ಕಷ್ಟಪಟ್ಟು ಎದ್ದು ಗೋಡೆಗೆ ಒರಗಿಕೊಂಡ ಆಕೆ ಕೈ ಸನ್ನೆ ಮಾಡಿ ನೀರು ಕೇಳಿದಳು. ಹತ್ತಿರದಲ್ಲೇ ನಿಂತಿದ್ದ ಹುಡುಗಿಯೊಬ್ಬಳು ನೀರು ತಂದುಕೊಟ್ಟಳು. ನೀರು ಕುಡಿದು ಸುಧಾರಿಸಿಕೊಂಡ ಮೇಲೆ ಆಕೆ ದೊಡ್ಡ ಉಸಿರು ಬಿಟ್ಟು, ‘ಮಗ ಸತ್ತರೆ ತಾಯಿ ಏನು ಹೇಳ್ತಾಳಪ್ಪ. ಮಗ ಸತ್ತ, ಸಾಯಿಸಿದ್ರು’ ಎಂದು ಅಳಲು ಶುರುಮಾಡಿದಳು. ಕಣ್ಣೀರು ಒರೆಸಿಕೊಳ್ಳುತ್ತಾ, ‘ಇನ್ನೊಬ್ಬ ಮಗ ಇದ್ದಿದ್ರೆ ಆ ಪಾಪಿಗಳನ್ನ ಹೊಡೆದುಕೊಂದು ಈ ಸಾವಿಗೆ ಸೇಡು ತೀರಿಸ್ಕೊ ಅಂತ ಹೇಳಬೋದಿತ್ತು. ಆದ್ರೆ ಇದ್ದವ್ನು ಒಬ್ಬನೇ ಮಗ. ಅವನು ವಾಪಸ್ ಬರ್ತಾನಾ’ ಎಂದು ಬರಿಗಣ್ಣುಗಳಿಂದ ಅವನನ್ನು ನೋಡಿದಳು.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಟಿ.ಕೆ. ದಯಾನಂದ ಬರೆದ ಕತೆ ‘ಪುಣ್ಯಕೋಟಿ’ ನಿಮ್ಮ ಈ ಭಾನುವಾರದ ಓದಿಗೆ

 

ಹಬ್ಬಕ್ಕೆಇನ್ನು ಮೂರು ದಿನವಷ್ಟೇ ಬಾಕಿ ಇತ್ತು.. ಹೃದಯಪುರದಿಂದ ಹೊರಟಿದ್ದ ರೈಲಿನಲ್ಲಿ ಆ ಕೊಲೆ ನಡೆದು ಹೋಗಿತ್ತು. ಯುವಕರ ಗುಂಪೊಂದು ಅವನನ್ನು ಹೊಡೆದುಕೊಂದಿತ್ತು. ಹೊಡೆದವರು ಯಾರು ಎಂಬುದು ಪೊಲೀಸರಿಗೂ ಸರಿಯಾಗಿ ಗೊತ್ತಾಗಿರಲಿಲ್ಲ.

‘ರೈಲಿನಲ್ಲಿ ಸೀಟಿಗಾಗಿ ನಡೆದ ಗಲಾಟೆಯಲ್ಲಿ ಉದ್ರಿಕ್ತರ ಗುಂಪು ಯುವಕನನ್ನು ಹೊಡೆದು ಕೊಂದಿದೆ. ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಸ್ಥಳೀಯ ಪೊಲೀಸರು ಪತ್ರಿಕಾ ಹೇಳಿಕೆ ಸಿದ್ಧ ಮಾಡಿದ್ದರು. ಮರುದಿನ ಬಹುತೇಕ ಪತ್ರಿಕೆಗಳಲ್ಲಿ ಅದು ಹಾಗೆಯೇ ಪ್ರಕಟವಾಯಿತು. ಆದರೆ, ಕೆಲವು ಪತ್ರಿಕೆಗಳಲ್ಲಿ ‘ಹೆಸರು ಬಹಿರಂಗಪಡಿಸಲು ಇಚ್ಛಿಸದ’ ಪೊಲೀಸ್‍ ಅಧಿಕಾರಿಯೊಬ್ಬರ ಹೇಳಿಕೆ ಕೂಡಾ ವರದಿಗಳಲ್ಲಿ ಸೇರಿತ್ತು: ‘ಆ ಯುವಕ ಹಬ್ಬದ ಖರೀದಿ ಮುಗಿಸಿ ಊರಿಗೆ ರೈಲು ಹತ್ತಿದ್ದ. ಅವನು ರೈಲು ಹತ್ತಿ ನಾಲ್ಕೈದು ನಿಲ್ದಾಣಗಳು ಹೋದ ಮೇಲೆ ಅವನಿಗೆ ಸೀಟ್ ಸಿಕ್ಕಿತ್ತು. ಆದರೆ, ಮುಂದಿನ ನಿಲ್ದಾಣದಲ್ಲಿ ರೈಲು ಹತ್ತಿದ ಹದಿನೈದು ಇಪ್ಪತ್ತು ಮಂದಿ ಯುವಕರ ಗುಂಪು ಸೀಟಿಗಾಗಿ ಇವನ ಬಳಿ ಕ್ಯಾತೆ ತೆಗೆದಿದೆ. ಇವನು ಸೀಟ್ ನೀಡದ ಕಾರಣ ಆ ಯುವಕರು ಇವನನ್ನು ಬೈಯ್ಯಲು ಶುರು ಮಾಡಿದ್ದಾರೆ. ಮಾತಿಗೆ ಮಾತು ಬೆಳೆದಿದೆ. ‘ನೀನು ಗೋಮಾಂಸ ಸಾಗಿಸುತ್ತಿದ್ದೀಯ’ ಎಂದು ಆರೋಪಿಸಿದ ಆ ಯುವಕರ ಗುಂಪು ಇವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ’.

ಪೊಲೀಸ್‍ ಅಧಿಕಾರಿಯ ಹೇಳಿಕೆಯಲ್ಲಿದ್ದ ‘ಗೋಮಾಂಸ’ದ ಕಾರಣದಿಂದ ಈ ಸುದ್ದಿ ಮರುದಿನ ದೇಶದಲ್ಲೆಲ್ಲಾ ಭಾರೀ ಸದ್ದು ಮಾಡಿತ್ತು. ಕೆಲವರು, ‘ಆ ಉದ್ರಿಕ್ತ ಯುವಕರು ಮಾಡಿದ್ದೇ ಸರಿ’ ಎಂದರು. ಕೆಲವರು, ‘ರೈಲಿನಲ್ಲಿ ಗೋಮಾಂಸ ಸಾಗಣೆ ಸರಿಯಲ್ಲ’ ಎಂದಷ್ಟೇ ಹೇಳಿ ಸುಮ್ಮನಾದರು. ಇನ್ನು ಕೆಲವರು, ‘ಹೊಡೆದು ಕೊಲ್ಲುವಂಥ ತಪ್ಪೇನು ಮಾಡಿದ್ದ ಆ ಯುವಕ’ ಎಂದು ಮರುಕ ತೋರಿದರು. ಟಿವಿ ಚಾನೆಲ್‌ಗಳು ಎಡ, ಬಲ, ಮಧ್ಯದ ವಕ್ತಾರರನ್ನೆಲ್ಲಾ ಕೂರಿಸಿಕೊಂಡು ದಿನವಿಡೀ ಚರ್ಚೆ ನಡೆಸಿದವು. ಕೆಲವರು ಗೋಮಾಂಸ ತಿಂದು ಈ ಘಟನೆಯನ್ನು ಖಂಡಿಸಿದರು. ಆದರೂ ಮುಂದಿನ ಕೆಲ ದಿನಗಳಲ್ಲೇ ದೇಶ ಇದೆಲ್ಲವನ್ನೂ ಮರೆತು ಹೋಗುವುದರಲ್ಲಿತ್ತು.

ಈ ಘಟನೆಯ ಬಗ್ಗೆ ಮಾನವೀಯ ವರದಿ ಬರೆಯಲು ಬಂದಿದ್ದ ಅವನಿಗೆ ಆ ಮನೆಯವರನ್ನು ಹೇಗೆ ಮಾತನಾಡಿಸಬೇಕು ಎಂಬುದೇ ತೋಚಲಿಲ್ಲ. ಮಗನನ್ನು ಮಣ್ಣು ಮಾಡಿ ಬಂದಿದ್ದ ಮನೆಯವರೆಲ್ಲಾ ಬಳಲಿದ್ದರು. ಹಲವರ ಕಣ್ಣಲ್ಲಿ ಇನ್ನೂ ನೀರು ಜಿನುಗುತ್ತಿತ್ತು. ಅತ್ತೂಅತ್ತೂ ಸುಸ್ತಾಗಿದ್ದ ಆ ಯುವಕನತಾಯಿ ಮನೆಯ ಹೊರಗೆ ಜಗಲಿಯ ಮೇಲೆ ಮುದುಡಿ ಮಲಗಿದ್ದಳು. ಇವನು ಮನೆಯ ಮುಂದೆ ನಿಂತಾಗ ಅಲ್ಲೇಇದ್ದ ಇಬ್ಬರು ಪೊಲೀಸರು ಇವನ ಬಳಿ ಬಂದು ಹುಬ್ಬುಗಂಟಿಕ್ಕಿ ನೋಡಿದರು. ಇವನು ಐಡಿಕಾರ್ಡ್ ತೋರಿಸಿದ ಮೇಲೆ ಗೊಣಗಿಕೊಂಡು ಒಂದಷ್ಟು ದೂರ ಹೋಗಿ ಕುಳಿತ ಆ ಇಬ್ಬರು ಅವನನ್ನೇ ದುರುಗುಟ್ಟುತ್ತಿದ್ದರು.

ಯಾರನ್ನು ಮೊದಲು ಮಾತನಾಡಿಸಬೇಕು, ಹೇಗೆ ಮಾತು ಆರಂಭಿಸಬೇಕು ಎಂಬುದು ತಕ್ಷಣಕ್ಕೆ ಗೊತ್ತಾಗಲಿಲ್ಲ ಅವನಿಗೆ. ಈ ಹಿಂದೆ ಅದೆಷ್ಟೋ ಸಾವಿನ ಮನೆಗಳಿಗೆ ಹೋಗಿ ಮಾನವೀಯ ವರದಿಗಳನ್ನು ಬರೆದಿದ್ದರೂ ಅವು ಇಷ್ಟು ಹಿಂಸೆ ನೀಡಿರಲಿಲ್ಲ.

‘ಮನಿ, ಸೆಕ್ಸ್, ರಿಲಿಜಿನ್. ಮೋಸ್ಟ್‌ ಆಫ್ ದಿ ಕ್ರೈಮ್ಸ್ ಬೇಸ್ಡ್‌ ಆನ್ ದೀಸ್‌ ತ್ರೀ ಥಿಂಗ್ಸ್’
ಕೆಲಸಕ್ಕೆ ಸೇರಿದ್ದ ಆರಂಭದಲ್ಲಿ ಚೀಫ್ ಹೇಳುತ್ತಿದ್ದ ಮಾತುಗಳು ಅವನಿಗೆ ನೆನಪಾದವು. ಈ ಕೊಲೆ ಹೆಚ್ಚೂ ಕಡಿಮೆ ಮೂರನೇ ಕಾರಣಕ್ಕೆ ನಡೆದಿದ್ದು. ಆದರೆ, ಸ್ಥಳೀಯ ಪೊಲೀಸರ ಪ್ರಕಾರ ಇದಕ್ಕೆ ಸೂಕ್ತ ಪುರಾವೆ ಇಲ್ಲ.

‘ಇದು ತುಂಬಾ ಸೂಕ್ಷ್ಮ ವಿಚಾರ. ಸ್ವಲ್ಪ ಆ ಕಡೆ ಈ ಕಡೆ ಆದ್ರೂ ನಮ್ಮ ಬುಡಕ್ಕೇ ಬೆಂಕಿ ಹತ್ಕೊಳುತ್ತೆ. ಯಾರನ್ನೆಲ್ಲಾ ಮಾತಾಡಿಸ್ತೀಯೋ ಅದನ್ನ ಮೊಬೈಲ್‌ನಲ್ಲೇ ವಿಡಿಯೊ ರೆಕಾರ್ಡ್ ಮಾಡ್ಕೊಂಡು ಬಾ. ಏನೇ ಆದ್ರೂ ನಾವು ಸೇಫ್ ಆಗಬೇಕು. ಆ ತರ ಸೇಫ್‌ ಆಂಗಲ್‌ನಿಂದ ಸ್ಟೋರಿ ಮಾಡ್ಕೊಂಡು ಬಾ. ನಾವು ಕಣ್ಣಿಂದ ನೋಡಿದ್ರೂ ಅದನ್ನೆಲ್ಲಾ ಹಾಗೇ ಬರೆಯೋ ಹಾಗಿಲ್ಲ. ವಿಥೌಟ್‌ ಎವಿಡೆನ್ಸ್‌ ಒಂದು ಅಕ್ಷರಾನೂ ಪ್ರಿಂಟ್‌ಗೆ ಹೋಗೋಕೆ ಬಿಡೋಲ್ಲ ನಾನು. ನಾಳೆ ಹೆಚ್ಚೂ ಕಮ್ಮಿ ಆದ್ರೆ ನಾನು ಕೋರ್ಟ್‌ಗೆ ಅಲೀಬೇಕಾಗುತ್ತೆ. ನಮ್ಮದು ವೀಕ್ಲಿನೇ ಇರಬಹುದು, ಹಾಗಂತ ಪೊಲೀಸರು, ಜಡ್ಜ್‌ಗಳು ಹೆಚ್ಚಾಗಿ ನಮ್ಮ ಪೇಪರ್‌ನ ನೋಡಲ್ಲ ಅಂದ್ಕೋಬೇಡ’ ಎಡಿಟರ್ ಹೇಳಿದ್ದ ಮಾತೂ ನೆನಪಾಯಿತು. ಮೊಬೈಲ್‌ ಕ್ಯಾಮೆರಾ ಆನ್ ಮಾಡಿಕೊಂಡು, ‘ಈಗ ಮಾತಾಡಿ’ ಎಂದು ಹೇಳಲು ಇಲ್ಲಿ ಸಾಧ್ಯವೇ ಇಲ್ಲ ಎಂಬುದು ಅವನು ಈ ಓಣಿಗೆ ಬಂದಾಗಲೇ ಗೊತ್ತಾಗಿತ್ತು. ಆದರೂ ಮೊಬೈಲ್‌ ಕ್ಯಾಮೆರಾ ಆನ್ ಮಾಡಿಕೊಂಡು ಮೇಲಿನ ಜೇಬಿನಲ್ಲಿಟ್ಟುಕೊಂಡ.

ಯುವಕನ ಸಾವು ಇಡೀ ಓಣಿಯನ್ನು ನೀರವದಲ್ಲಿ ಅದ್ದಿತ್ತು. ಅವನು ಆ ಮನೆ ಮುಂದೆ ನಿಂತಾಗ ಸಂಜೆಯಾಗುತ್ತಿತ್ತು. ನೀರವ ಸಂಜೆ. ಒಂದು ಕಾಗೆಯಾದರೂ ಕೂಗಿ ಈ ನೀರವತೆಯನ್ನು ಕದಲಬಾರದೇ ಎಂದುಕೊಳ್ಳುತ್ತಾ ಅವನು ಆ ಮನೆಯ ಹಿರಿಯ ಗಂಡಸರೊಬ್ಬರಲ್ಲಿ ತನ್ನ ಪರಿಚಯ ಹೇಳಿಕೊಂಡ. ‘ಅವನೇ ಹೋದ ಇನ್ನೇನು ಮಾತಾಡೋದು’ ಎಂದ ಅವರು, ‘ನೆನ್ನೆಇಡೀ ದಿನ ನೂರು ಟಿವಿಯವ್ರು ಮೈಕ್ ಹಿಡಿದು ಸಾಕ್‌ಸಾಕು ಮಾಡಿಬಿಟ್ರು. ಇವತ್ತು ನೀನು ಬಂದಿದ್ದೀಯ. ಅಲ್ಲಿ ಮಲಗಿದ್ದಾಳೆ ನೋಡು, ಅವಳೇ ಅವನ ತಾಯಿ. ಇದ್ದವನು ಒಬ್ಬನೇ ಮಗ. ಸತ್ತು ಹೋದ. ಈಗ ನೀವು ಏನು ಬರೆದ್ರೆ ಏನು. ಅವನು ಎದ್ದು ಬರ್ತಾನ?’ ಆ ವ್ಯಕ್ತಿ ಹೇಳಿದ್ದೇನೋ ನಿಜ. ಆದರೆ, ಬರೆಯಬೇಕಾದ್ದು ನನ್ನ ಕೆಲಸ ಎಂದುಕೊಂಡ ಅವನು, ಆ ಮಹಿಳೆಯ ಪಕ್ಕಕ್ಕೆ ಹೋಗಿ ಕುಳಿತು, ‘ಅಮ್ಮಾ’ ಎಂದ.

‘ಅಮ್ಮಾ’ ಎಂಬ ಶಬ್ದ ಕಿವಿ ಮೇಲೆ ಬಿದ್ದು ಎಚ್ಚರಗೊಂಡ ಆಕೆ ಕಣ್ಣು ತೆರೆದಳು. ಅತ್ತೂಅತ್ತೂ ಆಕೆಯ ಕಣ್ಣು ಕೆಂಪಗಾಗಿದ್ದವು. ಆಕೆ ಕಣ್ಣು ಬಿಟ್ಟಿದ್ದರಿಂದ ಸ್ವಲ್ಪ ಹಗುರಾದ ಅವನು, ‘ಅಮ್ಮಾ ನಾನು ಪ್ರೆಸ್‌ ಇಂದದ ಬಂದಿದ್ದೀನಿ. ನಿಮ್ಮ ಮಗ ತೀರಿ ಹೋದರಲ್ಲಾ. ಈ ಬಗ್ಗೆ ನೀವು ಏನು ಹೇಳ್ತೀರಾ?’ ಎಂದು ಕೇಳಿದ. ತನ್ನ ಬಾಯಿಂದ ಬಂದ ಈ ಕೃತಕ ಮಾತುಗಳು ಈ ಪರಿಸ್ಥಿತಿಗೆ ಎಷ್ಟು ಅಮಾನವೀಯ ಎನಿಸಿತು ಅವನಿಗೆ. ತನ್ನ ಪರಿಚಯ ಹೇಳಿಕೊಂಡು ಒಂದೆರಡು ನಿಮಿಷ ಸುಮ್ಮನೆ ಕುಳಿತಿದ್ದರೆ ಅವರೇ ಏನಾದರೂ ಹೇಳುತ್ತಿದ್ದರೇನೋ ಅಥವಾ ಹೀಗೀಗೆ ಎಂದು ಬೇರೆಯವರಿಂದ ಹೇಳಿಸಬಹುದಿತ್ತೇನೋ ಎಂದುಕೊಂಡು ಕ್ಷಣ ಪರದಾಡಿದ.

ಟಿವಿ ಚಾನೆಲ್‌ಗಳು ಎಡ, ಬಲ, ಮಧ್ಯದ ವಕ್ತಾರರನ್ನೆಲ್ಲಾ ಕೂರಿಸಿಕೊಂಡು ದಿನವಿಡೀ ಚರ್ಚೆ ನಡೆಸಿದವು. ಕೆಲವರು ಗೋಮಾಂಸ ತಿಂದು ಈ ಘಟನೆಯನ್ನು ಖಂಡಿಸಿದರು. ಆದರೂ ಮುಂದಿನ ಕೆಲ ದಿನಗಳಲ್ಲೇ ದೇಶ ಇದೆಲ್ಲವನ್ನೂ ಮರೆತು ಹೋಗುವುದರಲ್ಲಿತ್ತು.

ಕಷ್ಟಪಟ್ಟು ಎದ್ದು ಗೋಡೆಗೆ ಒರಗಿಕೊಂಡ ಆಕೆ ಕೈ ಸನ್ನೆ ಮಾಡಿ ನೀರು ಕೇಳಿದಳು. ಹತ್ತಿರದಲ್ಲೇ ನಿಂತಿದ್ದ ಹುಡುಗಿಯೊಬ್ಬಳು ನೀರು ತಂದುಕೊಟ್ಟಳು. ನೀರು ಕುಡಿದು ಸುಧಾರಿಸಿಕೊಂಡ ಮೇಲೆ ಆಕೆ ದೊಡ್ಡ ಉಸಿರು ಬಿಟ್ಟು, ‘ಮಗ ಸತ್ತರೆ ತಾಯಿ ಏನು ಹೇಳ್ತಾಳಪ್ಪ. ಮಗ ಸತ್ತ, ಸಾಯಿಸಿದ್ರು’ ಎಂದು ಅಳಲು ಶುರುಮಾಡಿದಳು. ಕಣ್ಣೀರು ಒರೆಸಿಕೊಳ್ಳುತ್ತಾ, ‘ಇನ್ನೊಬ್ಬ ಮಗ ಇದ್ದಿದ್ರೆ ಆ ಪಾಪಿಗಳನ್ನ ಹೊಡೆದುಕೊಂದು ಈ ಸಾವಿಗೆ ಸೇಡು ತೀರಿಸ್ಕೊ ಅಂತ ಹೇಳಬೋದಿತ್ತು. ಆದ್ರೆ ಇದ್ದವ್ನು ಒಬ್ಬನೇ ಮಗ. ಇನ್ನು ಏನು ಹೇಳಿದ್ರೇನು, ಅವನು ವಾಪಸ್ ಬರ್ತಾನಾ’ ಎಂದು ಬರಿಗಣ್ಣುಗಳಿಂದ ಅವನನ್ನು ನೋಡಿದಳು.

‘ಗೋಮಾಂಸ ಸಾಗಣೆ’ ಅವನು ಇನ್ನೂ ಪ್ರಶ್ನೆ ಮುಗಿಸಿರಲಿಲ್ಲ. ಅಷ್ಟರಲ್ಲೇ ಆಕೆ, ‘ಕೊಲ್ಲೋಕೆ ಒಂದು ನೆಪ ಕಣಪ್ಪ. ನೆನ್ನೆ ಗೋಮಾಂಸ, ಮೊನ್ನೆ ಅವ್ರ ಹುಡುಗೀರನ್ನ ನಮ್ಮ ಒಬ್ಬ ಹುಡುಗ ಕೆಣಕಿದ ಅಂತ, ಅವರ ಬೀದಿಲಿ ನಮ್ಮೋನೊಬ್ಬ ಜೋರಾಗಿ ಬೈಕ್ ಓಡಿಸಿದ ಅಂತ, ಹಿಂಗೆ ಸಾಯಿಸೋಕೆ ಒಂದು ನೆಪ ಬೇಕು ಅಷ್ಟೇ ಅವ್ರಿಗೆ. ಅವ್ರ ಒಬ್ಬ ಹುಡುಗ ಮತ್ತೆ ನಮ್ಮೋಳು ಒಬ್ಬ ಹುಡುಗಿ ಪ್ರೀತಿ ಮಾಡ್ತಿದ್ರು. ಈ ವಿಷಯ ಅವರಿಗೆ ಗೊತ್ತಾಗಿ ಹೋಯ್ತು. ನಮ್ಮ ಹುಡುಗೀನ ಕೊಂದು ಅಗೋ ಅಲ್ಲಿ ಕಾಣ್ತಿದ್ಯಲ್ಲಾ ಆ ಓಣಿ ಮೂಲೇಲಿ ಬಿಸಾಕಿ ಹೋಗಿದ್ರು. ಚೂರಿಯಿಂದ ಅವಳ ಕುತ್ತಿಗೇನ ಕುಯ್ದು ಹಾಕಿದ್ರು. ಅವಳ ಕುತ್ತಿಗೆಯಿಂದ ಹರೀತಿದ್ದ ರಕ್ತ ಆ ಓಣಿದಾಟಿ ಆಚೆ ಓಣಿವರೆಗೂ ಹರಿದಿತ್ತು. ಇದೆಲ್ಲಾ ಸಹಿಸೋಕಾಗದೆ ನಮ್ಮ ಹುಡುಗರೂ ಗುಂಪು ಕಟ್ಟಿಕೊಂಡು ಹೋಗಿ ಅವರ ಒಂದಿಬ್ಬರು ಹುಡುಗರನ್ನ ಕೊಂದು ಹಾಕಿ ಬಂದ್ರು. ಒಂದು ಹೆಣಕ್ಕೆ ನಾಲ್ಕು ಹೆಣ. ನಾಲ್ಕು ಹೆಣಕ್ಕೆ ನಲವತ್ತು ಹೆಣ. ಹಿಂಗೆ ಸಾವುಗಳು ಹೆಚ್ಚಾಗ್ತಾನೇ ಅವೆ. ಯುದ್ಧದಲ್ಲಿ ಸತ್ತ ಮಗನ ಬಗ್ಗೆ ತಾಯಿಯಾದೋಳು ಹೆಮ್ಮೆ ಪಡ್ತಾಳಂತೆ. ಅಂಥ ಸಾವಿಗೂ ಒಂದು ಮರ್ಯಾದೆ ಇರುತ್ತೆ. ಆದ್ರೆ ಚಿಲ್ಲರೆ ಕಾರಣಕ್ಕೆ ಮಕ್ಕಳನ್ನ ಕಳಕೊಂಡ ತಾಯಿ ಒಡಲ ನೋವು ಯಾರಿಗಪ್ಪಾ ಅರ್ಥಆಗ್ಬೇಕು’ ಎಂದು ಆಕೆ ಬಿಕ್ಕಲು ಶುರು ಮಾಡಿದಳು.

‘ಇನ್ನೂ ಬದುಕಿ ಬಾಳಬೇಕಾಗಿದ್ದ ಮಗ ಕಣಪ್ಪ. ನಮ್ಮಣ್ಣನ ಮಗಳನ್ನ ಮಾಡ್ಕೋಬೇಕು ಅಂತ ಆಸೆ ಪಡ್ತಿದ್ದ. ಕೆಲಸಕ್ಕೆ ಸೇರಿ ಇನ್ನೂ ವರ್ಷ ತುಂಬಿರಲಿಲ್ಲ. ಒಂದು ಲಕ್ಷ ಅಕೌಂಟಲ್ಲಿ ಉಳಿಯೋವರೆಗೂ ಮದುವೆ ಮಾಡ್ಕಳಲ್ಲ ಅಂತಿದ್ದ. ಈಗ ಅವನೇ ಇಲ್ಲ. ಬೀದಿ ನಾಯಿ ತರಾ ಹೊಡೆದು ಹಾಕ್ಬಿಟ್ರಲ್ಲಪ್ಪಾ. ಅಷ್ಟಕ್ಕೂ ಹಂಗೆ ಬಡಿದು ಸಾಯಿಸೋ ಅಂಥಾ ತಪ್ಪು ಏನು ಮಾಡಿದ್ದ ನನ್ನ ಮಗ, ಹೇಳಪ್ಪಾ ನನ್ನ ಮಗ ಏನು ತಪ್ಪು ಮಾಡಿದ್ದ?’ ಆಕೆಯ ಅಳು ಹೆಚ್ಚಾಗುತ್ತಿತ್ತು.

‘ಇವತ್ತು ನನ್ನ ಮಗ ಸತ್ತ. ನಾಳೆ ಇನ್ನೊಬ್ಬಳು ತಾಯಿಯ ಮಗನೋ ಮಗಳೋ ಈ ಬೆಂಕಿಯಿಂದ ಸಾಯ್ತಾರೆ. ಈ ಬೆಂಕೀನ ಹಿಂಗೇ ಬಿಟ್ರೆ ಇದು ಇನ್ನೂ ಎಲ್ಲಿಲ್ಲಿ ಹೋಗಿ, ಯಾವ್‌ ಯಾವ ಊರು, ಯಾವ್‌ಯಾವ್‌ಕೇರಿ, ಯಾವ್‌ಯಾವ ಮನೆ ಹೊತ್ತಿಸಿ ಯಾರ್‍ಯಾರನ್ನ ಸುಡುತ್ತೋ. ನನ್ನ ಮಗ ಪಾಪದವನು ಕಣಪ್ಪ. ಯಾರಾದ್ರು ಹೊಡೆದ್ರೂ ತಿರುಗಿ ಕೇಳೋ ಪೈಕಿ ಅಲ್ಲ. ಅಂಥವನನ್ನ ಹೊಡದು ಸಾಯಿಸಿದ್ರಂತೆ. ಹಂಗೆ ಸಾಯಿಸೋ ಅಷ್ಟು ರೋಷ ಯಾಕೆ ಬಂತು ಆ ಪಾಪಿಗಳಿಗೆ. ನಾವು ನಾವಾಗಿರೋದೇ ನಮ್ಮ ತಪ್ಪಾ?’ ಆಕೆ ಹಣೆ ಚಚ್ಚಿಕೊಂಡು ಚೀರಲು ಶುರು ಮಾಡಿದಳು. ಅವಳ ಅಳು ಕೇಳಿ ದೂರದಲ್ಲಿದ್ದ ಪೊಲೀಸರು ಎದ್ದು ಓಡಿ ಬಂದರು. ಅವರಲ್ಲೊಬ್ಬ ಇವನಿಗೆ, ‘ಇದಕ್ಕೇ ನಿಮ್ಮನ್ನ ಇಲ್ಲಿಗೆಲ್ಲಾ ಬಿಡಬಾರ್ದು ಅನ್ನೋದು’ ಅಂದ.

‘ನಡೀರಿ ಸಾರ್ ಸಾಕು. ಅವ್ರು ಪಾಪ ನೋವಲ್ಲಿದ್ದಾರೆ. ಈ ರಾತ್ರಿ ಕಳೆದು ಬೆಳಗಾದರೆ ಹಬ್ಬ ಬೇರೆ’ ಎಂದ ಇನ್ನೊಬ್ಬ.

‘ನಿಮ್ಮ ಮಗನ ಸಾವಿನ ಬಗ್ಗೆ ಪೊಲೀಸರು ನೀಡಿರೋ ಹೇಳಿಕೆ ಬಗ್ಗೆ ನೀವೇನು ಹೇಳ್ತೀರಾ?’ ‘ಇದು ಬರೀ ಸೀಟಿಗಾಗಿ ನಡೆದ ಗಲಾಟೆ ಅಂತಾ ನಿಮಗೆ ಅನಿಸುತ್ತಾ?’ ‘ನಿಮ್ಮ ಮಗನ ಸಾವಿನ ತನಿಖೆ ಸರಿಯಾಗಿ ನಡೆಯಬೇಕು ಅಂತಾ ಒತ್ತಾಯ ಮಾಡ್ತೀರಾ?’ ‘ನಿಮ್ಮ ಮಗನ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸೋಕೆ ಆಗ್ರಹ ಮಾಡ್ತೀರಾ?’ ‘ನಿಮಗೆ ಯಾರ ಮೇಲಾದ್ರೂ ಅನುಮಾನ ಇದ್ಯಾ?’‘ಆ ರೂಟ್‌ನ ಎಲ್ಲಾ ರೈಲ್ವೆ ಸ್ಟೇಷನ್‌ಗಳಲ್ಲಿರೋ ಸಿಸಿ ಟಿವಿ ವಿಡಿಯೊ ತೆಗೆಸಿದ್ರೆ ಕೊಲೆಗಾರರು ಸಿಗಬಹುದೇನೋ ಅಲ್ವಾ?’ ‘ನಿಮ್ಮ ಮಗ ಏನು ಓದಿದ್ದ? ಏನು ಕೆಲಸ ಮಾಡ್ತಿದ್ದ?’ ಒಣಗಿದ ಇಂಥ ಅದೆಷ್ಟೋ ಪ್ರಶ್ನೆಗಳು ಅವನ ತಲೆಯೊಳಗಿದ್ದವು. ಆದರೆ ಈಗ ಅಂಥ ಪ್ರಶ್ನೆಗಳಿಂದ ಹೆಚ್ಚೇನೂ ಪ್ರಯೋಜನ ಇಲ್ಲ ಎಂದುಕೊಂಡ ಅವನು ಕನ್ನಡಕ ಸರಿ ಮಾಡಿಕೊಂಡು ಹೊರಡಲು ಎದ್ದ.

‘ಕಾಯಬೇಕಾದ ಸರ್ಕಾರನೇ ನಮ್ಮ ವಿರುದ್ಧ ಕತ್ತಿ ಹಿಡಕೊಂಡು ಕುಂತಿದೆ. ಇನ್ನುಯಾರು ಏನು ಮಾಡೋಕೆ ಆಗುತ್ತಪ್ಪಾ. ಅನ್ನ, ನೀರಿಗೆ ವಿಷ ಬೆರೆಸಿದ್ರೆ ಹಸಿದುಕೊಂಡಾದ್ರೂ ಒಂದಷ್ಟು ದಿನ ಕಾಲ ಹಾಕಬೋದು. ಆದರೆ, ಈಗ ಉಸಿರಲ್ಲೇ ವಿಷ ಬೆರೆಸಿಬಿಟ್ಟಿದ್ದಾರಲ್ಲಾ. ಸಾಯೋದು ಬಿಟ್ಟುಇನ್ನೇನು ಉಳಕೊಂಡಿದೆ ನಮಗೆ’ ಎಂದು ಆಕೆ ತಲೆ ಮೇಲೆ ಕೈ ಹೊತ್ತು ಕುಂತಳು.

ಅಷ್ಟೊತ್ತಿಗೆ ಸಂಜೆ ರಾತ್ರಿಯಾಗಿತ್ತು. ಓಣಿಯ ಅಂಚಿಗಿದ್ದ ನಿಯಾನ್ ಬೀದಿ ದೀಪದಿಂದ ಹೊರಟಿದ್ದ ನೆರಳು ಅರ್ಧಓಣಿಯ ಮೇಲೆ ಬಿದ್ದಿತ್ತು. ಕಣ್ಣೀರಿಡುತ್ತಲೇ ಆಕೆ, ‘ಹುಷಾರಾಗಿ ಹೋಗಪ್ಪ. ಕತ್ತಲಾಯ್ತು, ಕಾಲ ಸರಿಇಲ್ಲ’ ಎಂದಳು.

ಆ ಇನ್ನೊಬ್ಬ ಪೊಲೀಸ್ ಅವನ ಜತೆಗೆ ಅಷ್ಟು ದೂರ ಬಂದವನು, ‘ನೋಡ್ಕೊಂಡು ಬರೀರಿ ಸಾರ್. ಮತ್ತೆ ಒಂದ್ ಹೋಗಿ ಇನ್ನೊಂದ್‌ ಆದ್ರೆ ನಮಗೂ ತಲೆನೋವು’ ಎಂದ.

ಓಣಿಯ ಮೂಲೆ ದಾಟಿದ ಮೇಲೆ ಅವನ ಕಾಲಿಗೆ ಏನೋ ಮೆತ್ತಿದಂತಾಯಿತು. ಕಾಲಿಗೆ ಮೆತ್ತಿದ್ದು ರಕ್ತವೋ ಎಂದು ಗಾಬರಿಗೊಂಡ ಅವನು ಕೆಳಗೆ ನೋಡಿದ. ನಿಯಾನ್ ದೀಪದ ಕೇಸರಿ ಬೆಳಕಿನಲ್ಲಿ ಅದು ಕೆಂಪಗೆ ಹೊಳೆಯುತ್ತಿತ್ತು. ವಾಚ್ ನೋಡಿಕೊಂಡ. ವಾಚ್ ಮಧ್ಯಾಹ್ನ ಹನ್ನೆರಡಕ್ಕೇ ನಿಂತು ಹೋಗಿತ್ತು. ಮೊಬೈಲ್‌ ತೆಗೆದ. ವಿಡಿಯೊ ರೆಕಾರ್ಡ್‌ ಆಗುತ್ತಾ ಮೆಮೊರಿ ಮುಗಿದು ಅದು ಯಾವಾಗಲೋ ಹ್ಯಾಂಗ್‌ ಆಗಿತ್ತು. ಮೊಬೈಲ್‌ ಜೇಬಿಗಿಟ್ಟುಕೊಂಡು ಅವಸರದಲ್ಲಿ ಹೆಜ್ಜೆ ಹಾಕಿದ. ನಡೆಯುತ್ತಾ ಹೋದಂತೆ ಅವನಿಗೆ ಆ ಮತ್ತೊಬ್ಬ ಪೊಲೀಸನ ಮಾತು ನೆನಪಾಯಿತು.
‘ನೋಡ್ಕೊಂಡು ಬರೆಯೋಕೆ ಏನಿದೆ. ಇದು ಈ ತಾಯಿಯೊಬ್ಬಳ ನೋವಲ್ಲ. ಬರೆದ ಮಾತ್ರಕ್ಕೆ ಮುಗಿಯೋ ಸಮಸ್ಯೆನೂ ಇದಲ್ಲ’ ಎಂದುಕೊಂಡ.

‘ಧರ್ಮ ಅಫೀಮಾದಷ್ಟೂ ನೆಲಕ್ಕೆ ರಕ್ತದ ದಾಹ ಹೆಚ್ಚಾಗುತ್ತೆ’ ಎಲ್ಲೋ ಓದಿದ್ದೋ, ಕೇಳಿದ್ದೋ ಸಾಲು ಅವನಿಗೆ ನೆನಪಾಯಿತು.

ಮುಂದೆ ನಡೆಯುತ್ತಾ ಹೋದ ಅವನಿಗೆ ಇಡೀ ದೇಶವೇ ಆ ತಾಯಿಯಂತೆ ಮುದುಡಿಕೊಂಡು ಕಣ್ಣೀರಿಡುತ್ತಿರುವ ಚಿತ್ರ ಕಣ್ಣ ಮುಂದೆ ಬಂತು. ಅದರಿಂದ ಒಂದು ಕ್ಷಣ ಬೆಚ್ಚಿದ ಅವನು ಸಾವರಿಸಿಕೊಂಡು ತನಗೇ ಎಂಬಂತೆ ಹೇಳಿಕೊಂಡ:

‘ಈ ರಾತ್ರಿ ಕಳೆದು ಬೆಳಗಾದರೆ ಹಬ್ಬ. ಮೊದಲು ಬೆಳಕಾಗಲಿ’

ಟಿ.ಕೆ. ದಯಾನಂದ
‘ಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ ಪರ ವಿಚಾರಮುಮಂ, ಧರ್ಮಮುಮಂ’ ಎನ್ನುತ್ತಾನೆ ಕವಿರಾಜಮಾರ್ಗಕಾರ. ಆದರೆ, ದೇಶದಲ್ಲಿ ಇಂದು ಪರ ವಿಚಾರ, ಪರ ಧರ್ಮಗಳನ್ನು ಸೈರಿಸಿಕೊಳ್ಳುವ ಗುಣವೇ ಮಾಯವಾಗುತ್ತಿದೆ. ದೇಶದಲ್ಲಿ ಹೆಚ್ಚುತ್ತಿರುವ ಕೋಮು ದಳ್ಳುರಿ ಎಷ್ಟರ ಮಟ್ಟಿಗೆ ಮನೆಗಳನ್ನು ಸುಡುತ್ತಿದೆ ಎಂಬುದು ಇಂದು ಒಡೆದು ಕಾಣುತ್ತಿದೆ. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಕೊಲೆಗಳು, ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರಗಳು, ಪರಧರ್ಮ, ಪರ ವಿಚಾರಗಳನ್ನು ಸಹಿಸದಿರುವ ಅಸಹಿಷ್ಣು ವಾತಾವರಣ ಸೂಕ್ಷ್ಮ ಮನಸ್ಸುಗಳನ್ನು ಬಾಧಿಸದೆ ಇರದು. ಧರ್ಮ ಮತ್ತು ವಿಚಾರಗಳ ಸಂಘರ್ಷಗಳಲ್ಲಿ ಕೊನೆಗೆ ಬಲಿಯಾಗುವುದು ಅಮಾಯಕರೇ. ಹೀಗೆ ಅಮಾಯಕರ ಬಲಿಗಳು ಹೆಚ್ಚಾದ ಸಂದರ್ಭದಲ್ಲಿ ಹುಟ್ಟಿದ ಕಥೆ ಇದು. ಇಡೀ ದೇಶದ ಗಮನ ಸೆಳೆದಿದ್ದ ಅಮಾಯಕ ಮುಸ್ಲಿಂ ಯುವಕನ ಕೊಲೆ ನನ್ನನ್ನುತೀವ್ರವಾಗಿ ಕಾಡಿತ್ತು. ಇದನ್ನು ಕಥೆಯಾಗಿಸಿದರೆ ತಕ್ಷಣದ ಪ್ರತಿಕ್ರಿಯೆಯಾಗಿ ಬಿಡಬಹುದೇನೋ ಎಂಬ ಅಳುಕೂ ಕಥೆ ಬರೆಯಲು ಕುಳಿತ ಆರಂಭದಲ್ಲಿ ಕಾಣಿಸಿಕೊಂಡಿತ್ತು. ಆದರೆ, ಬರೆಯಲೇಬೇಕಾದ ಒತ್ತಡದಿಂದ ಕೊನೆಗೂ ಹುಟ್ಟಿದಕಥೆ ‘ಪುಣ್ಯಕೋಟಿ’.
ಲೇಖಕನೊಬ್ಬ ಲೇಖಕನಾಗಿ ಬದುಕುವುದು ಸಾಧ್ಯವಾಗುವುದೇ ಅವನು ‘ಬರೆಯಲೇಬೇಕಾದ’ ಒತ್ತಡವನ್ನು ಪೂರೈಸಿಕೊಂಡಾಗ. ಲೇಖಕ ತಾನು ‘ಬರೆಯಲೇಬೇಕಾದ್ದ’ನ್ನು ಬರೆಯದೇ ಹೋದರೆ ಅದು ಅವನಿಗೆ ಅವನೇ ಮಾಡಿಕೊಳ್ಳುವ ಅನ್ಯಾಯ. ಹೀಗೆ ಬರೆಯಲೇಬೇಕಾದ ಒತ್ತಡದಿಂದ ಮೂಡಿದ ಕಥೆ ಇದು. ಈ ಕಥೆ ನನಗೆ ಇಷ್ಟವಾಗಲು ಕಾರಣವೂ ಇದೇ. ನಡೆದ ಘಟನೆಗೆ ತಕ್ಷಣದ ಪ್ರತಿಕ್ರಿಯೆಯಂತೆಯೇ ಈ ಕಥೆ ಇದ್ದರೂ ಸಾವು ನೋವಿನ ನಂತರದ ಪರಿಣಾಮಗಳ ಬಗ್ಗೆ ಕಥೆ ಮಾತನಾಡುತ್ತದೆ. ಮಾಂಟೊ ಕಥೆಗಳ ಬೆಳಕೂ ಈ ಕಥೆಯ ಮೇಲಿದೆ. ಹಿಂಸಾಚಾರ ಭುಗಿಲೆದ್ದ ಸಂದರ್ಭಗಳನ್ನು ಮಾಂಟೊ ಕಥೆಗಳಾಗಿಸುವ ಬಗೆ ನನ್ನಲ್ಲಿ ಬೆರಗು ಹುಟ್ಟಿಸಿತ್ತು. ಈ ಕಥೆಯೂ ಬೆಳೆಯುತ್ತಾ ಅದೇ ರೀತಿಯ ಬೆರಗನ್ನು ನನ್ನಲ್ಲಿ ಮೂಡಿಸಿದೆ. ಮನುಷ್ಯ ಮನುಷ್ಯನನ್ನು ಕೊಂದು ಬದುಕುವುದು ಬದುಕಲ್ಲ ಎಂಬುದನ್ನು ಹೇಳಲು ಈ ಕಥೆಯ ಮೂಲಕ ಪ್ರಯತ್ನಿಸಿದ್ದೇನೆ.