ನಾವಿದ್ದ ಅಪಾರ್ಟ್‌ಮೆಂಟಿನ ಮನೆಯನ್ನು ಸ್ವಚ್ಛ ಮಾಡಲು ಬರುತ್ತಿದ್ದ ಹದಿನೈದೋ ಹದಿನಾರೋ ಪ್ರಾಯದ ಬೆಂಗಾಲಿ ಹುಡುಗಿಯ ಬದುಕುವ ದರ್ದಿಗೆ ನಾನು ಬೆರಗಾಗಿದ್ದೆ. ಮಾತನಾಡಿಸಿದರೆ ಏನೊಂದೂ ಮಾತನಾಡದ, ಏನಾದರೂ ಪ್ರಶ್ನೆ ಕೇಳಿದರೆ ಸುಮ್ಮನೆ ನಕ್ಕುಬಿಡುತ್ತಿದ್ದ ಆ ಹುಡುಗಿ ತನ್ನ ತಾಯಿಯ ಜೊತೆಗೆ ಇಬ್ಬರು ತಂಗಿಯರನ್ನೂ ಬಂಗಾಳದ ಯಾವುದೋ ಹಳ್ಳಿಯಿಂದ ಕರೆದುಕೊಂಡು ಬಂದು ತಾನೊಬ್ಬಳೇ ದುಡಿಯುತ್ತಾ ಅವರನ್ನೆಲ್ಲಾ ಸಾಕುತ್ತಿದ್ದ ಪರಿ ನನ್ನಲ್ಲಿ ಸೋಜಿಗ ಹುಟ್ಟಿಸುತ್ತಿತ್ತು. ಮುಂಬೈಯಂತಹ ನಗರಗಳಲ್ಲಿ ಒಂಟಿ ಮಹಿಳೆಯರು ಒಂಟಿ ಹುಡುಗಿಯರು ಜೀವ ಕೈಯಲ್ಲಿ ಹಿಡಿದೆ ದುಡಿಯುತ್ತಿರುತ್ತಾರೆ.
ʻತಳಕಲ್ ಡೈರಿʼಯಲ್ಲಿ ಮುಂಬೈ ಮಹಾನಗರಿಯ ಬೆರಗಿನ ದಿನಗಳನ್ನು ಹಂಚಿಕೊಂಡಿದ್ದಾರೆ ಇಸ್ಮಾಯಿಲ್ ತಳಕಲ್
ಆ ಸಂಜೆ ಬೀದಿ ದೀಪಗಳ ಹೊಟ್ಟೆ ಹೊಡೆದು ಬೆಳಕು ನಿಧಾನಕ್ಕೆ ಸುರಿಯತೊಡಗಿದಂತೆ ಮರೀನ್ ಡ್ರೈವ್ ಬೀಚಿನಲ್ಲಿ ಅರಬ್ಬಿ ಸಮುದ್ರದ ಅಲೆಗಳಿಗೆ ಮತ್ತಷ್ಟೂ ಹುರುಪು ಬಂದಂತಾಗಿ ಮೇಲಕ್ಕೆ ಪುಟಿದು ಕೆಳಕ್ಕೆ ಜಿಗಿಯುವ ಆಟವಾಡತೊಡಗಿದ್ದವು. ಮುಂಬೈ ನಗರಕ್ಕೆ ಬೆನ್ನು ಮಾಡಿ ಕಡಲಿಗೆ ಎದುರುಗೊಂಡು ಕುಳಿತಿದ್ದ ನಾನು ಕಾಲ್ಬೆರಳುಗಳಿಗೆ ಮುತ್ತಿಕ್ಕಿ ಹೋಗುತ್ತಿದ್ದ ನೀರಿನಲ್ಲಿ ವಕ್ರ ವಕ್ರವಾಗಿ ಮೂಡುತಿದ್ದ ನನ್ನದೇ ಪ್ರತಿಬಿಂಬವನ್ನು ಹಿಡಿಯಲೆತ್ನಿಸುತ್ತಿದ್ದೆ. ಮೂರು ಕಿಲೋಮೀಟರ್‌ನಷ್ಟು ಉದ್ದವಿದ್ದ ಮರೀನ್ ಡ್ರೈವ್ ಬೀಚನ್ನು ಒಂದು ಸುತ್ತು ಹಾಕಿ ಬಂದ ಆಯಾಸವೆಲ್ಲ ಕಡಲಿನ ಅಲೆಗಳು ದಡ ಮುಟ್ಟಿ ಹಿಂದಕ್ಕೆ ಹೋಗುವಾಗ ತೆಗೆದುಕೊಂಡು ಹೋದಂತ ಅನುಭವ. ಅಲ್ಲಿ ತುಂಬಾ ಜನರು ಕಡಲಿಗೆ ಮುಖ ಮಾಡಿಯೋ ಬೆನ್ನು ಮಾಡಿಯೋ ಓಡಾಡುತ್ತಿದ್ದರೂ ಅವು ಯಾವವೂ ಗುರುತುಗಳಿಲ್ಲದ ಚಹರೆಗಳು. ಆದರೆ ಪ್ರತಿ ಚಹರೆಗಳಲ್ಲಿಯೂ ಒಂದೊಂದು ಕತೆಯ ಕುರುಹು ಕಂಡಂತಾಗಿ ನನ್ನಂತೆಯೇ ಅವೂ ಏನನ್ನೋ ಹುಡುಕಿ ಅಲ್ಲಿಗೆ ಬಂದಿರಬೇಕೆನಿಸಿತ್ತು.
ಈ ಮಾಯಾನಗರಿಯಲ್ಲಿ ಹುಡುಕಿದರೆ ಏನು ಬೇಕಾದರೂ ಸಿಕ್ಕಿಬಿಡುತ್ತದೆಯಾದರೂ ಮನಸು ಖಾಲಿ ಖಾಲಿಯಾಗಿ ಮತ್ತೆ ಕಡಲ ಹುಡುಕಿ ದಂಡಗೆ ಬಂದು ಹೀಗೆ ಕೂಡಿಸಿಬಿಡುತ್ತದೆ. ‘ಸರ್ ನಡೆಯಿರಿ, ತಡವಾಗ್ತಾಯಿದೆ’ ನನ್ನ ಸಹೋದ್ಯೋಗಿ ಮತ್ತೆ ಕೂಗಿದ. ನಮ್ಮ ಅಪಾರ್ಟ್‌ಮೆಂಟಿಗೆ ಮರಳಿ ಹೋಗಲು ಆಗಲೇ ಸಮಯವಾಗಿತ್ತು. ಅಲ್ಲಿಯವನೇ ಆಗಿದ್ದ ಆ ಸಹೋದ್ಯೋಗಿ ಅಂದು ಭಾನುವಾರವಾಗಿದ್ದರಿಂದ ಮುಂಬೈ ತೋರಿಸಲು ಕರೆದುಕೊಂಡು ಬಂದಿದ್ದ. ದಿನಪೂರ್ತಿ ಲೋಕಲ್ ಟ್ರೇನ್‌ಗಳಲ್ಲಿ ಸುತ್ತಾಡಿ ಅಂಧೇರಿ ದಾದರ್‌ಗಳಲ್ಲಿಳಿದು ಒಂದಿಷ್ಟು ಶಾಪಿಂಗ್ ಮಾಡಿ ಇಂಡಿಯಾ ಗೇಟ್, ತಾಜ್ ಹೋಟೆಲ್‌ಗಳ ಮುಂದೆ ನಿಂತು ಪೋಸು ಕೊಟ್ಟು ಫೋಟೊ ಕ್ಲಿಕ್ಕಿಸಿಕೊಂಡ ಖುಷಿಗೆ ಲೆಕ್ಕವಿದ್ದಿಲ್ಲ. ಛತ್ರಪತಿ ಶಿವಾಜಿ ಟರ್ಮಿನಲ್ ರೈಲ್ವೆ ನಿಲ್ದಾಣಕ್ಕೆ ಬಂದಾಗ ಅಲ್ಲಿ ಭಯೋತ್ಪಾದಕರ ದಾಳಿಯಾಗಿದ್ದು ನೆನಪಾಗಿ ಒಂದು ಕ್ಷಣ ಭಯವಾಯಿತು. ಅಲ್ಲಿಯ ದೊಡ್ಡ ದೊಡ್ಡ ಕಂಬಗಳ ಮೇಲಿನ ಚಿತ್ತಾರಗಳು ಬಂದೂಕಿನ ಗುಂಡುಗಳಿಗೆ ಸಿಡಿದ ರಕ್ತದ ಕಲೆಗಳಂತೆ ಕಂಡರೆ ಗೋಡೆಗಳ ಬಿರುಕಿನಿಂದ ಬರುತ್ತಿದ್ದ ಗಾಳಿ ಯಾವುದೋ ಚೀತ್ಕಾರಗಳನ್ನು ಹೊತ್ತು ತರುತ್ತಿದೆಯೇನೋ ಎನ್ನುವಂತೆ ಭಾಸವಾಗುತ್ತಿತ್ತು. ಅಲ್ಲಿ ಅಂತಹದ್ದೇನೂ ನಡೆದೇ ಇದ್ದಿಲ್ಲ ಎನ್ನುವಂತೆ ಚಲಿಸತೊಡಗಿದ್ದ ಟ್ರೇನುಗಳು, ಅದರೊಳಗೆ ನೂಕುತ್ತಲೇ ಹತ್ತಿ ನೂಕುತ್ತಲೇ ಇಳಿಯುತ್ತಿದ್ದ ಜನರ ಓಡಾಟವೂ ಸಹಜವೆಂಬಂತೆ ತೋರಿತು. ಈ ಜಗತ್ತಿಗೆ ಗಾಯಗಳನ್ನು ಬಹು ಬೇಗ ಮರೆಯುವ ಶಕ್ತಿ ಇದೆ. ಆ ಶಕ್ತಿ ಇರುವುದರಿಂದಲೇ ಇತಿಹಾಸದಲ್ಲಿ ಆದ ಯುದ್ಧಗಳನ್ನು ದಾಳಿಗಳಗಳನ್ನು ಯಾವೊಂದನ್ನು ನೆನಪಿಸಿಕೊಳ್ಳದೆ ತನಗೇನೂ ಗೊತ್ತೆ ಇಲ್ಲವೆನ್ನುವಂತೆ ಈ ಜಗತ್ತು ತಿರುಗುತ್ತಲೇ ಇದೆ.
ಕರ್ನಾಟಕದಲ್ಲಿಯೇ ಒಳ್ಳೆಯ ಉದ್ಯೋಗವಿದ್ದರೂ ನಮ್ಮ ಎನ್‌ಜಿಓ ಸಂಸ್ಥೆಯ ಬೇರೆ ಬೇರೆ ಶಾಖೆಗಳು ದೇಶಾದ್ಯಂತ ತೆರೆಯತೊಡಗಿ ಮುಂಬೈನಲ್ಲಿಯೂ ಪ್ರಾರಂಭವಾಗಿದ್ದರಿಂದ ಈ ನಗರದ ಸೆಳೆತಕ್ಕೆ ಒಳಗಾಗಿ ಮತ್ತೇನನ್ನೋ ಹುಡುಕಿ ಇಲ್ಲಿಗೆ ಬಂದಿದ್ದೆ. ಮುಂಬೈ ಎಂದರೆ ಬರೀ ಕನಸು ಕಾಣುವಂತಾಗಿದ್ದವನು ಈಗ ಅದರ ಒಡಲೊಳಗೆ ಬಂದು ಬಿದ್ದ ಖುಷಿಗೆ ಹೊಸತನದ ರೋಮಾಂಚನಕ್ಕೆ ಬೆರಗುಗೊಂಡಿದ್ದೆ. ಇದೊಂದು ಪುಟ್ಟ ಭಾರತ. ಇಲ್ಲಿ ನಿವೇನಾದರೂ ಹತ್ತು ಜನರ ಗುಂಪು ಕಂಡರೆ ಅದರಲ್ಲಿ ಏಳು ಜನರೂ ಏಳು ರಾಜ್ಯದವರಾಗಿರುತ್ತಾರೆ. ನನ್ನ ಜೊತೆ ಕೆಲಸ ಮಾಡುತ್ತಿದ್ದವರು ಮರಾಠಿಗರು, ನಮ್ಮ ಮೇಲಾಧಿಕಾರಿ ಗುಜರಾತಿ, ನಮ್ಮ ವಾಹನದ ಚಾಲಕ ಉತ್ತರ ಪ್ರದೇಶದವನು, ನಮಗೆ ಊಟ, ನಾಸ್ಟಾ ಕೊಡುತ್ತಿದ್ದವರು ರಾಜಸ್ಥಾನಿಗಳು, ಮನೆ ಸ್ವಚ್ಛ ಮಾಡಲು ಬರುತ್ತಿದ್ದ ಹುಡುಗಿ ಬಂಗಾಳಿ ಮತ್ತು ನಾನು ಕನ್ನಡದವನು. ಒಂದೇ ಓಣಿಯ ಹಲವು ಮನೆಗಳು ಒಂದೊಂದು ರಾಜ್ಯವನ್ನು ಪ್ರತಿನಿಧಿಸುತ್ತಿರುವಂತೆ ತೋರುತ್ತಿತ್ತು. ಈ ನಗರದ ಮಡಿಲು ಅದೆಷ್ಟು ದೊಡ್ಡದೆಂದರೆ ಅಲ್ಲಿ ಯಾರು ಬಂದರೂ ಅವರನ್ನೆಲ್ಲಾ ತಮ್ಮವರಂತೆ ಬಿಗಿದಪ್ಪಿಕೊಳ್ಳುತ್ತಿತ್ತು. ಅಲ್ಲಿಯ ಜನರಿಗೆ ಪರಸ್ಪರರು ಅಪರಿಚಿತರಂತೆ ಕಂಡರೂ ಆ ನಗರಕ್ಕೆ ಎಲ್ಲರೂ ಪರಿಚಿತರೆ. ದೊಡ್ಡ ದೊಡ್ಡ ಉದ್ಯೋಗ, ವ್ಯಾಪರದ ಜೊತೆಗೆ ಸಾಮಾನ್ಯ ಬಡವನೂ ಅಲ್ಲಿ ಏನು ಬೇಕಾದರೂ ಮಾರಿ ಒಂದು ಹೊತ್ತು ವಡಾ ಪಾವ್ ಇಲ್ಲವೆಂದರೆ ಮಿಸಾಳ್ ಪಾವ್ ತಿಂದು ಬದುಕಿಬಿಡುತ್ತಾನೆ. ಬೂಟು, ಬಕೇಟು, ಹಳೆಯ ಶರ್ಟು ಪ್ಯಾಂಟೂ, ಮೊಬೈಲಿನ ವಸ್ತುಗಳು, ಕರ್ಚೀಪು, ಸೌತೆಕಾಯಿ, ಮನಸು, ದೇಹ, ಕೊನೆಗೆ ಕಸವನ್ನೂ ಅಲ್ಲಿ ಮಾರಬಹುದು. ಎಲ್ಲದಕ್ಕೂ ಅದರ ಯೋಗ್ಯತೆಯ ತಕ್ಕಂತೆ ಬೇಡಿಕೆ ಬೆಲೆ ಇರುವುದರಿಂದ ಅಲ್ಲಿ ಯಾರು ಬೇಕಾದರೂ ಬಂದು ಏನನ್ನಾದರೂ ಮಾರಿ ಬದುಕಲು ಆ ಮಾಯಾನಗರಿಯ ಹೆಬ್ಬಾಗಿಲು ಸದಾ ತೆರೆದೆ ಇರುತ್ತದೆ. ಅದಕ್ಕಾಗಿಯೇ ದೇಶದ ಮೂಲೆ ಮೂಲೆಗಳಿಂದ ಜನರು ಕನಸುಗಳನ್ನು ಹೊತ್ತು ಇಲ್ಲಿಗೆ ಬಂದು ಮುಂಬಯಿಗರೇ ಆಗಿ ಹೋಗಿದ್ದಾರೆ.
ನಿಮಗೇನಾದರೂ ಮಹಾರಾಷ್ಟ್ರದ ಭಾಷೆ, ಸಂಪ್ರದಾಯ, ಸ್ಥಳೀಯ ಸಂಸ್ಕೃತಿಯ ಫೀಲ್ ಸಿಗಬೇಕಾದರೆ ಮುಂಬೈ ನಗರ ಬಿಟ್ಟು ಆಚೆ ಬರಬೇಕು. ಅಹಮದನಗರ ಜಿಲ್ಲೆಯ ಹಳ್ಳಿಗಳಲ್ಲಿ ಸುತ್ತಾಡಿದಾಗಲೇ ನಾನು ಮಹಾರಾಷ್ಟ್ರದಲ್ಲಿದ್ದೇನೆ ಎನ್ನುವ ಅನುಭವಾಗುತ್ತಿತ್ತು. ನಗರಗಳು ಎಂದೋ ಪಾಶ್ಚಾತ್ಯ ಸಂಪ್ರದಾಯಕ್ಕೆ ಬಲಿಯಾಗಿದ್ದರಿಂದ ಈ ದೇಶದ ಹಳ್ಳಿಗಳು ನಮ್ಮ ಸಂಸ್ಕೃತಿಯನ್ನು ಅಷ್ಟೋ ಇಷ್ಟೋ ಉಳಿಸಿಕೊಂಡಿವೆ. ಬೇರೆ ಬೇರೆ ರಾಜ್ಯದ ಹಳ್ಳಿಗಳಲ್ಲಿಯ ಜೀವನ ಪದ್ಧತಿ ಬಗ್ಗೆ ಅಪಾರ ಕುತೂಹಲವಿರುವ ನಾನು ಮಹಾರಾಷ್ಟ್ರದ ಹಳ್ಳಿಗಳಲ್ಲಿಯ ಜನರು, ಅವರಾಡುವ ಭಾಷೆ, ಅಲ್ಲಿಯ ಹೋಟೆಲ್‌ಗಳು, ಮನೆಯಲ್ಲಿನ ಊಟದ ಪದ್ಧತಿ, ಗ್ರಾಮಸ್ಥರ ಕಟ್ಟೆ ಪುರಾಣಗಳು, ಮಕ್ಕಳ ಆಟಗಳನ್ನು ಕುತೂಹಲದಿಂದ ಗಮನಿಸತೊಡಗಿದ್ದೆ. ಶಾಲೆಗಳಿಗೆ ಹೋಗಿ ಪಾಠ ಮಾಡುವಾಗ ನಮ್ಮ ಕನ್ನಡ ಶಾಲೆಯ ಮಕ್ಕಳಿಗೆನೆ ಪಾಠ ಮಾಡುತ್ತಿದ್ದೇನೆನ್ನುವ ಖುಷಿಯಾಗುತ್ತಿತ್ತು. ಮರಾಠಿ ಮಿಶ್ರಿತ ಹಿಂದಿಯಲ್ಲಿ ಪಾಠ ಮಾಡತೊಗಿದರೆ ಮಕ್ಕಳು ನಕ್ಕುಬಿಡುತ್ತಿದ್ದವು.
ಅಲ್ಲಿಯ ಜನರಿಗೆ ಪರಸ್ಪರರು ಅಪರಿಚಿತರಂತೆ ಕಂಡರೂ ಆ ನಗರಕ್ಕೆ ಎಲ್ಲರೂ ಪರಿಚಿತರೆ. ದೊಡ್ಡ ದೊಡ್ಡ ಉದ್ಯೋಗ, ವ್ಯಾಪರದ ಜೊತೆಗೆ ಸಾಮಾನ್ಯ ಬಡವನೂ ಅಲ್ಲಿ ಏನು ಬೇಕಾದರೂ ಮಾರಿ ಒಂದು ಹೊತ್ತು ವಡಾ ಪಾವ್ ಇಲ್ಲವೆಂದರೆ ಮಿಸಾಳ್ ಪಾವ್ ತಿಂದು ಬದುಕಿಬಿಡುತ್ತಾನೆ. ಬೂಟು, ಬಕೇಟು, ಹಳೆಯ ಶರ್ಟು ಪ್ಯಾಂಟೂ, ಮೊಬೈಲಿನ ವಸ್ತುಗಳು, ಕರ್ಚೀಪು, ಸೌತೆಕಾಯಿ, ಮನಸು, ದೇಹ, ಕೊನೆಗೆ ಕಸವನ್ನೂ ಅಲ್ಲಿ ಮಾರಬಹುದು.
ಅಲ್ಲಿಯ ಹಳ್ಳಿಗಳ ಶಾಲೆಗಳಿಗೆ ಭೇಟಿಕೊಟ್ಟಾಗ ಅನಿಸಿದ್ದೇನೆಂದರೆ ವಿದ್ಯಾರ್ಥಿಗಳಿಗೆ ಮರಾಠಿ ಬಿಟ್ಟರೆ ಹಿಂದಿ ಅಷ್ಟೇನೂ ಅರ್ಥವಾಗುತ್ತಿರಲಿಲ್ಲ ಎನ್ನುವುದು. ಮತ್ತು ವಿದ್ಯಾರ್ಥಿಗಳ ಆತ್ಮವಿಶ್ವಾಸ, ಆಸಕ್ತಿ ಮರಾಠಿಯಲ್ಲಿ ಬೋಧಿಸಿದಾಗಲೆ ಹೆಚ್ಚಾಗಿ ಕಂಡುಬರುತ್ತಿತ್ತು. ಮಹಾರಾಷ್ಟ್ರವನ್ನು ಉತ್ತರದ ರಾಜ್ಯವೆಂದು ಪರಿಗಣಿಸಿದರೂ ಅಲ್ಲಿ ಹಿಂದಿ ಮಾತನಾಡುವುದು ಕೇವಲ ದೊಡ್ಡ ನಗರಗಳಲ್ಲಿಯೇ. ಈಗೆಲ್ಲ ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಅನಾಯಸವಾಗಿ ನಡೆಯುತ್ತಿದೆ. ನಾವೆಲ್ಲ ಅದನ್ನು ತಾತ್ವಿಕ ನೆಲೆಗಟ್ಟಿನಲ್ಲಿ ವಿರೋಧಿಸುತ್ತಾ ಬಂದಿದ್ದೇವೆ. ಆದರೆ ಉತ್ತರದವರಿಗೆ ನಮ್ಮ ದಕ್ಷಿಣದವರ ಬಗ್ಗೆ ಕೆಲವೊಂದಿಷ್ಟು ಪೂರ್ವಾಗ್ರಹಪೀಡಿತಗಳಿವೆ. ಅದರಲ್ಲಿ ನಾವೆಲ್ಲ ಹಿಂದಿ ವಿರೋಧಿಗಳೆನ್ನುವುದು ಒಂದು. ನಮ್ಮ ವಿರೋಧ ಹೇರಿಕೆಯ ವಿರುದ್ಧವೆ ಹೊರತು ಹಿಂದಿ ಭಾಷೆಯ ಮೇಲಲ್ಲವೆನ್ನುವುದು ಅವರಿಗೆ ತಿಳಿದಿಲ್ಲ. ಅಲ್ಲಿಯ ಒಬ್ಬ ಸಹೋದ್ಯೋಗಿ ಒಮ್ಮೆ ಕೇಳಿಯೇಬಿಟ್ಟ. “ನಿಮ್ಮ ಪಠ್ಯಗಳಲ್ಲಿ ಹಿಂದಿಯನ್ನು ಒಂದು ಭಾಷೆಯಾಗಿ ಓದುತ್ತಿದ್ದರೂ ಏಕೆ ನೀವು ಹಿಂದಿ ಮಾತನಾಡುವುದಿಲ್ಲ, ಏಕೆ ಹಿಂದಿ ಕಲಿಯುವುದಿಲ್ಲ?” ವೆಂದು. ಹಿಂದಿ ಭಾಷೆಯ ಕಲಿಕೆ ಅವರವರ ಆಸಕ್ತಿಯ ಮೇಲೆ ನಿಂತಿದ್ದರೂ ಅದು ಎಂದೂ ನಮಗೆ ಅನ್ನ ನೀಡುವ ಭಾಷೆಯಾಗಿ ಕಂಡಿಲ್ಲ. ಅದನ್ನು ಮಾತನಾಡುವ ಅವಶ್ಯಕತೆ ನಿರ್ಮಾಣವಾಗಿಲ್ಲದ್ದರಿಂದ ನಮ್ಮ ರಾಜ್ಯಗಳ ಯಾವುದೇ ಸಾಮಾನ್ಯ ಪ್ರಜೆ ಹಿಂದಿ ಕಲಿಯುವ ಮಾತನಾಡುವ ಗೋಜಿಗೆ ಹೋಗಿಲ್ಲವೆನ್ನುವುದು ವೈಯಕ್ತಿಕ ನಂಬಿಕೆ. ನಾನೂ ಆತನಿಗೆ ಒಂದು ಪ್ರಶ್ನೆ ಕೇಳಿದೆ, “ನಿಮ್ಮ ಪಠ್ಯಗಳಲ್ಲಿಯೂ ಇಂಗ್ಲೀಷನ್ನು ಒಂದು ಭಾಷೆಯಾಗಿ ಓದುತ್ತಿದ್ದೀರಿ, ಹಾಗಿದ್ದರೆ ಇಂಗ್ಲೀಷನ್ನು ಎಷ್ಟು ಜನ ಮಾತನಾಡುತ್ತಿದ್ದೀರಿ?” ಎಂದೆ. ಆತನಿಗೆ ಏನೆನ್ನಿಸಿತೋ ಹಿಂದಿ ಭಾಷೆಯ ಬಗ್ಗೆ ಬಿಡಿ ಮತ್ತೆಂದೂ ಆತ ನನ್ನ ಜೊತೆ ಮಾತನಾಡಲೇ ಇಲ್ಲ. ಯಾವುದೇ ಭಾಷೆಯ ಕಲಿಕೆ ಆಸಕ್ತಿ ಮತ್ತು ಅವಶ್ಯಕತೆಯ ಮೇಲೆ ನಿಂತಿರುತ್ತದೆ ಅಲ್ಲವೇ?
ಮತ್ತೊಬ್ಬಾತ ಕೇಳಿದ, “ನಿನ್ನ ಫೇವರೇಟ್ ಹೀರೋ ರಜನಿಕಾಂತ ತಾನೆ?” ಎಂದು. ಈ ಉತ್ತರದ ಬಹಳಷ್ಟು ಜನರಿಗೆ ಆಗ (ಅಂದರೆ ಏಳೆಂಟು ವರ್ಷಗಳ ಹಿಂದಿನ ಮಾತು) ದಕ್ಷಿಣದವರ ಬಗ್ಗೆ ಎಷ್ಟೆಲ್ಲ ಜ್ಞಾನವಿತ್ತೆಂದರೆ ಅವರಿಗೆ ತಿಳಿದದ್ದು ಪ್ರಮುಖವಾಗಿ ಎರಡೇ ವಿಷಯಗಳು. ಒಂದು ರಜನಿಕಾಂತ ಇನ್ನೊಂದು ತಮಿಳು ಅಷ್ಟೆ. ಅಪ್ಪಿತಪ್ಪಿಯೂ ಅವರು ಬೇರೆ ಚಿತ್ರರಂಗದ ಬಗ್ಗೆಯೋ ಅಥವಾ ಬೇರೆ ಭಾಷೆಯ ಬಗ್ಗೆಯೋ ಮಾತನಾಡುವುದನ್ನ ನಾನು ಕೇಳಿಸಿಕೊಂಡಿಲ್ಲ. ಅವು ಪ್ಯಾನ್ ಇಂಡಿಯಾ ಪರಿಕಲ್ಪನೆ ಓಟಿಟಿ ಸೌಲಭ್ಯಗಳಿಲ್ಲದ ದಿನಗಳಾಗಿದ್ದವು. ಈಗ ಬಿಡಿ ತಂತ್ರಜ್ಞಾನ ಈ ಜಗತ್ತನ್ನು ಅಂಗೈಲಲ್ಲ ಬೆರಳ ತುದಿಗೆ ತಂದು ನಿಲ್ಲಿಸಿದೆ.
ನಾವಿದ್ದ ಅಪಾರ್ಟ್‌ಮೆಂಟಿನ ಮನೆಯನ್ನು ಸ್ವಚ ಮಾಡಲು ಬರುತ್ತಿದ್ದ ಹದಿನೈದೋ ಹದಿನಾರೋ ಪ್ರಾಯದ ಬೆಂಗಾಲಿ ಹುಡುಗಿಯ ಬದುಕುವ ದರ್ದಿಗೆ ನಾನು ಬೆರಗಾಗಿದ್ದೆ. ಮಾತನಾಡಿಸಿದರೆ ಏನೊಂದೂ ಮಾತನಾಡದ, ಏನಾದರೂ ಪ್ರಶ್ನೆ ಕೇಳಿದರೆ ಸುಮ್ಮನೆ ನಕ್ಕುಬಿಡುತ್ತಿದ್ದ ಆ ಹುಡುಗಿ ತನ್ನ ತಾಯಿಯ ಜೊತೆಗೆ ಇಬ್ಬರು ತಂಗಿಯರನ್ನೂ ಬಂಗಾಳದ ಯಾವುದೋ ಹಳ್ಳಿಯಿಂದ ಕರೆದುಕೊಂಡು ಬಂದು ತಾನೊಬ್ಬಳೇ ದುಡಿಯುತ್ತಾ ಅವರನ್ನೆಲ್ಲಾ ಸಾಕುತ್ತಿದ್ದ ಪರಿ ನನ್ನಲ್ಲಿ ಸೋಜಿಗ ಹುಟ್ಟಿಸುತ್ತಿತ್ತು. ಮುಂಬೈಯಂತಹ ನಗರಗಳಲ್ಲಿ ಒಂಟಿ ಮಹಿಳೆಯರು ಒಂಟಿ ಹುಡುಗಿಯರು ಜೀವ ಕೈಯಲ್ಲಿ ಹಿಡಿದೆ ದುಡಿಯುತ್ತಿರುತ್ತಾರೆ. ಹಾಗಿರುವಾಗ ಈ ಬೆಂಗಾಲಿ ಹುಡುಗಿ ಬೆಳಿಗ್ಗೆ ನಾನು ಮತ್ತು ನನ್ನ ಸಹೋದ್ಯೋಗಿ ಇನ್ನೂ ಮಲಗಿರುವಾಗಲೇ ಬಂದು ಮನೆಯ ಕಸ ಗುಡಿಸಿ ಬಾಂಡೆ ತೊಳೆಯತೊಡಗುತ್ತಿದ್ದಳು. ಇಷ್ಟು ಬೇಗ ಏಕೆಂದು ಕೇಳಿದರೆ ಮತ್ತದೆ ನಸು ನಕ್ಕು ಬಾಗಿಲು ಹಾಕಿ ಹೊರಟು ಹೋಗಿಬಿಡುತ್ತಿದ್ದಳು.
ಅವಳು ನಮ್ಮ ಮನೆಯಷ್ಟೆ ಅಲ್ಲದೇ ಇನ್ನೂ ಹತ್ತಾರು ಮನೆಗಳ ಕಸ ಮುಸುರೆ ಮಾಡಬೇಕಿತ್ತು. ಬಂಗಾಳಿಯನ್ನು ಸುಂದರವಾಗಿ ಬರೆಯುತ್ತಿದ್ದ ಆ ಹುಡುಗಿ ಶಾಲೆಯಲ್ಲಿ ಜಾಣೆ ಇದ್ದಳು ಎನ್ನುವದನ್ನು ಊಹಿಸಿದ್ದೆ. “ನೀನಿನ್ನೂ ಶಾಲೆಯೋ ಕಾಲೇಜೋ ಕಲಿಯಬೇಕಾದವಳು ಇಷ್ಟು ವಯಸ್ಸಿಗೆ ದುಡಿಯುವ ಜರೂರತ್ತು ಏನಿದೆ? ನಿನ್ನ ಬಂಗಾಳಕ್ಕೆ ಮರಳಿ ಹೋಗಿ ಓದಬಾರದೇ?” ಎಂದು ಹಿಂದಿಯಲ್ಲಿಯೇ ಕೇಳಿದ್ದೆ. ಅದಕ್ಕವಳು ನಕ್ಕು ಪ್ರಥಮ ಬಾರಿ ಎಂಬಂತೆ ಮಾತನಾಡಿ “ನಿನ್ನಂತಹ ಅಣ್ಣನಿದ್ದಿದ್ದರೆ ನಾನಿಲ್ಲಿ ಬರುತ್ತಲೇ ಇರಲಿಲ್ಲ. ಆಗ ಬದುಕು ನನಗೆ ಎರಡೇ ದಾರಿ ಸೂಚಿಸಿತ್ತು. ಒಂದು ಅಲ್ಲಿಯೇ ಉಪವಾಸ ಸಾಯುವುದು ಎರಡನೇಯದು ಭಂಡ ಧೈರ್ಯ ಮಾಡಿ ದುಡಿದು ಬದುಕುವುದು. ನಾನು ಎರಡನೇಯದ್ದನ್ನು ಆಯ್ದುಕೊಂಡು ಕೆಲವೊಂದಿಷ್ಟು ಕನಸುಗಳೊಂದಿಗೆ ಇಲ್ಲಿಗೆ ಬಂದೆ” ಎಂದು ಅವಳು ಹಿಂದಿ ಮಿಶ್ರಿತ ಬೆಂಗಾಳಿಯಲ್ಲಿ ಹೇಳಿದಾಗ ನಾನೇನೂ ಮಾತನಾಡದ ಹಾಗೆ ನನ್ನ ಬಾಯಿ ಕಟ್ಟಿ ಹಾಕಿತ್ತು. ಬದುಕು ಅವಳನ್ನು ಇಂತಹ ಸ್ಥಿತಿಗೆ ತಂದು ನಿಲ್ಲಿಸಿದ್ದರ ಪರಿಣಾಮವೋ ಏನೋ ಆ ಹುಡುಗಿ ಮಾತನಾಡುತ್ತಲೇ ಇರಲಿಲ್ಲ. ಇಂತಹ ಅದೆಷ್ಟೋ ಹುಡುಗಿಯರು ಬದಕು ಕೊಡುವ ಏಟಿಗೆ ನಲುಗಿ ಯಾವುದೋ ರಾಜ್ಯದ ಯಾವುದೋ ಹಳ್ಳಿಯಿಂದ ಬಂದು ಮುಂಬೈಯಂತಹ ನಗರಗಳಲ್ಲಿ ಕನಸುಗಳನ್ನು ಹೆಣೆಯತೊಡಗಿರುತ್ತಾರೆ. ಕೆಲವೊಂದು ಸುಂದರ ಕಸೂತಿಗಳಾದರೆ ಮತ್ತೊಂದಿಷ್ಟು ದಾರ ಹರಿದೋ ಸೂಜಿ ಮುರಿದೋ ಹೆಣಿಗೆಯಲ್ಲಿ ವ್ಯತ್ಯಾಸವಾಗಿರುತ್ತದೆ.
ಈ ನಗರದಲ್ಲಿ ಗಗನ ಮುಟ್ಟುವ ಕಟ್ಟಡಗಳ ಪಕ್ಕದಲ್ಲಿಯೇ ಭೂಮಿಯನ್ನು ತಬ್ಬಿಕೊಂಡಂತಿರುವ ಸ್ಲಮ್‌ಗಳಿಗೂ ಬರವೇನೂ ಇಲ್ಲ. ಆ ಸ್ಲಮ್‌ಗಳಲ್ಲಿಯೇ ಬೆಂಗಾಲಿ ಹುಡುಗಿಯಂತಹವರ ಕನಸುಗಳು ಕಮರಿ ಹೋಗುತ್ತಿರುತ್ತವೆ. ಆ ಹುಡುಗಿಯ ಯಾವ ಕನಸು ನೆರವೇರಿತೋ ಬಿಟ್ಟಿತೋ ತಿಳಿಯಲಿಲ್ಲ. ಅಥವಾ ಮತ್ಯಾವುದಾದರೂ ದೊಡ್ಡ ಕನಸು ಬೆನ್ನು ಹತ್ತಿ ಹೋದಳೊ? ಸ್ವಲ್ಪ ದಿನಗಳ ನಂತರ ಅವಳು ನಮ್ಮ ಮನೆಗೆ ಬರಲೇ ಇಲ್ಲ. ಯಾಕೆಂದು ಕೇಳಿದರೆ ಯಾರೂ ಸರಿಯಾದ ಕಾರಣವನ್ನೂ ಹೇಳಲಿಲ್ಲ.
ಬಿಡುವಾಗಿದ್ದಾಗಲೆಲ್ಲ ಮರೀನ್ ಡ್ರೈವ್ ಬೀಚಿಗೆ ಹೋಗಿ ಅದೇ ಅರಬ್ಬಿ ಕಡಲಿಗೆ ಎದುರಾಗಿ ಕುಳಿತುಕೊಳ್ಳುತ್ತಿದ್ದೆ. ಬೆನ್ನ ಹಿಂದೆ ಇದ್ದ ಮುಂಬೈ ಎಂಬ ಮಾಯೆಗಿಂತ ಕಣ್ಣೆದುರಿಗಿದ್ದ ಕಡಲೇ ಎಷ್ಟೋ ಹಿತವಾಗಿತ್ತು. ಅಲ್ಲಿ ಆಟವಾಡುತ್ತಿದ್ದವರಲ್ಲಿ ಬೆಂಗಾಲಿ ಹುಡುಗಿಯನ್ನು ಹುಡುಕುತ್ತಿದ್ದೆ. ಅವಳೋ ಕನಸುಗಳ ಹೆಣೆಯಲು ಬಂದವಳು. ಕನಸುಗಳನ್ನೇ ಬೆನ್ನು ಹತ್ತಿರುತ್ತಾಳೆ ಹೊರತು ಈ ನಿರ್ಜೀವ ಅಲೆಗಳೊಂದಿಗೆ ಅವಳದ್ದೇನು ಕೆಲಸವೆಂದು ಸುಮ್ಮನಾಗುತ್ತಿದ್ದೆ. ಬೆನ್ನ ಹಿಂದಿನ ಮುಂಬೈ ಸಂಜೆಯಾಗುತ್ತಿದ್ದಂತೆ ರಂಗು ರಂಗಾಗತೊಡಗಿತ್ತು.
ಇಸ್ಮಾಯಿಲ್ ತಳಕಲ್ ಕೊಪ್ಪಳ ಜಿಲ್ಲೆಯ ಗೊಂಡಬಾಳ ಎಂಬ ಗ್ರಾಮದಲ್ಲಿ ಜನಿಸಿದರು. ಪ್ರಸ್ತುತ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಖನಗಾಂವ್ ಗ್ರಾಮದಲ್ಲಿ ಸರ್ಕಾರಿ ಆದರ್ಶವಿದ್ಯಾಲಯ(ಆರ್‍ಎಮ್‍ಎಸ್‍ಎ) ಶಾಲೆಯಲ್ಲಿ ಕನ್ನಡ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಜಾವಾಣಿಯ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ (2020) ಸೇರಿದಂತೆ ಇವರ ಕಥೆಗಳು ಹಲವೆಡೆ ಪ್ರಕಟವಾಗಿ, ಬಹುಮಾನ ಪಡೆದುಕೊಂಡಿವೆ. “ಬೆತ್ತಲೆ ಸಂತ” ಇವರ ಪ್ರಕಟಿತ ಮೊದಲ ಕಥಾ ಸಂಕಲನ. ಈ ಕಥಾ ಸಂಕಲನಕ್ಕೆ 2021ರ ಪ್ರತಿಷ್ಟಿತ “ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಬಹುಮಾನ” ಬಂದಿದೆ. ಸಂಗೀತ ಕೇಳುವುದು, ಅಡುಗೆ ಮಾಡುವುದು ಇವರ ಆಸಕ್ತಿಯ ವಿಷಯಗಳು.
“ಮಾಯಾನಗರಿ ಮತ್ತು ಕಡಲ ಅನುಭವ”
————————————–
. ತಳಕಲ್ ಡೈರಿಯ ಮೂರನೆ ಬರೆಹ ‘ಒನ್ಸ ಅಪಾನ್ ಎ ಟೈಮ್ ಇನ್ ಮುಂಬೈ’ ಇದೊಂದು ಅನುಭವ ಕಥನ. ಕರ್ನಾಟಕದಲ್ಲೂ ಎನ್ ಜಿ ಒ ದ ಕೆಲಸವಿದ್ದರೂ ಮುಂಬೈ ಎಂಬ ಮಾಯೆಯ ಮೋಹಕ್ಕೊ, ಅಲ್ಲಿಗೆ ಹೋಗಿ ಉದ್ಯೋಗ ಮಾಡಬೇಕಾದ ಅನಿವಾರ್ಯತೆಗೊ ಅಥವಾ ಇನ್ನಾವುದೋ ಹೊಸದನ್ನು ಕಲಿಯಬೇಕೆನ್ನುವ ತುಡಿತಕ್ಕೊ ಮುಂಬೈಗೆ ಹೋಗಿ ಅಲ್ಲಿದ್ದ ದಿನಗಳಲ್ಲಿ ತನ್ನ ಕಡಲ ಕಣ್ಣಿನಿಂದ ಕಂಡ ಬದುಕಿನ ನೋಟಗಳನ್ನು ತುಂಬಾ ಹೃದಯಂಗಮವಾಗಿ ಬಿಚ್ಚಿಟ್ಟಿದ್ದಾರೆ ಗೆಳೆಯ ಇಸ್ಮಾಯಿಲ್ ಅವರು.
ಎನ್ ಜಿ ಒ ಪ್ರೋಜಕ್ಟ ವರ್ಕ ಅಂದರೆ ಅದಕ್ಕೆ ಪ್ರದೇಶ, ಭಾಷೆ, ಜನಾಂಗ, ಎಂಬ ಬೇಧವಿರುವುದಿಲ್ಲ. ಹಾಗಾಗಿ ಅದರಲ್ಲಿ ಕೆಲಸ ಮಾಡುವವರು ಎಲ್ಲ ಕಡೆಗೆ ಕೆಲಸ ಮಾಡಲು ಸಿದ್ಧರಿರಬೇಕು. ಅಂಥ ಸದಾ ಸಿದ್ಧರಿರುವ ವ್ಯಕ್ತಿಗಳಲ್ಲಿ ಇಸ್ಮಾಯಿಲ್ ಪ್ರಮುಖರು. ಅವರು ಆ ಎನ್ ಜಿ ಒ ಪ್ರೋಜಕ್ಟ ವರ್ಕ ಜೊತೆಗೆ ಮತ್ತೆನ್ನನಾದರೂ ಹೊಸದನ್ನು ಕಲಿಯುವ, ಅನುಭವಿಸುವ ಸೂಕ್ಷ್ಮಮತಿ ಇಸ್ಮಾಯಿಲ್ ಅವರಾಗಿರುವುದರಿಂದ ಸಹಜವಾಗಿಯೇ ಅವರಿಗೆ ವಿಶಿಷ್ಟ ಅನುಭವಗಳು ಆ ಕಡಲ ಅಲೆಗಳಂತೆ ಅಪ್ಪಳಿಸಿಕೊಂಡು ಬಂದಿರುತ್ತವೆ. ಎಲ್ಲರೂ ಪ್ರೊಜಕ್ಟನ್ನು ಬೇಗ ಮುಗಿಸುವುದರಲ್ಲಿ ನಿರತರಾಗಿದ್ದರೆ , ಇಸ್ಮಾಯಿಲ್ ಮಾತ್ರ ಮುಂಬೈ ಕಡಲಿನ ಮೂಲಕ ಬಂಗಾಳಿ ಹುಡುಗಿಯನ್ನು ಅವಳ ಜೀವನೋತ್ಸಾಹವನ್ನು ಹುಡುಕುವುದು ಮತ್ತು ಮುಂಬೈನಂಥ ಮಾಯಾನಗರಿಯಲ್ಲಿ ಮಹಿಳೆ ಬದುಕು ನೂಕುವ ಬವಣೆಯನ್ನು ಕಟ್ಟಿಕೊಟ್ಟಿರುವುದು ಇಡಿ ಭಾರತದ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಗಾಗುವ ಧಾರುಣ ಸ್ಥಿತಿ ಅವಳು ಅದೆಲ್ಲವನ್ನು ಸಹಿಸಿಕೊಂಡು ಕರಾಳ ಕತ್ತಲೆಯಲ್ಲೂ ಬದುಕನ್ನು ಅರಸಿ ಪರಿಚಿತವಲ್ಲದ ಜನಗಳ ಮಧ್ಯೆ ಬದುಕು ಕಟ್ಟಿಕೊಳ್ಳುವ ಅವಳ ದಿಟ್ಟತನವನ್ನು ಇಸ್ಮಾಯಿಲ್ ಹೃದಯದ ಕಣ್ಣಿನಿಂದ ತೋರಿಸಿದ್ದು ಓದುಗರ ಕಣ್ಮನಗಳು ಕಡಲಾಗುವಂತೆ ಮಾಡುತ್ತದೆ.
ಜೊತೆಗೆ ಅವರು ಕೆಲಸ ಅಲ್ಲಿನ ಶಾಲೆಗಳಿಗೆ ಬೇಟಿ ನೀಡಿ ಅಲ್ಲಿ ಭಾಷೆ, ಸಂಸ್ಕೃತಿ, ಜನಜೀವನ ಹಾಗೂ ನಗರಕ್ಕೂ, ಹಳ್ಳಿಗಳಿಗಿರುವ ಸಾಂಸ್ಕೃತಿಕ ವಿಭಿನ್ನತೆಗಳನ್ನು , ಮುಂಬೈ ನಗರದ ಹಗಲಿರುಳಿನ ವಿಸ್ಮಯಗಳನ್ನು ಅಲ್ಲಿನ ರೈಲ್ವೆ ನಿಲ್ದಾಣ, ಮಾರ್ಕೆಟು , ಗಗನಚುಂಬಿ ಮಹಲುಗಳ ನಿರ್ಭಯ ಬದುಕನ್ನು ಕಿರುಚಿತ್ರದಂತೆ ತೋರಿಸಿದ್ದಾರೆ. ಇದೆಲ್ಲವಕ್ಕೂ ಕೊನೆಯದಾಗಿ ಆ ಮಾಯಾನಗರಿ ಬೇರೆ ಲೋಕವೆಂಬಂತೆ ಭಾಸವಾಗುತ್ತಿದ್ದರೂ ಭೂಮಿಗಂಟಿದ ವಿಸ್ಮಯವೆಂಬುದು ಮಾತ್ರ ಸತ್ಯ ಎಂಬುದನ್ನು ಈ ಡೈರಿ ಸಾಬೀತುಪಡಿಸಿದೆ. ಇಂಥ ಅನುಭವಜನ್ಯ ಬರೆಹಕ್ಕೆ ಗೆಳೆಯ ಇಸ್ಮಾಯಿಲ್ ಅವರಿಗೆ ಎದೆಯಾಳದ ನಮನಗಳು 🌷🤝👏👌👍🌷
sir nimma anubavava aasaktiyinda kudide .
ಜೀವನದ ಎಲ್ಲ ಪಾಠಗಳನ್ನು ಕಲಿಸುವ ಮುಂಬೈ ಮಹಾನಗರಿಯ ಚಿತ್ರಣ ಅದ್ಭುತವಾಗಿ ಮೂಡಿ ಬಂದಿದೆ. ಎಂದೂ ಮಲಗದ ಮುಂಬೈ, ನಮ್ಮೆಲ್ಲರಿಗೂ ಯಾವಾಗಲೂ, ಎಂದೆಂದಿಗೂ ಒಂದು ಅಚ್ಚರಿ.ಲೇಖನ ಖುಷಿ ಕೊಟ್ಟಿತು.