ತಮಿಳು ಕವಿ ಡಾ. ವೈರಮುತ್ತು ರಾಮಸ್ವಾಮಿ, ಚಿತ್ರರಂಗದಲ್ಲಿಯೂ ಹೆಸರು ಮಾಡಿದವರು.. ಕವಿ,ಗೀತರಚನೆಕಾರ ಮತ್ತು ಕಾದಂಬರಿಕಾರರಾಗಿ ಅವರು ಹೆಸರು ಮಾಡಿದ್ದಾರೆ. ಅವರ ಮೊದಲ ಕವನ ಸಂಕಲನ  ವೈಗರೈ ಮೇಗಂಗಳ್. ತಿರುತ್ತಿ ಎಳುದಿಯ ಕವಿತೈಗಳ್   ಎರಡನೆಯ ಕವನ ಸಂಕಲನ. ಆದರೆ ಚಿತ್ರರಂಗದಲ್ಲಿ ಅವರು ಮಾಡಿದ ಸಾಧನೆಯನ್ನು ಪರಿಗಣಿಸಿ ಅವರಿಗೆ ಪದ್ಮಶ್ರೀ ಮತ್ತು ಪದ್ಮವಿಭೂಷಣ ಪ್ರಶಸ್ತಿ ಲಭಿಸಿದೆ.  ಇಳಯರಾಜ ಅವರೊಡನೆ ದೀರ್ಘಕಾಲ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಿದರು. ಕಾದಂಬರಿಗಳನ್ನೂ ಬರೆದಿರುವ ಅವರ ಸಾಹಿತ್ಯ ಕೃಷಿ ವೈವಿಧ್ಯಮಯವಾದುದು. ಅವರು ಬರೆದ  ಒಂದು ಕವಿತೆಯನ್ನು ಡಾ. ಮಲರ್ ವಿಳಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. 

ನಗು

ಬಾಳಿಗೆ ಬೀಗ ಜಡಿದೇ ಇದೆs
ನಗುವಿನ ಶಬ್ದವಾಲಿಸುವಾಗೆಲ್ಲಾ
ತೆರೆದುಕೊಳ್ಳುತ್ತದೆ

ಬಾಳ ಮೇಲೆ ಪ್ರಕೃತಿ ಚಿಮುಕಿಸಿದ
ಸುಗಂಧ ತೈಲವೇ ನಗು

ಎಲ್ಲಾ ತುಟಿಗಳು ಮಾತನಾಡಲರಿತ
ಸಾರ್ವತ್ರಿಕ ಭಾಷೆ ನಗು

ತುಟಿಯ ಕೆಲಸ ಆರು
ನಗುವುದು ಚುಂಬಿಸುವುದು ತಿನ್ನುವುದು
ಹೀರುವುದು ಉಚ್ಚರಿಸುವುದು ನುಡಿಸುವುದು

ನಗದ ತುಟಿಗೆ
ಮೇಲೆ ಹೇಳಿದ ಐದು
ಇದ್ದರೆಷ್ಟು? ಹೋದರೆಷ್ಟು?

ಕೊಡು ಕೊಳ್ಳುವ
ಈರ್ವರಿಗೂ ನಷ್ಟವಿಲ್ಲದ
ವಿಸ್ಮಯದಾನವಲ್ಲವೇ? ನಗು

ನಗಲು ತೆರೆಯುವ ತುಟಿಗಳ ಮೂಲಕ
ದುಃಖ ಹೊರದೂಡಲ್ಪಡುವುದು

ಪ್ರತಿ ಬಾರಿ ನಕ್ಕಾಗಲೂ ಹೃದಯ
ಧೂಳನು ಕೊಡವಿಕೊಳ್ಳುವುದು
ನಕ್ಕಾಗ ಬೀಳುವ ಕಣ್ಣೀರಲಿ
ಉಪ್ಪಿನ ರುಚಿ ತಿಳಿಯದು

ನಗುವೆಂಬುದೇ ಮುಳ್ಳಾಗಿ
ಗುಲಾಬಿಯಾಗಿ

ನಗು
ಸ್ಥಳಾಂತರಗೊಂಡ ವೈರುಧ್ಯವೇ
ಇತಿಹಾಸ

ಒಬ್ಬಾಕೆ ನಗಬಾರದೆಡೆ
ನಕ್ಕುಬಿಟ್ಟಳಲ್ಲ ಅದುವೇ (ಮಹಾ)ಭಾರತ

ಒಬ್ಬಾಕೆ ನಗಬೇಕಾದೆಡೆ
ನಗುವನು ಕಳೆದುಕೊಂಡಳು
ಅದುವೇ ರಾಮಾಯಣ

ಯಾವ ನಗೆಯೂ
ಕಪಟತನವಾದುದಲ್ಲ

ಹಾವಿನ ಹೆಡೆಯೂ
ಸುಂದರವಲ್ಲವೇ?

ನಗೆ ಚೆಲ್ಲಿದ ಮನೆ ಜಗುಲಿಯಲಿ
ಮರಣಕೂಡ ಕೂರದು

ಹಗಲಲಿ ನಗದಿರುವವರಿಗೆ
ಮರಣ ಪ್ರತಿ ಸಾಯಂಕಾಲವೂ
ಹಾಸಿಗೆಯ ಕೊಡವಿ ಹಾಕುವುದು

ಒಂದು
ಕಣಿವೆಯಿಡೀ
ಹೂ ಅರಳಿದರೂ ಒಂದು
ಕಂದನ ನಗುವಿಗೆ ಸಾಟಿಯಾಗಬಲ್ಲುದೇ?

ಪ್ರೇಮಕೆ ಮುನ್ನುಡಿ
ಸಾಲಕೆ ಬಂಡವಾಳ
ಅಧರಗಳ ಚಂದ್ರೋದಯ
ಪ್ರಾಣಿಗಳಿಂದ ಮನುಷ್ಯನನ್ನು
ಬೇರ್ಪಡಿಸುವ
ನಗುವನು ಹೀಗೆಲ್ಲಾ ಶ್ಲಾಘಿಸಿದರೂ
ಸಾಯುವವರೆಗೂ ನಗದ ಮನುಷ್ಯರು
ಉಂಟು ತಾನೇ? ನಗುತ್ತಿರಿ ಮನುಜರೇ

ಹೂಗಳ ಮೂಲಕ ನಗಲರಿಯದ
ಗಿಡ ಬಳ್ಳಿಗೆ
ದುಂಬಿಗಳ ವರ್ತನೆಯಿಲ್ಲ

ನಗಲರಿಯದವರ ಕಂಡು
ನಗಬೇಕೆನಿಸುತ್ತೆನಗೆ

ಇವರ ಹುಟ್ಟಿಗೆ
ವೀರ್ಯಾಣುವಿನ ಬದಲು
ಕಂಬನಿ ಬಿದ್ದಿರಬಹುದೋ ಎಂದು
ಚಿಂತಿಸುವೆ

ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ
ನಗುವಿನಲಿ ಎಷ್ಠು ಜಾತಿ
ಸವೆದ ಧ್ವನಿ ತಟ್ಟೆಯಂತೆ(ಗ್ರಾಮೋಫೋನ್)
ಒಂದೇ ಸ್ಥಳದಿ ಸುತ್ತುವ
ಉಲ್ಲಾಸದ ನಗೆ

ನೀರಲ್ಲಿ ಎಸೆದ ಬೆಣಚುಕಲ್ಲಿನಂದದಿ
ಬಿಟ್ಟು ಬಿಟ್ಟು ನಗುವ ವಿನೋದದ ನಗೆ

ನೆಲದಿ ಬಿದ್ದ ತಾಮ್ರದ ಚೆಂಬು
ಉರುಳಿ ಸವದಳಿಯುವಂಥ ನಗು

ಕಣ್ಣಿಗೆ ಕಾಣದ ಕ್ರಿಮಿ ಕೀಟಗಳು
ತುಟಿಯಗಲಿಸದೆ
ಧ್ವನಿಯೇಳಿಸುವಂಥ ನಗು

ನಗುವನ್ನು ಹೀಗೆ
ಶಬ್ದದ ಹಿನ್ನೆಲೆಯಲಿ
ಜಾತಿ ವಿಂಗಡಿಸಬಹುದು

ಕೆಲವು ಮೇಲ್ವರ್ಗದ
ಮಾನಿನಿಯರ ನಗುವಿನಲಿ
ಧ್ವನಿಯೇ ಬಾರದು

ಚಂದ್ರನ ಕಿರಣ
ನೆಲಕೆ ಸೋಕಿದಡೆ
ಶಬ್ದವೆಂತು ಶಬ್ದ?

ಪುಟ್ಟ ಪುಟ್ಟ ಸ್ವರ್ಗ ನಗು
ಜೀವಂತಿಕೆಯ ಲಕ್ಷಣ ನಗು

ಪ್ರತಿ ನಗುವಿನಲ್ಲೂ
ಕೆಲ ಮಿಲಿಮೀಟರ್?
ಆಯುಷ್ಯ ವೃಧ್ಧಿಸಬಹುದು

ಮರಣವ ಮುಂದೂಡುವ
ಮಾರ್ಗವೇ ನಗು

ಎಲ್ಲಿ
ಇಬ್ಬರು ಭೇಟಿಯಾಗುವಿರೋ
ದಯವಿಟ್ಟು ಮರಣವ
ಮುಂದೂಡಿರಿ