ಹೀಗೆ ಯೋಚಿಸುತ್ತಿರುವ ಒಂದು ದಿನ ಒಂದು ಘನಘೋರ ವಿದ್ವತ್ ಸಭೆಯಲ್ಲಿ ಮೂಕನಾಗಿ ಕೂತಿದ್ದೆ. ಆ ವಿದ್ವಾಂಸರ ವೈಖರಿಗೆ ಮೈಕೇ ಕಿತ್ತುಹೋಗುತಿತ್ತು. ಯಾವ ಯಕ್ಷಗಾನದ ರುದ್ರ ರಾಕ್ಷಸ ಪಾತ್ರವೂ ಅವರ ಮುಂದೆ ನಾಚುವಂತಿತ್ತು. ಆ ಭಾಷಣವನ್ನು ಇಲ್ಲಿ ವಿವರಿಸತಕ್ಕದ್ದಲ್ಲ. ಪೋಸ್ಟ್ ಮ್ಯಾನ್  ಅಲ್ಲಿಗೇ ಬಂದು ಹುಡುಕಿ ಪತ್ರ ಕೊಟ್ಟು ಸಹಿ ಪಡೆದು ಹೋದ. ತೆರೆದು ನೋಡಿದೆ. ನಿಜವೇ ಎನಿಸಿತು. ಇದು ಏಪ್ರಿಲ್ ತಿಂಗಳಲ್ಲ… ನನ್ನನ್ನು ಮೂರ್ಖನನ್ನಾಗಿಸಲು ಸಾಧ್ಯವಿಲ್ಲ ಎಂದು ಮತ್ತೆ ಓದಿದೆ. ಸುಮ್ಮನೆ ಇಟ್ಟುಬಿಟ್ಟೆ. ಈ ಪತ್ರ ನಿಜವೇ ಎಂದು ಆ ಪತ್ರದಲ್ಲೇ ಇದ್ದ ನಂಬರಿಗೆ ಫೋನಾಯಿಸಿದೆ. ಕರೆ ಸ್ವೀಕರಿಸಿದವರು ‌ʻಕಂಗ್ರಾಜುಲೇಷನ್ʼ ಎಂದರು. ತಾನು ಜರ್ಮನಿಗೆ ಹೋಗುತ್ತಿದ್ದೇನೆ ಎಂದು ಆ ರಾತ್ರಿಗೆ ಮನೆಗೆ ಬಂದು ಹೆಂಡತಿಗೆ ಹೇಳಿದೆ. ಮೊಗ‍ಳ್ಳಿ ಗಣೇಶ್‌ ಆತ್ಮಕತೆ  `ನನ್ನ ಅನಂತ ಅಸ್ಪೃಶ್ಯ ಆಕಾಶʼ ಸರಣಿಯ ೪೦ನೇ ಕಂತು 

 

ವಯಸ್ಸಾದಂತೆ ನಡತೆ ಮೆತ್ತಗಾಗುತ್ತದೆ ಎನ್ನುವರು. ನನಗದು ಗೊತ್ತಿಲ್ಲ. ಮತ್ತಷ್ಟು ವ್ಯಗ್ರನಾಗಿದ್ದೆ. ಮೂರ್ಖರ ನಡುವೆ ಮುಗ್ಧವಾಗಿ ಸುಲಭವಾಗಿ ನಿರ್ಭಯವಾಗಿ ಬದುಕಬಹುದು. ಆದರೆ ಅರೆಬರೆ ಹುಸಿ ಬುದ್ಧಿಜೀವಿಗಳ ಜೊತೆ ಬದುಕುವುದೆಂದರೆ ಯಮಲೋಕಕ್ಕಿಂತಲು ಘೋರವಾದದ್ದು. ಬಾಯಲ್ಲಿ ವೇದಿಕೆ ಮೇಲೆ ಎಷ್ಟೊಂದು ಕರುಣಾಮಯಿಗಳು ಎಂದರೆ ಜೈನ ಬೌದ್ಧ ಮುನಿಗಳಿಗಿಂತಲೂ ಮಿಗಿಲಾದ ಅಹಿಂಸಾವಾದಿಗಳು. ಒಳಗೆ ಮಾತ್ರ ಬರ್ಬರ ಹಿಂಸಾಕೋರರು. ಅವರ ಸಹವಾಸವನ್ನು ನಾನು ಯಾವತ್ತೂ ಮಾಡಲಿಲ್ಲ. ಒಂಟಿಯಾಗಿಯೇ ವ್ಯವಸ್ಥೆಯ ವಿರುದ್ಧ ದಂಗೆ ಎದ್ದವನು. ನನ್ನ ನುಡಿಯೇ ನನ್ನ ಬಲವಾದ ಮಾಂತ್ರಿಕ ಆಯುಧಗಳಾಗಿ ಬಡಿಯುತ್ತಿದ್ದವು. ಆ ಊರು ಮೈಸೂರು ದೂರ ದೂರವಾದಂತೆ ಕನಸಲ್ಲಿ ಹತ್ತಿರವಾದವು. ಹಳೆಯ ಗೆಳತಿಯರ ನೋಡಬೇಕು… ಖಾಸಗಿಯಾಗಿ ಎದೆಯ ಮರೆಯ ಮಾತನಾಡದೇ ಬಿಟ್ಟಿದ್ದ ನುಡಿಗಳ ಪಿಸುದನಿಯಲ್ಲಿ ಹಂಚಿಕೊಳ್ಳಬೇಕು ಎಂಬ ತೀವ್ರತೆ ಉಂಟಾಗುತ್ತಿತ್ತು. ಮಧುರ ಮುಂಗಾರಿನ ದಿನಗಳು ತಡರಾತ್ರಿ ತನಕ ಮನದಲ್ಲಿ ಶ್ರಾವಣದ ಮಳೆಯಂತೆ ಹಿಡಿದೇ ಇರುತ್ತಿದ್ದವು.

ಇದ್ದಾಗ ಅದರ ಮಹತ್ವ ಗೊತ್ತಾಗಲಿಲ್ಲ… ಉಣ್ಣಲಿಲ್ಲ… ಈಗ ಎಷ್ಟೊಂದು ದಾಹ… ಆದರೆ ಎನೂ ಸಿಗದಿರುವ ಸ್ಥಿತಿ. ಸಿಕ್ಕರೂ ತಿನ್ನಲಾಗದ ಹಣ್ಣು. ತಿನ್ನಲಾಗದ ಹಣ್ಣಿನ ಬಗ್ಗೆಯೇ ವಿಪರೀತ ಮೋಹ… ಮುಪ್ಪಾದಂತೆಲ್ಲ ಮನಸ್ಸಿನ ಆಸೆ ಹುಚ್ಚೆದ್ದು ಕುಣಿಯುತ್ತದೆ. ದೇಹ ಮುದುರಿಕೊಂಡಿರುತ್ತದೆ. ನಿಸರ್ಗದಿಂದ ಕಲಿತಿದ್ದು ಬಹಳ ಕಡಿಮೆ… ಎಲ್ಲ ಸುಳ್ಳು ಜೀವನ… ಸುಳ್ಳಿನ ಮುತ್ತಿನ ಮಾತಿನ ಮಾಲೆಯ ಅಲಂಕಾರಗಳೆಲ್ಲ ನಕಲಿ ಪಿಕಲಿ. ಸುಳ್ಳಿಗೆ ಎಷ್ಟೊಂದು ಸತ್ಯದ ಗಿಲೀಟಿನ ಮಾಯೆ… ಛೇ ಇನ್ನು ಹೆಚ್ಚಿಗೆ ಮಾತಾಡಬಾರದು ಎಂದು ಮೂಕನಾದೆ. ಆದರೂ ಸಮಯ ಸಂದರ್ಭ ನನ್ನನ್ನು ಬಳಸಿಕೊಳ್ಳುತ್ತಿದ್ದವು. ಎಲ್ಲೆಲ್ಲಿನದೊ ಸಿಟ್ಟನ್ನು ಯಾರ ಯಾರ ಮೇಲೊ ತೀರಿಸಿಕೊಳ್ಳುತಿದ್ದೆ. ಯಾರಿಗೊ ಹೇಳಬೇಕಾದ್ದ ಇನ್ನಾರಿಗೊ ಹೇಳಿ ಯಡವಟ್ಟುಗಳಿಗೆ ಸಿಕ್ಕಿಹಾಕಿಕೊಳ್ಳುತಿದ್ದೆ. ಹೊರಗಿನ ಕಿಚ್ಚನ್ನೆಲ್ಲ ಮನೆಯಲ್ಲಿ ಕಾರಿಕೊಳ್ಳದೆ ಅಮಾಯಕನಂತೆ ಮಕ್ಕಳ ಜೊತೆ ಕಳೆಯುತಿದ್ದೆ. ಒಮ್ಮೊಮ್ಮೆ ಅತ್ತಂತೆ ದನಿ ಆರ್ದ್ರವಾಗುತಿತ್ತು. ಕೇಳುತ್ತಿದ್ದಳು ಹೆಂಡತಿ… ಏನಾಯ್ತು… ಏನು ಸಮಸ್ಯೆ… ಏನಾದರು ನೋಟೀಸೂ…. ಎಂದು ಕೇಳಿ ಉತ್ತರವಿಲ್ಲದೆ ಸಪ್ಪಗಾಗುತಿದ್ದಳು. ನಟ್ಟಿರುಳಲ್ಲೂ ದುಃಖಳಿಕೆಯ ಅಲೆ ಉಸಿರಾಟದಲ್ಲಿ ತೂರಿ ಬಂದುಬಿಡುತ್ತಿತ್ತು. ಮಗ್ಗುಲಲ್ಲೇ ಮಲಗಿರುತ್ತಿದ್ದ ಮಡದಿ… ಅದೇನಾಯ್ತು ಅಂತಾ ಬಾಯ್ಬಿಟ್ಟು ಹೇಳ್ಕಳ್ರೀ… ದುಃಖ ಹಗುರ ಆಗ್ಲಿ… ಎಂದು ಒತ್ತಾಯಿಸುತ್ತಿದ್ದಳು. ನಿದ್ದೆ ಬಂದವನಂತೆ ನಟಿಸಿ ಅನಾದಿ ನಿದ್ದೆ ಈಗ ಬಂತು ಎಂಬಂತೆ ಗೊರಕೆ ಹೊಡೆಯುತ್ತಿದ್ದೆ. ಒಮ್ಮೊಮ್ಮೆ ನೆನಪು ಕೈ ಕೊಟ್ಟು ಎಲ್ಲಿಗೊ ಓಡಿ ಹೋಗಿರುತಿತ್ತು. ಮಕ್ಕಳಿಗೆ ಒಂದಿಷ್ಟೂ ಕಷ್ಟ ಕಾಣದಂತೆ ಕಾದಿದ್ದೆ. ನನಗೂ ನನ್ನ ಹೆಂಡತಿಗೂ ಅಂತಹ ಮಹಾ ಬಳಗ ಏನೂ ಇರಲಿಲ್ಲ. ಇದ್ದವರನ್ನೂ ನಾನು ಹತ್ತಿರ ಕರೆಯುತ್ತಿರಲಿಲ್ಲ. ಮೂರು ಹೆಣ್ಣು ಮಕ್ಕಳ ಹೆತ್ತು ಬೆಳೆಸಿ ಸಾಕಿದ್ದೆಲ್ಲ ನನ್ನ ಹೆಂಡತಿ ಒಬ್ಬಳೇ. ಆಗಿನ ನನ್ನ ನಾದಿನಿ ನಿರ್ಮಲ ಅಷ್ಟೇ… ನಾನು ಕೂಡ ಹೆಂಡತಿಯ ಬಾಣಂತನವ ಮಾಡಿದ್ದ ಒಂದಿಷ್ಟಾದರೂ ಧನ್ಯತೆ ಇದೆ. ಕಡು ಕಷ್ಟವನ್ನೆಲ್ಲ ನೀರಿನಂತೆ ಕುಡಿಯುತ್ತಿದ್ದಳು ಹೆಂಡತಿ. ವಯಸ್ಸಿಗೆ ಮೀರಿದ ಮಾನಸಿಕ ದೃಢತೆ ವ್ಯಕ್ತಿತ್ವವನ್ನು ನನ್ನ ನಡವಳಿಕೆಯ ಕಾಠಿಣ್ಯವನ್ನು ಕಂಡೇ ಅರಿತಿದ್ದಳು. ಅಲ್ಲಿಗೆ ಸಾಕಾಗಿತ್ತು… ನೊಂದು ಬೆಂದು ಒಂದು ದಂಡೆಗೆ ಬಂದಿದ್ದೆವು.

ಕೆಲಸ ಸಿಕ್ಕಾಯಿತಲ್ಲಾ; ಇನ್ನೇಕೆ ಅದರ ಸಹವಾಸ ಎಂದು ಪಿಎಚ್.ಡಿ ಮಾಡಲು ಮನಸ್ಸು ಮಾಡಿರಲೇ ಇಲ್ಲ. ಕಲಬುರ್ಗಿ ಅವರು ಕುಲಪತಿಗಳು. ಅವರೊಮ್ಮೆ ಪ್ರಗತಿ ಪರಿಶೀಲನೆಗೆ ಬಂದರು. ಒಬ್ಬೊಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದರು. ನನ್ನ ಸರದಿ ಬಂತು. ‘ಹಾsss ದೇಸೀ ಮನುಷ್ಯ ಅಲ್ಲೇನಪ್ಪಾ ನೀನೂ… ಮಾರ್ಗ ಮತ್ತು ದೇಸೀ ಪರಂಪರೆಗಳ ಕೂಡಲ ಸಂಗಮ ಗೊತ್ತೇನು ನಿನಗೇ… ದೇಸಿಯನ್ನೆಲ್ಲ ವಿದೇಶಿ ವಿದ್ವಾಂಸರ ವಿಚಾರಗಳಿಂದ ಬರ‍್ದಿದ್ದೀಯಲ್ಪಪ್ಪಾ ನೀನೂ… ಒಂದೇ ಒಂದು ಕನ್ನಡ ಗ್ರಂಥದ ಉದ್ದರಣೆ ಇಲ್ಲ… ಎಲ್ಲ ಪಶ್ಚಿಮ ವಿದ್ವಾಂಸರೇ ಶ್ರೇಷ್ಟರೊ ನಿನಗೇ… ಹೇಗೆ ಬರೆದೆ ಈ ವಿಚಾರಗಳನೆಲ್ಲ’ ಎಂದು ನನ್ನ ದೇಶಿ ಪುಸ್ತಕವ ತಮ್ಮ ಬ್ಯಾಗಿಂದ ಹೊರತೆಗೆದು ಟೇಬಲ ಮೇಲೆ ನೂಕಿದರು. ‘ನೋಡು ಅದಾ… ನನ್ನ ಎಷ್ಟು ಪ್ರಶ್ನೆಗಳಿವೆ ಗಮನಿಸು’ ಎಂದರು. ಅಚ್ಚರಿಗೊಂಡೆ. ಪಳಮೆಯ ವಿದ್ವಾಂಸರ ಸಹವಾಸವೇ ನನಗೆ ಅಷ್ಟಾಗಿ ಆಗಿರಲಿಲ್ಲ. ಉಪೇಕ್ಷಿಸಿದ್ದೆ. ಚಲೋ ಬರೀತಿ… ಆದರೆ ಶಾಸ್ತ್ರವನ್ನು ಜ್ಞಾನವನ್ನು ಬರೆಯಲು ಒಂದು ಕ್ರಮ ಇದೆ. ಅದನ್ನು ಅನುಸರಿಸು’ ಎಂದು ಹೊಗಳಿದರು. ಬೀಗಿದೆ.

ತುಂಬಿದ ವಿದ್ವತ್ ಸಭೆಗಳಲ್ಲಿ ನನ್ನನ್ನು ಉಲ್ಲೇಖಿಸಿ ಮಾತಾಡಿದರು. ಅನೇಕರಿಗೆ ಬೆಚ್ಚಗಾಗಿತ್ತು. ಒಂದು ದಿನ ಛೇಂಬರಿಗೆ ಕರೆಸಿಕೊಂಡರು. ‘ಏನ್ಸಾರ್’ ಎಂದೆ. ‘ಹೇ; ನೀನು ಪಿಎಚ್.ಡಿ ಯಾಕೆ ಮಾಡಿಲ್ಲ’. ‘ನನಗೆ ಅದೊಂದು ರೇಜಿಗೆ ಸಾರ್. ಅದರ ಬರವಣಿಗೆಯ ವಿಧಾನವೆ ಬಹಳ ನಾಟಕೀಯ, ಕೃತಕ ಅನಿಸುತ್ತದೆ’ ಎಂದೆ. ವಿದ್ವತ್ ಬರಹದ ರೀತಿಯೇ ಅಂತಾದ್ದು. ಕಥೆ ಕಾವ್ಯ ಬರೆದಂತಲ್ಲ. ನೀನೀಗ ನಾನು ಹೇಳಿದ್ದ ಖಡ್ಡಾಯವಾಗಿ ಪಾಲಿಸಬೇಕು.’ ‘ಇಲ್ಲ ಎಂದರೆ…’ ಎಂದೆ. ‘ಮುಂದೆ ಐತಿ ಕ್ರಮ. ಕೂರು. ಮೊದಲು ವಿಷಯ ಕೇಳು. ನಾನು ನಿನ್ನ ಮಾರ್ಗದರ್ಶಕ. ನೀನು ನನ್ನ ವಿದ್ಯಾರ್ಥಿ. ‘ಕರ್ನಾಟಕ ಗ್ರಾಮ ದೈವಗಳ ಸಂಸ್ಕೃತಿ ವಿಕಾಸ’ ಎನ್ನೋದು ನಿನ್ನ ಸಂಶೋಧನಾ ವಿಷಯ… ಮಾಡ್ತೀ ತಾನೆ…’ ‘ಸಾರ್ ಅದೆಲ್ಲ ಯಾಕೆ ಸಾರ್… ಒಂದು ಪುಸ್ತಕ ಬರೀತಿನಿ… ಇದು ಬ್ಯಾಡ ಸಾರ್… ಪಿಎಚ್.ಡಿ ಅಂದ್ರೆನೇ ಏನೊ ಒಂತರಾ ಬೈಯ್ಗಳ ಇದ್ದಂಗಿದೆ ಸಾರ್’ ಎಂದೆ. ವಿಷಾದದಿಂದ ದಿಟ್ಟಿಸಿದರು. ಲೆಮನ್ ಟೀ ಕುಡಿಸಿದರು.

ಲಂಕೇಶರು ನೆನಪಾದರು. ಅವರ ಜೊತೆ ವಿಸ್ಕಿ ಕುಡಿಯುತಿದ್ದೆ. ಅವರ ಬಸವಣ್ಣನು ಮಾಡಿಸಿದ ಪ್ರೇಮ ವಿವಾಹದ ಸಂಕ್ರಾಂತಿ ನಾಟಕ ನೆನಪಾಯಿತು. ಕಲಬುರ್ಗಿ ಅವರಿಗೆ ಯಾವುದಾದರೂ ಒಂದು ಪ್ರಶ್ನೆ ಸಿಕ್ಕಿತು, ಹೊಳೆಯಿತು ಎಂದರೆ ಅದೇ ಮಹಾ ಮನೆಯ ಲೀಲೆಯ ಅಮಲಾಗಿ ಅಮೃತವಾಗಿಬಿಡುತಿತ್ತು… ಅಲ್ಲಪ್ಪಾ… ಒಂದು ಪಿಎಚ್.ಡಿ ಬರೆಯೋಕೆ ಆಗಲ್ಲವಾ ನಿನಗೇ… ನಾನು ಕುಲಪತಿ. ಹೇಳ್ತಿದ್ದೀನಿ ಎಚ್ಚರವಿಟ್ಟು ಆಲಿಸು. ನಾಳೆ ತೊಂದರೆಗೆ ಸಿಕ್ಕಿಹಾಕಿಕೋ ಬೇಡ. ಪಿಎಚ್.ಡಿ ಇಲ್ಲದವರನ್ನು ಕೆಲಸದಿಂದ ವಜಾ ಮಾಡಿ ಎಂಬ ನಿಯಮ ಬಂದರೆ ಆಗ ಏನು ಮಾಡುವೆ… ನಿನ್ನ ಇತಿಹಾಸ ಎಲ್ಲ ಗೊತ್ತಿದೆ. ಬ್ರಾಹ್ಮಣ್ಯದ ವಿರುದ್ಧ ಪುಂಡನಂತೆ ದಂಡೆದ್ದಿರುವ ನಿನ್ನನ್ನು ಈ ವ್ಯವಸ್ಥೆ ಕಣ್ಣು ಮುಚ್ಚಿಕೊಂಡು ನೋಡುತ್ತಿದೆ ಎಂದುಕೊಂಡಿರುವೆಯಾ… ನಾಳೆ ನಿನಗೆ ಇನ್ನೂ ಕೆಟ್ಟ ದಿನಗಳು ಬಂದರೆ ಆಶ್ಚರ್ಯ ಪಡಬೇಕಾಗಿಲ್ಲಾ… ಹೋಗು… ಈ ವಿಷಯ ಇಷ್ಟೇ…. ನಿನಗೆ ಏನು ತಿಳೀತದೊ ಅದನ್ನೆ ಬರೆದುಕೊಂಡು ಬಾ… ನಾನು ಅವಾರ್ಡ್ ಮಾಡ್ತೀನಿ’ ಎಂದು ಹೆಗಲ ತಟ್ಟಿ ಕಳಿಸಿಕೊಟ್ಟರು. ಈ ಕಾಲದಲ್ಲೂ ಇಂತವರು ಉಂಟೇ ಎಂದು ಅಚ್ಚರಿ ಆಗಿತ್ತು.

ಹೊರ ಬಂದು ಬೆವೆತಿದ್ದೆ. ಈ ತನಕ ಇಂತಹ ಒಬ್ಬ ವಿದ್ವಾಂಸ ನನಗೆ ಎಲ್ಲೂ ಸಿಕ್ಕಿರಲಿಲ್ಲ ಎನಿಸಿತು. ಅವರ ಬರಹಗಳ ಕಂಡು ಓದಿ ತಿಳಿದು ದಂಗಾಗಿದ್ದೆ. ನಿಜ ಹೇಳಬೇಕು; ಒಂದು ಕಥೆ ಬರಿ ಎಂದರೆ ಆ ಕ್ಷಣವೇ ಅಲ್ಲೆ ಬೆರಗಾಗುವಂತೆ ಬರೆದು ಕೊಡುತ್ತಿದ್ದೆ. ಸಂಶೋಧನೆಯ ಹೆಸರಲ್ಲಿ ಸುಳ್ಳು ಬರೆಯಲು ಆತ್ಮಸಾಕ್ಷಿ ಒಪ್ಪುತ್ತಲೇ ಇರಲಿಲ್ಲ. ಕಂಡಾಗಲೆಲ್ಲ ಕೇಳುತ್ತಿದ್ದರು. ಆಳವಾಗಿ ತೊಡಗಿರುವೆ ಎಂದು ಡೋಂಗಿ ಬಿಡುತ್ತಿದ್ದೆ. ಕಲಬುರ್ಗಿ ಅವರಿಗೆ ವಿಶ್ವಾಸವಿತ್ತಾದರೂ ನನಗೆ ನನ್ನ ಬಗ್ಗೆಯೇ ಇರಲಿಲ್ಲ. ಕಾಲ ಹಾರಿ ಹೋಗುವಾಗ ಯಾವ ಎಚ್ಚರಿಕೆಯನ್ನೂ ಕೊಟ್ಟಿರುವುದಿಲ್ಲ. ಅಷ್ಟರಲ್ಲಿ ಅಮೂಲ್ಯ ಕ್ಷಣಗಳು, ಸಾಧ್ಯತೆಗಳು, ನಿರ್ಧಾರಗಳು, ಘಟಿಸುವ ಸಂಗತಿಗಳು ಮಾಯವಾಗಿಬಿಟ್ಟಿರುತ್ತವೆ.

ಪಿಎಚ್.ಡಿ ಬೇಡ ಎಂದೇ ಕಳ್ಳಾಟವಾಡಿದ್ದೆ. ಕಲಬುರ್ಗಿ ಅವರ ಅವಧಿ ಮುಗಿಯುತಿತ್ತು. ಸಧ್ಯ; ಅವರು ಹೋದ ನಂತರ ಆ ಕಾಟವೇ ತಪ್ಪುತ್ತದೆ ಎಂದುಕೊಂಡು ತಲೆಮರೆಸಿಕೊಂಡೆ. ಆದರೆ ಗುಪ್ತ ಭಕ್ತನಂತೆ ಅವರ ಬರಹಗಳಿಂದ ಏನೇನೊ ಕಲಿತಿದ್ದೆ. ಎಲ್.ಬಸವರಾಜ್ ನೆನಪಾಗುತ್ತಿದ್ದರು. ದಾರಿ ಇಬ್ಬರದು ಒಂದೇ ಆದರೂ ವಿದ್ವತ್ತಿನ ಗ್ರಹಿಕೆಯ ಬೇರುಗಳಲ್ಲಿ ಎರಡು ಸಮಾನ ಕವಲುಗಳಂತೆ ಕಾಣುತಿದ್ದರು. ಆದರೆ ನನಗೆ ಪಶ್ಚಿಮದ ಪುನುಜ್ಜೀವನ ಯುಗದ ಹಾಗೂ ಹತ್ತೊಂಬತ್ತನೆ ಶತಮಾನದ ಕೊನೆಯ ಒರಿಯಂಟಲ್ ಚಿಂತಕರೇ ಹೆಚ್ಚು ಪ್ರಭಾವ ಮಾಡಿಬಿಟ್ಟಿದ್ದರು. ಪ್ರಾಚೀನ ಕನ್ನಡ ಸಾಹಿತ್ಯದ ಬಗೆಗೆ ನನಗೇನೂ ಅಂತಹ ತಿಳುವಳಿಕೆ ಇರಲಿಲ್ಲ. ಕಲಬುರ್ಗಿ ಅವರಿಗೆ ಬೇರಸರವಾಗಿತ್ತು. ನಾನು ಹೇಳಿದ್ದನ್ನು ಈತ ನಡೆಸಿಕೊಡಲಿಲ್ಲವಲ್ಲಾ ಎಂದು. ಕುಲಪತಿ ಅವಧಿ ಮುಗಿದಿತ್ತು. ಅವರ ಬಗ್ಗೆ ಎಲ್ಲರಿಗೂ ಭಯವಿತ್ತು. ಆ ಭಯ ಕಳ್ಳತನದ ಭಯವಾಗಿತ್ತು. ಹಾಗಾಗಿ ಸಧ್ಯ ಆ ಮುದುಕ ಹೋದ ಎಂದು ಕ್ಯಾಂಟೀನಿನ ಬಳಿ ಬೂಸಾ ಪಾಸಾ ವಿದ್ವಾಂಸರು ನಿರಾಳತೆಯ ಪ್ರದರ್ಶಿಸಿದ್ದರು. ನನಗೆ ಸಂಕಟವಾಯಿತು. ‘ಅಲ್ಲಯ್ಯಾ… ಯೋಗ್ಯತೆ ಇಲ್ಲದವರು… ಕಾಗುಣಿತ ಬರದವರು… ವಿವೇಕವೇ ಇಲ್ಲದವರೆಲ್ಲ, ಸಂಸ್ಕೃತಿ ಚಿಂತಕರು, ಸಂಶೋಧಕರು ಎಂದು ಮೀಸೆ ತಿರುಗುವ ಮಂದಿ ಮುಂದೆ ನೀನು ಎಲ್ಲ ಗೊತ್ತಿದ್ದರೂ ಏನೂ ಬೇಡ ಎಂದು ಕಾಲದ ಯಾವುದೊ ಹೊಡೆತಕ್ಕೆ ಜಾರಿ ತೂರಿಹೋಗುತ್ತಿದ್ದೀಯಲ್ಲಯ್ಯಾ… ಇದು ನ್ಯಾಯವೇ… ಅಂಬೇಡ್ಕರ್ ಅವರಿಂದ ನೀನು ಏನನ್ನೂ ಕಲಿಯಲಿಲ್ಲವೇ… ನೀನು ಬರೆಯಬೇಕಾದ್ದ ನೀನೇ ಬರೆಯಬೇಕೂ… ಅದನ್ನು ಬೇರೆಯವರು ಬರೆಯಲಾಗದು… ಬರೆಯಲೂ ಬಾರದು… ಛೇ…’ ಎಂದು ಉಳಿದಿದ್ದ ಮಾತುಗಳ ಆಡದೆ ನುಂಗಿಕೊಂಡಿದ್ದರು. ಅವತ್ತು ಅವರ ಮಾತು ನಾಟಿರಲಿಲ್ಲ.

ಕಲಬುರ್ಗಿ ಅವರು ಯಾವ ಬೀಳ್ಕೊಡುಗೆಯನ್ನು ಬಯಸಿರಲಿಲ್ಲ. ಅತ್ಯಂತ ಸರಳ ಗಾಂಧಿವಾದಿ ಸಂಶೋಧಕ. ಯಾರಿಗೂ ಹೆದರಿದ್ದವರಲ್ಲ. ಗುಲಗುಂಜಿಯಷ್ಟಾದರೂ ತನ್ನದಲ್ಲದ್ದನ್ನು ಮುಟ್ಟಿ ಕಿತ್ತುಕೊಂಡಿರಲಿಲ್ಲ. ಕ್ಯಾಂಪಸ್ಸಿನಿಂದ ಧಾರವಾಡಕ್ಕೆ ಅವರೇ ಒಂದು ಸರ್ಕಾರಿ ಬಸ್ಸು ಹಾಕಿಸಿದ್ದರು. ಬಾಂಧವ್ಯದ ಸೇತುವೆಯಂತೆ. ಆ ಬಸ್ಸಿಗಾಗಿ ಕಾಯುತ್ತ ರಸ್ತೆ ಬದಿಯ ಒಂದು ಮರದ ಕೆಳಗೆ ರಣಬಿಸಿಲಲ್ಲಿ ತಮ್ಮ ಮಡದಿ ಅವರನ್ನೂ ಕಟ್ಟಿಕೊಂಡು ನಿಂತಿದ್ದರು ಧಾರವಾಡದ ಸ್ವಂತ ಮನೆಗೆ ತೆರಳಲು. ಕಾರಲ್ಲೆ ಹೋಗಬಹುದಿತ್ತು. ಬೇಡ ಎಂದಿದ್ದರು. ತಡೆಯಲಾಗಲಿಲ್ಲ. ಹತ್ತಿರ ಹೋಗಿ ಕೈ ಮುಗಿದೆ. ‘ಏನಪ್ಪಾ; ಈಗ ಬಂದೀ ಪಯಣ ಮಾಡೋವಾಗ…’ ಎನ್ನುತ್ತಿದ್ದಂತೆಯೇ ಆ ಬಸ್ಸು ಬಂದೇ ಬಿಟ್ಟಿತು. ತಾವೇ ಪುಟ್ಟ ಟ್ರಂಕನ್ನು ಬಸ್ಸಲ್ಲಿ ಇಟ್ಟುಕೊಂಡು ತಮ್ಮ ಹೆಂಡತಿಯ ಬಸ್ಸೇರಿಸಿ ‘ರ‍್ತೀನಪ್ಪಾ’ ಎಂದು ಕೈ ಬೀಸಿದರು.

ಕಣ್ಣು ಒದ್ದೆಯಾದವು. ಕೃತಜ್ಞಹೀನ ಜನರ ನಡೆತೆಗೆ ತಲೆ ತಗ್ಗಿಸಿದೆ. ಈ ಲೋಕವೇ ಹೀಗೆ… ಬದುಕಿದ್ದಾಗ ಬೈಯ್ಯೋದು; ಸತ್ತಾಗ ಹೊಗಳೋದು… ಅಂತಹ ಎಷ್ಟೊಂದು ಜನರ ಕಂಡಿರುವೆ… ನಾನು ಸತ್ತಾಗ… ನನ್ನದೇ ಬೇರೆ! ಬದುಕಿದ್ದಾಗಲೂ ಕಿಡಿಗೇಡಿಗಳ ಕೆಡುನುಡಿ; ಸತ್ತಾಗಲೂ ಅವರದು ಅದೇ ಸುಡುನುಡಿ… ಅದಕ್ಕೂ ಪಡೆದು ಬಂದಿರಬೇಕು ಬಿಡು ಎಂದು ಕೂತೇ ಇದ್ದೆ. ಅವರದೇ ಮಾತು ವಿಚಾರ ವ್ಯಕ್ತಿತ್ವ ಕಾಡುತಿದ್ದವು. ಕಲಬುರ್ಗಿ ಅವರು ಹೋಗಿ ಒಂದು ತಿಂಗಳು ಕೂಡ ಆಗಿರಲಿಲ್ಲ. ಆಗೊಬ್ಬ ಭಾಷಾ ಪಾಂಡಿತ್ಯದ ಕೂದಲು ಸೀಳೊ ವಿದ್ವಾಂಸರಿದ್ದರು. ಹಲವು ಸಂದರ್ಭಗಳಲ್ಲಿ ನನ್ನನ್ನು ಕೆಲಸದಿಂದ ವಜಾಗೊಳಿಸುವಂತೆ ಕಮಿಟಿಗಳ ಮಾಡಿ ತಮ್ಮ ಆಸೆ ಈಡೇರಲಾಗದೆ ಹತಾಶರಾಗಿದ್ದರು. ನನ್ನ ಪಿಎಚ್.ಡಿ ರಿಜಿಸ್ಟ್ರೇಷನ್‌ ರದ್ದುಗೊಳಿಸಿದ್ದರು. ನೋವೇ ಆಗಲಿಲ್ಲ. ಮರ್ಮವೇ ತಿಳಿಯಲಿಲ್ಲ. ಇದು ಅನ್ಯಾಯ ಎಂಬ ಪ್ರಜ್ಞೆಯೂ ಬಂದಿರಲಿಲ್ಲ. ಕರೀಗೌಡ ಬೀಚನಹಳ್ಳಿ ಆಗ ಪ್ರಾಧ್ಯಾಪಕರು. ನನ್ನ ಪರವಾಗಿ ಇದ್ದವರು. ಯು.ಜಿ.ಸಿ. ನಿಯಮಾನುಸಾರ ರದ್ದುಗೊಳಿಸಲು ಬಾರದು. ಗೈಡ್ ಬದಲಿಸಿಕೊಳ್ಳಲು ಅವಕಾಶ ಮಾಡಿಕೊಡಲೇ ಬೇಕು ಎಂದು ನನ್ನ ಜಡತ್ವವ ಬಡಿದೆಬ್ಬಿಸಿದ್ದರು. ಆ ಅಧಿಕಾರಿ ವಿಧಿ ಇಲ್ಲದೆ ಪುನರ್ ಅವಕಾಶ ಮಾಡಿದ್ದ. ಅಲ್ಲಿ ಆ ಮೈಸೂರಲ್ಲಿ ಈಸ್ಟ್ ವೆಸ್ಟ್  ಫೆಲೊ ಆಗಲೂ ಬಿಟ್ಟಿರಲಿಲ್ಲ… ಇಲ್ಲೂ ಬಿಡರಲ್ಲಾ… ಛೇ; ಆ ಭಾಷಾತಜ್ಞರಿಗೆ ಒಳ್ಳೆಯದಾಗಲಿ ಎಂದು ಬೀಚನಹಳ್ಳಿಗೆ ನಮಸ್ಕರಿಸಿದೆ. ಅದೇ ವಿಷಯಕ್ಕೆ ಕರೀಗೌಡರೇ ಮಾರ್ಗದರ್ಶಕರಾದರು. ಜೀವ ಬಂದಂತಾಯಿತು. ಹತ್ತು ದಿನ ರಜೆ ಹಾಕಿ ಸರಿಸುಮಾರು ಇಪ್ಪತ್ತು ವರ್ಷಗಳ ನನ್ನ ನಿರಂತರ ಅಧ್ಯಯನವನ್ನೆಲ್ಲ ಗ್ರಾಮದೈವಗಳ ಸಂಸ್ಕೃತಿ ವಿಕಾಸಕ್ಕೆ ಒಟ್ಟುಗೂಡಿಸಿ ಅಳವಡಿಸಿ ಬರಬರನೆ ಒಂದೇ ವಾರದಲ್ಲಿ ನಾನೂರು ಪುಟಗಳ ಬರೆದು ಬೈಂಡ್ ಮಾಡಿಸಿ ಬೀಚನಹಳ್ಳಿ ಅವರ ಮುಂದೆ ಇಟ್ಟೆ.

ʻಇಷ್ಟೇ ಪಿಎಚ್.ಡಿ ಅಂದ್ರೇ… ನೀನೊಂದು ವಿದ್ವತ್ ಕಥೆ ಬರೆದಿದ್ದೀಯೇ… ಅದು ಮಾನವ ಮತ್ತು ನಿಸರ್ಗದ ದೈವ ಸಂಬಂಧಿ ಶಕ್ತಿ ಕಥೇ…ʼ ಎಂದು ಬೆನ್ನು ತಟ್ಟಿದ್ದರು. ಎರಡೇ ತಿಂಗಳಲ್ಲಿ ಅವಾರ್ಡ್ ಆಗಿಯೇಬಿಟ್ಟಿತು. ಆ ಬರಹವ ಸಮಷ್ಟಿ ಪ್ರಜ್ಞೆಯಿಂದ ಬರೆದಿದ್ದೆ. ಗೆಳೆಯ ಉಜ್ಜಜ್ಜಿ ರಾಜಣ್ಣ ‘ಆದಿಮ’ ಹೆಸರಲ್ಲಿ ಪುಸ್ತಕವಾಗಿ ಪ್ರಕಟಿಸಿದ್ದರು. ಮೊದಲ ಪ್ರತಿಯನ್ನು ಕಲಬುರ್ಗಿ ಅವರಿಗೆ ಕಳಿಸಿಕೊಟ್ಟೆ. ವಾರದಲ್ಲೇ ಅವರಿಂದ ಪತ್ರ ಬಂತು… ‘ನಿನ್ನ ಆದಿಮವ ಒಂದೇ ಉಸಿರಿಗೆ ಓದಿದೆ. ತೆರಣಿಯ ಹುಳು ತನ್ನ ಒಡಲ ನೂಲಿನಿಂದ ನೂತಂತೆ ಈ ವಿಶಿಷ್ಟ ಮಹಾ ಪ್ರಬಂಧವ ಬರೆದಿದ್ದೀಯೆ. ಸಂಶೋಧನೆಯ ಇತಿಹಾಸದಲ್ಲೇ ಇದು ಒಂದು ಮೈಲಿಗಲ್ಲು… ನಿನ್ನ ವಿಚಾರಗಳು ಗಾಳಿಯಂತೆ. ಭಾವಕ್ಕೆ ಬರುತ್ತವೆ. ಕೈಗೆ, ತರ್ಕಕ್ಕೆ ಸಿಗುವುದಿಲ್ಲ… ಬಯಲು ದೇಹಿ ಅಲ್ಲಮನಂತೆ’ ಓದುತ್ತಿದ್ದಂತೆಯೆ ಪಟಪಟನೆ ಕಂಬನಿ ಉದುರಿದವು. ಇನ್ನೇನು ಪದವಿ ಬೇಕು? ಆ ಪಿಎಚ್.ಡಿ ಪಿಶಾಚಿಯ ಮುದ್ದಿಸಿ ಅಲ್ಲಿಗೇ ಅದ ಬಿಟ್ಟುಬಿಟ್ಟಿದ್ದೆ.

ಸ್ವೋಪಜ್ಞತೆ, ಅಂತರ್‌ದೃಷ್ಟಿ, ಗ್ರಹಿಕೆ, ಹೊಳಹುಗಳ ಬೆನ್ನತ್ತಿದ್ದ ಸೃಜನಶೀಲ ವ್ಯಕ್ತಿತ್ವದ ನನಗೆ ಸಂಶೋಧನೆ ಎಂದರೆ ಸತ್ಯದ ಸೌಂದರ್ಯ ಮೀಮಾಂಸೆ ಎನಿಸಿತ್ತು. ಅಖಂಡ ಮಾನವ ಪ್ರಜ್ಞೆಯೇ ನನ್ನ ಪ್ರಮಾಣ ಎಂದು ನಂಬಿದೆ. ಆದರೆ ಅಷ್ಟೆಲ್ಲ ಬರೆದರೂ ಯಾರೊಬ್ಬರೂ ನನ್ನನ್ನು ಸಂಶೋಧಕ ಎನ್ನಲಿಲ್ಲ. ಅಂತಹ ಯಾವ ವೇದಿಕೆಗಳಿಗೂ ಕರೆಯಲಿಲ್ಲ. ಆ ತರದ ನಕಲಿ ಪದಕಗಳು ನನಗೆ ಬೇಕಿರಲಿಲ್ಲ. ಒಂದಿಷ್ಟು ಗರ್ವ ಬಂದಿತ್ತು. ಮೂರ್ಖರ ಮುಂದೆ ಅದರ ಅಗತ್ಯ ಇಲ್ಲ ಎಂದು ತಕ್ಷಣ ಬದಲಾಯಿಸಿಕೊಂಡೆ. ನಾನು ಇಂತಹ ವಿಶಿಷ್ಟ ತಜ್ಞ ಎಂದು ಗುರುತಿಸಿಕೊಳ್ಳುವುದೇ ಅಪಹಾಸ್ಯ ಎನಿಸಿತು. ಆದರೂ ಹೀಗೆ ಇಲ್ಲಿ ಮೆರೆವವರ ಮುಂದೆ ನಾನು ಯಾರು ಎಂಬ ಹತಾಶೆಯ ಪ್ರಶ್ನೆ ಅಂಟಿಕೊಂಡು ಕಾಡುತಿತ್ತು. ಯಾರ ಜೊತೆ ಗುರುತಿಸಿಕೊಳ್ಳಲಿ… ಇಲ್ಲೂ ನಾನು ಒಂಟಿಯೇ…

ಹೀಗೆ ಯೋಚಿಸುತ್ತಿರುವ ಒಂದು ದಿನ ಒಂದು ಘನಘೋರ ವಿದ್ವತ್ ಸಭೆಯಲ್ಲಿ ಮೂಕನಾಗಿ ಕೂತಿದ್ದೆ. ಆ ವಿದ್ವಾಂಸರ ವೈಖರಿಗೆ ಮೈಕೇ ಕಿತ್ತುಹೋಗುತಿತ್ತು. ಯಾವ ಯಕ್ಷಗಾನದ ರುದ್ರ ರಾಕ್ಷಸ ಪಾತ್ರವೂ ಅವರ ಮುಂದೆ ನಾಚುವಂತಿತ್ತು. ಆ ಭಾಷಣವನ್ನು ಇಲ್ಲಿ ವಿವರಿಸತಕ್ಕದ್ದಲ್ಲ. ಪೋಸ್ಟ್ ಮ್ಯಾನ್  ಅಲ್ಲಿಗೇ ಬಂದು ಹುಡುಕಿ ಪತ್ರ ಕೊಟ್ಟು ಸಹಿ ಪಡೆದು ಹೋದ. ತೆರೆದು ನೋಡಿದೆ. ನಿಜವೇ ಎನಿಸಿತು. ಇದು ಏಪ್ರಿಲ್ ತಿಂಗಳಲ್ಲ… ನನ್ನನ್ನು ಮೂರ್ಖನನ್ನಾಗಿಸಲು ಸಾಧ್ಯವಿಲ್ಲ ಎಂದು ಮತ್ತೆ ಓದಿದೆ. ಸುಮ್ಮನೆ ಇಟ್ಟುಬಿಟ್ಟೆ. ಈ ಪತ್ರ ನಿಜವೇ ಎಂದು ಆ ಪತ್ರದಲ್ಲೇ ಇದ್ದ ನಂಬರಿಗೆ ಫೋನಾಯಿಸಿದೆ. ಕರೆ ಸ್ವೀಕರಿಸಿದವರು ‌ʻಕಂಗ್ರಾಜುಲೇಷನ್ʼ ಎಂದರು. ಆ ರಾತ್ರಿಗೆ ಮನೆಗೆ ಬಂದು ಹೆಂಡತಿಗೆ ಹೇಳಿದೆ. ಹತ್ತು ಪೈಸೆಯ ಬೆಲೆಯನ್ನು ಕೊಡಲಿಲ್ಲ. ‘ಅಯ್ಯೋ ಹೋಗ್ರಿರೀ… ಆ ಜರ್ಮನಿಗೋಗಿ ಬಂದ್ರೆ ನಿಮಗೇನು ಕಿರೀಟ ಬಂದ್ಬುಟ್ಟದೇ… ಬಿಡ್ರಿ ಅದಾ… ನೆಟ್ಟಗೆ ನೀವು ನನಗೆ ಮೈಸರ‍್ನೆ ತೋರಿಸ್ಲಿಲ್ಲ ಕರ‍್ಕಂಡೋಗಿ. ನೀವೊಬ್ಬರು ಹೋಗಿ ಬಂದ್ರೆ ನಮ್ಗೇನ್ರೀ… ಅತ್ತಾಗಿ ಮಡಿಗ್ರಿ ಆ ಕಾಗ್ದನಾ’ ಎಂದಳು. ಹೌದಲ್ಲವೇ; ಏನೀಗ ಅದರಿಂದ… ಮಡದಿ ಪುಟ್ಟ ಮಕ್ಕಳ ಬಿಟ್ಟು ಅಷ್ಟು ದೂರ ಹೆಂಗೆ ಹೋಗಲಿ ಎಂಬ ಹಿಂಜರಿಕೆ ಉಂಟಾಯಿತು.

ʻತಕ್ಷಣ ವೀಸ ಪಾಸ್‌ಪೋರ್ಟ್ ಸಿದ್ದಪಡಿಸಿಕೊಳ್ಳಿʼ ಎಂದು ಅಗ್ರಹಾರ ಕೃಷ್ಣಮೂರ್ತಿ ಫೋನು ಮಾಡಿದರು. ಆಗವರು ಕೇಂದ್ರ ಸಾಹಿತ್ಯ ಅಕಾಡಮಿಯ ಸೆಕ್ರೆಟರಿ ಆಗಿದ್ದರು. ಅದೊಂದು ವಿಶೇಷ ಆಹ್ವಾನ ಅವಕಾಶ. ಜರ್ಮನಿ ದೇಶ ತನ್ನ ದೇಶಕ್ಕೆ ಅತಿಥಿ ಲೇಖಕರನ್ನಾಗಿ ಇಡೀ ಭಾರತದಿಂದ ಐದು ಜನ ಲೇಖಕರನ್ನು ಬರಮಾಡಿಕೊಂಡು ಆತಿಥ್ಯ ಮಾಡಿ ‘ಸಾಹಿತಿ’ ಎಂಬ ಕಾರಣಕ್ಕೆ ಗೌರವಿಸುತ್ತದೆ. ಈ ಅವಕಾಶಕ್ಕೆ ತಾನು ಹೇಗೆ ಒಳಪಟ್ಟೆ ಎಂಬುದೇ ಅಚ್ಚರಿ ಆಗಿತ್ತು. ಆಗ ʻಬುಗುರಿʼ ಕಥೆ ತಕ್ಷಣವೆ ಮಲೆಯಾಳಂ ಭಾಷೆಗೆ ಅನುವಾದಗೊಂಡು ‘ಮಲೆಯಾಳಂ ಮನೋರಮಾ’ ಪತ್ರಿಕೆಯ ವಿಶೇಷ ಓಣಂ ವಿಶೇಷ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಅದನು ಸಂಪಾದಕರಾಗಿ ಪ್ರಕಟಿಸಿದ್ದವರು ಎಂ.ಟಿ.ವಾಸುದೇವ ನಾಯರ್… ಆಗಲೇ ಜ್ಞಾನಪೀಠ ಪ್ರಶಸ್ತಿ ಪಡೆದಿದ್ದರು. ಮೆಚ್ಚಿ ಪತ್ರ ಬರೆದಿದ್ದರು. ಕರೆಸಿ ಸನ್ಮಾಸಿದ್ದರು. ಅಷ್ಟೇ ಉನ್ನತ ಮಲೆಯಾಳಂ ಕವಿಯಾಗಿದ್ದ ಕೆ.ಸಚ್ಚಿದಾನಂದನ್ ಅವರು ನನ್ನ ಹೆಸರನ್ನು ಈ ಅವಕಾಶಕ್ಕೆ ನಾಮಿನೇಟ್ ಮಾಡಿದ್ದರು. ಸಚ್ಚಿದಾನಂದನ್ ಆಧುನಿಕೋತ್ತರ ಜಗತ್ತಿನ ಕವಿಗಳಲ್ಲಿ ಈಗಲೂ ಅಗ್ರಗಣ್ಯರು. ಅವರ ಹೆಸರು ನೊಬೆಲ್ ಬಹುಮಾನಕ್ಕೆ ಭಾರತದಿಂದ ಎರಡು ಬಾರಿ ನಾಮಿನೇಟ್ ಆಗಿತ್ತು. ಅಂತವರು ನನ್ನ ಬೆಂಬಲಕ್ಕೆ ಇದ್ದರು. ಅಗ್ರಹಾರ ಅವರು ಈ ಪ್ರಕ್ರಿಯೆಯಲ್ಲಿ ಮುಖ್ಯಪಾತ್ರವಹಿಸಿದ್ದರು. ಆ ಸ್ಥಾನದಲ್ಲಿ ಕೂತಿದ್ದವರು ಸುಲಭವಾಗಿ ನನ್ನ ಹೆಸರನ್ನು ಕೈಬಿಡಬಹುದಿತ್ತು. ಅಗ್ರಹಾರ ಅವರು ಬಿಟ್ಟುಕೊಟ್ಟಿರಲಿಲ್ಲ.

ಜರ್ಮನಿಯ ಮ್ಯೂನಿಚ್ ನಗರದಲ್ಲಿ ನಾನು ಒಂದು ತಿಂಗಳು ವಾಸ್ತವ್ಯ ಮಾಡುವುದಿತ್ತು. ಎಲ್ಲಖರ್ಚು ವೆಚ್ಚ ಆ ದೇಶದ್ದೇ… ಅದ್ದೂರಿ ಸ್ವಾಗತ ಪ್ರಾಂಕ್‌ಫರ್ಟ್… ವಿಮಾನ ನಿಲ್ದಾಣದಲ್ಲಿ. ನನಗೆ ಒಬ್ಬಳು ಸೆಕ್ರೆಟರಿಯನ್ನು ನೇಮಿಸಿ ಅಡ್ಡಾಡಲು ಕಾರು ಕೊಟ್ಟಿದ್ದರು. ಆ ಸೆಕ್ರೆಟರಿ ಆಗಿದ್ದವಳು ಮೂಲ ಪಾಕಿಸ್ತಾನಿ. ಹಿಂದೆ ಜರ್ಮನಿಗೆ ಹೋಗಿ ನೆಲೆಸಿ ಅಲ್ಲಿನವಳೇ ಆಗಿದ್ದಳು. ಸುಂದರಿ. ಎತ್ತರದವಳು. ರೇಸ್‌ಕಾರ್ ಓಡಿಸುವ ಚತುರೆ. ಅದೆಲ್ಲ ವೈಭವವ ವರ್ಣಿಸಿದರೆ ಗರ್ವ ಎನಿಸಬಹುದು! ನಾನು ಆ ಮ್ಯೂನಿಚ್ ನಗರದ ಹಿಟ್ಲರನ ನರಕವ ಕಂಡು ಅಕ್ಷರಶಃ ಜೀವನದಲ್ಲಿ ದಂಗಾಗಿ ನಿಯಂತ್ರಣ ಕಳೆದುಕೊಂಡಿದ್ದೆ. ಹಿಟ್ಲರನ ಸರ್ವಾಧಿಕಾರವ ಚರಿತ್ರೆಯ ಪಾಠಗಳಲ್ಲಿ ಓದಿದರೆ ಏನೂ ಅನಿಸದು. ಆದರೆ ಆತನ ಎಲ್ಲ ವಿದ್ವಂಸಕ ಮಾನವ ಹತ್ಯೆಯ ಹೆಜ್ಜೆ ಹೆಜ್ಜೆಗಳನ್ನೂ ಕಣ್ಣಾರೆ ಕಂಡರೆ ಭೀತಿ ಆವರಿಸುತ್ತದೆ. ಮೂಕವಾಗಿ ಒಂದೆಡೆ ಕೂತು ತಲೆಗೆ ಗುಂಡು ಹೊಡೆದುಕೊಂಡು ಸತ್ತು ಹೋಗಬೇಕು ಎನಿಸುತ್ತದೆ. ಜರ್ಮನಿ ಏನನ್ನೂ ಬಚ್ಚಿಟ್ಟುಕೊಂಡಿಲ್ಲ. ಎರಡನೆ ಮಹಾ ಯುದ್ಧದ ಪ್ರತಿಯೊಂದು ವಿವರಗಳನ್ನೂ ಅತ್ಯುನ್ನತವಾಗಿ ದಾಖಲಿಸಿ ಪ್ರದರ್ಶನಕ್ಕೆ ಇಟ್ಟಿದೆ. ಆ ಡೆತ್ ಕ್ಯಾಂಪುಗಳು; ಅಲ್ಲಿನ ಯಹೂದಿಗಳ ನರಮೇಧದ ಇಂಚಿಂಚು ದಾಖಲೆಗಳನ್ನು ಜೀವಂತವಾಗಿ ಜೋಡಿಸಿಟ್ಟಿದ್ದಾರೆ. ಗ್ಯಾಸ್ ಛೇಂಬರಲ್ಲಿ ನಿಂತು… ಅವರು ಆ ಅಮಾಯಕ ಯಹೂದಿ ಮಕ್ಕಳು, ಹೆಂಗಸರು, ಚೆಲುವೆಯರು… ಮುಪ್ಪಾದ ತಾಯಂದಿರು ಹೇಗೆ ಉಸಿರುಗಟ್ಟಿ ಕಿರುಚಿಕೊಂಡು ಕೆಲವೇ ಗಳಿಗೆಯಲ್ಲಿ ಜೀವ ಬಿಟ್ಟು ಕೆಲವೇ ಗಂಟೆಗಲ್ಲಿ ಸಾವಿರಾರು ಹೆಣಗಳು ಬೂದಿಯಾಗುತ್ತಿದ್ದವು ಎಂಬ ಸಾಕ್ಷ್ಯ  ಚಿತ್ರಗಳು ಜಗತ್ತಿನ ಸರ್ವಾಧಿಕಾರಿಗಳ ಪೈಶಾಚಿಕ ಪರಾಕ್ರಮ ಎಷ್ಟು ಅಮಾನುಷವಾಗಿತ್ತು ಎಂಬುದನ್ನು ಬಿಂಬಿಸುತ್ತವೆ. ಅವನ್ನೆಲ್ಲ ವರ್ಣಿಸಲಾಗದು.

ಮನುಷ್ಯರ ಮೃಗೀಯತೆಯ ಇರುವೆ ಸಾಲನ್ನು ನಾನು ನನ್ನ ಮನೆಯಲ್ಲಿ ಕಂಡಿದ್ದೆ. ಅದರ ಭಯಾನಕ ಅವತಾರಗಳು ಮ್ಯೂನಿಚ್ ನಗರದಲ್ಲಿ ಮೊದಲಿಗೆ ಆರಂಭವಾಗಿದ್ದವು. ಹಿಟ್ಲರ್ ನಿಂತು ಆಕ್ರಮಣಕಾರಿ ವಿಷ ಭಾಷಣಗಳ ಆರಂಭಿಸಿದ ಸಭಾಂಗಣ ವೇದಿಕೆಯ ಮೇಲೆ ನಿಂತೆ… ಕಾಲುಗಳು ನಡುಗಿದವು. ಎದೆಗೂಡು ಗುಡುಗಾಡಿತು.

ಜಗತ್ತನ್ನು ನೆತ್ತರಲ್ಲಿ ಮುಳುಗಿಸಿದ್ದ ಆ ಹಿಟ್ಲರ್ ಮೊಟ್ಟಮೊದಲ ಸರ್ವಾಧಿಕಾರ ಮೊಳಗಿಸಿ ಮಾತಾಡಿದ ವೇದಿಕೆ ಇದೆನಾ ಎಂದು ಬೂಟುಗಾಲಿನಿಂದ ಆ ಜಾಗವ ಒದ್ದೆ. ಹಿಟ್ಲರನ ಆಕ್ರೋಶದ ಜನಾಂಗ ದೇಶದ ಭಾಷಣ ಕಿವಿಯಲ್ಲಿ ಮೊಳಗಿದಂತಾಯಿತು. ಅಂತಹ ಬರ್ಬರ ನೆಲೆಯನ್ನು ಮೆಟ್ಟಿ ಸಿಲ್ಲುವ ಅವಕಾಶವನ್ನು ಈ ಲೋಕ ನನಗೂ ಕೊಟ್ಟಿದೆಯಲ್ಲಾ ಎಂದು ಭಾವುಕನಾದೆ. ಪೋಲೆಂಡಿನಲ್ಲಿ ಬೃಹತ್ತಾದ ಕಾನ್ಸಂಟ್ರೇಷನ್ ಕ್ಯಾಂಪ್ ಇದೆ. ಆರು ಲಕ್ಷ ಯಹೂದಿಗಳ ಚಿತ್ರ ಹಿಂಸೆ ಮಾಡಿ ಕೊಂದುಬಿಟ್ಟಿರು. ಹಿಟ್ಲರನ ಎರಡನೆ ಮಹಾ ಯುದ್ಧದಿಂದ ಸುಮಾರು ಐದುಕೋಟಿ ಜನ ಸತ್ತು ಹೋದರು. ಮುವತ್ತು ಕೋಟಿಗೂ ಮಿಗಿಲಾಗಿ ಜನ ದಿಕ್ಕೆಟ್ಟು ದಿವಾಳಿ ಆಗಿ ಬಂಧುಬಳಗವ ಕಳೆದುಕೊಂಡು ಅನಾಥರಾದರು. ಇಡೀ ಯುರೋಪಿನ ಪುಟ್ಟ ಪುಟ್ಟ ದೇಶಗಳಲ್ಲಿ ಒಂದು ಕಾಲಮಾನದ ಯುವ ಜನಾಂಗವೇ ನಾಶವಾಯಿತು. ಅದೆಲ್ಲ ಇತಿಹಾಸ. ಮ್ಯೂನಿಚ್ ನಗರ ಬೀಭತ್ಸ ಘಟನೆಗಳನ್ನೆಲ್ಲ ತಣ್ಣಗೆ ಮಲಗಿಸಿಕೊಂಡಿರುವ ನಗರದಂತೆ ಕಂಡಿತು. ಅಲ್ಲೆಲ್ಲ ನಡೆದಾಡಿದೆ. ಆ ನಗರದ ರಸ್ತೆಗಳ ಮೇಲೆ ರಕ್ತ ಹೆಪ್ಪುಗಟ್ಟಿದ್ದನ್ನೆಲ್ಲ ತೊಳೆದು ಬಿಡಲಾಗಿದೆ. ಆದರೆ ಸುಮ್ಮನೆ ಅಲ್ಲಿನ ಮಣ್ಣನ್ನು ಕೆರೆದು ಮೂಸಿದರೂ ಹತ್ಯೆಯ ನೆತ್ತರ ವಾಸನೆಯನ್ನು ಭಾವಿಸಬಹುದು. ಅಂತಹ ಸಿರಿಯ ದೇಶದ ಮರೆಯ ಗಾಯಗಳನ್ನು ಹುಡುಕಾಡಿದ್ದೆ. ಈ ದೇಶದಲ್ಲಿ ಭಿಕ್ಷುಕರು ಎಲ್ಲಿದ್ದಾರೆ ಎಂದು ಕೇಳಿದೆ. ಸೆಕ್ರೆಟರಿ ಆಗಿದ್ದವಳು ಅವರನ್ನು ಕಾಣಲು ವ್ಯವಸ್ಥೆ ಮಾಡಿದಳು. ನಗರದ ಮರೆಯ ಕಟ್ಟಡದಲ್ಲಿ ಅವರಿದ್ದರು. ಬಹುಪಾಲು ಅನಾಥಾಶ್ರಮವೇ ಆಗಿತ್ತು. ಅವರಲ್ಲೊಬ್ಬ ಎಂ.ಎ. ಓದುತ್ತಿದ್ದು ಅರ್ಧಕ್ಕೆ ನಿಲ್ಲಿಸಿದ್ದವನೊಬ್ಬನ ಮಾತಿಗೆ ಪರಿಚಯಿಸಿದರು. ಪ್ರಾಯದ ಆ ಯುವಕ ಗಾಂಧೀಜಿಯ ಹೆಸರು ಕೇಳಿದ್ದ. ಭಾರತವನ್ನು ವಿಪರೀತ ಹೊಗಳುತ್ತಿದ್ದ. ಅವರಿಗೆ ಹಣ ನೀಡುವಂತಿಲ್ಲ ಎಂದಿದ್ದಳು ಫಾತಿಮಾ. ಥೇಟ್ ಜರ್ಮನ್ ತರವೇ ಇದ್ದಳು. ಹಾಗೆ ಅನಾಥವಾಗಿದ್ದವರು ಅತ್ಯಂತ ಅಪಾಯಕಾರಿ ಎಂದು ಕ್ಷಣ ಕ್ಷಣವೂ ಚಡಪಡಿಸುತಿದ್ದಳು. ಅವರಲ್ಲಿ ಹಲವರು ಮಾಜಿ ಲೂಟಿಕೋರರು ಹತ್ಯೆಮಾಡಿದವರು. ಯಾವ ಕ್ಷಣದಲ್ಲಿ ಹೇಗೆ ವರ್ತಿಸುತ್ತಾರೆ ಎಂದು ಊಹಿಸಲು ಸಾಧ್ಯವಿರಲಿಲ್ಲ. ಗನ್‌ಮನ್ ನನ್ನ ಹಿಂದೆಯೇ ಇದ್ದ. ಅವತ್ತು ಭಾನುವಾರ ಮಧ್ಯಾಹ್ನದ ಊಟವನ್ನು ಅವರ ಜೊತೆ ನಿಗದಿಪಡಿಸಲಾಗಿತ್ತು. ಕುರಿಗಳ ಚಪ್ಪೆ ಚಪ್ಪೆ ತೊಡೆಗಳನ್ನೆ ಅರೆಬರೆ ಸುಟ್ಟು ತಿನ್ನಲು ಮುಂದಿಟ್ಟಿದ್ದರು. ಹೋಮೊಸೆಪಿಯನ್ ನೆನಪಾದ. ಆ ಅನಾಥರಲ್ಲಿ ಬಹಳಷ್ಟು ವಯಸ್ಸಾದವರಿದ್ದರು. ಕುಡಿದು ತೂರಾಡುತಿದ್ದರು. ಆಗಾಗ ಅಸಹನೆಯಿಂದ ನೋಡುತಿದ್ದರು. ನಮ್ಮ ಈ ಸ್ಥಿತಿಯನ್ನು ವಿದೇಶಿಗನೊಬ್ಬ ನೋಡಬಾರದಿತ್ತು ಎಂದು ಯಾರಿಗೊ ಅಸಹನೆ ತೋರುತಿದ್ದರು. ಅವರ ಜೊತೆ ಮುಕ್ತವಾಗಿ ಮಾತಾಡಲು ಸಾಧ್ಯವಿರಲಿಲ್ಲ. ವ್ಯಸನಿಗಳು. ಡ್ರಗ್ಸ್ ತೆಗೆದುಕೊಳ್ಳಲು ಅವರಿಗೆ ಪರ‍್ಮಿಷನ್ ಇತ್ತು. ಅಂತವರಿಗೆ ಈ ಜಗತ್ತೇ ಸತ್ತು ಹೋಗಿ ಅವರು ಮಾತ್ರವೇ ವಿಸ್ಮೃತಿಗೆ ಮುಳುಗಿ ತೂಗಾಡುತ್ತಿದ್ದರು. ಆ ನರಕ ಭೀಕರವಾಗಿತ್ತು. ಇವರೆಲ್ಲ ವಸತಿ ಹೀನರು… ಹೋಮ್‌ಲೆಸ್ ಪೀಪಲ್ ಎಂದು ಕರೆಯುತ್ತಿದ್ದರು. ಬೆಗ್ಗರ್ಸ್ ಎನ್ನುವಂತಿರಲಿಲ್ಲ. ಅವರು ದೀನವಾಗಿ ಬೇಡುತ್ತಲೂ ಇರಲಿಲ್ಲ. ಸಹಾಯ ಮಾಡಿ ಎಂದು ರಟ್ಟಿನ ಮೇಲೆ ಬರೆದುಕೊಂಡು ಜನಸಂದಣಿಯ ರಸ್ತೆ ಬದಿಯಲ್ಲಿ ನಿಂತಿರುತ್ತಿದ್ದರು. ‌

ಅಂತಹ ಶ್ರೀಮಂತ ದೇಶದ ಅಂತಹ ನರಕದ ವ್ಯಸನಿಗಳನ್ನು ಅರ್ಥಮಾಡಿಕೊಳ್ಳಲು ಅಲ್ಲಿನ ಸಾಮಾಜಿಕ ರಚನೆಯ ಆಳ ಬೇರುಗಳನ್ನೆ ತಡಕಬೇಕಿತ್ತು. ಆ ಬಗ್ಗೆ ಗೊತ್ತಿತ್ತು. ಅದನ್ನೆಲ್ಲ ಚರ್ಚಿಸಲು ಸಮಯ ಇಲ್ಲ. ನನ್ನ ತಲೆಯ ಒಳಗೆ ಯಾರೊ ಸಮಯ ಆಗುತ್ತಿದೆ ಎನ್ನುತ್ತಿದ್ದಾರೆ. ಕಾಲ ಸರಿದಂತೆ ಸಾವಿನ ಮನೆಯ ವಿಳಾಸ ತಂತಾನೆ ಗೋಚರವಾಗುತ್ತದಂತೆ… ಛೇ; ಇದೇನಿದು ಅಸಂಗತ ನೆನಪು ಎಂದು ಅದ ಅತ್ತ ಬಿಸಾಡಿದೆ. ಕುಡಿದೆ. ಹುಚ್ಚು ಉತ್ಸಾಹ. ಅವರೂ ನಿಶೆಯೇರಿ ಅಮಲಾಗಿದ್ದರು. ಭಾಷೆ ತೊಡಕಾಗಲೇ ಇಲ್ಲ. ಅವರಿಗೆ ಇಂಗ್ಲೀಷ್ ಬರದು ನನಗೆ ಜರ್ಮನಿ ಗೊತ್ತಿಲ್ಲ. ನಮ್ಮ ನಡುವೆ ಕಿತ್ತು ಹೋದ ಮನುಷ್ಯರ ಭಾವನೆಗಳು ತಮಗೆ ತಾವೆ ಹಾವಭಾವ ತೀವ್ರತೆಯಲ್ಲಿ ಒಂದಾಗಿ ಅನಾದಿ ಕಾಲದ ಮಾನವ ಮಾತು ತಂತಾನೆ ಬಂದು ಬಿಟ್ಟವು. ಬಹಳ ಗಟ್ಟಿಮುಟ್ಟಾಗಿದ್ದರು. ಬುದ್ಧಿವಂತರು. ಪ್ರಪಂಚ ಗೊತ್ತಿದ್ದವರು. ಆದರೂ ಯಾಕೆ ಈ ಇಂತಹ ಶ್ರೀಮಂತ ದೇಶಗಳಲ್ಲಿ ವ್ಯಕ್ತಿಗಳು ಕಳಚಿದ ಕೊಂಡಿಯಾಗಿ ದೀನ ಸ್ಥಿತಿಯ ಜೀವನವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಅವರ ವಿಚಿತ್ರ ಮಾನಸಿಕ ಸ್ಥಿತಿಯನ್ನು ಗ್ರಹಿಸಲು ಕಷ್ಟವಾಯಿತು.

ಈ ದೇಶದಲ್ಲಿ ಭಿಕ್ಷುಕರು ಎಲ್ಲಿದ್ದಾರೆ ಎಂದು ಕೇಳಿದೆ. ಸೆಕ್ರೆಟರಿ ಆಗಿದ್ದವಳು ಅವರನ್ನು ಕಾಣಲು ವ್ಯವಸ್ಥೆ ಮಾಡಿದಳು. ನಗರದ ಮರೆಯ ಕಟ್ಟಡದಲ್ಲಿ ಅವರಿದ್ದರು. ಬಹುಪಾಲು ಅನಾಥಾಶ್ರಮವೇ ಆಗಿತ್ತು. ಅವರಲ್ಲೊಬ್ಬ ಎಂ.ಎ. ಓದುತ್ತಿದ್ದು ಅರ್ಧಕ್ಕೆ ನಿಲ್ಲಿಸಿದ್ದವನೊಬ್ಬನ ಮಾತಿಗೆ ಪರಿಚಯಿಸಿದರು. ಪ್ರಾಯದ ಆ ಯುವಕ ಗಾಂಧೀಜಿಯ ಹೆಸರು ಕೇಳಿದ್ದ. ಭಾರತವನ್ನು ವಿಪರೀತ ಹೊಗಳುತ್ತಿದ್ದ. ಅವರಿಗೆ ಹಣ ನೀಡುವಂತಿಲ್ಲ ಎಂದಿದ್ದಳು ಫಾತಿಮಾ.

ಯಾವನೊಬ್ಬ ಹೇಳಿದ ‘ವೀ ಆರ್ ಲಿವಿಂಗ್ ಗೋಸ್ಟ್ಸ್. ಜೀವಂತ ಪಿಶಾಚಿಗಳು. ಸಾವನ್ನು ಹಿಡಿದು ಕಟ್ಟಿಹಾಕಿ ಬೆನ್ನ ಮೇಲೆ ಹಾಕಿಕೊಂಡಿದ್ದೀವಿ’ ಎಂದ. ಆತ ಥೇಟ್ ಚಂದಮಾವದ ತ್ರಿವಿಕ್ರಮ ರಾಜನಂತೆಯೆ ಕಾಣುತ್ತಿದ್ದ. ಸಮಯ ಮೀರಿತು… ನಾವು ಬೇರೆ ಕಡೆ ಹೋಗಬೇಕಲ್ಲಾ ಎಂದಳು ಫಾತಿಮ. ಹೊರ ಬಂದೆವು. ಆ ಸಂಜೆ ಯಹೂದಿಗಳ ಒಂದು ಪುಟ್ಟ ಸಂಸಾರದ ಕಥೆ ಕೇಳಲು ಹೋಗಬೇಕಾಗಿತ್ತು. ಅದಕ್ಕೂ ಮೊದಲು ಯಹೂದಿಗಳ ದೇಗುಲ ಮಂದಿರಕ್ಕೆ ಹೋಗಬೇಕಿತ್ತು. ಅದು ಹದಿನಾರನೆ ಶತಮಾನದ ಕಟ್ಟಡ. ನೆನ್ನೆ ಮೊನ್ನೆ ಕಟ್ಟಿಸಿದ್ದಂತಿತ್ತು. ಜುದಾಯಿಸಂ ಯಹೂದಿಗಳ ಧರ್ಮ. ಅದು ಜಗತ್ತಿನ ಮೊಟ್ಟ ಮೊದಲ ಧರ್ಮ. ಇವತ್ತಿನ ಇಸ್ರೇಲ್, ಟರ್ಕಿ, ಈಜಿಪ್ಟಿನ ಪ್ರದೇಶಗಳಲ್ಲಿದ್ದ ಯಹೂದಿಗಳು ಮಾಡಿಕೊಂಡಿದ್ದ ಧರ್ಮ. ಅದರಿಂದಲೆ ಕಾಲಾನಂತರ ಕ್ರೈಸ್ತ ಹಾಗೂ ಇಸ್ಲಾಂ ಧರ್ಮಗಳು ವಿಸ್ತರಣೆಯಾಗಿ ಹುಟ್ಟಿದ್ದು. ಆ ಚರಿತ್ರೆಗಳೆಲ್ಲ ದುರಂತ ರಕ್ತ ಪಾತವನ್ನೇ ಹೇಳುತ್ತವೆ.

ಅದೇನೇ ಇರಲಿ; ಯಹೂದಿ ಕುಟುಂಬದ ಹಿರಿಯ ಹೆಂಗಸೊಬ್ಬಳು ನಮ್ಮ ದೇಗುಲವ ನೀನು ನೋಡಬೇಕು ಎಂದು ಒತ್ತಾಯಿಸಿದ್ದಳು. ಸಮಯಕ್ಕೆ ಸರಿಯಾಗಿ ಹೋದೆ. ಆಕೆ ಅಲ್ಲಿದ್ದಳು. ನೋಡಲು ಚರ್ಚ್ ಇದ್ದಂತೆಯೇ ಇದೆ; ಆದರೆ ಚರ್ಚ್ ಅಲ್ಲ. ಪ್ರಾರ್ಥನಾ ಮಂದಿರ. ಭವ್ಯವಾಗಿತ್ತು. ತಮ್ಮ ದೇವದೂತ ಅಬ್ರಹಾಂನ ಗುಡಿಯ ಸಮ್ಮುಖದಲ್ಲಿ ನಮ್ಮ ಯಹೂದಿಗಳ ದುಃಖವ ಹೇಳಿಕೊಳ್ಳಬೇಕು ಎಂದು ಆ ಸ್ಥಳವನ್ನು ಅವಳೆ ನಿಗದಿಪಡಿಸಿದಳು. ಅದೊಂದು ಭದ್ರ ಕೋಟೆ. ಆ ಸ್ಥಳಕ್ಕೆ ಅಷ್ಟೊಂದು ರಕ್ಷಣೆಯನ್ನು ನೀಡಲಾಗಿತ್ತು. ಹಿಟ್ಲರ್ ನಂತರದ ಬದಲಾವಣೆ ಅದಾಗಿತ್ತು. ಸ್ಮಶಾನ ಮೌನ. ಅವಳು ಪ್ರಾರ್ಥನಾ ಮಂಟಪದಲ್ಲಿ ನಿಂತು ಒಂದು ಅತ್ಯುನ್ನತ ದುಃಖಗೀತೆಯನ್ನೇ ಹಾಡಿದಳು. ಜಗತ್ತಿಗೆ ಧರ್ಮವನ್ನು ಪರಿಚಯಿಸಿದವರು ನಾವು… ನಮ್ಮನ್ನೇ ಕೊಂದುಬಿಟ್ಟಿತು ಈ ಲೋಕ… ಯಾರನ್ನು ದೂರಲಿ ಎಂದು ತನ್ನ ತಂದೆ ತಾಯಿ ಬಂಧುಬಳಗ ಹೇಗೆ ಆಸ್‌ವಿಟ್ಚ್‌ನ  ಕಾನ್ಸನ್‌ಟ್ರೇಟ್ ಡೆತ್ ಕ್ಯಾಂಪಲ್ಲಿ ಗ್ಯಾಸ್ ಛೇಂಬರಲ್ಲಿ ಸತ್ತರು ಎಂಬುದನ್ನು ಬಿಕ್ಕಿ ಬಿಕ್ಕಿ ಅಳುತ್ತ ನಿವೇದಿಸಿದಳು. ಮುಪ್ಪಾದ ನಡುಗುವ ಕೈಗಳ ನೀಡುತ್ತ. ಇಡೀ ಒಂದು ಜನಾಂಗದ ಅರಣ್ಯರೋಧನದಂತಿತ್ತು ಅವಳ ವಿವರಣೆ. ನನ್ನ ಮೇಲಾದ ಅಸ್ಪೃಶ್ಯತೆ, ಕರಿಯರ ಮೇಲಿನ ವರ್ಣದ್ವೇಷ; ಬಿಳಿಯರ ಜನಾಂಗ ಭೇದಗಳು ಒಟ್ಟಾಗಿ ಬಂದು ಮನುಷ್ಯ ತಾನು ಬದುಕಿ ಉಳಿಯಲು ನಿಸರ್ಗದಲ್ಲಿ ತನ್ನ ಸ್ವಜಾತಿಯವರ ವಿರುದ್ಧವೇ ಇಷ್ಟೊಂದು ಬರ್ಬರವಾಗಿ ಹೋರಾಡಿದ್ದಾನಲ್ಲಾ… ಇದನ್ನು ಏನೆಂದು ಕರೆಯುವುದು… ನಿಸರ್ಗ ಮನುಷ್ಯನಿಗೆ ಸವಾಲುಗಳನ್ನು ಸೃಷ್ಟಿಸಿಲ್ಲ; ನಾಶವಾಗುವ ದಾರಿಯನ್ನು ತೋರಿಲ್ಲ. ಸ್ವಯಂಕೃತ ಅಪರಾಧಗಳನ್ನು ಇಷ್ಟೊಂದು ಸಂಕೀರ್ಣವಾಗಿ ನೇಯ್ದುಕೊಂಡಿರುವನಲ್ಲಾ… ಜೀವ ವಿಕಾಸದಲ್ಲಿ ಇದಕ್ಕೆ ಏನು ವಿವರಗಳಿವೆ… ಅದಕ್ಕಾಗಿಯೇ ದೇವರನ್ನು ಕಂಡುಕೊಂಡನೇ… ‘ಯಪ್ಪಾ… ಸಾಕೊ ಮಾರಾಯಾ… ಬಾರೊ ಹೋಗೋಣ… ಕಾದು ಕಾದು ಸಾಕಾಗ್ತಿದೆ… ಟೈಂ ಬರ‍್ತಾ ಇದೆ’ ಎಂದು ಯಾರೊ ಕರೆದಂತಾಯಿತು. ‘ಹೇ ಬರ‍್ತಾನೆ ತಾಳಯ್ಯಾ… ಇನ್ನೆಲ್ಲಿ ಹೋಗ್ತಾನೆ… ಇಲ್ಲಿಗೂ ಬರ‍್ಬೇಕಿತ್ತು; ಪಾಪ; ಬಂದವನೆ… ಹೋಯ್ತನೆ ಬಿಡೂ’ ಎಂದು ಆತ್ಮ ನನ್ನ ಪರವಾಗಿ ಮಾತಾಡುತಿತ್ತು.

ಏನೇನೊ ವಿಚಿತ್ರ ಮನಸ್ಸು… ಹೇಳಿಕೊಳ್ಳಬೇಕು ಎಂಬ ಅಹಂ ಯಾಕೆ ಬಂತೊ ಶಿವನೇ ಎಂದುಕೊಂಡೆ. ಆ ಯಹೂದಿ ತಾಯಿಯ ಮಾತುಗಳು ಕರೆಯುತ್ತಲೇ ಇರುತ್ತವೆ ಸಮಾಧಿಯಲ್ಲೂ ಭೀತವಾಗಿ ಮಲಗಿರುವ ಶವಗಳ ಕಣ್ಣುಗಳಂತೆ. ಆ ರಾತ್ರಿ ಅವಳ ದತ್ತು ಮಗ ಸೊಸೆ ಮೊಮ್ಮಕ್ಕಳ ಜೊತೆ ಪಾರ್ಟಿ ಮಾಡಿದೆವು. ಅದು ಅವರಿಗೆ ತೋರಿದ ಗೌರವ. ಕುಡಿದು ಅಮಲಾದಂತೆ ಅವರ ಸಹಜ ಯಹೂದಿ ರೀತಿನೀತಿಗಳು ಬಣ್ಣದ ಮಂದ ಬೆಳಕಲ್ಲಿ ತೆರೆದುಕೊಂಡವು. ಅವರ ಕುಟುಂಬ ಪಕ್ಕಾ ಸಂಪ್ರದಾಯವಾದಿ ಬ್ರಾಹ್ಮಣರ ಕುಟುಂಬದಂತೆ ಕಂಡಿತು. ನೀನು ಇಂಡಿಯಾದಲ್ಲಿ ಅನ್‌ಟಚಬಲ್… ನಾವು ಯುರೋಪಿನಲ್ಲಿ ಒಂದು ಕಾಲಕ್ಕೆ ಅನ್‌ಟಚಬಲ್… ನಮ್ಮನ್ನು ಹಿಟ್ಲರನ ಕಡೆಯವರು ದೊಡ್ಡಿಗಳಲ್ಲಿ ಕೂಡಿ ಹಾಕಿ ಕೊಲ್ಲುತ್ತಿದ್ದರು… ಆ ಗೆಟ್ಟೋಗಳ ನರಕ ಬೇಡ… ‘ಸಿಂಡ್ರ‍ಲಿಸ್ಟ್’ ಅಂತಾ ಒಂದು ಮೂವಿ ಬಂದಿತ್ತಲ್ಲಾ… ನೀನು ನೋಡಿಲ್ಲವಾ… ಬೇಡ ಬೇಡ… ಈ ಜಗತ್ತಿನಲ್ಲಿ ನಮಗಾದ ನರಕ ಇನ್ನಾರಿಗೂ ಬೇಡ ಎಂದು ಅಪ್ಪಿಕೊಂಡು ತಾಯಂತೆ ತಲೆ ಸವರಿದ್ದಳು. ಅಂತಹ ಡೆತ್ ಕ್ಯಾಂಪಲ್ಲಿ ಅಕಸ್ಮಾತ್ ಬದುಕಿ ಉಳಿದು ಬಂದವಳಾಗಿದ್ದಳು. ಅಂತಹ ಪಾತಕ ಕೂಪದಿಂದ ಬಚಾವಾಗಿ ಬಂದ ಆಕೆಯನ್ನು ಬಲವಾಗಿ ಅಪ್ಪಿ ಹಿಡಿದುಕೊಂಡು ಬಿಕ್ಕಿದೆ. ಅದೊಂದು ಅಸಾಧಾರಣ ಮಾನವ ಸಂಬಂಧಗಳ ಒಂದು ಕ್ಷಣ ಎನಿಸಿ ಮನಸ್ಸು ಧನ್ಯವಾಯಿತು. ಎಲ್ಲಿಂದ ಎಲ್ಲಿಗೆ ಬಂದಿರುವೆ… ನಾಳೆ ಎಲ್ಲಿಗೆ ಹೋಗುವೆ ಎಂದು ಕಾಲ ಹೀಗೆ ನಿಂತಿತು ಎಂದು ಗಡಿಯಾರದತ್ತ ನೋಡಿದೆ. ರಾತ್ರಿ ಒಂದು ಗಂಟೆ.

ಅಲ್ಲಿ ಹಗಲು ರಾತ್ರಿಗಳಿಗೆ ವ್ಯತ್ಯಾಸವಿಲ್ಲ. ಅಲ್ಲೊಂದು ಬ್ಯಾಲೆ ನೃತ್ಯ ನಡೆಯುತ್ತಿತ್ತು. ಮತ್ತಿನ ಮೇಲೆ ಮತ್ತು ತರಿಸುವ ಪಿಯಾನೊ ಗಿಟಾರ್ ನಾದ ತಲೆದೂಗುವಂತೆ ಮಾಡಿತು. ಮುಂಗೋಳಿ ಹೊತ್ತು ಅಲ್ಲಿ ಎಲ್ಲಿ ಸಾಧ್ಯ… ನನ್ನ ಭಾವದಲ್ಲಿತ್ತು. ಮಲಗಿದೆ. ನನ್ನ ಹಳ್ಳಿಯ ರಾತ್ರಿಯ ನಿಶಾಚಾರಿ ಹಕ್ಕಿಗಳು ಕನಸಲ್ಲಿ ಹಾರಿ ಬಂದಿದ್ದವು. ಆ ಹುಂಜಗಳು ರೆಕ್ಕೆ ಬಡಿಯುತ್ತ ಕೊಕ್ಕೋ ಎನ್ನುತ್ತಿದ್ದವು.
ಏನೊ ಅಸ್ವಸ್ಥತೆ. ಉಸಿರಾಡಲು ಮನಸ್ಸಿಲ್ಲದಂತೆ ಎದೆಗೂಡು ನಿದ್ದೆ ಮಾಡುತಿರುವಂತೆ ಬಾಸ ಅಭಾಸ ಮನೋವ್ಯಾಪಾರ ದೃಶ್ಯಗಳು… ಸಾಕಪ್ಪಾsss ಈ ಬರಹವೇ ಬೇಡ ಎನಿಸುವ ವೈರಾಗ್ಯ… ಬಿಡದ ಮೋಹ… ಮರುದಿನ ಎದ್ದಾಗ ಹ್ಯಾಂಗೋವರಾಗಿತ್ತು. ಯಾವುದಾವುದೊ ಬೃಹತ್ ಅರಮನೆಗಳು, ಮ್ಯೂಸಿಯಂಗಳು ತಮ್ಮ ಭವ್ಯತೆಯಿಂದ ತಲೆ ಚಿಟ್ಟು ಹಿಡಿಸಿದವು. ಬೀದಿ ಬೀದಿಗಳಲ್ಲಿ ಚೆಲುವೆಯರ ಅರೆಬರೆ ದೇಹಗಳ ನಗುವ ಕಂಡು ಕಂಡು ಸುಸ್ತಾದೆ. ನನ್ನ ಜೀವಮಾನದಲ್ಲಿ ನಾನೆಂದೂ ನನ್ನ ದೇಶದಲ್ಲಿ ಚಂದವತಿಯರ ಅಷ್ಟು ನಗೆಯನ್ನೇ ಕಂಡಿರಲಿಲ್ಲ. ಅಲ್ಲೇ ಇದ್ದಿದ್ದರೆ ಅದೆಷ್ಟು ಬುಗುರಿಗಳ ಬರೆಯುತ್ತಿದ್ದೆನೊ… ಅಷ್ಟು ಸುಖ ಇರಲಿಲ್ಲ. ಮಜ ಮಜ… ಎಷ್ಟೆಲ್ಲ ಮಜವೂ ಅಷ್ಟೇ… ಬರೀ ಬಣ್ಣದ ಕನಸಿನಂತೆ…ಮಧುಪಾನ ಮತ್ತೆಲ್ಲ ಭ್ರಮೆಯಂತೆ ಜಾರಿ ಹೋಗುತಿತ್ತು.

ಒಂದು ತಿಂಗಳು ಒಂದು ಗಳಿಗೆ ಎಂಬಂತಿತ್ತು. ಮ್ಯೂನಿಚ್ ನಗರ ಸಾಹಿತಿಗಳ ಮುಂದೆ ʻಬತ್ತʼ ಕಥೆಯನ್ನು ಹಿರಿಯ ರಂಗಕಲಾವಿದರೊಬ್ಬರು ಕಥೆ ಹೇಳುತ್ತಾ ತಾನೇ ನಟಿಸುತ್ತಾ ಒಂದು ಏಕವ್ಯಕ್ತಿ ಪ್ರದರ್ಶನ ಮಾಡಿದ್ದರು. ಯಾವುದೊ ಒಂದು ಹೊಲಗೇರಿಯ ಅನ್ನದ ಕನಸಿನ ಬತ್ತದ ಕಥೆ ಜರ್ಮನಿಯ ಆ ರಂಗ ಮಂದಿರದಲ್ಲಿ ಪ್ರದರ್ಶನವಾಗುವಾಗ ತಡಯಲಾರದೆ ಬಳಬಳನೆ ಅತ್ತುಬಿಟ್ಟೆ. ಆ ನನ್ನ ಊರು ಕೇರಿಯೇ ಆ ನನ್ನ ಜನರೇ ಅಲ್ಲಿ ಬಂದು ನನ್ನ ಜೊತೆ ಕೂತು ನಾಟಕ ನೋಡಿದಂತೆನಿಸಿತ್ತು. ಕೆಲವು ಸಂತಸಗಳ ಸಾರ್ವಜನಿಕವಾಗಿ ವಿಸ್ತರಿಸಿ ವರ್ಣಿಸಬಾರದು. ಅದು ಆ ಸುಖಕ್ಕೆ ಮಾಡುವ ಭಂಗ… ಅದೊಂತರ ಅನೈತಿಕ. ಕೊನೆಗೆ ಪ್ರಾಂಕ್‌ಫರ್ಟ್‌ನಲ್ಲಿ ವಿಶ್ವ ಲೇಖಕರ ಮೇಳವೂ ಪುಸ್ತಕ ಮೇಳವೂ ಒಟ್ಟಾಗಿದ್ದವು. ಅದೊಂತರ ಲೇಖಕರ ಜಾತ್ರೆ. ವಿಶ್ವಮಟ್ಟದ ಆ ಮಹಾಜಾತ್ರೆಯನ್ನು ಊಹೆ ಮಾಡಿಕೊಂಡರೇ ಸರಿ. ಎಲ್ಲೆಲ್ಲೂ ವಿಶ್ವದ ಪ್ರಸಿದ್ಧ ಲೇಖಕರು ಆ ಜಾತ್ರೆಗೆ ಬಂದು ನೆರೆಯುತ್ತಾರೆ. ಜೀವನದಲ್ಲಿ ಒಬ್ಬ ಲೇಖಕನಾಗಿ ಅಲ್ಲಿ ಭಾಗವಹಿಸಿದರೆ ನಮ್ಮ ತಗಡು ರಟ್ಟಿನ ಕಿರೀಟಗಳೆಲ್ಲ ಕಿತ್ತು ತೂರಿ ಹೋಗುತ್ತವೆ. ನಮ್ಮ ರಾಷ್ಟ್ರೀಯ  ಪುಡಿ ಪದಕಗಳೆಲ್ಲ ಅಲ್ಲೇ ಆ ಕ್ಷಣದಲ್ಲೆ ಸುಟ್ಟು ಬೂದಿಯಾಗಿ ಬೂದಿಯೂ ತೂರಿಹೋಗುತ್ತದೆ. ‌

(ಗುಂತರ್‌ಗ್ರಾಸ್)

ಆ ವಿಶಾಲ ಪ್ರಾಂಗಣದ ಪುಸ್ತಕ ಮಳಿಗೆಗಳ ಸಾಲಿನಲ್ಲಿ ಗೇಬ್ರಿಯಲ್ ಮಾರ್ಕ್ವೆಸ್ ಗೆಳೆಯರ ಜೊತೆ ಗಡಿ ಬಿಡಿಯಲ್ಲಿ ಸಾಮಾನ್ಯರಲ್ಲಿ ಸಾಮಾನ್ಯನಂತೆ ಹೋಗುತ್ತಿದ್ದ. ಮಾತನಾಡಿಸಿದರೂ ಏನೂ ಆಗುತ್ತಿರಲಿಲ್ಲ. ಅಲ್ಲೆಲ್ಲ ಮನುಷ್ಯ ಸಾಧ್ಯತೆಯ ಸೃಜನಶೀಲ ಮನಸಿನ ಅಲೆ ಅಲೆಗಳು ಮಂಡಲ ಮಂಡಲವಾಗಿ ತೇಲಿ ಹೋಗುತ್ತಿರುತ್ತವೆ. ನನ್ನ ಎದುರೇ ಆ ಲೇಖಕ ಗೇಬ್ರಿಯಲ್ ಮಾರ್ಕ್ವೆಸ್ ಸಾಗಿ ಹೋದದ್ದು ಏನೂ ಅನಿಸಲಿಲ್ಲ. ನನಗೆ ಆಚೆ ಕಡೆ ಒಂದು ವೇದಿಕೆಯಲ್ಲಿ ಸಂವಾದ ಇತ್ತು. ನನ್ನ ಜೊತೆಗೆ ಜರ್ಮನಿಯ ಪ್ರಖ್ಯಾತ ಲೇಖಕ ಗುಂತರ್‌ಗ್ರಾಸ್ ಜೊತೆ ಮಾತುಕತೆ ಇತ್ತು. ಪುಟ್ಟ ಪುಟ್ಟ ಕಾರ್ನರ್ ಟಾಕ್‌ಗಳು ಅಷ್ಟೇ… ಜನ ಸುಮ್ಮನೆ ನಿಂತು ಆಲಿಸಿ ಹೊರಟು ಹೋಗುತ್ತಿದ್ದರು. ಗುಂತರ್‌ಗ್ರಾಸ್ ನೊಬೆಲ್ ಸಾಹಿತ್ಯ ಬಹುಮಾನ ಪಡೆದಿದ್ದವರು. ನನ್ನ ಸೆಕ್ರೆಟರಿ ʻಬುಗುರಿʼ, ʻಬತ್ತʼ ಕಥೆಗಳ ಜರ್ಮನ್ ಭಾಷೆಗೆ ಅನುವಾದ ಮಾಡಿಸಿ ಮೊದಲೇ ಓದಲು ಅವರಿಗೆ ಕೊಟ್ಟಿದ್ದಳು.

ಎಲ್ಲಿಯ ಗುಂತರ್‌ಗ್ರಾಸ್ ಎಲ್ಲಿಯ ಬುಗುರಿ… ಕಲ್ಪಿಸಿಕೊಳ್ಳಬೇಕು ಅಷ್ಟೇ… ನಾನೇ ಕಲ್ಪನೆಯಲ್ಲಿರುವಂತೆ ಅವರ ಜೊತೆ ವೇದಿಕೆ ಮೇಲೆ ಕೂತಿದ್ದೆ. ಬಾಯಿಕಟ್ಟಿತ್ತು. ಹೃದಯ ಗಪ್ಪಾಗಿತ್ತು. ನನ್ನ ತಾಯಿ ನೆನಪಾದಳು. ನಾನು ಇಲ್ಲೇ ಇರುವೆ ಎಂಬಂತೆ ಆ ಮಾಯಾವಿ ಬೆಳಕಲ್ಲಿ ನೆರಳು ಸುಳಿದು ಬಂದಂತಾಯಿತು. ಅಲ್ಲಿ ಎಲ್ಲರೂ ಗಣ್ಯರೇ… ನಗಣ್ಯರೇ… ಒಂದು ಕಾಲಚಲನೆಯ ಗತಿ ಮಾತ್ರ ಮುಖ್ಯವಾಗಿತ್ತು. ಹೇಸಿಗೆಯ ʻಬುಗುರಿʼ ಕಥೆ ಬಗ್ಗೆ ಗುಂತರ್ ಗ್ರಾಸ್ ಮೆಚ್ಚಿ ಮಾತಾಡಿ ಹೆಗಲ ಮೇಲೆ ಕೈ ಇಟ್ಟರು. ಕುಲುಕಿ ಕುಲುಕಿ ಥ್ಯಾಂಕ್ಸ್ ನೀಡಿದರು. ನನಗದಷ್ಟೇ ಸಾಕಾಗಿತ್ತು. ಆ ಸುಖದಲ್ಲಿ ಮೂರು ದಿನವೆಲ್ಲ ಪ್ರಾಂಕ್ ಫರ್ಟ್ ನಗರವನ್ನು ಅಮಲಲ್ಲಿ ಸುತ್ತಾಡಿದೆ. ಅಲ್ಲೂ ಮರೆಯ ಬೀದಿಗಳಲ್ಲಿ ಡ್ರಗ್ ವ್ಯಸನಿ ಬೀದಿವಾಸಿ ಅನಾಥರು ಭಯ ಹುಟ್ಟಿಸಿದರು. ಎಲ್ಲ ಇದ್ದೂ ಹಾಳಾಗಿ ಬೀದಿಗೆ ಬಿದ್ದ ಜೀವಂತ ಶವಗಳು ಅವರು. ಅವರ ಲೋಕವೇ ಬೇರೆ… ಅಲ್ಲೂ ರಂಗುರಂಗಿನ ವೇಶ್ಯಾ ಮಂದಿರಗಳು. ಅದನ್ನೊಮ್ಮೆ ಯಾಕೆ ನೋಡಬಾರದು ಎನಿಸಿ ಸೆಕ್ರೆಟರಿಗೆ ಕೇಳಿದೆ. ಆಕೆ ಯಾವ ಮುಜುಗರವೂ ಇಲ್ಲದೆ ವ್ಯವಸ್ಥೆ ಮಾಡಿದಳು.

ಅಲ್ಲಿನ ಅಪಾಯ ಉಪಾಯಗಳ ತಿಳಿಸಿದಳು. ಮುಖ್ಯವಾಗಿ ಆ ದಂಧೆ ನಡೆಸುವ ಮುಖ್ಯಸ್ಥರಿಗೆ ಈ ವ್ಯಕ್ತಿ ಯಾರು ಎಂದು ಪರಿಚಯಿಸಿದ್ದಳು. ಒಹ್! ಹಾಗಾದರೆ ಇವರು ನಮಗೂ ಅತಿಥಿ ಲೇಖಕ ಎಂದು ಬರಮಾಡಿಕೊಂಡಿದ್ದರು. ಆ ಪಿಂಕ್ ಬಣ್ಣದ ಮಾಯಾ ಬೆಳಗಲ್ಲಿ ಯಾರು ಚೆಲುವೆ ಯಾರು ಅತಿ ಚೆಲುವೆ ಎಂದು ನಿರ್ಧರಿಸುವುದು ಅಸಾಧ್ಯವಾಗಿತ್ತು. ಅಮಲುಕಣ್ಣುಗಳು ಅಲ್ಲಲ್ಲೇ ಹೊರಳಾಡುತಿದ್ದವು. ಯಾವುದು ಬೇಕೂ… ಬೇಡವಾದದ್ದು ಇಲ್ಲಿ ಯಾವುದೂ ಇಲ್ಲವಲ್ಲಾ… ಅಹಾ! ಎಂತಹ ಎದೆಗಾತಿಯರು… ಯಕ್ಷಿಯರ ಲೋಕವೇ ಅಲ್ಲಿ ನಾಚಿ ಮೂಲೆಗೆ ಕೂತಿತ್ತು. ಒಂದು ಗಳಿಗೆಯನ್ನೂ ಅಲ್ಲಿ ಸುಮ್ಮನೆ ವ್ಯಯ ಮಾಡುವಂತಿಲ್ಲ. ಅಲ್ಲಿ ಎಲ್ಲ ಗಡಿಯಾರಗಳು ಹಣವಾಗಿ ಕ್ಷಣ ಕ್ಷಣವನ್ನು ಎಣಿಸುತ್ತಿರುತ್ತವೆ.

ಸಮಯ ವ್ಯರ್ಥ ಮಾಡಲು ಮನಸ್ಸಾಗಲಿಲ್ಲ. ಅಲ್ಲಿನ ವೇಶ್ಯಾವಾಟಿಕೆಯ ಬಗ್ಗೆ ತಿಳಿದುಕೊಳ್ಳಬೇಕಿತ್ತು. ಅಶ್ಲೀಲ ಅನ್ನುವಂತದ್ದು ಅಲ್ಲೇನೂ ಇಲ್ಲ. ಒಬ್ಬಳು ಬಂದು ಕರೆದಳು. ಹೋದೆ. ಸುಸಜ್ಜಿತ ವೈಭವದ ಕೊಠಡಿ. ಗಲ್ಲಿ ಅಲ್ಲ. ಐಷಾರಾಮವಾಗಿತ್ತು. ಸಂದರ್ಶನ ಮಾಡಿದೆ. ಅದೊಂದು ಉದ್ಯೋಗ. ಹೋಟೆಲ್ ಸೇವೆ ಇದ್ದಂತೆ ಎಂದಳು. ವಯಸ್ಸಾಗಿತ್ತು. ನನ್ನ ಅತ್ತೆಯ ವಯೋಮಾನದವಳು. ಅನುಭವಸ್ಥೆ. ಕಥೆ ಹೇಳುತ್ತಿದ್ದಳು. ಮೈಜುಂ ಎನ್ನಲಿಲ್ಲ. ಒಂದು ಬಗೆಯಲ್ಲಿ ಮಾಜಿ ಸೆ ಕ್ಸ್‌ ವರ್ಕರ್.‌  ವಿರಾಮವಾಗಿ ಹರಟುತ್ತಿದ್ದಳು. ನಮ್ಮ ಊರ ಸೂಳೆಯರ ನರಕವೇ ಬೇರೆ; ಅಲ್ಲಿನ ನಾಗರೀಕ ವೇಶ್ಯಾವಾಟಿಕೆಯೆ ಬೇರೆ. ಆದರೂ ಗಾಯ ಗಾಯವೇ. ಆ ನೋವು ಒಂದೇ ಎನಿಸಿತು. ಅಂತಹ ತಪ್ಪನ್ನೇನೂ ನಾನು ಮಾಡಲಿಲ್ಲ. ಸೆಕ್ರೆಟರಿ ಸಮಯ ಮೀರಿತು ಎಂದು ಬಂದು ಕರೆದುಕೊಂಡು ʻಹೇಗಾಯ್ತುʼ ಎಂದು ವಿಚಾರಿಸಿದಳು. ಸುಮ್ಮನೆ ಯಾಕೆ ಹೋಗಿದ್ದೆ ಎಂದು ನಕ್ಕಳು… ನಿನಗೆ ಅದರ ಅವಶ್ಯಕತೆ ಇದೆಯೆ ಎಂದು ಕೇಳಿದಳು. ನಾಳೆ ಹೇಳುವೆ ಎಂದು ಬಂದು ಮಲಗಿದೆ.

ವಾಪಸ್ಸು ಮನೆಗೆ ಹೋಗಬೇಕು… ಮಡದಿ ಮಕ್ಕಳ ಅಪ್ಪಿ ಹಿಡಿದುಕೊಳ್ಳಬೇಕು ಎನಿಸಿತು. ಇವೆಲ್ಲ ಗಾಳಿಯ ಅಲೆಗಳು ಅಷ್ಟೇ… ಒಂದೆಡೆ ಮಡದಿ ಜೊತೆ ಕೂತು ನನ್ನ ಬಾಲ್ಯ ಕಾಲವನ್ನೆಲ್ಲ ಮೆಲುಕು ಹಾಕಿ ಮಾತಾಡಬೇಕೆಂಬ ಉತ್ಕಟತೆ ಬಂತು. ಹಾರಿ ಬಂದಿದ್ದೆ. ಮಕ್ಕಳ ಮೈ ಮೇಲೆ ಕೂರಿಸಿಕೊಂಡು ನಲಿದಾಡಿದೆ. ಜರ್ಮನಿಯ ಅನುಭವ ಹೇಗಿತ್ತು ಎಂದು ಯಾರೊಬ್ಬರೂ ಕೇಳಲಿಲ್ಲ. ದೂರ ಹೋಗಿ ಬಂದವರ ಮಾತು ಕೇಳುವುದು ಒಂದು ಸಂಪ್ರದಾಯ. ಯಾರೂ ಕ್ಯಾರೇ ಎನ್ನಲಿಲ್ಲ. ಹೇಳಿಕೊಂಡು ಬೀಗುವ ಮನಸ್ಸೂ ನನಗಿರಲಿಲ್ಲ. ಅವರಿಗೆಲ್ಲ ಎಷ್ಟು ಉರಿ ಆಗಿದೆ ಎಂಬುದು ಅವರ ವರ್ತನೆಯಲ್ಲೆ ಗೊತ್ತಾಗುತಿತ್ತು. ವಿಭಾಗದ ಕೊಠಡಿಯಲ್ಲಿ ಹೋಗಿ ಕುಳಿತೆ. ಜವಾನ ಬಂದ! ಕೈಯಲ್ಲಿ ಹತ್ತಾರು ನೊಟೀಸುಗಳ ಹಿಡಿದು ಮುಖ ಸಪ್ಪಗೆ ಮಾಡಿಕೊಂಡೂ… ʻಸಾರ್ ಇವ್ನೆಲ್ಲ ನಿಮಗೆ ನಾನು ಕೊಡಬೇಕಲ್ಲಾ… ನಿಯತ್ತಿನಿಂದ ಇರೋರಿಗೆ ನೂರೆಂಟು ತರಲೆ ನೋಟೀಸು… ಲಂಚಕೋರ ಲಂಪಟರಿಗೆ ಬಿರುದು ಸನ್ಮಾನ… ಇದೇನ್ಸಾರ್ ಅನ್ಯಾಯಾ… ಕೋರ್ಟಿಗೆ ಹಾಕಿ ಸಾರ್’ ಎಂದು ಪತ್ರಗಳ ಕೈಗಿತ್ತು ಸಹಿ ಮಾಡಿಸಿಕೊಂಡು ಹೋದ.

ʻಅವನು ಜರ್ಮನಿಯಿಂದ ಬಂದು ಈ ಪತ್ರಗಳ ನೋಡಿಯೆ ಆತ್ಮಹತ್ಯೆ ಮಾಡಿಕೊಳ್ಳುವನುʼ ಎಂದಿದ್ದರಂತೆ ಕೆಲವರು. ಅವೆಲ್ಲ ರಗಳೆಗಳ ಹೇಳಿದರೆ ಬರಹಕ್ಕೆ ಅಪಮಾನವಾಗುತ್ತದೆ… ಅವೇನನ್ನೂ ವಿವರಿಸುವುದಿಲ್ಲ. ಕಿರುಕುಳ ನೀಡಲೇ ಬೇಕು ಎಂದರೆ ಎಂತದಾದರೂ ಸುಳ್ಳು ದಾಖಲೆಗಳ ಸೃಷ್ಟಿಸುತ್ತಾರೆ… ಅನೇಕ ಆರೋಪ ಪತ್ರಗಳಿಗೆ ವಿವರಣೆ ನೀಡಿದೆ. ಕಮಿಟಿ ಮುಂದೆ ನಿಲ್ಲಿಸಿ ವಿಚಾರಣೆಗೆ ಒಳಪಡಿಸಿದರು. ʻಕೈಕಟ್ಟಿ ಅಪರಾಧಿ ಸ್ಥಾನದಲ್ಲಿ ನಿಂತು ಮಾತಾಡೋನಿಗೆ ಏನು ನಯ ವಿನಯ ಇರಬೇಕೊ… ಹಾಗೆ ನಡವಳಿಕೆ ಮಾಡ್ರೀ… ಕೊಬ್ಬಿ ಹೋಗಿದ್ದೀರಿ… ಜರ್ಮನಿಗೆ ಹೋಗಿ ಬಂದ ಕೂಡ್ಲೆ ನೀನೇನು ಮಹಾ ತೋಲಾಂಡಿಯಾ… ನನ್ನ ಕಸನೂ ಅಲ್ಲ ನೀನು’ ಎಂದು ಕೆಣಕಿದ. ಅವನ ಸಂಚು ಗೊತ್ತಿತ್ತು.

ʻಇಲ್ಲ ಸಾರ್ʼ ಎಂದು ನಡು ಬಗ್ಗಿಸಿ ನಮಸ್ಕರಿಸಿದೆ. ಬೀಗಿದ. ಬೈದ. ಯಾವ ಆರೋಪಕ್ಕೂ ಅವನ ಬಳಿ ಸಾಕ್ಷಿ ಇರಲಿಲ್ಲ. ಅಧಿಕಾರ ಇತ್ತು. ಜಾತಿ ಇತ್ತು. ಕ್ರೌರ್ಯ ಇತ್ತು. ವಿದ್ವಂಸಕ ಸಂಚು ಇತ್ತು. ತಲೆ ತಗ್ಗಿಸಿದೆ. ರಾಜಿನಾಮೆ ಬರೆದು ಬಿಸಾಡಲೇ ಎನಿಸುತಿತ್ತು ಒಳಗೆ ಕುದಿಯುತಿದ್ದ ತಳಮಳದ ಮನ. ತಡೆದುಕೊಂಡೆ. ಹೇಳುತ್ತ ಹೋದರೆ ತಡೆ ಇಲ್ಲದ ಒಳಗುದಿಯ ತಲ್ಲಣ. ಪುಟ್ಟ ಮಕ್ಕಳಿಗೆ ಜರ್ಮನಿಯ ಸುಖವ ಏನೆಂದು ಹೇಳಲಿ… ಬಂದ ಕೂಡಲೆ ದಾಳಿ ಮಾಡಿದ್ದ ನೋಟೀಸುಗಳಿಂದ ಹೈರಾಣಾಗಿದ್ದೆ. ಅಲ್ಲೇ ಮ್ಯೂನಿಚ್ ಯೂನಿವರ್ಸಿಟಿಯಲ್ಲಿ ಒಂದು ಗೆಸ್ಟ್ ಫ್ಯಾಕಲ್ಟಿಯಾಗಲು ಕೋರಿದ್ದೆ. ಅದು ಅಲ್ಲಿ ಬಹಳ ಕಷ್ಟವಿತ್ತು. ʻನನಗೆ ಏನೂ ಒಳ್ಳೆಯದನ್ನು ಮಾಡಬೇಡ ದೇವರೇ… ಒಳಿತಾದಂತೆಲ್ಲ ತುಳಿವವರು ಹೆಚ್ಚುತ್ತ ಹೋಗುವರುʼ  ಎಂದು ನನಗೆ ನಾನೆ ವ್ಯಂಗ್ಯ ಮಾಡಿಕೊಂಡೆ. ದಿನಗಳೆಲ್ಲ ಹೊರೆಯಾದವು. ಆ ಹೊರೆಯ ಭಾರವ ಇಳಿಸಿಕೊಳ್ಳಲು ಏನೇನೊ ಬರೆಯುವುದು… ಬರಹವನ್ನೆ ಸ್ವಯಂ ರಕ್ಷಣೆಯ ಆಯುಧವಾಗಿ ಮಾರ್ಪಡಿಸಿಕೊಳ್ಳುವುದು… ಬರಹದಲ್ಲೇ ಹೊಡೆಯುವುದನ್ನು ರೂಢಿಸಿಕೊಂಡೆ. ಹೊರಗೆ ತಣ್ಣೀರ ಕೊಳ; ಒಳಗೆ ಕುದಿವ ಲಾವಾರಸದಂತೆ ಒಂಟಿಯಾಗುತ್ತ ಬಂದೆ. ಯಾವ ಗುಂಪುಗಳೂ ನನಗೆ ಬೇಡವಾಗಿದ್ದವು.

ಸುಮ್ಮನೆ ಗಾಳಿಯಲ್ಲಿ ಗುದ್ದಾಡಿದ್ದೆ. ವಿಪರೀತ ತಕರಾರು ಮಾಡಿದ್ದೆ. ಹೊಡೆದು ಚೆನ್ನಾಗಿ ದಂಡಿಸಿಕೊಂಡಿದ್ದೆ. ಯಾರು ಹೊಡೆದರೊ… ಎಲ್ಲಿ ಯಾವ ದ್ವೇಷದ ಮಾಯದ ಗುದ್ದೋ… ಅಯ್ಯೋ… ಒಳಗೇ ಕರುಳ ಇರಿದಂತೆ ಯಾರೊ ನೆತ್ತರ ಹೀರಿದಂತೆ ಭಾದೆ… ಇದೇನಿದು ವಿಚಿತ್ರ ಹಿಂಸೆ… ಬೇಟೆ ಎಂದು ನೋಡಿಕೊಂಡರೆ ಎಲ್ಲರೂ ನಮ್ಮವರೇ… ಹಾಗಾದರೆ ಯಾರು ಬಂದು ಎಲ್ಲೆಲ್ಲೊ ಹೊಡೆಯುತ್ತಿದ್ದಾರಲ್ಲಾ ಎಂದು ಕಂಗಾಲಾಗುತಿದ್ದೆ. ಏನಾದರೂ ತಲೆ ಕೆಟ್ಟಿದೆಯೇ ಎಂದು ಸ್ಕ್ಯಾನಿಂಗ್‌  ಮಾಡಿಸಿಕೊಂಡಿದ್ದೆ. ಮತ್ತೆಲ್ಲಿಂದ ಈ ಪರಿಯ ತಲೆ ಬೇನೆ ಎಂದು ಕಿರಿಚಿಕೊಳ್ಳುವಂತಾಗುತಿತ್ತು. ಪಕ್ಕೆಯ ಮುರಿದು ಮಲಗಿಸಿದ್ದಾರೆ ಎಂಬಂತೆ ಮಗ್ಗಲು ಬದಲಿಸಲಾದರೆ ಅರೆನಿದ್ದೆಯಲ್ಲಿ ಹೆಂಡತಿಯನ್ನು ಆರ್ದ್ರವಾಗಿ ಕರೆಯುತ್ತಿದ್ದೆ. ದೀರ್ಘಬಾಳಿನ ದಣಿವ ಆರಿಸಿಕೊಳ್ಳುವಂತಗೆ ಆಗ ತಾನೆ ಅವಳು ನಿದ್ದೆಯ ಪಾತಾಳದಲ್ಲಿ ಮುಳುಗಿದಂತಿರುತ್ತಿದ್ದಳು. ಮಕ್ಕಳು ಆಟ ಆಡುತ್ತ ಕುಣಿಯುತ್ತಿರುವಂತೆ ಕನಸಿನ ಸದ್ದು ಮಾಡುತ್ತಿದ್ದರೆ; ನಾನು ಎಲ್ಲಿರುವೆ… ನರಕದಲ್ಲೊ ಸ್ವರ್ಗದಲ್ಲೊ ಎಂದು ಗೊಂದಲವಾಗುತಿತ್ತು. ಮನದ ಆಳದಲ್ಲಿ; ‘ಇನ್ನೂ ತೀರಿಲ್ಲವೆ ನಿನ್ನ ವಾಂಛೆಗಳೂ… ವಿಚಾರಣೆಗಳೂ; ನಡೆಯಪ್ಪಾ ಸಾಕು ಹೋಗೋಣ’ ಎಂದು ಮತ್ತೆ ಮತ್ತೆ ಯಾರೊ ಬಾಗಿಲ ಬಳಿ ನಟ್ಟಿರುಳ ಕಗ್ಗತ್ತಲಲ್ಲಿ ನನ್ನೊಬ್ಬನಿಗೇ ಕೇಳಿಸುವಂತೆ ಮೆಲ್ಲಗೆ ಕರೆವ ಸದ್ದು… ‘ಏನಿದೀ ವಿಚಿತ್ರ… ಚಿತ್ತ ಚಾಂಚಲ್ಯವೇ; ಸಾವಿನ ಭಯವೇ… ಸಾವು ನನಗೆ ಭಯವೇ… ನನ್ನ ಕಂಡರೆ ಸಾವು ಹೆದರಿಕೊಳ್ಳಬೇಕು ಅಷ್ಟೇ… ಅಷ್ಟು ಸುಲಭ ಅಲ್ಲ ಕರೆದೊಯ್ಯುವುದು ನನ್ನನ್ನು. ನಾನೇನು ಕಳ್ಳಸುಳ್ಳ ನೀಚನೇ… ಘನತೆಯಿಂದ ನಡೆಸಿಕೊಂಡು ಹೋಗಲು ಸಾವಿಗೆ ಎಂಟೆದೆ ಇರಬೇಕಷ್ಟೇ… ಇದೇನಿದು ಇಂತಾ ಮಾತೆಲ್ಲ ಯಾಕೆ ತುಳುಕುತ್ತವೆ?’ ಎದ್ದು ಕೂತಿದ್ದೆ.

ವಿಶಾಲಕೊಠಡಿಯ ಎತ್ತರದ ಕಿಟಕಿಯಲ್ಲಿ ತಾರೆಗಳ ಹೊದ್ದುಕೊಂಡ ಮುದುಕಿಯಂತೆ ಆಕಾಶ ಕಾಣುತ್ತಿದೆ… ಯಾರಲ್ಲಿ ಆ ಆಕಾಶದಲ್ಲಿ ಶವ ಹೊತ್ತುಕೊಂಡು ಈ ಅವೇಳೆಯಲ್ಲಿ ಹೋಗುತ್ತಿರುವುದೂ… ಎಲ್ಲಿಗೇ… ಯಾರವರು? ಕೂಗಲೇ ನಾನೂ ಬರುವೆ ನಿಲ್ಲಿ ಎಂದು.  ತಡೆಯಲೇ ಎಂದು ದಿಟ್ಟಿಸುತ್ತಲೇ ನಿಂತಿದ್ದಂತೆ ಕರಿಮೋಡ ಮುಸುಕುತ್ತಿದೆಯಲ್ಲಾ… ‘ಹಾಗಾದರೆ ನನ್ನ ಸರದಿಗೆ ನಾನಿನ್ನೂ ಸಿದ್ದ ಆಗಿಲ್ಲವಲ್ಲಾ… ಏನೇನು ಬುತ್ತಿಗಳ ಕಟ್ಟಿಕೊಳ್ಳಬೇಕೂ…’ ‘ಏನೂ;’ ‘ಯಾವ ಕಂತೆ ಬುತ್ತಿಯೂ ಬೇಡವೇ… ಬೆತ್ತಲೆಯಾಗಲು ಸಿದ್ಧವಾಗಬೇಕೇ… ಅಯ್ಯೋ; ಬೆತ್ತಲೆ ಆಗಲಾರೆ… ಗೌರವಾನ್ವಿತವಾಗಿ ಹಿಂಬಾಲಿಸುವೆ… ತೊಡಿಸಬೇಡಿ ಸರಪಳಿ… ಕಟ್ಟಬೇಡಿ ಕಣ್ಣಪಟ್ಟಿ… ನಾನೊಬ್ಬ ಹೆಣ್ಣು ಮಕ್ಕಳ ತಂದೆ. ಅವರಿಗೆ ನಾನು ಏನೊ ಕಿವಿಯಲ್ಲಿ ಹೇಳಬೇಕು… ಅವಿನ್ನೂ ಸವಿ ನಿದ್ದೆಯಲ್ಲಿವೆ ತಾಳಿ… ಅವರ ಹಣೆ ಮೇಲೆ ನಾನಿನ್ನೂ ಮುತ್ತಿಟ್ಟಿಲ್ಲ ಕೊನೆಗೆಂದು… ಅಯ್ಯೋ ತಾಳಿರೀ… ಯಾರೊ ಬೆನ್ನು ಮೂಳೆಯ ಮುರಿದಿದ್ದಾರೆ… ಎಕ್ಕತ್ತು ವಾಲಿಕೊಂಡಿದೆ… ಬಾಯಿ ತುಂಬ ಮಾತುಗಳು ಕಲ್ಲಾಗಿ ಅಡ್ಡವಾಗುತ್ತವೆ… ಕಾಲು ಕೈಯ ಮುರಿದು ಮಲಗಿಸಬೇಡಿ ತಾಳ್ರೀ… ನಾನೊಬ್ಬ ಅನಾದಿ ರೀ… ಮಾಡಿಲ್ಲ ಏನೂ ತಪ್ಪು…. ನ್ಯಾಯವೇ ಈ ಬಲಾತ್ಕಾರ…’ ಎಂದು ಕನವರಿಸುತಿದ್ದೆ.

ಹೆಂಡತಿ ಎಬ್ಬಿಸಿ ಕೂರಿಸಿದ್ದಳು. ನೀರು ಕುಡಿಸಿದಳು. ಅಸ್ವಸ್ತನಾಗಿದ್ದೆ. ಮುಖವ ಒರೆಸಿದಳು. ಎದೆಗೆ ಒರಗಿಸಿಕೊಂಡಳು… ‘ಏನ್ರೀ… ನೀವು ನೆಮ್ಮದಿಯಿಂದ ಯಾವತ್ರಿ ಕಣ್ಣ ತುಂಬ ನಿದ್ದೆ ಮಾಡಿದ್ದೂ… ಯಾರ ಜೊತೆ ಮಾತಾಡ್ತಿದ್ರೀ… ಬಿಟ್ಟು ಬಿಡಿ… ನನ್ನ ಪುಟ್ಟ ಹೆಣ್ಣುಮಕ್ಕಳ ಬಿಟ್ಟು ನಾನೆಲ್ಲಿಗೂ ಬರುವುದಿಲ್ಲ… ಯಾರೇ ಕಳಿಸಿದ್ದರೂ ಈ ಜಾಗ ಬಿಟ್ಟು ಕದಲೋದಿಲ್ಲ ಎಂದು ಹೇಳ್ತಿದ್ರಲ್ಲಾ… ಯಾರ‍್ರಿ ಅವರು… ಏನ್ರೀ ಅದು ಕನಸು’ ಎಂದು ಎದೆಯ ನೀವಿದಳು. ಮಾತು ಬರಲಿಲ್ಲ. ಮರುದಿನ ಮಾನಸಿಕ ವೈದ್ಯರ ಕಂಡೆ. ದುಸ್ವಪ್ನಗಳು ಬೇಟೆಗೆ ಇಳಿದಿದ್ದವು. ಯಾರಲ್ಲು ತಕ್ಕ ಮದ್ದು ಸಿಗಲಿಲ್ಲ. ನನ್ನನ್ನು ನಾನೇ ಮರೆಯುತಿದ್ದೆ. ಎಲ್ಲಿದ್ದೆ…. ಇಲ್ಲಿಗೆ ಹೇಗೆ ಬಂದೆ… ಯಾಕೆ ಬಂದೆ? ಏನು ಕೆಲಸವಿತ್ತು… ಈಗ ಮುಂದೇನು ಮಾಡಬೇಕು ಎಂಬುದೇ ಅಸ್ಪಷ್ಟವಾಗಿ ಕೂತೇ ಇರುತ್ತಿದ್ದೆ. ಎಲ್ಲ ಶಬ್ದಗಳು ಕತ್ತಲಲ್ಲಿ ಮಲಗಿ ಮಾತೇ ಬರದಂತೆ ಬಾಯಿ ಬಂದಾಗುತಿತ್ತು. ಯಾವುದರಲ್ಲು ಆಸಕ್ತಿ ಇಲ್ಲ. ಇದ್ದಕ್ಕಿದ್ದಂತೆ ನಿದ್ದೆ ಬಂದುಬಿಡುತ್ತಿತ್ತು.

ನಿದ್ದೆಯಲ್ಲಿ ಕನಸಿನಲ್ಲಿ ಜೀವಂತ… ಇರಲೊ ಹೋಗಲೊ ಎಂಬ ದ್ವಂದ್ವ ಕದನ. ಆತ್ಮವೇ ಸಂಧಾನಕಾರ. ಏನೊ ಗದ್ದಲ… ಏನೋ ಚೀರಾಟ… ಚಿಲ್ಲನೆ ರಕ್ತ ಚಿಮ್ಮಿದಂತೆ; ಯಾರೊ ಘಹಘಹಿಸಿ ನಕ್ಕಂತೆ… ಹೇ ಚೀರಾಟ… ಅಷ್ಟು ಹರಿತವೇ ನಿನ್ನ ಖಡ್ಗ… ನಾನು ಸುಮ್ಮನೆ ನನ್ನ ಕಣ್ಣ ರೆಪ್ಪೆಯಿಂದಲೇ ಹರಿದು ಹಾಕಿಬಿಡುವೆ…’ ಎಂದು ಅಬ್ಬರಿಸಿದೆನೇ… ಇದು ನಾನೇ… ಯಾವನಿಗೂ ಒಂದು ಗಳಿಗೆಯೂ ಗುಲಾಮ ಆದವನಲ್ಲ. ಸತ್ಯದ ಜೀತಗಾರ ಅಷ್ಟೇ… ಏನೇನೊ ಮಾತಾಡುತಿದ್ದೆ. ಆ ರಾತ್ರಿಗಳೆಲ್ಲ ಕನಿಯುತ್ತಿದ್ದವು ತಾರೆಗಳ ಇಬ್ಬನಿ ಬೆಳಕಲ್ಲಿ. ಈಗಲೂ ಇಷ್ಟು ವಯಸ್ಸಾದ ನಂತರವಾದರೂ ತಗ್ಗಿ ಬಗ್ಗಿ ಮೆತ್ತಗೆ ಬದುಕೋಕೆ ಬರೋದಿಲ್ಲವಲ್ಲರೀ ನಿಮಗೇ… ಹುಟ್ಟು ಗುಣ ಸುಟ್ಟರೂ ಹೋಗದು. ಯಾಕ್ರಿ ಇಷ್ಟು ಕಠೋರವಾಗರ‍್ತೀರಿ… ರಿಯಾಯಿತಿನೇ ಇಲ್ಲವಲ್ಲಾ… ಇದರಿಂದ ನೀವು ಏನ್ರಿ ಪಡಕೊಂಡ್ರೀ… ಎಲ್ಲನೂ; ಕಳಕೊಂಡ್ರಲ್ರೀ… ಏನಾಗಿದೇರಿ ನಿಮಗೆ… ನಾಳೆ ದಿನ ನಾಲ್ಕು ಜನನಾದ್ರೂ ಬೇಡವೇನ್ರೀ’ ಎಂದಳು ಹೆಂಡತಿ.

ನಿದ್ದೆಯಲ್ಲಿದ್ದೆ. ಆದರೂ ಹೆಂಡತಿಯ ಜೊತೆ ಮಾತಾಡುತ್ತಲೇ ಇದ್ದೆ. ‘ಕಳಕೊಳ್ಳೋದರಲ್ಲಿ ಇರೊ ಸುಖ ಪಡಕೊಳ್ಳೋದರಲ್ಲಿ ಇಲ್ಲ ಕಣೇ’ ‘ಹಾಗಾದ್ರೆ ನಮ್ಮನ್ನೂ ಕಳ್ಕೋತಿರಾ’. ‘ಹೌದು… ಮಾನಸಿಕವಾಗಿ ಸಿದ್ದವಾಗಿದ್ದೀನಿ’, ‘ಇದು ಅನ್ಯಾಯ… ಒಂದು ಕ್ಷಣ ಇದ್ದಂತಿರಲ್ಲ… ಯಾವುದೂ ನಿಮಗೆ ಹಿತವಿಲ್ಲ… ಎಲ್ಲೋ ನಿಮ್ಮಲ್ಲೇ ತಪ್ಪಿದೇ’, ‘ಹೌದು! ನಿಮ್ಮ ಲೆಕ್ಕದಲ್ಲಿ ನಾನು ತಪ್ಪು’, ಆಸ್ಪತ್ರೆಗೆ ಹೋಗುವಾ… ನಿಮ್ಮ ಜೀವ ಉಳಿಸಿಕೊಂಡರೆ ಸಾಕಾಗಿದೆ’. ‘ಪೆದ್ದೀ… ಜೀವ ಹೋಗಿ ಎಷ್ಟು ಕಾಲವಾಯಿತು…’, ‘ಯಾಕೆ ಇಂಗೆ ಮಾತಾಡ್ತೀರಿ…’, ‘ಹೊತ್ತಾಯ್ತು ಸುಮ್ಮನಿರೂ… ಬರ‍್ತಾ ಇದ್ದಾರೆ… ಮಕ್ಕಳ ಎಬ್ಬಿಸಬೇಡ. ಎಲ್ಲಿ ನಮ್ಮಪ್ಪ ಎಂದು ಕೇಳಿದರೆ; ಹೇಳೂ… ಕಳ್ಳ ಅವನು ನಿಮ್ಮಪ್ಪ… ಚೆಂದ ಚೆಂದ ಹುಡುಗಿಯರು ಬಂದಿದ್ದರು. ಕೈ ಹಿಡಿದು ಕುಣಿಸಿದರು; ಮಣಿಸಿದರು. ಪರವಶನಾದ. ಅವರ ಹಿಂದೆಯೇ ಹಾರಿ ಹೋದ… ನಮ್ಮ ಬಿಟ್ಟು ಮೋಸ ಮಾಡಿದ ಎಂದು ಹೇಳು… ಮಕ್ಕಳು ಸಿಟ್ಟಾಗಲಿ; ಬೈಯ್ಯಲಿ ನನ್ನ. ನನಗಾಗಿ ಸುರಿಸದಿರಲಿ ಕಂಬನಿಯ… ನಗುನಗುತ್ತಲೇ ಅವರ ಬಾಯಿಂದ ಬರಲಿ ಉದ್ಗಾರ! ಅಹಾ! ಅಪ್ಪಾ… ನಮ್ಮಪ್ಪಾ ಮುಪ್ಪಾನು ಮುದುಕನಾದರೂ ಹುಡುಗಿಯರ ಕೈಯ್ಯ ಬಿಡಲಾರ… ಓಡಿಹೋದನೇ; ಹೋಗಲಿ ಬಿಡು ಮಮ್ಮೀ; ಅಪ್ಪ ಎಲ್ಲಿಯಾದರೂ ಮುದ್ದಾಗಿ ಇರಲಿ ಎಂದು ಅವರು ನಗುತ್ತಲೇ ನನ್ನ ಅಣಕಿಸಿಕೊಳ್ಳಲಿ… ಮುಪ್ಪಿನಲ್ಲೂ ಅಮರ ಪ್ರೇಮಿಯಾಗಿ ಸಾಯಲು ಆಸೆ… ಯಮನ ಚೆಲುವೆಯರೇ ಬರಲಿ ರಕ್ಕಸಿಯರು… ಅವರನ್ನೇ ಪ್ರೇಮಿಸುವೆ. ಅವರ ಜೊತೆಯೆ ಚಂಡಿ ಚಾಮುಂಡಿಯರು ಎಂದು ನೀಚರ ವಿರುದ್ಧ ರಣಚಂಡಿ ಆಟವ ಅಲ್ಲೂ ಅಡುವೆ. ಬಿಡುವುದಿಲ್ಲ ಅವರನ್ನೆಲ್ಲ ಅಷ್ಟು ಸುಲಭವಾಗಿ…

‘ಅರೇ ಸುಮ್ನೆ ಮಲಗ್ರೀ… ಸಾಕಾಯ್ತುರೀ ನಿಮ್ಮ ನಾಟಕ. ನಿಜವಾಗಿರ‍್ತಿರೊ ಸುಳ್ಳಾಗಿರ‍್ತೀರೊ… ಗೊತ್ತಾಗೊಲ್ಲ. ಒಂದು ಮುಖವೇ ತಲೆಯೇ ನಿಮಗೆ… ಯಾವ ತಲೆಯ ಜೊತೆ ಮಾತಾಡಿದೆನೊ ಏನೊ… ಅರ್ಥನೇ ಆಗೊಲ್ಲರೀ ನೀವು’ ಎಂದು ವಟಗುಟ್ಟುತ್ತಿದ್ದಳು ಹೆಂಡತಿ. ನಾನೆಲ್ಲೊ ಪ್ರಜ್ಞೆಯ ಪಾತಾಳದಲ್ಲಿದ್ದೆ. ಒಂದು ವೇಳೆ ಸಾಕೇತ್ ರಾಜ್ ಜೊತೆ ಓಡಿಹೋಗಿದ್ದರೆ ಇಷ್ಟು ಹೊತ್ತಿಗೆ ನನ್ನ ಮೂಳೆಗಳನೆಲ್ಲ ಮಣ್ಣು ತಿಂದುಬಿಡುತ್ತಿತ್ತು ಅಲ್ಲವೇ… ಈ ನಿತ್ಯ ನರಕದ ವಿಕೃತರ ವ್ಯವಸ್ಥೆಯ ಮುಂದೆ ಸೋತು ಹೋದೆನೇ… ಇಲ್ಲ ಇಲ್ಲಾ… ಆ ವಿಚಾರದಲ್ಲಿ ನಾನು ಸರ್ವಾಧಿಕಾರಿ. ಸತ್ಯಕೂಡ ಅಂತಿಮವಾಗಿ ಸರ್ವಾಧಿಕಾರಿ. ಅದನ್ನು ಯಾರೂ ಮಣಿಸಲಾರರು. ಅದರ ಜೊತೆ ನಾನಿರುವೆನೆಂದ ಮೇಲೆ ನಾನು ನಾನೇ… ಇನ್ನೊಬ್ಬನಾಗಲಾರೆ… ಮತ್ತೊಬ್ಬರು ನನ್ನಂತಾಗಲೂ ಸಾಧ್ಯವಿಲ್ಲ ಎಂದು ಮಗ್ಗಲು ಬದಲಿಸಿದೆ.

ಯಾರೊ ಬಂದರು. ಹೆಡೆಮುರಿಕಟ್ಟಿದರೇ… ಅಮಲು ತುಂಬಿದರೇ… ನೆತ್ತಿಯ ಕೊರೆದರೆ! ಖಾಲಿಖಾಲಿ ಮಾಡಿ ಹೊಟ್ಟೆಯ ಕರುಳುಗಳನ್ನು ಕಿತ್ತು ಎಸೆದರೇ… ಅಹಾ! ಯಾವ ದೇವ ಕನ್ನೆಯರು ಇವರು ಬೆತ್ತಲಾಗಿ ಬಂದು ಬೆತ್ತಲೆ ಮಾಡಿ ಮಜ್ಜನ ಮಾಡಿಸಿದವರು… ಎಲ್ಲಿಗೆ ಕರೆದೊಯ್ಯುವಿರೀ… ಎಲ್ಲಿ ನನ್ನ ಆತ್ಮ… ಅಂತೆಲ್ಲ ಸಂಕಷ್ಟದಲ್ಲಿ ಈ ದೇಹದ ಎಲುಬಿಗೇ ಅಂಟಿಕೊಂಡು ಕೂಡಿದ್ದ ಆತ್ಮವೀಗ ಹೇಳದೆ ಕೇಳದೆ ಎಲ್ಲಿ ಹೋಯಿತು ಎಂದು ಪ್ರಜ್ಞೆ ಮಿಸುಕಾಡಿತು. ಹಾಡುತ್ತಿದ್ದರು ರತಿವತಿಯರು ಇರುಳು ಬಿರಿಯುವಂತೆ. ಆ ನಾದದ ಅಲೆಅಲೆಯ ಹಿಂದೆ ತೇಲಿ ಹೋಗುತಿದ್ದೆ. ಅಹಾ ಏನಿದೀ ಸಂಗತಿ! ದಾರಿಯ ಉದ್ದಕ್ಕೂ ಮೃತ ರೂಪಕಗಳಂತೆ ನಿಂತಿರುವ ಈ ಎಲ್ಲರೂ ನನ್ನ ಊರುಕೇರಿಯ ಪೂರ್ವಿಕರೇ ಅಲ್ಲವೇ… ಆ ಜನರೆಲ್ಲ ಇಲ್ಲಿಗೇಕೆ ಬಂದರು ನನ್ನ ಸ್ವಾಗತಿಸಲು ಎಂದು ಭ್ರಮೆಗೊಂಡೆ. ನಾನೀಗ ಆಕಾಶವನ್ನು ಉಸಿರಾಡುತ್ತಿರುವೆನೇ… ಅಂಗಾಂಗಗಳೇ ಇಲ್ಲದ ಪ್ರಜ್ಞೆ ಉಸಿರಾಡುವುದಾದರೂ ಹೇಗೇ… ಅನಂತತೆಯ ತೊಡೆ ಮೇಲೆ ಮಲಗಿರುವೆನೇ… ಇಲ್ಲ ಇಲ್ಲಾ… ಅಷ್ಟು ಮಾಯಾವಿ ಈ ಮನುಷ್ಯ ಸೃಷ್ಟಿಯ ಸ್ವರ್ಗ ನರಕ… ಕೊನೆಗೆ ಎಲ್ಲಿಗೆ ಬಂದೆ… ಮರೀಚಿಕೆಗೆ ಹೋಗಬೇಕು. ಅಲ್ಲಿ ಒಂದು ಚಿಲುಮೆಯಾಗಿ ನಾನೆ ಒಂಟಿಯಾಗಿ ಚೆಲುವೆಯರ ಕೂರಿಸಿಕೊಂಡು ಆ ಪಿರಮಿಡ್ಡುಗಳ ದಾಟಿ ನದಿಯ ಸಂಗಮದ ನೀರ ಕುಡಿದು ಮಳೆಯ ಕರೆಯಬೇಕು ಎಂದು ಪ್ರಜ್ಞೆ ಯಾರ ಜೊತೆಯೊ ಆ ಬೆತ್ಲಹೇಮಿನಲ್ಲೊ ಮೆಕ್ಕಾದಲ್ಲೊ ಕೂತು ಪ್ರಾರ್ಥಿಸಿ ಇಲ್ಲದ್ದನ್ನೆಲ್ಲ ಎಟುಕಿಸಿಕೊಳ್ಳುತಿತ್ತು.

ಅಂತಿಮವಾಗಿ ಕಣ್ಣಬಟ್ಟೆಯ ಬಿಟ್ಟಿದರು. ನೋಡಿಕೊ ನಿನಗೆ ಜೀವನದಲ್ಲಿ ಯರ‍್ಯಾರು ಬೇಕಾಗಿದ್ದರೊ… ದಾಹಕ್ಕೆ ನೀರು ಕೊಟ್ಟಿದ್ದರೊ… ಅವರನ್ನೆಲ್ಲ ಸುಮ್ಮನೆ ಒಮ್ಮೆ ನೋಡಿಕೊ ಎಂದರು ಯಾರೊ… ಕಣ್ಣು ಬಿಟ್ಟೆ. ಗಾಡಾಂಧ ಕತ್ತಲು. ಇಲ್ಲ ಏನೂ ಕಾಣುತ್ತಿಲ್ಲ ಎಂದೆ. ಹಾಂsss ಹಾಗೇ ದಿಟ್ಟಿಸುತ್ತಿದ್ದರು… ಈಗ ಈ ಕ್ಷಣವೇ ಕಾಣುವರು ಅವರೆಲ್ಲ ಬರುವರು ಸಾಲಾಗಿ ಎನ್ನುತ್ತಿದ್ದಂತೆಯೇ ಭಯಂಕರ ಆಸ್ಫೋಟದಂತೆ ಹಿಂದಿನಿಂದ ತಲೆಗೆ ಗುಂಡು ಹೊಡೆದರು. ಸತ್ತು ಹೋದೆನೇ… ಇಲ್ಲ ಇಲ್ಲ… ಗುಂಡಲ್ಲವೇ… ಗುಡುಗು ಮಿಂಚೇ… ಮಳೆ ಬಂತೇ… ಕೂಗುತ್ತಿದ್ದೆ ಶೋಭೀ… ಎದ್ದೇಳಲಾರೆ… ಸವಿಸಕ್ಕರೆಯ ಅಂಶವೆಲ್ಲ ಬತ್ತಿ ಕೋಮಾಕ್ಕೆ ಇಳಿಯುತ್ತಿರುವಂತೆ ದೇಹವೆಲ್ಲ ಜಡವಾಗುತ್ತಿದೇ… ಬೇಗ ಎದ್ದು ಬಾರೊ… ಬಾಯಿಗೆ ಸಕ್ಕರೆ ನೀರು ಬಿಡೇ… ಕೇಳಿಸುತ್ತಿಲ್ಲವೇ… ಗಾಡಾಂಧ ನಿದ್ದೆಯೇ… ಮಕ್ಕಳಿಗೆ ಗೊತ್ತಾಗದು… ಕೊನೆಗೂ ಉಳಿಯುವುದು ಇಷ್ಟೇ… ನನಗೆ ನೀನು; ನಿನಗೆ ನಾನೂ… ಬಾರೇ ಎತ್ತಿ ಕೂರಿಸು’ ಎಂದು ಚಡಪಡಿಸುತಿದ್ದೆ.

ಯಾರೊ ಬಂದಿದ್ದಾರೆ ನನ್ನ ಎದೆಯ ಮೇಲೆ ಹೂಗುಚ್ಚಗಳ ಇಟ್ಟು ದೀಪ ಹಚ್ಚಿಡಲು… ಯಾರವರು ವಿಚಾರಿಸು… ಬಹಳ ದೂರದಿಂದ ಬಂದಿರಬೇಕೂ… ಆ ಮರುಭೂಮಿಯಿಂದಾ; ಮೊದಲು ಕುಡಿಯಲು ಅವರಿಗೆ ನೀರು ಕೊಡು. ಲೋಕದಲ್ಲಿ ಯಾರಾದರೂ ನಾಲ್ಕು ಮಂದಿ ಒಳ್ಳೆಯವರು ಇದ್ದೇ ಇರುತ್ತಾರೆ! ತಡವಾದರೂ ವಿಶ್ವಾಸಕ್ಕೆ ಮೋಸವಿಲ್ಲ. ಅವನು ಪಾಪಿ ನಮ್ಮಪ್ಪ ಅಷ್ಟೆಲ್ಲ ಹಿಂಸೆಕೊಟ್ಟು ಸಾಲು ಸಾಲಾಗಿ ಕೊಂದು ಬಿಟ್ಟವನು ಹೊರಗೆ ಕೈತೋಟದಲ್ಲಿ ಕೂತಿದ್ದಾನೆ. ಯಾಕೊ… ತಡೆದಿದ್ದಾಳೆ ನನ್ನ ತಾಯಿ ದೈತ್ಯ ನೆರಳಾಗಿ ಗೆರೆದಾಟಿ ಬರಬೇಡ ಎಂದು. ಹೋಗಿ ಹೇಳು ಅವರಿಬ್ಬರಿಗೂ… ನೀವಿಬ್ಬರೂ ಅವನನ್ನು ಬಿಟ್ಟು ಹೊರಟು ಹೋಗಿ ಎಂದು… ಅಹಾ ಎಷ್ಟೊಂದು ಚೆಂದ ಕಾಲವಿತ್ತು ಆಗ… ಆಕಾಶದ ತಾರೆಗಳು ಮಲ್ಲಿಗೆ ಹೂವಾಗಿ ಬಿರಿಯುತ್ತಿದ್ದವು. ಕೊಯ್ದು ತಾ ಎಂದು ಹಾರಿಸಿಬಿಡುತ್ತಿದ್ದೆ. ಮುಂಗೋಳಿ ಹೊತ್ತಿಗೆ ರಾಶಿರಾಶಿ ಹೂ ತಂದು ಸುರಿಯುತಿದ್ದೆ. ಪೋಣಿಸಿ ಮಕ್ಕಳಿಗೆ ಮುಡಿಸಿ ಮುಡಿದು ಇಲ್ಲದ ದೇವರ ಮುಂದೆ ಗಂಟೆಗಟ್ಟಲೆ ಪ್ರಾರ್ಥಿಸುತ್ತ ಕೂತಿರುತ್ತಿದ್ದೆ. ನನಗೊ ನೀನೇ ಒಂದು ದುಂಡು ಮಲ್ಲಿಗೆ ಬಳ್ಳಿಯಾಗಿ ಹಬ್ಬಿಕೊಂಡು ನುಲಿದು ಹಿಡಿದುಕೊಂಡಿದ್ದೆ. ನಿನ್ನ ಮನದ ಮಧುವನದಲ್ಲಿ ನಾನೊಂದು ಚಿಟ್ಟೆ ಆಗಿರಲಿಲ್ಲ. ನನಗಾಗಿ ನೀನೊಂದು ತೊಟ್ಟಿಲು ಕಟ್ಟಿದ್ದೆ. ಈಗಲೂ ಅದೇ ತೊಟ್ಟಿಲಲ್ಲೆ ಹೋಗುತ್ತಿರುವೆ. ಹೊತ್ತಾಯಿತು ಕಣೇ… ಸತಾಯಿಸಬಾರದು! ಹೊರಟಾಗ ಹೊರಟು ಹೋಗಬೇಕು ನಿರ್ದಾಕ್ಷಿಣ್ಯವಾಗಿ… ದಾರಿಯ ಉದ್ದಕ್ಕೂ ಅನಾದಿ ಎಲುಬುಗಳು ದಾರಿಯ ಹೆಜ್ಜೆಗುರುತುಗಳಾಗಿ ಅಂಟಿಕೊಳ್ಳುತ್ತಿದ್ದವು. ನನಗೆ ನಾನೇ ಮರೆತು ಹೋಗಿದ್ದೆ. ಎಲ್ಲೊ ಹೋಗುತ್ತಿದ್ದೆ. ಯಾವುದೊ ಕಾಲದಲ್ಲಿದ್ದೆ. ಅಲ್ಲಿ ಎತ್ತರದಿಂದ ನನ್ನ ಮೇಲೆ ನೆರಳು ಬಿತ್ತು. ಅಗಾಧ ನೆರಳು. ದಿಟ್ಟಿಸಿದೆ. ಹೆಂಡತಿ ಮೂರು ಮಕ್ಕಳ ಕೈ ಹಿಡಿದುಕೊಂಡು ಎಲ್ಲೇ ಹೋದರೂ ನಿನ್ನನ್ನು ಬಿಡುವುದಿಲ್ಲ ಎಂಬಂತೆ ಹಿಂಬಾಲಿಸುತ್ತಲೇ ಇದ್ದರು. ಕಾಲದ ತಿರುವು ಮುರುವು ಕಂದಕ ಕೊರಕಲುಗಳ ದಾರಿಯಲ್ಲಿ ನಾನು ಎಲ್ಲಿಗೊ ಹೋಗುತಿದ್ದೆ. ಯಾವುದು ಎಚ್ಚರ ಯಾವುದು ಸುಷುಪ್ತಿ ಎಂಬುದನ್ನು ಲೆಕ್ಕಿಸದೆ ಹಾರಿ ಹಾರಿ ತೇಲಿ ತೇಲಿ ದಿಗಂತದ ತುದಿ ಹಿಡಿಯಲು ಮುನ್ನುಗ್ಗಿದ್ದೆ.