Advertisement
ಸೀರೆ ಪುರಾಣ!: ಸುಕನ್ಯಾ ಕನಾರಳ್ಳಿ ಅಂಕಣ

ಸೀರೆ ಪುರಾಣ!: ಸುಕನ್ಯಾ ಕನಾರಳ್ಳಿ ಅಂಕಣ

ಸೀರೆ ಎನ್ನುವುದು ಒಬ್ಬ ಗಂಡಸಿನ ತಲೆಯಲ್ಲಿ ಹುಟ್ಟಿದ ಪರಿಕಲ್ಪನೆ ಎನ್ನುವ ಗುಮಾನಿ ನನಗಿದೆ. ದಿನನಿತ್ಯ ರೈಲಿನಲ್ಲಿ ಹೋಗುವ ಹೆಣ್ಣುಮಕ್ಕಳಿಗಂತೂ ಅದೊಂದು ಮಹಾ ಪಿರಿಪಿರಿಯೇ. ಜನರಲ್ ಬೋಗಿಯಲ್ಲಿ ಇದ್ದು ಜನಜಂಗುಳಿ ಹೆಚ್ಚಿದ್ದರಂತೂ ಸೊಂಟ ಚಿವುಟುವ, ಬೆನ್ನಿಗೆ ಕಚಗುಳಿಯಿಟ್ಟಂತೆ ಮುಟ್ಟುವ ದೌರ್ಜನ್ಯಗಳಿಗೆ ಲೆಕ್ಕವೇ ಇಲ್ಲ. ಮುಂಬಯಿಯಂತಹ ಮಹಾ ನಗರಗಳಲ್ಲಿ ದಿನನಿತ್ಯದ ಮೆಟ್ರೋ ಹೆಂಗಸರು ಬಿಗಿಯಾದ ಜೀನ್ಸ್ ಮತ್ತು  ಶರ್ಟ್ ತೊಟ್ಟು ಮೇಲೊಂದು ಲಳಲಳ ಎನ್ನುವಂಥದ್ದೇನೋ ಹಾಕಿಕೊಳ್ಳಲು ಇಷ್ಟಪಡುತ್ತಾರೆ ಎಂದು ಸುದ್ದಿಪತ್ರಿಕೆಯಲ್ಲಿ ಓದಿದ ನೆನಪು.
ಸುಕನ್ಯಾ
ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ತೇಳನೆಯ ಬರಹ

ಕೆಲವು ದಿನಗಳ ಹಿಂದೆ ಒಂದು ಬಿ ಎಡ್ ಕಾಲೇಜಿನಲ್ಲಿ ಮಹಿಳಾ ದಿನದ ಪ್ರಯುಕ್ತ ವಿಶೇಷ ಉಪನ್ಯಾಸ ಕೊಡಲು ಹೋಗಿದ್ದೆ. ಹೆಣ್ಣಿನ ಬದುಕಿನಲ್ಲಿ ಆಯ್ಕೆಯ ಪ್ರಶ್ನೆ ಅದರ ಮುಖ್ಯ ವಿಷಯವಾಗಿತ್ತು.  ವಿದ್ಯಾಭ್ಯಾಸ, ಮದುವೆ, ವೃತ್ತಿ, ತಾಯ್ತನಗಳಂತಹ ಮುಖ್ಯ ವಿಷಯಗಳು ಹೋಗಲಿ, ತಾನು ಸಂಪಾದಿಸುವ ಸಂಬಳವನ್ನು ಹೇಗೆ ಖರ್ಚು ಮಾಡಬೇಕು, ತಾನು ಏನು ಬಟ್ಟೆ ಹಾಕಬೇಕು ಎನ್ನುವ ಆಯ್ಕೆ ಸಹ ಅವಳಿಗಿರುವುದಿಲ್ಲ ಎಂದು ಹೇಳುತ್ತಾ ನಾನು ಹಾಯಾಗಿ ನಡೆಯದಂತೆ, ಅಪಾಯ ಬಂದಾಗ ಸುಲಭವಾಗಿ ಓಡಲು ಆಗದಂತೆ ಕಟ್ಟಿ ಹಾಕುವ ಸೀರೆ ಎಂಬ ವೇಷದ ಬಗ್ಗೆ ಪ್ರಸ್ತಾಪ ಬಂತು. ಆ ಯುವತಿಯರು ಕಡ್ಡಾಯವಾಗಿ ಸೀರೆ ಉಡಬೇಕಿತ್ತು ಎನ್ನುವುದು ನನಗೆ ಗೊತ್ತಿರಲಿಲ್ಲ. ಸೀರೆಯ ಪ್ರಸ್ತಾಪಕ್ಕೆ ಅವರು ನೆಟ್ಟಗೆ ಕೂತಾಗ ಮಾತ್ರ ಅದು ಗಮನಕ್ಕೆ ಬಂದಿತ್ತು.

ನಾನು ಕೆಲಸ ಮಾಡುತ್ತಿದ್ದ ಕಡೆ ಎರಡನೆಯ ಅಂತಸ್ತಿನಲ್ಲಿ ಕೋತಿಗಳ ಕಾಟ. ಕ್ಲಾಸಿಗೆ ಹೋಗುತ್ತಿದ್ದಾಗ ಸಾಲಾಗಿ ಕೂತು ಸೀರೆ ಉಟ್ಟ ನನ್ನನ್ನು ಕೋತಿ ಕುಟುಂಬದ ಎಲ್ಲವೂ ಮಿಕಿಮಿಕಿ ನೋಡುತ್ತಿರುತ್ತಿದ್ದವು. ಆ ಕೊನೆಯಲ್ಲಿ  ವಿದ್ಯಾರ್ಥಿಗಳು ಕೂತು ಐಸ್-ಲೆಫ್ಟ್ ಮಾಡಿಕೊಂಡು ನಾನು ಕಾರಿಡಾರಿನ ಉದ್ದಕ್ಕೂ ನಡೆದುಕೊಂಡು ಬರುವುದನ್ನು ಮಿಕಿಮಿಕಿ ನೋಡುತ್ತಾ ಕಾಯುತ್ತಿದ್ದರು. ಈಗೊಂದು ಕೋತಿಮರಿ ಓಡಿಸಿಕೊಂಡು ಬಂದರೂ ಸಹ ಓಡಲಾರೆ, ವಿದ್ಯಾರ್ಥಿಗಳ ಎದುರಿಗೆ ಬಿದ್ದು ನಗೆಪಾಟಲಿಗೆ ಗುರಿಯಾಗಬೇಕು, ಇದೆಂಥಾ ಕರ್ಮ ಎಂದುಕೊಳ್ಳುತ್ತಾ ಎರಡು ಮಿಕಿಮಿಕಿಗಳ ನಡುವೆ ಎಚ್ಚರದಿಂದ ನಡೆದು ತಲುಪಲು  ಪ್ರಯತ್ನಿಸುತ್ತಿದ್ದೆ.

ನಿವೃತ್ತಿಯ ಕೊನೆಯ ಐದು ವರ್ಷಗಳಲ್ಲಿ ಮಾತ್ರ ಸರ್ಜರಿಯ ಕಾರಣಕ್ಕೆ ಸೀರೆಯನ್ನು ಬಿಟ್ಟುಕೊಟ್ಟು  ಪ್ರತಿದಿನ ಕಪ್ಪುಬಣ್ಣದ ಕುರ್ತಾ ಪೈಜಾಮ, ಮೇಲೊಂದು ಬಣ್ಣದ ಶಾಲನ್ನು ಹೊದ್ದುಕೊಂಡು ಹೋಗುತ್ತಿದ್ದೆ. ಮಹಾ ದ್ರಾಬೆ ವೇಷವೇ. ಆದರೆ ಹಠಾತ್ತನೆ ಏನೇನೋ ಬದಲಾವಣೆಗಳು ಗಮನಕ್ಕೆ ಬರಹತ್ತಿದ್ದವು.

ಮೊದಲನೆಯದಾಗಿ, ಸೀರೆ ಮತ್ತು ಅದರ ಜೊತೆಯಲ್ಲಿ ಬರುವ  ಲಂಗು ಲೊಟ್ಟೆ ಲೊಸಕುಗಳ  ಖರ್ಚಿನ ಬಾಬತ್ತು ನಿಂತು ಹೋಯಿತು. ಹಾಯಾಗಿ ಇದ್ದಬದ್ದ ಸೀರೆಗಳೆಲ್ಲವನ್ನೂ ದಾನ ಮಾಡಿದೆ. ಎರಡನೆಯದಾಗಿ ಸಾಕಷ್ಟು ಸಮಯ ಉಳಿತಾಯವಾಯಿತು. ಇನ್ನೂ ಆಶ್ಚರ್ಯವಾಗಿದ್ದು ಎಂದರೆ ನನ್ನ ವಿದ್ಯಾರ್ಥಿಗಳು ಉಪನ್ಯಾಸದ ಕಡೆಗೆ ಹೆಚ್ಚು ಗಮನ ಕೊಡಲಾರಂಭಿಸಿದ್ದು.

ಅರೆ!

ನಾನೀಗ ಅವರೆದುರು ಯಾವ ಅರ್ಥದಲ್ಲೂ ಒಂದು ಪ್ರದರ್ಶನದ ವಸ್ತುವಾಗಿ ಒದಗಿ ಬಾರದೆ ಹೋಗಿದ್ದೆ. ಮುಂಚೆ ಬೋರ್ಡು ಕಡೆಗೆ ತಿರುಗಿದರೆ ಸಾಕು, ಬೆನ್ನ ಹಿಂದಿನಿಂದ ಕಣ್ಣುಗಳು ಚುಚ್ಚುವುದು ಅರಿವಿಗೆ ಬರುತ್ತಿತ್ತು. ಜೊತೆಗೆ ಗುಸಗುಸವೂ ಕೇಳಿಸುತ್ತಿತ್ತು. ಈಗ ಹಾಗಲ್ಲ, ತೆಪ್ಪಗಿರುತ್ತಿದ್ದರು.

ಸೀರೆ ಬಿಟ್ಟುಕೊಟ್ಟಿದ್ದಕ್ಕೆ ಮೇಲಿನ ಮಹಿಳಾಮಣಿಗಳಿಂದ ತೊಂದರೆ ಬರಲಿಲ್ಲ ಅಂತೇನಿಲ್ಲ. ಮೆಮೊ ಕೊಟ್ಟರು. ನೋಟಿಸ್ ಜಾರಿ ಮಾಡಿದರು. ಮೆಡಿಕಲ್ ಕಾರಣ ಹೇಗೂ ಇತ್ತಲ್ಲ? ಸ್ಟಾಫ್ ರೂಮಿನ ಮಾಮಿಯೊಬ್ಬಳು  ‘ಏನೇ ಆದರೂ ಸೀರೆ ನಮ್ಮ ಸಾಂಪ್ರದಾಯಿಕ ವೇಷ. ಉಪನ್ಯಾಸಕರು ಅದನ್ನು ಪಾಲಿಸಬೇಕು’ ಅಂತ ತಲೆ ಕೊರೆದಾಗ ‘ಪಾಠ ಮಾಡುವ ಗಂಡಸರಿಗೆ ಹಾಗಿದ್ದರೆ ಪಂಚೆ ಉಟ್ಟುಕೊಂಡು ಬರಲು ಹೇಳಿ,’ ಎಂದೆ. ಉತ್ತರ ಬರಲಿಲ್ಲ.

ಸೀರೆತ್ಯಾಗ ನನಗೆ ಆರಾಮವನ್ನು ಕೊಟ್ಟಿತ್ತು. ದಿನದಿನವೂ ಕರಿಬಣ್ಣದ ದ್ರಾಬೆ ವೇಷ! ಏನೋ ನಿತ್ಯ ಪ್ರತಿಭಟನೆಯಲ್ಲಿ ಇದ್ದವಳಂತೆ. ಯಾವ ಸೀರೆ, ಏನು ಎತ್ತ ಎನ್ನುವ ಯೋಚನೆಯಿಲ್ಲ. ಆರು ಮೀಟರಿನ ಸೀರೆಯನ್ನು ಇಸ್ತ್ರಿ ಮಾಡಿಸುವ ಗೋಜಿಲ್ಲ. ಅದದೇ ಮ್ಯಾಚಿಂಗ್ ಬ್ಲೌಸು ಎಂಬ ಗೋಳಿಲ್ಲ! ಉಟ್ಟ ಮೇಲೆ ಸೆರಗು ನೆರಿಗೆಗಳನ್ನು  ನಿಭಾಯಿಸುವ ಕರ್ಮವೂ ಇಲ್ಲ!

‘ಆದ್ರೂ ಸೀರೆ ಒಂದು ಚೆಂದ ವೇಷವಪ್ಪಾ!’ ಎಂದು ನನ್ನ ಗೆಳತಿಯೊಬ್ಬಳು ನುಲಿದಾಗ, ‘ಮಜಾ ಮಾಡು ತಾಯಿ! ನನ್ನನ್ನು ಬಂಧಿಸುವ ಸೆರೆಮನೆಯ ಸರಳುಗಳನ್ನ ಸಿಂಗಾರ ಮಾಡಿ ಸಂಭ್ರಮಿಸುವ ಇರಾದೆ ನನಗಿಲ್ಲ,’ ಎಂದು ಮುಲಾಜಿಲ್ಲದೆ ಹೇಳಿದ್ದೆ.

ಕಾಲೇಜು ದಿನಗಳಲ್ಲಿ  ಹಬ್ಬದ ದಿನಗಳಲ್ಲಾದರೂ ಸೀರೆ ಉಡಬಾರದೇ ಎಂಬ ಒತ್ತಡ ಮನೆಯಲ್ಲಿ ಇರುತ್ತಿತ್ತು. ಉಟ್ಟರೆ ನೆಂಟರಿಂದಲೇ ತುಂಬಿರುವ ಆ ಪೇಟೆಯಲ್ಲಿ ಯಾರಾದರೂ ‘ನಮ್ಮ ಮನೆಯ ಗಂಡಿಗೊಂದು ಹೆಣ್ಣು ಕೊಡಿ,’ ಅಂತ ಕೇಳಿಬಿಟ್ಟರೆ? ಆಗ ನನ್ನ ಓದಿಗೆ ಸಂಚಕಾರವೇ ಎಂಬ ದೂರದೃಷ್ಟಿಯಲ್ಲಿ ಮೆತ್ತಗೆ ತಪ್ಪಿಸಿಕೊಳ್ಳುತ್ತಿದ್ದೆ.

ಒಬ್ಬ ಕಸಿನ್ ಒಮ್ಮೆ, ‘ಯಾಕೆ, ಹಬ್ಬದ ದಿನವೂ  ಸೀರೆ ಉಟ್ಟಿಲ್ಲ?’ ಎಂದು ಬಡಿವಾರ ಮಾಡಿದಾಗ ಮಾತ್ರ ಕೋಪ ಭುಗಿಲೆದ್ದಿತ್ತು. ‘ನೀನು ಏನು ಬಟ್ಟೆ ಹಾಕಿಕೊಳ್ಳಬೇಕು ಅಂತ ನಾನು ಹೇಳ್ತೀನಾ? ನಿನಗೆ ಸೀರೆ ಇಷ್ಟ ಅಂತಾದರೆ ಒಂದರ್ಧ ಡಜನ್ ಕೊಡಿಸುತ್ತೇನೆ, ಉಟ್ಟುಕೊಂಡು ಮೆರಿ ಬೇಕಿದ್ದರೆ!’ ಎಂದು ಇಷ್ಟಗಲ ಕಣ್ಣುಬಿಟ್ಟು ಹೆದರಿಸಿದ್ದೆ. ವಿಶಾಲಮ್ಮ ನಗು ತಡೆಯಲಾಗದೆ ಮುಖ ತಿರುಗಿಸಿಕೊಂಡಿದ್ದು ಗಮನಕ್ಕೆ ಬಂದಿತ್ತು.

ಸೀರೆ ಎನ್ನುವುದು ಒಬ್ಬ ಗಂಡಸಿನ ತಲೆಯಲ್ಲಿ ಹುಟ್ಟಿದ ಪರಿಕಲ್ಪನೆ ಎನ್ನುವ ಗುಮಾನಿ ನನಗಿದೆ. ದಿನನಿತ್ಯ ರೈಲಿನಲ್ಲಿ ಹೋಗುವ ಹೆಣ್ಣುಮಕ್ಕಳಿಗಂತೂ ಅದೊಂದು ಮಹಾ ಪಿರಿಪಿರಿಯೇ. ಜನರಲ್ ಬೋಗಿಯಲ್ಲಿ ಇದ್ದು ಜನಜಂಗುಳಿ ಹೆಚ್ಚಿದ್ದರಂತೂ ಸೊಂಟ ಚಿವುಟುವ, ಬೆನ್ನಿಗೆ ಕಚಗುಳಿಯಿಟ್ಟಂತೆ ಮುಟ್ಟುವ ದೌರ್ಜನ್ಯಗಳಿಗೆ ಲೆಕ್ಕವೇ ಇಲ್ಲ. ಮುಂಬಯಿಯಂತಹ ಮಹಾ ನಗರಗಳಲ್ಲಿ ದಿನನಿತ್ಯದ ಮೆಟ್ರೋ ಹೆಂಗಸರು ಬಿಗಿಯಾದ ಜೀನ್ಸ್ ಮತ್ತು  ಶರ್ಟ್ ತೊಟ್ಟು ಮೇಲೊಂದು ಲಳಲಳ ಎನ್ನುವಂಥದ್ದೇನೋ ಹಾಕಿಕೊಳ್ಳಲು ಇಷ್ಟಪಡುತ್ತಾರೆ ಎಂದು ಸುದ್ದಿಪತ್ರಿಕೆಯಲ್ಲಿ ಓದಿದ ನೆನಪು.

ಇರಲಿ, ನಾನೇನೋ ಸೀರೆ ಎಂಬುದನ್ನೇ ತಲೆಯಿಂದ ಕಿತ್ತೊಗೆದು ಉಪನ್ಯಾಸದ ಪ್ರಪಂಚದಲ್ಲಿ ಮುಳುಗಿ ಹೋಗಿದ್ದೆ. ಉಳಿದವರ ತಲೆಯಲ್ಲಿ ಅದು ಉಳಿದುಕೊಂಡಿತ್ತು ಎನ್ನುವ ಅರಿವೂ ನನಗೆ ಇರಲಿಲ್ಲ. ಒಮ್ಮೆ ಮೇಲಿನವರು ಆಫೀಸಿನವರಿಗೆ ಏನೇನೋ ಕಾರಣಗಳಿಗೆ ಬೆಂಡೆತ್ತಿದರಂತೆ. ‘ಇನ್ನೊಮ್ಮೆ ಹೀಗಾದರೆ ಮನೆಗೆ ಕಳಿಸುತ್ತೇವೆ’ ಅಂತ ಗದರಿಸುವ ಮಟ್ಟಿಗೆ ಸಹ ಹೋಯಿತಂತೆ. ಪೆಚ್ಚುಮೋರೆ ಹಾಕಿಕೊಂಡು ಹೊರಬರುತ್ತಿದ್ದ ಒಬ್ಬ ಮಾತ್ರ ಮೆಲ್ಲಗೆ, ‘ಇವರ ಜೋರೆಲ್ಲ ಬರೀ ನಮ್ಮ ಮೇಲೇ. ದಮ್ಮಿದ್ದರೆ ಸುಕನ್ಯಾ ಮೇಡಮ್ಮಿಗೆ ಸೀರೆ ಉಡಿಸಿಬಿಡಲಿ ನೋಡನ!’ ಅಂತ ಗೊಣಗಿದನಂತೆ.

ಖೊಳ್ಳನೆಯ ನಗು ಹರಿದಿತ್ತು ಅಂತ ಕೇಳ್ಪಟ್ಟೆ.

*****

ಅಮೆರಿಕದ ರಟ್ಗರ್ಸ್ ವಿಶ್ವವಿದ್ಯಾಲಯದ ದಿನಗಳಲ್ಲಿ ತಲೆ ಕೆರೆದುಕೊಳ್ಳಲೂ ಬಿಡುವಿರುತ್ತಿರಲಿಲ್ಲ. ಒಮ್ಮೆ ಸೆಮಿಸ್ಟರ್ ಬ್ರೇಕಿಗೆ ಮುಂಚೆ ನಮ್ಮ ಸೆಂಟರಿನಲ್ಲಿ  ಒಂದು ಸಣ್ಣ ಪಾರ್ಟಿ ಇತ್ತು. ನನ್ನ ಭಾರತೀಯತೆಯನ್ನು ಮೆರೆಸಲೆಂದೇ ಸೀರೆ ಉಟ್ಟು ಹೋದೆ. ನನ್ನ ಆಫ್ರೋ-ಅಮೆರಿಕನ್ ಗೆಳತಿ ಸಣ್ಣದಾಗಿ ಶಿಳ್ಳೆ ಹೊಡೆದು ಸ್ವಾಗತಿಸಿ ‘ಇದೇನು ನಿನ್ನ ಅವತಾರ?’ ಎಂದು ಕೇಳಿದಾಗ ನಗು ಬಂದಿತ್ತು. ಅವತಾರ ಎಂಬ ಪದ ಈಗ ಇಂಗ್ಲಿಷಿಗೂ ಹೋಗಿದೆ. ಅದು ಅಮೆರಿಕನ್ ನಾಲಿಗೆಯ ಮೇಲೆ ಏವಟಾರ್ ಆಗಿದೆ ಅಷ್ಟೆ.

ಇದು ಒಂದು ಸಾಂಪ್ರದಾಯಿಕ ಭಾರತೀಯ ವೇಷ. ಮಹಾ ಮರ್ಯಾದಸ್ಥ ಉಡುಪು  ಎಂದು ಬ್ರೇನ್ ವಾಶ್ ಮಾಡಲಾಗಿದೆ  ಎಂದು ಹೇಳಿದ್ದು ಕೇಳಿ  ಹುಬ್ಬೇರಿಸಿದ್ದಳು. Ain’t you half naked? ಎನ್ನುತ್ತಾ ಸೊಂಟ ಹೊಟ್ಟೆ ಬೆನ್ನುಗಳನ್ನು ಮೆಲ್ಲಗೆ ಚಿವುಟಿದಾಗ ‘ಅದೇ ನೋಡು ವಿಚಿತ್ರ, ಇದು ಗಂಡಸಿನ ಕಣ್ಣಿಗೆ ಹಿತವಾಗಲೆಂದೇ ಹುಟ್ಟಿದ ವೇಷ. ಜೊತೆಗೆ ಡೀಸೆಂಟ್ ಅನ್ನೋ ಭ್ರಮೆಯನ್ನು ಹುಟ್ಟಿಸಿ ಪುರುಷದೃಷ್ಟಿ ತನ್ನ ಕೆಲಸ ಮಾಡಿಕೊಳ್ಳುತ್ತೆ,’ ಅಂತ ಹೇಳುತ್ತಲೇ ಹೇಗೆ ಕೇರಳದಲ್ಲಿ ಶತಮಾನಗಳ ಮಟ್ಟಿಗೆ ಕೆಳವರ್ಗದ, ಕೆಳಜಾತಿಯ ಹೆಂಗಸರು ದೇಹದ ಮೇಲ್ಭಾಗವನ್ನು ಮುಚ್ಚಿಕೊಳ್ಳದಂತೆ ಜಮೀನ್ದಾರಿ ಪದ್ಧತಿ ತಡೆ ಹಿಡಿದಿತ್ತು ಎಂದು ವಿವರಿಸಿದಾಗ ಕಣ್ಣುಬಾಯಿ ಬಿಟ್ಟಿದ್ದಳು.

ತಿರುಪತಿಯಲ್ಲಿ ಲಾಡು ಒದಗಿಸುವ ಕಂಟ್ರಾಕ್ಟರ್ ತನ್ನ ಮಗಳ ಮದುವೆಯಲ್ಲಿ ಆಕೆಯ ದೇಹದ ಒಂದು ಇಂಚನ್ನೂ ಬಿಡದಂತೆ ಚಿನ್ನದಲ್ಲಿ ಮುಳುಗಿಸಿದ್ದ ಎನ್ನುವುದು ಅದೇ ಅಪ್ಪಂತನದ ಇನ್ನೊಂದು ರೂಪ ಎಂದು ಅಂತರ್ಜಾಲದಲ್ಲಿ ಸುತ್ತಿಳಿದಿದ್ದ ಆ ಫೋಟೋ ತೋರಿಸಿದೆ. ‘ಒಟ್ಟಿನಲ್ಲಿ ಹೆಣ್ಣಿನ ಹೀಗೆ ದೇಹ ಸಮಾಜದ ತೆವಲುಗಳಿಗೆ ಒದಗಿ ಬರುವ ಒಂದು ಸಾಧನ, ಒಂದೊಂದು ಸಮಾಜದಲ್ಲಿ ಅದರ ಅವತಾರಗಳು ಬೇರೆ ಬೇರೆ ಇರುತ್ತವೆ, ಅಷ್ಟೇ’ ಎಂದು ಹೇಳುತ್ತಿರುವಾಗ ಸುತ್ತಮುತ್ತ ನನ್ನ ಮಾತನ್ನು  ಆಲಿಸುತ್ತಿದ್ದವರ ಸಂಖ್ಯೆ ಹೆಚ್ಚಾಗಿತ್ತು ಎನ್ನುವುದೂ ಗಮನಕ್ಕೆ ಬಂದಿತ್ತು.

ಸುಮಾರು ಎರಡು ದಶಕಗಳ ಹಿಂದೆ ಬೆಂಗಳೂರಿನ ಜಯನಗರ ಪಾರ್ಕಿನಲ್ಲಿ ಬೆಳಗಿನ ವಾಕಿಂಗ್ ಮಾಡುತ್ತಿದ್ದೆ. ಹಿಂದಿನಿಂದ ಯಾರೋ ಧಡ್ ಎಂದು ಬಿದ್ದ ಶಬ್ದ ಕೇಳಿಸಿ ಹಿಂತಿರುಗಿ ನೋಡಿದಾಗ ಹೆಂಗಸೊಬ್ಬರು ಸೀರೆಯ ನೆರಿಗೆ ಪಾದಕ್ಕೆ ಸುತ್ತಿಕೊಂಡು ಬಿದ್ದಿದ್ದು ಕಾಣಿಸಿತು. ಗಡಿಬಿಡಿಯಲ್ಲಿ ಧಾವಿಸಿ ಮೇಲೆತ್ತಿದೆ. ಆಕೆ ಚಪ್ಪಲಿ ಹಾಕಿದ್ದು ಕಾಣಿಸಿತು. ‘ವಾಕಿಂಗ್ ಮಾಡಕ್ಕೆ ಯಾರಾದರೂ ಚಪ್ಪಲಿ ಹಾಕಿಕೊಂಡು ಬರುತ್ತಾರಾ?’ ಎಂದು ಕೇಳುವಾಗ ಜಯನಗರದ ಮಂದಿ ಸಾಮಾನ್ಯವಾಗಿ ಸ್ಥಿತಿವಂತರೇ ಎಂಬ ಎಚ್ಚರವಿತ್ತು. ಜೊತೆಗೆ ಆಕೆಯ ಕೊರಳಲ್ಲಿದ್ದ ದಪ್ಪಗಿನ ಚಿನ್ನದ ಸರವೂ ಕಣ್ಣಿಗೆ ಬಿದ್ದಿತ್ತು.

‘ಅಯ್ಯೋ, ಈ ವಯಸ್ಸಲ್ಲಿ ಶೂಸ್ ಕೊಡಿಸಿ ಅಂತ ಕೇಳಕ್ಕೆ ನಾಚಿಕೆಯಮ್ಮ!’ ಅಂದರು. ‘ಸರಿ ಗಾಜಿನ ಬಳೆ ಒಡೆದು ಚೂರು ನಿಮ್ಮನ್ನು ಕೈನ ಗೀರಿದೆ ನೋಡಿ. ಹಾಕ್ಕೊಬೇಡಿ,’ ಎಂದರೆ ‘ಛೇ! ಬಿಡ್ತು ಅನ್ನಮ್ಮ. ಗಾಜಿನ ಬಳೆ ಮುತ್ತೈದೆ ಲಕ್ಷ್ಮಣ. ಹಾಕಲ್ಲ ಅಂತ ಹೇಳಕ್ಕಾಗುತ್ತಾ?’ ಎಂದದ್ದು ಕೇಳಿ ಕೊನೆಗೆ ‘ಹೋಗಲಿ, ಸೀರೆಯನ್ನ ಅಷ್ಟು ಕೆಳಗೆ ಉಡಬೇಡಿ, ಕಾಲಿಗೆ ಸಿಕ್ಕಳುತ್ತೆ,’ ಎಂದೆ. ‘ಅಯ್ಯೋ, ನಾನು ಮೊದಲೇ ಕುಳ್ಳಿ. ಇನ್ನು ಸೀರೆ ಗಿಡ್ಡ ಇದ್ರೆ ಗೋವಿಂದ!’ ಎಂದಾಗ ಏನು ಹೇಳಬೇಕೋ ತಿಳಿಯದೆ ತೆಪ್ಪಗಾಗಿದ್ದೆ.

ಅಕ್ಕಪಕ್ಕದಲ್ಲಿ  ಕುಡಿಯುವ ನೀರಾದರೂ ಸಿಗುತ್ತಾ ಅಂತ ನೋಡುತ್ತಿದ್ದಾಗಲೇ ಅವರ ಗಂಡ ಅಲ್ಲಿಗೆ ಬಂದರು. ಟ್ರಾಕ್ ಸೂಟು, ನೈಕಿ ಶೂಸುಗಳ ಆಸಾಮಿ ಆಗಲೇ ಪಾರ್ಕಿನ ಸುತ್ತ ಐದು ರೌಂಡು ಹೊಡೆದಾಗಿತ್ತು! ಏನಾಯ್ತು ಎಂದು ಆತ ಕೇಳಿದ್ದಕ್ಕೆ ಆಕೆ ತೆಲುಗಿನಲ್ಲಿ ನಡೆದಿದ್ದನ್ನು ನಿರೂಪಿಸಲು ಪ್ರಾರಂಭಿಸಿದರು. ಆತ ಅದಕ್ಕೆ ಅಷ್ಟಾಗಿ ಕಿವಿಗೊಡದೆ ‘ಸರಿ ಸರಿ, ಮನೆಗೆ ಹೋಗೋಣ ಬಾ. ಕಾಫಿ ಕುಡಿಬೇಕು,’ ಎಂದಾಗ ಮುಂದೆ ಆತ, ಹಿಂದೆ ಕುಂಟುತ್ತಾ ನಡೆದ ಈಕೆಯನ್ನು ನೋಡುತ್ತಾ ಸ್ವಲ್ಪ ಹೊತ್ತು ಅಲ್ಲೇ ಬೆಂಚಿನಲ್ಲಿ ಕುಕ್ಕರಿಸಿದ್ದೆ.

*****

ಬರಿಯ ಉಪಚಾರಗಳಲ್ಲಿ ಕಳೆದು ತಿರುಳತ್ತ ಹೊರಳಿ ನೋಡದೆ ಹೋಗುವ ಮಹಾ ಮೂರ್ಖರು ನಾವು ಅಂತ ತುಂಬ ಸಲ ಅನ್ನಿಸಿದೆ. ಕರ್ಮಕಾಂಡದ ಮಂದಿ!

ಹಿಂದೆ ಮೈಸೂರಿನ ಕಾಲೇಜಿನಲ್ಲಿ ಓದಿದ್ದೆ. ಅಲ್ಲಿ ಇಂಗ್ಲಿಷ್ ಬಿಎ ಜೊತೆಗೆ ಈಗ ಎಂ ಎ ಸಹ ಇದೆ. ಈಗ್ಗೆ ಮೂರು ವರ್ಷಗಳ ಹಿಂದೆ ಅಲ್ಲಿ ಯಾಕೆ ಪಾರ್ಟ್ ಟೈಮ್ ಮಾಡಬಾರದು ಎಂಬ ಯೋಚನೆ ಹೊಳೆಯಿತು. ನನ್ನ ಸ್ನೇಹಿತರೊಬ್ಬರು ಅಲ್ಲಿಯ ಪ್ರಧಾನ ಆಡಿಟರ್. ಅರ್ಜಿ ಹಾಕಲಾ ಎಂದೆ. ಅಯ್ಯೋ ಹಾಕಿ, ನಿಮ್ಮ ಅರ್ಹತೆ, ಅನುಭವ ಅವರಿಗೆ ಸಿಕ್ಕಬೇಕಾದರೆ ಪುಣ್ಯವಿರಬೇಕು. ಮಕ್ಕಳಿಗೆ ಉಪಯೋಗವಾಗುತ್ತದೆ ಎಂದರು.

ಹಾಕಿದೆ. ಸಂದರ್ಶನಕ್ಕೆ ಕರೆದರು, ಹೋದೆ.

ದಶಕಗಳ ನಂತರ ಕಾಲೇಜು ನನ್ನ ಕಣ್ಣಿಗೆ ಕಾಣಿಸುತ್ತಿದ್ದ ರೀತಿಗೆ ಅಚ್ಚರಿಪಡುತ್ತಾ ಕಾರು ನಿಲ್ಲಿಸಿ ಡೈರೆಕ್ಟರ ಚೇಂಬರಿಗೆ ಹೋದೆ. ಆಕೆ ಒಬ್ಬ ಸಿಸ್ಟರಿನಿ.

ನನ್ನ ಅರ್ಜಿಯನ್ನು ಗಮನಿಸಿದ್ದರು. ತುಂಬ ಇಂಪ್ರೆಸ್ ಆಗಿದ್ದಂತೆ ಕಂಡರು. ಅದೂ ಇದೂ ಮಾತಾಡುತ್ತಾ ಪರದೇಶದ ವಿಶ್ವವಿದ್ಯಾಲಯಗಳ  ಬಗ್ಗೆ ಏನೇನೋ ಕೇಳಿದರು.  ಕೊನೆಯಲ್ಲಿ  ಕೆಲವು ಸಂಗತಿಗಳನ್ನು ಸ್ಪಷ್ಟಪಡಿಸಬೇಕೆನ್ನಿಸಿತು.

‘ನನ್ನ ಉಪನ್ಯಾಸ ದಿನಕ್ಕೆ ಕೇವಲ ಎರಡು ಗಂಟೆ ಮತ್ತು ವಾರಕ್ಕೆ ಮೂರು ದಿನಗಳು ಮಾತ್ರ.  ಇಂಗ್ಲಿಷ್ ವಿಭಾಗ ನನ್ನ ಅರ್ಹತೆ ಅನುಭವಕ್ಕೆ ತಕ್ಕಂತೆ ಕ್ಲಿಷ್ಟವಾದ ಪಠ್ಯಗಳನ್ನು ಆಯ್ದು ಇಡಲಿ. ಉಪನ್ಯಾಸದ ಮುಂಚೆ ಬಂದು ಮುಗಿದ ತಕ್ಷಣ ಹೋಗಿಬಿಡುತ್ತೇನೆ. ವಿಶೇಷ ಅಗತ್ಯವಿದ್ದರೆ ಮಾತ್ರ ಇರುತ್ತೇನೆ. ಆಡಳಿತಕ್ಕೆ ಸಂಬಂಧಪಟ್ಟಂತೆ ನಾನು ಯಾವ ಕೆಲಸವನ್ನೂ ಮಾಡುವುದಿಲ್ಲ. ಮೌಲ್ಯಮಾಪನ ಸಹ ನನಗೆ ಬೇಡ. ಉಪನ್ಯಾಸ ಮಾತ್ರ ನನ್ನ ಜವಾಬ್ದಾರಿ. ಎರಡು ಗಂಟೆಯ ಉಪನ್ಯಾಸಕ್ಕೆ ನನಗೆ ಐದು ಗಂಟೆಗಳ ಸಿದ್ಧತೆಯಾದರೂ ಇರುತ್ತದೆ.’

ಡೈರೆಕ್ಟರಿನಿಗೆ ಒಪ್ಪಿಗೆ ಇದ್ದಂತೇನೋ ಅನ್ನಿಸಿತು. ಕೊನೆಯ ಬಾಣವನ್ನು ಬಿಟ್ಟೆ. ‘ನಾನು ಸೀರೆ ಉಡುವುದಿಲ್ಲ. ನನಗೆ ಅದು ಆರಾಮ ಅಂತನ್ನಿಸುವುದಿಲ್ಲ. ಈಗ ನಾನು ಹಾಕಿರುವುದು ಸಹ ಫಾರ್ಮಲ್ ವೇಷವೇ,’ ಅಂತಂದೆ.

ಆಕೆಯ ಮುಖದಲ್ಲಿ ತೆಳುವಾಗಿ ನಗು ಮೂಡಿದಂತೆ ಇತ್ತು. ಬೆಲ್ ಮಾಡಿ ಪ್ರಿನ್ಸಿಪಾಲಿನಿಯನ್ನು ಕರೆಸಿದರು. ಆಕೆ ಒಬ್ಬ ಸೀರೆ ಸಾಲಂಕೃತೆ.

ನನ್ನ ಅಗತ್ಯಗಳ ಬಗ್ಗೆ ಚುಟುಕಾಗಿ ಹೇಳಿದ ಡೈರೆಕ್ಟರಿನಿ ಸೀರೆಯ ಬಗ್ಗೆ ಸಹ ಹೇಳಿದರು. ಪ್ರಿನ್ಸಿಪಾಲಿನಿಯ ಮುಖ ಈಗ ಬಿಗಿಯಿತು. ‘ಅಯ್ಯೋ, ಅದು ಹೇಗೆ ಆಗುತ್ತೆ ಮೇಡಂ? ಆಮೇಲೆ ಬೇರೆಯವರು ನಮಗೂ ಆ ವಿಶೇಷ ಸವಲತ್ತು ಕೊಡಿ ಅಂತ ಕೇಳಿಬಿಟ್ಟರೆ?’

ಅಯ್ಯಯ್ಯೋ! ಉಕ್ಕಿ ಬಂದ ನಗುವನ್ನು ನಾನು ತಡೆ ಹಿಡಿದ ರೀತಿಗೆ ಒಂದು ಪ್ರಶಸ್ತಿಯಾದರೂ ಸಿಕ್ಕಿರಬೇಕಿತ್ತು!

ಡೈರೆಕ್ಟರಿನಿಗೆ ಪ್ರಿನ್ಸಿಪಾಲಿನಿಯನ್ನು ದಾಟಿ ನಿರ್ಧಾರ ತೆಗೆದುಕೊಳ್ಳುವ ಸವಲತ್ತು ಇದ್ದಿಲ್ಲದಿರಬಹುದು. ಅರೆಗಳಿಗೆಯ ಮಟ್ಟಿಗೆ ಆಕೆ ಬೀರಿದ ನೋಟದಲ್ಲಿ ಅಸಹಾಯಕತೆಯ ಎಳೆ ಇದ್ದಂತೆ ಅನ್ನಿಸಿತು.

ಸಾಂಸ್ಥಿಕತೆ!

ಬದುಕಿನ ಈ ಹಂತದಲ್ಲಿ ಕೆಲವು ರಾಜಿಗಳಿಗೆ ನಾನು ಸುತರಾಂ ಸಿದ್ಧವಿಲ್ಲ. ‘ಯೋಚಿಸಿ, ಬೇಕಿದ್ದರೆ ನನ್ನನ್ನು ಸಂಪರ್ಕಿಸಬಹುದು,’ ಎಂದಷ್ಟೇ ಹೇಳಿ ಹೊರಬಿದ್ದೆ.

ಇಲ್ಲಿಗೆ ಬಂದು ಹೋಗಲು ನಾನು ದಿನಕ್ಕೆ ಇಪ್ಪತ್ತೈದು ಕಿಮೀ ಡ್ರೈವ್ ಮಾಡಬೇಕಿರುವುದು  ಯಾವ ರೀತಿಯ ಸವಲತ್ತು? ದಿನಕ್ಕೆ ಐದು ಗಂಟೆ ಸಿದ್ಧತೆ ಮಾಡಬೇಕಾದ ಅನಿವಾರ್ಯವೂ ಒಂದು ಸವಲತ್ತೆ?

ಇಷ್ಟಕ್ಕೂ ಸಂಭಾವನೆಯ ಬಗ್ಗೆ ನನ್ನ ಯಾವ ಷರತ್ತೂ ಇರಲಿಲ್ಲ. ಅವರು ನಮೂದಿಸಿದ ಜುಜುಬಿಗೆ ಮೌನದಿಂದಲೇ ಒಪ್ಪಿಗೆ ನೀಡಿದ್ದೆ.

ನಾವು ಕರ್ಮಕಾಂಡದ ಮಂದಿ. ಮೋಕ್ಷ ಬೇಕಿಲ್ಲ!

About The Author

ಸುಕನ್ಯಾ ಕನಾರಳ್ಳಿ

ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕಿ, ಲೇಖಕಿ, ಮತ್ತು ಭಾಷಾಂತರಕಾರ್ತಿ. ವೈದೇಹಿ (An Afternoon with Shakuntala and Other Stories) ಮತ್ತು ಅಗ್ರಹಾರ ಕೃಷ್ಣಮೂರ್ತಿಯವರ ಕೃತಿಗಳು (Love and Water Flow Together) [(ಕುವೆಂಪು ಭಾಷಾಭಾರತಿ ಪ್ರಶಸ್ತಿ  (2023) ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಅನುವಾದಿತ ಪುಸ್ತಕ ಪ್ರಶಸ್ತಿ (2023)] ಇಂಗ್ಲೀಷಿಗೆ ಅನುವಾದಿಸಲ್ಪಟ್ಟ ಕೃತಿಗಳು.  ‘ಹೇಳುತೇನೆ ಕೇಳು: ಮಹಿಳೆಯರ ಆತ್ಮಕಥೆಗಳು’; ‘ಕಥೆ ಹೇಳುವೆ’; ‘ಬರ್ತಿಯಾ?… ಎಷ್ಟು?…: ಭಾರತೀಯ ಸೂಳೆಲೋಕದಕಥೆಗಳು’; ನಯನತಾರ ಸೆಹಗಲ್ ಅವರ ‘ಚಿಟ್ಟೆಗಳ ಪಾಡು’ ಇತ್ಯಾದಿ ಅವರ ಕನ್ನಡ ಭಾಷಾಂತರ ಕೃತಿಗಳು. ಮೌಲಾನಾ ಜಲಾಲುದ್ದೀನ್ ರೂಮಿಯ ಕಾವ್ಯದ ಭಾಷಾಂತರ ಕೃತಿ ‘ದಿವ್ಯದಲ್ಲಿ ಹಿಸ್ಸೆಯಿಲ್ಲ: ಕಡುಪ್ರೇಮಿಯ ಎದೆಯ ಹಾಡು ಇತ್ತೀಚೆಗೆ ಬಿಡುಗಡೆಯಾದ ಕೃತಿ. 'ಕನ್ನಡ-ಕಾಸರವಳ್ಳಿಯವರ ಸಿನಿಮಾಗಳಲ್ಲಿ ರಾಷ್ಟ್ರ ಮತ್ತು ಹೆಣ್ಣು' ಎರಡು ಪುಸ್ತಕಗಳಾಗಿ ಸದ್ಯದಲ್ಲೇ ಬೆಳಕು ಕಾಣಲಿದೆ. 

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ