ಬುಡಕಟ್ಟುಗಳ ಅಧ್ಯಯನಗಳು ಕರ್ನಾಟಕದಲ್ಲಿ ವಿವಿಧ ಸ್ತರಗಳಲ್ಲಿ ನಡೆದಿವೆ. ಭಾರತ ಸರಕಾರ ಕರ್ನಾಟಕದಲ್ಲಿ ಗುರುತಿಸಿರುವ ಅರವತ್ಮೂರು ಬುಡಕಟ್ಟುಗಳಲ್ಲಿ ಕೆಲವನ್ನು ಪರಿಶಿಷ್ಟ ಜಾತಿಗೆ, ಕೆಲವನ್ನು ಪರಿಶಿಷ್ಟ ಪಂಗಡಕ್ಕೆ ಮತ್ತು ಉಳಿದವುಗಳನ್ನು ಅಲೆಮಾರಿ, ಅರೆ ಅಲೆಮಾರಿ ಬುಡಕಟ್ಟುಗಳೆಂದು ಪರಿಗಣಿಸಿ ಹಿಂದುಳಿದ ವರ್ಗಗಳಿಗೆ ಸೇರಿಸಿದ್ದಾರೆ. ಈ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳನ್ನು ಗಣನೆಗೆ ತೆಗೆದುಕೊಂಡರೆ ಕರ್ನಾಟದಲ್ಲಿ ಬುಡಕಟ್ಟುಗಳ ಅಧ್ಯಯನ ಇನ್ನಷ್ಟು ಸೂಕ್ಷ್ಮವಾಗಿ ನಡೆಯಬೇಕಾಗಿದೆ. ಬುಡಕಟ್ಟುಗಳ ಸಾಂಸ್ಕೃತಿಕ ಅಧ್ಯಯನ ಕುರಿತಂತೆ ಇಂಗ್ಲಿಷಿನಲ್ಲಿ ಪ್ರಕಟವಾಗಿರುವಷ್ಟು ಕೃತಿಗಳು ಕನ್ನಡವನ್ನು ಒಳಗೊಂಡಂತೆ ಯಾವುದೇ ಪ್ರಾದೇಶಿಕ ಭಾಷೆಗಳಲ್ಲಿ ಪ್ರಕಟವಾಗಲಿಲ್ಲ.
ಡಾ. ಅರುಣ್ ಜೋಳದಕೂಡ್ಲಿಗಿ ಬರೆಯುವ ಗಂಟಿಚೋರರ ಕಥನ ಸರಣಿಯಲ್ಲಿ ಹೊಸ ಬರಹ
‘ಕ್ರಿಮಿನಲ್ ಟ್ರೈಬ್ಸ್’ ರೂಪಾಂತರಗೊಂಡ ಬಗ್ಗೆ ಚಾರಿತ್ರಿಕ ಸಂಗತಿಗಳನ್ನು ಭಾರತದ ನೆಲೆಯಲ್ಲಿ ನೋಡುವುದಾದರೆ, ಭಾರತದ ಮೇಲೆ ಪೋರ್ಚುಗೀಸ್, ಫ್ರೆಂಚ್, ಇಂಗ್ಲಿಷರು ಆಕ್ರಮಣ ಮಾಡಲು ಶುರುವಾದಾಗ ಪ್ರತಿರೋಧ ಒಡ್ಡಿದವರಲ್ಲಿ ಈ ದೇಶದ ಬುಡಕಟ್ಟು ಸಮುದಾಯಗಳು ಕೂಡ ಸೇರಿದ್ದವು. ಅಂತೆಯೇ ಬುಡಕಟ್ಟುಗಳು ನೆಲೆಸಿದ್ದ ಕಾಡುಗಳು ಸಂಪತ್ಭರಿತವಾಗಿದ್ದವು. ಇಂತಹ ಸಂದರ್ಭದಲ್ಲಿ ಈ ಬುಡಕಟ್ಟುಗಳನ್ನು ಅರ್ಥ ಮಾಡಿಕೊಳ್ಳಲು ಅವರ ಅಧ್ಯಯನಗಳು ಶುರುವಾದವು. ಅಂತೆಯೇ ಅವರನ್ನು ನಿಯಂತ್ರಿಸಲು ಅವರ ಮೇಲೆ ದಾಳಿಗಳು ಶುರುವಾದವು.
ಈ ಸಂಘರ್ಷದ ಭಾಗವಾಗಿ ಬ್ರಿಟಿಷರು ಬುಡಕಟ್ಟುಗಳನ್ನು ನಿಯಂತ್ರಿಸಲು 1871ರಲ್ಲಿ ಅಪರಾಧಿ ಬುಡಕಟ್ಟುಗಳ ಕಾಯ್ದೆಯನ್ನು ಜಾರಿಗೊಳಿಸಿದರು. ಈ ಕಾಯ್ದೆ 1879ರಲ್ಲಿ ತಿದ್ದುಪಡಿಗೆ ಒಳಗಾಯಿತು. ಮುಂದುವರಿದು 1911 ಮತ್ತು 1924ರಲ್ಲಿ ಇನ್ನಷ್ಟು ಕಟ್ಟುನಿಟ್ಟಾಗಿ ಅಧಿಕೃತವಾಗಿ ಬ್ರಿಟಿಷರು ಭಾರತದ ಅಪರಾಧಿ ಬುಡಕಟ್ಟುಗಳ ಕಾಯ್ದೆಯನ್ನು ಜಾರಿಗೊಳಿಸಿದರು. ಈ ಕಾಯ್ದೆಯಡಿ ಬುಡಕಟ್ಟುಗಳ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಯಿತು. ಅಂತೆಯೇ ಇವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಅನುವಾಗುವಂತಹ ನಿಯಮಗಳನ್ನು ಮಾಡಿದರು. ಇದರ ಭಾಗವಾಗಿಯೇ ಇವರನ್ನು ದೊಡ್ಡ ಜೈಲುಗಳಂತಹ ತಂತಿಬೇಲಿ ಮತ್ತು ಬೃಹತ್ ಸುತ್ತುಗೋಡೆಗಳ ಸೆಟಲ್‌ಮೆಂಟುಗಳಲ್ಲಿ ಇಟ್ಟು ಇವರಿಗೆ ಶಿಕ್ಷಣ ಮತ್ತು ವೃತ್ತಿ ತರಬೇತಿಗಳನ್ನು ಕೊಡಲಾಯಿತು. ಮುಖ್ಯವಾಗಿ ಇಲ್ಲಿ ಬಂಧಿಸಲ್ಪಟ್ಟ ಮಾನವ ಸಂಪನ್ಮೂಲವನ್ನು ಉಚಿತವಾಗಿ ಬಳಸಿಕೊಳ್ಳುವ ಹುನ್ನಾರವನ್ನೂ ಮಾಡಿದರು.
ಬಾಂಬೆ ಪ್ರೆಸಿಡೆನ್ಸಿಯು ಆಡಳಿತಾತ್ಮಕ ಅನುಕೂಲಕ್ಕಾಗಿ ನಾಲ್ಕು ವಲಯಗಳನ್ನು ಮಾಡಿಕೊಂಡಿತ್ತು. ಉತ್ತರವಲಯ, ಮಧ್ಯವಲಯ, ದಕ್ಷಿಣವಲಯ, ಕೇಂದ್ರವಲಯ. ಉತ್ತರವಲಯದಲ್ಲಿ 4 ಸೆಟಲ್‌ಮೆಂಟುಗಳಿದ್ದವು. ಅಹಮದಾಬಾದ್, ಧೂಲಿಯ, ಜಲಗಾಂ, ದೋಹದ್, ಮಧ್ಯವಲಯದಲ್ಲಿ 5 ಸೆಟಲ್‌ಮೆಂಟುಗಳಿದ್ದವು. ಸೊಲ್ಲಾಪುರ್, ಬಿಜಾಪುರ(ಪರಿವರ್ತನಾ ಕೇಂದ್ರ), ಬಿಜಾಪುರ(ಕೈಗಾರಿಕಾ ವಲಯ), ಬಾಗಲಕೋಟ, ನಿರಾ. ದಕ್ಷಿಣವಲಯದಲ್ಲಿ 4 ಸೆಟಲ್‌ಮೆಂಟುಗಳಿದ್ದವು. ಹುಬ್ಬಳ್ಳಿ, ಗದಗ, ಬೆಳಗಾಂವ, ಖಾನಾಪುರ. ಕೇಂದ್ರ ವಲಯದಲ್ಲಿ 3 ಸೆಟಲ್‌ಮೆಂಟುಗಳಿದ್ದವು. ಅಂಬರನಾಥ, ಬಾರಾಮತಿ, ಮುಂದ್ವ. ಹೀಗೆ ಒಟ್ಟು 16 ಸೆಟಲ್‌ಮೆಂಟುಗಳಿದ್ದವು. ಉಳಿದಂತೆ 16 ಸ್ವತಂತ್ರ ಕಾಲೋನಿಗಳಿದ್ದವು, ಅವುಗಳೆಂದರೆ ಸೊಲ್ಲಾಪುರ, ಇಟಗಿ, ಇಂಡಿ, ಬಿಜಾಪುರ, ಬಾಗಲಕೋಟ, ಗದಗ, ಹುಬ್ಬಳ್ಳಿ, ಬೆಳಗಾಂವ, ಬಾರಾಮತಿ, ದೊಹಾಡ್, ಬಾರಸಿ, ಹರೆಗಾಂವ, ಮಲ್ಸಿರಾಸ್, ಖಾನಾಪುರ, ಧುಲಿಯಾ.
ಬಾಂಬೆ ಕರ್ನಾಟಕದಲ್ಲಿ ಇಂಡಿ, ಬಿಜಾಪುರ, ಬೆಳಗಾಂವ, ಕಾರವಾರ, ಧಾರವಾಡ ಜಿಲ್ಲೆಗಳಲ್ಲಿ ಒಟ್ಟು 7 ಸೆಟಲ್‌ಮೆಂಟುಗಳಿದ್ದವು. ಬಾಗಲಕೋಟ, ಇಂಡಿ, ಖಾನಾಪುರ, ಗದಗ ಮತ್ತು ಹುಬ್ಬಳ್ಳಿ ಪ್ರೀಕಾಲೊನಿಗಳೂ ಸೇರಿದಂತೆ 19 ಬುಡಕಟ್ಟುಗಳಿದ್ದವು. ಮಾರ್ಚ್ 1947ರ ಹೊತ್ತಿಗೆ ಇವುಗಳ ಜನಸಂಖ್ಯೆ 1248ರಷ್ಟಿತ್ತು. ಈ ಸೆಟಲ್‌ಮೆಂಟ್ ಮತ್ತು ಕಾಲೋನಿಗಳಲ್ಲಿ ಬದುಕಿದ ಬುಡಕಟ್ಟುಗಳಲ್ಲಿ ‘ಗಂಟಿಚೋರ್’ ಕೂಡ ಒಂದಾಗಿತ್ತು. ಈ ಸಮುದಾಯ ಹಳೆಯ ಬಾಂಬೆ ಪ್ರೆಸಿಡೆನ್ಸಿಯಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ದೇಶವ್ಯಾಪಿ ಗಂಟಿಚೋರ್ ಸಮುದಾಯದ ನೆಲೆಗಳನ್ನು ನೋಡಿದರೆ ಮುಖ್ಯವಾಗಿ ಮಹಾರಾಷ್ಟ್ರ(ಪೂನಾ, ಸತಾರ, ನಾಸಿಕ್, ಸೊಲ್ಲಾಪುರ, ಅಹಮದ್ ನಗರ), ಕರ್ನಾಟಕ(ಬಿಜಾಪುರ, ಬೆಳಗಾಂ, ಗದಗ, ಹುಬ್ಬಳ್ಳಿ), ಆಂಧ್ರ, ಗುಜರಾತ್ ಈ ನಾಲ್ಕು ರಾಜ್ಯಗಳಲ್ಲಿ ಕಂಡುಬರುತ್ತಾರೆ.
ಬಾಂಬೆ ಪ್ರೆಸಿಡೆನ್ಸಿಯಲ್ಲಿ ಸ್ಟಾರ್ಟೆ ಅವರನ್ನು ಯೋಜನಾ ಅನುಷ್ಠಾನಾಧಿಕಾರಿಯನ್ನಾಗಿ ನೇಮಿಸಲಾಯಿತು. ಈತ ‘ಕ್ರಿಮಿನಲ್ ಟ್ರೈಬ್ಸ್ ಸೆಟ್ಲಮೆಂಟ್ ಡಿಪಾರ್ಟ್‌ಮೆಂಟೊಂದನ್ನು’ ಸ್ಥಾಪಿಸಿದನು. 1909ರಲ್ಲಿ ಬಿಜಾಪುರದಲ್ಲಿ ಸೆಟಲ್‌ಮೆಂಟ್ ಸ್ಥಾಪನೆಯಾಯಿತು. ಇದು 15 ಸಾವಿರ ಬುಡಕಟ್ಟು ಜನಸಂಖ್ಯೆಯನ್ನು ಒಳಗೊಂಡಿತ್ತು. ಇದರಲ್ಲಿ ಗಂಟಿಚೋರ್, ಅರಣ್ಯಶಿಕಾರಿ, ಚಪ್ಪರ್‍ಬಂದ್ ಮುಖ್ಯವಾಗಿದ್ದರು. 1911ರಲ್ಲಿ ಆರು ವರ್ಷದ ಮಕ್ಕಳನ್ನು ‘ಅಪರಾಧಿ’ ಚಟುವಟಿಕೆಯಿಂದ ಬಿಡಿಸಲು ಪ್ರತ್ಯೇಕವಾಗಿ ಇಡಲು ಕಾನೂನು ರೂಪಿಸಲಾಯಿತು. 1919ರಲ್ಲಿ ಹುಬ್ಬಳ್ಳಿ ಸೆಟಲ್‌ಮೆಂಟ್ ಸ್ಥಾಪನೆಯಾಯಿತು. 1924ರ ಕ್ರಿಮಿನಲ್ ಟ್ರೈಬ್ಸ್ ಆಕ್ಟ್ ಪ್ರಕಾರ ಅಪರಾಧಿ ಬುಡಕಟ್ಟುಗಳ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಲಾಯಿತು. ಬಿಜಾಪುರ ಸೆಟಲ್‌ಮೆಂಟ್‌ನ ಯಶಸ್ವಿ ಕಾರ್ಯಾಚರಣೆಯ ಫಲವಾಗಿ 1924ರಲ್ಲಿ ಹುಬ್ಬಳ್ಳಿ, ಗದಗ, ಬೆಳಗಾಂ, ಖಾನಾಪುರ, ಬಾಗಲಕೋಟೆ ಮುಂತಾದ ಕಡೆಗಳಲ್ಲಿ ಸೆಟಲ್‌ಮೆಂಟ್ ಸ್ಥಾಪಿಸಲಾಯಿತು.
ಈ ಕಾಯ್ದೆಯಡಿ ಬುಡಕಟ್ಟುಗಳ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಯಿತು. ಅಂತೆಯೇ ಇವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಅನುವಾಗುವಂತಹ ನಿಯಮಗಳನ್ನು ಮಾಡಿದರು. ಇದರ ಭಾಗವಾಗಿಯೇ ಇವರನ್ನು ದೊಡ್ಡ ಜೈಲುಗಳಂತಹ ತಂತಿಬೇಲಿ ಮತ್ತು ಬೃಹತ್ ಸುತ್ತುಗೋಡೆಗಳ ಸೆಟಲ್‌ಮೆಂಟುಗಳಲ್ಲಿ ಇಟ್ಟು ಇವರಿಗೆ ಶಿಕ್ಷಣ ಮತ್ತು ವೃತ್ತಿ ತರಬೇತಿಗಳನ್ನು ಕೊಡಲಾಯಿತು.
ಬುಡಕಟ್ಟುಗಳ ಸುಧಾರಣೆಯ ಕಾರಣಕ್ಕೆ ಮೂರು ಬಗೆಯ ಸೆಟಲ್‌ಮೆಂಟುಗಳನ್ನು ಸ್ಥಾಪಿಸಿದರು. ಕೃಷಿವಲಯ, ಕೈಗಾರಿಕಾ ವಲಯ, ಸುಧಾರಣಾ ವಲಯಕ್ಕೆ ಸಂಬಂಧಿಸಿದ್ದವು. ಕರ್ನಾಟಕದಲ್ಲಿ ಕೃಷಿ ಸೆಟಲ್‌ಮೆಂಟನ್ನು ಶಿಗ್ಗಾವಿ ತಾಲೂಕಿನ ತಿಮ್ಮಾಪುರ, ಬೆಳ್ಳಿಗಟ್ಟಿ, ಶಿಗ್ಗಾವಿ, ಹನುಮನಹಳ್ಳಿ. ಹಿರೇಕೆರೂರು ಭಾಗದ ನಿಟ್ಟೂರು, ಹಿರೇಕೆರೂರು, ಶಿರಹಟ್ಟಿ ತಾಲೂಕಿನ ಬಾಲೆಹೊಸೂರುಗಳಲ್ಲಿ ಸ್ಥಾಪಿಸಲಾಯಿತು. ಇಲ್ಲಿ ಕೃಷಿಗೆ ಉಚಿತವಾಗಿ ಭೂಮಿ ಮತ್ತು ಮನೆ ಕಟ್ಟಿಕೊಳ್ಳಲು ಉಚಿತ ಜಾಗಗಳನ್ನು ವಿತರಿಸಲಾಯಿತು. ಕೈಗಾರಿಕಾ ಸೆಟಲ್‌ಮೆಂಟುಗಳನ್ನು ಹುಬ್ಬಳ್ಳಿ, ಗದಗ, ನರಗುಂದಗಳಲ್ಲಿ ಸ್ಥಾಪಿಸಲಾಯಿತು. ಹುಬ್ಬಳ್ಳಿಯಲ್ಲಿ ರೈಲ್ವೇ ವರ್ಕ್‌ಶಾಪನ್ನು ತೆರೆಯಲಾಯಿತು. 1934ರಲ್ಲಿ ಹುಬ್ಬಳ್ಳಿ-ಗದಗ ಸೆಟಲ್‌ಮೆಂಟಲ್ಲಿ ಗಂಟಿಚೋರರು 420ರಷ್ಟಿದ್ದರು (2104 ಒಟ್ಟು). ಹೀಗೆ ಬ್ರಿಟಿಷರ ಸೆಟಲ್‌ಮೆಂಟುಗಳು ಸ್ಥಾಪನೆಯಾಗಿ ಅಲ್ಲಿ ಬುಡಕಟ್ಟು ಸಮುದಾಯಗಳು ನೆಲೆಸತೊಡಗಿದವು.
1947ರಲ್ಲಿ ಭಾರತಕ್ಕೆ ಸ್ವಾಂತಂತ್ರ್ಯ ಸಿಕ್ಕರೂ ಈ ಸೆಟಲ್‌ಮೆಂಟ್ ಬುಡಕಟ್ಟುಗಳು ಪರತಂತ್ರರಾಗಿಯೇ ಉಳಿದರು. ಇದನ್ನರಿತ ಜವಹರಲಾಲ್ ನೆಹರು ಈ ಕುರಿತು ಎಂ.ಅನಂತಶಯನಂ ಅಯ್ಯಂಗಾರ್ ಅವರ ಅಧ್ಯಕ್ಷತೆಯಲ್ಲಿ ಕಮಿಟಿ ಮಾಡಿ, ಈ ಸಮಿತಿಯ ಶಿಫಾರಸ್ಸಿನ ಅನ್ವಯವಾಗಿ 31.8.1952ರಲ್ಲಿ ಸೆಟಲ್‌ಮೆಂಟ್ ವಾಸಿ ಬುಡಕಟ್ಟುಗಳನ್ನು ಬಂಧಮುಕ್ತಗೊಳಿಸಲಾಯಿತು. ಕರ್ನಾಟಕದ ಬಾಗಲಕೋಟೆ, ಬಿಜಾಪುರ, ದಾಂಡೇಲಿ, ಗದಗ, ಗೋಕಾಕ, ಹುಬ್ಬಳ್ಳಿ ಸೆಟಲ್‌ಮೆಂಟ್(ವಸಾಹತು)ಗಳಲ್ಲಿ ವಾಸಿಸುತ್ತಿದ್ದ ಕೊರಮ, ಗಂಟಿಚೋರ್, ಭೋವಿ, ಪಾರ್ಧಿ, ಕಂಜರಭಾಟ, ಚಪ್ಪರಬಂದ್, ಹರಣಶಿಕಾರಿ, ಮಾಂಗ್ ಗಾರುಡಿಗ ಬುಡಕಟ್ಟುಗಳು ಇದೇ ಸಂದರ್ಭದಲ್ಲಿ ವಿಮುಕ್ತವಾದವು. ಈ ಸಮುದಾಯಗಳು ಮುಂದೆ ಬದುಕು ಕಟ್ಟಿಕೊಳ್ಳಲು ಬಹುನೆಲೆಯಲ್ಲಿ ಸಂಘರ್ಷದ ಬದುಕನ್ನು ಸವೆಸಿವೆ. ಈ ಬಗ್ಗೆ ಈ ಸಮುದಾಯಗಳ ಅಧ್ಯಯನಗಳೂ ನಡೆದಿವೆ.
ಹಾಗೆ ನೋಡಿದರೆ, ಬುಡಕಟ್ಟುಗಳ ಅಧ್ಯಯನಗಳು ಕರ್ನಾಟಕದಲ್ಲಿ ವಿವಿಧ ಸ್ತರಗಳಲ್ಲಿ ನಡೆದಿವೆ. ಭಾರತ ಸರಕಾರ ಕರ್ನಾಟಕದಲ್ಲಿ ಗುರುತಿಸಿರುವ ಅರವತ್ಮೂರು ಬುಡಕಟ್ಟುಗಳಲ್ಲಿ ಕೆಲವನ್ನು ಪರಿಶಿಷ್ಟ ಜಾತಿಗೆ, ಕೆಲವನ್ನು ಪರಿಶಿಷ್ಟ ಪಂಗಡಕ್ಕೆ ಮತ್ತು ಉಳಿದವುಗಳನ್ನು ಅಲೆಮಾರಿ, ಅರೆ ಅಲೆಮಾರಿ ಬುಡಕಟ್ಟುಗಳೆಂದು ಪರಿಗಣಿಸಿ ಹಿಂದುಳಿದ ವರ್ಗಗಳಿಗೆ ಸೇರಿಸಿದ್ದಾರೆ. ಈ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳನ್ನು ಗಣನೆಗೆ ತೆಗೆದುಕೊಂಡರೆ ಕರ್ನಾಟದಲ್ಲಿ ಬುಡಕಟ್ಟುಗಳ ಅಧ್ಯಯನ ಇನ್ನಷ್ಟು ಸೂಕ್ಷ್ಮವಾಗಿ ನಡೆಯಬೇಕಾಗಿದೆ. ಬುಡಕಟ್ಟುಗಳ ಸಾಂಸ್ಕೃತಿಕ ಅಧ್ಯಯನ ಕುರಿತಂತೆ ಇಂಗ್ಲಿಷಿನಲ್ಲಿ ಪ್ರಕಟವಾಗಿರುವಷ್ಟು ಕೃತಿಗಳು ಕನ್ನಡವನ್ನು ಒಳಗೊಂಡಂತೆ ಯಾವುದೇ ಪ್ರಾದೇಶಿಕ ಭಾಷೆಗಳಲ್ಲಿ ಪ್ರಕಟವಾಗಲಿಲ್ಲ.
ಭಾರತದ ಯಾವುದೇ ಒಂದು ಜಾತಿ ಅಥವಾ ಜನಾಂಗ ಪರಿಶಿಷ್ಟ ಬುಡಕಟ್ಟಿನ ಮಾನ್ಯತೆ ಪಡೆಯಬೇಕಾದರೆ ಭಾರತದ ಸಂವಿಧಾನದ 342ನೆಯ ನಿಯಮದ ಪ್ರಕಾರ ಅದು ರಾಷ್ಟ್ರಾಧ್ಯಕ್ಷರಿಂದ ಮೊದಲು ಸೂಚಿತವಾಗಿ ನಂತರ ಸಂಸತ್ತಿನಲ್ಲಿ ಒಪ್ಪಿತವಾಗಬೇಕು. ಭಾರತ ಸರ್ಕಾರ ‘ಪರಿಶಿಷ್ಟ ಬುಡಕಟ್ಟು’ ಎಂದು ಗುರುತಿಸುವಾಗ ಆ ಜನಾಂಗದ ಗುಣಲಕ್ಷಣ ಮತ್ತು ಆರ್ಥಿಕ ಸ್ಥಿತಿಗತಿಗಳ ಆಧಾರದ ಮೇಲೆಯೇ ‘ಪರಿಶಿಷ್ಟ ವರ್ಗಗಳ’ ಪಟ್ಟಿ ಮಾಡುತ್ತದೆ. ಈ ಕಾರಣದಿಂದಾಗಿ ಭಾರತದ ಕೆಲವು ‘ಬುಡಕಟ್ಟುಗಳು’ ಪರಿಶಿಷ್ಟ ಬುಡಕಟ್ಟುಗಳ ಮಾನ್ಯತೆ ಪಡೆಯದೇ ಹೋಗಿವೆ. ಈ ಮಾನದಂಡದ ಪ್ರಕಾರ ಕರ್ನಾಟಕದಲ್ಲಿ ನೆಲೆಸಿದ ಗಂಟಿಚೋರ್ ಸಮುದಾಯ ಪರಿಶಿಷ್ಟ ಜಾತಿಗೆ ಸೇರಿದೆ.
ಕರ್ನಾಟಕದಲ್ಲಿ ಇಲ್ಲಿಯವರೆಗೆ ನಡೆದಿರುವ ಬುಡಕಟ್ಟುಗಳ ಅಧ್ಯಯನಗಳ ಒಂದು ಸ್ಥೂಲ ನೋಟವನ್ನು ಹೀಗೆ ಗುರುತಿಸಬಹುದು. ಮೊದಲ ಹಂತದಲ್ಲಿ ಬ್ರಿಟಿಶ್ ವಸಾಹತುಶಾಹಿ ಆಡಳಿತಗಾರರು ಬುಡಕಟ್ಟು ಅಧ್ಯಯನಗಳತ್ತ ಗಮನ ಹರಿಸಿದರು. ಅದು ಕೂಡ ಅವರ ವಾಸಿತ ನೆಲೆಗಳು ನೈಸರ್ಗಿಕ ಸಂಪತ್ತಿನಿಂದ ಕೂಡಿದ್ದರಿಂದ ಇದನ್ನು ದೋಚಲು ಅವರ ಬಗ್ಗೆ ತಿಳಿಯುವುದು ಅನಿವಾರ್ಯವಾಗಿತ್ತು. 1909ರಲ್ಲಿ ಎಡ್ಗರ್ ಥರ್‍ಸ್ಟನ್ ಮತ್ತು ಕೆ. ರಂಗಾಚಾರಿ ಅವರ ‘Caste and tribes of southern India’ ಎಂಬ ಕೃತಿಯು ದಕ್ಷಿಣ ಭಾರತದ ಅನೇಕ ಜಾತಿ ಮತ್ತು ಬುಡಕಟ್ಟುಗಳ ಸಂಕ್ಷಿಪ್ತ ವಿವರಣೆಯನ್ನು ಒಳಗೊಂಡಿದೆ. 1926-1935ರಲ್ಲಿ ಎಚ್.ವಿ. ನಂಜುಂಡಯ್ಯ ಮತ್ತು ಎಲ್.ಕೆ. ಅಯ್ಯರ್ ಅವರ ನಾಲ್ಕು ಸಂಪುಟಗಳಲ್ಲಿ ಪ್ರಕಟಿಸಿರುವ ‘The Mysore tribes and castes’ ಎಂಬ ಕೃತಿಗಳು ಬುಡಕಟ್ಟು ಅಧ್ಯಯನದ ಮಹತ್ವ ಕೊಡುಗೆಗಳಾಗಿವೆ. 1926ರಲ್ಲಿ ಸೈಯದ್ ಸಿರಾಜ್-ಉಲ್-ಹುಸೇನ್ ಅವರ ‘The caste and tribes of Nizam’s Daminion’ ಎಂಬ ಗ್ರಂಥ ಹೈದರಾಬಾದ್ ಕರ್ನಾಟಕದ ಅನೇಕ ಜಾತಿ ಮತ್ತು ಬುಡಕಟ್ಟುಗಳ ಪರಿಚಯವಿದೆ. ಎ.ಎ.ಡಿ.ಲೂಯಿಸ್ ಅವರು 1963ರಲ್ಲಿ ‘Tribes of Mysore’ ಎಂಬ ಕೃತಿಯಲ್ಲಿ ಮೈಸೂರು ರಾಜ್ಯದಲ್ಲಿರುವ 27 ಬುಡಕಟ್ಟುಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಣೆಗಳನ್ನು ಕೊಟ್ಟಿದ್ದಾರೆ. 1975ರಲ್ಲಿ ಎಲ್.ಜಿ. ಹಾವನೂರು ಅವರ ‘Karnataka Backward class commission report’ದಲ್ಲಿ ಕರ್ನಾಟಕದ ವಿವಿಧ ಬುಡಕಟ್ಟುಗಳ ಮಾಹಿತಿಯಿದೆ.
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಐ.ಬಿ.ಎಚ್. ಪ್ರಕಾಶನ ಮತ್ತು ಮೈಸೂರಿನ ಭಾರತೀಯ ಸರ್ವೇಕ್ಷಣ ಸಂಸ್ಥೆಯ ಮಾನವ ವಿಜ್ಞಾನ ಸಂಸ್ಥೆಗಳು ಕರ್ನಾಟಕದ ವಿವಿಧ ಬುಡಕಟ್ಟುಗಳ ಕುರಿತು ಅನೇಕ ಸಣ್ಣ-ಪುಟ್ಟ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು 1993ರಲ್ಲಿ ಬರಗೂರು ರಾಮಚಂದ್ರಪ್ಪ ಅವರ ಸಂಪಾದಕತ್ವದಲ್ಲಿ ಬಂದ ಉಪಸಂಸ್ಕೃತಿ ಮಾಲೆಯು ಮಹತ್ವದ್ದು. 1994ರಿಂದ ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿ ‘ಬುಡಕಟ್ಟು ಅಧ್ಯಯನ ವಿಭಾಗ’ ಅಸ್ತಿತ್ವಕ್ಕೆ ಬಂದ ನಂತರ ಬುಡಕಟ್ಟುಗಳ ಕುರಿತ ಅಧ್ಯಯನ ಸಂಶೋಧನೆಯ ಭಾಗವಾಗಿ ನಡೆಯುತ್ತಿದೆ. ಈಚೆಗೆ 2008ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಕಟಿಸಿದ ಅಲೆಮಾರಿ ಸಮುದಾಯಗಳ ಅಧ್ಯಯನ ಮಾಲೆಯಲ್ಲಿ ಕೆಲವು ಸಮುದಾಯ ಅಧ್ಯಯನಗಳು ಪ್ರಕಟವಾಗಿವೆ. ಇದೀಗ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಸಂಸ್ಥೆಯು ನಡೆಸುತ್ತಿರುವ ಪರಿಶಿಷ್ಟ ಜಾತಿಗೆ ಸೇರುವ ಬುಡಕಟ್ಟುಗಳ ಅಧ್ಯಯನಗಳನ್ನು ನಡೆಸುತ್ತಿರುವುದು ಕೂಡ ಚಾರಿತ್ರಿಕವಾಗಿ ಗಮನಿಸಬೇಕಾದ ಸಂಗತಿಯಾಗಿದೆ.
(ಚಿತ್ರಗಳು : ಅಂತರ್ಜಾಲ)
ಅರಣ್ ಜೋಳದಕೂಡ್ಲಿಗಿ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಜೋಳದಕೂಡ್ಲಿಗಿಯವರು. ಜಾನಪದ ಎಂ.ಎ ಮತ್ತು ಕನ್ನಡ ಸಾಹಿತ್ಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿಗಳನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ಪಡೆದರು. ಅಲ್ಲಿಯೇ ಪಿಎಚ್.ಡಿ ಪದವಿ ಪಡೆದು, ಪ್ರಸ್ತುತ ಪೋಸ್ಟ್ ಡಾಕ್ಟರಲ್ ಉನ್ನತ ಸಂಶೋಧನೆಯಲ್ಲಿ ಮುಗಿಸಿದ್ದಾರೆ.ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಕಟಿತ ಕೃತಿಗಳು: ನೆರಳು ಮಾತನಾಡುವ ಹೊತ್ತು (ಕವಿತೆ, 2004) ಸಂಡೂರು ಭೂಹೋರಾಟ ( ಸಂಶೋಧನೆ, 2008) ಅವ್ವನ ಅಂಗನವಾಡಿ ( ಕವನಸಂಕಲನ, 2010), ಕನ್ನಡ ಜಾನಪದ ತಾತ್ವಿಕ ನೆಲೆಗಳು ( ಪಿಎಚ್.ಡಿ ಸಂಶೋಧನೆ, 2012), ಜಾನಪದ ಮುಖಾಮುಖಿ (ಸಂಶೋಧನೆ, 2013), ಜಾನಪದ ವರ್ತಮಾನ (ಸಂಶೋಧನೆ, 2013), ಕನಸೊಡೆದೆದ್ದೆ ( ವಿಮರ್ಶೆ, 2013) ಗಂಟಿಚೋರ್ ಸಮುದಾಯ (ಸಂಶೋಧನೆ, 2016) ತತ್ವಪದ ಪ್ರವೇಶಿಕೆ (ಪ್ರೊ.ರಹಮತ್ ತರೀಕೆರೆ ಅವರ ಜತೆ ಸಹ ಸಂಪಾದಕ, 2017) ಓದು ಒಕ್ಕಾಲು ( ಸಾಹಿತ್ಯ ವಿಮರ್ಶೆ, 2020) ಕೊರೋನಾ ಜಾನಪದ (ನವಜಾನಪದ ಕುರಿತ ಸಂಶೋಧನ ಲೇಖನಗಳ ಸಂಕಲನ, 2020) ನಡುವೆ ಸುಳಿವ ಹೆಣ್ಣು ( ಮಂಜಮ್ಮ ಜೋಗತಿ ಅವರ ಆತ್ಮಕಥನದ ನಿರೂಪಣೆ, 2020)