ಇಪ್ಪತ್ತೊಂದನೇ ಶತಮಾನದ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಎಲ್ಲ ನಾಡುಗಳಂತೆ ನಮ್ಮ ಕನ್ನಡ ನಾಡು ಸಹ ಬದಲಾಗುತ್ತಿದೆ. ನಮಗೆ ಬೇಕೋ ಬೇಡವೊ ನಮಗೆ ಪರಿಚಿತವಾಗಿದ್ದ ಬದುಕಿನ ಲಯಗಳು ನಿಧಾನವಾಗಿ ಮರೆಯಾಗುತ್ತಾ, ಅಪರಿಚಿತ, ನೂತನ ಲಯಗಳು ನಮ್ಮ ದಾರಿಯಲ್ಲಿ ಪ್ರತ್ಯಕ್ಷವಾಗುತ್ತಿವೆ. `ಅಯ್ಯೋ, ಹೇಗಿದ್ದದ್ದು ಹೇಗಾಯ್ತಪ್ಪ! ಎಲ್ಲ ಹಾಳಾಗಿ ಹೋಯಿತಲ್ಲ! ಮನುಷ್ಯ ಪ್ರಪಂಚ ಇನ್ನು ಮುಳುಗಿ ಹೋಗುತ್ತೆ! ಪ್ರಳಯವಾಗುತ್ತೆ!!’ ಎಂದು ಗೋಳಾಡುತ್ತಾ ಕೂರುವುದು ವಿವೇಕದ ಆಯ್ಕೆಯಲ್ಲ. ಈಗಿರುವ ನಿಜಭಾಸ(ರ‍್ಚುವಲ್) ವಿಶ್ವಕೋಶದ ಲಭ್ಯತೆ….. ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ತೆರಡನೆಯ ಬರಹ

ಕೈಯಲ್ಲಿ ಕರವಸ್ತ್ರ ಇಲ್ಲದೆ ಮನೆಯಿಂದ ಹೊರಗೆ ಹೋಗದಿರುವ ಕಾಲ ಒಂದಿತ್ತು. ಮೂವತ್ತೈದು – ವಲವತ್ತು ವರ್ಷಗಳ ಹಿಂದಿನ ಕಾಲ. ಈಗ ಕರವಸ್ತ್ರ, ಗಡಿಯಾರ, ಹಣ, ಲೇಖನಿ ಯಾವುದಿಲ್ಲದಿದ್ದರೂ ಮನೆಯಿಂದ ಹೊರಗೆ ಹೋದರೂ ಹೋದೇವು, ಆದರೆ ನಮ್ಮ ಕರ ಹಾಗೂ ಕರ್ಣಗಳ ನಡುವೆ ಸದಾ ಸಂಚರಿಸುವ ಸಂಚಾರಿ ದೂರವಾಣಿಯನ್ನು ಮಾತ್ರ ನಾವು ಮರೆಯೆವು, ಮರೆಯಲಾರೆವು. ಹತ್ತು ರೂಪಾಯಿಯ ಒಂದು ಸಾಮಾನು ತೆಗೆದುಕೊಳ್ಳುವುದಿರಬಹುದು, ಸ್ಥಳಗುರುತು(ಲೊಕೇಷನ್) ಕೇಳುವುದಿರಬಹುದು, ಮನೆಗೆ ಬೇಕಾದ ಚಿಕ್ಕಪುಟ್ಟ ಸಾಮಾನು ತರಿಸುವುದಿರಬಹುದು(ಹಿಂದಿನ ಕಾಲದಲ್ಲಿ ಮನೆಯಲ್ಲಿ ಸಕ್ಕರೆ, ಈರುಳ್ಳಿ, ಹಸಿಮೆಣಸಿನ ಕಾಯಿ ಮುಂತಾದವು ಮುಗಿದು ಹೋಗಿದ್ದರೆ ಪಕ್ಕದ ಮನೆಯವರನ್ನು ಕೇಳುತ್ತಿದ್ದುದನ್ನು ನೆನಪಿಸಿಕೊಳ್ಳಬಹುದು), ಹಣದ ಹುಂಡಿಯ(ಬ್ಯಾಂಕ್) ವ್ಯವಹಾರ ಇರಬಹುದು, ಬೇಸರವಾದಾಗ ಮನರಂಜನೆ ಪಡೆಯುವುದಿರಬಹುದು —- ಒಟ್ಟಿನಲ್ಲಿ ನಾವು ಬೆಳಿಗ್ಗೆ ಎದ್ದಾಗಿನಿಂದ ಮಲಗುವ ತನಕದ ಎಲ್ಲ ಮತ್ತು ಪ್ರತಿಯೊಂದು ಚಟುವಟಿಕೆಗೂ ನಮ್ಮ ಕರದೂರವಾಣಿ ಅಥವಾ ಚರದೂರವಾಣಿ ಅರ್ಥಾತ್ ಜಂಗಮವಾಣಿ ನಮ್ಮ ಕಾರ್ಯಸಾಧನ ವಸ್ತುವಾಗಿದೆ. ದಿನದಿನೇ ನಮ್ಮ ನಾಡಿನ ಪ್ರಪಂಚವು ಮನುಷ್ಯರಿಂದ ದೂರ ಮತ್ತು ಯಂತ್ರಸಾಧನಗಳಿಗೆ ಹತ್ತಿರವಾಗುತ್ತಿದೆ ನಾಣಿ, ಸೀನಿ, ಕಿಟ್ಟಿ, ಪದ್ದು, ರಂಗಮ್ಮ, ಸರಸಿ, ಲಕ್ಕಿ, ನಾಗಮ್ಮರೆಂಬ ಮಾನವ ಒಡನಾಡಿಗಳಿಗಿಂತ ಹೆಚ್ಚಾಗಿ ಅಲೆಕ್ಸಾ, ಸಿರಿ, ಗೂಗಲ್‌ಗಳೆಂಬ ಯಾಂತ್ರಿಕ ಒಡನಾಡಿಗಳು ಇಂದು ಮನುಷ್ಯರಿಗೆ ಹೆಚ್ಚು ಸಮೀಪವಾಗುತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೃತಕ ಬುದ್ಧಿಮತ್ತೆ(ಎಐ) ಎಂಬ `ಸರ್ವರುಜಾಪಹಾರಿ’ ಯಾಂತ್ರಿಕತೆ ಸಹ ಮಾನವರ `ಆಪ್ತ’ ಒಡನಾಡಿಯಾಗುತ್ತಿದೆ!

ವಿಷಯದ ತಿರುಳೇನೆಂದರೆ ಇಪ್ಪತ್ತೊಂದನೇ ಶತಮಾನದ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಎಲ್ಲ ನಾಡುಗಳಂತೆ ನಮ್ಮ ಕನ್ನಡ ನಾಡು ಸಹ ಬದಲಾಗುತ್ತಿದೆ. ನಮಗೆ ಬೇಕೋ ಬೇಡವೊ ನಮಗೆ ಪರಿಚಿತವಾಗಿದ್ದ ಬದುಕಿನ ಲಯಗಳು ನಿಧಾನವಾಗಿ ಮರೆಯಾಗುತ್ತಾ, ಅಪರಿಚಿತ, ನೂತನ ಲಯಗಳು ನಮ್ಮ ದಾರಿಯಲ್ಲಿ ಪ್ರತ್ಯಕ್ಷವಾಗುತ್ತಿವೆ. `ಅಯ್ಯೋ, ಹೇಗಿದ್ದದ್ದು ಹೇಗಾಯ್ತಪ್ಪ! ಎಲ್ಲ ಹಾಳಾಗಿ ಹೋಯಿತಲ್ಲ! ಮನುಷ್ಯ ಪ್ರಪಂಚ ಇನ್ನು ಮುಳುಗಿ ಹೋಗುತ್ತೆ! ಪ್ರಳಯವಾಗುತ್ತೆ!!’ ಎಂದು ಗೋಳಾಡುತ್ತಾ ಕೂರುವುದು ವಿವೇಕದ ಆಯ್ಕೆಯಲ್ಲ. ಅದು ಸಕಾರಾತ್ಮಕ ಸಮೀಪಿಸುವಿಕೆಯೂ ಅಲ್ಲ. ಏನೇ ಮಾಡಿದರೂ ಇತಿಹಾಸದ ರಥದ ಚಕ್ರಗಳನ್ನು ನಾವು ಹಿಂದೆ ತಿರುಗಿಸಲಾಗುವುದಿಲ್ಲ. ನಮ್ಮ ಮುಂದೆ ಇರುವ ಒಂದೇ ದಾರಿ ಅಂದರೆ ಈಗ ಇರುವ ಆಯ್ಕೆಗಳಲ್ಲಿ ನಮಗೆ ಮತ್ತು ನಮ್ಮ ಬಂಧುಬಾಂಧವರಿಗೆ ಹಾಗೂ ನಮ್ಮ ಒಟ್ಟು ಬದುಕಿಗೆ ಮತ್ತು ಭೂಮಿತಾಯಿಯ ಒಳಿತಿಗೆ ಅತ್ಯಂತ ಉತ್ತಮ ಆಯ್ಕೆ ಯಾವುದಿದೆ ಎಂಬುದರ ಬಗ್ಗೆ ಆಲೋಚನೆ ಮಾಡುವುದು.

 ನಮ್ಮ ಇಂದಿನ ಅಂಕೀಯ(ಡಿಜಿಟಲ್) ಯುಗದ ಕೆಲವು ನಿಜಬದುಕಿನ ಸನ್ನಿವೇಶಗಳನ್ನು ನಿಮ್ಮ ಮುಂದಿಡಬಯಸುತ್ತೇನೆ. ಇದರಲ್ಲಿ ಸಿಹಿಕಹಿ ಎಲ್ಲ ಇದೆ.

  1. ಅಪ್ಪ ಕಳೆದುಹೋಗಿ ಸಿಕ್ಕಿದ ಪ್ರಸಂಗ: ಇದು ನಮ್ಮ ಮನೆಯಲ್ಲೇ ಕಳೆದ ವರ್ಷ ಆಗಸ್ಟ್ 31ರಂದು ನಡೆದ ಘಟನೆ. 84 ವರ್ಷದ ನನ್ನ ತಂದೆಯವರು ಇದ್ದಕ್ಕಿದ್ದಂತೆ ಒಂದು ದಿನ ಸಹಜವಾಗಿ ವಾಯುಸಂಚಾರಕ್ಕೆ ಹೋದವರು, ಯಾರಿಗೂ ಹೇಳದೆ ಬೆಂಗಳೂರಿನ ಕರಾರಸಾಸಂ ಬಸ್ ನಿಲ್ದಾಣಕ್ಕೆ ಹೋಗಿ ಉಡುಪಿಯ ಬಸ್ಸು ಹತ್ತಿ ಸಕಲೇಶಪುರದಲ್ಲಿ ಇಳಿದುಕೊಂಡಿದ್ದರು. ಬೆಳಿಗ್ಗೆ 10.30ಯ ಹೊತ್ತಿಗೆ ಮನೆ ಬಿಟ್ಟವರ ಮಾಹಿತಿ ನಮಗೆ ಸಿಕ್ಕಿದ್ದು ರಾತ್ರಿ ಸುಮಾರು 9.45 ಗಂಟೆಗೆ! ಆಗ ನಾವು ಮನೆಯಿಂದ ಹೊರಟು ಆ ತಡರಾತ್ರಿಯಲ್ಲಿ ಸಕಲೇಶಪುರಕ್ಕೆ ಧಾವಿಸಿ, ಅಲ್ಲಿನ ಪೋಲೀಸು ಠಾಣೆಯಲ್ಲಿ ಬೆಳಗಿನ ಜಾವ 3.45 ಗಂಟೆಗೆ ಅವರನ್ನು ನೋಡಿದೆವು! ಕಿವಿ ಕೇಳಿಸದ, ಚರದೂರವಾಣಿ ಇಟ್ಟುಕೊಳ್ಳದ ವಯೋವೃದ್ಧ ತಂದೆಯವರು ಅಂದು ನಮಗೆ ಸಿಕ್ಕಿದ್ದರಲ್ಲಿ ನಮ್ಮ ಪ್ರಯತ್ನ ಎಷ್ಟಿತ್ತೋ ಇಂದಿನ ಮಾಹಿತಿ ತಂತ್ರಜ್ಞಾನದ ಕೊಡುಗೆ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚಿದೆ. ಬೆಳಿಗ್ಗೆ ಹೋಗುವಾಗಲೇ ಮೆಜಸ್ಟಿಕ್‌ನ ಬಸ್ ನಿಲ್ದಾಣದ ಪೋಲೀಸಿನವರು ತೆಗೆದಿದ್ದ ಅಪ್ಪನ ಛಾಯಾಚಿತ್ರ, ಎಲ್ಲ ಪೋಲೀಸು ಠಾಣೆಗಳಲ್ಲಿಯೂ ಇದ್ದಂತಹ ನಿಸ್ತಂತು ಸಂವಹನ ವ್ಯವಸ್ಥೆ, ವಾಟ್ಸ್ಯಾಪ್ ಅನ್ವಯ ತಂತ್ರಾಂಶದ ಮೂಲಕ ಕ್ಷಣಾರ್ಧದಲ್ಲಿ ಅಪ್ಪನ ಚಿತ್ರ ಮತ್ತು ಮಾಹಿತಿಯನ್ನು ಎಲ್ಲ ಕಡೆಗೆ ಕಳಿಸಲು ಸಾಧ್ಯವಾದದ್ದು, ಅಪ್ಪ ಹೊರಟಿದ್ದ ಬಸ್ಸಿನಲ್ಲಿ ಕುಳಿತಿದ್ದ ಯಾರೋ ಒಬ್ಬ ಪುಣ್ಯಾತ್ಮರು ತಮ್ಮ ಚರದೂರವಾಣಿಯಿಂದ ಅಪ್ಪನ ಛಾಯಾಚಿತ್ರ ತೆಗೆದದ್ದು …. ಅಬ್ಬ! ಇವೆಲ್ಲ ತಂತ್ರಜ್ಞಾನೀಯ ಸಂಗತಿಗಳು ಒಂದಕ್ಕೊಂದು ಸೇರಿ ಆ ರಾತ್ರಿಯೊಳಗೆ ಅಪ್ಪನ ಗುರುತು ಪತ್ತೆಯಾದದ್ದು ಖಂಡಿತ ದೊಡ್ಡ ವಿಷಯವೇ.
  2. ಚರದೂರವಾಣಿ ಕಳೆದುಹೋಗಿ ಸಿಕ್ಕಿದ ಪ್ರಸಂಗ – ನನ್ನ ಸಹೋದ್ಯೋಗಿಯೊಬ್ಬರು ಕೆಲವು ದಿನಗಳ ಹಿಂದೆ ತಮ್ಮ ಚರದೂರವಾಣಿಯನ್ನು ಕಳೆದುಕೊಂಡರು. ಬೆಳಿಗ್ಗೆ ತಾವು ವಿದ್ಯಾರ್ಥಿಗಳಿಗೆ ನೀಡಬೇಕಾಗಿದ್ದ ಪರೀಕ್ಷೆಯ ಕೊಠಡಿಯನ್ನು ಸರಿಯಾದ ಹೊತ್ತಿಗೆ ತಲುಪುವುದರಲ್ಲಿ ಮಗ್ನವಾಗಿದ್ದ ಅವರ ಮನಸ್ಸಿಗೆ ತಮ್ಮ ಕೈಚೀಲದಿಂದ ದೂರವಾಣಿ ಜಾರಿ ಬಿದ್ದದ್ದು ಗೊತ್ತೇ ಆಗಿರಲಿಲ್ಲ. ದೂರವಾಣಿ ಕಳೆದು ಹೋಗಿದ್ದು ಗೊತ್ತಾದಾಗ ಅವರಿಗೆ ವಿಪರೀತ ಗಾಬರಿಯಾಯಿತು. ದುರದೃಷ್ಟವಶಾತ್ ಆ ದೂರವಾಣಿಯಲ್ಲಿ ಚಂದಾದಾರರ ಗುರುತು ಘಟಕ (ಸಿಮ್)ಇರಲಿಲ್ಲ. ಅದು ಕೇವಲ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಅವರು ಬಳಸುತ್ತಿದ್ದ ತಮ್ಮ ನಿಕಟಪೂರ್ವ ದೂರವಾಣಿಯಾಗಿತ್ತು. ಅದೇನಾದರೂ ದಗಾಕೋರರು, ವಂಚನೆಗಾರರ ಕೈಯಲ್ಲಿ ಸಿಕ್ಕು ಅವರು ಅದನ್ನು ಅಪರಾಧ ಕಾರ್ಯಗಳಿಗೆ ಬಳಸಿದರೆ ದೂರವಾಣಿಯ ಮಾಲೀಕರಾದ ಇವರು ಅಪಾಯಕ್ಕೆ ಸಿಕ್ಕಿಕೊಳ್ಳುವ ಪರಿಸ್ಥಿತಿ ಉಂಟಾಗಬಹುದೆನ್ನುವ ಆತಂಕದಿಂದ ನಮ್ಮಂತಹ ಸ್ನೇಹಿತರು ಪೋಲೀಸರ ಬಳಿ ಈ ಬಗ್ಗೆ ದೂರು ಕೊಡಲು ಸಲಹೆ ನೀಡಿದೆವು. ಈ ಬಗ್ಗೆ ಯೋಚಿಸಲಾರಂಭಿಸಿದ ಅವರು, ಸ್ವಭಾವತಃ ಹೊಸ ತಂತ್ರಜ್ಞಾನಗಳನ್ನು ಕಲಿಯುವುದರಲ್ಲಿ ಆಸಕ್ತರಾದುದರಿಂದ ತಾವೇ ಅಂತರ್ಜಾಲವನ್ನು ಜಾಲಾಡಿ, ಕಳೆದಿದ್ದ ತಮ್ಮ ದೂರವಾಣಿಗೆ ದೂರಸಂಪರ್ಕದ ಮೂಲಕ ಬೀಗ ಹಾಕುವುದರಲ್ಲೂ ಯಶಸ್ವಿಯಾಗಿಬಿಟ್ಟರು. ಸಮಾಧಾನದ ವಿಷಯವೆಂದರೆ ಆ ದೂರವಾಣಿಯನ್ನು ಕೊಂಡಾಗ ಅಂಗಡಿಯವರು ಕೊಟ್ಟ ರಟ್ಟಿನ ದಬ್ಬಿಯನ್ನು ಅವರು ಬಿಸಾಡದೆ ಇಟ್ಟುಕೊಂಡದ್ದರಿಂದ ಸಂಬಂಧಿತ `ಅಂತಾರಾಷ್ಟ್ರೀಯ ಚರವಾಣಿ ಉಪಕರಣ ಗುರುತಿನ’ ಸಂಖ್ಯೆ(ಐಎಂಐಇ) ಅವರಿಗೆ ಸಿಕ್ಕಿತು. ಅದನ್ನು ನಮೂದಿಸಿ ಪೋಲೀಸು ಠಾಣೆಗೆ ದೂರು ನೀಡಿದ ಅವರು `ಸದ್ಯ, ದೂರನ್ನಾದರೂ ಕೊಟ್ಟೆ, ಇನ್ನು ದೂರವಾಣಿ ಸಿಕ್ಕಿದರೆ ನನ್ನ ಅದೃಷ್ಟ ಅಷ್ಟೆ. ನೋಡೋಣ’ ಎಂದು ಸುಮ್ಮನಾಗಿಬಿಟ್ಟರು. ಆಶ್ಚರ್ಯ! ದೂರವಾಣಿ ಕಳೆದುಹೋದ ನಾಲ್ಕನೇ ದಿನ ಪೋಲೀಸು ಠಾಣೆಯಿಂದ ಇವರಿಗೆ ಒಂದು ಕರೆ ಬಂತು. “ಮೇಡಂ, ನಿಮ್ಮ ಮೊಬೈಲ್ ಸಿಕ್ಕಿದೆ, ಸ್ಟೇಷನ್‌ಗೆ ಬಂದು ತೆಗೆದುಕೊಂಡು ಹೋಗಿ” ಅಂದರು ಕರೆಯಲ್ಲಿದ್ದ ಒಬ್ಬ ಪೋಲೀಸ್ ಅಧಿಕಾರಿ! ನನ್ನ ಸಹೋದ್ಯೋಗಿಗೆ ಎಂತಹ ಸಂತೋಷ ಮತ್ತು ಅಚ್ಚರಿ ಆಯಿತು ಎಂಬುದನ್ನು ವಿವರಿಸಿ ಹೇಳಬೇಕಿಲ್ಲ ಅಲ್ಲವೆ?

ನಾನೂ ಅವರೊಂದಿಗೆ ದೂರವಾಣಿಯನ್ನು ಪಡೆದುಕೊಳ್ಳಲು ಪೋಲೀಸು ಠಾಣೆಗೆ ಹೋಗಿದ್ದೆ. ಅಲ್ಲಿ ನಮಗೆ ತಿಳಿದು ಬಂದ ವಿಷಯವೇನೆಂದರೆ ಪೋಲೀಸರ ಬಳಿ ಒಂದು ವಿಶೇಷವಾದ ಅನ್ವಯ ತಂತ್ರಾಂಶ ಇದೆ. ಈ ತಂತ್ರಾಂಶದ ಮೂಲಕ, ಕಳೆದು ಹೋದ ಚರದೂರವಾಣಿಯನ್ನು ಹುಡುಕುವಾಗ ಆ ದೂರವಾಣಿಯು ಯಾರ ಬಳಿ ಇರುತ್ತದೋ ಅವರು ಚಂ.ಗು.ಘ(ಸಿಮ್) ಹಾಕಿದ ತಕ್ಷಣ ಆ ದೂರವಾಣಿ ಎಲ್ಲಿದೆ ಎಂದು ಗೊತ್ತಾಗಿಬಿಡುತ್ತದೆ! ನಮ್ಮ ಸಹೋದ್ಯೋಗಿಯ ದೂರವಾಣಿಯನ್ನು ನಮ್ಮ ಕಾಲೇಜಿನ ಒಬ್ಬ ವಿದ್ಯಾರ್ಥಿನಿಯೇ ಇಟ್ಟುಕೊಂಡಿದ್ದಳಂತೆ. ಅವಳು ತನ್ನ ಚಂ.ಗು.ಘ(ಸಿಮ್) ಹಾಕಿದ ತಕ್ಷಣ ಅವಳ ದೂರವಾಣಿ ಸಂಖ್ಯೆಯು ಪೋಲೀಸರಿಗೆ ಸಿಕ್ಕಿ ಅವರು ಆ ಹುಡುಗಿಗೆ ಕರೆ ಮಾಡಿ ಅವಳನ್ನು ಪೋಲೀಸು ಠಾಣೆಗೆ ಕರೆಸಿ ಅವಳ ಬಳಿ ಇದ್ದ ಮೇಡಂ ಅವರ ದೂರವಾಣಿಯನ್ನು ಅವಳಿಂದ ಪಡೆದುಕೊಂಡರಂತೆ! ಎಷ್ಟೋ ವರ್ಷಗಳ ತಮ್ಮ ದಾಖಲೆಗಳು, ಮಾಹಿತಿ, ಮುಖ್ಯ ಪರಾಮರ್ಶನದ ಪಾಠವಿಷಯಗಳು ಇವೆಲ್ಲವೂ ಇದ್ದ ತಮ್ಮ ದೂರವಾಣಿಯು ಒಂದಿಷ್ಟೂ ಹಾಳಾಗದೆ ತಮ್ಮ ಕೈಗೆ ಮರಳಿ ಬಂದಾಗ ನನ್ನ ಸಹೋದ್ಯೋಗಿಯ ಮುಖದಲ್ಲಿ ಬಂದ

ನೆಮ್ಮದಿಯ ಭಾವ ಎಂದೂ ಮರೆಯಲಾಗದ್ದು. ತಂತ್ರಜ್ಞಾನದ ದಕ್ಷತೆ ಹಾಗೂ ಪೋಲೀಸ್ ಇಲಾಖೆಯು ಆಧುನಿಕ ತಂತ್ರಜ್ಞಾನ ವ್ಯವಸ್ಥೆಗೆ ತನ್ನನ್ನು ತಾನು ಇಂದೀಕರಿಸಿಕೊಂಡ ರೀತಿಯನ್ನು ನೋಡಿ ನಮಗೆ ನಿಜಕ್ಕೂ ಬಹಳ ಸಂತೋಷವಾಯಿತು.

 ***

 ಈ ಹಿನ್ನೆಲೆಯಲ್ಲಿ ಯೋಚಿಸುತ್ತಿದ್ದಾಗ ನಮ್ಮ ಬದುಕಿನ ಹಲವಾರು ಸಂಗತಿಗಳು ಈ ಮಾಹಿತಿ ಅದೆಷ್ಟು ಸುಲಭವಾಗಿದೆ ಅನ್ನಿಸುತ್ತದಲ್ಲವೆ? ಅಂತರ್ಜಾಲ ಸಭೆಗಳ ಮೂಲಕ ತರಗತಿ ಪಾಠ, ಮಾರ್ಗದರ್ಶನ, ಸಭೆ, ಸಮಾರಂಭಗಳು ಇಂದು ಸುಲಭಸಾಧ್ಯವಾಗುತ್ತಿವೆ. ಮನೆಯಿಂದಲೇ ಕೆಲಸ ಮಾಡುವುದು, ವೈದ್ಯರ ಭೇಟಿಯನ್ನು ಅಂತರ್ಜಾಲವು ದೂರಭೇಟಿಯ ಮೂಲಕ ಸುಲಭಗೊಳಿಸಿರುವ ರೀತಿ. ಬರವಣಿಗೆ, ಪ್ರಕಾಶನ, ಕಲೆಗಳ ಪ್ರಪಂಚದಲ್ಲಿ ಅಂತರ್ಜಾಲ ತಂದಿರುವ ಸುಲಭತೆ, ಚಿಲ್ಲರೆ ಇಲ್ಲದೆ ಪರದಾಡುವುದನ್ನು ತಪ್ಪಿಸಿರುವ ಫೋನ್ ಪಾವತಿ, ಗೂಗಲ್ ಪಾವತಿ, ಸಾರಿಗೆಯಲ್ಲಿ ಸ್ಥಳ ಕಾದಿರಿಸಲು ಆಗಿರುವ ಸುಲಭತೆ, ಅಧ್ಯಾಪಕರಿಗೆ ಉಂಟಾಗಿರುವ ಬಹುಮಾಧ್ಯಮ ಕಲಿಸುವಿಕೆಯ ಅನುಕೂಲ, ಯಾವುದೇ ವಿಷಯವನ್ನಾದರೂ ಪರಾಮರ್ಶನ ಮಾಡಲು ಈಗಿರುವ ನಿಜಭಾಸ(ರ‍್ಚುವಲ್) ವಿಶ್ವಕೋಶದ ಲಭ್ಯತೆ….. ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

 ***

 ಮೇಲಿನ ವಿಷಯಗಳೆಲ್ಲ ನಿಜವಾದರೂ ಒಂದು ನಾಣ್ಯಕ್ಕೆ ಎರಡು ಮುಖಗಳಿರುವಂತೆ, ಈ ಸುಲಭಲಭ್ಯತೆಯ ಲೋಕಕ್ಕೆ ಇನ್ನೊಂದು ಕಹಿಯಾದ ಮುಖ ಇದೆ. ಅದೇನೆಂದರೆ ಮನುಷ್ಯರೊಂದಿಗಿನ ಸಂವಹನವು ಮುಂಚಿನಷ್ಟು ಸರಳವೂ ಅಲ್ಲ, ಸುಲಭವೂ ಅಲ್ಲ. ಅಕ್ಕಪಕ್ಕದವರ ಹತ್ತಿರ, ನೆಂಟರಿಷ್ಟರ ಹತ್ತಿರ ಅಷ್ಟೇ ಏಕೆ ನಮ್ಮ ಪ್ರಬುದ್ಧ ವಯಸ್ಸಿನ ಮಕ್ಕಳ ಹತ್ತಿರ ಸಹ ಈಗ ಸರಾಗವಾಗಿ ಸಲೀಸಾಗಿ ಮಾತನಾಡುವಂತಿಲ್ಲ. “ಅಯ್ಯೋ, ಹೇಳದೆ ಬಂದ್ಬಿಟ್ಟೀದೀರಲ್ಲ, ಒಂದು ಫೋನ್ ಮಾಡಿ ರ‍್ಬೋದಿತ್ತಲ್ಲ!?, `ಯಾಕ್ರೀ ವಿಳಾಸ ವಿಳಾಸ ಅಂತ ಎಲ್ರನ್ನೂ ಕೇಳ್ತಿದೀರ? ನಿಮ್ಮ ಮೊಬೈಲ್ ಇಲ್ವಾ, ಲೊಕೇಷನ್ ಹಾಕ್ಕೊಳ್ರೀ’, `ಅಪ್ಪಾ, ಇದ್ಕಾಗಿ ಯಾಕೆ ಫೋನ್ ಮಾಡ್ದೆ ನೀನು? ನಾನು ಎಷ್ಟು ಮುಖ್ಯವಾದ ಸಭೆಯಲ್ಲಿದ್ದೆ ಗೊತ್ತಾ? ಒಂದು ಡಿಎಂ(ನೇರ ಸಂದೇಶ) ಹಾಕಿದ್ರೆ ಆಗ್ತಿರಲಿಲ್ವಾ?’, `ಅಯ್ಯೋ ಹೋಗ್ರಿ, ಅದನ್ನು ವಿವರಿಸಕ್ಕೆ ನಂಗೆ ಈಗ ಪುರುಸೊತ್ತಿಲ್ಲ, ಗೂಗಲ್‌ನಲ್ಲಿ ನೋಡ್ಕೊಳ್ರೀ’ ……… ಇಂತಹ ಮಾತುಗಳನ್ನು ನಾವು ಆಗಾಗ ಕೇಳುತ್ತಲೇ ಇರುತ್ತೇವೆ, ಅಲ್ಲವೆ? ಇತ್ತೀಚೆಗೆ ಕುಟುಂಬದೊಂದಿಗೆ ರೈಲಿನಲ್ಲಿ ಪ್ರಯಾಣ ಮಾಡುವಾಗ ಕಾಲು ನೋವಿದ್ದ ಇಬ್ಬರು ಕುಟುಂಬ ಸದಸ್ಯರಿಗೆ ಕಾದಿರಿಸಿದ್ದ ಮಲಗುವ ಸ್ಥಳ-ಮೇಲಿನದ್ದು ಸಿಕ್ಕಿ, ಅಷ್ಟೇನೂ ಸ್ನೇಹಮಯಿಗಳಾಗಿ, ಮಾತುಕತೆಗೆ ಲಭ್ಯರಾಗಿ ಕಂಡು ಬರದ ಸಹಪಯಣಿಗರ ಹತ್ತಿರ, ಅವರಿಗೆ ಸಿಕ್ಕಿದ್ದ ಕೆಳಗಿನ ಮಲಗುವ ಸ್ಥಳಕ್ಕಾಗಿ ವಿನಿಮಯದ ವಿನಂತಿ ಮಾಡಲು ತುಂಬ ಮುಜುಗರ ಆದ ಪ್ರಸಂಗ ನೆನಪಾಗುತ್ತದೆ ನನಗೆ. ಮನುಷ್ಯರು ಮನುಷ್ಯರ ಬಳಿ ಏನನ್ನಾದರೂ ಹೇಳುವುದು, ಕೇಳುವುದು ಈಗ ಖಂಡಿತವಾಗಿಯೂ ಮೊದಲಿನಷ್ಟು ಸುಲಭವಲ್ಲ ಎಂಬುದು ನಮ್ಮೆಲ್ಲರ ಅನುಭವಕ್ಕೂ ಬಂದಿರುವ ವಿಷಯವಲ್ಲವೆ? ಒಂದು ವಿಷಯವಂತೂ ಸತ್ಯ. ಕೊನೆಗೂ, ಯಂತ್ರಗಳು ಮಾಡಲಾಗದ ಮನುಷ್ಯರೇ ಮಾಡಬೇಕಾದ ಸಂಗತಿಗಳು ಕೆಲವು ಇವೆ. ಉದಾಹರಣೆಗೆ ತಿನ್ನುವುದು, ಕುಡಿಯುವುದು, ನಮ್ಮ ಕೈಕಾಲು ಬಳಸಿ ನಡೆದಾಡುವುದು, ಪೆಟ್ಟಾದಾಗ ನೋವು ಅನುಭವಿಸಿ ವಾಸಿ ಮಾಡಿಕೊಳ್ಳುವುದು, ಅಂದರೆ ನಮ್ಮ ಸ್ವಂತ ಇರವಿಗೆ (ದೇಹಕ್ಕೆ) ಸಂಬಂಧಿಸಿದ ಸಂಗತಿಗಳು, ಹಾಗೂ ಕಷ್ಟದಲ್ಲಿ ಕಣ್ಣೀರು ಮಿಡಿಯುತ್ತಿರವವರ ಪಕ್ಕ ಕುಳಿತುಕೊಂಡು ಅವರ ಹೆಗಲ ಮೇಲೆ ಕೈಯಿಟ್ಟು ಅವರ ಮಾತುಗಳನ್ನು ಕೇಳಿಸಿಕೊಂಡು ಮೌನದಲ್ಲೋ ಮಾತಿನ ಮೂಲಕವೋ ಅವರಿಗೆ ಸಮಾಧಾನ ಹೇಳುವುದು ಅಂದರೆ ಮಾನವೀಯ ಸ್ಪರ್ಶ ಅನ್ನುತ್ತೇವಲ್ಲ, ಅದನ್ನು ಯಂತ್ರಗಳು ಮಾಡಲಾರವು. ಮೊದಲೇ ದತ್ತಾಂಶ ಹಾಕಿದ, ಭಾವನೆಗಳಿಗೆ ಸ್ಪಂದಿಸಲಾರದ ಮಾನವನಿರ್ಮಿತ ಬುದ್ಧಿಮತ್ತೆಯು(ಎಐ) ಮಾನವೀಯ ಸ್ಪರ್ಶವನ್ನು ನೀಡಲಾರದು.

ತೀರ್ಮಾನ ರೂಪವಾಗಿ ಬಹುಶಃ ಹೀಗೆ ಹೇಳಬಹುದು. ಆಧುನಿಕ ತಂತ್ರಜ್ಞಾನವು ನಮ್ಮ ಬದುಕಿನಲ್ಲಿ ತಂದಿರುವ ಸುಲಭತೆ, ಅನುಕೂಲತೆಗಳನ್ನು ಗೌರವಿಸುತ್ತಲೇ, ಎಲ್ಲೆಲ್ಲಿ ಮಾನವೀಯ ಸ್ಪರ್ಶದ ಅಗತ್ಯ ಇದೆಯೋ ಅಲ್ಲಿ ಅದನ್ನು ಕೊಡುವುದರಿಂದ ಹಾಗೂ ಪಡೆಯುವುದರಿಂದ ನಾವು ಹಿಂತೆಗೆಯಬಾರದು. ಒಂದು ಕವಿತೆಯನ್ನು ಜೊತೆಯಾಗಿ ಓದಿ ಖುಷಿ ಪಡುವುದು, ಒಂದು ಲೋಟ ಕಾಫಿಯನ್ನು ಸ್ನೇಹ, ಪ್ರೀತಿಯುಳ್ಳ ಜೀವದೊಂದಿಗೆ ಹಂಚಿಕೊಂಡು ಸಂಭ್ರಮಿಸುವುದು, ಕಣ್ಣೀರು ಹರಿಯುತ್ತಿರುವ ಕೆನ್ನೆಯನ್ನು ನಮ್ಮ ಬೆರಳುಗಳಿಂದ ಒರೆಸುವ ಸಹಜ, ಸರಳ ಆದರೆ ಅತಿ ಜರೂರಾದ ಮಾನವೀಯ ಚಟುವಟಿಕೆಯನ್ನು ಮಾಡುವುದು – ಇವನ್ನು ನಾವು ಯಂತ್ರಗಳಿಗೆ ಬಿಟ್ಟುಕೊಡಬಾರದು. ನಾವೇ ಉಳಿಸಿಕೊಳ್ಳಬೇಕು. ಏನೆನ್ನುವಿರಿ ನನ್ನ ಓದುಗ ಬಂಧುಗಳೇ?