ಎಲ್ಲವನ್ನು ಕೇಳಿಸಿಕೊಂಡಿದ್ದ ಅವಿನಾಶ್ ಡಾಕ್ಟರಿಗೆ ಕೈ ಮುಗಿದ. ಅಲ್ಲಿ ಮಾಧವಿಗೆ ಮನಸ್ಸು ತೀರಾ ತಲ್ಲಣಿಸಿ ಹೋಯಿತು. ಯಾವಾಗ ಕೇರ್ ಟೇಕರ್ ತನ್ನ ಸುತ್ತಾಟ ಮುಗಿಸಿ ಮನೆ ಒಳಗೆ ಕಾಲಿಟ್ಟಳೊ, ಅವಳಿಗೆ ಮನುಷ್ಯರ ಬಗ್ಗೆ ನಂಬಿಕೆಯೇ ಹೊರಟು ಹೋಯಿತು. ಅವಳ ಮುಖದ ಮೇಲೆ ದುಡ್ಡು ಬಿಸಾಕಿ, `ಮುಖ ತೋರಿಸಬೇಡ, ನಿನಗೆ ಪೊಲೀಸಿಗೆ ಕೊಡದೇ ಬಿಟ್ಟಿದ್ದೀನಿ, ಗೆಟ್ ಲಾಸ್ಟ್’ ಅಂತ ನರನಾಡಿ ಕಿತ್ತುಬರುವಂತೆ ಅರಚಿದಳು. ಆ ಹುಡುಗಿ ತತ್ತರಿಸಿ ಹೋದವಳು, ಒಂದು ಕ್ಷಣ ಕೂಡ ನಿಲ್ಲದೇ ಅಲ್ಲಿಂದ ಹೊರಟು ಹೋಗಿದ್ದಳು.
ಸ. ಹರೀಶ್ ಕಥಾ ಸಂಕಲನ “ಅಮ್ಮ ಅಂದ್ರೆ ಭೂಮಿ”ಯ ಶೀರ್ಷಿಕೆ ಕತೆ, ನಿಮ್ಮ ಈ ಭಾನುವಾರದ ಓದಿಗೆ
`ಅಮ್ಮನಿಗೆ ಡಿಸ್ಚಾರ್ಜ್ ಆಗ್ತಿದೆ ಬಾ’ ಅಂತ ಕರೆದಿದ್ದ ಮೋಹನ. ನೆನ್ನೆ ತನಕವೂ ಅಮ್ಮನ ಜೊತೆ ಇದ್ದ ಮಾಧವಿಗೆ ಅಮ್ಮ ಡಿಸ್ಚಾರ್ಜ್ ಆಗ್ತಿದಾರೆ ಅಂದಾಗ ಆದ ಸಮಾಧಾನ ದೊಡ್ಡದು. ಅವಳು `ಹಾಂ ಬರ್ತೀನಿ ಕಣೋ’ ಅಂದು ಸರಸರನೆ ಸಿದ್ಧವಾಗಿ, ಮನೆಯಾಚೆ ಕೇಳುವವರಿಲ್ಲದೇ ಬಿಕೊ ಅಂತ ನಿಂತಿದ್ದ ಕಾರು ಹತ್ತಿ ಹೊರಟಳು.
ಮಾಧವಿಗೆ ಹತ್ತಿರತ್ತಿರ ನಲವತ್ತೆಂಟು, ಇನ್ನೇನು ಮೆನೋಪಾಸ್ ಸಮಯ. ಇನ್ನೂ ಋತುಚಕ್ರ ನಿಲ್ಲದೇ ಹೋದರೂ ಅಂಥಾ ಸಿಂಪ್ಟಮ್ಮುಗಳು ಕಾಣತೊಡಗಿದ್ದವು. ಎಲ್ಲ ಮೈ ಕೈ ನೋವುಗಳನ್ನು ದಾಟಿ ಹಾಕಿ ಅವಳು ಮುನ್ನಡೆಯತೊಡಗಿದ್ದಳು. ವಯಸ್ಸು ಯಾರನ್ನು ಬಿಟ್ಟದ್ದಲ್ಲ, ಎಲ್ಲರಿಗು ಆದ ಹಾಗೆ ತನಗೂ ಆಗುತ್ತದೆ ಅಂದುಕೊಂಡು, ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೇ ದಾರಿ ಸವೆಸತೊಡಗಿದ್ದಳು. ಅವಳಲ್ಲಿ ಮಂದಹಾಸ ಇನ್ನೂ ಹಾಗೇ ಇತ್ತು. ಮಂಗಳೂರಿನಲ್ಲಿ ಇಂಜಿನಿಯರಿಂಗ್ ಓದುತ್ತಿರುವ ಮಗಳಿದ್ದರೂ ಸಹ ಅವಳ ಅಂದಕ್ಕೆ ಯಾವ ಕೊರತೆಯೂ ಇರಲಿಲ್ಲ. ಅಲ್ಲಲ್ಲಿ ನರೆತ ಕೂದಲಿಗೆ ಹೇರ್ ಡೈ ಮಾಡಿಕೊಳ್ಳುತ್ತ, ಐ ಬ್ರೋ ಶೇಪಿಂಗ್ ಅದು ಇದು ಮಾಡಿಕೊಂಡು ಮುದ್ದಾಗಿ ಕಾಣುತ್ತಿದ್ದಳು. ಹಾಗಾಗಿ ಅವಳ ಗಂಡ ಮದನ್, ಪದೇ ಪದೇ ಕನ್ನಡಿ ನೋಡಿಕೊಳ್ಳುವಂತೆ, ಅವಳ ಮುಖದಲ್ಲಿ ತನ್ನನ್ನು ಮತ್ತೆ ಮತ್ತೆ ನೋಡಿಕೊಳ್ಳುತ್ತಿದ್ದ. ಅವಳ ಮುಖದಲ್ಲಿ ಅವನು ಸ್ಪಷ್ಟವಾಗಿ ಕಾಣುತ್ತಿದ್ದ!

(ಸ. ಹರೀಶ್)
ಆಸ್ಪತ್ರೆ ಬಂದಿತ್ತು. ಮಾಧವಿ ಕಾರ್ ಪಾರ್ಕ್ ಮಾಡಿ, ವ್ಯಾನಿಟಿ ಬ್ಯಾಗು ಹೆಗಲಿಗೇರಿಸಿ, ರಿಮೋಟ್ ಕೀ ನಿಂದ ಹಿಂತಿರುಗದೇ ಲಾಕ್ ಮಾಡಿ ಮುನ್ನಡೆದಳು. ಮಾಧವಿ ಕಾರಿಡಾರ್ಗೆ ಬರುವುದಕ್ಕು, ಮೋಹನ ಬಹಳ ಜತನದಿಂದ ಅಮ್ಮನನ್ನು ವೀಲ್ ಚೇರ್ನಲ್ಲಿ ಕರೆದು ತರುವುದಕ್ಕೂ ಒಂದೇ ಆಗಿತ್ತು. ಈಗಾಗಲೇ ಆಸ್ಪತ್ರೆ ಬಿಲ್ ಕ್ಲಿಯರ್ ಆಗಿತ್ತು. ಮೋಹನನ ಕೈಗೆ ರಿಸೆಪ್ಷನಿಸ್ಟ್ ಕರೆದು ಆಸ್ಪತ್ರೆಯ ಬಿಲ್, ವಗೈರೆ ಕೊಟ್ಟು ಕಳಿಸಿದ್ದರು. ಆಸ್ಪತ್ರೆಗೆ ಒಳ್ಳೇ ಬಿಲ್ ಆಗಿತ್ತು! ಮಾಧವಿ ಅಮ್ಮನ ಕಡೆಗೆ ಭಾವುಕತೆಯಿಂದ ಧಾವಿಸಿ ಬಂದಳು. ಮೋಹನ ವೀಲ್ ಚೇರ್ ನಿಲ್ಲಿಸಿ, ಸುಮ್ಮನೆ ಸರಿದು ನಿಂತ. ಮಾಧವಿ ಹತ್ತಿರಾಗಿ ಅಮ್ಮನಿಗೆ ಕಕ್ಕುಲಾತಿ ತೋರಿದಳು. `ಅಮ್ಮ’ ಅಂತ ಮೈದಡವಿದಳು. ತನ್ನೆದೆಯ ಶಾಖದಲ್ಲಿ ಅಮ್ಮನನ್ನ ಹುದುಗಿಸಿಕೊಂಡಳು.
ಸೀತಮ್ಮ ಮುದ್ದು ಮುಖದ ವೃದ್ಧೆ. ಹಣೆಯ ಮೇಲೆ ಒಂದೆರಡು ನೆರಿಗೆ, ಎರಡು ಕೆನ್ನೆಗಳ ಮೇಲೆ ಸುಕ್ಕುಗಳ ರಂಗೋಲಿಯೂ ಇತ್ತು. ಹಣೆಯ ಮೇಲೆ ಅಳಿಸಿಹೋದ ಪುಡಿ ಕುಂಕುಮದ ಕುರುಹು ಹಾಗೇ ಇತ್ತು. ಕಿವಿಯಲ್ಲಿದ್ದ ಓಲೆಗಳನ್ನ ತೆಗೆದ ಕಾರಣ, ಕಿವಿಗಳು ಭಣಭಣ ಅನ್ನತೊಡಗಿದ್ದವು. ಸೀತಮ್ಮನ ತಲೆ ಮೇಲಿನ ಕೂದಲು ತೆಳ್ಳಗಾಗಿ ಹೋಗಿತ್ತು. ಆಸ್ಪತ್ರೆಯಲ್ಲಿದ್ದ ಕಾರಣ, ಎಲ್ಲ ಪುಡಿಗೂದಲುಗಳನ್ನು ಸೇರಿಸಿ ಒಂದು ಬ್ಯಾಂಡ್ನಿಂದ ಬಿಗಿಯಲಾಗಿತ್ತು. ಸುಮ್ಮನೆ ತನ್ನ ಕಣ್ಣಾಲಿಗಳನ್ನ ಅತ್ತಿತ್ತ ಚಲಿಸುತ್ತ ಸೀತಮ್ಮ ಅಲ್ಲಿನ ಸನ್ನಿವೇಶಕ್ಕೆ ಸಾಕ್ಷಿಯಾಗತೊಡಗಿದ್ದಳು. ಸುತ್ತಮುತ್ತ ಸಾವಿರ ಘಟನೆಗಳು ನಡೆದರೂ ಯಾವುದು ಅವಳ ಗಮನಕ್ಕೆ ಬರುತ್ತಿರಲಿಲ್ಲ. ನರತಂತುಗಳು ಸರಿಯಾಗಿ ಸಂದೇಶವನ್ನು ಮೆದುಳಿಗೆ ಕಳುಹಿಸದೇ ಇದ್ದುದರಿಂದ ಅವಳೂ ಏನನ್ನು ಗ್ರಹಿಸುತ್ತಿರಲಿಲ್ಲ. ಪುಟ್ಟ ಮಗುವಿನ ಹಾಗೆ ತಲೆ ಹೋದ ಕಡೆ ತಿರುಗುತ್ತ, ನೆರಿಗೆ ಹಿಡಿದ ಕೈಗಳನ್ನು ನೋಡಿಕೊಳ್ಳುತ್ತ ಶಬರಿಯಂತೆ ಕೂತಿದ್ದಳು. ಅವಳ ಮಕ್ಕಳು ಅನ್ನುವುದು ಅವಳಿಗೆ ಗೊತ್ತಿತ್ತೇ ಹೊರತು ಲೋಕದ ವ್ಯಾಪಾರ ಅವಳಿಗೆ ತಿಳಿಯುತ್ತಿರಲಿಲ್ಲ.
`ಹೋಗು ಮೋಹನ ಕಾರು ತಗೊಂಡು ಬಾ, ನಾನಿರ್ತೀನಿ ಇಲ್ಲೆ’ ಅಂದಳು ಮಾಧವಿ.
ಮೋಹನ ಕದಲದೇ ಹಾಗೆ ಹಾಗೆ ನಿಂತ. ಅವಳಿಗೆ ಅವನ ಹಿಂಜರಿಕೆ ಅರ್ಥವಾಗಲಿಲ್ಲ. `ಹೋಗು ಮೋಹನ, ಎಷ್ಟು ಹೊತ್ತು ಅಂತ ಇಲ್ಲೆ ಕಾರಿಡಾರ್ನಲ್ಲಿರೋದು? ಹೋಗು, ಅಮ್ಮನ್ನ ಮನೆಗೆ ಕರಕೊಂಡು ಹೋಗೋಣ’ ಅಂದಳು ಕಾಳಜಿಯಲ್ಲಿ.
`ನೀನು ಕರಕೊಂಡು ಹೋಗು ಅಮ್ಮನ್ನ’ ಅಂದ ಮೋಹನ.
ಮಾತು ಕರ್ಕಶ ಅನ್ನಿಸಿತು. ಅವಳ ಮೆದುಳಿಗೆ ಸಂದೇಶ ಹೋಗುವುದು ತಡವಾಯಿತು. ಅವಳು ಸಾವರಿಸಿ `ಆಂ?’ ಅಂದಳು ತಾನು ಕೇಳಿದ್ದನ್ನ ಖಾತ್ರಿ ಪಡಿಸಿಕೊಳ್ಳುತ್ತ. ಮೋಹನ ಸ್ವಲ್ಪ ನಿಷ್ಟುರವಾಗಿಯೇ `ನಿಮ್ಮನೆಗೆ ಕರಕೊಂಡು ಹೋಗು’ ಅಂದ. ಮಾಧವಿಗೆ ಈಗ ಅರ್ಥವಾಗತೊಡಗಿತು. ಅವಳು ಅದನ್ನು ಇನ್ನು ಖಚಿತಪಡಿಸಿಕೊಳ್ಳುವ ಮುನ್ನವೇ `ನಿನ್ನ ಮನೆನಲ್ಲಿಟ್ಕೊ ಅಮ್ಮನ್ನ, ಇಷ್ಟು ದಿನ ನಮ್ಮನೆನಲ್ಲಿದ್ರು, ಬರೀ ನಾನೇ ನೋಡ್ಕೋಬೇಕು ಅಂತೇನು ಇಲ್ಲವಲ್ಲ? ಲಲಿತ ಕೂಡ ತುಂಬಾನೇ ನೋಡ್ಕೊಂಡಿದಾಳೆ, ಒಬ್ಬರೇ ಭಾರ ಹೊರಬೇಕು ಅಂತೇನು ಇಲ್ಲವಲ್ಲ. ನೀನು ಅಮ್ಮನಿಗೆ ಮಗಳೇ ತಾನೆ?’ ಅಂದ.
ಇನ್ನು ಹೆಚ್ಚು ಕೇಳುವುದು ಬೇಕಿರಲಿಲ್ಲ. ಮಾಧವಿ ಒಂದು ಕ್ಷಣ ಕೂಡ ತಡ ಮಾಡಲಿಲ್ಲ. ಕೂಡಲೇ ವೀಲ್ ಚೇರ್ ಬಿಟ್ಟು, ವ್ಯಾನಿಟಿ ಬ್ಯಾಗ್ ಅನ್ನು ಸರಿಪಡಿಸಿಕೊಳ್ಳುತ್ತ ಸರಸರನೆ ಪಾರ್ಕಿಂಗ್ ಲಾಟ್ ಗೆ ಹೋಗಿ, ಅಲ್ಲಿ ನಿಲ್ಲಿಸಿದ್ದ ಕಾರ್ ಅನ್ನು ಸ್ಟಾರ್ಟ್ ಮಾಡಿಕೊಂಡು, ಬರ್ರನೆ ತಂದು ಆಸ್ಪತ್ರೆಯ ಮುಂಭಾಗದಲ್ಲಿ ನಿಲ್ಲಿಸಿದಳು. ಎರಡೇ ನೆಗೆತಕ್ಕೆ ಆಸ್ಪತ್ರೆಯ ಮೆಟ್ಟಿಲು ಹತ್ತಿಕೊಂಡು, ಅಮ್ಮನ ವೀಲ್ ಚೇರ್ ಬಳಿಗೆ ಹೋದಳು. ಈಗಾಗಲೇ ಮೋಹನ ತಂದಿರಿಸಿದ್ದ ವಾಕರ್ ಅನ್ನು ಅಮ್ಮನ ಮುಂದಿರಿಸಿ, ಅಮ್ಮನ ಮೃದು ಕೈಗಳಲ್ಲಿ ತಾನೇ ವಾಕರ್ನ ಹಿಡಿಕೆಗಳನ್ನು ಹಿಡಿಸಿದಳು. ಅಮ್ಮನನ್ನು ಎಬ್ಬಿಸಿದಾಗ ವಾರ್ಡ್ ಬಾಯ್ ಬಂದು ವೀಲ್ ಚೇರ್ ಹಿಂದಕ್ಕೆ ಎಳೆದುಕೊಂಡ. ಮಾಧವಿ ಒಬ್ಬಳೆ ತನ್ನ ಉದುರಿ ಹೋಗುತ್ತಿದ್ದ ವ್ಯಾನಿಟಿ ಬ್ಯಾಗ್ ಅನ್ನು ಪ್ರಯಾಸದಲ್ಲಿಯೇ ತಳ್ಳಿಕೊಳ್ಳುತ್ತ, ಅಮ್ಮನ ಭುಜವನ್ನು ಒಂದು ಕೈನಲ್ಲಿ ಹಿಡಿದು ಮೆಟ್ಟಿಲು ಇಳಿಸತೊಡಗಿದಳು. ಮೋಹನ ಸಹಾಯ ಮಾಡಲು ಬಂದ. ಆದರೆ ಮಾಧವಿ ಅವನನ್ನ ಹಾಯಿಗೊಡಲಿಲ್ಲ. ಕಾರಿನ ಬಳಿ ಬಂದು, ಮೊದಲು ಹಿಂದಿನ ಡೋರ್ ತೆಗೆದು, ಅಲ್ಲಿ ತನ್ನ ವ್ಯಾನಿಟಿ ಬ್ಯಾಗ್ ಅನ್ನು ಹಿಂದಿನ ಸೀಟಿನಲ್ಲಿ ಬಿಸಾಡಿ ಡೋರ್ ಮುಚ್ಚಿದಳು. ಬಳಿಕ ಅಮ್ಮನ ಕೈನಲ್ಲಿದ್ದ ವಾಕರ್ ಅನ್ನು ಕಾರ್ ಮೇಲೆ ಬೀಳದಂತೆ ಹಾಕಿ, ಅಮ್ಮನನ್ನು ಮುಂದಿನ ಎಡಭಾಗದ ಸೀಟಿನಲ್ಲಿ ಕುಳ್ಳಿರಿಸಿದಳು. ಒಡನೆಯೇ ಕಾರನ್ನು ಕ್ರಾಸ್ ಮಾಡುತ್ತ ಕಾರಿನ ಬಲಭಾಗದ ಡೋರ್ ತೆಗೆದು, ಸ್ಟಿಯರಿಂಗ್ ಹಿಡಿದು ಕೂತಳು. ಮೋಹನ ಮಾತ್ರ ಅವಳನ್ನೇ ನೋಡುತ್ತಿದ್ದ. ಮಾಧವಿ ಅಮ್ಮನಿಗೆ ಸೀಟ್ ಬೆಲ್ಟ್ ಹಾಕಿ, ತಾನೂ ಬೆಲ್ಟ್ ಹಾಕಿಕೊಂಡು ಮೋಹನನ ಕಡೆ ನೋಡಿದಳು. ಮೋಹನ ಆಡಬಾರದ್ದು ಆಡಿದವನಂತೆ ನಿಂತಿದ್ದ. ಮಾಧವಿ ಮಾತ್ರ ಏನು ಆಗೇ ಇಲ್ಲವೇನೊ ಎಂಬಂತೆ `ಬೈ ಕಣೊ ಮೋಹನ, ಬರ್ತೀವಿ’ ಅಂತ ಕಾರು ಮುನ್ನಡೆಸಿದಳು. ಸೀತಮ್ಮನಿಗೆ ಮಾತ್ರ ಏನೂ ಗೊತ್ತಾಗುತ್ತಿರಲಿಲ್ಲ. ಮಗನ ಕಡೆ ಒಮ್ಮೆ ದೃಷ್ಠಿ ಬಿಸಾಕಿ, ಕಾರು ಆಸ್ಪತ್ರೆಯ ಕಂಪೌಂಡು ದಾಟುವುದನ್ನು ನೋಡಿದಳು. ಕಾರು ಮುಂದಕ್ಕೆ ಸಾಗತೊಡಗಿತ್ತು.
ಎಂದೂ ಹೀಗೇ ಆಗಿರಲಿಲ್ಲ. `ತನ್ನದೇ ತಪ್ಪಾಯಿತ? ತಾನು ಅಮ್ಮನನ್ನ ನೋಡಿಕೊಳ್ಳಲಿಲ್ಲವ? ಮೋಹನ ಯಾಕೆ ಹತಾಶನಾಗಿದ್ದ? ಲಲಿತ ಗಲಾಟೆ ಮಾಡಿರಬಹುದೆ? ತನ್ನೊಂದಿಗೆ ಎಂದೂ ನಿಷ್ಟುರವಾಗಿ ಮಾತನಾಡದ ಮೋಹನ ಈವತ್ತು ಮಾತನಾಡಿದ್ದು ಯಾಕೆ?’ ಅಂದುಕೊಳ್ಳುತ್ತಲೇ ಮಾಧವಿ ಕಾರು ನಡೆಸತೊಡಗಿದ್ದಳು. ತನಗೇಕೆ ಈ ಜಡತ್ವ ಉಂಟಾಯಿತು? ಅಮ್ಮನನ್ನ ತಮ್ಮನ ವಶಕ್ಕೆ ಬಿಟ್ಟು ಯಾಕೆ ನಾನು ಸುಮ್ಮನಿದ್ದೆ? ಅಮ್ಮನನ್ನ ನೋಡಿಕೊಳ್ಳುವುದು ಗಂಡು ಮಕ್ಕಳ ಕರ್ತವ್ಯ ಅಂತಲೇ? ನಾನೇಕೆ ವಿಚಾರ ಮಾಡಲಿಲ್ಲ? ಅಮ್ಮನ ವಿಷಯದಲ್ಲಿ ತಾನು ಜಾಣ ಕುರುಡಾಗಿದ್ದೇಕೆ? -ಇತ್ಯಾದಿ ಯೋಚಿಸುತ್ತಲೇ ಅವಳು ಕಾರು ನಡೆಸತೊಡಗಿದಳು. ಅಮ್ಮ ಮಾತ್ರ ಕಾರಿನ ಕಿಟಕಿಯಿಂದ ಇಣುಕುತ್ತ ಸುತ್ತಮುತ್ತಲಿನ ಬದುಕನ್ನು ತಮಾಷೆಯೆಂಬಂತೆ ನೋಡತೊಡಗಿದ್ದಳು.
******
`ಬಿಟ್ಟು ಬಂದ್ರಿ ತಾನೆ ಅತ್ತೆನ? ಇಲ್ಲ ಹೊರಗಡೆ ನಿಂತಿದ್ದಾರ? ಮತ್ತೆ ನಮ್ಮ ತಲೆಗೆ ಕಟ್ಟಲಿಲ್ಲ ತಾನೆ?ʼ ಅಂತ ಬಾಗಿಲನಾಚೆಗೆ ಹೋಗಿ ನೋಡಿ ಬಂದಾಗಲೇ ಲಲಿತ ಸಮಾಧಾನಗೊಂಡಿದ್ದು. ಅವಳು ಮನೆಯೆ ಬಾಗಿಲು ಹಾಕುತ್ತ `ಅಲ್ಲ ಈವತ್ತು ಡಿಸ್ಚಾರ್ಜ್ ಆಯ್ತು ತಾನೆ?’ ಅಂದಳು ತನ್ನ ಕೂದಲ ಜುಟ್ಟನ್ನು ಮತ್ತೆ ಸರಿಯಾಗಿ ಹಾಕಿಕೊಳ್ಳುತ್ತ.
ಮೋಹನ ತಲೆಯಾಡಿಸಿದ.
ಅವಳು ಗಂಡನಿಗೆ ಕಾಫಿ ಸಿದ್ಧಪಡಿಸುತ್ತ `ನೋಡಿ, ನಾವು ಯಾವುದೇ ಗಿಲ್ಟ್ ಇಟ್ಕೋಬೇಕಾಗಿಲ್ಲ. ನಾವು ಮಾಡಬೇಕಾದ ಕರ್ತವ್ಯ ಮಾಡಿದ್ದೀವಿ, ಇಷ್ಟು ವರ್ಷ ನಿಮ್ಮಮ್ಮನ್ನ ನಮ್ಮಮ್ಮನಿಗಿಂತ ಹೆಚ್ಚಾಗಿ ನೋಡ್ಕೊಂಡಿದೀನಿ, ಪ್ರತಿದಿನ ಮಾತ್ರೆ, ಔಷಧಿ, ಅವರ ಪಥ್ಯ, ಅವರ ಊಟ, ತಿಂಡಿ, ಗಂಜಿ, ಅದು ಇದು ಅಂತ ಮಾಡಿಕೊಟ್ಟು ಸಾಕಾಗಿದ್ದೀನಿ, ನಮ್ಮನ್ನ ಯಾರೂ ಪ್ರಶ್ನೆ ಮಾಡೋ ಹಾಗಿಲ್ಲ. ಹಾಗೆ ನೋಡಿದ್ರೆ ನಿಮ್ಮಕ್ಕ ಗಿಲ್ಟ್ ಇಟ್ಕೋಬೇಕು ಅಷ್ಟೇನೆ, ಎಲ್ಲರಿಗು ಆನೆ ನೋಡೋಕ್ಕೆ ಚೆನ್ನಾಗಿ ಕಾಣುತ್ತೆ ರ್ರಿ, ಮನೆಗೆ ತಗೊಂಡು ಹೋಗಿ ಇಟ್ಕೊಳಿ ಅಂದ್ರೆ ಯಾರು ಇಟ್ಕೊಳೋದಿಲ್ಲ. ನೀವೇನು ಬೇಜಾರು ಮಾಡ್ಕೋಬೇಡಿ, ನಿಮ್ಮಕ್ಕ ಏನೂ ಅನ್ನಲಿಲ್ಲ ತಾನೆ” ಅಂದಳು ಕಾಫಿ ಇರಿಸುತ್ತ.
ಕಾಫಿ ಗುಟುಕರಿಸಿದ ಮೋಹನ ಅಂದ: `ಏನು ಅನ್ನಲಿಲ್ಲ. ಒಂದು ಮಾತು ಕೂಡ ಕೇಳಲಿಲ್ಲ. ಸುಮ್ಮನೆ ಅಮ್ಮನ್ನ ಕರಕೊಂಡು ಹೋರಟು ಹೋದ್ಲು, ನನ್ನ ಮಾತು ಸ್ವಲ್ಪ ಕಟುವಾಯ್ತೇನೊ ಅನ್ನಿಸ್ತಿದೆ’ ಅವಳು ಸಮರ್ಥಿಸಿಕೊಳ್ಳುತ್ತ `ಏನೂ ತೊಂದರೆ ಇಲ್ಲ. ಈಗ ನಿಮ್ಮಕ್ಕ ನೋಡ್ಕೊಳ್ಳಿ ಬಿಡಿ, ಹೊರಗಿನಿಂದ ಅಮ್ಮನ್ನ ಚೆನ್ನಾಗಿ ನೋಡ್ಕೊ ಅಂತ ಹೇಳೋಕ್ಕೆ ಸುಲಭರ್ರಿ, ಆದರೆ ನೋಡ್ಕೊಂಡವ್ರಿಗೆ ಗೊತ್ತಿರುತ್ತೆ ಅದರ ಸಂಕಟ ಏನು ಅಂತ. ನಮ್ಮ ಮನೆನಲ್ಲಿ ಮುಖ ಇಡಕ್ಕಾಗ್ತಿತ್ತ? ಎಲ್ಲಿ ನೋಡಿದರೂ, ಡೆಟಾಯಿಲ್ ವಾಸನೆ, ಫಿನಾಯಿಲ್ ವಾಸನೆ, ಆ ದರಿದ್ರ ಔಷಧಿಗಳಂತು ನಾತ ಹೊಡೀತಿತ್ತು. ಎಲ್ಲಂದ್ರಲ್ಲಿ ಇನ್ಸುಲಿನ್ ಸಿರಿಂಜುಗಳು, ಟಾನಿಕ್ಕುಗಳು ಬರೀ ಇವೇ ಆಗಿತ್ತು. ಈವತ್ತು ಇಡೀ ಮನೆನ ಸೋಪ್ ಹಾಕ್ಕೊಂಡು ಚೆನ್ನಾಗಿ ತೊಳೆದಿದ್ದೀನಿ, ನಾವು ಎಷ್ಟು ಸಹಿಸ್ಕೊಂಡಿರಬೇಡ ಹೇಳಿ’ ಅಂದಳು ಅಸಹನೆಯಲ್ಲಿಯೇ.
ಮೋಹನ ಹೆಚ್ಚು ಮಾತಾಡಲಿಲ್ಲ. ಕಾಫಿ ಗ್ಲಾಸ್ ಅನ್ನು ಅಲ್ಲಿಯೇ ಇರಿಸಿ ದೊಡ್ಡ ಶೂನ್ಯ ಉಳಿಸಿ ಅಲ್ಲಿಂದ ಹೊರಟು ಹೋದ!
*******
ಈ ಮುಂಚೆ ಸೀತಮ್ಮ ಬಂದಿರಲಿಲ್ಲ ಅಂತಲ್ಲ, ಮಾಧವಿ ತನ್ನಮ್ಮ ಚೆನ್ನಾಗಿದ್ದಾಗ ಅವರನ್ನು ಸುಮಾರು ಸಾರಿ ಕರೆತಂದು ಚೆನ್ನಾಗಿ ನೋಡಿಕೊಂಡು ಕಳಿಸಿದ್ದಳು. ಆದರೆ ಅವೆಲ್ಲ ಒಂದೆರಡು ದಿನದ ಮಟ್ಟಿಗಾಗುತ್ತಿತ್ತು. ಅಮ್ಮನೂ ಆಗ ಚೆನ್ನಾಗಿ ಓಡಾಡುತ್ತ, ಚೆನ್ನಾಗಿ ಮಾತನಾಡುತ್ತ ಇದ್ದುದರಿಂದ ಯಾವ ಸಮಸ್ಯೆಯೂ ಇರಲಿಲ್ಲ. ಆದರೆ ಈಗಿನ ಪರಿಸ್ಥಿತಿ ಬೇರೆಯಾಗಿತ್ತು! ಅಮ್ಮನಿಗೆ ತನ್ನರಿವಿಲ್ಲ, ತಾನೇ ನಡೆಯಲು ಆಗಲ್ಲ. ಹೀಗಿರುವಾಗ ಕಾರು ನಿಲ್ಲಿಸಿ ಅಮ್ಮನ ಮುಂದೆ ವಾಕರ್ ಇರಿಸಿ ನಡೆಸಿಕೊಂಡು ಬರುವುದು ದೊಡ್ಡ ಸಾಹಸವೇ ಆಗಿತ್ತು. ಸೀತಮ್ಮ ತನ್ನ ಮುಂದಿದ್ದ ವಾಕರ್ ಅನ್ನು ಟಕ ಟಕನೆ ನೆಲದ ಮೇಲೆ ಕುಕ್ಕುತ್ತ ಒಂದೊಂದೇ ಹೆಜ್ಜೆ ಇಡುತ್ತ ಬರತೊಡಗಿದ್ದರು. ಮಾಧವಿ ಜತನ ಮಾಡುತ್ತ `ಅಮ್ಮ ಹುಷಾರು’ ಅನ್ನುತ್ತಲೇ ರಟ್ಟೆ ಹಿಡಿದುಕೊಂಡು ಹೆಜ್ಜೆ ಹಾಕತೊಡಗಿದ್ದಳು. ಅಮ್ಮ ಪ್ರಯಾಸ ಪಡುತ್ತಲೇ ವಾಕರ್ ಅನ್ನು ನೆಲಕ್ಕೆ ಕುಕ್ಕುತ್ತಿತ್ತು. ಅದು `ಟಕ್ಕ ಟಕ್ಕ’ ಅನ್ನುವ ಮರಕುಟಿಗನ ಹಕ್ಕಿಯಂತೆ ಸದ್ದು ಮಾಡಿತು.
ಮನೆ ಬಾಗಿಲು ಬಂತು, ಅವಳು ಕೀ ಗೋಸ್ಕರ ಹುಡುಕಲು ಅದು ಕಾರಿನಲ್ಲಿರುವ ವ್ಯಾನಿಟಿ ಬ್ಯಾಗ್ನಲ್ಲಿತ್ತು. ಅವಳು ವಿಧಿಯಿಲ್ಲದೇ ಕಾಲಿಂಗ್ ಬೆಲ್ ಮಾಡಿದಳು.
`ಹೂ ಇಸ್ ದಟ್ ನಾನ್ಸೆನ್ಸ್’ ಅಂದ ಅವಿನಾಶ್, ಲ್ಯಾಪ್ ಟಾಪ್ ನ ಝೂಮ್ ಮೀಟಿಂಗಿನ ನಟ್ಟ ನಡುವೆ. ಹೀಗೆ ಮೀಟಿಂಗಿನಲ್ಲಿರುವಾಗ ಸದ್ದು ಮಾಡುವುದು ಅಂದರೆ ಅವನಿಗೆ ಎಲ್ಲಿಲ್ಲದ ಕೋಪ ಬರುತ್ತಿತ್ತು. ಮನೆಯ ಕುಕ್ಕರಿನ ಸೀಟಿ, ಹೆಂಡತಿಯ ಮಾತು, ಕಾಲಿಂಗ್ ಬೆಲ್ಲಿನ ಸದ್ದು ಅವನಿಗೆ ಸಹಿಸಲಾಗುತ್ತಿರಲಿಲ್ಲ. ಅತ್ತ ಮೀಟಿಂಗಿನಲ್ಲಿದ್ದ ಬಾಸಿನ ಮುಂದೆ ಮುಜುಗರ ಅನುಭವಿಸುವಂತಾಗುತ್ತಿತ್ತು. ಹೀಗಾಗಿ ಅವನು ಮತ್ತೆ ಸಹಿಸಿಕೊಳ್ಳುವಲ್ಲಿ ಮತ್ತೆ ಕಾಲಿಂಗ್ ಬೆಲ್ ಸದ್ದಾಯಿತು. ಅವನು ಲ್ಯಾಪ್ ಟಾಪಿನ ವಿಡಿಯೋವನ್ನು ಸ್ಥಗಿತಗೊಳಿಸಿ ಎದ್ದು ಹೋಗಿ ಬಾಗಿಲು ತೆರೆದ. ಯಾರು ಬಂದಿದ್ದಾರೆ ಬಿಟ್ಟಿದ್ದಾರೆ ಅನ್ನುವ ಗೋಜಿಗೆ ಹೋಗುವಷ್ಟು ಅವನಿಗೆ ಸಮಯವಿರಲಿಲ್ಲ. ಅವನು ಮತ್ತೆ ಲ್ಯಾಪ್ ಟಾಪಿನ ಮುಂದೆ ಪೀಠಸ್ಥನಾಗಿ ತನ್ನನ್ನ ತಾನು ತೆರೆದುಕೊಂಡ. ಅತ್ತ ಮೀಟಿಂಗ್ ಗಂಭೀರವಾಗಿ ನಡೆಯುತ್ತಿತ್ತು.
`ಯೂ ಸ್ಪೀಕ್ ಮಿ. ಅವಿನಾಶ್’ ಅತ್ತಲಿಂದ ಬಂತು ದನಿ.
ಅವಿನಾಶ್ ಬಾಯಿ ತೆರೆಯುವ ಮುನ್ನ ವಾಕರ್ ನ `ಟಕ್ಕ ಟಕ್ಕ’ ಸದ್ದು ಅವನ ಕಿವಿಗೆ ಕರ್ಕಶವಾಗಿ ಕೇಳಿಸಿತು. ಅವನು ಹಾಗೆ ಸಹಿಸಿಕೊಳ್ಳುತ್ತಲೇ ಬಾಗಿಲ ಕಡೆ ನೋಡಿದ. ಅಲ್ಲಿ ತನ್ನತ್ತೆ ಅರ್ಥಾತ್ ತನ್ನ ಹೆಂಡತಿಯ ಅಮ್ಮ ಸೀತಮ್ಮ ಬಂದದ್ದು ನೋಡಿ ಅವನಿಗೆ ಗಲಿಬಿಲಿ, ಗೊಂದಲ, ಸಿಟ್ಟು, ಸೆಡವುಗಳು ಉಂಟಾದವು. ಅವನು ಬಾಸ್ ಬಳಿ ಕೃತಕ ನಗೆ ನಕ್ಕು `ಸಾರ್, ವಾಟ್ ಐ ಫೀಲ್ ಇಸ್’ ಅಂತ ಆಫೀಸಿನ ವಿವರಗಳನ್ನು ಹೇಳತೊಡಗಿದ. ಹಾಗೆ ಅವನು ಹೇಳುವಾಗ ವಾಕರ್ ನ ಸದ್ದು ಅವನ ತಲೆಯ ಮೇಲೆ ಕುಕ್ಕಿದಂತೆ ಭಾಸವಾಗತೊಡಗಿತು. ಅವಿನಾಶ್ ಹಲ್ಲು ಕಚ್ಚಿ ತಿರುಗಿ ನೋಡಿದ. ಅಲ್ಲಿ ಮಾಧವಿ ಅಮ್ಮನ ಹಿಂದೆಯೇ ಬರುತ್ತಿದ್ದನ್ನ ನೋಡಿ ಅವಳ ಕಡೆ ದುರುಗುಟ್ಟಿ ನೋಡಿದ. ಗಂಡನಿಗೆ ಕೋಪ ಬಂದಿದೆ ಅನ್ನುವುದು ಗೊತ್ತಾಯಿತು. ಅವಿನಾಶ್ ಕೂಡಲೇ ತನ್ನ ಲ್ಯಾಪ್ ಟಾಪ್ ಅನ್ನು ಒಂದು ಕೈನಲ್ಲಿ ಹಿಡಿದು ತನ್ನ ರೂಮ್ ಗೆ ತೆಗೆದುಕೊಂಡು ಹೋಗಿ ದಢಾರನೆ ಬಾಗಿಲು ಹಾಕಿಕೊಂಡ. ಮಾಧವಿ, ಅಮ್ಮನ ಕೈನಲ್ಲಿದ್ದ ವಾಕರ್ ಕಿತ್ತಿಟ್ಟು ತಾನೇ ಸಪ್ಪಳವಾಗದ ಹಾಗೆ ನಡೆಸಿಕೊಂಡು ಮುನ್ನಡೆದಳು. ಅಮ್ಮನ ರೂಮಿನಲ್ಲಿ ಅಮ್ಮನನ್ನ ಒಂದು ಪುಟ್ಟ ಮಗುವನ್ನು ಮಲಗಿಸುವ ಹಾಗೆ ಮಲಗಿಸಿ, ಅಮ್ಮನ ಡೈಪರ್ ಬದಲು ಮಾಡಿ, ಅಮ್ಮನಿಗೆ ಹೊದಿಕೆ ಹೊದಿಸಿ, ಫ್ಯಾನ್ ಹಾಕಿದಳು. ಅಮ್ಮನಿಗೆ ತುಸು ನಿರಾಳ ಅನ್ನಿಸಿತು. ಅಮ್ಮನ ಪಕ್ಕದಲ್ಲಿ ಕೂತಂತೆ ಮಲಗಿದ ಮಾಧವಿ, ಹಾಗೇ ಅಮ್ಮನ ಹಣೆಯನ್ನು ತನ್ನ ಕೋಮಲ ಕೈಗಳಿಂದ ನೇವರಿಸುತ್ತಿದ್ದಂತೆ ಸೀತಮ್ಮನಿಗೆ ತಂಗಾಳಿಯ ಹಾಗೆ ನಿದ್ದೆ ಬಂತು.
******
`ಅಮ್ಮ ಇನ್ನು ಮೇಲೆ ಇಲ್ಲೇ ಇರ್ತಾರೆ’ ಅಂದಳು ಮಾಧವಿ.
ಅವಿನಾಶ್ ಇನ್ನು ಅನ್ನದ ತುತ್ತನ್ನು ಬಾಯಿಗಿಟ್ಟಿರಲೇ ಇಲ್ಲ. `ಯಾಕೆ?’ ಅಂದ. ಮಾಧವಿಗೆ ಸಿಟ್ಟು ಬಂತು, `ಯಾಕೆ ಅಂದ್ರೆ? ಅಮ್ಮ ಇಲ್ಲಿರ್ತಾರೆ ಅಷ್ಟೇನೆ, ಅದಕ್ಕೆ ನಾನು ನಿಮಗೆ ಸಮಜಾಯಿಷಿ ಹೇಳಬೇಕ? ನಮ್ಮಮ್ಮ ರ್ರಿ ಅವರು, ನನ್ನ ಜೊತೆ ಇರ್ತಾರೆ ಅಷ್ಟೇನೆ, ಅಮ್ಮನ್ನ ನಾನು ನೋಡ್ಕೋಬೇಕು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸ್ಕೊಂಡು ನೇರವಾಗಿ ನಮ್ಮನೆಗೆ ಕರಕೊಂಡು ಬಂದಿದ್ದೀನಿ’ ಅಂದಳು ಮುಂದೇನು ಕೇಳಬಾರದು ಅನ್ನುವಂತೆ ದೊಡ್ಡದಾಗಿ ಷರಾ ಬರೆದು.
ಅವಿನಾಶ್ಗೆ ಅನ್ನ ಗಂಟಲಲ್ಲೇ ಸಿಕ್ಕಿಕೊಂಡಿತು. ಅವನು `ಸರಿ ಇರಲಿ, ಆದರೆ ಮೋಹನ?’ ಅಂತ ಮಾತನ್ನು ಅರ್ಧಕ್ಕೆ ತುಂಡರಿಸಿದ.
`ಅವನು ಇಷ್ಟುದಿನ ಅಮ್ಮನ್ನ ನೋಡ್ಕೊಂಡಿದಾನೆ, ಅವನು ಮತ್ತೆ ಅವನ ಹೆಂಡತಿ ಇಬ್ಬರು ಅಮ್ಮನ ಸೇವೆ ಮಾಡಿದಾರೆ, ಪಾಪ ಅವರಿಗು ಸಾಕಾಗಿರುತ್ತೆ, ಅವನೊಬ್ಬನೇ ಅಮ್ಮನ್ನ ನೋಡ್ಕೋಬೇಕು ಅಂತ ಏನೂ ಇಲ್ಲವಲ್ಲ, ಮಗಳಾಗಿ ನನ್ನ ಕರ್ತವ್ಯ ಕೂಡಾ ಅಲ್ಲವ? ಇನ್ ಫ್ಯಾಕ್ಟ್ ನಾನು ಕೂಡ ಒಂದಷ್ಟು ದಿನ ನಮ್ಮಮ್ಮನ್ನ ನನ್ನ ಜೊತೆ ತಂದಿರಿಸ್ಕೊಂಡು ಅವನಿಗೆ ಸಪೋರ್ಟ್ ಮಾಡಬಹುದಾಗಿತ್ತು. ಆದರೆ ನಾನು ಅದು ನಂದಲ್ಲ ಅಂತಾನೇ ಸುಮ್ಮನಿದ್ದುಬಿಟ್ಟಿದ್ದೆ, ಆದರೆ ಸಹನೆ ಕಟ್ಟೆ ಒಡೆದ್ರೆ ವಿಪರೀತ ತಾನೆ ಆಗೋದು? ಈವತ್ತು ಮೋಹನಾನೇ ಅಂದ. `ನೀನೂ ನೋಡ್ಕೋ ಅಂತ, ನನಗಾಗಲ್ಲ ಅಂತ ನಾನು ಯಾಕೆ ಹೇಳ್ಳಿ?ʼ ಅಂತ ತಾನು ತಟ್ಟೆ ಬಳಿದು ತಿಂದು ಪ್ಲೇಟ್ ಅನ್ನು ಸಿಂಕ್ ಗೆ ಹಾಕಿ ಅಮ್ಮನ ರೂಮಿಗೆ ಮುನ್ನಡೆದಳು.
ಅವಿನಾಶ್ ಗೆ ಈಗ ಪೇಚಿಗಿಟ್ಟುಕೊಂಡಿತು. ಅವನು ತಲೆ ತುರಿಸಿಕೊಂಡ. `ಯಾರಾದರು ಮನೆಗೆ ಸೇರಿಬಿಟ್ಟರೆ ತಮ್ಮ ಪ್ರೈವೇಸಿಯೇ ಹೋಗಿಬಿಡುತ್ತದಲ್ಲ’ ಅಂತನ್ನಿಸಿತು. ಮೊದಲೇ ಝೂಮ್ ಮೀಟಿಂಗು, ಅದು ಇದು ಅಂತ ಸದ್ದಿಲ್ಲದ ವಾತಾವರಣದಲ್ಲಿ ವರ್ಕ್ ಫ್ರಂ ಹೋಮ್ ಮಾಡುವವನಿಗೆ, ಮನೆಯಲ್ಲಿ ನೆಮ್ಮದಿ ಇಲ್ಲದಿದ್ದರೆ ಹೇಗೆ? ಆ ಮೋಹನ ಈಗ ಯಾಕೆ ಕೈ ಚೆಲ್ಲಿಬಿಟ್ಟ? ಈಗ ಅತ್ತೆಗೆ ತಲೆ ಬೇರೆ ಸರಿ ಇಲ್ಲ, ನೆಟ್ಟಕ್ಕೆ ಕೂರಕ್ಕೆ ನಿಲ್ಲಕ್ಕೆ ಆಗಲ್ಲ, ಇನ್ನು ಇದನ್ನ ಯಾರು ನೋಡ್ಕೋತಾರೆ? ನನ್ನ ಆಫೀಸಿನ ಕೆಲಸದ ಗತಿ ಏನು? ಬೇರೆ ಯಾರೊ ಆಗಿದ್ದರೆ `ಮೊದಲು ಕಳಿಸು ಆಚೆಗೆ’ ಅನ್ನಬಹುದಾಗಿತ್ತು. ಆದರೆ ಸ್ವತಃ ಹೆಂಡತಿಯ ತಾಯಿಯನ್ನೇ ತಾನು ಹೋಗಲಿ ಅನ್ನುವ ಹಾಗಿರಲಿಲ್ಲ. ಹಾಗೇನಾದರು ಆದರೆ ಮಾಧವಿಯ ಮತ್ತೊಂದು ಮುಖ ನೋಡಬೇಕಾಗುತ್ತದೆ ಅನ್ನುವ ಅರಿವೂ ಅವನಿಗಿತ್ತು. ಅವನು ಬೇಸರದಲ್ಲಿಯೇ ಸಿಂಗ್ಗೆ ತಟ್ಟೆ ಹಾಕಿದ. ಹೆಂಡತಿ ಇನ್ನು ಅಮ್ಮನ ಸೇವೆ ಮಾಡುತ್ತಿರುವುದು ಕಾಣಿಸಿತು. ಸೀದಾ ತನ್ನ ರೂಮಿಗೆ ಹೋಗಿ ಬಾಗಿಲು ಹೊಚ್ಚಿಕೊಂಡ.
*******
`ಈವತ್ತು ಆಫೀಸಿಗೆ ಹೋಗಿ ಬಂದುಬಿಡ್ತೀನಿ, ಅಮ್ಮನಿಗೆ ಮಾತ್ರೆ ಔಷಧಿ ಎಲ್ಲ ಕೊಟ್ಟಿದ್ದೀನಿ, ತಿಂಡಿ ಕೂಡಾ ಮಾಡಿಸಿದ್ದೀನಿ, ಅಮ್ಮನ ಊಟದ ಹೊತ್ತಿಗೆ ನಾನು ಬರ್ತೀನಿ, ಅಮ್ಮ ಮಧ್ಯಾಹ್ನದ ತನಕ ಏಳಲ್ಲ. ನಿಮ್ಮ ಕೆಲಸಕ್ಕೆ ಯಾವುದೇ ಪ್ರಾಬ್ಲಮ್ ಆಗಲ್ಲ. ನೀವು ನಿಮ್ಮ ಪಾಡಿಗೆ ಕೆಲಸ ಮಾಡ್ಕೊಳ್ಳಿ. ನಾನು ಈವತ್ತು ಆಫೀಸಿಗೆ ಹೋಗಲೇಬೇಕಿದೆ, ಪ್ಲೀಸ್’ ಅಂದಳು ಮಾಧವಿ.
ಅವಿನಾಶ್ ಲ್ಯಾಪ್ ಟಾಪಿನಲ್ಲಿ ಮುಖ ಹುದುಗಿಸಿಕೊಂಡೇ ತಲೆಯಾಡಿಸಿದ. ಅವಳು `ಥ್ಯಾಂಕ್ಸ್’ ಅಂತ ಬಾಗಿಲು ಎಳೆದುಕೊಂಡು ಹೋದಳು. ಅವಿನಾಶ್ ತನ್ನ ಕೆಲಸ ಮುಂದುವರೆಸಿದ. ಹೊರಗೆ ಕಾರು ಹೋದ ಸದ್ದಾಯಿತು. ಅವಿನಾಶ್ ಕೆಲಸದಲ್ಲಿ ತಲ್ಲಿನನಾದ. ಸ್ವಲ್ಪ ಹೊತ್ತು ಕಳೆದಿರಬೇಕು ಅಷ್ಟೇ, ಇಡೀ ಏಕಾಂತದದ ಆ ಮನೆಯಲ್ಲಿ ಝೂಮ್ ಮೀಟಿಂಗಿನ ಆಡಿಯೋ ಸದ್ದು ಮಾತ್ರ ತುಂಬಾ ಕ್ಷೀಣ ಅನ್ನುವಂತೆ ಕೇಳಿಸುತ್ತಿತ್ತು. ಅವಿನಾಶ್ ಕೂಡಾ ತುಂಬ ಸೀರಿಯಸ್ ಮೀಟಿಂಗಿನಲ್ಲಿ ತಲ್ಲೀನನಾಗಿದ್ದ. ಎಲ್ಲವೂ ಸಾಂಗವಾಗಿ ನಡೆಯುತ್ತಿತ್ತು. ಮಾಧವಿ ಮನೆಯಿಂದ ಹೋಗಿ ಒಂದೆರಡು ಘಂಟೆಗಳೇ ಕಳೆದಿತ್ತು. ಇದ್ದಕ್ಕಿದ ಹಾಗೆ ಅತ್ತೆಯ ರೂಮಿನಿಂದ ಜೋರಾಗಿ ಸದ್ದಾಯಿತು. ಸೀತಮ್ಮ `ಅಯ್ಯೋ ಅಮ್ಮ’ ಅಂತ ಕಿರುಚುತ್ತಿರುವುದು ಕೇಳಿಸತೊಡಗಿತು. ಅವಿನಾಶ್ ತೀವ್ರ ಗಾಬರಿಗೊಂಡು ಸ್ಕ್ರೀನ್ ಕ್ಲೋಸು ಮಾಡಿ ಅತ್ತೆಯ ರೂಮಿನ ಕಡೆಗೆ ಓಡಿದ.
ಸೀತಮ್ಮನ ಕೋಣೆಯ ಬಾಗಿಲು ತೆರೆದು ಬಂದ ಅವಿನಾಶನಿಗೆ ಆಘಾತ ಕಾದಿತ್ತು. ಸೀತಮ್ಮ ನೆಲದ ಮೇಲೆ ಮಕ್ಕಾಡೆ ಬಿದ್ದು ಹೋಗಿದ್ದರು. ವಾಕರ್ ಅವರ ಮೇಲೆ ಬಿದ್ದು ಹೋಗಿತ್ತು. ಅವನು `ಅಯ್ಯೋ ಏನು ಮಾಡ್ಕೊಂಡ್ರಿ ನೀವು? ಛೆ’ ಅನ್ನುತ್ತ ಮಕಾಡೆ ಬಿದ್ದಿದ್ದ ಸೀತಮ್ಮನನ್ನ ಎತ್ತಿದ.
ಸೀತಮ್ಮ ಗುಬ್ಬಿ ಮರಿಯಂತಾಗಿಬಿಟ್ಟಿತ್ತು!
`ಏನು ಮಾಡಕ್ಕೆ ಹೋಗಿದ್ರಿ ನೀವು? ಒಂದು ಕಡೆ ಬಿದ್ಕೊಳೋಕ್ಕೆ ಆಗಲಿಲ್ಲವ ನಿಮಗೆ? ಛೆ’ ಅಂತ ರೇಗಿ ಮತ್ತೆ ಹಾಸಿಗೆ ಮೇಲೆ ಮಲಗಿಸಲು ಹೋದವನಿಗೆ ಬೆಡ್ ಒದ್ದೆಯಾಗಿರುವುದು ಕಾಣಿಸಿತು. ಅವನ ಸಹನೆ ಇನ್ನಷ್ಟು ತಪ್ಪಿ ಹೋಯಿತು. ಅವನು ಕೂಡಲೇ ಅತ್ತೆಯನ್ನು ಅಲ್ಲಿದ್ದ ಸೋಫಾದ ಮೇಲೆ ಮಲಗಿಸಿ, ಮಂಚದ ಮೇಲಿದ್ದ ಹಾಸಿಗೆಯನ್ನು ಮತ್ತು ಬೆಡ್ ಶೀಟ್ ಅನ್ನು ಅನಾಮತ್ತಾಗಿ ಎತ್ತಿಕೊಂಡು ಮನೆಯಿಂದ ಆಚೆಗೆ ಹೊರಟ.
ಅಲ್ಲಿ ಸೋಫಾದ ಮೇಲೆ ಸೀತಮ್ಮ ಅನಾಥವಾಗಿ ಬಿದ್ದಿತ್ತು!
ಅವಿನಾಶ್ ತೀವ್ರ ಸಿಟ್ಟಿನಲ್ಲಿ ಆ ಮೂತ್ರ ಮಾಡಿಕೊಂಡ ಬೆಡ್ ಅನ್ನು ಮನೆಯ ಹೊರಗಿನ ಕಂಪೌಂಡಿನ ಮೇಲೆ ಒಣಗಲು ಹಾಕಿದ. ಕೊಳಾಯಿಯಿಂದ ಬಕೆಟ್ಟಿಗೆ ನೀರು ಬಿಟ್ಟುಕೊಂಡು, ಅದರಲ್ಲಿ ಮೂತ್ರವಾದ ಬೆಡ್ ಶೀಟ್ ಅನ್ನು ಅದ್ದಿ ಅದ್ದಿ ಜಾಲಿಸತೊಡಗಿದ. ಅವನು ಯಾವುದೋ ಆವೇಶಕ್ಕೆ ಬಿದ್ದಂತೆ ಬೆಡ್ ಶೀಟ್ ಜಾಲಿಸಿ ಒಮ್ಮೆ ಗಾಳಿಯಲ್ಲಿ ಕೊಡವಿದ. ಆ ಹೊತ್ತಿಗೆ ಮಾಧವಿ ಕಾರಿನಲ್ಲಿ ಮನೆಗೆ ಮರಳಿದವಳು ಅಕಸ್ಮಾತ್ ಗಂಡನ ಕಡೆ ನೋಡಿದವಳೇ ಬೆಚ್ಚಿಬಿದ್ದಳು. ಅವಿನಾಶ್ ಬೆಡ್ ಶೀಟ್ ಅನ್ನು ಮತ್ತೆರಡು ಬಾರಿ ಒದರಿ, ತಂತಿಯ ಮೇಲೆ ಒಣ ಹಾಕತೊಡಗಿದ. `ಅರೆ? ಏನು ಮಾಡ್ತಿದಾರೆ ಇವರು?’ ಅಂದುಕೊಳ್ಳುತ್ತಲೇ ಗೇಟು ತೆರೆದು ಒಳಬರುತ್ತಿದ್ದಂತೆ, ಕಂಪೌಂಡಿನ ಮೇಲೆ ಹಾಸಿಗೆ ಒಣ ಹಾಕಿರುವುದು ಕಂಡು ಹೌಹಾರಿದಳು.
`ಅವಿನಾಶ್ ಏನಾಯ್ತು? ಯಾಕೆ ಹಾಸಿಗೆ ಒಣ ಹಾಕಿದ್ದೀರಿ? ಬೆಡ್ ಶೀಟ್ ಯಾರದ್ದಿದು? ಅಮ್ಮನದ್ದಲ್ಲವ? ಯಾಕೆ ತೊಳೀತಿದ್ರಿ?’ ಅಂತ ಒಂದೇ ಸಮನೆ ಕೇಳಿದಳು. ಅವಿನಾಶ್ ಈಗಾಗಲೇ ತಳಮಳದಲ್ಲಿದ್ದವನು ಅವಳ ಪ್ರಶ್ನೆಗೆ ಉತ್ತರ ಕೊಡದೇ, ಬೆಡ್ ಶೀಟ್ ಅನ್ನು ತಂತಿಯ ಮೇಲೆ ಹಾಕಿ ಕ್ಲಿಪ್ ಹಾಕತೊಡಗಿದ. `ಅಲ್ಲ, ಅಮ್ಮನಿಗೇನಾಯ್ತು?’ ಅಂದುಕೊಂಡೆ ಮಾಧವಿ ಆತುರದಲ್ಲಿ ಅಮ್ಮನ ರೂಮಿಗೆ ಕಾಲಿಟ್ಟಳು.
ಅಮ್ಮ ಅನಾಥವಾಗಿ ಸೋಫಾದ ಮೇಲೆ ಬಿದ್ದುಕೊಂಡಿದ್ದರು!
`ಅಮ್ಮ, ಏನಾಯ್ತಮ್ಮ? ಏನು ಮಾಡ್ಕೊಂಡೆ?’ ಅಂತ ಮೈದಡವಿದಾಗ ಸೀತಮ್ಮ, ಪುಟ್ಟ ಮಗುವಿನಂತೆ ಮಾಧವಿಯ ಎದೆಯನ್ನು ಅವುಚಿ ಅತ್ತುಬಿಟ್ಟಿತು. ಮಾಧವಿಯ ಎದೆಯೆಲ್ಲ ತೇವಗೊಂಡವು. ಮಾಧವಿ ತನ್ನ ತೋಳುಗಳನ್ನೇ ತೊಟ್ಟಿಲಂತೆ ಆಡಿಸುತ್ತ `ಅಮ್ಮ, ಸಮಾಧಾನ, ಗಾಬರಿಯಾಗಬೇಡ, ಏನೂ ಆಗಿಲ್ಲ. ಏನು ಬಿದ್ದು ಹೋಗಿದ್ಯ? ಯಾಕೆ ಎದ್ದೆ ನೀನು? ಹಾಸಿಗೆನಲ್ಲೆಲ್ಲ ಒದ್ದೆ ಮಾಡ್ಕೊಂಡಿದ್ಯ? ಹೋಗ್ಲಿಬಿಡು, ಏನು ತೊಂದ್ರೆ ಇಲ್ಲ. ಬೇರೆ ಬೆಡ್ ಹಾಕೋಣ, ನಾನು ಬಂದಿದೀನಲ್ಲ, ನಿಂಗೇನು ಆಗಲ್ಲ’ ಅಂತ ಇನ್ನಷ್ಟು ಮೆದುವಾಗಿ ಅಮ್ಮನನ್ನ ಎದೆಗೆ ಒತ್ತಿಕೊಂಡಳು. ಸೀತಮ್ಮ ಹಾಗೇ ಮುದುರಿಕೊಂಡಿತು.
ಹೊರಗೆ ಬಟ್ಟೆ ಒಣ ಹಾಕಿ ಅವಿನಾಶ್ ಒಳಗೆ ಬಂದ. ಅಲ್ಲಿನ ಅವಸ್ಥೆ ನೋಡಿ, ಅವಳು ಹೇಳುವ ಮುನ್ನವೇ ಮಂಚದ ಮೇಲೆ ಮತ್ತೊಂದು ಹಾಸಿಗೆ ಹಾಸಿದ. ಮಾಧವಿಯ ತೋಳಿನಲ್ಲಿದ್ದ ಅತ್ತೆಯನ್ನು ಅನಾಮತ್ತಾಗಿ ಎತ್ತಿ ಹಿಡಿದು, ಅಂಗಾತ ಮಲಗಿಸಿದ. ಸೀತಮ್ಮನಿಗೆ ಆ ಅರಳುಮರಳಿನಲ್ಲಿ ಮುಜುಗರವೆನಿಸಿತು. ಅವಿನಾಶನನ್ನ ಕಂಡು, ಅವನು ರೇಗಿದ್ದು ನೆನಪಾಗಿ ಅದು ಹಾಗೆ ತಲೆ ತಗ್ಗಿಸಿತು. ಮಾಧವಿ ತಾನೂ ಧಾವಂತದಲ್ಲಿ ಬೆಡ್ ಕಡೆ ನಡೆದಳು. ಅವಿನಾಶ್ ಏನೂ ಮಾತಾಡದೇ, ಮಾಧವಿ ಕಡೆ ಒಮ್ಮೆ ನೋಡಿ `ನನ್ನ ಮೀಟಿಂಗು ಸರ್ವನಾಶ ಆಯ್ತು ಅಂತ ಕಾಣುತ್ತೆ’ ಅಂತ ಅವಸರದಲ್ಲಿ ಮುನ್ನಡೆದ.
`ಥ್ಯಾಂಕ್ಸ್ ಅವಿ, ಯೂ ಆರ್ ಗ್ರೇಟ್’ ಅಂದಳು ತುಂಬು ಹೃದಯದಲ್ಲಿ.
ಅವಿನಾಶ್ ಹೆಚ್ಚು ಗಮನ ಕೊಡಲಿಲ್ಲ. ಅವನ ತಲೆಯ ಮೇಲೆ ಬಂಡೆಯ ಹಾಗೆ ಜವಾಬ್ದಾರಿಗಳಿದ್ದವು. ಅವನು ಮರಳಿ ಹೋಗಿ ಲ್ಯಾಪ್ ಟಾಪ್ ಮುಂದೆ ಅವತರಿಸಿದ. ಇನ್ನೇನು ಮೀಟಿಂಗು ಮತ್ತೆ ಆರಂಭಗೊಳ್ಳುವುದರಲ್ಲಿತ್ತು. ಅಷ್ಟರಲ್ಲಿ ಅವನು ಮೀಟಿಂಗಿಗೆ ಜಾಯ್ನ್ ಆದ. ಮಾಧವಿ, ಅಮ್ಮನಿಗೆ ಹೊಸ ಡೈಪರ್ ಹಾಕಿ, ಅವಳಿಗೆ ಹೊಸತೊಂದು ಹೊದಿಕೆ ಹೊದಿಸಿ, ಅವಳ ಹಣೆ ನೇವರಿಸಿ ಮುತ್ತಿಟ್ಟಳು. ಅಮ್ಮ ಒಳ್ಳೆಯ ನಿದ್ರೆ ತೆಗೆಯುತ್ತಿದ್ದಳು. ಮಾಧವಿ ಎದ್ದು ಅವಿನಾಶನ ರೂಮಿಗೆ ಹೋದಳು. ಅವಿನಾಶ್ ಆಗಷ್ಟೇ ಮೀಟಿಂಗ್ ಮುಗಿಸಿ, ಲ್ಯಾಪ್ ಟಾಪಿಗೊಂದು ವಿರಾಮ ನೀಡತೊಡಗಿದ್ದ. ಹಿಂದಿನಿಂದ ಬಂದು ಅವನನ್ನ ಮಾಧವಿ ಹಗ್ ಮಾಡಿಕೊಂಡಳು. ಅವನಿಗೆ ಬೇಡ ಅನ್ನಿಸಲಿಲ್ಲ. ಹಾಗೆ ತಬ್ಬಿಕೊಳ್ಳಲು ಅನುವು ಮಾಡಿಕೊಟ್ಟ.
`ಯೂ ಆರ್ ವೆರಿ ನೈಸ್’ ಅಂದಳು ಮಾಧವಿ.
ಅವನಿಗೆ ಆ ಪ್ಯಾಂಪರ್ ಅಗತ್ಯವಿತ್ತು. ಅವಳು `ಇಷ್ಟೆಲ್ಲ ಯಾರು ಮಾಡಲ್ಲ, ನೀವು ಅಮ್ಮನ ಹಾಸಿಗೆ ಒಣ ಹಾಕಿ, ಬೆಡ್ ಶೀಟ್ ಒಗೆದು ಹಾಕಿದೀರಿ, ಥ್ಯಾಂಕ್ಸ್ ಅನ್ನೋದು ಬರೀ ಎರಡೂವರೆ ಅಕ್ಷರ ಅನ್ನಿಸಿಬಿಡುತ್ತೆ. ಯೂ ಆರ್ ಮೋರ್ ದ್ಯಾನ್ ದಟ್’ ಅಂದಳು. ಅವನು ಉಬ್ಬಲಿಲ್ಲ. ಅವಳ ಎದೆಯ ಬಿಸುಪನ್ನು ಅವನು ಅನುಭವಿಸತೊಡಗಿದ. ಅವಳು ಅವನನ್ನ ತೋಳಿನ ಸೆರೆಯಲ್ಲಿಯೇ ಕಟ್ಟಿ ಹಾಕುತ್ತ ಒಂದು ಪ್ರಸ್ತಾಪವಿಟ್ಟಳು: `ಅಮ್ಮನನ್ನ ನೋಡ್ಕೊಳೋದಕ್ಕೆ ಒಬ್ಬ ಕೇರ್ ಟೇಕರ್ ಇಡೋಣ ಅಂತಿದ್ದೀನಿ, ಸುಮ್ಮನೆ ನನಗೂ ನೋಡ್ಕೊಳೋಕ್ಕಾಗಲ್ಲ. ನಿಮಗೆ ಬೇರೆ ವರ್ಕ್ ಫ್ರಂ ಹೋಂ ಇರುತ್ತೆ, ನಿಮಗೂ ಡಿಸ್ಟರ್ಬ್ ಆಗೋದು ಬೇಡ, ನೀವೇನಂತೀರಿ?’ ಅಂದಳು ಅವಿನಾಶನಿಗೆ ಅನ್ನ ಬಡಿಸುತ್ತ.
ಅವಿನಾಶ್ ಅನ್ನವನ್ನು ಸಾರಿನೊಂದಿಗೆ ಕಲೆಸಿಕೊಳ್ಳುತ್ತ `ಹಾಂ, ಈಗ ಅವರು ಕೂಡ ಸ್ಮಾರ್ಟ್ ಪೇಮೆಂಟ್ ಕೇಳ್ತಾರೆ, ಹದಿನೈದರಿಂದ ಇಪ್ಪತ್ತರವರೆಗು’ ಅಂದ. ಮಾಧವಿ ತಾನೂ ಬಡಿಸಿಕೊಳ್ಳುತ್ತ `ಅದನ್ನ ನಾನೇ ಬೇರ್ ಮಾಡ್ತೀನಿ, ಯೂ ಡೊಂಟ್ ವರಿ’ ಅಂದಳು. ಅವಿನಾಶ್ ಹಿಂಜರಿಯುತ್ತಲೇ `ಸುಮ್ಮನೆ ಖರ್ಚಲ್ಲವ?’ ಅಂದ. ಅವಳು `ಹಾಗಿಡದೇ ಹೋದರೆ ಈವತ್ತು ಆದ ಹಾಗಾಗುತ್ತೆ, ಅದಕ್ಕೆ ದುಡ್ಡು ಹೋದರೂ ಚಿಂತೆ ಇಲ್ಲ, ನಿಮಗೂ ತೊಂದರೆ ಆಗಬಾರದು, ನನಗೂ ಕಷ್ಟ ಆಗಬಾರದು’ ಅಂದಳು. ಅವನು `ನಿನ್ನಿಷ್ಟ’ ಅಂತ ಭುಜ ಕುಣಿಸಿದ.
ಅಷ್ಟರಲ್ಲಿ ಬೆಲ್ ಆಯ್ತು, ಅವಿನಾಶ್ ಏಳಲು ಮುಂದಾದ. ಅವಳು ಅವನನ್ನ ಅಡ್ಡಿಪಡಿಸಿ `ಇರಿ ನಾನೇ ಹೋಗ್ತೀನಿ, ಯಾರೊ ಒಬ್ರು ಕೇರ್ ಟೇಕರ್ ಗೆ ಹೇಳಿದ್ದೆ ಬರೋದಕ್ಕೆ. ಒಂದು ಸಾರಿ ಇಂಟರ್ ವ್ಯೂ ಮಾಡಿ ನೋಡ್ತೀನಿ, ಅವರು ಓಕೆ ಆದರೆ ಬರಕ್ಕೆ ಹೇಳಬೇಕು. ಒಂದ್ನಿಮಿಷ ಬಂದೆ’ ಅಂತ ಹೇಳಿ ಹೋಗಿ ಬಾಗಿಲು ತೆಗೆದಳು.
ಅಲ್ಲಿ ಸುಮಾರು ಇಪ್ಪತ್ತನಾಲ್ಕು ವಯಸ್ಸಿನ ಯುವತಿ ನಿಂತಿದ್ದಳು. ಅವಳ ಎರಡು ಕಿವಿಗಳಿಗೆ ಹೆಡ್ ಫೋನ್ ಹಾಕಲಾಗಿತ್ತು. ಅವಳು `ಎಕ್ಸ್ ಕ್ಯೂಸ್ ಮಿ, ನಾನು ಕವಿತ’ ಅನ್ನುವಾಗ `ಹಾಂ ನಾನೇ ಮಾಧವಿ, ಬನ್ನಿ ಒಳಗೆ’ ಅಂತ ಒಳಗೆ ಕರೆತಂದು ಹಾಲ್ನ ಸೋಫಾದಲ್ಲಿ ಕೂರಿಸಿಕೊಂಡಳು. ಅವಳೇ ಕೇರ್ ಟೇಕರ್ ಅಂತ ವಿವರಿಸಿ ಹೇಳಬೇಕಾಗಿರಲಿಲ್ಲ. ಮಾಧವಿ ಅವಳಿಗೆ ಕುಡಿಯಲು ನೀರು ಕೊಟ್ಟು `ಬನ್ನಿ, ನಮ್ಮ ತಾಯಿನ ನಿಮಗೆ ತೋರಿಸ್ತೀನಿ’ ಅಂತ ಹೇಳಿ ಅಮ್ಮನ ಕೋಣೆಗೆ ಕರೆತಂದಳು.
ಸೀತಮ್ಮ ಮಲಗಿದಲ್ಲೇ ಮಲಗಿದ್ದರು. ಮಾಧವಿ ಒಳಗೆ ಬಂದು ಕವಿತಳಿಗೆ ತನ್ನಮ್ಮನನ್ನ ಪರಿಚಯಿಸುತ್ತ `ನೋಡಿ, ಇವರೇ ಸೀತಮ್ಮ ಅಂತ, ನನ್ನ ಒಬ್ಬರೇ ಅಮ್ಮ! ನನಗೆ ನಮ್ಮಮ್ಮ ಅಂದ್ರೆ ಪ್ರಾಣ. ಸಾಧ್ಯ ಆದ್ರೆ ಮೂರು ಹೊತ್ತು ನಮ್ಮಮ್ಮನ ಪಕ್ಕದಲ್ಲೆ ಕೂತು ಅವರನ್ನ ಕೇರ್ ಮಾಡಬೇಕು ಅಂತ ನನಗಾಸೆ. ಆದರೆ ಜಾಬ್ ನಲ್ಲಿದೀನಿ, ನಾನು ನನ್ನ ಗಂಡ ಇಬ್ಬರೂ ವರ್ಕಿಂಗು, ಹಾಗಾಗಿ ಅಮ್ಮನ್ನ ಕೇರ್ ಮಾಡಕ್ಕಾಗ್ತಿಲ್ಲ. ಅದಕ್ಕೆ ನಿಮ್ಮನ್ನ ಕರೆಸಿದ್ದು, ಹೇಳಿ ನಮ್ಮ ತಾಯಿನ ನೋಡ್ಕೊಳೋಕ್ಕಾಗುತ್ತ? ನಿಮಗೆ ಅಷ್ಟು ತಾಳ್ಮೆ ಇದ್ಯ? ನೀಟ್ ಆಗಿ ನೋಡ್ಕೊಳೋಕ್ಕಾಗುತ್ತ? ಹೇಳಿ’ ಅಂದಳು.
ಸೀತಮ್ಮನಿಗೆ ಇದು ಯಾವುದೂ ಅರ್ಥವಾಗುತ್ತಿರಲಿಲ್ಲ.
`ಓ ಖಂಡಿತ ಮೇಡಂ, ನನಗೆ ತುಂಬಾನೇ ಅಭ್ಯಾಸ ಇದೆ, ನಮ್ಮ ಏಜನ್ಸಿನಲ್ಲಿ ಕೇಳಿ, ನಾನು ಸುಮಾರು ಜನ ವಯಸ್ಸಾದವರನ್ನ ನೋಡ್ಕೊಂಡಿದೀನಿ, ನಮ್ಮ ಜಾಬೇ ಇದಲ್ಲವ ಮೇಡಂ, ನಾವು ಹುಷಾರಾಗಿ ನೋಡ್ಕೊಳ್ಳಲೇಬೇಕಾಗುತ್ತೆ. ನೀವು ತಲೆ ಕೆಡಿಸ್ಕೋಬೇಡಿ ಮೇಡಂ, ನಾನು ನೋಡ್ಕೋತೀನಿ, ಮೋಷನ್ನು ಅದು ಇದು ಎಲ್ಲ ಕಂಟ್ರೋಲ್ನಲ್ಲಿ ಇದೆ ಅಲ್ಲವ ಮೇಡಂ?’ ಅಂದಳು ತನ್ನನ್ನು ಕೊಚ್ಚಿಕೊಳ್ಳುತ್ತ.
ಮಾಧವಿ ತಲೆಯಾಡಿಸುತ್ತ ಅಂದಳು `ಇಲ್ಲಮ್ಮ, ಏನೂ ಕಂಟ್ರೋಲ್ನಲ್ಲಿಲ್ಲ, ಕೆಲವು ಸಾರಿ ತಾನು ಯಾರು ಅಂತ ಗೊತ್ತಾಗುತ್ತೆ, ಒಮ್ಮೊಮ್ಮೇ ತಾವ್ಯಾರು ಅಂತಾನೇ ಗೊತ್ತಿರೋದಿಲ್ಲ. ಎಲ್ಲಾ ಮರೆತು ಹೋಗಿರುತ್ತೆ. ಅವರಿಗೆ ತಾನೆಲ್ಲಿ ಹೋಗ್ತೀನಿ ಬರ್ತೀನಿ ಅಂತಾನೂ ಗೊತ್ತಾಗೋದಿಲ್ಲ. ಊಟ ತಿಂಡಿ ಯಾವುದೂ ತಾವೇ ತಿನ್ನೋದಿಲ್ಲ. ಬಟ್ಟೆ ಬರೆ, ಸ್ನಾನ, ಪಾನ ಎಲ್ಲವೂ ನಾವೇ ಮಾಡಿಸಬೇಕಾಗುತ್ತೆ. ಅದಕ್ಕೆ ಕೇಳಿದ್ದು ನಿಮಗೆ ಅಷ್ಟು ಪೇಷನ್ಸ್ ಇದೆಯಾ ಅಂತ, ಹೇಳಿ ನಮ್ಮಮ್ಮನ್ನ ನೋಡ್ಕೊಳೋಕ್ಕಾಗುತ್ತ?’ ಅಂದಳು. ಆ ಹುಡುಗಿ ಇದೆಲ್ಲ ತನಗೆ ಮಾಮೂಲು ಅನ್ನುವಂತೆ `ಮೇಡಂ, ನನಗಿದು ತುಂಬಾನೆ ಈಸಿ ಇದೆ, ನೀವು ಚಿಂತೆನೇ ಮಾಡಬೇಡಿ, ನಾನು ಚೆನ್ನಾಗಿ ನೋಡ್ಕೋತೀನಿ, ನನಗೆ ಖಂಡಿತ ಅಷ್ಟು ತಾಳ್ಮೆ ಇದೆ’ ಅಂದಳು.
ಮಾಧವಿಗೆ ಅಷ್ಟು ಸಾಕಿತ್ತು. `ಸರಿ ಹಾಗಿದ್ರೆ, ನನಗೆ ತೊಂದ್ರೆ ಇಲ್ಲ. ಆದರೆ ನೀವು ಬೆಳಗ್ಗೆ ಒಂಭತ್ತಕ್ಕೆಲ್ಲ ಇರಬೇಕಾಗುತ್ತೆ. ಯಾಕಂದ್ರೆ ನಾನು ಬೆಳಗ್ಗೆ ಒಂಭತ್ತಕ್ಕೆಲ್ಲ ಆಫೀಸಿಗೆ ಹೊರಟುಬಿಡ್ತೀನಿ, ನನ್ನ ಗಂಡ ಕೆಲವು ಸಾರಿ ಬರ್ತಾರೆ, ಇಲ್ಲದಿದ್ರೆ ವರ್ಕ್ ಫ್ರಂ ಹೋಮ್ ಮಾಡ್ತಿರ್ತಾರೆ, ಸಾಯಂಕಾಲ ನಾವು ಆರು ಗಂಟೆಗೆ ಬಂದ ಮೇಲೆ ನೀವು ರಿಲೀವ್ ಆಗಬಹುದು’ ಅಂದಳು. ಕವಿತ ತಲೆ ಕೆಡಿಸಿಕೊಳ್ಳಲಿಲ್ಲ. ಅವಳು `ಮೇಡಂ, ಬೆಳಗ್ಗೆ ಎಂಟೂ ಐವತ್ತೈದಕ್ಕೆಲ್ಲ ನಾನು ಇಲ್ಲಿರ್ತೀನಿ ಮೇಡಂ, ಡೋಂಟ್ ವರಿ, ಮಿಕ್ಕ ಟರ್ಮ್ಸ್ ಎಲ್ಲ ನಿಮಗೆ ಓಕೆ ಅನ್ನೋದಾದ್ರೆ ನಾಳೆ ಬೆಳಗ್ಗೆ ಇಲ್ಲಿರ್ತೀನಿ’ ಅಂದಳು.
ಅಲ್ಲಿಗೆ ಆ ಹುಡುಗಿ ಫಿಕ್ಸ್ ಆದಳು. ಅವಳು ಪ್ರತಿದಿನ ಬೆಳಗ್ಗೆ ಬಂದು ಸೀತಮ್ಮನನ್ನ ನೋಡ್ಕೊಳ್ಳುವುದು ಮತ್ತು ಹೋಗುವುದು ಅವ್ಯಾಹತವಾಗಿ ನಡೆದೇ ಇತ್ತು. ಆದರೆ ಅವಳು ಮೂರು ಹೊತ್ತು ಮೊಬೈಲ್ನಲ್ಲಿಯೇ ಇರುತ್ತ ಸೀತಮನನ್ನ ನೆಗ್ಲೆಕ್ಟ್ ಮಾಡುವುದು ಕೂಡ ನಡೆದಿತ್ತು. ಕವಿತಳಿಗೆ ಒಬ್ಬ ಲವ್ವರ್ ಇದ್ದು, ಅವರಿಬ್ಬರು ಯಾವ ಬೇಸರವೂ ಇಲ್ಲದ ಹಾಗೆ ಫೋನಿನಲ್ಲಿಯೇ ಪ್ರಣಯ ನಿವೇದನೆ ಮಾಡಿಕೊಳ್ಳುತ್ತಿದ್ದರು. ಕಿವಿ ಕಿತ್ತು ಹೋಗಿಬಿಡುವುದೇನೊ ಅನ್ನುವ ಮಟ್ಟಿಗೆ ಅವರಿಬ್ಬರು ಹರಟುತ್ತಿದ್ದರು. ಪುಣ್ಯಕ್ಕೆ ಅದು ಮಾಧವಿಯ ಗಮನಕ್ಕೆ ಬಂದಿರಲಿಲ್ಲ. ಅವಿನಾಶ್ ಅಂತೂ ನೋಡಿರಲೇ ಇಲ್ಲ. ಇದು ಹೀಗೇ ನಡೆದಿತ್ತು.
ಒಂದು ದಿನ ಮಾತ್ರ ಕವಿತಳ ಲವ್ವರ್ ತೀರಾ ಹಠಕ್ಕೆ ಬಿದ್ದಿದ್ದ. `ನೀನೇನು ಮಾಡ್ತಿಯೋ ಗೊತ್ತಿಲ್ಲ. ಯಾವಾಗ ನೋಡಿದ್ರೂ ಮುದುಕಿ ನೋಡ್ಕೋಬೇಕು ಅಂತ ಹೊರಟು ಹೋಗ್ತಿಯ, ನಾನು ನಿನ್ನನ್ನ ನೋಡೋಕ್ಕಾಗ್ತಿಲ್ಲ. ಈವತ್ತು ನೀನು ನನಗೆ ಸಿಗಲೇಬೇಕು, ನಾನು ನಿನ್ನನ್ನ ನೋಡಲೇಬೇಕು’ ಅಂತ ರಚ್ಚೆ ಹಿಡಿದ. ಅವನು ಹಾಗೆಲ್ಲ ಫೋನ್ ಮಾಡುವಾಗ ಅವಳು ಸೀತಮ್ಮನ ಎದುರಿಗೇ ಇದ್ದಳು. ಸೀತಮ್ಮ ಬಿಟ್ಟ ಕಣ್ಣು ಬಿಟ್ಟಂತೆ ಎಚ್ಚರವಾಗೇ ಇದ್ದಳು. ಅವಳ ಲವ್ವರ್ ನನ್ನು ಈ ಮನೆಗೆ ಕರೆಸಿಕೊಳ್ಳುವುದು ಕನಸಿನ ಮಾತು. ಯಾವುದೇ ಸಮಯದಲ್ಲಿ ಅವಿನಾಶ್ ಬಂದುಬಿಡುವ ಸಾಧ್ಯತೆಗಳಿತ್ತು. ಹಾಗಾಗಿ ಅವಳು ಆ ರಿಸ್ಕ್ ತೆಗೆದುಕೊಳ್ಳಲು ಸಿದ್ಧಳಿರಲಿಲ್ಲ. ಯಾವಾಗ ಅವಳ ಲವ್ವರ್ ತಾನು ಅಲ್ಲಿಗೇ ಬಂದುಬಿಡುವುದಾಗಿ ಧಮಕಿ ಹಾಕಿದನೊ, ಕವಿತ ಒಂದು ಯೋಜನೆ ಮಾಡಿಕೊಂಡಳು. ತನ್ನ ಬಳಿ ಇದ್ದ ನಿದ್ದೆ ಮಾತ್ರೆಯನ್ನು ಹಾಲಿನಲ್ಲಿ ಕಲಕಿ ಸೀತಮ್ಮನಿಗೆ ಕುಡಿಸಲು ಮುಂದಾದಳು. ಕುಡಿಸುವುದೇನು ಬಂತು? ಕುಡಿಸೇಬಿಟ್ಟಳು. ಕೆಲವೇ ನಿಮಿಷಗಳಲ್ಲಿ ಸೀತಮ್ಮ ನಿದ್ರಾವಶರಾದರು.
ಅವಳ ಮೊಬೈಲಿಗೆ ಕರೆ ಬಂದರೂ ಹುಡುಗಿ ಅವಳ ಫೋನ್ ಅನ್ನು ನಿರ್ಲಕ್ಷಿಸಿ, ಅಲ್ಲಿಂದ ಕಾಲ್ಕಿತ್ತು, ಮನೆಯನ್ನು ಹೊರಗಿನಿಂದ ಲಾಕ್ ಮಾಡಿಕೊಂಡು, ಒಂದು ಆಟೋ ಹಿಡಿದು ಅವನಿದ್ದ ಪಾರ್ಕಿಗೆ ಹೊರಟು ಹೋದಳು. ಯಾರದೋ ಸಂತೋಷಕ್ಕೆ ಇನ್ಯಾರದ್ದೋ ಸಂಕಟಕ್ಕೆ ಮುಹೂರ್ತ ಸಿದ್ಧವಾಗಿತ್ತು!
ಆದರೆ ಇದನ್ನು ಯಾವುದೋ ಕಂಗಳು ನೋಡಿದವೆನ್ನುವುದು ಅವಳಿಗೆ ತಿಳಿಯಲಿಲ್ಲ!
******
ಡಾಕ್ಟರು ಬಂದು ಸೀತಮ್ಮನನ್ನ ನೋಡತೊಡಗಿದರು. ಸೀತಮ್ಮನ ಉಸಿರಿನ ವೇಗ, ಅವಳ ಬಿ.ಪಿ. ಅವಳ ಶುಗರ್ ಎಲ್ಲವನ್ನೂ ಕೂತಲ್ಲೇ ಚೆಕ್ ಮಾಡಿದರು. ಮಾಧವಿಗೆ ಎದೆ ಹೊಡೆದುಕೊಳ್ಳುತ್ತಿತ್ತು. ಡಾಕ್ಟರು ಆಕ್ಸೀಮೀಟರ್ ನಲ್ಲಿ ಸೀತಮ್ಮನನ್ನ ಚೆಕ್ ಮಾಡಿ, ಒಂದು ಇಂಜಕ್ಷನ್ ಕೊಟ್ಟರು.
`ಯೋಚನೆ ಮಾಡಬೇಡಿ, ಏನೂ ತೊಂದರೆ ಇಲ್ಲ. ಇನ್ನು ಸ್ವಲ್ಪ ಹೊತ್ತಿನಲ್ಲಿ ನಿಮ್ಮ ತಾಯಿ ಎಚ್ಚರಾಗ್ತಾರೆ, ನೋಡಿ ಈ ನಿದ್ರೆ ಮಾತ್ರೆ ಹಾಕಿದ್ದಾರೆ, ಅದರ ಸ್ಟ್ರಿಪ್ ಇಲ್ಲೇ ಇದೆ ನೋಡಿ’ ಅಂತ ಮಾಧವಿಯ ಕೈಗಿತ್ತರು. ಮಾಧವಿ ತಲ್ಲಣಿಸಿದಳು. ಅಲ್ಲಿ ಡಾಕ್ಟರು ಅಡ್ವೈಸ್ ಮಾಡುತ್ತ `ಯಾರೋ ಕೇರ್ ಟೇಕರ್ ಆಸ್ಥೆ ವಹಿಸಿ ನೋಡ್ಕೋತಾರೆ ಅಂತ ಬಿಟ್ಟು ಹೋಗೋದು ಸರಿ ಅಲ್ಲ ಮಾಧವಿ, ನಮ್ಮದೊಂದು ಗಮನ ಇಲ್ಲಿ ಇದ್ದೇ ಇರಬೇಕು. ಪ್ರಾಮಾಣಿಕವಾಗಿ ನೋಡ್ಕೊಳೋವ್ರು ಸಿಕ್ಕೋದು ತುಂಬಾ ಕಡಿಮೆ. ನೀವು ಬೆಟರ್ ಏನಾದರು ಡಿಸಿಶನ್ ತಗೊಳ್ಳೋದು ಒಳ್ಳೇದು, ಯೋಚನೆ ಮಾಡಿ’ ಅಂತ ಧೈರ್ಯ ತುಂಬಿ ಹೊರಟು ಹೋದರು.
ಎಲ್ಲವನ್ನು ಕೇಳಿಸಿಕೊಂಡಿದ್ದ ಅವಿನಾಶ್ ಡಾಕ್ಟರಿಗೆ ಕೈ ಮುಗಿದ. ಅಲ್ಲಿ ಮಾಧವಿಗೆ ಮನಸ್ಸು ತೀರಾ ತಲ್ಲಣಿಸಿ ಹೋಯಿತು. ಯಾವಾಗ ಕೇರ್ ಟೇಕರ್ ತನ್ನ ಸುತ್ತಾಟ ಮುಗಿಸಿ ಮನೆ ಒಳಗೆ ಕಾಲಿಟ್ಟಳೊ, ಅವಳಿಗೆ ಮನುಷ್ಯರ ಬಗ್ಗೆ ನಂಬಿಕೆಯೇ ಹೊರಟು ಹೋಯಿತು. ಅವಳ ಮುಖದ ಮೇಲೆ ದುಡ್ಡು ಬಿಸಾಕಿ, `ಮುಖ ತೋರಿಸಬೇಡ, ನಿನಗೆ ಪೊಲೀಸಿಗೆ ಕೊಡದೇ ಬಿಟ್ಟಿದ್ದೀನಿ, ಗೆಟ್ ಲಾಸ್ಟ್’ ಅಂತ ನರನಾಡಿ ಕಿತ್ತುಬರುವಂತೆ ಅರಚಿದಳು. ಆ ಹುಡುಗಿ ತತ್ತರಿಸಿ ಹೋದವಳು, ಒಂದು ಕ್ಷಣ ಕೂಡ ನಿಲ್ಲದೇ ಅಲ್ಲಿಂದ ಹೊರಟು ಹೋಗಿದ್ದಳು. ಮಾಧವಿಗೆ ದುಃಖ ಉಮ್ಮಳಿಸಿ ಬಂತು. ತಾನು ಮೊಬೈಲ್ನಲ್ಲಿ ಮನೆಯ ಸಿಸಿಟಿವಿಯ ದೃಶ್ಯ ನೋಡದೇ ಹೋಗಿದ್ದರೆ, ಈ ವಿಷಯ ಅವಳಿಗೆ ತಿಳಿಯುತ್ತಲೇ ಇರಲಿಲ್ಲ! ತಮ್ಮ ವಸ್ತು ಎಂದಿಗೂ ತಮ್ಮದೇ, ಅಮ್ಮ ಅನ್ನುವುದು ನನ್ನ ಪ್ರಜ್ಞೆಯ ವಸ್ತುವೆ ಹೊರತು ಇತರರ ಪ್ರಜ್ಞೆಯ ವಸ್ತುವಲ್ಲ ಅಂತ ತೀವ್ರವಾಗಿ ಅನ್ನಿಸಿತು. ಆ ಇಡೀ ರಾತ್ರಿ ನಿದ್ರೆ ಮಾಡದೇ ಅಮ್ಮನನ್ನ ಅಪ್ಪಿಕೊಂಡು ಮಲಗಿದ ಮಾಧವಿಯ ಮನಸ್ಸಿನಲ್ಲಿ ಒಂದು ನಿರ್ಧಾರ ಸಿದ್ಧವಾಗಿತ್ತು.
`ಹಾಗಿದ್ರೆ ಬೇರೆ ಒಬ್ಬ ಕೇರ್ ಟೇಕರ್ ಹುಡುಕ್ತಿಯ?’ಅಂತ ಅವಿನಾಶ್ ಕ್ಯಾಶುಅಲ್ ಆಗೇ ಅಂದ. ಮಾಧವಿ ತನ್ನ ಎಲ್ಲ ಬಿಗುವನ್ನು ಮೀರಿ ಅಂದಳು. `ಇಲ್ಲ. ಪೇಪರ್ ಹಾಕ್ತೀನಿ, ನಾನು ನಮ್ಮಮ್ಮನ್ನ ನೋಡ್ಕೋಬೇಕು, ಅವರು ಇರೋಷ್ಟು ದಿನ ಅವರನ್ನ ನಾನು ಚೆನ್ನಾಗಿ ನೋಡ್ಕೋಬೇಕು ಅಷ್ಟೇ’
ಅವಿನಾಶ್ ಅಕ್ಷರಶಃ ಭೂಮಿಗಿಳಿದು ಹೋಗಿದ್ದ!
*******
`ಮಾಧವಿ ನೀನು ಕೆಲಸ ಬಿಡಬೇಡ’ ಅಂತ ಮರುದಿನ ಅವಳು ಆಫೀಸಿಗೆ ಹೊರಟು ನಿಂತಾಗ ಅವಿನಾಶ್ ಅನ್ನಲು ಹೋದ. ಅವಳು ಮಾತ್ರ ಮೌನವಾಗಿ ತನ್ನಮ್ಮನನ್ನ ಸಿದ್ಧಪಡಿಸಿ, ಅವಳಿಗೆ ಹೊಟ್ಟೆ ತುಂಬಾ ಹಾಲು ಕುಡಿಸಿ, ಮಾತ್ರೆ ಔಷಧಿ ಕೊಟ್ಟು, ಅವಿನಾಶ್ ಕಡೆಗೆ ಒಂದು ಶುಷ್ಕ ನೋಟ ಬೀರಿ ಮುನ್ನಡೆದಳು. ಅವಿನಾಶ್ನ ಮನಸ್ಸಿನಲ್ಲಿ ನಡೆಯುತ್ತಿರುವ ತಲ್ಲಣ ಅವಳಿಗೆ ತಿಳಿಯದೇನಾಗಿರಲಿಲ್ಲ. ಆದರೆ ಅವಳು ಏನೂ ಮಾತನಾಡಲಿಲ್ಲ. ಅವಿನಾಶ್ ಮಾತ್ರ ನಿಂತಲ್ಲಿಯೇ ಚಡಪಡಿಸುತ್ತಿದ್ದ. ಯಾವಾಗ ಮಾಧವಿ ಕೇರ್ ಮಾಡದೇ ಹೊರಟು ಹೋದಳೋ ಅವಳು ಖಂಡಿತ ಕೆಲಸಕ್ಕೆ ಪೇಪರ್ ಹಾಕಿಬಿಡುತ್ತಾಳೆ ಅನ್ನುವುದು ಅವನಿಗೆ ಖಚಿತವಾಗಿ ಹೋಯಿತು. ಅವನು ತಲೆ ಹಿಡಿದುಕೊಂಡು ಕೂತ. ಎಲ್ಲ ಈ ಮುದುಕಿ ಬಂದ ಮೇಲೇ ಹೀಗಾಯಿತು ಅನ್ನುವುದು ಅವನಿಗೆ ತೀವ್ರವಾಗಿ ಅನ್ನಿಸತೊಡಗಿತು. ಅವನ ಬಾಮೈದುನನ ದೌಲತ್ತು, ಅವನು ಏಕಾಏಕಿ ಅತ್ತೆಯನ್ನು ತಂದು ತಮ್ಮ ತಲೆಗೆ ಕಟ್ಟಿದ್ದು, ಮಾಧವಿ ಅಮ್ಮನ ಬಗ್ಗೆ ತೀವ್ರ ಪೊಸೆಸಿವ್ ಆಗಿದ್ದು, ತನ್ನ ಮತ್ತು ಮಾಧವಿಯ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಯಾಗಿದ್ದು, ತಮ್ಮ ಮನೆಯ ನೆಮ್ಮದಿ ಹಾಳಾಗಿದ್ದು ಎಲ್ಲವೂ ಅವನಿಗೆ ಕಾಡತೊಡಗಿದವು. ಅವನ ಮನಸ್ಸು ರೋಗಗ್ರಸ್ಥವಾಯಿತು. ಆ ಸಂದರ್ಭದಲ್ಲಿ `ಟಕ್ಕ ಟಕ್ಕ’ ಅನ್ನುವ ಸದ್ದು ಕೇಳತೊಡಗಿತು. ಅವಿನಾಶ್ ಸದ್ದು ಬಂದ ಕಡೆ ತಿರುಗಿ ನೋಡಿ ಹೌಹಾರಿದ!
ಅಲ್ಲಿ ಸೀತಮ್ಮ ತಾನೊಬ್ಬಳೇ ವಾಕರ್ ಅನ್ನು ನೆಲದ ಮೇಲೆ ಕುಕ್ಕುತ್ತ ಕುಕ್ಕುತ್ತ `ಟಕ್ಕ ಟಕ್ಕ’ ಅನ್ನುವ ಸದ್ದು ಮಾಡಿಕೊಂಡು ಬರತೊಡಗಿದಳು. ಆ ಸದ್ದು ಅವಿನಾಶನ ತಲೆಗೆ ಸಾವಿರ ಮೊಳೆಗಳನ್ನು ಒಮ್ಮೆಲೆ ಹೊಡೆದಂತಾಯಿತು. ಅವನು ಎರಡು ಕಿವಿ ಮುಚ್ಚಿಕೊಂಡರೂ `ಟಕ್ಕ ಟಕ್ಕ’ ಅನ್ನುವ ಸದ್ದು ಅವನಿಗೆ ಹಿಸ್ಟರಿಕಲ್ ಆಗುವಂತೆ ಮಾಡಿಬಿಟ್ಟಿತು. ಅವನು ಅವುಡುಗಚ್ಚಿದವನು ಆ ಸಿಟ್ಟಿನಲ್ಲಿ ಒಂದು ದುಡುಕಿನ ನಿರ್ಧಾರ ಮಾಡಿಬಿಟ್ಟ!
ಅವಿನಾಶ್ ತನ್ನ ಕೋಣೆಗೆ ಬಂದವನೇ ಸಿಟ್ಟಿನಲ್ಲಿಯೇ ತನ್ನ ಪ್ಯಾಂಟ್ ಮತ್ತು ಶರ್ಟ್ ಧರಿಸಿಕೊಂಡ. ಟೇಬಲ್ ಮೇಲೆ ಇರಿಸಿದ್ದ ಕಾರಿನ ಕೀ ತೆಗೆದು ಜೇಬಿಗೆ ಹಾಕಿಕೊಂಡ. ದುಡದುಡನೆ ಧಾವಿಸಿ ವಾಕರ್ ಸಮೇತ ಸೀತಮ್ಮನನ್ನು ಹಿಡಿದುಕೊಂಡು ಮನೆಯ ಹೊರಗಡೆಗೆ ತುಸು ಜೋರಾಗಿಯೇ ನಡೆಸತೊಡಗಿದ. ಸೀತಮ್ಮ `ಅಯ್ಯೋ ಅಮ್ಮ’ ಅಂತ ಹೆದರಿ ಹೌಹಾರುತ್ತಿತ್ತು. ಆದರೆ ಅವಿನಾಶ್ ರಾಕ್ಷಸನಾಗಿಬಿಟ್ಟಿದ್ದ. ಅವಳ ರಟ್ಟೆ ಹಿಡಿದು, ದುಡದುಡನೆ ನಡೆಸಿಕೊಂಡು, ಎಡಗೈನಲ್ಲಿ ಮನೆಯ ಲಾಕ್ ಮಾಡಿಕೊಂಡ. ಸೀತಮ್ಮ ನಡೆಯಲಾರದೇ ತತ್ತರಿಸಿದಾಗ `ಹೇ ನಡಿ ಸುಮ್ಮನೆ’ ಅಂತ ಜೋರಾಗಿ ಬೈದುಬಿಟ್ಟ. ಆ ಮುದುಕಿ ಆ ಬೈಗುಳಕ್ಕೆ ಅವಾಕ್ಕಾಗಿ ಹೋಯಿತು. ಅವಿನಾಶ್ ಕರಗಲಿಲ್ಲ. ತನ್ನ ರಕ್ಕಸತನದಲ್ಲಿ ಮುದುಕಿಯನ್ನು ಕರೆತಂದು ಮುಂದಿನ ಡೋರಿನ ಎಡಗಡೆ ಕೂರಿಸಿದ. ಅವಳ ವಾಕರ್ ಅನ್ನು ಕಾರಿನ ಟಾಪ್ ಮೇಲೆ ಹಾಕಿದ. ಮತ್ತೆ ರಭಸದಲ್ಲಿ ತಾನು ಮುಂಬರಿದು, ಬಲಗಡೆಯಲ್ಲಿ ಕೂತವನು ಬರ್ರನೆ ಕಾರ್ ಆನ್ ಮಾಡಿ ಮುಂದುವರೆದ. ಕಾರು ಬೆಲ್ಟ್ ಗಾಗಿ ಸದ್ದು ಮಾಡಿದಾಗ ಅದಕ್ಕೂ ಸಿಂಡರಿಸಿಕೊಂಡು, ಸೀತಮ್ಮನಿಗೆ ಸೀಟ್ ಬೆಲ್ಟ್ ಹಾಕಿ, ತಾನೂ ಬೆಲ್ಟ್ ಹಾಕಿಕೊಂಡು ಅಲ್ಲಿಂದ ವೇಗವಾಗಿ ನಿರ್ಗಮಿಸಿದ.
ಸೀತಮ್ಮ ಮಾತ್ರ ಮಗುವಿನಂತೆ ಬಾಯಿ ಮುಚ್ಚಿಕೊಂಡು ಕೂತಿತ್ತು!
ಅವಿನಾಶನ ಕಾರು ಸಿಟಿಯ ನಡುವೆ ಪ್ರವೇಶಿಸಿ, ಅಲ್ಲಲ್ಲಿ ಸಿಗ್ನಲ್ಗಳಲ್ಲಿ ನಿಂತು ನಡೆಯತೊಡಗಿತ್ತು. ಕಾರಿನ ಮೇಲೆ ಸೀತಮ್ಮನ ವಾಕರ್ರು ವಿರಾಜಮಾನವಾಗಿತ್ತು. ಅವಿನಾಶನ ಮನಸ್ಸು ಮಾತ್ರ ಕಲ್ಲಾಗಿತ್ತು. ಅವನಿಗೆ ಆದಷ್ಟು ಬೇಗ ಸೀತಮ್ಮನನ್ನ ತೊಲಗಿಸಿದ್ದರೆ ಸಾಕಿತ್ತು. ಹಾಗಾಗಿ ದಿಕ್ಕುಗೆಟ್ಟಂತೆ ಕಾರು ನಡೆಸತೊಡಗಿದ. ಅವನ ಆಲೋಚನೆ ಏನಿದೆ ಅನ್ನುವುದು ಸ್ವತಃ ಅವನಿಗೇ ಗೊತ್ತಿರಲಿಲ್ಲ.

ಮಾಧವಿ ಅಮ್ಮನಿಗೋಸ್ಕರ ಹಣ್ಣುಗಳ ಬುಟ್ಟಿಯನ್ನೇ ಹೊತ್ತು ಮನೆಗೆ ಬಂದಾಗ ಮಧ್ಯಾಹ್ನವಾಗಿತ್ತು. ಇರುವಷ್ಟು ದಿನ ಅಮ್ಮನನ್ನ ಚೆನ್ನಾಗಿ ನೋಡಿಕೊಳ್ಳಬೇಕು, ಮುಂದೆ ಯಾವ ಅಪರಾಧೀ ಪ್ರಜ್ಞೆಯು ತನ್ನಲ್ಲಿ ಇರಬಾರದೆನ್ನುವುದು ಅವಳ ಇಂಗಿತ. ಅಲ್ಲದೇ ಅಮ್ಮನ ಬಗ್ಗೆ ಅಷ್ಟು ಸೆಳೆತವೂ ಇರದೇ ಏನಿರಲಿಲ್ಲ. ಅವಳು ಒಮ್ಮೆ ಮನೆಯ ಬಾಗಿಲು ಜಗ್ಗಿ ನೋಡಿದವಳು, ಅದು ಲಾಕ್ ಆಗಿರುವುದನ್ನು ಗಮನಿಸಿ, ಅವಿನಾಶ್ ಹೊರಗೆ ಹೋಗಿರಬಹುದು ಎಂದುಕೊಂಡು, ತನ್ನ ಬ್ಯಾಗ್ನಲ್ಲಿದ್ದ ಕೀಯಿಂದ ಮನೆಯ ಲಾಕ್ ತೆಗೆದು ಒಳಗೆ ಬಂದಳು.
ಮನೆ ಇಡೀ ತಣ್ಣಗಿತ್ತು. ಅವಳು ಹೂವಿನ ಬುಟ್ಟಿ ಅಲ್ಲಿಟ್ಟವಳೇ `ಅಮ್ಮ ಅಮ್ಮ’ ಅನ್ನುತ್ತ ಮೊದಲು ಅಮ್ಮನ ಕೋಣೆಯತ್ತ ಹೆಜ್ಜೆ ಹಾಕಿದಳು. ಮಾಧವಿ ತನ್ನ ಅಕ್ಕರೆಯನ್ನು ತುಳುಕಿಸುತ್ತ ಅಮ್ಮನ ಕೋಣೆಯೊಳಗೆ ಬಂದು ಇಣುಕಿ ನೋಡಿದಾಗ ಅಚ್ಚರಿ ಕಾದಿತ್ತು. ಅಲ್ಲಿ ಅಮ್ಮ ಇರಲಿಲ್ಲ! ಮಾಧವಿ ಗಲಿಬಿಲಿಗೊಂಡಳು. ಅವಳು ಸುತ್ತಮುತ್ತ ಅಲ್ಲಿ ಇಲ್ಲಿ ಹುಡುಕುತ್ತ `ಅಮ್ಮ, ಅಮ್ಮ’ ಅಂತ ಅಲೆಯತೊಡಗಿದಳು. ಆದರೆ ಎಲ್ಲೂ ಅಮ್ಮನ ಸುಳಿವಿರಲಿಲ್ಲ. ಮನೆಯಲ್ಲಿ ಅವಿನಾಶ್ ಕೂಡ ಇರದೇ, ಅಮ್ಮ ಕೂಡ ಇರದೇ ಹೋದದ್ದು ಅವಳಿಗೆ ಹೆಚ್ಚಿನ ದಿಗಿಲು ಉಂಟು ಮಾಡಿತ್ತು. ಅವಳು `ಅಲ್ಲ, ಏನಾಯ್ತು? ಅಮ್ಮ ಎಲ್ಲಿ ಹೋಗೋಕ್ಕೆ ಸಾಧ್ಯ?’ ಅನ್ನುತ್ತ ಎಲ್ಲ ಕಡೆ ಹುಡುಕುತ್ತ ಕಡೆಗೆ ಅವಿನಾಶ್ಗೆ ಕಾಲ್ ಮಾಡಲು ಹೊರಟವಳಿಗೆ, ಹೊರಗೆ ಕಾರು ನಿಂತ ಸದ್ದಾಯಿತು. ಅವಳು ಕೂಡಲೇ ಹೊರಗೆ ಓಡಿದಳು.
`ಅವಿನಾಶ್.. ಅವಿನಾಶ್. ಅಮ್ಮ ಎಲ್ಲಿ?’ ಅಂದಳು.
ಆಗಷ್ಟೇ ಸೀತಮ್ಮನನ್ನ ಬಿಟ್ಟು ಬರುತ್ತಿದ್ದ ಅವಿನಾಶ್ ಗಲಿಬಿಲಿಗೊಂಡ. `ಇಲ್ಲ ಅದು..’ ಅಂತ ತಡವರಿಸಿದ. ಅವಳು `ಅಲ್ಲ ಅವಿನಾಶ್, ಅಮ್ಮ ಮನೆನಲ್ಲಿಲ್ಲ. ಈಗ ನೋಡಿದ್ರೆ ನಿಮ್ಮ ಜೊತೆನೂ ಇಲ್ಲ. ಎಲ್ಲಿ ಹೋದ್ರು ಅಮ್ಮ? ನೀವು ನೋಡಿದ್ರ?’ ಅಂದಳು. ಅವನು ಅವಳ ಪ್ರಶ್ನೆಗೆ ಉತ್ತರಿಸಲಾಗದೇ ಅವಳನ್ನು ಕ್ರಾಸ್ ಮಾಡಿಕೊಂಡು ಮುನ್ನಡೆದ. ಮಾಧವಿಗೆ ಗೊಂದಲ ಉಂಟಾಯಿತು. ಅವಳು ಅವನ ಹಿಂದೆಯೇ ಬರುತ್ತ `ಅವಿನಾಶ್ ಅಮ್ಮ ಎಲ್ಲಿ? ಎಲ್ಲಿ ಹೋದ್ರು?’ ಅಂದಳು. ಅವನೀಗ ಅವಳ ಪ್ರಶ್ನೆಗೆ ಉತ್ತರಿಸಲೇಬೇಕಾಗಿತ್ತು.
`ಏನು? ನಮಗೊಬ್ಬರಿಗೇನಾ ಜವಾಬ್ದಾರಿ? ನಿನ್ನ ತಮ್ಮ ಆಸ್ತಿ, ಗೀಸ್ತಿ ಎಲ್ಲದರಲ್ಲು ಸ್ವಲ್ಪ ಜಾಸ್ತಿನೇ ತಗೋತಾನೆ, ಈಗ ನಿಮ್ಮ ತಾಯಿನ ನೋಡ್ಕೊಳೋಕ್ಕಾಗಲ್ಲವ ಅವನಿಗೆ? ನಾವಿಬ್ಬರು ವರ್ಕಿಂಗ್ ಅಂತ ಗೊತ್ತಿಲ್ಲವ ಅವನಿಗೆ? ಹ್ಯಾಗೆ ಬಿಡ್ತಾನೆ ಇಲ್ಲಿ? ನಾನ್ಸೆನ್ಸ್. ಈಗ ನೋಡು ನಾವಿಬ್ಬರು ಕಿತ್ತಾಡೋ ಪರಿಸ್ಥಿತಿ ಬಂತು. ಈವತ್ತು ನೀನು ಪೇಪರ್ ಹಾಕಿದ್ಯ?’ ಅಂದ ಸಿಡಿಮಿಡಿಗೊಳ್ಳುತ್ತ.
ಮಾಧವಿಗೆ ಅನುಮಾನ ಉಂಟಾಯಿತು. `ಇಲ್ಲ. ಅಮ್ಮನ್ನ ಏನು ಮಾಡಿದ್ರಿ ನೀವು?’ ಅಂದಳು ಆತಂಕದಲ್ಲಿ. ಅವನು ಯಾವ ಗಿಲ್ಟೂ ಇಲ್ಲದೇ `ಇನ್ನೇನು ಮಾಡ್ಲಿ? ನಿಮ್ಮಮ್ಮ ಬಂದ ಮೇಲೇನೆ ಹೀಗೆಲ್ಲ ಆಗಿದ್ದು, ಅದಕ್ಕೆ ಕರಕೊಂಡು ಹೋಗಿ ಬಿಟ್ಟುಬಿಟ್ಟು ಬಂದುಬಿಟ್ಟಿದ್ದೀನಿ’ ಅಂದ. ಅವಳು ಹೆದರಿ ಹೋದಳು. `ಅಲ್ಲ, ಎಲ್ಲಿ ಬಿಟ್ಟು ಬಂದ್ರಿ?’ ಅಂದಳು. ಅವನು ಸರಿಯಾಗಿ ಉತ್ತರಿಸದೇ `ಎಲ್ಲೋ ಬಿಟ್ಟುಬಂದೆ ಬಿಡು’ ಅಂದ ಮುನ್ನಡೆಯಲು ಹೋದ. ಅವಳು ಅವನ ಎದುರಿಗೆ ಎದೆಗೆ ಎದೆ ಕೊಟ್ಟು ನಿಂತು ಕೇಳಿದಳು. `ಅವಿನಾಶ್, ಮನುಷ್ಯತ್ವ ಇದೆಯ ನಿಮಗೆ? ಅವರು ಯಾರು? ನಿಮಗೆ ಅಮ್ಮ ಅಲ್ಲದೇ ಇರಬಹುದು, ಆದರೆ ನನಗೆ ನನ್ನ ಒಬ್ಬರೇ ಅಮ್ಮ! ನನ್ನ ಅಸ್ತಿತ್ವ, ನನ್ನ ಜೀವನ, ನನ್ನ ನಂಬಿಕೆ, ನನ್ನ ಪ್ರೀತಿ ಎಲ್ಲವೂ ನಮ್ಮಮ್ಮಾನೆ. ಹೇಳಿ ಏನು ಮಾಡಿದ್ರಿ ನಮ್ಮಮ್ಮನ್ನ? ನಿಜವಾಗಲೂ ಸಾಯಿಸಿಬಿಡ್ತಿನಿ ನಿಮ್ಮನ್ನ. ಹೇಳಿ ಎಲ್ಲಿ ಬಿಟ್ರಿ? ನಿಮ್ಮಮ್ಮ ಆಗಿದ್ರೆ ಹೀಗೆ ಮಾಡ್ತಿದ್ರ? ಎಷ್ಟು ಸ್ವಾರ್ಥಕ್ಕೆ ಬದುಕ್ತಿರ್ರಿ ನೀವು? ನಾಚಿಕೆ ಆಗಲ್ಲವ ನಿಮಗೆ? ನಾನು ಪೇಪರ್ ಹಾಕಿಲ್ಲ ರ್ರಿ, ಕೆಲಸದಲ್ಲೇ ಇದ್ದು ಸಾಯ್ತಿನಿ, ಯಾಕೆ ಅಷ್ಟೊಂದು ಸ್ವಾರ್ಥಿ ಆಗ್ತೀರಿ? ಹೇಳಿ ಎಲ್ಲಿ ನಮ್ಮಮ್ಮ’ ಅಂತ ಅವನ ಕುತ್ತಿಗೆ ಪಟ್ಟಿಗಳನ್ನು ಗಟ್ಟಿಯಾಗಿ ಜಗ್ಗಿದಳು.
ಅವಿನಾಶ್ ತತ್ತರಿಸಿದ.
`ಅದು, ಅಲ್ಲೇ ನಿಮ್ಮ ತಮ್ಮನ ಮನೆಗೆ ಬಿಟ್ಟು ಬಂದಿದೀನಿ’ ಅಂದ. ಅವಳ ಕೈಗಳು ಹಾಗೇ ಸಡಿಲಗೊಂಡವು. ಅವಿನಾಶ್ ನನ್ನು ದೂರ ತಳ್ಳಿ ಅವಳು ಕೂಡಲೇ ತಮ್ಮನಿಗೆ ಕರೆ ಮಾಡಿದಳು. ಅವಿನಾಶ್ ತಲ್ಲಣದಲ್ಲಿ ನಿಂತ. ಅತ್ತ ಮೋಹನ ಫೋನ್ ರಿಸೀವ್ ಮಾಡಿ `ಹೇಳು ಮಾಧವಿ’ ಅಂದ. ಅವಳು ಧಾವಂತದಲ್ಲಿ `ಅಮ್ಮ ಹ್ಯಾಗಿದಾರೆ ಮೋಹನ?’ ಅಂದಳು. ಅವನು ಗಾಬರಿಗೊಂಡ. `ಏನು ತಮಾಷೆ ಮಾಡ್ತಿದೀಯ? ನಿಮ್ಮ ಮನೆನಲ್ಲಿ ತಾನೆ ಅಮ್ಮ ಇರೋದು? ಯಾಕೆ ಏನಾಯ್ತು?’ ಅಂದ. ಅವಳು `ಇಲ್ಲ ಕಣೋ ಅದು ನಮ್ಮನೆಯವರು ಅದ್ಯಾವುದೋ ಮೂಡ್ನಲ್ಲಿ ಅಮ್ಮನ್ನ ನಿನ್ನ ಮನೆಗೆ ಬಿಟ್ಟು ಬಂದುಬಿಟ್ಟಿದಾರೆ, ನೀನು ಸಿಟ್ಟು ಮಾಡ್ಕೋಬೇಡ, ನಾನು ಈಗಲೇ ಬಂದು ಅಮ್ಮನ್ನ ಮನೆಗೆ ಕರಕೊಂಡು ಬರ್ತೀನಿ’ ಅಂದಳು.
ಮೋಹನ ನಿಜಕ್ಕು ಅಚ್ಚರಿಗೊಂಡ. `ಅಕ್ಕ, ಅಮ್ಮ ಮನೆಗೆ ಬಂದಿಲ್ಲ. ಭಾವ ಎಲ್ಲಿಬಿಟ್ರು ಅಂತ ಕೇಳ್ಕೊ’ ಅಂದ. ಅವಳು ಕೂಡಲೇ ಧುಮುಗುಡುತ್ತ ಅವಿನಾಶ್ ಕಡೆ ನೋಡಿ `ಸತ್ಯ ಹೇಳಿ, ಅಮ್ಮ ಎಲ್ಲಿ? ಮೋಹನನ ಮನೆನಲ್ಲಿ ಇಲ್ಲವಂತಲ್ಲ? ಏನಾಯ್ತು?’ ಅಂದಳು. ಅವಿನಾಶ್ ಹಿಂಜರಿಕೆಯಲ್ಲೇ `ಅದು.. ಅಲ್ಲೆ ಅವರ ಮನೆ ಗೇಟಿನ ಒಳಗೆ ಬಿಟ್ಟು ಬಂದಿದ್ದೆ’ ಅಂದ. ಮಾಧವಿಗೆ ನಖಶಿಖಾಂತ ಉರಿದು ಹೋಯಿತು. ಅವಳು ಮೋಹನನ್ನ ಕೇಳುವ ಮೊದಲೇ `ಒಂದ್ನಿಮಿಷ ಇರು’ ಅಂತ ಫೋನ್ ಹಿಡಿದುಕೊಂಡೇ ಹೊರಗೆ ಬಂದು ನೋಡಿದ.
ಅಲ್ಲಿ ಅಮ್ಮ ಇರಲಿಲ್ಲ!
********
ಯಾವ ಮೂಲೆ, ಯಾವ ರಸ್ತೆಯನ್ನೂ ಬಿಡಲಿಲ್ಲ. ಮಾಧವಿ, ಅವಿನಾಶ್ ಮತ್ತು ಮೋಹನ ಮೂವರೂ ಸೇರಿ ಎಲ್ಲಾ ಕಡೆಗಳಲ್ಲು ಕಾರಿನಲ್ಲಿ ಹುಡುಕತೊಡಗಿದರು. ಕಂಡ ಕಂಡವರನ್ನು ಕೇಳಿದರು. ಎಲ್ಲ ದೇವಸ್ಥಾನ, ಅಕ್ಕ ಪಕ್ಕದ ಪಾರ್ಕು, ಹೋಟೆಲ್ಲು ಎಲ್ಲ ಕಡೆಗಳಲ್ಲು ಸೀತಮ್ಮನನ್ನ ಹುಡುಕಿದರು. ಎಲ್ಲಿಯೂ ಸೀತಮ್ಮ ಸಿಕ್ಕಲಿಲ್ಲ. ಅವಿನಾಶ್ ಅಪರಾಧೀ ಪ್ರಜ್ಞೆಯಲ್ಲಿ ಕೊರಗತೊಡಗಿದ. ಹೆಚ್ಚು ಕಡಿಮೆ ಮಾಧವಿ, ಮೋಹನ ಮೂವರೂ ಕೂಡ ತಮ್ಮ ತಮ್ಮದೇ ಪಾಪಪ್ರಜ್ಞೆಯಲ್ಲಿ ಅಲೆಯತೊಡಗಿದ್ದರು. ಎಲ್ಲಿಯೂ ಅಮ್ಮನ ದರ್ಶನವಾಗಲಿಲ್ಲ. ಎಲ್ಲೊಂದೂ ಸುಳಿವು ಸಿಗಲಿಲ್ಲ. ಯಾರ ಬಳಿಯೂ ಮಾಹಿತಿ ಸಿಕ್ಕಲಿಲ್ಲ. ಪೊಲೀಸರಿಗೆ ದೂರು ಕೊಡುವುದೊಂದು ಬಿಟ್ಟು ಇನ್ನೆಲ್ಲ ಕಡೆಯಲ್ಲು ಎಡತಾಕಿದರು. ವಾಟ್ಸಾಪ್ ಗ್ರೂಪು, ಇತ್ಯಾದಿಗಳಲ್ಲಿ ಸೀತಮ್ಮನ ಫೋಟೊ ಹಾಕಿದರು. `ಎಲ್ಲಾದರು ಕಂಡರೆ ಕೂಡಲೇ ತಿಳಿಸಿ’ ಎಂದು ಫೋನ್ ನಂಬರ್ರು ಇತ್ಯಾದಿ ಎಲ್ಲ ಹಾಕಿದರು. ಆದರೂ ಸಹ ಅವರಿಗೆ ಸೀತಮ್ಮನ ಇರುವಿಕೆ ಬಗ್ಗೆ ತಿಳಿಯಲಿಲ್ಲ.
ನಟ್ಟ ನಡುರಾತ್ರಿ ಅಮ್ಮನನ್ನು ಕಾಣದೇ ಮಾಧವಿ ಕಣ್ಣೀರು ಹಾಕುವಾಗ ಅವಿನಾಶ್ ಬಂದು ಅವಳ ಬಳಿ ಕ್ಷಮೆ ಕೇಳಿದ. `ನನ್ನನ್ನ ಕ್ಷಮಿಸಿಬಿಡು, ನೀನು ಪೇಪರ್ ಹಾಕಿಬಿಡ್ತೀಯಲ್ಲ ಅಂತ ನಾನು ಸಿಟ್ಟಿನಲ್ಲಿ ಹೀಗೆ ಮಾಡಿಬಿಟ್ಟೆ, ನನ್ನಿಂದ ತಪ್ಪಾಗಿದೆ’ ಅಂತ ಅಲವತ್ತುಕೊಂಡ. ಮಾಧವಿ ಬಿಕ್ಕಿ ಅಳುತ್ತ `ಎಲ್ರಿ ಹೋಗ್ತಾರೆ ನಮ್ಮಮ್ಮ? ನಿಮ್ಮ ಕ್ಷಮೆಯಿಂದ ನಾನೇನು ಮಾಡ್ಲಿ ಹೇಳಿ? ನನಗೆ ನಮ್ಮಮ್ಮ ಬೇಕು, ನನ್ನ ತಾಯಿ ಬೇಕು, ಎಲ್ಲಿಂದ ಹುಡುಕ್ಲಿ? ಯಾರತ್ರ ಕೇಳ್ಲಿ? ಮೊದಲೇ ಅವರ ಮಾನಸಿಕ, ದೈಹಿಕ ಆರೋಗ್ಯ ಸರಿ ಇಲ್ಲ. ಎಲ್ಲಾದರು ಏನಾದರು ಆಕ್ಸಿಡೆಂಟ್ ಆಗಿದ್ರೆ ಏನು ಮಾಡಲಿ? ಒಂದು ಸಾರಿ ಕಳಕೊಂಡ್ರೆ ತಾಯಿ ಅನ್ನೋ ವಸ್ತು ಮತ್ತೆ ಸಿಕ್ಕುತ್ತ? ಹಾಗೆ ಸಿಗದೇ ಹೋದ್ರೆ ಇಡೀ ಜೀವನ ಕೊರಗ್ತ ಕೊರಗ್ತಾ ಸಾಯಲ?’ ಅಂದಳು. ಅವನು ನಿಜಕ್ಕೂ ತಲೆ ತಗ್ಗಿಸಿಬಿಟ್ಟಿದ್ದ. ಆ ಕ್ಷಮೆ, ನಿವೇದನೆ, ಪಾಪಪ್ರಜ್ಞೆಗಳಲ್ಲೇ ಆವತ್ತಿನ ರಾತ್ರಿ ಮುಂಜಾವಿನೊಂದಿಗೆ ಕರಗುತ್ತ ತಿಳಿನೀಲಿ ಹಗಲಿಗೆ ಪಲ್ಲಟವಾಯಿತು. ಆಗಷ್ಟೇ ತೂಕಡಿಸಿದ್ದ ಮಾಧವಿ ಕೂಡಲೇ ಎದ್ದು ತನ್ನ ಗಂಡ ಮತ್ತು ತಮ್ಮನೊಂದಿಗೆ ಪೊಲೀಸ್ ಠಾಣೆಗೆ ಹೋದಳು.
ಮಾಧವಿ ಅವರಿದ್ದ ಸ್ಥಳದಿಂದ ಎರಡು ಕಿ.ಮೀ ದೂರದಲ್ಲಿ ಪೊಲೀಸ್ ಠಾಣೆಯಿತ್ತು. ಬೆಳ್ಳಂಬೆಳಗ್ಗೆನೇ ದೂರು ಹೊತ್ತು ಬಂದವರನ್ನ ಎಸ್ಸೈ ಪ್ರಶ್ನಿಸಿದರು. `ನೆನ್ನೆ ಕಳೆದು ಹೋದವರ ಮೇಲೆ ಈಗ ದೂರು ಕೊಡಕ್ಕೆ ಬಂದಿದ್ರ? ಹೆಂಗ್ರಿ ಮಿಸ್ ಆದರು ಅವರು? ಪ್ರಜ್ಞೆ ಬೇಡವ ನಿಮಗೆ? ಯಾರ ಮನೆನಲ್ಲಿದ್ರು ಅವರು?’ ಅಂದಾಗ ಮಾಧವಿ ಮತ್ತು ಮೋಹನ ಇಬ್ಬರೂ `ನನ್ನ ಮನೆ, ನನ್ನ ಮನೆ’ ಅಂದರು. ಎಸ್ಸೈಗೆ ಅನುಮಾನ ಶುರುವಾಯಿತು. ಅವಿನಾಶ್ ಗಿಲ್ಟ್ ನಲ್ಲೇ ಒದ್ದಾಡುತ್ತಿದ್ದ. ಎಸ್ಸೈ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತ `ಎಲ್ಲಾದರು ಬಿಟ್ಟುಬಿಟ್ರೇನ್ರಿ?’ಅಂದರು. ಅಲ್ಲಿ ಅವಿನಾಶ್ `ಸಾರ್, ಇದಕ್ಕೆಲ್ಲ ನಾನೇ ಕಾರಣ, ನಮ್ಮತ್ತೆನ ನಾನೇ, ನನ್ನ ಬಾಮೈದುನನ ಮನೆಗೆ ತಂದುಬಿಟ್ಟೆ ಸಾರ್’ಎಂದು ತಪ್ಪೊಪ್ಪಿಕೊಂಡ.
ಎಸ್ಸೈ ಮೋಹನನ ಕಡೆ ನೋಡಿ `ಅಲ್ಲಿಂದ ಏನಾಯ್ತು ರ್ರಿ? ಏನು ಮಾಡಿದ್ರಿ ನಿಮ್ಮ ತಾಯಿನ?’ ಅಂದು ಗಡುಸಾಗಿಯೇ ಪ್ರಶ್ನಿಸಿದರು. ಮೋಹನ ಹೆದರುತ್ತಲೇ `ಸಾರ್, ಮುಖ್ಯವಾಗಿ ನನ್ನಿಂದ ತಪ್ಪಾಗಿದೆ ಸಾರ್, ನಮ್ಮಕ್ಕ ಭಾವನ ಸಿಟ್ಟಿನ ಮೇಲೆ ನಾನೇ ನಮ್ಮಮ್ಮನ್ನ ರಸ್ತೆನಲ್ಲಿ ಒಂದು ಕಡೆ ಬಿಟ್ಟುಬಿಟ್ಟು ಹೊರಟು ಹೋಗಿಬಿಟ್ಟೆ ಸಾರ್, ಆಮೇಲೇನಾಯ್ತು ಅಂತ ಗೊತ್ತಿಲ್ಲ. ನೆನ್ನೆಯಿಂದ ನಾನು ಬಿಟ್ಟು ಬಂದ ಜಾಗದಲ್ಲೆ ಸುಮಾರು ಸಾರಿ ಹುಡುಕಿದ್ವಿ ಸಾರ್, ಎಲ್ಲೂ ಅಮ್ಮ ಸಿಕ್ಕಲಿಲ್ಲ’ ಅಂದ. ಎಸ್ಸೈ ಬೈಯ್ಯುತ್ತ `ಬುದ್ಧಿ ಬೇಡವೇನ್ರಿ ನಿಮಗೆ? ನಿಮ್ಮ ತಾಯಿ ಕಂಡೀಶನ್ ನಿಮಗೇ ಗೊತ್ತು, ನೀವೇನು ದಡ್ಡರಲ್ಲ, ದುಡ್ಡು ಕಾಸಿಲ್ಲದವರೇನಲ್ಲ, ಒಬ್ಬ ಜನ್ಮ ಕೊಟ್ಟ ತಾಯಿನ ಹಾಗೆ ರಸ್ತೆಯಲ್ಲಿ ಬಿಟ್ಟು ಹೋಗೋಕ್ಕೆ ನಿಮಗೆ ಹ್ಯಾಗ್ರಿ ಮನಸ್ಸು ಬಂತು? ಮನುಷ್ಯರಾ ನೀವು? ನಾಚಿಕೆ ಆಗಬೇಕು ನಿಮಗೆ’ ಅಂತ ಝಾಡಿಸಿದರು.
ಮಾಧವಿ, ಮೋಹನನ ಕಣ್ಣಲ್ಲಿ ನೀರಿತ್ತು. ಅವಿನಾಶ್ ಗೆ ಕುತ್ತಿಗೆಯ ಸೆರೆಯುಬ್ಬಿತ್ತು. `ಸಾರ್, ದಯಮಾಡಿ ಎಲ್ಲಾದರು ಹುಡುಕಿಕೊಡಿ, ವಿಷ್ಯ ಗೊತ್ತಾದ್ರೆ ನಮಗೇ ಅವಮಾನ ಆಗುತ್ತಲ್ಲ ಅಂತ ನಾವೇ ಹುಡುಕಾಡಿದ್ವಿ, ಆದರೆ ನಮಗೆ ಸಿಕ್ಕಲಿಲ್ಲ’ ಅಂತ ದುಃಖ ತೋಡಿಕೊಂಡ. ಎಸ್ಸೈ ಕೂಲ್ ಆಗುತ್ತ `ಸ್ವಲ್ಪ ಮನುಷ್ಯತ್ವ ಬೆಳೆಸ್ಕೊಳಿ, ಇನ್ನು ಇಪ್ಪತ್ತು ವರ್ಷ ಅಷ್ಟೇ, ನೀವೂ ನಿಮ್ಮ ತಾಯಿ ಸ್ಟೇಜಿಗೆ ಹೋಗ್ತೀರಿ, ಆಗ ನಿಮ್ಮನ್ನ ನಿಮ್ಮ ಮಕ್ಕಳು ಹೀಗೇ ಬಿಟ್ರೆ ಏನು ಮಾಡ್ತೀರ?’ ಅಂದರು. ಯಾರಲ್ಲೂ ಮಾತಿರಲಿಲ್ಲ. ಎಸ್ಸೈ ನಿಟ್ಟುಸಿರಿಟ್ಟು ಒಂದು ಕಡೆ ಕೈ ತೋರಿಸಿ `ಅಲ್ಲಿ ಹಣ್ಣು ತಿಂತಿದಾರೆ ನೋಡಿ, ಅವರೇನಾ ನಿಮ್ಮ ತಾಯಿ ಅಂತ ನೋಡಿ’ ಅಂದರು.
ಮೂವರು ಬರ್ರನೆ ತಿರುಗಿ ನೋಡಿದರು. ಅದು ಸುಳ್ಳಾಗಿರಲಿಲ್ಲ. ಸೀತಮ್ಮ ತಮ್ಮ ಪಾಡಿಗೆ ಎಸ್ಸೈ ಅವರು ಕೊಟ್ಟಿದ್ದ ಹಣ್ಣುಗಳನ್ನು, ಪುಟ್ಟ ಮಗುವಿನ ಹಾಗೆ ಮೆಲ್ಲತೊಡಗಿದ್ದರು. ಮಾಧವಿಯ ಎದೆ ಒಡೆಯದೇ ಇರಲಿಲ್ಲ. ಅವಳು `ಅಮ್ಮ’ ಅಂತ ಹೋಗಿ ತಬ್ಬಿಕೊಂಡಳು. ಅವಳ ಹಿಂದೆಯೇ ಮೋಹನ ಕೂಡ ಅಪಾರ ನೋವಿನಲ್ಲಿ ಹೋಗಿ ತಬ್ಬಿಕೊಂಡ. ಸೀತಮ್ಮನಿಗೆ ಆ ಸ್ಪರ್ಶಗಳು ಹೊಸದಿರಲಿಲ್ಲ. ಆದರೆ ಇದ್ದಕ್ಕಿದ್ದ ಹಾಗೆ ಎಲ್ಲರೂ ತನ್ನನ್ನ ಅವರಿಸಿದಾಗ ಅದಕ್ಕೆ ಗಲಿಬಿಲಿ ಉಂಟಾಯಿತು. `ಅಮ್ಮ ನಾನಮ್ಮ ಮಾಧವಿ’ ಅನ್ನುವಾಗ ಸೀತಮ್ಮ ಮಗಳು ಮತ್ತು ಮಗನ ಕಡೆ ನೋಡಿ ನಕ್ಕಿತು. ಅದರ ಹೊಟ್ಟೆಯೊಳಗೆ ಸಣ್ಣಗೆ ಕಂಪನ ಉಂಟಾಗದೇ ಇರಲಿಲ್ಲ. ಮಾಧವಿ ಅಮ್ಮನನ್ನ ಬರಸೆಳೆದು ಅಪ್ಪಿದಳು. ಅಮ್ಮ ಅಂದ್ರೆ ಭೂಮಿ ಅಂತ ಅವಳಿಗನ್ನಿಸಿದ್ದು ಆಗಲೇ! ಸೀತಮ್ಮ ಇಬ್ಬರನ್ನು ನೇವರಿಸುತ್ತ ಅಳಿಯನ ಕಡೆ ನೋಡಿತು. ಅಳಿಯ ಹನಿಗಣ್ಣಾಗಿ ಕೈ ಮುಗಿದ.
`ಇವರೇನಾ ನಿಮ್ಮ ತಾಯಿ?’ ಅಂದರು ಎಸ್ಸೈ.
ಮೂವರು ಕಣ್ಣೀರು ಒರೆಸಿಕೊಳ್ಳುತ್ತ `ಹೌದು ಸಾರ್, ಇವರೇ.. ಇವರೇ ಸರ್’ ಅಂದರು.
ಎಸ್ಸೈ ಅವರಿಗೆ ತಿಳಿ ಹೇಳುತ್ತ `ಇವರು ಸುಮಾರು ಹೊತ್ತು ಫುಟ್ ಪಾತ್ ನಲ್ಲೇ ಇದ್ರಂತೆ, ಆಮೇಲೆ ಹಾಗೇ ನಡ್ಕೊಂಡು ಹತ್ತಿರದಲ್ಲೆ ಇದ್ದ ದೇವಸ್ಥಾನದ ಕಡೆ ಹೋಗಿದ್ದಾರೆ, ಸುಮಾರು ಹೊತ್ತು ಅಲ್ಲೇ ಒಬ್ಬಂಟಿ ಕೂತಿದ್ದನ್ನ ಒಬ್ಬ ಹೂವು ಕಟ್ಟೋ ಹೆಂಗಸು ಗಮನಿಸಿದಾರೆ. ಅವರು ನಮ್ಮ ಹೊಯ್ಸಳದವರಿಗೆ ಮಾಹಿತಿ ಕೊಟ್ರು. ಯಾವುದಾದರು ಮಿಸ್ಸಿಂಗ್ ಕಂಪ್ಲೆಂಟ್ ಇದ್ಯ ಅಂತ ನಮ್ಮ ಸ್ಟೇಶನ್ನಿಗೂ ಎನ್ಕ್ವಯಿರಿ ಬಂದಿತ್ತು. ಯೂ ಆರ್ ಲಕ್ಕಿ, ನಿಮಗೆ ಮತ್ತೆ ಸಿಕ್ಕಿದಾರೆ’ ಅಂದರು.
`ಥ್ಯಾಂಕ್ಸ್ ಸಾರ್, ನಮ್ಮನ್ನ ಕ್ಷಮಿಸಿಬಿಡಿ’ ಅಂದಳು ಮಾಧವಿ.
ಎಸ್ಸೈ ಅವರಿಗೆ ಕ್ಲಾಸ್ ತೆಗೆದುಕೊಳ್ಳುತ್ತ `ಒಂದು ಸಾರಿ ಅಪ್ಪ ಅಮ್ಮ ಅನ್ನೋ ವಸ್ತು ಹೋದ್ರೆ ಸಿಕ್ಕಲ್ಲ ರ್ರಿ, ನೀವು ಇರೋವರೆಗು ಅವರನ್ನ ಚೆನ್ನಾಗಿ ನೋಡ್ಕೋಬೇಕು. ನೀವು ಯಾರು ಅವರನ್ನ ಒಟ್ಟಿಗೇ ಇರಿಸ್ಕೋತೀರೊ ಗೊತ್ತಿಲ್ಲ, ಆದರೆ ಪ್ರಾಮಾಣಿಕವಾಗಿ ನೋಡ್ಕೊಳಿ. ನಿಮಗೆ ಯಾವುದೇ ಪಾಪಪ್ರಜ್ಞೆ ಬರದ ಹಾಗೆ ನಿಮ್ಮ ಕರ್ತವ್ಯ ಮಾಡಿ. ನಿಮಗು ಒಳ್ಳೆಯದಾಗುತ್ತೆ’ ಅಂದರು. ಮೂವರೂ ತಲೆಯಾಡಿಸಿದರು.
`ನಿಮ್ಮ ತಾಯಿ ನಿಮ್ಗೆ ಸಿಕ್ಕಿದಾರೆ ಅಂತ ಹೇಳಿ ಮುಚ್ಚಳಿಕೆ ಬರೆದುಕೊಡಿ, ಹಾಗೇನೆ, ಇನ್ನು ಮೇಲೆ ಚೆನ್ನಾಗಿ ನೋಡ್ಕೋತೀವಿ ಅಂತ ಸೇರಿಸಿ. ಇನ್ನು ಮುಂದೆ ಹೀಗಾಗದ ಹಾಗೆ ನೋಡ್ಕೊಳಿ’ ಅಂದರು ಎಸ್ಸೈ.
ಕೂಡಲೇ ಮಾಧವಿ ತಾನೇ ಸರಸರನೆ ಪತ್ರ ಬರೆದು ಸಹಿ ಹಾಕಿದಳು. ಮೋಹನನೂ ಸಹಿ ಹಾಕಿದ. ಅವಿನಾಶ್ ಕೂಡ ತನ್ನ ತಪ್ಪೊಪ್ಪಿಕೊಂಡು ಸಹಿ ಹಾಕಿದ. ಎಸ್ಸೈ ಪತ್ರ ಪಡೆದು `ಸರಿ, ಹುಷಾರಾಗಿ ಕರಕೊಂಡು ಹೋಗಿ, ತಂದೆ ತಾಯಿನ ನೋಡ್ಕೊಳೋಕ್ಕೆ ಇದೊಂದು ಅವಕಾಶ, ಆಮೇಲೆ ಬೇಕು ಅಂದರೂ ಈ ಅವಕಾಶ ಸಿಕ್ಕಲ್ಲ’ ಅಂತ ಕಳಿಸಿಕೊಟ್ಟರು. ಮಾಧವಿ ಮತ್ತು ಮೋಹನ ಇಬ್ಬರೂ ಸೀತಮ್ಮನನ್ನು ಜತನ ಮಾಡುತ್ತ ಅಮ್ಮನ ಭುಜ ಹಿಡಿದು ಹೊರಕ್ಕೆ ಕರೆದೊಯ್ದರು. ಅವಿನಾಶ್ ಅಲ್ಲಿದ್ದ ವಾಕರ್ ಅನ್ನು ಕೈನಲ್ಲಿ ಹಿಡಿದು ಹೊರಗಿದ್ದ ಕಾರಿನ ಬಳಿಗೆ ತೆರಳಿದ.
ಎಲ್ಲರೂ ಸೇರಿ ಸೀತಮ್ಮನನ್ನ ಕಾರಿನ ಬಳಿ ಕರೆತಂದರು. ಸೀತಮ್ಮನನ್ನು ಅವಿನಾಶ್ ಮತ್ತು ಮಾಧವಿ ಇಬ್ಬರೂ ತುಂಬು ಪ್ರೀತಿಯಲ್ಲಿ ಕರೆತಂದರು. ಅವಿನಾಶ್ ತನ್ನ ಅತ್ತೆಯನ್ನು ಕಾರಿನಲ್ಲಿ ಕೂರಿಸಲು ಮುಂದಾದಾಗ ಈಗ ನಡೆದ ಯಾವುದೇ ಘಟನೆಗಳ ಯಾವ ನೆನಪೂ ಇಲ್ಲದ ಸೀತಮ್ಮ ತನ್ನ ಬಳಿ ಇದ್ದ ಹಣ್ಣನ್ನು ಅಳಿಯನಿಗೆ ಕೊಡಲು ಮುಂದಾಯಿತು. ಈ ಸಾರಿ ಅವಿನಾಶ್ಗೆ ಬೇಡ ಅನ್ನಲಾಗಲಿಲ್ಲ. ಅವನು ಅತ್ತೆ ಕೊಟ್ಟ ಹಣ್ಣನ್ನು ಮನಸಾರೆ ಒಂದು ತುಣುಕು ತಿಂದ. ಸೀತಮ್ಮನಿಗೆ ಇನ್ನಿಲ್ಲದ ಸಂತೋಷ ಉಂಟಾಯಿತು. ಸೀತಮ್ಮನನ್ನು ಹಿಂದಿನ ಸೀಟಿನಲ್ಲಿ ಕೂರಿಸಿ ಸೊಂಟದ ಬೆಲ್ಟ್ ಹಾಕಿದರು. ಮಾಧವಿ ಅಮ್ಮನ ಪಕ್ಕ ಕೂತಳು.
ಕಾರಿನ ಹೊರಗೆ ಮೋಹನ ಅನಾಥವಾಗಿ ನಿಂತಿದ್ದ.
ಅವಿನಾಶ್ ಕಾರಿನಲ್ಲಿ ಕೂತು ಮುಂದೆ ತೆರಳಲು ಅನುವಾಗುವಾಗ ಹೊರಗೆ ಗಿಲ್ಟ್ ನಲ್ಲಿ ನಿಂತಿದ್ದ ತಮ್ಮನ ಕಡೆ ನೋಡಿದ ಮಾಧವಿ ಇಳಿದು ಬಂದು `ಮೋಹನ ಇದ್ಯಾವುದು ಮನಸ್ಸಿನಲ್ಲಿ ಇಟ್ಕೋಬೇಡ, ನಮ್ಮ ನಮ್ಮ ಈಗೋಗಳಲ್ಲಿ ಹೀಗೆಲ್ಲ ಆಗಿಬಿಡುತ್ತೆ, ನೀನು ಯಾವ ತಪ್ಪೂ ಮಾಡಿಲ್ಲ. ಹಾಗೆ ನೋಡಿದ್ರೆ ನಮ್ಮ ಕಡೆಯಿಂದಾನೇ ತಪ್ಪಾಗಿದೆ, ಅದರ ಹೊಣೆ ನಾವು ಹೊತ್ಕೋತೀವಿ. ಇನ್ನು ಮೇಲೆ ಅಮ್ಮ ನನ್ನ ಜೊತೆನೇ ಇರ್ತಾರೆ, ನೀನು ಮತ್ತೆ ಲಲಿತ ಇಬ್ಬರು ಯಾವಾಗ ಬೇಕಾದ್ರು ಬಂದು ಅಮ್ಮನ್ನ ನೋಡ್ಕೊಂಡು ಹೋಗಿ. ಯಾವುದೇ ಹಾರ್ಡ್ ಫೀಲಿಂಗ್ಸ್ ಬೇಡ ಕಣೋ’ ಅಂದಳು.

ಮೋಹನ ಕಣ್ತುಂಬಿ ನಕ್ಕ. ಮಾಧವಿ ಹೋಗಿ ಕಾರಿನಲ್ಲಿ ಕೂತಳು. ಅವಿನಾಶ್, ಮೋಹನನ ಕಡೆ ವೇವ್ ಮಾಡಿದ. ಕಾರು ಮೂವ್ ಆಗುವಾಗ ಸೀತಮ್ಮ ಮಗನ ಕಡೆ ನೋಡಿ ಕೈ ಬೀಸಿತು. ಮೋಹನನ ಕರುಳು ಕಿತ್ತು ಬಂದಂತಾಯಿತು. ಅವನು ಹನಿಗಣ್ಣಾದ.
ಕಾರು ಇನ್ನು ನಿಲ್ದಾಣವೇ ಇಲ್ಲವೇನೊ ಅನ್ನುವ ಹಾಗೆ ಮುಂದಕ್ಕೆ ಸಾಗತೊಡಗಿತು!

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

