಂಗಾ, ಕರಿಬೇವು, ಕೊತ್ತಂಬರಿ, ಮೇಲೆ ಉದುರಿಸಿದ ಹಸಿ ಕೊಬ್ಬರಿಯ ತುರಿ – ಅದನ್ನು ತಂದಿಟ್ಟಾಗಲೇ ಅದರ ಘಮ ಮೂಗನ್ನು ಅಡರಿತ್ತು. ಸಂಕೋಚದಿಂದ ಅದನ್ನು ಬಾಯಿಗಿಟ್ಟಾಗಲಂತೂ ದೊಡ್ಡವರ ಮನೆಯ ಅವಲಕ್ಕಿ ಇದು ಎಂದು ಎಣಿಸಿ, ರತ್ನಾಕ್ಷಿಗೂ ತಿನಿಸಿದಳು. ದಾಕ್ಷಾಯಿಣಿ ಕೊಂಚ ನಿರುಮ್ಮಳವಾಗಿದ್ದುದನ್ನು ನೋಡಿ, ಬಹುಶಃ ಗುರಪ್ಪನ ಜೊತೆ ಅಂಥ ಜಗಳ, ವಾಗ್ವಾದ ಅಥವಾ ಕಹಿಘಟನೆಯೇನೂ ಆಗಿರಲಿಕ್ಕಿಲ್ಲವೆಂದೆನಿಸಿ, ‘ಏನಾಯ್ತವ, ಗುರಪ್ಪನ ಜೋಡಿ ಹೋಗಿದ್ಯಲ್ಲ? ನಿಜಗುಣಿ ಸಿಕ್ಕನ?’ ಎಂದರು ಮೇಡಂ. ‘ಇಲ್ರಿ, ನಮ್ಮ ಮಾಂವ ನಿಜೂನ ಬದ್ದಲ ಸುಳ್ಳ ಹೇಳ್ಯಾನಂತ ಗೊತ್ತಿತ್ತ್ರಿ. ಆದ್ರ ಅವ್ರ ಸಂಬಂಧಿಕ್ ಯಾರೋ ಪೂಜಾ ಅಂತ ಅದಾರ್ರಿ. ಅಕಿರತ್ನಾಕ್ಷಿಗೆ ಕಣ್ಣ ಬರೂವಂಗ ಪುಕ್ಕಟ ಗುಳಿಗಿ ಕೊಡಸ್ತಾರಂತ್ಹೇಳಿ ಕರ್ಕೊಂಡ್ ಹೋಗಿದ್ದರ್ರೀ. ಆ ದೊಡ್ಡ ದಾವಾಖಾನಿ, ನೂರಾ ಎಂಟ್ ಪೇಶಂಟ್, ಡಾಕ್ಟರ್ ನೋಡಿ ದಂಗಾಗಿದ್ನಿರಿ. ಆ ದಾವಾಖಾನ್ಯಾಗಪೂಜಾಂದೊಂದ್ ಸಣ್ಣ ಆಫೀಸ್ ಐತ್ರಿ. ಅಲ್ಲಿ ಕರ್ಕೊಂಡ್ ಹ್ವಾದರ್ರೀ. ಪುಣ್ಯೇಕ, ದೈವ ಚಲೋ ಇತ್ತು. ಅಕಿ ಆಫೀಸ್ ಮುಂದ ಭಾಳ ಮಂದಿ ಕೂಡಿ ಗದ್ದಲ ಎದ್ದಿತ್ರಿ. ಅಕಿ ಭೇಟಿಯಾಗೂ ಪರಿಸ್ಥಿತಿಯೊಳಗ ಇರ್ಲಿಲ್ರಿ. ಇನ್ನೊಮ್ಮೆ ಯಾವಾಗರೇ ಬರ್ರೆಂತ ಹೊಳ್ಳಿ ಕಳಸಿದರ್ರಿ. ಆದ್ರ ಮಾವಾರು ಒಳಗ ಹೋಗಿ ಅಲ್ಲಿ ಸುದ್ದಿ ಎಲ್ಲಾ ತಿಳ್ಕೊಂಡ್ ಬಂದ, ಹೊಳ್ಳಿ ಬರುವಾಗ ಹೇಳಿದರ್ರೀಪೂಜಾನ ಕಡೆ ಹಿಂಗ ಪುಕ್ಕಟ ಗುಳಿಗಿ ತುಗೊಂಡ ಹೋದಾವ್ರಿಗೆ ಏನೇನೋ ಸೈಡ್ ಎಫೆಕ್ಟಾಗಿ ಭಾಳ ದೀರ್ಘಕ್ಕ ಹೋಗಿತ್ತಂತ್ರಿ. ಅದಕ್ಕ ಅವರ ಕಡೆ ಸಂಬಂಧಿಕ್ರು ಜಗಳಾ ತಗದಿದ್ರಂತ. ಮತ್ತ ಹಿಂಗೆಲ್ಲಾ ಮಾಡೂದ ತಪ್ಪಲ್ಲನ್ರಿ ಮಾವಾರ ಅಂದ್ರ, ಏನಿಲ್ಲವಾ, ಇದರಿಂದ ಭಾಳ ಮಂದಿಗಿ ಉಪ್ಯೋಗ ಆಗೇತಿ. ಆದ್ರ ಒಂದಿಬ್ರಿಗಿ ಹಿಂಗಾಗೂದ sಜೀಕ ಐತಿ. ಮಂದಿಗಿ ಚಲೋ ಮಾಡಾಕ್ ಹ್ವಾದ್ರ ಹಿಂಗs ನೋಡ್ವಾ, ಅಂದ್ರು‘.

‘ಹೌದಾ, ಪೂಜಾ ಏನದಾಳು? ಡಾಕ್ಟರಾ?’.

ಇಲ್ರಿ, ಅಕಿ ಮೊದಲ ನರ್ಸಾಗಿದಾವಾಖಾನಿಗೆ ಹ್ವಾದಕ್ಕಿ. ಹಿಂಗ ಅಲ್ಲಿ ಒಬ್ಬ ಡಾಕ್ಟರಿಗೆ ಪುಕ್ಕಟ ಗುಳಿಗಿ ಕೊಡು ಯೋಜನಾದಾಗ ಪೇಶಂಟ್ ಸಿಗವಲ್ಲು ಆಗಿದ್ದುವಂತ್ರಿ. ಆಗ ಇಕಿ ತನ್ನ ಊರಿನ ಕಡೆ ಒಂದಿಬ್ರನ್ನ ತಂದ ಹಚ್ಚಿದ್ಲಂತ್ರಿ. ಆಗಿಂದ ದಾವಾಖಾನ್ಯಾಗ ಇಂಥ ಯೋಜನಾದಾಗ ಪೇಶಂಟ್ ಹುಡಿಕ್ಕೊಂಡ್ ಬರೂ ಕೆಲಸಾ ಇಕಿಗೆ ಬಂತಂತ್ರಿ. ಒಂದೊಂದ್ ಪೇಶಂಟ್ ಹಿಡ್ಕೊಂಡ್ ಬಂದ್ರ ಇಂತಿಷ್ಟ ಕಮಿಷನ್ ರೊಕ್ಕಾ ಕೊಡ್ತಾರ್ರಿ. ಇಕಿ ಬರ್ಬರ್ತ ಇದs ಧಂಧೆಕಿಳದು ನರ್ಸ್ ಕೆಲಸಾ ಬಿಟ್ಟು, ಈಗ ಅಕಿದs ಒಂದ್ ಆಫೀಸ್ ಮಾಡ್ಕೊಂಡದಾಳ್ರಿ‘.

ಹ್ಮ್ಮ.. ಇದೇನೋ ದೊಡ್ಡ ಧಂಧೆನ ಇದ್ದಂಗ ಕಾಣ್ತತಿ. ನಿನ್ನ ಮಾವನೂ ಇದ್ರಾಗ ಕಮಿಷನ್ ಹೊಡ್ಕೊಳ್ಳಾಕ ಇದೆಲ್ಲಾ ಮಾಡಾಕತ್ಯಾನು. ನೀ ಇನ್ನ ಅವ್ನಿಂದ ದೂರ ಇದ್ದಬಿಡ. ನಿನ್ನ ಮನೀಗೂ ಹೋಗೂದ್ ಬ್ಯಾಡ’.

‘ಮತ್ತ, ಇನ್ನೆಲ್ಲಿ ಹೋಗ್ಲಿರಿ ನಾ?’ ದಾಕ್ಷಾಯಿಣಿ ದಿಗಿಲುಗೊಂಡಳು.

‘ಅಯ್ಯ ಹುಚ್ಚ ಹುಡಗಿ, ನೀ ಇಲ್ಲೇ ನನ್ನ ಜೋಡಿನ ಇರ. ನೀ ಏನ್ ವಜ್ಜ್ಯಾಗೂದಿಲ್ಲ ನನಗ. ನಿಮ್ಮವ್ವಂತ ತಿಳ್ಕೊ ನನ್ನ’ ಎಂದಾಗ ದಾಕ್ಷಾಯಿಣಿ ಕಣ್ಣಲ್ಲಿ ನೀರು ತುಂಬಿಕೊಂಡು ಮತ್ತೊಮ್ಮೆ ಕಾಲಿಗೆರಗಿದಳು. ಜಯಶ್ರೀ ಮೇಡಂ ತಳಮಳಕ್ಕೂ ಈಗ ಸಮಾಧಾನ ಸಿಕ್ಕಿತ್ತು. ಆದರೆ ವಂಕಬಾಂವಿ ರಾಜೂಗೆ ಈ ಎಲ್ಲ ಬೆಳವಣಿಗೆಯ ಹಿಂದಿನ ಹಕೀಕತ್ ಪೂರಾ ಅಲ್ಲದಿದ್ರೂ ಸೊಸೊಲ್ಪ ಮಾತ್ರ ಗೋಚರವಾಗಿತ್ತು, ಮತ್ತು ಮುಂದಿನ ಖಾರಬಾರಕ್ಕೆ ಇಷ್ಟು ಸಾಕಿತ್ತು.

ಅದೇನಪ್ಪಾ ಅಂದರೆ ಊರಲ್ಲಿ ನೇಕಾರಿಕೆಯ ಒಂದು ಜಾತಿಯ ಜನ ತಮ್ಮ ಸಮಾಜದ ವ್ಯಕ್ತಿ ನಾಯಕನಾಗಬೇಕು, ಅಂದಾಗ ಮಾತ್ರ ಅವನು ನಮ್ಮ ಸಮಾಜದ ಸಮಸ್ಯೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ನಮ್ಮವರನ್ನು ಮೇಲೆತ್ತಲು ಸಾಧ್ಯ. ಇಷ್ಟು ವರ್ಷ ಯಾರ್ಯಾರಿಗೋ ಕಣ್ಮುಚ್ಚಿಕೊಂಡು ವೋಟು ಹಾಕಿ ಗೆಲ್ಲಿಸಿದ್ದಾಯ್ತು, ಆದರೆ ಅವರಿಂದ ನಮ್ಮ ಸಮಾಜಕ್ಕೆ ಏನೂ ಆಗಿಲ್ಲ. ಈಗ ಬದಲಾವಣೆಯ ಸಮಯ ಬಂದಿದೆಯೆಂದು ಸುದ್ದಿ ಸದ್ದಿಲ್ಲದೇ ಹದ್ದಿನಂತೆ ಅಗಲ ರೆಕ್ಕೆ ಬಿಚ್ಚಿ ಎಲ್ಲರ ಬುದ್ಧಿಯಮೇಲೆ ಕವಿಯಿತು. ಹಾಗಾಗಿ ಸಣ್ಣ ಸಣ್ಣ ಕಾರ್ಯಕರ್ತ ಕೂಡ ರಾಜಕೀಯ ಅರೆದು ಕುಡಿದವರಂತೆ ಮಾತನಾಡತೊಡಗಿದ. ಜಯಶ್ರೀ ಮೇಡಂಗೆ ಈ ವಾಸನೆ ಮೊದಲೇ ಬಡಿದಿತ್ತು. ಈಗವರು ತಮ್ಮ ಆಟ ಏನಿದ್ದರೂ ತೆರೆಯ ಹಿಂದೆ ಆಡಬೇಕಿತ್ತು. ಅದಕ್ಕೊಬ್ಬ ಪಾತ್ರಧಾರಿ ಬೇಕಿತ್ತು. ತಮ್ಮ ಬಳಗದಲ್ಲಿ ರಾಜೂ, ಮುದೆನೂರ ಬಸವಣ್ಣಿ ಮತ್ತು ಘಟನಟ್ಟಿ ಶಿವಶಂಕರ್ ಅವರಿಗೆ ಆ ಅವಕಾಶ ಇತ್ತು. ಆದರೆ ಅವರು ಪಕ್ಷ ಬಲಪಡಿಸಲು ಹಣ, ಹೆಂಡ, ಗುಟಖಾ, ಮಾವಾ, ಮುಂತಾದವುಗಳ ಅಗತ್ಯವಿದೆಯೆಂದೂ, ಅದಕ್ಕೆಲ್ಲ ನೀವು ಕೈಬಿಚ್ಚಿ ಹಣ ಕೊಡಬೇಕೆಂದು ಮೇಡಂನನ್ನು ಒತ್ತಾಯಿಸುತ್ತಿದ್ದುದರಿಂದ, ಮೇಡಂಗೆ ಪರ್ಯಾಯ ದಾರಿ ಹುಡುಕುವುದು ಅನಿವಾರ್ಯವಾಗಿತ್ತು. ಅಲ್ಲಿಗೆ ಸರಿಯಾಗಿ ದಾಕ್ಷಾಯಿಣಿಯ ಆಗಮನವಾಗಿತ್ತು.

ದಿನಗಳೆದಂತೆ ಮೇಡಂ ಮತ್ತು ದಾಕ್ಷಾಯಿಣಿಯ ಒಡನಾಟ, ಅವರ ಮಾತುಗಳು, ಸಲಿಗೆ ಎಲ್ಲವೂ ಅಲ್ಲಿದ್ದ ಮಿಕ್ಕವರಿಗೆ ದಿನಕ್ಕೊಂದೊಂದು ಸಂದೇಶ ರವಾನಿಸುತ್ತಿದ್ದವು. ದಾಕ್ಷಾಯಿಣಿಯ ಮಾವ ಗುರಪ್ಪನಿಗೆ ಇದೆಲ್ಲ ಕನಸಿನಲ್ಲಿಯೂ ಎನಿಸಿರದಂಥ ಆಶ್ಚರ್ಯವನ್ನುಂಟುಮಾಡಿತಲ್ಲದೆ, ಇನ್ನು ತನ್ನ ಆಟದ ಪರಿಧಿಗೆ ಇವಳು ನಿಲುಕುವವಳಲ್ಲ ಎಂದು ಅನಿಸಿತು. ಬಣ್ಣದ ಮನೆಯ ಮಲ್ಲೇಶಪ್ಪನಿಗೆ ಈ ಬೆಳವಣಿಗೆ ಹಾಲುಗ್ಗಿ ಉಂಡಷ್ಟು ಖುಷಿ ಕೊಟ್ಟಿತ್ತು. ಅವನಿಗೆ ರಾಜಕೀಯದಲ್ಲಿ ಆಗಾಗ ಸಿಗುವ ಇಂಥ ತಿರುವುಗಳು ಒಂಥರಾ ಮಜಾ ಕೊಡುತ್ತಿದ್ದವು. ಅಲ್ಲದೆ ಇಲ್ಲಿ ಅನಭಿಷಕ್ತರಂತೆ ಮೆರೆಯುವ ಕೆಲವರ ಕುಂಡಿಗೆ ಮುಳ್ಳು ಚುಚ್ಚುವಂತಹ ಕೆಲಸ ಪ್ರಾರಂಭವಾಗಿದೆ ಎಂದು ನೆನೆದುಕೊಂಡೇ ಸಂತೋಷ ಪಡುತ್ತಿದ್ದ. ಆಗಾಗ ಅತೀವ ಮತ್ತಿನಲ್ಲಿ ತೇಲಾಡುತ್ತಿದ್ದ ಮಲ್ಲೇಶಿಗೆ, ಜಯಶ್ರೀ ಮೇಡಂ ದಾಕ್ಷಾಯಿಣಿಗೆ ಹೊಸಲೋಕವೊಂದನ್ನು ಸೃಷ್ಟಿಮಾಡಿ, ಅಲ್ಲಿ ಅವಳಿಗೆ ಬೇಕಾದ ಮುತ್ತು, ರತ್ನ, ವೈಢೂರ್ಯಗಳ ನಕ್ಷತ್ರ ರಾಶಿಯನ್ನೇ ಸುರಿದು ಕೊಟ್ಟಂತೆ ಹಗಲುಗನಸು ಬಿದ್ದು ವಿಚಿತ್ರ ಸುಖದಲ್ಲಿ ಹೊರಳಾಡುತ್ತಿದ್ದ.

ಕಾಯದವರು

ಎಂದಿನಂತೆ ಗುರುವಾರದೊಂದು ದಿನ ದಾಕ್ಷಾಯಿಣಿ ಕತ್ತಲಾದಮೇಲೆ ಕಾಡಸಿದ್ಧೇಶ್ವರನ ಗುಡಿಗೆ ಬಂದಳು. ಕಾಡಪ್ಪನ ಗುಡಿ ಮುಂದೆ ಪಾದಗಟ್ಟಿ ಸಮೀಪ ಭಿಕ್ಷೆಗೆ ಕೂರುತ್ತಿದ್ದ ಒಂದು ಮುದುಕಿ – ದಾಕ್ಷಾಯಿಣಿ ಇವಳನ್ನು ಮಾತಾಡಿಸದೆ, ಅವಳಿಗೆ ಐದೋ-ಹತ್ತೋ ರೂಪಾಯಿ ಕೊಡದೇ ಮುಂದೆ ಹೋಗುತ್ತಿರಲಿಲ್ಲ. ಆ ಮುದುಕಿಗೆ ಬಹುಶಃ ಬುದ್ಧಿ ಭ್ರಮಣೆಗೊಳಪಟ್ಟು ಬಹಳ ವರ್ಷಗಳಾಗಿರಬೇಕು – ಅವಳಿಗೆ ಯಾರಾದರೂ ರೊಕ್ಕ ಕೊಟ್ಟರೆ ನಕ್ಕು ಯಾವಾಗಲೂ ಒಂದೇ ಮಾತು ಹೇಳುತ್ತಿದ್ದಳು, ‘ಮಳಿ ನೀರಿಂದ ಅನ್ನಾ ಮಾಡ್ರಿ, ಹೊಳಿ ನೀರ್ಲೆ ಖಾರಬ್ಯಾಳಿ ಮಾಡ್ಕೊಂಡ್ ಉಣ್ರಿ; ಹತ್ತೀಲೆ ಬತ್ತಿ ಮಾಡ್ರಿ, ನೆನಪ್ಲೆ ಬಾನಾ ಹಿಡೀರಿ; ಬ್ಯಾರೆ ಬ್ಯಾರೆ ಯಾವತ್ತೂ ಮಾಡಬ್ಯಾಡ್ರಿ’. ಅವಳ ಹೆಸರು, ಊರು, ಇತಿಹಾಸ ಯಾರಿಗೂ ಗೊತ್ತಿಲ್ಲದಿದ್ದರೂ ದಾಕ್ಷಾಯಿಣಿಗೆ ಅವಳನ್ನು ಕಾಣುವುದೆಂದರೆ ಹಿಗ್ಗು, ಸಮಾಧಾನ. ಅದೂ ಅಲ್ಲದೆ ಮುದುಕಿ ಅವಳ ಮಾತು ಹೇಳಿದ ಕೂಡಲೇ ರತ್ನಾಕ್ಷಿ ಕಿಸಕ್ಕನೆ ನಕ್ಕುಬಿಡುತ್ತಿದ್ದಳು. ಅವಳಿಗೆ ಏನು ಅರ್ಥವಾಗುತ್ತಿತ್ತೋ ಗೊತ್ತಿಲ್ಲ. ಆದರೆ ದಾಕ್ಷಾಯಿಣಿಗೆ ಮಾತ್ರ ‘ಹತ್ತೀಲೆ ಬತ್ತಿ ಮಾಡ್ರಿ’ ಎಂದು ಆ ಮುದುಕಿ ಹೇಳಿದ ಮಾತೇ ಒತ್ತಿ ಒತ್ತಿ ಕಾಡುತ್ತಿತ್ತು. ಹತ್ತಿ, ನೂಲು, ಸೀರೆ, ಹಣತೆ, ಬತ್ತಿ ಯಾವುದೂ ಸುಲಭಕ್ಕೆ ಬಿಡಿಸಲಾಗುತ್ತಿಲ್ಲವಲ್ಲ, ಆ ಮುದುಕಿ ಹೇಳಿದ್ರಾಗೂ ಏನೋ ಅರ್ಥವಿರಬೇಕು ಎಂದು ಮೆಟ್ಟಿಲು ಹತ್ತಿ ಗುಡಿಯ ಹತ್ತಿರ ಬಂದಳು. ಕತ್ತಲೆಯೆಂದು ಭಾವಿಸಿ ಬಂದರೂ ಹುಣ್ಣಿಮೆಯ ಹಾಲು ಬೆಳಕು ಎಲ್ಲೆಡೆ ಹರಡಿ ಪರಿಸರವನ್ನು ಶೃಂಗಾರಗೊಳಿಸಿತ್ತು.

ಕಾಡಪ್ಪನ ಗುಡಿ ಮುಂದೆ ಪ್ರತಿದಿನ ಸಂಜೆ ಒಂದಿಷ್ಟು ಇಳಿವಯಸ್ಸಿನ ಹಿರಿಯರ ಸಂಗಮವಾಗುತ್ತಿತ್ತು. ಗುಡ್ಡದ ಮೇಲಿರುವ ಕಾಡಪ್ಪನ ಗುಡಿಯ ಮುಂದಿನ ಅಂಗಳದಲ್ಲಿ ಇವರು ಬಂದು ಸೇರುವಲ್ಲಿಗೆ ಸೂರ್ಯ ಊರಿಗೆಲ್ಲ ಕಿತ್ತಳೆಯ ರಂಗು ಹಾಸಿ, ಗುಂಗು ಹಿಡಿಸಿ ಗುಡಿಯ ಹಿಂದೆಲ್ಲೋ ಮರೆಯಾಗಿರುತ್ತಿದ್ದ; ಕೆಳಗೆ ಹಳ್ಳದ ಮೇಲಿಂದ ಹಾರಿ ಬರುವ ತಂಗಾಳಿ ಮೈ ಮನಸ್ಸನ್ನು ಇನ್ನಷ್ಟು ಹಗುರ ಮಾಡುತ್ತಿತ್ತು. ಗುಡಿಗೆ ಬರುವ ಇತರ ಮಂದಿ ತಮ್ಮ ಪಾಡಿಗೆ ತಾವು ನಮಸ್ಕಾರ ಮಾಡಿ ಈ ಗುಂಪಿನತ್ತ ವಾರೆನೋಟ ಬೀರಿ ಹೋಗುತ್ತಿದ್ದರು. ಇನ್ನು ಕೆಲವರು ಕುತೂಹಲದಿಂದ ಬೆಂಚಿನ ಮೇಲೆ ಕುಳಿತು ಇವರ ಚರ್ಚೆಯನ್ನು ಆಲಿಸುತ್ತಿದ್ದರು. ಈ ಚರ್ಚೆಗಳು ಆಧ್ಯಾತ್ಮ, ರಾಜಕೀಯ, ಬದಲಾದ ಜೀವನಶೈಲಿ, ಬನಹಟ್ಟಿಯ ತಮ್ಮ ಹಳೆಯ ದಿನಗಳು, ಬದಲಾದ ಊರಿನ ಪರಿಸ್ಥಿತಿ, ಮುಂತಾದವನ್ನು ಕುರಿತು ಇರುತ್ತಿದ್ದವು. ಇವರಲ್ಲಿ ಹಳೆಯ ಸಾಹುಕಾರ ಹುಲಿಗಳು, ಮಾಸ್ತರರು, ಕಲಾವಿದರು, ಮೇಸ್ತ್ರಿ, ರಿಟೈರ್ಡ್ ಬ್ಯಾಂಕ್ ಮ್ಯಾನೇಜರ್, ಹೀಗೆ ವಿವಿಧ ಕ್ಷೇತ್ರಗಳವರು ಇದ್ದರು. ಏಳೆಂಟು ಜನರ ಈ ಗುಂಪಿನ ಒಟ್ಟು ಅಂದಾಜು ವಯಸ್ಸು ಐದುನೂರಕ್ಕೂ ಮೀರಿ ಇರಬಹುದು. ಈ ಊರಿನ ಅ ಆ ಇ ಈ ಇಂದ ಹಿಡಿದು ಅಂ ಅಹಃ ಮುಗಿಸಿ, ಹ ಳ ಕ್ಷ ಜ್ಞ ತನಕ ಎಲ್ಲಾ ಗೊತ್ತಿದ್ದುದರಿಂದ ಇವರ ಮಾತುಗಳು ಎಂಥವರನ್ನೂ ಆಕರ್ಷಿಸುತ್ತಿದ್ದವು. ಈ ಒಂದು ತಾಸಿನ ಮಾತುಕತೆ ಬಿಟ್ಟರೆ ಇವರು ಸೇರುತ್ತಿದ್ದುದು ಮತ್ತೆ ಮರುದಿನ ಸಂಜೆ ಸಮಯಕ್ಕೇ.

ಅಪ್ಪಣ್ಣೆಪ್ಪ ಮಾಸ್ತರರು ಅವತ್ತೂ ಹೀಗೇ ತಮ್ಮಎಂದಿನ ಏರುದನಿಯಲ್ಲಿ ಮಾತಾಡುತ್ತಿದ್ದರು; ಅವರಿಗೆ ಊರಿನಲ್ಲಾಗುತ್ತಿರುವ ಇತ್ತೀಚಿನ ಪಲ್ಲಟಗಳು ಮನಸ್ಸನ್ನು ಘಾಸಿಗೊಳಿಸಿದ್ದವು – ‘ಪೂರ್ತಿ ಕಾಡು ತುಂಬಿದ್ದ ಬನಟ್ಟಿನ ಬೋಳಿಸಿದವರ್ಯಾರು? ಬರೇ ಬಣ್ಣದಿಂದ ತುಂಬಿದ್ದ ಊರೊಳಗ ಬ್ಯಾರೆ ಬ್ಯಾರೆ ಬಣಗಳನ್ನ ಸೃಷ್ಟಿ ಮಾಡಿದ್ಯಾರು? ನೇಕಾರ್ರ- ಸಾವಕಾರ್ರ ಬಣ, ಮತ್ತದರಾಗ ಹಿಂದೂ-ಮುಸಲೀಂ, ಕುರುಹಿನಶೆಟ್ಟಿ-ಹಟಗಾರ, ಮರಾಠಿ-ಮಾರ್ವಾಡಿ, ಇತ್ತಿತ್ಲಾಗ ರಾಜಕೀಯ ಮಂದಿ ಬೆನ್ನತ್ತಿ ಅವರವರ ನಾಯಕ್ರನ್ನ ಬೆಂಬಲಿಸು ಬಣಗೊಳು, ಎಲ್ಲ ಕೂಡಿ ಈ ಊರನ್ನ ಮುಕ್ಕಿ ವಾಣಿಜ್ಯ ತ್ಯಾಜ್ಯ ಕೇಂದ್ರ ಮಾಡ್ಯಾವು. ನೇಕಾರ ಅನ್ನಾವ ಬೇಕಾರ ಆಗ್ಯಾನ; ಮಗ್ಗ ಅನ್ನೂವು ಕುಣಿಕಿ ಹಗ್ಗ ಆಗ್ಯಾವ’. ಮಾಸ್ತರರ ಓಣಿಯಲ್ಲಿನ ಕೈಮಗ್ಗದ ನೇಕಾರ ಸನ್ಮಣಿ ಸೂರ್ಯಾ ತನ್ನ ಆರ್ಥಿಕ ಸಮಸ್ಯೆ ನೀಗಿಸಿಕೊಳ್ಳಲಾರದೆ ಊರ್ಲು ಹಾಕಿಕೊಂಡಿದ್ದು ಅವರನ್ನು ಕಂಗೆಡಿಸಿತ್ತು. ಅವರ ಕೈಯಲ್ಲಿ ಕಲಿತ ಹುಡುಗ; ತನ್ನ ಮನೆಯ ಪರಿಸ್ಥಿತಿ ನಾಜೂಕಾಗಿದ್ದಕ್ಕೆ ಏಳನೆತ್ತೆವರೆಗೆ ಕಲಿತು ಶಾಲೆ ಬಿಟ್ಟು ಕೈಮಗ್ಗ ನೇಯಲು ಶುರುಮಾಡಿದ್ದ. ಕಲಿಯೋದ್ರಲ್ಲಿ ಅಂಥ ಹುಷಾರಿಲ್ಲದಿದ್ದರೂ ಮಾಸ್ತರನ ಕಂಡರೆ ಎಲ್ಲಿಲ್ಲದ ಪ್ರೀತಿ, ಗೌರವ. ‘ಅಂವ ಜೀವ್ಮಾನ ಪೂರ್ತಿ ಬಿಳಿ ಅರಿಬಿನs ನೇದ, ಆದ್ರ ಅವನ ಬದಕ ಮಾತ್ರ ಸ್ವಚ್ಚಾಗ್ಲಿಲ್ಲ’ ಎಂದು ಮಾಸ್ತರರು ಬೇಸರಿಸಿಕೊಂಡರು.

ಹೌದ್ರಿ ಮಾಸ್ತರ, ಮ್ಯಾಲ್ನೋಟಕ್ಕ ಇದೊಂದ ಉದ್ಯಮಾ ಐತಿ, ಇಲ್ಲಿ ರೊಕ್ಕ ಭಾಳ ಹರದ್ಯಾಡತತಿ ಅಂತ ಹೊರಗಿನ ಮಂದಿ ಅನ್ಕೊಂಡಾರ. ಮದಲ ಮೂವತ್ತೈದ ನಲವತ್ತ ಸಾವಿರಗಟ್ಲೆ ಮಗ್ಗಿದ್ದೂ ಊರಾಗ. ಈಗ ಎಲ್ಲಾ ಹಾಳಾಗಿ ಈಗೊಂದ್ ಯೋಳೆಂಟ ಸಾವಿರ ಉಳ್ದಿರಬೇಕಷ್ಟ‘ ಎಂದು ಸೇರಿಸಿದರು ಕಾಗತಿ ಶ್ರೀಶೈಲಪ್ಪ.

ಅದಕ್ಕೆ ಪ್ರತಿಯಾಗಿ ಮಾಸ್ತರರು, ‘ಈ ಊರನ್ನ ಉತ್ತರ ಕರ್ನಾಟಕದ ಮ್ಯಾಂಚೆಸ್ಟರ್ ಅಂತ ಕರಿಯೂದು, ಜವಳಿ ಪಾರ್ಕ್ ಮಾಡ್ತನನ್ನೂದು, ನೇಕಾರಿಗೆ ಪಿಂಚಣಿ ಸೌಲತ್ತ ಕೊಡ್ತನನ್ನೂದು, ಅವರ ಸಾಲಾ ಮನ್ನಾ ಮಾಡ್ತನನ್ನೂದು.. ಇವೆಲ್ಲಾ ಬರೇ ಕಣ್ಣೊರಸೂ ಮಾತs ಆದೂ. ಮಗ್ಗದಾಗ ಈಗ ಮೊದಲಿನ ಉಲುವು ಇಲ್ಲ. ನನಗ ತಿಳಧಾಂಗ, ಮದಲ ನಮ್ಮೆಲ್ಲಾರ ಮಗ್ಗದ ಸಪ್ಪಳ ಒಂದs ಆಗಬೇಕ; ಧ್ವನಿ ಒಂದs ಆಗಬೇಕ; ಆಮ್ಯಾಲ ಅದು ಮುಟ್ಟಬೇಕಾದವ್ರಿಗೆ ಮುಟ್ಟಬೇಕ. ಅದಕ್ಕ ಸರಿಯಾದ ಸಂಘಟನಾ ಬೇಕ. ಮಾನಾ ಮುಚ್ಚಾವ್ಗ ಮರ್ಯಾದೇನ ಇಲ್ದಹಂಗ ಆಗೇತಿ’.

ಈ ಕೂಟ, ಮತ್ತವರ ಸಂಭಾಷಣೆ ಮುಂತಾದವನೆಲ್ಲ ಕತ್ತಲಲ್ಲಿ ಒಂದು ಮೂಲೆಯಲ್ಲಿ ಕುಳಿತು ಸಾದ್ಯಂತ ಕೇಳಿಸಿಕೊಳ್ಳುತ್ತಿದ್ದ ದಾಕ್ಷಾಯಿಣಿಗೆ ಬೇರೆಯದೇ ಯೋಚನೆ ಹೊಳೆದು ಆತ್ಮ ಝಗ್ಗನೆದ್ದು ಬೆಳಗಿತು.

*****

ಸೂರ್ಯ ಹುಟ್ಟೋಕು ಹದನಿಪ್ಪತ್ತು ನಿಮಿಷ ಮೊದಲು, ಆಕಾಶ ತನ್ನ ಕಣ್ಣ ಕಾಡಿಗೆಯನು ಒರೆಸಿಕೊಳ್ಳುವ ಸಮಯ. ಹೊಳೆ ದಂಡೆಯ ಬದುವಿನ ಮೇಲೆ ಲೋಕಕೆ ಬಾಯಿಬರುವ ಮುನ್ನ, ಕಾಮಗಾರಿ ಅರ್ಧಕ್ಕೆ ನಿಂತ ಮಹಿಷವಾಡಗಿ ಪೂಲ್ ನ ದೊಡ್ಡ ದೊಡ್ಡ ಸಿಮೆಂಟ್ ಪೈಪುಗಳ ಮೇಲೆ ಈಗ ತಾನೇ ಬಂದಿಳಿದ ಬೆಳ್ಳಕ್ಕಿಗಳೆರಡು, ‘ನಾ ಬೆಳ್ಳಗೋ, ನೀ ಬೆಳ್ಳಗೋ‘ ಎಂದು ಜಗಳವಾಡುತ್ತಿದ್ದವು. ನಿಜಗುಣಿ ಕಾಣಿಸಿದ ಕೂಡ್ಲೇ ಗಪ್ ಚಿಪ್ಪಾಗಿ ಪಿಸುವಾಡತೊಡಗಿದವು

ಕಾಡಪ್ಪನ ಗುಡ್ಯಾಗ ಬಾಬೂ ಯಡಗಾಲ ಪೇಂಟರ್ ಕೈಲಾಸಾದಾಗ ಶಿವಾ-ಪಾರ್ವತಿ ಕುಟುಂಬ ಸಮೇತ ಕುಂತಿದ್ದ ಚಿತ್ರ ಬಿಡಿಸಿದ್ದ. ಬರ್ಬರ್ತ ಶಿವನ ಮುಖಾನಿಜಗುಣಿಗತೇನ ಕಾಣಾಕತ್ತಿತ್ತಂತ; ಗುಡಿ ಸುತ್ತಹಾಕಾವ್ರುಚಿತ್ರಾ ನೋಡ್ಕೋತ ಮಳ್ಳಾಗಿ ನಿಂತಬಿಡ್ತಿದ್ರಂತ‘.

‘ಹೌದ, ಹ್ವಾದ ಹೋಳಿ ಹುಣಿವಿಗೆ ಕಾಮಣ್ಣನ ಮೂರ್ತಿ ಮಾಡಿದ್ರ, ಚೌತ್ಯಾಗ ಗಣಾಪ್ಪನ ಕುಂಡ್ಸಿದ್ರ ಎಲ್ಲಾದ್ರಾಗೂ ಅವನs ಕಾಣ್ತಿದ್ದಂತ‘.

ಏನೋಪ್ಪಾ, ಮೊನ್ನೆ ಸಿದ್ಧಪ್ಪ ಸಾವ್ಕಾರು ಶ್ರೀಶೈಲಕ್ಕ ನಡ್ಕೋತ ಹೋದಾಗ ಭೀಮನ ಕೊಳ್ಳಾ ಇಳದು, ಹತ್ತಿ ಮ್ಯಾಲ ಕೈಲಾಸ ಬಾಗಲಕ್ಕ ಬರೂದ್ರಾಗ ಅಲ್ಲೇ ಮಲ್ಲಯ್ಯನ ಕಂಬಿ ಹಿಡ್ಕೊಂಡ್ ನಿಂತ ದರ್ಶನಾ ಕೊಟ್ಟಂತ. ‘ಏ ತಮ್ಮಾ, ನಿಜಗುಣಿ ಅಲ್ಲನ ನೀ’ ಅಂತ ಕೇಳಾಕ ಹೋಗುದ್ರೊಳಗ ರೂಪಾ ಬದಲಿಸಿದ್ದಂತ‘.

ಹ್ಮೂ, ಅಷ್ಟ ಅಲ್ಲ, ಅಲಾಬ್ ದೇವ್ರ ಕುಣಿತದಾಗೂ ಅಂವ ನವಿಲಿನ ವೇಷ ಹಾಕೊಂಡ್ ಬಂದ್ ಕುಣದಿದ್ದಂತ. ನೋಡಿದಾವ್ರ ಯಾರಂದ್ರ ಯಾರಿಗೂ ಗೊತ್ತಿಲ್ಲ. ಆದ್ರ ಕುಣದಾ ಅಂತ ಎಲ್ಲಾರೂ ಹೇಳ್ತಾರ‘.

ಹಂಗಂದ್ರ ನಿಜಗುಣಿ ತನ್ನ ಆತ್ಮದ ರೂಪಾ ಬಿಟ್ಟ ನಿಜರೂಪಾ ತೋರ್ಸಾಕ್ ಬಂದಾನೋ… ಇನ್ನ ನಮ್ಮನ ಕಾಡಪ್ಪನ ಕಾಯಬೇಕ..’

‘ನಿಜರೂಪ ಅಲ್ಲಲೇ ಅದ, ಅಂವ ನಿರೂಪ ಆಗ್ಯಾನ‘.

ಹಂಗಂದ್ರ?’

ಹತ್ತೀಲೆ ಬತ್ತಿ ಮಾಡ್ರಿ, ನೆನಪ್ಲೆ ಬಾನಾ ಹಿಡೀರಿ; ಬ್ಯಾರೆ ಬ್ಯಾರೆ ಯಾವತ್ತೂ ಮಾಡಬ್ಯಾಡ್ರಿ’

(ಕೃತಿ: ನಿರೂಪ (ಕಥಾಸಂಕಲನ), ಲೇಖಕರು: ಆನಂದ ಈ. ಕುಂಚನೂರ, ಪ್ರಕಾಶಕರು: ಜ್ಯೋತಿರ್ಮಯಿ ಪ್ರಕಾಶನ, ಬೆಲೆ: 150/-)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ