Advertisement
`ಕನ್ನಡದಲ್ಲಿ ಬರೆಯುವ ಮರಾಠಿ ಲೇಖಕ’:  ಎಸ್.ಎಲ್.‌ ಭೈರಪ್ಪ ಓದುಗರ ಸ್ಪಂದನ ಕೃತಿಯ ಬರಹ

`ಕನ್ನಡದಲ್ಲಿ ಬರೆಯುವ ಮರಾಠಿ ಲೇಖಕ’: ಎಸ್.ಎಲ್.‌ ಭೈರಪ್ಪ ಓದುಗರ ಸ್ಪಂದನ ಕೃತಿಯ ಬರಹ

ಒಬ್ಬ ಲೇಖಕನ ಬರೆಹದಲ್ಲಿ ಮುರಿಯುವ ದಾಂಪತ್ಯವನ್ನು ಮತ್ತೆ ಬೆಸೆಯುವ ಶಕ್ತಿ ಇರುವುದನ್ನು ಕಂಡು ನಾನು ವಿಸ್ಮಿತನಾದೆ. ಮೈಸೂರಿನಲ್ಲಿರುವ ನನ್ನ ಪತ್ರಕರ್ತ ಗೆಳೆಯ ಗಣೇಶ ಅಮೀನಗಡ ಅವರಿಗೆ ಫೋನ್ ಮಾಡಿ ವಿಷಯ ವಿವರಿಸಿದೆ. ಅವರು ಭೈರಪ್ಪನವರನ್ನು ಕಂಡು ವಿಷಯ ತಿಳಿಸುವುದಾಗಿ ಹೇಳಿದರು. ನಂತರ ಉದ್ಯಮಿ, ಅವರ ಮಗಳು ಮತ್ತು ತಾಯಿ ಮೈಸೂರಿಗೆ ಹೋಗಿ ಭೈರಪ್ಪನವರನ್ನು ಭೇಟಿಯಾದರು. ಐದಾರು ತಿಂಗಳುಗಳ ನಂತರ ಉದ್ಯಮಿ ಯಾವುದೋ ಒಂದು ಕಾರ್ಯಕ್ರಮದಲ್ಲಿ ನನಗೆ ಭೇಟಿಯಾದರು. ಮಗಳ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿದೆಯೆಂದು ಅವರು ಹೇಳಿದರು. ಭೈರಪ್ಪನವರ ಮಾಂತ್ರಿಕ ಬರೆಹದ ಶಕ್ತಿಯ ಬಗ್ಗೆ ನನಗೆ ನಿಜವಾಗಿಯೂ ಅಚ್ಚರಿಯಾಯಿತು.
ಕೆ. ಸತ್ಯನಾರಾಯಣ ಸಂಪಾದಿತ “ಎಸ್.ಎಲ್.‌ ಭೈರಪ್ಪ ಓದು-ಓದುಗರು” ಕೃತಿಯ ಡಾ. ಸರಜೂ ಕಾಟ್ಕರ್ ಬರಹ ನಿಮ್ಮ ಓದಿಗೆ

ಡಾ. ಎಸ್. ಎಲ್. ಭೈರಪ್ಪನವರು ಮರಾಠಿ ಓದುಗರಿಗೆ ಮಾಡಿದ ಮೋಡಿ ವಿಸ್ಮಯಕಾರಿಯಾದುದು. ಮರಾಠಿ ಓದುಗ ಲೋಕ ಅವರನ್ನು ಮರಾಠಿ ಲೇಖಕರೆಂದೇ ಗುರುತಿಸುತ್ತಿತ್ತು. ಅವರು ತೀರಿಕೊಂಡಾಗ ಮರಾಠಿಯ ಜನಪ್ರಿಯ ಪತ್ರಿಕೆ `ಲೋಕಸತ್ತಾ’ವು `ಕನ್ನಡದಲ್ಲಿ ಬರೆಯುವ ಮರಾಠಿ ಲೇಖಕ’ ಎಂದು ತಲೆಬರಹ ನೀಡಿ ಸಂಪಾದಕೀಯವನ್ನು ಬರೆದಿತ್ತು.

ಡಾ. ಭೈರಪ್ಪನವರ ಅನೇಕ ಕಾದಂಬರಿಗಳನ್ನು ಮರಾಠಿ ಭಾಷೆಗೆ ಅನುವಾದ ಮಾಡಿದವರು ಬೆಳಗಾವಿ ಜಿಲ್ಲೆಯ ಬೆಡಕಿಹಾಳ ಗ್ರಾಮದ ಉಮಾ ಕುಲಕರ್ಣಿಯವರು. ಉಮಾ ಹಾಗೂ ಅವರ ಪತಿ ವಿರೂಪಾಕ್ಷ ಕುಲಕರ್ಣಿ ಪುಣೆಯಲ್ಲಿ ವಾಸಕ್ಕಿದ್ದವರು. ಉಮಾ ಅವರ ಮನೆಮಾತು ಕನ್ನಡವಾಗಿದ್ದರೂ ಅವರು ಶಿಕ್ಷಣ ಪಡೆದದ್ದು ಮರಾಠಿಯಲ್ಲಿ. ಕನ್ನಡದ ಹೆಸರಾಂತ ಲೇಖಕರಾದ ಭೈರಪ್ಪ, ಕಾರಂತ, ಪೂರ್ಣಚಂದ್ರ ತೇಜಸ್ವಿ ಮುಂತಾದವರ ಕನ್ನಡದ ಕಾದಂಬರಿಗಳನ್ನು ಮರಾಠಿಗೆ ಅನುವಾದ ಮಾಡಿದ ಉಮಾ ಅವರಿಗೆ ಕನ್ನಡ ಓದಲು, ಬರೆಯಲು ಬರುವುದಿಲ್ಲವೆಂದರೆ ನೀವು ಅದನ್ನು ನಂಬಲೇಬೇಕು. ಕನ್ನಡವು ಮನೆಮಾತಾಗಿರುವುದರಿಂದ ಅವರು ಕನ್ನಡವನ್ನು ಸರಾಗವಾಗಿ ಮಾತನಾಡಬಲ್ಲರು ಅಥವಾ ಬೇರೆಯವರು ಮಾತಾಡಿದ್ದನ್ನು ಅರ್ಥಮಾಡಿಕೊಳ್ಳಬಲ್ಲರು; ಆದರೆ ಕನ್ನಡ ಅಕ್ಷರಗಳನ್ನು ಅವರಿಗೆ ಓದಲಾಗುತ್ತಿರಲಿಲ್ಲ. ವಿರೂಪಾಕ್ಷ ಕುಲಕರ್ಣಿಯವರು ಮುಂಜಾನೆ ಕೆಲಸಕ್ಕೆ ಹೋಗುವಾಗ ಕನ್ನಡ ಕಾದಂಬರಿಯ ಐದಾರು ಪುಟಗಳನ್ನು ಓದಿ ಅದನ್ನು ಟೇಪ್ ಮಾಡುತ್ತಿದ್ದರು. ಉಮಾ ಅವರು ಆ ಟೇಪ್‌ನ್ನು ನುಡಿಸುತ್ತ ಕನ್ನಡದ ಪುಟಗಳನ್ನು ಮರಾಠಿಗೆ ಅನುವಾದಿಸುತ್ತಿದ್ದರು. ಹೀಗೆ ಬರೆದ ಪುಟಗಳೇ ಮುಂದೆ ಮರಾಠಿ ಅನುವಾದಿತ ಕಾದಂಬರಿಗಳಾಗಿ ಅವರಿಗೆ ಅನುವಾದ ಕ್ಷೇತ್ರದಲ್ಲಿ ದೊಡ್ಡ ಹೆಸರನ್ನು ತಂದವು. ಮಹಾರಾಷ್ಟ್ರದ ಅತ್ಯುಚ್ಚ ಸರ್ಕಾರಿ ಪ್ರಶಸ್ತಿಯಾಗಿರುವ `ಮಹಾರಾಷ್ಟ್ರ ಭೂಷಣ’ಕ್ಕೆ ಅವರು ಅನುವಾದ ಕ್ಷೇತ್ರದಿಂದ ಭಾಜನರಾಗಿದ್ದಾರೆ. ನಾನು

ನನ್ನ ಪತ್ರಿಕೆಯಾದ Indian Expressಗಾಗಿ ಅವರ ಸಂದರ್ಶನ ಮಾಡಿ ` A Tape recorder Translator’ ಎಂದೇ ಸಂದರ್ಶನಕ್ಕೆ ತಲೆಬರಹ ನೀಡಿದ್ದೆ.

ಎಸ್. ಎಲ್. ಭೈರಪ್ಪ: ಓದು – ಓದುಗರು

ಉಮಾ ಕುಲಕರ್ಣಿಯವರು ಡಾ. ಎಸ್. ಎಲ್. ಭೈರಪ್ಪನವರ ಕಾದಂಬರಿಗಳನ್ನು ಮರಾಠಿಗೆ ಭಾಷಾಂತರಿಸಿದಾಗ ಮರಾಠಿ ಓದುಗವರ್ಗವು ಮೂಲ ಲೇಖಕರಾದ ಭೈರಪ್ಪನವರನ್ನೂ, ಅನುವಾದಕಿ ಉಮಾ ಅವರನ್ನು ಎತ್ತಿ ಹಿಡಿಯಿತು. ಕಾದಂಬರಿಗಳ ಪ್ರತಿಗಳು ಸಟಾ ಸಟಾ ಎಂದು ಮಾರಾಟವಾದವು. ಒಂದು ಸಂದರ್ಭದಲ್ಲಿ ಡಾ. ಎಸ್. ಎಲ್. ಭೈರಪ್ಪನವರು ನನಗೆ ನೀಡಿದ ಒಂದು ಸಂದರ್ಶನದಲ್ಲಿ `ನಾನು ಕನ್ನಡದಲ್ಲಿ ಬರೆದ ಕಾದಂಬರಿಗಳ ಸಾವಿರ ಪ್ರತಿಗಳು ಮಾರಾಟವಾಗಲು ಮೂರು ವರ್ಷಗಳು ಬೇಕು. ಆದರೆ ಅದೇ ಕಾದಂಬರಿಯ ಮರಾಠಿ ಅನುವಾದದ ಮೂರು ಸಾವಿರ ಪ್ರತಿಗಳು ಒಂದೇ ವರ್ಷದಲ್ಲಿ ಮಾರಾಟವಾಗುತ್ತವೆ’ ಎಂದು ಹೇಳಿದ್ದರು.

(ಡಾ. ಸರಜೂ ಕಾಟ್ಕರ್)

ಮರಾಠಿ ಓದುಗವರ್ಗ ನನಗೆ ಅಪರಿಚಿತವೇನೂ ಅಲ್ಲ. ಎಂಟ್ಹತ್ತು ವರ್ಷಗಳ ಹಿಂದೆ ನಾನು ಮರಾಠಿಯ ಹತ್ತಾರು ಓದುಗರನ್ನು, ಲೇಖಕರನ್ನು ಹಾಗೂ ಪ್ರಕಾಶಕರನ್ನು ಸಂದರ್ಶಿಸಿ ಭೈರಪ್ಪನವರ ಸಾಹಿತ್ಯದ ಬಗ್ಗೆ ಒಂದು ಲೇಖನವನ್ನು Indian Expressಗೆ ಬರೆದಿದ್ದೆ. ಅವರೆಲ್ಲರ ಅಭಿಪ್ರಾಯ ಒಂದೇ ತೆರನಾಗಿತ್ತು. `ಭೈರಪ್ಪನವರು ಮನಕ್ಕೆ ಹತ್ತಿರವಿರುವ ವಿಷಯಗಳ ಬಗ್ಗೆ ಬರೆಯುತ್ತಾರೆ’ ಅಥವಾ `ಭೈರಪ್ಪನವರು ನಮ್ಮ ಮನೆಯ ಕಥೆಯನ್ನೇ ಬರೆಯುತ್ತಾರೆ’ ಅಥವಾ `ಭೈರಪ್ಪನವರು ಬರೆದದ್ದನ್ನು ನಾನು ಈ ಹಿಂದೆ ನನ್ನ ಜೀವನದಲ್ಲಿ ಅನುಭವಿಸಿದ್ದೇನೆ. ನನ್ನ ಜೀವನದ ರಹಸ್ಯವು ಅವರಿಗೆ ಹೇಗೆ ಗೊತ್ತಾಯಿತೋ ಎಂದು ನನಗೆ ಅಚ್ಚರಿಯಾಗುತ್ತದೆ’ – ಹೀಗೆ ಓದುಗರು ಅಭಿಪ್ರಾಯಪಟ್ಟಿದ್ದಾರೆ. ಹಲವು ಲೇಖಕರು `ಭೈರಪ್ಪನವರ ಬರವಣಿಗೆಯಲ್ಲಿ ಕಾಲ್ಪನಿಕತೆ ಇಲ್ಲ. ಅವರು ವಾಸ್ತವತೆಯನ್ನು ಬರೆಯುವುದರಿಂದ ಓದುಗರಿಗೆ ಹತ್ತಿರವಾಗಿದ್ದಾರೆ’ ಎಂದು ಹೇಳಿದ್ದರು.

ಬೆಳಗಾವಿಯ ಒಬ್ಬ ಪರಿಚಿತ ಮರಾಠಿ ಉದ್ಯಮಿ ಫೋನ್ ಮಾಡಿ ನನಗೆ ಭೇಟಿಯಾಗಲು ನನ್ನ ಕಚೇರಿಗೆ ಬಂದಿದ್ದರು. ಅವರ ಮಗಳಿಗೆ ಪುಣೆಯ ಒಬ್ಬ ಇಂಜಿನಿಯರ್ ಜೊತೆಗೆ ಮದುವೆಯಾಗಿತ್ತು. ಆದರೆ ಗಂಡ ಹೆಂಡತಿಯಲ್ಲಿ ಸಾಮರಸ್ಯದ ಕೊರತೆಯಿಂದಾಗಿ ದಾಂಪತ್ಯದಲ್ಲಿ ಸಮಸ್ಯೆ ಉದ್ಭವವಾಗಿತ್ತು. ನನ್ನ ಪರಿಚಿತ ಉದ್ಯಮಿ ಮುಂಬೈಯಲ್ಲಿದ್ದ ತನ್ನ ಅಣ್ಣನಿಗೆ ಈ ಸಮಸ್ಯೆಯ ಬಗ್ಗೆ ಹೇಳಿದ್ದರಂತೆ. ಅವರು ಎಸ್. ಎಲ್. ಭೈರಪ್ಪನವರ ಕಾದಂಬರಿಯಲ್ಲಿ ನಿನ್ನ ಮಗಳ ಸಮಸ್ಯೆಗೆ ಉತ್ತರ ಇದೆಯೆಂದು ಇವರಿಗೆ ಹೇಳಿದ್ದರಂತೆ. ಭೈರಪ್ಪ ಕನ್ನಡದ ಲೇಖಕರಾಗಿರುವುದರಿಂದ ಅವರನ್ನು ಭೇಟಿಯಾಗಬೇಕೆಂದೂ ಅವರ ವಿಳಾಸ ಬೇಕೆಂದೂ ಈ ಉದ್ಯಮಿ ನನ್ನ ಕಡೆಗೆ ಬಂದಿದ್ದರು. ಒಬ್ಬ ಲೇಖಕನ ಬರೆಹದಲ್ಲಿ ಮುರಿಯುವ ದಾಂಪತ್ಯವನ್ನು ಮತ್ತೆ ಬೆಸೆಯುವ ಶಕ್ತಿ ಇರುವುದನ್ನು ಕಂಡು ನಾನು ವಿಸ್ಮಿತನಾದೆ. ಮೈಸೂರಿನಲ್ಲಿರುವ ನನ್ನ ಪತ್ರಕರ್ತ ಗೆಳೆಯ ಗಣೇಶ ಅಮೀನಗಡ ಅವರಿಗೆ ಫೋನ್ ಮಾಡಿ ವಿಷಯ ವಿವರಿಸಿದೆ. ಅವರು ಭೈರಪ್ಪನವರನ್ನು ಕಂಡು ವಿಷಯ ತಿಳಿಸುವುದಾಗಿ ಹೇಳಿದರು. ನಂತರ ಉದ್ಯಮಿ, ಅವರ ಮಗಳು ಮತ್ತು ತಾಯಿ ಮೈಸೂರಿಗೆ ಹೋಗಿ ಭೈರಪ್ಪನವರನ್ನು ಭೇಟಿಯಾದರು. ಐದಾರು ತಿಂಗಳುಗಳ ನಂತರ ಉದ್ಯಮಿ ಯಾವುದೋ ಒಂದು ಕಾರ್ಯಕ್ರಮದಲ್ಲಿ ನನಗೆ ಭೇಟಿಯಾದರು. ಮಗಳ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿದೆಯೆಂದು ಅವರು ಹೇಳಿದರು. ಭೈರಪ್ಪನವರ ಮಾಂತ್ರಿಕ ಬರೆಹದ ಶಕ್ತಿಯ ಬಗ್ಗೆ ನನಗೆ ನಿಜವಾಗಿಯೂ ಅಚ್ಚರಿಯಾಯಿತು.

ಬೆಳಗಾವಿಯಲ್ಲಿರುವ ಡಾ. ಬೆಟಗೇರಿ ಕೃಷ್ಣಶರ್ಮ ಪ್ರತಿಷ್ಠಾನವು ಭೈರಪ್ಪನವರಿಗೆ `ಡಾ. ಬೆಟಗೇರಿ ಕೃಷ್ಣಶರ್ಮ ಕಾದಂಬರಿ ಪ್ರಶಸ್ತಿ’ಯನ್ನು ನೀಡುವ ಕಾರ್ಯಕ್ರಮವಿತ್ತು. ನಾನು ಈ ಪ್ರತಿಷ್ಠಾನದ ಸದಸ್ಯನಾಗಿರುವುದರಿಂದ ಭೈರಪ್ಪನವರ ಬೆಳಗಾವಿಗೆ ಆಗಮನದಿಂದ ಹಿಡಿದು ನಿರ್ಗಮನದವರೆಗಿನ ಇಲ್ಲಿಯ ವಾಸ್ತವ್ಯದ ಜವಾಬ್ದಾರಿ ನನ್ನ ಮೇಲಿತ್ತು. ನನಗೆ ಆತ್ಮೀಯರಾಗಿರುವ ಎಂ. ಕೆ. ಪಬ್ಲಿಸಿಟಿಯ ಮಾಲೀಕರಾದ ಶ್ರೀ ಎಂ. ಕೆ. ಜೈನಾಪುರ ಅವರ ಮನೆಯಲ್ಲಿ ಭೈರಪ್ಪನವರ ವಾಸ್ತವ್ಯದ ವ್ಯವಸ್ಥೆಯನ್ನು ಮಾಡಿದೆ. ಕಾರ್ಯಕ್ರಮದ ಎರಡನೆಯ ದಿನ ಭೈರಪ್ಪನವರು ಬೆಳಗಾವಿಯ ಶ್ರೀ ಗುರುದೇವ ರಾನಡೆ ಮಂದಿರದಲ್ಲಿ ಉಪನ್ಯಾಸವನ್ನು ನೀಡುವವರಿದ್ದರು. ನಾವು ಶ್ರೀ ಗುರುದೇವ ರಾನಡೆ ಮಂದಿರಕ್ಕೆ ಹೊರಡುತ್ತಿದ್ದಂತೆಯೇ ಭೈರಪ್ಪನವರ ಮರಾಠಿ ಅನುವಾದ ಕಾದಂಬರಿಗಳನ್ನು ಪ್ರಕಟಿಸುವ ಮಹಾರಾಷ್ಟ್ರದ ಸುಪ್ರಸಿದ್ಧ ಪ್ರಕಾಶಕರಾದ ಶ್ರೀ ಅನೀಲ ಮೆಹತಾ ಅವರ ಫೋನ್ ಬಂದಿತು. ಅನೀಲ ಮೆಹತಾ ಅವರ ಬೃಹತ್ತಾದ ಒಂದು ಬುಕ್ ಶಾಪ್ ಬೆಳಗಾವಿಯಲ್ಲಿದೆ. ಅಲ್ಲಿ ಅವರು ಭೈರಪ್ಪನವರ ಕಾದಂಬರಿಗಳಿಗಾಗಿಯೇ ಒಂದು `ದಾಲನ್’(ಹಾಲ್)ನ್ನು ಸೃಷ್ಟಿಸಿದ್ದಾರೆ. ಈ ದಾಲನ್‌ದಲ್ಲಿ ಅವರು ಪ್ರಕಟಿಸಿದ ಭೈರಪ್ಪನವರ ಕಾದಂಬರಿಗಳು, ಹಲವಾರು ಫೋಟೋಗಳು, ಭೈರಪ್ಪನವರ ಬಗ್ಗೆ ಬಂದ ಮರಾಠಿ ವಿಮರ್ಶೆ ಮುಂತಾದವುಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಬೆಳಗಾವಿಯ ತಮ್ಮ ಈ ಬುಕ್ ಶಾಪ್‌ಗೆ ಹಾಗೂ ದಾಲನ್‌ಕ್ಕೆ ಭೈರಪ್ಪನವರು ಭೇಟಿ ನೀಡಬೇಕೆಂದು ಮೆಹತಾರವರ ಆಸೆಯಾಗಿತ್ತು. ಬೆಳಗಾವಿಯಲ್ಲಿರುವ ಮರಾಠಿಯ ಹಲವಾರು ಲೇಖಕರು ಮತ್ತು ಭೈರಪ್ಪನವರ ಸಾಹಿತ್ಯವನ್ನು ಓದಿದ ಹಲವು ಓದುಗರು ಅಲ್ಲಿ ನೆರೆದಿದ್ದರು. ಆದರೆ ಭೈರಪ್ಪನವರು ಮೆಹತಾರವರ ಕೋರಿಕೆಯನ್ನು ಮನ್ನಿಸಲಿಲ್ಲ. `ಬೆಳಗಾವಿಯ ಎಲ್ಲ ಕಾರ್ಯಕ್ರಮಗಳನ್ನು ಬೆಟಗೇರಿ ಕೃಷ್ಣಶರ್ಮ ಪ್ರತಿಷ್ಠಾನವು ಆಯೋಜಿಸಿದ್ದು, ನಿಮ್ಮ ಈ ಕಾರ್ಯಕ್ರಮವು ಆ ಯಾದಿಯಲ್ಲಿ ಇರದೇ ಇರುವುದರಿಂದ ನಿಮ್ಮ ಕೋರಿಕೆಯನ್ನು ನಾನು ಸ್ವೀಕರಿಸಲಾರೆ’ ಎಂದು ಹೇಳಿದರು. ಮೆಹತಾರವರು ಅವರಿಗೆ ಮತ್ತೆ ಮತ್ತೆ ವಿನಂತಿ ಮಾಡಿಕೊಂಡರೂ ಭೈರಪ್ಪನವರು ತಮ್ಮ ಅಭಿಪ್ರಾಯವನ್ನು ಬದಲಿಸಲಿಲ್ಲ.

ಕಾರ್ಯಕ್ರಮವನ್ನು ಆಯೋಜಿಸುವ ಆಯೋಜಕರ ಬಗೆಗಿನ ಅವರ ಗೌರವವನ್ನು ಕಂಡು ಅಚ್ಚರಿಯಾಯಿತು. ಭೈರಪ್ಪನವರ ನಿಧನದ ನಂತರ ಮರಾಠಿಯ ಅನೇಕ ಪತ್ರಿಕೆಗಳು ಅವರ ಬಗ್ಗೆ ವಿಶೇಷಾಂಕಗಳನ್ನು ಪ್ರಕಟಿಸಿದ್ದರು. ಅವರ ಸಾವಿನ ನಂತರ ಬಂದ ರವಿವಾರದ ಎಲ್ಲ ಸಾಪ್ತಾಹಿಕ ಪುಟಗಳು ಭೈರಪ್ಪಮಯವಾಗಿದ್ದವು.

(ಕೃತಿ: ಎಸ್.ಎಲ್.‌ ಭೈರಪ್ಪ ಓದು-ಓದುಗರು, ಸಂಪಾದಕರು: ಕೆ. ಸತ್ಯನಾರಾಯಣ, ಪ್ರಕಾಶಕರು: ಅಮೂಲ್ಯ ಪುಸ್ತಕ)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ