Advertisement
ಪಿಸುಮಾತಿನ ಪಲ್ಲವಿಗೆ ಮರಗಿಡಗಳ ತನನ!: ಕ್ಷಮಾ ವಿ.ಭಾನುಪ್ರಕಾಶ್ ಬರೆಯುವ ಕಥಾ ಸರಣಿ

ಪಿಸುಮಾತಿನ ಪಲ್ಲವಿಗೆ ಮರಗಿಡಗಳ ತನನ!: ಕ್ಷಮಾ ವಿ.ಭಾನುಪ್ರಕಾಶ್ ಬರೆಯುವ ಕಥಾ ಸರಣಿ

ಅಲ್ಲಕ್ಕಾ, ಮರಗಿಡಗಳು ಕೇಳಿಸಿಕೊಳ್ಳೋದು ಹೇಗೆ ಅಂತ ಒಂದು ಚೂರು ಅರ್ಥಾ ಆಯ್ತು. ಇದೇ ಒಂದು ಅಚ್ಚರಿ ಅಂದ್ರೆ, ಈ ಮೂಕಮರಗಳು ಮಾತು ಹೇಗಪ್ಪಾ ಆಡತ್ವೇ? ಅದು ಕೂಡ ತುಂಬಾ ಆಶ್ಚರ್ಯವೇ” ಎಂದಳು. ಆಗ ಕಾವ್ಯ, “ಹೂಂ, ಅದಕ್ಕೆ ನಮ್ ಮರಗಳ ‘ನೆಟ್ವರ್ಕ್’ ಬೇಕಪ್ಪಾ! ಹೌದೂ.. ಫಂಗಸ್ ಗೊತ್ತಲ್ವಾ ನಿಂಗೆ? ಎಂದು ಕೇಳಿದಳು. ಆಗ ವಿಭಾ, “ಹೂಂ, ಮಳೆ ಬಂದಾಗ ಒದ್ದೆ ಬಟ್ಟೆ ಮೇಲೋ, ಒದ್ದೆ ಗೋಡೆ ಮೇಲೋ ಕಪ್ಪು ಚುಕ್ಕಿಗಳು ಕಾಣಿಸತ್ತಲ್ವಾ? ಅದೇ ತಾನೆ ಫಂಗಸ್?” ಎಂದಳು.
ಕ್ಷಮಾ
ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹತ್ತನೆಯ ಕತೆ

ಬೇಸಿಗೆಯ ಮಧ್ಯರಾತ್ರಿಯ ತಂಪುಗಾಳಿಯು ಮನೆಯ ಜಗಲಿಯಲ್ಲಿ ಮಲಗಿದ್ದವರಿಗೆ ಫ್ಯಾನ್, ಎ.ಸಿ ಯಾವುದೂ ಬೇಡದಂತೆ ಹಾಯಾಗಿರಿಸಿತ್ತು. ಬೇಸಿಗೆಯಲ್ಲಿ ಅಕ್ಕನ ಪರಿಸರ-ಸ್ನೇಹಿ ಮನೆಗೆ ಬಂದರೆ, ವಿಭಾ ಹಾಗೂ ಕಾವ್ಯಕ್ಕಳಿಗೆ ಹೊರಗಿನ ಜಗಲಿ ಫೇವರೆಟ್ ಸ್ಥಳ. ಅಲ್ಲೇ ಬೆಳದಿಂಗಳಲ್ಲಿ ಊಟ, ಅಲ್ಲೇ ನಿದ್ದೆ. ಇನ್ನೂ ಕೋಳಿ ಕೂಗೋಕೆ ಸುಮಾರು ಸಮಯವಿತ್ತು; ಯಾಕೋ ವಿಭಾಗೆ ಬೇಗ ಎಚ್ಚರವಾಗಿಬಿಟ್ಟಿತ್ತು. ಬೇಸಿಗೆ ರಜೆ ಬಂದಿದೆ, ಅರಾಮಾಗಿ ನಿಧಾನವಾಗಿ ಏಳೋಣವೆಂದರೆ, ಅದೇಕೋ ಅವತ್ತು ನಿದ್ದೆ ಬೈ-ಬೈ ಹೇಳಿತ್ತು. ಸರಿ, ಆಚೀಚೆ ಹೊರಳುತ್ತಾ ಅದೂ ಇದೂ ಯೋಚಿಸುತ್ತಿದ್ದಾಗ, ಇವಳ ಹೊರಳಾಟದಿಂದ ಕಾವ್ಯಳಿಗೂ ಎಚ್ಚರವಾಯಿತು. “ಏನಾಯ್ತೋ ವಿಭಾ? ನಿದ್ದೆ ಬರ್ತಿಲ್ವಾ?” ಎಂದಳು ಕಾವ್ಯ. “ಅಯ್ಯೋ ಇಲ್ಲಕ್ಕಾ, ರಜೆಯಲ್ಲೇ ಬೇಗ ಎಚ್ಚರಾಗೋದು ನೋಡು. ಶಾಲೆ ಇರುವಾಗ, ಬೇಗ ಏಳಕ್ಕೆ ಇಷ್ಟವಿಲ್ದೇ, ಹೆಂಗೋ ಎದ್ದು, ಹಾಗೇ, ಎದ್ದ ಮೇಲೂ ಮತ್ತೆ ಝೊಂಪು ಹತ್ತಿ, ಸಕ್ಕರೆ ನಿದ್ದೆ ಬಂದಿರತ್ತೆ. ಈಗ ನೋಡು.” ಎಂದಳು. ಅದಕ್ಕೆ, ಸೂಕ್ಷ್ಮನಿದಿರೆಯ ಪ್ರತಿನಿಧಿ ಕಾವ್ಯ, ನಗುತ್ತಾ, ಹೂಂಗುಟ್ಟಿ ತನ್ನ ಸಹಮತ ಸೂಚಿಸಿದಳು.

ಹೇಗೂ ಎಚ್ಚರವಾಗಿತ್ತಲ್ಲ, ಅಕ್ಕ-ತಂಗಿಯರ ಮಾತಿಗೆ ಹಗಲೇನು, ಇರುಳೇನು? ಕತ್ತಲಿನ ಬಗ್ಗೆ, ನಿಶಾಚರಿ ಪ್ರಾಣಿಗಳ, ರಾತ್ರಿಯ ನೀರವತೆಯ ಬಗ್ಗೆ ಮಾತುಕತೆ ನಡೆಯುತ್ತಿದ್ದಾಗ, ವಿಭಾ “ಅಲ್ಲ ಕಾವ್ಯಕ್ಕಾ, ನೆನ್ನೆ ನೀನು, ಮರಗಳು ಕೇಳಿಸಿಕೊಳ್ಳತ್ವೆ ಅಂದ್ಯಲ್ಲ! ಈಗ ರಾತ್ರಿ ಹೊತ್ತಲ್ಲಿ ಹೊರಗೆ ಇಷ್ಟು ನಿಶ್ಯಬ್ದವಾಗಿರತ್ತಲ್ಲಾ? ಈಗ ಮರಗಳಿಗೆ ಇನ್ನೂ ಈಸಿಯಲ್ವಾ ಕೇಳಿಸಿಕೊಳ್ಳಕ್ಕೆ!” ಎಂದಳು. ಆಗ ಕಾವ್ಯಳಿಗೆ, ನೆನ್ನೆಯ ಮಾತುಕತೆಯಲ್ಲಿ, ಮರಗಳು ಹೇಗೆ ರುಚಿ ನೋಡುತ್ತವೆ, ಹೇಗೆ ಘಮ ಗುರುತಿಸುತ್ತವೆ ಮತ್ತು ಹೇಗೆ ತನ್ನ ಹೊರಗಿನ ದೃಶ್ಯದಲ್ಲಿನ ಬೆಳಕು-ನೆರಳುಗಳನ್ನು ಕಾಣುತ್ತವೆ ಎಂಬುದನ್ನು ಚರ್ಚಿಸಿದ್ದು ನೆನಪಾಯಿತು. ಅದಕ್ಕೆ ಕಾವ್ಯ, “ಓಹ್ ಮರಗಳು ಹೇಗೆ ಮಾತಾಡತ್ವೆ, ಮತ್ತೆ, ಹೇಗೆ ಕೇಳಿಸಿಕೊಳ್ಳತ್ವೆ ಅಂತ ಹೇಳೋದು ಬಾಕಿ ಉಳ್ದಿತ್ತು, ಅದಕ್ಕೆ ಬೇಗ ಎಬ್ಸಿಬಿಟ್ಯಾ ನನ್ನ?” ಎಂದು ನಗೆಯಾಡಿದಳು.

ವಿಭಾಳ ಕಡೆ ಹೊರಳಿ, ಮಾತನ್ನು ಹಾಗೇ ಮುಂದುವರೆಸುತ್ತಾ, “ಸರಿ, ಕೇಳು. ಈಗ ನಾನು ಮಾತಾಡೋಕೆ ನನ್ನ ವಾಯ್ಸ್ ಬಾಕ್ಸ್ ಅಂದ್ರೆ ವೋಕಲ್ ಕಾರ್ಡ್ ಬಳಸ್ತಾ ಇದೀನಿ ಅಲ್ವಾ? ಈ ಸ್ವರತಂತುಗಳ ಮೂಲಕ ಗಾಳಿಯ ಚಲನೆಯಾದಾಗ, ಅದು ಶಬ್ದ ಹೊರಡಿಸತ್ತೆ. ಹಾಗೇ, ನಾನು ಹೇಳ್ತಾ ಇರೋ ವಿಷಯಗಳನ್ನ ನೀನು ಕೇಳಿಸಿಕೊಳ್ತಾ ಇರೋದು ಕಿವಿಯ ವಿಶೇಷ ತಮಟೆ, ಅದಕ್ಕೆ ಹೊಂದಿಕೊಂಡಂತೆ ಇರುವ ಮೂಳೆಗಳ-ನರಗಳ ನೆಟ್ವರ್ಕ್ ಇಂದ. ಇಂತಹ ಯಾವ ಅಂಗಗಳೂ ಇಲ್ಲದಿದ್ದರೂ ಮರಗಳು ಕೇಳಿಸಿಕೊಳ್ಳತ್ವೆ, ಮಾತಾಡತ್ವೆ” ಎಂದಳು ಕಾವ್ಯ.

ಆಗ ವಿಭಾ, “ಅದು ಹೇಗೆ ಸಾಧ್ಯ ಅಕ್ಕಾ? ಕೇಳೋಕೆ ಮತ್ತು ಮಾತಾಡೊಕೆ ಈ ಅಂಗಗಳೇ ಇಲ್ಲದಿದ್ರೆ, ಇವೆಲ್ಲಾ ಸಾಧ್ಯ ಆಗೋದು ಹೇಗೆ?” ಎಂದು ಪ್ರಶ್ನಿಸಿದಳು. ಆಗ ಕಾವ್ಯ, “ಗಿಡ-ಮರಗಳಿಗೆ ಅವುಗಳದ್ದೇ ಆದ ವಿಶೇಷ ಸೆನ್ಸರ್ ಅಂದ್ರೆ ಸಂವೇದಕಗಳಿವೆ. ಜೊತೆಗೆ ಫ್ರೆಂಡ್ಸ್ ಬೇರೆ ಹೆಲ್ಪ್ ಮಾಡ್ತಾರೆ.” ಎಂದಳು. ಆಗ ವಿಭಾ, “ಹೂಂ, ಅದೇ, ಎಲೆ ತಿನ್ನೋಕೆ ಬಂದ ಕೀಟವನ್ನ ನಾಶ ಮಾಡೋಕೆ, ಹಕ್ಕಿಗಳನ್ನ, ಬೇರೆ ಕೀಟಗಳನ್ನ ಕರೆಯತ್ತಲ್ಲ ನಮ್ ಮರಗಳು. ಅಂಥಾ ಫ್ರೆಂಡ್ಸ್ ಬರ್ತಾರ, ಮರಗಳಿಗೆ ಕೇಳೋಕೆ ಮತ್ತೆ ಹೇಳೋಕೆ ಹೆಲ್ಪ್ ಮಾಡೋ ಸಲುವಾಗಿ?” ಎಂದಳು ಕುತೂಹಲದಿಂದ.

ಇದಕ್ಕೆ ಉತ್ತರಿಸುತ್ತಾ, ಕಾವ್ಯ, “ಕೇಳಿಸಿಕೊಳ್ಳೋಕೆ ಇಂತಹ ಗೆಳೆಯರ ಅವಶ್ಯಕತೆ ಇಲ್ಲ ನಮ್ಮ ಮರಗಿಡಗಳಿಗೆ. ಆದರೆ ಮಾತಾಡೋಕೆ, ಜೊತೆಗೆ ವಿವರವಾದ ಸಂವಹನ ನಡೆಸೋಕೆ ಖಂಡಿತಾ ‘ಫಂಗಲ್ ಫ್ರೆಂಡ್ಸ್’ ಬೇಕು ನೋಡು. ಮೊದಲು, ನಮ್ ಮರಗಿಡಗಳು ಹೇಗೆ ಕೇಳಿಸಿಕೊಳ್ತವೆ ಅಂತ ಹೇಳ್ತೀನಿ” ಅಂತ ಎದ್ದು, ಕಂಬಕ್ಕೊರಗಿ ಕೂತಳು. ಮಾತು ಮುಂದುವರೆಸುತ್ತಾ, “ಶಬ್ದ ಅಂದ್ರೆ ಅದೊಂದು ಅಲೆಯ ಹಾಗೆ. ಅದಕ್ಕೇ ಶಬ್ದ ತರಂಗ ಅಥ್ವಾ ಸೌಂಡ್ ವೇವ್ ಅಂತೀವಿ. ಅಲ್ಲಿ ನಮ್ಮ ಸಮುದ್ರದ ಅಲೆಗಳ ಏರಿಳಿತದ ಹಾಗೆ ಏರಿಳಿತ ಇರತ್ತೆ, ಇಂತಹ ಶಬ್ದಕ್ಕೆ, ಇಂತಹದ್ದೇ ‘ಫ್ರೀಕ್ವೆನ್ಸಿ’ ಅಂತ ಇರತ್ತೆ. ಅಂತಹ ‘ಫ್ರೀಕ್ವೆನ್ಸಿ’ಗಳನ್ನ ಗುರುತಿಸುತ್ವೆ ನಮ್ಮ ಮರಗಿಡಗಳು ತಮ್ಮ ವಿಶೇಷ ‘ಸೆನ್ಸರ್’ಗಳಿಂದ!” ಎಂದಳು.

ಇದನ್ನು ಕೇಳಿ, ತಾನೂ ಎದ್ದು ಮತ್ತೊಂದು ಕಂಬಕ್ಕೊರಗಿ ಕೂತ ವಿಭಾ, “ವಾವ್ ಸಖತ್ ಇಂಟರೆಸ್ಟಿಂಗ್ ಇದೆ, ಹೂಂ, ಮುಂದುವರೆಸು ಕಾವ್ಯಕ್ಕಾ” ಎಂದಳು. ಆಗ ಕಾವ್ಯ “ಹೂಂ, ಒಂದು ಸಂಶೋಧನೆಯಲ್ಲಿ, ಎಲೆಗಳನ್ನು ಕ್ಯಾಟರ್‌ಪಿಲ್ಲರ್ ತಿನ್ನುವಾಗ ಹೊರಡುವಂತಹ ಶಬ್ದವನ್ನ, ಕೃತಕವಾಗಿ ಸೃಷ್ಟಿಸಿ, ‘ಲ್ಯಾಬ್’ನಲ್ಲಿದ್ದ ಗಿಡಗಳ ಹತ್ತಿರ ‘ಪ್ಲೇ’ ಮಾಡಿದ್ರಂತೆ. ತಕ್ಷಣ ಅಲ್ಲಿದ್ದ ಗಿಡಗಳು, ನಿಜವಾಗಲೂ ತಮ್ಮ ಎಲೆಗಳನ್ನು ಕ್ಯಾಟರ್‌ಪಿಲ್ಲರ್ ತಿಂತಾ ಇದೆಯೇನೋ ಅನ್ನೋ ಹಾಗೆ, ತಡಬಡಾಯಿಸಿ, ಕಹಿಯಾದ ಕೆಮಿಕಲ್ಸ್ ಬಿಡುಗಡೆ ಮಾಡಿ, ಅಲ್ಲಿ ಇಲ್ಲದ ‘ಕ್ಯಾಟರ್‌ಪಿಲ್ಲರ್’ನ ಓಡಿಸೋ ಪ್ರಯತ್ನ ಮಾಡಿದ್ವಂತೆ. ಇಲ್ಲಿ, ಕೇವಲ ಅದೇ ‘ಫ್ರೀಕ್ವೆನ್ಸಿ’ಯ ಶಬ್ದತರಂಗಗಳನ್ನ ಕೇಳಿಸಿದಾಗ ಮಾತ್ರ, ಇಂತಹ ರೆಸ್ಪಾನ್ಸ್ ಕೊಟ್ವು ಆ ಗಿಡಗಳು!” ಎಂದಳು. ಆಗ ವಿಭಾ, “ಅಬ್ಬಾ, ಅಂದ್ರೆ ನಿಜಕ್ಕೂ ಕೇಳಿಸ್ತು ನೋಡು ಅವಕ್ಕೆ! ಇಂತಹ ಇನ್ನೂ ಬೇರೆಬೇರೆ ಪ್ರಯೋಗಗಳು ಮಾಡಿದಾರಾ?” ಎಂದು ಕೇಳಿದಳು.

ಕಾವ್ಯಳಿಗೆ ಇವಳ ಉತ್ಸಾಹ ಕಂಡು ನಿದ್ದೆ ಸಂಪೂರ್ಣ ಹಾರಿಹೋಗಿ, ಹುಕಿಯಲ್ಲಿ ಮಾತು ಮುಂದುವರೆಸಿದಳು. “ಹೂಂ ವಿಭಾ, ಈ ಮರಗಿಡಗಳಿಗೆ ಭೂಮಿಯಲ್ಲಿ ನೀರು ಕರೆಕ್ಟಾಗಿ ಎಲ್ಲಿದೆ ಅಂತ ಹೇಗೆ ಗೊತ್ತಾಗತ್ತೆ ಹೇಳು? ಭೂಮಿಯಲ್ಲಿ ನೀರಿನ ಅಣುಗಳ ಹರಿವು ಕೂಡ ಒಂದು ಬಗೆಯ ಶಬ್ದವನ್ನ ಉತ್ಪಾದನೆ ಮಾಡತ್ತೆ ಅಲ್ವಾ? ಆ ‘ವೈಬ್ರೇಶನ್’ಗೆ ಸಂಬಂಧಪಟ್ಟ ಕಂಪನಾಂಕಗಳಿಗೆ ಕಿವಿಗೊಟ್ಟು, ಮರಗಿಡಗಳ ಬೇರು ಆ ನೀರಿನ ಕಡೇನೇ ಹೋಗತ್ವೆ. ಇನ್ನು ಎಂ. ಐ. ಟಿ ಅನ್ನೋ ಶಿಕ್ಷಣ ಸಂಸ್ಥೆಯಲ್ಲಿ ಒಂದು ಪ್ರಯೋಗ ನಡೀತು. ಅಲ್ಲಿ ಗೊತ್ತಾಗಿದ್ದೇನಂದ್ರೆ, ಇನ್ನೂ ಮೊಳಕೆಯೊಡೆಯದ ಬೀಜಗಳಿರತ್ವಲ್ಲಾ? ಅವಕ್ಕೆ ಮಳೆ ಶಬ್ದ ಕೇಳ್ಸತ್ತಂತೆ! ಗಿಡ-ಮರಗಳ ಬೀಜಗಳಲ್ಲಿ ‘ಸ್ಟಾಟೋಲಿಥ್’ ಅಂತ ವಿಶೇಷ ಕೋಶಗಳಿರತ್ವೆ. ಹೊರಗೆ ಮಳೆಹನಿ ಭೂಮಿಗೆ ಬಿದ್ದ ಶಬ್ದ ಕೇಳಿದ ತಕ್ಷಣಾನೇ, ಈ ಕೋಶಗಳು ಅದನ್ನು ಗುರುತಿಸಿ, ಬೀಜದಲ್ಲಿ ಮೊಳಕೆ ಒಡೆಯೋಕೆ ಬೇಕಾದ ರಾಸಾಯನಿಕ ಪ್ರಕ್ರಿಯೆಗಳು ಸ್ಟಾರ್ಟ್ ಆಗತ್ವೆ.” ಎಂದಳು ಕಾವ್ಯ.

ಆಗ ವಿಭಾ, “ಅಬ್ಬಾ! ಅದಕ್ಕೇ, ಮಳೆ ಬಂದ ತಕ್ಷಣ, ಈ ಬೀಜಗಳು ಎಲ್ಲೆಲ್ಲಿ ಅಡಗಿದ್ವೋ, ಅಲ್ಲಿಂದೆಲ್ಲಾ ಮೊಳಕೆಯೊಡೆದು, ಹೊಸ ಹೊಸ ಗಿಡಗಳು ಚಿಗುರಿ, ಎಲ್ಲಾ ಕಡೆ ಹಸಿರಾಗತ್ತೆ ಅಲ್ವಾ? ಹೂಂ, ಆಮೇಲೆ?” ಎಂದಳು. ಆಗ ಕಾವ್ಯ, “ಕರೆಕ್ಟ್ ವಿಭಾ, ಅಲ್ಲಾ, ನಮ್ ಮರಗಿಡಗಳು ಎಷ್ಟು ಸ್ಮಾರ್ಟ್ ನೋಡು. ಅವಕ್ಕೆ ತನ್ನ ‘ಪೊಲೆನ್’ ಅಂದ್ರೆ ಪರಾಗ ಕಣಗಳನ್ನ ತೊಗೊಂಡು ಹೋಗೋಕೆ. ‘ಡೆಲಿವರಿ ಏಜೆಂಟ್’ ಜೇನುಹುಳ ಬರ್ತಾ ಇದೆ ಅಂತ, ಜೇನುಹುಳದ ರೆಕ್ಕೆಬಡಿಯುವ ಶಬ್ದದಿಂದ ಗೊತ್ತಾಗತ್ತಂತೆ. ಆ ನಿರ್ದಿಷ್ಟ ‘ಫ್ರೀಕ್ವೆನ್ಸಿ’ಯ ಶಬ್ದ ಕೇಳಿಸಿಕೊಂಡ ಮರಗಿಡಗಳು, ಬೇಗಬೇಗ ಹೂವಿಗೆ ೨೦% ಹೆಚ್ಚು ಸಕ್ಕರೆಪಾಕ ಕಳ್ಸತ್ತಂತೆ. ಆ ಘಮಕ್ಕೆ, ಆ ಸಕ್ಕರೆಯ ಆಸೆಯಿಂದ ಜೇನುಹುಳ ಹತ್ತಿರ ಬರ್ಲಿ, ಬಂದು ಪರಾಗ ಕಣಗಳನ್ನ ಕೊಂಡೊಯ್ಲಿ ಅಂತ!” ಎಂದು ವಿವರಿಸಿದಳು.

ಇದನ್ನು ಕೇಳಿ ಅಚ್ಚರಿಯಿಂದ ವಿಭಾ “ಇಷ್ಟೆಲ್ಲಾ ಕೇಳಿಸಿಕೊಳ್ಳೊ ಗಿಡಮರಗಳು ನಮ್ಮ ಮಾತುಗಳನ್ನ, ಹಾಡನ್ನ ಕೇಳ್ಸಿಕೊಳ್ಳತ್ವಾ?” ಎಂದು ಪ್ರಶ್ನೆ ಎಸೆದಳು. ಆಗ ಕಾವ್ಯ, “ಹೂಂ, ಅದೊಂದು ಅಚ್ಚರೀನೇ! ಯು.ಕೆ.ಯಲ್ಲಿರೋ ‘ರಾಯಲ್ ಹಾರ್ಟಿಕಲ್ಚರಲ್ ಸೊಸೈಟಿ’ಯಲ್ಲಿ ನಡೆದಿರೋ ಪ್ರಯೋಗದ ಪ್ರಕಾರ, ನಮ್ಮ ಮಾತಿನ ಶಬ್ದ ಹೊರಡಿಸೋ ಕಂಪನವನ್ನ ಕೂಡ ಮರಗಿಡಗಳು ಗುರುತಿಸತ್ವೆ. ಒಂದು ಗಿಡವನ್ನ ಕಂಪ್ಲೀಟ್ ನಿಶಬ್ದದಲ್ಲಿ, ಮತ್ತೊಂದು ಅಂತಹದ್ದೇ ಗಿಡವನ್ನ ಜನರ ಮಾತು ಕೇಳುವಲ್ಲಿ ಬೆಳೆಸಿ, ಈ ಪ್ರಯೋಗ ನಡೆಸಿದ್ರು. ಮನುಷ್ಯರ ಮಾತಿನ ಶಬ್ದದ ಫ್ರೀಕ್ವೆನ್ಸಿಗೆ, ಈ ಎರಡನೆಯ ಗಿಡ ರೆಸ್ಪಾಂಡ್ ಮಾಡ್ತಾ, ಬೇಗ ಬೆಳೀತಂತೆ.” ಎಂದಳು. ಆಗ ವಿಭಾ, “ಅದಕ್ಕೇ ಅಲ್ವಾ? ವಿನೋದೀ ಅತ್ತೆ ಗಿಡಗಳನ್ನ ಮುದ್ಸಿ, ಮಾತಾಡ್ಸೋದು? ಅದಕ್ಕೇ ಅವರ ಗಿಡ ಬೇಗ ಬೆಳ್ಯತ್ತೇನೋ!” ಎಂದಳು.

ಆಗ ಕಾವ್ಯ, “ಇರ್ಬಹುದೇನೋ ಅಲ್ವಾ ವಿಭಾ? ಗೊತ್ತಿಲ್ಲ! ಮತ್ತೂ ಕೆಲವು ಸಂಶೋಧನೆಗಳ ಮೂಲಕ ಸಿಕ್ಕಿರೋ ಸೂಚನೆಗಳನ್ನ ಗಮನಿಸಿದ್ರೆ, ಮಳೆಯ ಸದ್ದು, ಶಾಸ್ತ್ರೀಯ ಸಂಗೀತದಂತಹ ಶಾಂತವಾದ ಶಬ್ದತರಂಗಗಳು, ಮರಗಿಡಗಳಲ್ಲಿ ಬೆಳವಣಿಗೆಯನ್ನ ಹೆಚ್ಚಿಸತ್ವೆ. ಅದೇ, ಟ್ರಾಫಿಕ್ ಶಬ್ದ, ಜೋರು ಕಿರಿಕಿರಿಯಾಗೋಂತಹ ವಾದ್ಯದ ಸದ್ದು, ಸಸ್ಯಗಳಲ್ಲೂ ‘ಸ್ಟ್ರೆಸ್’ ಉಂಟುಮಾಡತ್ತೆ ಅಂತ” ಎಂದಳು.

ಕಾವ್ಯಳ ಮಾತನ್ನು ಕೇಳಿ ಆಶ್ಚರ್ಯ ಆಗುವುದರ ಜೊತೆಗೆ, ವಿಭಾಳಿಗೆ ನಗುವೂ ಬಂತು. “ಅಬ್ಬಾ, ಕಾವ್ಯಕ್ಕಾ, ಜೋರು ಶಬ್ದ ಕೇಳಿದ್ರೆ ತಲೆನೋವು, ‘ಸ್ಟ್ರೆಸ್ಸು’ ನಿನಗೆ ಮಾತ್ರ ಅಲ್ಲ ಹಾಗಾದ್ರೆ? ಗಿಡಮರಕ್ಕೂ ಆಗತ್ತಾ? ಸರಿ ಹೋಯ್ತು!” ಎಂದಳು ನಗುತ್ತಾ. ಇದಕ್ಕೆ ಕಾವ್ಯ “ಹೌದು ಮತ್ತೆ! ಆದ್ರೆ, ವೈಜ್ಞಾನಿಕವಾಗಿ ಇದಕ್ಕೆ ಇನ್ನೂ ಸಾಕಷ್ಟು ಪುರಾವೆ ಬೇಕಿದೆ. ಸುಮಾರು ೫೦-೬೦ ಡೆಸಿಬೆಲ್ ಇರೋ ಶಬ್ದ ತರಂಗಗಳು, ಅಂದ್ರೆ ಮೆಲುಮಾತು, ಶಾಂತವಾದ ಸಂಗೀತ ಅವಕ್ಕೆ ಹಿತವಾಗಿರತ್ತೆ. ಜೋರಾಗಿದ್ರೆ, ಅಂದ್ರೆ ೯೫-೧೦೦ ಡೆಸಿಬೆಲ್ ಇರೋ ಶಬ್ದ ತರಂಗಗಳನ್ನು ಗುರುತಿಸಿದ ಗಿಡಮರಗಳು, ‘ಸ್ಟ್ರೆಸ್ ಹಾರ್ಮೋನ್’ ಬಿಡುಗಡೆ ಮಾಡುತ್ವಂತೆ; ಅಲ್ಲಿ ಬೆಳವಣಿಗೇನೂ ಸ್ಲೋ ಆಗತ್ತೆ.” ಎಂದಳು. ಆಗ ವಿಭಾ ಮತ್ತೆ ನಗುತ್ತಾ, “ಹಾಗಿದ್ರೆ ಕಾವ್ಯಕ್ಕಾ, ನೀನು ಪಕ್ಕಾ ಮರಾನೇ! ಚೂರು ಜೋರು ಶಬ್ದ ಮಾಡಿದ್ರೆ, ಫುಲ್ ಸ್ಟ್ರೆಸ್ ಆಗ್ತ್ಯಾ!” ಅಂತ ಚಟಾಕಿ ಹಾರಿಸಿದಳು.

ಮೆಲ್ಲನೇ ಸೂರ್ಯೋದಯದ ಚೆಂದದ ಬಣ್ಣಗಳು ಆಗಸದಲ್ಲಿ ಮೂಡೋ ಕುರುಹು ಕಾಣಿಸುತ್ತಿತ್ತು. ಅದು, ಮನುಷ್ಯರಿಗಿಂತಲೂ, ಚುರುಕಾದ ಪ್ರಾಣಿಪಕ್ಷಿಗಳಿಗೆ ಮೊದಲೇ ಗೋಚರಿಸಿ, ಅವು ಬೆಳಗಿನ ಆಗಮನವನ್ನು ತಮ್ಮ ವಿಶಿಷ್ಟ ಶೈಲಿಯಲ್ಲಿ ಅನೌನ್ಸ್ ಮಾಡುತ್ತಿದ್ದವು. ಜೊತೆಗೇ ಅಕ್ಕ-ತಂಗಿಯರ ಮಾತು ಮುಂದುವರೆದಿತ್ತು.

ಆಗ ವಿಭಾ, “ಅಲ್ಲಕ್ಕಾ, ಮರಗಿಡಗಳು ಕೇಳಿಸಿಕೊಳ್ಳೋದು ಹೇಗೆ ಅಂತ ಒಂದು ಚೂರು ಅರ್ಥಾ ಆಯ್ತು. ಇದೇ ಒಂದು ಅಚ್ಚರಿ ಅಂದ್ರೆ, ಈ ಮೂಕಮರಗಳು ಮಾತು ಹೇಗಪ್ಪಾ ಆಡತ್ವೇ? ಅದು ಕೂಡ ತುಂಬಾ ಆಶ್ಚರ್ಯವೇ” ಎಂದಳು. ಆಗ ಕಾವ್ಯ, “ಹೂಂ, ಅದಕ್ಕೆ ನಮ್ ಮರಗಳ ‘ನೆಟ್ವರ್ಕ್’ ಬೇಕಪ್ಪಾ! ಹೌದೂ.. ಫಂಗಸ್ ಗೊತ್ತಲ್ವಾ ನಿಂಗೆ? ಎಂದು ಕೇಳಿದಳು. ಆಗ ವಿಭಾ, “ಹೂಂ, ಮಳೆ ಬಂದಾಗ ಒದ್ದೆ ಬಟ್ಟೆ ಮೇಲೋ, ಒದ್ದೆ ಗೋಡೆ ಮೇಲೋ ಕಪ್ಪು ಚುಕ್ಕಿಗಳು ಕಾಣಿಸತ್ತಲ್ವಾ? ಅದೇ ತಾನೆ ಫಂಗಸ್?” ಎಂದಳು.

ಇದಕ್ಕೆ ಉತ್ತರಿಸುತ್ತಾ “ಹೂಂ, ಅದೂ ಶಿಲೀಂಧ್ರ ಅಂದ್ರೆ ಫಂಗಸ್ಸೇ! ಎಲ್ರೂ ಚಪ್ಪರಿಸಿ ತಿನ್ನೋ ‘ಮಶ್ರೂಮ್’, ಬೇಕರಿಯಲ್ಲಿ ಬ್ರೆಡ್, ಬನ್ ಮಾಡಕ್ಕೆ ಬಳಸೋ ‘ಯೀಸ್ಟು’, ಈರುಳ್ಳಿಯನ್ನ ಸರ್ಯಾಗಿ ಒಣಜಾಗದಲ್ಲಿ ಇಡದೇ ಇದ್ದಾಗ ಅದರ ಸಿಪ್ಪೆ ಮೇಲೆ ಕಾಣಿಸೋ ಕಪ್ಪುಪುಡಿ – ಇವೆಲ್ಲಾ ಫಂಗಸ್ಸೇ. ಇಂತಹ ಸಾವಿರಾರು ಬಗೆಯ ಪುಟ್ಟ, ದೊಡ್ಡ ಶಿಲೀಂಧ್ರ ಅಥ್ವಾ ‘ಫಂಗಸ್’ಗಳಿವೆ.” ಎಂದು ಕಾವ್ಯ ವಿವರಿಸಿದಳು.

ಕಾವ್ಯ, ತನ್ನ ಮಾತನ್ನು ಮುಂದುವರೆಸುತ್ತಾ, “ಕೆಲವು ಬಗೆಯ ‘ಫಂಗಸ್’ಗಳು ಮರಗಳ ಬೇರುಗಳ ಜೊತೆ ಸೇರಿ, ಒಂದು ಜಾಲ ನಿರ್ಮಿಸುತ್ವೆ. ಇಲ್ಲಿ ಕೇವಲ ಒಂದು ಪ್ರಭೇದದ ‘ಫಂಗಸ್’ ಮತ್ತು ಒಂದು ಪ್ರಭೇದದ ಮರ ಮಾತ್ರ ಅಲ್ಲ. ಅನೇಕ ಮರಗಳ ನಡುವೆ ಕೂಡ ಸಂಪರ್ಕ ಸೇತುವೆಯ ಹಾಗೆ ಈ ಶಿಲೀಂಧ್ರಗಳು ಕೆಲ್ಸ ಮಾಡತ್ವೆ. ಈ ಮರಗಳ ಬೇರುಗಳು, ಜೊತೆಗೆ ಈ ಶಿಲೀಂಧ್ರದ ಎಳೆಗಳು ಸೇರಿ, ಅನೇಕ ‘ಕಿಲೋಮೀಟರ್’ಗಟ್ಲೇ ಜಾಲ ಸೃಷ್ಟಿಸಿಕೊಳ್ಳತ್ವೆ. ಓಹ್! ಆ ಜಾಲದ ಒಳಗೆ ಏನೇನೆಲ್ಲಾ ನಡ್ಯತ್ತೆ ಗೊತ್ತಾ? ಈ ‘ಅಂಡರ್ ವರ್ಲ್ಡ್’, ಅಲ್ಲಲ್ಲ, ‘ಅಂಡರ್ ಗ್ರೌಂಡ್’ ಕಥೆನಾ ಮತ್ತೊಮ್ಮೆ ಹೇಳ್ತೀನಿ ವಿಭಾ! ಬಾ ಈಗ ಬೆಳಗಾಯ್ತು. ಹಲ್ಲುಜ್ಜಿ ಬಾ, ಒಂದೊಳ್ಳೆ ಕಾಫಿ ಮಾಡಿಕೊಡ್ತೀನಿ. ಮಾತಾಡಿ ಮಾತಾಡಿ ಗಂಟ್ಲೇ ಒಣಗಿ ಹೋಯ್ತು” ಎಂದಳು ಕಾವ್ಯ.

ಇದನ್ನು ಕೇಳಿದ ವಿಭಾಗೆ, ‘ಅಯ್ಯೋ, ಮರಗಳು ಹೇಗೆ ಮಾತಾಡತ್ವೆ’ ಅಂತ ಇನ್ನೂ ಸಸ್ಪೆನ್ಸ್ ಆಗಿ ಉಳೀತಲ್ಲಾ ಅಂತ ಬೇಜಾರಾಯಿತು. ಆದರೆ, ‘ಸರಿ ಬಿಡು, ಆಮೇಲೆ ಮಾತಾಡಿದ್ರಾಯ್ತು, ಅಕ್ಕನ ಬೆಳಗಿನ ಸ್ಪೆಷಲ್ ಕಾಫಿ ಸಿಗತ್ತಲ್ಲಾ’ ಅಂತ ಯೋಚಿಸಿ ಖುಷಿಯಾಗಿ ಮೇಲೆದ್ದಳು. ‘ಕಾಫಿಯ ಘಮಕ್ಕೆ ಮನಸ್ಸು ಅರಳ್ತಾ ಇರೊ ಹಾಗೇ, ಆ ಘಮ, ಮರಗಿಡಗಳನ್ನೂ ತಲುಪುತ್ತಾ? ನಮ್ ಕಾಫಿಪ್ರಿಯರ ಮನೆಯ ಮರಗಳಿಗೂ, ಈ ಘಮ ಇಷ್ಟವೇನೋ?’ ಅಂತ ಯೋಚಿಸುತ್ತಾ, ಮನಸಲ್ಲೇ ನಗುತ್ತಾ, ಅಕ್ಕನ ಹಿಂದೆ ಹೊರಟಳು ವಿಭಾ. ಮನೆಯ ಬೆಕ್ಕು ‘ಮಲ್ಲಿ’ ಒಳಗೆ ಕಾಯುವ ಹಾಲಿನ ಘಮಕ್ಕೆ, ಮೂಗರಳಿಸಿ ಮಂದಹಾಸ ಬೀರುತ್ತಿತ್ತು!

(ಹಿಂದಿನ ಕಂತು: ಮರಗಳೂ ಮಾತಾಡುತ್ವೆ ಗೊತ್ತಾ!)

About The Author

ಕ್ಷಮಾ ವಿ. ಭಾನುಪ್ರಕಾಶ್

ಕ್ಷಮಾ ಸೂಕ್ಷ್ಮಾಣುಜೀವಿ ವಿಜ್ಞಾನದಲ್ಲಿ ಎಂ.ಎಸ್.ಸಿ ಪದವೀಧರೆ. ವಿಜ್ಞಾನ ಶಿಕ್ಷಕಿ. ವಿಜ್ಞಾನ ಲೇಖನಗಳ ಲೇಖಕಿ ಮತ್ತು ಅನುವಾದಕಿ. ರಿಸರ್ಚ್ ಮ್ಯಾಟರ್ಸ್ ನಲ್ಲಿ ವಿಜ್ಞಾನ ಲೇಖನಗಳ ಕನ್ನಡ ವಿಭಾಗದಲ್ಲಿ ಸಂಪಾದಕಿಯೂ ಆಗಿರುವ ಇವರು ಗಾಯಕಿಯೂ, ಕಂಠದಾನ ಕಲಾವಿದೆಯೂ ಹೌದು.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ