ದೂರವಾಗಿರುವ ತನ್ನ ಸಂಸಾರದ ಸದಸ್ಯರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತನಾದ ಹಾನ್ ದೈನಂದಿನ ನಿರ್ವಹಣೆಗಾಗಿ ಅತಿ ಕಳಪೆ ಮಟ್ಟದ ವಸತಿ ಮತ್ತು ಉದರ ಪೋಷಣೆಯಿಂದ ತೃಪ್ತನಾಗುತ್ತಾನೆ ಮತ್ತು ತನ್ನ ಶೋಧ ಕಾರ್ಯ ಮುಂದುವರಿಸುತ್ತಾನೆ. ಚಿತ್ರದುದ್ದಕ್ಕೂ ಕಟ್ಟಡ ಕೆಡವುತ್ತಿರುವ ಹಾಗೂ ಅದರ ಅವಶೇಷಗಳ ನಡುವೆಯೇ ಹಾನ್ ಸೇರಿದಂತೆ ಕೆಲಸಗಾರರ ಚಲನೆ ಕಾಣುತ್ತಿದ್ದು ಅವು ಅವನ ಅಂತರಂಗದ ತುಮುಲ ಮತ್ತು ಕಳವಳಗಳ ರೂಪಕಗಳಾಗುತ್ತವೆ. ಅವೆಲ್ಲ ಭಾರವಾದ ಭಾವವನ್ನು ವ್ಯಕ್ತಪಡಿಸುವುದರ ಕಾರಣ ಏಕತಾನತೆ ಉಂಟು ಮಾಡುವುದಿಲ್ಲ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್’ನಲ್ಲಿ ಚೀನಾದ ʻಸ್ಟಿಲ್ ಲೈಫ್ʼ ಸಿನಿಮಾದ ವಿಶ್ಲೇಷಣೆ
ಅದು 1990ರ ದಶಕ. ಚೀನಾದ ತ್ರೀ ಜೋರ್ಜಸ್ ಡ್ಯಾಮ್ ಕಟ್ಟಲು ಸರ್ಕಾರದ ತೀರ್ಮಾನ. ಇಂಥದೊಂದು ವಿಪರೀತ ಪರಿಸ್ಥಿತಿ ಉಂಟಾಗಬಹುದೇ ಎಂದು ಅನುಮಾನಿಸುತ್ತಿದ್ದದ್ದು ಕಡೆಗೂ ನಿಜವಾಗುತ್ತದೆ ಎನ್ನುವ ಸಂಗತಿ ತಡವಾಗಲಿಲ್ಲ. ಕೈಗೊಂಡ ನಿರ್ಧಾರ ಕಾರ್ಯರೂಪಕ್ಕಿಳಿದಾಗ ಆ ಪ್ರದೇಶದ ಮೂರು ಲಕ್ಷಕ್ಕೂ ಹೆಚ್ಚಿನ ಜನಸಮುದಾಯದ ಬಾಳಿನ ಬುಡವನ್ನೇ ಛಿದ್ರ ಮಾಡಿದ ಪ್ರಸಂಗ ವಿವರಣೆಗೆ ಸಿಗದ ವಿಷಯ. ಪ್ರಭುತ್ವವೇ ತನ್ನ ದೇಶದ ಜನರ ಹಿತವನ್ನು ರಕ್ಷಿಸದೆ ಅನ್ಯ ವಿಷಯಗಳತ್ತ ಮನಸ್ಸು ಮಾಡಿದರೆ ಅವರನ್ನು ಕಾಪಾಡುವ ಶಕ್ತಿ ಯಾರಿಗಿರಲು ಸಾಧ್ಯ? ಚೀನಾದಲ್ಲಿನ ಜನರು ಅದರ ಪರಿಣಾಮವಾಗಿ ಅನುಭವಿಸಿದ ಭೀಕರ ಬವಣೆ ಹಿಯಾ ಯಾಂಗೈ ಚಿತ್ರ ʻಸ್ಟಿಲ್ ಲೈಫ್ʼ ಗೆ ಸ್ಪೂರ್ತಿ ಎಂದು ಭಾವಿಸಲಾಗಿದೆ. ಡ್ಯಾಮ್‌ನಿಂದಾಗಿ ಉಂಟಾದ ಜನರ ಬದುಕಿನ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ಸರ್ಕಾರ ತೆಗೆದುಕೊಂಡ ಕ್ರಮದ ಸಫಲ/ವೈಫಲ್ಯದ ಪ್ರಮಾಣ ಇತ್ಯಾದಿಗಳು ನಿರ್ದೇಶಕನ ಪರಿಕಲ್ಪನೆಯ ಪರಿಧಿಯಲ್ಲಿಲ್ಲ. ಆ ಸಂದರ್ಭದಲ್ಲಿ ವಿವಿಧ ಬಗೆಯಲ್ಲಿ ಸಮಸ್ಯೆಗೊಳಗಾದವರ ಬದುಕಿನ ಬಗ್ಗೆ ಮಾತ್ರ ನಿರ್ದೇಶನಿಗೆ ಆಸಕ್ತಿ.
೨೦೦೬ರ ವೆನಿಸ್ ಚಿತ್ರೋತ್ಸವದಲ್ಲಿ ಅತ್ಯತ್ತಮ ಚಿತ್ರಕ್ಕೆ ನೀಡುವ ಗೋಲ್ಡನ್ ಲಯನ್ ಪ್ರಶಸ್ತಿಗೆ ಚೀನಾದ “ಸ್ಟಿಲ್ ಲೈಫ್”ಚಿತ್ರವನ್ನು ಆಯ್ಕೆ ಮಾಡಿದಾಗ ಅದಕ್ಕೆ ಆ ಪುರಸ್ಕಾರ ಇಡೀ ಪ್ರಸಂಗವನ್ನು ಅತ್ಯಂತ ಸಮರ್ಥವಾಗಿ ದೃಶ್ಯರೂಪದಲ್ಲಿ ಅದರ ಎಲ್ಲ ಪರಿಕರಗಳನ್ನು ಯಶಸ್ವಿಯಾಗಿ ದುಡಿಸಿಕೊಂಡು ಪ್ರಸ್ತುತಪಡಿಸಿದ ಹೆಗ್ಗಳಿಕೆಗಾಗಿ.
1970ರಲ್ಲಿ ಜನಿಸಿದ ಹಿಯಾ ಯಾಂಗ್ಕೆ ಸಾಹಿತ್ಯ ವಿಭಾಗದಲ್ಲಿ ಪದವಿ ಪಡೆದು ಬೀಜಿಂಗ್ ಫಿಲ್ಮ್ ಅಕಾಡೆಮಿಯಲ್ಲಿ ವೃತ್ತಿಯಲ್ಲಿದ್ದಾನೆ. ಮಡದಿ ಕೆಯಾ ತೋ ಚಲನಚಿತ್ರ ಕಲಾವಿದೆ. ಮೂರು ಬಾರಿ ಅವನ ಚಿತ್ರಗಳು ಕಾನ್‌ನ ಅಗ್ರ ಪ್ರಶಸ್ತಿಗೆ ನಾಮನಿರ್ದೆಶನಗೊಂಡಿವೆ. ಅನ್‌ನೋನ್ ಪ್ಲೆಸರ್ (2002) 24ಸಿಟಿ (2008) ಮತ್ತು ಎ ಟಚ್ ಆಫ್ ಸಿನ್ (2013).
106 ನಿಮಿಷಗಳ ʻಸ್ಟಿಲ್ ಲೈಫ್ʼ ಚಿತ್ರದ ಕಥಾವಸ್ತು ದಾಂಪತ್ಯದ ಪಯಣವನ್ನು ಕುರಿತದ್ದು. ಕಾರ್ಮಿಕ ವರ್ಗ ಮತ್ತು ಮೇಲು ಮಧ್ಯಮ ವರ್ಗದ ದಂಪತಿಗಳಿಗೆ ಸಂಬಂಧಿಸಿದ ಚಿತ್ರಣದ ಕಲ್ಪನೆ ನಿರ್ದೇಶಕರದ್ದು. ಆ ದಂಪತಿಗಳ ವಿಕ್ಷಿಪ್ತ ಮನೋಭೂಮಿಕೆಯ ನಿರೂಪಣೆಗೆ ಅನುಗುಣವಾಗಿ ದುರಂತದ ಹಿನ್ನೆಲೆಯ ಆಯೋಜನೆಯಿದೆ. ನಿರ್ದೇಶಕರ ಈ ಪರಿಕಲ್ಪನೆಯನ್ನು ದೃಶ್ಯ ರೂಪಕ್ಕಿಳಿಸಲು ಅಗತ್ಯವಾದ ಅತಿ ಸರಳ ಕಥಾಹಂದರವನ್ನು ರೂಪಿಸಿದ್ದಾರೆ. ಹೆಂಡತಿ ಮಿಸ್ಸಿ ಮಾ ಮತ್ತು ಮಗಳಿಂದ ಹದಿನಾರು ವರ್ಷಗಳ ಹಿಂದೆ ದೂರನಾದ ಕಾರ್ಮಿಕ ವರ್ಗಕ್ಕೆ ಸೇರಿದ ಹಾನ್ ಸಮಿಂಗ್ ತನ್ನವರನ್ನು ಹುಡುಕುವ ಪಯಣದಲ್ಲಿರುತ್ತಾನೆ. ಹಿಂದೆ ಅವರೊಂದಿಗಿದ್ದ ಪ್ರದೇಶದಲ್ಲಿದ್ದ ಯಾಂಗ್ಟೆ ನದಿಗೆ ತ್ರೀ ಜೋರ್ಜೆಸ್ ಡ್ಯಾಮ್ ಕಟ್ಟುವ ಕಾರಣ ಮುಳುಗಡೆಯಾಗಿರುತ್ತದೆ. ತಮ್ಮ ಸಂಸಾರ ಮುಂದುವರಿಯಬೇಕೆಂದು ಅವನಿಗೆ ಹಂಬಲ. ತಾವಿಬ್ಬರೂ ದಂಪತಿಗಳಾಗಿ ಮುಂದುವರಿಯಬೇಕು ಎನ್ನುವ ನಿರೀಕ್ಷೆಯಲ್ಲಿರುತ್ತಾನೆ.
ಚಿತ್ರದ ಮೊದಲನೆ ದೃಶ್ಯದಿಂದಲೇ ಹಾನ್ ಸಮಿಂಗ್‌ನ ಅಭಿಮತ ವ್ಯಕ್ತವಾಗುತ್ತದೆ. ಫೆರಿಬೋಟ್‌ನಲ್ಲಿ ಲಘು ಮನಸ್ಥಿತಿಯ ಕೆಲವರೊಂದಿಗೆ ಗಂಭೀರವಾಗಿ ಕುಳಿತು ಪ್ರಯಾಣ ಬೆಳೆಸುತ್ತಿರುವ ಹಾನ್ ಸಮಿನ್ ಕ್ರಮೇಣ ಅವರಲ್ಲಿ ಸ್ನೇಹ ಬೆಳೆಸಿ ತಾನು ತಲುಪಬೇಕಾದ ಸ್ಥಳದ ನಿಖರತೆಯನ್ನು ಪಡೆಯುತ್ತಾನೆ. ಪಕ್ಕದಲ್ಲೊಂದು ಬ್ಯಾಗ್ ಇಟ್ಟುಕೊಂಡು ಪ್ಯಾಂಟ್ ಹಾಗೂ ಕೇವಲ ಬನಿಯನ್‌ನಲ್ಲಿರುವ ನಲವತ್ತರ ಆಜುಬಾಜುವಿನ ತಲೆಯಲ್ಲಿ ಕೂದಲು ಕಮ್ಮಿಯಾದ ಅವನು ತೀರ ಸಾಧಾರಣ ವ್ಯಕ್ತಿಯಂತೆ ಕಾಣುತ್ತಾನೆ. ಅವನ ಮಾತು ಮುಖ ಮುದ್ರೆಗಳೂ ಉಳಿದವರಿಗಿಂತ ಭಿನ್ನವಾಗಿ ತೋರಿ ಕೊಂಚ ಮಂದವೆನಿಸಿದರೂ ನಿರೀಕ್ಷೆಯ ಹೊಳಹು ಅವನ ಕಣ್ಣಂಚಿನಲ್ಲಿರುತ್ತದೆ. ಇವೆಲ್ಲ ಅವನ ಮನೋಭೂಮಿಕೆಯೂ ಸೇರಿದಂತೆ ಒಟ್ಟಾರೆ ಅವನ ವರ್ತಮಾನದ ಇರುವಿಕೆಯನ್ನು ಅನುಭವಕ್ಕೆ ತರುತ್ತದೆ. ಇದಕ್ಕೆ ಪೂರಕವೆನಿಸುವಂತೆ ತ್ವರಿತ ಗತಿಯಲ್ಲಿ ಕ್ಯಾಮೆರಾ ಚಲನೆ ಕಾಣುತ್ತೇವೆ.
ತಾನು ತಲುಪಬೇಕಾದ ಪ್ರದೇಶದಲ್ಲಿಳಿದು ಹದಿನಾರು ವರ್ಷಗಳ ಹಿಂದೆ ತನ್ನ ಹೆಂಡತಿಯಿದ್ದ ವಿಳಾಸವನ್ನು ಹುಡುಕಲು ಬೈಕ್ ಗೊತ್ತುಮಾಡಿಕೊಂಡು ದಾರಿಯುದ್ದಕ್ಕೂ ಅರ್ಧಂಬರ್ಧ ಕೆಡವಿದ ಕಟ್ಟಡಗಳನ್ನು ದಾಟಿ ನಿಗದಿತ ಸ್ಥಳಕ್ಕೆ ಬಂದಾಗ ಹಾನ್ ಸಮಿಂಗ್‌ಗೆ ಆದಷ್ಟೇ ದಿಗ್ಭ್ರಮೆ ನಮಗೂ ಉಂಟಾಗುತ್ತದೆ. ಕಾರಣ ಕರೆದುಕೊಂಡು ಬಂದವನು ಹರಿವ ಹೊಳೆಯಲ್ಲಿ ಅಷ್ಟು ದೂರದಲ್ಲಿರುವ ಸ್ಥಳವನ್ನು ತೋರಿಸುತ್ತಾನೆ. ಮುನ್ನೆಲೆಯಲ್ಲಿ ಹೊಳೆಯ ಕಡೆ ಕೈಚಾಚಿ ನಿಂತು ಅವನು ಮತ್ತು ಅದನ್ನು ಕೇಳಿಸಿಕೊಂಡು ಮಾತಿಲ್ಲದೆ ನಿಂತ ಹ್ಯಾನ್ ಹಾಗೂ ಕಿಂಚಿತ್ ಹಿನ್ನೆಲೆ ಶಬ್ದವಿರದ ದೂರ ಚಿತ್ರಿಕೆಯ ಈ ದೃಶ್ಯ ವಿವಿಧ ಕಾರಣಗಳಿಗಾಗಿ ಡ್ಯಾಮೋ ಮತ್ತೊಂದೋ ಕಟ್ಟಿದ ಕಾರಣ ನದಿಯಲ್ಲಿ ಮುಳುಗಡೆ ಹೊಂದಿದ ವಸತಿ ಪ್ರದೇಶವೊಂದರ ನೆನಪನ್ನು ಹಠಾತ್ ನಮ್ಮ ಮನಸ್ಸಿನಲ್ಲಿ ಹೊಳೆಸಬಹುದು. ಈ ಸಂಗತಿ ತಿಳಿದಿರಲಿಲ್ಲವೇ ಎಂಬ ಪ್ರಶ್ನೆಗೆ ಚಿತ್ರದ ನಾಯಕ ತುಟಿ ಎರಡು ಮಾಡುವುದಿಲ್ಲ. ಆಗ ಅವನ ಪ್ರಜ್ಞೆ ತಾನು ಹೆಂಡತಿ ಹಾಗೂ ಮಗಳೊಂದಿಗೆ ಹದಿನಾರು ವರ್ಷಗಳ ಹಿಂದೆ ಇದ್ದ ಒಟ್ಟಾರೆ ಸ್ಥಿತಿಯಿಂದ ದಿಢೀರನೆ ಒಂದೂವರೆ ದಶಕಗಳ ಜಿಗಿತದ ಸಿದ್ಧತೆಯಲ್ಲಿ ಮತ್ತು ಹಾಗೆ ಮಾಡಿದ್ದರಿಂದ ಉಂಟಾದ ಅಂತರಂಗದ ಅಸಮತೋಲನವನ್ನು ಸರಿಪಡಿಸಿಕೊಳ್ಳುವುದರಲ್ಲಿ ತೊಡಗಿರುತ್ತಾನೆ. ಕರೆದುಕೊಂಡು ಬಂದಾತನೂ ಅಷ್ಟೆ. ಎದುರು ನಿಂತ ವ್ಯಕ್ತಿಯ ತಳಮಳವನ್ನು ಅರಿತು ಯಾವುದೇ ಬಗೆಯ ಕುಚೇಷ್ಟೆ ಮಾಡುವುದಿಲ್ಲ. ಬದಲಾಗಿ ಸಂತೈಸುವವನಂತೆ ಅವನ ಕಡೆ ನಿರ್ಭಾವದ ನೇರ ದೃಷ್ಟಿ ಬೀರುತ್ತಾನೆ. ಜೊತೆಗೆ ಎಲ್ಲ ಕಡೆ ಆಗುವಂತೆ ಅಲ್ಲಿಯೂ ಮುಳುಗಡೆಯಾದ ಜಾಗದವರೆಲ್ಲ ದಿಕ್ಕಾಪಾಲಾಗಿರುತ್ತಾರೆ. ಇದು ಅವನು ಹೆಂಡತಿ ಮತ್ತು ಮಗಳನ್ನು ಹುಡುಕುವ ಪಯಣದ ಮೊದಲ ಹೆಜ್ಜೆಯಲ್ಲೇ ತೀವ್ರವಾದ ಆಘಾತ ಉಂಟುಮಾಡಿದರೂ ಅವನು ತನ್ನೊಳಗೆ ಸಂಭವಿಸುತ್ತಿರುವ ಭಾವಗಳ ಸುಳಿವೇ ಸಿಗದಷ್ಟು ಪ್ರಮಾಣದಲ್ಲಿ ಅದನ್ನು ನಿಯಂತ್ರಿಸುತ್ತಾನೆ.
ಡ್ಯಾಮ್‌ನಿಂದಾಗಿ ಉಂಟಾದ ಜನರ ಬದುಕಿನ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ಸರ್ಕಾರ ತೆಗೆದುಕೊಂಡ ಕ್ರಮದ ಸಫಲ/ವೈಫಲ್ಯದ ಪ್ರಮಾಣ ಇತ್ಯಾದಿಗಳು ನಿರ್ದೇಶಕನ ಪರಿಕಲ್ಪನೆಯ ಪರಿಧಿಯಲ್ಲಿಲ್ಲ. ಆ ಸಂದರ್ಭದಲ್ಲಿ ವಿವಿಧ ಬಗೆಯಲ್ಲಿ ಸಮಸ್ಯೆಗೊಳಗಾದವರ ಬದುಕಿನ ಬಗ್ಗೆ ಮಾತ್ರ ನಿರ್ದೇಶನಿಗೆ ಆಸಕ್ತಿ.
ಚಿತ್ರದ ನಾಯಕ ತೀರ ವಾಸ್ತವಿಕ ನೆಲೆಗಟ್ಟಿನಲ್ಲಿ ಯೋಚಿಸುತ್ತಾನೆ. ಯಾವ ಬಗೆಯ ಆರ್ಥಿಕ ಬಲವುಳ್ಳದವರಾದ್ದರಿಂದ ತನ್ನವರು ಇಲ್ಲೆಲ್ಲಿಯೋ ಇರಬೇಕೆಂದು ಅವನ ಸಹಜ ಅನಿಸಿಕೆ. ಅದಕ್ಕನುಗುಣವಾಗಿ ಅವಳ ಹೆಸರನ್ನು ಹೇಳಿ ಅವಳ ಬಗ್ಗೆ ಸುಳಿವು ಕೊಡುವಂಥವವರು ಸಿಗುತ್ತಾರೆಯೇ ಹೇಗೆ ಎಂದು ಅವನ ಮುಂದಿನ ಪ್ರಯತ್ನ. ಅದಕ್ಕಾಗಿಯೇ ಅವನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುತ್ತಾನೆ. ಹೀಗೆ ಮಾಡುವ ಅವನ ಪಯಣದುದ್ದಕ್ಕೂ ದೂರ ಚಿತ್ರಿಕೆಗಳಲ್ಲಿ ಭಾರಿ ಭಾರಿ ಕಟ್ಟಡಗಳನ್ನು ಒಡೆದು ಕೆಡವುತ್ತಿರುವುದನ್ನೇ ಕಾಣುತ್ತೇವೆ. ಸಾಕಷ್ಟು ಶಿಥಿಲಗೊಂಡ ಅವನ ಮನಸ್ಸಿನ ರೂಪಕದಂತೆ ಇವು ತೋರುತ್ತವೆ ಮಾತ್ರವಲ್ಲದೆ ಚೀನಾದಲ್ಲಿ ಮಾವೋ ಆಡಳಿತ ಕಾಲದಲ್ಲಿ ಔದ್ಯೋಗಿಕ ಪ್ರಗತಿ ಮುಂತಾದ್ದರ ಅಬ್ಬರದಲ್ಲಿ ಜನ ಸಾಮಾನ್ಯರ ಜನಜೀವನ ಛಿದ್ರಗೊಂಡಿದ್ದನ್ನು ಕುರಿತ ವ್ಯಾಖ್ಯೆಯೂ ಆಗುತ್ತದೆ. ಚಿತ್ರದ ಹಾನ್ ಸಾಮಿಂಗ್ ಆ ಸಮುದಾಯವನ್ನು ಪ್ರತಿನಿಧಿಸುತ್ತಾನೆಂದು ಭಾವಿಸಬಹುದು.
ದೂರವಾಗಿರುವ ತನ್ನ ಸಂಸಾರದ ಸದಸ್ಯರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತನಾದ ಹಾನ್ ದೈನಂದಿನ ನಿರ್ವಹಣೆಗಾಗಿ ಅತಿ ಕಳಪೆ ಮಟ್ಟದ ವಸತಿ ಮತ್ತು ಉದರ ಪೋಷಣೆಯಿಂದ ತೃಪ್ತನಾಗುತ್ತಾನೆ ಮತ್ತು ತನ್ನ ಶೋಧ ಕಾರ್ಯ ಮುಂದುವರಿಸುತ್ತಾನೆ. ಚಿತ್ರದುದ್ದಕ್ಕೂ ಕಟ್ಟಡ ಕೆಡವುತ್ತಿರುವ ಹಾಗೂ ಅದರ ಅವಶೇಷಗಳ ನಡುವೆಯೇ ಹಾನ್ ಸೇರಿದಂತೆ ಕೆಲಸಗಾರರ ಚಲನೆ ಕಾಣುತ್ತಿದ್ದು ಅವು ಅವನ ಅಂತರಂಗದ ತುಮುಲ ಮತ್ತು ಕಳವಳಗಳ ರೂಪಕಗಳಾಗುತ್ತವೆ. ಅವೆಲ್ಲ ಭಾರವಾದ ಭಾವವನ್ನು ವ್ಯಕ್ತಪಡಿಸುವುದರ ಕಾರಣ ಏಕತಾನತೆ ಉಂಟು ಮಾಡುವುದಿಲ್ಲ. ಇವೆಲ್ಲಕ್ಕೆ ಪುಟವಿಡುವಂತೆ ಚಿತ್ರದಲ್ಲಿ ಮಾತುಗಳ ಉಪಯೋಗ ಕಡಿಮೆ. ಜನರ ಕೆಳ ಮಟ್ಟದ ಬದುಕನ್ನು ಕೂಡ ಭಾವಾತಿಶಯಕ್ಕೆ ಎಡೆಮಾಡದಂತೆ ತೋರಿಸುತ್ತ ಅತ್ಯಂತ ಸಹಜ ರೂಪದ ದೃಶ್ಯಾವಳಿಗಳನ್ನು ನಿರ್ದೇಶಕರು ಪ್ರಸ್ತುತಪಡಿಸುತ್ತಾರೆ. ಜೊತೆಗೆ ಯಾವುದೇ ಬಗೆಯ ದುರಂತದಲ್ಲಾಗಲೀ ಅದರ ದುರುಪಯೋಗ ಪಡೆದುಕೊಳ್ಳಲು ಹವಣಿಸುವ ಹಾಗೂ ಅದರಲ್ಲಿಯೇ ಸ್ವಲ್ಪ ಸಂತೋಷ ಕಾಣುವವರು ಇರುತ್ತಾರೆಂಬ ವಾಸ್ತವ ಸತ್ಯವನ್ನೂ ಅವರು ನಿರೂಪಿಸುತ್ತಾರೆ.
ಕಟು ವಾಸ್ತವವನ್ನು ಸಲೀಸು ನುಂಗಿ ಬದುಕಲು ಹವಣಿಸುತ್ತಿದ್ದರೂ ಹಾನ್ ತನ್ನೊಳಗಿನಲ್ಲಿ ಭೂತ ಕಾಲದಲ್ಲಿಯೇ ಜೀವಿಸುತ್ತಿದ್ದಾನೆಂದು ಅವನು ತನ್ನ ಹೆಂಡತಿಯಿದ್ದ ವಿಳಾಸವನ್ನು ದಶಕಗಳಷ್ಟು ಹಿಂದಿನ ಸಿಗರೇಟು ಪ್ಯಾಕ್ ಮೇಲೆ ಬರೆದುಕೊಂಡಿದ್ದರ ಮೂಲಕ ತಿಳಿಯುತ್ತದೆ. ಜೊತೆಗೆ ತನ್ನ ಪ್ರಯತ್ನದಲ್ಲಿ ಅವನು ಆಶಾವಾದಿಯಾಗಿದ್ದಾನೆಂಬುದನ್ನು ಕೂಡ. ಹಾಗಿದ್ದುದರಿಂದಲೇ ಅವನ ನಿರಂತರ ಪ್ರಯತ್ನ ಫಲಿಸಿ ಅವನ ಹೆಂಡತಿಯ ಹೆಸರು ಇತ್ಯಾದಿಯನ್ನು ಬಲ್ಲವನೊಬ್ಬನಿಂದ ಒಂದಿಷ್ಟು ಮಾಹಿತಿ ಅವನಿಗೆ ದೊರಕುತ್ತದೆ. ಇಷ್ಟೆಲ್ಲ ಪರಿಶ್ರಮದಿಂದ ಕೂಡಿದ ಹುಡುಕಾಟದ ಫಲವಾಗಿ ಅವನ ಹೆಂಡತಿಯ ಹೆಸರು ಮತ್ತು ಬಹಶಃ ಆಕೆ ಇರಬಹುದಾದ ಸ್ಥಳದ ಬಗ್ಗೆ ಮಾಹಿತಿ ಕೊಡುವ ವ್ಯಕ್ತಿಯೊಬ್ಬ ಹ್ಯಾನ್‌ಗೆ ನಾವು ಗ್ರಾಮೀಣ ಪ್ರದೇಶದಲ್ಲಿರುವಂಥ ಡಾಬಾ ಎನ್ನುವಂಥಲ್ಲಿ ಸಿಗುತ್ತಾನೆ. ಆ ಕ್ಷಣದಲ್ಲಿಯೂ ಸಹ ಹಾನ್ ನ ಮಾತು, ಆಂಗಿಕ ಅಭಿನಯದಲ್ಲಿ ವಿಶೇಷವಾದ ಭಾವೋನ್ಮಾದ ಪ್ರಕಟವಾಗುವಂಥ ಯಾವುದನ್ನೂ ಮಾಡದೆ ಹಾಯ್ದು ಮರೆಯಾಗುವ ಕುತೂಹಲವನ್ನು ಅವನ ಸಮೀಪ ಚಿತ್ರಿಕೆಯಲ್ಲಿ ಕಾಣುತ್ತೇವೆ. ತೀರ ವೈಯಕ್ತಿಕ ಭಾವವೂ ಅದು ಮೇಲ್ಮಟ್ಟದ್ದಾಗಿದ್ದಾಗ ಮಾತ್ರ ಸಮೀಪ ಚಿತ್ರಿಕೆಯನ್ನು ಉಪಯೋಗಿಸುವುದು ನಿರ್ದೇಶಕ ಹಿಯಾ ಯಾಂಗ್‌ನ ಶೈಲಿ.
ಹಾನ್‌ನ ಹುಡುಕಾಟದ ನಡುವೆ ನಿರ್ದೇಶಕ ಉಪಕಥೆಯ ಹೆಣಿಗೆಯೊಂದನ್ನು ಜೋಡಿಸುತ್ತಾನೆ. ಬೃಹತ್ ನಿರ್ಮಾಣದ ಉಸ್ತುವಾರಿಯಲ್ಲಿರುವ ಗಂಡನಿಂದ ಕೆಲವು ವರ್ಷ ದೂರವಾದ ಮಧ್ಯಮ ಮೇಲ್ವರ್ಗದ ಯುವತಿಯೊಬ್ಬಳು ಅವನನ್ನು ಭೇಟಿಯಾಗಲು ಅದೇ ಪ್ರದೇಶಕ್ಕೆ ಬಂದಿರುತ್ತಾಳೆ. ಅವನನ್ನು ಆಕಸ್ಮಿಕವಾಗಿ ಭೇಟಿಯಾಗುವ ಹದಿಹರೆಯದವಳೊಬ್ಬಳು ತಾನು ಅಲ್ಲಿರಲಾರೆ, ಬೇರೆಲ್ಲಿಗಾದರೂ ಕರೆದುಕೊಂಡು ಹೋಗಿ ಎಂದು ದೈನ್ಯದಿಂದ ಕೇಳುತ್ತಾಳೆ. ಇದು ಅಲ್ಲಿನ ಹಾಗೂ ತನ್ಮೂಲಕ ಸಾಮಾನ್ಯರಿಗೆ ಒದಗಿರುವ ದಯನೀಯವಾದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗೆ ಕನ್ನಡಿಯಾಗುತ್ತದೆ. ಅಲ್ಲಿಗೆ ಬಂದವಳಿಗೆ ಅವಳ ಗಂಡನ ಭೇಟಿಯಾಗುತ್ತದೆ. ಅವಳ ಬಗ್ಗೆ ಅವನು ಆಸಕ್ತಿ ವ್ಯಕ್ತಪಡಿಸುತ್ತಾನಾದರೂ ಅವಳು ತಾನು ಬೇರೊಬ್ಬನನ್ನು ಪ್ರೀತಿಸುತ್ತಿದ್ದು ತಾವಿಬ್ಬರೂ ವಿಚ್ಛೇದನ ತೆಗೆದುಕೊಳ್ಳೋಣ ಎಂದು ಅವನಿಗೆ ನಿರಾಸೆ ತಂದು ಹೊರಡುತ್ತಾಳೆ. ಅವರ ಭೇಟಿಯ ದೃಶ್ಯವೂ ಅವರ ಅಹಿತ ಅಂತರಂಗವನ್ನು ಪ್ರಕಟಿಸುವಂತೆ ಕಲ್ಲು ಬಂಡೆಗಳಿರುವ ಸ್ಥಳದಲ್ಲಿ ಚಿತ್ರಿಸಲಾಗಿದೆ. ದೂರ ಚಿತ್ರಿಕೆಯಲ್ಲಿ ಉದ್ದೇಶಿತ ಪರಿಣಾಮ ಬೀರುತ್ತದೆ.
ಹಾನ್ ಕೊನೆಗೂ ತನ್ನ ಹೆಂಡತಿಯನ್ನು ಭೇಟಿಯಾಗುತ್ತಾನೆ. ಅವಳ ಭೇಟಿಯಾದರೂ ಅವಳ ಪರಿಸ್ಥಿತಿ ಬದಲಾಗಿರುತ್ತದೆ. ಮಧ್ಯಮ ವರ್ಗದ ಹೆಣ್ಣಾದ ಹೊನ್ ಕೊಂಗೆ ಎರಡು ವರ್ಷಗಳ ಪ್ರತ್ಯೇಕ ಜೀವನದ ನಂತರ ಬೃಹತ್ ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ತನ್ನ ಗಂಡನನ್ನು ಹುಡುಕಿಕೊಂಡು ಅದೇ ಪ್ರದೇಶಕ್ಕೆ ಬಂದಿರುತ್ತಾಳೆ. ಕೆಲಸದ ಒತ್ತಡದ ನಡುವೆಯೂ ಅವಳಲ್ಲಿ ಪ್ರೀತಿಯಿರಿಸಿದ ಅವನಿಗೆ ಅವಳೊಡನೆ ದಾಂಪತ್ಯ ಸಮಸ್ಯೆಯಾಗುತ್ತದೆ. ಚಿತ್ರದಲ್ಲಿ ಪಯಣ ಎನ್ನುವುದು ಸಂಕೇತವಾಗುತ್ತದೆ. ಔದ್ಯೋಗಿಕ ಪ್ರಗತಿಯ ಆಶಯದಲ್ಲಿ ಜನಸಾಮಾನ್ಯರ ಜೀವನ ಛಿದ್ರಗೊಂಡಿದ್ದನ್ನು ತೆರೆದಿಡುತ್ತದೆ.
ಉತ್ಕಟ ಭಾವಗಳಿರುವ ಕಡೆಗಳಲ್ಲಿರುವಂತೆ ಇಲ್ಲಿಯೂ ಹಿನ್ನೆಲೆ ಸಂಗೀತ ಸೊನ್ನೆ. ದೃಶ್ಯವನ್ನು ದೀರ್ಘಗೊಳಿಸುವುದಿಲ್ಲ. ಸಹಜ ಅವಧಿಯಲ್ಲಿಯೇ ಜರುಗುತ್ತದೆ. ಜೊತೆಗಿರುವವನು ತನ್ನ ಗಂಡನಲ್ಲ ಎಂದು ಆಕೆ ಹೇಳಿದರೆ ತಾನು ಮತ್ತೆ ಮದುವೆಯಾಗಿಲ್ಲ ಎಂದು ಹಾನ್ ಹೇಳುತ್ತಾನೆ. ಫೋಟೋದಲ್ಲಿ ಮಗಳನ್ನು ತೋರಿಸಿ ಅವಳು ಬೇರೆಲ್ಲೋ ಕೆಲಸ ಮಾಡಿಕೊಂಡಿರುವುದನ್ನು ತಿಳಿಸುತ್ತಾಳೆ. ಅವಳನ್ನು ಭೇಟಿಯಾಗುವ ಸಾಧ್ಯತೆಯ ಬಗ್ಗೆಯೂ ಮಾತು ಮುಂದುವರಿಯದೆ ಹೋಗುವುದರಿಂದ ಆ ಸಮಸ್ಯೆಯ ಗಾಂಭೀರ್ಯತೆ ನಮಗುಂಟಾಗುತ್ತದೆ. ಹೆಂಡತಿಯನ್ನು ಕರೆದೊಯ್ಯಬೇಕೆನ್ನುವ ಅವನ ಅಪೇಕ್ಷೆ ಕೂಡ ಕೈಮೀರಿದ ಆರ್ಥಿಕ ಮುಗ್ಗಟ್ಟಿನ ಕಾರಣ ಫಲಕಾರಿಯಾಗುವುದಿಲ್ಲ. ಅವನ ಬದುಕು ಯಾವ ಬದಲಾವಣೆಯನ್ನೂ ಕಾಣದೆ ಹೋಗುತ್ತದೆ. ಒಟ್ಟಾರೆ ಅವನ ಭವಿಷ್ಯ ದುರ್ಗಮವಾಗುತ್ತದೆ. ಇದನ್ನು ಪಾತ್ರಗಳ ಮುಖಾಂತರ ವಾಚ್ಯವಾಗಿಸದೆ ಅದೆಷ್ಟೋ ದೂರದಲ್ಲಿ ಮೇಲೆ ಹಗ್ಗದ ಮೇಲೆ ಕೋಲು ಹಿಡಿದು ನಡೆಯಲು ಪ್ರಯತ್ನಿಸುತ್ತಿರುವ ರೂಪಕದಿಂದ ನಿರ್ದೇಶಕ ವ್ಯಕ್ತಪಡಿಸುತ್ತಾನೆ.
ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ. ಪಿ. ಟಿ. ಸಿ. ಎಲ್.ನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತ. ಸಾಹಿತ್ಯ, ನಾಟಕ ಮತ್ತು ದೃಶ್ಯಮಾಧ್ಯಮದಲ್ಲಿ ಆಸಕ್ತಿ. ಅದರಲ್ಲಿಯೂ ಸಣ್ಣ ಕಥೆ, ಅನುವಾದ, ಚಲನಚಿತ್ರ ವಿಮರ್ಶೆ ಮುಂತಾದವುಗಳ ಬಗ್ಗೆ ಹೆಚ್ಚಿನ ಗಮನ. ಹಾರು ಹಕ್ಕಿಯನೇರಿ(ಚಲನಚಿತ್ರ) ನಿರ್ದೇಶನವೂ ಇದರಲ್ಲಿ ಸೇರಿದೆ. ಚಿತ್ರಕಥೆಯ ಸ್ವರೂಪ ಮತ್ತು ಪ್ರತಿಫಲನ, ಬಿಡುಗಡೆ(ಕಥಾ ಸಂಕಲನ) ಅವರ ಇತ್ತೀಚಿನ ಪ್ರಕಟಣೆಗಳು.