ಕೆನಡಾದಲ್ಲಿ ಹೈ ಸ್ಕೂಲ್ ಓದುವ ಮಕ್ಕಳು 40 ಗಂಟೆಗಳ ಸೇವಾ ಕಾರ್ಯಗಳನ್ನು ಮಾಡಬೇಕು. ಆದನ್ನು ಮುಗಿಸಿದರೆ ಮಾತ್ರ ಅವರಿಗೆ ಹೈ ಸ್ಕೂಲ್ ಮುಗಿಸಿದ ಪ್ರಮಾಣ ಪತ್ರವನ್ನು ಕೊಡುತ್ತಾರೆ. ಯಾವ ಸಂಸ್ಥೆಗೆ ಸೇವೆ ಮಾಡುತ್ತೇವೆ, ಎಷ್ಟು ಗಂಟೆಗಳು ಮಾಡುತ್ತೇವೆ ಎಂದು ನಮೂದಿಸಿ, ಸೇವಾ ಸಂಸ್ಥೆಗಳ ವಿವರ ಮತ್ತು ಅಲ್ಲಿನ ಪರಿಚಾರಕರ ಸಹಿಯ ಜೊತೆಗೆ ಅವರ ವಿವರಗಳನ್ನು ನಮೂದಿಸಬೇಕು. ಎಲ್ಲಾ ಮಕ್ಕಳು ಇದನ್ನು ಬಹಳ ನ್ಯಾಯಯುತವಾಗಿ ಮತ್ತು ನಿಖರ ಮಾಹಿತಿಯೊಂದಿಗೆ ಪೂರ್ಣ ಮಾಡುತ್ತಾರೆ. ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಕೊಡುವುದಿಲ್ಲ.
ಪ್ರಶಾಂತ್ ಬೀಚಿ ಅಂಕಣ
ಭೂಮಿಯೆ ಒಂದು ಸೂಜಿಗ, ನಭೋಮಂಡಲವನ್ನು ವಿವರಿಸುವಾಗ ಭೂಮಿ ಒಂದು ಸಣ್ಣ ಕಣ, ಆ ಕಣದಲ್ಲಿ ಮನುಷ್ಯನೆಂಬುವವನು ಅತೀಸೂಕ್ಷ್ಮ ಕಣ. ಅದಕ್ಕೆಂದೆ ಗುಂಡಪ್ಪನವರು ಮನುಷ್ಯನನ್ನು ಸೂರ್ಯ ಚಂದ್ರರಿಗೆ, ಪ್ರಕೃತಿಗೆ ಹೋಲಿಸಿ, ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ ಎಂದಿದ್ದರು. ಅಷ್ಟಾದರೂ ಮನುಷ್ಯನ ಧಿಮಾಕು, ದರ್ಪ ಮತ್ತು ಅಹಂಕಾರಗಳಿಗೆ ಕೊನೆಯಿಲ್ಲ. ಆದರೆ ಭೂಮಿಯಲ್ಲಿ ನಾವು ಮಾಡಿಕೊಂಡಿರುವ ಖಂಡಗಳಲ್ಲಿ ಅಥವ ದೇಶಗಳಲ್ಲಿ, ಮನುಷ್ಯನ ರೂಪ, ಬಣ್ಣಗಳು ಬದಲಾಗುತ್ತವೆ. ಹತ್ತಿರದಿಂದ ನೋಡಿದರೆ ಭೂಮಿಯಲ್ಲಿರುವ ಮನುಷ್ಯರೆಲ್ಲಾ ಒಂದೆ. ಅದೇ ಅಹಂ, ಅದೇ ಬಿಗುಮಾನು, ಅದೇ ಆಲೋಚನೆ, ಅದೇ ದುರಾಲೋಚನೆ, ಅದೇ ಹೆಮ್ಮೆ, ಅದೇ ಗಾಂಭೀರ್ಯ, ಅದೇ ಲಂಪಟತನ, ಹೀಗೆ ಒಂದು ಭೌಗೋಳಿಕ ಭಾಗದಲ್ಲಿ ಕಾಣ ಬರುವ ಗುಣಲಕ್ಷಣಗಳೆ ಬೇರೆ ಭೂಭಾಗದಲ್ಲು ಕಾಣ ಬರುತ್ತಾರೆ. ಆಹಾರ, ಉಡುಗೆ-ತೊಡುಗೆ, ಸಂಸ್ಕಾರ, ಪರಂಪರೆ, ಜೀವನ ಶೈಲಿ, ದೇಹದ ಬಣ್ಣ ಎಲ್ಲವೂ ಬೇರೆ ಬೇರೆಯಾಗಿದ್ದರೂ ಗುಣ ಲಕ್ಷಣಗಳು ಒಬ್ಬರಿಗೊಬ್ಬರಿಗೆ ಹೊಂದುತ್ತದೆ.
ಕೆಲವು ದಶಕಗಳ ಹಿಂದಿನ ತನಕ ಭಾರತದಲ್ಲಿದ್ದ ಅನೇಕರಿಗೆ ಹೊರದೇಶಗಳ ವಿಷಯಗಳು ಬಹಳ ವಿಸ್ಮಯ ಅಥವ ಆಶ್ಚರ್ಯತರಿಸುತ್ತಿತ್ತು. ಗ್ಲೋಬಲೈಸೇಷನ್ ಎನ್ನುವ ಒಂದು ಪರಿಕ್ರಮದಿಂದ ಭಾರತದ ಸಣ್ಣ ಊರುಗಳಲ್ಲೂ ಪೀಜ಼ಾ ಎನ್ನುವ ಆಹಾರ ಪದಾರ್ಥ ದೊರೆಯುವಂತಾಗಿದೆ. ಬ್ರೆಡ್ ತಿಂದು ಬದುಕುತ್ತಾರೆ ಎಂದು ನಗುತ್ತಿದ್ದ ಜನ, ಮೇಜಿನಂತಹ ವಸ್ತುವಿನ ಮೇಲೆ ಕೂತು ಮಲ ವಿಸರ್ಜಿಸುತ್ತಾರಂತೆ ಎನ್ನುತ್ತಿದ್ದವರು, ರಸ್ತೆಯಲ್ಲಿ ಹೇಗೆ ಮುತ್ತಿಡುತ್ತಾರೆ ಎಂದು ಮೂಗುಮುರಿಯುತ್ತಿದ್ದವರು, ಮದುವೆಯ ನಂತರ ಅಪ್ಪ ಅಮ್ಮನನ್ನು ಬಿಟ್ಟು ದೂರ ಹೋಗುತ್ತಾರೆ ಎಂದು ದೂರುತ್ತಿದ್ದವರು ಬದಲಾಗಿದ್ದಾರೆ. ಯಾವ ಸಂಗತಿಗಳು ಕೇವಲ ಹೊರದೇಶದಲ್ಲಿ ಮಾತ್ರ ಎನ್ನುತ್ತಿದ್ದೆವೂ, ಅದೆಲ್ಲವೂ ಭಾರತದಲ್ಲಿ ಹಾಸುಹೊಕ್ಕಾಗಿದೆ. ಕೆಲವರು ಅದನ್ನು ವಿಶಾಲ ಚಿಂತನೆ ಎನ್ನುವ ಹೆಸರಿನಲ್ಲಿ ಒಪ್ಪಿಕೊಂಡರೆ, ಇನ್ನು ಕೆಲವರು ಅವರ ಮನೆಯಲ್ಲಿ ಆಚರಣೆಗೆ ಬರುವವರೆಗೂ ದೂಷಿಸಿರುತ್ತಿರುತ್ತಾರೆ. ನಮಗೆ ಅರಿವಾಗದೆ ಪಾಶ್ಚಿಮಾತ್ಯ ಪದ್ದತಿಗೆ ಶರಣಾಗಿದ್ದೇವೆ. ಇಷ್ಟಾದರೂ, ಕೆಲವು ಸಂಗತಿಗಳು ಈಗಲೂ ಭಿನ್ನವಾಗಿದೆ.
ಕೆನಡಾದಲ್ಲಿ ಹೈ ಸ್ಕೂಲ್ ಓದುವ ಮಕ್ಕಳು 40 ಗಂಟೆಗಳ ಸೇವಾ ಕಾರ್ಯಗಳನ್ನು ಮಾಡಬೇಕು. ಆದನ್ನು ಮುಗಿಸಿದರೆ ಮಾತ್ರ ಅವರಿಗೆ ಹೈ ಸ್ಕೂಲ್ ಮುಗಿಸಿದ ಪ್ರಮಾಣ ಪತ್ರವನ್ನು ಕೊಡುತ್ತಾರೆ. ಯಾವ ಸಂಸ್ಥೆಗೆ ಸೇವೆ ಮಾಡುತ್ತೇವೆ, ಎಷ್ಟು ಗಂಟೆಗಳು ಮಾಡುತ್ತೇವೆ ಎಂದು ನಮೂದಿಸಿ, ಸೇವಾ ಸಂಸ್ಥೆಗಳ ವಿವರ ಮತ್ತು ಅಲ್ಲಿನ ಪರಿಚಾರಕರ ಸಹಿಯ ಜೊತೆಗೆ ಅವರ ವಿವರಗಳನ್ನು ನಮೂದಿಸಬೇಕು. ಎಲ್ಲಾ ಮಕ್ಕಳು ಇದನ್ನು ಬಹಳ ನ್ಯಾಯಯುತವಾಗಿ ಮತ್ತು ನಿಖರ ಮಾಹಿತಿಯೊಂದಿಗೆ ಪೂರ್ಣ ಮಾಡುತ್ತಾರೆ. ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಕೊಡುವುದಿಲ್ಲ. ಮಕ್ಕಳು ಹೈಸ್ಕೂಲಿಗೆ ಬರುವ ಮೊದಲೆ, ಪ್ರಾಥಮಿಕ ಶಾಲೆಯಲ್ಲಿ ಪಠ್ಯದ ಜೊತೆಗೆ ನ್ಯಾಯಯುತವಾಗಿ ಬದುಕುವ ಹಾಗು ಪ್ರಾಮಾಣಿಕವಾಗಿರುವ ಬಗ್ಗೆ ಬಹಳ ಒತ್ತುಕೊಟ್ಟಿರುತ್ತಾರೆ. ಸೇವಾ ಕಾರ್ಯದಿಂದ ಮಕ್ಕಳಲ್ಲಿ ಬೇರೆಯವರೊಡನೆ ಹೇಗೆ ಹೊಂದಿಕೊಳ್ಳಬೇಕು, ಹಣ ಪಡೆಯದಿದ್ದರು ಕೆಲಸದಲ್ಲಿ ಶ್ರದ್ಧೆ ಇರಬೇಕು ಎನ್ನುವುದರ ಜೊತೆಗೆ ಜೀವನದ ಅನೇಕ ಪಾಠಗಳು ಸಿಗುತ್ತದೆ.
ನಿಮೈ ಎನ್ನುವ ಹೈಸ್ಕೂಲಿನ ಒಬ್ಬ ವಿದ್ಯಾರ್ಥಿ ಕಳೆದ ವರ್ಷ ಪೂರ್ತಿ ಯಾವುದೇ ಸೇವಾ ಕಾರ್ಯಾದ ಕೆಲಸದಲ್ಲಿ ತೊಡಗಲು ಆಗಿರಲಿಲ್ಲ. ಕಾರಣ ಕೋವಿಡ್ ಮಹಾ ಮಾರಿಯ ನಿರ್ಬಂಧಗಳು. ಎಲ್ಲಾ ವಿದ್ಯಾರ್ಥಿಗಳಿಗೂ ಇದೇ ತೊಂದರೆ ಇತ್ತು. ಈ ವರ್ಷ ಎಲ್ಲೆಲ್ಲಿ ಸೇವಾ ಕೆಲಸಗಳನ್ನು ಮಾಡಬಹುದು ಎಂದು ವಿಚಾರಿಸುತ್ತಿದ್ದಾಗ ಸಣ್ಣ ಸಣ್ಣ ಅನೇಕ ಸಹಾಯ ಕಾರ್ಯವನ್ನು ಮಾಡಿದ್ದ. ಹೆಚ್ಚಿನ ಅವಧಿಯ ಅವಶ್ಯಕತೆಯಿದ್ದ ಸಮಯದಲ್ಲಿ ಪ್ರಾಂತ್ಯಾವಾರು ಚುನಾವಣೆ ಬಂದಿತು. ಅನೇಕ ಪಾರ್ಟಿಯವರು ತಮ್ಮ ತಮ್ಮ ಪ್ರಚಾರಕ್ಕೆ ಸಿದ್ಧತೆ ಮಡಿಕೊಳ್ಳತೊಡಗಿದರು. ನ್ಯೂ ಡೆಮಾಕ್ರಟಿಕ್ ಪಾರ್ಟಿ (NDP) ಎನ್ನುವ ಒಂದು ಪಾರ್ಟಿಯವರು ಮಕ್ಕಳಿಗೆ ಸೇವಾ ಅವಕಾಶವನ್ನು ಕೊಡುವುದಾಗಿ ತಿಳಿಸಿದರು. ನಿಮೈ ಅವರನ್ನು ಸಂಪರ್ಕಿಸಿ ನನಗೆ ಸೇವಾ ಅವಕಾಶ ಕೊಡಿ ಎಂದು ಕೇಳಿದಾಗ, ಸಂತೋಷದಿಂದ ಒಪ್ಪಿ ಅವರ ತಂಡಕ್ಕೆ ಸೇರಿಸಿಕೊಂಡರು.
ಭೂಮಿಯಲ್ಲಿ ನಾವು ಮಾಡಿಕೊಂಡಿರುವ ಖಂಡಗಳಲ್ಲಿ ಅಥವ ದೇಶಗಳಲ್ಲಿ, ಮನುಷ್ಯನ ರೂಪ, ಬಣ್ಣಗಳು ಬದಲಾಗುತ್ತವೆ. ಹತ್ತಿರದಿಂದ ನೋಡಿದರೆ ಭೂಮಿಯಲ್ಲಿರುವ ಮನುಷ್ಯರೆಲ್ಲಾ ಒಂದೆ. ಅದೇ ಅಹಂ, ಅದೇ ಬಿಗುಮಾನು, ಅದೇ ಆಲೋಚನೆ, ಅದೇ ದುರಾಲೋಚನೆ, ಅದೇ ಹೆಮ್ಮೆ, ಅದೇ ಗಾಂಭೀರ್ಯ, ಅದೇ ಲಂಪಟತನ, ಹೀಗೆ ಒಂದು ಭೌಗೋಳಿಕ ಭಾಗದಲ್ಲಿ ಕಾಣ ಬರುವ ಗುಣಲಕ್ಷಣಗಳೆ ಬೇರೆ ಭೂಭಾಗದಲ್ಲು ಕಾಣಬರುತ್ತಾರೆ.
ರಾಜಕೀಯ ಪಕ್ಷ ಎಂದೊಡನೆ ಹಣ ಕೊಟ್ಟು, ನ್ಯಾಯಯುತವಲ್ಲದ ಕೆಲಸಗಳಿಗೆ ಉಪಯೋಗಿಸುವ ಉದಾಹರಣೆಗಳು ನಮಗೆ ನೆನಪಿಗೆ ಬರುತ್ತದೆ, ಆದರೆ ಕೆನಡಾದಲ್ಲಿ ಆದ ಸಂಗತಿ ಬಹಳ ವಿಭಿನ್ನ ಎಂದು ತಿಳಿಯಿತು. ನಿಮೈ ಹೋಗಿದ್ದು ನ್ಯೂ ಡೆಮಾಕ್ರಟಿಕ್ ಪಾರ್ಟಿಯ ಅಭ್ಯಾರ್ಥಿಯಾಗಿದ್ದ ನವ್ಜೀತ್ ಕೌರ್ ಎನ್ನುವ ಭಾರತೀಯ ಮೂಲದ ಹೆಣ್ಣುಮಗಳ ಪರವಾಗಿ ಕೆಲಸ ಮಾಡಲು. ಹೈಸ್ಕೂಲ್ ಹುಡುಗನಾಗಿದ್ದ ಕಾರಣ ಅವನಿಗೆ ಪಕ್ಷದ ಪರವಾಗಿ ಯಾವುದೇ ಚಿಂತನೆಗಳನ್ನು ತುಂಬದೆ, ಕೇವಲ ಸಮೀಕ್ಷೆಗಳನ್ನು ಮಾಡುವುದು ಮತ್ತು ಜನರ ಅಭಿಪ್ರಾಯವನ್ನು ಪಡೆಯುವ ಕೆಲಸಕ್ಕೆ ನಿಯೋಜಿಸಿದರು. ಅವರ ಪರಿಮಿತಿಗೆ ಬರುವ ಮತದಾರರಿಗೆ ದೂರವಾಣಿ ಮಾಡಿ ಇವರ ಪರಿಚಯ ಮಾಡಿಕೊಳ್ಳುವುದು, ಬಹಳ ವಿನಯವಾಗಿ ಕೆಲವು ನಿರ್ದಿಷ್ಟ ಪ್ರಶ್ನೆಗಳನ್ನು ಕೇಳುವುದು, ಪ್ರಾಮಾಣಿಕವಾಗಿ ಅವರ ಅಭಿಪ್ರಾಯ ಪಡೆದುಕೊಳ್ಳುವುದು, ಅದನ್ನೆಲ್ಲಾ ಸಮೀಕ್ಷೆಯ ವರದಿಯಲ್ಲಿ ನಮೂದಿಸಿ ಮೇಲ್ವಿಚಾರಕರಿಗೆ ಕೊಡುವುದು. ಹೈಸ್ಕೂಲಿನ ವಿದ್ಯಾರ್ಥಿಯಾಗಿದ್ದರಿಂದ ಪಕ್ಷದ ಬಗ್ಗೆಯಾಗಲೀ, ಜನರನ್ನು ಮನವೊಲಿಸುವ ಕೆಲಸವಾಗಲಿ ಕೊಟ್ಟಿರಲಿಲ್ಲ.
ಮತ್ತೊಂದು ಕೆಲಸವೆಂದರೆ, ಮನೆ ಮನೆಗೆ ಹೋಗಿ, ಅವರ ಮನೆ ಮುಂದಿನ ಭಾಗದಲ್ಲಿ NDP ಬ್ಯಾನರ್ ಹಾಕುವುದಕ್ಕೆ ಅವರ ಒಪ್ಪಿಗೆಯಿದೆಯೆ / ಇಲ್ಲವೆ ಎಂದು ಕೇಳಿ ಬರುವುದು. ಅದರ ವರದಿಯನ್ನು ಮೇಲ್ವಿಚಾರಕರಿಗೆ ನೀಡಿದರೆ, ಬೇರೊಂದು ಗುಂಪು ಹೋಗಿ, ಒಪ್ಪಿಗೆ ಪಡೆದವರ ಮನೆಯ ಮುಂದೆ ಬ್ಯಾನರ್‌ಗಳನ್ನು ಹಾಕಿ ಬರುತ್ತಾರೆ.
ಕೆಲವು ಸಲ NDP ಪಕ್ಷದ ವಿರೊಧಿಗಳು ಒಪ್ಪಿಗೆ ಕೇಳಲು ಹೋದ ಮಕ್ಕಳಿಗೆ ಬೈದು ಕಳಿಸುತ್ತಾರೆ, ಮುಖದ ಮೇಲೆ ಬಾಗಿಲನ್ನು ಹಾಕುತ್ತಾರೆ. ಹೀಗೆ ಅನೇಕ ವಿಧವಾದ ಅವಮಾನೀಯ ರೀತಿಯಲ್ಲಿ ವರ್ತಿಸುವ ಜನರು ಕಾಣಸಿಗುತ್ತಾರೆ. ಅಂಥಹ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂದು ಮಾಲ್ವಿಚಾರಕರು ತಿಳಿಸುತ್ತಾರೆ.
ರಾಜಕೀಯ ಪಕ್ಷಗಳು ಮಕ್ಕಳನ್ನು ಬಹಳ ಜವಾಬ್ದಾರಿಯುತವಾಗಿ ಬಳಸಿಕೊಳ್ಳುತ್ತಾರೆ ಮತ್ತು ಮಕ್ಕಳಲ್ಲಿ ಸಂವಹನ ಕಲೆಯನ್ನು ವೃದ್ಧಿಸುವಲ್ಲಿ ಸಹಾಯ ಮಾಡುತ್ತಾರೆ. ಮಕ್ಕಳಿಗೆ ಒಂದು ದೇಶದ ರಾಜಕೀಯ ಹೇಗಿರಬೇಕು ಎನ್ನುವುದನ್ನು ಯಾವುದೇ ರೀತಿಯ ಹೇರಿಕೆಯಿಲ್ಲದೆ ತಟಸ್ಥವಾದ ಯೋಚನಾ ಲಹರಿಯಲ್ಲಿ ತಿಳಿಯಪಡಿಸುತ್ತಾರೆ.
ನಿಮೈ ನಂತಹ ಮಕ್ಕಳಿಗೆ, ಮೊದಲ ಬಾರಿಗೆ ರಾಜಕೀಯ ಮುಖಂಡರ ಒಡನಾಟ ಬೆಳೆಯಲು ಈ ರೀತಿಯ ಕೆಲಸಗಳು ಸಹಾಯವಾಗುತ್ತದೆ.
ಪ್ರಶಾಂತ್ ಬೀಚಿ ಚಿಕ್ಕಮಗಳೂರು ಜಿಲ್ಲೆಯ ಬೀರೂರಿನವರು. ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ. ತಾಂಜಾನಿಯಾ (ಪೂರ್ವ ಆಫ್ರಿಕಾ), ಯೂಕೆ ಯಲ್ಲಿ ಕೆಲವು ವರುಷ ಇದ್ದು ಸದ್ಯಕ್ಕೆ ಕೆನಡಾದಲ್ಲಿ ನೆಲೆಸಿದ್ದಾರೆ. ‘ಲೇರಿಯೊಂಕ’ (ಅನುವಾದಿತ ಕಾದಂಬರಿ) ಮತ್ತು ‘ಕಿಲಿಮಂಜಾರೋ’ ಪ್ರಕಟಿತ ಪುಸ್ತಕಗಳು. ವಸುದೇವ ಭೂಪಾಲಂ ದತ್ತಿ, ದ ರಾ ಬೇಂದ್ರೆ ಮತ್ತು ಪರಮೇಶ್ವರ ಭಟ್ಟ್ ಪ್ರಶಸ್ತಿಗಳು ದೊರೆತಿವೆ.