“ಅದ್ಯಾಕೆ ಗಾಂಧಿಯನ್ನು ಮಾತ್ರ ನೆಲದಲ್ಲಿ ನಿಲ್ಲಿಸಿದ್ದೀರ?” ಎಂದು ಡೇವಿಡ್‌ನನ್ನು ಕೇಳಲು ವೇಗವಾಗಿ ಬಾಯಿ ತೆರೆದೆ. ಆತನೇ ಹೇಳಿ ಬಿಟ್ಟ “ಅಲ್ಲಿ ನೋಡಿ ಗಾಂಧಿ ಮತ್ತು ಮಂಡೇಲಾ ಇಬ್ಬರು ಬರೀ ನೆಲದ ಮೇಲಿದ್ದಾರೆ. ಈ ಜಗತ್ತು ಕಂಡ ಅತ್ಯಂತ ಸರಳ ಜೀವಿಗಳು. ಅಬ್ಬರ, ಆಡಂಬರದಿಂದ ದೂರವೇ ಉಳಿದ ಇವರಿಬ್ಬರು ಎಲ್ಲರಿಗಿಂತ ಎತ್ತರದಲ್ಲಿ ನಿಲ್ಲಲು ಎಂದೂ ಬಯಸರು, ಆ ಕಾರಣಕ್ಕಾಗಿಯೇ ಹೀಗೆ ನಿಲ್ಲಿಸಲಾಗಿದೆ”. ಆತನ ಮಾತನ್ನು ಕೇಳಿ ದೇವರನ್ನೂ ವೈಭವದಲ್ಲಿ ಸ್ಥಾವರಗೊಳಿಸುವ ನನ್ನ ಅಲ್ಪಮತಿಯ ತಲೆಯ ಮೇಲೊಂದು ಮೊಟಕಿಕೊಂಡು ಮುಂದ್ಮುಂದೆ ನಡೆದೆ.
“ಕಂಡಷ್ಟೂ ಪ್ರಪಂಚ” ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ
ಪೋರ‍್ಬಂದರ್ ಮತ್ತು ಗಾಂಧಿನಗರದ ಸಾಬರ್ಮತಿ ಆಶ್ರಮಗಳನ್ನು ನೋಡಿ ಬರಬೇಕೆಂಬುದು ಆದ್ಯ ಆಸೆಗಳಲ್ಲಿ ಒಂದಾಗಿತ್ತು. ಅಂತೂ ಹೋಗಿ ಬಂದೆ. ಅಲ್ಲಿನ ವಾತಾವರಣ, ಗಾಂಧಿ ಬದುಕಿನ ಛಾಯಾಚಿತ್ರ ಪ್ರದರ್ಶನ, ಉಪಯೋಗಿಸಿದ ಸಾಮಾನುಗಳು, ಅವರ ಮನೆ, ಅಲ್ಲಿನ ಒಪ್ಪ ಓರಣ ಎಲ್ಲವನ್ನೂ ನೋಡುತ್ತಾ ಅನ್ನಿಸಿದ್ದು “ಒಬ್ಬ ವ್ಯಕ್ತಿ ಸಾಮಾನ್ಯತೆಯಲ್ಲೇ ತನ್ನನ್ನು ಕಂಡುಕೊಳ್ಳುತ್ತಾ, ಅದರಲ್ಲೇ ತೆರೆದುಕೊಳ್ಳುತ್ತಾ, ಅಸಾಮಾನ್ಯದಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾ, ಉದಾತ್ತತೆಯಲ್ಲಿ ತನ್ನನ್ನು ಆವಿಷ್ಕರಿಸಿಕೊಂಡ ಒಂದು ಪಯಣವೇ “ಗಾಂಧಿ”
ಬದಲಾದ ಕಾಲಘಟ್ಟದಲ್ಲಿ ಗಾಂಧಿಯ ಬಗ್ಗೆ ವಿರೋಧವೂ ಇದೆ. ಆದರೆ ಗಾಂಧಿಯನ್ನು ಒಪ್ಪದವರು ಅವರ ಇಸಂಗಳನ್ನು ಮೆಚ್ಚುತ್ತಾರೆ. ಅವರ ಇಸಂಗಳನ್ನು ಮೆಚ್ಚದವರು ಗಾಂಧಿಯನ್ನು ಒಪ್ಪುತ್ತಾರೆ. ಅಷ್ಟರಮಟ್ಟಿಗೆ ಒಬ್ಬ ಸಾಮಾನ್ಯ ವ್ಯಕ್ತಿ ‘ಗಾಂಧಿ’ ಎನ್ನುವ ಅವಿನಾಶಿ ಆತ್ಮವಾಗಿ ಹರಡಿಕೊಂಡಿರುವುದು ಒಂದು ಅದ್ಭುತವೇ ಸರಿ. ಪೋರ‍್ಬಂದರ್ ಮತ್ತು ಸಾಬರ್ಮತಿ ಆಶ್ರಮಗಳಲ್ಲಿ ಒಂದಷ್ಟು ಅಪರೂಪದಲ್ಲೇ ಅಪರೂಪವಾದ ಗಾಂಧಿ ಚಿತ್ರಗಳನ್ನು ಇಟ್ಟಿದ್ದಾರೆ. ಶೀರ್ಷಿಕೆಗಳ ಹಂಗು ತೊರೆದು ಒಂದೊಂದು ಚಿತ್ರವೂ ಒಂದು ಜೀವನ ಗಾಥೆಯನ್ನೇ ಕಟ್ಟಿಕೊಡುತ್ತವೆ. ನೋಡುತ್ತಲೇ ಒಂದಷ್ಟು “ಗಾಂಧಿ” ಆಗಿಬಿಡುತ್ತೇವೆ ಅನುಮಾನವೇ ಇಲ್ಲ.
ಆಗಸ್ಟ್ ಬಂತೆಂದರೆ ಮಂಗಳಗೌರಿ ಪೂಜೆ ಆಗಲೇ ಬೇಕೆಂದಿಲ್ಲ, ಆದರೆ ಗಾಂಧಿಯ ನೆನಪಿನ ಶ್ರಾವಣ ಮಾತ್ರ ಶನಿವಾರ ಪಡಿ ಬೇಡಲು ಬರುವ ಶ್ರೀನಿವಾಸನ ಒಕ್ಕಲಿನಂತೆ. ಸ್ವಾತಂತ್ರ್ಯ ಎಂದರೆ ನನಗಂತೂ ಪಪ್ಪ ತೋರಿಸಿಕೊಟ್ಟಿದ್ದು ಮಾತ್ರ. ಪಪ್ಪ ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ಆತ ಹೋರಾಡಿದ್ದು ಆಯ್ಕೆ ಸ್ವಾತಂತ್ರ್ಯ ಇಲ್ಲದ ಗುಲಾಮತನದ ವಿರುದ್ಧ. ಹೇಳಿಕೊಟ್ಟಿದ್ದು; ಹಸಿವಿದೆ, ಜಾತಿಯ ರೌದ್ರತೆ ಇದೆ, ಬಡತನವಿದೆ, ಆದರೆ ಆಯ್ಕೆ ಸ್ವಾಂತಂತ್ರ್ಯವಿದೆ. ಇದನ್ನು ಉಳಿಸಿಕೊಳ್ಳಲು ಜಾಗೃತರಾಗಿರಬೇಕು. ಗಾಂಧಿ ನನ್ನ ಬಾಳಿನಲ್ಲಿ ಬಂದಿದ್ದೇ ಪಪ್ಪನ ಮೂಲಕ.
ಪ್ರತೀ ಪ್ರವಾಸದಲ್ಲೂ ಗಾಂಧಿ ಕಂಡಿದ್ದಾರೆ. ದೇಶದೊಳಗಂತೂ ಪ್ರತೀ ಊರಿನಲ್ಲಿ ಒಂದು ‘ಮಹಾತ್ಮ ಗಾಂಧಿ ರಸ್ತೆ’ ಇದೆ. ಪ್ರತೀ ಶಹರಿನಲ್ಲೂ ತಾತನ ಪ್ರತಿಮೆ ಇದೆ. ಸಂದರ್ಭಾನುಸಾರ ಪೂಜೆ-ಗೌರವವೂ ಸಲ್ಲುತ್ತದೆ. ಅದಕ್ಕೇ ಇರಬೇಕು ಮನೆಯೊಳಗೆ ಗಾಂಧಿ ಎಂದರೆ ಸಸಾರ!
ದಕ್ಷಿಣ ಭಾರತದ ಪ್ರವಾಸ ಹೋಗಿದ್ದಾಗ ಎಲ್ಲೆಲ್ಲೂ ಕಾಣುತ್ತಿದ್ದ ಗಾಂಧಿ ರಸ್ತೆ, ಮೂರ್ತಿ, ಫ್ಲೆಕ್ಸ್, ಬೋರ್ಡ್ ಎಲ್ಲವನ್ನೂ ನೋಡುತ್ತಾ ಪಪ್ಪ ಗಾಂಧಿಯ ಬಗ್ಗೆ ಅದೆಷ್ಟು ಕಥೆಗಳನ್ನು ಹೇಳಿದ್ದರು. ಅದು ಯಾವುದೋ ಊರಿನ ಒಂದು ದೊಡ್ಡ ಅಂಗಡಿಯ ಮುಂದೆ ಗಾಂಧಿ ಪ್ರತಿಮೆಗೆ ನೀಲಿ ಜೀನ್ಸ್ ಪ್ಯಾಂಟ್ ಮತ್ತು ಕೆಂಪು ಬಣ್ಣದ, ಕಾಲರ್ ಇರುವ, ಅರ್ಧ ತೋಳಿನ ಷರಟು ತೊಡಿಸಿ ನಿಲ್ಲಿಸಿದ್ದನ್ನು ಕಂಡ ಪಪ್ಪ, ಪ್ರಯಾಣದುದ್ದಕ್ಕೂ ಗಾಂಧಿ ಎಂದರೆ ಒಬ್ಬ ವ್ಯಕ್ತಿ ಮಾತ್ರ ಅಲ್ಲ ಅದೊಂದು ಪರಿಕಲ್ಪನೆ. ಅದನ್ನು ಹೀಗೆ ಬಣ್ಣಗೆಡಿಸಿದರೆ ಈ ದೇಶದ ಭವಿಷ್ಯವೂ ವಿಕೃತವೇ ಆಗಿರುತ್ತದೆ ಎಂದದ್ದನ್ನು ಮರೆಯಲಾರೆ ಎಂದೂ.
ಇಟಲಿಯ ರೋಮ್‌ನಲ್ಲಿ ಉಣ್ಣೆ ಬಟ್ಟೆ ಮಾರುತ್ತಿದ್ದ ಒಂದು ಅಂಗಡಿ ಹೊಕ್ಕೊಡನೆ ಗಲ್ಲಾಪೆಟ್ಟಿಗೆಯಿಂದ ಇಳಿದು ಬಂದ ಮಧ್ಯವಯಸ್ಸಿನ ಯಜಮಾನರು ತಮ್ಮದೇ ಶೈಲಿಯ ಇಂಗ್ಲೀಷಿನಲ್ಲಿ “ನೀವು ಗಾಂಧಿ ನೆಲದವರು” ಎಂದರು. ಅವರನ್ನು ರೇಗಿಸಲು ನಾನು “ಹೌದು ಹೌದು ನಿಮ್ಮ ಸೋನಿಯಾ ಗಾಂಧಿ ಅಲ್ಲಿಯೇ ಇದ್ದಾರೆ” ಎಂದೆ. ಅದಕ್ಕಾತ ತಕ್ಷಣವೇ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ “ನನಗೆ ಸೋನಿಯಾ ಗಾಂಧಿ ಗೊತ್ತಿಲ್ಲ, ಮಹಾತ್ಮ ಗಾಂಧಿ ಗೊತ್ತು” ಎಂದಾಗ ಏನೋ ಹೆಮ್ಮೆ.
ಸರಾಗವಾಗಿ ಚಂದದ ಬಸ್ ಓಡಿಸುತ್ತಿದ್ದ ಡೇವಿಡ್ ತಾನು ನಲವತ್ತು ವರ್ಷದಿಂದ ಲಂಡನ್ನಲ್ಲಿಯೇ ಇರುವುದಾಗಿ ಪರಿಚಯ ಮಾಡಿಕೊಂಡ ನಗುಮೊಗದ ಗೈಡ್ ಆಗಿದ್ದ. ಲಂಡನ್‌ನಲ್ಲಿ ಪಾದ ಊರಿದಾಗ ಕೊಂಚ ಭಾವುಕಳಾಗಿದ್ದೆ. ಮೊದಲು ಕಣ್ಣ ಮುಂದೆ ಬಂದದ್ದು, ಗಾಂಧಿಯ ಕರೆ ಕೇಳಿ ವಂದೇ ಮಾತರಂ ಎನ್ನುತ್ತಾ ಸ್ವಾತಂತ್ರ್ಯಕ್ಕಾಗಿ ಹಠ ಹಿಡಿದಿದ್ದ ಪಪ್ಪನ ಮೀನಖಂಡಕ್ಕೆ ಬ್ರಿಟೀಷರಿಂದ ಬಿದ್ದಿರುವ ಲಾಠಿ ಗುರುತು.
ಈಗ ಬ್ರಿಟನ್ ದೇಶದ ಶೇಕಡಾ ಹತ್ತರಷ್ಟು ಆದಾಯದ ಮೂಲ ನನ್ನ ನಿಮ್ಮಂತಹ ಪ್ರವಾಸಿಗರಿಂದ ಎಂದು ಡೇವಿಡ್ ಹೇಳುವಾಗ ಅದೆಂತಹ ಹೆಮ್ಮೆಯ ಭಾವ. ಪಾರ್ಲಿಮೆಂಟ್ ಭವನದ ಎದುರಿನ ಚೌಕಕ್ಕೆ ಬಂದಿಳಿದಿದ್ದೆ. ಬೇಲಿಯಿಲ್ಲದ ಹಸುರಿನ ಹುಲ್ಲುಹಾಸು, ಅಲ್ಲಿ ಹತ್ತು ಅಡಿಗಳೆತ್ತರದಲ್ಲಿ ಜಗತ್ತಿನ ಕೆಲವಾರು ರಾಜಕೀಯ ಮುತ್ಸದ್ದಿಗಳ ಕಪ್ಪು ಕಲ್ಲಿನ ಮೂರ್ತಿಗಳನ್ನು ನಿಲ್ಲಿಸಿದ್ದಾರೆ. ನಡುವಿನ ನೆಲದಲ್ಲಿ ನನ್ನ ಗಾಂಧಿ, ಅದೇ ಭಾವ ಅದೇ ಭಂಗಿ.
“ಅದ್ಯಾಕೆ ಗಾಂಧಿಯನ್ನು ಮಾತ್ರ ನೆಲದಲ್ಲಿ ನಿಲ್ಲಿಸಿದ್ದೀರ?” ಎಂದು ವೇಗವಾಗಿ ಡೇವಿಡ್‌ನನ್ನು ಕೇಳಲು ಬಾಯಿ ತೆರೆದೆ. ಆತನೇ ಹೇಳಿ ಬಿಟ್ಟ “ಅಲ್ಲಿ ನೋಡಿ ಗಾಂಧಿ ಮತ್ತು ಮಂಡೇಲಾ ಇಬ್ಬರು ಬರೀ ನೆಲದ ಮೇಲಿದ್ದಾರೆ. ಈ ಜಗತ್ತು ಕಂಡ ಅತ್ಯಂತ ಸರಳ ಜೀವಿಗಳು. ಅಬ್ಬರ, ಆಡಂಬರದಿಂದ ದೂರವೇ ಉಳಿದ ಇವರಿಬ್ಬರು ಎಲ್ಲರಿಗಿಂತ ಎತ್ತರದಲ್ಲಿ ನಿಲ್ಲಲು ಎಂದೂ ಬಯಸರು, ಆ ಕಾರಣಕ್ಕಾಗಿಯೇ ಹೀಗೆ ನಿಲ್ಲಿಸಲಾಗಿದೆ”. ಆತನ ಮಾತನ್ನು ಕೇಳಿ ದೇವರನ್ನೂ ವೈಭವದಲ್ಲಿ ಸ್ಥಾವರಗೊಳಿಸುವ ನನ್ನ ಅಲ್ಪಮತಿಯ ತಲೆಯ ಮೇಲೊಂದು ಮೊಟಕಿ ಮುಂದ್ಮುಂದೆ ನಡೆದೆ.
ಅದು ಯಾವುದೋ ಊರಿನ ಒಂದು ದೊಡ್ಡ ಅಂಗಡಿಯ ಮುಂದೆ ಗಾಂಧಿ ಪ್ರತಿಮೆಗೆ ನೀಲಿ ಜೀನ್ಸ್ ಪ್ಯಾಂಟ್ ಮತ್ತು ಕೆಂಪು ಬಣ್ಣದ, ಕಾಲರ್ ಇರುವ, ಅರ್ಧ ತೋಳಿನ ಷರಟು ತೊಡಿಸಿ ನಿಲ್ಲಿಸಿದ್ದನ್ನು ಕಂಡ ಪಪ್ಪ, ಪ್ರಯಾಣದುದ್ದಕ್ಕೂ ಗಾಂಧಿ ಎಂದರೆ ಒಬ್ಬ ವ್ಯಕ್ತಿ ಮಾತ್ರ ಅಲ್ಲ ಅದೊಂದು ಪರಿಕಲ್ಪನೆ. ಅದನ್ನು ಹೀಗೆ ಬಣ್ಣಗೆಡಿಸಿದರೆ ಈ ದೇಶದ ಭವಿಷ್ಯವೂ ವಿಕೃತವೇ ಆಗಿರುತ್ತದೆ ಎಂದದ್ದನ್ನು ಮರೆಯಲಾರೆ ಎಂದೂ.
ಮತ್ತೊಮ್ಮೆ ಲಂಡನ್‌ಗೆ ಹೋದಾಗ ಒಂದು ದಿನ ಏನು ನೋಡುವುದು ಸುತ್ತಾಟಕ್ಕೆ ಬಾಕಿ ಏನೆಲ್ಲಾ ಇದೆ ಎನ್ನುತ್ತಾ ತಡಕಾಡುತ್ತಿದ್ದಾಗ Tavistock Squareನಲ್ಲಿ ಎದುರಾಗಿದ್ದು ದೊಡ್ಡ ಗಾತ್ರದ ಕಂಚಿನ ಗಾಂಧಿ ಪ್ರತಿಮೆ. ಕುಳಿತಿದ್ದ ಭಂಗಿ. ಅವರ ನೂರನೆಯ ಜನ್ಮದಿನಾಚರಣೆಯ ಸಂದರ್ಭದಲ್ಲಿ (1968ರಲ್ಲಿ) ಅಲ್ಲಿನ ಗಾಂಧಿ ಮೆಮೋರಿಯಲ್ ಕಮಿಟಿಯವರು ಈ ಪ್ರತಿಮೆಯನ್ನು ಸ್ಥಾಪಿಸಿದ್ದಂತೆ. ಈ ಮೂರ್ತಿಗೆ ತಗುಲಿದ ಅಂದಾಜು ವೆಚ್ಚ 20000 ಪೌಂಡ್ಸ್ ಎನ್ನುವ ಮಾಹಿತಿ ಓದಿ ತಿಳಿದೆ. Tavistock Squareನ ಹತ್ತಿರದಲ್ಲಿ ಇರುವ ಕಾನೂನು ವಿಶ್ವವಿದ್ಯಾಲಯದಲ್ಲಿ ಗಾಂಧಿಯವರು ಸ್ವಲ್ಪ ದಿನಗಳು ಓದಿದ್ದರಂತೆ. ಅದಕ್ಕೇ ಇಲ್ಲಿ ಅವರ ಪ್ರತಿಮೆ ಸ್ಥಾಪಿಸಿದ್ದಂತೆ. ನನ್ನ ಕಣ್ಣಿಗಂತೂ ಇಲ್ಲಿ ಗಾಂಧಿ ತೀರಾ ಬಡಕಲಾಗಿ ಕಂಡರು.
ಹಾಂ, ಸಿಕ್ಕಿಂ ರಾಜ್ಯದ ಗ್ಯಾಂಗ್ಟಾಕ್‌ನಲ್ಲಿ ಇರುವ ಮಹಾತ್ಮಗಾಂಧಿ ರಸ್ತೆಯ ಶುರುವಿನಲ್ಲಿ ಒಂದು ಸುಂದರ ಮೂರ್ತಿ ಕಂಡಿದ್ದೆ. ಮೈಸೂರಿನ ಸುಬ್ಬರಾಯನ ಕೆರೆಯಲ್ಲಿ ಇರುವ ಗಾಂಧಿ ಪ್ರತಿಮೆಯೂ ಕಳೆಕಳೆಯಾಗಿದೆ. ಪಾಂಡಿಚೇರಿಯಲ್ಲಿ ಸಮುದ್ರದ ಪಕ್ಕದಲ್ಲಿ ಆಕಾಶಕ್ಕೆದ್ದು ನಿಂತ ಅಂಹಿಸೆಯ ಭಾವದಂತೆ ಕಂಡ ಗಾಂಧಿ.
ಇನ್ನೊಂದು ದಿನ ವೇಲ್ಸ್ ದೇಶದ ಕಾರ್ಡಿಫ್ ನಗರದ ಪೆನಾರ್ಥ್‌ನಲ್ಲಿ ಗಾಂಧಿತಾತ. 300 ಕಿಲೋ ತೂಕ, 6 ಅಡಿ ಎತ್ತರದ ಕಂಚಿನ ಪ್ರತಿಮೆಯಲ್ಲಿ ಸಿಕ್ಕರು. “ಓಹೋಹೋ ಎಲ್ಲಿ ಹೋದರೂ ಸಿಗುತ್ತೀರಲ್ಲ ಪೂರ್ವಜರ ಹಾರೈಕೆಯಂತೆ ನೆತ್ತಿ ಆಘ್ರಾಣಿಸಲು….” ಎಂದುಕೊಳ್ಳುತ್ತಾ ಗಾಂಧಿ ಪಾದದ ಬಳಿ ನಿಂತಿದ್ದೆ. ಒಂದು ಕೈಯಲ್ಲಿ ಊರುಗೋಲು, ಮತ್ತೊಂದರಲ್ಲಿ ಭಗವದ್ಗೀತೆ ಹಿಡಿದು ಇಲ್ಲಿಗೆ ಯಾಕೆ, ಯಾವಾಗ, ಹೇಗೆ ಬಂದರು ಎಂದು ತಿಳಿಯದೆ ಗೂಗಲ್ ಮಾಡಿದೆ. 2017 ಅಕ್ಟೊಬರ್ 2ರಂದು ಗಾಂಧೀಜಿಯ 148ನೆಯ ಜಯಂತಿಯ ಅಂಗವಾಗಿ, ವೇಲ್ಸ್ ದೇಶದ ಹಿಂದು ಕೌನ್ಸಿಲ್ ಅವರು, 65000 ಪೌಂಡ್ಸ್ ಚಂದಾ ಎತ್ತಿ ಈ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಿದರಂತೆ. ದೆಹಲಿಯ ನೋಯ್ಡ ಜಾಗದ ಶಿಲ್ಪಿಗಳಾದ ರಾಮ್ ಸುತಾರ್ ಮತ್ತು ಅವರ ಮಗ ಅನಿಲ್ ರೂಪಿಸಿಕೊಟ್ಟ ಈ ಪ್ರತಿಮೆಯ ಅನಾವರಣಕ್ಕೆ ಗಾಂಧಿಯವರ ಮರಿಮಗ ಸತೀಶ್ ಕುಮಾರ್ ಧುಪೇಲಿಯಾ ದಕ್ಷಿಣ ಆಫ್ರಿಕಾದಿಂದ ಬಂದಿದ್ದರಂತೆ. ಅಂದಹಾಗೆ, ವೇಲ್ಸ್ ದೇಶದ ಸರ್ಕಾರ ಘೋಷಿಸಿರುವ “ಪರ್ಸನ್ಸ್ ಆಫ್ ಇನ್ಟೆರೆಸ್ಟ್” ಪಟ್ಟಿಯಲ್ಲಿ ನಮ್ಮ ಮಹಾತ್ಮನ ಹೆಸರೂ ಇದೆ ಎನ್ನುವ ವಿಷಯ ಅಚ್ಚರಿ ಏನಲ್ಲ.
ವಾಷಿಂಗ್ಟನ್ ಡಿಸಿಯಲ್ಲಿ ಮಾರ್ಟಿನ್ ಲೂಥರ್ ಕಿಂಗ್‌ನ ಸ್ಮಾರಕದಲ್ಲಿನ ಸೋವನಿಯರ್ ಅಂಗಡಿಯನ್ನು ಸರಸರನೆ ಒಳಹೊಕ್ಕಾಗ ಒಮ್ಮಿಂದೊಮ್ಮೆಗೆ ಭಾವುಕಳಾಗಿಬಿಟ್ಟೆ. ಕಣ್ಣು ತುಂಬಿ ಬಂತು. ಅಲ್ಲಿದ್ದ ಪುಸ್ತಕಗಳ ಸ್ಟ್ಯಾಂಡಿನಲ್ಲಿ “ನನ್ನ” ಗಾಂಧಿಯ ಆಲೋಚನೆ, ಚಿಂತನೆ, ಮಾತುಗಳಿದ್ದ ಪುಸ್ತಕ ಎದ್ದು ಕಾಣುತ್ತಿತ್ತು. ಹಸು ಕರುವನ್ನು ನೆಕ್ಕುವಂತೆ ಆ ಪುಸ್ತಕದ ಮೇಲೆ ಅಚ್ಚಾಗಿದ್ದ ಗಾಂಧಿ ಚಿತ್ರವನ್ನು ಮುದ್ದಿಸಿದೆ. ನನ್ನ ಕಣ್ಣ ಹನಿಯಿಂದ ಹಾಳೆಗಳು ಒದ್ದೆಒದ್ದೆ.
ಮತ್ತೊಮ್ಮೆ, ಗುಜರಾತಿನ ದಂಡಿ ಸಮುದ್ರ ದಡದ ಎದುರಾದರು ಮಹಾತ್ಮ, ದಂಡಿ ಸತ್ಯಾಗ್ರಕ್ಕೆ ಜನ ಸೇರಿದಾಗ ಗಾಂಧಿ ಕುಳಿತು ಭಾಷಣ ಮಾಡಿದರು ಎನ್ನಲಾದ ಜಾಗವನ್ನು ಬಹಳ ಸುಂದರವಾದ ಜಾಗವನ್ನಾಗಿಸಲಾಗಿದೆ. ಅವರು ಕುಳಿತಿದ್ದ ಜಾಗದಲ್ಲಿ ಗಾಂಧಿ ಪ್ರತಿಮೆ, ಅಂದು ಅವರಿಗೆ ನೆರಳಾಗಿದ್ದ ಮರವನ್ನೇ ಕಾಪಿಟ್ಟುಕೊಳ್ಳಲಾಗಿದೆ. ನವಿಲುಗಳು ಕಾಂಪೌಂಡ್ ಗೋಡೆಗಳ ಮೇಲೆ ಸದ್ದಿಲ್ಲದೆ ಸೌಂದರ್ಯವಾಗಿದ್ದವು.
ಸ್ವಿಡ್ಜರ್ಲ್ಯಾಂಡ್ ದೇಶದ ಜಿನಿವಾ ನಗರದಲ್ಲಿ ವಿಶ್ವಸಂಸ್ಥೆಯ ಮುಖ್ಯದ್ವಾರವನ್ನು ಹುಡುಕಿಕೊಂಡು, ಜನರಿಲ್ಲದ ರಸ್ತೆಗಳಲ್ಲಿ, ಹಸಿರು ಮಾತ್ರ ದಟ್ಟವಾದ ಉಸಿರಾಗುತ್ತಿದ್ದ ದಾರಿಗಳಲ್ಲಿ ನಡೆದು ಹೋಗುತ್ತಿರುವಾಗ Ariana Park ಎನ್ನುವ ಸ್ಥಳದಲ್ಲಿ ಧುತ್ತನೆ ಎದುರಾಗಿದ್ದು ಗಾಂಧಿ. ಇಲ್ಲಿನ ಗಾಂಧಿ ಕೈಯಲ್ಲಿ ಪುಸ್ತಕ ಹಿಡಿದು ಓದುತ್ತಿರುವಂತೆ. ಅದರ ಕೆಳಗಿನ ಹಸಿರು ಕಲ್ಲಿನಲ್ಲಿ “My Life is My message” ಎಂದು ಬರೆಯಲಾಗಿದೆ. ಭಾರತ ಮತ್ತು ಸ್ವಿಸ್ಸ್ ದೇಶದ 60ನೇ ವರ್ಷದ ಸ್ನೇಹದ ಗುರುತಾಗಿ 2007ರಲ್ಲಿ ಈ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
ಸ್ಪೇನ್ ದೇಶದ ಮ್ಯಾಡ್ರಿಡ್ ನಗರದಲ್ಲಿ ದರ್ಶನ ಕೊಟ್ಟರು ಗಾಂಧಿ. ಅಂದಹಾಗೆ, ವಾಷಿಂಗ್ಟನ್ ಡಿಸಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಉಡುಗೊರೆ ನೀಡಿದ ಪ್ರತಿಮೆಯ ಬಗ್ಗೆ ಹೇಳದಿದ್ದರೆ ಗಾಂಧಿ ಪ್ರವಾಸ ಅಪೂರ್ಣ. ಕೋಲೂರಿಕೊಂಡು ನಡೆಯುತ್ತಿರುವ ಸ್ಟೈಲ್‌ನ ಗಾಂಧಿ ಪ್ರತಿಮೆ 2000ದನೆಯ ಇಸವಿಯಲ್ಲಿ, ಇಂಡಿಯನ್ ಕಲ್ಚರಲ್ ಕೌಂಸಿಲ್ ಮೂಲಕ ಇಲ್ಲಿಗೆ ಬಂದಿದೆ.
ಆಸ್ಟ್ರಿಯಾ ದೇಶದ ವಿಯೆನ್ನಾದಲ್ಲಿ ಕಲಾವಿದ Werner Horvathನ ಸೃಷ್ಟಿ ಆಯಿಲ್ ಪೇಂಟಿಂಗ್‌ನಲ್ಲಿ ಇರುವ ಗಾಂಧಿ. ಹೀಗೆ ಎಲ್ಲೆಲ್ಲೂ ಸಿಕ್ಕಿರುವ ಗಾಂಧಿಯ ಸ್ಮರಣೆ ಪಪ್ಪನಿಗೆ ನಾನು ನೀಡಬಹುದಾದ ಸಂತಸದ ಕಾಣಿಕೆ.
ಅಂಜಲಿ ರಾಮಣ್ಣ ಲೇಖಕಿ, ಕವಯಿತ್ರಿ, ಅಂಕಣಗಾರ್ತಿ, ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತೆ. ‘ರಶೀತಿಗಳು – ಮನಸ್ಸು ಕೇಳಿ ಪಡೆದದ್ದು’, ‘ಜೀನ್ಸ್ ಟಾಕ್’ ಇವರ ಲಲಿತ ಪ್ರಬಂಧಗಳ ಸಂಕಲನ.