‘ಹನಿಗವನ ಅಂದರೇನು? ಹಿಡಿಯಲ್ಲಿ ಇಡಿ
ಅದರ ದೇಹ ಚಿಕ್ಕದು, ಆತ್ಮ ಕಿಡಿನುಡಿ’ ಎಂಬ ಸಾಲುಗಳಂತೆ  ಸಾಮಾನ್ಯವಾಗಿ ಹನಿಗವನಗಳು ಹೆಚ್ಚಾಗಿ ಏಳು ಅಥವಾ ಎಂಟು ಸಾಲುಗಳನ್ನು ಮೀರುವುದಿಲ್ಲ. ಅದಕ್ಕಿಂತ ಉದ್ದವಾದ ಕವನಗಳನ್ನು ಹನಿಗವನ ಗಳೆಂದು ಕರೆದರೆ ತಪ್ಪಾಗುತ್ತದೆ. ಏಕೆಂದರೆ ಹನಿಗವನಗಳ ಪ್ರಧಾನ ಲಕ್ಷಣವೆ ಸಂಕ್ಷಿಪ್ತತೆ. ಗ್ರೀಕ್ ಮತ್ತು ಲ್ಯಾಟಿನ್ ಭಾಷೆಯಿಂದ ಇಂಗ್ಲಿಷ್‍ಗೆ ಬಂದ ಕಿರುಗವನದ ಒಂದು ಶೈಲಿ ಎಪಿಗ್ರಾಂ. ಇದು ಕನ್ನಡದ ಹನಿಗವನವನ್ನು ಹೋಲುತ್ತದೆ.  ಏನೇ ಆಗಲಿ, ಆಕಾರ ಸಾಧ್ಯವಾದಷ್ಟು ಚಿಕ್ಕದಾಗಿರುವುದು ಮುಖ್ಯ. ಚುಟುಕು ಕವಿ ಎಚ್. ಡುಂಡಿರಾಜ್‌ ಬರೆದ “ಹನಿಗವನ; ಏನು? ಏಕೆ? ಹೇಗೆ?” ಕೃತಿಯ ಕೆಲವು ಪುಟಗಳು ನಿಮ್ಮ ಓದಿಗೆ

ಇತಿಹಾಸ, ಪ್ರಸ್ತುತತೆ

ಇತ್ತೀಚಿನ ವರ್ಷಗಳಲ್ಲಿ ಹನಿಗವನ, ಚುಟುಕು ಅನ್ನುವ ಹೆಸರಿನಲ್ಲಿ ಪ್ರಕಟವಾಗು ತ್ತಿರುವ ಚಿಕ್ಕ ಕವಿತೆಗಳು ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿವೆ. ಪತ್ರಿಕೆಗಳು, ಆಕಾಶವಾಣಿ, ಟಿ.ವಿ. ವಾಹಿನಿಗಳಲ್ಲದೆ ವಾಟ್ಸಾಪ್, ಫೇಸ್‍ಬುಕ್, ಇನ್‍ಸ್ಟಾಗ್ರಾಮ್, ಟ್ವಿಟ್ಟರ್, ಯೂ ಟ್ಯೂಬ್, ಬ್ಲಾಗ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲೂ ಹನಿಗವನಗಳು ಹರಿದಾಡುತ್ತಿವೆ. ಅವುಗಳನ್ನು ಓದಿ ಮೆಚ್ಚಿಕೊಳ್ಳುವ ಅನೇಕರು ತಾವೂ ಅಂಥ ಹನಿಗವನಗಳನ್ನು ಬರೆಯಲು ಆಸಕ್ತಿ ತೋರಿಸುತ್ತಿದ್ದಾರೆ. ನಾನು ಫೇಸ್‍ಬುಕ್‍ನಲ್ಲಿ ದಿನವೂ ಹಂಚಿಕೊಳ್ಳುವ ಹನಿಗವನಗಳಿಗೆ ಕೆಲವರು ಚಿಕ್ಕ ಪದ್ಯದ ರೂಪದಲ್ಲೆ ಪ್ರತಿಕ್ರಿಯೆ ನೀಡುತ್ತಾರೆ. ಹನಿಗವನಗಳು ಸಾಹಿತ್ಯದ ವಿದ್ಯಾರ್ಥಿಗಳಲ್ಲದ ಹಾಗೂ ಸಾಹಿತ್ಯೇತರ ಕ್ಷೇತ್ರಗಳಲ್ಲಿ ಕೆಲಸಮಾಡುತ್ತಿರುವವರನ್ನೂ ಆಕರ್ಷಿಸಿವೆ. ಹನಿಗವನಗಳನ್ನು ಓದುವವರಿಗೆ, ಬರೆಯುವ ಆಸಕ್ತಿ ಇರುವವರಿಗೆ ಅವುಗಳ ಬಗ್ಗೆ ಅನೇಕ ಸಂದೇಹಗಳು ಇರುವುದನ್ನು ನಾನು ಗಮನಿಸಿದ್ದೇನೆ. ಇಲ್ಲಿ ಅಂಥ ಪ್ರಶ್ನೆಗಳನ್ನು ಒಂದೊಂದಾಗಿ ಎತ್ತಿಕೊಂಡು ಅವುಗಳಿಗೆ ಉತ್ತರ ಹುಡುಕಲು ಪ್ರಯತ್ನಿಸೋಣ.

(ಎಚ್. ಡುಂಡಿರಾಜ್)

ಹನಿಗವನ ಮತ್ತು ಚುಟುಕುಗಳಿಗೆ ಏನು ವ್ಯತ್ಯಾಸ?

ಇದು ಚಿಕ್ಕ ಕವನಗಳನ್ನು ಬರೆಯುವ ಅನೇಕರು ಕೇಳುವ ಪ್ರಶ್ನೆ. ಹನಿ ಮತ್ತು ಚುಟುಕು ಎಂಬ ಎರಡೂ ಪದಗಳು ಗಾತ್ರವನ್ನು ಸೂಚಿಸುತ್ತವೆ. ಹೀಗಾಗಿ ಸ್ಥೂಲವಾಗಿ ನೋಡಿದರೆ ಹನಿಗವನ ಮತ್ತು ಚುಟುಕು ಎರಡೂ ಚಿಕ್ಕದಾಗಿರುವುದರಿಂದ ಎರಡೂ ಒಂದೇ ಅನ್ನಬಹುದು. ನಿಘಂಟಿನಲ್ಲಿ ಹನಿಗವನಕ್ಕೆ ಸಣ್ಣಕವನ; ಚುಟುಕು ಎಂಬ ಅರ್ಥವನ್ನು ನೀಡಿದ್ದಾರೆ. ಹನಿಗವನ ಎಂಬ ಶಬ್ದ ಹೆಚ್ಚು ಚಾಲ್ತಿಗೆ ಬಂದದ್ದು ಎಪ್ಪತ್ತರ ದಶಕದಲ್ಲಿ. ಅಲ್ಲಿಯವರೆಗೆ ಕನ್ನಡದಲ್ಲಿ ಚಿಕ್ಕ ಪದ್ಯಗಳನ್ನು ಮುಕ್ತಕ, ವಚನ, ಸೂಕ್ತಿ, ಚಾಟುಪದ್ಯ, ಚುಟುಕ, ಚುಟಕ ಮುಂತಾದ ಹೆಸರುಗಳಿಂದ ಕರೆಯುತ್ತಿದ್ದರು. ಜಿ.ಪಿ.ರಾಜರತ್ನಂ 1940ರಲ್ಲಿ ಪ್ರಕಟವಾದ ಅವರ ಚಿಕ್ಕ ಪದ್ಯಗಳನ್ನು ಪುಟಾಣಿಗಳು ಎಂದು ಕರೆದಿದ್ದರು. ದಿನಕರ ದೇಸಾಯಿಯವರ ಚುಟುಕುಗಳು ನಾಲ್ಕು ಸಾಲುಗಳ ನಿರ್ದಿಷ್ಟ ಛಂದಸ್ಸಿನಲ್ಲಿ ರಚಿತವಾದ್ದರಿಂದ ಚೌಪದಿಗಳೆಂದೇ ಪ್ರಸಿದ್ಧವಾದವು. ಎಲ್ಲಾ ರೀತಿಯ ಚಿಕ್ಕ ಪದ್ಯಗಳನ್ನು ಒಳಗೊಳ್ಳುವ, ಈ ಕೆಳಗಿನ ಲಕ್ಷಣಗಳನ್ನು ಹೊಂದಿರುವ ರಚನೆಗಳನ್ನು ಇಂದಿನ ಪರಿಭಾಷೆಯಲ್ಲಿ ಹನಿಗವನಗಳು ಅನ್ನಬಹುದು:

1. ಸಂಕಲನದಲ್ಲಿರುವ ಕವನಗಳ ಸಾಲುಗಳ ಸಂಖ್ಯೆ ಒಂದೇ ಆಗಿರುವುದಿಲ್ಲ.
2. ಕವನಗಳಲ್ಲಿ ಪ್ರಾಸ ಇರಬಹುದು ಅಥವಾ ಇಲ್ಲದಿರಬಹುದು.
3. ಕವಿತೆಗಳಲ್ಲಿ ಲಯ, ಛಂದಸ್ಸು ಇರಬಹುದು ಅಥವಾ ಇಲ್ಲದಿರಬಹುದು.
4. ಲಯ ಛಂದಸ್ಸು ಇದ್ದರೂ ಅವು ಎಲ್ಲಾ ಕವನಗಳಲ್ಲಿ ಒಂದೇ ರೀತಿ ಇರುವುದಿಲ್ಲ.
5. ಮಾತ್ರೆ ಗಣಗಳಿಗೆ ಕಟ್ಟು ಬೀಳದ ಮುಕ್ತ ಛಂದಸ್ಸು
6. ಆಡುಮಾತಿಗೆ ಹತ್ತಿರವಾದ ಗದ್ಯಲಯ
7. ಸಂವೇದನೆಯಲ್ಲಿ ಹೊಸತನ

ಉದಾಹರಣೆಯ ಮೂಲಕ ಇದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ. 1991 ರಲ್ಲಿ ಪ್ರಕಟವಾದ ಬಿ.ಆರ್. ಲಕ್ಷ್ಮಣರಾವ್ ಅವರ ‘ಹನಿಗವಿತೆಗಳು’ ಎಂಬ ಸಂಕಲನದಲ್ಲಿರುವ ಈ ಕೆಳಗಿನ ಪದ್ಯವನ್ನು ಗಮನಿಸಿ:

ಸಿರಿ

ನರೆಗೂದಲು, ಬೊಚ್ಚುಬಾಯಿ
ಮುಖದ ತುಂಬ ನಿರಿಗೆ
ಆದರೇನು? ಯಾವುದು ಸಮ
ಅಜ್ಜಿಯ ನಗೆ ಸಿರಿಗೆ?

ಇದು ನಾಲ್ಕು ಸಾಲಿನ ಪ್ರಾಸಬದ್ಧ, ಛಂದೋಬದ್ಧ ರಚನೆಯಾದ್ದರಿಂದ ಚುಟುಕು ಅನ್ನಬಹುದು. ಲಕ್ಷ್ಮಣರಾಯರ ‘ಹನಿಗವಿತೆಗಳು’ ಸಂಕಲನದಲ್ಲಿ ಇಂಥ ಅನೇಕ ಚುಟುಕುಗಳಿವೆ. ಅವುಗಳ ಜೊತೆಗೆ ಪ್ರಾಸ, ಛಂದಸ್ಸು ಇಲ್ಲದ ವಾರೆಂಟ್.
ಚೆಲುವೆ,
ಮಾದಕ ವಸ್ತುಗಳ ನಿಷೇಧದ
ಕಾಯಿದೆ
ಪ್ರಕಾರ
ಈ ಕೂಡಲೇ
ನಿನ್ನನ್ನು
ಬಂಧಿಸಬೇಕಾಗಿದೆ.

ಇಂಥ ಧ್ವನಿಪೂರ್ಣವಾದ ಕವನಗಳೂ ಇವೆ. ಇದನ್ನು ಚುಟುಕು ಅನ್ನಲಾಗದು. ಆದರೆ ಹನಿಗವನ ಅನ್ನಬಹುದು.

ಎಂಬತ್ತರ ದಶಕ ಮತ್ತು ಅನಂತರ ಪ್ರಕಟವಾದ ಬಹಳಷ್ಟು ಹನಿಗವನಗಳ ಸಂಕಲನದಲ್ಲಿರುವ ಕವನಗಳ ಶೈಲಿಯಲ್ಲಿ ಈ ಬಗೆಯ ಮಿಶ್ರಣವಿದೆ. ಹೀಗಾಗಿ ಹನಿಗವನ ಅನ್ನುವುದು ಮುಕ್ತಕ, ವಚನ, ತ್ರಿಪದಿ, ಚುಟುಕು, ಚೌಪದಿ, ಎಪಿಗ್ರಾಮ್, ಲಿಮರಿಕ್, ಹೈಕು, ರುಬಾಯಿ, ಶಾಯಿರಿ ಮುಂತಾದ ಎಲ್ಲ ರೀತಿಯ ಚಿಕ್ಕ ಪದ್ಯಗಳನ್ನು ಒಳಗೊಳ್ಳುವ ವೈವಿಧ್ಯಮಯ ಮತ್ತು ವಿಶಾಲವಾದ ವ್ಯಾಪ್ತಿಯುಳ್ಳ ಕಾವ್ಯ ಪ್ರಕಾರ ಅನ್ನಬಹುದು. ಚುಟುಕು ಅಂದರೆ ಚಿಕ್ಕದು. ಹನಿ ಅಂದರೂ ಚಿಕ್ಕದು. ಎಲ್ಲ ಚುಟುಕು ಗಳನ್ನು ಹನಿಗವನ ಅನ್ನಬಹುದು. ಆದರೆ ಎಲ್ಲ ಹನಿಗವನಗಳನ್ನೂ ಚುಟುಕುಗಳು ಅನ್ನುವಂತಿಲ್ಲ. ಹನಿಗವನದಲ್ಲಿ ಇಂಗ್ಲಿಷ್ ಭಾಷೆಯ ಊoಟಿeಥಿ ಯೂ ಇದೆ. ಆದ್ದರಿಂದ ಜೇನಿನ ಸಿಹಿ ಮತ್ತು ಜೇನುನೊಣದ ಕುಟುಕುವ ಸ್ವಭಾವ ಎರಡೂ ಇರುವ ಇಂದಿನ ಕಿರುಗವನಗಳಿಗೆ ಚುಟುಕು ಅನ್ನುವುದಕ್ಕಿಂತ ಹನಿಗವನ ಎಂಬ ಹೆಸರೇ ಚೆನ್ನಾಗಿ ಹೊಂದುತ್ತದೆ.

ಹನಿಗವನದಲ್ಲಿ ಎಷ್ಟು ಸಾಲುಗಳಿರಬೇಕು?

ಇದು ಹೊಸದಾಗಿ ಹನಿಗವನ/ಚುಟುಕುಗಳನ್ನು ಬರೆಯುವವರು ಸಾಮಾನ್ಯವಾಗಿ ಕೇಳುವ ಇನ್ನೊಂದು ಪ್ರಶ್ನೆ. ಹನಿಗವನದಲ್ಲಿ ಇಂತಿಷ್ಟೇ ಸಾಲುಗಳಿರಬೇಕೆಂಬ ಕಟ್ಟುನಿಟ್ಟಾದ ನಿಯಮವಿಲ್ಲ. ಹನಿಗವನದ ಗಾತ್ರದ ಬಗ್ಗೆ ನಾನು ಇಂಗ್ಲಿಷ್‍ನಲ್ಲಿ ಓದಿದ ಒಂದು ವ್ಯಾಖ್ಯೆ ನೆನಪಾಗುತ್ತಿದೆ. ಅದನ್ನು ಕನ್ನಡದಲ್ಲಿ ಹೀಗೆ ಹೇಳಬಹುದು.

ಹನಿಗವನ ಅಥವಾ ಮಿನಿಗವನ
ಮಿನಿಗವನಿನ ಹಾಗೆ
ಕುತೂಹಲ ಕೆರಳಿಸುವಷ್ಟು ಗಿಡ್ಡ
ಮಾನ ಮುಚ್ಚುವಷ್ಟು ಉದ್ದ!

ಇಂಗ್ಲಿಷ್ ಭಾಷೆಯಲ್ಲಿ ಒಂದೇ ಸಾಲಲ್ಲಿ ಓದಿದಾಗ ವಾಹ್ ಅನ್ನಿಸುವ ಒನ್ ಲೈನರ್‍ಗಳು ಸಾಕಷ್ಟಿವೆ. ಕನ್ನಡದಲ್ಲೂ ‘ಬೆಳ್ಳಗಿರುವುದೆಲ್ಲ ಹಾಲಲ್ಲ’ ಎಂಬಂಥ ಒಂದೇ ಸಾಲಿನ ಗಾದೆಗಳು ಹನಿಗವನದಷ್ಟೇ ಚುರುಕಾಗಿವೆ. ವಿಶ್ವೇಶ್ವರ ಭಟ್ ಅವರ ವಕ್ರತುಂಡೋಕ್ತಿಗಳಲ್ಲಿ ಕೆಲವು ಒಂದು ಸಾಲಿನ ಕವಿತೆ ಅಥವಾ ಏಕಪದಿ ಅನ್ನಬಹುದು. ಉದಾಹರಣೆ:
‘‘ಎಲ್ಲ ಮಕ್ಕಳೂ ತಾಯಿಗೆ ಹೆದರುತ್ತಾರೆ, ಯಾಕೆಂದರೆ ತಂದೆಯೂ ಹೆದರುತ್ತಾನೆ.’’

ಎರಡು ಸಾಲಿನ ಹನಿಗವನಗಳೂ ಸಾಕಷ್ಟಿವೆ. ಉದಾ:

ಚಳಿಗಾಲ ಎಂದರೆ ವಿಂಟರು
ಬೇಸಿಗೆ ಬಂದರೆ ನೆಂಟರು!

ಈ ರೀತಿ ಹನಿಗವನದಲ್ಲಿ ಎರಡೇ ಸಾಲಿದ್ದರೆ ಅದು ದ್ವಿಪದಿ.

ಸಾಲವನು ಕೊಂಬಾಗ ಹಾಲೋಗರುಂಡಂತೆ
ಸಾಲಿಗರು ಬಂದು ಎಳೆವಾಗ ಕಿಬ್ಬದಿಯ
ಕೀಲು ಮುರಿದಂತೆ ಸರ್ವಜ್ಞ.

ಹೀಗೆ ಸರ್ವಜ್ಞನ ವಚನಗಳು ಮತ್ತು ಜನಪದ ಗೀತೆಗಳಲ್ಲಿ ಇರುವಂತೆ ಮೂರು ಸಾಲುಗಳಿದ್ದರೆ ಅದು ತ್ರಿಪದಿ.

ಅನುಭವದ ಹೊರಗೆ ನಾ ಬರೆಯಲಿಲ್ಲಣ್ಣ
ಹಚ್ಚಲಿಲ್ಲವೊ ಮತ್ತೆ ಯಾವುದೂ ಬಣ್ಣ
ಬರೆದದ್ದು ನುಡಿದದ್ದು ಎಲ್ಲವೂ ಸಾದಾ
ಹೀಗಾಗಿ ಮನದೊಳಗೆ ಹೋಗುವುದು ಸೀದಾ
ಎಂಬಂಥ ದಿನಕರ ದೇಸಾಯಿವರು ಬರೆದ ನಾಲ್ಕು ಸಾಲುಗಳ ಕಿರುಪದ್ಯಗಳು-ಚೌಪದಿ.

ಈಗಾಗಲೇ ಹೇಳಿರುವಂತೆ ಎರಡು ಸಾಲಿದ್ದರೆ ಅದು ದ್ವಿಪದಿ. ಮೂರು ಸಾಲುಗಳಿದ್ದರೆ ಅದು ತ್ರಿಪದಿ. ನಾಲ್ಕು ಸಾಲುಗಳಿದ್ದರೆ ಚೌಪದಿ. ಐದು ಸಾಲುಗಳಿದ್ದರೆ? ಪಂಚಪದಿ ಅನ್ನುತ್ತೀರಾ? ಊಹುಂ. ಹಾಗೆಂದರೆ ಅದರಲ್ಲಿ ಪಂಚ್ ಇರುವುದಿಲ್ಲ. ವೈಎನ್‍ಕೆ ಹೇಳಿದಂತೆ ಐದು ಸಾಲುಗಳ ಕವಿತೆಯನ್ನು ಪಂಚಪದಿ ಅನ್ನುವ ಬದಲು ದ್ರೌಪದಿ ಅಂದರೆ ಅದು ಪಂಚ್!

ಇಂಗ್ಲಿಷ್ ಭಾಷೆಯಲ್ಲಿ ಐದುಸಾಲುಗಳ ಲಿಮರಿಕ್ ಬಹಳ ಪ್ರಸಿದ್ಧ. ಕನ್ನಡದಲ್ಲೂ ಕೆಲವರು ಲಿಮರಿಕ್‍ಗಳನ್ನು ಬರೆದಿದ್ದಾರೆ.

ಆರು ಸಾಲುಗಳ ಷಟ್ಪದಿಯಂತೂ ಕನ್ನಡಕ್ಕೆ ಚಿರಪರಿಚಿತ. ನಾನು ಬರೆದ ಬಹಳಷ್ಟು ಹನಿಗವನಗಳು ಆರು ಸಾಲುಗಳನ್ನು ಹೊಂದಿದ್ದು ಷಟ್ಪದಿಯ ನಡೆಗೆ ಹತ್ತಿರವಾಗಿವೆ. ಉದಾಹರಣೆಗೆ ಗಣೇಶನ ಬಗೆಗಿನ ಈ ಕವನ:

ಗರಿಕೆ ಪ್ರಿಯ ಬೆನಕ
ಸರಳತೆಯ ಪ್ರತೀಕ
ಕೇಳುವುದಿಲ್ಲ ಧನ ಕನಕ
ಕದ್ದು ನೋಡುವನು
ನೈವೇದ್ಯದ ಮೆನು
ಇದ್ದರೆ ಸಾಕು ಮೋದಕ!

ನಾನು ಗಮನಿಸಿದಂತೆ ಸಾಮಾನ್ಯವಾಗಿ ಹನಿಗವನಗಳು ಹೆಚ್ಚಾಗಿ ಏಳು ಅಥವಾ ಎಂಟು ಸಾಲುಗಳನ್ನು ಮೀರುವುದಿಲ್ಲ. ಅದಕ್ಕಿಂತ ಉದ್ದವಾದ ಕವನಗಳನ್ನು ಹನಿಗವನ ಗಳೆಂದು ಕರೆದರೆ ತಪ್ಪಾಗುತ್ತದೆ. ಏಕೆಂದರೆ ಹನಿಗವನಗಳ ಪ್ರಧಾನ ಲಕ್ಷಣವೆ ಸಂಕ್ಷಿಪ್ತತೆ. ಗ್ರೀಕ್ ಮತ್ತು ಲ್ಯಾಟಿನ್ ಭಾಷೆಯಿಂದ ಇಂಗ್ಲಿಷ್‍ಗೆ ಬಂದ ಕಿರುಗವನದ ಒಂದು ಶೈಲಿ ಎಪಿಗ್ರಾಂ. ಇದು ಕನ್ನಡದ ಹನಿಗವನವನ್ನು ಹೋಲುತ್ತದೆ. ಇಂಗ್ಲಿಷ್‍ನಲ್ಲಿ ಕೊಲೆರಿಜ್ ಎಂಬಾತ ನೀಡಿದ ಎಪಿಗ್ರಾಂನ ವ್ಯಾಖ್ಯೆ ಹೀಗಿದೆ:

What is an Epigram? A Dwarfish whole
Its body brevity and wit its soul!

ಇದೇ ವ್ಯಾಖ್ಯೆಯನ್ನು ಬಳಸಿಕೊಂಡು ಹೇಳುವುದಾದರೆ

ಹನಿಗವನ ಅಂದರೇನು? ಹಿಡಿಯಲ್ಲಿ ಇಡಿ
ಅದರ ದೇಹ ಚಿಕ್ಕದು, ಆತ್ಮ ಕಿಡಿನುಡಿ!

ಕನ್ನಡದಲ್ಲೂ ಹನಿಗವನಗಳ ಲಕ್ಷಣಗಳನ್ನು ವಿವರಿಸುವಾಗ ‘ಇಡಕುಂಗಬ್ಬ’, ‘ಕಿರಿದರೊಳ್ ಪಿರಿದರ್ಥ’, ‘ಬಿಂದುವಿನಲ್ಲಿ ಸಿಂಧು’, ‘ಅಂಗೈಯಲ್ಲಿ ಆಕಾಶ’, ‘ಕ್ಷಣವೊಂದರ ಸ್ಮಾರಕ’ ಎಂದು ಗಾತ್ರಕ್ಕೆ ಪ್ರಾಧಾನ್ಯತೆ ನೀಡುತ್ತಾರೆ. ಆದ್ದರಿಂದ ಹನಿಗವನಗಳ ಆಕಾರ ಸಾಧ್ಯವಾದಷ್ಟು ಚಿಕ್ಕದಾಗಿರುವುದು ಮುಖ್ಯ.

ಕವನದ ಗಾತ್ರ ಕಿರಿದಾಗಿದ್ದು ಅದರಲ್ಲಿ ನಾಲ್ಕಾರು ಸಾಲುಗಳಷ್ಟೇ ಇದ್ದರೂ ಅದು ಸ್ವತಂತ್ರವಾಗಿ ಒಂದು ವಿಚಾರವನ್ನೊ, ಸಂದೇಶವನ್ನೊ, ಕಲ್ಪನೆಯನ್ನೊ, ಸುಂದರ ವರ್ಣನೆಯನ್ನೊ, ಭಾವವನ್ನೊ, ಧ್ವನಿಯನ್ನೊ ಹೊಮ್ಮಿಸುವಂತಿದ್ದರೆ ಅದು ಹನಿಗವನ ವಾಗುತ್ತದೆ. ಕೆಲವೊಮ್ಮೆ ಒಂದು ಪುಟ್ಟ ಕವನದಲ್ಲಿ ಒಂದಕ್ಕಿಂತ ಹೆಚ್ಚು ಅರ್ಥವಿರುವುದುಂಟು. ಕಾವ್ಯವಿರುವುದು ಕವಿತೆ ಉಂಟುಮಾಡುವ ಪರಿಣಾಮದಲ್ಲಿ, ಅದರ ಗಾತ್ರದಲ್ಲಲ್ಲ.

Little strokes
Fell great oaks

ಎಂದು ಬೆಂಜಮಿನ್ ಫ್ರಾಂಕ್ಲಿನ್ ಹೇಳಿರುವುದು ಹನಿಗವನಗಳಿಗೆ ಚೆನ್ನಾಗಿ ಒಪ್ಪುತ್ತದೆ.

ಚಿಕ್ಕದಾದರೂ ಆಕಾರ
ಚಿಕ್ಕದಲ್ಲ ಆ ಖಾರ!

ಎಂಬಂತೆ ಒಂದು ಸಾಲಿನ ಹೇಳಿಕೆಯೂ ಅದರ ಚುರುಕುತನದಿಂದ ಗಮನ ಸೆಳೆಯಬಹುದು. ಕಾವ್ಯದ ಲಕ್ಷಣಗಳಿಲ್ಲದ ರಚನೆ ನೂರು ಸಾಲುಗಳಿದ್ದರೂ ಯಾವುದೇ ಪರಿಣಾಮ ಬೀರುವುದಿಲ್ಲ. ಚಂಪಾ ಅವರ ‘ಕೆ’ ಎಂಬ ಹನಿಗವನ ನಾಲ್ಕೇ ನಾಲ್ಕು ಶಬ್ದಗಳಲ್ಲಿ, ಎಂಟು ಅಕ್ಷರಗಳಲ್ಲಿ ಓದುಗರಿಗೆ ಖುಷಿ ಕೊಡುತ್ತದೆ:
“ಈಕೆ?”
“ಓಕೆ.”
“ಆಕೆ?”
“ಜೋಕೆ.”


ಕವಿತೆಯಲ್ಲಿ ಎಷ್ಟು ಸಾಲಿದೆ ಅನ್ನುವುದು ಮುಖ್ಯವಲ್ಲ. ಎರಡು ಸಾಲಿನ ಕವಿತೆಯನ್ನು ತುಂಡರಿಸಿ ನಾಲ್ಕು ಸಾಲಿನ ಕವಿತೆಯನ್ನಾಗಿ ಮಾಡಬಹುದು. ಆ ಸಾಲುಗಳಲ್ಲಿ ಕವಿತೆಯ ಸೋಲ್ (ಆತ್ಮ) ಇರಬೇಕು. ಇಲ್ಲದಿದ್ದರೆ ಕವಿತೆ ಸೋಲುತ್ತದೆ!

(ಕೃತಿ: ಹನಿಗವನ; ಏನು? ಏಕೆ? ಹೇಗೆ? (ಹನಿಗವನಗಳಿಗೊಂದು ಮಿನಿ ಕೈಪಿಡಿ), ಲೇಖಕರು: ಎಚ್. ಡುಂಡಿರಾಜ್, ಪ್ರಕಾಶಕರು: ಅಂಕಿತ ಪುಸ್ತಕ ಬೆಲೆ : ರೂ. 175/-)