ಎಮ್ ಎ ಹೆಗಡೆಯವರೆಂದೇ ಸಮಾಜದಲ್ಲಿ ಪ್ರಸಿದ್ಧರಾದ ಹೆಗಡೆಯವರಲ್ಲಿ ಮಹಾಬಲನೋರ್ವ ಇದ್ದಾನೆ ಎನ್ನುವದನ್ನು ರಾಜಶೇಖರ ಹೆಗಡೆಯವರು ಈ ಪುಸ್ತಕದಲ್ಲಿ ಗುರುತಿಸುತ್ತಾರೆ. ಜೀವನದಲ್ಲಿಯೂ ಹಾಗೇ ಅಪರಿಚಿತರಂತೇ ಕಾಣುತ್ತಾರೆ. ನಾಸ್ತಿಕರಂತೆ ತೋರುತ್ತಾರೆ. ಆದರೆ ಗರುಡ ಪುರಾಣವನ್ನು ವಾಚಿಸಿ ತಾಯಿಯ ಔರ್ಧದೈಹಿಕ ಕ್ರಿಯೆಗಳನ್ನು ನೆರವೇರಿಸುತ್ತಾರೆ. ಕುಟುಂಬ ಸಮೇತ ಕಾಶಿಯಾತ್ರೆಗೆ ಹೋಗುತ್ತಾರೆ. ಸಂಕೀರ್ಣವೆನಿಸಿಕೊಂಡ ವ್ಯಕ್ತಿತ್ವದೊಳಗೆ ತಮ್ಮವರೆನ್ನುವ ಭಾವನೆಯಿದೆ. ಸೀತಾವಿಯೋಗವನ್ನು ಬರೆಯಬಲ್ಲ ಅವರ ವಾಲ್ಮೀಕಿಯ ಮಾತೃ ಹೃದಯ ಹತ್ತಿರದಿಂದ ನೋಡಿದವರಿಗೆ ಮಾತ್ರ ಅರಿವಾಗುತ್ತದೆ.
ರಾಜಶೇಖರ ಹೆಗಡೆ ಜೋಗಿನ್ಮನೆಯವರು ಬರೆದ “ಅಣ್ಣ ಮಹಾಬಲ: ಎಂ ಎ ಹೆಗಡೆಯವರ ಜೀವನ ಭಾವನ ಸಾಧನ” ಕೃತಿಯ ಕುರಿತು ನಾರಾಯಣ ಯಾಜಿ ಬರಹ
ವ್ಯಕ್ತಿ ಮತ್ತು ವ್ಯಕ್ತಿತ್ವ ಎರಡೂ ಸಂಕೀರ್ಣ ಸ್ವಭಾವದವುಗಳು. ಯಾವ ವ್ಯಕ್ತಿಯನ್ನೂ ನಾವು ಸಂಪೂರ್ಣವಾಗಿ ಅರಿತಿದ್ದೇವೆನ್ನುವ ಭಾವನೆಯೇ ಭ್ರಾಮಕ. ಸ್ವತಃ ನಮ್ಮ ನಮ್ಮ ವ್ಯಕ್ತಿತ್ವವನ್ನೇ ನಾವು ಅಳೆದಿಡಲಾರೆವು. ನಾವು ಅರಿಯದ ಅನೇಕ ವಿಷಯ ನಮ್ಮೊಳಗೇ ಇರುತ್ತದೆ. ಸ್ಪಷ್ಟವಾಗಿ ಹೇಳಬೇಕೆಂದರೆ ನಮ್ಮ ಮುಖವನ್ನೇ ನಾವು ಕಂಡಿಲ್ಲ. ನಾವೆಲ್ಲ ಕಂಡ ನಮ್ಮ ಮುಖಗಳೆಂದರೆ ಅದು ಕನ್ನಡಿಯೋ, ಫೋಟೋವೋ ಅಥವಾ ಇನ್ನಿತರ ಮಾಧ್ಯಮಗಳನ್ನು ಆಶ್ರಯಿಸಿಯೇ ಹೊರತು ಮತ್ತೇನೂ ಅಲ್ಲ. ಕನ್ನಡಿಯಲ್ಲಿ ಕಂಡ ಮುಖವೆಂದರೆ ಅದು ಎಡದ್ದು ಬಲ, ಬಲ ಬದಿ ಎಡಗಡೆಯದಾಗಿರುತ್ತದೆ. ಹಾಗಾಗಿ ನಮಗೇ ಅಪರಿಚರಾದ ನಾವು ಇನ್ನೊಬ್ಬರಿಂದ ತಿಳಿದಿರಲ್ಪಡುವ ಸಾಧ್ಯತೆಯೇ ಹೆಚ್ಚು ಮತ್ತು ಆ ಸಾಧ್ಯತೆಯ ಮೂಲಕ ತಿಳಿಯಲ್ಪಡುವ ಸಂಗತಿಯೇ ತುಂಬಾ ಮಹತ್ವದ್ದಾಗಿರುತ್ತದೆ. ಈ ಎಲ್ಲ ಸಂಗತಿಗಳು ರಾಜಶೇಖರ ಹೆಗಡೆ ಜೋಗಿನ್ಮನೆಯವರು ಬರೆದ “ಅಣ್ಣ ಮಹಾಬಲ – ಎಂ ಎ ಹೆಗಡೆಯವರ ಜೀವನ ಭಾವನ ಸಾಧನ” ಕೃತಿಯನ್ನು ಓದಿದಾಗ ಸುಮ್ಮನೆ ಹಾದುಹೋಯಿತು.
ಕಳೆದ ವರ್ಷ ಕೋವಿಡ್ ಮಹಾಮಾರಿಯ ರೂಪದಲ್ಲಿ ನಾವು ಕಳೆದುಕೊಂಡ ವಿದ್ವಾಂಸ ಹಾಗು ವಿಶಿಷ್ಟ ವ್ಯಕ್ತಿತ್ವದ ಎಂ ಎ ಹೆಗಡೆಯವರನ್ನು ಹೀಗೇ ಎಂದು ಚೌಕಟ್ಟಿನಲ್ಲಿ ಹಿಡಿದಿಟ್ಟುಕೊಳ್ಳುವದು ತುಂಬಾ ಕಷ್ಟ. ಯಕ್ಷಗಾನಕ್ಕೆ ಬಂದರೆ ಅವರೋರ್ವ ಸಮರ್ಥ ಕಲಾವಿದರಾಗಿದ್ದರು. ಕೆರಮನೆ ಶಂಭು ಹೆಗಡೆಯವರ ಶಿಷ್ಯರಾಗಿ ತಮ್ಮ ಪ್ರಾಯದ ಕಾಲದಲ್ಲಿ ಚನ್ನಾಗಿ ಕುಣಿದು ಅಭಿನಯಿಸಬಲ್ಲ ರಂಗನಟ, ಪ್ರಸಂಗಕರ್ತ, ತಾಳಮದ್ದಳೆಯ ಅರ್ಥಧಾರಿ ಹೀಗೆ ಉತ್ತರಕನ್ನಡ ಮತ್ತು ಸಾಹಿತ್ಯವಲಯದಲ್ಲಿ ಇವರ ಕುರಿತು ತಿಳಿದಿಕೊಂಡವರೇ ಹೆಚ್ಚು. ಆದರೆ ಇದನ್ನೂ ಮೀರಿದ ಅವರ ಇನ್ನೊಂದು ಮಗ್ಗಲಿದೆ. ಅವರು ಕನ್ನಡದ ಸಾಹಿತ್ಯದ ಓರ್ವ ಸಮರ್ಥ ಆದರೆ ಅಲಂಕಾರಶಾಸ್ತ್ರ, ವೇದಾಂತ, ಭಾರತೀಯ ತತ್ವದರ್ಶನ, ಭಕ್ತಿರಸ, ಅಂಗ್ಲ ಭಾಷೆಯ ಸಮರ್ಥ ಅನುವಾದಕ ಈ ಮೊದಲಾದ ವಿಷಯಗಳ ಕುರಿತು ಕನ್ನಡ ಸಾರಸ್ವತ ಲೋಕಕ್ಕೆ ಅನೇಕ ಗ್ರಂಥಗಳನ್ನು ಬಳುವಳಿಯಾಗಿ ಕೊಟ್ಟಂತಹ ವಿದ್ವಾಂಸರು ಹೆಗಡೆಯವರು. ಕನ್ನಡ ಸಾಹಿತ್ಯ ಲೋಕದಲ್ಲಿ ಶಂಭಾ ಜೋಶಿ, ಗೌರೀಶ ಕಾಯ್ಕಿಣಿ, ವಿ. ಡಾ. ರಂಗನಾಥ ಶರ್ಮ, ಬಿ. ಎಚ್. ಶ್ರೀಧರ ಮುಂತಾದವರ ನಂತರ ಆ ಸಾಲಿನಲ್ಲಿ ಗಣಿಸಬೇಕಾದ ಕೆಲವೇ ವ್ಯಕ್ತಿಗಳಲ್ಲಿ ಇವರೂ ಒಬ್ಬರು. ಸಂಸ್ಕತ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಡಾ. ಈ. ಮಲ್ಲೇಪುರಂ ವೆಂಕಟೇಶರವರಂತೂ ಸಂಸ್ಕತ ಸಾಹಿತ್ಯದ ಕನ್ನಡ ಅನುವಾದಕರರಲ್ಲಿ ರಂಗನಾಥ ಶರ್ಮ, ಡಾ. ಎಚ್. ವಿ. ನಾಗರಾಜರಾವ್ ನಂತರ ಆ ಸಾಲಿನಲ್ಲಿ ಸೇರಬಲ್ಲ ವ್ಯಕ್ತಿ ಎಂದರೆ ಎಮ್. ಎ. ಹೆಗಡೆ ಎಂದಿದ್ದಾರೆ. ಇಂತಹ ಸದ್ಯೋಜಾತ ಪ್ರತಿಭೆಯ ವ್ಯಕ್ತಿ ಚಿತ್ರಣವನ್ನು ಅವರ ತಮ್ಮ “ಅಣ್ಣ ಮಹಾಬಲ” ದಲ್ಲಿ ಕಟ್ಟಿಕೊಡುವದು ಕನ್ನಡ ಸಾಹಿತ್ಯದಲ್ಲಿ ಒಂದು ಹೊಸರೀತಿಯದು.
ರಾಜಶೇಖರ ಹೆಗಡೆಯವರು ಈ ಹಿಂದೆ “ಬಿಸ್ಮಿಲ್ಲಾ ಖಾನ’ ಕುರಿತು ವ್ಯಕ್ತಿ ಚಿತ್ರಣವನ್ನು ಹೊರತಂದಿದ್ದಾರೆ. ಅವರ ಕಥಾಸಂಕಲನ “ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ” ಸಹ ವ್ಯಕ್ತಿ ಚಿತ್ರದ ಮಾದರಿಯಲ್ಲಿಯೇ ಇದೆ. ಆದರೆ ಇಲ್ಲಿ ಅವರು ನಮ್ಮೆದುರು ತಂದು ನಿಲ್ಲಿಸಿರುವದು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರು ತಾಳಮದ್ದಳೆಯ ಅರ್ಥದಾರಿ ಹಾಗೂ ಬಹುಶ್ರುತ ವಿದ್ವಾಂಸರಾಗಿದ್ದ ಅವರ ಅಣ್ಣ ಎಂ ಎ ಹೆಗಡೆಯವರನ್ನು. ಅಣ್ಣನ ಕುರಿತು ತಮ್ಮ ಬರೆಯುವದರಲ್ಲಿ ವಿಶೇಷವೇನೂ ಇಲ್ಲ. ಆದರೆ ಇಲ್ಲಿ ರಾಜಶೇಖರ ಹೆಗಡೆಯವರು ಈ ಹಿರಿಯಣ್ಣನಿಗಿಂತ ಸುಮಾರು ಇಪ್ಪತೈದು ವರ್ಷ ಚಿಕ್ಕವರು. ಎಂಟು ಮಕ್ಕಳ ದೊಡ್ಡ ಕುಟುಂಬದಲ್ಲಿ ಅವರು ಹಿರಿಯರಾದರೆ ರಾಜಶೇಖರ ಹೆಗಡೆಯವರು ಎಲ್ಲರಿಗಿಂತಲೂ ಕಿರಿಯರು. ಅಣ್ಣ ಬೆಳೆದಿರುವದು ಇವರ ಅಜ್ಜನಮನೆ ಸಿದ್ದಾಪುರದ ದಂಟ್ಕಲ್ಲಿನಲ್ಲಿಯಾದರೆ ಇವರು ಹುಟ್ಟಿ ಬೆಳೆದಿರುವದು ಜೋಗಿನ್ಮನೆಯಲ್ಲಿ. ಇವರಿಗೆ ಲೋಕದ ಅರಿವು ಬರುವ ವೇಳೆಗಾಗಲೇ ಎಂ ಎ ಹೆಗಡೆಯವರು ಸಮಾಜದಲ್ಲಿ ಒಂದು ಘಟ್ಟಿಯಾದ ಸ್ಥಾನಾಪನ್ನ ವ್ಯಕ್ತಿಯಾಗಿದ್ದರು. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಯಕ್ಷಗಾನದಲ್ಲಿ ಶೇಣಿ ಸಾಮಗರಂತಹ ಘಟಾನುಗಟಿಗಳ ಸಂಗಡ ಅರ್ಥಹೇಳುವವರಾಗಿ, ಪ್ರಸಂಗಕರ್ತರಾಗಿ ಪ್ರಸಿದ್ಧರಾಗಿದ್ದರು. ಕೆರಮೆನೆ ಶಂಭು ಹೆಗಡೆಯವರ ಒಡನಾಡಿಗಳಾಗಿ ಅವರು ಸೀತಾವಿಯೋಗದಂತಹ ಪ್ರಸಂಗವನ್ನು ಅದಾಗಲೇ ರಚಿಸಿಯಾಗಿತ್ತು.
ವಯಸ್ಸಿನ ಅಂತರ ಮತ್ತು ಅವರ ಪ್ರಖಾಂಡ ಪಾಂಡಿತ್ಯದ ಕಾರಣದಿಂದ ಇವರಿಗೆ ಅಣ್ಣನ ಹತ್ತಿರ ಅಷ್ಟೊಂದು ಸಲಿಗೆಯೂ ಇದ್ದಿರಲಿಲ್ಲ. ಎಂ ಎ ಹೆಗಡೆಯವರ ಕುರಿತು ಸುದ್ಧಿಯಲ್ಲಿರುವಂತೆ ಸ್ವಲ್ಪ ದುರಹಂಕಾರಿ ಎನ್ನುವ ಗುಮಾನಿಯೂ ಇವರಿಗೆ ಇತ್ತು. ಆದರೆ ಎಮ್ ಎ ಹೆಗಡೆಯವರು ವಾಸ್ತವದಲ್ಲಿ ಹಾಗಿರಲಿಲ್ಲ. ಇದಕ್ಕೆ ಕಾರಣ ಈ ಇಬ್ಬರೊಳಗಿರುವ ಒಂದು ತಲೆಮಾರಿನ ಅಂತರವಾಗಿತು ಎನ್ನುವದನ್ನು ಅವರು “ಅಕ್ಷರಾಂಜಲಿ” ಭಾಗದಲ್ಲಿ ವಿವರಿಸುತ್ತಾರೆ. ಆದರೆ ಅವರ ತಾಯಿ ತೀರಿಕೊಂಡ ಹೊತ್ತಿನಲ್ಲಿ ಸುಮಾರು ಇಪ್ಪತ್ತೊಂದು ದಿನ ಮನೆಯಲ್ಲಿ ಅಪರ ಕಾರ್ಯಕ್ರಮಗಳಿಗೆ ಈ ಅಣ್ಣತಮ್ಮ ಅಕ್ಕಂದಿರೆಲ್ಲ ಒಟ್ಟಿಗೇ ಇದ್ದರು. ಆಗ ಸಹೋದರರಲ್ಲಿ ಪರಸ್ಪರ ತೆರೆದುಕೊಳ್ಳುವಿಕೆಗಳು ನಡೆಯುತ್ತಾಹೋದಂತೆ ತಾನು ಅಂದು ಕೊಂಡ ಭಾವ ಸರಿಯಿಲ್ಲ. ಅಣ್ಣ ಎನ್ನುವವ ಶುದ್ಧ ಜೇನುತುಪ್ಪ ತುಂಬಿದ ಡಬ್ಬದ ಹಾಗೆ. ಮುಚ್ಚಳಮಾತ್ರ ಗಟ್ಟಿ, ತೆರೆದರೆ ಮನಸ್ಸೆಲ್ಲ ಸವಿಜೇನು. ಬೈದರೂ ಅದರ ಹಿಂದಿರುವದು ಹುಸಿಕೋಪ. ಮತ್ತರೆಕ್ಷಣ ಮಂದಹಾಸ (ಪು 148-149) ಎನ್ನುವದನ್ನು ಮನಗಾಣುತ್ತಾರೆ. ಇದು ಅವರ ಬದುಕಿನಲ್ಲಿಯೂ ಅಣ್ಣನ ಕುರಿತು ಇರುವ ಪರದೆ ತೆರೆಯಲು ಸಹಕಾರಿಯಾಗುತ್ತದೆ. ಈ ಭಾವ ಎಮ್ ಎ ಹೆಗಡೆಯವರನ್ನು ಹತ್ತಿರ ನೋಡಿದ ನನ್ನನ್ನೂ ಸೇರಿ ಎಲ್ಲರಿಗೂ ಆಗಿದೆ. ಸ್ವಲ್ಪ ಉಢಾಪೆ, ವ್ಯಂಗ್ಯ ಭರಿತ ನಗುವಿನಲ್ಲಿ ಎದುರಿನಲ್ಲಿರುವವರನ್ನು ಮಾತಾಡಿಸುತ್ತಲೇ ಇರುವ ಅವರ ಹತ್ತಿರ ಕುಳಿತು ಪ್ರಶ್ನೆಗಳನ್ನು ಕೇಳಿದರೆ, ಉತ್ತರಿಸುತ್ತ ಉತ್ತರಿಸುತ್ತಾ ನಮ್ಮ ಮನಸ್ಸಿನೊಳಗೊಂದಾಗುತ್ತಾರೆ. ನಂತರ ನಾವು ಅವರ ಹತ್ತಿರ ಹೇಗೆ ಬೇಕಾದರೂ ತಮಾಶೆ ಮಾಡಿಯೋ, ವಿನೋದದಿಂದಲೋ ಇರಬಹುದಾಗಿದೆ. ಈ ಅನುಭವವನ್ನು ಅವರು ಈ ಕೃತಿಯ ತುಂಬೆಲ್ಲಾ ಬಿಚ್ಚಿಡುತ್ತಲೇ ಹೋಗುತ್ತಾರೆ. ಅಣ್ನ ಎನ್ನುವವ ಇವರಿಗೆ ಮೊದಲು ಸಂಕೀರ್ಣ ವ್ಯಕ್ತಿತ್ವ, ನಂತರ ಅದು ಸರಿ ಇರಲಿಕ್ಕಿಲ್ಲ ಎನ್ನುವ ಗುಮಾನಿ, ಆ ಮೇಲೆ ಸ್ನೇಹಿತನಂತೆ ಮನಸ್ಸಿನೊಳಗೆ ಇಳಿದಾತ; ಜಗಳ, ಚರ್ಚೆ, ವಾದ ವಿವಾದಗಳ ನಡುವ ಬೆರೆತ ಮನಸ್ಸು ಇವೆಲ್ಲವೂ ಹದವಾಗಿ ಇಲ್ಲಿ ಸೇರಿದೆ. ಹೀಗೆ ಸೇರುವಾಗ ಇವರಿಗೆ ತಾನು ಕಂಡ ಈ ಮುಖಗಳೆಲ್ಲ ಸರಿ ಇರಬಹುದೇ ಎನ್ನುವದನ್ನು ಇನ್ನೊಬ್ಬರ ಹತ್ತಿರ ಕೇಳುವ ಕುತೂಹಲ. ಹಾಗಾಗಿ ಇಲ್ಲಿ ನಾಡಿನ ಪ್ರಸಿದ್ಧ ವಿಮರ್ಶಕರು, ಚಿಂತಕರು, ವಿದ್ವಾಂಸರುಗಳೆಲ್ಲ ಎಮ್. ಎ. ಹೆಗಡೆಯವರ ವ್ಯಕ್ತಿತ್ವವನ್ನು ಬಣ್ಣಿಸುತ್ತಿರುವಂತೆ ತಾನು ಕಂಡುಕೊಂಡ ತನ್ನ ಅಣ್ಣ ಪರಿಪೂರ್ಣನಾಗಿ ತನಗೆ ಸಿಕ್ಕಿದ್ದಾನೆ ಎನ್ನುವದನ್ನು ಅವರ ಬರಹದಲ್ಲಿ ಕಾಣಬಹುದು.
ಇವರಿಗೆ ಲೋಕದ ಅರಿವು ಬರುವ ವೇಳೆಗಾಗಲೇ ಎಂ ಎ ಹೆಗಡೆಯವರು ಸಮಾಜದಲ್ಲಿ ಒಂದು ಘಟ್ಟಿಯಾದ ಸ್ಥಾನಾಪನ್ನ ವ್ಯಕ್ತಿಯಾಗಿದ್ದರು. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಯಕ್ಷಗಾನದಲ್ಲಿ ಶೇಣಿ ಸಾಮಗರಂತಹ ಘಟಾನುಗಟಿಗಳ ಸಂಗಡ ಅರ್ಥಹೇಳುವವರಾಗಿ, ಪ್ರಸಂಗಕರ್ತರಾಗಿ ಪ್ರಸಿದ್ಧರಾಗಿದ್ದರು.
ಕೆ. ವಿ. ಅಕ್ಷರ ಅವರು ಎಮ್. ಎ. ಹೆಗಡೆಯವರ ಜೊತೆ ತುಂಬಾ ಒಡನಾಡಿದವರು. ಅವರು ಪುಸ್ತಕದ ಪ್ರಾರಂಭದಲ್ಲಿಯೇ ಹೆಗಡೆಯವರ ಈ ಎಲ್ಲಾ ಗುಣಗಳನ್ನು ತೆರೆದಿಡಿಸುತ್ತಾರೆ. ಹೆಗಡೆಯವರ ಸಮಯ ಸ್ಪೂರ್ತಿಯ ಉತ್ತರದ ಕುರಿತು ಅವರು ಯಕ್ಷಗಾನದಲ್ಲಿ ಹನುಮಂತನಿಗೆ ಮಾತ್ರ ಬಾಲ ಏಕೆ ಇತರ ವಾನರಗಳಿಗೆ ಬಾಲವೇಕೆ ಇಲ್ಲ ಎನ್ನುವ ಪ್ರಶ್ನೆಯನ್ನು ಪೌಲಾ ರಿಚ್ಮನ್ ಎನ್ನುವವರು ಎತ್ತಿದಾಗ ಹೆಗಡೆಯವರು “ಹನುಮಂತನ ಬಾಲಕ್ಕೆ ರಂಗದಲ್ಲಿ ಕೆಲಸವುಂಟು, ಉಳಿದವರ ಬಾಲಕ್ಕೆ ಇಲ್ಲ” ಎನ್ನುವ ಉತ್ತರಕೊಟ್ಟ ಸನ್ನಿವೇಶವನ್ನು ನೆನಪಿಸಿಕೊಳ್ಳುತ್ತಾರೆ. ಅದೇರೀತಿ ಷೋಡಷ ಸಂಸ್ಕಾರಗಳ್ಳಲ್ಲೊಂದಾದ ಚೂಡಾಕರ್ಮದಲ್ಲಿ ಜುಟ್ಟು ಬಿಡುವ ಕ್ರಮದ ಕುರಿತು ಹೆಗಡೆಯವರು ನೀಡಿದ ಉತ್ತರ ನಮ್ಮಲ್ಲಿ ನಗು ಮತ್ತು ಅವರ ತರ್ಕಬದ್ಧ ಮಾತಿಗೆ ಬೆರಗು ಎರಡೂ ಆಗುತ್ತದೆ. ಇಂತಹುದೇ ಅನುಭವ ರಾಜಶೇಖರ ಹೆಗಡೆಯವರಿಗೆ ಜಯದ್ರಥನ ಸಂಹಾರದಲ್ಲಿ ಬರುತ್ತದೆ. ಇಲ್ಲಿ ಕೃಷ್ಣ ಚಕ್ರ ಹಿಡಿದದ್ದು ಭೀಷ್ಮಾದಿಗಳಿಗೆ ತಿಳಿದಿದಿಯೋ ಇಲ್ಲವೋ ಅಥವಾ ಅವನ ಮೋಸದ ಕುರಿತು ಯಾರೂ ಏಕೆ ಆಕ್ಷೇಪ ಮಾಡಿರಲಿಲ್ಲ ಎನ್ನುವ ಪ್ರಶ್ನೆಗಳಿಗೆ ಹೆಗಡೆಯರು ಕೊಡುವ ಇದೇ ರೀತಿಯ ತುಂಟತನದ ಉತ್ತರ ನಮ್ಮನ್ನು ನಗುವಿನಲ್ಲಿ ತೇಲಿಸಿಬಿಟ್ಟರೂ ಅದರೊಳಗಿರುವ ಅವರ ಚುರುಕುಮತಿತನಕ್ಕೆ ಬೆರಗಾಗುತ್ತೇವೆ. ತಾಳಮದ್ದಳೆ ಹೇಗಿರಬೇಕು ಎನ್ನುವದಕ್ಕೆ ಇಂತಹ ಚಾಟೋಕ್ತಿಗಳಿಂದಲೇ ಎಮ್ ಎ ಹೆಗಡೆಯವರು ರಂಗದ ಓರೆ ಕೋರೆಗಳನ್ನೆಲ್ಲ ಬಯಲಿಗೆಳೆಯುತ್ತಿದ್ದರು. ಕಥೆಗಳು ಪ್ರಸಂಗಕ್ಕೆ ನಿಷ್ಠವಾಗಿರಬೇಕೇ ಹೊರತೂ ಮೂಲಕಾವ್ಯಕ್ಕಲ್ಲ ಎನ್ನುವ ಸ್ಪಷ್ಟ ನಿಲುವು ಅವರದಾಗಿತ್ತು.
ಎಮ್ ಎ ಹೆಗಡೆವರನ್ನು ಬಲ್ಲವರು ಕಂಡಂತೆ ಅವರಲ್ಲಿರುವ ಎರಡು ಕಂಪಾರ್ಟ್ ಮೆಂಟ್ ಗಳನ್ನು ಹೆಗಡೆಯವರು ತೆರೆದಿಡುಸುವಾಗ ಅವರ ವ್ಯಕ್ತಿತ್ವಕ್ಕೊಂದು ಮೆರಗು ಬರುತ್ತದೆ. ಅಲಂಕಾರ ತತ್ತ್ವಶಾಸ್ತ್ರ, ಸಂಸ್ಕೃತ ಕನ್ನಡದ ಅನುವಾದಕರಾಗಿ, ವಿದ್ವಾಂಸರಾಗಿ ವಿದ್ವತ್ ವಲಯದಲ್ಲಿ ಕಾಣಿಸಿಕೊಳ್ಳುವ ಹೆಗಡೆಯವರು ಒಂದುಕಡೆಯಾದರೆ ಇನ್ನೊಂದು ಯಕ್ಷಗಾನದ ಕುರಿತಾಗಿರುವ ಅವರಿಗಿರುವ ಪ್ರಧಾನವಾದ ಒಲವು. ಯಕ್ಷಗಾನದಲ್ಲಿನ ಅವರಿಗಿರುವ ಅಪರಿಮಿತ ಪ್ರೀತಿಯ ಕಾರಣದಿಂದಲೇ ಕನ್ನಡದ ಸಾಹಿತ್ಯವಲಯದಲ್ಲಿ ಅವರನ್ನು ಗುರುತಿಸಬೇಕಾದ ರೀತಿಯಲ್ಲಿ ಗುರುತಿಸಲಿಲ್ಲವೆನ್ನುವದನ್ನು ಈ ಕೃತಿಯನ್ನು ಓದಿದಾಗ ಅನಿಸುತ್ತದೆ. ಇವರು ಕನ್ನಡದಲ್ಲಿ ಅಲಂಕಾರ ಶಾಸ್ತ್ರದ ಮೇಲೆ ಬರೆದ “ಅಲಂಕಾರ ತತ್ವ” ಭಾರತೀಯ ಕಾವ್ಯಮೀಮಾಂಸೆಯ ಸಂಕ್ಷಿಪ್ತ ಪರಿಚಯಗಳೊಂದಿಗೆ ಉಪಮಾ ರೂಪಕ, ದೀಪಕ ಹೀಗೆ ಸುಮಾರು ನಲವತ್ತೈದು ಅರ್ಥಾಲಂಕಾರಗಳ ವಿಸ್ತೃತ ವಿವೇಚನೆಗಳನ್ನೊಳಗೊಂಡ ಗ್ರಂಥದ ಕುರಿತು ಚರ್ಚೆಯಾಗಲೇ ಇಲ್ಲ. ಹಳೆಗನ್ನಡ ಮತ್ತು ಹೊಸಗನ್ನಡ ಕಾವ್ಯಗಳಿಂದ ಉದಾಹರಣೆಗಳನ್ನೊಳಗೊಂಡ ಈ ಬಗೆಯ ಪುಸ್ತಕ ಕನ್ನಡದಲ್ಲಿ ಮತ್ತೊಂದಿಲ್ಲ. ಇಂತಹ ಹಲವು ಮುಖಗಳನ್ನು ನಾವು ಅಣ್ಣ ಮಹಾಬಲದಲ್ಲಿ ಓದಬಹುದಾಗಿದೆ. ತನ್ನ ಹರೆಯದ ಕಾಲದಲ್ಲಿ ಕುವೆಂಪುರೊಂದಿಗೆ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ವಾಗ್ವಾದ ನಡೆಸಿದ ಘಟನೆಗಳೂ ಹೆಗಡೆಯವರ ನಿರ್ಭೀತ ಸ್ವಭಾವನ್ನು ಬಿಚ್ಚಿಡಿಸುತ್ತದೆ.
ಎಮ್ ಎ ಹೆಗಡೆಯವರೆಂದೇ ಸಮಾಜದಲ್ಲಿ ಪ್ರಸಿದ್ಧರಾದ ಹೆಗಡೆಯವರಲ್ಲಿ ಮಹಾಬಲನೋರ್ವ ಇದ್ದಾನೆ ಎನ್ನುವದನ್ನು ಇಲ್ಲಿ ರಾಜಶೇಖರ ಹೆಗಡೆಯವರು ಗುರುತಿಸುತ್ತಾರೆ. ಎಂ ಎ ಹೆಗಡೆಯವರ ಜೀವನ ಕ್ರಮವನ್ನು ಹತ್ತಿರಿದಿಂದ ನೋಡಿದವರಿಗೆ ಅವರು ಅಪರಿಚಿತರಂತೇ ಕಾಣುತ್ತಾರೆ. ನಾಸ್ತಿಕರಂತೆ ತೋರುತ್ತಾರೆ.ಆದರೆ ಗರುಡ ಪುರಾಣವನ್ನು ವಾಚಿಸಿ ತಾಯಿಯ ಔರ್ಧದೈಹಿಕ ಕ್ರಿಯೆಗಳನ್ನು ನೆರವೇರಿಸುತ್ತಾರೆ. ಕುಟುಂಬ ಸಮೇತ ಕಾಶಿಯಾತ್ರೆಗೆ ಹೋಗುತ್ತಾರೆ. ಸಂಕೀರ್ಣವೆನಿಸಿಕೊಂಡ ವ್ಯಕ್ತಿತ್ವದೊಳಗೆ ತಮ್ಮವರೆನ್ನುವ ಭಾವನೆಯಿದೆ. ಸೀತಾವಿಯೋಗವನ್ನು ಬರೆಯಬಲ್ಲ ಅವರ ವಾಲ್ಮೀಕಿಯ ಮಾತೃ ಹೃದಯ ಹತ್ತಿರದಿಂದ ನೋಡಿದವರಿಗೆ ಮಾತ್ರ ಅರಿವಾಗುತ್ತದೆ. ಅಕಾಡೆಮಿಯ ಅಧ್ಯಕ್ಷರಾಗಿರುವಾಗ ನೊಂದವರಿಗೆ ತಮ್ಮ ಸ್ವಂತದ ಹಣವನ್ನು ನೆರವು ನೀಡಿ ತಣ್ಣಗೆ ಪ್ರಚಾರದಿಂದ ದೂರವಿರುವ ಗುಣ ಇವರಲ್ಲಿತ್ತು ಎನ್ನುವದನ್ನು ಸೋದಾಹರಣೆಯಾಗಿ ಇಲ್ಲಿ ವಿವರಿಸಲಾಗಿದೆ. ತನ್ನ ಅನುಭವಕ್ಕೆ ಬಂದಿರುವ ಈ ಎಲ್ಲಾ ಗುಣಗಳು ಇದೆಯೋ ಇಲ್ಲವೋ ಎನ್ನುವ ಅನುಮಾನ ಬಂದಾಗ ಅವರ ಈ ಎಲ್ಲಾ ಗುಣಗಳು ಸಮಾಜದ ಜನಸಾಮಾನ್ಯರಿಂದ ತೊಡಗಿ ಶತಾವಧಾನಿ ಗಣೇಶರು, ಎಚ್ ಎಸ್ ವಿ, ಡಾ. ಶ್ರೀರಾಮ ಭಟ್, ಡಾ. ಎಮ್ ಪ್ರಭಾಕರ ಜೋಷಿ ಸಹಿತವಾಗಿ ವಿದ್ವತ ವಲಯದಲ್ಲಿನ ಅಭಿಪ್ರಾಯವೂ ಅದಕ್ಕೆ ಸಹಮತ ವ್ಯಕ್ತಪಡಿಸುವದನ್ನು ಕಂಡಾಗ ಆ ಕುರಿತು ಮನಸ್ಸಿನಲ್ಲಿ ತೃಪ್ತಿ ಮೂಡಿದೆ. ಅಪರಿಚಿತ ಅಣ್ಣ ತನ್ನ ಹಿತೈಷಿಯಾಗಿ, ಗುರುವಾಗಿ, ಸ್ನೇಹಿತನಾಗಿ ಕೊನೆಗೆ ಮನಸ್ಸಿನಲ್ಲಿ ಶಾಶ್ವತವಾಗಿ ಮೂಡುವ ಭಾವನೆಯಾಗಿ ಕಂಡ ತನ್ನಣ್ಣನನ್ನು ಅವರ ತಮ್ಮ ರಾಜಶೇಖರ ಜೋಗಿನ್ಮನೆಯವರು ಸಾಹಿತ್ಯಲೋಕಕ್ಕೆ ಪರಿಚಯಿಸಿದ್ದಾರೆ.
ಕನ್ನಡದಲ್ಲಿ ವ್ಯಕ್ತಿಚಿತ್ರದ ಸಾಹಿತ್ಯಕ್ಕೆ ಕೊರತೆಯಿಲ್ಲ. ಆದರೆ ಹಲ ಆಯಾಮಗಳಲ್ಲಿ ಅಣ್ಣನನ್ನು ಹುಡುಕುವ ಆ ಮೂಲಕ ಅಣ್ಣನ ಬಹುಶ್ರುತ ವ್ಯಕ್ತಿತ್ವವನ್ನು ಸಾಹಿತ್ಯ ವಲಯ ಮತ್ತು ಎಲ್ಲಾ ಸಹೃದಯರೊಟ್ಟಿಗೆ ಸಂವಾದಿಯಾಗುವಂತೆ ಕಂಡುಕೊಂಡ ವ್ಯಕ್ತಿಚಿತ್ರಣದ ಕೃತಿ ಇದು. ಬೆಂಗಳೂರಿನ ತೇಜು ಪಬ್ಲಿಕೇಷನ್ ಬಹು ಸುಂದರವಾಗಿ ಪುಸ್ತಕ ರೂಪದಲ್ಲಿ ಈ ಕೃತಿಯನ್ನು ಹೊರತಂದಿದೆ. ಜೊತೆಗೆ ಎಮ್ ಎ ಹೆಗಡೆಯವರ ನೆನಪಿನ ಬಹು ಆಯಾಮದ ಫೋಟೋಗಳು ಇದರಲ್ಲಿ ಇದೆ. ಗಟ್ಟಿ ಮುಚ್ಚಳವನ್ನು ತೆಗೆದು ಜೇನೆನ್ನು ಸಾರಸ್ವತಲೋಕಕ್ಕೆ ಹಂಚಿದ ಚಂದದ ಕೃತಿ ಇದು.
ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ.