ಹೊಸ ಪ್ರಸಂಗಗಳ ಬಗ್ಗೆ ಸಾಮಾನ್ಯವಾಗಿ ಒಂದು ಸೀಮಿತ ಗ್ರಹಿಕೆಯಿರುತ್ತದೆ. ಯಕ್ಷಗಾನವೆಂದರೆ ಅದು ಹಳೆಯ ಕಲೆ, ಅದಕ್ಕೆ ನೂರಾರು ವರ್ಷಗಳ ಪರಂಪರೆಯಿದೆ. ಅದು ಪುರಾಣ ಕತೆಗಳ ಮೌಲ್ಯ ಪ್ರಸಾರಕ್ಕಾಗಿದೆ, ನಮ್ಮ ಜೀವನಕ್ಕೆ ಬೇಕಾಗುವ ಮೌಲ್ಯವೇ ಪುರಾಣಗಳಲ್ಲಿವೆ ಮತ್ತು ಹಳೆಯದೆಲ್ಲವನ್ನು ರಕ್ಷಿಸಬೇಕು ಎನ್ನುವ ನಂಬಿಕೆಯಿಂದಾಗಿ. ಜೊತೆಗೆ ಅದೊಂದು ಗಂಭೀರವಾದ ಕಲೆ ಎನ್ನುವ ದೃಷ್ಟಿಕೋನವೂ ಸೇರಿಕೊಂಡಿದೆ. ಗಂಭೀರವೆಂದರೆ ರಂಜನೆಯಿಲ್ಲದ್ದು ಅನ್ನುವುದು ಒಮ್ಮೊಮ್ಮೆ ಅವರ ಮಾತುಗಳಲ್ಲಿ ಧ್ವನಿಸುತ್ತದೆ. ಇವೆಲ್ಲ ನಂಬಿಕೆಗಳು ವಸಾಹತಿನ ಕಾಲದಲ್ಲಿ ಹುಟ್ಟಿದ ರಾಷ್ಟ್ರೀಯತೆಯ ಕಲ್ಪನೆಯೊಟ್ಟಿಗೆ ಬಂದದ್ದೆಂದು ಕಾಣುತ್ತದೆ.
ಯಕ್ಷಾರ್ಥ ಚಿಂತಾಮಣಿ ಅಂಕಣದಲ್ಲಿ ಕೃತಿ ಪುರಪ್ಪೇಮನೆ ಲೇಖನ ಇಲ್ಲಿದೆ.
ದಿನನಿತ್ಯ ಆಡುವ ಯಕ್ಷಗಾನದ ಬಗ್ಗಿನ ಮಾತುಗಳಲ್ಲಿ ಯಕ್ಷಗಾನದ ಹೊಸ ಪ್ರಸಂಗಗಳ ಮಾತು ಬರುವುದು ಕಡಿಮೆ. ಪೌರಾಣಿಕವಲ್ಲದ ಹೊಸ ಪ್ರಸಂಗಗಳು ಜನಪ್ರಿಯವಾಗುತ್ತಿದ್ದ ಕಾಲದಿಂದಲೂ ಅವುಗಳ ಬಗ್ಗೆ ಒಂದು ರೀತಿಯ ಮಡಿವಂತಿಕೆ. ಹಲವು ಯಕ್ಷಗಾನದ ದಿಗ್ಗಜರ ಸಂದರ್ಶನಗಳಲ್ಲಿ ಕೊನೆಯ ಪ್ರಶ್ನೆಯಾಗಿ ಹೊಸ ಪ್ರಸಂಗಗಳ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಿದಾಗ, ಹಳೆಯ ಪ್ರಸಂಗಗಳನ್ನೆ ಮರೆತಿದ್ದೇವೆ ಅಥವಾ ಹಳೆಯ ಪೌರಾಣಿಕ ಪ್ರಸಂಗಗಳಲ್ಲೇ ಎಷ್ಟೊಂದನ್ನು ಪ್ರಯೋಗಗಳಿಗೆ ಇನ್ನೂ ಒಡ್ಡಿಕೊಳ್ಳದಿದ್ದಾಗ ಹೊಸ ಪ್ರಸಂಗಗಳ ಅವಶ್ಯಕತೆಯಿಲ್ಲ ಎನ್ನುವ ಮಾತುಗಳೇ ಬಂದಿವೆ. (ಈಗಾಗಲೇ ಪ್ರಕಟಗೊಂಡಿರುವ, ಉದಾಹರಣೆಗೆ ಮಹಾಬಲ ಹೆಗಡೆಯವರ ಸಂದರ್ಶನ ಮತ್ತು ಜಲವಳ್ಳಿ ವೆಂಕಟೇಶ್ ರಾವ್ ಅವರ ಸಂದರ್ಶನ). ನಿತ್ಯದ ಲೋಕಾಭಿರಾಮದ ವಿಮರ್ಶೆಯಲ್ಲಿ ಹೊಸ ಪ್ರಸಂಗ ಎಂದಕೂಡಲೆ ಅದನ್ನು ಬಂದು ನೋಡದವರೂ ಕೂಡ ‘ಯಕ್ಷಗಾನ ಅವಾಸ್ತವ ಕತೆಗಳಿಗೆ ಸರಿ, ಯಾವುದೂ ರಿಯಲಿಸ್ಟಿಕ್ ಆಗಬಾರದು, ಅದು ಈ ಕಲಾಪ್ರಕಾರಕ್ಕೆ ಹೊಂದುವುದಿಲ್ಲ’ ಅಂದವರೆ ಹೆಚ್ಚು. ಹೊಸ ಪ್ರಸಂಗಗಳಲ್ಲೂ ಬರುವುದು ರಾಜ, ರಾಣಿ ಪಾಳೆಯಗಾರರು, ರಾಕ್ಷಸ ವೇಷಗಳು ಜೊತೆಗೆ ಹಾಸ್ಯ ಪಾತ್ರಗಳು. ಯಕ್ಷಗಾನದಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳುವವರು ಹೊಸ ಪ್ರಸಂಗ ಮೆಚ್ಚಬಾರದು ಎನ್ನುವ ಮನಸ್ಥಿತಿ ಇರೋದು ಅವರ ಸಂಭಾಷಣೆಗಳಲ್ಲಿ ತಿಳಿಯುತ್ತದೆ. ‘ಇವರು ನೋಡಿ ಯಕ್ಷಗಾನ ತುಂಬಾ ನೋಡುತ್ತಾರೆ, ಆದರೆ ಇವರೆಲ್ಲ ಕಾಂಜಿ ಪೀಂಜಿ ಅಲ್ಲಾ, ಪಕ್ಕಾ ಪೌರಾಣಿಕ ಪ್ರಸಂಗವನ್ನು ಮಾತ್ರ ನೋಡುವವರು’ ಎಂದು ಪರಿಚಯ ಮಾಡಿಕೊಡುತ್ತಾರೆ. ಹಾಗಾಗಿಯೆ ಮೊದಲ ಭೇಟಿಯ ಮಾತುಕತೆಗಳಲ್ಲಿ ಯಾರೂ ಹೊಸಪ್ರಸಂಗಗಳ ಬಗ್ಗೆ ಮಾತನಾಡುವುದಿಲ್ಲ. ಹೊಸದಾಗಿ ನೆಂಟರಾದವರೊಂದಿಗೆ ರಾಜಕೀಯ ಮಾತನಾಡಿದಂತೆ ಇದು. ಅಂದರೆ ಅವರ ಅಭಿಪ್ರಾಯ ಗೊತ್ತಿಲ್ಲದಾಗ, ನಾವು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳುವ ವಿಷಯವನ್ನು ಅವರು ಹಗುರಾಗಿ ತಳ್ಳಿಬಿಟ್ಟರೆ ಹೊಸ ಸಂಬಂಧ ಹಾಳಾಗಬಹುದು, ಮೊದಲ ಇಂಪ್ರೆಶನ್ ಸರಿಹೋಗದಿರಬಹುದು ಅನ್ನುವ ಕಾರಣಕ್ಕಾಗಿ. ಈ ವಾತಾವರಣ ಬರಲು ಯಕ್ಷಗಾನವೆಂದರೆ ಅದು ಹಳೆಯ ಕಲೆ, ಅದಕ್ಕೆ ನೂರಾರು (ಎಷ್ಟು ನೂರೋ) ವರ್ಷಗಳ ಪರಂಪರೆಯಿದೆ. ಅದು ಪುರಾಣ ಕತೆಗಳ ಮೌಲ್ಯ ಪ್ರಸಾರಕ್ಕಾಗಿದೆ, ನಮ್ಮ ಜೀವನಕ್ಕೆ ಬೇಕಾಗುವ ಮೌಲ್ಯವೇ ಪುರಾಣಗಳಲ್ಲಿವೆ ಮತ್ತು ಹಳೆಯದೆಲ್ಲವನ್ನು ರಕ್ಷಿಸಬೇಕು ಎನ್ನುವ ನಂಬಿಕೆಯಿಂದಾಗಿ. ಜೊತೆಗೆ ಅದೊಂದು ಗಂಭೀರವಾದ ಕಲೆ ಎನ್ನುವ ದೃಷ್ಟಿಕೋನವೂ ಸೇರಿಕೊಂಡಿದೆ. ಗಂಭೀರವೆಂದರೆ ರಂಜನೆಯಿಲ್ಲದ್ದು ಅನ್ನುವುದು ಒಮ್ಮೊಮ್ಮೆ ಅವರ ಮಾತುಗಳಲ್ಲಿ ಧ್ವನಿಸುತ್ತದೆ. ಇವೆಲ್ಲ ನಂಬಿಕೆಗಳು ವಸಾಹತಿನ ಕಾಲದಲ್ಲಿ ಹುಟ್ಟಿದ ರಾಷ್ಟ್ರೀಯತೆಯ ಕಲ್ಪನೆಯೊಟ್ಟಿಗೆ ಬಂದದ್ದೆಂದು ಕಾಣುತ್ತದೆ.
ಆ ಕಾರಣಕ್ಕಾಗಿಯೆ ಹೊಸ ಪ್ರಸಂಗಗಳ ಪಾತ್ರಧಾರಿಗಳು ಪುರಾಣಗಳ ರೆಫರೆನ್ಸ್ ಅನ್ನು ತರುತ್ತಾರೆ. ‘ಪುಷ್ಪ ಸಿಂಧೂರಿ’ ಎಂಬ ಪ್ರಸಂಗದಲ್ಲಿ ಚಾರಕನಾಗಿರುವ ಚಂದ್ರಕೀರ್ತಿ, ಕೃಷ್ಣನ ಸಾರಥ್ಯ, ಸೂರ್ಯದೇವನ ಸಾರಥಿತನದ ಉದಾಹರಣೆಗಳನ್ನು ಕೊಟ್ಟು ಸಾರಥ್ಯದ ಕೆಲಸದ ಘನತೆಯ ಬಗ್ಗೆ ಮಾತನಾಡುತ್ತಾನೆ. ಹಲವು ಹೊಸ ಪ್ರಸಂಗಗಳ ಮೌಲ್ಯಗಳು ಕೂಡ ಪುರಾಣದ ಮೌಲ್ಯವೇ ಆಗಿವೆ. ಅಂದರೆ ದುಷ್ಟ ಶಿಕ್ಷಣ, ಶಿಷ್ಟ ರಕ್ಷಣ. ಯಾವುದು ಪೌರುಷದ ಲಕ್ಷಣ, ಯಾವುದು ಹೇಡಿಯ ಲಕ್ಷಣ, ಯಾವುದು ದರ್ಶನ, ಯಾವುದು ಸುಂದರ, ಯಾವುದು ಕುರೂಪ ಎಲ್ಲವೂ ಹೊಸ ರೂಪದಲ್ಲಿ ಮತ್ತೆ ಬರುತ್ತದೆ.
ಯಕ್ಷಗಾನದ ಪೌರಾಣಿಕ ಪ್ರಸಂಗದ ಮೂಲ ಪಠ್ಯದಲ್ಲಿನ ಯಥಾಸ್ಥಿತಿಯನ್ನು ಬದಲಿಸಲಾಗದಂತಹ ಸ್ಥಿತಿ ಇದೆ. ಪುರಾಣ ಪ್ರಸಂಗಗಳನ್ನು ಹಲವು ರೀತಿಯಲ್ಲಿ ಅನುಸಂಧಾನ ಮಾಡಿಕೊಂಡ ಮೇರು ಕಲಾವಿದರಿದ್ದಾರೆ. ಶಿವರಾಮ ಹೆಗಡೆಯವರ ಗದಾಯುದ್ಧದ ಕೌರವ, ರಂಗಕೃತಿಯಲ್ಲಿ ಮುಖ್ಯ ಪಾತ್ರವಾಗಿ ಚಿತ್ರಿತಗೊಂಡಿದ್ದಾನೆ. ಅದರ ನಡೆಯನ್ನು ಬದಲು ಮಾಡುವುದೂ ಕೂಡ ಈಗ ಕಷ್ಟ. ಗಜಾನನ ಹೆಗಡೆಯವರ ಅಂಬೆಯ ಬಗ್ಗೆ ಹಿಂದಿನವರು ಹೇಳುತ್ತಿರುತ್ತಾರೆ. ಈಗ ಶಶಿಕಾಂತ ಶೆಟ್ಟಿಯವರ ಅಂಬೆಯ ಚಿತ್ರಣ ವಿಶಿಷ್ಟವಾದದ್ದು. ಕುರುಕುಲದಲ್ಲಿ ಮುಂದೆ ನಡೆಯುವ ಎಲ್ಲಾ ಅವಘಡಗಳಿಗೂ ತನ್ನ ಎಳೆಯ ದೇಹ ಮತ್ತು ಕನಸಿನ ನಾಶವೇ ಕಾರಣವೆಂಬಂತೆ ಶಾಪ ಕೊಡುತ್ತಾಳೆ. ಮತ್ತು ಶಶಿಕಾಂತ ಶೆಟ್ಟಿಯವರ ವಿಡಿಯೊ ವೈರಲ್ ಆಗಿ ಅವರ ಚಿತ್ರಣ ಜನಪ್ರಿಯವಾಗುತ್ತಿದ್ದ ಹಾಗೆ, ಇನ್ನೊಂದು ಮೇಳದಲ್ಲಿರುವ ಸ್ತ್ರೀ ವೇಷಧಾರಿಯು ಅದಕ್ಕೆ ಉತ್ತರವೆಂಬಂತೆ, ಇಡೀ ಕುರವಂಶಕ್ಕೆ ತಾನು ಶಾಪ ಕೊಡುವವಳಲ್ಲ ಯಾಕಂದರೆ ಅದು ಈಗ ನನ್ನ ತಂಗಿಯರ ವಂಶವು ಹೌದು ಎನ್ನುತ್ತಾಳೆ. ತಾಳಮದ್ದಲೆಯ ವಾಲಿವಧೆಯಲ್ಲಿ, ಇವತ್ತಿಗೂ ವಾಲಿ ಮತ್ತು ರಾಮನ ಸಂದರ್ಭದ ವಾದ ವಿವಾದವೇನು ಎಂಬುದನ್ನು ನೋಡಲೇ ಜನ ಕೊನೆಯತನಕ ಕುಳಿತುಕೊಳ್ಳುವುದು. ಹೀಗೆ ಪುರಾಣ ಪ್ರಸಂಗಗಳಿಗೆ ವೈವಿಧ್ಯಮಯ ಪಾತ್ರಚಿತ್ರಣಗಳ ಮೂಲಕ ಹಲವರು ಹೊಸ ಆಯಾಮಗಳನ್ನು ಕೊಟ್ಟಿದ್ದಾರೆ. ಪುರಾಣವನ್ನು ಇಷ್ಟೆಲ್ಲಾ ಚರ್ವಿತ ಚರ್ವಣ ಮಾಡಿಯೂ ಅದು ಕೊಡುವ ಹೊಸ ನೋಟಗಳಿಗೆ ಯಕ್ಷಗಾನ ಮಾಧ್ಯಮದಲ್ಲಿ ಮಿತಿಯಿದೆ. ಅದು ಬಳಸುವ ಭಾಷೆಯ ಔಪಚಾರಿಕತೆಯೂ ಕೂಡ ಇದಕ್ಕೆ ಒಂದು ರೀತಿಯ ಮಿತಿಯನ್ನು ಕೊಡುತ್ತದೆ. ಹಾಸ್ಯ ಪಾತ್ರ ಮತ್ತುಳಿದ ಅಂಚಿನಲ್ಲಿರುವವರ ಪಾತ್ರಗಳು ಭಾಷೆಯ ವಿಷಯದಲ್ಲಿ ಸ್ವಲ್ಪ ಸ್ವಾತಂತ್ರ ತೆಗೆದುಕೊಳ್ಳಬಹುದು. ಒಬ್ಬ ಪ್ರೇಕ್ಷಕರು ಅವರ ತಾರುಣ್ಯ ಕಾಲದಲ್ಲಿ ನೋಡಿದ ಕರ್ಣ ಪರ್ವದ ಕರ್ಣನ ಪಾತ್ರ ವಿವರಿಸುತ್ತಾ ತಮಗೆ ಕರ್ಣನ ಮೇಲೆ ಎಲ್ಲಾ ರೀತಿಯ ಸಹಾನುಭೂತಿ ಹುಟ್ಟಿಯೂ ತಾತ್ಕಾಲಿಕವಾಗಿ ಕಪಟವಾಡುವ ಕೃಷ್ಣನ ಮೇಲೆ ಸಿಟ್ಟಾಗಿಯೂ ಕೊನೆಗೂ ಉಳಿಯುವುದು ‘ಆಗಬೇಕಾದ್ದೆಲ್ಲ ಆಗಿಯೇ ತೀರುತ್ತದೆ’ ಎನ್ನುವ ಭಾವನೆ ಎಂದರು. ನಮ್ಮ ಎಲ್ಲಾ ಆಗುಹೋಗುಗಳು ವಿಧಿಲಿಖಿತ ಎನ್ನುವ ತಿಳುವಳಿಕೆ ಹಲವು ಪ್ರೇಕ್ಷಕರ ಕೊನೆಯ ಮನಸ್ಥಿತಿ.
ಗೊತ್ತಿರುವ ಪುರಾಣ ಕತೆಯ ಮೌಲ್ಯವೇ ಪಾತ್ರಚಿತ್ರಣವನ್ನು, ಹೊಸ ನಡೆಯನ್ನು, ಅದು ವರ್ತಮಾನ ಕಾಲಕ್ಕೆ ಸ್ಪಂದಿಸಿದ ರೀತಿಯನ್ನು ಹಿನ್ನೆಲೆಗೆ ತಳ್ಳಿಬಿಡುತ್ತದೆ. ಎಲ್ಲಾ ತರ್ಕ, ಭಾವ, ಮಾತುಗಳನ್ನು ಕೊನೆಗೆ ವಿಧಿ ಲಿಖಿತದ ಮಸಿ ನುಂಗಿದ ಹಾಗಾಗುತ್ತದೆ. ಪೌರಾಣಿಕ ಪ್ರಸಂಗದಲ್ಲಿ ಯಾವುದು ಮಿತಿಯೊ ಅದೇ ಹೊಸ ಪ್ರಸಂಗಗಳನ್ನು ಹುಟ್ಟಿಸುತ್ತದೆ. ಹೊಸ ಪ್ರಸಂಗಗಳು ಅದೇ ‘ಮೌಲ್ಯ ಭರಿತ’ ಯಥಾಸ್ಥಿತಿಯ ದೃಷ್ಟಿಕೋನ ಇಟ್ಟುಕೊಳ್ಳಬೇಕಾದ ಅನಿವಾರ್ಯತೆಯ ಒಳಗೂ ಕೆಲವು ಮಿತಿಗಳನ್ನು ಅವು ದಾಟುತ್ತವೆ.
ಹೊಸ ಪ್ರಸಂಗಗಳು ಹೆಚ್ಚಾಗಿ, ಜನಪದ ಕತೆಗಳು, ಜನಪ್ರಿಯ ಸಿನಿಮಾ ರೀತಿಯ ಕತೆಗಳು, ಕೆಲವೊಮ್ಮೆ ಕೆಲವು ಐತಿಹಾಸಿಕ ರಾಜರುಗಳ ದಂತ ಕತೆಗಳಾಗಿರುತ್ತವೆ. ಇಡೀ ರಾತ್ರಿ ನಡೆಯುವ ಒಂದೇ ಪ್ರಸಂಗವೆಂದರೆ ಈಗ ಹೊಸ ಪ್ರಸಂಗಗಳು ಮಾತ್ರ. ಈ ವಿಷಯದಲ್ಲಿ ‘ಸಂಪ್ರದಾಯ’ದಂತೆ ನಡೆಯುವ ಆಟ ಇವು ಮಾತ್ರ. (ಕ್ಷೇತ್ರ ಮಹಾತ್ಮೆ, ದೇವಿ ಮಹಾತ್ಮೆಯನ್ನು ಸೇರಿಸಿಲ್ಲ, ಹಲವು ಕ್ಷೇತ್ರ ಮಹಾತ್ಮೆಗಳು ಹೊಸ ಪ್ರಸಂಗವನ್ನೇ ಹೋಲುತ್ತವೆ). ಯಕ್ಷಗಾನದ ಆವರಣವನ್ನು ಇಡೀ ರಾತ್ರಿ ಒಂದೇ ಪ್ರಸಂಗದಿಂದ ಕಾಯ್ದುಕೊಳ್ಳುವುದಕ್ಕೆ ಅವಕ್ಕೆ ಸಧ್ಯಕ್ಕೆ ಸಾಧ್ಯವಾಗುತ್ತಿದೆ. ಕೆಲವು ಪ್ರಸಂಗಗಳಲ್ಲಿ ಹಲವು ಪಾತ್ರಗಳು ಬಂದು, ಪಂಚತಂತ್ರದ ಕತೆಗಳಂತೆ ಹಲವು ಉಪಕತೆಗಳು ಸೇರಿ ಅದರ ಸಾರವನ್ನು ಸುಲಭವಾಗಿ ಗ್ರಹಿಸಲೇ ಸಾಧ್ಯವಿಲ್ಲದಂತಿರುತ್ತದೆ. ಉದಾಹರಣೆಗೆ ಗೋಕುಲಾಷ್ಟಮಿ ಪ್ರಸಂಗದಲ್ಲಿ, ಹೆಸರೇ ಹೇಳುವಂತೆ ಗೋವಿನ ಮಹತ್ವವನ್ನು ಸಾರುವ, ಗೋವಧೆ ಮಾಡುವವರನ್ನು ಶಿಕ್ಷಿಸಿ ಅದರ ಮೂಲಕ ಪುಣ್ಯವನ್ನು ಪಡೆಯುವ ಕತೆ. ಇದನ್ನು ಗೋ ರಕ್ಷಕರು ತಮ್ಮ ತತ್ವ ಸಿದ್ಧಾಂತದ ಪ್ರಚಾರಕ್ಕಾಗಿ ಬರೆಸಿದ್ದಾರೆ ಎಂದು ಅನ್ನಿಸುವಷ್ಟು ಅದರಲ್ಲಿ ಬರುವ ವಾದ ವಿವಾದಗಳು, ಆಪಾದನೆಗಳು ನೇರವಾಗಿದೆ. ಹಾಗಿದ್ದರೂ ಪ್ರಸಂಗದ ಸಂಕುಚಿತ ಆಶಯದಿಂದ ಆಟ ರಂಗದಲ್ಲಿ ಗೆಲ್ಲುವುದು ಅದರ ರಂಜನೆಯ ಗುಣದಿಂದ. ಹಾಸ್ಯವೇ ಹೆಚ್ಚಿನ ಹೊಸ ಪ್ರಸಂಗಗಳಲ್ಲಿನ ಪ್ರಧಾನಪಾತ್ರ.
ಹಾಸ್ಯ ಪಾತ್ರಗಳು ತಮ್ಮ ಆವರಣದೊಳಗೇ ಕೇಂದ್ರ ಆಶಯಕ್ಕೆ ‘ಅನೌಚಿತ್ಯ’ವಾಗಿರುವ ಮಾತುಗಳನ್ನು ಆಡುವುದೂ ಇಂತಹ ಪ್ರಸಂಗಗಳನ್ನು ರಕ್ಷಿಸುತ್ತದೆ. ನಿತ್ಯ ಬದುಕಿನ ವಿವರಣೆಗಳು, ಸಂಸಾರದ ತೊಂದರೆಗಳು, ಎಲ್ಲರ ಬದುಕಿನಲ್ಲಿ ಎದುರಾಗುವ ಹಳವಂಡಗಳು ಅವರ ಮಾತುಗಳಲ್ಲಿ ಬರುತ್ತದೆ. ಪ್ರಸಂಗವನ್ನು ಒಂದು ನಾಟಕವೆಂದು ನೆನಪಿಸುವುದೂ ಅವರೇ. ಕತೆಯಿಂದ ಹೊರಗೆ ಹೋದಷ್ಟೂ ಕತೆಯೊಳಗಿನ ತನ್ಮಯತೆ ಕಡಿಮೆಯಾಗುತ್ತದೆ. ಪ್ರಸಂಗವೆಂದರೆ ಹಲವು ರಸವತ್ತಾದ ಸನ್ನಿವೇಶಗಳಿರುವ ಒಂದು ಆಟವಾಗುತ್ತವೆ. ಅದು ಪೂರ್ತಿಯಾಗುವುದು ಬೆಳಗಿನ ಜಾವದಲ್ಲಿ. ಕತೆಯಾಗಲಿ, ಅದರಲ್ಲಿ ಬರುವ ಹಲವು ಸನ್ನಿವೇಶಗಳಾಗಲಿ ಅವು ಒಂದಕ್ಕೊಂದು ಜೋಡಣೆಯಾಗುವ ಕಾಲದಲ್ಲಿ ಅಂದರೆ ಬೆಳಗಿನ ಜಾವದಲ್ಲಿ ನೆನಪಿರುವುದಿಲ್ಲ. ಗೋಕುಲಾಷ್ಟಮಿ ನೋಡಿದ ಮರುದಿನ ಮಾತನಾಡುವಾಗ, “ಅದೆಂತ ಕತೆ, ಎಲ್ಲಿಂದ ಎಲ್ಲಿಗೊ ಹೋಯಿತು. ಆದರೆ ಹಾಸ್ಯ, ಪದ ಚೆನ್ನಾಗಿತ್ತಲ್ಲ, ಘಟ್ಟದ ಮೇಲಿನ ಹುಡುಗಿಗೆ ಕುಂದಾಪುರದ ಹುಡುಗ. ಈಗ ಹುಡುಗರಿಗೆ ಹುಡುಗಿ ಸಿಗುವುದು ಕಷ್ಟ ಅಲ್ಲವಾ?”
ಅವರಿಗೆ ಯಾವುದು ನೆನಪಿರುತ್ತದೆಯೆಂದರೆ ಅಲ್ಲಿನ ಹಾಸ್ಯ ಪಾತ್ರಗಳು ಮಾಡಿದ ರಾಜನ ವಿಮರ್ಶೆ, ಮದುವೆಗಾಗಿ ಮಾಡಿಕೊಳ್ಳಬೇಕಾದ ರಾಜಿಗಳು, ಸಂಬಂಧಗಳ ಟೊಳ್ಳುತನ ಮುಂತಾದವು. ಯಕ್ಷಗಾನದ ರಂಜನೆಯ ಗುಣವೇ ಇಲ್ಲಿ ಪ್ರಸಂಗದ ಒಟ್ಟು ಆಶಯವನ್ನು ಮರೆಮಾಚಿ, ಅದನ್ನು ಒಂದು ವರ್ತಮಾನ ಸಮಾಜದ ಫ್ರತಿಫಲನವನ್ನಾಗಿ ಮಾಡುತ್ತದೆ. ಹಾಸ್ಯಗಾರರ ಮಾತು ನಿತ್ಯ ಜೀವನದ ಅನುಭವದ ಸತ್ಯ ಹೇಳುತ್ತಾ ಪ್ರಸಂಗಕ್ಕೆ ಸೆಡ್ಡು ಹೊಡೆಯುತ್ತದೆ. ಹೊಸ ಪ್ರಸಂಗ ಮತ್ತು ಪೌರಾಣಿಕ ಪ್ರಸಂಗಗಳೆರಡನ್ನು ನೋಡುವವರು ಹೊಸ ಪ್ರಸಂಗಗಳಲ್ಲಿ ವರ್ತಮಾನದ ಮಾತುಗಳನ್ನು ಇಷ್ಟಪಟ್ಟರೂ ಪೌರಾಣಿಕ ಪ್ರಸಂಗಗಳಲ್ಲಿ ಅದನ್ನು ಔಚಿತ್ಯವಲ್ಲ ಅನ್ನುತ್ತಾರೆ.
ಹಲವು ಹೊಸ ಪ್ರಸಂಗಗಳ ಮೌಲ್ಯಗಳು ಕೂಡ ಪುರಾಣದ ಮೌಲ್ಯವೇ ಆಗಿವೆ. ಅಂದರೆ ದುಷ್ಟ ಶಿಕ್ಷಣ, ಶಿಷ್ಟ ರಕ್ಷಣ. ಯಾವುದು ಪೌರುಷದ ಲಕ್ಷಣ, ಯಾವುದು ಹೇಡಿಯ ಲಕ್ಷಣ, ಯಾವುದು ದರ್ಶನ, ಯಾವುದು ಸುಂದರ, ಯಾವುದು ಕುರೂಪ ಎಲ್ಲವೂ ಹೊಸ ರೂಪದಲ್ಲಿ ಮತ್ತೆ ಬರುತ್ತದೆ.
ಒಬ್ಬ ಪ್ರೇಕ್ಷಕರು ಹೊಸ ಪ್ರಸಂಗವನ್ನು 15-16 ಬಾರಿ ನೋಡುವವರು, ಪೌರಾಣಿಕ ಪ್ರಸಂಗ ನೋಡುವ ರೀತಿ ಬೇರೆ, ಹೊಸ ಪ್ರಸಂಗ ನೋಡುವ ರೀತಿ ಬೇರೆ. ಹೊಸ ಪ್ರಸಂಗ ಹಿಂದೆ ಆಗಿರುವುದಿಲ್ಲ. ನಮಗೆ ಯಾವುದೊ ಒಂದು ಪಾತ್ರವನ್ನೊ, ಅಥವಾ ನಡೆಯನ್ನೊ ನೋಡಿ ಮಾದರಿಯಾಗಿರುವುದಿಲ್ಲ. ಹಾಗಾಗಿ ಪೂರ್ವಗ್ರಹಗಳಿಲ್ಲದೆ ಹೋಗಿ ನೋಡುತ್ತೇವೆ. ಮಾತಿನಲ್ಲಿ ಪ್ರಸ್ತುತ ರಾಜಕೀಯ, ಹಾಸ್ಯ ಮುಂತಾದವುಗಳಲ್ಲಿ ವರ್ತಮಾನದ ವಿಶಯಗಳು ಬಂದರೆ ಕೆಟ್ಟದೆನಿಸುವುದಿಲ್ಲ. ಹಲವು ಸಲ ಹಾಸ್ಯ ಪಾತ್ರಗಳು ಹೇಳುವುದೇ ಸರಿ ಎನಿಸುತ್ತದೆ. ಆಗ ಸಿಳ್ಳೆ ಚಪ್ಪಾಳೆ ಹೊಡೆಯುತ್ತೇವೆ. ಅದೇ ಪೌರಾಣಿಕ ಪ್ರಸಂಗದಲ್ಲಿ ಅಂತಹ ಮಾತುಗಳಾಡಿದರೆ ಯಾಕೊ ಸರಿಯಾಗುವುದಿಲ್ಲ ಎನ್ನುತ್ತಾರೆ.
ಹೊಸ ಪ್ರಸಂಗ ನೋಡುವುದಕ್ಕೆ ಹೋಗುವುದು ಖುಷಿಪಡುವುದಕ್ಕೆ, ಒಮ್ಮೊಮ್ಮೆ ಅದರಲ್ಲಿ ಕಲಿಕೆಯ ವಿಷಯಗಳು ಇರುತ್ತವೆ. ಆದರೆ ಪೌರಾಣಿಕ ಪ್ರಸಂಗಗಳು ಯಾರು ಮಾಡಿದರೂ ಸರಿಹೋಗುವುದಿಲ್ಲ. ನಮಗೆ ಮುಂಚಿಂದಲೂ ರಾಮಾಯಣ, ಭಾರತ ಕತೆಗಳು ಗೊತ್ತಿರುತ್ತವೆ. ಅದಕ್ಕೆ ಒಂದು ಕಲ್ಪನೆಯು ಬಂದಿರುತ್ತದೆ. ಅದನ್ನು ಯಾವುದೊ ಒಂದು ಗುಂಪಿನ ಕಲಾವಿದರ ಚಿತ್ರಣಕ್ಕೆ ಹೊಂದಿಸಿಕೊಂಡಿರುತ್ತೇವೆ. ಹಾಗೆ ಬರಲಿಲ್ಲ ಅಂದರೆ ಅವತ್ತಿನ ಪ್ರಸಂಗವನ್ನು ನೊಡಲಾಗುವುದಿಲ್ಲ. ಅದಕ್ಕೆ ಹೊಸ ಪ್ರಸಂಗಕ್ಕಿಂತ ಹಳೆ ಪ್ರಸಂಗಕ್ಕೆ ಎದ್ದು ಹೋಗುವುದು ಜಾಸ್ತಿ ಎನ್ನುತ್ತಾರೆ. ಅದು ಈಗೀಗ ಪೌರಾಣಿಕ ಪ್ರಸಂಗವೆಂದರೆ ಎರಡು ಮೂರು ಇಡುತ್ತಾರೆ, ಒಂದು ಪ್ರಸಂಗ ದೀರ್ಘವಾಗಿ ಉಳಿದವಕ್ಕೆ ಸಮಯ ಸಾಕಾಗುವುದಿಲ್ಲ ಎನ್ನುವುದು ಇನ್ನೊಬ್ಬ ಹೊಸ ಪ್ರಸಂಗಗಳ ಖಾಯಂ ಪ್ರೇಕ್ಷಕರ ಅಭಿಪ್ರಾಯ.
ಪೌರಾಣಿಕ ಪಾತ್ರಗಳ ಹಿಂದಿನ ರೂಢಿಗತ ನಡೆಯೇ ವರ್ತಮಾನದ ಹೊಸ ಘಟನೆಗಳಿಗೆ ನೇರವಾಗಿ ಸ್ಪಂದಿಸುವ ಅವಕಾಶವನ್ನು ಕಳೆಯುತ್ತವೆ. ಕಂಸನ ಸಾವಿನ ಭಯ ಪ್ರಕಟಗೊಳ್ಳುವ ವಿವಿಧ ಆಯಾಮಗಳು, ಕರ್ಣನ ತುಮುಲ, ಅಂಬೆಯ ಸೇಡು ಎಲ್ಲವೂ ಸಮುದಾಯದ ಅಲೋಚನೆಯ ಭಾಗವಾಗಿ ಬರದೇ ಆಯಾ ಪಾತ್ರ ಮಾಡಿದ ಪಾತ್ರಧಾರಿಯ ಒಂಟಿ ಆಲೋಚನೆಯಾಗಿ ಮತ್ತು ಪಾತ್ರದ ಯಥಾಸ್ಥಿತಿಯ ತುಮುಲವನ್ನು ಅರ್ಥೈಸಿಕೊಳ್ಳಲು ಮತ್ತು ಭಾವನಾತ್ಮಕವಾಗಿ ಪಾತ್ರಕ್ಕೆ ಸ್ಪಂದಿಸುವಲ್ಲಿ ನೋಡುಗರ ಪ್ರತಿಕ್ರಿಯೆ ನಿಲ್ಲುತ್ತದೆ. ಗೋಕುಲಾಷ್ಟಮಿಯಲ್ಲೆ ಬರುವ ಅಂಬರ ಎನ್ನುವ ಯುವಕ ಮಯೂರಿಗೆ, ನನ್ನ ತಾಯಿ ಯಾರಿಗೊ ಕಳ್ಳ ಬಸಿರಾಗಿ ಕಾಡಿನಲ್ಲಿ ಬಿಸುಟು ಹೋದವಳು, ಹೆಂಗಸರು ಅಂದರೆ ಹೀಗೆಯೆ ಅಂದಾಗ, ಅದಕ್ಕೆ ಮಯೂರಿ, ಯಾರೂ ಗಾಳಿಗೆ ಬಸಿರಾಗಲ್ಲ, ಯಾರಿಗೊ ಅಂದ್ಯಲ್ಲ ಅವನೇನು ಮಾಡ್ತಿದ್ದ? ಅವನು ಅವಳನ್ನ ನೋಡಿಕೊಂಡಿದ್ದರೆ ತಾಯಿ ನಿನ್ನ ಬಿಡುತ್ತಿದ್ದಳಾ? ಹೆಂಗಸರ ಬಟ್ಟೆ ಸರಿ ಇಲ್ಲ, ಕಾಲು ತೋರಿಸುತ್ತಾರೆ, ಮೈ ತೋರಿಸುತ್ತಾರೆ ಅನ್ನುತ್ತಾರಲ್ಲ, ಗಂಡಸರ ನೋಟ ಸರಿ ಇಲ್ಲ, ಅವರ ತಲೆಯಲ್ಲಿ ಇರೋದು ಎಲ್ಲಾ.. ಅದನ್ನೆ ಹೆಂಗಸರ ಮೇಲೆ ಹೇರುತ್ತಾರೆ. ಹೆಂಗಸರು ಏನು ಮಾಡಿದರೂ ತಪ್ಪು. ಎಲ್ಲದಕ್ಕೂ ಯಂತ್ರ ಬರಬೋದು ಆದರೆ ಸಂತತಿಯನ್ನು ಮುಂದುವರೆಸೋದು ಹೆಣ್ಣು, ನಿಂತ ನೆಲ ಹೆಣ್ಣು, ಸರಸ್ವತಿ, ಲಕ್ಷ್ಮೀ ಹೆಣ್ಣು ಎನ್ನುವ ಮಾತುಗಳನ್ನು ಆಡುತ್ತಾಳೆ. ಮುಂದೆ ಅವಳ ಜೀವನವೂ ಅಂಬೆಯ ಜೀವನದಂತಲ್ಲದೆ ‘ಸಮಾಜ ಒಪ್ಪುವ’ ಒಳ್ಳೆಯ ಗಂಡನನ್ನು ಪಡೆಯುವ ಬದುಕಾಗುವುದರಿಂದ, ಈ ಮಾತುಗಳಿಗೆ ಪರಿಣಾಮಗಳು ಹೊಸ ಪ್ರಸಂಗಗಳಲ್ಲಿ ಹೆಚ್ಚು. ಇಲ್ಲಿ ಸಮುದಾಯಕ್ಕೆ ಸಂಭಾಷಣೆ ಸಾಧ್ಯವಾಗುತ್ತದೆ.
ಇದರ ಜೊತೆಗೆ ಹೊಸ ಪ್ರಸಂಗದ ಹಾಸ್ಯ, ಮತ್ತು ವೃತ್ತಿ ಮೇಳದ ಇಡೀ ರಾತ್ರಿಯಲ್ಲಿ ‘ಎಲ್ಲೆಂದರಲ್ಲಿ ಎಳೆಯುವುದಕ್ಕೆ’ ಸಮಯವೂ ಇರುವುದರಿಂದಲೂ ಇರಬಹುದು, ಯಕ್ಷಗಾನದಲ್ಲಿ ಬರುವ ಹಾಸ್ಯಕ್ಕೆ ಇನ್ನೊಂದು ಶಕ್ತಿಯೂ ಇದೆ ಅನ್ನಿಸುತ್ತದೆ. ಒಬ್ಬರೊಬ್ಬರು ಗೇಲಿ ಮಾಡಿಕೊಳ್ಳುವುದು. ಅವರ ಕೆಲಸ, ಜಾತಿಯ ಸಿದ್ಧಗ್ರಹಿಕೆಯನ್ನು ಹೇಳುವುದು, ಎದುರಿನ ಇನ್ನೊಂದು ಪಾತ್ರ ಆ ಪೂರ್ವಗ್ರಹಗಳ ಸಮಸ್ಯೆಗಳನ್ನು ತೋರಿಸುವುದು ನಡೆಯುತ್ತದೆ. ಇದು ಸಮಾಜಕ್ಕೆ ಕನ್ನಡಿಯನ್ನಿಟ್ಟು ವಿಮರ್ಶಿಸಿಕೊಳ್ಳುವ ಸ್ವಾತಂತ್ರ್ಯವನ್ನು ಕೊಡುತ್ತದೆ. ಅಥವಾ ಅಂತಹ ವಿಮರ್ಶೆಯನ್ನು ಸಮಾಜದ ಹೊರಗೆ ಇಟ್ಟುಕೊಳ್ಳುವ ಜಾಗವನ್ನು ಯಕ್ಷಗಾನವು ಕೊಡುತ್ತದೆ. ಜೈಜೆಕ್ ಎನ್ನುವ ಸಮಾಜವಿಜ್ಞಾನಿ, ಯುಗೊಸ್ಲಾವಿಯದ ಬಗ್ಗೆ ಹೇಳುತ್ತಾ 80ರ ದಶಕದಲ್ಲಿ ಒಬ್ಬರಿಗೊಬ್ಬರು ಜನಾಂಗೀಯ ಹಾಸ್ಯಗಳನ್ನು ಮಾಡುವುದು ನಡೆಯುತ್ತಾ ಇದ್ದಾಗ ಸಮಾಜ ಸ್ವಾಸ್ಥ್ಯದಲ್ಲಿತ್ತು, ಆ ರೀತಿಯ ಅವಕಾಶಗಳು ಮರೆಯಾಗುವ ಹೊತ್ತಿಗೆ 90 ರ ದಶಕದಲ್ಲಿ ಜೀವ ನಿರ್ನಾಮವಾಗತೊಡಗಿತ್ತು ಎಂಬುದನ್ನು ಗಮನಿಸಿದ್ದಾರೆ. ಈಗ ಯಕ್ಷಗಾನದ ಹಾಸ್ಯ ಪಾತ್ರಗಳೂ ರಂಗದಲ್ಲೇ ‘ಇದನ್ನು ಈಗ ಹೇಳುವ ಹಾಗಿಲ್ಲ ಮರ್ರೆ, ಯಾರು ನಾಳೆಯ ಹಗಲು ರಸ್ತೆಯಲ್ಲಿ ನಿಲ್ಲಿಸಿ ತದುಕುತ್ತಾರೊ ಏನೊ’ ಎನ್ನುವ ಮಾತೂ ಇವತ್ತಿನ ಸ್ಥಿತಿಯನ್ನು ಪ್ರತಿಫಲಿಸುತ್ತದೆ.
ಒಬ್ಬ ಪ್ರೇಕ್ಷಕಿ, ತಾಳಮದ್ದಲೆ ಪರಂಪರೆಯ ಬಗ್ಗೆ ಮಾತನಾಡುತ್ತಾ ಹೊಸ ಪ್ರಸಂಗಗಳು ತಾಳಮದ್ದಲೆಯಲ್ಲೂ ಬರಬೇಕು. ಈ ಸಂಸ್ಕೃತ ಶ್ಲೋಕ ಉದ್ಧರಿಸುವವರೂ, ಹಾಗೆ ವೇದದಲ್ಲಿದೆ, ಹೀಗೆ ಪುರಾಣದಲ್ಲಿದೆ ಎಂದು ವಾದ ಮಾಡುವುದು ಸಾಕು, ಅವರಲ್ಲಿ ಈಗ ನಿಮ್ಮದೇನು ಹೇಳಿ ಅನ್ನುವ ಹಾಗಾಗುತ್ತದೆ. ಆಗ ಕೊನೆಪಕ್ಷ ಯಾವುದೋ ವಿಷಯವನ್ನು ವೇದದಲ್ಲಿದೆ ಎಂದು ಹೇಳಲು ಆಗದೆ ಹೊಸ ‘ವೇದ’(ಕೆನಾನ್)ವೇ ಹುಟ್ಟಬಹುದು ಎಂದರು.
ಹೊಸ ಪ್ರಸಂಗಗಳು ಪೌರಾಣಿಕವಾದರೆ ಸರಿ ಎನ್ನುವ ಇನ್ನೊಂದು ವರ್ಗದವರಿದ್ದಾರೆ. ಅವರಿಗೆ ಹೊಸತೋಟ ಮಂಜುನಾಥ ಭಾಗವತರ ಪ್ರಸಂಗಗಳು ಪರವಾಗಿಲ್ಲ. ಬೇಡರ ಕಣ್ಣಪ್ಪನ ತನಕವೂ ಪರವಾಗಿಲ್ಲ ಆದರೆ ಉಳಿದ ಪ್ರಸಂಗಗಳು ಆಗವು. ಹೊಸಪ್ರಸಂಗಗಳ ಮೇಲಿನ ಇನ್ನೊಂದು ಅಪವಾದವೆಂದರೆ ಅವು ನಿಲ್ಲುವುದಿಲ್ಲ ಎನ್ನುವುದು. ಪ್ರತಿ ವರ್ಷ ಹೊಸ ಹೊಸದು ಬರುತ್ತದೆ. ಆದರೆ ಪೌರಾಣಿಕ ನೋಡಿ ನಮಗೆ ಎಷ್ಟು ಸಲ ನೋಡಿದರು ಬೇಜಾರಾಗುವುದಿಲ್ಲ. ಯಾವಾಗಲೂ ಇರುತ್ತದೆ ಅನ್ನುತ್ತಾರೆ. ಆದರೆ ಅವರಿಗೆ ಕೆಲವು ಪ್ರಸಂಗಗಳು ಮತ್ತೆ ಮತ್ತೆ ಆಡುವುದನ್ನು ತೋರಿಸಿದರೆ, ಸ್ವಲ್ಪ ಹಳೆಯ ಹೊಸ ಪ್ರಸಂಗಗಳು ಅಡ್ಡಿ ಇಲ್ಲ ಅನ್ನುತ್ತಾರೆ.
ಒಟ್ಟಿನಲ್ಲಿ ಸಮಷ್ಟಿ ಪ್ರಜ್ಞೆಯ ಭಾಗವಾಗಿ ಮೂಡಿ ಬರುವ ಹೊಸ ಅಲೋಚನೆಗಳು ಯಕ್ಷಗಾನದಲ್ಲಿ ಮುನ್ನೆಲೆಗೆ ಬರುವುದು ಹೊಸ ಪ್ರಸಂಗಗಳಲ್ಲಿ.
ಕೃತಿ ಹೊಸನಗರ ತಾಲ್ಲೂಕಿನ ಪುರಪ್ಪೇಮನೆ ಗ್ರಾಮದವರು. ಕೃಷಿಕರು. ಬಿಡುವಿನಲ್ಲಿ ಮಹಿಳಾ ತಾಳಮದ್ದಲೆ ತಂಡ, ಭಾಗವತಿಕೆ, ಬರವಣಿಗೆ ಹಾಗೂ ಅನುವಾದದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.