ಆ ಮುಸ್ಲಿಂ ಹೆಂಗಸು ಬಹಳ ಒಳ್ಳೆಯವರಾಗಿದ್ದರು. ಹೆಣ್ಣು ಮಕ್ಕಳೊಂದಿಗೆ ಮಾತಾಡುತ್ತಿದ್ದರೆ ಅಪ್ಪನೂ ಮಧ್ಯೆ ಪ್ರವೇಶಿಸುತ್ತಿರಲಿಲ್ಲ. ಈ ದಂಪತಿಗಳಿಗೆ ಶೇಕ್ ಚಾಂದ್ ಅವರ ಪರಿಚಯವಿದೆ ಎಂದು ನನಗೆ ತಿಳಿದೇ ಇರಲಿಲ್ಲ! ಹೀಗಾಗಿ ಅವರು ತಲೆ ಸವರುವ ಕೆಲಸವನ್ನು ಅಚ್ಚುಕಟ್ಟಾಗಿಯೇ ಮಾಡಿದರು. ನಾಲ್ಕು ದಿನಗಳ ಕಾಲ ಪ್ರೀತಿಯ ಪಾಠವನ್ನು ಅವರು ಹೇಳಿದ್ದೇ ಹೇಳಿದ್ದು. ನಾನು ತಲೆಯಾಡಿಸಿದ್ದೇ ಆಡಿಸಿದ್ದು. ಮನದ ಮೂಲೆಯಲ್ಲಿ ಶೇಕ್ ಚಾಂದ್ ಅವರ ಬಗ್ಗೆ ಪ್ರೀತಿ ಪಲ್ಲವಿಸಿತು!
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಇಪ್ಪತ್ತಾರನೆಯ ಕಂತು
ಹಣವನ್ನು ವ್ಯರ್ಥ ಪೋಲು ಮಾಡಬಾರದೆಂದು ನಾನು ಹೇಳಿದ್ದಷ್ಟೇ ಬಂತು; ಯಾವ ಬದಲಾವಣೆಯೂ ಆದಂತಿರಲಿಲ್ಲ. ಆವತ್ತೊಂದು ದಿನ ಶೇಕ್ ಚಾಂದ್ ಅವರು ಕಂಠಪೂರ್ತಿ ಕುಡಿದು ಬಂದು, ಮನೆ ಎದುರಿನ ಬಾಗಿಲೆದುರು ಬಿದ್ದಿದ್ದರು. ನಶೆಯೇರಿ ಸುತ್ತಲ ಲೋಕವನ್ನೇ ಮರೆತು ಬಿದ್ದಿದ್ದ ಅವರನ್ನು ನೋಡುತ್ತಿದ್ದಂತೆಯೇ ಅವರ ಚಿಕ್ಕಪ್ಪನ ಮಗ, ಅದೇ ನನಗೆ ಪ್ರೇಮ ಪತ್ರ ತಂದುಕೊಟ್ಟಿದ್ದನಲ್ಲಾ, ದಾವಲ್‌ಸಾಬ್ ಮತ್ತು ಕಂಪೆನಿಯಲ್ಲಿ ಖಳನಾಯಕನ ಪಾತ್ರ ಮಾಡುತ್ತಿದ್ದ ಮಲ್ಲಿಕಾರ್ಜುನ ಸ್ವಾಮಿಗಳೆಲ್ಲ ಎತ್ತಲೆಂದು ಹೋದರು. ‘ಏ ಚಂದ ಸಾ, ಚಂದ ಸಾ ಯಾಕೋ… ಏನಾಯ್ತೋ?’ ಎಂದು ಗಾಬರಿಯಿಂದ ಕೇಳುತ್ತಿದ್ದದ್ದು ನನ್ನ ಕಿವಿಗೂ ಬಿತ್ತು. ದೂರದಿಂದಲೇ ಎಲ್ಲವನ್ನೂ ಗಮನಿಸತೊಡಗಿದೆ. ‘ಏ..ನೂ ಮಾತಾಡ್‌ಬ್ಯಾಡ್ರಿ. ಸುಮ್ನಿರಿ. ತಪ್ಪಾಗೈತಿ ಸ್ವಾಮ್‌ಗಳೇ. ಕ್ಷಮಿಸಿಬಿಡ್ರಿ… ಕ್ಷಮಿಸಿಬಿಡ್ರಿ.’ ಒಂದೊಂದು ಪದವನ್ನು ಎಳೆದೆಳೆದು ತೊದಲು ಮಾತಿನಲ್ಲಿ ಹೇಳುತ್ತಿದ್ದರು. ಅಷ್ಟರಲ್ಲಿ ನಾ ನಿಂತು ನೋಡುತ್ತಿರುವುದನ್ನು ಮಲ್ಲಿಕಾರ್ಜುನ ಸ್ವಾಮಿಗಳು ಕಂಡರು. ಇನ್ನೇನು ಶೇಕ್ ಚಾಂದ್ ಅವರನ್ನು ಎಚ್ಚರಿಸಬೇಕಲ್ಲಾ! ‘ಆ ಹೆಣ್‌ಮಗಳು ನಿಂತಾಳೋ ಯಪ್ಪಾ… ಎದ್ ಮ್ಯಾಲಕ್ ನಿಂದ್ರು. ಸರಸ್ವತಿ ಬಂದಾಳ’ ಎಂದೆಲ್ಲ ನಿಧಾನ ಹೇಳಿದರೆ ಕುಡಿತದ ಅಮಲಿನಲ್ಲಿದ್ದವರಿಗೆ ಕೇಳುತ್ತದೆಯೇ? ಗಟ್ಟಿ ಹೇಳಿದರೆ ನನ್ನ ಕಿವಿಗೆ ಕೇಳದಿರುತ್ತದೆಯೇ? ಸ್ವಾಮಿಗಳು ಪೇಚಾಟಕ್ಕೆ ಸಿಕ್ಕು, ಒದ್ದಾಡುತ್ತಿರುವುದು ಅರ್ಥವಾಗುತ್ತಿತ್ತು ನನಗೆ.
ಎಷ್ಟೇ ನಯವಾಗಿ ಹೇಳಿದರೂ ವಾಸ್ತವದ ಗಾಂಭೀರ್ಯತೆ ಎನ್ನುವುದು ಶೇಕ್ ಚಾಂದ್ ಅವರ ಗಮನಕ್ಕೆ ಬಾರದಷ್ಟು ಸಾರಾಯಿ ಅವರನ್ನು ಓಲಾಡಿಸುತ್ತಿತ್ತು. ಅವರಿಬ್ಬರೂ ಎತ್ತುವುದಕ್ಕೆ ಪ್ರಯತ್ನಪಟ್ಟಷ್ಟೂ ಈ ಆಸಾಮಿ ಕೂರುವುದಕ್ಕೇ ಪಣ ತೊಟ್ಟಂತಿತ್ತು. ಇಷ್ಟೆಲ್ಲ ನಡೆಯುತ್ತಿರುವ ಹೊತ್ತಿಗೆ ಅವರು ವಾಂತಿ ಕಕ್ಕಿಯೂ ಆಗಿತ್ತು. ಸುಮ್ಮನೆ ನಿಂತು ನೋಡುತ್ತಿದ್ದ ನನ್ನಲ್ಲೇನೊ ಮರುಕ ಹುಟ್ಟಿದಂತೆ. ತಾಯಿ ತಂದೆಯರನ್ನು ಬಿಟ್ಟು ಬಂದವರು, ಕಂಪೆನಿಯನ್ನು ಹೊಸದಾಗಿ ಕಟ್ಟಿದವರು, ಏನೇನೊ ಸವಾಲುಗಳನ್ನು ಎದುರಿಸುತ್ತಿದ್ದವರು ಅಂತೆಲ್ಲ ಅನಿಸತೊಡಗಿತು. ಹಾಗೆ ಕಂಡರೆ ಇದೆಲ್ಲವೂ ನನಗೆ ಕಿರಿಕಿರಿ ಹುಟ್ಟಿಸಬೇಕಿತ್ತು; ಆ ವ್ಯಕ್ತಿಯ ಬಗ್ಗೆ ಜುಗುಪ್ಸೆ ಬರಬೇಕಿತ್ತು. ಆ ಕ್ಷಣಕ್ಕೆ ಅನುಭವಗಳೆಲ್ಲ ನನ್ನನ್ನು ಮಾಗಿಸಿ, ಮನುಷ್ಯಳಾಗಿಸಿತ್ತು. ತಡಮಾಡದೆ, ‘ಒಳಗೆ ಮಲಗಿಸ್ರಿ’ ಎಂದೆ. ತಂದಿಟ್ಟ ಮೊಸರು ಹಾಗೆಯೇ ಇತ್ತು. ನೀರು ಸೇರಿಸಿ ಮಜ್ಜಿಗೆಯನ್ನೂ ಮಾಡಿಕೊಟ್ಟೆ. ಅದ್ಯಾವ ಅನುಕಂಪವೋ ಕಾಣೆ, ಅವರನ್ನು ಆರೈಕೆ ಮಾಡಿದೆ.
ಹೀಗೆಲ್ಲ ಮಾಡುತ್ತಿದ್ದರೆ ಅಪ್ಪ ಸುಮ್ಮನಿರುತ್ತಾರೆಯೇ! ‘ನೀನ್ಯಾಕವ್ವಾ, ಮಾಡ್ತೀ? ಕುಡುಕ್ರು ಅವು. ನಮಗ್ಯಾಕ್ ಬೇಕವ್ವಾ? ನಡಿ ಒಳ್ಗೆ’ ಎಂದೆಲ್ಲ ಬೈಗುಳ ಸಾಗುತ್ತಲೇ ಇತ್ತು. ಊರಿಡೀ ಕೇಳುವಂತೆ ಕೂಗಾಡುತ್ತಿದ್ದ ಅಪ್ಪನನ್ನು ಸುಮ್ಮನಿರಿಸುವುದೂ ಸವಾಲೇ ಆಗಿತ್ತು. ಅವರಾಗಿಯೇ ಕುಡಿದಿಲ್ಲವೆಂದು ಮಲ್ಲಿಕಾರ್ಜುನ ಸ್ವಾಮಿಗಳು ತಿಳಿಸಿದ ವಿಚಾರವನ್ನೇ ಹೇಳಿದೆ. ಮಾನವೀಯತೆಯಿಂದ ವರ್ತಿಸಬೇಕಾದ ನನ್ನ ಅನಿವಾರ್ಯತೆಯನ್ನೂ ಮನೆಜನರನ್ನೆಲ್ಲ ಬಿಟ್ಟು ಬಂದ ಅವರ ಅಸಹಾಯಕತೆಯನ್ನೂ ವಿವರಿಸಿದೆ. ಆಯ್ತೆಂದು ತಲೆದೂಗದಿದ್ದರೂ ಬೇಡವೆಂದು ತಲೆಕೊಡವಲಿಲ್ಲ.
ಒದ್ದಾಡಿ, ಮಲಗಿ ಹೇಗೋ ರಾತ್ರಿ ಕಳೆಯಿತು. ಬೆಳಗಾದ ಮೇಲಿನ ಕತೆ ಕೇಳಬೇಕು ನೀವು. ಮುಖ ತೋರಿಸಲಾಗದೆ, ನಾಚಿಕೆಪಟ್ಟುಕೊಳ್ಳುತ್ತಿದ್ದರು. ಆಗಿನ ಕಾಲಕ್ಕೆ ಕುಡಿತವೆಂದರೆ ಬಾಹಿರ ಎಂಬಂತಿತ್ತು. ಕುಡಿಯುವವರೆಲ್ಲ ಕಟುಕರು ಎನ್ನುತ್ತಿದ್ದ ಸಮಾಜ ಬೇರೆ. ಕಳೆದ ರಾತ್ರಿ ತಾನಿದ್ದ ವಿಚಿತ್ರ ಸ್ಥಿತಿಯನ್ನು ನೆನೆದೇ ತೊಳಲಾಡುತ್ತಿದ್ದರೋ ಏನೊ. ನೋಡಲಾಗದೆ, ಮುಖ ಮುಚ್ಚಿಟ್ಟುಕೊಂಡೇ ಓಡಾಡುತ್ತಿದ್ದರು. ನಾನೂ ಹೀಗೇಕೆ ಇದ್ದೀರೆಂದು ವಿಚಾರಿಸುವ ಗೋಜಿಗೂ ಹೋಗಲಿಲ್ಲ.
ಮೂರು ದಿನಗಳಾದರೂ ಶೇಕ್ ಚಾಂದ್ ಅವರಲ್ಲಿ ನಾಚಿಕೆ ಮಾತ್ರ ಹೋಗಲಿಲ್ಲ. ಕಂಪೆನಿಯಲ್ಲಿ ಒಂದೆರಡು ಮಾತಾಡಿದ್ದನ್ನು ಕಂಡಿದ್ದಷ್ಟೇ ಹೊರತು ಮತ್ತುಳಿದಂತೆ ಮಾತು ಕತೆ ಏನೊಂದೂ ಇಲ್ಲ. ಮೌನಿಯಾಗಿದ್ದರು. ಅವರ ತಮ್ಮ ದಾವಲ್‌ಸಾಬ್, ಮಲ್ಲಿಕಾರ್ಜುನ ಸ್ವಾಮಿಗಳು, ಊರ ಕುಲಕರ್ಣಿ ಅವರ ಮಗ ಆರಾಧ್ಯ ಎಲ್ಲ ಒಟ್ಟು ಸೇರಿ ಊಟ ಮಾಡೆಂದು ಒತ್ತಾಯಿಸುತ್ತಿದ್ದರು. ಆಗಷ್ಟೇ ಕೋಣೆಯೊಳಗೆ ಬಂದು ಕೂತಿದ್ದ ನನಗೆ ಕೇಳಬೇಕೆಂದೇ ಜೋರು ದನಿಯಲ್ಲಿ ‘ಏ… ಊಟ ಮಾಡೊ. ಮೂರ್ ದಿನದಿಂದ ಊಟಾನೇ ಮಾಡಿಲ್ಲ ನೀನು. ಏನ್ ಸಾಯ್ಬೇಕು ಅಂದ್ಕೊಂಡೀ ಹೇಂಗೆ’ ಹೇಳುತ್ತಿದ್ದರು. ನನ್ನ ಇದಿರಾಗಿ ಹೇಳಲು ಅಪ್ಪ ಕಾವಲಿದ್ದರು. ಅಪ್ಪನ ಭದ್ರ ಕೋಟೆಯನ್ನು ಭೇದಿಸಲು ಅವರು ಹುಡುಕಿದ ಸರಳ ಮಾರ್ಗವಿದು! ಎಚ್ಚರ ತಪ್ಪಿದ್ದರು, ಆಗ ಆರೈಕೆ ಮಾಡಿದ್ದೆ. ಹಾಗೆಂದು ಪ್ರಜ್ಞೆ ಇರುವಾಗ ಯಾಕೆ ಹೇಳಬೇಕು? ಊಟ ಬಿಡುವಂಥದ್ದು ಏನಾಗಿದೆ ಈಗ! ನಿದ್ರೆ ಬಂದವರಂತೆ ನಾಟಕ ಆಡುವವರರನ್ನು ಎಬ್ಬಿಸಲು ಸಾಧ್ಯವೇ ಇಲ್ಲ ಎನಿಸಿ, ನನ್ನಷ್ಟಕ್ಕೆ ಉಳಿದೆ.
ಅಪ್ಪ ಇರದ ಹೊತ್ತಿನಲ್ಲಿ ದಾವಲ್‌ಸಾಬ್ ನನ್ನ ಮಾತಿಗೆಂದು ಕರೆದ. ‘ಅಕ್ಖವ್ರ…ಅಕ್ಖವ್ರ…’, ಅಕ್ಕ ಎಂಬ ಹೆಸರನ್ನು ಒತ್ತಿ ಉಚ್ಚರಿಸುತ್ತಿದ್ದವ ಅವನೊಬ್ಬನೆ. ‘ಅಕ್ಖವ್ರ, ನಮ್ಮಣ್ಣ ಸಾಯ್ತಾನ್ರಿ’ ಎಂದ. ‘ಆಂ! ಯಾಕ್ ಸಾಯ್ತಾನೆ?ʼ ನಾನೆಂದ ಮಾತಿಗೆ, ಉತ್ತರಿಸುವುದೋ ಬೇಡವೋ ಎಂಬಂತೆ ಯೋಚಿಸುತ್ತಿದ್ದ. ಇವನಿಂದ ಪ್ರತಿಕ್ರಿಯೆ ಸಿಗದ ಕಾರಣ ಬೆನ್ನಾಯಿಸಿ ಹೊರಡುತ್ತಿದ್ದೆ. ‘ನೀವ್ ಮನಸ್ಸು ಮಾಡ್ಲಿಲ್ಲ ಅಂದ್ರ ಸಾಯ್ತಾನ್ ನೋಡ್ರಿ. ಮೂರ್ ದಿನದಿಂದ ಊಟ ಮಾಡಿಲ್ರಿ…’ ಭಯದಲ್ಲೇ ಅವನು ಹೇಳುತ್ತಿದ್ದ ಮಾತಿಗೆ, ‘ಕರ್ಕೊಂಡೋಗಿ ಊಟ ಮಾಡಿಸ್ರಿ. ನಾನೇನ್ ಮನಸ್ ಮಾಡ್ಲಿ?’ ಎಂದೆ. ‘ಇಲ್ರಿ. ನೀವ್ ನಮ್ಮಣ್ಣನ್ನ ಮದ್ವಿ ಆಗ್ತೇನಿ ಅಂದ್ರ ಅವ ಊಟ ಮಾಡ್ತಾನ್ರಿ’ ಎಂದುಬಿಟ್ಟ!
ಗೋವಿಂದರೆಡ್ಡಿ ಅವರು ನನ್ನನ್ನು ಊರಿಗೆ ಕಳುಹಿಕೊಡುವ ಮುನ್ನ, ‘ತಂದೆ ತಾಯಿಯ ಜೊತೆ ಇರು. ಎಲ್ಲರನ್ನೂ ಒಪ್ಪಿಸುತ್ತೇನೆ. ಬಂದೇ ಬರುತ್ತೇನೆ; ಕರೆದುಕೊಂಡು ಹೋಗುತ್ತೇನೆ’ ಅಂದಿದ್ದರಲ್ಲಾ, ಆ ಒಂದಂಶದ ನಂಬಿಕೆಯಲ್ಲೇ ನನ್ನ ಮನಸ್ಸು ಕಾಯುತ್ತಿತ್ತು. ಇತ್ತ ಸೋದರಮಾವನ ಮಗನಿಗೆ ನನ್ನ ಕೊಡಬೇಕೆಂದಿದ್ದ ಅಪ್ಪ. ಇಷ್ಟೆಲ್ಲ ಗೋಜಲಿನೊಳಗೆ ಇವರ ಅಣ್ಣನ ಒಣಹಠ ಬೇರೆ! ‘ಏನ್ರೀ ಮಾತಾಡ್ತೀರಿ, ಊರಲ್ಲಿ ನನ್ ಮದ್ವೆ ಸಿದ್ಧತೆ ನಡೆದಿದೆ. ಪಾತ್ರ ಮಾಡೋಕಂತ ಬಂದಿರೋರನ್ನ ಮದ್ವಿ ಆಗ್ತೇನಿ. ಇಲ್ಲಾಂದ್ರೆ, ಸತ್ತು ಹೋಗ್ತೇನಿ ಅಂದ್ರೆ ಏನ್ರೀ?’ ಎಂದು ಸಿಟ್ಟಿನಿಂದ ಗುಡುಗಿದೆ.
ಕಂಪೆನಿಗೆ ಇಳಕಲ್‌ನ ಮುಸ್ಲಿಂ ಗಂಡ ಹೆಂಡತಿಯರು ಹೊಸತಾಗಿ ಸೇರಿದ್ದರು. ಅವರೊಂದಿಗೆ ಬಾಂಧವ್ಯ ಚೆನ್ನಾಗಿಯೇ ಬೆಸೆದಿತ್ತು. ಘಟನೆಯನ್ನೆಲ್ಲ ನೋಡಿದ ಅವರು ಯಾವಾಗಲೂ ನಾವು ಪ್ರೀತಿಸುವವರಿಗಿಂತ ನಮ್ಮನ್ನು ಪ್ರೀತಿಸುವವರನ್ನು ಆಯ್ಕೆ ಮಾಡಿಕೊಳ್ಳಬೇಕು. ಬದುಕು ಆಗ ಸುಂದರವಾಗಿರುತ್ತದೆ ಎಂದಿದ್ದರು. ಆ ಮುಸ್ಲಿಂ ಹೆಂಗಸು ಬಹಳ ಒಳ್ಳೆಯವರಾಗಿದ್ದರು. ಹೆಣ್ಣು ಮಕ್ಕಳೊಂದಿಗೆ ಮಾತಾಡುತ್ತಿದ್ದರೆ ಅಪ್ಪನೂ ಮಧ್ಯೆ ಪ್ರವೇಶಿಸುತ್ತಿರಲಿಲ್ಲ. ಈ ದಂಪತಿಗಳಿಗೆ ಶೇಕ್ ಚಾಂದ್ ಅವರ ಪರಿಚಯವಿದೆ ಎಂದು ನನಗೆ ತಿಳಿದೇ ಇರಲಿಲ್ಲ! ಹೀಗಾಗಿ ಅವರು ತಲೆ ಸವರುವ ಕೆಲಸವನ್ನು ಅಚ್ಚುಕಟ್ಟಾಗಿಯೇ ಮಾಡಿದರು. ನಾಲ್ಕು ದಿನಗಳ ಕಾಲ ಪ್ರೀತಿಯ ಪಾಠವನ್ನು ಅವರು ಹೇಳಿದ್ದೇ ಹೇಳಿದ್ದು. ನಾನು ತಲೆಯಾಡಿಸಿದ್ದೇ ಆಡಿಸಿದ್ದು. ಮನದ ಮೂಲೆಯಲ್ಲಿ ಶೇಕ್ ಚಾಂದ್ ಅವರ ಬಗ್ಗೆ ಪ್ರೀತಿ ಪಲ್ಲವಿಸಿತು!
ಅದಕ್ಕೆ ತಕ್ಕನಾಗಿ ನಾಟಕದಲ್ಲಿ ಹೆಚ್ಚಾಗಿ ನಮ್ಮಿಬ್ಬರ ಪ್ರೇಮ ದೃಶ್ಯಗಳೇ ಕಾಣಿಸುತ್ತಿದ್ದದ್ದು. ಗೂಗಿ ಮಾಸ್ಟರ್ ಎಂಬುವವರಿದ್ದರು. ಅವರ ಧ್ವನಿಯೋ ಮಧುರವಾಗಿತ್ತು. ಅವರ ಹಾಡು ನಮ್ಮ ಅಭಿನಯ. ರಂಗದಲ್ಲಿ ನಾನು ಗರಿಬಿಚ್ಚಿದ ಹಕ್ಕಿಯಾಗಿಬಿಡುತ್ತಿದ್ದೆ. ಚಪ್ಪಾಳೆ, ಶಿಳ್ಳೆಗಳ ಸುರಿಮಳೆ. ತುಂಬಿದ ಪ್ರೇಕ್ಷಕ ಗಣ. ಆದರೆ ಹಣ ಮಾತ್ರ ಆಗಲಿಲ್ಲವೆಂದೇ ಹೇಳುತ್ತಿದ್ದದ್ದು. ನಂಬಿಕಸ್ಥರು, ಹಣದ ವಿಷಯದಲ್ಲಿ ಶಿಸ್ತು ಇರುವವರಾರು ಅಲ್ಲಿರಲಿಲ್ಲ. ಸಾಲಗಾರರಿಗೆ ಕೊಟ್ಟೆವೆಂದು, ಅದಕ್ಕೆ ಖರ್ಚಾಯಿತೆಂದು ಇದೇ ಸುಳ್ಳು ಲೆಕ್ಕ ತೋರಿಸಿ ಯಾಮಾರಿಸುವ ಜನರೇ ತುಂಬಿದ್ದದ್ದು. ಸಮಸ್ಯೆಯನ್ನು ಬುಡಸಮೇತ ಬಗೆಹರಿಸಬೇಕಿತ್ತು. ಹತ್ತಿಕುಣಿಯಿಂದ ಯಾದಗಿರಿ, ಅಲ್ಲಿನ ಕ್ಯಾಂಪ್ ಮುಗಿಸಿ, ಮೈಲಾಪುರ ಮಲ್ಲಯ್ಯನ ಜಾತ್ರೆ ಕ್ಯಾಂಪಿಗೆ ಬಂದೆವು. ಆ ಕ್ಯಾಂಪಿಗೆ ಪ್ರಸಿದ್ಧ ನೃತ್ಯಗಾರ್ತಿ ಆಗಿದ್ದ ರಾಯಚೂರು ಕಮಲಾ ಅವರನ್ನು ಕರೆಸಿದ್ದರು. ಆ ಕ್ಯಾಂಪಿನಲ್ಲಿ ನಡೆದ ರೋಚಕ ಅನುಭವಗಳು ಬದುಕಿನ ಗತಿಯನ್ನೇ ಬದಲಿಸಿತು. ಒಂದು ಕಡೆ ಮೈ ಕೊರೆವ ಚಳಿ, ಇನ್ನೊಂದೆಡೆ ರಂಗದ ಮೇಲಿನ ಯುಗಳ ಪ್ರೇಮ ದೃಶ್ಯ! ಸಾಲದೆಂಬಂತೆ ಏನಾದರೊಂದು ಕೊಡುವ, ತೆಗೆದುಕೊಳ್ಳುವ ಸಲುಗೆಯೂ ಬೆಳೆಯುತ್ತಲಿತ್ತು. ಮೈ ಚಳಿ ಬಿಟ್ಟು ರಂಗದ ಮೇಲೆ ಅಭಿನಯಿಸುತ್ತಿದ್ದೆ. ಪ್ರೇಮಿಸುವ ದೃಶ್ಯ ಬಂದಾಗ ಕೈ ಸ್ಪರ್ಶವಾಗುತ್ತಿತ್ತು. ಆ ಬಿಗಿತನದಲ್ಲಿ ಬಿಗುಮಾನ ತೊರೆದು ನಾನೂ ಪ್ರೀತಿ ಅನುಭವಿಸಿದೆ.

ಮನಸ್ಸು ಗೊಂದಲಗಳ ಗೂಡಾಗಿತ್ತು. ಮಾವನ ಮಗ, ಗೋವಿಂದರೆಡ್ಡಿ ಅವರು ಕಾಯುತ್ತಿದ್ದಾರೆಂಬುದು ಯೋಚನೆಯಲ್ಲಿತ್ತು. ಇವರಿಗೆ ಇವರ ಧಾಟಿಯಲ್ಲೇ ತಿಳಿಹೇಳಬೇಕೆಂದು ಪ್ರಯತ್ನಪಟ್ಟದ್ದು ನನ್ನ ಯೋಚನೆಯನ್ನೇ ಬದಲು ಮಾಡುತ್ತಿತ್ತು.
(ಹಿಂದಿನ ಕಂತು: ನಾಟಕ ಕಂಪನಿ ಮತ್ತು ಒಲವಿನ ಪತ್ರ)

ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಂದೋಲನ ಪತ್ರಿಕೆಯ ಹಾಡುಪಾಡು ಪುಟದಲ್ಲಿ ಇವರ ಅನೇಕ ಲೇಖನಗಳು ಪ್ರಕಟಗೊಂಡಿವೆ.

