Advertisement
ಸಂತೆಬೆನ್ನೂರು ಫೈಜ್ನಟ್ರಾಜ್ ಬರೆದ ಈ ಭಾನುವಾರದ ಕತೆ “ಹರಿವ ಹೊಳೆಯ ಜೊತೆಯಲ್ಲಿ….”

ಸಂತೆಬೆನ್ನೂರು ಫೈಜ್ನಟ್ರಾಜ್ ಬರೆದ ಈ ಭಾನುವಾರದ ಕತೆ “ಹರಿವ ಹೊಳೆಯ ಜೊತೆಯಲ್ಲಿ….”

ಮೈಲಾರಿಗೆ ಗೆಳೆಯನ ಅಪಾರ್ಥಕ್ಕಿಂತ, ಕಣ್ಮುಂದಿನ ಸಾವಿಗಿಂತ ಹೆಂಡತಿ ಪ್ರತಿಭಟಿಸದೇ ದೂರ ನಿಂತಿದ್ದು ಜೀರ್ಣಿಸಿಕೊಳ್ಳಲಾಗಲಿಲ್ಲ. ಕೈ ಮುಗಿಯುವಂತೆ ಕಣ್ಣಲ್ಲಿ ನೀರು ತಂದು ನಾನೇನೂ ತಪ್ ಮಾಡಿಲ್ಲ ಅನ್ನುವಂತೆ ಆಚೀಚೆ ಕತ್ತು ಆಡಿಸುತ್ತಾ ಒದ್ದಾಡುತ್ತಿದ್ದ. ಕೈಯ ಬಿಗಿತ ಜೋರಾದಂತೆ ಮೈಲಾರಿ ಕಣ್ಣು ಮ್ಯಾಲೆ ಕೆಳಗೆ ಮಾಡ್ತಿದ್ದ. ಗಂಟಲಲ್ಲಿ ಸರ್ ಸರ್ ಅನ್ನೋ ಸದ್ದು ಬಂದು ಒಂದೇ ಸಾರಿ ಶಬ್ಧ ನಿಶಬ್ಧವಾಯಿತು. ಅವಳ ಕಣ್ಣಲ್ಲಿ ಭಯ ಇತ್ತು. ಮೈಲಾರಿ ಕತ್ತಲ್ಲಿ ಟವಲ್ ಹಂಗೇ ಇತ್ತು. ಬಾಗಿಲಿಗೆ ಅಡ್ಡವಾಗಿ ಅಂಗಾತ ಬಿದ್ದುಬಿಟ್ಟ ಮೈಲಾರಿ.
ಸಂತೆಬೆನ್ನೂರು ಫೈಜ್ನಟ್ರಾಜ್ ಬರೆದ ಈ ಭಾನುವಾರದ ಕತೆ “ಹರಿವ ಹೊಳೆಯ ಜೊತೆಯಲ್ಲಿ….” ನಿಮ್ಮ ಓದಿಗೆ

ಮೈಲಾರಿ ಹೆಣ ಅವನ ಹಟ್ಟೀಲೇ, ಅವನ ಮನೆ ಬಾಗಿಲಲ್ಲೇ ಬಿದ್ದಿತ್ತು.

ಅಕ್ಕಪಕ್ಕದ ಜನ ಬಂದು ನೋಡಿ ಸರಿದು ಹೋದರು.  ಹೆಣ ಎತ್ತಿ ಕಟ್ಟೆ ಮೇಲೋ, ಅಂಗಳದಾಗೋ ಹಿಡಿಲಿಲ್ಲ.

ಅನಾಥ ಹೆಣವಾದಂತಾಗಿತ್ತು. ಹೆಣ ನಿಜಕ್ಕೂ ಹೆಣವೇ ಆಗಿತ್ತು.

‘ಇದ್ದಾಗಿನ ಮರ‍್ವಾದೆ ಇಲ್ದಾಗ ಇಂಗೇಯ ಮತೆ, ಮನ್ಸ ಎಂಗ್ ಬಾಳಿದ್ರೇನ್ ಬಂತು ಸತ್ ಮ್ಯಾಕೆ ನಾಕ್ ಜನ ಸೇರದಿದ್ರೆ ಅದೆಂತ ಬಾಳ್ ತಗಿ’

ಅಂತ ಹಟ್ಟಿಯ ಮೂಲೇಲಿ ಕುಂತು ತಂಬಾಕು ಸಮೇತ ಬಾಯಿ ಕೆಂಪು ಮಾಡಿಕೊಂಡು ಪಂಚಾಯಿತಿಯವರು ಅರ್ದಂಬರ್ದ ಮಾಡಿ ಬಿಟ್ಟಿದ್ದ ಚರಂಡಿಯಲ್ಲಿ ಪಚ ಪಚ ಅಂತ ಉಗಿತಾ ತನ್ನಷ್ಟಕ್ಕೆ ತಾನೇ ಮಾತಾಡಿಕೊಳ್ತಿತ್ತು ಹಟ್ಟಿ ಹಿರಿಯಜ್ಜಿ.

ಮೈಲಾರಿ ಹೆಣ್ತಿ ಮಾತ್ರ  ನಡು ಮನೆ ಮೂಲೇಲಿ ಮಣಕಾಲ್ ಸಂದಿಲಿ ಗೋಣು ಹಾಕ್ಕಂಡು ಅಳ್ತಾ ಕೂತಿದ್ಲು.

ಗಂಡನ ಹೆಣದ ಹತ್ರ ಬರಲಿಲ್ಲ,  ಹೆಣ ಬಾಗಿಲಿಗೇ ಅಡ್ಡ ಬಿದ್ದಿತ್ತು!

ಮೈಲಾರಿಯ ಹೆಣ್ಣು ಕೂಸು ಒಲೆ ಮಗ್ಲಿಗೆ ಕಾವಿಗೆ ನಿಲ್ಸಿದ್ದ ಜೋಳದ ಕಡಕಲು ರೊಟ್ಟಿ ಹಿಡಕಂಡು ಕಡಿತಾ ಅತಿಂದಿತ್ತ ಇತ್ತಿಂದತ್ತ ಓಡಾಡ್ತಿತ್ತು. ಅಪ್ಪನ ಹೆಣದ ಅರಿವೇನೂ ಆ ಕೂಸಿಗಿದ್ದಂಗಿರಲಿಲ್ಲ. ಮನೆಯೊಳಗೆ ಮನೆ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ವು!

ಸಿಮೆಂಟು ಶೀಟಿನ ಮನೆ ಅದು.

ಹಿತ್ತಿಲ ಬಾಗಿಲಿಲ್ಲ ಒಂದು ಕಿಟಕಿ, ಒಂದು ಬಾಗಿಲು ಅಷ್ಟೆ. ಒಂದು ಮಂಚ ಇಡೋವಷ್ಟು ಅಂಗಳದಾಗ ಜಾಗ ಇತ್ತು. ಮೈಲಾರಿ ತನ್ನ ಚರ್ಮಕಾರ ಕುಟೀರದಿಂದ ಮನೆಗೆ ಬಂದ್ರೆ ಮೈ ಮೇಲೆ ಅಡರಿ ಮುದ್ದಿಸೋ ಅವನ ಮುದ್ದಿನ ಕರಿ ಬೆಕ್ಕು ಸೈತಾ ಈ ಕ್ಷಣಕ್ಕೂ  ಕಾಣ್ತಾ ಇಲ್ಲ!

‘ಹಡಸೀ ಮಕ್ಳ, ನಿಮಗ್ಯಾಕ್ರಲ ರಾಜಕೀಯ….. ಮುಕ್ಳಿ ಮುಚ್ಕೊಂಡು ಇರೋ ಕ್ಯಾಮೆ ಮಾಡ್ಕಳ್ರೋ, ಮೂರು ಬಿಟ್ಟ ಆ ಸೂಳೆ ಮಕ್ಳ ಸವಾಸ ನಿಮಗೆ ಬ್ಯಾಡ್ರಲೇ… ರಾಜಕೀಯದ ಎಡಬಲ ಗೊತ್ತಿಲ್ಲದೇ ಇರೋ ಕಳ್ ನನ್ಮಕ್ಳು ಇವತ್ತು ಬಿಳಿ ಅಂಗಿ, ಪಂಚೆ ಹಾಕ್ಕೊಂಡು ದೊಡ್ಡದಾಗಿ ರಾಜಕೀಯ ಹಡಿಸ್ತೀವಂತ, ಅಪ್ಪನ ಆಸ್ತಿ ಮೇಲೆ ದೌಲತ್ ಮಾಡಕ್ ಬರ್ತರಲೇ, ನೀವ್ಯಾಕ್ ಬಲಿಯಾಗ್ತೀರಿ? ಹೆಂಗೋ ನಮ್ಮವ್ವ  ಹಟ್ಟಿ ಮಾಸ್ತ್ಯವ್ವ ಕೊಟ್ಟ ಕುಲ ಕಸುಬೈತೆ, ಬೇವಿನ ಮರ ಕೆಳಗೆ ಕುಂತು ಮೆಟ್ಟು ಹೊಲಿತಿದ್ರಿ. ಈಗ ಅದೇ ನೆಳ್ಳಾಗೆ ಕುಟೀರದ ಪೆಟ್ಟಿಗೆ ಬಂದೈತೆ, ಕೈ ಚಪ್ಲಿಯಿಂದ ಶೋ ರೂಂ ಚಪ್ಲಿ ಮಾರಾಟ ಮಾಡೋ ತನಕ ಬೆಳಿದೀವಿ,  ಅದ್ನೇ ಮಾಡ್ರೋ ಈ ಸುಡುಗಾಡು ರಾಜಕೀಯ ಬ್ಯಾಡ್ರೋ…….’ ಅಂತ ಈ ಮೈಲಾರಿಗೆ ಭಾಳ ಭಾಳ ಗಿಣಿಗ್ ಹೇಳ್ದಂಗ್ ಹೇಳಿದ ಹಟ್ಟಿ ಹಿರಿತಲೆ ಉಚ್ಚೆಂಗಪ್ಪ.

‘ಅಲ್ಲ ಉಚ್ಚೆಂಗೆಣ್ಣ…… ಅಜ್ಜ, ಅಪ್ಪ ಇಬ್ರೂ ಈ ಅಣಬೇರು ಮನೆತನದವರ ಮನೇಲಿ ಜೀತ ಮಾಡಿಯೇ ಸತ್ರು. ಅವರ ವಂಶದ ಕೊನೆಯ ಕುಡಿ ಈ ಜಗದೀಶಪ್ಪ. ಅವನ ಮನೇಲಿ ನಾನೇನೂ ಜೀತಕ್ಕಿಲ್ಲಣ್ಣ, ನಾಕ್ನೇ ಕಿಲಾಸಿನ ತನಕ ಜತಿಗೇ ಓದಿದ್ವಿ. ಅವನು ಮುಂದೆ ಹೋದ, ನಂಗೆ ಈ ಹಾಳು ಹೊಟ್ಟೆ ಐತಲ್ಲ, ಮನೆ ತುಂಬಾ ಜನ ಇದ್ರಲ್ಲ….. ಹುಲಿ ಸೋಮಣ್ಣನತವ ಚಪ್ಲಿ ಹೊಲಿಯದ್ ಕಲ್ತೆ. ನಿಂಗೂ ಗೊತ್ತಲ್ಲ, ಸ್ವತಂತ್ರ ಪೂರ್ವದಾಗೆ ನಮ್ಮ ಈ ಸಂತೋಷಪುರ ರಸ್ತೆಲಿ ಎಡಕೆ ಬಲಕೆ ಬೇವಿನ ಸಸಿ ಹಾಕಿ ಬೆಳೆಸಿದ್ದು. ಅದರ ನೆಳ್ಳಾಗೆ ಸೈಕಲ್ ಷಾಪಿಗೊಂದು, ಕೋಳಿ ಕೊಯ್ಯೋರಿಗೊಂದು, ಚಪ್ಲಿ ಹೊಲಿಯೋರಿಗೊಂದು ಅಂತ ಮಂಡಲ ಪಂಚಾಯಿತಿಯವರು ಹಂಚಿ  1987 ರಿಂದ, ಗ್ರಾಮ ಪಂಚಾಯಿತಿ ಬರುವವರೆಗೂ ತಿಂಗಳಿಗೆ ಐವತ್ತೋ ಅರವತ್ತೋ ರುಪಾಯಿ ಬಾಡಿಗೆ ಇಸ್ಕಂತಿದ್ರು.

ಆ ಬೇವಿನ ಮರಗಳು ಎಷ್ಟೋ ಮನೆಗಳಿಗೆ ಮುದ್ದೆ ಕೊಡ್ತಿದ್ವು. ನಮ್ಮೂರ ವೆಂಕಟೇಶ್ವರ ಟಾಕೀಸಿನ ವಾಲ್ ಪೋಸ್ಟರ್‌ಗಳು ಮೆರಿತಾ ಇದ್ದದ್ದೇ ಈ ಬೇವಿನ ಮರದ ಕೊಂಬೆಗಳ ಮೇಲೆ. ಪ್ರತಿ ಗುರುವಾರದ ಸಂತೆ;  ಇಡೀ ತಾಲೂಕಿಗೇ ದೊಡ್ಡ ಸಂತೆ ಈ ಬೇವಿನ ಮರಗಳ ಸುತ್ತಾ ಜಮಾಯಿಸಿ ವಾರ ವಾರ ಜಾತ್ರೆ ಆದಂಗಾಗ್ತಿತ್ತು. ನಮ್ಮ ಶಂಕ್ರಣ್ಣ, ಶಂಕರ್ ನಾಗ್ ಸತ್ತಾಗ ಅದೇ ಟಾಕೀಸಲ್ಲಿ ‘ರಾಮರಾಜ್ಯದಲ್ಲಿ ರಾಕ್ಷಸರು’ ಸಿನಿಮಾ ಹದಿನೈದು ದಿನ ಓಡಿತ್ತು. ಆನಗೋಡಲ್ಲಿ ಈ ಅಣ್ಣಾ ಸತ್ತ ಅಂತ ಗೊತ್ತಾದ ಕೂಡಲೇ ಬೇವಿನ ಮರದ ಪೋಸ್ಟರ್ ತೆಗೆದು ಎತ್ತಿನ ಗಾಡಿಗಳಿಗೆ ಕಟ್ಟಿ, ಪೂಜೆ ಮಾಡಿ ಊರೆಲ್ಲಾ ಮೆರವಣಿಗೆ ಮಾಡಿದ್ದಕ್ಕೆ ಈ ಬೇವಿನ ಮರಗಳೇ ಸಾಕ್ಷಿ!

ಊರು, ಜನ ಬೆಳೆದು ಗ್ರಾಮ ಪಂಚಾಯಿತಿ ಬಂದು, ಬೀರೂರು ಸಮ್ಮಸಗಿ ರಸ್ತೆ ಊರೊಳಕ್ಕೆ ಹೊಸ ಮದ್ಲಿಂಗಿತ್ತಿಯಂಗ್ ಅಡ್ಡಾಗಿ ಬಂತು.  ಬೇವಿನ ಮರಗಳೆಲ್ಲಾ ಸತ್ಯಾನಾಶವಾಗಿ ಓದ್ವು. ಆ ಜಾಗದಲ್ಲಿ ಪೆಟ್ಟಿಗೆ ಅಂಗಡಿ ಕುಂತ್ವು. ಬಲ ಇದ್ದೋನು ಜಾಗ ಹುಡುಕಿ ಅಂಗ್ಡಿ ಹಾಕ್ಕಂಡ. ನಾ ಕಲ್ತಿದ್ದೇ ಚಪ್ಲಿ ಹೊಲಿಯದಲ್ವಾ? ನಂಗ್ ಜಾಗ ಹೆಂಗ್ ಸಿಕ್ಕೀತು? ಸಣ್ಣರಿದ್ದಾಗ ಜತಿಗ್ ಓದಿದ್ವಿ ಅನ್ನೋ ಮುಲಾಜಿಗೆ ನಂಗೂ ಮುದ್ದಿಗೋ, ರೊಟ್ಟಿಗೋ ದಾರಿಯಾಗಂಗ್ ಜಾಗ ಮಾಡಿಕೊಟ್ಟಿದ್ದೇ ಅಣಬೇರು ಮನೆತನದ ನಮ್ಮ ಜಗದೀಶಪ್ಪ!

ಜಗದೀಶಪ್ಪ ಬಾಳ ವರ್ಷದ ಗೆಳೆಯ. ಊರಿಗೇನಾರ ಒಳ್ಳೆದ್ ಮಾಡನ ಅಂತ ಗ್ರಾಮ ಪಂಚಾಯಿತಿ ಎಲೆಕ್ಸನ್ನಿಗೆ ನಿಲ್ತೀನಿ ಜತಿಗಿರು ಅಂದ. ನಂಗ್ ಬದ್ಕಕೆ ದಾರಿ ತೋರಿಸಿದೋನಿಗೆ ಸಪೋಲ್ಟು ಮಾಡದಿದ್ರೆ ಎಂಗ್ ಹೇಳಣ್ಣ… ’ ಅಂದ ಮೈಲಾರಿ ಮಾತಿಗೆ ಅಂಡಡಿಗೆ ಹಾಕ್ಕಂಡ್ ಕುಂತಿದ್ದ ತನ್ನ ಟವಲ್ ಜೋರಾಗಿ ಕೊಡವಿ

‘ಥೂ ನಿಮ್ಮ ಜನ್ಮಕ್ಕೆ, ಈಗ ಗೊತ್ತಾಗಲ್ಲ, ಮುಂದಕ್ ಹೋದ ಹೋದಂಗ್ ಗೊತ್ತಾಗುತ್ತೆ. ನಮ್ ಜನ ಜೀತ ಮಾಡಿ ಜೀವ ಕಳ್ಕಂಡ್ರು. ಉಣ್ಣಕ್ಕೆ ಉಡಕ್ಕೆ, ಮಾರಿಹಬ್ಬಕ್ಕೆ  ಕೈ ಒಡ್ತಾ ಮನೆ ಬಾಗ್ಲು ನಾಯಿತರ ಕಾಯ್ಲಿ ಅಂತ ಸಂಬ್ಳಕ್ಕಿಕ್ಕಂಡು ಆಳ್ತಿದ್ರು. ಈಗ ಈ ಮಿಂಡ್ರಿಗುಟ್ಟಿದ  ರಾಜಕೀಯ ಅದರ ಮುಂದುವರೆದ ಭಾಗ ಕಣ್ರೋ, ಅಲ್ರಲೆ ಅವನ್ಯಾವನು ನಮ್ ಜಾತೀಲಿ ಮುಖ್ಯಮಂತ್ರಿ ಆಗೌನೆ? ನಮ್ ದೇಶನ, ನಮ್ಮ ರಾಜ್ಯನ ನಮ್ಮೋನು ಯಾವನ್ ಆಳಿದನಪ್ಪ  ಹೇಳ್ರಲೆ ನೋಡನ?  ಹೋಗ್ಲಿ ಓದ್ದೋನು ಆಪೀಸರ್ ಆಗಿದನಲ್ಲಾ , ಒಬ್ನಾದ್ರು ತಮ್ಮ ಜಾತಿಯವರನ್ನ ಮ್ಯಾಲೆತ್ತಿದ್ದಾನ? ಎಂತದ್ದೂ ಇಲ್ಲ. ನಾವು ಮುಕ್ಳಿ ಬಗ್ಸಿ ದುಡಿದ್ರೆ ಮುದ್ದೆ ಕಾಣ್ತೀವಿ ಇಲ್ಲಾಂದ್ರೆ ಹೊಟ್ಟಿಗೆ ತಣ್ಣೀರ ಬಟ್ಟೆ ತಾನೇ? ಬ್ಯಾಡ್ರಪ… ಸೋಮಾರಿತನ, ಬ್ಯಾಡ್ರಪ ಜೀತ  ರಟ್ಟೆ ಮುರಿದು ದುಡೀರಪ್ಪ, ಓದ್ರಪ್ಪ, ಎಲ್ರ ಸಮಕ್ಕೆ ನಿಲ್ರಪ್ಪ  ಅಂತ ಶತಮಾನಗಳಿಂದ  ದೊಡ್ಡೋರು   ಬಡಕಂಡ್ರೂ ನಾವು ನಾಕು ದಿನ ಶೋಕಿಲಿ ಸಾಯ್ತಿದ್ದೀವಿ.

ನಾವು ಸತ್ರೆ ಮ್ಯಾಗಳಟ್ಯಾರು ಒಂದು ಹಾರನೂ ತರಲ್ಲ ತಿಳ್ಕ…

ಇಷ್ಟು ಹೇಳಿನಿ ಇದರ ಮೇಲೆ  ತಿಕ ಹೊಡಿಸ್ಕಳ್ರಿ…..

ಅನ್ನುತ್ತಾ ಬಿರಬಿರನೆ ಹೋದ.

ಹಟ್ಟೀಲೇ ಜಾಸ್ತಿ ಓದಿ,  ಪಂಚಾಯಿತಿ ಎದುರಿಗೆ ಜೆರಾಕ್ಸ್ ಅಂಗ್ಡಿ ಇಟ್ಕಂಡು ಅರ್ಜಿ ಬರ್ಕೊಡದು, ಮಾಸಾಶನ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಅಂಗವಿಕಲರ ವೇತನ ಮಾಡಿಸಿ,  ಕೊಟ್ಟಷ್ಟು ಇಸ್ಕಂಡು ಓದೋ ಮಕ್ಳಿಗೆ ಬೆನ್ತಾಟ್ತಾ ಇರೋ ಉಚ್ಚೆಂಗಪ್ಪ ಅಂದ್ರೆ ಊರಲ್ಲಿ ಕೆಲವರಿಗೆ ಅಭಿಮಾನ. ಅದರಲ್ಲೂ ನಮ್ಮಟ್ಟಿಯ ಜಾಣ ಅಂತ ಮೈಲಾರಿಗೂ ಬಲು ಪ್ರೀತಿ.

ಮಧ್ಯರಾತ್ರಿ ಸತ್ತಿದ್ದೋ ಏನೋ ಹೆಣ ಬಾಗಿಲಲ್ಲೇ ಶಟಗೊಂಡು ಹೆಂಗೋ ಬಿದ್ದಿತ್ತು.

ಸತ್ತ ಮೈಲಾರಿ ಕೊಳ್ಳಾಗ ಬಂಗಾರದ ಜರಿಯಿರೋ ಅಪ್ಪಟ ಬಿಳಿ ತೆಳು ಟವಲ್ ಅತ್ತಿಂದಿತ್ತ ಇಳೆ ಬಿದ್ದಿತ್ತು. ಹಟ್ಟಿ ಜನರ ಮನಸಂತೂ ಬೆಂಕಿಗೆ ಬಿದ್ದ ಹಲಸಿನ ಬೀಜದಂತಾಗಿತ್ತು. ಸುದ್ದಿ ಕೇಳಿದ ಕೂಡಲೇ ಅಂಗಡಿ ಬಾಗ್ಲು ತೆಗಿದೇ ಮನೆ ಹತ್ರ ಓಡಿಬಂದ ಉಚ್ಚೆಂಗಪ್ಪ. ಬಂದವನೇ ಹೆಣದ ಕೊರಳ ಟವಲನ್ನೇ ನೋಡಿದ್ದ.

ಮನೆ ಮುಂದೆ, ಬೀದಿ ಆಜೂ ಬಾಜು, ಬೀದಿಯ ಕೊನೆಯ ತಿರುವಲ್ಲಿ  ಚುನಾವಣಾ ಬ್ಯಾರ‍್ರು, ಕಟೌಟುಗಳು, ಬಣ್ಣದ ಪೇರ‍್ರುಗಳು ಗಾಳಿಗೆ ತೂರಾಡ್ತಿದ್ದವು! ಆಚೆ ಬೀದಿಲ್ಲಿ ನಿಲ್ಲಿಸಿದ್ದ ಜಗದೀಶಪ್ಪನ ಹತ್ತಡಿ ಕಟೌಟು ಮೈಲಾರಪ್ಪನ ಮನೆ ಬಾಗಿಲಿಗೂ ಕಾಣ್ತಿತ್ತು!

ಹನ್ನೆರಡು ದಿನದ ಹಿಂದೆ ಗ್ರಾಮ ಪಂಚಾಯಿತಿ ಚುನಾವಣೆ ಮುಗಿದಿತ್ತು. ನಿನ್ನೆ ಅದರ ಫಲಿತಾಂಶ. ಜಗದೀಶಪ್ಪ ಅರವತ್ತ ಮೂರು ಓಟುಗಳಿಂದ ಸೋತಿದ್ದ.

ಫಲಿತಾಂಶದ ಮರುದಿನ ಮೈಲಾರಿ ಹೆಣ ಅವನ ಮನೆ ಬಾಗಿಲೊಳಕ್ಕೇ ಬಿದ್ದಿತ್ತು.

‘ನೀವು ಬಾಲ್ಯದ ಗೆಳೆಯರಿರಬೌದಲೇ, ಚಪ್ಲಿ ಹೊಲಿಯೋ ಮಾದ್ರ ಹಟ್ಟಿಗೆ ನೀನ್ಯಾಕಲೆ ಹೋಗ್ತಿಯ? ಅವ್ರು ನಮ್ಮ ಮನೆ ಬಾಗ್ಲಗ್  ಬಿದ್ದಿರಬೇಕು; ಆ ಹಟ್ಟಿ ಕಡೆ ಎಡಗಾಲ ಮೆಟ್ಟೂ ಬಿಡಬಾರದಲೇ’

ಅಂತ ಜಗದೀಶಪ್ಪನ ಅಪ್ಪ ಅಣಬೇರು ಪೂಜಾರ ನೀಲಕಂಠಪ್ಪ ಆವಾಗಾವಗ ಗುಡುಗುತ್ತಿದ್ದ. ಅಪ್ಪನ ಮಾತು ಮುಕುಳಿಗೆ ಒರೆಸಿಕೊಂಡು ಸುಮ್ನಾಗುತ್ತಿದ್ದ.

ಕೊರೋನಾ ಬಂದು ಮೊದಲ ಅಲೆಯಲ್ಲಿ ಅಪ್ಪ, ಎರಡನೆಯದರಲ್ಲಿ ಅಮ್ಮ ಹೋದಮೇಲೆ ಒಬ್ನೆ ಮಗ ಈ ಜಗದೀಶಪ್ಪ ಮನೆ ಜವಾಬುದಾರಿಯ ಹೊಣೆ ಹೊತ್ತು ಡಿಗ್ರಿ ಮುಗಿಸಿದ್ದರೂ ಊರು ಬಿಡದೇ ಹತ್ತಾರು ಎಕರೆ ಅಡಕೆ, ತೆಂಗು ಬಾಳೆ ತೋಟ, ಗದ್ದೆಗಳ ಸಾಮ್ರಾಜ್ಯಗಳಲ್ಲಿ, ಮೂರ್ನಾಕು ಆಳು ಕಾಳು ಇಟ್ಟುಕೊಂಡು ಪಸಂದಾಗಿದ್ದ.

ತಿಂಗಳಿಗೋ ಎರಡು ತಿಂಗಳಿಗೋ ಅಡಕೆ ಮಂಡಿಗಂತ ದಾವಣಗೆರೆಗೆ ಹೋಗುವಾಗೆಲ್ಲಾ ಮೈಲಾರಿನ ಎತ್ತಾಕ್ಕಂಡು ಹೋಗೋನು. ವ್ಯವಾರ ಮುಗ್ಸಿ ಸೀದಾ ಚೇತನ ಹೋಟೆಲ್ ಪಕ್ಕದ ಅಶ್ವಮೇಧ ಬಾರಿಗೆ ನುಗ್ಗಿ ಒಂದಿಷ್ಟು ದ್ರವ ಒಬ್ಬನೇ ಹಾಕ್ಕಂಡು ಅಲ್ಲಿಂದ ಭರಣಿ ಮಿಲ್ಟ್ರಿ ಹೋಟೆಲ್ಲಿಗೆ ಬಂದು ಕುಂತ್ರು ಅಂದ್ರೆ ಮಾಂಸದ ಅಡ್ಡೆಯೇ ಟೇಬಲ್ ಮೇಲೆ ರಾರಾಜಿಸೋದು. ಮೈಲಾರಿ ಕುಡಿತಾನೂ ಇರಲಿಲ್ಲ, ಜಗದೀಶಪ್ಪ ಒತ್ತಾಯನೂ ಮಾಡ್ತಿರಲಿಲ್ಲ.

ಖುಷ್ಕ, ಕೈಮ ಉಂಡೆ, ನಲ್ಲಿ ಮೂಳೆ, ಮಟನ್ ಮಸಾಲ, ಚಿಕನ್ ಮಸಾಲ ತರಿಸಿಕೊಂಡು ಹೊಡೆದು ಕೆಡವಿಬಿಡೋರು.

ಮುದ್ದೆ ಜಗದೀಶಪ್ಪನ ಆರ್ಡರಾದರೆ ಮೂರೊತ್ತು ಮನೇಲಿ ಮುದ್ದೆ ಅಂತ ಬಿಳಿ ಚಪಾತಿ, ಪರೋಟ ಆಸೆಗೆ ಬಿದ್ದು ಮೈಲಾರಿ ಅದನ್ನೆ  ತರಿಸಿ ಜಡಿದು ಅಳಿದುಳಿದ ಶರ‍್ವ  ನೀರಿನಂತೆ ಕುಡಿದು ಜಗದೀಶಪ್ಪನೆಡೆ ಕೃತಜ್ಞತೆಯ ನಗೆ ಬೀರುವನು.

ಹೀಗೆ ಹೋಗಿ ಬಂದು,  ಹೋಗಿ ಬಂದು ಇದ್ದ ಸಲಿಗೆ ಜಾಸ್ತಿಯಾಗಿ ಜಗದೀಶಪ್ಪ ಹಟ್ಟಿಗೇ ಬಂದು ಮೈಲಾರಿ ಮನೆ ಕಟ್ಟೆಲಿ ಝಾಂಡಹೂಡಿಬಿಡ್ತಿದ್ದ. ದುಡ್ಡು ಕೊಟ್ಟು, ಕೋಳಿ ಅದೂ ಸಾಬರ ಸಿದ್ದಿಕ್ ಅಂಗ್ಡಿಯ ಹಲಾಲು ಕೋಳಿನೇ ತರಿಸಿ ಮೈಲಾರಿಯ ಹೆಂಡ್ತಿ ಕೈಲಿ ಅಡಿಗೆ ಮಾಡಿಸಿ ಕಟ್ಟೆ ಮೇಲೆ ಉಣ್ಣನು. ಎಣ್ಣೆ ಏಟು ಜಾಸ್ತಿಯಾಯಿತೋ ಅಲ್ಲೆ ಕಟ್ಟೆ ಮೇಲೆ ಮಲಗಿ ‘ಅಲ್ಲಾ’ ಕೂಗೋ ಹೊತ್ತಿಗೆ ಬಿಳಿ ಟವಲಲ್ಲಿ ಮುಖ ಮುಚ್ಚಿ ಮನೆ ಕಡೆ ಹೋಗೋನು.. ವಾರಕ್ ಒಂದು ದಪಾ, ಎರಡು ದಪಾ ಇದು ನಡಿತಾನೇ ಇತ್ತು.

ಬೆಳಗಿನ ಬಿಸಿಲು ಮೈಲಾರಿ ಹೆಣದ ಮೇಲೆ ಬೀಳಲಾರಂಭಿಸಿತ್ತು.

ಹಟ್ಟಿ ಬಾಗಿಲ ಹಿರಿಯ ತಲೆಗಳು ತಡವಾಗಿಯಾದರೂ ಕೊನೆಗೂ  ಬಂದು  ಹೆಣ ಹೊಸ್ತಿಲಿನಿಂದ ಎತ್ತಿ ಹೊರಗೆ ಕಟ್ಟೆ ಮೇಲೆ ಹಿಡಿದು ಕಾಲು ಮಡಚಿ ಚಕ್ಕಂಬಕ್ಕಳ ಹಾಕಿ ಮಲಗಿಸಿದರು. ಯಾರೋ ಒಂದು ಹಾರ ಹಾಕಿದರು. ಒಳಗಿಂದ ಹೆಂಡತಿ ತೂರಾಡುವಂತೆ ಬಂದು ಗಂಡನ ತಲೆಗೆ ತಲೆ ಕೂಡಿಸಿ ಸೆರಗು ಹೊದ್ದು ಗುಂಗಿ ಹುಳ ಗುಂಯ್ ಗುಡುವಂತೆ ಊ… ಅಂತ ಅಳಲಾರಂಭಿಸಿದಳು.

ಮಗು ಅವ್ವನ ಮಡಿಲಲ್ಲಿ ಬಂದು ಉಲ್ಡಾಡುತ್ತಿತ್ತು. ಹಟ್ಟಿ ಎದುರು ನೇತಾಡುತ್ತಿದ್ದ ಚುನಾವಣೆಯ ಬ್ಯಾನರ್ , ಗಳ, ಹಗ್ಗ ಕಿತ್ತುಕೊಂಡು ಬಂದು ಯಾರ್ಯಾರೋ ಕೆಲ ಹುಡುಗ್ರು ಈಗ, ಅದೂ ಮುದುಕರು ಬಂದ ನಂತರ ಚಟ್ಟ ಕಟ್ಟಲು ತಯಾರಾದರು.

ಭರಣಿ ಹೋಟ್ಲಲ್ಲಿ ಕೂತಾಗಲೇ ಒಮ್ಮೆ ಜಗದೀಶಪ್ಪ ಹೇಳಿದ್ದು ‘ನಾ ಎಲೆಕ್ಸನ್ ನಿಲ್ಲಬೇಕಂತ ಇದೀನಲೇ ಮೈಲಾರಿ, ಹೆಂಗೆ ನೀ ಹೇಳು’ ಅಂದ. ‘ನಿಲ್ಲೋ ಮಾರಾಯ, ನಿಮ್ಮಂತೋರೇ  ಬೇಕಾಗಿರೋದೀಗ, ನೀನಲ್ದೆ ಇನ್ಯಾರು ನಿಲ್ಲಕಾಯ್ತದೆ?’

‘ನಮ್ ವಾರ್ಡಿನಾಗೆ ನಿಮ್ಮವೇ ಓಟು ಜಾಸ್ತಿ ಇರದು. ನನ್ನ ವಿರುದ್ಧ ನಮ್ಮವರು ಯಾರು ನಿಲ್ಲಲ್ಲ ಆದರೆ ನಿಮ್ಮಟ್ಟಿ ಮೊಟ್ಟೆ ಅಂಜಿನಪ್ಪನ ಮಗ ನಂಜುಂಡ ನಿಲ್ತನಂತೆ , ನಿನ್ನ ಸೋದರತ್ತೆ ಮಗ ಬೇರೆ ಅವನು… ಓಟು ಹಂಚಿಹೋಗಿ ನಾನೂ ಇಲ್ಲ ಅವನೂ ಇಲ್ಲ ಅಂತ ಆಗಿ,  ನಡ್ಲನು ಯಾವನಾರೆ ಬಂದ್ರೆ ಎಡವಟ್ಟಾಗುತ್ತಲ್ಲಾ ಅಂತ ಚಿಂತೆ ಕಣೋ’

ಮೈಲಾರಿ ನಲ್ಲಿ ಮೂಳೆ ಕಲ್ಲಿನ ಟೇಬಲ್ಲಿಗೆ ಕುಕ್ತಾ ಒಳಗಿನ ಪಪ್ಪು ಸೀಪ್ತಾ ‘ಬಿಡು ಗೆಳೆಯ ಅವನಿಗೆ ಮನಿಗ್ ಕರೆದು ನಾ ಹೇಳ್ತಿನಿ ನಿಲ್ಲಬೇಡ ನಮ್ಮ ಸಾವುಕರ‍್ರು ನಿಲ್ತರಂತ’ ಅಂದ.

‘ಅಯ್ಯೋ ದಡ್ಡ, ಅದನ್ನು ನಾನಾಗಲೇ ಮಾಡಿಯಾಯಿತು, ಹಣ ತೋರಿಸಿದೆ, ಮತ್ತೇನೇನೋ ಹೇಳಿದರೂ ಅದ್ಯಾರದೋ ಕುಮ್ಮಕ್ಕಿನಿಂದ ಒಂದು ರುಪಾಯಿ ರೊಕ್ಕ ಇಲ್ದಿದ್ರು ಹಾರಾಡ್ತಿದ್ದಾನೆ, ಅದೇನು ಮಾಡ್ತಿಯೋ ಗೊತ್ತಿಲ್ಲ ಅವನಿಗೆ ಕಂಟ್ರೋಲ್ ಮಾಡಿ ನಿಮ್ಮ ಜನರ ಎಲ್ಲಾ ಓಟು ನನ್ಕಡಿಕೆ ತಿರಗಂಗ್ ಮಾಡಿದ್ರಾತು, ನಿನ್ನ ಕೆಲಸ ಆದಂಗೆ ’ ಅಂದಾಗ

‘ಅಷ್ಟೇ ತಾನೇ ಅದರ ಜಬ್ಬಾದಾರಿ ನಂಗ್ ಬಿಡು’ ಅಂದಿದ್ದ!

ಚುನಾವಣಾ ಕಾವು ಬಲು ಜೋರಾಗಿ ಏರಿತ್ತು. ಪ್ರಾಮಾಣಿಕವಾಗಿ ಮೈಲಾರಿ ಹಟ್ಟಿಯ ಮನೆ ಮನೆಗೂ ಹಗಲು ಇರುಳು ಅನ್ನದೇ ತಲೆ ತಲೆಗೂ ‘ನಮ್ ಜಗದೀಶಪ್ಪಗೆ ಓಟೊತ್ರಿ ಒಳ್ಳೆಯದಾಯ್ತದೆ’ ಅಂತ ಗೋಗರೆದು ಕೆಲವರಿಗೆ ಕಾಲ್ ಕಾಲಿಗೇ ಬೀಳನು!

ನಂಜುಂಡ ಮನೆಗೆ ಬಂದು ‘ನಮ್ ಜನ ಆಗಿ, ಅಳಿಯ ಆಗಿ ಹಿಂಗೆ ಬ್ಯಾರೆ ಜಾತ್ಯಾರಿಗೆ ಸಪೋಲ್ಟು ಮಾಡೋದು ನ್ಯಾಯವಾ’ ಆಂತ ಮೈಲಾರಿತವ ಜಗಳಕ್ ಬಿದ್ದಿದ್ದ.

‘ನಮ್ ನಿಮ್ಮಂತರಿಗಲ್ಲ ಕಣೋ ನಂಜುಡ ಎಲೆಕ್ಸನ್ನು… ದುಡ್ಡಿದ್ದೋರ ದುನಿಯಾ ಇದು, ನೀ ಗೆಲ್ಲದ್ ಕಷ್ಟ, ಸುಮ್ನೆ ನಮ್ಮ ಜಗದೀಶಪ್ಪಂಗೆ ಜೈ ಅನ್ನು ಏನಾರ ಮುಂದೆ ಕೆಲಸ ಕಾರ್ಯ ಆಗ್ತವೆ’ ಅನ್ನೋ ಮಾತಿಗೆ ಸಿಟ್ಟಾಗಿ ‘ಅಳಿಯ, ನಾವೂ ಒಂದು ಕೈ ನೋಡನ ಅಂತ ನಿಂತಿರೋದು ನಮ್ಮಟ್ಟಿನ ಯಾವನೋ ಯಾಕ್ ಉದ್ದಾರ ಮಾಡ್ಬಕು? ಗೆದ್ರೆ ನಾವ್ ನಾವೇ ಪಸಂದಾಗಿ  ಉದ್ದಾರ ಮಾಡಬೌದು, ನಂದಿರಲಿ ನೀ ನಿನ್ ಉದ್ದಾರ ನೋಡ್ಕ, ಸಂಸಾರದಾಗೆ ಗೆಲ್ಲದ್ ನೋಡ್ಕʼ ಅಂತ ಮೈಲಾರಿ ಹೆಂಡ್ತಿ ಕಡೆ ವ್ಯಂಗ್ಯವಾಗಿ ನೋಡ್ತಾ ಹೋದ.

ಮೈಲಾರಿ ತನ್ನ ಹೆಂಡ್ತಿ ಕಡೆಗೂ, ನಂಜುಂಡನ ಕಡೆಗೂ ನೋಡಿದ….. ಅವನಿಗೆ ಏನೂ ಅರ್ಥ ಆಗಲಿಲ್ಲ; ಅವಳು ಹೊಸ ಫೋನಲ್ಲಿ  ಏನೋ ನೋಡುತ್ತಿದ್ದಳು.

ಸಂತೋಷಪುರದ ಪಕ್ಕದಲ್ಲಿ ನಾಲ್ಕು ಕಿ.ಮೀ ದೂರದ ಮೆದಿಕೆರೆ ಕ್ಯಾಂಪಿಗೆ ಮೈಲಾರಿ ತಂಗಿನ ಕೊಟ್ಟಿತ್ತು. ಯಾರದೋ ಬೈಕೇರಿ ಬಂದವಳೇ ಅಣ್ಣನ ಹೆಣದ ಮೇಲೆ ಬಿದ್ದು ಗೋಳಾಡುತ್ತಾ

‘ನಮ್ ಜಗದೀಶಪ್ಪ ಗೆಲ್ತಾನೆ, ನಾನು ಅವನ ಬಲಗೈ ಆಗಿರ್ತಿನಿ,

ನಮಗೂ ಒಳ್ಳೆ ಟೈಂ ಬರ್ತದೆ ಅಂತ ಬಂದ ಬಂದಾಗೆಲ್ಲಾ ಹೇಳ್ತಿದ್ಯಲ್ಲಣ್ಣ. . .’

ಅಂತ ಅನ್ನುತ್ತಾ ಆ ಕೂಸನ್ನು ಎಳೆದು ಮಡಿಲಿಗೆಳೆದುಕೊಂಡರೂ ಅದು ಕೊಸರಿ ಮತ್ತೆ ಅವ್ವನ ತೊಡೆ ಏರಿ ಹೋಗ್ತಿತ್ತು.

ಮೈಲಾರಿ ಹೆಂಡ್ತಿ ಹತ್ತಿರ ಹೋಗಿ ಕೂತು ಅವಳ ಬೆನ್ನಿಗೆ ಕೈ ಹಾಕಿ

‘ಅತ್ತಿಗೆಮ್ಮ ಇದೇನಾತವ್ವಾ… ಗಂಡ ಹೆಂಡ್ತಿ ಮಾಂಸದ ಸಾರು ಮುದ್ದೆ ಇದ್ದಂಗಿದ್ರಿ ಏನಾಗಿತ್ತವ್ವ ಅಣ್ಣಂಗೆ’ ಅಂತ ದುಃಖಿಸಿ ಅತ್ತಳು.

ಮೈಲಾರಿ ಹೆಂಡತಿ ತಗ್ಗಿಸಿದ ತಲೆ ಎತ್ತದೇ ನಿನ್ನೆ ರಾತ್ರಿಯಲ್ಲಿ ಆದದ್ದನ್ನೇ ಬಾಯಲ್ಲಿ ಉಸಿರಾಡದೇ ಕಣ್ಣೆದುರು ತಂದುಕೊಂಡಳು.

ಫಲಿತಾಂಶದ ದಿನ. ಗಂಡ ತಾಲೂಕಾಪಿಸಿಂದ  ಕತ್ತಲಾದ ಮೇಲೆ ಬಂದ. ಬಂದವನೇ ಹೆಂಡ್ತಿನಪ್ಪಿ ಅತ್ತ.

‘ಜಗದೀಶಪ್ಪ ಸೋತ ಕಣೇ, ನಮ್ಮಟ್ಟಿ ದರಿದ್ರ ನನ್ನ ಮಕ್ಳು ತಿಂದು, ಕುಡಿದು, ದುಡ್ಡೂ ಇಸ್ಕಂಡು, ಮೋಸ ಮಾಡಿದ್ರು ಕಣೇ, ನಂಜುಂಡನೂ  ಗೆದ್ದಿಲ್ಲ.

ಜಗದೀಶಪ್ಪ  ‘ನಾ ಗೆಲ್ಲದಿದ್ರೂ ಪರವಾಯಿಲ್ಲ ಆದರೆ ನನಗಿಂತ ನಂಜುಂಡಗೆ ಜಾಸ್ತಿ ಓಟು ನಿಮ್ಮ ಹಟ್ಟಿಯಿಂದ ಬಿದ್ದಿವೆ, ನೀ ನನ್ನ ಕುತ್ತಿಗೆ ಕೊಯ್ದಿದ್ದೀಯ, ನೀನೇ ನನ್ ಬೀದಿಗ್ ತಂದಿದ್ದು ಅಂತ ಅನುಮಾನ ಪಟ್ಟು ಕೆಟ್ಟ ಕೊಳಕ ಮಾತಾಡಿ ಹೊಡಿಯಕ್ಕೆ ಬಂದಿದ್ದ. ಉಚ್ಚೆಂಗಪ್ಪ ಬಿಡಿಸಿ ಕಳಿಸಿದ’ ಅಂತ ಭೋರಿಟ್ಟು ಮತ್ತೆ ಮತ್ತೆ ಅತ್ತ.

‘ಬಿಡಿ, ಜಗದೀಶಪ್ಪ ಬಂದ್ರೆ ನಾ ಹೇಳ್ತೀನಿ, ಸಮಾಧಾನ ಮಾಡ್ಕಳಿ’ ಅಂತ ಮುದ್ದೆ ಈರುಳ್ಳಿ ಟಮಟೆ ಗೊಜ್ಜಿಟ್ಟು ಕೊಟ್ಟು ಮಲಗಿಸಿದಳು. ಮಾರನೇ ದಿನಪೂರಾ ಮೈಲಾರಿ ಮನೆಯಿಂದ ಹೊರ ಹೋಗದೇ ಉಳಿದ. ವಾರಕ್ಕೊಮ್ಮೆನಾದರೂ ಮನೆಕಡೆ ಬಂದು ಉಂಡು ಹೋಗ್ತಿದ್ದ ಜಗದೀಶಪ್ಪ ಚುನಾವಣೆ ಶುರುವಾದಾಗಿನಿಂದ ಹಟ್ಟಿಕಡೆ ಬಂದಿಲ್ಲ ಅಂತ ಲೆಕ್ಕ ಹಾಕುತ್ತಿದ್ದಳು ಮೈಲಾರಿ ಹೆಂಡತಿ. ಗಂಡ ಇಲ್ಲದಾಗಲೂ ರಾತ್ರೋ ರಾತ್ರಿ ಬಂದು ಹೋಗೋದನ್ನು ಹಟ್ಟಿಜನ ನೋಡಿದ್ರು; ಆ ನಡುವೆಯೇ ಹೊಸ  ಫೋನು ಬಂದಿದ್ದು.

ಫಲಿತಾಂಶದ ಮಾರನೇ ದಿನ ರಾತ್ರಿ ಹತ್ತು ಗಂಟೆ ದಾಟಿತ್ತು. ಜಗದೀಶಪ್ಪ ಬಂದು ಬಾಗಿಲು ಬಡಿದ. ಮೈಲಾರಿಗೆ ಜಂಪು ಹತ್ತೋದ್ರಲ್ಲಿತ್ತು. ಹೆಂಡ್ತಿ ಬಂದು ಬಾಗಿಲು ತೆಗೆದಳು. ಮಗು ಮಲಗಿತ್ತು. ಗಬಕ್ಕನೆ ಅವುಚಿ ಅವಳನ್ನು ಹಿಡಿದಿದ್ದನ್ನು ಮೈಲಾರಿ ಹೆಂಗೋ ನೋಡಿಬಿಟ್ಟ. ‘ಜಗದೀಶಪ್ಪ ಏನಿದು… ಅಂತ ಚಾಪೆ ಬಿಟ್ಟು ಎದ್ದು ಬರುವಷ್ಟರಲ್ಲಿ ತನ್ನ ಕೊಳ್ಳಾಗಿದ್ದ ಟವಲ್ ಅವನ ಕತ್ತಿಗೆ ಹಾಕಿದವನೇ ಬಿಗ್ಗಿಯಾಗಿ ಎಳೆಯತೊಡಗಿದ.

‘ಬೇವಾರ್ಸಿ ಸೂಳೆ ಮಗನೆ, ಜತಿಗ್ ಓದ್ದೋನಂತ ಸಪೋರ್ಟ್‌ ಕೇಳಿದ್ರೆ ಮಾದ್ರೆಲ್ಲಾ ಸೇರಿ ನಂಗೆ ಸೋಲಿಸಿದ್ರಾ.. ನನ್ನ ದುಡ್ ತಿಂದು ಬೆನ್ನಿಗೆ ಚೂರಿ ಹಾಕಿದ್ರಾ’

ಅನ್ನುತ್ತಾ ಎರಡೂ ಕೈ ಬಿಗಿತ ಮತ್ತಷ್ಟು ಬಿಗಿ ಮಾಡುತ್ತಾ ಕಣ್ಣು ಕೆಂಪು ಮಾಡಿದ್ದ… ಸಾಕಿದ ಕರಿಬೆಕ್ಕು ಮೈಲಾರಿಯ ಒದ್ದಾಟಕ್ಕೆ ಒಮ್ಮೆ ಜಗದೀಶಪ್ಪನ ಮೇಲೆರಗಿತು. ಟವಲ್ ಎಳೆಯುತ್ತಲೇ ಬಲಗಾಲಿಂದ ಝಾಡಿಸಿ ಒದ್ದ ರಭಸಕ್ಕೆ ಬೆಕ್ಕು ಮೂರು ಪಲ್ಟಿಯಾಗಿ ಒಂದು ಕ್ಷಣ ಮಂಕಾಗಿ ಕಿಟಕಿಯಿಂದ ಓಡಿಬಿಟ್ಟಿತು!

ಮೈಲಾರಿಗೆ ಗೆಳೆಯನ ಅಪಾರ್ಥಕ್ಕಿಂತ, ಕಣ್ಮುಂದಿನ ಸಾವಿಗಿಂತ ಹೆಂಡತಿ ಪ್ರತಿಭಟಿಸದೇ ದೂರ ನಿಂತಿದ್ದು ಜೀರ್ಣಿಸಿಕೊಳ್ಳಲಾಗಲಿಲ್ಲ. ಕೈ ಮುಗಿಯುವಂತೆ ಕಣ್ಣಲ್ಲಿ ನೀರು ತಂದು ನಾನೇನೂ ತಪ್ ಮಾಡಿಲ್ಲ ಅನ್ನುವಂತೆ ಆಚೀಚೆ ಕತ್ತು ಆಡಿಸುತ್ತಾ ಒದ್ದಾಡುತ್ತಿದ್ದ.

ಕೈಯ ಬಿಗಿತ ಜೋರಾದಂತೆ ಮೈಲಾರಿ ಕಣ್ಣು ಮ್ಯಾಲೆ ಕೆಳಗೆ ಮಾಡ್ತಿದ್ದ. ಗಂಟಲಲ್ಲಿ ಸರ್ ಸರ್ ಅನ್ನೋ ಸದ್ದು ಬಂದು ಒಂದೇ ಸಾರಿ ಶಬ್ಧ ನಿಶಬ್ಧವಾಯಿತು. ಅವಳ ಕಣ್ಣಲ್ಲಿ ಭಯ ಇತ್ತು. ಮೈಲಾರಿ ಕತ್ತಲ್ಲಿ ಟವಲ್ ಹಂಗೇ ಇತ್ತು. ಬಾಗಿಲಿಗೆ ಅಡ್ಡವಾಗಿ ಅಂಗಾತ ಬಿದ್ದುಬಿಟ್ಟ ಮೈಲಾರಿ.

ಜಗದೀಶಪ್ಪ ಎಂದಿನಂತೆ ಅವಳನ್ನು ನೆಲದ ಮೇಲೆ ಕೆಡವಿ ಮೈಲಾರಿಯ ಸಿಟ್ಟನ್ನೆಲ್ಲಾ ಅವಳೊಳಗಿಳಿಸಿ ಕದ ತೆಗೆದು ಪಂಚೆಯಿಂದ ಬೆವರೊರೆಸಿಕೊಂಡು ಹೆಣ ದಾಟಿಯೇ ಹೋಗಿದ್ದ.

ಮೈಲಾರಿಯ ಹೆಂಡತಿ ಮುಖ ಎತ್ತದೇ ಗಂಡನ ಎದೆ ಮೇಲೆ ಕೈ ಹಾಕಿ ಅಳುತ್ತಲೇ ಇದ್ದಳು.  ಉಚ್ಚೆಂಗಪ್ಪ, ನಂಜುಂಡ ಹಟ್ಟಿ ಹುಡುಗರನ್ನು ಕೂಡಿಸಿಕೊಂಡು ಹೆಣ ಎತ್ತಿದರು. ಅತ್ತಿಗೆ ನಾದಿನಿ ಕೇರಿ ಅದರುವಂತೆ ಅತ್ತರು.

ಸಂಜೆಯ ಸೂರ್ಯ ಕೆಂಪಾಗಿ ಮರೆಯಾಗುತ್ತಿದ್ದ. ಇಡೀ ಹಟ್ಟಿ ಮೈಲಾರಿಯ ಸಾವಿನ ಸೂತಕದಲ್ಲಿ ಮಂಕಾಗಿತ್ತು …

About The Author

ಸಂತೆಬೆನ್ನೂರು ಫೈಜ್ನಟ್ರಾಜ್

ಸಂತೆಬೆನ್ನೂರು ಫೈಜ್ನಟ್ರಾಜ್ ದಾವಣಗೆರೆ ಜಿಲ್ಲೆ ಚನ್ನಗಿರಿಯ ಸಂತೆಬೆನ್ನೂರಿನವರು. ವೃತ್ತಿಯಿಂದ ಪ್ರೌಢಶಾಲಾ ಶಿಕ್ಷಕರು. ಎದೆಯೊಳಗಣ ತಲ್ಲಣ, ಬುದ್ಧನಾಗ ಹೊರಟು, ಮತ್ತೆ ಮತ್ತೆ ಹೇಗೆ ಹಾಡಲಿ, (ಕವನ ಸಂಕಲನ), ಮಂತ್ರದಂಡ, ಸ್ನೇಹದ ಕಡಲಲ್ಲ, ನದಿಯೊಂದು ಕಡಲ ಹುಡುಕುತ್ತಾ (ಕತೆಗಳು), ಮಗಳಿಗೆ ಹೇಳಿದ ಕಥೆಗಳು, ಮಡಿಲ ಕೂಸಿಗೆ ಮಣ್ಣಿನ ಸೆರಗು (ಕವನ ಸಂಕಲನ)  ಇವರ ಪ್ರಕಟಿತ ಕೃತಿಗಳು.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ