ಸುಮ್ಮನಿರಲಾರದ ನಾನು ಒಂದು ಚೇಷ್ಟೆ ಮಾಡಿದ್ದೆ. ಹುಡುಗಾಟಿಕೆಯೊ ಬರಹದ ಉತ್ಸಾಹವೊ; ಒಟ್ಟಿನಲ್ಲಿ ಹಾಸ್ಟೆಲಲ್ಲಿ ದೆವ್ವಗಳ ಕಾಟ ಎಂದು ವೆಂಕಟೇಶನ ಭೀತಿಯ ಬಗ್ಗೆ ಲೇಖನ ಬರೆದು ಬಿಟ್ಟಿದ್ದೆ. ಅದನ್ನು ಸಾಮಾನ್ಯರು ಓದಿದ್ದರೆ ಖಂಡಿತ ಹೆದರಿ ನಂಬಿಬಿಡುತ್ತಿದ್ದರು. ಆ ಪರಿಯಲ್ಲಿ ಹಾರಾರ್ ಆಗಿ ಬರೆದಿದ್ದೆ. ಕಲ್ಪನೆಯೇ ಹೆಚ್ಚಾಗಿತ್ತು. ಸುಮ್ಮನೆ ವೆಂಕಟೇಶನ ಜೊತೆ ‘ದೆವ್ವಗಳ ಕಾಟವಂತಲ್ಲಾ’ ಎಂದು ವಿಚಾರಿಸಿದ್ದೆ ಅಷ್ಟೇ. ಆತ ಒಂದಿಷ್ಟು ವಿವರ ಹೇಳಿದ್ದು ನಿಜ. ಆದರೆ ಉತ್ಕಟವಾಗಿ ಬರೆಯುವ ಬಿರುಸಿನಲ್ಲಿ ಇಲ್ಲದ್ದನ್ನೆಲ್ಲ ಬರೆದು ಬಿಟ್ಟಿದ್ದೆ.
ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಇಪ್ಪತ್ತೊಂದನೆಯ ಕಂತು ಇಲ್ಲಿದೆ.
ಪ್ರಾಯ ಕಾಲವು ಕುದುರೆಯಂತೆ ಓಡುತ್ತಲೇ ಇರುತ್ತದೆ. ಆಗ ನಮಗೆ ಎಲ್ಲ ಬಾಗಿಲುಗಳೂ ತೆರೆದಿರುತ್ತವೆ. ಎಲ್ಲಿಂದಾದರೂ ಪ್ರವೇಶಿಸಿ ಆಚೆ ಈಚೆ ಎಲ್ಲ ಬಾಗಿಲುಗಳಲ್ಲೂ ಅಡ್ಡಾಡಬಹುದು. ರೂಢಿಯ ಒಂದೇ ಬಾಗಿಲನ್ನು ದಾಟಿ ಬಂದಿರುತ್ತೇವೆ. ಬದುಕಿನ ಬೇರೆ ಬೇರೆ ಹೆಬ್ಬಾಗಿಲುಗಳನ್ನು ಆಗ ಅಚ್ಚರಿಯಿಂದ ಕಂಡಿರುತ್ತೇವೆ. ಯಾವ ಬಾಗಿಲಿಗೂ ಬೀಗ ಇರುವುದಿಲ್ಲ. ತೆರೆದ ಎಲ್ಲ ಬಾಗಿಲುಗಳು ಕೈ ಬೀಸಿ ಕರೆಯುತ್ತಲೆ ಇರುತ್ತವೆ. ಹಾಗೇ ಆಗಿತ್ತು. ನನ್ನ ಗತಿಯೂ. ಎಲ್ಲಿಯೂ ಬಾಗಿಲ ಬಳಿ ತಡೆಯುವವರೆ ಇರಲಿಲ್ಲ. ತಡೆದರೂ ಮುರಿದು ದಾಟುವ ಹಠ ಬೇರು ಬಿಟ್ಟಿರುತ್ತದೆ. ನನ್ನ ಮುಂದೆ ಅಪ್ಪನ ಯಾವ ಸಂಕೋಲೆಯ ಕೋಳಗಳೂ ಇರಲಿಲ್ಲ. ನಿರಂಕುಶವಾಗಿತ್ತು ಮನ. ಮನಸ್ಸಿಗೆ ಬಾಗಿಲೇ, ಬೀಗವೇ, ಭಯವೇ… ಗೊತ್ತಿಲ್ಲದೇ ಮನಸ್ಸು ಎಲ್ಲದಕ್ಕು ಸಿದ್ಧವಿರುತ್ತದೆ, ಹೊಡೆ ಎಂದರೆ ಹೊಡೆದೇ ಬಿಡುತ್ತದೆ. ಬೇಡ ಬಿಡೂ ಎಂದರೆ ಎಲ್ಲವನ್ನೂ ಕ್ಷಮಿಸಿ ಬಿಟ್ಟುಕೊಡುತ್ತದೆ, ಬಾಗಿಲ ಭದ್ರ ಮಾಡಿಕೊ ಎಂಬ ಎಚ್ಚರವೆ ಇರುವುದಿಲ್ಲ.
ಬಯಲಿಗೆ ಯಾವ ಭಯ ಭದ್ರತೆಯ ಬೀಗ. ಹಾಗೆ ಬೀಗವೇ ಬೇಡ ಎಂಬ ಪ್ರಜ್ಞೆ ತಂತಾನೆ ಪ್ರಾಯಕ್ಕೆ ಬಂದಿರುತ್ತದೆ. ಚಿಲಕ ಹಾಕಿ ಮಲಗಬೇಕು ಎಂಬ ಭಾವವೇ ಇರುವುದಿಲ್ಲ. ತೆರೆದ ಮನಕ್ಕೆ ಯಾವ ದಿಕ್ಕಿನಿಂದಲೂ ಬಾಗಿಲು ಕೂಡಿಸಲಾರದು. ಜಾಗೃತಿಯೇ ಇಲ್ಲದ ಪ್ರಾಯ ಕಾಲದ ಅಜಾಗರೂಕತೆಯೇ ಒಂದು ಸತ್ಯ, ಸೌಂದರ್ಯ, ಸ್ವಾತಂತ್ರ್ಯ. ಜಾಗರೂಕತೆಯಿಂದ ನಡೆದಾಗಲೇ ಮನುಷ್ಯ ವಿಪರೀತ ಜಾರಿ ಬೀಳುವುದು. ಪ್ರಬುದ್ಧತೆಯ ಕಡೆಗೆ ಬಂದೆ ಎಂದಾಗಲೇ ಎಲ್ಲ ಮರೆವು. ಗೊತ್ತಿರುವುದೆಲ್ಲ ಸಾಲದು ಎಂಬ ದಿಗಿಲು… ಸಾಧ್ಯ ಎನ್ನುವುದೆಲ್ಲ ಅಸಾಧ್ಯವಾಗುವುದು ಬಾಗಿಲು ಭದ್ರಪಡಿಸಿ ಸುರಕ್ಷಿತ ಎಂದು ಕೂತಾಗಲೇ ಕೈಕೊಡುವುದು. ನೆಮ್ಮದಿಯಾಗಿರಬೇಕಾದ ಕಾಲದಲ್ಲೇ ಎಲ್ಲರ ನೆಮ್ಮದಿಯೂ ಕೆಡುವುದು. ಎಂತಹ ವಿಪರ್ಯಾಸ… ದುಃಖವೇ ತುಂಬಿಕೊಂಡಿದ್ದಾಗ ದುಃಖದ ಅನುಭವವೇ ಆಗಿರುವುದಿಲ್ಲ. ಬದುಕಿನ ಉದ್ದಕ್ಕೂ ಎಷ್ಟೊಂದು ಬಾಗಿಲುಗಳ ದಾಟಿ ಸಾಗಬೇಕು ಮನುಷ್ಯ… ಪ್ರಾಯಕ್ಕೆ ಕೊನೆ ಮೊದಲು ಎಂಬ ನಿರ್ದಿಷ್ಟ ಬಾಗಿಲುಗಳೇ ಇಲ್ಲ. ದೊಡ್ಡವರಾಗುತ್ತ ನಡೆದಂತೆ ಒಂದೊಂದೇ ಬಾಗಿಲುಗಳಿಗೆ ಬೀಗ ಹಾಕಿಕೊಳ್ಳುತ್ತ ಬರುತ್ತೇವೆ. ಕೆಲವೊಂದು ಬಾಗಿಲುಗಳ ಶಾಶ್ವತವಾಗಿ ಮುಚ್ಚಿಸಿಬಿಡುತ್ತೇವೆ. ಯಾವುದೊ ಒಂದು ದಿಕ್ಕಿನ ಬಾಗಿಲ ಬೀಗವೇ ನಾವೇ ಆಗಿ ಅಲ್ಲೇ ಬಂಧಿಯಾಗಿ ಬಿಟ್ಟಿರುತ್ತೇವೆ.
ವಿಚಾರಗಳ ಅಮಲು ತನ್ನ ನೆತ್ತಿಯಲ್ಲಿ ಯಾವತ್ತೂ ಸುಳಿಯಂತೆ ಸುತ್ತುತ್ತಲೇ ಇತ್ತು. ಅದರೊಳಗೆ ನನ್ನ ಬಾಲ್ಯ ಕಾಲ ಬೆಳೆಯುತ್ತಲೆ ಇತ್ತು. ಆ ಸುಂದರ ಶಹರ ನನ್ನನ್ನು ಎಲ್ಲ ಬಾಗಿಲುಗಳಲ್ಲು ಬಿಟ್ಟುಕೊಂಡಿತ್ತು. ಗೊತ್ತಿರುವುದನ್ನು ಮಾಡುವುದರಿಂದ ಏನು ಅರಿವು ದಕ್ಕುವುದೊ ಗೊತ್ತಿಲ್ಲ. ಆದರೆ ಗೊತ್ತಿಲ್ಲದ್ದನ್ನು ಮಾಡುವಾಗ ಏನಾದರೂ ಹೊಸದೊಂದು ತಿಳಿಯುತ್ತದೆ. ಅದಕ್ಕೊಂದು ಪೂರಕ ಪರಿಸರ ಪರಿಸ್ಥಿತಿ ಬೇಕು. ನಾನಾಗ ದ್ವಿತೀಯ ಬಿ.ಎ. ಓದುತ್ತಿದ್ದೆ. ಪಾಸಾಗಿದ್ದೆ ಅಷ್ಟೇ… ಅಂಕಗಳು ಮುಖ್ಯ ಎನಿಸಿರಲಿಲ್ಲ. ನಾನೆಷ್ಟು ಬೇಗ ನರಕದಿಂದ ಪಾರಾಗಿ ದೂರಾಗಿ ಬಂದೆ ಎಂಬುದೇ ದೊಡ್ಡ ಸಂಗತಿಯಾಗಿತ್ತು.
ಒಂದು ದಿನ ಸರಸ್ವತಿಪುರಂನ ಕನ್ನೇಗೌಡನ ಕೊಪ್ಪಲಿಗೆ ಅಂಟಿಕೊಂಡಂತೆ ಇದ್ದ ರಸ್ತೆ ಮೂಲೆಯಲ್ಲಿ ‘ಪೃಥ್ವಿ’ ಪ್ರಿಂಟರ್ಸ್ ಎಂಬ ಒಂದು ನೆಲೆ ಇತ್ತು. ಆ ಕಾಲಕ್ಕೆ ಅಕ್ಷರಗಳನ್ನು ಜೋಡಿಸಿ ಪ್ರಿಂಟ್ ಮಾಡುವುದೇ ದೊಡ್ಡ ತಂತ್ರಜ್ಞಾನವಾಗಿತ್ತು. ಲಿಪಿಗಳನ್ನು ಚಕಚಕನೆ ಎತ್ತೆತ್ತೆ ಮಣೆಯಲ್ಲಿ ಜೋಡಿಸುವ ಕುಶಲಿಗಳ ಕಂಡು ವಿಸ್ಮಯವಾಗುತ್ತಿತ್ತು. ಅಕಸ್ಮಾತ್ ಆ ಪ್ರಿಂಟಿಂಗ್ ಪ್ರೆಸ್‌ಗೆ ನಾನು, ಬಂಜಗೆರೆ ಜಯಪ್ರಕಾಶ್ ಹೋಗಿದ್ದೆವು. ಅದಾಗಲೆ ಕಾಲೇಜಿನ ಸ್ಮರಣ ಸಂಚಿಕೆಗಳಲ್ಲಿ ಬರಹ ಆರಂಭಿಸಿದ್ದೆವು. ಓದು, ವಿಚಾರ, ಹೋರಾಟ, ಬರಹ ಒಟ್ಟೊಟ್ಟಿಗೆ ಬೆರೆತಿದ್ದವು. ಬರಹವನ್ನು ನಾನು ಕೊನೆಯ ಸ್ಥಾನದಲ್ಲಿಟ್ಟಿದ್ದೆ. ಕವಿಗಳು ಎಂದರೆ ಯಾಕೊ ನಗು ಬರುತ್ತಿತ್ತು. ಬರಹಗಾರರೇ ಒಂದು ಬಗೆಯ ಬೂಸಾ ಎಂಬ ಮಾತು ತಲೆಗೆ ಇಳಿದಿತ್ತು. ಹೋರಾಟವೇ ಮುಖ್ಯ; ಪದವಿ ಸುಮ್ಮನೆ ಎಂಬ ಉಡಾಫೆ ಬಂದುಬಿಟ್ಟಿತ್ತು. ಹೊತ್ತು ಹೊತ್ತಿಗೆ ಚೆನ್ನಾಗಿ ಬಿಟ್ಟಿಯಾಗಿ ಹಾಸ್ಟೆಲಲ್ಲಿ ಊಟ ಸಿಗುತ್ತಿತ್ತು. ಅದು ಸಾಲದು ಎಂಬಂತೆ ಆರಾರು ತಿಂಗಳಿಗೆ ಆರುನೂರು ರೂಪಾಯಿಗಳ ಉತ್ತೇಜನ ಧನ ನಮ್ಮ ಜೇಬಿಗೆ ಬರುತ್ತಿತ್ತು. ಅನೇಕ ಮಿತ್ರರು ಮಜಾ ಮಾಡಲು ಬಳಸುತ್ತಿದ್ದರು. ಮಜಾ ಮಾಡುವುದೇ ನನಗೆ ಗೊತ್ತಿರಲಿಲ್ಲ. ಬಟ್ಟೆ ಪುಸ್ತಕ ಕೊಳ್ಳುತ್ತಿದ್ದೆ. ಖುಷಿಯಾಗಿರಲು ಗೆಳೆಯರು ಇದ್ದೇ ಇದ್ದರು.
ಜೇಪಿ ಆ ಪ್ರಿಂಟಿಂಗ್ ಪ್ರೆಸ್‌ಗೆ ಆ ಮೊದಲೆ ಹೋಗಿದ್ದ. ಅವನ ಕವನ ಸಂಕಲನ ಅಲ್ಲೇ ಪ್ರಿಂಟಾಗಿದ್ದುದು. ಪರಿಚಯ ಮಾಡಿಸಿದ. ಅಲ್ಲಿದ್ದ ಮುಖ್ಯ ಕೆಲಸಗಾರನ ಹೆಸರು ನೆನಪಿಲ್ಲ. ಎಲ್ಲೆಡೆ ಬಾಗಿಲು ಮುಚ್ಚಿದರೆ ಈ ಪ್ರಿಂಟಿಂಗ್ ಪ್ರೆಸ್‌ಗೆ ಬಂದು ಉಳಿದುಕೊಳ್ಳಬಹುದು ಎಂದು ಯೋಚಿಸಿದೆ. ಅಲ್ಲೇ ಗಂಜಿ ಕಾಯಿಸಿಕೊಂಡು ಕೆಲಸ ಮಾಡುವವರು ಇದ್ದರು. ಒಂದು ಮುರುಕು ಚೇರಿನ ಮೇಲೆ ಕೂತಿದ್ದೆ. ಕಪ್ಪು ಬಿಳುಪಿನ ಪೋಸ್ಟರ್ ಒಂದು ಕಾಣಿಸಿತು. ಅದರ ಚಿತ್ರ ಬಡಪಾಯಿ ಜೀತಗಾರನ ಪ್ರತಿನಿಧಿಯಂತಿತ್ತು. ಹತ್ತಿರ ಹೋಗಿ ನೋಡಿದೆ. ಅದು ಒಂದು ಪತ್ರಿಕೆಯ ಜಾಹೀರಾತು ಪಟವಾಗಿತ್ತು. ದೇವನೂರು ಮಹದೇವ ಎಂಬ ಹೆಸರು ಆ ಪೋಸ್ಟರಿನ ಕೆಳಗಿತ್ತು. ಜೇಪಿಯ ತಗ್ಗಿದ ದನಿಯಲ್ಲಿ ಕೇಳಿದೆ. ಇದು ಸಮಾಜವಾದಿಗಳು ತರುವ ವಿಭಿನ್ನ ಪತ್ರಿಕೆ ಎಂದ. ಅದಾಗಲೇ ನಾನು ಸೋವಿಯತ್ ರಷ್ಯಾದ ಕ್ರಾಂತಿಕಾರಿ ಸಾಹಿತ್ಯ ಪತ್ರಿಕೆಯಾದ ಸೋವಿಯತ್ ಲಿಟರೇಚರ್ ಪತ್ರಿಕೆಯನ್ನು ಕಂಡಿದ್ದೆ. ಅದರ ಕವಿತೆಗಳು ಹಿಡಿಸಿದ್ದವು. ವಿಶೇಷವಾಗಿ ಬುರ್ಜಾವಾ ವ್ಯವಸ್ಥೆಯನ್ನು ವಿಡಂಬಿಸುವ ಕಾರ್ಟೂನುಗಳು, ಚಿತ್ರಕಲಾಕೃತಿಗಳು ಗಾಢವಾಗಿ ಮನಸೆಳೆದಿದ್ದವು. ಬಹಳ ಬಲಿಷ್ಟವಾದ ದಪ್ಪ ಬೂಟುಗಳು… ಭಾಗಶಃ ಹಿಟ್ಲರನ ಆ ಬೂಟುಗಳು ಡೆಸರ್ಟ್ ಒಂದರಲ್ಲಿ ಅನಾಥವಾಗಿ ಬಿದ್ದಿರುವಂತೆ ಚಿತ್ರಿಸಿದ್ದ ಆ ಕಾರ್ಟೂನ್ ಬಹಳ ಕಾಡಿತ್ತು.
ಮಾರ್ಕ್ಸ್‌ವಾದಿಗಳು ಗೊತ್ತಿದ್ದರು; ಸಮಾಜವಾದಿಗಳ ವಿಶೇಷತೆ ಏನೆಂಬುದೆ ತಿಳಿದಿರಲಿಲ್ಲ. ಜೇ.ಪಿ.ಎಂ.ಎನ್.ರಾಯ್ ಹಾಗೂ ಲೋಹಿಯಾ ಬಗ್ಗೆ ವಿವರಿಸಿದ. ಮನಸ್ಸಿಗೆ ಒಪ್ಪಲಿಲ್ಲ. ಆ ಮಳವಳ್ಳಿಯ ಪೈಲ್ವಾನನೇ ಸರಿ ಎನಿಸಿತ್ತು. ವಿಚಿತ್ರ ಕಾಲ ಸಂಯೋಗ ನಮ್ಮೊಳಗೆ ಆಗುತ್ತಿತ್ತು. ಯಾರೂ ಯಾರ ಪಾಠವನ್ನೂ ಹಠ ಹಿಡಿದು ಹೇರುತ್ತಿರಲಿಲ್ಲ. ಆಳದಲ್ಲಿ ನನ್ನ ಅಂತರಾಳಕ್ಕೆ ಯಾವ ತತ್ವ ಸಿದ್ಧಾಂತಗಳೂ ಒಪ್ಪುತ್ತಿರಲಿಲ್ಲ. ಗಳಗಳನೆ ಅತ್ತು ಬಿಡಲು ಮಾರ್ಕ್ಸ್‌ವಾದವನ್ನೊ ಅಂಬೇಡ್ಕರ್ ತತ್ವವನ್ನೊ ಅರಿದು ಕುಡಿಯಬೇಕಾಗಿರಲಿಲ್ಲ. ನನ್ನ ಬಾಲ್ಯದ ಬದುಕು ಆ ಎಲ್ಲ ತತ್ವಗಳ ಎಲ್ಲೆ ಮೀರಿತ್ತು. ಒಬ್ಬ ಮಡಕೂಸಮ್ಮ, ಆ ವೀರಭದ್ರ ಚಿಕ್ಕತಾತ, ಆ ಅತ್ತೆಯರು, ಆ ಅಮರಾವತಿ… ಒಬ್ಬರೇ ಇಬ್ಬರೇ ಅಸಂಖ್ಯಾತ ಬದುಕಿನ ಆಕಾಶದ ತಾರೆಗಳ ಜೊತೆ ಅತ್ತಂತೆ ನಕ್ಕು; ನಕ್ಕಂತೆ ಅತ್ತು ಬಂದಿದ್ದ ನನಗೆ ಯಾವುದೂ ತೃಪ್ತಿ ನೀಡುತ್ತಿರಲಿಲ್ಲ.
ಮೊದಲ ಬಾರಿಗೆ ದೇವನೂರು ಮಹದೇವ ಅವರ ಹೆಸರು ಕೇಳಿದ್ದೆ. ಜೇ.ಪಿ. ನನಗಿಂತ ಮುಂದಿದ್ದ. ಚುರುಕಾಗಿದ್ದ. ವಾಗ್ಮಿಯಾಗಿದ್ದ. ಬಹಳ ಸುಂದರವಾಗಿದ್ದ. ಆ ರಾತ್ರಿ ಮಹದೇವ ಅವರ ದ್ಯಾವನೂರು. ಒಡಲಾಳ ಕೃತಿಗಳ ಬಗ್ಗೆ ಪರಿಚಯಿಸಿದ್ದ. ಅವರು ದಲಿತರು… ಕಥಾ ಪರಂಪರೆಯ ದಿಕ್ಕನ್ನೆ ಬದಲಿಸಿದವರು ಎಂದಿದ್ದ. ಅಷ್ಟು ಸಲೀಸಾಗಿ ಆ ಮಾತನ್ನು ಸ್ವೀಕರಿಸಿರಲಿಲ್ಲ. ಆ ಮಾದೇಶ್ವರನ ಕಥೆಯ ಹಾಡು ಹಾಡುವ ಮಾದಯ್ಯನೇ ಶ್ರೇಷ್ಠ ಎನಿಸಿತ್ತು. ಪ್ರೊ. ನಂಜುಂಡಸ್ವಾಮಿ ಅವರ ಶಿಷ್ಯ ಮಹದೇವ್ ಎಂದಾಗ ಆ ಪ್ರೊಫೆಸರ್ ಯಾರು ಎಂದಿದ್ದೆ. ಜೇಪಿ ಮರುಕದಿಂದ ನೋಡಿದ್ದ. ನಿಜವಾಗ್ಲೂ ಗೊತ್ತಿಲ್ಲ ಎಂದಿದ್ದೆ. ಗೊತ್ತು ಎಂದು ಸುಳ್ಳು ಹೇಳುವ ಜಾಯಮಾನ ನನ್ನದಾಗಿರಲಿಲ್ಲ. ರೈತ ಸಂಘಕ್ಕೂ ಪ್ರೊಫೆಸರ್‌ಗೂ ಏನು ಸಂಬಂಧ ಎಂಬ ಅಭಾಸ ಎದುರಾಗಿತ್ತು. ಜೇಪಿ ಹೇಳಿದಾಗ ಅಚ್ಚರಿಯಾಗಿ ಮನಸ್ಸು ತುಂಬಿತ್ತು. ರಾಮದಾಸ್ ತರದವರು ಎಂದೆ. ಕರೆಕ್ಟ್… ಅವರೆಲ್ಲ ಒಂದೇ ಗುಂಪಿನ ಸಮಾಜವಾದಿಗಳು. ಲಂಕೇಶ್, ತೇಜಸ್ವಿ, ಅನಂತಮೂರ್ತಿ ಇವರೆಲ್ಲ ಒಂದೇ ತೆಂಡೆಯವರು. ಇವರೆಲ್ಲರ ಪ್ರತಿರೂಪವೇ ‘ಮಾನವ’ ಎಂಬ ಆ ಪತ್ರಿಕೆ ಎಂದಾಗ; ನಾನು ಎಷ್ಟು ಹಿಂದೆ ಬಿದ್ದಿರುವೆ ಎಂದು ಹತಾಶೆಯಾಯಿತು. ಅತ್ತ ಐ.ಎ.ಎಸ್ ಕನಸಿನ ಗೆಳೆಯರು; ಇತ್ತ ಕ್ರಾಂತಿಕಾರಿ ಮಿತ್ರ ಬಳಗ… ಯಾರ ಜೊತೆ ಉಳಿಯಲಿ ಎಂಬ ಗೊಂದಲದಲ್ಲಿದ್ದೆ. ಇಂತಿರುವಾಗ ಒಂದು ತಮಾಷೆ ಜರುಗಿತ್ತು.
ಆ ಪೃಥ್ವಿ ಪ್ರಿಂಟಿಂಗ್ ಪ್ರೆಸ್‌ನಿಂದ ನಮ್ಮನ್ನು ಹುಡುಕಿಕೊಂಡು ಒಬ್ಬ ಸಂಪಾದಕ ಜೇಪಿಯ ಕೊಠಡಿಗೆ ಬಂದ. ಯಾವಾಗಲೂ ಜೊತೆಗೇ ಪಕ್ಕದ ರೂಮಿನಲ್ಲೆ ಇದ್ದ ನಾನು ಆ ಸಂಪಾದಕನ ಹಾವಭಾವಗಳ ಗಮನಿಸಿದೆ. ಇವನು ನಾಟಕ ಕಂಪನಿಯಲ್ಲಿ ಇರಬೇಕಾದವನು ಹೇಗೆ ಪತ್ರಿಕೆಯ ಸಂಪಾದಕನಾದ ಎಂದು ಯೋಚಿಸುತ್ತಿದ್ದೆ. ಹದಿನೈದು ದಿನಕ್ಕೆ ಒಮ್ಮೆ ಬರುವ ಪತ್ರಿಕೆ. ಅದರ ಹೆಸರೋ ‘ಶ್ರೀ ರಾಘವೇಂದ್ರಾಯ ನಮಃ’ ವಿಚಿತ್ರ ಸಂಪಾದಕ. ನಮ್ಮನ್ನು ಒತ್ತಾಯಿಸಿ ಕೋರುತ್ತಿದ್ದ. ನಾವು ಆ ಪತ್ರಿಕೆಯ ಖಾಯಂ ಬರಹಗಾರರಾಗಿ ಪತ್ರಿಕೆಯ ನಡೆಸಿಕೊಂಡು ಹೋಗಬೇಕಾಗಿತ್ತು. ವಾರ ವಾರ ಪಾಕೆಟ್ ಮನಿ ಕೊಡುವುದಾಗಿ ಭರವಸೆ ನೀಡಿದ. ಆ ಪತ್ರಿಕೆಗೆ ಯಾರೂ ಬರೆಯುತ್ತಿರಲಿಲ್ಲ. ನಮ್ಮಂತಹ ಎಡಬಿಡಂಗಿ ಹುಡುಗರೇ ಆ ಪತ್ರಿಕೆಯ ನಿಸ್ಸೀಮ ಬರಹಗಾರರು. ಆದರೆ ನಾವಾಗ ಬರಹಗಾರರೇ ಅಲ್ಲ. ಆ ಸಂಪಾದಕನೇ ಪತ್ರಿಕೆಯ ಮಾಲೀಕನೂ ಆಗಿದ್ದ. ಅವನೇ ಅಲ್ಲಿ ಇಲ್ಲಿ ಪಾವ್‌ವಾಲಾ ಅಂಗಡಿಗಳಲ್ಲಿ ಸುತ್ಲಿದಾರ ಕಟ್ಟಿ ಆ ಪತ್ರಿಕೆಗಳ ನೇತು ಹಾಕಿ; ‘ನೀವೇ ಮಾರಿ; ನಿಮಗರ್ದ ನನಗರ್ದ’ ಎಂದು ಹೇಳಿ ಹೊರಟು ಹೋಗುತ್ತಿದ್ದ. ಹದಿನೈದು ದಿನಗಳ ಅಂತರದಲ್ಲಿ ಕೆಲವಾದರೂ ಪತ್ರಿಕೆ ಮಾರಾಟವಾಗುತ್ತಿದ್ದವು. ಆ ಪ್ರೆಸ್‌ನವನು ನಮ್ಮ ವಿಳಾಸ ಕೊಟ್ಟು ಕಳಿಸಿದ್ದ. ಆ ಸಂಪಾದಕ ಕಂ ಮಾಲೀಕ ಬಿಕ್ಕಟ್ಟಿನಲ್ಲಿದ್ದ. ಅವನಿಗೆ ಓದು ಬರಹ ಬರುತ್ತಿರಲಿಲ್ಲ. ಆದರೂ ಒಂದು ಪತ್ರಿಕೆಯ ರಿಜಿಸ್ಟರ್ ಮಾಡಿಸಿ ಹೇಗೋ ನಡೆಸಿಕೊಂಡು ಬಂದು ಮುಗ್ಗರಿಸಿದ್ದ. ಅಂತಲ್ಲಿ ನಾವೇ ಅವನಿಗೆ ಆಪತ್ಬಾಂಧವರಾಗಿದ್ದೆವು. ಯಾವುದೊ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾನೆಂದು; ಬೇಡ ಎಂಬಂತೆ ಕಣ್ಣು ಸನ್ನೆ ಮಾಡಿದೆ. ಜೇಪಿ ಉತ್ಸಾಹದಲ್ಲಿದ್ದ. ‘ನಾವು ಬರೀತೀವಿ… ಇಂತಾದ್ನೇ ಬರೀಬೇಕು ಎಂದು ನಿಯಮ ಹಾಕಬಾರದು’ ಎಂದ ಜೇಪಿ. ‘ಅಯ್ಯಯ್ಯೋ; ನೀವೇನಾರ ಬರ್ಕಳೀ.. ಲವ್‌ಲೆಟರ್ನೆ ಬರ್ಕಂದು ಅಚಾಕಿಸ್ರಿ… ಎಲ್ಲ ನಿಮಗೆ ಬಿಟ್ಟಿದ್ದು… ನೀವು ಒಪ್ಕಂಡ್ರೆ ನಾನು ನಿಮ್ಮ ಬೆನ್ನಿಂದೆ ಇರ್ತೀನಿ’ ಎಂದು ದೈನ್ಯತೆ ತೋರಿದ.
ಅವನ ಕಪೋಲಗಳು ಎಷ್ಟು ಒರಟಾಗಿ ದಪ್ಪವಾಗಿದ್ದವು ಎಂದರೆ ಹಿಪ್ಪೋ ಪೋಟಮಸ್ ಕವಟೆಯಷ್ಟು ಗಡುಸಾಗಿದ್ದವು. ಭಾಗಶಃ ಶೇವಿಂಗ್ ಮಾಡಿ ಮಾಡಿ ಆ ಗತಿ ಆಗಿತ್ತೇನೊ. ಆ ಮೇಲೆ ತಿಳಿಯಿತು; ಅವನು ದಿನಕ್ಕೆ ಎರಡರಿಂದ ಮೂರು ಬಾರಿ ಅಗಲವಾದ ಬ್ಲೇಡಿನಿಂದ ಕರಕರನೆ ಮುಖ ಕೆರೆದುಕೊಳ್ಳುತ್ತಾನೆಂದು. ನಾವು ಒಪ್ಪಿದ ಕೂಡಲೆ ಸಂಭ್ರಮಿಸಿದ. ನನ್ನ ಜೊತೆ ಮೆಳೆಕಲ್ಲಹಳ್ಳಿ ಚಿ.ಉದಯನೂ ಸೇರಿದ. ಅತ್ಯಂತ ಸುಂದರ ಕೈ ಬರಹ ಅವನದು. ಮೋಹಕ ಪ್ರೇಮ ಪತ್ರ ಬರೆಯುವುದರಲ್ಲೇ ಯಾವಾಗಲೂ ಮುಂದಿರುತ್ತಿದ್ದ. ಅವನ ಹಳ್ಳಿಯ ಪ್ರೇಯಸಿಯರ ಪ್ರೇಮ ಪತ್ರಗಳನ್ನು ಅತ್ಯುನ್ನತ ರಾಷ್ಟ್ರ ಪ್ರಶಸ್ತಿ ಪತ್ರಗಳು ಎಂಬಂತೆ ಓದಿ ಧನ್ಯವಾಗುತ್ತಿದ್ದ. ಅವನ ಆ ಪ್ರೇಮ ಪತ್ರಗಳು ಸುಲಭವಾಗಿ ನನ್ನ ಕೈಗೆ ಸಿಗುವಂತೆ ತನ್ನ ಟೇಬಲ್ ಮೇಲೆ ಇಟ್ಟಿರುತ್ತಿದ್ದ. ನಿಜಕ್ಕೂ ಅವನಿಗೆ ಅವು ಪಾರಿತೋಷಕವೇ ಆಗಿದ್ದವು. ಆ ಪ್ರಿಂಟಿಂಗ್ ಪ್ರೆಸ್ ನಮ್ಮ ಆತ್ಮವಿಶ್ವಾಸದ ಕೇಂದ್ರವಾಯಿತು. ನಾವು ಬರೆದು ಕೊಡುವುದಷ್ಟೇ ಕೆಲಸ. ಪ್ರಿಂಟಿಂಗ್ ಪ್ರೆಸ್‌ನವರೆ ಉಳಿದೆಲ್ಲ ಕೆಲಸಗಳ ನಿಭಾಯಿಸಿ ಪ್ರಿಂಟ್ ಮಾಡುತ್ತಿದ್ದರು.
ಹೆಸರಿಗೆ ಶ್ರೀ ರಾಘವೇಂದ್ರಾಯ ನಮಃ ಎಂದಿದ್ದರೂ ಅದರಲ್ಲಿದ್ದ ಎಲ್ಲ ಬರಹಗಳು ಪ್ರಾಯದ ಅಮಲು ಮತ್ತು ಕ್ರಾಂತಿಯ ವಿಚಾರಗಳಿಂದಲೆ ತುಂಬಿ ಹೋಗಿದ್ದವು. ಎಲ್ಲಿಯ ರಾಘವೇಂದ್ರ ಎಲ್ಲಿಯ ಮಾರ್ಕ್ಸ್… ಯಾವ ಪ್ರೇಮ ಮೋಹ ಕಾಮಗಳ ಬರಹ ಎಲ್ಲಿಯ ಭಕ್ತಿಯರಗಳೆ… ಕೆಲವೇ ಸಂಚಿಕೆಗಳಲ್ಲಿ ಆ ಪತ್ರಿಕೆಯ ಇಡೀ ಸ್ವರೂಪವನ್ನೆ ಬದಲಿಸಿಬಿಟ್ಟೆವು. ಆ ನಡುವೆ ನಾನೊಂದು ತಪ್ಪು ಮಾಡಿದ್ದೆ. ಕ್ರಾಂತಿಯ ವಿಚಾರ ಸಾಕೆಂದು ದೆವ್ವಗಳ ಕಾಟದ ಬಗ್ಗೆ ಬರೆದಿದ್ದೆ. ನನ್ನ ತಾತ ಕುರುಡಿ ಅದು ಹೇಗೆ ನನ್ನ ಮೈದುಂಬಿ ಬಂದಿದ್ದನೊ ಏನೊ… ತಾತನ ದೆವ್ವಗಳ ಕಥೆಗಳು ಬಹಳ ಇಂಟ್ರೆಸ್ಟ್ ಆಗಿರುತ್ತವಲ್ಲಾ; ಹಾಗೇ ನಾನು ಹಾಸ್ಟೆಲಿನ ರೂಮುಗಳ ದೆವ್ವಗಳ ಕಾಟದ ಕುರಿತಂತೆ ಬರೆಯುವ ಎಂದು ಆ ಬಗ್ಗೆ ಬಣ್ಣಕಟ್ಟಿ ಬರೆದು ಬಿಟ್ಟಿದ್ದೆ. ಅದೊಂದು ಕಥೆಯಂತಿತ್ತು. ಆ ಮೂಲೆಯ ಒಂಟಿ ಕೊಠಡಿಯಲ್ಲಿ ವೆಂಕಟೇಶ್ ಎಂಬ ಒಬ್ಬ ಇದ್ದ. ವಯಸ್ಸಿನಲ್ಲಿ ಸಾಕಷ್ಟು ಹಿರಿಯ. ಫೇಲಾಗಿ ಆಗಿ ಎದ್ದು ಬರುವಲ್ಲಿ ಮದುವೆ ವಯಸ್ಸೆ ಮೀರಿತ್ತು. ಬಹಳ ಶ್ರದ್ಧೆ ಆಸಕ್ತಿಯ ಸ್ನೇಹಿತ. ಘನವಾಗಿ ರಾತ್ರಿ ಎರಡು ಗಂಟೆತನಕ ಓದುತ್ತಿದ್ದ. ಆದರೆ ದುರಾದೃಷ್ಟ ಎಂದರೆ ಮೋಡಿಲಿಪಿಯಲ್ಲಿ ಬರೆಯುತ್ತಿದ್ದ. ಗೀಚಿ ಗೀಚಿ ಬಳ್ಳಿಹಬ್ಬಿದಂತಿದ್ದ ಅವನ ಕೈ ಬರಹವನ್ನು ಓದಲು ಬಹಳ ಕಷ್ಟವಾಗುತ್ತಿತ್ತು. ಹಾಗಾಗಿ ಅವನು ಬಹಳ ಸಬ್ಜೆಕ್ಟ್‌ಗಳಲ್ಲಿ ಫೇಲಾಗಿದ್ದ. ಅವನು ನನ್ನ ಬಗ್ಗೆ ಬಹಳ ಕರುಣೆ ತೋರುತ್ತಿದ್ದ. ಸಲುಗೆಯೂ ಇತ್ತು. ನಾನು ಬುಗುರಿ ಕಥೆ ಬರೆಯಲು ಮೊದಲು ಪ್ರೇರಣೆ ಸಿಕ್ಕಿದ್ದೇ ಅವನಿಂದ. ಅದನ್ನು ಇಲ್ಲಿ ಹೇಳುವ ಅವಶ್ಯಕತೆ ಇಲ್ಲದಿದ್ದರೂ; ಹೇಗೆ ಒಂದು ಘಟನೆ, ವಿವರಣೆ, ಸಾಂದರ್ಭಿಕ ನಗೆ ಹೇಗೆ ಬೃಹತ್ತಾದ ಒಂದು ರೂಪಕವಾಗಿ ಮಾರ್ಪಡುತ್ತದೆ ಎಂಬುದಕ್ಕಾಗಿ ಹೇಳುತ್ತಿರುವ ಆ ದಿನ ಭಾನುವಾರ. ಬಟ್ಟೆ ತೊಳೆದು ವಿರಾಮವಾಗಿ ನಾನೂ ಶ್ರೀಧರನೂ ಹರಟುತ್ತಿದ್ದೆವು. ವೆಂಕಟೇಶ ಬಂದ. ಮೂಲತಃ ಎತ್ತರದ ಬಲವಾದ ಆಳು. ಹಳ್ಳಿಯ ಅಖಾಡಗಳಲ್ಲಿ ಕುಸ್ತಿ ಪಟುವಾಗಿದ್ದವನು. ಸಣ್ಣ ಪುಟ್ಟ ಕೀಲು ನೋವು, ಉಳುಕು, ವಾಯು ಇತ್ಯಾದಿಗಳಿಗೆ ಪರಿಹಾರ ಕಂಡಿದ್ದವನು. ಆ ಬಗ್ಗೆ ತನ್ನ ಅನುಭವ ಹೇಳುತ್ತಿದ್ದ. ಕುಸ್ತಿ ಆಡುವಾಗ ಯಾವನಿಗೊ ಒಬ್ಬನಿಗೆ ಸೊಂಟದಲ್ಲಿ ವಾಯು ಸಿಕ್ಕಿಹಾಕಿಕೊಂಡಿತ್ತು. ಅದನ್ನು ಬಿಡಿಸಲು ವೆಂಕಟೇಶ್ ಹೋಗಿದ್ದ. ನಾಚಿಕೆ ಏನೋ ಇರಲಿಲ್ಲ. ಮೊದಲೇ ಸಾಮು ಮಾಡುವ ದೇಹ. ಒಂದು ಕಚ್ಚೆ ಹಾಕಿ ಮಲಗಿದ್ದ ವಾಯು ಪೀಡಿತ ಪೈಲ್ವಾನ. ಬೆನ್ನುರಿಯಿಂದ ನೀವಿಕೊಂಡು ಬರಬೇಕಿತ್ತು. ಹೊಟ್ಟೆ ದಬಾಕಿ ಮಲಗಿಸಿ ಎಕ್ಕತ್ತಿನಿಂದ ಹರಳೆಣ್ಣೆ ಬಿಸಿ ಮಾಡಿ ಹಚ್ಚಿ ನೀವಿ ನೀವಿ ಸೊಂಟದ ಕುಂಡಿಯ ಕುಳಿತನಕ ನರಗಳ ಎಳೆದು ತರಬೇಕಿತ್ತು. ಎಲ್ಲೆಲ್ಲೊ ಸಿಕ್ಕಿ ಹಾಕಿಕೊಂಡಿದ್ದ ವಾಯು ಒಮ್ಮೆ ಎಡಗೈಗೆ ಇನ್ನೊಮ್ಮೆ ಬಲಗೈಗೆ ಸಿಕ್ಕಂತೆ ಜಾರಾಡಿ ಆಟ ಆಡಿಸುತ್ತಿತ್ತು. ಮಕಾಡೆ ಮಲಗಿದ್ದವನು ನೋವಿನಿಂದ ನರಳುತ್ತಿದ್ದ. ಮೇಲಿಂದ ನರವ ಎಳೆದು ತಂದು ಸೊಂಟದ ಕುಳಿಯಲ್ಲಿ ಅಮುಕುತ್ತಿದ್ದಂತೆ ಆ ಪೈಲ್ವಾನನ ಪಾಡು ಹೇಳತೀರದಾಗಿತ್ತು. ‘ಸಾಕು ಬಿಡೊ; ಅದೇ ಊಸೆಲಿ ಕಿತ್ಕಂದು ವೋಯ್ತದೆ’ ಎಂದರೂ ವೆಂಕಟೇಶ್ ಬಿಟ್ಟಿರಲಿಲ್ಲ. ಮಲಗಿದ್ದವನ ಕಚ್ಚೆಯ ಗಮನಿಸಿದ. ಹಿಡಿದೆಳೆದ. ಪೈಲ್ವಾನರು ಬಲವಾಗಿ ಕುಂಡಿ ತಳದಿಂದ ಎಳೆದು ಕಟ್ಟಿರುತ್ತಾರೆ. ‘ಒಹೋಓ; ಇದ್ನೇ ಗಮುನ್ಸಿಲ್ಲ ನೋಡೂ; ಇಲ್ಲೇ ಯಡವಟ್ಟಾಯ್ತಿರುದೂ; ಬಿಚ್ಚೋ ನಿನ್ನ ಕಚ್ಚೆಯಾ’ ಎಂದು ವೆಂಕಟೇಶನೇ ಜೀರುಗುಣಿಕೆ ಎಳೆದು ಕಚ್ಚೆಯ ಕಿತ್ತು ಅತ್ತ ಬಿಸಾಡಿ; ಆತನ ಎರಡೂ ತೊಡೆಗಳ ಅತ್ತಿತ್ತ ತಳ್ಳಿ ನಡುವೆ ಕಕ್ಕುರುಗಾಲಲ್ಲಿ ಕೂತು ಅದೇ ಯಥಾ ಪ್ರಕಾರ ಎಣ್ಣೆ ನೀವಿ ಎಳೆಯುತ್ತ ಬಂದ. ‘ಹಹಹಾsss’ ಎನ್ನುತ್ತಿದ್ದ ಮಲಗಿದ್ದಾತ. ವೆಂಕಟೇಶ ಪಟ್ಟು ಹಾಕಿ ಚಿತ್ ಮಾಡುವಂತೆ ಬಗ್ಗಿ ಸೊಂಟದ ಕುಳಿಯ ಬಲವಾಗಿ ಮಂಡಿಯೂರಿ ಅದುಮಿದ ಕೂಡಲೆ ಆ ಪೈಲ್ವಾನ ನಿಯಂತ್ರಿಸಲಾಗದೆ ‘ಬಡಕ್’ ಎಂದು ವಿಸರ್ಜಿಸಿಕೊಂಡಿದ್ದ. ಆ ರಭಸಕ್ಕೆ ಸಿಡಿದ ಮಲದ ಒಂದು ಚೂರು ವೆಂಕಟೇಶನ ಮೂಗಿನ ಮೇಲೆ ಬಂದು ಕೂತಿತ್ತು. ಅದೂ ಬೇರೆ ತಿಕದ ಬಳಿಯೇ ಮುಖವ ಬಗ್ಗಿಸಿ ನರವ ಎಳೆದಿದ್ದ. ಅಷ್ಟಾಗದೆ ಬೇರೆ ದಾರಿಯೇ ಇರಲಿಲ್ಲ. ಪೈಲ್ವಾನ ದಡಕ್ಕನೆ ಎದ್ದು ಕೂತಿದ್ದ. ವೆಂಕಟೇಶನಿಗೆ ಗೊತ್ತಾಗುವ ಮುನ್ನವೆ ಅವನ ಬೆರಳುಗಳಿಗೆ ಏನೊ ಎನಿಸಿ ಸವರಿಕೊಳ್ಳಲಾಗಿ ಹೇಸಿಗೆಯ ವಾಸನೆ ಬಡಿದಿತ್ತು. ಪೈಲ್ವಾನನ ವಾಯು ಎಲ್ಲೊ ಬಿದ್ದು ಓಡಿತ್ತು. ವೆಂಕಟೇಶ ತನಗಾದ ಈ ಪರಿಯನ್ನು ಯಾವ ಮುಚ್ಚು ಮರೆಯೂ ಇಲ್ಲದೆ ಹೇಳಿದ್ದ. ನಾನೂ ಶ್ರೀಧರನೂ ಬಿದ್ದು ಬಿದ್ದು ನಗಾಡಿ ಸುಧಾರಿಸಿಕೊಂಡಿದ್ದೆವು.
ವೆಂಕಟೇಶನ ವಾಯು ಚಿಕಿತ್ಸೆಯ ಆ ಪ್ರಕರಣವನ್ನು ನಾನು ಹತ್ತಾರು ಬಾರಿ ಉಳಿದ ಗೆಳೆಯರಿಗೆ ಅಭಿನಯಿಸಿ ಹೇಳಿ ಪ್ರಖ್ಯಾತಗೊಳಿಸಿದ್ದೆ. ಕಾಲೇಜಿನನೇಕರು ಹೀಗೆ ಆಗಿತ್ತೆ ನಿನಗೇ ಎಂದು ಕೇಳಿ ಕೇಳಿ ಅವನಿಗೆ ರೇಜಿಗೆಯಾಗಿತ್ತು. ಎಂದೂ ಬಂದು ಹೀಗೇಕೆ ಪ್ರಚಾರ ಮಾಡಿರುವೆ ಎಂದು ಕೇಳಿರಲಿಲ್ಲ. ಅವನ ಅಣ್ಣ ಭಾರತೀಯ ಯೋಧನಾಗಿದ್ದ. ವೆಂಕಟೇಶ್‌ಗೆ ರಾಷ್ಟ್ರಾಭಿಮಾನಕ್ಕಿಂತಲೂ ದೇಶದ ಸೈನಿಕರ ಬಗ್ಗೆ ಅಪಾರ ಗೌರವ ಇತ್ತು. ಅಂತಹ ವೀರ ಸೇನಾನಿಗಳ ಅಭಿಮಾನಿಗೆ ದೆವ್ವಗಳ ಕಾಟ ಎಂದರೆ ನನಗೆ ಏನನಿಸದಿರದೂ… ಆ ಬಗ್ಗೆ ತಲೆ ಕೆಡಿಸಿಕೊಂಡೆ. ಆಗಾಗ ವೆಂಕಟೇಶ್ ರೂಮಿಗೆ ಹೋಗುತ್ತಿದ್ದೆ ಏನಾದರೂ ಜೋಕುಗಳು ಸಿಗುತ್ತವೆಂದು. ಅವರ ಊರಲ್ಲಿ ರೈಲ್ವೆಯ ಪುಟ್ಟ ಜಂಕ್ಷನ್ ಇತ್ತು. ನಿಂತಿರುವ ಹಾಗೂ ಆಗ ತಾನೆ ಹೊರಡುವ ಗೂಡ್ಸ್ ಗಾಡಿಗಳಿಗೆ ಕತ್ತೆಗಳು ವಿಪರೀತ ಒದ್ದು ಒದ್ದು ಕೊನೆಗೆ ರೈಲು ಹಳಿಯಲ್ಲೆ ಬಿದ್ದು ಆ ರೈಲಿಗೆ ಬಲಿಯಾಗುತ್ತಿದ್ದವಂತೆ. ಹಿಂದೆ ಮುಂದೆ ಬರುವ ರೈಲುಗಳು ಆ ಬಡಪಾಯಿ ಕತ್ತೆಗಳಿಗಾಗಿ ಬ್ರೇಕ್ ಹಾಕಲು ಸಾಧ್ಯವಿರಲಿಲ್ಲ. ಹಳಿಗಳ ನಡುವೆ ನೀರಾಡಿ ಬೇಸಿಗೆಯಲ್ಲಿ ಹುಲ್ಲು ಬೆಳೆದು ಕತ್ತೆಗಳಿಗೆ ಮೇವು ಸಿಗುತ್ತಿತ್ತು. ನಮ್ಮ ಪಾಡಿಗೆ ನಾವು ಯಾರಿಗೂ ತೊಂದರೆ ಕೊಡದೆ ಇಲ್ಲಿ ಬಿದ್ದಿರುವ ಕಸಕಡ್ಡಿ ಹುಲ್ಲು ಮೇಯುವಾಗ ಏನು ಈ ಕಿರಾತಕ ರೈಲುಗಳ ಅಬ್ಬರದ ಸದ್ದು ಎಂದು ಪ್ರತಿಭಟಿಸಿ ಎಂಜಿನ್‌ನ ಮುಂಭಾಗಕ್ಕೆ ಎರಡೂ ಕಾಲುಗಳ ಬೀಸಿ ಒದೆಯುತ್ತಿದ್ದವಂತೆ. ಹಾಗೆ ವೆಂಕಟೇಶ್ ಹೇಳುವಾಗ ಅವನ ಮಾತಿನ ಸಂಧಿಯಲ್ಲಿ ಬಡಪಾಯಿ ಜನರ ಪಾಡು ವ್ಯಕ್ತವಾಗುತ್ತಿತ್ತು. ಆ ಕತ್ತೆಗಳ ಮೂರ್ಖತನದ ಬಗ್ಗೆ ಆ ಕ್ಷಣಕ್ಕೆ ನಗು ಬರುತ್ತಿತ್ತಾದರೂ; ಎಷ್ಟೋ ಹೊತ್ತಾಗಿ ಮಲಗಿದಾಗ ಆ ಕತ್ತೆಗಳ ಬಗ್ಗೆ ಮರುಕ ಉಂಟಾಗುತ್ತಿತ್ತು. ಆ ವೆಂಕಟೇಶನೂ ಹಲವು ಸಲ ನನಗೆ ಬಿಟ್ಟಿ ಸಾಲ ಕೊಟ್ಟಿದ್ದ. ಅಂತವರ ಎಷ್ಟೋ… ಉಪಕರಿಸಿ ಅವರೇ ಮರೆತಿದ್ದರು.
ಇಂತಿರುವಾಗ; ಸುಮ್ಮನಿರಲಾರದ ನಾನು ಚೇಷ್ಟೆ ಮಾಡಿದ್ದೆ. ಹುಡುಗಾಟಿಕೆಯೊ ಬರಹದ ಉತ್ಸಾಹವೊ; ಒಟ್ಟಿನಲ್ಲಿ ಹಾಸ್ಟೆಲಲ್ಲಿ ದೆವ್ವಗಳ ಕಾಟ ಎಂದು ವೆಂಕಟೇಶನ ಭೀತಿಯ ಬಗ್ಗೆ ಲೇಖನ ಬರೆದು ಬಿಟ್ಟಿದ್ದೆ. ಅದನ್ನು ಸಾಮಾನ್ಯರು ಓದಿದ್ದರೆ ಖಂಡಿತ ಹೆದರಿ ನಂಬಿಬಿಡುತ್ತಿದ್ದರು. ಆ ಪರಿಯಲ್ಲಿ ಹಾರಾರ್ ಆಗಿ ಬರೆದಿದ್ದೆ. ಕಲ್ಪನೆಯೇ ಹೆಚ್ಚಾಗಿತ್ತು. ಸುಮ್ಮನೆ ವೆಂಕಟೇಶನ ಜೊತೆ ‘ದೆವ್ವಗಳ ಕಾಟವಂತಲ್ಲಾ’ ಎಂದು ವಿಚಾರಿಸಿದ್ದೆ ಅಷ್ಟೇ. ಆತ ಒಂದಿಷ್ಟು ವಿವರ ಹೇಳಿದ್ದು ನಿಜ. ಆದರೆ ಉತ್ಕಟವಾಗಿ ಬರೆಯುವ ಬಿರುಸಿನಲ್ಲಿ ಇಲ್ಲದ್ದನ್ನೆಲ್ಲ ಬರೆದು ಬಿಟ್ಟಿದ್ದೆ. ನಾವು ಬರಹಗಾರರು ಎಂದು ಹಾಸ್ಟಲಲ್ಲಿ ಉಳಿದವರಿಗೆ ತೋರಿಸಿಕೊಳ್ಳಲು ರೀಡಿಂಗ್ ರೂಮಿನಲ್ಲಿ ಆ ರಾಘವೇಂದ್ರಾಯ ನಮಃ ಪತ್ರಿಕೆಯನ್ನು ಪ್ರತಿ ದಿನವು ಹಾಕುತ್ತಿದ್ದೆವು. ಅದನ್ನು ಯಾರೂ ಪರಿಗಣಿಸಿರಲಿಲ್ಲ. ನಾನು ಬರೆದ ದೆವ್ವಗಳ ಲೇಖನ ಇಡೀ ಹಾಸ್ಟೆಲಿನ ಎಲ್ಲರಿಗೂ ಮುಟ್ಟಿತ್ತು. ಅನೇಕರಿಗೆ ಭಯವಾಗಿತ್ತು. ಹೀಗಂತೇ ಎಂದು ಕಾಲೇಜಿನ ಕಾರಿಡಾರಿಗೂ ಹಬ್ಬಿತ್ತು.
‘ನಾವು ಬರೀತೀವಿ… ಇಂತಾದ್ನೇ ಬರೀಬೇಕು ಎಂದು ನಿಯಮ ಹಾಕಬಾರದು’ ಎಂದ ಜೇಪಿ. ‘ಅಯ್ಯಯ್ಯೋ; ನೀವೇನಾರ ಬರ್ಕಳೀ.. ಲವ್‌ಲೆಟರ್ನೆ ಬರ್ಕಂದು ಅಚಾಕಿಸ್ರಿ… ಎಲ್ಲ ನಿಮಗೆ ಬಿಟ್ಟಿದ್ದು… ನೀವು ಒಪ್ಕಂಡ್ರೆ ನಾನು ನಿಮ್ಮ ಬೆನ್ನಿಂದೆ ಇರ್ತೀನಿ’ ಎಂದು ದೈನ್ಯತೆ ತೋರಿದ.
ನನ್ನ ಆ ಬರಹದಲ್ಲಿ ಹೆಣ್ಣು ದೆವ್ವ ಸೃಷ್ಠಿಯಾಗಿತ್ತು. ವೆಂಕಟೇಶನನ್ನು ಆ ದೆವ್ವ ಹಿಡಿದಿದೆ ಎಂದು ಬಿಂಬಿಸಿದ್ದೆ. ಅಲ್ಲಿ ಕಥೆ ಚಿತ್ರಾನ್ನವಾಗಿತ್ತು. ಅನೇಕರು ಬಂದು ಬಂದು ವೆಂಕಟೇಶನ ರೂಮಿನ ಬಾಗಿಲು ಬಡಿದು ವಿಚಾರಿಸುತ್ತಿದ್ದರು. ಕೆಲವರು ಕೊಳ್ಳೆಗಾಲದ ಮಂತ್ರವಾದಿಯ ಕಂಡು ಬಾ ಎಂದು ಧೈರ್ಯ ಹೇಳಿದ್ದರು. ವಾರ್ಡನ್ ನನ್ನನ್ನು ಕರೆಸಿದ್ದರು. ರೇಗಿದರು. ದೆವ್ವಗಳ ಕಂಡಿದ್ದೀಯೆನಪ್ಪಾ… ಕೆಟ್ಟ ಹೆಸರು ಬರುತ್ತಲ್ಲ ಹಾಸ್ಟೆಲಿಗೇ… ಎಂದು ಬೆದರಿಸಿದರು. ಹಾಸ್ಟೆಲಿನಿಂದ ಹೊರಹಾಕಬೇಕಾಗುತ್ತದೆ ಎಂದರು. ಅವರು ಹಾಗೆ ಆಗುತ್ತಿದೆ ಎಂದರು ಸಾರ್ ಅದನ್ನೆ ಬರೆದೆ ಸಾರ್ ಎಂದು ಜಾರಿಕೊಳ್ಳಲು ನೋಡಿದೆ. ವಾರ್ಡನ್ ವೆಂಕಟೇಶನನ್ನೂ ಕರೆಸಿದರು. ‘ಏನ್ರೀ… ನೀವೇ ದೆವ್ವದ ಕಾಟ ಇದೆ ಅಂತಾ ಹೇಳಿದ್ದೀರಂತಲ್ಲಾ’ ಎಂದಾಗ; ವೆಂಕಟೇಶನಿಗೆ ಕೈ ಮುಗಿಯಬೇಕೂ… ‘ಏನೊ ಗೊತ್ತಿಲ್ಲದೆ ಬರ್ದಿದ್ದಾನೆ ಬಿಡೀ ಸಾರ್. ನಾನೇಳಿದ್ದೆ ಒಂದು ಅವನು ಬರೆದಿದ್ದೆ ಇನ್ನೊಂದು’ ಎಂದು ಆ ಪುರಾಣವ ಅಲ್ಲಿಗೆ ಮುಗಿಸಿದ್ದ. ಅರೇ ಮನುಷ್ಯರು ಹೀಗೂ ಇರುತ್ತಾರಾ ಎನಿಸಿ ಮೂಕನಾಗಿದ್ದೆ. ಆ ಸಂಜೆ ಬಲ್ಲಾಳ್ ಸರ್ಕಲ್ ತನಕ ವಾಕಿಂಗ್‌ಗೆ ಕರೆದೊಯ್ದು ಆ ಸರ್ಕಲ್ಲಿನ ರಸ್ತೆ ಬದಿಯಲ್ಲಿ ಬಜ್ಜಿ ಬೋಂಡ ತಿನ್ನಿಸಿ ಚಹಾ ಕುಡಿಸಿ ಬರವಣಿಗೆಯ ನೈತಿಕತೆಯ ಬಗ್ಗೆ ಮಾತಾಡಿದ್ದ. ‘ಬಣ್ಣ ಕಟ್ಟಿ ಬರೆಯಬಾರದು. ಯಾರನ್ನೊ ಸಂತೋಷ ಪಡಿಸಲು ಬರೆದರೆ ನಮ್ಮ ಜನರ ದುಃಖವನ್ನು ಯಾರ ಮುಂದೆ ತೋಡಿಕೊಳ್ಳುವುದೂ… ನನ್ನ ಬಗ್ಗೆ ಬರೆದೆ… ಸರೀ; ನಮ್ಮವನು ಅಂತಾ ಸಹಿಸ್ಕಂಡೇ… ಬೇರೆಯೋರ ಬಗ್ಗೆ ಬರ್ದಿದ್ರೆ ಬಿಡ್ತಿದ್ರಾ’ ಎಂದು ಮೇ ಪ್ಲವರ್ ಮರದ ಹೂ ರಾಶಿಯ ಕೆಳಗೆ ನಿಂತು ಕೇಳಿದಾಗ ನನ್ನ ಪ್ರಜ್ಞೆಯಲ್ಲಿ ನೀಲಿಯ ದೀಪ ಒಂದು ಮೂಡಿದಂತಾಯಿತು.
ಮನವೆಲ್ಲ ಹಿಂಡಿದಂತಾಗಿತ್ತು. ‘ತಪ್ಪಾಯ್ತು ಅಣ್ಣಾ’ ಎಂದೆ, ‘ಇರ್ಲಿ ಬಾ… ಮುಂದೆ ಇಂಗೆ ಮಾಡ್ಕಬೇಡಾ’ ಎಂದು ಹೆಗಲ ಮೇಲೆ ಕೈ ಹಾಕಿ ಹಾಸ್ಟಲಿಗೆ ಕರೆತಂದಿದ್ದ. ರೂಮಿನಲ್ಲಿ ಶ್ರೀಧರ ಯಾವುದೊ ಒಂದು ಇಯರ್ ಬುಕ್ ಓದುತ್ತಿದ್ದ. ಅದೆಲ್ಲ ಜನರಲ್ ನಾಲೆಡ್ಜ್‌ಗೆ ಸಂಬಂಧಿಸಿದ್ದು. ‘ಎಲ್ಲೋಗಿದ್ದೋ… ಅವನು; ನಿನ್ನ ಮಳವಳ್ಳಿ ಪೈಲ್ವಾನ್ ಬಂದಿದ್ನಪ್ಪಾ ಕೇಳ್ಕಂದೂ… ಅದೆಲ್ಲಿದೆ ಹೆಣ್ ದೆವ್ವ ತೋರ್ಸೋ ಅಂತಾ’ ಎಂದು ನಗಾಡಿದ ಕೂಡಲೆ ಸುಸ್ತಾಗಿ ಮಂಚದಲ್ಲಿ ಒರಗಿದೆ. ಮಾತೇ ಹೊರಡಲಿಲ್ಲ. ಈ ರಾಘವೇಂದ್ರಾಯ ನಮಃ ಪತ್ರಿಕೆಯ ಸಹವಾಸ ಬಹಳ ಅಪಾಯಕಾರಿಯಾಗಿದೆ ಎನಿಸಿತು. ಆ ಪತ್ರಿಕೆಯ ಮಾಲೀಕನ ಹೆಸರಲ್ಲೆ ಸಂಪಾದಕೀಯ ಇರುತ್ತಿತ್ತು. ಅದನ್ನು ಬರೆಯುತ್ತಿದುದ್ದೇ ಜೇಪಿ. ಪತ್ರಿಕೆಗೆ ಒಂದಿಷ್ಟು ಓದುಗರು ಸಿಕ್ಕಿದ್ದರು. ಜಾಹಿರಾತುಗಳೇ ಆ ಪತ್ರಿಕೆಯ ಮಾಲೀಕನಿಗೆ ಇದ್ದ ಆದಾಯ. ಯಾವ ಬ್ಲಾಕ್ ಮೇಲ್ ರಾಜಕೀಯವೂ ಇರಲಿಲ್ಲ. ಸಣ್ಣ ಪುಟ್ಟ ವ್ಯಾಪಾರಿಗಳು ಜಾಹಿರಾತು ನೀಡುತ್ತಿದ್ದರು. ಅದರಲ್ಲೆ ಎಲ್ಲ ಖರ್ಚು ವೆಚ್ಚ ಕಳೆದು ಆತ ಸಂಸಾರ ನಡೆಸಬೇಕಿತ್ತು. ನಾವು ಬರಹದ ತಾಲೀಮಿಗೆ ಅದನ್ನು ಬಳಸಿಕೊಂಡಿದ್ದೆವು. ರಾಮದಾಸರಿಗೆ ಆ ಪತ್ರಿಕೆಯನ್ನು ಕೊಟ್ಟಿದ್ದೆ. ನಕ್ಕು ನಗಾಡಿದ್ದರು. ‘ನಾವು ಪತ್ರಿಕೆಯ ಹೆಸರನ್ನೆ ವೆಪೆನ್ ಮಾಡಿಕೊಂಡಿದ್ದೇವೆ ಸಾರ್. ಆ ಟೈಟಲ್ ನೋಡಿಯೆ ಹಲವರು ಪತ್ರಿಕೆ ಖರೀದಿಸುತ್ತಾರೆ. ಒಳಗಿನ ಬರಹ ನಮ್ಮದು…’ ಎಂದು ಮೆಚ್ಚುಗೆಗಾಗಿ ಕಾದಿದ್ದೆ. ಒಪ್ಪಲಿಲ್ಲ ಅವರು. ‘ಪಂಚಮ’ ಅಂತಾ ಒಂದು ಪತ್ರಿಕೆ ಬರುತ್ತೇ… ಅದರಲ್ಲಿ ಬರೀರಿ… ಇದರಿಂದ ಹೊರ ಬನ್ನಿ’ ಎಂದು ಖಡಕ್ಕಾಗಿ ನುಡಿದರು.
ಆ ಸಲದ ಸಂಚಿಕೆಯಲ್ಲಿ ನಾನು ಬರೆದಿದ್ದುದು ಗಾಂಧಿ ಸಿನಿಮಾದ ಬಗ್ಗೆ! ಈಗಲೂ ಆ ಕ್ಷಣವ ನೆನೆದರೆ ಮೈ ಜುಂ ಎನ್ನುತ್ತದೆ. ಶ್ರೀಧರನೂ ನಾನೂ ಆ ಸಿನಿಮಾ ನೋಡಿ ಬಂದಿದ್ದೆವು. ಅದಾಗಲೆ ಗಾಂಧಿ ಸಿನಿಮಾದ ಬಗ್ಗೆ ಅಂಬೇಡ್ಕರ್ ಅಭಿಮಾನಿಗಳು ಗಲಭೆ ಮಾಡಿದ್ದರು. ಭಾರತಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್ ಬಗ್ಗೆ ಗಾಂಧಿ ಸಿನಿಮಾದಲ್ಲಿ ಎಲ್ಲಿಯೂ ತಕ್ಕ ಸ್ಥಾನಮಾನ ಇಲ್ಲೆಂದು ಆ ಸಿನಿಮಾವನ್ನು ಸಂಘರ್ಷ ಸಮಿತಿಯು ನಿರಾಕರಿಸಿತ್ತು. ಕೆಲವರು ಬ್ಯಾನ್ ಮಾಡಿ ಎಂದೂ ಅಬ್ಬರಿಸಿದ್ದರು. ದೇವನೂರು ಮಹದೇವ ಕದ್ದು ಆ ಸಿನಿಮಾ ನೋಡಿ ಮೆಚ್ಚಿ ಲೇಖನ ಬರೆದಿದ್ದರು. ಅದೊಂದು ದೊಡ್ಡ ಸುದ್ದಿಯಾಗಿತ್ತು. ಸಿನಿಮಾ ಮಾಧ್ಯಮದಲ್ಲಿ ಗಾಂಧಿಯ ಸ್ವಾತಂತ್ರ್ಯ ಚಳುವಳಿಯ ಹಿನ್ನೆಲೆಯಲ್ಲಿ ಒಂದು ಕಲಾಕೃತಿಯಾಗಿ ಮಾಡಿರುವ ಸಿನಿಮಾ ಬಹಳ ಚೆನ್ನಾಗಿದೆ ಎಂದು ನಾನು ಕೂಡ ಆ ರಾಘವೇಂದ್ರಾಯ ನಮಃ ಪತ್ರಿಕೆಯಲ್ಲಿ ಬರೆದಿದ್ದೆ. ರಾಮದಾಸ್ ಮುಟ್ಟಿಯೂ ನೋಡಿರಲಿಲ್ಲ. ಸ್ನೇಹಿತರಿಗೆ ತೋರಿಸಿದ್ದೆ. ಪರವಾಗಿಲ್ಲ ಎಂದಿದ್ದರು. ಇದು ಆ ಮಳವಳ್ಳಿ ಪೈಲ್ವಾನನಿಗೆ ಗೊತ್ತಾಗಿ ಮೆಸ್ ಹಾಲಲ್ಲಿ ಹಿಡಿದು ನಿಲ್ಲಿಸಿ; ‘ನಿನ್ಗೆ ಅನ್ನಾ ಹಾಕಿ ವಿದ್ಯೆ ಕೊಡೋನಿಗಿಂತ ಆ ಮೋಸಗಾರ ಗಾಂಧಿ ದೊಡ್ಡವನಾಗಿಬಿಟ್ಟನೇ… ಅಂಬೇಡ್ಕರ್ ಬಗ್ಗೆ ಬರೆಯಲೇಯ್’ ಎಂದು ಬಲವಾಗಿ ಕೈಯ್ಯ ಹಿಡಿದೆಳೆದು ತಿರಸ್ಕಾರದಿಂದ ಹೊರಟು ಹೋದ. ಮತ್ಯಾವುದರ ಬಗ್ಗೆ ಬರೆಯಲೀ… ಕವಿತೆ ಬರೆಯುವುದೇ ಒಳ್ಳೆಯದು… ಯಾರಿಗೂ ಗೊತ್ತಾಗದಂತೆ ಬರೆಯಬೇಕೂ… ಆ ಹೋರಾಟದ ಹಾಡುಗಳ ಸಹವಾಸವೂ ಬೇಡ! ಆ ದಲಿತ ಬಂಡಾಯ ಲೇಖಕರ ಸಹವಾಸ ಬೇಡವೇ ಬೇಡ ಎಂದು ನಿರ್ಧರಿಸಿದೆ. ಒಮ್ಮೊಮ್ಮೆ ಈ ಸಾಹಿತ್ಯದ ಜಂಜಡವೇ ಬೇಡ. ಬಂದೂಕಿನ ಕವಿಗಳೂ ಅಷ್ಟೇ; ಕೋಗಿಲೆಯ ಕವಿಗಳೂ ಅಷ್ಟೇ… ಇಬ್ಬರೂ ಮಾಡೋದು ಅಷ್ಟರಲ್ಲಿಯೇ ಇದೆ. ಸುಮ್ಮನೆ ಬೇಕೆನಿಸಿದ್ದನ್ನೆಲ್ಲ ಓದಬೇಕು; ಮನನ ಮಾಡಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮನಸ್ಸನ್ನು ಗಟ್ಟಿ ಮಾಡಿಕೊಂಡೆ.
ಆದರೂ ಸಂದರ್ಭಗಳು ಬಿಡುತ್ತಿರಲಿಲ್ಲ. ಆಗ ತಾನೆ ಅಬ್ದುಲ್ ರಶೀದ್ ಪರಿಚಯ ಆಗಿದ್ದ. ನನಗಿಂತ ಒಂದು ವರ್ಷ ಹಿಂದಿದ್ದ. ಅವನಾಗಲೇ ತಾರೆಯಂತೆ ಕಾಲೇಜಿಗೆ ಎಂಟ್ರಿ ಕೊಟ್ಟಿದ್ದ. ಕ್ರೈಸ್ಟ್ ಕಾಲೇಜಿನ ಬೇಂದ್ರೆ ಕಾವ್ಯ ಸ್ಪರ್ಧೆಗಳಲ್ಲಿ ಗೆದ್ದು ಹೊಸ ಕವಿ ಒಬ್ಬನ ಉದಯವಾಗಿದೆ ಎನಿಸಿಕೊಂಡಿದ್ದ. ಕ್ಯಾಂಟೀನಿನ ಮರದ ಬಳಿ ಅವನು ನೀಳ ಕಾಲು ಕೈಗಳ ಬೀಸುತ್ತ ಬರುವುದನ್ನು ಕಂಡಾಗ ಇವನು ಯಾವ ಊರಿನ ಪ್ಯಾರ್ಲಾ ಎಂದುಕೊಂಡೆ. ಪ್ಯಾರ್ಲಾ ಎಂದರೆ ಒಣಕಲಾಗಿ ಉದ್ದಕ್ಕೆ ಇರುವವನು ಎನ್ನುತ್ತಿದ್ದರು ಹಳ್ಳಿಯಲ್ಲಿ. ಆದರೆ ಮಗುವಿನಂತಹ ನಗು. ವಂಚನೆ ಇಲ್ಲದ ಮಾತು. ಸಭ್ಯ ನಡೆ. ತುಂಟ ಕಣ್ಣುಗಳು. ಏನಾದರೂ ಸಾಧಿಸಬೇಕು ಎಂಬ ದಿಟ್ಟವಾದ ದನಿ. ಬೇಗನೆ ಆತ್ಮೀಯನಾಗಿ ಬಿಟ್ಟಿದ್ದ. ಅವನು ಸಾಹಿತ್ಯವನ್ನು ಭಾವಿಸುತ್ತಿದ್ದ ಪರಿಯೇ ಭಿನ್ನವಾಗಿತ್ತು. ಮಂಗಳೂರಿನಿಂದ ಮುಂಗಾರು ಎಂಬ ಪತ್ರಿಕೆ ಬರುತ್ತಿತ್ತು. ಅದು ರಶೀದನಿಂದಲೇ ಗೊತ್ತಾದದ್ದು. ಆ ಪತ್ರಿಕೆ ಎಡಪಂಥೀಯ ಧೋರಣೆಯವರ ಪತ್ರಿಕೆ ಎಂದು ಬಿಂಬಿತವಾಗಿತ್ತು. ನಾನಾಗ ಅಲ್ಲಿತನಕ ಮುಟ್ಟಿರಲಿಲ್ಲ. ಗಮನ ಸೆಳೆಯುವಂಥದ್ದೇನನ್ನು ಬರೆದಿರಲಿಲ್ಲ. ಆ ಶ್ರೀ ರಾಘವೇಂದ್ರಾಯ ನಮಃ ಪತ್ರಿಕೆಯಲ್ಲಿ ನಾನೇನು ತಾನೆ ಬರೆಯಬಹುದಿತ್ತು… ರಶೀದ್‌ಗೆ ಮೋಡಿ ಮಾಡುವ ಬರಹ ದಕ್ಕಿತ್ತು. ಹಾಗಾಗಿಯೆ ಆ ಮುಂಗಾರು ಪತ್ರಿಕೆಯವರು ಮಂಗಳೂರಿಗೆ ಕರೆಸಿಕೊಂಡು ಅವನ ಸಂದರ್ಶನ ಮಾಡಿ ಕಥೆಯನ್ನೂ ಪ್ರಕಟಿಸಿದ್ದರು.
ರಶೀದ್ ಅದನ್ನು ತೋರಿದಾಗ ಸಣ್ಣಗೆ ಸಂಕಟ ಮನದಲ್ಲಿ ಕೆಂಡದಂತೆ ಸುಟ್ಟಿಬಿಟ್ಟಿತು. ಶ್ರೀಧರನಿಗೆ ಹೇಳಿದೆ. ‘ಲೋ ಅದೆಲ್ಲ ಬಿಡೊ… ಅಂತದ್ನಾ ನೀನೇನು ಬರೀಕಾಗೋದಿಲ್ಲವಾ… ಕಾಲ ಬರುತ್ತೆ ಬಿಡೊ! ನೀನೆಷ್ಟೊ ಕಥೆಗಳ ಬಾಯಲ್ಲೆ ಕಟ್ಟಿ ನಕ್ಕು ನಗಿಸ್ತಿಯಲ್ಲೊ… ಅದೂನು ಕಥೆ ಕಣೊ’ ಎಂದಿದ್ದ. ಅನೇಕರು ರಶೀದನ ಎತ್ತರವ ಸಹಿಸದಾಗಿದ್ದರು. ಆತ ಎಂದೂ ಆ ಬಗ್ಗೆ ತಲೆಕೆಡಿಸಿಕೊಂಡವನಲ್ಲ. ಅಷ್ಟೊತ್ತಿಗಾಗಲೇ ನಮ್ಮಲ್ಲಿ ಹಲವು ಗುಂಪುಗಳಾಗಿದ್ದವು. ಮಾರ್ಕ್ಸ್‌ವಾದದ ಹವಾ ತಗ್ಗಿ ಮಾವೋವಾದಿಗಳು ಹಾಸ್ಟಲಿಗೆ ಕ್ಯಾಂಪಸ್ಸಿಗೆ ಬಂದಿದ್ದರು. ದಲಿತ ಸಂಘರ್ಷ ಸಮಿತಿಯ ಯಾವ ನಾಯಕರೂ ನಮ್ಮ ಹಾಸ್ಟೆಲಿಗೆ ಬರುತ್ತಿರಲಿಲ್ಲ. ಜನರಲ್ ಹಾಸ್ಟೆಲಿಗೆ ಬಂದು ಸಭೆ ಮಾಡುವಷ್ಟು ಉತ್ಸಾಹ ಅವರಿಗೆ ಇರಲಿಲ್ಲ. ದಲಿತ ಹುಡುಗರು ಸ್ವಯಂ ಫೈಟರ್‌ಗಳಾಗಿದ್ದರು. ಚಿಕ್ಕಣ್ಣ ಒಂದೆರಡು ಜಾತಿ ಗಲಭೆ ದೊಂಬಿಗಳಲ್ಲಿ ಬ್ಲೇಡೇಟಾಗಿ ಹೇಗಾಯಿತು, ಯಾರು ಗೀರಿದ್ದು ಎಂಬುದೇ ತಿಳಿಯದಂತೆ ಗಲಭೆಯ ಸದ್ದಡಗಿಸಿದ್ದ. ಮೀಸೆ ಮರೆಯಲ್ಲಿ ನಗುತ್ತ ‘ಎಂಗೇ’ ಎಂದು ಕೇಳಿ ‘ಇಟ್ಕೊಂಡಿದ್ದಿಯಾ’ ಎಂದು ವಿಚಾರಿಸುತ್ತಿದ್ದ. ಆ ಪೈಲ್ವಾನ್ ಬರಿ ಬಾಯಿ ಮಾಡುತ್ತಾನಷ್ಟೆ… ಇವನು ಸೈಲೆಂಟ್ ಕಿಲ್ಲರ್ ತರಹ ಎಂದು ಅವನಿಗೆ ಗೌರವಕೊಟ್ಟು ತಪ್ಪಿಸಿಕೊಳ್ಳುತ್ತಿದ್ದೆ. ಅವರದೇ ಒಂದು ಗುಂಪು. ಅವರ ತಂಟೆಗೆ ಯಾರೂ ಹೋಗುತ್ತಿರಲಿಲ್ಲ.
ಮಂಡ್ಯದ ಗೌಡರ ಉಡಾಳ ಹುಡುಗರು ತಮ್ಮದೇ ಯಜಮಾನಿಕೆ ನಡೆಯಬೇಕೆಂದು ದಾದಾಗಿರಿ ಮಾಡುತ್ತಿದ್ದರು. ಆಗಾಗ ನನ್ನತ್ತ ನೋಡಿ ಅಸಹನೆ ತೋರುತ್ತಿದ್ದರು. ಆಗೆಲ್ಲ ಆ ಚಿಕ್ಕಣ್ಣ ಮತ್ತು ಮಳವಳ್ಳಿ ಪೈಲ್ವಾನರ ನಡುವೆ ಕಾಣಿಸಿಕೊಂಡು ಸ್ವರಕ್ಷಣೆ ಮಾಡಿಕೊಳ್ಳುತ್ತಿದ್ದೆ. ಐದಾರು ಬಾರಿ ಮಳವಳ್ಳಿ ಪೈಲ್ವಾನ ತನ್ನ ಕುಸ್ತಿಗಳಿಗೆ ಕರೆದುಕೊಂಡು ಹೋಗಿದ್ದ. ಕಾಲೇಜಿನ ಮುಂದಿನ ಕ್ರಿಕೆಟ್ ಗ್ರೌಂಡಿನ ಆಚೆ ಮೂಲೆಯಲ್ಲೆ ಇಂಡೋರ್ ಸ್ಟೇಡಿಯಂ ಇತ್ತು. ಬೇಕೆಂತಲೊ ಏನೊ ಅವನ ಎದುರಾಳಿಗಳು ಮೇಲು ಜಾತಿಯವರೆ ಆಗಿರುತ್ತಿದ್ದರು. ಅವನು ಎಂತಹ ಜಾತಿ ಪ್ರೀತಿಯವನು ಎಂದರೆ; ಅಕಸ್ಮಾತ್ ಎದುರಾಳಿ ತನ್ನದೇ ಜಾತಿಯವನು ಎಂದು ತಿಳಿದಾಗ ಆಟ ಬಿಟ್ಟುಕೊಟ್ಟು ತಾನೇ ಸೋತುಬಿಡುತ್ತಿದ್ದ. ಸುಮ್ಮನೆ ಪೈಲ್ವಾನ್ ಆಗಿರಲಿಲ್ಲ ಅವನು. ಆ ಒಂದು ಕ್ರೀಡೆಯಲ್ಲೇ ತನ್ನ ಜನಾಂಗವನ್ನು ಪ್ರತಿನಿಧಿಸಿಕೊಳ್ಳುತ್ತಿದ್ದ. ಅದು ಇಂಟರ್ ಯೂನಿವರ್ಸಿಟಿಯ ಕ್ರೀಡಾ ಪಟುಗಳ ಸ್ಪರ್ಧೆ. ನನಗಾಗ ಎಲ್ಲದರಲ್ಲು ಆಸಕ್ತಿ ಇತ್ತು. ‘ನಾಳೆ ದಿನ ನೀನು ಬೀದಿಯಲ್ಲಿ ನಿಂತು ದಿಕ್ಕಾರ ಕೂಗಬೇಕಾದಾಗ ಎನರ್ಜಿ ಬೇಕೂ… ಬುದ್ಧಿ ಒಂದೇ ಸಾಲದೂ… ಎದುರಾಳಿಯ ಗುಂಡಿಗೆ ಎದೆ ಒಡ್ಡುವ ಧೈರ್ಯ ಇರಬೇಕೂ. ಅಂತಾ ತಾಖತ್ ಒಂದಿಷ್ಟಾದರೂ ಬೇಕೂ… ಬಾ ನನ್ನ ಜೊತೆ’ ಎಂದು ಜಿಮ್ನಾಸಿಯಂನ ಹತ್ತಾರು ಸಾಮುಗಳ ಕಲಿಸಿ ವೆಯ್ಟ್‌ಲಿಫ್ಟ್ ಮಾಡಿಸಿ ತೊಡೆಗಳು ನಡುಗುತ್ತಿದ್ದರೂ ಬಿಡದೆ ಲಿಫ್ಟ್ ಲಿಫ್ಟ್ ಎಂದು ಎನ್‌ಕರೇಜ್ ಮಾಡಿ ಬೆನ್ನು ತಟ್ಟುತ್ತಿದ್ದ. ಬೆವೆತು ಹಣ್ಣಾಗುತ್ತಿದ್ದೆ. ಜೊತೆಗೆ ಮೆಳೆಕಲ್ಲಳ್ಳಿ ಉದಯನೂ ಬರುತ್ತಿದ್ದ.
ನಾನೇ ಪೀಚಲು ಎಂದರೆ ಆತ ನನಗಿಂತಲೂ ಸಣಕಲನಾಗಿದ್ದ. ಜಿಮ್‌ಗೆ ಬರುತ್ತಿದ್ದವರೆಲ್ಲ ಪರಿಣತರೇ. ತಕ್ಕುದಾದ ಉಡುಪುಗಳೇ ನಮಗೆ ಇರಲಿಲ್ಲ. ಪೈಲ್ವಾನ್ ತಲೆಯಲ್ಲಿ ಏನೇನಿತ್ತೊ… ‘ನೋಡಿ ನನ್ನ ತಾಕತ್ತಾ; ಎಂಗೆ ಪಟ್ಟಾಕಿ ಚಿತ್ ಮಾಡ್ತಿನಿ ಅನ್ನುದಾ ನೋಡೀ’ ಎಂದು ಅಖಾಡದ ಮುಂದಿನ ಸಾಲಿನಲ್ಲೆ ಕೂರಿಸಿ ಒಳಹೋದ. ಬೇರೆ ಬೇರೆಯವರ ಕುಸ್ತಿಗಳು ನಡೆಯುತ್ತಿದ್ದವು. ರೆಫರಿಯು ಕುಸ್ತಿ ಪಟುಗಳ ಸುತ್ತ ಹಾಗೆ ಹೀಗೆ ಆಡುತ್ತ ರಿಂಗ್‌ನ ಸುತ್ತ ಅಡ್ಡಾಡುವುದನ್ನು ಕಂಡು ನನಗೆ ವಿಪರೀತ ನಗು ಬರುತ್ತಿತ್ತು. ಚಾರ್ಲಿ ಚಾಪ್ಲಿನ್‌ನ ಯಾವುದೊ ಚಿತ್ರ ನೆನಪಾಗುತ್ತಿತ್ತು. ಸೋಲುವ ಗೆಲ್ಲುವ ಇಬ್ಬರ ನಡುವೆ ಈ ಹಾಸ್ಯಗಾರನ ಯಾಕೆ ನಡುವೆ ಬಿಟ್ಟಿದ್ದಾರೆ ಎಂದು ತಮಾಷೆಯಲ್ಲೇ ಅದನ್ನೊಂದು ಅತೀತತೆಯ ಜೊತೆ ತಳುಕು ಹಾಕಿ ಮನುಷ್ಯರ ವಿಧಿಯ ವ್ಯಂಗ್ಯ ಇದೇ ತಾನೆ ಎಂದುಕೊಳ್ಳುತ್ತಿದ್ದೆ. ಕ್ರೀಡಾಂಗಣದ ಸದ್ದು ಸಿರಿಯೇ ವಿಚಿತ್ರ. ಗೆದ್ದವರ ಕೇಕೆ ಸೋತವರ ಮೌನ ಒಂದಕ್ಕೊಂದು ತಾಳೆ ಆಗುವುದೇ ಇಲ್ಲ. ಎಲ್ಲ ಗೆಲುವುಗಳೂ ಒಂದೇ ತರ. ಹೇಗೆ ಗೆದ್ದಿರಿ ಎಂದರೆ ಗೆಲುವಿನ ಸಂತೋಷದ ಭಾಷೆಯು ಬಹಳ ಬಡತನದ್ದು. ಅದಕ್ಕೆ ಹೆಚ್ಚಿನ ಕಾರಣಗಳೆ ಇಲ್ಲ; ವಿವರಗಳಂತು ಇಲ್ಲವೆ ಇಲ್ಲ. ಗೆದ್ದವರ ನಗು ಹೆಮ್ಮೆ ಸಂಭ್ರಮ ಕೂಡ ಬಹಳ ಕ್ಷಣಿಕ. ದೂರ ಹಿಂಬಾಲಿಸಿಯೊ ಕೈಹಿಡಿದೊ ಬರುವುದಿಲ್ಲ. ಗೆದ್ದೆ ಗೆದ್ದೆ ಅಷ್ಟೇ… ಆದರೆ ಸೋತವರ ಸೋಲಿಗೆ ಎಷ್ಟೊಂದು ಮಾತುಗಳು ಸಕಾರಣಗಳು ಮೌನದ ನಿಟ್ಟುಸಿರುಗಳು ಛಲದ ಕನಸುಗಳು ಎಂದು ಹೇಳುತ್ತಾ ಹೋದರೆ ತಳಮಳ ಅಲೆಗಳಂತೆ ಸೋತವರ ಅಂತರಾಳದ ನುಡಿಗಳು ಸದಾ ಎಚ್ಚರಿಸುತ್ತಲೇ ಇರುತ್ತವೆ. ಹಾಗೆ ಸೋತವರು ನಮ್ಮ ಹಳ್ಳಿಯಲ್ಲಿ ಎಷ್ಟೊಂದು ಜನರಿದ್ದರು… ಒಮ್ಮೆಯೂ ಗೆಲ್ಲಲಿಲ್ಲ.
ಗೆಲ್ಲಬಹುದಾದ್ದೆಲ್ಲವನ್ನು ನಿರ್ಮೋಹದಲ್ಲಿ ಬಿಟ್ಟುಕೊಟ್ಟಿದ್ದರು. ಗೆದ್ದವರೆಲ್ಲ ಎಲ್ಲೆಲ್ಲಿ ಹೋಗಿ ಬಿದ್ದು ಹೋದರೊ… ಯುದ್ಧಗಳ ಗೆದ್ದವರೆಲ್ಲ ಕೊನೆಗೆ ಏನನ್ನು ಗೆದ್ದರೊ… ತಾತ ನೆನಪಾದ. ಅಂತಹ ಮಾತುಗಳ ಆತ ಸಲೀಸಾಗಿ ಹೋಟೆಲಲ್ಲಿ ಬಿಡುವಾಗಿದ್ದಾಗ ಹೇಳುತ್ತಿದ್ದ. ಎಂತಹ ಸಡಗರದಲ್ಲಿದ್ದಾಗಲೂ ಅಂತರ್ಜಲದಂತೆ ಮನದಾಳದಲ್ಲಿ ನನ್ನ ಊರು ಕೇರಿಯ ಬಾಲ್ಯದ ನೆನಪುಗಳು ತಟಕ್ಕನೆ ಬಂದು ಬೆರೆತುಹೋಗುತ್ತಿದ್ದವು. ನನ್ನ ನೆನಪುಗಳೆ ನನ್ನ ನೆರಳಿನಂತೆ ಕಾಯುತ್ತಿದ್ದವು. ‘ಎಲ್ಲೊ ನಮ್ಮ ಪೈಲ್ವಾನಾ ಇನ್ನೂ ಅಖಾಡಕ್ಕೇ ಬಂದಿಲ್ಲವಲ್ಲೊ’ ಎಂದ ಉದಯ. ಕಾದು ಸಾಕಾಯಿತು. ಅವನ ಮಟ್ಟದ ಕುಸ್ತಿ ನಿರ್ಣಾಯಕವಾಗಿತ್ತು. ಸಣ್ಣ ಪುಟ್ಟ ಕುಸ್ತಿಗಳು ನಡೆಯುತ್ತಿದ್ದವು. ಪೈಲ್ವಾನನದು ಪೈನಲ್ ಪಂದ್ಯ. ಅದರ ಮಹತ್ವವೇ ನಮಗೆ ಗೊತ್ತಿರಲಿಲ್ಲ. ಬ್ಲೇಡೇಟ್ ಚಿಕ್ಕಣ್ಣ ಪೈಲ್ವಾನನ ಜೊತೆಗಿದ್ದ. ಊಹಿಸಿದ್ದೆವು. ಏನಾದರೂ ಗಲಭೆಯಾದರೆ ಚಿಕ್ಕಣ್ಣನ ಕೈವಾಡ ಬೇಕೇ ಬೇಕಿರುತ್ತದೆ ಎಂದು. ಕಿಕ್ಕಿರಿದು ತುಂಬಿತ್ತು ಒಳಾಂಗಣ. ಅದು ಇಂಟರ್ ಯೂನಿವರ್ಸಿಟಿಯ ಜೋನಲ್ ಹಂತದ ದೊಡ್ಡ ಸವಾಲಿನ ಪಂದ್ಯ. ಆ ಸವಾಲಿಗೆ ನಮ್ಮ ಪೈಲ್ವಾನ ಉಢಾಪೆಯಲ್ಲಿ ಮುನ್ನುಗ್ಗುವನೇನೊ ಎಂಬ ಅನುಮಾನ ಬಂತು. ಕುಸ್ತಿಯ ಪಟುಗಳು ಅಲ್ಲೆಲ್ಲ ಹತ್ತಾರು ತರದ ಬಲಾಬಲದ ಮಾತುಗಳ ಆಡುತ್ತಿದ್ದರು. ಹಳೆಯ ಕುಸ್ತಿ ವೀರರು ಬಂದು ನೆರೆದಿದ್ದೆ ಗಮನಕ್ಕೆ ಬಂದಿರಲಿಲ್ಲ. ರೆಫರಿಯನ್ನು ಗೇಲಿ ಮಾಡುವುದರಲ್ಲೆ ಮೈ ಮರೆತಿದ್ದೆವು.
ಬಹಳ ಹೊತ್ತಾಗಿ ಸಂಜೆ ಸಮೀಪಿಸುತ್ತಿತ್ತು. ಪೈಲ್ವಾನ ಕಾಣಲೇ ಇಲ್ಲ. ಚಿಕ್ಕಣ್ಣ ಗುಂಪನ್ನು ಚಾಣಾಕ್ಷತೆಯಲ್ಲಿ ಗಮನಿಸುತ್ತಿದ್ದ. ಮುಂಜಾಗರೂಕತೆಯಲ್ಲಿ ಆತ ಯಾವತ್ತೂ ಮುಂದು. ಏನೋ ಆತಂಕ ಮೂಡಿತು. ಇಷ್ಟು ಸಮೀಪ ಕೂರಬಾರದಿತ್ತೆನಿಸಿ ಹಿಂದೆ ನೋಡಿದರೆ ಒಳಾಂಗಣ ಪ್ಯಾಕ್ ಆಗಿತ್ತು. ಎದ್ದು ಹೊರಗೆ ಹೋಗುವಂತಿರಲಿಲ್ಲ. ಆದದ್ದಾಗಲಿ; ಚಪ್ಪಾಳೆ ತಟ್ಟಿ ಬೆಂಬಲಿಸಿ ನಮ್ಮ ಪೈಲ್ವಾನನಿಗಾಗಿ ಏನೇ ತೊಂದರೆ ಬಂದರೂ ನಿಭಾಯಿಸುವ ಎಂದು ಸಿದ್ಧರಾದೆವು. ‘ಹೇಯ್ ಅವನು ಯೆಸ್ಸಿ ಹುಡುಗಾ; ಸಕತ್ತಾಗಿ ಫೈಟ್ ಮಾಡ್ತನೆ. ಸಲೀಸಾಗಿ ಸೋಲೊಪ್ಪಿಕೊಳ್ಳೊದಿಲ್ಲಾ’ ಎಂದು ಯಾರೊ ಬೆಂಬಲವಾಗಿ ಮಾತನಾಡುತ್ತಿದ್ದರು. ‘ಹೋಗಿ ಹೋಗಿ ಆ ಯೆಸ್ಸಿ ಪರವಾಗಿ ಮಾತಾಡ್ತಿಯಲ್ಲೊ; ಅವನ ಯೆದುರಾಳಿ ಯಾರು ಗೊತ್ತೇನೊ… ನೋಡ್ಕೋ ನೀನೇ… ನಾನೇಳುದಿಲ್ಲಾ… ಮೂರೇ ನಿಮಿಸ್ದೆಲಿ ಮೊದುಲ್ನೆ ರೌಂಡೆಲೆ ಮಣ್ಣು ಮುಕ್ಕಿಸ್ತನೆ’ ಎಂದು ಇನ್ನೊಬ್ಬ ಬಹಳ ಆತ್ಮವಿಶ್ವಾಸದಲ್ಲಿ ಹೇಳುತ್ತಿದ್ದ. ಅವನನ್ನು ಗಮನಿಸಿದೆ. ಅವನೊಬ್ಬ ಒಂದು ಕಾಲದ ಜಟ್ಟಿಕಾಳಗದ ಮಲ್ಲ ಎಂಬುದು ಸಲೀಸಾಗಿ ತಿಳಿಯುತಿತ್ತು. ಅವರ ಮಾತಿಗೆ ಕಿವುಡಾದೆ. ಪೈಲ್ವಾನ ಬಂದ ಕೂಡಲೆ ನಮ್ಮ ದನಿ ಅವನಿಗೆ ಕೇಳಿಸುವಂತೆ ಅಬ್ಬರಿಸಲು ತೀರ್ಮಾನಿಸಿದೆವು. ಅವತ್ತು ಅಂಬೇಡ್ಕರ್ ದಿನದಲ್ಲಿ ನಾನು ಮಾಡಿದ್ದ ಎಡವಟ್ಟ ಸರಿಪಡಿಸಿಕೊಳ್ಳಲು ಇಲ್ಲಿ ರಣಕಹಳೆಯನ್ನೆ ಮೊಳಗಿಸಬೇಕೆಂದು ಉತ್ಸಾಹಗೊಂಡೆ.
ಮೊದಲಿಗೆ ಆ ಪೈಲ್ವಾನ ಬಂದ. ಅವನ ಹೆಸರ ಕೂಗಿದ ಕೂಡಲೇ ಒಳಾಂಗಣವೆ ಕಂಪಿಸುವಂತೆ ಮೊರಗರೆದು ಸ್ವಾಗತಿಸಿದರು. ಆ ಅಬ್ಬರದ ದನಿಯಲ್ಲೇ ಯಾರು ಗೆಲ್ಲುತ್ತಾರೆ ಎಂಬ ಪ್ರತಿಧ್ವನಿ ರಿಂಗಣಿಸುತ್ತಿತ್ತು. ನಮ್ಮ ಪೈಲ್ವಾನ್ ರಣ ಹೇಡಿಯಲ್ಲಾ; ಎದೆಗೆ ಎದೆಗೊಟ್ಟು ನಿಲ್ಲುತ್ತಾನೆ ಎಂದೆನಿಸಿತು. ಉದ್ವೇಗ ಅದಾಗಲೆ ಮೈಮೇಲೆ ಬಂದು ಬಿಟ್ಟಿತ್ತು. ಹಿಂದೆಯೇ ಮಳವಳ್ಳಿಯ ನಮ್ಮ ಪೈಲ್ವಾನನ ಹೆಸರ ಕರೆದರು. ಅಂತಹ ಸಂಭ್ರಮದ ಸ್ವಾಗತ ಕೇಳಿಸಲಿಲ್ಲ. ಸಪ್ಪೆಯಾಗಿತ್ತು. ಚಿಕ್ಕಣ್ಣ ಅಬ್ಬಬ್ಬರಿಗೆ ಕೂಗಿದ. ನಾವೂ ದನಿಗೂಡಿಸಿದೆವು. ಸ್ಪಾಟ್‌ಲೈಟ್ ಆನ್ ಮಾಡಿದ್ದರು. ಆ ಎದುರಾಳಿ ಮಂಗಳೂರಿನ ಕಡೆಯವನು. ಭಂಟರ ಪೈಕಿ ಇರಬೇಕು. ಅವನು ವಿವಿಧ ಭಂಗಿಗಳಲ್ಲಿ ದೇಹದ ಮಾಂಸಕಂಡಗಳ ಉಬ್ಬಿಸಿ ಮೇಲೆ ಕೆಳಗೆ ನೆಗೆದು ತಲೆ ವಗೆದು ಮುಷ್ಠಿಗಳ ಬಿಗಿ ಮಾಡಿ ಕತ್ತ ಅತ್ತಿತ್ತ ನಟಕ್ಕನೆ ಮುರಿದು ನಮ್ಮ ಪೈಲ್ವಾನನತ್ತ ಗಮನಿಸುತ್ತಿದ್ದ. ಎದುರಾಳಿಯ ಬಲಾಬಲವನ್ನು ಚಾಣಾಕ್ಷರು ಆ ಕ್ಷಣದ ಒಂದು ನೋಟದಲ್ಲೆ ಕಂಡುಬಿಡುತ್ತಾರೆ. ನಮ್ಮ ಪೈಲ್ವಾನನೂ ದುರುಗುಟ್ಟಿ ಅಳತೆ ಮಾಡುತ್ತಿದ್ದ. ಎಪ್ಪತ್ತು ಕೇಜಿ ತೂಕದವರ ಬಲಾಢ್ಯ ಕುಸ್ತಿ ಪಂದ್ಯ ಅದು. ಒಬ್ಬರನ್ನು ಇನ್ನೊಬ್ಬರು ಚಿತ್ ಮಾಡಲೇ ಬೇಕಿತ್ತು. ಹತ್ತು ಸುತ್ತಿನ ಪಂದ್ಯ. ಅಷ್ಟರಲ್ಲಿ ಏನಾದರೂ ಒಂದಾಗಿರುತ್ತದೆ. ಆ ಕಾಲಕ್ಕೆ ನಾನು ಬ್ರೂಸ್ಲಿಯ ಪ್ರಖ್ಯಾತ ‘ಎಂಟರ್ ದಿ ಡ್ರಾಗನ್’ ಸಿನಿಮಾ ನೋಡಿದ್ದೆ. ಎದುರಾ ಬದುರ ನಿಲ್ಲಿಸಿ ರೆಫೆರಿ ಏನೋ ಹೇಳುತ್ತಿದ್ದ. ಆವರೆಗೆ ವಿದೂಷಕನಂತೆ ಕಂಡಿದ್ದ ಆ ರೆಫರಿ ಈಗ ಸೋಲು ಗೆಲುವಿನ ವಿಧಿ ಬರೆವವನಂತೆ ಕಂಡ. ಬದುಕಿನ ಹಾದಿಯಲ್ಲಿ ಎಷ್ಟೊಂದು ಚೋದ್ಯಗಳು… ಮಲ್ಲಯುದ್ಧ ಆರಂಭವಾಯಿತು. ಸಮಬಲ ರಣವೀರರು ಎಂಬುದು ಎರಡನೇ ಸುತ್ತಿಗೆ ತಿಳಿಯಿತು.
ಯಾರೂ ಯಾವ ಪಟ್ಟಿಗೂ ಸಿಗುತ್ತಿಲ್ಲ. ಎದುರಾಳಿ ಹತ್ತಾರು ಪಟ್ಟಿಗಳ ಹಾಕುತ್ತಿದ್ದ. ನಮ್ಮ ಪೈಲ್ವಾನ್ ಹುಲಿ ಸಿಂಹ ಚಿರತೆಗಳು ತಮ್ಮ ದೇಹವನ್ನು ಹೇಗೆ ಬೇಕಾದರೂ ನುಲಿದು ಹಿಡಿತ ತಪ್ಪಿಸಿಕೊಳ್ಳುವಂತೆ ಚಂಗನೆ ನೆಗೆದು ಎದುರಾಳಿಯ ಸೊಂಟವನ್ನು ಬಲವಾಗಿ ಹಿಡಿದು ಮೇಲೆತ್ತಿ ಕೆಳಕ್ಕೆ ಬಡಿವಂತೆ ಪಟ್ಟು ಹಾಕಿದಾಗಲೆಲ್ಲ ಅವನು ಸಮುದ್ರದಲ್ಲಾಡಿ ಬಂದ ಮೀನಿನಂತೆ ನುಣುಚಿಕೊಳ್ಳುತ್ತಿದ್ದ. ಒಳಾಂಗಣ ಉದ್ಗಾರಗಳ ಅಲೆಗಳನ್ನು ಎಬ್ಬಿಸುತ್ತಿತ್ತು. ನಿಧಾನಕ್ಕೆ ನಮ್ಮ ಪೈಲ್ವಾನನ ಕಡೆಗೆ ಬೆಂಬಲ ಹೆಚ್ಚಾಗುತ್ತಿತ್ತು. ಕೂಗಿ ಕೂಗಿ ನಮ್ಮ ಗಂಟಲು ಒಣಗುತ್ತಿತ್ತು. ನಮ್ಮ ಪೈಲ್ವಾನ್ ಸೋತರೆ ನಾವು ಸತ್ತಂತೆ ಎಂಬ ಭಾವನೆ ಬಂದು ಬಿಟ್ಟಿತ್ತು. ನಮ್ಮ ಕೂಗು ಆಕ್ರಂದನದಂತಿತ್ತು. ಎಷ್ಟೋ ಕಾಲದ ಎಲ್ಲ ಸೋಲುಗಳ ಪಾತಾಳದ ರೋಧನದಂತಿತ್ತು. ಚಿಕ್ಕಣ್ಣ ನಮ್ಮತ್ತ ನೋಡಿ ಕೈ ಸನ್ನೆ ಮಾಡಿ ತಾಳ್ಮೆ! ತಾಳ್ಮೆ ಇರಲೀ.. ಎಂಬಂತೆ ಆ ಕಡೆಯಿಂದಲೇ ಸಂತೈಸುತ್ತಿದ್ದ. ಬೇಗ ಮುಗಿಯಲಿ ಎಂದು ತುದಿಗಾಲಲ್ಲಿದ್ದೆವು. ಒಂಬತ್ತನೆ ರೌಂಡು! ಯಾರೂ ಗೆಲ್ಲಲಿಲ್ಲಾ ಸೋಲಲಿಲ್ಲ. ಬಲವಾದ ರಬ್ಬರ್ ಚೆಂಡಿನಂತಿದ್ದ. ಹಿಡಿದೆತ್ತಿ ಒಗೆದರೂ ಪುಟಿದೆದ್ದು ನೆಗೆದು ನಮ್ಮ ಪೈಲ್ವಾನನನ್ನು ತೊಡೆ ನಡುವೆ ಬಿಗಿಯಾಗಿ ಹಿಡಿದು ಉಸಿರೇ ನಿಂತು ಹೋಗುವಂತೆ ಕುತ್ತಿಗೆಯ ಎಳೆದಿಡಿದು ಅಬ್ಬರಿಸುವಂತೆ ಮುಖ ಕಿವಿಚಿಕೊಂಡು ಅದುಮುತ್ತಿದ್ದರೆ; ನಮ್ಮ ಪೈಲ್ವಾನ ಸಾವಿನ ಕೊನೆ ಕ್ಷಣ ಇದು ಎಂಬಂತೆ ಬಿಡಿಸಿಕೊಂಡು ಎದುರಾಳಿಯ ಉಲ್ಟಾ ಮಾಡಿದಂತೆಯೇ ಆತ ಮಕಾಡೆಯಾಗಿ ನೆಲಕ್ಕೆ ಕಚ್ಚಿಕೊಂಡಂತೆ ಪಟ್ಟಿಗೆ ಸಿಗದೆ ನುಣುಚುತ್ತಿದ್ದ. ಇಬ್ಬರೂ ಸಾಕಷ್ಟು ದಣಿದಿದ್ದರು. ಆ ಕೊನೆ ಗಳಿಗೆಯಲ್ಲಿ ಯಾರಲ್ಲಿ ಒಂದು ಕೂದಲೆಳೆಯಷ್ಟು ಹೆಚ್ಚಿನ ಶಕ್ತಿ ಇರುತ್ತದೊ; ಅವನೇ ಗೆಲ್ಲೋದು ಎಂದು ಪಕ್ಕದವರು ಮಾತಾಡುತ್ತಿದ್ದರು. ಹಾಗೆ ಹೇಳುತ್ತಿದ್ದವನು ಅವನೇ… ನೋಡುತ್ತಿರೂ ಮೊದುಲ್ನೆ ರೌಂಡೆಲೇ ಮಣ್ಣು ಮುಕ್ಕಿಸ್ತನೆ ಎಂದು ಆರಂಭದಲ್ಲಿ ಹೇಳಿದ್ದವನೇ ಈಗ ನಮ್ಮ ಪೈಲ್ವಾನನ ಪರವಾಗಿ ಅಭಿಮಾನದ ಮಾತಾಡುತ್ತಿದ್ದ.
ಆ ಸುತ್ತು ಮುಗಿಯಲು ಇನ್ನು ಕೆಲವೇ ಕ್ಷಣಗಳಿದ್ದವು. ಅಷ್ಟರಲ್ಲಿ ನಮ್ಮ ಪೈಲ್ವಾನ ಎದುರಾಳಿಯ ಬೆನ್ನು ಮುರಿದು ಬಿಟ್ಟಿದ್ದ. ಎದುರಾಳಿ ಸೋಲೊಪ್ಪಿಕೊಳ್ಳದೆ ಬೇರೆ ದಾರಿಯೇ ಇರಲಿಲ್ಲ. ರೆಫರಿ ಡಿಕ್ಲೇರ್ ಮಾಡಿದ್ದ. ಇಡೀ ಒಳಾಂಗಣದ ತುಂಬ ಜೈಕಾರ ಮೊಳಗುತ್ತಿತ್ತು. ಪೈಲ್ವಾನನನ್ನು ಯಾರೊ ಎತ್ತಿ ಮೆರೆಸಿದ್ದರು. ಚಿಕ್ಕಣ್ಣ ಕಾವಲು ಬಂಟನಂತೆ ನಮ್ಮ ಪೈಲ್ವಾನನ ಹಿಂದಿದ್ದ. ಆ ನೂಕು ನುಗ್ಗಲನ್ನು ಛೇದಿಸಿ ಒಳ ನುಗ್ಗಿ ಅಭಿನಂದಿಸಿದೆವು. ‘ನೋಡಿದಿರಾ! ಎಷ್ಟು ಕಷ್ಟ ಎಂದೂ; ಆಮೇಲೆ ಮಾತಾಡೋಣ’ ಎಂದು ಆ ದಿಗ್ವಿಜಯದಲ್ಲಿ ಮೂಕನಾಗಿದ್ದ. ಆಗನಿಸಿತು… ಸೋತವರು ಕಾಲದ ಸವಾಲಿಗೆ ತೊಡಗಿ ಗೆದ್ದಾಗಲೂ ಮೂಕವಾಗಿ ಬಿಡುತ್ತಾರೆ ಎಂದು. ಎಂತಹ ವಿಪರ್ಯಾಸ; ನಾವು ಗೆದ್ದಾಗಲೂ ಸಡಗರ ಪಡುವಂತಿಲ್ಲ. ಒಬ್ಬನ ಗೆಲುವು ಗೆಲುವಲ್ಲ. ಒಂದು ಜನಾಂಗವೇ ಗೆಲ್ಲಬೇಕಾದರೆ ಏನು ಮಾಡಬೇಕು ಎಂದು ನಡೆದದ್ದನ್ನೆಲ್ಲ ಶ್ರೀಧರನ ಜೊತೆ ವಿವರಿಸಿ ಕೇಳಿದ್ದೆ. ‘ಅದ್ಕೇ ಕಣೊ; ಅಂಬೇಡ್ಕರ್ ವಿಚಾರ ಮುಖ್ಯ ಅಂತಾ… ಅವರೊಬ್ಬರು ಗೆದ್ದಿದ್ರಿಂದ ನಮಗೆಲ್ಲ ಏನೋ ಸಿಕ್ಕಿದೆ; ಆದರೆ ಗೆಲ್ಲೋಕೆ ಆಗ್ತಾ ಇಲ್ಲಾ… ನಾವೆಲ್ಲಾ ಓದ್ಕಬೇಕಾದ್ದು ಅಂಬೇಡ್ಕರ್ ಅವರನ್ನಾ… ಬೇರೆಯವರು ಓದ್ಕಂಡಿದ್ದೇ ಆದ್ರೆ ಅವರೂ ಮನುಷ್ಯರಾಗ್ತಾರೆ… ನಾವೂ ಗೆಲ್ತೀವಿ; ಅವರೂ ಗೆಲ್ತಾರೆ… ಮನುಷ್ಯನಾಗಿ ಗೆಲ್ಲಬೇಕಾಗಿರೋದು ಇನ್ನೂ ಬೇರೆ ಏನೇನೊ ಇದೆ ಕಣೋ… ಒಟ್ನೆಲಿ ಒಳ್ಳೆ ಎಂಟ್ರಟೇನ್ ಮಾಡ್ಕ ಬಂದಿದ್ದೀಯೆ…? ಎಂದು ಪುಸ್ತಕದಲ್ಲಿ ಮುಳುಗಿದ.
ಒಂದು ಕುಸ್ತಿಯ ಗೆಲುವನ್ನು ಇವನು ಎಲ್ಲೆಲ್ಲಿಗೊ ಲಿಂಕ್ ಮಾಡಿದನಲ್ಲಾ ಎಂದು ಗೊಂದಲವಾಯಿತು. ಒಮ್ಮೊಮ್ಮೆ ತಮಾಷೆಗಳಲ್ಲಿ ಮುಳುಗಿ ತೇಲುವ ಇವನು ಆಳಕ್ಕೆ ಹೋಗಿ ಮುಳುಗಿ ಧ್ಯಾನಿಸುವನಲ್ಲಾ ಎನಿಸಿ ಅಚ್ಚರಿ ಉಂಟಾಗುತ್ತಿತ್ತು. ಹಾಗಾದರೆ ಇಡೀ ನನ್ನ ಜೀವನದ ಯಾವ ಅಖಾಡಗಳಲ್ಲೂ ನಾನು ಒಂದು ಪಂದ್ಯವನ್ನಾದರೂ ಗೆಲ್ಲಲಾರೆ ಎಂಬ ಹತಾಶೆ ಹೆಪ್ಪುಗಟ್ಟಿತು. ನಡೆದು ಬಂದಿದ್ದ ದಾರಿಯೇ ಹಾಗೆ ಇತ್ತು. ಅಪ್ಪ ಆ ದಿನ ಕೋಳಿ ಕಾಳಗದಲ್ಲಿ ಸೋತ ತನ್ನ ಹುಂಜದ ಕತ್ತನ್ನು ಕಚಕ್ಕನೆ ಕಡಿದು ಬಿಟ್ಟಿದ್ದನಲ್ಲಾ… ಅದರ ಸೋಲಿನ ನೆತ್ತರು ನನಗೆ ಅಂಟಿಕೊಂಡಿತ್ತಲ್ಲಾ… ಸೋಲು ಗೆಲುವು ಎರಡೂ ಬಹಳ ಮಿತಿಯವು ಎನಿಸಿತು. ಪಠ್ಯ ಪುಸ್ತಕದ ಕಡೆ ಮನಸ್ಸೇ ಬರುತ್ತಿರಲಿಲ್ಲ. ಬಾರೀ ನಂಬರ್ ತೆಗೆದು ಸಾಧಿಸುವುದು ಏನಿದೆ ಎಂದು ನಿರಾಕರಿಸಿ ಕಾಫ್ಕಾನ ‘ರೂಪಾಂತರ’ ಎಂಬ ಕಾದಂಬರಿಯನ್ನು ಹಿಡಿದುಕೊಂಡೆ. ಅದೇ ಚಾಪೆ, ವರಾಂಡ… ಅದೇ ಆಕಾಶ, ಬೀಸುವ ಗಾಳಿಯಲ್ಲಿ ಮುಳುಗಿದೆ. ಜಿ.ಎನ್.ರಂಗನಾಥರಾವ್ ಎಂಬುವವರು ಅನುವಾದಿಸಿದ್ದರು. ಗಾಢವಾಗಿ ಆಳವಾಗಿ ಕಾಫ್ಕಾ ನನ್ನೆದೆಗೆ ಬಂದ.
ಕಥೆಗಾರ, ಕವಿ ಮತ್ತು ಕಾದಂಬರಿಕಾರ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
ಒಳ್ಳೆಯ ಬರಹ… ಸುಮ್ಮನೆ ಬೇಕೆನಿಸಿದ್ದನ್ನೆಲ್ಲ ಓದಬೇಕು; ಮನನ ಮಾಡಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮನಸ್ಸನ್ನು ಗಟ್ಟಿ ಮಾಡಿಕೊಂಡೆ…..ಈ ಸಾಲು ತುಂಬಾ ಇಷ್ಟವಾಯಿತು