ಒಂದು ಕಾಲದ ನಮ್ಮ ಹಿಂದಿ ಕವಿಗಳಾದ ಬಚ್ಚನ್, ನಿರಾಲಾ, ಸುಮಿತ್ರಾನಂದನ್ ಪಂತರಂತಹ ಲೇಖಕರು ರೂಪಿಸಿಕೊಂಡಿದ್ದ ಆಜ್ಞೆಯತಾವಾದದ ಇನ್ನೊಂದು ಉದಾರೀಕೃತ ತಾತ್ವಿಕ ಸುಕುಮಾರ ರೂಪವೇ ಈ ಕಾದಂಬರಿಯ ಅಡಿಪಾಯದಲ್ಲೂ ಇದೆ ಎನ್ನಿಸುತ್ತದೆ. ಹಾಗೆಂದ ಮಾತ್ರಕ್ಕೆ ಈ ಬಗೆಯಲ್ಲಿ ರಸರಮ್ಯಲೋಕವೊಂದನ್ನು ಕಟ್ಟಿಕೊಡುವ ಕಥನಗಳು ಇಲ್ಲಿವೆ. ರಾಘವೇಂದ್ರ ಪಾಟೀಲರ “ಗೈರ ಸಮಜೂತಿ” ಕಾದಂಬರಿಯ ಕುರಿತು ಮಾಲಿನಿ ಗುರುಪ್ರಸನ್ನ ಬರಹ
ರಾಘವೇಂದ್ರ ಪಾಟೀಲರ ಗೈರ ಸಮಜೂತಿ ಮೊಟ್ಟಮೊದಲು ನನ್ನನ್ನು ಸೆಳೆದದ್ದು ಅದರ ಜವಾರಿ ಭಾಷೆಯಿಂದ. ಹೆಸರೂ ಅಲ್ಲಿನ ನೇಟಿವಿಟಿಯದ್ದೇ ಆಗಿರುವ ಕಾರಣದಿಂದ ಕಾದಂಬರಿಗೊಂದು ವಿಶಿಷ್ಟ ಘಮಲು ಪ್ರಾಪ್ತವಾಗಿದೆ. ಸಾಮಾನ್ಯವಾಗಿ ಪಾಟೀಲರ ಕೃತಿಗಳು ಅವರ ಮಣ್ಣಿನವೇ ಆಗಿರುತ್ತವೆ ಮತ್ತು ಆ ಪರಿಸರದ ಭಾಷೆಯನ್ನೇ ಬಳಸಿರುತ್ತವಾದರೂ ಈ ಕಾದಂಬರಿಯ ವ್ಯಾಪ್ತಿ ಬಹಳ ಹಿರಿದು.
ಕಟು ವಾಸ್ತವವನ್ನು ಹೇಳುತ್ತಾ, ಎದುರಾಗುವ ಪರಿಸ್ಥಿತಿಗಳನ್ನು ಎದುರಿಸಲಾಗದೆ ಹತಾಶರಾಗಿ ಕೈಚೆಲ್ಲಿ ಕೂರುವ, ತನ್ಮೂಲಕ ವಸ್ತು ಸ್ಥಿತಿಯ ದಾರುಣತೆಯನ್ನು ಮನದಟ್ಟು ಮಾಡಿಕೊಡುವ ಕೃತಿಗಳ ರೀತಿ ಒಂದು ಬಗೆಯದು. ಶಿವರಾಮ ಕಾರಂತರ ಚೋಮನ ದುಡಿಯಲ್ಲಿನ ಚೋಮ ಕೊನೆಯಲ್ಲಿ ದಾಟಲಾಗದೆ ಅಸಹಾಯಕನನ್ನಾಗಿಸಿ ನಿಲ್ಲಿಸಿ ಅಂತಹಾ ಅಸಂಖ್ಯ ಚೋಮರ ಸ್ಥಿತಿಗತಿಗಳನ್ನು ಮನದಟ್ಟು ಮಾಡಿಕೊಡುವುದು ಒಂದು ಬಗೆ. ಪರಿಸ್ಥಿತಿಯ ದಾರುಣತೆಯನ್ನು ಪಾತ್ರಗಳನ್ನು ಅಂತಹಾ ಅಸಹಾಯಕ ಸ್ಥಿತಿಯಲ್ಲಿ ನಿಲ್ಲಿಸಿ ಅರಿವಾಗಿಸುವುದು ಹೊಸತೇನಲ್ಲ. ಎಂ. ಕೆ. ಇಂದಿರಾ ಅವರಂತಹ ಮಹಿಳಾ ಕಾದಂಬರಿಕಾರರೂ ಗೆಜ್ಜೆಪೂಜೆಯಲ್ಲಿ ಮಾಡಿರುವುದು ಇದನ್ನೇ.
ಇದಕ್ಕೆ ತದ್ವಿರುದ್ಧವಾದ ಅಥವಾ ಇದಕ್ಕಿಂತ ಭಿನ್ನವಾದ ರೀತಿಯಲ್ಲಿ ಕಥೆಯನ್ನು ಮುಗಿಸುತ್ತಾ ಹೀಗಿತ್ತು.. ಹೀಗಾದರೆ ಚೆನ್ನು ಎಂದು ಹೇಳುವ, ತನ್ಮೂಲಕ ಆ ರೀತಿಯ ಬದಲಾವಣೆಯ ಕಡೆಗೆ ದೃಷ್ಟಿ ಹರಿಸಲೆತ್ನಿಸುವುದು ಇನ್ನೊಂದು ಬಗೆ. ಈ ಕಾದಂಬರಿಯನ್ನೇ ನೋಡುವುದಾದರೆ ಒಂದು ಕಾಲದ ನಮ್ಮ ಹಿಂದಿ ಕವಿಗಳಾದ ಬಚ್ಚನ್, ನಿರಾಲಾ, ಸುಮಿತ್ರಾನಂದನ್ ಪಂತರಂತಹ ಲೇಖಕರು ರೂಪಿಸಿಕೊಂಡಿದ್ದ ಆಜ್ಞೆಯತಾವಾದದ ಇನ್ನೊಂದು ಉದಾರೀಕೃತ ತಾತ್ವಿಕ ಸುಕುಮಾರ ರೂಪವೇ ಈ ಕಾದಂಬರಿಯ ಅಡಿಪಾಯದಲ್ಲೂ ಇದೆ ಎನ್ನಿಸುತ್ತದೆ. ಹಾಗೆಂದ ಮಾತ್ರಕ್ಕೆ ಈ ಬಗೆಯಲ್ಲಿ ರಸರಮ್ಯಲೋಕವೊಂದನ್ನು ಕಟ್ಟಿಕೊಡುವ ಕಥನಗಳು ತೌಲನಿಕ ಜಿಜ್ಞಾಸೆಯ ಕೃತಿಗಳಿಗಿಂತ ಕಡಿಮೆ ಧಾರಣ ಶಕ್ತಿಯುಳ್ಳವು ಎಂದು ಹೇಳಲು ಬರುವುದಿಲ್ಲ. ಅಲ್ಲಿ ಯಾವ ತಾರತಮ್ಯದ ಸಾಧ್ಯತೆಯೂ ಇಲ್ಲ. ಏಕೆಂದರೆ ಸೃಜನಶೀಲತೆಯ ಸೊಗಡು ಯಾವ ಕೃತಿಯ ಅಡುಗೆಯಲ್ಲಿ ಯಾವ ಓದುಗನ ನಾಲಗೆಗೆ ಹೇಗೆ ದಕ್ಕುತ್ತದೆ ಎಂಬ ಬಗ್ಗೆ ಸಿದ್ಧ ಸೂತ್ರಗಳು ಇಲ್ಲ. ಇಲ್ಲಿ ಏಕ ವ್ಯಂಜನ ಪ್ರಯೋಗ ಸಾಧ್ಯವೇ ಇಲ್ಲ.
ಪಾಟೀಲರ ಬರಹಗಳನ್ನು ದಶಕಗಳಿಂದ ಓದಿಕೊಳ್ಳುತ್ತಾ ಬಂದ ನನಗೆ ಅವರ ಬಂಡಾಯದ ಮನಸ್ಥಿತಿಯ ಪಾತ್ರಗಳು ಚಿರಪರಿಚಿತ. ‘ಒಡಪುಗಳು’ ಕಥೆಯ ಹನುಮಿ ಕೊಡುವ ಒಡಪನ್ನು ಒಡೆಯಲೆತ್ನಿಸುತ್ತ ಕುಳಿತುಕೊಳ್ಳುವ ನಾಯಕನಿಗಿಂತ ಹನುಮಿಯ ನಿರ್ಭೀತ ಪ್ರಶ್ನೆ ಕಾಡುತ್ತಲೇ ಇರುತ್ತದೆ. ತೇರು ಕಾದಂಬರಿಯ ನಾಯಕನ ಮನಸ್ಥಿತಿ ಕೂಡ ಬಂಡಾಯದ್ದೇ ಆಗಿದೆ. ಹೀಗೆ ಬಂಡಾಯದ ಮನಸ್ಥಿತಿಯ ಪಾತ್ರಗಳನ್ನು ತಮ್ಮ ಕೃತಿಗಳಲ್ಲಿ ಬಿಂಬಿಸುತ್ತಾ ಹೋದ ಪಾಟೀಲರ ಕೃತಿಗಳನ್ನು ಓದಿದ್ದ ನನಗೆ ಈ ಕಾದಂಬರಿಯ ಮೊದಲ ಓದು ಅಚ್ಚರಿಯಲ್ಲಿ ಕೆಡಹಿತು. ಪಾಟೀಲರ ಭಾವಪೂರ್ಣ ಅಭಿವ್ಯಕ್ತಿ, ಅವರು ಕಾಲದ ಜೊತೆ ಇಟ್ಟುಕೊಂಡ ಒಂದು ಅಲ್ಟಿಮೇಟ್ ಸಂಬಂಧ, ಅವರು ಎತ್ತಿರುವ ಸಮಸ್ಯೆಗಳು ಬಹಳ ಸವಿಸ್ತಾರವಾಗಿ ರಸಪೂರ್ಣ ವಿವರಗಳನ್ನು ಕಟ್ಟಿಕೊಡುತ್ತಾ ಸಾಗುವ ಈ ಕೃತಿಯ ಕಾಲ ಸ್ವತಂತ್ರ ಪೂರ್ವದ್ದು, ವಿಚಾರಗಳು ಬಹಳ ಹಿಂದಿನದು.. ಅಲ್ಲಿದ್ದ ನಂಬಿಕೆಗಳು ಬಹಳ ಪೂರ್ವದ್ದು.. ಬಾಲ್ಯ ವಿವಾಹವನ್ನು ಸಂಭ್ರಮಿಸುವ ಕಾಲದ್ದು. ಆದರೆ ಬರೆಯುತ್ತಿರುವ ಕಾದಂಬರಿಕಾರ ಆಧುನಿಕ ಕಾಲದ ಪ್ರಗತಿಪರ ಮನೋಭಾವವುಳ್ಳವರು. ಓದುಗರು ಆಧುನಿಕತೆಯಲ್ಲಿ ಮಿಂದೆದ್ದು ಇಂತಹ ವಿಚಾರಗಳ ಕುರಿತು ಚಿಕಿತ್ಸಕ ನೋಟ ಬೀರುವವರು. ಹೀಗಿರುವಾಗ ಓದುಗನ ಮುಂದೆ ಬಂದುನಿಲ್ಲುವ ಪ್ರಮುಖ ಸವಾಲುಗಳೇನು? ಒಬ್ಬ ಆಧುನಿಕ ಕಾದಂಬರಿಕಾರನ ಆಶಯವೇನು ಎನ್ನುವುದನ್ನು ನಿರ್ಣಯಿಸಿ ಕೃತಿಯ ಒಟ್ಟೂ ಆಕೃತಿಯನ್ನು ಅಜಮಾಯಿಸಿಕೊಳ್ಳುವುದು? ಜೀವನದ ಮೌಲ್ಯಗಳ ಹಲವು ದತ್ತ ರೂಪಗಳನ್ನು ಮುಖಾಮುಖಿಯಾಗಿಸಿ ಆತ ಸರಿ ತಪ್ಪುಗಳನ್ನು ನಿರ್ಣಯಿಸುತ್ತಿದ್ದಾನೆಯೋ ಅಥವಾ ಇದು ಸರಿ ಎಂದು ಗೊತ್ತಿದ್ದರೂ ಅದನ್ನು ಅನುಸಂಧಾನ ಮಾಡಿಕೊಳ್ಳುವುದು ಎಷ್ಟು ಕಷ್ಟ ಎಂದು ಹೇಳುತ್ತಿದ್ದಾನೆಯೋ ಅಥವಾ ಇಂತಹಾ ಸಂಕಷ್ಟದ ಸಂಕಟದಲ್ಲಿಯೂ ಹೇಗೆ ಕೆಲವರು ಗೆದ್ದು ಬದುಕುತ್ತಿದ್ದಾರೆ ನೋಡಿ ಎಂದು ತೋರಿಸುತ್ತಿದ್ದಾನೆಯೋ ಇದೆಲ್ಲವೂ ಬಹಳ ಕಷ್ಟಕರ ಮತ್ತು ಸಂಕೀರ್ಣ ನಿರೀಕ್ಷೆಗಳು. ಇಂತಹಾ ನಿರೀಕ್ಷೆಗಳ ಕುರಿತು ಕಾದಂಬರಿಕಾರ ಏನು ಹೇಳಬಹುದು? ನನಗೂ ಇಂತಹಾ ವಿಷಯಗಳಿಗೂ ಸಂಬಂಧವಿಲ್ಲ, ನಾನು ಕೇವಲ ಒಂದು ಜೀವನಾನುಭವ ಸಮುಚ್ಚಯದ ಚೆಲುವಾದ ರೂಪವನ್ನು ಚಿತ್ರಿಸಿರುವೆ.
ಹಾಗೆ ನಿಮ್ಮ ಮುಂದೆ ಇಡುವುದಷ್ಟೇ ನನ್ನ ಹೊಣೆ ಎನ್ನಬಹುದೇ? ಅಥವಾ ಅವುಗಳನ್ನು ನಿಮ್ಮ ನಿಮ್ಮ ಹಿನ್ನೆಲೆಯಲ್ಲಿ ನೀವು ಅರ್ಥೈಸಿಕೊಳ್ಳುವುದರ ಮೂಲಕ ಅದಕ್ಕೆ ಬಹು ಆಯಾಮಗಳು ದಕ್ಕುವಂತಾಗಲಿ ಎನ್ನಬಹುದೇ? ಜೀವನ ಮೌಲ್ಯಗಳ ತೌಲನಿಕ ಜಿಜ್ಞಾಸೆ ಮುಖ್ಯವೋ ಅಥವಾ ಸುಂದರವಾದ ಅನುಭವ ಲೋಕದ ಸಚಿತ್ರ ಅಭಿವ್ಯಕ್ತಿ ಮುಖ್ಯವೋ ಎನ್ನುವುದು ಕೂಡಾ ಅಷ್ಟೇ ಮುಖ್ಯ ಪ್ರಶ್ನೆಯಾಗುತ್ತದೆ.. ಜೀವನ ಮೌಲ್ಯಗಳ ಜಿಜ್ಞಾಸೆ ಓದುಗನಿಗೆ ಕಾಣುವಂತೆ ಕಾದಂಬರಿಯಲ್ಲಿ ತರುವುದು ಮುಖ್ಯವೋ, ಸಚಿತ್ರ ಅಭಿವ್ಯಕ್ತಿಯ ಮೂಲಕ ಅದು ತರಕಾರಿಯೊಳಗಿನ ಕ್ಯಾಲ್ಸಿಯಂ ನಂತೆ ಅರಿವಿಲ್ಲದೆ ರಕ್ತಗತವಾಗುವುದು ಮುಖ್ಯವೋ? ಯಾವ ಕಾಲದಲ್ಲಿ ನಿಂತು ಬರೆಯುತ್ತಿದ್ದಾರೋ ಆ ಕಾಲದ ಸಮಸ್ಯೆಗಳ ಬಗ್ಗೆ ಬರೆಯುವಾಗ, ಆ ಸಮಸ್ಯೆಗಳ ಪರಿಹಾರದ ಕುರಿತು ಯತ್ನಿಸುವಾಗ ಆ ಕಾಲದ ರೀತಿ ರಿವಾಜುಗಳನ್ನಷ್ಟೇ ಪರಿಗಣಿಸಬೇಕೇ ಅಥವಾ ಕಾದಂಬರಿಕಾರ ಬದುಕುತ್ತಿರುವ ವರ್ತಮಾನದ ಅರಿವಿನಲ್ಲಿ ಅವುಗಳಿಗೆ ಬೇರೆಯೇ ದಾರಿ ತೋರಿಸಬೇಕೇ? ಏಕೆಂದರೆ ಅನೇಕ ಹಳೆಯ ಸಮಸ್ಯೆಗಳಿಗೆ ನೂರು ದಾರಿ ದಕ್ಕಿಹೋಗಿರುವ ಹೊತ್ತಿನಲ್ಲಿ ಆ ಸಮಸ್ಯೆಗಳನ್ನು ಸಮಸ್ಯೆಗಳಂತೆ ಓದುಗನ ಮುಂದಿಡಬೇಕಾದ ಸವಾಲನ್ನು ಕಾದಂಬರಿಕಾರ ಎದುರಿಸುವುದಿಲ್ಲವೇ? ಬಹಳ ಕಷ್ಟಕರ ಪ್ರಶ್ನೆಗಳಿವು.
ಪಾಟೀಲರು ಈ ಸವಾಲನ್ನು ಕೈಗೆತ್ತಿಕೊಂಡಿದ್ದಾರೆ. ಹಾಗೆ ಕೈಗೆತ್ತಿಕೊಂಡಾಗ ಅವರು ಕಾಲಕ್ಕೆ ನಿಷ್ಠರಾಗಿದ್ದಾರೆ. ತಪ್ಪು ತಿಳುವಳಿಕೆ ಎಂಬರ್ಥವನ್ನು ಕೊಡುವ ಗೈರ ಸಮಜೂತಿಯಲ್ಲಿ ಎಷ್ಟೋ ಗೈರ ಸಮಜೂತಿಗಳಿಂದ ಹುಟ್ಟಿದ ಸಂಘರ್ಷ ಹಾಗೂ ಸಂಕಟಗಳ ಆಕೃತಿಗಳಿವೆ. ಆ ಸಂಘರ್ಷ ಹಾಗೂ ಸಂಕಟಗಳ ಆಕೃತಿಗಳು ಬದುಕಿನ ಅತ್ಯಂತ ದಟ್ಟವಾದ ಅನುಭವಗಳ ಲೋಕದೊಳಗೆ ಸಂಭವಿಸುವುದರಿಂದ ಒಟ್ಟಾರೆಯಾಗಿ ಸುಖ ದುಃಖಗಳ ಸಹಜ ಸಮ್ಮಿಶ್ರಣದಲ್ಲಿ ಓದುಗ ಜೀಕುತ್ತಿರುತ್ತಾನೆ. ಅಲ್ಲಿ ಬಳಸಿರುವ ಭಾಷೆ, ಕಟ್ಟಿಕೊಟ್ಟಿರುವ ಪರಿಸರ, ಆ ಅನುಭವ ಲೋಕದ ಮೇಲೆ ಲೇಖಕನಿಗಿರುವ ಸ್ಪಷ್ಟ ಹಿಡಿತ ಓದುಗನ ಜೀಕನ್ನು ಲಯಬದ್ಧವಾಗಿಸುತ್ತದೆ.. ವಚ್ಚಕ್ಕನಿಗೆ ಇನ್ನೊಂದು ಮದುವೆ ಮಾಡಿಸಬಹುದಿತ್ತಲ್ಲ ಎಂಬ ಪ್ರಶ್ನೆ ಆಧುನಿಕ ಓದುಗನ ಮುಂದೆ ಕುಣಿದರೂ ಅದು ಆ ಜೀಕನ್ನು ಅವ್ಯವಸ್ಥಿತಗೊಳಿಸುವುದಿಲ್ಲ.
ಕಾದಂಬರಿಯ ನಾಯಕಿ ವಚ್ಚಕ್ಕನಿಗೆ ಆಕೆ ಮೈನೆರೆಯುವ ಮುನ್ನವೇ ಎಂಟನೆಯ ವಯದಲ್ಲೇ ಮದುವೆ ಮಾಡಿಬಿಡುತ್ತಾರೆ. ಮುಂದೆ ವೈಧವ್ಯ, ಮಡಿ, ಮೈಲಿಗೆ ಇವೆಲ್ಲವನ್ನೂ ಆಕೆ ಎದುರಿಸುತ್ತಾ ಹೋಗುತ್ತಾಳೆ. ಈ ಬಾಲ್ಯ ವಿವಾಹವೆಂಬುದು ತಂದೊಡ್ಡುವ ದುರಂತಗಳ ಸರಮಾಲೆ.. ವಚ್ಚಕ್ಕನಿಗೆ ಎಂಟರ ಪ್ರಾಯಕ್ಕೇ ಮದುವೆ ಮಾಡಿಬಿಡುವ ಆ ಕಾಲದ ಪರಿಕಲ್ಪನೆಯೊಳಗೇ ಆ ಕಾದಂಬರಿಯಲ್ಲಿ ಹುಟ್ಟಿದ ಅನೇಕ ದುಃಖಗಳ ಪರಂಪರೆಯ ಬೀಜಗಳೂ ಇವೆ. ಆದರೆ ಕಾದಂಬರಿಯ ಕಾಲದ ಮಿತಿಯನ್ನು ಮೀರಲಾಗದ ಕಾದಂಬರಿಕಾರ ಅದನ್ನು ಮಾತುಗಳಲ್ಲಿ ಹೇಳಲಾರ. ಹೇಳಿದರೆ ಓದುಗ ಆ ಕಾಲದಿಂದ ಈ ಕಾಲಕ್ಕೆ ಜಿಗಿದುಬಿಡುತ್ತಾನೆ… ಹಾಗಾಗಿ ಪಾಟೀಲರ ನಿಷ್ಠೆ ಆ ಕಾದಂಬರಿಯ ಕಾಲಕ್ಕೆ, ಅಲ್ಲಿ ಸಂಭವಿಸಿದ ಘಟನಾವಳಿಗೆ. ಓದುಗನಿಗೇ ಅದು ಅರಿವಾಗಬೇಕು..
ಅಲ್ಲಿ ಯಾವ ತಾರತಮ್ಯದ ಸಾಧ್ಯತೆಯೂ ಇಲ್ಲ. ಏಕೆಂದರೆ ಸೃಜನಶೀಲತೆಯ ಸೊಗಡು ಯಾವ ಕೃತಿಯ ಅಡುಗೆಯಲ್ಲಿ ಯಾವ ಓದುಗನ ನಾಲಗೆಗೆ ಹೇಗೆ ದಕ್ಕುತ್ತದೆ ಎಂಬ ಬಗ್ಗೆ ಸಿದ್ಧ ಸೂತ್ರಗಳು ಇಲ್ಲ. ಇಲ್ಲಿ ಏಕ ವ್ಯಂಜನ ಪ್ರಯೋಗ ಸಾಧ್ಯವೇ ಇಲ್ಲ.
ಅವರ ತೇರು ಕಾದಂಬರಿಯ ದೇವಪ್ಪ ತಾನು ಮದುವೆ ಮಾಡಿಕೊಳ್ಳಬೇಕೆಂದಿದ್ದ ಹುಡುಗಿಯ ಜೊತೆಗೆ ಮದುವೆ ಸಾಧ್ಯವಾಗದಿದ್ದಾಗ ಹತಾಶನಾಗುತ್ತಾನೆ. ‘ನನ್ನ ನಿನ್ನ ಮದುವೆಯನ್ನು ದೇವರು ಮಾಡಲಿಲ್ಲ. ಇಂತಹ ದೇವರನ್ನು ನಾನು ಕಟ್ಟಿಕೊಂಡು ಏನು ಮಾಡಲಿ. ನಿಜವಾಗಿಯೂ ಅಂತಹ ದೇವರೆಂಬಾತ ಇದ್ದಾನೆಂದರೆ ಅವನ ವಿರುದ್ಧ ನಾನು ಪ್ರತಿಭಟನೆ ಮಾಡುತ್ತೇನೆ, ಬಂಡಾಯ ಏಳುತ್ತೇನೆ’ ಹೀಗೆ ಅವಳಿಗೆ ಪತ್ರ ಬರೆಯುವ ದೇವಪ್ಪ ಓದುಗನ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುತ್ತಾನೆ. ದೇವರ ವಿರುದ್ಧ ಬಂಡಾಯ ಏಳುವುದು ಒಂದು ಸಮರ್ಥವಾದ ಪ್ರಜ್ಞೆಯ ಕೆಲಸ ಎಂದು ಭಾವಿಸುವುದಾದರೆ ಗೈರ ಸಮಜೂತಿ ಅದರ ಇನ್ನೊಂದು ದಿಕ್ಕಿನತ್ತ ಬಹಳ ವೇಗವಾಗಿ ಚಲಿಸುತ್ತದೆ. ಅಂದರೆ ವಿಧವೆ ವಚ್ಚಕ್ಕ ರಾತ್ರಿ ಉಪವಾಸ ಮಾಡುವುದು, ಬಾಣಂತನ ಮಾಡಿಕೊಂಡು ಬಂದ ತಕ್ಷಣ ಸ್ನಾನ ಮಾಡುವುದು, ಉಪವಾಸ ಇರುವುದು.. ಹಾಗಾದರೆ ಪಾಟೀಲರೊಳಗಿರುವ ಆಧುನಿಕ ಲೇಖಕ ಇದನ್ನು ಒಪ್ಪಿಕೊಂಡು ಬರೆದಿದ್ದಾರೆ ಎಂದು ಭಾವಿಸಬಹುದೇ? ಬಂಡಾಯದ ನಿಲುವುಗಳು ಬದಲಾದವು ಎಂದು ಅಂದುಕೊಳ್ಳಬಹುದೇ? ಆದರೆ ತೇರು ಕಾದಂಬರಿಯ ಕಾಲಕ್ಕೂ, ಗೈರ ಸಮಜೂತಿಯಲ್ಲಿರುವ ಕಾಲಕ್ಕೂ ಬಹಳ ಅಂತರವಿದೆ. ಈ ಬಂಡಾಯ ತೇರುವಿನಲ್ಲಿರುವ ಕಾಲಕ್ಕೆ ಸಹಜ, ಗೈರ ಸಮಜೂತಿಯ ಕಾಲಕ್ಕೆ ಒಪ್ಪುವುದು ಕಷ್ಟ. ನನಗಿಲ್ಲಿ ಕಾಣುವುದು ತನ್ನ ಕಾಲದ ಯಾವುದೇ ಅಭಿಪ್ರಾಯವನ್ನೂ, ಅನುಭವವನ್ನೂ ತುರುಕದ ಆ ಕಾಲಕ್ಕೆ ನಿಷ್ಠನಾದ ಲೇಖಕ.
ಧರ್ಮ ಎನ್ನುವುದನ್ನು ಡೆಮಾಕ್ರೆಟಿಕ್ ಆಗಿ ಅನುವಾದ ಮಾಡಿದರೆ ಎಷ್ಟು ಸಮಸ್ಯೆಗಳು ಹುಟ್ಟುತ್ತವೆ ಭಾರತೀಯ ಹಿಂದೂ ಧರ್ಮದೊಳಗೆ ಎನ್ನುವುದನ್ನು ಪಾಟೀಲರಿಗೆ ಹೇಳಬೇಕಿತ್ತು ಎನ್ನಿಸುತ್ತದೆ.. ಬಾಲ್ಯವಿವಾಹ, ಮಡಿ ಮೈಲಿಗೆ, ವೈಧವ್ಯ, ಗೋಡ್ಸೆ ಗಾಂಧಿಯನ್ನು ಕೊಂದಿದ್ದು ಇಂತಹಾ ಅನೇಕ ವಸ್ತು ವಿಷಯಗಳನ್ನು ಕಾದಂಬರಿ ಒಳಗೊಂಡಿದೆ. ಸತ್ಯಬೋಧರ ಪಾತ್ರವನ್ನೇ ನೋಡಿ. ಅವರು ಮಡಿಮೈಲಿಗೆ, ಪೂಜೆ, ಅಡುಗೆಯನ್ನು ಮಾಡಬೇಕು, ವೈಶ್ವದೇವ ಹೋಮ ಮಾಡಬೇಕು.. ಸಕಲ ಆಚಾರಗಳನ್ನೂ ಪಾಲಿಸುವ ನಿಷ್ಠಾವಂತ ಬ್ರಾಹ್ಮಣ ಸತ್ಯಬೋಧರು. ಆದರೆ ಅವರ ಆದರ್ಶ ಮಹಾತ್ಮಾ ಗಾಂಧಿ. ಒಬ್ಬ ವೈದಿಕ ಮನುಷ್ಯ ಗಾಂಧಿಯನ್ನು ಮೆಚ್ಚಬಾರದೆಂದೇನೂ ಇಲ್ಲ. ಆದರೆ ಗಾಂಧಿಯನ್ನು ಯಾವ ಕಾರಣಕ್ಕಾಗಿ ಮೆಚ್ಚಿಕೊಂಡಿದ್ದರು ಎಂಬ ಮಾತು ಬಂದಾಗ ಓದುಗ ಗಲಿಬಿಲಿಗೊಳ್ಳುತ್ತಾನೆ. ಗಾಂಧಿಯವರು ಹರಿಜನರ ಹಕ್ಕುಗಳಿಗಾಗಿ ಹೋರಾಡಿದವರು, ಅವರೂ ದೇವಾಲಯದೊಳಗೆ ಪ್ರವೇಶಿಸಬೇಕು ಎಂಬ ಮಹದಾಸೆಯನ್ನು ಇಟ್ಟುಕೊಂಡಿದ್ದವರು. ಜಾತೀಯತೆಯನ್ನು ವಿರೋಧಿಸಿದವರು ಅವರು. ಆದರೆ ಸತ್ಯಬೋಧರು ತಮ್ಮ ಮನೆಯೊಳಗೇ ಸಕಲ ಮಡಿ, ಮುಟ್ಟು, ತಟ್ಟು ಎಲ್ಲವನ್ನೂ ಪಾಲಿಸುತ್ತಿದ್ದವರು. ತಮ್ಮ ಮನೆಗೆ ಕೆಲಸಕ್ಕೆ ಬರುವವಳಿಗೆ ದೂರದಿಂದಲೇ ಪಾತ್ರೆಗಳನ್ನು ಹಾಕುವವರು. ಅಂದರೆ ಗಾಂಧಿಯ ಬಗೆಗಿನ ಸತ್ಯಬೋಧರ ಗೌರವ ಭಾವುಕ ನೆಲೆಯದ್ದೇ ಹೊರತು ಅದಕ್ಕೆ ಯಾವ ವೈಚಾರಿಕ ಹಿನ್ನೆಲೆಗಳೂ ಇಲ್ಲ. ಅವರ ಪಾತ್ರ ಉದಾತ್ತವಾದದ್ದೇ, ಅವರ ಪ್ರೀತಿ, ವಚ್ಚಕ್ಕನ ಬಗ್ಗೆ ಅವರಿಗಿರುವ ಕಳಕಳಿ, ಆಕೆಗೆ ಕಲಿಸಹೊರಡುವುದು, ಆಕೆಯ ವ್ಯಕ್ತಿತ್ವವನ್ನು ರೂಪಿಸುವುದು.. ಹೀಗೆ ಅವರ ಅಂತಃಕರಣದ ಬಗ್ಗೆ ಸಂಶಯವೇ ಇಲ್ಲ. ಆದರೆ ಮೌಲ್ಯಗಳ ಜಗತ್ತಿನೆಡೆಗೆ ನೋಡಿದರೆ ಗಾಂಧಿ ಪ್ರತಿಪಾದಿಸುವ ಅನೇಕ ವಿಷಯಗಳ ಬಗ್ಗೆ ಸತ್ಯಬೋಧರು ಯೋಚಿಸುವುದೂ ಇಲ್ಲ ಎಂಬುದು ಅರಿವಾಗುತ್ತದೆ.
ವಿಧವೆ ವಚ್ಚಕ್ಕ ಇಡೀ ಕಾದಂಬರಿಯುದ್ದಕ್ಕೂ ರಾತ್ರಿ ಉಪವಾಸ ಇರುತ್ತಾಳೆ. ಉಂಡು ತಿಂದು ಬೆಳೆಯಬೇಕಾದ ಸಣ್ಣ ವಯಸ್ಸು, ಅವಳಿಗೆ ಇದು ಕಷ್ಟ.. ಅವಳಿಗೆ ಊಟ ಮಾಡುವಂತೆ ತಾವು ಹೇಳಬಹುದು ಎಂಬ ವಿಚಾರ ಅವರ ಯೋಚನೆಯ ಪರಿಧಿಯೊಳಗೂ ಸುಳಿಯುವುದಿಲ್ಲ. ಧರ್ಮ ಶಾಸ್ತ್ರ, ಸಮಾಜ ಶಾಸ್ತ್ರ ಎರಡನ್ನೂ ಒಟ್ಟಾರೆಯಾಗಿ ನಡೆಸಿಕೊಂಡು ಹೋಗುವುದು ಸುಲಭದ ವಿಷಯವಲ್ಲ. ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಪಾಟೀಲರು ಆ ಕಾಲದಲ್ಲಿ ಪರಂಪರೆಯ ಪರಿಧಿಯೊಳಗೆ ಸುಧಾರಣೆ ಪ್ರವೇಶಿಸುವಾಗ ಎದುರಾಗುವ ಸಂಕಷ್ಟಗಳನ್ನು ಮತ್ತು ಮಿತಿಗಳನ್ನು ಹೀಗೆ ಸೂಚ್ಯವಾಗಿ ಹೇಳಿದ್ದಾರೆ ಎಂಬುದನ್ನು. ತನ್ನತನ ಎಂದು ನಂಬಿರುವ ಪರಂಪರೆಯ ಆಚರಣೆಗಳನ್ನು ಬಿಡಲಾಗದ, ಸುಧಾರಣೆಯನ್ನು ಸಂಪೂರ್ಣ ಅಪ್ಪಿಕೊಳ್ಳಲಾಗದ ಮನುಷ್ಯನ ದ್ವಂದ್ವವನ್ನು ಆ ಕಾಲದಿಂದ ಹೊರಬರಲಾಗದ ಬರವಣಿಗೆಯ ಮಿತಿಯಲ್ಲಿ ಹೀಗೆಯೇ ಹೇಳಬೇಕಾಗಿ ಬರುವುದು.
ಒಂದು ವೇಳೆ ಅವರು ಉದಾರವಾಗಿ ಸತ್ಯಬೋಧರನ್ನು ಹೀಗೆಲ್ಲಾ ಚಿತ್ರಿಸಿದ್ದರೆ ಕಾದಂಬರಿ ಸ್ವಲ್ಪ ಕೃತಕವಾಗುತ್ತಿತ್ತು. ಏಕೆಂದರೆ ಆ ಕಾಲದಲ್ಲಿ ನಡಾವಳಿಗಳು ಹೇಗಿತ್ತೋ ಹಾಗೆಯೇ ಚಿತ್ರಿಸಬೇಕಲ್ಲದೆ ಕಾದಂಬರಿಕಾರನ ಆಶಯಗಳನ್ನು ಚಿತ್ರಿಸಿದರೆ ಆ ಕಾಲದ ಚಿತ್ರಣ ಓದುಗನ ಮುಂದಿಡಲು ಸಾಧ್ಯವಾಗುವುದಿಲ್ಲ. ಹಾಗಾಗಿಯೇ ಸತ್ಯಬೋಧರ ಅಂತಃಕರಣವನ್ನು ಕಟ್ಟಿಕೊಡಬಹುದೇ ವಿನಃ ಅಂದಿನ ಸಂಪ್ರದಾಯದ ಆಚರಣೆಗಳಿಂದ ಸತ್ಯಬೋಧರನ್ನು ಹೊರಗೆಳೆಯಲಾಗುವುದಿಲ್ಲ. ಆ ದ್ವಂದ್ವವನ್ನು ಕಟ್ಟಿಕೊಡುವಾಗ ಬೇಕಾದ ಸಂಯಮವನ್ನು ಪಾಟೀಲರು ಬಹಳ ಸಮರ್ಥವಾಗಿ ನಿಭಾಯಿಸಿದ್ದಾರೆ.
ಸೂಲಗಿತ್ತಿ ಎಂಬ ಪ್ರಕಾರ ಭಾರತೀಯ ಸಮಾಜದಲ್ಲಿ ಹೊಸತೇನೂ ಅಲ್ಲ. ಮೊದಲೆಲ್ಲ ಪರಿಣತಿ ಪಡೆದ ಸೂಲಗಿತ್ತಿಯರೇ ಹೆರಿಗೆ ಮಾಡಿಸುತ್ತಿದ್ದುದು ಕೂಡಾ. ಆಸ್ಪತ್ರೆಗೆ ಹೋಗುತ್ತಿದ್ದವರೂ ಕಡಿಮೆಯೇ. ಉದಾಹರಣೆಗೆ ಫಣಿಯಮ್ಮ ಕಾದಂಬರಿಯನ್ನು ನೋಡಬಹುದು. ಅಲ್ಲಿಯ ಫಣಿಯಮ್ಮ ಕೂಡಾ ಬಾಲವಿಧವೆ. ಯಾವುದೊ ಒಂದು ಸನ್ನಿವೇಶದಲ್ಲಿ ಅನಿವಾರ್ಯವಾಗಿ ಹೆರಿಗೆ ಮಾಡಿಸಿ ನಂತರ ಅದರ ಮಹತ್ವದ ಅರಿವಾಗಿ ಅದನ್ನು ಸಮಾಜಸೇವೆಯಂತೆ ಮುಂದುವರಿಸಿಕೊಂಡು ಹೋಗುತ್ತಾಳೆ. ಇಲ್ಲಿ ವಚ್ಚಕ್ಕ ಮಾಡುವುದೂ ಅದೇ ಕೆಲಸವನ್ನೇ. ಫಣಿಯಮ್ಮ, ವಚ್ಚಕ್ಕ ಇಬ್ಬರಿಗೂ ಒಂದೇ ರೀತಿಯ ಇಕ್ಕಟ್ಟು ಎದುರಾಗುತ್ತದೆ ಸನ್ನಿವೇಶಗಳು ಬೇರೆಬೇರೆ ಇದ್ದರೂ. ಹೆರಿಗೆ ಮಾಡಿಸಿ ಬಂದ ಫಣಿಯಮ್ಮ ಮನೆಯಲ್ಲಿ ತಾನು ಹೋಗುವ ಹೊತ್ತಿಗಾಗಲೇ ಹೆರಿಗೆಯಾಗಿತ್ತು ಎಂದು ಹಾರಿಸಿ ಉತ್ತರ ಕೊಟ್ಟು ಮಲಗುತ್ತಾಳೆ. ಆದರೆ ವಚ್ಚಕ್ಕಳಿಗೆ ಹಾಗೆ ಮಾಡಲಾಗುವುದಿಲ್ಲ, ಅವಳು ಪ್ರತಿಭಟಿಸಿಯೇ ಹೋಗಬೇಕಾಗುತ್ತದೆ. ಏಕೆಂದರೆ ಅಲ್ಲಿ ವಚ್ಚಕ್ಕ ಎದುರಿಸಬೇಕಾಗಿದ್ದುದು ಮಾಧವನ ಉಗ್ರ ಧಾರ್ಮಿಕತೆ. ಅಲ್ಲಿಗೇ ಹಿಂತಿರುಗಬೇಕು ಮತ್ತು ನಂತರ ಅಲ್ಲಿಯೇ ಇರಬೇಕಾದ ಅಸಹಾಯಕ ಪರಿಸ್ಥಿತಿ ಕೂಡಾ ಆಕೆಯನ್ನು ಹಿಮ್ಮೆಟ್ಟಿಸುವುದಿಲ್ಲ.
ಅಂತಿಮ ಭಾಗ ಆಧುನಿಕ ಓದುಗನಿಗೆ ಪ್ರಿಯವೇ ಆಗಿಬಿಡುತ್ತದೆ. ಅಲ್ಲಿ ಪಾಟೀಲರ ಮೂಲ ಸ್ಥಾಯೀ ಭಾವ ಬಂಡಾಯ ಬೇರೆಯದೇ ಆಕಾರ ಪಡೆಯುವುದನ್ನು ಗಮನಿಸಬಹುದು. ಇಂದಿನ ಸತ್ಯಬೋಧರ ಅಂತಃಕರಣವುಂಡು, ಕುಮಾರಿಲನಾಥರ ವೈಚಾರಿಕ ಹಿನ್ನೆಲೆಯಲ್ಲಿ ವ್ಯಕ್ತಿತ್ವ ರೂಪಿಸಿಕೊಂಡ ವಚ್ಚಕ್ಕ ಊಟಕ್ಕೆ ಕುಳಿತಾಗ ಮಾಧವ ಶಾಮರಾಯರ ಜೊತೆಗಿನ ಸಂಭಾಷಣೆಯಲ್ಲಿ ವಚ್ಚಕ್ಕನ ಮಾತುಗಳು ನನಗೆ ಬಂಡಾಯ ಸಾಗಬೇಕಾದ ಸರಿ ದಾರಿಯನ್ನು ತೋರಿಸುವಂತೆ ಮತ್ತು ಹಾಗೆ ಮಾತನಾಡಿದ ನಂತರವೂ ಕೌಟುಂಬಿಕ ಸ್ವಾಸ್ಥ್ಯವನ್ನು ಕದಡದ ಸ್ವಸ್ಥ ಮನಸ್ಸಿನ ಮಾತುಗಳಂತೆ ಕಾಣಿಸಿತು. ಬಂಡಾಯ ಮತ್ತು ಪರಂಪರೆ ಎರಡೂ ಒಟ್ಟೊಟ್ಟಾಗಿ ಸಮಚಿತ್ತದಿಂದ ಸಾಗುವ ದಿನ ಬರುವುದೆಂದು? ಆಶಯವಾಗಿಯೂ ಬರಬಾರದೇ? ಲೇಖಕರ ಸ್ವಾತಂತ್ರವನ್ನು ಗೌರವಿಸಿ ಕೂಡಾ ವಚ್ಚಕ್ಕ ಸಾಗುವ ಬಗೆ ಕಲ್ಲು ಮುಳ್ಳಿನ ಹಾದಿಯಂತೆ ಕಠಿಣ, ಕತ್ತಲಿನದ್ದಾಗಿ ತೋರಿಸಿದ್ದರೆ ಕಾದಂಬರಿಯ ಅಂತ್ಯ ಮತ್ತಷ್ಟು ಪರಿಣಾಮಕಾರಿಯಾಗುತ್ತಿತ್ತೇನೋ ಅನ್ನಿಸಿದ್ದು ಸುಳ್ಳಲ್ಲ.
ಇಡೀ ಕಾದಂಬರಿಯನ್ನು ಕಾಲವೇ ನಿಯಂತ್ರಿಸಿದೆ.. ಮತ್ತು ಪರಂಪರೆ ಬದಲಾಗುವ ರೀತಿಯ ಚಿತ್ರಣವನ್ನು ಗಾಢವಾಗಿ ಕಟ್ಟಿಕೊಟ್ಟಿದೆ. ಇಡೀ ಕಾದಂಬರಿಯ ಬಹಳ ದೊಡ್ಡ ಶಕ್ತಿ ಆಗಿನ ಕಾಲಕ್ಕೇ ಓದುಗನನ್ನು ಕೊಂಡೊಯ್ಯುವ ಆ ದಟ್ಟ ಅನುಭವ ಚಿತ್ರಣ. ಅದೆಷ್ಟು ರಸಭರಿತವಾಗಿದೆಯೆಂದರೆ ಆ ವಿವರಗಳನ್ನು ಚಪ್ಪರಿಸಿ ಓದುತ್ತಿದ್ದ ನನಗೆ ಪುಸ್ತಕ ಕೆಳಗಿಟ್ಟ ಮೇಲೆ ಈ ಲೋಕಕ್ಕೆ ಹಿಂತಿರುಗುವುದು ಬಹಳ ಕಷ್ಟಕರವೆನ್ನಿಸಿಬಿಟ್ಟಿತು.
ಬೆಂಗಳೂರು ವಾಸಿಯಾದ ಮಾಲಿನಿ ಗುರುಪ್ರಸನ್ನ ಗೃಹಿಣಿ ಮತ್ತು ಲೇಖಕಿ. ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ.