ಧೈರ್ಯ ಮಾಡಿ ರಂಗಮಂದಿರದ ಬಾಡಿಗೆ ಕಟ್ಟಿ ನಾಟಕ ಮಾಡಲು ಮುಂದಾಗುತ್ತೇವೆ ಅಂತಿಟ್ಟುಕೊಳ್ಳಿ. ಪೆಟ್ರೋಲ್, ಅಡುಗೆ ಅನಿಲ ದರ ಕೇಳಿದರೆ ಎದೆ ಸ್ಫೋಟಗೊಳ್ಳುತ್ತದೆ. ಅಡುಗೆಗೆ ಬಳಸುವ ಎಣ್ಣೆ ತನಗೆ ಬೆಲೆ ಬರುತ್ತಿರುವುದಕ್ಕೆ ವ್ಯರ್ಥವಾಗಿ ಹಿಗ್ಗುತ್ತಿದೆ. ನೀವು ರಂಗಮಂದಿರಗಳ ಬಾಡಿಗೆ ದರ ಏರಿಸಿದರೆ ನಾವು ರಂಗತಂಡಗಳವರು ಏನು ಮಾಡಬೇಕು? ಟಿಕೆಟ್ ದರ ಏರಿಸಬೇಕು. ನೂರು ರೂಗಳಿದ್ದದ್ದು ನೂರೈವತ್ತು ನಿಗದಿ ಮಾಡಿದರೆ ಪ್ರೇಕ್ಷಕರ ಕಣ್ಣಿನೆದರು ನಾಟಕದ ಬದಲು ಗ್ಯಾಸ್ ಸಿಲಿಂಡರ್, ಅಡುಗೆ ಎಣ್ಣೆ, ಮಕ್ಕಳ ಸ್ಕೂಲು ಫೀಸು ಇತ್ಯಾದಿ ಕದಲಲು ಆರಂಭಿಸುತ್ತವೆ. ತಮ್ಮ ‘ರಂಗವಠಾರ’ ಅಂಕಣದಲ್ಲಿ,  ರಂಗಪ್ರದರ್ಶನದ ಕಷ್ಟಸುಖಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಯತ್ನಿಸಿದ್ದಾರೆ ಎನ್. ಸಿ. ಮಹೇಶ್

 

ನನ್ನ ಕೆಲವು ಆಲೋಚನೆಗಳು ಮತ್ತು ಆಕ್ಷೇಪಗಳು ಜನಪ್ರತಿನಿಧಿಗಳಿಗೆ ತಲುಪಲಿ ಎಂಬುದು ನನ್ನ ಆಶಯ. ಹಾಗಾಗಿ ಬರೆಯುತ್ತಿದ್ದೇನೆ. ಈಚೆಗೆ ಕನ್ನಡ ಸಂಸ್ಕೃತಿ ಇಲಾಖೆ ಸಚಿವರು ಸರ್ಕಾರಿ ರಂಗಮಂದಿರಗಳ ಬಾಡಿಗೆ ದರ ಪರಿಷ್ಕರಿಸಿ ಪ್ರಕಟಿಸಿದ್ದರು.  ದರ ಕಡಿಮೆ ಆಗಿದ್ದರೆ ನಾವು ರಂಗಭೂಮಿಯವರು ನಿಜಕ್ಕೂ ಖುಷಿಪಡುತ್ತಿದ್ದೆವು. ಆದರೆ ಹೀಗೆ ಹೇಳಲಿಕ್ಕೂ ಮುಜುಗರ. ಯಾಕೆಂದರೆ ನನಗೆ ಕೊರೋನ ನಂತರದ ಬಿಕ್ಕಟ್ಟುಗಳ ಬಗ್ಗೆ ತಿಳಿದಿದೆ. ಕುಸಿದಿರುವ ಆರ್ಥಿಕತೆ ಬಗ್ಗೆ ತಿಳಿಯಲು ಪ್ರಯತ್ನಿಸಿದ್ದೇನೆ. ಹೀಗಿರುವಾಗ ರಂಗಮಂದಿರಗಳ ಬಾಡಿಗೆ ದರ ಕಡಿಮೆ ಮಾಡಿ ಎನ್ನಲು ನಾಲಗೆ ಹೊರಳುವುದಿಲ್ಲ. ಹಾಗೆಯೇ ದರ ಹೆಚ್ಚಾದಾಗ ಅದನ್ನು ತಾಳಿಕೊಳ್ಳಲೂ ಆಗುವುದಿಲ್ಲ.

ದರ ಪರಿಷ್ಕರಣೆಗೆ  ಸಚಿವರು ಕಾರಣಗಳನ್ನು ಕೊಟ್ಟಿದ್ದಾರೆ. ರಂಗಮಂದಿರಗಳ ಸ್ವಚ್ಛತೆ, ನಿರ್ವಹಣೆ, ವಿದ್ಯುತ್ ನಿಭಾವಣೆ ಖರ್ಚು ಹೆಚ್ಚಾಗಿದ್ದು ಅನಿವಾರ್ಯವಾಗಿ ದರ ಹೆಚ್ಚಿಸಬೇಕಿದೆ ಎಂದಿದ್ದಾರೆ.  ಕಾರಣಗಳೆಲ್ಲವೂ ಸರಿಯೇ. ಆದರೆ ಅದರ ಜೊತೆಗೆ ಕೊರೋನ ಸಂದರ್ಭದಲ್ಲಿ ನಲುಗಿದ ರಂಗತಂಡಗಳು ಮತ್ತು ಕಲಾವಿದರ ಬವಣೆಯನ್ನೂ ಕಣ್ಮುಂದೆ ತಂದುಕೊಳ್ಳಬೇಕಲ್ಲವೇ. ಆಗ ಸರ್ಕಾರಕ್ಕಿರುವ ಅಪಾರ ಶಕ್ತಿ ಹಾಗೂ ಅದು ಕಲಾವಿದರಿಗೆ ಹೇಗೆ ಕೃಪಾಪೋಷಿತವಾಗಬಲ್ಲದು ಎಂಬುದು ಅರ್ಥಕ್ಕೆ ನಿಲುಕುತ್ತಿತ್ತು.  ಸಚಿವರು ಈ ಅಂಶವನ್ನು ಯಾಕೆ ಗಮನಕ್ಕೆ ತಂದುಕೊಳ್ಳಲಿಲ್ಲವೋ ತಿಳಿಯುತ್ತಿಲ್ಲ.  ಸರ್ಕಾರವು ಕೊಡುವ ಕಾರಣಗಳನ್ನು ನಾನು ಅಲ್ಲಗಳೆಯುವುದಿಲ್ಲ. ಆದರೆ ನಾನು ನಿಖರವಾಗಿ ಮಾತಾಡಬಲ್ಲ ಆರ್ಥಿಕ ತಜ್ಞನಲ್ಲವಾದ್ದರಿಂದ ದೃಢವಾಗಿಯೂ ವಿರೋಧಿಸಲಾರೆ.

ಹಾಗೆಯೇ ಕೊರೋನ ತನ್ನ ಶಕ್ತಿಗುಂದಿಸಿಕೊಂಡ ನಂತರದಲ್ಲಿ ಸರ್ಕಾರದ ಬೊಕ್ಕಸವನ್ನು ಕೊಂಚವಾದರೂ ತುಂಬಿಸಿರುತ್ತದೆ ಎಂದು ತಿಳಿದಿದ್ದೇನೆ. ಅದನ್ನು ಮತ್ತಷ್ಟು ತುಂಬಿಸುವುದಕ್ಕೆ  ರಂಗಮಂದಿರಗಳನ್ನೂ ಬಿಡದೆ ದರ ಹೆಚ್ಚಿಸಿರುವುದು ಗೊತ್ತು. ಎಲ್ಲ ಸರಿಯೆ. ಆದರೆ ಹೊಟ್ಟೆ ಬಟ್ಟೆಯ ಜೊತೆಗೆ ಕಲೆಯೂ ತನ್ನ ಚೈತನ್ಯ ಕಂಡುಕೊಳ್ಳಬೇಕು. ಆಗ ನಿಜವಾದ ಪುನರುತ್ಥಾನ ಸಾಧ್ಯ.

ಕೊರೋನ ಸಂದರ್ಭದಲ್ಲಿ ಎಲ್ಲವೂ ಸ್ಥಗಿತವಾದಾಗ ಕೊಂಚ ಕಾಲ ರಂಗಭೂಮಿಯೂ ಸ್ಥಗಿತಗೊಂಡಿತು. ಇದರಲ್ಲಿ ಯಾವ ಅಚ್ಚರಿಯೂ ಇಲ್ಲ. ಆದರೆ ಕಲಾವಿದರು ಎಷ್ಟು ಡೆಸ್ಪರೇಟ್ ಆಗಿದ್ದರೆಂದರೆ ಸುತ್ತಲಿನ ಸಾವು ನೋವಿನ ನಡುವೆಯೂ ನಾಟಕವನ್ನ ಆನ್‌ಲೈನ್‌ಗೆ ಎಳೆತಂದು ಕೆಲ ಕಾಲ ಕಸರತ್ತು ನಡೆಸಿದರು. ಬದಲಾವಣೆ ಜಗದ ನಿಯಮ ಎನ್ನುವುದು ತುಂಬ ಕ್ಲೀಷೆಯಾಗಿರುವ ಮಾತು. ಆದರೆ ರಂಗಭೂಮಿಗೆ ಇಂಥ ಬದಲಾವಣೆ ಬೇಕೆ ಎಂದು ಚಿಂತಿಸಬೇಕಿದೆ.

ಕೊರೋನ ಸಂದರ್ಭದಲ್ಲಿ ಎಲ್ಲವೂ ಸ್ಥಗಿತವಾದಾಗ ಕೊಂಚ ಕಾಲ ರಂಗಭೂಮಿಯೂ ಸ್ಥಗಿತಗೊಂಡಿತು. ಇದರಲ್ಲಿ ಯಾವ ಅಚ್ಚರಿಯೂ ಇಲ್ಲ. ಆದರೆ ಕಲಾವಿದರು ಎಷ್ಟು ಡೆಸ್ಪರೇಟ್ ಆಗಿದ್ದರೆಂದರೆ ಸುತ್ತಲಿನ ಸಾವು ನೋವಿನ ನಡುವೆಯೂ ನಾಟಕವನ್ನ ಆನ್‌ಲೈನ್‌ಗೆ ಎಳೆತಂದು ಕೆಲ ಕಾಲ ಕಸರತ್ತು ನಡೆಸಿದರು

ಸಿನಿಮಾದ ಬಿಗ್ ಸ್ಕ್ರೀನ್‌ಗೆ ಸಂಬಂಧಿಸಿದಂತೆ ಹಲವು ಬದಲಾವಣೆಗಳು ಆಗಲು ಆಗಲೇ ಶುರುವಾಗಿವೆ. ಮುಂದೊಂದು ದಿನ ಸಿನಿಮಾಗಳು ಮೊಬೈಲ್‌ಗಳಲ್ಲೇ ಬಿತ್ತರಗೊಳ್ಳುತ್ತವೆ ಎಂಬ ಮಾತೂ ಕೇಳಿಬರುತ್ತಿದ್ದು ಅದರ ತೆಳು ಸೆಳಕುಗಳು ಈಗಾಗಲೇ ಆರಂಭವಾಗಿದೆ. ವೈಯಕ್ತಿಕವಾಗಿ ನಾನೂ ಇದನ್ನು ಬೆಂಬಲಿಸುತ್ತೇನೆ.
ಸ್ಕ್ರೀನ್ ಎನ್ನುವುದು ಮುಗಿದ ಅಧ್ಯಾಯದ ಅವೇ ರೂಪಗಳ ಬಿತ್ತರಣ. ಆ ಸ್ಕ್ರೀನ್  ದೊಡ್ಡದಾಗಿರುತ್ತದೆ, ನಿಜ. ಆದರೆ ಆನ್‌ಲೈನ್ ಯುಗ ಅದೇ ಚಿತ್ರವನ್ನ ಮನೆ ಟಿವಿ ಪರದೆಯಲ್ಲೇ ನೋಡುವ ಸವಲತ್ತು ಕಾಣಿಸುತ್ತಿದೆ ಎಂದಾಗ ಅಥವಾ ಅದನ್ನು ಮೊಬೈಲ್‌ನಲ್ಲೇ ಬೇಕೆನಿಸಿದಾಗ ನೋಡಬಹುದು ಎಂದಾದಾಗ ಸಹಜವಾಗಿ ನಮ್ಮ ಆದ್ಯತೆ ಬದಲಾಗುತ್ತದೆ. ದಟ್ಟಕಾಡಿನಂಥ ನಗರದ ಬೀದಿಗಳಲ್ಲಿ ಗಾಡಿ ಓಡಿಸಿಕೊಂಡು ಹೋಗಿ ಅಲ್ಲಿ ಸಿನಿಮಾದ ದರದಷ್ಟೇ ಪಾಪ್‌ಕಾರ್ನ್ಗೂ ತೆತ್ತು ಬರುವುದಕ್ಕಿಂತ ಕೊಂಚ ಎಫೆಕ್ಟ್ಸ್ ನಲ್ಲಿ ರಾಜಿ ಮಾಡಿಕೊಂಡು ಬಿಡಬಹುದು ಅನಿಸುತ್ತದೆ.  ಸಿನಿಮಾ ಎನ್ನುವುದು ನಾಟಕದ ಹಾಗೆ ಅಲ್ಲ. ನಾಟಕದಲ್ಲಿ ಪ್ರದರ್ಶನದಿಂದ ಪ್ರದರ್ಶನಕ್ಕೆ ನಟರು, ನಟನೆ, ಅವರ ಉಸಿರಾಟ, ಚಲನೆಯಲ್ಲಿ ಮಾರ್ಪಾಟು ಮಾಡಿಕೊಳ್ಳಲಿಕ್ಕೆ ಬರುವಂತೆ ಸಿನಿಮಾದಲ್ಲಿ ಇದನ್ನು ಸಾಧ್ಯವಾಗಿಸಲು ಆಗುವುದಿಲ್ಲ. ಹಾಗಾಗಿ ಅದನ್ನು ನೋಡುವ ಬಗೆಯನ್ನು ಬದಲಿಸಿಕೊಂಡರೂ ಅಡ್ಡಿಯಿಲ್ಲ.

ಆದರೆ ನಾಟಕ ಹಾಗಲ್ಲ. ಅದರ ಗಮ್ಮತ್ತು ಇರುವುದೇ ನಿತ್ಯ ಬದಲಾವಣೆಯಲ್ಲಿ. ಇಂದು ಕೊಂಚ ಕಳೆಗುಂದಿದ ನಟ ನಾಳೆ ವಿಜೃಂಭಿಸಬಹುದು. ಮಾತಿನ ಧಾಟಿಯನ್ನು ಪರಿಷ್ಕರಿಸಿಕೊಳ್ಳಬಹುದು. ಅದು ಪ್ರೇಕ್ಷಕ ಹಾಗು ನಟರ ಜೀವಂತ ಮುಖಾಮುಖಿ. ಸಿನಿಮಾ ಕಟ್ ಶಾಟ್‌ಗಳ ಸಂಕಲನ ಕಲೆಯಿಂದ ಬೆರಗು ತಂದುಕೊಳ್ಳವು ಮಾಧ್ಯಮ. ರಂಗಭೂಮಿಯಲ್ಲಿ ಕಟ್ ಶಾಟ್‌ಗಳಿಲ್ಲ. ಒಬ್ಬ ನಟ ಹೇಗೆ ರಂಗದ ಮೇಲೆ ಓತಪ್ರೋತವಾಗಿ ತನ್ನ ಸಂಭಾಷಣೆಯಿಂದ ನಟನೆಯನ್ನು ನಿಭಾಯಿಸುತ್ತಾನೆ ಎನ್ನುವುದು ಇಲ್ಲಿಯ ಕಲೆ. ಈ ಜೀವಂತ ಅಭಿವ್ಯಕ್ತಿ ಸಾಧ್ಯವಾಗುವುದು ಮತ್ತು ಪರಿಷ್ಕರಣೆಗೆ ಒಳಪಡಿಸಿಕೊಳ್ಳವುದು ರಂಗಭೂಮಿಯಲ್ಲಿ ಮಾತ್ರ. ಇದಕ್ಕೆ ನಟರು ರಂಗಕ್ಕೆ ಬರಬೇಕು. ಮತ್ತು ಮುಖ್ಯವಾಗಿ ಪ್ರೇಕ್ಷಕರು ನಾಟಕ ನೋಡಲು ಬರಬೇಕು. ಅದಕ್ಕೆ ರಂಗಮಂದಿರಗಳು ನೆರವಾಗಬೇಕು.
ರಂಗಮಂದಿರಗಳ ದರ ಹೆಚ್ಚಿದ ಕೂಡಲೇ ರಂಗತಂಡಗಳು ಕೆಲವು ಪರ್ಯಾಯ ಯೋಚನೆಗಳಿಗೆ ತೆರೆದುಕೊಳ್ಳುತ್ತವೆ. ಅದು ಆನ್‌ಲೈನ್ ರಂಗ ಹುಟ್ಟಿಸಿರುವ ಉಮೇದು. ಮತ್ತು ಅದರ ರೀಚ್ ಬಗೆಗೆ ಮೂಡಿರುವ ಲೆಕ್ಕಾಚಾರ ಹಾಗೂ ಕ್ರೇಜ್. ಸಿಮಿಮಾಗೆ ಇದು ಆಶಾದಾಯಕ ಬೆಳವಣಿಗೆ ಇರಬಹುದು. ಆದರೆ ರಂಗಭೂಮಿಯವರು ಈ ಆನ್‌ಲೈನ್ ಖಯಾಲಿಗೆ ಬಿದ್ದರೆ ಚಿತ್ರಣ ಬದಲಾಗುತ್ತದೆ.

ಈ ಸಂಬಂಧ ಯೋಚಿಸುವಾಗ್ಗೆಲ್ಲ ನನಗೆ ಒಂದು ಕಥೆ ನೆನಪಾಗುತ್ತದೆ. ನಿಮಗೆ ಹೇಳುತ್ತೇನೆ ಕೇಳಿ. ಇದು ಐವಾನ್ ಕ್ರೆಂಜಿಲಾಫ್ ಬರೆದ ಕಥೆ.
ಅವನ ಹೆಸರು ಶಾಮಣ್ಣ. ಹಳೇ ಅಂಗಿ ಹಾಕಿಕೊಂಡಿದ್ದ. ಸದಾ ಮೇಜಿನ ಮೇಲೆ ಮೊಳಕೈ ಊರಿ ಊರಿ ಅಲ್ಲಿ ಅವನ ಅಂಗಿ ತೂತಾಗಿತ್ತು. ಶಾಮಣ್ಣ ನೋಡಿ ‘ ತೂತಾದರೇನಾಯಿತು. ತೇಪೆ ಹಾಕಿ ಹೊಲಿದರಾಯಿತು’ ಅಂದುಕೊಂಡ. ಹಾಗೇ ಸೂಜಿ, ದಾರ, ಕತ್ತರಿ ಹುಡುಕಿ ತಂದು ಬಲಗಡೆ ತೋಳಿನ ಮುಂಭಾಗ ಕತ್ತರಿಸಿ ಮೊಳಕೈ ಊರುವ ಜಾಗದ ತೂತಿಗೆ ತೇಪೆ ಹಾಕಿ ಹೊಲಿದ. ನಂತರ ತನ್ನ ಅಂಗಿಯನ್ನ ನೋಡಿದ. ಅವನಿಗೆ ಅದು ಹೊಚ್ಚ ಹೊಸದು ಅನಿಸಿತು. ಖುಷಿಯಲ್ಲಿ ತೊಟ್ಟುಕೊಂಡ. ಆದರೆ ಅವನು ಬೀದಿಯಲ್ಲಿ ಹೋಗುವಾಗ ಜನ ಅವನ ಅಂಗಿಯ ತೇಪೆ ಕಂಡು ನಕ್ಕರು. ಶಾಮಣ್ಣನಿಗೆ ಅಚ್ಚರಿ. ‘ ಯಾಕೆ ನಗ್ತಿದ್ದೀರಿ?’ ಎಂದು ಕೇಳಿದ. ‘ತೇಪೆ ಚೆನ್ನಾಗೇನೊ ಹಾಕಿದ್ದೀಯ ಶಾಮಣ್ಣ. ಆದರೆ ಆ ತೋಳುಗಳ ಅಳತೆ ನೋಡು. ವ್ಯತ್ಯಾಸವಾಗಿದೆ. ಮಜವಾಗಿದೆ ಮತ್ತು ನಗು ತರಿಸ್ತಿದೆ’ ಅಂದರು ಜನ.

‘ ನಿಮಗೆ ಯಾಕೆ ಅದೆಲ್ಲ? ಇದೇ ಹೊಸ ಫ್ಯಾಷನ್ನು’ ಅಂದ ಶಾಮಣ್ಣ. ಆ ಮಾತಿಗೆ ಜನ ಮತ್ತಷ್ಟು ನಕ್ಕರು. ‘ ನೆಟ್ಟಗೆ ತೋಳು ಸರಿಸಮ ಇಲ್ಲದ ಅಂಗಿ ಹಾಕಿಕೊಂಡು ಅದನ್ನ ಫ್ಯಾಷನ್ ಅಂತೀಯಾ! ನಿನಗೆಲ್ಲೊ ಹುಚ್ಚು’ ಅಂದರು. ಶಾಮಣ್ಣನಿಗೆ ಮತ್ತೆ ರೇಗಿತು. ಅಂಗಿ ಕಳಚಿ ಆ ಅಂಗಿಯ ಜೇಬಿನ ಬಳಿ ಇದ್ದ ಬಟ್ಟೆಯನ್ನ ಕತ್ತರಿಸಿ ತೋಳುಗಳಿಗೆ ಮತ್ತೆ ತೇಪೆ ಹಾಕಿದ. ಸಾಲದ್ದಕ್ಕೆ ಜನರಿಗೆ ಸವಾಲಿನ ರೀತಿಯಲ್ಲಿ ‘ ಈಗ ನೋಡ್ರಯ್ಯಾ ನಿಮ್ಮ ಅಂಗಿಯ ತೋಳುಗಳಿಗಿಂತ ನನ್ನ ಅಂಗಿಯ ತೋಳುಗಳೇ ಉದ್ದ’ ಎಂದ. ಅವನ ಮಾತಿಗೆ ಜನ ಮತ್ತೆ ನಕ್ಕರು. ಮೊಳಕೈ ಹತ್ತಿರ ತೇಪೆ, ತೋಳು ಮೊಳದುದ್ದ.. ಅಂಗಿ ಸೊಂಟದ ಕೆಳಗಿನವರೆಗೆ… ಆಹಾ…ಸೊಗಸಾಗಿದೆ ಬಿಡು ಎಂದು ವ್ಯಂಗ್ಯ ಮಾಡಿದರು.

ಇದರ ಸಾರ ಇಷ್ಟೇ ಸರ್. ಶಾಮಣ್ಣನ ಹಾಗೇ ಎಷ್ಟೋ ಜನ ಇದ್ದಾರೆ. ಒಂದು ತಿದ್ದಲು ಹೋಗಿ ಹತ್ತು ವಕ್ರಮಾಡಿಬಿಡುತ್ತಾರೆ. ಅಂಥವರನ್ನ ಕಂಡಾಗ ಒಂದು ಮಾತು ಪ್ರಚಲಿತದಲ್ಲಿದೆ. ಏನೆಂದರೆ – ‘ಇವನು ಶಾಮಣ್ಣನ ಅಂಗಿ ಹಾಕಿಕೊಂಡಿದ್ದಾನೆ’..ಎಂಬುದು ಆ ಮಾತು.
ಇದನ್ನು ನಾನು ಹೀಗೆ ಅನ್ವಯ ಮಾಡಿಕೊಳ್ಳುತ್ತೇನೆ. ಈ ದುರ್ಬರದ ದಿನಗಳಲ್ಲಿ ರಂಗಭೂಮಿ ವಲಯ ಹಾಗೂ ಹೀಗೂ ಚೇತರಿಸಿಕೊಳ್ಳುತ್ತಿದೆ. ಈ ಸಮಯದಲ್ಲೇ ದರ ಹೆಚ್ಚಿಸಿದರೆ ರಂಗತಂಡದವರು ಕೆಲವರಾದರೂ ನಿಜಕ್ಕೂ ಡೆಸ್ಪರೇಟ್ ಆಗುತ್ತಾರೆ. ಆನ್‌ಲೈನ್‌ದು ಒನ್ ಟೈಂ ಇನ್‌ವೆಸ್ಟ್ಮೆಂಟ್ ಅಲ್ವಾ ಎಂಬುದು ಅವರ ಮನಸ್ಸಿಗೆ ಮೊದಲು ಬರುತ್ತದೆ. ನಂತರದಲ್ಲಿ ಲಿಂಕ್ ಕಾಪಿಟ್ಟುಕೊಂಡು ಬ್ಯುಸಿನೆಸ್ ಆರಂಭಿಸಬಹುದು ಎಂದು ಲೆಕ್ಕಾಚಾರ ಹಾಕಿ ಹಣ ಹೂಡಲೂ ಮುಂದಾಗುತ್ತಾರೆ. ಇದರಲ್ಲಿ ಸೋಲುವುದು ಗೆಲ್ಲುವುದು ಸೆಕೆಂಡರಿ. ಆದರೆ ಮುಂದಾಗುವುದಂತೂ ಖಚಿತ. ಅಲ್ಲಿಗೆ ಜೀವಂತ ಕಾಣಿಸುವ ಕಲೆಗೆ ತೇಪೆ ಹಾಕುವ ಕೆಲಸ ಆರಂಭವಾಗುತ್ತದೆ.

ರಂಗದ ಬಗೆಗೆ ಅಸ್ಥೆ ಹೊಂದಿರುವ ಜನ ಎಷ್ಟು ಮಂದಿ ಈ ಪ್ರಯತ್ನವನ್ನು ಮೆಚ್ಚಬಹುದು? ವ್ಯಾಪಾರದ ದರ್ದು ರಂಗತಂಡಗಳಿಗೆ ಇರಬಹುದು. ಆದರೆ ನೋಡುವ ಪ್ರೇಕ್ಷಕ ಶಾಮಣ್ಣನ ಅಂಗಿಯ ತೇಪೆಯನ್ನು ಕಂಡು ನಕ್ಕಂತೆ ನಗಲು ಆರಂಭಿಸುತ್ತಾರೆ. ಆಗ ರಂಗತಂಡಗಳು ಥೇಟ್ ಶಾಮಣ್ಣನಂತೆಯೆ ಡೆಸ್ಪರೇಟ್ ಆಗುತ್ತವೆ. ಮತ್ತೂ ತೇಪೆ ಕೆಲಸ ಆರಂಭಿಸುತ್ತವೆ. ಅದು ಮತ್ತಷ್ಟು ನಗೆಪಾಟಲಿಗೆ ಗುರಿಯಾಗುತ್ತದೆ. ಕಡೆಗೆ ರಂಗಭೂಮಿಯ ಅಂಗಿ ಶಾಮಣ್ಣನ ಅಂಗಿಯಂತಾಗಿಬಿಡುತ್ತದೆ.
ಹೀಗಾಗಬಾರದು ಎಂಬುದು ನನ್ನ ಕಾಳಜಿ. ಸರ್ಕಾರದ ಖಜಾನೆಯಿಂದ ಸಲ್ಲದ್ದಕ್ಕೆಲ್ಲ ಫೋಲಾಗುವ ಹಣವನ್ನ ಸಂಸ್ಕೃತಿಯ ಪ್ರತೀಕವಾಗಿರುವ ರಂಗಭೂಮಿಯ ಕಡೆಗೆ ಹರಿಯಿಸಿದರೆ ರಂಗತಂಡಗಳಿಗೆ ಹೊರೆಯಾಗುವುದಿಲ್ಲ. ಮುಖ್ಯವಾಗಿ ಈ ಬಗೆಗೆ ಸರ್ಕಾರದ ಮಟ್ಟದಲ್ಲಿ ವಾದ ಮಂಡಿಸುವವರಿಗೆ ರಂಗತಂಡಗಳ ಅಸಲಿ ಕಷ್ಟಗಳ ಬಗೆಗೆ ಅರಿವಿರಬೇಕು. ಇಲ್ಲದಿದ್ದರೆ ರಂಗತಂಡಗಳು ಶಾಮಣ್ಣನ ಅಂಗಿಯಾಗುವುದು ಖಚಿತ.
ನಾನು  ಸಂಸ್ಕೃತಿ ಇಲಾಖೆಯ ಗಮನಕ್ಕೆ ಕೆಲವು ಸಂಗತಿಗಳನ್ನು ತರಲು ಬಯಸುತ್ತೇನೆ.
ರಂಗಭೂಮಿಯಲ್ಲಿ ವೃತ್ತಿರಂಗದವರ ಲೆಕ್ಕಾಚಾರದ  ವಿನ್ಯಾಸ ಬೇರೆ. ಅವರು ಕಲೆಕ್ಷನ್‌ಗೆ ಹಾಕಿಕೊಂಡಿರುವ ಫಾರ್ಮೂಲಾಗಳೂ ಬೇರೆ. ವಾಚ್ಯ ಅಂದರೂ ಅವರು ಕಿವಿಗೊಡುವುದಿಲ್ಲ. ತುಂಬ ಧ್ವನಿಪೂರ್ಣ ಅಂದರೂ ಕಿವಿಗೊಡುವುದಿಲ್ಲ. ಹೊಟ್ಟೆಪಾಡು ನಡೀಬೇಕಲ್ಲ ಎಂದು ನಡೆಸಿಕೊಂಡು ಹೋಗುತ್ತಾರೆ. ಇವರಿಗೆ ರಂಗಮಂದಿರಗಳ ಬಾಡಿಗೆ ದರ ಅಷ್ಟು ತಟ್ಟಲಾರದು ಅಂದುಕೊಂಡಿದ್ದೇನೆ.

ಹವ್ಯಾಸಿಗಳು ಅಂತ ಬಂದಾಗ ಸಮಸ್ಯೆಗಳು ಶುರುವಾಗುತ್ತವೆ. ಯಾಕೆಂದರೆ ಇಲ್ಲಿರುವಷ್ಟು ಸೊ ಕಾಲ್ಡ್ ಕ್ರಿಯೇಟಿವ್ ಅನಲಿಸ್ಟ್ಗಳು ಮತ್ತೆಲ್ಲೂ ಸಿಗಲಿಕ್ಕಿಲ್ಲ. ಕೆಲವು ಪ್ರಸಿದ್ಧ ರಂಗತಂಡಗಳಿವೆ. ಕಾಲದಿಂದ ಇರುವಂಥವು. ಅವು ಗಂಭೀರ ಪ್ರಯೋಗ ಮಾಡಲಿ, ಕಾಮಿಡಿ ಮಾಡಲಿ.. ಅವುಗಳಿಗೆ ಒಂದು ಜನವರ್ಗ ಕ್ರಿಯೇಟ್ ಆಗೋಗಿದೆ. ಹಾಗಾಗಿ ಆ ತಂಡಗಳ ಪ್ರದರ್ಶನಗಳು ಹೌಸ್‌ಫುಲ್‌ಗಳಾಗುತ್ತವೆ. ಅವರಿಗೆ ದರ ಹೆಚ್ಚಿಸಿದರೂ ಚಿಂತೆಯಾಗುವುದಿಲ್ಲ. ಯಾಕೆಂದರೆ ಅವರ ತಂಡದ ಪ್ರದರ್ಶನಗಳಿಗೆ ಮಿನಿಮಂ ಗ್ಯಾರಂಟಿ ಎಂಬುದು ಖಾತ್ರಿಯಾಗಿರುತ್ತದೆ.

ಮತ್ತೆ ಕೆಲವು ತಂಡಗಳಿವೆ. ಅವರಿಗೆ ಅಧ್ಯಯನದ ಕೊರತೆ ಇದ್ದರೂ ಮಹತ್ವಾಕಾಂಕ್ಷೆಯ ಹುಚ್ಚು. ಮಹತ್ತರ ರಂಗಪ್ರಯೋಗ ಎಂದು ಸಾಹಸಯಾತ್ರೆ ಆರಂಭಿಸುತ್ತಾರೆ. ಜನ ಬರಲಿ, ಬಿಡಲಿ ಅವರ ಮಹತ್ವಾಕಾಂಕ್ಷೆ ಇಂಗುವುದಿಲ್ಲ. ಮೊದಲೆರಡು ಪ್ರದರ್ಶನಗಳಲ್ಲಿ ತಮ್ಮ ಕಡೆಯವರನ್ನ ಹಾಗೂ ಹೀಗೂ ಕೂಡಾಕಿ ಮೂರನೆ ಪ್ರದರ್ಶನದಿಂದ ಕಣ್ಣುಗಳನ್ನು ಅಗಲಿಸಲು ಆರಂಭಿಸುತ್ತಾರೆ. ಆದರೆ ಮಹತ್ವಾಕಾಂಕ್ಷೆಯ ಹುಚ್ಚು ಬಿಟ್ಟಿರುವುದಿಲ್ಲ. ಇದು ಪ್ರತಿಷ್ಠೆಯ ಪ್ರಶ್ನೆಯಂತೆ ಅವರಿಗೆ ಅನಿಸುತ್ತಲೇ ಇರುತ್ತದೆ. ಅಂಥವರು ಮುಂದಕ್ಕೆ ಇಲಾಖೆಯಿಂದ ಮತ್ತು ಬೇರೆಬೇರೆ ಮೂಲಗಳಿಂದ ಹಣ ಹೊಂದಿಸಿ ನಾಟಕ ಮಾಡುವ ಕಲೆ ಬೆಳೆಸಿಕೊಳ್ಳುತ್ತಾರೆ. ಅದಕ್ಕೆ ಕೊಟ್ಟುಕೊಂಡಿರುವ ಸುಂದರ ಹೆಸರು ‘ಸ್ಪಾನ್ಸರ್ ಷೊ’.

‘ರಂಗಮಂದಿರದ ಬಾಡಿಗೆ ದರದ ಗೊಡವೆ ಇಲ್ಲ. ತಿಂಡಿಯೂ ಅವರದೇ. ಹೋಗಿ ನಾಟಕವಾಗಿ ಒಂದು ದುಡ್ಡಿನ ಕವರ್ ತರುವುದು ಸುಲಭದ ಕೆಲಸವಲ್ಲವೆ?’ ಎಂದು ಅನಿಸಿದೆ. ಹಾಗಾಗಿ ಅವರ ಕಣ್ಣುಗಳು ಫೆಸ್ಟಿವಲ್‌ಗಳನ್ನು ಹುಡುಕುವುದರಲ್ಲಿ ನಿಷ್ಣಾತವಾಗಿರುತ್ತದೆ.
ಇದನ್ನು ನಾನು ತಪ್ಪು ಎನ್ನುತ್ತಿಲ್ಲ. ಅಥವಾ ಆರೋಪದಂತೆ ಹೊರಿಸುತ್ತಿಲ್ಲ. ಆದರೆ ಇದೇ ಪ್ರವೃತ್ತಿ ಮುಂದುವರಿದರೆ ನಾಟಕ ಎನ್ನುವುದು ಶಾಮಣ್ಣನ ಅಂಗಿಯಂತೆ ಆಗಿಬಿಡಬಹುದೆ ಎನ್ನುವ ಅನುಮಾನ ಮತ್ತು ಭಯ ನನ್ನನ್ನು ಕಾಡುತ್ತಲೇ ಇದೆ. ಪ್ರೇಕ್ಷಕರು ಮೆಚ್ಚುವ ಅಥವಾ ತಿರಸ್ಕರಿಸುವ ಭಯದ ಆಚೆಗೆ ರಂಗತಂಡಗಳು ನಡೆದರೆ ಅವುಗಳಿಗೆ ಇನ್ನಿಲ್ಲದ ಧೈರ್ಯ ದಕ್ಕುತ್ತಾ ಹೋಗುತ್ತದೆ. ಈ ಧೈರ್ಯ ಬರುವುದು ರಂಗಮಂದಿರಗಳ ಬಾಡಿಗೆ ಕಟ್ಟದೆ, ತಿಂಡಿಯ ಖರ್ಚಾದರೂ ಹಿಂದಿರುಗಿ ಬಂದೀತೋ ಇಲ್ಲವೋ ಎನ್ನುವ ಅಳುಕೂ ಇಲ್ಲದೆ ಹೋಗುವುದು ಯಾವಾಗ ಅಂದರೆ ಅವರ ಕೈಗೆ ಸುಲಭವಾಗಿ ಹಣದ ಕವರ್ ಬಂದಾಗ. ಆಗ ಬೇರೇನು ಕೆಲಸ? ಮಿಕ್ಕ ತಂಡಗಳ ನಾಟಕಗಳು ಶಾಮಣ್ಣನ ಅಂಗಿಯಂತೆ ಕಾಣಲು ಆರಂಭವಾಗುತ್ತವೆ. ಆಡಿಕೊಳ್ಳಲು ಆರಂಭಿಸುತ್ತಾರೆ.

ಫೆಸ್ಟಿವಲ್‌ಗಳಲ್ಲಿ ನಾಟಕವಾಡಿದರೆ ಏನು ತಪ್ಪು ಎಂದು ಕೇಳಬಹುದು. ಖಂಡಿತ ತಪ್ಪು ಇಲ್ಲ. ಆದರೆ ಆ ಫೆಸ್ಟಿವಲ್‌ಗಳಲ್ಲೂ ಸ್ಲಾಟ್ ಗಿಟ್ಟಿಸಿಕೊಳ್ಳುವ ಕಲೆಯನ್ನು ರೂಢಿಸಿಕೊಂಡಿದ್ದರೆ ಮಾತ್ರ ಮುಂದುವರಿಯಬಹುದು ಅಷ್ಟೇ. ಇಲ್ಲದಿದ್ದರೆ ಇಲ್ಲ. ಐಡಿಯಾಲಜಿಗಳು, ರಾಜಕೀಯ ಹಿತಾಸಕ್ತಿಗಳು, ಮರ್ಜಿಗಳು, ಶಿಫಾರಸ್ಸುಗಳು, ಭಟ್ಟಂಗಿತನ ಬೆಳೆಸಿಕೊಂಡು ಬರುವ ಬಗೆ ಎಲ್ಲ ಎಲ್ಲ ಕಲಿತಿದ್ದರೆ ಆಗ ಸ್ಲಾಟ್ ಸಿಗಬಹುದು. ಇಲ್ಲದಿದ್ದರೆ ಇದ್ದಲ್ಲೇ ಇರಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಹಾಗಿರಲು ಸಿದ್ಧವಿರುವವರು ಮಾತ್ರ ರಂಗಮಂದಿರಗಳ ಬಾಡಿಗೆ ಕಟ್ಟಿಕೊಂಡು ಪ್ರೇಕ್ಷಕರನ್ನೇ ನಂಬಿಕೊಂಡು ಮುನ್ನಡೆಯಬೇಕಾಗುತ್ತದೆ.

ಸರ್ಕಾರಿ ರಂಗಮಂದಿರಗಳು ಮುಂಚೆ ಕಡಿಮೆ ಬಾಡಿಗೆ ದರ ಇರಿಸಿಕೊಂಡಿದ್ದವು ನಿಜ. ಆನ್‌ಲೈನ್‌ನಲ್ಲಿ ಅಪ್ಲೈ  ಮಾಡಿಕೊಳ್ಳಿ ಎನ್ನುವುದು ಉದಾರವಾಗಿ ಕಲ್ಪಿಸಿಕೊಟ್ಟ ಅವಕಾಶ. ಆದರೆ ಹಾಗೆ ಮಾಡಲು ಹೋದಾಗ ಏನೇನು ತಾಂತ್ರಿಕ ತೊಂದರೆ ಎದುರಿಸಬೇಕಾದೀತು ಎನ್ನುವುದು ಅದನ್ನು ಎದುರಿಸಿದವರಿಗೇ ಗೊತ್ತು. ಮಿಗಿಲಾಗಿ ಸರ್ಕಾರಿ ರಜಾದಿನಗಳಂದು ಅಥವಾ ಬೇರೆ ದಿನಗಳಂದು ನಾವು ರಂಗಮಂದಿರ ಬುಕ್ ಮಾಡಿಕೊಂಡಿದ್ದರೂ ಸರ್ಕಾರದ ಕಾರ್ಯಕ್ರಮ ಆ ದಿನ ನಿಗದಿಯಾದರೆ ನಾವು ಮುಲಾಜಿಲ್ಲದೆ ಬಿಟ್ಟುಕೊಟ್ಟು ತೆರಳುತ್ತಿರಬೇಕು. ಎಲ್ಲಿಗೆ ತೆರಳಬೇಕು ಎಂದು ಕೇಳಿಕೊಳ್ಳುವುದಕ್ಕೆ ಈವರೆಗೆ ಯಾರಿಗೂ ಬಂದಂತೆ ಇಲ್ಲ. ಯಾರನ್ನೂ ದೂರುವುದು?

ಈಗ ಬಾಡಿಗೆ ದರ ಹೆಚ್ಚಾಗಿದೆ. ಜೊತೆಗೆ ಠೇವಣಿಯಲ್ಲಿ ವಿದ್ಯುತ್ ದರ ವಸೂಲಿ ಮಾಡಿಕೊಳ್ಳುವ ಮಹತ್ತರ ಯೋಜನೆ ಹಾಕಿಕೊಂಡಿದ್ದಾರಂತೆ. ಸರ್ಕಾರದವರ ದರವೇ ಹೀಗೆ ಏರಿದರೆ ಇನ್ನು ಖಾಸಗಿಯವರು ಏರಿಸದೆ ಇರುತ್ತಾರೆಯೇ? ಅವರ ಜೊತೆ ರಂಗಭೂಮಿಯ ಕಷ್ಟಗಳನ್ನು ಖಾಸಗಿಯಾಗೇ ಮಾತಾಡಬೇಕು. ಬೇರೆ ಕಡೆ ಅವರು ಸಿಗುವುದಿಲ್ಲ. ಸರ್ಕಾರ ವಿಧಿಸುವ ದರಗಳು ರಂಗತಂಡಗಳವರ ಕಣ್ಣುಗಳನ್ನು ಮೇಲೆ ಮಾಡಿದಂತೆ ಮಾಡಿದರೆ ಇನ್ನು ಖಾಸಗಿಯವರ ದರಗಳು ಗೌರಿಶಂಕರವನ್ನು ಗುರಿಯಾಗಿಸಿಕೊಂಡಿರುತ್ತವೆ.

ಯಾವುದೇ ಒಂದು ಹೊಸ ತಂಡ ಅಥವಾ ಈಗ ಅಂಬೆಗಾಲಿಡುತ್ತ ನಡೆಯುತ್ತಿರುವ ತಂಡ ದಿಢೀರನೆ ಪ್ರಸಿದ್ಧಿಗೆ ಬರಲು ಸಾಧ್ಯವಿಲ್ಲ. ಅದಕ್ಕೆ ಅದರದೇ ಆದ ತಕ್ಕ ಸಮಯ ಬೇಕಾಗುತ್ತದೆ. ಮಿನಿಮಂ ಗ್ಯಾರಂಟಿ ಪ್ರಸಿದ್ಧ ತಂಡಗಳು ಗಳಿಸಿದಂತೆ ಹಲವು ಹೊಸ ತಂಡಗಳು ಗಳಿಸಲು ಸಾಧ್ಯವಾಗುವುದಿಲ್ಲ. ಅಂಥವಕ್ಕೆ ಸರ್ಕಾರ ಆಸರೆಯಾಗಿ ನಿಲ್ಲಬೇಕು. ಹಾಗೆ ನಿಲ್ಲುವ ಬದಲು ದರ ಹೆಚ್ಚಿಸಿ ರಂಗತಂಡಗಳಿಗೆ ಕೂರಲು ಸೂಚಿಸದರೆ ಗತಿ ಏನು?

ಹಾಗೂ ಹೀಗೂ ಧೈರ್ಯ ಮಾಡಿ ರಂಗಮಂದಿರದ ಬಾಡಿಗೆ ಕಟ್ಟಿ ನಾಟಕ ಮಾಡಲು ಮುಂದಾಗುತ್ತೇವೆ ಅಂತಿಟ್ಟುಕೊಳ್ಳಿ. ಜನ ಬರಬೇಕಲ್ಲ ? ಪೆಟ್ರೋಲ್ ದರ ಯಾವ ಶಿಖರವನ್ನ ಗುರಿಯಾಗಿಟ್ಟುಕೊಂಡಿದೆ ಎನ್ನುವುದು ತಿಳಿಯುತ್ತಿಲ್ಲ. ಅಡುಗೆ ಅನಿಲ ದರ ಕೇಳಿದರೆ ಎದೆ ಸ್ಫೋಟಗೊಳ್ಳುತ್ತದೆ. ಅಡುಗೆಗೆ ಬಳಸುವ ಎಣ್ಣೆ ತನಗೆ ಬೆಲೆ ಬರುತ್ತಿರುವುದಕ್ಕೆ ವ್ಯರ್ಥವಾಗಿ ಹಿಗ್ಗುತ್ತಿದೆ. ನೀವು ರಂಗಮಂದಿರಗಳ ಬಾಡಿಗೆ ದರ ಏರಿಸಿದರೆ ನಾವು ರಂಗತಂಡಗಳವರು ಏನು ಮಾಡಬೇಕು? ಟಿಕೆಟ್ ದರ ಏರಿಸಬೇಕು. ನೂರು ರೂಗಳಿದ್ದದ್ದು ನೂರೈವತ್ತು ನಿಗದಿ ಮಾಡಿದರೆ ಪ್ರೇಕ್ಷಕರ ಕಣ್ಣಿನೆದರು ನಾಟಕದ ಬದಲು ಗ್ಯಾಸ್ ಸಿಲಿಂಡರ್, ಅಡುಗೆ ಎಣ್ಣೆ, ಮಕ್ಕಳ ಸ್ಕೂಲು ಫೀಸು ಇತ್ಯಾದಿ ಕದಲಲು ಆರಂಭಿಸುತ್ತವೆ.
ಒಂದೇ ಮಾತಲ್ಲಿ ‘ ನಾಟಕ ಹಾಗಿರಲಿ’ ಎಂದು ಸುಮ್ಮನಾಗುತ್ತಾರೆ. ಅಲ್ಲಿಗೆ ಕಥೆ ಮುಗಿಯಿತಲ್ಲ.

ಇದು ಇಷ್ಟಕ್ಕೇ ಮುಗಿಯುವುದಿಲ್ಲ. ಐಪಿಎಲ್ ಶುರುವಾದರೆ ಜನ ಬರುವುದಿಲ್ಲ. ಆರ್‌ಸಿಬಿಯ ಪ್ರಸಿದ್ಧ ಮತ್ತು ಮುದುಕ ಸ್ಲೋಗನ್ ‘ ಈ ಸಲ ಕಪ್ ನಮ್ದೆ’ ಜೀವ ಬಿಡುವ ಹಂತ ತಲುಪಿದ್ದರೂ ಚೆಂಡನ್ನು ಬೌಂಡರಿ ದಾಟಿಸಿ ಸಿಕ್ಸ್ ಹೊಡೆಯುವ ಬಗೆಗೆ ಕ್ರೇಜ್ ಇಂಗಿಲ್ಲ. ನಾಟಕ ಮಾಡುವಾಗ ಖಾಲಿ ಕುರ್ಚಿಗಳು ನಟರನ್ನ ಹಂಗಿಸಿ ನಗುತ್ತಿರುತ್ತವೆ. ಇದು ಐಪಿಎಲ್ ಕಥೆ. ಇನ್ನು ಮೋಡಗಳು ಸುಮ್ಮನೆ ಗುಡುಗಿದರೆ ಸಾಕು ಪ್ರೇಕ್ಷಕ ಪ್ರಭು ಮನೆಯಲ್ಲಿ ಹಾಜರ್. ಅವರನ್ನು ದೂರುವುದು ಹೇಗೆ? ದೂರಿದರೆ ಯಾರನ್ನಾದರೂ ಹುಚ್ಚ ಎನ್ನುತ್ತಾರೆ.
ಇದನ್ನೆಲ್ಲ ನೆನಯುವಾಗ ನನಗೆ ಕೆ. ಹಿರಣ್ಣಯ್ಯನವರು ಹೇಳುತ್ತಿದ್ದ ಒಂದು ಪುಟ್ಟ ಕಥೆ ನೆನಪಾಗುತ್ತದೆ. ಅದು ವಿಡಂಬನೆಯ ಕಥೆ. ಭೂಲೋಕದಲ್ಲಿ ಪಾಪಗಳನ್ನು ಮಾಡಿ ನರಕದಲ್ಲಿ ವಾಸ್ತವ್ಯ ಕಂಡುಕೊಂಡಿದ್ದವರಲ್ಲಿ ಮೂವರು ಒಮ್ಮೆ ಜೋರು ಗಲಾಟೆ ಆರಂಭಿಸುತ್ತಾರಂತೆ. ಅವರ ಅಳಲು ಇಷ್ಟೇ. ತಾವು ಇನ್ನೂ ಭೂಲೋಕದಲ್ಲಿ ಕಾಲಕಳೆಯಬೇಕಾಗಿತ್ತು…ಆದರೆ ತಮ್ಮ ಅವಧಿ ಮುಗಿಯಿತು ಎಂದು ಕರೆದುಕೊಂಡು ಬಂದುಬಿಟ್ಟರು ಎಂಬುದು ಅವರ ರೊಳ್ಳೆ.

ಆ ಮೂವರೂ ಪಾಪಗಳನ್ನು ಬೇರೆಬೇರೆ ಶ್ರೇಣಿಗಳಲ್ಲಿ ಮಾಡಿ ಬಂದವರು. ಒಬ್ಬರ ಪ್ರಮಾಣ ಮತ್ತೊಬ್ಬರಿಗಿಂತ ಹೆಚ್ಚು ಅಥವಾ ಕಡಿಮೆ. ಹೀಗೆ ಇತ್ತು ಸ್ಥಿತಿ. ಅವರ ಅಳಲು ತೀರಾ ತಾರಕಕ್ಕೆ ಹೋದಾಗ ಅವರನ್ನು ಯಮನ ಮುಂದೆ ಹಾಜರುಪಡಿಸುತ್ತಾರಂತೆ. ಮತ್ತೆ ಭೂಲೋಕಕ್ಕೆ ತೆರಳಬೇಕು ಎಂದು ಬಯಸುವ ಅವರಿಗೆ ಯಮ ಅದು ಹೇಗೊ ‘ಸರಿ’ ಅಂದುಬಿಡುತ್ತಾನೆ. ಆದರೆ ಅದಕ್ಕೆ ಟರ್ಮ್ಸ್ ಆ್ಯಂಡ್ ಕಂಡೀಷನ್ಸ್ ಅಪ್ಲೈ ಅನ್ನುತ್ತಾನೆ. ಈ ಮೊದಲು ನೀವು ಮಾಡುತ್ತಿದ್ದ ಉದ್ಯೋಗವನ್ನ ಮಾಡುವಂತಿಲ್ಲ. ನಾನು ಸೂಚಿಸಿದ ಉದ್ಯೋಗ ಮಾಡುವುದಕ್ಕೆ ಒಪ್ಪಿಕೊಂಡರೆ ನಿಮ್ಮನ್ನ ಮತ್ತೆ ಭೂಲೋಕಕ್ಕೆ ಕಳಿಸಲಾಗುವುದು ಎನ್ನುತ್ತಾನೆ.

ವೃತ್ತಿ ಯಾವುದಾದರೇನು… ಮತ್ತೆ ಭೂಮಿಗೆ ತೆರಳಿದರೆ ಸಾಕು ಎಂದು ಆ ಮೂವರೂ ಹೇಳಿದರಂತೆ. ಯಮ ಆ ಮೂವರ ಪಾಪದ ಲೆವಲ್ ರಿಪೋರ್ಟ್ ತರಿಸಿಕೊಂಡು ನೋಡಿದ. ತೀರಾ ಕಡಿಮೆ ಪಾಪ ಮಾಡಿದ್ದವನಿಗೆ ‘ ನೀನು ಮತ್ತೆ ಅದೇ ಹೆಂಡತಿ ಬಳಿ ಹೋಗಿ ಗೋಣು ಆಡಿಸುವ ಗಂಡನ ಕೆಲಸ ಮಾಡಿಕೊಂಡಿರು’ ಅಂದ. ಮೊದಲನೆಯವನಿಗಿಂತ ಕೊಂಚ ಹೆಚ್ಚಿಗೆ ಪಾಪ ಮಾಡಿದ್ದವನ ರಿಪೋರ್ಟ್ ನೋಡುತ್ತ ‘ ನೀನು ಹೇಳಿದ ಮಾತು ಕೇಳದ ವಿದ್ಯಾರ್ಥಿಗಳ ಎದುರು ಪಾಠ ಮಾಡುವ ವ್ಯರ್ಥ ಕಾಯಕ ಮಾಡಿಕೊಂಡಿರು’ ಅಂದ. ಮೂರನೆಯವನ ರಿಪೋರ್ಟ್ ನೋಡಿದ. ಅವನು ತೀರಾ ಹೆಚ್ಚು ಪಾಪ ಮಾಡಿದ್ದಾತ. ಯಮ ಹೇಳಿದನಂತೆ- ‘ ನೀನು ದೀರ್ಘಕಾಲ ನಾಟಕ ಕಂಪನಿಯೊಂದನ್ನ ನಡೆಸಿಕೊಂಡಿರು’..

ರಂಗಭೂಮಿಯಲ್ಲಿ ನಾವು ಅಂದುಕೊಂಡದ್ದೆಲ್ಲ ಉಲ್ಟ ಹೊಡೆದು ತಿರುಗುಮುರುಗು ಆಗಿ ಕಂಗಾಲಾದಾಗ ಮೇಲಿನ ಕಥೆ ನನಗೆ ನೆನಪಾಗಲು ಆರಂಭಿಸುತ್ತದೆ. ನಾವು ಶಾಪಗ್ರಸ್ಥರಿರಬೇಕು ಅನಿಸುತ್ತದೆ. ಶಾಪ ವಿಮೋಚನೆಯ ಬಗೆಗೆ ನಿತ್ಯ ಯೋಚಿಸುವ ಹೊತ್ತಲ್ಲಿ ನಾಟಕ ಆಡುವ ಆಟದ ನೆಲಕ್ಕೆ ಬಾಡಿಗೆ ದರ ಹೆಚ್ಚಿಸಿದರೆ ಹೇಗೆ ಸರ್?

ನಾಟಕರಂಗ ಶಾಮಣ್ಣನ ಅಂಗಿಯಾಗುವುದು, ಶಾಪ ವಿಮೋಚನೆಯ ತುಡಿತ ಎಲ್ಲವೂ ಕಲಸಿಹೋಗುತ್ತಿರುವ ಹೊತ್ತು ನೀವು ರಂಗಮಂದಿರಗಳ ಬಾಡಿಗೆ ದರಗಳಿಗೆ ಸಂಬಂಧಿಸಿದಂತೆ ಮರು ಚಿಂತಿಸಿ ಎಂಬುದು ನನ್ನ ವಿನಂತಿ. ಪ್ರಾರ್ಥನೆ ಕೂಡ.
ನಮ್ಮ ರಂಗದ ಕಷ್ಟಗಳನ್ನು ದಾಟಿಸಿದ್ದೇನೆ ಎಂದುಕೊಳ್ಳುತ್ತ ದರ ಪರಿಷ್ಕರಣೆಯ ನಿರೀಕ್ಷೆಯಲ್ಲಿ…