ಎದ್ದು ಬಿದ್ದು ತಕಥೈ ಕುಣಿದು, ನೆಗೆದು, ಹತ್ತಿರ ಸುಳಿದು ಒಂದೊಂದೂ ಒಂದೊಂದು ಆತ್ಮಗಳಂತೆ ಪೀಡಿಸುತ್ತಿರುವ ವಂದನಾಳ ಬಟ್ಟೆಬರೆಗಳು, ದಿನೋಪಯೋಗಿ ವಸ್ತುಗಳು, ಆಕೆಯ ಸಹಜವಾದ ವಿವಿಧ ಭಂಗಿಗಳು…… ತಲೆಯನ್ನು ಆ್ಯಸಿಡ್ಗೆ ಅಜ್ಜಿದಂತೆ. ಅಸಂಖ್ಯ ಸುತ್ತಿಗೆಗಳು ಹೃದಯಕ್ಕೆ ಗುಕ್ಕು ಗುಕ್ಕನೆ ಗುದ್ದಿದಂತೆ. ಯಪ್ಪಾ… ಎನ್ನುತ್ತಾ ರೆಪ್ಪೆಯನ್ನು ಬಿಗಿಹಿಡಿದು ಅಭಿ ಹೊರಳಾಡಿದ. ಆದರೇನು? ವಂದನಾಳ ಮಾತುಕತೆಗಳು, ನಗು-ರಾಗ-ರಗಳೆಗಳು ಈ ಎಲ್ಲಕ್ಕೂ ರೆಕ್ಕೆ ಬಂದು ಅವು ಅಭಿಯ ಸುತ್ತ ಗಸ್ತು ಹೊಡೆಯುತ್ತಲೇ ಇದ್ದವು.
ಡಾ. ದಿಲೀಪ್ ಎನ್ಕೆ ಕತೆ “ಭೈರೂಪ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
ಕೋಪ ಅಷ್ಟಿಷ್ಟಿರಲಿಲ್ಲ. ಮನಸ್ಸು ಅಷ್ಟಕ್ಕಾಗಲೇ ಒನಕೆ ಓಬವ್ವಳ ಗೆಟಪ್ ಹಾಕಿ ಸಿಕ್ಕಸಿಕ್ಕವನ್ನೆಲ್ಲಾ ನುಚ್ಚುನುರಿ ಮಾಡುತಿತ್ತು. ಢಮಾರ್ ಢಿಮೀರ್ ದೀಪಾವಳಿಯ ಪಟಾಕಿ ಸದ್ದಲ್ಲ. ಕಿಟಕಿಯ ಗ್ಲಾಸು, ಪೀಠೋಪಕರಣಗಳು, ಸಿಸ್ಟಂ, ಫ್ಲವರ್ ಪಾಟ್ ಎಲ್ಲ ಎ…ಲ್ಲಾ ಪೀಸ್ ಪೀಸ್. ಸುತ್ತುವರೆದಿರುವ ಯಾರೊಬ್ಬರೂ ಇಲ್ಲಿ ಪಿಟಿಪಟ ಎನ್ನುತ್ತಿಲ್ಲ. ನಾನು, ನನ್ನಿಂದಾದ ಈ ಸನ್ನಿವೇಶ ಎಷ್ಟು ಘೋರವಾಗಿದ್ದಿರಬೇಡ? ಈ ನಡುವೆ ಹಸುಳೆಯಂತೆ ಆಕೆ ಥರಗುಟ್ಟುತ್ತಾ ನಿಂತಿದ್ದಾಳೆ. ಕ್ಷಣ ಮೌನ. ಕಿಟ್ ಕ್ಯಾಟ್ ಬ್ರೇಕ್. ಮಳೆ ಹೂಯ್ದು ನಿಂತಂತಹ ನೀರವ. ಆ ನೀರವ ತನ್ನ ಪ್ರೇಮಿಗೆ ಏನು ಅನಾಹುತವಾಯಿತೋ ಎಂಬ ಕಳವಳವನ್ನು ತಂದು ಆಕೆಯ ಕಣ್ತೆರೆಸಿತು. ಆಕೆ ಅಳುಕಿನಿಂದಲೇ ನಿಧಾನವಾಗಿ ಕಣ್ಣುಬಿಟ್ಟಳು. ಕಣ್ಣುಬಿಟ್ಟರೆ ಅವಳ ಹಣೆಗೆ ಹಣೆಯ ತಾಕಿಸುವಂತೆಯೇ ನನ್ನ ಉರಿಯುರಿಯುವ ಮುಖ. ಆಕೆ ನನ್ನ ಉರಿಯುರಿಯುವ ಮುಖವನ್ನು ಕಂಡು ಬೆಚ್ಚಿ ಪ್ರಜ್ಞಾಹೀನಳಾಗಿ ನೆಲಕ್ಕುರುಳಿದಳು. ಹಾಗೆ ನೆಲಕ್ಕುರುಳಿದ ಆಕೆಯನ್ನು ಕಂಡು ನನ್ನ ಎದೆಯ ಮೇಲೆ ಸೊಕ್ಕಿದಾನೆ ಕಾಲು ಮಡಗಿದ ಅನುಭವವಾಯಿತು. ಆಕೆ ನನ್ನ ಪ್ರೀತಿ, ನನ್ನ ಬದುಕು, ನನ್ನ ಸರ್ವಸ್ವ. ನಡುನಡುಗುವ ಕೈಯಿಂದ ಆಕೆಯನ್ನು ಎತ್ತಿ ನನ್ನ ನಡುನಡುಗುವ ಮಡಿಲಿಗೆ ಹಾಕಿಕೊಂಡೆ. ಎಲ್ಲೋ ಅಮವಾಸ್ಯೆಯ ಕತ್ತಲಲ್ಲಿ ದಟ್ಟಾರಣ್ಯದೊಳಗೆ ದಿಕ್ಕೆಟ್ಟು ಚೀರಿದಂತೆ. ಆಳದ ಸಮುದ್ರದೊಳಗೆ ಉಸಿರು ಬಿಗಿಹಿಡಿದಂತೆ… ಎಲ್ಲೆಲ್ಲೋ ಅಲೆಯುತ್ತಿದ್ದ ಮನಸ್ಸನ್ನು ದರದರನೆ ಎಳೆದು ತಂದು ನನ್ನೊಳಗೆ ಕೂಡಿ ಹಾಕಿದಾಗ ಆಕೆ ನಿಂತಂತೇ ನನ್ನೆದುರಿಗೆ ಮಾತಿಲ್ಲದೇ ನಿಂತಿದ್ದಳು. ನಾನೂ ಆಕೆಯೆದುರು ಅಂತೆಯೇ ನಿಂತಿದ್ದೆ. ಕಡೆಗೆ ಬೇಡವೆಂದರೂ ಬೇಕಂತಲೇ ಮಾತನ್ನು ಹರಿಬಿಟ್ಟೆ. ಹೆಚ್ಚಿಗಿಲ್ಲ ಒಂದೇ ಒಂದು ಮಾತು. ಆ ಒಂದು ಮಾತನ್ನು ಮಾತಾಡಿ ಆಕೆಯ ಚೇಂಬರ್ನಿಂದ ಹೊರ ನಡೆದೆ.
ಅಲ್ಲಿನ ಸಿಬ್ಬಂದಿಗಳು ಆಫೀಸಿಗೆ ಬರುವುದರಲ್ಲಿದ್ದರು. ಆ ಎಲ್ಲರೂ ಇವಳ ಕಾರಣದಿಂದಾಗಿ ನನಗೆ ಚಿರಪರಿಚಿತರೇ. ಸಮಯ ಸಿಕ್ಕಾಗಲೆಲ್ಲಾ ಟೀ, ಹರಟೆ, ಚಾಟ್ಸ್, ಸುತ್ತಾಟ ನಮ್ಮ ನಮ್ಮಲ್ಲಿ ಮಾಮುಲು. ಯಾರ ಜೊತೆಯೂ ಮಾತಿಗೆ ನಿಲ್ಲದೇ ಕಂಡಕಂಡವರೆನ್ನೆಲ್ಲಾ ಮಂದಹಾಸದಲ್ಲೇ ಎದುರುಗೊಳ್ಳುತ್ತಾ ಆಫೀಸಿನ ಗ್ಲಾಸ್ ಡೋರ್ ಎಳೆದು ಹೊರಬಂದೆ. ಬಹುಶಃ ಅಲ್ಲಿನ ಬಹುತೇಕರಿಗೆ ನನ್ನ ಬದಲಾದ ಇಂದಿನ ವರ್ತನೆ ಸಂಶಯವನ್ನೂ ಮೂಡಿಸಿರಲಿಕ್ಕುಂಟು.
ಬೆಳಿಗ್ಗೆ ಹತ್ತು ಹದಿನೈದರ ಗಡಿಬಿಡಿಯ ಹೊತ್ತದು. ಶಿವಾಜಿನಗರ ತನ್ನ ನಿತ್ಯದ ಉಸಾಬರಿಯಲ್ಲಿ ವೀಸಿಂಗ್ ಪ್ರಾಬ್ಲಂನವರಂತೆ ವ್ಯತಿರಿಕ್ತವಾಗಿ ಉಸಿರು ಬಿಡುತ್ತಲಿತ್ತು. ರಾಕೆಟ್ನಂತೆ ಸರಗುಟ್ಟುವ ಬಂಡಿಗಳು. ಅವಸರದ ಹೆಜ್ಜೆಗಳು. ಲಕಲಕಾ ಎನ್ನುತ್ತಿರುವ ಮಳಿಗೆಗಳು. ಹಗಲೂ ನಾಚುವಂಥಾ ಅವುಗಳ ರಂಗು ನವರಂಗೀ ಬಲ್ಬುಗಳು. ಸುಂದರ ಉಡುಪಿನ ಮಾನಕೇನ್ಗಳು. ಗ್ರಾಹಕರನ್ನು ತನ್ನತ್ತ ಸೆಳೆಯಲು ಸರ್ಕಸ್ಸು ಮಾಡುತ್ತಿರುವ ಬೇಯುವ ಜೀವಗಳು. ಹೊಸಬರ ಚಕಿತದ ಕಣ್ಣು ಬಾಯಿಗಳು…
ತಲೆ ಧಿಮಗರೆಯುತ್ತಿದೆ. ಅದು ಎಷ್ಟು ಹೊತ್ತಿಗೆ ಸಿಗರೇಟು ನನ್ನಲ್ಲಿ ಒಂದು ಧಂ ಎಳೆಯುತ್ತದೋ? ಟೀ ನನ್ನನ್ನು ಗುಟಕಾಯಿಸುತ್ತದೋ? ಒಂದು ಧಂ ಒಂದು ಗುಟುಕು ಟೀ. ಒಂದು ಧಂ ಒಂದು ಗುಟುಕು ಟೀ. ತಲೆಯಲ್ಲಿನ ಹುಳುಗಳೆಲ್ಲಾ ಒಂದೇ ಬಾರಿಗೆ ಕಿಳೀನ್ ಕಿಷ್ಣಪ್ಪ! ಅಂದುಕೊಳ್ಳುತ್ತಿರುವಷ್ಟರಲ್ಲೇ ವೇ ಟು ಕ್ಯಾಂಟೀನ್ ಫಲಕ ನನ್ನನ್ನು ಕಂಡು ನುಲಿಯುತ್ತಾ ಹಲ್ಲುಕಿಸಿಯಿತು. ನನ್ನ ಕಾಲುಗಳು ಜಾಗ್ವಾರ್ ಕಾಲುಗಳಾಗಿ ಬದಲಾದವು.
– ನಾನು ಹಾಗೆ ಮಾತಾಡಬಾರದಿತ್ತೇನೋ? ಹಾಳಾದ ಸಿಡುಕು. ಈ ಸಿಡುಕಿನ ಅವಾಂತರಗಳು ಒಂದೊಂದಲ್ಲ.
– ಎಂಥಾ ಮಾತು? ಅದೆಂಥಾ ಸಿಡುಕು? ನೀನು ಹೇಳುವುದು ಚೆನ್ನಾಗಿದೆ ಬಿಡು. ಯಾರು ಏನೇ ಹೇಳಿದರೂ ಕೋಲೇ ಬಸವನ ಹಾಗೆ ತಲೆ ಆಡಿಸಬೇಕೆಂದೋ ನಿನ್ನ ಮಾತಿನ ಅರ್ಥ? ನಿನ್ನ ಜಾಗದಲ್ಲಿ ಬೇರೆ ಯಾರೇ ಇದ್ದಿದ್ದರೂ ಕತೆ ಬೇರೆಯದೇ ಆಗಿರುತ್ತಿತ್ತು ತಿಳುಕೋ.
– ನೋಡು, ನಿನ್ನನ್ನು ನೀನು ಆತ್ಮವಿಮರ್ಶೆಗೆ ಒಳಗುಮಾಡುವ ನಿನ್ನ ಗುಣ ಇದೆಯಲ್ಲಾ ಅದು ನಿನ್ನ ದೊಡ್ಡಗುಣ.
– ಹೋಗಿ ಕ್ಷಮೆ ಕೇಳಲೇ? ಇಲ್ಲ ಈ ಊರಿನ ಸಹವಾಸವನ್ನೇ ಬಿಟ್ಟು ಬೇರೆ ಎಲ್ಲಿಗಾದರೂ ಹೋಗಿ ಬಿಡಲೇ?
– ಕನ್ನಡದ ಗುರುಗಳೊಬ್ಬರು ಹೇಳಿದ್ದ ನೆನಪು – ಒಳ್ಳೆಯತನ ಒಳ್ಳೆಯದಲ್ಲವೆಂದು.
– ಈಗ ಏನಾಗಿದೆ ಎಂದು ಹೀಗಾಡುತ್ತಿರುವೆಯೋ ನಾ ಕಾಣೆ? ಮನುಷ್ಯ ಇಷ್ಟು ಸೂಕ್ಷ್ಮವಾಗಬಾರದು ಕಷ್ಟ ಕಷ್ಟ.
ಉಫ್ ಫ್ ಫ್… ಉದ್ದದ ಹೊಗೆ ಬಿಟ್ಟು ಸಾಕು ಸಾಕು. ಹೀಗೆ ನಾನು ದ್ವಿಪಾತ್ರವಾಗಿ, ತ್ರಿಪಾತ್ರವಾಗಿ ಅದಕ್ಕೂ ಮೀರಿದ ಪಾತ್ರಗಳಿಗೆ ಬಣ್ಣ ಹಚ್ಚುತ್ತಾ ಹೋದರೆ ಅನಿಶ್ಚಿತತೆಗಳು ಬೆನ್ನಿಗೆ ಬಿದ್ದಾವು. ಯಾಕೆ ನಾನು ಹೀಗೆ? ಇಷ್ಟುದ್ದವನ್ನು ಇ…ಷ್ಟು…ದ್ದ ಮಾಡುವ ನನ್ನ ಗುಣಕ್ಕಿಷ್ಟು ಬೆಂಕಿ ಬೀಳಲಿ. ಇಲ್ಲ ಇದರಿಂದ ನಾನು ಹೊರಬರಬೇಕು. ಹೊರಬರಬೇಕಷ್ಟೇ. ಹೀಗೆ ನನ್ನ ಜೀವನದಲ್ಲಿ ಅಂದುಕೊಂಡದ್ದು ಅದೆಷ್ಟು ಬಾರಿಯೋ?
ಧಂ ಎಳೆದರೆ ಫಿಲ್ಟರ್ನ ಸಪ್ಪೇ ಸ್ವಾದ. ಫಿಲ್ಟರ್ ಕ್ಯಾಪ್ನ ಒಳಗೆ ಗಪ್ಪನೆ ಕೂತ ಫಿಲ್ಟರ್ ಅನ್ನು ಕುಟ್ಟಿ ತಟ್ಟಿ ಬೀಳಿಸಿದೆ.
– ಹೆಲೋ… ಗಿವ್ ಮಿ ಒನ್ ಮೋರ್ ಪ್ಲೀಸ್.
– ಯಾವುದು?
– ಈಗ ಕೊಟ್ಟಲ್ಲ ಅಷ್ಟು ಬೇಗ ಮರೆತೋದಾ?
– ಕ್ಲಾಸಿಕ್ ಮೆಂಥಾಲ್?
– ಎಸ್.
ಎಲ್ಲರೂ ನನ್ನತ್ತಲೇ ಮಿಕ ಮಿಕ ನೋಡುತ್ತಿರಬೇಕು. ಹ್ಞಾಂ ನೋಡದೇ ಇರುತ್ತಾರೆಯೇ? ಅದೇನು ಹೊಸತೇ ನನಗೆ? ಜನ ನೋಡುತ್ತಿರಬೇಕು ನಾವು ಬೆಳೀತಾ ಇರಬೇಕು. ಅವರು ನೋಡುತ್ತಿದ್ದಾರೆಂದು ತಿಳಿದ ಮೇಲೆ ತಾನೇ ನಾವು ನಮ್ಮನ್ನು ಸರಿಯಾಗಿ ನೋಡಿಕೊಳ್ಳಲಿಕ್ಕೆ ಶುರುಮಾಡಿದ್ದು. ಓದಿನಲ್ಲಿ ಆಸಕ್ತಿಯೇ ಇಲ್ಲದ ನಾನು ಓದಿನಲ್ಲಿ ಆಸಕ್ತಿ ಹೊಂದಿದ್ದು. ಹತ್ತನೇ ಇಯತ್ತೆಯಲ್ಲಿ ನಪಾಸಾಗಿದ್ದ ನಾನು ಸಪ್ಲಿಮೆಂಟರಿಯಲ್ಲೆ ಪಾಸಾಗಿದ್ದು. ಪಿ.ಯು.ಸಿ ಯಲ್ಲಿ ಜಿಲ್ಲೆಗೇ ಮೊದಲು ಬಂದದ್ದು.
ಹೀಗೆ ಒಂದರ ಹಿಂದೆ ಒಂದು ಸಿಗರೇಟು ಹೊಡೆಯುವುದು ನನಗೆ ಅಭ್ಯಾಸ ಬಲ. ಅದೇ ಒಂದು ರೀತಿಯ ಕಿಕ್ಕು. ನನ್ನಿಂದ ಇದನ್ನೂ ಬಿಡಲಾಗುತ್ತಿಲ್ಲ. ನನ್ನ ಜೀವನದಲ್ಲಿ ನನ್ನ ಕಷ್ಟದಲ್ಲಿ ನನ್ನ ಜೊತೆಗೆ ನಿಂತುಕೊಂಡದ್ದು ಈ ಟೀ ಮತ್ತು ಸಿಗರೇಟು ಮಾತ್ರ. ಕಷ್ಟದಲ್ಲಿ ಜೊತೆಗೆ ನಿಂತವರನ್ನು ಅಷ್ಟು ಸುಲಭಕ್ಕೆ ಬಿಡಲಾಗುತ್ತದೆಯೇ?
ಕೈಯಲ್ಲಿದ್ದ ವಾಚು ನನ್ನ ತಲೆಗೆ ಮೊಟಕಿತು. ಗಂಟೆ ಹತ್ತು ಐವತ್ತು. ಅಯ್ಯೋ… ಸಮಯ ಹೋದದ್ದೇ ಗೊತ್ತಾಗಲಿಲ್ಲವಲ್ಲಾ? ಆಫೀಸಿಗೆ ತಡವಾಯಿತು. ಇಲ್ಲಿಂದ ನನ್ನ ಆಫೀಸಿಗೆ ಏನಿಲ್ಲವೆಂದರೂ ಇಪ್ಪತ್ತರಿಂದ ಇಪ್ಪತ್ತೈದು ನಿಮಿಷಗಳ ಪ್ರಯಾಣ. ಈ ಹಾಳಾದ ಟ್ರಾಫಿಕ್ ಬೇರೆ ಯಮರೋಧನೆ. ಬಾಸ್ಗೆ ಬೆಣ್ಣೆಹಚ್ಚಿ ಕೊಂಚ ತಡವಾಗುತ್ತದೆಂದು ಹೇಳಿ ನೋಡೋಣ. ಮೊಬೈಲು ಕರೆ ಹಚ್ಚಿತು.
– ಹೆಲೋ… ಹೆಲೋ ಸರ್ ಗುಡ್ ಮಾರ್ನಿಂಗ್.
– ಹೋ… ವೆ ರಿ ಗು ಡ್ ಮಾ ರ್ನಿಂ ಗ್ …
– ಸರ್ ನಾನು ತುರ್ತಾಗಿ ಊರಿಗೆ ಹೊರಟಿರುವೆ. ಒಂದೆರಡು ದಿನದ ಮಟ್ಟಿಗೆ ರಜೆ ಬೇಕಿತ್ತು.
– ವಾಟ್ ರಜೆಯೇ? ನೊ ನೋ ಇಟ್ ಈಸ್ ಹೈಲಿ ಇಂಪಾಸಿಬಲ್.
– ಸರ್ ತಂದೆಗೆ ಹುಷಾರಿಲ್ಲ ಸರ್. ಇಲ್ಲ ಎನ್ನಬೇಡಿ.
– ಹೋ… ! ಇಟ್ಸ್ ಓಕೆ ಬೇಗ ಬಂದು ಬಿಡಿ. ನೀವು ಇಲ್ಲದಿದ್ದರೆ ಇಲ್ಲಿ ನನಗೆ ಕೈ ಕಾಲೇ ಆಡುವುದಿಲ್ಲ.
– ಶ್ಯೂರ್ ಸರ್ ಥ್ಯಾಂಕ್ಯೂ.
ನೀವು ಇಲ್ಲದಿದ್ದರೆ ಇಲ್ಲಿ ನನಗೆ ಕೈ ಕಾಲೇ ಆಡುವುದಿಲ್ಲ. ಅವರ ಮಾತನ್ನೇ ವ್ಯಂಗ್ಯವಾಗಿ ನುಡಿದು-ಇವರಪ್ಪನ ನಾ ಬಡಿಯಾ. ಮೊದಲು ಕೈ ಕಾಲನ್ನು ಸರಿಯಾಗಿ ಮನೆಯಲ್ಲಿ ಆಡಿಸುವುದನ್ನು ಕಲಿ. ಮದುವೆ ಆಗಿ ಐದಾರು ವರ್ಷವೇ ಆಯಿತೇನೋ? ಇನ್ನೂ ಒಂದು ಫಲವಿಲ್ಲ ಮುಂಡೇದಕ್ಕೆ. ಅಲ್ಲಿ ಯಾರೋ ಕೈ ಕಾಲನ್ನು ಆಡಿಸಿ ತಿಂದರ್ಯಾರೋ ಸಿಕ್ಕಿಬಿದ್ದರ್ಯಾರೋ ಎಂಬಂತಾದರೆ ಶ್ರೀ ರಮಣ ಗೋವಿಂದಾ ಗೋ ವಿಂ ದ.
ಅದೆಷ್ಟೋ ಹೊತ್ತಿನಿಂದ ಪಾರ್ಕಿಂಗ್ನಲ್ಲಿ ನಿಂತು ಮ್ಯಾಸ್ಟ್ರೋ ಗಾಡಿಯನ್ನು ಪಟಾಯಿಸುತ್ತಿದ್ದ ಜಾವಾ ಕ್ಲಾಸಿಕ್ 360 ಬೈಕು ಅಲ್ಲಿಗೆ ಬಂದ ತನ್ನ ಓನರ್ ಅಭಿಯನ್ನು ಗೌರವಪೂರ್ವಕವಾಗಿ ಬರಮಾಡಿಕೊಂಡು ಆರಾಮಾಗಿ ಕೂರಿಸಿ ಮ್ಯಾಸ್ಟ್ರೋಗೆ ಕಡೇದಾಗಿ ಕಣ್ಣೊಡೆದು ಕಿಚಾಯಿಸಿ ಬುಡು ಬುಡು ಎನ್ನುತ್ತಾ ಪಿ.ಜಿ ಕಡೆಗೆ ಓಡಿತು.
*****
ಗಾಡಿ ನೇರವಾಗಿ ಬಂದು ಪಿ.ಜಿ.ಯ ಮುಂದೆ ಅಡ್ಡಾಗಿ ಅಭಿಯನ್ನೇನೋ ಕೆಳಕ್ಕಿಳಿಸಿತು. ಆದರೆ ಅಭಿಗೆ ಈ ನಡುವೆ ಮನೆಯೆಂದರೇ ವಾಕರಿಕೆ, ಹಿಂದೇಟು. ಇನ್ನೆಲ್ಲಿಗೂ ಹೋಗುವ ಮನಸ್ಸೂ ಇದ್ದಂತಿಲ್ಲ. ಊರಿಗೆ ಹೊರಟು ಬಿಡಲೇ? ಊರು ಎಂದರೆ ಅಪ್ಪ. ಅಪ್ಪ ನನ್ನಿಂದ ದೂರವಾದ ಮೇಲೆ ಆ ಊರಿನ ಹಂಗು ತಾನೇ ಯಾಕೆ ಬೇಕೆಂದು ಇತ್ತೀಚೆಗೆ ಅದರ ಋಣವನ್ನೂ ಕಡಿದುಕೊಂಡಿದ್ದೆ. ಅಪ್ಪನಿಗೆ ಹುಷಾರಿಲ್ಲವೆಂದು ಬಾಸ್ಗೆ ಬೇರೆ ಸುಳ್ಳು ಹೇಳಿದೆ. ಇಲ್ಲ, ಅಪ್ಪನೇ ಆ ಮೂಲಕವಾಗಿಯಾದರೂ ಊರಿನ ಮುಖ ನೋಡಲಿ ಎಂದು ನನ್ನಿಂದ ಸುಳ್ಳಾಡಿಸಿದನೇ? ಇದ್ದರೂ ಇರಬಹುದೇನೋ? ಅಪ್ಪ ಭೌತಿಕವಾಗಿ ನನ್ನನ್ನು ಅಗಲಿ ಇಂದಿಗೆ ಸರಿಯಾಗಿ ಒಂದು ವರ್ಷದ ಮೇಲೆ ಏಳು ತಿಂಗಳು ಹದಿನಾರು ದಿನಗಳೇ ಕಳೆದಂತಾಗುತ್ತದೆ. ಕಣ್ಣು ತುಳುಕಾಡಿತು. ಮನಸ್ಸು ತಬ್ಬಿಬ್ಬಾಯಿತು. ಅದಕ್ಕೇ ಆಕೆಗೆ ನನ್ನ ಸರ್ವಸ್ವನೇ ಆಗಿದ್ದ ನನ್ನ ಅಪ್ಪನನ್ನು ಕಳೆದುಕೊಂಡೇ ನಾನು ಇನ್ನೂ ಉಸಿರಾಡುತ್ತಿದ್ದೇನೆ. ಇನ್ನು ನೀನು ಹೋದರೆ ನನಗೆ ಆಗುವುದಾದರೂ ಏನು? ಎಂದು ಸರಿಯಾಗಿ ಜಾಡಿಸಿ ಬಂದದ್ದು.

ಇತ್ತ ಅಭಿಯನ್ನು ಅಚಾನಕ್ಕಾಗಿ ಅದೂ ಇಂತಹ ಸಮಯದಲ್ಲಿ ಕಂಡ ಮನೆಯಾಗಿನ ಮನೆಗೆಲ್ಲಾ ಒಂದು ತೆರನಾದ ಸಖೇದಾಶ್ಚರ್ಯ. ಮನೆಯ ಪ್ರತಿಯೊಬ್ಬರೂ ಅಂದರೆ ಕಸಪೊರಕೆಯಿಂದ ಹಿಡಿದು ಯು.ಪಿ.ಎಸ್ ವರೆಗೂ ತಮ್ಮನ್ನು ತಾವೇ ಗಿಂಡಿಕೊಂಡು ಇದು ಖಂಡಿತಕ್ಕೂ ಕನಸಲ್ಲವೆಂಬುದನ್ನು ಖಾತ್ರಿಪಡಿಸಿಕೊಳ್ಳುತ್ತಾ ಹಿರಿ ಹಿರಿ ಹಿಗ್ಗುವುದರಲ್ಲಿದ್ದವು. ಅಭಿ ರಜೆ ಹಾಕುವುದು ಅಪರೂಪಕ್ಕೆ ಅಪರೂಪ. ಹಾಗೆ ಏನಾದರೂ ರಜೆ ಇದ್ದರೂ, ಹಾಕಿದರೂ ಹೀಗೆ ಮನೆಗೆ ವಾಪಸ್ಸಾಗುವ ಜಾಯಮಾನವಂತೂ ಅಭಿಯದಾಗಿರಲಿಲ್ಲ. ಆದರದಿಂದ ಅಭಿಯನ್ನು ಸ್ವಾಗತಿಸಿದ ಬಾಗಿಲು. ತನ್ನತ್ತ ಕರೆದು ಮಮತೆಯಿಂದ ದಾಹ ನೀಗಿಸಿ ಜೀವ ತಣ್ಣಗೆ ಮಾಡಿದ ಆಕ್ವಾಗಾರ್ಡ್. ಬರಸೆಳೆದು ತನ್ನ ಬೆಚ್ಚನೆಯ ಮಡಿಲಿನ ಮೇಲೆ ಮಲಗಿಸಿಕೊಂಡ ಕರ್ಲಾನ್ ಹಾಸಿಗೆ. ತಂದೆಯಂತೆ ಅಭಿಯ ತಲೆ ಗೂದಲನ್ನು ತುರಿಸುತ್ತಲಿದ್ದ ಟೇಬಲ್ ಫ್ಯಾನ್…
ತನ್ನ ಗೆಳತಿ ವಂದನಾ ಇಲ್ಲದ ಪಿ.ಜಿ ಸುಡುಗಾಡಿನಂತಾಗಿ ಅಭಿ ಈಕೀಕ್ಕೆ ಬೆಚ್ಚಿ ಬೀಳುತ್ತಿದ್ದ. ಆಕೆ ತನ್ನ ಮಾವನ ಮನೆಯನ್ನು ಸೇರಿಕೊಂಡು ಇವತ್ತಿಗೆ ವಾರದ ಮೇಲೆ ಒಂದು ದಿನ. ಅರ್ಥಾತ್ ನಮ್ಮ ಪಿ.ಜಿಯನ್ನು ಬಿಟ್ಟು. ಮಾವನ ಮನೆಯಿಂದಲೇ ಆಫೀಸಿಗೆ ಹೋಗುವುದು ಬರುವುದನ್ನು ಮಾಡುತ್ತಿರುವಳು. ಏನೋ ಆರೋಗ್ಯದ ಸಮಸ್ಯೆಯಂತೆ. ನಾ ಕಾಣದ ಆರೋಗ್ಯದ ಸಮಸ್ಯೆ. ಇಷ್ಟಕ್ಕೂ ಆಕೆಯ ದೇಹ ಮನಸ್ಸಿನ ಇಂಚಿಂಚೂ ನನಗೆ ಗೊತ್ತುಂಟು! ಗೊತ್ತಿಲ್ಲವೆಂದರೂ ಅವಳೇ ಗೊತ್ತುಮಾಡುತ್ತಿದ್ದಳು. ನಮ್ಮ ನಡುವೆ ಯಾವ ಖಾಸಗೀತನಕ್ಕೂ ಅವಕಾಶವಿರಲಿಲ್ಲ. ಹಾಗಿದ್ದವಳು ಇಂದು ನನ್ನಿಂದ ದೂರವಾಗಿದ್ದಾಳೆ. ಇಲ್ಲಸಲ್ಲದನ್ನು ಅವರಿವರು ಕಿವಿಗೆ ಊದಿರುತ್ತಾರೆ. ಇವಳು ಚಾಚೂ ತಪ್ಪದೇ ಅದನ್ನು ಪಾಲಿಸುತ್ತಿದ್ದಾಳೆ ಅಷ್ಟೇ. ಆ ನಿಮಿತ್ತವೇ ನನ್ನನ್ನು ಬಿಟ್ಟುಬಿಡಬೇಕೆನ್ನುವ ನಿರ್ಧಾರವನ್ನು ಆಕೆ ಮಾಡಿರುವುದು. ಆ ನಿರ್ಧಾರಕ್ಕೆ ಆರೋಗ್ಯದ ಕುಂಟು ನೆಪವನ್ನು ಆಕೆ ಹೇಳುತ್ತಿರುವುದು.
ಎದ್ದು ಬಿದ್ದು ತಕಥೈ ಕುಣಿದು, ನೆಗೆದು, ಹತ್ತಿರ ಸುಳಿದು ಒಂದೊಂದೂ ಒಂದೊಂದು ಆತ್ಮಗಳಂತೆ ಪೀಡಿಸುತ್ತಿರುವ ವಂದನಾಳ ಬಟ್ಟೆಬರೆಗಳು, ದಿನೋಪಯೋಗಿ ವಸ್ತುಗಳು, ಆಕೆಯ ಸಹಜವಾದ ವಿವಿಧ ಭಂಗಿಗಳು…… ತಲೆಯನ್ನು ಆ್ಯಸಿಡ್ಗೆ ಅಜ್ಜಿದಂತೆ. ಅಸಂಖ್ಯ ಸುತ್ತಿಗೆಗಳು ಹೃದಯಕ್ಕೆ ಗುಕ್ಕು ಗುಕ್ಕನೆ ಗುದ್ದಿದಂತೆ. ಯಪ್ಪಾ… ಎನ್ನುತ್ತಾ ರೆಪ್ಪೆಯನ್ನು ಬಿಗಿಹಿಡಿದು ಅಭಿ ಹೊರಳಾಡಿದ. ಆದರೇನು? ವಂದನಾಳ ಮಾತುಕತೆಗಳು, ನಗು-ರಾಗ-ರಗಳೆಗಳು ಈ ಎಲ್ಲಕ್ಕೂ ರೆಕ್ಕೆ ಬಂದು ಅವು ಅಭಿಯ ಸುತ್ತ ಗಸ್ತು ಹೊಡೆಯುತ್ತಲೇ ಇದ್ದವು.
*****
ಅಭಿ ಮತ್ತು ವಂದನಾಳ ಗೆಳೆತನ ಇಂದು ನಿನ್ನೆಯದಲ್ಲ. ಅದು ಬಾಲ್ಯದಿಂದಲೇ ಪರಿಪಾಕಗೊಂಡದ್ದು. ಲೆಕ್ಕದಂತೆ ಹೇಳುವುದಾದರೆ ವಂದನಾ ಅಭಿಯ ಚಿಕ್ಕಪ್ಪನ ಮಗಳು. ಕೆಲವು ದಿನಗಳ ಅಂತರವಷ್ಟೇ ಇದ್ದ ಒಂದೇ ವಾರಗೆಯವರು. ಒಂದೇ ಬೀದಿಯಲ್ಲಿ ಒಂದೇ ಶಿಶುವಿಹಾರದಲ್ಲಿ ಆರಂಭವಾದ ಇವರ ವಿದ್ಯಾಭ್ಯಾಸ ಇಂದು ಬೆಂಗಳೂರನ್ನು ಬಂದು ತಲುಪಿದೆ ಎಂದರೆ ಅವರ ಒಡನಾಟ ಎಂಥದ್ದೆಂಬುದು ಅರಿವಾಗದೇ ಇರಲಿಕ್ಕಿಲ್ಲ. ಮೈಸೂರಿನ ಪ್ರತಿಷ್ಠಿತ ಕಾಲೇಜೊಂದರ ಬಿ.ಇ. ಅಂತಿಮ ಸೆಮಿಸ್ಟರ್ನಲ್ಲಿ ಓದುತ್ತಿರುವಾಗಲೇ ಇಬ್ಬರೂ ಕ್ಯಾಂಪಸ್ ಸೆಲೆಕ್ಷನ್ ಆಗಿ ಕೆಲಸವನ್ನು ಗಿಟ್ಟಿಸಿದ್ದ ನಿಪುಣರು. ಇಂದಿಗೆ ಇಬ್ಬರೂ ದೊಡ್ಡ ದೊಡ್ಡ ಕಂಪೆನಿಗಳಲ್ಲಿ ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದಾರೆ. ಕೆಲಸವೊಂದೇ, ಕಂಪೆನಿಗಳಷ್ಟೇ ಬೇರೆ ಬೇರೆ. ತಂಗಿದ್ದದ್ದು ಮಾತ್ರ ಪಿ.ಜಿ ಯಲ್ಲಿ. ಅದೂ ಒಂದಾಗಿ, ಸ್ವ ಚ್ಛಂ ದವಾಗಿ.
ಅಂದಿಗೆ ಪಾರ್ವತೀ ಒಕ್ಕಲಿನವರಾದ ಇವರು ಇಂದಿಗೆ ಸುತ್ತಮುತ್ತಲಲ್ಲೂ ಕ್ರಿಶ್ಚಿಯನ್ನರಾಗಿ ಗುರುತಿಸಿಕೊಂಡಿದ್ದಾರೆ. ಇಂದಿಗೆ ಎಂದರೆ ಈ ತಲೆಮಾರಿನಿಂದ ಎಂದರ್ಥವಲ್ಲ. ಅವರೇ ಹೇಳಿಕೊಳ್ಳುವ ಪ್ರಕಾರ ತಾತ ಮುತ್ತಾತಂದಿರ ಕಾಲದಿಂದಲೂ ಅವರು ಕಿಶ್ಚಿಯನ್ನರಂತೇ. ಮಹೇಶ್ ಮೇಶಕ್ ಆಗಿ, ಸ್ವಾಮಿ ಸ್ಯಾಮ್ಯುವೇಲ್ ಆಗಿ, ಭಾಗ್ಯಮ್ಮ ಭಾಗ್ಯಮೇರಿ ಆಗಿ, ರಾಧಾ ರೂತ್ ಆಗಿ ಹೀಗೆ. ಇವರು ಚಾಚೂ ತಪ್ಪದೇ ಕ್ರಿಶ್ಚಿಯನ್ ಆಚರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ದಿನಾಲೂ ಇವರ ಮನೆಗಳಲ್ಲಿ ಕುಟುಂಬ ಪ್ರಾರ್ಥನೆಯು ನೆರವೇರುತ್ತದೆ. ಎಳಸು ರಾತ್ರಿಯ ಸಮಯದಲ್ಲಿ ದಿನಕ್ಕೆ ಒಂದೋ ಎರಡೋ ದೇವರ ಹಾಡುಗಳನ್ನು ಹಾಡಿ, ಒಬ್ಬೊಬ್ಬರಂತೆ ಪ್ರಾರ್ಥನೆ ಮಾಡಿ ಕಡೆಗೆ ಎಲ್ಲರೂ ಒಟ್ಟಾಗಿ ದೇವರು ಕಲಿಸಿಕೊಟ್ಟದ್ದೆಂದೇ ಹೇಳುವ ಪರಲೋಕದ ಜಪವನ್ನು ಹೇಳುವುದರೊಂದಿಗೆ ಅಂದಿನ ಅವರ ಕುಟುಂಬ ಪ್ರಾರ್ಥನೆಯು ಮುಕ್ತಾಯಗೊಳ್ಳುತ್ತಿತ್ತು.
ಅವರ ವಠಾರದ ತುಂಬೆಲ್ಲಾ ಮಕ್ಕಳ ಹಿಂಡೋ ಹಿಂಡು. ಈ ಕಾರಣಕ್ಕೇ ವಠಾರಕ್ಕೆ ವಠಾರವೇ ಸದಾ ಗಿಲುಗುಟ್ಟುತ್ತಿತ್ತು. ಗಂಡು ಮಕ್ಕಳು ಸಾಮಾನ್ಯವಾಗಿ ಬಾಚಿಕಲ್ಲು, ಟಿಕ್ಕಿ, ಬುಗುರಿ, ಗೋಲಿ, ಕಬಡ್ಡಿ… ಆಟಗಳನ್ನೂ ; ಹೆಣ್ಣು ಮಕ್ಕಳು ಗಟ್ಟಭಾರ, ಹಳ್ಳುಮನೆ, ಸ್ಕಿಪ್ಪಿಂಗ್, ಎಲಾಸ್ಟಿಕ್, ಕುಂಟಪಟ… ಮುಂತಾದವುಗಳನ್ನೂ ಆಡುತ್ತಿದ್ದರು. ಭಾನುವಾರ ಬಂತೆಂದರೆ ಈ ವಠಾರದಲ್ಲಿ ಹಬ್ಬದ ಕಳೆ. ಅಂದು ಶುಚಿಯಾಗಿ ಉತ್ತಮವಾದ ಬಟ್ಟೆಗಳನ್ನು ತೊಟ್ಟು ಚರ್ಚಿಗೆ ಹೊರಡುವುದು. ಚರ್ಚು ಮುಗಿಸಿ ಬರುತ್ತಿದ್ದಂತೇ ಅವರವರ ಅನುಕೂಲಕ್ಕೆ ತಕ್ಕಂತೆ ಮಾಂಸ ಮಡ್ಡಿಯ ಊಟ ಇದ್ದದ್ದೇ. ಈ ನಡುವೆ ಮಕ್ಕಳ ಗಮನವೆಲ್ಲಾ ಬರೀ ಸಂಜೆಯ ಮೇಲೆಯೇ ಇದ್ದಿರುತ್ತಿತ್ತು. ಅದಕ್ಕೆ ಕಾರಣವಿದೆ. ಭಾನುವಾರದ ಸಂಜೆ ಎಂದರೆ ಅದು ಮನರಂಜನೆಯ ಸಂಜೆ. ವಠಾರದ ಪ್ರತಿಯೊಬ್ಬರೂ ಆ ಮನರಂಜನೆಯಲ್ಲಿ ಪಾಲುದಾರರಾಗಿರುತ್ತಿದ್ದರು. ಮಕ್ಕಳು, ಸ್ತ್ರೀಯರು, ಪುರುಷರು ಎಲ್ಲರಿಗೂ ಪ್ರತ್ಯೇಕ ಪ್ರತ್ಯೇಕವಾದ ಆಟೋಟದ ಸ್ಪರ್ಧೆಗಳು, ಹಾಡಿನ ಸ್ಪರ್ಧೆಗಳು, ಬೈಬಲ್ನ ಆಧಾರದ ಮೇಲೆ ಏಕಪಾತ್ರಾಭಿನಯ, ರಸಪ್ರಶ್ನೆ ಇತ್ಯಾದಿ ಎಲ್ಲವೂ ಆಯೋಜಿಸಲ್ಪಡುತ್ತಿತ್ತು. ಹೀಗಾಗಿ ರಾತ್ರಿ ಏಳು-ಎಂಟು ಗಂಟೆಯವರೆಗೂ ಇಡೀ ವಠಾರವೇ ನಗೆಗಡಲಲ್ಲಿ ಮಿಂದೇಳುತ್ತಿತ್ತು.
ಈ ವಠಾರದ ಮಕ್ಕಳ ಪೈಕಿ ಅಭಿ ಮತ್ತು ವಂದನಾ ಭಿನ್ನವಾಗೇ ಗೋಚರಿಸುತ್ತಿದ್ದುದುಂಟು. ತಾವಾಯಿತು ತಮ್ಮ ಆಟವಾಯಿತು. ಎನ್ನುವ ಮನೋಧರ್ಮ ಇವರದ್ದು. ಅಪರೂಪಕ್ಕೆಂದು ಇತರರೊಟ್ಟಿಗೆ ಆಟಕ್ಕೆ ಸೇರಿಕೊಂಡರೆ ಇವರು ಹೇಳಿದಂತೇ ಆಗಬೇಕು. ಇಬ್ಬರದೂ ಒಂದೇ ತಂಡ ಆಗಬೇಕು. ಇಲ್ಲವಾದಲ್ಲಿ ಆಟಕ್ಕೆ ಸೇರುವುದಿಲ್ಲವೆಂಬ ಕರಾರು. ಅದು ಎಂತಹ ಸಂದರ್ಭವೇ ಎದುರಾದರೂ ಅವರು ಒಬ್ಬರಿಗೊಬ್ಬರು ಎಂದೂ ಜಗಳವಾಡಿದವರಲ್ಲ. ಒಬ್ಬರನ್ನೊಬ್ಬರು ಎಂದೂ ಬಿಟ್ಟುಕೊಟ್ಟವರಲ್ಲ.
ವಠಾರದ ಯಾರ ಕಣ್ಣಿಗೂ ಕಾಣದಂತೆ ಏಕಾಏಕಿ ಅದೃಶ್ಯರಾಗುತ್ತಿದ್ದ ಇವರು ಎಲ್ಲೋ ಹುಲ್ಲುಮೆದೆಯಲ್ಲೋ, ಯಾರದೋ ಕೊಟ್ಟಿಗೆಯಲ್ಲೋ, ಇಲ್ಲ ಹಿತ್ತಲಿನ ಸಂದು-ಗೊಂದುಗಳಲ್ಲೋ ಗೌಪ್ಯವಾಗಿ ಸೇರಿ ಅಪ್ಪಿಕೊಳ್ಳುವುದು, ಪರಸ್ಪರ ಮುದ್ದಾಡುವುದು. ಚಲನಚಿತ್ರಗಳಲ್ಲಿ ಕಂಡಂತೆ ತುಟಿಗೆ ತುಟಿಯ ಪೋಣಿಸುವುದೂ ಇವರ ನಡುವೆ ಆಗಾಗ್ಗೆ ನಡೆಯುತ್ತಿರುತ್ತಿತ್ತು.
*****
ಅಭಿ ಮಂಚದ ಮೇಲೆ ಹೊರಳಾಡಿ ಹೊರಳಾಡಿ ಸಾಕಾಗಿ ಕೊನೆಗೆ ಬೇಸತ್ತು ಎದ್ದು ಕೂತ. ಗಡಿಯಾರ ನನ್ನನ್ನೊಮ್ಮೆ ನೋಡು ಎಂದದ್ದನ್ನು ಕೇಳಿಸಿಕೊಂಡು ಗಡಿಯಾರವನ್ನು ನೋಡಿದ. ಸಂಜೆ ಐದು ನಲವತ್ತೈದಾಗಿತ್ತು. ದಿಕ್ಕು ತೋಚದಂತೆ ಮಂಚದ ಮೇಲೆಯೇ ಕೂತಿದ್ದನ್ನು ಕಂಡ ಕನ್ನಡಿಯು ಕರೆದು ತನ್ನ ಮುಂದೆ ಅಭಿಯನ್ನು ನಿಲ್ಲಿಸಿಕೊಂಡಿತು. ಆ ಕನ್ನಡಿಯಲ್ಲಿ ವಂದನಾಳೇ ಕಾಣುತ್ತಿದ್ದಳು. ಮದುವೆಯಾಗುತ್ತಾಳಂತೆ ಮದುವೆಯಾ. ಯಾರೂ ಕಾಣದ ಮದುವೆಯಾ. ನಿನ್ನನ್ನು ಹೊರತುಪಡಿಸಿ ನನ್ನ ಬದುಕನ್ನು ಊಹಿಸಿಕೊಳ್ಳಲಿಕ್ಕೂ ಅಸಾಧ್ಯ. ಯಾರು ಏನೇ ಹೇಳಲಿ ಏನೇ ಹಳಿಯಲಿ ನಮ್ಮ ಬದುಕು ನಮ್ಮ ಸ್ವಾತಂತ್ರ್ಯ. ಅಷ್ಟಕ್ಕೂ ನಾವೇನೂ ಮಾಡಬಾರದನ್ನು ಮಾಡುತ್ತಿಲ್ಲವಲ್ಲಾ? ನಮ್ಮಂತೆ ಅದೆಷ್ಟು ಮಂದಿ ಬದುಕುತ್ತಿಲ್ಲ! ಅವಳಾಡಿದ್ದ ಈ ಪ್ರತಿಯೊಂದೂ ಮಾತುಗಳು ಅಂದಿಗೆ ಅದೆಷ್ಟು ಸುಂದರವೆನಿಸಿದ್ದವು, ಅದೆಷ್ಟು ಪ್ರಬುದ್ಧದ್ದೆನಿಸಿದ್ದವು. ಮನಸ್ಸಿಗೆ ಅದೆಷ್ಟು ಮುದನೀಡುತ್ತಿದ್ದವು! ಇಂದಿಗೆ… ಇಂದಿಗೆ ಅವೆಲ್ಲವೂ ಬರಿಯ ಸುಂದರ ಸು ಳ್ಳು ಗ ಳ ಷ್ಟೇ.
ಟಿಂಗ್ ಟಾಂಗ್ … ಟಿಂಗ್ ಟಾಂಗ್ (ಕಾಲಿಂಗ್ ಬೆಲ್)
ಅಭಿಗೆ ಹೋಗಿ ಯಾರೆಂದು ನೋಡಲಿಕ್ಕೂ ತಾತ್ಸಾರ.
ಟಿಂಗ್ ಟಾಂಗ್… ಮತ್ತೊಮ್ಮೆ. ಹಲ್ಲು ಕಡಿಯುತ್ತಾ ಹೋಗಿ ಬಾಗಿಲನ್ನು ತೆರೆದ. ತೆರೆದರೆ ಎದುರಿಗೆ ವಂ ದ ನಾ.

ವಂದನಾ ಅಭಿಯನ್ನು ಕಂಡ ಕೂಡಲೇ ಗಟ್ಟಿಯಾಗಿ ತಬ್ಬಿ ಹಿಡಿದು ಅಳುಗರೆಯುತ್ತಾಳೆ. ಒಂದು ವಾರದಿಂದ ನುಂಗಿಕೊಂಡಿದ್ದ ದುಃಖವದು. ಇಲ್ಲ, ನನ್ನಿಂದ ನಿನ್ನನ್ನು ಬಿಟ್ಟು ಇರಲಿಕ್ಕಾಗುತ್ತಿಲ್ಲ. ಇರಲಿಕ್ಕಾಗುವುದೂ ಇಲ್ಲ. ಐ ಮಿಸ್ ಯೂ. ಇನ್ನು ಎಂದಿಗೂ ನಾನು ನಿನ್ನಿಂದ ದೂರವಾಗುವುದಿಲ್ಲ. ನಿನ್ನನ್ನು ದೂರ ಮಾಡಿಕೊಳ್ಳುವುದೂ ಇಲ್ಲ. ಅಭಿಯ ಕೆನ್ನೆಯ ಮೇಲೆ ಪಟ ಪಟನೆ ಮುತ್ತಿನ ಮಳೆಯನ್ನು ಸುರಿಸಿ – ಈಗ ಹೇಳುತ್ತಿರುವೆ ಕೇಳು ನಾವು ಇದ್ದರೂ ಜೊತೆಗೇ ಸತ್ತರೂ ಜೊತೆಗೇ. ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ಎಂದು ಅಭಿಯ ತುಟಿಗೆ ತನ್ನ ತುಟಿಯ ಪೋಣಿಸುತ್ತಾಳೆ.
ವಂದನಾ ಅನಿತಾಳನ್ನು ಪ್ರೀತಿಯಿಂದ ಅಭಿ ಎಂದು ಕರೆಯುತ್ತಿದ್ದಳು.

ಡಾ. ದಿಲೀಪ್ ಎನ್ಕೆ ಚಾಮರಾಜನಗರದ ಕೊಳ್ಳೇಗಾಲದವರು. ಋತುಮಾನಕ್ಕಷ್ಟೇ ಪ್ರೀತಿ (ಕವನ ಸಂಕಲನ), ಬಲಿಷ್ಠ (ಕಥಾ ಸಂಕಲನ), ಚೆಗ್ಗಿ- ಮಾರಿಕುಣಿತದ ಸೊಲು (ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು. “ಕನ್ನಡ ದಲಿತ ಕಥಾಸಾಹಿತ್ಯ : ಅಕ್ಷರಸ್ಥ ದಲಿತರ ತಲ್ಲಣಗಳು” ಇವರ ಪಿ.ಎಚ್.ಡಿ ಮಹಾಪ್ರಬಂಧ
