ಪದ್ಯ ಸಿಗದಿದ್ದಾಗ
ತನ್ನ ತಾನು ಪದಪದವೆಂದು ಬಗೆದು
ಒಂದೊಂದೆ ಅಡಿ ಮುಂದಿಡುತ್ತಾ
ಬರುತ್ತಾಳೆ, ಬರುತ್ತ ಬರುತ್ತ
ತನಗೂ ಅರಿವಿಲ್ಲದಂತೆ ಬಳಕುತ್ತಾಳೆ,
ತುಳುಕುತ್ತಾಳೆ, ಮುಗುಳು ನಗೆ-
-ಸೂಸುತ್ತಾಳೆ
ಸೆರಗೆಳೆದು ಸೊಂಟಕ್ಕೆ ಸಿಕ್ಕಿಸುತ್ತಾಳೆ
ಬೆವರಿದ ಸೊಂಟ; ಸೆಟೆಸಿ ನಿಂತು
ತುರುಬು ಕಟ್ಟುತ್ತಾಳೆ ತಲೆಯೊಳಗೆ ಕೂತು
ಇಷ್ಟು ಹೊತ್ತು ಅವಳ ಕಿರೀಟವಾಗಿದ್ದ
ರೂಪಕಗಳೆಲ್ಲ ಪಟಪಟನೆ ಉದುರಿ ತಲೆ
ಹಗೂರವಾಗಿ, ಅಂಗೈಗೆ ಮೆತ್ತಿದ್ದ
ಲಯ ಕುತ್ತಿಗೆಗುಂಟ ಇಳಿದು
ಕುತ್ತಿಗೆ ಮತ್ತೂ ನೀಳವಾಗಿ,
ಎದೆಯಲ್ಲಿ ಕೂತ ಆತಂಕಗಳೆಲ್ಲ
ಉದ್ಘಾರಕ ಚಿಹ್ನೆಗಳಾಗಿ-
-ಹೊರಬಂದು ತಮ್ಮ ತಮ್ಮ
ಸೀಟುಗಳಲಿ ಆಸೀನರಾಗಿ ಕುಪ್ಪುಸದ
ಹುಕ್ಕು ತುಸುವೇ ಸಡಿಲವೆನಿಸಿ
ಭಾವ ಹಾ…ಯೆನಿಸಿ ಸಣ್ಣಗೆ
ನಿಟ್ಟುಸಿರಿಟ್ಟರೆ
ಅಪೂರ್ಣ ವಿರಾಮವೊಂದು ನಡು-
ವಿನ ಸಾಲಿಗೆ ಅಂಟಿಕೊಂಡು
ಮತ್ತೊಂದು ಹೆಜ್ಜೆ ಮುಂದಿಡುತ್ತಾಳೆ
ಈಗ ಹುಟ್ಟುವುದೇ ಸ್ವರಭಾರ
ಹಾ…!!
ಅವಳು ಪದ್ಯವಾಗುವ
ಮಜವಿರುವುದೇ ಇಲ್ಲಿ ಸಿಕ್ಕಿಕೊಂಡ
ಬಿಕ್ಕೊಂದು ದಡಾರನೇ ಗಂಟಲಿನ
ಬೀಗ ತೆಗೆದು ಆಚೆ ಬಂದು
ಕರುಳಿಗಂಟಿದ ಕಣ್ಣೀರು ದನಿಯಾಗಿ
ಹೊರಬರುವ ಕ್ಷಣ. ಹಾಗೇ ನೋಡಿದರೆ
ಅವಳು ಪದ್ಯ ಬರೆಯುವುದೇ ಈ ಅಂಟಿದ
ನೋವಿನ ನಂಟು ಬಿಡಿಸಿಕೊಳಲು
ಬಿಟ್ಟಾಳೆಯೆ ಒಲಿದು
ಬಂದ ಭಾಗ್ಯವ, ಎದೆ ಮಿಡಿತ
ಹಿಡಿತಕ್ಕೆ ಸಿಗದಾದ ಕೂಡಲೇ
–
ನದಿಯೊಂದು ಗುಡ್ಡವಿಳಿಯುವ
ಕ್ಷಣಕ್ಕಾಗಿ ಕಾದು
ನೆಗೆದುಬಿಡುವಂತೆ, ಜಿಗಿದು ಬಿಡುತ್ತಾಳೆ
ತಾನೂ
ನದಿ ತಾನು ಜಲಪಾತವಾದಂತೆ;
ಇವಳು ಪದ್ಯವಾಗಿ
ದೀಪಾ ಗೋನಾಳ ಪೋಸ್ಟ್ ಆಫೀಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ
ಓದು, ತಿರುಗಾಟ, ಇಷ್ಟ.
ಕವಿತೆ ಅಂದ್ರೆ ಹುಚ್ಚು, ಕತೆ ಅಂದ್ರೆ ಪ್ರಾಣ
“ತಂತಿ ತಂತಿಗೆ ತಾಗಿ” ಪ್ರಕಟಿತ ಕವನ ಸಂಕಲನ

ದೀಪಾ ಗೋನಾಳ ಪೋಸ್ಟ್ ಆಫೀಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದು, ತಿರುಗಾಟ, ಇಷ್ಟ. ಕವಿತೆ ಅಂದ್ರೆ ಹುಚ್ಚು, ಕತೆ ಅಂದ್ರೆ ಪ್ರಾಣ. “ತಂತಿ ತಂತಿಗೆ ತಾಗಿ” ಪ್ರಕಟಿತ ಕವನ ಸಂಕಲನ

