ತಮ್ಮ ದೇಶದಲ್ಲಿ ನಡೆಯುತ್ತಿರುವ ಆಂತರಿಕ ಯುದ್ಧ, ಗಲಾಟೆ, ಹಿಂಸೆ, ಸಾವು, ಮಿಲಿಟರಿ ಆಡಳಿತ ಎಂಬಂತೆ ಜೀವಹಾನಿಕಾರಕ ಪರಿಸ್ಥಿತಿಯಿದ್ದು ಜೀವ ರಕ್ಷಿಸಿಕೊಳ್ಳಲು ದೇಶ ಬಿಟ್ಟು ಬರುವ ಜನರು ಇತ್ತೀಚಿನ ದಶಕಗಳಲ್ಲಿ ಹೆಚ್ಚುತ್ತಿದ್ದಾರೆ. ಅಲ್ಲದೆ ಮಾನವ ಹಕ್ಕುಗಳ ಉಲ್ಲಂಘನೆ ಎಂಬ ಕಾರಣವನ್ನು ಮುಂದೆ ಮಾಡಿಕೊಂಡು ಕೂಡ ಸಾವಿರಾರು ಜನರು ದೇಶ ತೊರೆದು ಬೇರೆ ಕಡೆ ಆಶ್ರಯವನ್ನು ಬೇಡಿಕೊಂಡು ಹೋಗುತ್ತಾರೆ. ಇವರು ‘ಅಸೈಲಮ್ ಸೀಕರ್’ ಎಂದು ಕರೆಸಿಕೊಳ್ಳುತ್ತಾರೆ. ಇವರು ಆಶ್ರಯ ಬೇಡಿದ ದೇಶದ ಸರಕಾರವು ಅವರ ಅಹವಾಲನ್ನು ಮನ್ನಿಸಿ ತನ್ನ ದೇಶದಲ್ಲಿ ಬದುಕಲು ಅನುಮತಿ ನೀಡಿದರೆ ಆಗ ಅವರಿಗೆ ‘ನಿರಾಶ್ರಿತರು’ ಎಂಬ ಸ್ಟೇಟಸ್ ದೊರೆಯುತ್ತದೆ.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”
ದೊಡ್ಡಣ್ಣ ರಷ್ಯ ಮತ್ತು ಕಿರಿಮಗು ಯೂಕ್ರೇನ್ ದೇಶಗಳ ನಡುವೆ ನಡೆದಿರುವ ಯುದ್ಧವು ಒಂದು ನೆಲೆಯಲ್ಲಿ ನಿಂತು ನೋಡಿದರೆ ಪ್ರಪಂಚದ ಎಲ್ಲ ಬಲಶಾಲಿ ದೇಶಗಳ ಗಮನವನ್ನು ಸೆಳೆದಿದೆ. ನಡೆಯುತ್ತಿರುವ ಯುದ್ಧದ ಪರಿಣಾಮಗಳು ಯೂರೋಪಿನ ರಾಷ್ಟ್ರಗಳಲ್ಲಿ ಮತ್ತು ಪಕ್ಕದ ಮನೆ ಬ್ರಿಟನ್ನಿನಲ್ಲಿ ಕಾಣುತ್ತಿವೆ. ತಮ್ಮ ನಾಡು ಯೂಕ್ರೇನ್ ಬಿಟ್ಟು ಹೊರ ನಡೆದಿರುವ ಪ್ರಜೆಗಳು ‘ನಿರಾಶ್ರಿತರು’ ಎಂಬ ಹೊಸ ಅಸ್ಮಿತೆಗೆ ಹೊಂದಿಕೊಳ್ಳಲು ಹೆಣಗಾಡುತ್ತಿರುವಾಗಲೇ ಯೂಕ್ರೇನಿಯನ್ನರ ಬಗ್ಗೆ ಬಲಶಾಲಿ ದೇಶಗಳಲ್ಲಿ ಬಹುದೊಡ್ಡ ಅನುಕಂಪದ ಅಲೆಯೆದ್ದಿದೆ. ಮುಖ್ಯವಾಗಿ ಯೂರೋಪಿಯನ್ ಯೂನಿಯನ್ ಎಂಬ ಒಕ್ಕೂಟದ ಅಡಿಯಲ್ಲಿ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಮುಂದುವರೆದಿರುವ ಇಪ್ಪತ್ತೇಳು ರಾಷ್ಟ್ರಗಳಲ್ಲಿ ಅನುಕಂಪದ ಜೊತೆ ಚಿಂತೆಯೂ ಬೆರೆತಿದೆ. ಇದು ಸಹಜವೆ. ಹಿಂದಿನ ಶತಮಾನದಲ್ಲಿ ನಡೆದ ಎರಡು ಮಹಾಯುದ್ಧಗಳ ನೋವು, ಸಾವು, ಭೀಕರ ಕಹಿಗಳನ್ನುಂಡಿರುವ ಈ ದೇಶಗಳು ಮತ್ತು ಬ್ರಿಟನ್ ಯೂಕ್ರೇನಿನ ಪರ ನಿಂತು ‘ಯುದ್ಧ ಬೇಡ’ ಎಂದು ರಷ್ಯಾಕ್ಕೆ ಹೇಳುತ್ತಲೇ ನಿರಾಶ್ರಿತರನ್ನು ಸ್ವಾಗತಿಸುತ್ತಿದೆ.
ಯೂರೋಪಿಯನ್ ಯೂನಿಯನ್ ಒಕ್ಕೂಟದಲ್ಲಿಯೆ ಇರುವ ಸಿರಿವಂತ ರಾಷ್ಟ್ರಗಳು ತಮ್ಮ ದೇಶಗಳ ಆರ್ಥಿಕ ಸಂಪನ್ಮೂಲಗಳನ್ನು ಆಧರಿಸಿ ಇಂತಿಷ್ಟು ಸಾವಿರ ಎಂದು ನಿರಾಶ್ರಿತರ ಸಂಖ್ಯೆಯನ್ನು ತಮ್ಮಲ್ಲೆ ವಿಂಗಡಿಸಿಕೊಂಡಿವೆ. ಪಕ್ಕದ ಬ್ರಿಟನ್ ಕೂಡ ಅದನ್ನು ಅನುಸರಿಸಿದ್ದಲ್ಲದೆ ಯೂಕ್ರೇನಿಯನ್ನರು ತಮ್ಮ ದೇಶಕ್ಕೆ ‘ಅತಿಥಿಯಾಗಿ’ ಬಂದು ಆರು ತಿಂಗಳ ಕಾಲ ಇರಬಹುದೆಂದು ತನ್ನ ಗಡಿನೀತಿಯನ್ನು ಸಡಿಲಗೊಳಿಸಿದೆ. ಹಾಗೆ ಬರುವ ಅತಿಥಿಗಳು ಬ್ರಿಟನ್ನಿನ ಪ್ರಜೆಗಳ ಮನೆಗಳಲ್ಲಿ ಇರಬಹುದು. ಈಗಾಗಲೇ ಅಂತಹ ದೊಡ್ಡ ಮನಸ್ಸಿನ ಪ್ರಜೆಗಳು ಅನೇಕ ‘ಅತಿಥಿಗಳನ್ನು’ ಬರಮಾಡಿಕೊಂಡಿದ್ದಾರೆ.
ಅತ್ತ ಕಡೆ ಯೂಕ್ರೇನಿಯನ್ನರ ಪರವಾಗಿ ಮತ್ತು ಆ ದೇಶದ ಪರವಾಗಿ ನಿಂತು ಯುದ್ಧಕ್ಕೆ ಸಹಾಯ ಮಾಡುತ್ತಿರುವ ಮಂದಿಯೂ ಇದ್ದಾರೆ. ಜನರ ಪರವಾಗಿ ಹಲವಾರು ದೇಣಿಗೆ ಸಂಗ್ರಹ ಸಂಗೀತ ಇವೆಂಟ್ ಗಳು ನಡೆದಿವೆ. ಕೇವಲ ಎರಡು ತಿಂಗಳುಗಳಲ್ಲಿ ಬೇರೆಬೇರೆ ದೇಶಗಳಲ್ಲಿ ಹಲವಾರು ರೀತಿಗಳಲ್ಲಿ ಸಂಗ್ರಹವಾಗಿರುವ ಹಣದ ಅಧಿಕೃತ ಲೆಕ್ಕ ಕೆಲವು ಬಿಲಿಯನ್ ಡಾಲರುಗಳಷ್ಟು ಎಂದು ಓದಿದಾಗ ಆಶ್ಚರ್ಯವುಂಟಾಗುತ್ತದೆ. ಅವರ ಪರವಾಗಿ ನಡೆದಿರುವ ಪ್ರಚಾರವು ಅದರ ಹಿಂದಿರುವ ಒಳ್ಳೆಯ ಮನಸ್ಸು, ಉದ್ದೇಶ, ಕೆಲಸಗಳ ಬಗ್ಗೆ ಭರವಸೆ ಹುಟ್ಟಿಸುತ್ತದೆ. ಈಗಾಗಲೇ ನಿರಾಶ್ರಿತರಾಗಿರುವ ಯೂಕ್ರೇನಿಯನ್ನರಿಗೆ ಯೂರೋಪಿನ ಕೆಲ ದೇಶಗಳು ತಮ್ಮಲ್ಲಿ ಬಂದು ಶಾಶ್ವತವಾಗಿ ನೆಲೆಸುವಂತೆ ಕರೆಕೊಟ್ಟಿವೆ. ಯೂಕ್ರೇನಿನೊಡನೆ ಯಾವುದೆ ನೇರ ಸಂಬಂಧವಿಲ್ಲದಿದ್ದರೂ ಆಸ್ಟ್ರೇಲಿಯ ಸರಕಾರವು ಅಮೇರಿಕ ಮತ್ತು ಬ್ರಿಟಿಷ್ ಸರಕಾರಗಳ ಜೊತೆ ಸೇರಿ ಸಹಾಯ ಮಾಡಲು ಟೊಂಕಕಟ್ಟಿ ನಿಂತಿದೆ. ಈಗಾಗಲೇ ಅನೇಕ ಯೂಕ್ರೇನಿಯನ್ನರು ಬಂದಿಳಿದಿದ್ದಾರೆ. ಅವರ ಮಕ್ಕಳಿಗೆ ಬೇಕಿರುವ ಆಟದ ಸಾಮಾನುಗಳು, ಪಠ್ಯವಸ್ತುಗಳ ಸಂಗ್ರಹ, ಇಡೀ ಕುಟುಂಬಗಳಿಗೆಂದು ಬಟ್ಟೆಬರೆ, ಮನೆ ಸಾಮಾನುಗಳು ಎಂಬಂತೆ ನಾನಾರೀತಿಯಲ್ಲಿ ಸಂಗ್ರಹಣೆ ಕಾರ್ಯ ಸಾಗಿದೆ. ಸಮುದಾಯಗಳು ಯೂಕ್ರೇನಿಯನ್ನರನ್ನು ಸ್ವಾಗತಿಸಲು ಉತ್ಸುಕತೆಯಿಂದಿವೆ. ಸರಕಾರವು ಉಚಿತ ಅರೋಗ್ಯ ಸೇವೆ ಮತ್ತು ಶಿಕ್ಷಣವನ್ನು ಘೋಷಿಸಿದೆ. ಯೂನಿವರ್ಸಿಟಿಗಳಲ್ಲಿ ಸ್ಕಾಲರ್ಶಿಪ್ ಘೋಷಿಸಲಾಗಿದೆ. ಇದರ ಹಿಂದೆ ಇರುವ ರಾಜಕೀಯವೂ ಕಾಣಸಿಗುತ್ತದೆ.
ತಮ್ಮ ದೇಶದಲ್ಲಿ ನಡೆಯುತ್ತಿರುವ ಆಂತರಿಕ ಯುದ್ಧ, ಗಲಾಟೆ, ಹಿಂಸೆ, ಸಾವು, ಮಿಲಿಟರಿ ಆಡಳಿತ ಎಂಬಂತೆ ಜೀವಹಾನಿಕಾರಕ ಪರಿಸ್ಥಿತಿಯಿದ್ದು ಜೀವ ರಕ್ಷಿಸಿಕೊಳ್ಳಲು ದೇಶ ಬಿಟ್ಟು ಬರುವ ಜನರು ಇತ್ತೀಚಿನ ದಶಕಗಳಲ್ಲಿ ಹೆಚ್ಚುತ್ತಿದ್ದಾರೆ. ಅಲ್ಲದೆ ಮಾನವ ಹಕ್ಕುಗಳ ಉಲ್ಲಂಘನೆ ಎಂಬ ಕಾರಣವನ್ನು ಮುಂದೆ ಮಾಡಿಕೊಂಡು ಕೂಡ ಸಾವಿರಾರು ಜನರು ದೇಶ ತೊರೆದು ಬೇರೆ ಕಡೆ ಆಶ್ರಯವನ್ನು ಬೇಡಿಕೊಂಡು ಹೋಗುತ್ತಾರೆ. ಇವರು ‘ಅಸೈಲಮ್ ಸೀಕರ್’ ಎಂದು ಕರೆಸಿಕೊಳ್ಳುತ್ತಾರೆ. ಇವರು ಆಶ್ರಯ ಬೇಡಿದ ದೇಶದ ಸರಕಾರ ಅವರ ಅಹವಾಲನ್ನು ಮನ್ನಿಸಿ ತನ್ನ ದೇಶದಲ್ಲಿ ಬದುಕಲು ಅನುಮತಿ ನೀಡಿದರೆ ಆಗ ಅವರಿಗೆ ‘ನಿರಾಶ್ರಿತರು’ ಎಂಬ ಸ್ಟೇಟಸ್ ದೊರೆಯುತ್ತದೆ. ಅಂದರೆ ಅಧಿಕೃತವಾಗಿ ಆಶ್ರಯ ಪಡೆದವರು. ಈ ಸ್ಟೇಟಸ್ ಕೊಡುವುದು, ಎಷ್ಟು ವರ್ಷಗಳ ತನಕ ಎನ್ನುವುದು ಆಯಾ ದೇಶಗಳ ರಾಜಕೀಯ ನೀತಿ, ಕಾನೂನು, ಧೋರಣೆಗಳನ್ನು ಅವಲಂಬಿಸಿರುತ್ತದೆ. ಇದು ಅಂತಾರಾಷ್ಟ್ರೀಯ ಮಟ್ಟದ ಬಹಳ ಕ್ಲಿಷ್ಟವಾದ ವಿಷಯಗಳು. ಯಾರ್ಯಾರಿಗೆ ಎಷ್ಟು ಸಹಾಯ, ಬೆಂಬಲಗಳನ್ನು ಕೊಡಬೇಕು ಎನ್ನುವುದು ಕೂಡ ಆಳವಾದ ರಾಜಕೀಯ ಚದುರಂಗಾಟ. ಈ ಆಟದ ಒಂದು ನೋಟ ನಮಗೀಗ ರಷ್ಯಾ-ಯೂಕ್ರೇನಿನ ಯುದ್ಧ ಸಂದರ್ಭದಲ್ಲಿ ಸಿಗುತ್ತಿದೆ.
ಹೊರಗಿನ ದೇಶವೊಂದು ಅತಿಕ್ರಮಿಸಿ ನಡೆಯುತ್ತಿರುವ ಈ ಯುದ್ಧ ಸಂದರ್ಭದಲ್ಲಿ ಯೂಕ್ರೇನಿನ ಜನರಿಗೆ ತಕ್ಷಣಕ್ಕೆ ಬೇರೆ ದೇಶಗಳಲ್ಲಿ ಆಶ್ರಯ ಸಿಗುತ್ತಿರುವುದು ಇತರೆ ‘ಆಶ್ರಯ ಬೇಡಿದವರು’ (ಅಸೈಲಮ್-ಸೀಕರ್) ಮತ್ತು ‘ಆಶ್ರಯ ಪಡೆದವರು’ (ರೆಫ್ಯೂಜಿ) ಎಂಬ ಸ್ಟೇಟಸ್ ನಲ್ಲಿರುವ ಸಾವಿರಾರು ಜನರಲ್ಲಿ ಕುತೂಹಲ ಮೂಡಿಸಿರಬಹುದು. ಯಾಕೆ ಎಲ್ಲಾ ನಿರಾಶ್ರಿತರಿಗೆ ಒಂದೇ ರೀತಿಯ ಸಮಾನತೆ, ಬೆಂಬಲ, ಸಹಕಾರ, ಸಹಾಯ, ಅನುಕಂಪಗಳು ದೊರಕುವುದಿಲ್ಲ ಎನ್ನುವ ಪ್ರಶ್ನೆಯೇಳುತ್ತದೆ. ಈ ಪ್ರಶ್ನೆಯನ್ನು ಎತ್ತಿರುವವರಲ್ಲಿ ನಮ್ಮ ರಾಣಿರಾಜ್ಯದ ರಾಜಧಾನಿಯಾದ ಬ್ರಿಸ್ಬೇನ್ ನಗರದ ಒಂದು ಹೋಟೆಲ್ಲಿನಲ್ಲಿ ಕಡ್ಡಾಯ ವಾಸ ಮಾಡುತ್ತಿರುವ ಕೆಲ ಅಸೈಲಮ್-ಸೀಕರ್ ಮಂದಿ ಕೂಡ ಇದ್ದಾರೆ.
ಇವರುಗಳಲ್ಲಿ ಶ್ರೀಲಂಕಾದಲ್ಲಿ, ಸಿರಿಯಾ ಮತ್ತು ಇರಾಕ್ ದೇಶಗಳಲ್ಲಿ ನಡೆದ ಆಂತರಿಕ ಯುದ್ಧದ ಕಾರಣದಿಂದ ತಮ್ಮ ನಾಡನ್ನು ತೊರೆದು ಬಂದವರು ಇದ್ದಾರೆ. ಅವರು ತಾವೇ ಸ್ವತಃ ಹೇಗೋ ಏನೋ ಮಾಡಿಕೊಂಡು ಬಗೆಬಗೆಯ ದಾರಿಗಳನ್ನು ಹುಡುಕಿಕೊಂಡು ಆಸ್ಟ್ರೇಲಿಯಾ ತೀರವನ್ನು ತಲುಪಿ ಇಲ್ಲಿನ ಗಡಿಪಡೆಯ ಸಿಬ್ಬಂದಿಯಿಂದ ಬಂಧಿತರಾದವರು. ಕಾರಣ ಇಲ್ಲಿನ ಸರಕಾರದ ಒಪ್ಪಿಗೆಯಿಲ್ಲದೆ ಅನಧಿಕೃತವಾಗಿ ಬಂದವರು ಅವರು. ೨೦೦೨ನೇ ಇಸವಿಯಲ್ಲಿ ಆಗಿನ ಪ್ರಧಾನಮಂತ್ರಿ ಜಾನ್ ಹೊವಾರ್ಡ್ ‘ಅನಧಿಕೃತವಾಗಿ ಬಂದವರಿಗೆ ನಮ್ಮ ದೇಶದಲ್ಲಿ ಎಂದಿಗೂ ಜಾಗವಿಲ್ಲ’ ಎಂದು ಗುಡುಗಿ ಹೊಸ ಕಾನೂನು ಮಾಡಿದ್ದರು. ಅದೇ ಕಾನೂನು ಈಗಲೂ ಜಾರಿಗೆಯಲ್ಲಿದ್ದು, ಅಫ್ಘಾನಿಸ್ತಾನ್, ಸಿರಿಯಾ, ಶ್ರೀಲಂಕಾ, ಇರಾಕ್ ಮುಂತಾದ ಮತ್ತು ಆಫ್ರಿಕಾ ಖಂಡದ ದೇಶಗಳಿಂದ ತಮ್ಮದೇ ದಾರಿ ಮಾಡಿಕೊಂಡು ಬಂದವರಲ್ಲಿ ಬಹುಪಾಲು ಮಂದಿ ಈಗಲೂ ದೇಶದ ಹೊರಗಿರುವ ಡಿಟೆನ್ಶನ್ ಕೇಂದ್ರಗಳಲ್ಲಿ ಮತ್ತು ದೇಶದೊಳಗೆ ಇರುವ ನಿಗದಿತ ಕೇಂದ್ರಗಳಲ್ಲಿ ಸಿಲುಕಿದ್ದಾರೆ. ಹಾವು ಸಾಯುವುದಿಲ್ಲ, ಕೋಲು ಮುರಿಯುವುದಿಲ್ಲ ಎಂಬ ಕೆಟ್ಟ ಗಾದೆಯ ಯಥಾವತ್ ಪರಿಸ್ಥಿತಿ ಇವರದ್ದು. ಅವರ ಪರವಾಗಿ ಯಾರೂ ದೇಣಿಗೆ ಸಂಗ್ರಹಿಸಿಲ್ಲ. ಅವರ ಪರಿಸ್ಥಿತಿ ವರ್ಷಗಳಿಂದ ಅಯೋಮಯವಾಗಿದೆ. ಇವರನ್ನು ಇಟ್ಟಿರುವ ಕೇಂದ್ರಗಳಲ್ಲಿ ಉಚಿತ ಊಟ, ಬಟ್ಟೆ, ಶಿಕ್ಷಣ, ಅರೋಗ್ಯ ಸೇವೆ ಲಭ್ಯವಿದ್ದರೂ ಅವರಿಗೆ ಮಾನವ ಹಕ್ಕುಗಳ ಪ್ರಕಾರ ಇರುವ ಸ್ವಾತಂತ್ರ್ಯವಿಲ್ಲ. ಎರಡು ದಶಕಗಳಿಂದ ಇದನ್ನೇ ಗುರಿಯಾಗಿಸಿಕೊಂಡು ಹಲವಾರು ಮಾನವ ಹಕ್ಕುಗಳ ಸಂಸ್ಥೆಗಳು ಸರಕಾರದ ಜೊತೆ ಸಂಧಾನಗಳನ್ನು ನಡೆಸುತ್ತಲೇ ಬಂದಿದ್ದರೂ ಇನ್ನೂ ಅನೇಕ ‘ಅಸೈಲಮ್ ಸೀಕರ್’ ಅರ್ಜಿದಾರರು ಅದೇ ಅರೆ-ಬಂಧನದ ಸ್ಥಿತಿಯಲ್ಲಿದ್ದಾರೆ. ಅವರ ಪರವಾಗಿ ಆಗೊಮ್ಮೆ ಈಗೊಮ್ಮೆ ಅಪರೂಪಕ್ಕೆ ಅಲ್ಲೊಬ್ಬರು ಇಲ್ಲೊಬ್ಬರು ದನಿ ಎತ್ತುತ್ತಾರೆ. ಮಾನವಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸುತ್ತಾರೆ. ಸರಕಾರಗಳು ಕಾನೂನಿನ ಕಡೆ ಕೈ ತೋರಿಸುತ್ತವೆ.
ಈ ಡಿಟೆನ್ಶನ್ ಕೇಂದ್ರಗಳಿಗೆ ಮಕ್ಕಳಾಗಿ ಬಂದವರು ಈಗ ವಯಸ್ಕರಾಗಿದ್ದರೆ. ಇನ್ನೂ ಎಷ್ಟು ವರ್ಷಗಳು ಹೀಗೆ ಅರೆ-ಬಂಧನದಲ್ಲಿರಬೇಕು, ಕೆಲ ನೂರು ಮಂದಿಯನ್ನು ದೇಶದೊಳಗೆ ಬಿಟ್ಟುಕೊಳ್ಳಲು ಆಸ್ಟ್ರೇಲಿಯಕ್ಕೆ ಯಾಕಿಷ್ಟು ಭಯ ಎಂದು ಕೇಳಿದವರು ಇದ್ದಾರೆ. ಅದೇ ಸರಕಾರವು ನಾವೆಲ್ಲ ನೂರಾರು ಸಂಖ್ಯೆಯಲ್ಲಿ ಬಂದಿಳಿಯುವ ಯೂಕ್ರೇನಿಯನ್ನರನ್ನು ಸ್ವಾಗತಿಸಿ ಅವರನ್ನು ಸಮಾಜದಲ್ಲಿ ಸೇರಿಸಿಕೊಳ್ಳಬೇಕೆಂದು ಹೇಳಿದೆ. ಅನೇಕ ಸತ್ಯ-ಮಿಥ್ಯೆಗಳ ಕತೆಗಳು ಕಹಿಯನ್ನೆ ತಮ್ಮ ಭಂಡಾರದಲ್ಲಿ ತುಂಬಿಸಿಟ್ಟುಕೊಂಡಿರುವುದು ವಿದಿತವಾಗಿದೆ.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.