ಆಸ್ಟ್ರೇಲಿಯ ವಸಾಹತುಶಾಹಿ ಆಡಳಿತದಿಂದ ಕ್ರಮೇಣ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬದಲಾದರೂ ದೇಶವನ್ನು ಆಳುವುದು ಬಿಳಿಯ ರಾಜಕಾರಣಿಗಳೆ ಎನ್ನುವುದು ಸರ್ವೇಸಾಮಾನ್ಯ ಸತ್ಯ. ಜೊತೆಗೆ ದೇಶೀಯ ಭಾಷೆ ಇಂಗ್ಲಿಷ್. ಭಾಷೆಯ ಜೊತೆ ಆಮದಾಗಿ ಬಂದಿದ್ದು ಅದೇ ಇಂಗ್ಲಿಷ್ ವ್ಯವಸ್ಥೆ. ಹೀಗಾಗಿ ಆಸ್ಟ್ರೇಲಿಯಾವು ಇಂಗ್ಲಿಷ್ ಭಾಷೆಯ ಪಾಶ್ಚಾತ್ಯ ದೇಶವೆಂದು ಕರೆಸಿಕೊಳ್ಳುತ್ತದೆ. ಈ ಪಾಶ್ಚಾತ್ಯ ದೇಶವೆಂಬ ಪಟ್ಟದೊಡನೆ ಬಳುವಳಿಯಾಗಿ ಬಂದಿರುವುದು, ನಂಬಿರುವುದು ದೂರದೂರಿನ ನೆಂಟತನ. ಮಾತೃದೇಶ ಬ್ರಿಟನ್, ಅಣ್ಣನಾಗಿ ಅಮೆರಿಕ, ಕಿರಿತಂಗಿಯಾಗಿ ನ್ಯೂ ಝಿಲಂಡ್, ಬಂಧುಬಾಂಧವರು ಯುರೋಪಿಯನ್ ದೇಶದವರು. ಇಷ್ಟೆಲ್ಲಾ ನೆಂಟರಿದ್ದಾಗ ಆಸ್ಟ್ರೇಲಿಯಾದ ರಾಜಕಾರಣಿಗಳು ಅವರುಗಳ ಜೊತೆ ವ್ಯವಹರಿಸಲು ಮುತುವರ್ಜಿ ವಹಿಸುತ್ತಾರೆ.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”
ಕಳೆದ ವಾರಾಂತ್ಯವೆಲ್ಲ ಬ್ರಿಟನ್ನಿನ ರಾಣಿ ಎಲ್ಲೆಲ್ಲೂ ರಾರಾಜಿಸಿದ್ದರು. ಅವರು ತಾವೇ ಖುದ್ದಾಗಿ ಬಂದು ಅಷ್ಟೊಂದು ಮುಖ ತೋರದಿದ್ದರೂ ರಾಣಿಯ ಹೆಸರಿನಲ್ಲಿ ನಡೆದ ಕಾರ್ಯಕ್ರಮಗಳು ಭರ್ಜರಿಯಾಗಿದ್ದವು. ಯುನೈಟೆಡ್ ಕಿಂಗ್ಡಮ್ ಒಕ್ಕೂಟದ ರಾಣಿಯಾಗಿ ಪಟ್ಟವೇರಿ ಎಪ್ಪತ್ತು ವರ್ಷಗಳು ತುಂಬಿದವು ಎನ್ನುವುದನ್ನು ಒಂದು ನಾಡಹಬ್ಬವಾಗಿ ಬ್ರಿಟಿಷರು ಆಚರಿಸಿದರು. ಕೋವಿಡ್-೧೯ ಪರಿಣಾಮಗಳನ್ನು ತೀವ್ರವಾಗಿ ಅನುಭವಿಸಿದ್ದ ಬ್ರಿಟಿಷರಿಗೆ ಇಂಥದ್ದೊಂದು ಹಬ್ಬದಾಚರಣೆ ಬೇಕೆಬೇಕಿತ್ತು. ಇತ್ತ ನಾವು ಸಪ್ತಸಮುದ್ರಗಳಾಚೆ ಇದ್ದರೂ ಇನ್ನೂ ರಾಣಿಯ ಆಳ್ವಿಕೆಯ ಛತ್ರಿಯಡಿಯಲ್ಲಿರುವ ನಮ್ಮ ಖಂಡ-ದೇಶದಲ್ಲಿ ಟಿವಿ ಪರದೆಯ ಮೇಲೆ ಕೆಲ ಕಾರ್ಯಕ್ರಮಗಳನ್ನು ನೋಡಿ ‘ಓಹೋ ಆಹಾ’ ಎಂದೆವು. ಇಂಗ್ಲೆಂಡಿನಲ್ಲಿ ಒಳ್ಳೆ ಹಿತವಾದ ಬೇಸಗೆಯಿದ್ದರೆ ನಮ್ಮ ರಾಣಿರಾಜ್ಯದಲ್ಲಿ ಗಡಗಡ ನಡುಗುವ ಚಳಿ ದಾಳಿಯಿಟ್ಟಿದೆ. ‘ಸೂರ್ಯ ಮುಳುಗದ’ ಸಂಜೆ ಹವಾದಲ್ಲಿ ಇಂಗ್ಲೆಂಡಿನಲ್ಲಿ ಬ್ರಿಟಿಷರು ಸ್ಟ್ರೀಟ್ ಪಾರ್ಟಿ ಮಾಡುತ್ತಾರೆ ಎಂದು ಗೊತ್ತಾದಾಗಲಂತೂ ನಾವುಗಳು ಇನ್ನಷ್ಟು ಮುದುರಿಕೊಂಡು ಕಂಬಳಿಯೊಳಗೆ ಸೇರಿಕೊಂಡರೆ ಅದನ್ನು ನೋಡಿ ನಕ್ಕ ಪ್ಲಾಟಿನಂ ಪಾರ್ಟಿಗರು ಕಣ್ಣು ಮಿಟುಕಿಸಿದ್ದರು.
ಇದೆಲ್ಲದರ ಛಾಯೆ ತಮ್ಮ ಮೇಲೆ ಬಿದ್ದೆ ಇಲ್ಲ ಎಂಬಂತೆ ಅಧಿಕಾರಕ್ಕೆ ಬಂದಿರುವ ಹೊಸ ಸರಕಾರವು ದೂರದೂರಿನ ನೆಂಟಸ್ತನಕ್ಕಿಂತಲೂ ಹತ್ತಿರದ ನೆರೆಹೊರೆಯವರು ಮುಖ್ಯವೆಂದು ಹೇಳುತ್ತಾ ಸ್ನೇಹಹಸ್ತ ಚಾಚಿ ಅವರ ಬಳಿ ನಡೆದಿದೆ. ಹೊಸ ಸರಕಾರದ ವಿದೇಶ ಮಂತ್ರಿ (ಮಹಿಳೆ) ನುರಿತ ರಾಜಕಾರಣಿ ಮತ್ತು ಕ್ಯಾಬಿನೆಟ್ ಮಂತ್ರಿಯಾಗಿ ಅನುಭವಸ್ಥರು. ಅವರು ಮತ್ತು ಪ್ರಧಾನಮಂತ್ರಿಗಳು ನೆರೆ ರಾಷ್ಟ್ರಗಳೊಂದಿಗೆ ಪರಸ್ಪರತೆ ಮತ್ತು ಸ್ನೇಹವಿರಬೇಕಿರುವುದು ಆಸ್ಟ್ರೇಲಿಯಾದ ಭವಿಷ್ಯಕ್ಕೆ ಬಹಳ ಮುಖ್ಯವೆಂದಿದ್ದಾರೆ. ಅವರ ಕಾರ್ಯಾಚರಣೆಯಲ್ಲಿ ಕೆಲವೊಂದು ದೇಶಗಳ ನಾಯಕರಲ್ಲಿ ಚಿಂತೆ ಮೂಡಿಸಿರುವ ಒಂದು ಬಲಿಷ್ಠ ರಾಷ್ಟ್ರವನ್ನು ಸ್ವಲ್ಪಮಟ್ಟಿಗಾದರೂ ಮಣಿಸುವ ತಂತ್ರವೂ ಸೇರಿದೆ ಎಂಬುದು ಎಲ್ಲರಿಗೂ ಕಂಡಿದೆ.
ಅದಕ್ಕಿಂತಲೂ ಹೆಚ್ಚಾಗಿ ಕಾಣುತ್ತಿರುವುದು ಸ್ವದೇಶಿ ರಾಜಕಾರಣ ಮತ್ತು ತಮ್ಮೊಂದಿಗೆ ನೆರೆಹೊರೆಯನ್ನು ಸೇರಿಸಿಕೊಂಡು ಒಬ್ಬರನ್ನೊಬ್ಬರು ಬೆಂಬಲಿಸುತ್ತಾ ತಮ್ಮ ಬಲವನ್ನು ಹೆಚ್ಚಿಸಿಕೊಳ್ಳುವುದು. ಆಸ್ಟ್ರೇಲಿಯ ವಸಾಹತುಶಾಹಿ ಆಡಳಿತದಿಂದ ಕ್ರಮೇಣ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬದಲಾದರೂ ದೇಶವನ್ನು ಆಳುವುದು ಬಿಳಿಯ ರಾಜಕಾರಣಿಗಳೆ ಎನ್ನುವುದು ಸರ್ವೇಸಾಮಾನ್ಯ ಸತ್ಯ. ಜೊತೆಗೆ ದೇಶೀಯ ಮಟ್ಟದ ಭಾಷೆ ಇಂಗ್ಲಿಷ್. ಭಾಷೆಯ ಜೊತೆ ಆಮದಾಗಿ ಬಂದಿದ್ದು ಅದೇ ಇಂಗ್ಲಿಷ್ ವ್ಯವಸ್ಥೆ. ಹೀಗಾಗಿ ಆಸ್ಟ್ರೇಲಿಯಾವು ಇಂಗ್ಲಿಷ್ ಭಾಷೆಯ ಪಾಶ್ಚಾತ್ಯ ದೇಶವೆಂದು ಕರೆಸಿಕೊಳ್ಳುತ್ತದೆ. ಈ ಪಾಶ್ಚಾತ್ಯ ದೇಶವೆಂಬ ಪಟ್ಟದೊಡನೆ ಬಳುವಳಿಯಾಗಿ ಬಂದಿರುವುದು, ನಂಬಿರುವುದು ದೂರದೂರಿನ ನೆಂಟತನ. ಮಾತೃದೇಶ ಬ್ರಿಟನ್, ಅಣ್ಣನಾಗಿ ಅಮೆರಿಕ, ಕಿರಿತಂಗಿಯಾಗಿ ನ್ಯೂ ಝಿಲಂಡ್, ಬಂಧುಬಾಂಧವರು ಯುರೋಪಿಯನ್ ದೇಶದವರು. ಇಷ್ಟೆಲ್ಲಾ ನೆಂಟರಿದ್ದಾಗ ಆಸ್ಟ್ರೇಲಿಯಾದ ರಾಜಕಾರಣಿಗಳು ಅವರುಗಳ ಜೊತೆ ವ್ಯವಹರಿಸಲು ಮುತುವರ್ಜಿ ವಹಿಸುತ್ತಾರೆ. ಇದು ಅತಿಯಾದಾಗ ನೆರೆಹೊರೆಯ ಅಣ್ಣತಮ್ಮಂದಿರು, ಅಕ್ಕತಂಗಿ ದೇಶಗಳನ್ನು ಮರೆತಂತೆ ನಟಿಸುವ ಅಥವಾ ಕಡೆಗಣಿಸುವ ಅಥವಾ ಉಪೇಕ್ಷಿಸುವ ಮನೋಭಾವನೆ ಕಂಡುಬರುತ್ತದೆ. ಈ ಮನೋಭಾವನೆ ಬದಲಾಗುವುದು ರಾಜಕಾರಣಿಗಳ ಧೋರಣೆಗಳ ಮೇಲೆ ಅವಲಂಬಿಸಿದೆ. ಇದು ಸ್ಪಷ್ಟವಾಗಿದ್ದು ಕಳೆದ ತಿಂಗಳು ನಡೆದ ಚುನಾವಣೆಗಳಲ್ಲಿ ಮತ್ತು ಹೊಸ ಸರಕಾರದ ಹೊಸ ಮಾತುಗಳಲ್ಲಿ, ನಡತೆಯಲ್ಲಿ.
ಉದಾಹರಣೆಗೆ, ಈ ವಾರ ಹೊಸ ಪ್ರಧಾನಿ ಪಕ್ಕದ ಇಂಡೋನೇಷಿಯಾ ದೇಶಕ್ಕೆ ಹೋಗಿ ಉಭಯ ಕುಶಲೋಪರಿ ವಿಚಾರಿಸಿ ಕೈಕುಲುಕಿ ‘ನಾವು ನಿಮ್ಮೊಂದಿಗಿದ್ದೀವಿ’ ಎಂದಿದ್ದಾರೆ. ಅದೇ ದನಿಯಲ್ಲಿ ದೇಶದ ಮೇಲೆ, ಪೂರ್ವದಿಕ್ಕಿನಲ್ಲಿ ಹರಡಿರುವ ದ್ವೀಪ ರಾಷ್ಟ್ರಗಳ ಜೊತೆ ಸಂಭಾಷಣೆ ನಡೆಸಿ ‘ನಾವೆಲ್ಲ ಜೊತೆಗಾರರು’ ಎಂದು ಮೈತ್ರಿ ಸಂದೇಶ ಕೊಟ್ಟಿದ್ದಾರೆ.
ದೇಶದೊಳಗೆ ಎರಡು ಮುಖ್ಯ ಮುಂದುವರಿಕೆಗಳಾಗಿವೆ. ಒಂದು ಜೀವರಕ್ಷಣೆಯ ಕಾರಣಕ್ಕಾಗಿ ತಮ್ಮ ದೇಶವನ್ನು ತೊರೆದು ಆಶ್ರಯಕ್ಕಾಗಿ ಆಸ್ಟ್ರೇಲಿಯಾಕ್ಕೆ ಬಂದು ಬಹು ವರ್ಷಗಳಿಂದ ಅಧಿಕೃತ ಮನ್ನಣೆಯಿಲ್ಲದೆ ಇದ್ದ ಕೆಲವರಿಗೆ ಈಗ ರೆಫ್ಯೂಜಿ ಮನ್ನಣೆ ದೊರೆತಿದೆ. ಇನ್ನೊಂದು ಸರಕಾರವು ಅಬೊರಿಜಿನಲ್ ಮತ್ತು ದ್ವೀಪವಾಸಿಗಳ ಮುಖಂಡರನ್ನು ಸಂಪರ್ಕಿಸಿ ಅವರ ಸಲಹೆಗಳನ್ನು ಕೇಳುತ್ತಿದೆ. ನಾಯಕತ್ವಕ್ಕೆ ಬೆಲೆಯಿದೆಯೆಂಬುದು ರುಜುವಾಗುತ್ತಿದೆ. ಇದು ಎಲ್ಲರ ಗಮನ ಸೆಳೆಯುತ್ತಿರುವುದು ತಕ್ಷಣಕ್ಕೆ ತಿಳಿಯುತ್ತಿದೆ. ಟಿವಿಯಲ್ಲಿ ಪ್ರಸಾರವಾಗುವ ಸಂಜೆ ಸುದ್ದಿಸಮಾಚಾರದಲ್ಲಿ ರಾಷ್ಟ್ರ ವ್ಯಾಪಿ ಅಬೊರಿಜಿನಲ್ ಮತ್ತು ದ್ವೀಪವಾಸಿ ಜನರಿಗೆ ಸಂಬಂಧಪಟ್ಟ ವಿಷಯಗಳು ಹೆಚ್ಚುಹೆಚ್ಚು ಬಿತ್ತರವಾಗುತ್ತಿವೆ. ನಾನು ಕೆಲಸ ಮಾಡುವ ಸಂಸ್ಥೆಯಲ್ಲೂ ಕೂಡ ಇದೆ ದನಿ ಮೊಳಗಿದೆ. ಅಂದರೆ ಅಂತಹ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಈಗ ಹೆಚ್ಚು ಅವಕಾಶವಿದೆ ಎಂದರ್ಥ. ಇದಕ್ಕೆ ನಿದರ್ಶನವಾಗಿ ಈ ವಾರ ಒಂದು ಸಂವಾದ ಕಾರ್ಯಕ್ರಮವಿತ್ತು. ಮುಖ್ಯ ಅತಿಥಿಗಳು ಮೂವರು ಅಬೊರಿಜಿನಲ್ ಮಹಿಳಾ ಪ್ರೊಫೆಸರುಗಳು. ಅವರುಗಳು ಹಂಚಿಕೊಂಡ ವಿಷಯಗಳು ಬಹಳ ಆಸಕ್ತಿಕರವಾಗಿದ್ದವು. ಒಂದು, ಮಹಿಳೆಯರು ಪ್ರೊಫೆಸರ್ ಗಿರಿ ಪಡೆಯುವುದು, ಇನ್ನೊಂದು ಅಬೊರಿಜಿನಲ್ ಎಂದು ಗುರುತಿಸಿಕೊಂಡವರು ಅಂತಹ ಮೇಲ್ಮಟ್ಟದ ಸ್ಥಾನವನ್ನು ಪಡೆಯುವುದು. ಎರಡರಲ್ಲೂ ಇದ್ದ ಅನೇಕ ಎಡರುತೊಡರುಗಳನ್ನು ಅವರು ಮುಕ್ತವಾಗಿ ಹಂಚಿಕೊಂಡರು. ಯೂರೋಪಿಯನ್-ಆಂಗ್ಲ ಜ್ಞಾನಾರ್ಜನೆ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ತಮ್ಮ ಅಬೊರಿಜಿನಲ್ ಜನರು ಪಳಗಿದ್ದಾರೆ. ಬಿಳಿಯರು ಹೇಳಿಕೊಟ್ಟ ತೋರಿಸಿದ ದಾರಿಯಲ್ಲಿ ನಡೆದಿದ್ದಾರೆ. ಮೇಲ್ಮಟ್ಟದ ವಿದ್ಯಾರ್ಹತೆಗಳನ್ನು ಗಳಿಸಿದ್ದಾರೆ. ಆದರೂ ಕೂಡ ತಮ್ಮನ್ನು ಪ್ರೊಫೆಸರ್ ಸ್ಥಾನಕ್ಕೆ ನೇಮಿಸುವಲ್ಲಿ ನೂರಾರು ತಕರಾರುಗಳನ್ನು, ಅಡೆತಡೆಗಳನ್ನು ಅನುಭವಿಸುವುದು ಇವತ್ತಿಗೂ ನಡೆದಿದ್ದೇ ಇದೆ, ಎಂದರು. ‘ಮೂಲ ಕಾರಣವೆಂದರೆ ಅವರು ಅವರೇ ಹೌದು, ನಾವು ಎಂದಿಗೂ ಅವರಾಗುವುದಿಲ್ಲ, ನೋಡಿ,’ ಅಂದರು. ಅವರೆಲ್ಲ ಆಶಾಭಾವನೆಯನ್ನೂ ಕೂಡ ವ್ಯಕ್ತಪಡಿಸಿದ್ದು ಸ್ವಲ್ಪ ಸಮಾಧಾನ ತಂದಿತು. ಇವೆಲ್ಲ ಹೀಗೇ ಮುಂದುವರೆಯುತ್ತದೆಯೊ ಇಲ್ಲವೊ ಎಂಬುದು ಮುಂಬರುವ ದಿನಗಳಲ್ಲಿ ತಿಳಿಯುತ್ತದೆ.
ಇನ್ನು ಮಿಕ್ಕಂತೆ ದೇಶದಾದ್ಯಂತ ಜನ ಮಾತನಾಡುತ್ತಿರುವುದು ನಿಲ್ಲದೆ ಏರುತ್ತಿರುವ ಬೆಲೆಗಳು, ಮತ್ತು ದುಬಾರಿಯಾಗುತ್ತಿರುವ ನಿತ್ಯ ಜೀವನದ ಖರ್ಚು. ಕಾರಿಗೆ ಪೆಟ್ರೋಲ್ ತುಂಬಿಸುವಾಗ ಎದೆಬಡಿತ ಜೋರಾಗುತ್ತದೆ. ದಿನವೂ ಓಡಾಡುವಾಗ ಕಣ್ಣು ಪೆಟ್ರೋಲ್ ಬೆಲೆಯ ಮೇಲೆ ಬಿದ್ದೇಬೀಳುತ್ತದೆ. ಬೇಡ, ಸಾರ್ವಜನಿಕ ವಾಹನಗಳನ್ನು ಬಳಸೋಣ ಎಂದರೆ ಬಸ್ಸು, ಟ್ರೈನಿನಲ್ಲಿ ಟಿಕೆಟ್ ದರ ಇನ್ನೂ ಹೆಚ್ಚು! ಜೊತೆಗೆ ಸಮಯದ ವೆಚ್ಚವೂ ಸೇರಿ ಕಾರನ್ನೇ ಬಳಸೋಣ ಆದರೆ ಸ್ವಲ್ಪ ಇತಿಮಿತಿಯಿದ್ದರೆ ಒಳ್ಳೆಯದು ಎನ್ನುವ ಸೂತ್ರಕ್ಕೆ ಜನ ಮರಳುತ್ತಾರೆ. ಹೀಗಾಗಿ ಕಾಸ್ಟ್ ಆಫ್ ಲಿವಿಂಗ್ ಇಳಿಸಿ, ಇಲ್ಲವೆ ಸಂಬಳಗಳನ್ನು ಜಾಸ್ತಿ ಮಾಡಿ ಎನ್ನುವವರ ಸಂಖ್ಯೆ ಹೆಚ್ಚುತ್ತಿದೆ. ಇದು ಹೊಸ ಸರಕಾರಕ್ಕೆ ಸವಾಲಾಗಿದೆ. ಅವರು ಅದೇ ಹಳೆಯ ಮಂತ್ರವನ್ನೇ ಜಪಿಸುತ್ತಿದ್ದಾರೆ – ಹಿಂದಿದ್ದ ಸರಕಾರವು ಮಾಡಿದ್ದ ಆರ್ಥಿಕ ತಪ್ಪುಗಳನ್ನು, ಸಾಲಸೋಲವನ್ನು ನಾವು ಬಳುವಳಿ ಪಡೆದಿದ್ದೀವಿ. ದಿನನಿತ್ಯದ ಖರ್ಚನ್ನು ಇಳಿಸುವುದೆಂದರೆ ಅದಕ್ಕೂ ಸರಿಯಾದ ಆರ್ಥಿಕ ಸೂತ್ರ ಬೇಕಿದೆ. ರಾತ್ರೋರಾತ್ರಿ ಅಥವಾ ಮೂರು ವಾರದಲ್ಲಿ ಸರಿಪಡಿಸುವ ವಿಷಯವಲ್ಲವಿದು, ಎಂದು ಮಾಧ್ಯಮದವರ ಮುಂದೆ ನಿಂತು ಆರ್ಥಿಕ ಮಂತ್ರಿ ಹೇಳುವಾಗ ಅವರು ಉಗುಳು ನುಂಗುವುದು ಟಿವಿಯಲ್ಲಿ ಕಾಣಿಸುತ್ತದೆ. ಮತ್ತೊಂದು ಬಾರಿ ನಿಟ್ಟುಸಿರು ಹೊರ ಬೀಳುತ್ತದೆ.
ದಿನನಿತ್ಯದ ದುಬಾರಿ ಜೀವನವನ್ನು ಕುರಿತು ಆಲೋಚಿಸಿದಾಗ ನೆನಪಾಗುವುದು ಸ್ವಾವಲಂಬನೆ. ಬ್ರಿಸ್ಬೇನ್ ನಗರದ ಬಡಾವಣೆಗಳಲ್ಲಿ ‘ಕಮ್ಯುನಿಟಿ ಎಡಿಬಿಲ್ ಎಕ್ಸ್ಚೇಂಜ್’ ಚಳವಳಿ ಆರಂಭವಾಗಿದೆ. ಅಂದರೆ ಸಮುದಾಯ ಮಟ್ಟದಲ್ಲಿ ಜನರು ತಾವು ಬೆಳೆದ ತರಕಾರಿ, ಹಣ್ಣುಹಂಪಲು, ಸೊಪ್ಪು, ಹರ್ಬ್ಸ್ ಇತ್ಯಾದಿಗಳನ್ನು ಪರಸ್ಪರ ಬದಲಾಯಿಸಿಕೊಳ್ಳುವುದು. ಉದಾಹರಣೆಗೆ, ಒಂದು ವಾರಾಂತ್ಯ ನಮ್ಮನೆಯಲ್ಲಿ ಅಧಿಕವಾಗಿದ್ದ ನಿಂಬೆಹಣ್ಣುಗಳನ್ನು ನಾನು ಹತ್ತಿರದ ಒಂದು ಬಡಾವಣೆಯಲ್ಲಿ ಸ್ಥಾಪಿಸಿದ್ದ ‘ಕಮ್ಯುನಿಟಿ ಎಡಿಬಿಲ್ ಎಕ್ಸ್ಚೇಂಜ್’ ಶೆಡ್ ಗೆ ಕೊಂಡೊಯ್ದೆ. ನಿಂಬೆಯನ್ನು ಅಲ್ಲಿ ಕೊಟ್ಟು ನನಗೆ ಬೇಕಿದ್ದ ಸೀಬೆಹಣ್ಣು, ಸೀಮೆಬದನೆಕಾಯಿ ಮತ್ತು ಬಾಳೆಕಾಯಿಗಳನ್ನು ಪಡೆದೆ. ಈ ರೀತಿ ಪ್ರತಿ ದಿನವೂ ನಗರವಾಸಿ ಜನರು ಬೆಳೆದ ಆಹಾರ ಪರಸ್ಪರ ಕೈ ಬದಲಾಯಿಸುತ್ತಿದೆ. ಕೆಲವೊಮ್ಮೆ ಕೆಲವರಿಗೆ ಬೇಕಿರುವ ತರಕಾರಿಯನ್ನೊ, ಹಣ್ಣನ್ನೋ ಜನರು ಕೇಳಿ ಪಡೆಯುತ್ತಿದ್ದಾರೆ. ಆಗಾಗ ಹೆಚ್ಚುವರಿ ಬೆಲೆ ಸಂಗ್ರಹವಾಗಿ ಅದು ಕೊಳೆತುಹೋಗಬಹುದು ಎಂದೆನಿಸಿದಾಗ ಒಂದಷ್ಟು ಜನರು ಸೇರಿ ಅವರಲ್ಲೇ ಒಬ್ಬರ ಮನೆಯಲ್ಲಿ ಆ ಬೆಳೆಯಿಂದ ಆಹಾರ ತಯಾರಿಸುತ್ತಾರೆ. ಅದನ್ನು ತಂದು ಪುನಃ ಶೆಡ್ ನಲ್ಲಿ ಇಟ್ಟು ಹಂಚುತ್ತಾರೆ. ಗಿಡಗಳನ್ನು ಹಂಚಿಕೊಳ್ಳುವುದೂ ನಡೆಯುತ್ತಿದೆ. ಈ ಪ್ರಯತ್ನ ಅಪಾರ ಜನಪ್ರಿಯತೆ ಗಳಿಸಿ, ಹಲವಾರು ಬಡಾವಣೆಗಳಲ್ಲಿ ಜನರು ‘ಕಮ್ಯುನಿಟಿ ಎಡಿಬಿಲ್ ಎಕ್ಸ್ಚೇಂಜ್’ ಶೆಡ್ ಸ್ಥಾಪಿಸುತ್ತಿದ್ದಾರೆ. ಹಸಿರು ಕ್ರಾಂತಿಯೆಂದರೆ ಇದೇ ಏನೋ! ಸ್ವಾವಲಂಬನೆಯ ಜೊತೆಗೆ ಸಮುದಾಯ ಸೌಹಾರ್ದತೆ ಹೆಚ್ಚುತ್ತಿದೆ.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.
ತುಂಬಾ ಸುಂದರವಾಗಿ ಮೂಡಿ ಬಂದಿದೆ,ಆಡಳಿದಿಂದ ಆರಂಭಿಸಿ, ಮಹಿಳೆಯರ ಕೆರಿಯರ್, ಎಲ್ಲಿ ಹೋದರು ಈ ತಾರಮತ್ಯತೆ ಇದ್ದದದ್ದೇ ಎನ್ನುತ್ತಾ ಸಮುದಾಯದ ಕೊಡುಕೊಳ್ಳುವಿಕೆ ಮೂಲಕಸೌಹಾರ್ದತೆಯ ದನಿ ಆರಂಭದ ಬಗ್ಗೆ ಬರೆದಿರುವುದು ಇಷ್ಷವಾಯಿತು ಮುಂದಿನ ದಕ್ಕೆ ಕಾಯುತ್ತೇನೆ
ಆಸ್ಟ್ರೇಲಿಯಾ ರಾಜಕೀಯ ಪರಿಸ್ಥಿತಿ ಬಗ್ಗೆ ಅವಲೋಕಿಸುವಂತಾಯಿತು , ಚೆಂದದ ಬರಹ , community edible exchanged shed idea bahala istavaaythu