ಲೋಕವನ್ನು ಕವಿತೆಯ ಮೂಲಕ ಅಸಾಮಾನ್ಯವಾಗಿ ಮರು ರೂಪಿಸುವ ಸೂರ್ಯಕೀರ್ತಿಯವರು, ಅದೇ ಹೊತ್ತಲ್ಲಿ ಸಾಂಪ್ರದಾಯಕ ಸಂಕೇತಗಳನ್ನು ನಿರ್ದಯವಾಗಿ ನಾಶಗೊಳಿಸುತ್ತಾರೆ. ಅವರು ಕಾಣುವ ಹಸಿವಿನ ಅನ್ನದ ಮುಂದೆ ಶಿವನ ಧ್ಯಾನ, ಮುದ್ರಿಕೆ, ನಾಥ ಪಟ್ಟಗಳೂ ಶೂನ್ಯವಾಗುತ್ತವೆ. ದೈವ ಕಲ್ಪನೆಯೇ ವ್ಯರ್ಥವಾಗುತ್ತದೆ. ಗಾಂಧಿಯ ಕನ್ನಡಕವು ಕೂಡಾ ಪಾಚಿಗಟ್ಟಿದ ಕಣ್ಣುಗಳಲ್ಲಿ ಮರೆಯಾಗುತ್ತದೆ. ಬಾಗಿಲ ಸಂದುಗೊಂದುಗಳಲ್ಲಿ ಚಂದ್ರಮತಿಯರು ನಡುಗುತ್ತಾರೆ, ಜನ್ನನ ಸುನಂದೆ, ಅಮೃತಮತಿಯರು ಪಿಸುಗುಡುತ್ತಾ ನರಳುತ್ತಾರೆ.
ಸೂರ್ಯಕೀರ್ತಿ ಬರೆದ “ಮೀನು ಕುಡಿದ ಕಡಲು” ಕವನ ಸಂಕಲನಕ್ಕೆ ಪ್ರೊ. ಪುರುಷೋತ್ತಮ ಬಿಳಿಮಲೆ ಬರೆದ ಮಾತುಗಳು

ಭಾಷೆ ತನ್ನನ್ನು ತಾನು ಛಿದ್ರಗೊಳಿಸಿಕೊಂಡು, ಹೊಸ ಲಯದಲ್ಲಿ ಮತ್ತೆ ಹುಟ್ಟಿಕೊಂಡರೆ ಮಾತ್ರ ಅತ್ಯುತ್ತಮ ಕವಿತೆ ಸೃಷ್ಟಿಯಾಗುತ್ತದೆ. ಅದೊಂದು ವಿಸ್ಮಯಕಾರೀ ಪುನರ್ ಸೃಷ್ಟಿ. ಸೂರ್ಯ ಕೀರ್ತಿಯವರು ಈ ಕವನ ಸಂಕಲದ ಉದ್ದಕ್ಕೂ ಮಾಡಿದ ಕೆಲಸ ಅದುವೇ. ಕಡಲು ಮೀನುಗಳನ್ನು ತಿಂದು ಹಾಕಿದರೆ, ಇಲ್ಲಿ ಮೀನೇ ಕಡಲ ನೀರನ್ನು ಕುಡಿದುಬಿಡುತ್ತದೆ.

(ಸೂರ್ಯಕೀರ್ತಿ)

ಲೋಕವನ್ನು ಕವಿತೆಯ ಮೂಲಕ ಅಸಾಮಾನ್ಯವಾಗಿ ಮರು ರೂಪಿಸುವ ಸೂರ್ಯಕೀರ್ತಿಯವರು, ಅದೇ ಹೊತ್ತಲ್ಲಿ ಸಾಂಪ್ರದಾಯಕ ಸಂಕೇತಗಳನ್ನು ನಿರ್ದಯವಾಗಿ ನಾಶಗೊಳಿಸುತ್ತಾರೆ. ಅವರು ಕಾಣುವ ಹಸಿವಿನ ಅನ್ನದ ಮುಂದೆ ಶಿವನ ಧ್ಯಾನ, ಮುದ್ರಿಕೆ, ನಾಥ ಪಟ್ಟಗಳೂ ಶೂನ್ಯವಾಗುತ್ತವೆ. ದೈವ ಕಲ್ಪನೆಯೇ ವ್ಯರ್ಥವಾಗುತ್ತದೆ. ಗಾಂಧಿಯ ಕನ್ನಡಕವು ಕೂಡಾ ಪಾಚಿಗಟ್ಟಿದ ಕಣ್ಣುಗಳಲ್ಲಿ ಮರೆಯಾಗುತ್ತದೆ. ಬಾಗಿಲ ಸಂದುಗೊಂದುಗಳಲ್ಲಿ ಚಂದ್ರಮತಿಯರು ನಡುಗುತ್ತಾರೆ, ಜನ್ನನ ಸುನಂದೆ, ಅಮೃತಮತಿಯರು ಪಿಸುಗುಡುತ್ತಾ ನರಳುತ್ತಾರೆ. ದ್ರೌಪದಿಯ ಮುಡಿಗೆ ಹೂವು ಏರುವುದೇ ಇಲ್ಲ. ಆದರೆ ಇವೆಲ್ಲದರ ನಡುವೆ ಮೂರ್ಖರಾಜನ ಸುತ್ತ ಕಾಗೆಗಳು ಪಲ್ಲಕ್ಕಿಯ ಮೆರವಣಿಗೆ ನಡೆಸುತ್ತವೆ, ಭಕ್ತರು ಹರಕೆಯ ಕುರಿಗಳಾಗಿ ಪ್ರಾಣಾರ್ಪಣೆಗೆ ಸಿದ್ಧರಾಗುತ್ತಾರೆ.

ಇಂಥ ಅರ್ಥವಿಲ್ಲದ ಲೋಕದ ವಿರುದ್ಧ ನಿಲ್ಲುವ ರಾಮಪುರದ ಕೆಂಪಜ್ಜಿ, ಹೆಗಲ ಮೇಲೆ ಕೂರಿಸಿ ಜಾತ್ರೆತೋರಿಸುವ ಅಪ್ಪ, ಜೀನ್ಸ್ ತೊಡುವ ಮುದುಕಿಯರು, ಸಾಕಿಗೆ ಬರೆದ ಪ್ರೇಮ ಕವಿತೆಗಳು ಲೌಕಿಕವನ್ನು ಉಳಿಸುವ ದೊಡ್ಡ ಶಕ್ತಿಗಳಾಗಿ ಕವಿತೆಗಳಲ್ಲಿ ಮೂಡುತ್ತಾರೆ. ಇಂಥ ಮನೋಜ್ಞ ಕವಿತೆಗಳನ್ನು ಓದುವ ಸುಖದಿಂದ ಕನ್ನಡಿಗರು ವಂಚಿತರಾಗಬಾರದು.

ಗಾಂಧೀಯ ಕನ್ನಡಕ

ಈಗೀಗ ಗಾಂಧೀಯ ಕನ್ನಡಕವನ್ನು
ಎಲ್ಲರೂ ಹಾಕಿಕೊಂಡಿದ್ದಾರೆ;
ಬ್ಯಾನರ್,ಪೋಸ್ಟರ್, ಟಿವಿ ರೇಡಿಯೋ
ಎಲ್ಲೆಲ್ಲಿಯೂ ಗಾಂಧೀಯ ಕನ್ನಡಕವೇ!
ಜಯಂತಿಯ ದಿನವಂತೂ ತಾವೇ
ಧರಿಸಿಕೊಂಡು ಗಾಂಧೀ ಕೋಲು,
ಗಾಂಧೀ ಟೊಪ್ಪಿ , ಗಾಂಧೀ ಚರಕ
ಎಂದೆಲ್ಲ ಹಾಕಿಕೊಂಡು ಓಡಾಡುವವರೆ ಹೆಚ್ಚು!

ಪಾಚಿಕಟ್ಟಿದ ಕಣ್ಣುಗಳಲ್ಲಿ ಗಾಂಧೀಯ
ಕನ್ನಡಕವು ಕೂಡ ಬಣ್ಣ ಬಣ್ಣ!
ಕೊಳೆಯ ಮನಸ್ಸಿನ ಮೃಗಗಳೆಲ್ಲ
ಗಾಂಧೀಯ ಟೊಪ್ಪಿಯನೇರಿಸಿಕೊಂಡು;
ಇದು ಚರಕ, ಅದು ಚಪ್ಪಲಿ ಇತ್ಯಾದಿ ಇತ್ಯಾದಿ
ಗೋಡೆಗೆ ಮೊಳೆಯೊಡೆದ ಪೋಟೋ
ನೇತು ಹಾಕಿ!
ಇಲ್ಲೆಲ್ಲೋ ಹೋಗುತಿದ್ದಾರೆ!

ಕಾಮಲೆಕಣ್ಣುಗಳಲ್ಲಿ ಗಾಂಧೀಯ ಕನ್ನಡಕವೂ
ಸುಳ್ಳು-ಸುಳ್ಳು!
ಗಾಂಧೀಯಿದ್ದನೆಂಬುದು ಕೂಡ ಸುಳ್ಳು
ಎಂಬೆಲ್ಲ ಡಂಗುರ ಹಾಕಿಸುವ ಮತ್ತೊಬ್ಬ ರಾಜ!
ಇನ್ನೊಬ್ಬ ರಾಜ ರಸ್ತೆಯ ಬದಿಗಳಲ್ಲಿ
ಮಾರುಕಟ್ಟೆಗಳಲ್ಲಿ ಗಾಂಧೀ ಚಿತ್ರವನ್ನಿಟ್ಟು
ಬೆಂಕಿ ಹಚ್ಚಿಸುವ ತರಾತುರಿ!

ನಿತ್ಯಪುಷ್ಪದ ಗಾಂಧೀ ಕಣ್ಣುಗಳಿಗೆ
ಸ್ವಚ್ಛ ಸ್ವಚ್ಛವೆಂದು ಅಸ್ವಚ್ಛತೆಯ ಕಾಣಿಸುವ
ಹುನ್ಮಾರ!
ಗಾಂಧೀ ಅಲ್ಲೆಲೋ ಕನ್ನಡಕವ ಯಾರಿಗೋ
ಕೊಟ್ಟು ನೋಡುತಿದ್ದಾನೆ
ಕಾಣುವ ಕಣ್ಣುಗಳ!

*****
ನಮ್ಮೂರಿನ ಚಂದ್ರಮತಿಯರು!

ತಲೆತುಂಬಾ ತಾವರೆಮೊಗ್ಗುಗಳ ಮುಡಿದು
ಬಟ್ಟೆಯೊಗೆಯಲು ಕೆರೆ
ಕೋಡಿಯ ಬಳಿ ಬಂದಾಗ,
ಸತ್ಯಹರಿಶ್ಚಂದ್ರರ ಕತೆಗಳ
ನೀವೊಮ್ಮೆ ಕೇಳಬೇಕು;
ಮೂಗುತಿಗಳ ಮುರಿಸಿಕೊಂಡವರು;
ಜುಟ್ಟು ಹಿಡಿದು ಗದ್ದವ ಕಿತ್ತಿಸಿಕೊಂಡವರು,
ಕತ್ತಿನಶಿರಕ್ಕೆ ‘ಧುಮ್ಮನೇ’ ತಟ್ಟಿಸಿಕೊಂಡವರು,
ಕುಡಿದ ಗಂಡನ ವಿಕೃತಕಾಮಕ್ಕೆ ಮೊಲೆಗಳ
ಚಿವುಟಿಸಿಕೊಂಡವರು,
ತುಟಿ ತುಟಿಗಳ ಕಚ್ಚಿ ಪರಚಿ ಮುಖ ಊದಿಸಿಕೊಂಡರ –
ಒಮ್ಮೆ ಮಾತನಾಡಿಸಬೇಕು, ಅವರು ಹೇಳುವ ಮಾತುಗಳ ಕೇಳಬೇಕು;
ಇವರೆ ನಮ್ಮೂರಿನ ಚಂದ್ರಮತಿಯರು.
ಸೂರ್ಯಮತಿಯೆಂಬರು ಇದ್ದಾರೆಯೇ ಎಂದರೆ
ಇರಬಹುದು ಬಿಡಿ ಎಂದು ನುಲಿಯುವ
ಅಸಾಂಗತ್ಯವ ಹೇಳುವವರು!
ಒಳಗೆ ನಾದಿನಿ ಅತ್ತಿಗೆ ಅತ್ತೆಯರು ಇದ್ದಾರೆ
ಆಮೇಲೆ ಸಿಗುವೆನು,
ಗದ್ದೆಯಿಂದ ಮೈದುನ ,ಮಾವಂದಿರು ಬಂದರೆಂದು
ಸೆರಗನ್ನು ಕವಚಿಕೊಂಡು ಕದದ ಹಿಂದೆ
ನಡುಗುವವರು –
ನಮ್ಮೂರಿನ ಚಂದ್ರಮತಿಯರು!
ಕೆನ್ನೆಗೆ ಗೆಜ್ಜೆಮಾಟಿಗಳ ಜೋಡಿಸಿಕೊಂಡವರು,
ಕಾಲ್ಗಡಗ ಕೈಗಡಗಗಳ ತೊಟ್ಟು ಗಂಡನ ಮುಂದೆ
ತಕತಕಥೈ! ಎಂದು ಕುಣಿಯುವವರು,
ಮುದ್ದೆಯ ನೊರೆ ಎಸರು ಉಕ್ಕುವಾಗ
ಹೊರಗೆ ಗೆಳೆತಿಯರ ಜೊತೆ ಕೂಡಿ ನಗುವವರು,
ಹೊಡೆದ ಮುದ್ದೆಮಡಕೆಗಳ ದಂಡಕ್ಕೆ
ತವರಿನಮನೆ ಕಡೆ ಹೋಗುವವರು –
ಇವರು ನಮ್ಮೂರಿನ ಚಂದ್ರಮತಿಯರು!
ಎತ್ತುಗಳಿಗೆ ಹುಲ್ಲು ನೀರಿಟ್ಟು
ಅತ್ತೆಗೆ ಸ್ನಾನ ಮಾಡಿಸಿ ಮಾವನಿಗೆ ಬಿಸಿಮುದ್ದೆಕೊಟ್ಟು ಮಾರಿಗುಡಿಗೆ ಮೊಸರನ್ನ ಆರತಿಯೆತ್ತಿ –
ಹೊಲಗದ್ದೆಗಳ ಕಡೆ ಹೊರಡುವವರು
ನಮ್ಮೂರಿನ ಚಂದ್ರಮತಿಯರು!
‘ಹ್’ ‘ಹ್ಮು’ ಎಂದೆಲ್ಲ ಕ್ಯಾತೆ ತೆಗೆಯುವುದಿಲ್ಲ
ಗಂಡ ಹೊಡೆದರು ‘ ಹೊಡೆಯಲಿ ಬಿಡಿ,
ಗಂಡ ತಾನೇ, ಅವನು ಕುಡಿದು ಬಂದಾಗ ನಾನು ಇಕ್ಕಡಿಸುವೆ’ ಎಂದು ಗದ್ದಗಳರಳಿಸಿ
ನಗುವವರು-
ನಮ್ಮೂರಿನ ಚಂದ್ರಮತಿಯರು!
*****
ಜಂಗಮರ ಅಕ್ಕ

ಹುಡುಕುತಿದ್ದಲ್ಲ ಇನ್ನೂ ಸಿಗಲಿಲ್ಲವೆ ಅಕ್ಕ!
ಆ ಗುಡ್ಡ ಈ ಗುಡ್ಡ ಮಲ್ಲಿಕಾರ್ಜುನ ಗುಡ್ಡವನೆಲ್ಲ
ತಡಕಾಡಿದ ಮೇಲೆ ಇನ್ನೂ ಸಿಗಲಿಲ್ಲವೆ ಅಕ್ಕ!

ಗಂಡನ ಬಿಟ್ಟೆ,
ಅರಮನೆಯ ಬಿಟ್ಟೆ
ಅತ್ತೆ ಮಾವರ ಬಿಟ್ಟೆ ;
ತವರು ಮನೆ ಬಿಟ್ಟು ಈ ಭೂತಾನಾಥನ
ಹುಡುಕುವುದ ಇನ್ನೂ ಬಿಟ್ಟಿಲ್ಲವೆ ಅಕ್ಕ?

ಮನಸ್ಸೆಂಬ ಮರ್ಕಟವ ಬಿಟ್ಟೆ
ದೇಹದ ವಾಚಾಳಿ ಬಿಟ್ಟೆ
ಪಂಚೇಂದ್ರಿಯಗಳ ರುಚಿಯ ಬಿಟ್ಟೆ;
ಇನ್ನು ಕಪಾಲಿಯ ಹುಡುಕುವುದ
ಬಿಟ್ಟಿಲ್ಲವೇ ಅಕ್ಕ ?

ಮರಿ ಮಕ್ಕಳ ಆಸೆಯ ಬಿಟ್ಟೆ,
ಹೊಲ ಗದ್ದೆ ತೋಟಗಳ ಬಯಕೆ ಬಿಟ್ಟೆ,
ಮೈಯ ಬಟ್ಟೆಯನ್ನೇ ಬಿಟ್ಟೆ
ಆದರೂ ಈ ಮಾಯಾವಿ ಸಿದ್ಧನ
ಹುಡುಕುವುದ ಬಿಟ್ಟಿಲ್ಲವೆ ಅಕ್ಕ?

ಅನುಭವದಲ್ಲಿ ಹುಡುಕಿದೆ;
ಬಸವಣ್ಣನ ಕೇಳಿದೆ,
ಅಲ್ಲಮನ ಪ್ರಶ್ನಿಸಿದೆ
ಆದರೂ
ಸಿಗಲಿಲ್ಲವೇ ಅಕ್ಕ;
ಆ ಪಶುಪತಿನಾಥ?

ಸಿಕ್ಕವರ ಕೇಳಿದೆ,
ನದಿಯ ಮುಂದೆ ಅತ್ತು ಕರೆದೆ,
ಕಾಡುಗಳ ನಡುವೆ ಹುಡುಕಿ ಹುಡುಕಿ
ನಡೆದಾಡಿದೆ;
ಸಮುದ್ರಗಳ ಜೊತೆ ಅಲೆಗಳಂತೆ
ಆಯಾಸವ ಪಟ್ಟೆ ಆದರೂ;
ಸಿಗಲಿಲ್ಲವೆ ಅಕ್ಕ;
ಆ ರುಂಡಮಾಲ?
*****

ಗೌರಿ‌ ಉತ್ತ ನೆಲ!

ಕೈಲಾಸದಲ್ಲಿ‌ ಬರಗಾಲವಂತೆ
ಹಿಮಗಳೆಲ್ಲ ಬೆಂದು ಬೆವರಿ ಹಿಂಗಿವೆಯಂತೆ
ಸುಟ್ಟ ಮರಗಳ ದಿಮ್ಮಿ
ಎತ್ತ ನೋಡಿದರು
ಭೂತನಾಥನ ಸುಟ್ಟಭೂಮಿಯಂತೆ!

ಗಣಪ ಇಲಿ ದಂಡುಗಳ ಕಟ್ಟಿಕೊಂಡು
ಆಡುತಿದ್ದಾನಂತೆ;
ಷಣ್ಮುಗ ನವಿಲುಗಳ ಮೇಲೆ ಕುಳಿತುಕೊಂಡು
ಹಾರುತಿದ್ದಾನಂತೆ;
ಸಿವಪ್ಪ ಕಣ್ಣು ಮುಚ್ಚಿ ಕೈ ಕಾಲುಗಳ ಜೋಡಿಸಿ
ಪದ್ಮಾಸನದಲ್ಲಿ ಕುಳಿತು ಬಿಟ್ಟನಂತೆ!

ಹರಿದ ರವಕೆಯಲ್ಲಿ ಗೌರಿ
ಸೆಗಣಿಯಿಂದ ಮನೆ ತಾರಿಸಿ,
ರಂಗೋಲಿ ಬಿಡಿಸಿ
ಹಿತ್ತಲಲ್ಲಿ‌ದ್ದ ಸೌದೆಗಳ ತಂದು
ಒಲೆ ಮುಂದೆ ಕುಂತಳಂತೆ.
ರಾಗಿ ಮಡಿಕೆಯಲ್ಲಿ ಹಿಟ್ಟಿಲ್ಲ
ಅವಳ ಕೈ ಬಾಯಿಗಳಿಗೆ
ಬೂದಿ ತುಂಬಿಕೊಂಡು,
ಸೆರಗ ಮುಚ್ಚಿಕೊಂಡು ಅತ್ತಳಂತೆ!

ಹಸಿದ ಗಣಪ
‘ಅಮ್ಮ‌ಊಟ , ಅಮ್ಮ‌ಊಟ’ ಎಂದರೆ
ಹಾರಿಕೊಂಡು ಬಂದ ಷಣ್ಮುಗ
‘ಏನು ಬುವ್ವನಮ್ಮ‌’ ಅಂದನಂತೆ.
ಹಸಿದ ಮಕ್ಕಳ‌ ನೋಡಿ‌ ಪೇಚಾಡುತ್ತಾ
ಸಿವನ‌ ಬಳಿ ಸಿವೆ ಕೇಳಿದಳಂತೆ.
ಧ್ಯಾನದಲ್ಲಿದ್ದ ಸಿವ ನೋಡಲಿಲ್ಲ;
‘ಮುಂಡೇಗಂಡನ್ಗೆ ಹೆಂಡ್ರೂ, ಮಕ್ಳು ಯ್ಯಾಕೆ?’
ಎಂದು ವಿರಾಗಿಯ ಮುಂದೆ ಜೋತು ಬಿದ್ದಳಂತೆ.

ತೆರೆದ ಕಣ್ಗಳ ಮುಂದೆ ಅತ್ತು ಅತ್ತು
ಲೋಕದ ಹಸಿವು ಈ ಬೂದನಿಗೆ
ಹೇಗೆ ಗೊತ್ತಾಗಬೇಕು ಎನ್ನುತ್ತಲೇ
ಗಣಪನ ಮೂಗಿನ‌ ಗೊಣ್ಣೆಯ ವರೆಸಿ;
ಎಚ್ಚರಾಗದ ರುದ್ರ
ಮತ್ತೆ ಅಕ್ಕಿ ಬೇಳೆಗಳ ತಂದು ಕೊಡುವನೆ?
ಭಂಗಿಯ ಸೇದಿದ ಈ ಮೂಳ ಭಂಗದ
ಬದುಕನ್ನು‌ ನಿವಾರಿಸಬಲ್ಲನೇ?
ಸೋಮರಸವ ಕುಡಿದ ಸಂಕರ
ಎಣ್ಣೆ ಕಾಳುಗಳ ತರುವನೇ?
ಎಂದು ಬಿಕ್ಕಿ ಬಿಕ್ಕಿ ಅತ್ತು ಕುಸಿದಳಂತೆ!

ನೋಡಿದೊಡನೆ ಹೊಟ್ಟೆ ತುಂಬುವುದೇ
ಹಸಿವು ಹೋಗುವುದೇ?
ತ್ರಿನೇತ್ರನಾದ ತ್ರಿಶೂಲಧಾರಿಗೆ
ಇವೆಲ್ಲ ಅರ್ಥವಾಗುವುದೇ?
ಎಂದು ಕಣ್ಣೀರ ವರೆಸಿಕೊಂಡು
ಗಣಪ ಅಲ್ಲಲ್ಲಿ ಬಿದ್ದ ಅವರೇಕಾಳುಗಳ
ಭೂಮಿಗೆ ಅದಿಯುವುದ ಕಂಡು;
ಬಸವನಿಗೆ ನೊಗವೂಡಿ ಕಲ್ಲುನೆಲಗಳ
ಉತ್ತಳಂತೆ, ಮುಗಿಲಿಗೆ ಬಾಯ್ಬುಟ್ಟು
ಕರೆದಳಂತೆ ಸವತಿಯ!

ಉತ್ತ ಗೆರೆಗಳಿಗೆ ಗಣಪ, ಷಣ್ಮುಗ
ಬಿತ್ತಿದರಂತೆ ರಾಗಿಯ, ಅವರೆಯ!
ಹುಯ್ದಳಂತೆ ಗಂಗೆ ಮಳೆಯಾಗಿ
ಸುಟ್ಟ ನೆಲವೆಲ್ಲ ಚಿಗುರಿ, ಎತ್ತ ನೋಡಿದರೂ
ಹೂ-ಕಾಯಿಗಳ ಕಂಡು ಜಿಗಿದಳಂತೆ!

ತುಂಬೆ ಸೊಪ್ಪಿನ ಸಾರು, ಅಂಬಲಿಯ ಮಾಡಿ
ಅಣ್ಣೇಸೊಪ್ಪಿನ ಪಲ್ಯ ಬೇಯಿಸಿ
ಕರೆದಳಂತೆ ಮಕ್ಕಳ ಗೌರಿ
ತುಂಬೆ ಸೊಪ್ಪಿನ ವಾಸನೆಗೆ
ಸಿವ ತೆರೆದನಂತೆ ಕಣ್ಣುಗಳ
ಹಸಿದ ಹೊಟ್ಟೆಯ ಮುಂದೆ
ಧ್ಯಾನ‌ ಒಗ್ಗುವುದೆ ಎಂದು ಶಪಿಸಿಕೊಂಡನಂತೆ!
ಗೌರಿ, ಮಕ್ಕಳ ತಬ್ಬಿಕೊಂಡು
ಈ‌ ಹಸಿವಿನ ಅನ್ನ‌ದ ಮುಂದೆ
ಧ್ಯಾನ,ಮುದ್ರಿಕೆ, ನಾಥ ಪಟ್ಟ
ಇವೆಲ್ಲವೂ ಶೂನ್ಯ ಶೂನ್ಯ ಎಂದನಂತೆ
ಕೊನೆಗೆ ಎಲ್ಲರು ಕೂಡಿ
ಉಂಡರಂತೆ ತಣ್ಣಿಗೆಯೂಟವ.
*****

ಮೀನು ಕುಡಿದ ಕಡಲು!

ಕುಡಿದಂತಹ ನೀರು ಪ್ರಮಾದವಾಗಿದೆ
ನುಂಗಿದಂತಹ ಪ್ರವಾಹ ಆವಿಯಾಗಿದೆ
ಈಜಾಡಿದಂತಹ ಸಮುದ್ರ
ನೆರೆ ತಪ್ಪಿ ಉಲ್ಬಣಗೊಳ್ಳುತಿದೆ.

ಕುಡಿಯುವುದು ಇದೆಯಲ್ಲ
ಅದು ಕುಡಿಸುವ ತನಕ,
ಕುಡಿದ ನೀರು
ಮತ್ತೆ ಕಣ್ಣು ಕಿವಿ ಮೂಗುಗಳ
ಸವೆಸಿ ಕಡಲಿಗೆ ಬಿಡುವುದು
ಇದೆಯಲ್ಲ ಅದು
ಉಪ್ಪಾಗಿದೆ!

ಅದೆಷ್ಟೋ ದಡಗಳ ದಾಟಿ
ಅದೆಷ್ಟೋ ನಿಯಮಗಳ ಮೀರಿ
ಇನ್ನೆಷ್ಟೋ ತೀರಗಳ ಮುಟ್ಟಿ
ಸೇರುವುದು ಇದೆಯಲ್ಲ
ಅದು
ಕುಡಿಯುವ , ಕುಡಿಸುವ ಕಡಲಾಗಿದೆ!

ಈಜಾಡಿದ ದೇಹ ಮುಪ್ಪಾಗಿದೆ
ರೆಕ್ಕೆಗಳು ಪುಕ್ಕಗಳ ಕಳೆದುಕೊಂಡಿವೆ
ಒಡಲು ಕಡಲ ಸೇರಿ;
ಅಲೆ ಅಲೆಯಾಗಿ ಮತ್ತೆ
ಮತ್ತೆ ಕುಡಿಸುತಿದೆ
ಆ ಕಡಲ ನೀರ!

(ಕೃತಿ: ಮೀನು ಕುಡಿದ ಕಡಲು (ಕವನ ಸಂಕಲನ), ಲೇಖಕರು: ಸೂರ್ಯಕೀರ್ತಿ, ಪ್ರಕಾಶಕರು: ಅಲ್ಲಮ ಪ್ರಕಾಶನ, ಬೆಲೆ: 100/-)