ಅದೇಕೋ ಭಾಸ್ಕರನ ತಾಯಿ ಲಲಿತಮ್ಮ ನನ್ನ ಕಡೆ ವಿಶೇಷ ಗಮನ ಕೊಡುತ್ತಿರುವಂತೆ, ಮತ್ತೆ ಮತ್ತೆ ಮಾತನಾಡಲು ಹವಣಿಸುತ್ತಿರುವಂತೆ ಕಂಡಿತು. ಹಾಗೇನೂ ಇರಲಾರದು, ಸ್ನೇಹಶೀಲ ಮುಖ, ಪ್ರೌಢ ಸೌಂದರ್ಯದ ಕಳೆ, ಯಾವಾಗಲೂ ಜೀವಂತಿಕೆಯಿಂದ ನಗುವುದು, ಕಣ್ಣಲ್ಲಿ ಕಣ್ಣಿಟ್ಟು ನೋಡುವುದರಿಂದಾಗಿ, ನಾನೇ ತಪ್ಪು ಊಹೆ ಮಾಡಿರಬಹುದು, ನನ್ನ ಜೊತೆ ವಿಶೇಷವಾಗಿ ಮಾತನಾಡಲು ಏಕೆ ಅವರು ಆಸೆ ಪಡುತ್ತಾರೆ ಅಂದುಕೊಂಡೆ. ನನಗಿರುವ ಸ್ವಪ್ರಾಮುಖ್ಯತೆಯ ಗೀಳಿನಿಂದಾಗಿ ನನಗೆ ಹೀಗೆಲ್ಲ ಅನಿಸುತ್ತಿರಬಹುದು ಅಂದುಕೊಂಡೆ.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”
ಕೊನೆಗೂ ನನ್ನ ತಮ್ಮನ ಮಗಳ ಮದುವೆ ಸೆಟಲ್ ಆಯಿತು. ಮೂರು-ನಾಲ್ಕು ವರ್ಷ ತುಂಬಾ ಹೆಣಗಾಡಿದರು. ಗಂಡು ಹುಡುಕಲಿಲ್ಲ, ಶೋಧಿಸಿದರು. ನೋಂದಣಿ ಮಾಡಿಸದ ಬ್ಯೂರೋಗಳಿಲ್ಲ, ಕೇಳಿಕೊಳ್ಳದ ಗೆಳೆಯರಿಲ್ಲ, ಸಲಹೆ ಕೇಳದ ಜ್ಯೋತಿಷಿಗಳಿಲ್ಲ. ಕುಕ್ಕೆ, ಘಾಟಿ, ಕೊಲ್ಲೂರು ಎಲ್ಲ ಕಡೆಗೂ ಹೋಗಿ ಬಂದದ್ದಾಯಿತು. ಆಯ್ತು, ಇನ್ನು ಇವಳಿಗೆ ಮದುವೆ ಆಗುವುದಿಲ್ಲ ಎಂದು ಬೇಸರದಿಂದ ನಿರ್ಧರಿಸಿಕೊಂಡು ಅದರ ಬಗ್ಗೆ ಯೋಚನೆ ಮಾಡುವುದನ್ನೇ ಬಿಟ್ಟುಬಿಡುತ್ತಿದ್ದಾಗ ಭಾಸ್ಕರನೊಡನೆ ಮದುವೆ ಗೊತ್ತಾಯಿತು.
ಭಾಸ್ಕರನಿಗೆ ಸ್ವಲ್ಪ ವಯಸ್ಸಾಗಿತ್ತು. ಆದರೆ ನನ್ನ ತಮ್ಮನ ಮಗಳು ಕಮಲಳಿಗೂ ಕೂಡ. ಭಾಸ್ಕರನ ಮುಖದಲ್ಲಿದ್ದ ಮಧ್ಯ ವಯಸ್ಸಿನ ಕಳೆ. ನನ್ನ ತಮ್ಮನ ಮಗಳ ಮುಖದಲ್ಲೂ ಯಾವಾಗಲೂ ಸೋತ, ನಿರಾಶೆಯ ಕಳೆಯೇ ಇತ್ತು. ಅದರೆ ಮದುವೆ ನಿಗದಿಯಾದ ಮೇಲೆ ಒಂದೆರಡು ವರ್ಷ ಚಿಕ್ಕವಳ ಹಾಗೆ ಕಂಡಳು. ಈಚೆಗೊಂದು ದಿನ ಬಟ್ಟೆ, ಲಿಪ್‌ಸ್ಟಿಕ್, ಹೇರ್‌ಬ್ಯಾಂಡ್ ಎಲ್ಲವೂ ಲ್ಯಾವೆಂಡರ್ ಬಣ್ಣದಲ್ಲಿದುದನ್ನು ಕಂಡಾಗ ನಾನೇ ಒಂದು ಕ್ಷಣ ಬೆರಗಾಗಿದ್ದೆ. Best of luck ಅಂದುಕೊಂಡೆ.
ಭಾಸ್ಕರನ ಮುಖದಲ್ಲಿ ಮಧ್ಯ ವಯಸ್ಸಿನ ಕಳೆ ಇದ್ದರೇನು? ಕೆಲಸ ಚೆನ್ನಾಗಿತ್ತು. ಎರಡು ಬಡ್ತಿ ಬಂದು, Middle Manager Level ಗೆ ಬಂದಿದ್ದ. ವಾಸಕ್ಕೆ ಸ್ವಂತ ಮನೆಯಿತ್ತು. ಚಿಕ್ಕನಹಳ್ಳಿ ಹತ್ತಿರ ರೆವಿನ್ಯೂ ಸೈಟ್ ತೆಗೆದುಕೊಂಡಿದ್ದ. ತಂದೆ-ತಾಯಿ ಜೊತೆಯಲ್ಲಿದ್ದರು, ಆರೋಗ್ಯವಾಗಿದ್ದರು ಮತ್ತು ತಂದೆಗೆ ಪಿಂಚಣಿ ಬರುತ್ತಿತ್ತು. ಮನೆಯಲ್ಲಿ ಮೂರು ರೂಮು ಇದ್ದುದರಿಂದ, ಮದುವೆಯಾದ ಮೇಲೆ ಒಟ್ಟಿಗೇ ಇರಲು ತೊಂದರೆಯಾಗುತ್ತಿರಲಿಲ್ಲ. ಮಗಳು-ಅಳಿಯ ಕತಾರ್‌ನಲ್ಲಿ ಇಪ್ಪತ್ತು ವರ್ಷಗಳಿಂದ ಇದ್ದು, ದುಬೈನಲ್ಲಿ ಒಂದು flat ಕೊಂಡಿದ್ದರು. ವಾಪಸ್ ಬರುವ ಸಾಧ್ಯತೆ ಕಡಿಮೆ ಇತ್ತು.
ಮದುವೆ ಗೊತ್ತಾದ ಮೇಲೆ ಭಾಸ್ಕರನ ತಂದೆ-ತಾಯಿ ನನ್ನ ತಮ್ಮನ ಕುಟುಂಬದ ಜೊತೆ ಮಾತ್ರವಲ್ಲದೆ, ನಮ್ಮೆಲ್ಲ ಬಂಧು, ಬಳಗದ ಜೊತೆ ಸ್ನೇಹಶೀಲವಾಗಿ ವರ್ತಿಸಿದರು. ನಿಜವಾದ ಸ್ನೇಹವನ್ನು ಬಯಸುವಂತೆ ಕಂಡರು. ಹೊಸ What’s App ತಂಡ ರಚಿಸಿದರು. ನಮ್ಮೆಲ್ಲರ ಹುಟ್ಟುಹಬ್ಬದ ದಿನ, ಮದುವೆ ವಾರ್ಷಿಕೋತ್ಸವದ ದಿನ ನೆನಪಿಟ್ಟುಕೊಂಡು ಶುಭಾಶಯ ಕೋರಿದರು. ಜೊತೆಗೆ plumber ನಿಂದ ಹಿಡಿದು, ವಕೀಲರ ತನಕ ನಾನಾ ರೀತಿಯ ಜನರ ಸಂಪರ್ಕವಿದ್ದು, ಯಾವ ಕೆಲಸಕ್ಕೆ ಬೇಕಾದರೂ ಸಹಾಯ ಮಾಡಲು ಮುಂದೆ ಬರುತ್ತಿದ್ದರು. ಒಳ್ಳೆಯ reference ಕೊಡುತ್ತಿದ್ದರು. ಎಲ್ಲ ಸಂಬಂಧಗಳು ಕ್ರಮೇಣ ಯಾಂತ್ರಿಕವಾಗುವ, ಒಣಗಿಹೋಗುವ ಸಮಯದಲ್ಲಿ ಇಂತಹ ಸ್ನೇಹಶೀಲರೊಬ್ಬರು ಸಿಕ್ಕಿದರಲ್ಲ ಎಂದು ನನಗಂತೂ ತುಂಬಾ ಉತ್ಸಾಹ. ಈ ಉತ್ಸಾಹದಿಂದಾಗಿ, ಹಳೆ ಗೆಳೆಯರ ಬಗ್ಗೆ ದಣಿವು ಮೂಡಿಸಿಕೊಳ್ಳಬಾರದೆಂದು ನನಗೆ ನಾನೇ ಹೇಳಿಕೊಂಡು ನಕ್ಕೆ.
ಅದೇಕೋ ಭಾಸ್ಕರನ ತಾಯಿ ಲಲಿತಮ್ಮ ನನ್ನ ಕಡೆ ವಿಶೇಷ ಗಮನ ಕೊಡುತ್ತಿರುವಂತೆ, ಮತ್ತೆ ಮತ್ತೆ ಮಾತನಾಡಲು ಹವಣಿಸುತ್ತಿರುವಂತೆ ಕಂಡಿತು. ಹಾಗೇನೂ ಇರಲಾರದು, ಸ್ನೇಹಶೀಲ ಮುಖ, ಪ್ರೌಢ ಸೌಂದರ್ಯದ ಕಳೆ, ಯಾವಾಗಲೂ ಜೀವಂತಿಕೆಯಿಂದ ನಗುವುದು, ಕಣ್ಣಲ್ಲಿ ಕಣ್ಣಿಟ್ಟು ನೋಡುವುದರಿಂದಾಗಿ, ನಾನೇ ತಪ್ಪು ಊಹೆ ಮಾಡಿರಬಹುದು, ನನ್ನ ಜೊತೆ ವಿಶೇಷವಾಗಿ ಮಾತನಾಡಲು ಏಕೆ ಅವರು ಆಸೆ ಪಡುತ್ತಾರೆ ಅಂದುಕೊಂಡೆ. ನನಗಿರುವ ಸ್ವಪ್ರಾಮುಖ್ಯತೆಯ ಗೀಳಿನಿಂದಾಗಿ ನನಗೆ ಹೀಗೆಲ್ಲ ಅನಿಸುತ್ತಿರಬಹುದು ಅಂದುಕೊಂಡೆ.
ಇಲ್ಲ, ನನ್ನ ಎಣಿಕೆ ತಪ್ಪಾಗಿತ್ತು. ಕೂಟಗಳಲ್ಲಿ ದೂರವಿದ್ದರೂ ಬಂದು ನಮಸ್ಕಾರ ಹೇಳುತ್ತಿದ್ದರು. ನಾನು ಕೆಲಸ ಮಾಡಿದ ಇಲಾಖೆಯಲ್ಲಿ ಅವರಿಗೆ ಪರಿಚಯವಿರುವವರ ಪ್ರವರವನ್ನೆಲ್ಲ ಒಪ್ಪಿಸಿದರು. ನಮ್ಮ Senior Citizens Group ಗೆ ನೀವು ಸದಸ್ಯರಾಗಬೇಕು, ನಿಜಕ್ಕೂ ನಮ್ಮ ಗುಂಪಿಗೆ ಒಂದು ಗೌರವ ಬರುತ್ತೆ ಅಂತ ಹೇಳುವಾಗ ಯಾವುದೇ ಕೊಂಕು, ಕುಹಕ ಕಾಣಲಿಲ್ಲ.
ನನ್ನ ತಮ್ಮ ಮನೆಯಲ್ಲಿ ಒಂದು ಸ್ನೇಹಕೂಟಕ್ಕೆ ಸೇರಿದ್ದಾಗ, ಹೌಸಿ ಆಡಲು ನನ್ನ ಪಕ್ಕದಲ್ಲೇ ಕೂತರು. ಮಾತು ಮಾತಿಗೂ ನಗುತ್ತಿದ್ದರು. ಮಾತಿಗೊಂದು ಮಾತು ಸೇರಿಸಿ, ಸಂಭಾಷಣೆಯನ್ನು ವಿಸ್ತರಿಸುತ್ತಿದ್ದರು. ನನ್ನ ನಂಬರ್ ಕರೆದಾಗ ಅಭಿನಂದನೆ ಹೇಳಿದರು. ಇನ್ನೊಂದು ಸಲ ಊಟವೆಲ್ಲ ಮುಗಿದ ಮೇಲೆ ಕೈ ತೊಳೆಯಲು ನಲ್ಲಿಗಳ ಸಾಲಿನ ಹತ್ತಿರ ಹೋದಾಗ ಅಲ್ಲಿಗೂ ಹಿಂಬಾಲಿಸಿದರು. ಕೈ ತೊಳೆದ ಮೇಲೆ ಈಗಲೂ ಎಲೆ ಅಡಕೆ ಹಾಕುವ ಅಭ್ಯಾಸವಿದೆಯಾ ಅಂತ ಕೇಳಿದರು. ನಾನು ದಂಗುಬಡಿದು ಹೋದೆ.
ಮುಂದೊಂದು ದಿನ ಶಂಕರ ಪಾರ್ಕಿನ ಆರ್ಕೆಸ್ಟ್ರಾ ಮಂಟಪದ ಮೆಟ್ಟಿಲುಗಳನ್ನು ಇಳಿಯುತ್ತಿದ್ದೆ. ಸ್ವಲ್ಪ ಕತ್ತಲೆಯಾಗಿತ್ತು. ಆದರೆ ಪಾರ್ಕಿನಲ್ಲಿ ಬೆಳಕಿನ ವ್ಯವಸ್ಥೆ ಚೆನ್ನಾಗಿದ್ದುದರಿಂದ ಎದುರುಗಡೆ ಬಂದ ಲಲಿತಮ್ಮನ ಮುಖ ತಕ್ಷಣ ಗೊತ್ತಾಯಿತು. ಇದೇನಿದು ಇಲ್ಲಿ? ಅವರ ಮನೆ ನಾಲ್ಕೈದು ಕಿಲೋಮೀಟರ್ ದೂರದಲ್ಲಿದೆ ಅಲ್ಲವೇ? ಆರ್ಕೆಸ್ಟ್ರಾ ತಂಡದವರ ಸಂಗೀತ ತುಂಬಾ ಸಾಧಾರಣವಾಗಿತ್ತು. ಅಷ್ಟು ದೂರದಿಂದ ಇಲ್ಲಿಯ ತನಕ ಬಂದು ಕೇಳುವಂಥದ್ದು ಏನೂ ಇರಲಿಲ್ಲ.
ಮದುವೆ ಮನೆಗೆ, ಆರತಕ್ಷತೆಗೆ ಬರುವ ರೀತಿಯ ಶೃಂಗಾರ, ಅಲಂಕಾರ. ದೊಡ್ಡಂಚಿನ ರೇಷ್ಮೆ ಸೀರೆ. ಒಂದು ಕೈಯಲ್ಲಿ ನಶ್ಯ ಬಣ್ಣದ ಪರ್ಸ್. ಇನ್ನೊಂದು ಕೈಯಲ್ಲಿ ಮೊಬೈಲ್. ಎಂದಿನಂತೆ ನಕ್ಕು ನಮಸ್ಕಾರ ಅಂದರು. ಆಶ್ಚರ್ಯವಾದರೂ ತೋರಿಸಿಕೊಳ್ಳದಂತೆ ನಮಸ್ಕಾರ, ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದಾರಾ ಎಂದು ಕೇಳಿದೆ.
ಹೌದು, ಎಲ್ಲರೂ ಚೆನ್ನಾಗಿದ್ದಾರೆ. ನಿಮ್ಮ ಹತ್ತಿರ ಒಂದು ಮಾತು ಹೇಳಬೇಕಿತ್ತು ಅಂದರು.
ಹೆಜ್ಜೆ ಹಾಕುತ್ತಿದ್ದವನು ಅಲ್ಲೇ ನಿಂತುಬಿಟ್ಟೆ. ನನಗೆ ದಿಗಿಲಾಯಿತು. ಮಗನ ಬಗ್ಗೆ ಏನಾದರೂ ಮುಚ್ಚಿಟ್ಟಿದ್ದಾರಾ? ಮದುವೆಗೆ ಮುಂಚೆ ಗಂಡಿಗೆ ಯಾವುದಾದರೂ ಸಂಬಂಧ ಇರಬಹುದೇ? ಇಲ್ಲ ನನ್ನ ತಮ್ಮನ ಕುಟುಂಬದ ಬಗ್ಗೆ ಏನಾದರೂ ಗುಟ್ಟಾಗಿ ವಿಚಾರಿಸುವುದಕ್ಕೆ ಬಂದಿರುವರೇ?
ಆಕೆಯ ಮುಖ ಅಷ್ಟೊಂದು ಬೆಳಕಿನಲ್ಲೂ ತುಂಬಾ ಆತಂಕದಿಂದ ಇರುವಂತೆ ಕಂಡಿತು. ಕಣ್ಣಾಲೆ ತುಂಬುತ್ತಿತ್ತು.
ನೋಡಿ, ನನಗೆ ಮದುವೆ ಮಾಡುವಾಗ ನಮ್ಮ ಮನೆಯವರು ತುಂಬಾ ಆತುರ ಮಾಡಿಕೊಂಡರು. ಇನ್ನೂ ನಾಲ್ಕು ದಿನ ತಡೆಯಬಹುದಿತ್ತು. ತುಂಬಾ ಸಾಧಾರಣ, ತುಂಬಾ ಸಣ್ಣ ಕುಟುಂಬಕ್ಕೆ ಕೊಟ್ಟುಬಿಟ್ಟರು. ಇನ್ನೂ ಸ್ವಲ್ಪ ಹುಡುಕಬಹುದಿತ್ತು.
ನನಗೆ ಏನಾದರೂ ತೋಚುವುದಿರಲಿ, ಸುಮ್ಮನೆ ಅಲ್ಲೇ ಹಾಗೇ ನಿಂತುಕೊಂಡುಬಿಟ್ಟೆ. ಈಕೆ ಮದುವೆ ಆಗಿ ಎಷ್ಟು ವರ್ಷ ಆಗಿದೆ. ಆಮೇಲೆ ಸಂಸಾರ ಮಾಡಿದ್ದಾರೆ, ಮಕ್ಕಳಾಗಿದೆ. ಹಿರಿ ಮಗಳಿಗೆ ಮದುವೆ ಆಗಿದೆ. ಈಗ ಮಗನಿಗೂ ಮದುವೆ ಕೂಡಿ ಬಂದಿದೆ. ಲಗ್ನಕ್ಕೆ ಇನ್ನೆರಡು ವಾರ ಮಾತ್ರ ಇದೆ. ಆಕೆಗೂ ಅರವತ್ತು ದಾಟಿರಬಹುದು. ಈಗ ತನಗೆ ಯಾವ ರೀತಿ ಮದುವೆ ಆಗಬೇಕಿತ್ತು ಅಂತ ಕೊರಗಿದರೆ, ಯೋಚನೆ ಮಾಡಿದರೆ, ಅದನ್ನು ಬಂದು ನನ್ನ ಹತ್ತಿರ ಹೇಳಿಕೊಂಡರೆ.
ನಾನು ಏನೂ ಹೇಳಲಿಲ್ಲ. ಈಗ ಅವರು ನನ್ನ ಪಕ್ಕದಲ್ಲೇ ನಡೆಯುತ್ತಿದ್ದರು. ನನ್ನ ಸಮಕ್ಕೂ ಹೆಜ್ಜೆ ಹಾಕುತ್ತಿದ್ದರು.

ಪಾರ್ಕಿನ ಮುಂಭಾಗದ ಗೇಟಿನ ಹತ್ತಿರ ಬಂದೆವು. ಮನೆ ಕಡೆ ಹೊರಡಲು ನಾನು ಎಡಗಡೆಗೆ ತಿರುಗಿದೆ. ಅವರು ಬಲಗಡೆಗೆ ತಿರುಗಿದರು. ಮತ್ತೆ ನನ್ನನ್ನು ನೋಡಿ:
“ನಮ್ಮ ತಂದೆ ಸ್ವಲ್ಪ ಮನಸ್ಸು ಮಾಡಿದ್ದರೆ, ಇಷ್ಟೊಂದು small family ಗೆ ಕೊಡಬೇಕಾಗುತ್ತಿರಲಿಲ್ಲ” ಎಂದು ಮತ್ತೊಮ್ಮೆ ಸ್ಪಷ್ಟವಾಗಿ, ನಿಧಾನವಾಗಿ ಹೇಳಿ ಕತ್ತಲೆಯಲ್ಲಿ ಕರಗಿ ಹೋದರು.

ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.

