ಕಹಿ ನೆನಪು
ಕಹಿ ನೆನಪುಗಳನ್ನು
ಜನ ನೆನಪಿಟ್ಟುಕೊಳ್ಳುವರು
ಹೇಗೆ?
ಏಕೆ?
ಏಪ್ರಿಲಿನ ಉರಿ ಬಿಸಿಲಿನಂತೆ
ನದಿ ನಡುವಿನ ಸುಳಿಯಂತೆ
ಸುಟ್ಟ ಕಮಟು ವಾಸನೆಯಂತೆ
ಬಿಟ್ಟು ಬಂದ ಊರಿನಂತೆ
ಎಣ್ಣೆ ಬರಿದಾದ ಬತ್ತಿಗಳಂತೆ
ಅಲಗು ಮೊಂಡಾದ ಕತ್ತಿಗಳಂತೆ
ಹಿಡಿಕೆ ಮುರಿದ ಸುತ್ತಿಗೆಯಂತೆ
ಅರ್ಧ ಬಿದ್ದ ಗೋಡೆಯಂತೆ
ಬೆನ್ನ ಮೇಲಿನ ಬೆವರಿನಂತೆ
ಅತ್ತು ಕುರುಡಾದ ಕಣ್ಣುಗಳಂತೆ
ನಗು ನಡುವಿನ ಮೌನದಂತೆ
ಮುರಿದ ಬಿದ್ದ ಮಾತಿನಂತೆ
ನಿಲುಕದ ಲೋಕದ ಕನಸುಗಳಂತೆ
ನಡೆದರು ಸವೆಯದ ದಾರಿಗಳಂತೆ
ತಲುಪಲು ಆಗದ ತಾಣಗಳಂತೆ
ಬರೆಯಲು ಬಾರದ ಕವಿತೆಗಳಂತೆ
ಕಹಿ ನೆನಪುಗಳನ್ನು
ಜನ ನೆನಪಿಟ್ಟುಕೊಳ್ಳುವರು
ಹೇಗೆ?
ಏಕೆ?
ಎಚ್. ವಿ. ಶ್ರೀನಿಧಿ ದಾವಣಗೆರೆಯವರು
ಕಾರ್ಯನಿಮಿತ್ತ ಸದ್ಯದ ವಾಸ್ತವ್ಯ ಬೆಂಗಳೂರು.
ತತ್ವಶಾಸ್ತ್ರ, ವಿಜ್ಞಾನ, ಸಾಹಿತ್ಯ ಆಸಕ್ತಿಯ ವಿಷಯಗಳು.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ


