ಯಕ್ಷಗಾನ ಪ್ರದರ್ಶನವೊಂದರಲ್ಲಿ ಪೂರ್ವರಂಗವು ಕಲಿಕೆಗಾಗಿ ಇರುವ ಅವಕಾಶ. ತೆಂಕು ತಿಟ್ಟಿನಲ್ಲಿ ಅದನ್ನು ಇನ್ನೂ ಉಳಿಸಿಕೊಳ್ಳಲಾಗಿದೆ. ಬಡಗು ತಿಟ್ಟಿನಲ್ಲಿಯೂ ತಕ್ಕಮಟ್ಟಿಗಾದರೂ ಪೂರ್ವರಂಗವನ್ನು ಉಳಿಸಿಕೊಳ್ಳಬೇಕು ಎಂದು ಹೇಳುವ ಎಂ.ಎಲ್. ಭಟ್ ಅವರು, ಯಕ್ಷಗಾನದ ಜೊತೆಗೆ ದೀರ್ಘವಾದ ನಂಟು ಹೊಂದಿದವರು. ಕಾಲಮಿತಿ ಯಕ್ಷಗಾನದ ಇತಿಮಿತಿಯನ್ನು ವಾಸ್ತವಿಕ ನೆಲೆಯಿಂದ ವಿಮರ್ಶಿಸಬಲ್ಲವರು. ಇಡೀ ರಾತ್ರಿ ಪ್ರದರ್ಶನಗೊಳ್ಳುವ ಯಕ್ಷಗಾನವು ಪ್ರೇಕ್ಷಕರಿಗೆ ಕೊಡುವ ಗುಂಗನ್ನು ಆಸ್ವಾದಿಸುವ ಬಗೆಯನ್ನು ಅರಿತವರು. ಕೃತಿ. ಆರ್. ಪುರಪ್ಪೇಮನೆ ಅವರು ಯಕ್ಷಾರ್ಥ ಚಿಂತಾಮಣಿ ಸರಣಿಯಲ್ಲಿ ಅವರೊಡನೆ ನಡೆಸಿದ ಮಾತುಕತೆಯನ್ನು ಬರಹರೂಪಕ್ಕಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳು, ದೂರದರ್ಶನ, ಸಿನಿಮಾಗಳೊಂದಿಗೆ ಸ್ಪರ್ಧಿಸುತ್ತಾ ಸರಕಾರದ ಸಹಾಯವಿಲ್ಲದೇ ಇವತ್ತಿಗೂ ಜನರ ಬೆಂಬಲದಿಂದಲೇ ಬದುಕುತ್ತಿರುವ ಯಕ್ಷಗಾನಕ್ಕೆ ಅದರ ಪ್ರೇಕ್ಷಕರೇ ದೇವರು. ಒಮ್ಮೆ ಚಂದ್ರಶೇಖರ ಕಂಬಾರರು ಧಾರವಾಡ ರಂಗಾಯಣದಲ್ಲಿ ಮಾತಾಡುತ್ತಾ, ನಾಟಕದವರು ಸಂಸ್ಕೃತಿ ಇಲಾಖೆಯ ಕಡೆ ಮುಖ ಮಾಡಿ ನಾಟಕ ಮಾಡುವುದಕ್ಕಿಂತ ಯಕ್ಷಗಾನದಂತೆ ಪ್ರೇಕ್ಷಕರ ಕಡೆ ಮುಖ ಮಾಡಿ ನಾಟಕ ಮಾಡುವುದನ್ನು ಕಲಿಯಬೇಕು ಎಂದಿದ್ದರು(ಭಾವಾರ್ಥ).
ಯಕ್ಷಗಾನದ ವಿಶಿಷ್ಟತೆ, ವೈವಿಧ್ಯತೆಯೊಳಗೇ ಅದರ ಪ್ರೇಕ್ಷಕರೂ ಇದ್ದಾರೆ. ಯಕ್ಷಗಾನದ ಜಗತ್ತಿನಲ್ಲಿ ಕಲಾವಿದರನ್ನು ‘ವೃತ್ತಿಪರ’, ‘ಹವ್ಯಾಸಿ’ ಎಂದೆಲ್ಲಾ ಕರೆಯುವ ರೂಢಿಯಿದೆ. ಆದರೆ ‘ವೃತ್ತಿಪರ’ ಪ್ರೇಕ್ಷಕರು ಎಂದು ಕರೆಯುವ ಮಟ್ಟದಲ್ಲಿ ಯಕ್ಷಗಾನವನ್ನು ನೋಡುವ ಪ್ರೇಕ್ಷಕರಿದ್ದಾರೆ. ಅಂಥವರಲ್ಲಿ ಸಾಗರದ ಎಂ ಎಲ್ ಭಟ್ ಒಬ್ಬರು. ಮೂಲತಃ ಕುಂದಾಪುರದವರು. ಅವರು ಎಂತಹ ಯಕ್ಷಗಾನ ಪ್ರೇಮಿಗಳೆಂದರೆ ದಿನಾ ಆಫೀಸಿನ ಕೆಲಸ ಮುಗಿಸಿ ಆಟಕ್ಕಾಗಿ ಐದಾರು ಗಂಟೆ ಪ್ರಯಾಣಿಸಿ ಬೆಳಗಿನ ಜಾವದ ಬಸ್ ಹತ್ತಿ ಮತ್ತೆ ಆಫೀಸಿನ ಕೆಲಸಕ್ಕೆ ಬರುವಂತವರು. ಮಾಮೂಲಿಯಾಗಿ ಕಲಾವಿದರಿಗೆ ಯಕ್ಷಗಾನದಲ್ಲಿ ‘ಕಳೆದ ೪೦ ವರ್ಷ’ ತೊಡಗಿಸಿಕೊಂಡವರು ಅನ್ನುವುದಿದೆ. ಅದೇ ದಾಟಿಯಲ್ಲಿ ಎಂ ಎಲ್ ಭಟ್ಟರನ್ನ ಯಕ್ಷಗಾನದಲ್ಲಿ ೪೦ ವರ್ಷದಿಂದ ತೊಡಗಿಸಿಕೊಂಡವರು ಎನ್ನುವುದಕ್ಕೆ ಯಾವ ಸಂಕೋಚವೂ ಬೇಕಾಗಿಲ್ಲ. ಫೋನ್ ಎತ್ತುತ್ತಿದ್ದಂತೆ ಇವತ್ತು ಉಡುಪಿಯಲ್ಲಿ ಆಟ, ೩ ಗಂಟೆಗೆ ಹೊರಟು, ೭ ಗಂಟೆಯ ಕಾಲಮಿತಿ ಯಕ್ಷಗಾನ ನೋಡಿಕೊಂಡು ನಿಮಗೆ ೧೧ ಗಂಟೆಯ ಜೋಗ-ಮಂಗಳೂರು ಬಸ್ ಸಿಗತ್ತೆ. ಅಲ್ಲೆ ಉಳಿದರೆ ನಾಳೆ ಹನುಮಗಿರಿ ಮೇಳದ ಆಟ ಇದೆ ಅದನ್ನ ನೋಡಿಕೊಂಡು ಬಸ್‌ನವರಿಗೆ ಹೇಳಿ ಹೋದರೆ ಸುರತ್ಕಲ್‌ನಲ್ಲಿ ದಾರಿಯಲ್ಲೆ ನಿಮಗೆ ಬಸ್ ನಿಲ್ಲಿಸ್ತಾರೆ ಎಂದು ಹೇಳುವವರು. ಇಡೀ ರಾತ್ರಿ ತೆರೆದಿರುವ ಪಂಚರ್ ಶಾಪ್ ಗ್ಯಾರೇಜಿನಿಂದ ಹಿಡಿದು ಒಂದು ಪ್ರಸಂಗದ ನಿರ್ದಿಷ್ಟ ಪದ್ಯದ ಸಾಲುಗಳ ತನಕ ಯಕ್ಷಗಾನಕ್ಕೆ ಸಂಬಂಧಪಟ್ಟ ಎಲ್ಲ ವಿಷಯಗಳು ಅವ ರ ಬಾಯಲ್ಲಿರುತ್ತವೆ. ರಾತ್ರಿ ತಿರುಗುವವರಿಗೆ ಪಂಚರ್ ಶಾಪ್, ಎಮರ್ಜೆನ್ಸಿ ಊಟದ ಹೊಟೆಲ್ ಮಾಹಿತಿಯೂ ಇರಲೇಬೇಕಲ್ಲ. ಪ್ರಸಂಗಗಳ ಹಳೇ ಕ್ಯಾಸೆಟ್‌ಗಳು, ಹಾಡುಗಳು, ಯಕ್ಷಗಾನದ ಹಳೇ ಕರಪತ್ರಗಳು, ಪ್ರಸಂಗಗಳು ಅವರ ಸಂಗ್ರಹದಲ್ಲಿವೆ.
ಅವರ “ಯಕ್ಷಗಾನ ಐ ಲವ್ ಯು, ಯು ಟೂ’’ ಎನ್ನುವ ವಾಟ್ಸಾಪ್ ಗ್ರೂಪ್, ಸಾಗರ ಸುತ್ತಮುತ್ತಲಿರುವ ಸ್ಥಳೀಯರ ಸದಸ್ಯತ್ವವನ್ನು ಮಾತ್ರ ಹೊಂದಿರುವ ನಿಯಮದಿಂದಾಗಿ ಅದೊಂದು ವಿಶಿಷ್ಟ ಗುಂಪಾಗಿದೆ. ಎಲ್ಲರೂ ಪರಿಚಯದವರು, ಮತ್ತು ಸ್ಥಳಿಯರಾದ ನಾವೆಲ್ಲರೂ ನೋಡುವ ಪ್ರದರ್ಶನವೂ ಒಂದೇ ಆಗಿರುವುದರಿಂದ, ಕೋವಿಡ್‌ಪೂರ್ವ ವರ್ಷಗಳಲ್ಲಿ, ಅಲ್ಲಿ ನಡೆಯುವ ಪ್ರದರ್ಶನದ ಮರುದಿನದ ಆಟದ ವಿಮರ್ಶೆ ಹೊಸ ಆಯಾಮವನ್ನು ಪಡೆದುಕೊಂಡಿತ್ತು. ಪ್ರದರ್ಶನದ ನಂತರ ಹೊರಗೆ ಹೇಗೆ ‘ಆಟ’ ಮುಂದುವರೆಯುತ್ತದೆ ಎನ್ನುವುದನ್ನು ದಾಖಲು ಮಾಡಿದ್ದಿದ್ದರೆ ಅದು ಈ ಗ್ರೂಪಿನಲ್ಲಿ. ಸದ್ಯ ಸಾಗರದ ಎಲ್ ಐ ಸಿ ಯಲ್ಲಿ ಕೆಲಸ ಮಾಡುತ್ತಿರುವ ಅವರಿಗೆ ಇತ್ತೀಚೆಗೆ ‘ಬಸವ ವಿಭೂಷಣ’ ಪ್ರಶಸ್ತಿಯೂ ಸಿಕ್ಕಿದೆ. ಪ್ರೇಕ್ಷಕರಾಗಿ, ಸಂಘಟಕರಾಗಿ, ವಿಮರ್ಷಕರಾಗಿ ಯಕ್ಷಗಾನದ ಬಗ್ಗೆ ಅವರಿಗಿರುವ ಆಸಕ್ತಿ, ಉತ್ಸಾಹ, ಬದ್ಧತೆಯನ್ನು ಗುರುತಿಸಿ ಪ್ರಶಸ್ತಿ ಕೊಟ್ಟಿರುವುದೂ ಹೊಸದೇ. ‘ಪ್ರತಿಭೆ’ಯನ್ನು ಅಳೆಯುವ ‘ಪ್ರಶಸ್ತಿ’ಗಳಿಗಿರುವ ಸಮಸ್ಯೆಗಳನ್ನು ದಾಟಿ ಎಂ ಎಲ್ ಭಟ್ಟರನ್ನು ಗುರುತಿಸಿದ್ದು, ಪ್ರತಿಭೆಯನ್ನೂ, ಪ್ರಶಸ್ತಿಯನ್ನೂ ಮರುವ್ಯಾಖ್ಯಾನಕ್ಕೆ ಒಳಪಡಿಸಿದಂತೆಯೇ. ೫-೬ ವರ್ಷದ ಹಿಂದೆ ಸಂಶೋಧನೆಯ ಸಂದರ್ಭದಲ್ಲಿ ಮಾಡಿದ ಅವರ ಸಂದರ್ಶನದ ಭಾಗವನ್ನು ಇಲ್ಲಿ ಹಂಚಿಕೊಂಡಿದ್ದೇನೆ.
ನಿಮ್ಮ ಬಾಲ್ಯ ಕಾಲದಲ್ಲಿ ಯಕ್ಷಗಾನ ಹೇಗೆ ನಡೀತಿತ್ತು? ಆಗಿನ ಟೆಂಟ್ ಮೇಳ, ಬಯಲಾಟಗಳ ಬಗ್ಗೆ ಹೇಳಿ…
೪೦ ವರ್ಷದ ಹಿಂದಿನ ಮಾತು. ಮಾರಣಕಟ್ಟೆ ಮೇಳದಲ್ಲಿ, ಧ್ವನಿ ವರ್ಧಕವಿರಲಿಲ್ಲ. ಆದರೆ ದೊಂದಿ ಕಾಲ ದಾಟಿ ಬಿಟ್ಟಿತ್ತು. ಗ್ಯಾಸ್ ಲೈಟ್ ಕಾಲ. ಚೌಕಿ ಮನೆ ದೂರದಲ್ಲಿತ್ತು. ಬಿದಿರು ಕಟ್ಟಿ ನೆಲಮಟ್ಟದಲ್ಲೇ ಸ್ಟೇಜ್. ಸುತ್ತ ಮುತ್ತ ಜನ. ಒಂದು ಚೌಕಟ್ಟು ಅಷ್ಟೇ. ಮಕ್ಕಳು ಐಸ್ ಕ್ಯಾಂಡಿ ತಿನ್ನೋಕು ಭಾಗವತರ ಪಕ್ಕದಲ್ಲೇ ರಂಗಸ್ಥಳದಲ್ಲೇ ಹೋಗುತ್ತಿದ್ದರು. ಆಗ ಹಾಸ್ಯಗಾರ ಅಥವಾ ಕೊಡಂಗಿ ಏನಾದ್ರು ಇದ್ರೆ. ಅವನು ನಮಗೆ ಹೋಗೋಕೆ ಬಿಡ್ತಿರಲಿಲ್ಲ. ಅಲ್ಲೇ ನಮಗೆ ತಡೆಯೊಡ್ಡುತ್ತಿದ್ದ. ರಂಗಸ್ಥಳದಲ್ಲಿ ನಮಗೂ ಕುಣಿದ ಅನುಭವವಾಗ್ತಿತ್ತು. ಇಡೀ ಸಭೆ ನಗುತ್ತಿತ್ತು. ಆಮೇಲೆ ಅವ ಬಿಟ್ಟ ಕೂಡ್ಲೇ ನಾವು ಓಡ್ತಿದ್ವಿ.
ಆಗಲೂ ಒಂದೆರಡು ಮೂರು ಟೆಂಟ್ ಮೇಳ ಇತ್ತು. ಆಗ ಒಂದು ೫೦ ಯಕ್ಷಗಾನ ನೋಡಿದ್ರೆ ಅದರಲ್ಲಿ ಒಂದು ಹತ್ತು ಟೆಂಟ್ ಮೇಳದ್ದಾಗಿರುತ್ತಿತ್ತು. ಟೆಂಟ್ ಅವರೇ ಮಾಡಿದ್ರೆ, ನೆಲಕ್ಕೆ ೬೦ ಪೈಸ, ಫಸ್ಟ್ ಕ್ಲಾಸ್ ೬ ರುಪಾಯಿ. ಅದೇ ಕಾಂಟ್ರಾಕ್ಟರ್ ಮೇಳ ಹಿಡಿದ್ರೆ ೧೦ ರುಪಾಯಿ. ಅತಿ ಜಾಸ್ತಿ ಮಾಡಕ್ಕೆ ಟೆಂಟಿನ ಯಜಮಾನರು ಬಿಡ್ತಿರಲಿಲ್ಲ. ಈಗಿನ ಹಾಗೆ ಅವರಷ್ಟಕ್ಕೇ ೧೦೦೦ ರುಪಾಯಿ ಅಂತ ಹೇಳೋರು ಇರಲಿಲ್ಲ. ಆಟದ ಪ್ರಚಾರ ಮಾಡಿದ್ರೆ, ಜನ ತಾವಾಗೆ ಬರ‍್ತಿದ್ರು. ಪ್ರಚಾರದ ರೀತಿಯೂ ಈಗ ಬದಲಾಗಿದೆ. ಈಗ ಟಿಕೆಟ್ ಮುಂಚೆಯೇ ಮಾರಾಟ ಮಾಡ್ಬೇಕು, ಮುಂಚಿನ ತರ ಟಿಕೆಟ್ ಕೌಂಟರ್‌ನಲ್ಲಿ ನೂಕು ನುಗ್ಗುಲು ಇಲ್ಲ.
ನೀವು ಎಲ್ಲಾ ರೀತಿಯ ಯಕ್ಷಗಾನ ನೋಡುತ್ತೀರಿ. ತೆಂಕು, ಬಡಗು, ಬಯಲಾಟ, ಒಳಾಂಗಣದ ಯಕ್ಷಗಾನ. ಇವೆಲ್ಲದರಲ್ಲಿ ಯಕ್ಷಗಾನದ ವಾತವರಣ ಹೇಗಿರತ್ತೆ? ಅದರ ಪರಿಣಾಮಗಳು ಹೇಗೆ ಬೇರೆಬೇರೆಯಾಗಿರುತ್ತವೆ?
ವಾತಾವರಣದ ಬಗ್ಗೆ ಹೇಳುವುದಾದರೆ, ನಾನು ಮುಂಚಿಂದಲೂ ತೆಂಕು ಮತ್ತು ಬಡಗು ಎರಡನ್ನೂ ನೋಡುತ್ತಾ ಬಂದವನು. ತೆಂಕಿನ ಶಬ್ದ, ಅದಕ್ಕೆ ವಾತಾವರಣದ ಶೃತಿ ಎನ್ನಬಹುದೇನೋ, ಅದು ಬೇರೆ ರೀತಿಯದು. ಮೊದಲಿಂದಲೂ ಅವರಿಗೆ ಡ್ರೆಸ್‌ಕೋಡ್ ಅಂತ ಇತ್ತು. ಬಡಗಿನಲ್ಲಿ ಹರಿದು ಹೋದ ಹಿಜಾರು, ಬಣ್ಣ ಹೋದ ಬ್ಯಾಗಡೆ. ಈಗ ಬಡಗಿನಲ್ಲೂ ಪರಿಸ್ಥಿತಿ ಸುಧಾರಿಸಿದೆ. ಯಕ್ಷಗಾನದಲ್ಲಿ ಬಂಗಾರ ಬಣ್ಣದ ಬ್ಯಾಗಡೆಯೆ ಆಕರ್ಷಣೆ. ತೆಂಕಲ್ಲಿ ಒಂದು ಸಮತೋಲನ ಇದೆ. ಹಿಮ್ಮೇಳಕ್ಕೂ ಮುಮ್ಮೇಳಕ್ಕೂ ಸಮತೋಲನ. ಎರಡು ನಿಮಿಷದ ಪದ್ಯಕ್ಕೆ ಎರಡೇ ನಿಮಿಷದ ಮಾತು. ೧೦ ನಿಮಿಷದ ಪದ್ಯಕ್ಕೆ ೧೦ ನಿಮಿಷದ ಮಾತು. ತೆಂಕಿನ ಪ್ರಸಂಗ ನಡೆಯೆ ವೇಗವಾಗಿ ಇದೆ. ನಿದ್ದೆ ಬರುವ ಸಮಯದಲ್ಲೂ ನಿದ್ದೆ ಬರುವುದಿಲ್ಲ. ಬಡಗಿನಲ್ಲಿ ಹಾಗಲ್ಲ. ಮಧ್ಯ ರಾತ್ರಿಯ ಹೊತ್ತಿಗೆ ಒಂದು ಸ್ತ್ರೀ ವೇಷವೋ ಅಥವಾ ಶೃಂಗಾರವೊ ಬಂದು ಗಂಟೆಗಟ್ಟಲೆ ಸಂಭಾಷಣೆ ನಡೆಯುತ್ತದೆ. ಇದು ತಪ್ಪು ಸರಿಯ ಪ್ರಶ್ನೆ ಅಲ್ಲ. ಇಲ್ಲಿಯ ಜನ ಅದನ್ನ ಇಷ್ಟಪಡ್ತಾರೆ. ಹಾಗಾಗಿ ಇಲ್ಲಿ ಅದು ಉಳಿದಿದೆ. ಆದ್ರೆ ಯಾವುದೇ ಯಕ್ಷಗಾನವಾದರೂ ಬಯಲೇ ಸರಿ. ನಾನು ಎಲ್ಲಾ ರೀತಿಯ ಯಕ್ಷಗಾನ ನೋಡ್ತಿನಿ, ಹಾಲ್‌ನಲ್ಲಿ, ಬಯಲಿನಲ್ಲಿ. ಬಯಲಲ್ಲಿಯೂ ಸಿಮೆಂಟ್ ಕಟ್ಟೆ ರಂಗಸ್ಥಳವಾದಾಗ ಬರುವ ಪರಿಣಾಮ ಬೇರೆ. ಮತ್ತೆ ಬಾಡಿಗೆ ಶಾಮಿಯಾನದ ಕೆಳಗೆ ಮಾಡುವಾಗ ಆಗುವ ಪರಿಣಾಮ ಬೇರೆ. ಮೇಳದ ರಂಗಸ್ಥಳದಲ್ಲಿ ಬಯಲಲ್ಲಿ ಮಾಡುವ ಆಟವೇ ಖುಷಿ ಕೊಡುತ್ತದೆ. ಹಾಲ್‌ನಲ್ಲಿ ಸರಿಯಾಗಿ ರಂಗಕ್ಕೆ ಪ್ರವೇಶ ಮಾಡಲು ಬರುವುದಿಲ್ಲ. ಮತ್ತೆ ಎಡ-ಬಲದ ನೋಟಗಳು ಸಿಗುವುದಿಲ್ಲ. ಬಯಲಲ್ಲಿ ರಂಗಸ್ಥಳದ ಎಲ್ಲಾ ಕಡೆಯು ಉಪಯೋಗವಾಗುತ್ತದೆ. ಇದು ತುಂಬಾ ಪರಿಣಾಮಕಾರಿ. ಹಾಲ್‌ನಲ್ಲಿ ಎಕೋ(ಪ್ರತಿಧ್ವನಿ) ಇರತ್ತೆ, ಧ್ವನಿವರ್ಧಕದ ರಗಳೆ ಇರತ್ತೆ. ದೊಡ್ಡ ಹಾಲಲ್ಲಿ ಕಡಿಮೆ ಪ್ರೇಕ್ಷಕರಿದ್ದರೆ ಅಭಾಸ ಅನ್ಸತ್ತೆ. ಅಥವಾ ಸಣ್ಣ ಹಾಲಲ್ಲಿ ತುಂಬಿದ ಪ್ರೇಕ್ಷಕರು ಕಷ್ಟ ಪಟ್ಟು ನೋಡ್ಬೇಕು. ಬಯಲಲ್ಲಿ ಅದೆಲ್ಲ ಏನಿಲ್ಲ.
ಯಕ್ಷಗಾನದ ಬದಲಾವಣೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಮತ್ತು ಈ ಬದಲಾವಣೆಗೆ ಯಕ್ಷಗಾನ ಸಮುದಾಯದ ಭಾಗವಾದ ಪ್ರೇಕ್ಷಕರ ಸಂಬಂಧ ಏನು?
ಈಗ ಕಾಲಮಿತಿ ಯಕ್ಷಗಾನ ಬಂದಿದೆ. ತನ್ನ ಅನುಕೂಲಕ್ಕೆ ತಕ್ಕಂತೆ ಅದು ಬದಲಾಯಿಸಿಕೊಂಡಿದೆೆ. ಆದ್ರೆ ಅದು ಮುಂದೊಂದು ದಿನ ಮತ್ತೆ ಇಡೀ ರಾತ್ರಿಗೆ ಬರಬೋದು. ೫೦ ವರ್ಷದ ಬದಲಾವಣೆ ನೋಡಿದ್ರೆ ಈಗ ಕಾಲಮಿತಿ ಜಾಸ್ತಿಯಾಗಿದೆ. ಯಕ್ಷಗಾನದಲ್ಲಿ ಎರಡು ತರದವರು ಇದಾರೆ. ಒಬ್ಬರು ಸಮಾನ ಸ್ಥಿತಿ ಬಯಸೋರು, ಇನ್ನೊಬ್ಬರು ಬದಲಾವಣೆನ ಒಪ್ಕೊಳ್ಳೊರು. ಕೆಲವರು ಹೇಗೆ ಅಂದ್ರೆ ಕಿರೀಟದ ಮೇಲೆ ತುರಾಯಿಯ ಬಣ್ಣ ಹಸಿರಿದ್ದಿದ್ದು ಕೆಂಪಾದ್ರು ಗಲಾಟೆ ಮಡ್ತಾರೆ. ಈ ಬದಲಾವಣೆಗಳು ಯಕ್ಷಗಾನದಲ್ಲಿ ನಿಲ್ಲತ್ತೆ ಅಂತಲ್ಲ. ಶಿವರಾಮ ಕಾರಂತರು ಮಾಡಿದ ಪ್ರಯೋಗ ನನಗೆ ನೋಡಕ್ಕೆ ಸಿಕ್ಕಲಿಲ್ಲ. ಆದರೆ ಅದು ನಿಲ್ಲಲಿಲ್ಲ. ಒಂದು ಪ್ರಯೋಗ ಚಂದ ಆಗಬಹುದು, ಆದರೆ ಅದು ಯಕ್ಷಗಾನದಲ್ಲಿ ನಿಲ್ಲೋದಿಲ್ಲ. ಜನ ಮೆಚ್ಚಿರೊದು ನಿಲ್ಲತ್ತೆ ಅನ್ನೊದು ಕೂಡ ಒಮ್ಮೊಮ್ಮೆ ಪ್ರೇಕ್ಷಕರ ಬಗ್ಗೆ ತಪ್ಪು ಕಲ್ಪನೆ ಕೊಡತ್ತೆ. ಜನರಿಗೆ ಬೇಕಾದ ಹಾಗೆ ಮಾಡ್ತಾರೆ ಅಂತಲ್ಲ. ಯಾವಾಗಲು ಅದು(ಬದಲಾವಣೆ) ಹಾಳಾದಾಗ ಪ್ರೇಕ್ಷಕರನ್ನು ಬಯ್ಯೋದು, ಸರಿಯಾದಾಗ ತಮ್ಮನ್ನ ಹೊಗಳಿಕೊಳ್ಳೋದು ಯಕ್ಷಗಾನದಲ್ಲಿ ಇದೆ.
ಪ್ರೇಕ್ಷಕರಿಗೆ ಸಂಘಟನೆ ಇಲ್ಲ. ತಾನು ಏನು ನೋಡ್ತೇನೆ, ಅನ್ಕೊತೇನೆ ಅದು ಅವನ ಬಳಿಯೇ ಉಳಿಯತ್ತೆ.ಅಂದರೆ, ನನ್ನಷ್ಟಕ್ಕೆ ನಾನು ಹೋಗ್ತೇನೆ. ಅಥವಾ ನಾನು ಹೇಳಿದ್ರೆ ಅವರು ಕೇಳಬೇಕಂತೇನು ಇಲ್ಲ. ಯಕ್ಷಗಾನದ ನಾಲ್ಕು ವಿಂಗ್ಸ್ ಏನಿದೆ; ಪ್ರೇಕ್ಷಕರು, ವಿಮರ್ಶಕರು , ಕಲಾವಿದರು, ಸಂಘಟಕರು ಅಥವಾ ಮೇಳದ ಯಜಮಾನರು; ಅವರಲ್ಲಿ ಒಬ್ಬರಿಗೊಬ್ಬರಿಗೆ ಅಂಡರ್‌ಸ್ಟಾಂಡಿಂಗ್ ಇಲ್ಲ. ನಾಲ್ಕೂ ಒಟ್ಟಾದರೆ ಯಕ್ಷಗಾನಕ್ಕೆ ಒಳ್ಳೇದು. ಆದ್ರೆ ಪ್ರೇಕ್ಷಕರಿಗಂತೂ ಯಾವ ಸಂಘಟನೆನೂ ಇಲ್ಲ. ಈಗ ವಾಟ್ಸಾಪ್, ಫೇಸ್‌ಬುಕ್‌ನಿಂದಾಗಿ ಪ್ರೇಕ್ಷಕರ ವಾಯ್ಸ್ ಅಂತ ಸ್ವಲ್ಪ ಬಂದಿದೆ. ಆದರೆ ಅವರ ವಾಯ್ಸ್ ಕಲಾವಿದರನ್ನ ಮುಟ್ಟೋದಿಲ್ಲ.
ಈಗ ಆಲಾಪನೆಗೆ ಪ್ರೇಕ್ಷಕರು ಚಪ್ಪಾಳೆ ಹೊಡೆದು ಹಾಳುಮಾಡಿದ್ರು ಅಂತಾರೆ. ಆದರೆ ಯಕ್ಷಗಾನದಲ್ಲಿ ಮನೋರಂಜನೆ ಒಂದು ಬಹುದೊಡ್ಡ ಭಾಗವೇ. ಅದನ್ನು ಕಡೆಗಣಿಸುವಂತಿಲ್ಲ. ನನಗೆ ಖುಷಿಯಾದಾಗ ಚಪ್ಪಾಳೆ ಹೊಡೆದೇ ಹೊಡಿತೀನಿ. ಕೆಲವರು ಶಿಳ್ಳೆ ಹಾಕ್ತಾರೆ. ಈಗ ಸರ್ಕಸ್‌ನಲ್ಲಿ ಒಂದು ಹುಡುಗಿ ತಂತಿ ಮೇಲೆ ನಡೆದ್ರೂ ಚಪ್ಪಾಳೆ ಹೊಡಿತೀವಿ. ಆಗಿನ ಮನಸ್ಥಿತಿ ಅಂತದ್ದೇ ಆಗಿರತ್ತೆ ಅಷ್ಟೆ. ಅವರು, ಹಾಳಾಗಿದ್ದಕ್ಕೆ ಪ್ರೇಕ್ಷಕರನ್ನು ದೂಷಿಸ್ತಾರೆ. ಒಳ್ಳೆದಾಗಿದ್ದಕ್ಕೆ ಪ್ರೇಕ್ಷಕರಿಗೆ ಕ್ರೆಡಿಟ್ ಇಲ್ಲ. ಪ್ರೇಕ್ಷಕರನ್ನು ಬಯ್ಯುವ ಅಭ್ಯಾಸ ಬಹಳ ಕಡೆ ಬಂದಿದೆ. ಪ್ರೇಕ್ಷಕರಿಗೂ ಗೊತ್ತಿರತ್ತೆ. ಆದ್ರೆ ಕೇಳೋ ಮನಸ್ಥಿತಿನೂ ಬೇಕು. ಆಮೇಲೆ ಕೆಲವು ಕಲಾವಿದರು ೫೦ ವರ್ಷದಿಂದ ಅದರಲ್ಲೇ ಇದಾರೆ. ಉದಾಹರಣೆಗೆ ಚಿಟ್ಟಾಣಿಯವರಿಗೆ ೮೩, ಗೋವಿಂದ ಭಟ್ಟರಿಗೆ ೭೮ ಆಗಿದೆ ಅಂದ್ರೆ ಅವರು ೫೦, ೬೦ ವರ್ಷ ಯಕ್ಷಗಾನದಲ್ಲೇ ಇದ್ದಾರೆ. ಅವರಂತವರಿಗೆ ಹೇಳೋಕು ಪ್ರೇಕ್ಷಕರಿಗೆ ಕಷ್ಟ. ಆದರೆ ಹಿಂಗಾಗಬಹುದಿತ್ತೇನೊ ಅಂದಾಗ ಅದನ್ನು ಅಂತವರೂ ಒಪ್ಪಿಕೊಂಡಿರೋ ಘಟನೆಗಳಿವೆ.
ಇಡೀ ರಾತ್ರಿ ತೆರೆದಿರುವ ಪಂಚರ್ ಶಾಪ್ ಗ್ಯಾರೇಜಿನಿಂದ ಹಿಡಿದು ಒಂದು ಪ್ರಸಂಗದ ನಿರ್ದಿಷ್ಟ ಪದ್ಯದ ಸಾಲುಗಳ ತನಕ ಯಕ್ಷಗಾನಕ್ಕೆ ಸಂಬಂಧಪಟ್ಟ ಎಲ್ಲ ವಿಷಯಗಳು ಅವ ರ ಬಾಯಲ್ಲಿರುತ್ತವೆ. ರಾತ್ರಿ ತಿರುಗುವವರಿಗೆ ಪಂಚರ್ ಶಾಪ್, ಎಮರ್ಜೆನ್ಸಿ ಊಟದ ಹೊಟೆಲ್ ಮಾಹಿತಿಯೂ ಇರಲೇಬೇಕಲ್ಲ. ಪ್ರಸಂಗಗಳ ಹಳೇ ಕ್ಯಾಸೆಟ್‌ಗಳು, ಹಾಡುಗಳು, ಯಕ್ಷಗಾನದ ಹಳೇ ಕರಪತ್ರಗಳು, ಪ್ರಸಂಗಗಳು ಅವರ ಸಂಗ್ರಹದಲ್ಲಿವೆ.
ಪ್ರಸಂಗ ನಡೆಯಲ್ಲಿ ಏನಾದರೂ ವ್ಯತ್ಯಾಸಗಳಿವೆಯೇ? ಅದನ್ನು ನೀವು ಹೇಗೆ ನೋಡುತ್ತೀರಿ?
ಪ್ರಸಂಗ ನಡೆನೂ ಕಾಲಕ್ಕೆ ತಕ್ಕಂತೆ ಬದಲಾಗ್ತ ಬಂತು. ಆದರೆ ತೆಂಕಲ್ಲಿ ಅದನ್ನ ಜಾಸ್ತಿ ಇಟ್ಕಂಡಿದಾರೆ. ಪೂರ್ವ ರಂಗ ನಾನು ಎರಡುಘಂಟೆ ನೋಡಿದ್ದಿದೆ. ಸಭಾಲಕ್ಷಣದಿಂದ ಹಿಡಿದು ಸ್ತ್ರೀ ವೇಷ, ಬಾಲಗೋಪಾಲನ ವೇಷ, ಕೋಡಂಗಿ ವೇಷ, ಒಡ್ಡೋಲಗ. ಬಯಲಾಟದಲ್ಲಿ ಒಡ್ಡೋಲಗ ಅರ್ಧ ಗಂಟೆ ರ‍್ತಿತ್ತು. ಅದನ್ನ ಬಡಗಲ್ಲಿ ಪೂರ್ತಿ ತೆಕ್ಕಂಡಿದಾರೆ ಅಂತ ಹೇಳೋ ಧೈರ್ಯ ಮಾಡಬೋದು. ಆದ್ರೆ ತೆಂಕಲ್ಲಿ ಅದನ್ನ ಸ್ವಲ್ಪ ಇಟ್ಕೊಂಡಿದಾರೆ. ಆದರೆ ಬಡಗಲ್ಲೂ ಅದನ್ನ ಶಾರ್ಟ್ ಮಾಡಿ ಇಟ್ಕೊಳ್ಳಬೇಕು. ಅದು ಅಪ್ರೆಂಟಿಸ್‌ಗೆ ಕಲಿಯೋ ಜಾಗ, ಗಂಟೆ ಗಟ್ಟಲೆ ರಂಗಸ್ಥಳದಲ್ಲಿ ಹೇಗೆ ನಿಂತ್ಕೊಬೇಕು, ಅದಕ್ಕೆ ಬೇಕಾದ ಧೈರ್ಯ ಎಲ್ಲಾ ಅಭ್ಯಾಸ ಆಗತ್ತೆ. ಈಗ ಕಲಿಯೋಕೆ ಕೇಂದ್ರಗಳಿವೆ.
ಆದ್ರೆ ಕೇಂದ್ರದಲ್ಲಿ ಕಲಿಯೋದು ಅಂದ್ರೆ ನಾವು ಡ್ರೆöÊವಿಂಗ್ ಸ್ಕೂಲಲ್ಲಿ ಡ್ರೈವಿಂಗ್ ಕಲಿಯೋ ತರ. ನಮಗೆ ಒಂದು ಲೈಸನ್ಸ್ ಸಿಕ್ಕತ್ತೆ. ಕೇಂದ್ರದಲ್ಲಿ ಕಲಿತವರು ಮ್ಯಾಳಕ್ಕೆ ಹೋಗದೆ ಹೋದ್ರೆ ಕಲಿಕೆ ಪೂರ್ತಿಯಾಗಲ್ಲ, ದಿನಾ ಕ್ಯಾದಗೆ ಮುಂದಲೆ ಕಟ್ಟುವವನಿಗೆ ಅದರ ಕಿರಿಕಿರಿ ಏನು ಅಂತ ಗೊತ್ತಿರತ್ತೆ. ಅದನ್ನ ದಿನಾ ಅವನು ಸರಿಮಾಡ್ಕಳ್ತಾ ಹೋಗ್ತಾನೆ. ಆದರೆ ಅಪರೂಪಕ್ಕೆ ಕಟ್ಟುವವನಿಗೆ ಎಲ್ಲಾದರೂ ಒಂದು ದಾರ ಬಿಗಿಯಾದ್ರು ಇಡೀ ಪ್ರದರ್ಶನ ಹಾಳಾಗತ್ತೆ. ವೃತ್ತಿ ಪರರ ಜೀವನಶೈಲಿಯೇ ಬೇರೆ. ಅವರು ರಾತ್ರಿಯಿಡೀ ನಿದ್ದೆಗೆಡ್ತಾರೆ. ಈಗ ಕಾಲಮಿತಿ ಬಂದಿದ್ದರಿಂದ ಕೆಲವರಿಗೆ ನಿದ್ದೆ ಸಿಗತ್ತೆ. ಆದರೆ ಒಂದು ನಾವು ಏನು ಯೋಚಿಸಬೇಕು ಅಂದ್ರೆ ಮ್ಯಾಳದವರಲ್ಲಿ ಸ್ವಲ್ಪ ಶಾಲಾಶಿಕ್ಷಣ ಪಡೆದವರು ಕಡಿಮೆ. ಅಕ್ಷರ ಜ್ಞಾನ ಇರಲ್ಲ ಅಂತಲ್ಲ. ಯಕ್ಷಗಾನಕ್ಕೆ ಎಷ್ಟು ಅಗತ್ಯವೋ ಅದನ್ನ ಅಭ್ಯಾಸದಿಂದ ಕಲಿತರ‍್ತಾರೆ. ಅವರ ಪರಿಸ್ಥಿತಿ ಹಾಗಿರುವಾಗ ನಾವು ತೀರಾ ಹೇಳೋಕೆ ಬರೋಲ್ಲ.
ಯಕ್ಷಗಾನದಲ್ಲಿ ಹಲವು ರೀತಿಯ ಪ್ರೇಕ್ಷಕರಿದಾರೆ. ಅವರ ಅಭಿರುಚಿಯ ಬಗ್ಗೆ ಹೇಳಿ…
ದೋಸೆ ತಿನ್ನೋರು, ಉಪ್ಪಿಟ್ಟು ತಿನ್ನೋರು ಬೇರೆ ಬೇರೆ. ಯಾರು ಯಾವ ರೀತಿಯ ಯಕ್ಷಗಾನ ಮಾಡಿಸ್ತಾರೆ, ನೋಡ್ತಾರೆ ಅನ್ನೋದು ಬೇರೆ ರೀತಿಯಾಗಿ ಇದ್ದೆ ಇರತ್ತೆ. ಬೆಳತನಕದ ಆಟದಲ್ಲಿ ಕೂಡ ೧೨ ಗಂಟೆ ತನಕ ಕೂರುವವರು, ಎದ್ದು ಹೋಗುವವರು ಇರುತ್ತಾರೆ. ನಾನು ಸುಮಾರು ೨೫ ವರ್ಷಗಳ ಹಿಂದೆ ಒಂದು ಪ್ರದರ್ಶನಕ್ಕೆ ಬೆಳಗಿನ ಜಾವಕ್ಕೆ ಹೋಗ್ತಿದ್ದೆ. ಶೂದ್ರ ತಪಸ್ವಿ ಪ್ರಸಂಗದಲ್ಲಿ ಕಣಿ ಪದ್ಯ ಅಂತ ಇತ್ತು. ಬೆಳಗಿನ ಜಾವಕ್ಕೆ ಎದ್ದು ಸುಬ್ರಹ್ಮಣ್ಯ ಧಾರೇಶ್ವರ ಅವರ ಧ್ವನಿಯಲ್ಲಿ ಆ ಪದ್ಯ ಕೇಳ್ಬೇಕು ಅಂತ್ಲೇ ಹೋಗ್ತಿದ್ದೆ. ಕಾಳಿಂಗ ನಾವುಡರು ಇದ್ದಾಗ್ಲೂ ಅಷ್ಟೆ. ಸುಮಾರು ಸಲ ಬೆಳಗಿನ ಜಾವಕ್ಕೆ ಹೊಗ್ತಿದ್ದುದುಂಟು. ಆಮೇಲೆ ಧರ್ಮಸ್ಥಳ ಮ್ಯಾಳದಲ್ಲಿ ಬೌಮಾಸುರ ಕಾಳಗ ಪ್ರಸಂಗದಲ್ಲಿ ೪ ಗಂಟೆಗೆ ‘ಪೌಂಡರೀಕ ವಾಸುದೇವ’ ಅಂತ ಇರ‍್ತಿತ್ತು, ಎಷ್ಟು ಆಕರ್ಷಣೆ ಇತ್ತು ಅಂದ್ರೆ, ಅದಕ್ಕೂ ಬೆಳಗಿನ ಜಾವ ಎದ್ದು ಹೋಗ್ತಿದ್ವಿ. ನಮಗೆ ನಿದ್ದೆನೂ ಆಗತ್ತೆ, ದುಡ್ಡು ಕೊಡ್ಬೇಕಿಲ್ಲ, ಮನರಂಜನೆನೂ ಆಗತ್ತೆ. ಯಕ್ಷಗಾನ ಅವರವರ ಇಷ್ಟಕ್ಕೆ ಅವರವರು ಹೋಗ್ತಾರೆ. ಅದಕ್ಕಾಗಿ ಯಕ್ಷಗಾನ ಬೇರೆ ಬೇರೆ ರೀತಿಯಾಗತ್ತೆ. ಅದು ಸಹಜ. ಹಂಚಿನ ಮನೆ, ಟೆರೆಸ್ ಮನೆ ತರ. ಹಂಚಿನ ಮನೆ ವಾತಾವರಣ ಬೇರೆ, ಟೆರೇಸ್ ಮನೆದು ಬೇರೆ.
ಕಾಲಮಿತಿ ಮತ್ತು ಇಡೀರಾತ್ರಿ ಯಕ್ಷಗಾನದಲ್ಲಿ ಪ್ರೇಕ್ಷಕನ ತೊಡಗಿಕೊಳ್ಳುವಿಕೆಯಲ್ಲಿ ವ್ಯತ್ಯಾಸಗಳಿದೆಯಾ?
ಬಯಲಾಟದಲ್ಲಿ ಇಡೀ ರಾತ್ರಿ ಯಕ್ಷಗಾನ ನೋಡುವಾಗ ಬೆಳಗಿನ ಜಾವ ಎರಡು ಗಂಟೆಯ ಹೊತ್ತಿಗೆ ನಾವು ಒಂತರಾ ಟ್ರಾನ್ಸ್ ನಲ್ಲಿ ಇರ್ತೀವಿ. ಅದು ಒಂದು ಗಾಢ ನಿದ್ರೆಯ ಕಾಲ. ಇನ್ನೊಂದು ಈ ಸೌಂಡ್, ಶೃತಿ ಜಾಸ್ತಿ ಆಗ್ತಿದ್ದಾಗ ನೀವು ಅವರ ಜಗತ್ತಿಗೆ ಪ್ರವೇಶಿಸಿಬಿಡ್ತೀರಿ. ಅದನ್ನ ತೆಂಕಲ್ಲಿ ಆ ಗುಂಗನ್ನು ಇನ್ನೂ ಚೆನ್ನಾಗಿ ಅನುಭವಿಸ್ಬೋದು. ದೇವಿ ಮಹಾತ್ಮೆ ಪ್ರಸಂಗದಲ್ಲಿ ಒಮ್ಮೆ ಸ್ಲೋ ನಡೆ ಇರತ್ತೆ, ಆಮೇಲೆ ಫಾಸ್ಟ್ ಇರತ್ತೆ. ಒಂದ್ಸಲ ದೇವತೆಗಳು ಬರ‍್ತಾರೆ, ಒಂದ್ಸಲ ರಾಕ್ಷಸರು ಬರ‍್ತಾರೆ. ನಾಲ್ಕು ಗಂಟೆಗೆ ಪ್ರಸಂಗ ನಡೆ ಇನ್ನೂ ಸ್ಪೀಡ್‌ನಲ್ಲಿ ಬರತ್ತೆ. ನೋಡವ್ನು ಪ್ರಭಾವಕ್ಕೊಳಗಾಗ್ತಾನೆ. ಕಾಲಮಿತಿಯಲ್ಲಿ ಅದು ಸಿಗಲ್ಲ-ಅವರ ಭಾಷೆನಲ್ಲೇ ಹೇಳೋದಾದ್ರೆ ಒಂದನೆ ಕಾಲ, ಎರಡನೆ ಕಾಲ, ಅಂತ ಶೃತಿ ಏರಿಸ್ತಾ ಹೋಗೋದು. ಅದರ ಪರಿಣಾಮ ಅನುಭವಿಸುವುದಕ್ಕೆ ಅವಕಾಶ ಸಿಗಲ್ಲ. ಆದ್ರೆ ಈಗಿನ ನಮ್ಮ ಟೈಮ್‌ನಲ್ಲಿ ಇಡೀರಾತ್ರಿ ಯಕ್ಷಗಾನ ಮಾಡೋಕೆ ಆಗ್ತಿಲ್ಲ. ಹಾಗಂತ ಪೂರ್ತಿ ಕಾಲಮಿತಿ ಬಂದ್ರೆ ಅದು ಒಳ್ಳೇದಲ್ಲ. ಮೊದಲು ೧೨ ಜನರ ಮೇಳ ಇದ್ರೆ ಈಗ ೨೨ ಜನರ ಮೇಳ ಇದೆ. ಇಡೀರಾತ್ರಿಯ ಆಟದಲ್ಲಿ ಒಬ್ಬ ಕಲಾವಿದರು ಎರಡು ಮೂರು ವೇಷ ಹಾಕ್ತಾರೆ. ಕಲಿಯೋವರಿಗೆ ಅದು ತುಂಬಾ ಒಳ್ಳೇದು. ಧರ್ಮಸ್ಥಳ ಮೇಳದವ್ರು ಈ ವರ್ಷದಿಂದ ಕಾಲಮಿತಿ ಮಾಡಿದ್ದಾರೆ. ಹೊಸನಗರ ಮೇಳದವ್ರು ೧೦ ವರ್ಷದಿಂದ ಯಶಸ್ವಿಯಾಗಿ ಕಾಲಮಿತಿ ಮೇಳ ನಡೆಸಿಕೊಂಡು ಬರ‍್ತಿದಾರೆ. ಆದರೆ ಅವಕಾಶ ಇದ್ದ ಕಡೆಗಳಲ್ಲಿ ಅಂತಹ ಮೇಳಗಳು ಈಗಲೂ ಇಡೀರಾತ್ರಿ ಆಟ ಮಾಡಬಹುದು. ಜಾತ್ರೆ ಮತ್ತು ಶನಿವಾರ ಬಂದಾಗಾದರೂ ಆಡಬೇಕು. ಇದು ಆಗಬೇಕು ಅಂತ ಬಯಸಬಹುದು ಹೊರತು ಅದು ಹಾಗೆ ಆಗುತ್ತೊ ಇಲ್ವೊ ಅಂತ ಗೊತ್ತಾಗಲ್ಲ.
ಯಕ್ಷಗಾನ ಜನಪದರ ಕಲೆ. ಅದು ಜನರು ಬದಲಾಯಿಸಿದ ಹಾಗೆ ಬದಲಾಗ್ತ ನಡೆಯೋದು. ಜನರಿಗಾಗಿ ಬದಲಾಗೋದು ಅಂತಲ್ಲ. ಹಂಗಾದ್ರೆ ಜನರಿಗಾಗಿ ಯಾರೋ ಮಾಡೋದು ಅಂತಾಗಿಬಿಡತ್ತೆ. ಒಟ್ಟು ಕಾಲಕ್ಕೆ ತಕ್ಕಂತೆ ಬದಲಾಗತ್ತೆ. ಉಪ್ಪೂರರು ಅವರ ಹಿಂದಿನವರಿಗಿಂತ ತುಂಬಾ ಬೇರೆಯಾಗಿ ಹಾಡಿದಾರೆ, ಆ ಕಾಲದಲ್ಲಿ ಅವರಿಗೆ ಬೈದವರು ಇದ್ದಾರೆ. ಆಮೇಲೆ ನನ್ನ ಕಾಲದಲ್ಲಿ ಕಾಳಿಂಗ ನಾವುಡ ಬೇರೆ ಮಾಡಿದ ಅಂತ ಬೈದ್ರು. ಕಾಳಿಂಗ ನಾವುಡರನ್ನು ನಾನು ಬೇಕಷ್ಟು ಸಲ ಕೇಳಿದೀನಿ. ಈಗ ಅವರನ್ನು ಹೊಗಳಿ, ಹೊಸಬರು ಸರಿ ಇಲ್ಲ ಅಂತಾರೆ. ಯಕ್ಷಗಾನ ಅದರ ಪಾಡಿಗೆ ಅದು ಹೋಗತ್ತೆ. ಜನ ಎಲ್ಲೀತನಕ ಅದನ್ನ ಇಷ್ಟ ಪಡ್ತಾರೋ ಅಲ್ಲೀತನಕ ಅದು ನಡೆಯತ್ತೆ. ಬೇರೆ ಬೇರೆ ಜನ ಬೇರೆ ಬೇರೆ ತರ ನೋಡ್ತಾರೆ ಅಷ್ಟೆ.
ಈ ಮಾತುಗಳ ಹಿನ್ನಲೆಯಲ್ಲಿ ಯಕ್ಷಗಾನದ ಔಚಿತ್ಯ ಅಂದ್ರೆ ಏನು?
ಔಚಿತ್ಯ ಅಂದ್ರೆ ಒಂದು ಬೇಸಿಕ್ ರೂಲ್ಸ್ ಇರ‍್ತದೆ. ಭಾಗವತರನ್ನ ನಿರ್ದೇಶಕ ಅಂತಾರೆ, ಯಕ್ಷಗಾನಕ್ಕೆ ನಿರ್ದೇಶಕ ಇರುವುದಿಲ್ಲ. ಅದು ಪೂರ್ವನಿರ್ದೇಶಿತ. ಅಂದ್ರೆ ಯಕ್ಷಗಾನಕ್ಕೆ ನಿರ್ದೇಶನ ಇಲ್ಲ ಅಂತ ಅಲ್ಲ, ಒಂದು ಪಾತ್ರ ಭಾಗವತನ ಪಕ್ಕ ಎಡಕ್ಕೆ ಬರ‍್ಬೇಕು ಅಂದ್ರೆ ಎಡಕ್ಕೆ ಬರ‍್ಬೇಕು. ಎಲ್ಲೋ ಅಪರೂಪಕ್ಕೆ ಲವ-ಕುಶನಂತಹ ಪಾತ್ರಗಳು ಎರಡು ಕಡೆಯಿಂದ ಬರೋ ಹಾಗೆ ಮಾಡ್ಕೋತ್ತಾರೆ. ಅದು ಪರ್ಮಿಟೆಡ್ ಅಲ್ಲ. ಒಬ್ಬರಾದ ಮೇಲೆ ಒಬ್ಬರು ಎಡಕ್ಕೇ ಬರ‍್ಬೇಕು. ನಾಟಕದ ರೀತಿಯ ನಿರ್ದೇಶನ ಇಲ್ಲಿ ಇಲ್ಲ. ಅದು ಆಗುವುದೂ ಇಲ್ಲ. ಪಾತ್ರದವನಿಗೆ ಹೇಗೆ ಕ್ಯಾದಗೆ ಮುಂದಲೆ ಕಟ್ಟೋದು ಅಂತ ಗೊತ್ತಿರತ್ತೆ, ಭಾಗವತನಿಗೆ ತನ್ನ ಕೆಲಸ ಗೊತ್ತಿರತ್ತೆ. ಕುಣಿಯುವವರಿಗೆ ಯಾವ ತಾಳಕ್ಕೆ ಹೇಗೆ ಕುಣಿಯಬೇಕು ಅಂತ ಗೊತ್ತಿರತ್ತೆ. ಭಾಗವತನ ಕೆಲಸ ಎಡಿಟ್ ಮಾಡುವುದು. ಇವತ್ತಿಗೆ, ಈ ಸಂದರ್ಭಕ್ಕೆ ಈ ಭಾಗ ಬೇಕು/ಬೇಡ ಅಂತದ್ದು ಅವರು ನಿರ್ಧಾರ ಮಾಡ್ತಾರೆ. ಇವತ್ತಿನ ಉಪ್ಪಿಟ್ಟಿಗೆ ಹಸಿಮೆಣಸು ಬೇಡ ಅನ್ನೋತರ.
ಬೆಳಗಿನ ಜಾವ ೫:೨೦ ಕ್ಕೆ ರತಿ ಕಲ್ಯಾಣ ಪ್ರಸಂಗ ಆಗ್ಬೇಕಿತ್ತು ಅಂತಿಟ್ಕೊಳ್ಳೋಣ. ೨೬ ಪಾತ್ರಗಳಿವೆ ಅದರಲ್ಲಿ, ರಘುರಾಮ ಹೊಳ್ಳರು ೪೦ ನಿಮಿಷದಲ್ಲಿ ಅದನ್ನ ಮುಗಿಸಿದರು. ಅದು ಭಾಗವತನ ಅಂದಾಜು. ಇರೋ ಸಮಯದಲ್ಲಿ ನಾನು ಯಾವ ಪಾತ್ರಕ್ಕೆ ಪ್ರಾಮುಖ್ಯತೆ ಕೊಟ್ಟು ಹೇಗೆ ಅದನ್ನ ಮುಗಿಸಬೇಕು ಅನ್ನೋದು. ಅದನ್ನ ಭಾಗವತರು ಮಾಡೋದು. ಕೆಲವೊಮ್ಮೆ ಪಾಪದ ಭಾಗವತರನ್ನ ಬದಿಗೆ ಸರಿಸಿ ನಿರ್ದೇಶಕ ಅಂತ ಹೊರಗಿನಿಂದ ಬಂದು ಕೂತರೆ ಅದು ಸರಿಯಲ್ಲ. ಹಿಂದಿಂದಲೂ ಇಡೀರಾತ್ರಿಯ ಯಕ್ಷಗಾನದಲ್ಲೂ ೩ ತಾಸಿನ ಅವಧಿಯಲ್ಲಿ ಮಾಡುವ ಪ್ರಸಂಗ ಇತ್ತು. ಅದನ್ನೆ ಕಾಲಮಿತೀಲಿ ಈಗ ಪ್ರದರ್ಶಿಸುತ್ತಾರೆ. ಇಡೀ ರಾತ್ರಿಯ ಪ್ರಸಂಗವನ್ನು ಮೂರು ಗಂಟೆಗೆ ಮಾಡಿದ್ರೆ ಸರಿಹೋಗಲ್ಲ. ಕಾಲಮಿತಿಗೆ ಕೆಲವೊಂದು ಪ್ರಸಂಗಗಳು ಮಾತ್ರ ಒಳ್ಳೆದಾಗ್ತದೆ. ಈಗ ಧರ್ಮಸ್ಥಳ ಮ್ಯಾಳದವರು ದೇವಿ ಮಹಾತ್ಮೆ ಪ್ರಸಂಗವನ್ನು ೫ ತಾಸಿನ ಅವಧಿಗೆ ಎಡಿಟ್ ಮಾಡ್ಕೊಂಡಿದಾರೆ. ಅದು ಅಷ್ಟು ರಸವತ್ತಾಗಿ ಕಾಣೋದಿಲ್ಲ. ಅದೇ ಹೊಸನಗರ ಮ್ಯಾಳದವರು ಏನ್ಮಾಡ್ತಾರೆ ಅಂದ್ರೆ, ಅದನ್ನ ಅವರು ಅರ್ಧ ಮಾಡ್ಕೊಂಡಿದಾರೆ. ‘ಮೇದಿನಿ ನಿರ್ಮಾಣ’ ದಿಂದ ‘ಮಹಿಷವಧೆ’ಗೆ ಪ್ರಸಂಗ ತಂದು ನಿಲ್ಲಿಸ್ತಾರೆ. ಅಥವಾ ಮಹಿಷವಧೆಯಿಂದ ಶಾಂಭವಿ ವಿಲಾಸದ ತನಕ ಮಾಡ್ತಾರೆ.
ಇತ್ತೀಚೆಗೆ ಅವರನ್ನು ಕಂಡು ಈ ಬಗ್ಗೆ ಪ್ರಸ್ತಾಪಿಸಿದಾಗ ಒಂದೆರಡು ಮಾತುಗಳನ್ನು ಸೇರಿಸಿದ್ದರು. ಅದನ್ನು ಇಲ್ಲಿ ಉಲ್ಲೇಖಿಸುವುದಾದರೆ :
“ಈಗೀಗ ಪದವೀಧರ ಕಲಾವಿದರು ಯಕ್ಷಗಾನಕ್ಕೆ ಬರುತ್ತಿದ್ದಾರೆ, ಒಮ್ಮೊಮ್ಮೆ ಎರಡು ಕೆಲಸ ಮಾಡುವವರು ಇರುತ್ತಾರೆ. ರಾತ್ರಿ ಆಟ, ಹಗಲು ಬೇರೆ ಕೆಲಸ. ಒಂದೇ ಕೆಲಸದಲ್ಲಿ ಸಿಗುವ ಸಂಬಳ ಸಾಕಾಗದಂತಹ ಪರಿಸ್ಥಿತಿಯು ಇದೆ. ಇದರ ಜೊತೆಗೆ ದಿನಾ ನಿದ್ದೆಗಣ್ಣಲ್ಲಿ ಬೆಳಗಿನ ಜಾವದಲ್ಲಿ ಓಡಾಡುವುದರಿಂದ ಹಲವು ಅವಘಡಗಳಾಗುತ್ತಾ ಇದೆ. ಆದರೆ ಹಿಂದಿನ ಕಾಲದಂತೆ ಮನೆ ಬಿಟ್ಟು ಅಷ್ಟು ದಿನ ಇರುವಂತಹ ವಾತವರಣ ಕುಟುಂಬದಲ್ಲಿ ಇರೋಲ್ಲ. ಇದೆಲ್ಲದರಿಂದ ಯಕ್ಷಗಾನದ ಸ್ಥಿತ್ಯಂತರವಾಗುತ್ತಾ ಹೋಗುತ್ತದೆ. ಯಾವುದನ್ನು ಬೇಕು ಅಥವಾ ಬೇಡ ಅನ್ನುವುದು ಕಷ್ಟ. ಒಂದು ಮಿತಿಯೊಳಗೆ ಎಲ್ಲವೂ ಆಗುತ್ತಿರಬೇಕೆಂಬ ಹಾರೈಕೆಯನ್ನಷ್ಟೇ ನಾವಿಟ್ಟುಕೊಳ್ಳಬಹುದು” .
ಕೃತಿ ಹೊಸನಗರ ತಾಲ್ಲೂಕಿನ ಪುರಪ್ಪೇಮನೆ ಗ್ರಾಮದವರು. ಕೃಷಿಕರು. ಬಿಡುವಿನಲ್ಲಿ ಮಹಿಳಾ ತಾಳಮದ್ದಲೆ ತಂಡ, ಭಾಗವತಿಕೆ, ಬರವಣಿಗೆ ಹಾಗೂ ಅನುವಾದದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.
ಒಳ್ಳೆಯ ಲೇಖನ. ಯಕ್ಷಗಾನ ದ ಬಗ್ಗೆ ಹೀಗೆ ಒಳ್ಳೆಯ ಲೇಖನ ಬರಲಿ.