Advertisement
ಕಾಡುಕೋಳಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಕಾಡುಕೋಳಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಇನ್ನು ಈ ಕಾಡುಕೋಳಿಗಳನ್ನು ಸಾಕಿ ಬೆಳೆಸುವುದು ಅಸಾಧ್ಯ ಎನ್ನುವುದು ನಿಮಗೆ ತಿಳಿದೇ ಇದೆ. ಹಾಗಿರುವಾಗ ಕೋಳಿಗಳನ್ನು ಸಾಕಿ ಬೆಳೆಸುತ್ತಾರಲ್ಲ ಅದು ಹೇಗೆ ಎಂದು ನೀವು ಕೇಳಬಹುದು. ಗೂಡಿನಲ್ಲಿ ಸಾಕಿ ಬೆಳೆಸುವ ಕೋಳಿಗಳು, ಕೆಂಪು ಕಾಡುಕೋಳಿ ಎಂಬ ಮತ್ತೊಂದು ಪ್ರಭೇದದ ಪಕ್ಷಿ. ಕೆಂಪು ಕಾಡುಕೋಳಿಗಳು ಭಾರತದ ಉತ್ತರ ಮತ್ತು ಪೂರ್ವ ಭಾಗದಲ್ಲಿರುವ ರಾಜ್ಯಗಳ ಹಾಗೂ ಪೂರ್ವ ಏಶಿಯಾ ದೇಶಗಳ ಕಾಡುಗಳಲ್ಲಿ ಮಾತ್ರ ಕಂಡುಬರುವ ಹಕ್ಕಿಗಳು. ಸುಮಾರು 8-10 ಸಾವಿರ ವರ್ಷಗಳಿಂದಲೂ, ಪ್ರಪಂಚದ ನೂರಾರು ದೇಶಗಳಲ್ಲಿ, ಮೊಟ್ಟೆ ಹಾಗೂ ಮಾಂಸಕ್ಕಾಗಿ ಸಾಕುತ್ತಿರುವುದು ಇದೇ ಕೆಂಪು ಕಾಡುಕೋಳಿಗಳನ್ನು ಎಂದರೆ ನಿಮಗೆ ಆಶ್ಚರ್ಯವಾಗಬಹುದು!
ಡಾ.
ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಕಾಡುಕೋಳಿಯ‌ ಕುರಿತ ಬರಹ ಇಲ್ಲಿದೆ

ಇಂದು ನಾವು ಕರ್ನಾಟಕದ ಕಾಡುಗಳಲ್ಲಿ ಕಂಡುಬರುವ ಒಂದು ವಿಶೇಷ ಹಾಗೂ ಸುಪರಿಚಿತ ಹಕ್ಕಿಯಾದ ಕಾಡುಕೋಳಿಯ ಬಗ್ಗೆ ತಿಳಿದುಕೊಳ್ಳೋಣ. ಕೋಳಿಗಳು ಕವುಜುಗ, ನವಿಲು, ಬುರ್ಲಿ ಮುಂತಾದ ಪಕ್ಷಿಗಳು ಸೇರಿರುವ ಫ್ಯಾಸಿಯಾನಿಡೆ Phasianidae ಕುಟುಂಬಕ್ಕೆ ಸೇರಿವೆ. ಆಂಗ್ಲ ಭಾಷೆಯಲ್ಲಿ ಕಾಡುಕೋಳಿಯನ್ನು ಗ್ರೇ ಜಂಗಲ್‌ಫೌಲ್ ಎಂದೂ, ವೈಜ್ಞಾನಿಕ ಪರಿಭಾಷೆಯಲ್ಲಿ ಗ್ಯಾಲ್ಲಸ್ ಸೋನ್ನೆರಾಟ್ಟೈ Gallus sonneratii ಎಂದೂ ಕರೆಯುತ್ತಾರೆ.

ಕಾಡುಕೋಳಿ ಸುಮಾರು 60-80 ಸೆಂಟಿಮೀಟರ್ ಗಾತ್ರದ ಹಕ್ಕಿ. ಗಂಡು ಕೋಳಿಯನ್ನು ಹುಂಜ ಮತ್ತು ಹೆಣ್ಣು ಕೋಳಿಯನ್ನು ಹೇಂಟೆ ಎಂದು ಕರೆಯುತ್ತೇವೆ. ಹುಂಜಕ್ಕೆ ದಪ್ಪ ಕೊಕ್ಕು, ತಲೆ-ಗಲ್ಲದ ಮೇಲೆ ಅಚ್ಚ ಕೆಂಪು ಮಾಂಸಲ; ಕಪ್ಪುಮಣಿಗಳಂತಹ ಚುಕ್ಕೆಗಳಿಂದ ಕೂಡಿದ ಕಡುಬೂದು ಬಣ್ಣದ ಕತ್ತು, ಬೂದು ಬೆನ್ನು; ಕಂದು ಬಣ್ಣದ ರೆಕ್ಕೆಗಳು. ತಲೆ-ಗಲ್ಲದಲ್ಲಿ ಕಡುಗೆಂಪು ಬಣ್ಣದ ಗರಿಗಳಿಲ್ಲದ ಜೋತಾಡುವ ತೊಗಲನ್ನು ಕಾಣಬಹುದು. ಹಿಂದುಗಡೆ ಕತ್ತಿಯಂತೆ ಕೆಳಕ್ಕೆ ಬಾಗಿರುವ ಬಾಲದ ಗರಿಗಳು;

ಹೇಂಟೆಕೋಳಿಯದು ಚಿಕ್ಕ ಗಾತ್ರ; ಕಂದು ಬಣ್ಣದ ದೇಹದಲ್ಲಿ ಗಾಢ ಗೀರುಗಳಿರುತ್ತವೆ. ಬಿಳಿ ಬಣ್ಣದ ಗಲ್ಲ ಹಾಗೂ ಬಿಳಿ ಕೆಳ ಮೈ ಮೇಲೆ ಕಪ್ಪು ಗೀರುಗಳನ್ನು ಕಾಣಬಹುದು. ಮುಖದ ಮೇಲೆ ಇದ್ದೂ ಇಲ್ಲದಂತಿರುವ ಸಣ್ಣ ಗಾತ್ರದ ತೊಗಲು. ಮೊಂಡು ಮತ್ತು ಮೋಟು ಬಾಲ.

ಆಹಾರಕ್ಕಾಗಿ ನೆಲವನ್ನು ಕೆದಕಿ, ಕ್ರಿಮಿ-ಕೀಟಗಳನ್ನು ಹೆಕ್ಕಲು ತಕ್ಕುದಾದ ಬಲವಾದ, ಗಟ್ಟಿಮುಟ್ಟಾದ ಕಾಲ್ಬೆರಳುಗಳು; ಅದರಲ್ಲಿ ಚಿಕ್ಕ, ಬಾಗಿದ ಉಗುರುಗಳು; ಸಮರ್ಥವಾಗಿ, ವೇಗವಾಗಿ, ಪಟಪಟನೆ ರೆಕ್ಕೆ ಬಡಿಯುತ್ತ ಹಾರಿದರೂ, ಹೆಚ್ಚುದೂರ ಹಾರಲಾರದ ಚಿಕ್ಕದಾದ, ದುಂಡಾದ ರೆಕ್ಕೆಗಳು. ಗರಿಗಳಿಲ್ಲದ-ಸಧೃಢ ಕಾಲುಗಳಲ್ಲಿ ಗೊರಸುಗಳನ್ನು ನಾವು ನೋಡಬಹುದು.

ಕಾಡುಕೋಳಿಗಳು ಮರಗಳಲ್ಲಿ ವಾಸ ಮಾಡುವ, ಹಕ್ಕಿಗಳು. ಸದಾಹಸಿರು, ಉದುರೆಲೆ ಮತ್ತು ಕುರುಚಲು ಕಾಡುಗಳಲ್ಲಿ, ಲಾಂಟಾನ ಪೊದೆ, ಬಿದಿರು ಮೆಳೆಗಳಿರುವೆಡೆ ವಾಸ ಮಾಡುತ್ತವೆ. ಬಹು ನಾಚಿಕೆ ಸ್ವಭಾವುಳ್ಳ ಕಾಡುಕೋಳಿಗಳು ಬಹಳ ಎಚ್ಚರಿಕೆಯಿಂದ ಓಡಾಡುವುದರಿಂದ ಕಣ್ಣಿಗೆ ಕಾಣುವುದಕ್ಕಿಂತ, ಕಾಡಿನಲ್ಲಿ ಅವುಗಳ ಕೂಗು ಕೇಳುವುದೇ ಹೆಚ್ಚು. ಗಾಬರಿಯಾದಾಗ ಹಾರುವುದಕ್ಕಿಂತ ವೇಗವಾಗಿ ಪುಸಕ್ಕನೆ ಓಡಿಹೋಗಿ ಕಾಡು ಸೇರಿ, ಅವಿತುಕೊಳ್ಳುವ ಸ್ವಭಾವ! ರಾತ್ರಿ ಹೊತ್ತು ಒಟ್ಟಾಗಿ ಮರಗಳ ಮೇಲೆ ನಿದ್ರಿಸುತ್ತವೆ.

ಕಾಡುಕೋಳಿಗಳು ಕರ್ಕಶ ಧ್ವನಿಯಲ್ಲಿ ಕುಕ್! ಕಯಾ.ಕುಕ್.. ಕುಕ್! ಕಯಾ.ಕುಕ್.. ಎಂದು ಕೂಗುತ್ತವೆ ಮತ್ತು ರೆಕ್ಕೆಗಳನ್ನು ಪಟಪಟ ಬಡಿದು ಶಬ್ದ ಮಾಡುತ್ತವೆ.

ಕಾಳು-ಬೀಜಗಳು, ಕ್ರಿಮಿ-ಕೀಟಗಳು, ಅವುಗಳ ಮೊಟ್ಟೆ, ಮರಿಹುಳಗಳು, ಮುಖ್ಯವಾಗಿ ಗೆದ್ದಲು ಹುಳು ಅಲ್ಲದೆ ಎಲೆಚಿಗುರು, ಹಣ್ಣುಗಳು ಇವೇ ಮುಂತಾದುವು ಕಾಡುಕೋಳಿಗಳ ಆಹಾರ.

ಕಾಡುಕೋಳಿಯ ಪ್ರಜನನ ಸಮಯ, ಫೆಬ್ರವರಿಯಿಂದ ಮೇ ತಿಂಗಳವರೆಗೆ. ಸಣ್ಣ ಮರಗಳ ಕವಲುಗಳಲ್ಲಿ ಅಥವಾ ಹುಲ್ಲು, ಕಸಕಡ್ಡಿಗಳಿಂದಾವೃತವಾದ ಸ್ಥಳಗಳಲ್ಲಿ ನೇರವಾಗಿ ನೆಲದ ಮೇಲೇ ಮೊಟ್ಟೆಯಿಟ್ಟು, ಕಾವು ಕೊಡುವುವು.

ಹೇಂಟೆ ಕೋಳಿ ಒಂದು ಬಾರಿಗೆ ನಾಲ್ಕರಿಂದ ಏಳು, ಮಾಸಲು ಬೂದು ಬಣ್ಣದ ಮೊಟ್ಟೆಗಳನ್ನಿಡುತ್ತದೆ. ಕಾವು ಕೊಡುವ ಕೆಲಸವೂ ಹೆಣ್ಣು ಕೋಳಿಯದ್ದೇ. ಮೊಟ್ಟೆಯಿಂದ ಹೊರಬಂದ ಕೋಳಿಮರಿಗಳು ಮುದ್ದಾದ ಚೆಂಡುಹೂವುಗಳಂತಿದ್ದರೂ ಹೆಚ್ಚು ದಿನಗಳ ಕಾಲ ಅವಕ್ಕೆ ತಂದೆ-ತಾಯಿಯ ಪೋಷಣೆ ಬೇಕಿಲ್ಲ. ವಾರ ಕಳೆಯುವುದರೊಳಗೆ ತಮ್ಮ ಆಹಾರವನ್ನು ತಾವೇ ಹುಡುಕಿ ತಿನ್ನಲು ಸಮರ್ಥವಾಗುತ್ತವೆ.

ಇನ್ನು ಈ ಕಾಡುಕೋಳಿಗಳನ್ನು ಸಾಕಿ ಬೆಳೆಸುವುದು ಅಸಾಧ್ಯ ಎನ್ನುವುದು ನಿಮಗೆ ತಿಳಿದೇ ಇದೆ. ಹಾಗಿರುವಾಗ ಕೋಳಿಗಳನ್ನು ಸಾಕಿ ಬೆಳೆಸುತ್ತಾರಲ್ಲ ಅದು ಹೇಗೆ ಎಂದು ನೀವು ಕೇಳಬಹುದು. ಗೂಡಿನಲ್ಲಿ ಸಾಕಿ ಬೆಳೆಸುವ ಕೋಳಿಗಳು, ಕೆಂಪು ಕಾಡುಕೋಳಿ ಎಂಬ ಮತ್ತೊಂದು ಪ್ರಭೇದದ ಪಕ್ಷಿ. ಕೆಂಪು ಕಾಡುಕೋಳಿಗಳು ಭಾರತದ ಉತ್ತರ ಮತ್ತು ಪೂರ್ವ ಭಾಗದಲ್ಲಿರುವ ರಾಜ್ಯಗಳ ಹಾಗೂ ಪೂರ್ವ ಏಶಿಯಾ ದೇಶಗಳ ಕಾಡುಗಳಲ್ಲಿ ಮಾತ್ರ ಕಂಡುಬರುವ ಹಕ್ಕಿಗಳು. ಸುಮಾರು 8-10 ಸಾವಿರ ವರ್ಷಗಳಿಂದಲೂ, ಪ್ರಪಂಚದ ನೂರಾರು ದೇಶಗಳಲ್ಲಿ, ಮೊಟ್ಟೆ ಹಾಗೂ ಮಾಂಸಕ್ಕಾಗಿ ಸಾಕುತ್ತಿರುವುದು ಇದೇ ಕೆಂಪು ಕಾಡುಕೋಳಿಗಳನ್ನು ಎಂದರೆ ನಿಮಗೆ ಆಶ್ಚರ್ಯವಾಗಬಹುದು! ಅವೆಲ್ಲಾ ಭಾರತದಿಂದಲೇ ರಫ್ತಾದ ಕೋಳಿಗಳು!

About The Author

ಡಾ. ಎಸ್‌. ವಿ. ನರಸಿಂಹನ್

ಡಾ. ಎಸ್‌.ವಿ. ನರಸಿಂಹನ್ ವೈದ್ಯರು. ಕೊಡಗಿನ ವಿರಾಜಪೇಟೆಯಲ್ಲಿ ನೆಲೆಸಿದ್ದಾರೆ. ಆರೋಗ್ಯ ರಕ್ಷಣೆಯೊಂದಿಗೆ ಪರಿಸರ ರಕ್ಷಣೆಯ ಬಗೆಗೂ ಅಪಾರ ಕಾಳಜಿ ಹೊಂದಿದ್ದಾರೆ. ಕಳೆದ ನಲವತ್ತೊಂದು ವರ್ಷಗಳಿಂದ ಡಾ. ನರಸಿಂಹನ್‌ರವರು ಕೈಯಿಂದ ಕುಂಚಿಸಿದ ಸುಮಾರು ಎಂಭತ್ತೆರಡು  ಸಾವಿರ ‘ವನ್ಯಜೀವಿ ಸಂದೇಶ ಪತ್ರ’ಗಳು ಪ್ರಪಂಚದಾದ್ಯಂತ ತಲುಪಿವೆ. ಇದೊಂದು ಲಿಮ್ಕಾ ದಾಖಲೆ. ವಿಜ್ಞಾನ ಬರವಣಿಗೆಯಲ್ಲೂ ಆಸಕ್ತಿ ಹೊಂದಿರುವ ಇವರು, ಕನ್ನಡ ಭಾಷೆ, ಸಂಗೀತ-ಸಾಹಿತ್ಯ, ಖಗೋಳ, ಪರಿಸರ ಮುಂತಾದ ವಿಷಯಗಳಲ್ಲಿ ಶಾಲಾ-ಕಾಲೇಜುಗಳಲ್ಲಿ, ರೇಡಿಯೋ, ಟಿವಿ ಮತ್ತು ಪತ್ರಿಕಾ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸಿದ್ದಾರೆ. ಕೊಡಗಿನ ಸಂಪೂರ್ಣ ಪಕ್ಷಿಸಂಕುಲದ ನಿಖರ ಮಾಹಿತಿಯುಳ್ಳ ‘ಕೊಡಗಿನ ಖಗರತ್ನಗಳು’ ಪುಸ್ತಕದಲ್ಲಿ ತಾವೇ ಎಲ್ಲ ಹಕ್ಕಿಗಳ ಚಿತ್ರಗಳನ್ನೂ ಬರೆದದ್ದು ಮತ್ತೊಂದು ಲಿಮ್ಕಾ ದಾಖಲೆ.  ‘2013ರ ಕೊಡಗಿನ ವರ್ಷದ ವ್ಯಕ್ತಿ’ಪುರಸ್ಕೃತರು

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ