ಮಂಡೋದರಿಯ ಸ್ವಗತ
ಮಾತಾಡುತ್ತಿಲ್ಲ ಪಂಜರದ ಗಿಳಿ ಇಟ್ಟ
ಹಣ್ಣು ಕೂಡ ತಿನ್ನುತ್ತಿಲ್ಲ ರಕ್ಕಸಿ ವಿನತಾ ಬಂದು
ಸಂದೇಶ ಕೊಟ್ಟು ಹೋದಮೇಲೆ
ತಾಟಕಿಯ ಮಗ ಮಾಯಾವಿಯಾಗಿ
ಅವಳoಗಳಕೆ ಹೋದನಂತೆ
ಬಂಗಾರದ ಜಿಂಕೆಯಾಗಿ- ಅದಕ್ಕೆ ಮರುಳಾಗಿ
ಅದರ ಹಿಂದೆಬಂದಳು ಸೀತೆ ಲಕ್ಷ್ಮಣ ರೇಖೆ
ದಾಟಿ: ಈಗವಳು ಅಶೋಕ ವನದಲ್ಲಿ ಎಂದಳು
ವಿನತಾ ಮಾರೀಚನಿಗಲ್ಲಿ ಕಳಿಸಿದವ
ದೊರೆಯಂತೆ… ಹೇ ಶಿವನೇ,
ಇವನು ನಿನ್ನ ಭಕ್ತನೇ !?
ಈ ಕನಕ ಪುರಿಯ ಅರಮನೆಯಲ್ಲವನ
ಉಪ ಪತ್ನಿಯರು ಹಾಡಿ ಕುಣಿದು ದಣಿದು
ಬಿದ್ದುಕೊಂಡಿವೆ ಎಣಿಸಿಲ್ಲ ನಾನೂ
ಎಣಿಸಿರಲಿಕ್ಕಿಲ್ಲ ರಾವಣನೂ
ಸಾಸಿರಕ್ಕೂ ಮೀರಿರಬೇಕು…ಮತ್ತೇಕೆ ಸೀತೆ?
ಈ ಸಾವಿರ ಸರಸಿಯರೇನು ಸಂತೃಪ್ತೆಯರೇ?
ಅಂತಃಪುರದೊಡತಿ ನಾ –
ಅಕ್ಷಕುಮಾರ ಇಂದ್ರಜಿತು ಹುಟ್ಟಿದ ಮೇಲೆ
ಅವನಾಗಮನ ಬಿಗುಮಾನಕ್ಕಿಳಿದಿದೆ
ರತ್ನಖಚಿತ ‘ಈ ಪರಮಾಸನ’ ವೀಗ- ಮುಳ್ಳಿನ
ಹಾಸಿಗೆಯಂತೆನಿಸಿದೆ ..ನಿದ್ದೆ ಗೆಡಿಸುವ
ಒಂಟಿ ಇರಳುಗಳು ಬದಿಯ ಕೋಣೆಯಲ್ಲಿ
ಕುಂಭ ಕರ್ಣನ ಗೊರಕೆ ಕೋಣ ಒದರಿದಂತೆ:
ಅಣಕಿಸುತ್ತವೆ ಹೊಳೆಯುವ
ಚಿನ್ನದ ದೀಪಗಳು
ದಾಗಿನವಿಲ್ಲ ಎಣ್ಣೆಹಚ್ಚಿಲ್ಲ ಹೂಕಾಣದ
ಎಂದೋಕಟ್ಟಿದ ದೊಡ್ಡತುರುಬು
ಕಾಡಿಗೆತೀಡಿಲ್ಲವಾದರೂ ದೇವಾಂಗ –
ಸುಂದರಿ ಅವಳು: ಅವಳ ಮುಂದೆ
ನೀನೇನೂ ಅಲ್ಲ! ಅಶೋಕ ವನಕ್ಕೀಗ
ಹೊಸಬೆಳಕಿನ ಉಡುಗೊರೆಯಾಗಿಹಳು
ವನಸಿರಿ ಹಸಿರುಬ್ಬಿ ಬೀಗುತಿದೆ ಅವಳ
ಇರುವಿನಿಂದ ಗಿಳಿಪಾರಿವಾಳಗಳಿಗೂ
ಪ್ರಿಯಳಂತೆ – ಎಂದಳು ರಕ್ಕಸಿ ಬೆಕ್ಕಸ
ಬೆರಗಾಗಿ: ನಾ ನೋಡಲೇ ಅಲ್ಲಿಹೋಗಿ?l
ಇವನಲ್ಲಿ ಹೋಗಿ
ತನ್ನಾಸೆ ತೀರಿಸಲೊಪ್ಪದ ಅವಳಿಗೆ ಎರಡು
ತಿಂಗಳ ಗಡುವು ನೀಡಿದ್ದಾನಂತೆ ನನ್ನವ!
ಅವನ ಗಡುವಿಗೇಕೆ
ನನ್ನಲ್ಲಿ ಈ ಪರಿಯ ನಡುಗು?
ರಾವಣನ ಪಟ್ಟದರಸಿ ಹೇಗಿದ್ದರೂ-ಒಬ್ಬ
ಗಂಡನ ಹೆಂಡತಿ ನಾನು ಮಂಡೋದರಿ
ಅವನೇ ನನ್ನ ಸರ್ವಸ್ವ ಮಿಕ್ಕಿದ್ದೆನಗೆ ಹ್ರಸ್ವ..
ನನ್ನ ತಾಳಿ ತಣ್ಣಗಿರಲಿ, ಸೀತೆಯದೂ
ಕೂಡ!…ನಾನವಳ ನೋಡದಿದ್ದರೂ
ನನ್ನೊಳಗನ್ನಡಿಯಲ್ಲಿ ನೋಡಿದಂತೆನಿಸುತ್ತಿದ್ದಾಳೆ ..
ಜೀವದ ಗೆಳತಿಯಂತೆ!
ಮತಾಡಿ ಹಣ್ಣು ತಿನ್ನಲಿ ನನ್ನ ಗಿಳಿ
ಸೀತೆಯ ಗಂಡ ಬಂದು ಕರೆದೊಯ್ಯಲಿ
ಇವನಿತ್ತ ಗಡುವಿನೊಳಗೆ…
ಸೀತೆಯ ಶಾಪವು ಬೆಂಕಿಯಾಗಿ –
ಚಿನ್ನದ ಲಂಕೆಯನ್ನು ಸುಡದಿರಲಿ ಹೇ ಪ್ರಭು!…
ಪ್ರಭುರಾಜ ಅರಣಕಲ್ ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ಅರಣಕಲ್‌ನವರು
ಮೌನ ನುಂಗುವ ಶಬ್ದಗಳು ಇವರ ಪ್ರಕಟಿತ ಕವನ ಸಂಕಲನ
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ