ಮುಕುಂದರಾಜ್ ಅವರು ಈ ಕವನವನ್ನು ಬರೆದು ದಶಕಗಳೇ ಕಳೆದಿರಬಹುದು. ಆದರೆ ಸಮಾಜ, ಮನುಷ್ಯನ ಬುದ್ಧಿ, ಸ್ವಭಾವ ಮಾತ್ರ ಅವತ್ತಿಗೂ ಇವತ್ತಿಗೂ ಯಾವತ್ತಿಗೂ ಬದಲಾಗದು ಎನ್ನುವುದನ್ನು ‘ದಾರಿಯುದ್ದಕ್ಕು’ ಕವನ ತುಂಬಾ ಸಮರ್ಥವಾಗಿ ಬಿಂಬಿಸುತ್ತದೆ. ಈ ಕವಿತೆಯನ್ನು ಓದಿದ ಕೂಡಲೇ ಮುಂದಿನ ಕವಿತೆ ಓದುತ್ತೇನೆ ಎಂದರೆ ಅದು ಸಾಧ್ಯವಾಗದು. ಇದರೊಳಗೆ ಅಡಗಿದ ಅಸಹಾಯಕತೆ, ಮಾರ್ಮಿಕತೆ ಮತ್ತೆ ಮತ್ತೆ ಓದುವಂತೆ ಮಾಡುತ್ತದೆ. ಇಡೀ ಕವಿತೆ ಸರ್ರಿಯಲಿಸಂನ ಜೊತೆಗೆ ತುಸು ಗಜಲ್ ಛಾಯೆಯನ್ನೂ ಹೊತ್ತಿರುವುದು ವಿಶೇಷ. ಅಸ್ತಿತ್ವವಾದದ ನೆಲೆಯಲ್ಲಿ ನಾನು ಈ ನವ್ಯ ಕವನವನ್ನು ನೋಡುತ್ತಿದ್ದೇನೆ.
ಜಯಲಕ್ಷ್ಮಿ ಪಾಟೀಲ್ ಬರೆಯುವ “ಗರ್ದಿ ಗಮ್ಮತ್ತು” ಅಂಕಣದ ಆರನೆಯ ಬರಹ
ಯುವ ಕವಿ ಸೂರ್ಯಕೀರ್ತಿ ಇತ್ತೀಚಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಈಗಿನ ಅಧ್ಯಕ್ಷರಾದ ಹಿರಿಯ ಕವಿ, ಡಾ. ಎಲ್ ಎನ್ ಮುಕುಂದರಾಜ್ ಅವರ ಕವಿತೆಗಳನ್ನು ವಿಮರ್ಶಿಸಿ ಲೇಖನ ಬರೆದುಕೊಡಲು ಒಂದಿಷ್ಟು ಜನರನ್ನು ಕೇಳಿಕೊಂಡಿದ್ದರು. ಆಯಿತೆಂದು ಬರೆದುಕೊಡಲು ಒಪ್ಪಿದವರಲ್ಲಿ ನಾನೂ ಒಬ್ಬಳು. ಸೂರ್ಯಕೀರ್ತಿ ಅವರಿಗೆ ತಮ್ಮ ಮಿಂಚುಳ್ಳಿ ಪ್ರಕಾಶನದಿಂದ ಒಂದು ವಿಮರ್ಶಾ ಲೇಖನಗಳ ಸಂಪಾದಿತ ಕೃತಿಯೊಂದನ್ನು ಹೊರತರುವ ಆಲೋಚನೆ ಇದಕ್ಕೆ ಕಾರಣ.
ಎಂದಿನಂತೆ ನಾನು ಅವಧಿಯ ಅಂತಿಮ ಗಡಿಯ ಕ್ಷಣ ಗಣನೆ ಆರಂಭವಾದಾಗಲೇ ಬರೆಯಲು ನಿರ್ಧರಿಸಿ ಮುಕುಂದರಾಜ್ ಅವರ ಸಮಗ್ರ ಕವನಗಳ ಸಂಕಲನವನ್ನು ತೆರೆದು (ಆನ್ಲೈನ್) ಓದಲು ಕುಳಿತೆ.
ಇದಾ ಅದಾ ಎನ್ನುವ ಗೊಂದಲ ಶುರುವಾಯಿತು. ಆಗ ನಿರಂಕುಶ ಸಂಕಲನವನ್ನು ಕಳುಹಿಸಿಕೊಟ್ಟರು. ಓಡಿದ ಕೂಡಲೇ ಮೊದಲ ಕವನವೇ ಅದೆಷ್ಟು ಕಾಡತೊಡಗಿತೆಂದರೆ ಅದನ್ನು ಕೈಗೆತ್ತಿಕೊಳ್ಳುವುದು ನನ್ನ ಆದ್ಯತೆಯಾಯಿತು. ನನ್ನರಿವಿಗೆ ನಿಲುಕಿದ್ದು ಇಷ್ಟು. ಇದನ್ನೋದಿ ನಿಮಗೆ ಬೇರೆ ಹೊಳಹುಗಳು ತೋಚಿದರೆ ನೀವಿಲ್ಲಿ ಕಾಮೆಂಟ್ ಬಾಕ್ಸಲ್ಲಿ ಬರೆದು ಹಾಕಿ.
ಕವಿತೆ: ದಾರಿಯುದ್ದಕ್ಕು
‘ನಮ್ಮ ಕಾಲದಲ್ಲಿ ಹೀಗಿರಲಿಲ್ಲ ಬಿಡು, ಕಾಲ ಕೆಟ್ಟೋಗಿದೆ’ ಇದು ಹಿಂದಿನ, ಇಂದಿನ, ಮುಂದಿನ ತಲೆಮಾರುಗಳ ಗೊಣಗೂ ಎಂದೇ ಭಾವಿಸುತ್ತೇನೆ. ಯಾವುದೂ ಇದ್ದಂತಿರುವುದಿಲ್ಲ. ಬದಲಾವಣೆ ಸಹಜ ಪ್ರಕ್ರಿಯೆಯಾದಾಗ ಅದು ಸ್ವಾಗತಾರ್ಹ ಮಾತ್ರವಲ್ಲ ಅನುಕೂಲಕರವೂ ಆಗಿ, ಇದು ವಾಸ್ತವ, ಇರಬೇಕಾದುದೇ ಹೀಗೆ ಎನಿಸುತ್ತದೆ. ಆದರೆ ಮಾನವನ ಆಮಿಷಗಳು ಹೆಚ್ಚಾಗುತ್ತಾ ಹೋದಂತೆ, ತನ್ನ ಸ್ವಾರ್ಥಕ್ಕಾಗಿ ಸಮಾಜದ ಸ್ವಾಸ್ತ್ಯವನ್ನು ಹಾಳುಗೆಡವಲು ಶುರುವಿಡುತ್ತಾನೆ. ಅದಿರುವುದೇ ಹೀಗೆ ಎಂದು ವಾದಿಸುತ್ತ, ಸ್ವಾರ್ಥ ಸಾಧಿಸುತ್ತ, ತನ್ನ ವಿಕೃತಿ ಮೆರೆಯುತ್ತ, ಮುಂದೊಂದು ದಿನ ಸಾಯಲೇ ಬೇಕಿರುವುದರಿಂದ ಸತ್ತೂ ಹೋಗುತ್ತಾನೆ. ಆದರೆ ಹಾಳಾದ ಸಮಾಜ ಮಾತ್ರ ಆಗಾಗ ಅಲ್ಲಲ್ಲಿ ಸರಿಹೋದಂತೆ ಭಾಸವಾದರೂ ಅದೇ ಅವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗುತ್ತದೆ. ವ್ಯವಸ್ಥೆಯ ವಿರುದ್ಧ ಹೋರಾಡಲಾಗದೆ ಮನುಷ್ಯ ಅದೇ ಅವ್ಯವಸ್ಥೆಗೆ ಒಗ್ಗಿಕೊಳ್ಳುತ್ತಾನೆ. ಆದರೆ ಸಾಕ್ಷಿಪ್ರಜ್ಞೆ ಇರುವ ಮನುಷ್ಯ ಇಂಥ ಸಮಾಜಕ್ಕೆ ಒಗ್ಗಿಕೊಳ್ಳಲಾಗದೇ, ಇದರ ಹೊರತಾಗಿಯೂ ಬದುಕಲಾಗದೇ ತೊಳಲಾಡುತ್ತಲೇ ಬದುಕ ಸವೆಸುತ್ತಾ ನಡೆಯುತ್ತಿರುತ್ತಾನೆ/ಳೆ. ಹಳಹಳಿಕೆಯೇ ದಾರಿಯುದ್ದಕೂ ಜೊತೆಯಾಗಿರುತ್ತದೆ.
ಸಾಹಿತ್ಯದಲ್ಲಿ ದೇಹವನ್ನು, ಅಂಗಗಳನ್ನು ರೂಪಕವಾಗಿ, ಪ್ರತಿಮೆಯಾಗಿ ಬಳಸಿಕೊಂಡವರು ಹಲವರು. ಅದರಲ್ಲೂ ಕಣ್ಣು ಮತ್ತು ಹೊಟ್ಟೆಗಳು ಕಾವ್ಯ ಪ್ರಕಾರದಲ್ಲಿ ಹೇರಳವಾಗಿ ಸಿಗುತ್ತವೆ. ಕನ್ನಡ ಸಾಹಿತ್ಯದಲ್ಲಿ ಮಾತ್ರವಲ್ಲ ಇಡೀ ಭಾರತೀಯ ಸಾಹಿತ್ಯದಲ್ಲೇ ಹೆಣ್ಣಿನ ಅಂಗಾಂಗಗಳನ್ನಂತೂ ಅನಾದಿ ಕಾಲದಿಂದಲೂ ದೇವತೆಗಳನ್ನೂ ಬಿಡದೆ ಎಗ್ಗು ಸಿಗ್ಗಿಲ್ಲದೇ ವರ್ಣಿಸುವ ನೆಪದಲ್ಲಿ ಕಾವ್ಯದಲ್ಲಿ ಬಳಸಿದ ಪರಿ ಇದೆಯಲ್ಲ, ಆ ದೇಹದೊಳಗೊಂದು, ಜೀವವಿದೆ, ಆತ್ಮವಿದೆ, ಅನಿಸಿಕೆ, ಕನಸುಗಳಿವೆ ಕಾಣಿರೋ ಎಂದು ಬಯಲಲ್ಲಿ ನಿಂತು ಬೊಬ್ಬಿರಿಯಬೇಕು ಅನ್ನುವಷ್ಟು ಬಳಸಲಾಗಿದೆ.
ಬಸವಣ್ಣನವರು ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಲು, ಅಲ್ಲಮಪ್ರಭುಗಳು ಅದ್ವೈತದ ನೆಲೆಯಲ್ಲಿ, ತಮ್ಮ ವಚನಗಳಲ್ಲಿ ದೇಹವನ್ನು ರೂಪಕವಾಗಿ ಬಳಸಿಕೊಂಡರೆ, ಶಿಶುನಾಳ ಶರೀಫರು ದೇಹವನ್ನು ಆಧ್ಯಾತ್ಮಿಕ ಪ್ರತಿಮೆಯಾಗಿ ಬಳಸುತ್ತಾರೆ.
ಕವಿ ಶ್ರೀ. ಎಲ್ ಎನ್ ಮುಕುಂದರಾಜ್ ಅವರು ದೇಹ ಮತ್ತು ಅಂಗಾಂಗಗಳನ್ನು ತಮ್ಮ ‘ದಾರಿಯುದ್ದಕ್ಕು’ ಕವಿತೆಯಲ್ಲಿ ಬಳಸಿದ ರೀತಿ ಏಕಕಾಲಕ್ಕೆ ಭಯ, ಆತಂಕ ಹುಟ್ಟಿಸುತ್ತದೆ. ಇದು ಚಿಂತನೆಗೆ ಹಚ್ಚುವ ಕವಿತೆ. ಅವರ ೫೨ ಕವನಗಳ ಸಂಕಲನ, ‘ನಿರಂಕುಶ’ದ ಮೊದಲ ಕವಿತೆಯೇ ಇದಾಗಿದೆ. ಸಂಕಲನದ ಶೀರ್ಷಿಕೆ ಮತ್ತು ಈ ಕವಿತೆ ಜೊತೆಗೂಡಿ ಇಂದಿನ ದಿನಗಳಿಗೆ ಅದು ಹೇಗೆ ಕನ್ನಡಿ ಹಿಡಿಯುತ್ತವೆ ಎಂದರೆ ಅದನ್ನು ಕಂಡು ದಿಗ್ಭ್ರಮೆಗೊಂಡೆ! ಮುಕುಂದರಾಜ್ ಅವರು ಈ ಕವನವನ್ನು ಬರೆದು ದಶಕಗಳೇ ಕಳೆದಿರಬಹುದು. ಆದರೆ ಸಮಾಜ, ಮನುಷ್ಯನ ಬುದ್ಧಿ, ಸ್ವಭಾವ ಮಾತ್ರ ಅವತ್ತಿಗೂ ಇವತ್ತಿಗೂ ಯಾವತ್ತಿಗೂ ಬದಲಾಗದು ಎನ್ನುವುದನ್ನು ‘ದಾರಿಯುದ್ದಕ್ಕು’ ಕವನ ತುಂಬಾ ಸಮರ್ಥವಾಗಿ ಬಿಂಬಿಸುತ್ತದೆ. ಈ ಕವಿತೆಯನ್ನು ಓದಿದ ಕೂಡಲೇ ಮುಂದಿನ ಕವಿತೆ ಓದುತ್ತೇನೆ ಎಂದರೆ ಅದು ಸಾಧ್ಯವಾಗದು. ಇದರೊಳಗೆ ಅಡಗಿದ ಅಸಹಾಯಕತೆ, ಮಾರ್ಮಿಕತೆ ಮತ್ತೆ ಮತ್ತೆ ಓದುವಂತೆ ಮಾಡುತ್ತದೆ. ಇಡೀ ಕವಿತೆ ಸರ್ರಿಯಲಿಸಂನ ಜೊತೆಗೆ ತುಸು ಗಜಲ್ ಛಾಯೆಯನ್ನೂ ಹೊತ್ತಿರುವುದು ವಿಶೇಷ. ಅಸ್ತಿತ್ವವಾದದ ನೆಲೆಯಲ್ಲಿ ನಾನು ಈ ನವ್ಯ ಕವನವನ್ನು ನೋಡುತ್ತಿದ್ದೇನೆ.
ಸಹಜವಾದುದೆಲ್ಲವೂ ಅಸಹಜವಾಗುವುದು, ಸಂಗತ ಅಸಂಗತವಾಗುವುದು ಮನುಷ್ಯ ಲೋಲುಪದ ಉತ್ತುಂಗವನ್ನು ತಲುಪಿದಾಗ. ದೇಹವನ್ನು ರೂಪಕವಾಗಿ ಬಳಸಿಕೊಂಡ ಕವಿತೆಯಲ್ಲಿನ ಮನುಷ್ಯನ ಅಂಗಾಗಗಳೆಲ್ಲವೂ ಅವುಗಳ ಮೂಲ ಸ್ಥಾನದಲ್ಲಿ ಇಲ್ಲದಿರುವುದೇ ಅದರ ಪ್ರತೀಕ.
ಎರಡು ಕಣ್ಣುಗಳನ್ನೂ ಬಗೆದು ಕೈಯ್ಯಲಿಡಿದು ನಡೆಯುತ್ತಿದ್ದೆ
ದಾರಿಯುದ್ದಕೂ….
ಬೆಳ್ಳಂಬೆಳಕು ಕತ್ತಲೆಂಬುದು
ಅರಿವಿಗೇ ಬಾರದಂಥ ಮಿಂಚು
ದಾರಿಯುದ್ದಕೂ…… ಹಗಲುಮಬ್ಬು
ಪುಟ್ಟ ಮಕ್ಕಳು ನನ್ನ
ಕಣ್ಣುಗಳನ್ನು ದ್ರಾಕ್ಷಿಗಳೆಂದೇ ಬಗೆದು
ಗಬಕ್ಕನೆ ಗುಳುಮಿಸಲು ಹಾರಿಬರುತ್ತಿದ್ದವು
ದಾರಿಯುದ್ದಕೂ
ಕಣ್ಣು ಇಲ್ಲಿ ತುಂಬಾ ಗಟ್ಟಿ ರೂಪಕ. ಕಣ್ಣುಗಳನ್ನು ಕೈಯಲ್ಲಿ ಹಿಡಿದು ನಡೆಯುವುದನ್ನು ಮೂರು ರೀತಿಯಲ್ಲಿ ಅರ್ಥೈಸಬಹುದು. ಒಂದು, ತನ್ನ ಅರಿವು ಇನ್ನೂ ತನ್ನ ಹಿಡಿತದಲ್ಲೇ ಇದೆ ಎಂದು. ಇನ್ನೊಂದು, ಈ ಸಾಮಾಜಿಕ ಅಸಮಾನತೆಯ ಭಾಗವಾಗಿ ಇವನೂ ಸಹ ಇದ್ದುದನ್ನು ಇದ್ದ ಹಾಗೆ ಸಹಜ ರೀತಿಯಲ್ಲಿ ಸ್ವೀಕರಿಸದೇ, ತನ್ನ ದೃಷ್ಟಿಯನ್ನು ಮುಷ್ಟಿಯಲ್ಲಿಯಲ್ಲಿಟ್ಟುಕೊಂಡು, ಒಳಗಣ್ಣನ್ನು ಮುಚ್ಚಿಕೊಂಡು, ಅನುಕೂಲಸಿಂಧುವಾಗಿ ಉಳಿದವರೊಂದಿಗೆ ಕುರುಡು ನೀತಿಗೆ ಒಗ್ಗಿಕೊಂಡು ನಡೆಯುತ್ತಿದ್ದಾನೆ ಎನ್ನುವುದು. ಹೀಗಾಗಿಯೇ ಅಜ್ಞಾನವೇ ಜ್ಞಾನವೆಂಬಂತೆ (ಕತ್ತಲೆಂಬುದು ಬೆಳ್ಳಂಬೆಳಕು) ಭಾಸವಾಗುವುದು, ದಾರಿ ಉದ್ದಕ್ಕೂ ಯಾವುದೋ ಆಕರ್ಷಣೆ ಮಿಂಚಂತೆ ಫಳಫಳಿಸುವುದು ಕವಿಗೆ ಹಗಲುಮಬ್ಬಾಗಿ ತೋರುವುದಿದೆಯಲ್ಲ ಅದು ಅರಿವಿನ್ನೂ ಪೂರ್ತಿಯಾಗಿ ಆರಿಲ್ಲ ಎನ್ನುವುದನ್ನು ಸೂಚಿಸುತ್ತದೆ. ಹೀಗಾಗಿ ಮತ್ತೊಂದು ಈ ಸಾಲಿನ ಮಗ್ಗುಲು ತೆರೆದುಕೊಳ್ಳುತ್ತದೆ. ಅದನ್ನು ಗಮನಿಸುವುದಾದರೆ, ಅರಿವಿರುವುದೇ ಒಂದು ಶಾಪ ಅಥವಾ ವಜ್ಜೆಯಾಗಿರುವುದು. ಆದ್ದರಿಂದಲೇ ಕಣ್ಣುಗಳು ಸಹಜವಾಗಿ ಮುಖದ ಭಾಗವಾಗಿರದೇ ಭಾರವಾಗಿ, ಅವುಗಳನ್ನು ಕೈಯಲ್ಲಿ ಹಿಡಿದು ನಡೆಯುತ್ತಿದ್ದಾನೆ! ಆದ್ದರಿಂದ ಅವನಿಗೆ ಹಗಲುಮಬ್ಬಲಿ ಅರಿವಿಗೆ ನಿಲುಕಿಯೂ ನಿಲುಕದ ಏನೋ ಒಂದು ಗೋಚರಿಸುತ್ತಿದೆ.

ಇದರ ನಂತರದ ಸಾಲು ಬೆಚ್ಚಿಬೀಳಿಸುತ್ತದೆ ಓದುಗರನ್ನು! ದಾರಿ ಉದ್ದಕ್ಕೂ ಪುಟ್ಟ ಮಕ್ಕಳು ಹಾರಿ ಹಾರಿಬರುತ್ತಿದ್ದಾರೆ ಇವನ ಕಣ್ಣುಗಳನ್ನು ದ್ರಾಕ್ಷಿ ಎಂದು ಭಾವಿಸಿ ನುಂಗಲು! ಮಕ್ಕಳೆಂದರೆ ಮೃದು, ಮಕ್ಕಳೆಂದರೆ ಅಮಾಯಕತೆ. ತಿಳುವಳಿಕೆ ಇಲ್ಲದ ಜೀವಗಳು. ಅಂಥ ಮಕ್ಕಳು ಕಣ್ಣುಗಳನ್ನು ನುಂಗಲು ಹಾರಿ ಬರುವ ಕಲ್ಪನೆಯೇ ಭೀಭತ್ಸವಾದುದು. ಮುದ್ದು ಉಕ್ಕುವ ಜಾಗದಲ್ಲಿ ಭಯ ಆವರಿಸಿಕೊಳ್ಳುತ್ತದೆ. ಮಕ್ಕಳೆಂದರೆ ಕಡಿವಾಣವಿಲ್ಲದ ಆಸೆಬುರುಕುತನವೂ ಹೌದು. ಅತಿಯಾಸೆ ಅರಿವನ್ನೇ ನುಂಗುವುದು ಎಲ್ಲರಿಗೂ ತಿಳಿದಿದೆ. ಆದರೆ ಅದನ್ನು ಪುಟ್ಟ ಮಕ್ಕಳಿಗೆ ಹೋಲಿಸಿರುವುದಿದೆಯಲ್ಲ ಅದು ಅಪರೂಪದ ಹೋಲಿಕೆ. ಮುಂದಿನ ಸಾಲು, ಯಾರೋ ಬಾಯಿಗೆ ಬೆಲ್ಲು ಕಟ್ಟಿದ ನಾಯಿ ಈ ಮಕ್ಕಳನ್ನು ಹೆದರಿಸಲು ಬೊಗಳುತ್ತದೆ!
ಬಾಯಿಗೆ ಬೆಲ್ಲು ಬಿಗಿದಿದ್ದ ನಾಯಿ ಮಕ್ಕಳನ್ನು ಹೆದರಿಸಲು
ಬೌ…ಬೌ… ಬೊಗಳುತ್ತಿತ್ತು
ನಾಯಿಗೆ ನನ್ನ ಕಣ್ಣುಗಳ ಬಗ್ಗೆ ಕರುಣೆ
ಪುಟ್ಟ ಮಕ್ಕಳಿಗೆ ದಟ್ಟ ಆಸೆ
ದಾರಿಯುದ್ದಕೂ
ಬುದ್ಧಿಗೇಡಿಗಳ ಬಗ್ಗೆ ಭೀತಗೊಂಡೆ
ಬುದ್ಧಿಗೇಡಿಗಳು ನಿದ್ದೆಗೇಡಿಗಳು ಏನನ್ನಾದರೂ
ಕಸಿಯಬಹುದು; ಮಕ್ಕಳಿಗೆ ಯಾಕೆ ಇಂಥ
ಆಸೆ; ಅದೂ ನನ್ನ ಕಣ್ಣುಗಳ ಬಗ್ಗೆ! ಕಣ್ಣುಗಳು ಕೈಯ್ಯಲಿದ್ದವು
ದಾರಿಯುದ್ದಕೂ
ನಾಯಿ ನಿಯತ್ತಿಗೆ ಹೆಸರುವಾಸಿ. ಆಸೆಗೂ ಸಹ! ಆದರಿಲ್ಲಿ ಅತಿಯಾಸೆಗೆ ಅರಿವು ಆಹುತಿಯಾಗುತ್ತಿರುವುದು ಆಸೆಗೇ ಸಮ್ಮತವಿಲ್ಲ. ಆ ಕುರಿತು ಕಣ್ಣುಗಳ ಕುರಿತೊಂದು ಕರುಣೆ ಇದೆ ನಾಯಿಗೆ! ಸಾಮಾನ್ಯವಾಗಿ ಮಾನವರಲ್ಲಿ ಪ್ರಾಣಿದಯೆ ಎನ್ನುತ್ತೇವೆ. ಅದಿಲ್ಲಿ ಉಲ್ಟಾ ಆಗಿದೆ! ಆದರದರ ಬಾಯನ್ನು ಕಟ್ಟಲಾಗಿದೆ. ಕಟ್ಟಿದ್ದಾದರೂ ಯಾವುದರಿಂದ ಗಂಟೆಯಿಂದ. ಗಂಟೆಯನ್ನು ಗಂಟೆ ಎನ್ನದೆ ಇಲ್ಲಿ ಬೆಲ್ಲು ಎಂದಿದ್ದಾರೆ ಕವಿ. ಒಳಗಿನವರನು ಕರೆಯಲು ನಾವುಗಳು ಬೆಲ್ಲು ಮಾಡುತ್ತೇವೆ, ಗಂಟೆ ಬಾರಿಸುವುದಿಲ್ಲ. ಗಂಟೆ ಏನಿದ್ದರೂ ದೇವರ ಎದುರಿಗೆ. ಬೆಲ್ಲು ನಮಗೆ. ಅಸಲು ದನಿ ಒಳಗೇ ಅಡಗಿದರೂ ಅರಿವನ್ನು ಜಾಗೃತಗೊಳಿಸಲು ಬೆಲ್ಲಿನ ಸದ್ದು ಸಹಾಯಕ. ಆದರೆ ಕಣ್ಣಿನಾಸೆಗೆ ಬೆನ್ನಟ್ಟುತ್ತಿರುವ ಮಕ್ಕಳು ಮಾತ್ರವಲ್ಲ, ದಾರಿಯುದ್ದಕೂ ಎದುರಾಗುವವರ ಕುರಿತೂ ಭೀತಿ ಹುಟ್ಟಿಕೊಂಡಿದೆ. ಅರಿವು ಜೊತೆಗಿದೆ ದಾರಿಯುದ್ದಕೂ… ಹಿಂಬಾಲಿಸುತ್ತಿದೆ ಅದೇ ನೋಟ. ಯಾರ ನೋಟ? ಮಕ್ಕಳದೇ? ನಾಯಿಯದೇ? ಎದುರಾಗುವವರದೇ? ಕೈಯಲ್ಲಿರುವ ಕಣ್ಣಿನದೇ..?
ಅದೇ ನೋಟ; ಕೆಲವರು ತಮ್ಮ ಕಾಲುಗಳನ್ನು
ತಲೆಯಮೇಲೆ ಕೊಂಬುಗಳಂತಿಟ್ಟುಕೊಂಡು
ನಡೆಯುತ್ತಿದ್ದರು; ಮತ್ತೆ ಕೆಲವರು ತಮ್ಮ
ಕೈಗಳನ್ನು ಬೆನ್ನಿಗೆ ಜೋಡು ಜಡೆಯಂತೆ
ಜೋತುಬಿಟ್ಟುಕೊಂಡಿದ್ದರು; ಕೆಲವರು
ತೊಡೆಯ ಸಂದುಗಳಲ್ಲಿ ಟಾರ್ಚುಗಳಂತೆ ತಮ್ಮ
ಮೂಗುಗಳನ್ನಿಟ್ಟುಕೊಂಡು ನಡೆಯುತ್ತಿದ್ದರು
ದಾರಿಯುದ್ದಕೂ
ಬುದ್ಧಿ ಶ್ರೇಷ್ಠ ಮತ್ತದು ಮೆದುಳಲ್ಲಿರುತ್ತದೆ. ಮೆದುಳು ತಲೆಯಲ್ಲಿದೆ. ತಲೆ ದೇಹದ ಮೇಲಿನ ಅಥವಾ ಮೊದಲ ಅಂಗ. ಮೆದುಳನ್ನು ಹೊತ್ತಿರುವುದರಿಂದ ಅದು ಮೇಲಿರುವುದೇ ಸರಿಯಾದ ಕ್ರಮ ಆರೋಗ್ಯ ವಿಜ್ಞಾನದ ರೀತಿಯಾಗಿಯೂ ಸಹ. ಆದರಿಲ್ಲಿ ಕೆಲವರು ತಮ್ಮ ಕಾಲುಗಳನ್ನು ಕೊಂಬುಗಳಂತೆ ತಲೆಯ ಮೇಲಿಟ್ಟುಕೊಂಡು ‘ನಡೆಯುತ್ತಿದ್ದಾರೆ’! ಇದು ಮನುಷ್ಯನ ಅಹಂಕಾರದ ಉತ್ತುಂಗತೆಯನ್ನು ಸೂಚಿಸುತ್ತವೆ. ಅಧಿಕಾರದ ಮದ, ಐಶ್ವರ್ಯದ ಮದ, ಸೌಂದರ್ಯದ ಮದ, ಜಾತಿ ಧರ್ಮಗಳ ಮದ, ಹೀಗೆ ಅನೇಕ ಬಗೆಯ ಮತ್ತಲ್ಲಿರುವವರು ಅರಿವನ್ನು ಮರೆತವರು. ಆದ್ದರಿಂದ ಅಹಂಕಾರ ಸಹಜವಾಗಿಯೇ ಬುದ್ಧಿಯ ಜಾಗವನ್ನಾಕ್ರಮಿಸಿಕೊಂಡಿದೆ.
ಇನ್ನು ಕೆಲವರು ತಮ್ಮ ಕೈಗಳನ್ನು ಬೆನ್ನ ಹಿಂದೆ ಜೋಡು ಜಡೆಯಂತೆ ಜೋತು ಬಿಟ್ಟುಕೊಂಡಿದ್ದಾರೆ. ಕೆಲಸ ಮಾಡದೆಯೇ ಹುದ್ದೆಯನ್ನು ಕೇವಲ ಅಲಂಕಾರವಾಗಿ ಭೋಗಿಸುತ್ತಿರುವುದರ ಪ್ರತೀಕವಾಗಿ ಕೈಗಳು ಎರಡು ಜಡೆಗಳಂತೆ ಬೆನ್ನ ಹಿಂದಿವೆ.
ಮೂಗನ್ನಿಟ್ಟುಕೊಂಡವರು ಜಗತ್ತನ್ನೇ
ಮೂಸುವಂತೆ ತಮ್ಮ ಜಿಪ್ಪುಗಳನ್ನು
ಬಿಚ್ಚಿ ನಿಂತಿದ್ದರು; ಅವರನ್ನು ಕಂಡ
ನನ್ನ ನಾಯಿ ನಾಚಿಕೆಯಿಂದ ತಲೆ
ತಲೆತಗ್ಗಿಸಿತು. ಸದ್ಯ! ಅಲ್ಲಿ ಹೆಂಗಸರಿರಲಿಲ್ಲ
ನಾನು ಮಾತ್ರ ಕಣ್ಣುಗಳನ್ನು
ಕೈಯ್ಯಲಿಡಿದು ನಡೆಯುತ್ತಲೇ ಇದ್ದೆ
ದಾರಿಯುದ್ದಕೂ ಮಕ್ಕಳು ನನ್ನ ಬೆನ್ನ ಬೇತಾಳಗಳಂತಿದ್ದರು!
ಮೂಗು ವಾಸನೆಯನ್ನು ಗ್ರಹಿಸುವ ಅಂಗ. ವಾಸನೆ ಎಂದರೆ ಆಸೆ/ಕಾಮ ಅಂತಲೂ ಅರ್ಥವಿರುವುದರಿಂದ, ಇಲ್ಲಿ ಮೂಗು ಮುಖದ ಭಾಗವಾಗಿರದೆ ತೊಡೆಗಳ ನಡುವೆ ಟಾರ್ಚಿನಂತೆ ಇಟ್ಟುಕೊಂಡು ನಡೆಯುತ್ತಿರುವವರು ಸಿಕ್ಕಿದ್ದನ್ನೆಲ್ಲ ಬಾಚಿಕೊಳ್ಳಲು ಸಿದ್ಧರಾಗಿ ಲಜ್ಜೆಗೆಟ್ಟು ವರ್ತಿಸುವುದನ್ನು ಕಂಡು ನಾಯಿಯೂ ನಾಚಿಕೆಯಿಂದ ತಲೆ ತಗ್ಗಿಸಿದೆ. ತೊಡೆಗಳ ನಡುವಿರುವ ಮೂಗು ನೆಲದ (ಜಗತ್ತಿನ) ವಾಸನೆ ಗ್ರಹಿಸಲು ಯತ್ನಿಸುತ್ತಿದೆ. ಭೂಮಿಯನ್ನು ನಾವು ಹೆಣ್ಣಿಗೆ ಹೋಲಿಸುತ್ತೇವೆ. ಹೀಗಾಗಿ ಇಲ್ಲಿ ಯಾವ ಹೆಂಗಸರಿಲ್ಲದೆಯೂ ಹೆಣ್ಣಿನ ಪ್ರತೀಕವಾದ ಭೂಮಿ ಇದೆ. ಇಂಥ ದುರಾಸೆಯ ಜಗತ್ತನ್ನು ನೋಡಲಾಗದೇ, ಕಣ್ಣನ್ನು ಬಗೆದು ಕೈಯಲ್ಲಿ ಹಿಡಿದು ನಡೆಯುತ್ತಿದ್ದಾನೆ. ಲಾಲಸೆ ಬೇತಾಳದಂತೆ ಬೆನ್ನಟ್ಟಿಯೇ ಇದೆ.
ಈ ಕವಿತೆ ಓದಿದಾಗ ಎದೆಯಲ್ಲೊಂದು ತಲ್ಲಣ ಅನುರುಣಿಸತೊಡಗುತ್ತದೆ. ಜೀವ ಝಲ್ಲೆನ್ನುವ ರೀತಿಯದು. ಅದು ಈ ಕವಿತೆಗಿರುವ ಚಿತ್ರಕಶಕ್ತಿ. ಅವನು ಪ್ರತಿರೋಧಿಸಬಲ್ಲನಾದರೂ ಪ್ರತಿರೋಧಿಸಲಾರ. ಅವನದೇನಿದ್ದರೂ ಹಳಹಳಿಕೆ. ವ್ಯವಸ್ಥೆಯ ಅವ್ಯವಸ್ಥೆಯನ್ನು ಎತ್ತಿ ತೋರಿಸುತ್ತಲೇ ಅದರ ಭಾಗವಾಗಿ ನಡೆಯುವುದು ತನಗೆ ಅನಿವಾರ್ಯ ಎಂದು ಬಗೆದವನು ಎಂದು ಒಂದು ನಿಟ್ಟಿನಲ್ಲಿ ನೋಡಬಹುದಾದರೆ, ಇನ್ನೊಂದು ನಿಟ್ಟಿನಲ್ಲಿ ಈ ಅವ್ಯವಸ್ಥೆ ಇರುವವರೆಗೂ ತಾನದನ್ನು ಎತ್ತಿ ತೋರಿಸುತ್ತಲೇ ನಡೆಯುವವನು ಎನ್ನುತ್ತಿದ್ದಾನೆ.
‘ದಾರಿಯುದ್ದಕು’ ಎನ್ನುವಲ್ಲಿ ಒಂದು ನಿರಂತರತೆ, ಚಲನಶೀಲತೆ ಅಡಗಿದೆ. ಆದರೆ ಅದು ಚೈತನ್ಯಪೂರ್ಣವಾಗಿಲ್ಲ. ಚಿಂತನಶೀಲ, ಚಿಂತಾಕ್ರಾಂತ, ಬೆಚ್ಚಿಬೀಳಿಸುವ ಚಲನಶೀಲತೆ. ಇಡೀ ವ್ಯವಸ್ಥೆ ನಮ್ಮನ್ನು ಏನು ಮಾಡಿಟ್ಟಿದೆ ಎನ್ನುವುದನ್ನು ಈ ಕವನ ಸ್ಪಷ್ಟವಾಗಿ ಸೂಚಿಸುತ್ತದೆ.
ಕನ್ನಡದ ಉತ್ತಮ ಕವಿಗಳಲ್ಲಿ ಒಬ್ಬರಾದ ಎಲ್ ಎನ್ ಮುಕುಂದರಾಜ್ ಅವರ ಒಂದಿಷ್ಟು ಒಳ್ಳೆಯ ಕವನಗಳನ್ನು ಓದಲು, ಅವುಗಳಲ್ಲಿ ಈ ಕವನವನ್ನು ಆಯ್ದುಕೊಂಡು ನಾಲ್ಕು ಸಾಲು ಬರೆಯುವಂತೆ ಮಾಡಿದ ಸೂರ್ಯಕೀರ್ತಿಗೆ ಧನ್ಯವಾದಗಳು.

ದಾರಿಯುದ್ದಕು
ಎರಡು ಕಣ್ಣುಗಳನ್ನೂ ಬಗೆದು ಕೈಯ್ಯಲಿಡಿದು ನಡೆಯುತ್ತಿದ್ದೆ
ದಾರಿಯುದ್ದಕೂ….
ಬೆಳ್ಳಂಬೆಳಕು ಕತ್ತಲೆಂಬುದು
ಅರಿವಿಗೇ ಬಾರದಂಥ ಮಿಂಚು
ದಾರಿಯುದ್ದಕೂ…… ಹಗಲುಮಬ್ಬು
ಪುಟ್ಟ ಮಕ್ಕಳು ನನ್ನ
ಕಣ್ಣುಗಳನ್ನು ದ್ರಾಕ್ಷಿಗಳೆಂದೇ ಬಗೆದು
ಗಬಕ್ಕನೆ ಗುಳುಮಿಸಲು ಹಾರಿಬರುತ್ತಿದ್ದವು
ದಾರಿಯುದ್ದಕೂ
ಬಾಯಿಗೆ ಬೆಲ್ಲು ಬಿಗಿದಿದ್ದ ನಾಯಿ ಮಕ್ಕಳನ್ನು ಹೆದರಿಸಲು
ಬೌ…ಬೌ… ಬೊಗಳುತ್ತಿತ್ತು
ನಾಯಿಗೆ ನನ್ನ ಕಣ್ಣುಗಳ ಬಗ್ಗೆ ಕರುಣೆ
ಪುಟ್ಟ ಮಕ್ಕಳಿಗೆ ದಟ್ಟ ಆಸೆ
ದಾರಿಯುದ್ದಕೂ
ಬುದ್ಧಿಗೇಡಿಗಳ ಬಗ್ಗೆ ಭೀತಗೊಂಡೆ
ಬುದ್ಧಿಗೇಡಿಗಳು ನಿದ್ದೆಗೇಡಿಗಳು ಏನನ್ನಾದರೂ
ಕಸಿಯಬಹುದು; ಮಕ್ಕಳಿಗೆ ಯಾಕೆ ಇಂಥ
ಆಸೆ; ಅದೂ ನನ್ನ ಕಣ್ಣುಗಳ ಬಗ್ಗೆ! ಕಣ್ಣುಗಳು ಕೈಯ್ಯಲಿದ್ದವು
ದಾರಿಯುದ್ದಕೂ
ಅದೇ ನೋಟ; ಕೆಲವರು ತಮ್ಮ ಕಾಲುಗಳನ್ನು
ತಲೆಯಮೇಲೆ ಕೊಂಬುಗಳಂತಿಟ್ಟುಕೊಂಡು
ನಡೆಯುತ್ತಿದ್ದರು; ಮತ್ತೆ ಕೆಲವರು ತಮ್ಮ
ಕೈಗಳನ್ನು ಬೆನ್ನಿಗೆ ಜೋಡು ಜಡೆಯಂತೆ
ಜೋತುಬಿಟ್ಟುಕೊಂಡಿದ್ದರು; ಕೆಲವರು
ತೊಡೆಯ ಸಂದುಗಳಲ್ಲಿ ಟಾರ್ಚುಗಳಂತೆ ತಮ್ಮ
ಮೂಗುಗಳನ್ನಿಟ್ಟುಕೊಂಡು ನಡೆಯುತ್ತಿದ್ದರು
ದಾರಿಯುದ್ದಕೂ
ಮೂಗನ್ನಿಟ್ಟುಕೊಂಡವರು ಜಗತ್ತನ್ನೇ
ಮೂಸುವಂತೆ ತಮ್ಮ ಜಿಪ್ಪುಗಳನ್ನು
ಬಿಚ್ಚಿ ನಿಂತಿದ್ದರು; ಅವರನ್ನು ಕಂಡ
ನನ್ನ ನಾಯಿ ನಾಚಿಕೆಯಿಂದ ತಲೆ
ತಲೆತಗ್ಗಿಸಿತು. ಸದ್ಯ! ಅಲ್ಲಿ ಹೆಂಗಸರಿರಲಿಲ್ಲ
ನಾನು ಮಾತ್ರ ಕಣ್ಣುಗಳನ್ನು
ಕೈಯ್ಯಲಿಡಿದು ನಡೆಯುತ್ತಲೇ ಇದ್ದೆ
ದಾರಿಯುದ್ದಕೂ ಮಕ್ಕಳು ನನ್ನ ಬೆನ್ನ ಬೇತಾಳಗಳಂತಿದ್ದರು!

ಲೇಖಕಿ, ರಂಗ ಕಲಾವಿದೆ ಜಯಲಕ್ಷ್ಮಿ ಪಾಟೀಲ್ ಉತ್ತರ ಕರ್ನಾಟಕದ ಬಿಜಾಪುರ ಜಿಲ್ಲೆಯ ನಿಂಬಾಳದವರು. ನೀಲ ಕಡಲ ಭಾನು’ (ಕವನ ಸಂಕಲನ) ‘ಹೇಳತೇವ ಕೇಳ’ (ಮಹಿಳಾ ದೌರ್ಜನ್ಯದ ವಿರುದ್ಧದ ಲೇಖನ ಸಂಗ್ರಹದ ಪುಸ್ತಕದ) ‘ಮುಕ್ಕು ಚಿಕ್ಕಿಯ (ಕಾದಂಬರಿ) ವಿಜಯ್ ತೆಂಡೂಲ್ಕರ್ ಅವರು ಬರೆದ ಮರಾಠಿ ಮೂಲದ ನಾಟಕ ‘ಬೇಬಿ’ (ಅನುವಾದಿತ ನಾಟಕ) ಇವರ ಪ್ರಕಟಿತ ಕೃತಿಗಳು. ‘ಜನದನಿ’ (ಲೈಂಗಿಕ ದೌರ್ಜನ್ಯಗಳ ವಿರುದ್ಧ ಹೋರಾಡುತ್ತಿರುವ ಸಂಸ್ಥೆ) ಸಂಸ್ಥಾಪಕಿ. ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳಂಥ ಸಾಮಾಜಿಕ ಪಿಡುಗನ್ನು ತೊಲಗಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿಯನ್ನುಂಟು ಮಾಡುವ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

