ಬ್ರಿಸ್ಬೇನ್ ಫೆಸ್ಟಿವಲ್ ಎನ್ನುವ ಆನಂದದ ಲೋಕದಲ್ಲಿ ಈ ಬಾರಿ ಉತ್ಸಾಹ ಒಂದು ತೂಕ ಹೆಚ್ಚೇ. ಕಳೆದೆರಡು ವರ್ಷಗಳಲ್ಲಿ ನಡೆಯದ ಉತ್ಸವ ಈ ಬಾರಿ ಹೆಚ್ಚು ರಂಗಿನಿಂದ ನಡೆಯುತ್ತಿದೆ. ಕಳೆದದ್ದನ್ನ ಗಿಟ್ಟಿಸಿಕೊಳ್ಳಲು ಹಬ್ಬದ ತಯಾರಿ ಜೋರಾಗೆ ನಡೆದಿದೆಯೆಂದು ಟಿವಿ ವಾಹಿನಿಗಳು ಬಿತ್ತರಿಸುತ್ತಿವೆ. ಈ ಫೆಸ್ಟಿವಲ್ ನಡೆಯುವ ಮೂರು ವಾರಗಳ ಕಾಲದಲ್ಲಿ ಬರಹಗಾರರ ಶಿಬಿರ, ಅಂತಾರಾಷ್ಟ್ರೀಯ ಚಲನಚಿತ್ರ ಪ್ರದರ್ಶನ, ಕಲೆಗಳ ಪ್ರದರ್ಶನ, ಸೌತ್ ಬ್ಯಾಂಕಿನಲ್ಲಿ ಆಹಾರ ಮೇಳ ಇನ್ನೂ ಹಲವಾರು ವೈವಿಧ್ಯತೆಗಳುಳ್ಳ ಕಾರ್ಯಕ್ರಮಗಳಿರುತ್ತವೆ.ಇವೆಲ್ಲಕ್ಕೂ ಕಳಶವಿಡುವಂತೆ ಇಂದು ಉದ್ಘಾಟನೆಯ ಶನಿವಾರದಂದು ರಾತ್ರಿ River Fire ನಡೆಯುತ್ತದೆ. ಬ್ರಿಸ್ಬೇನ್ ನದಿಯು ಪಟಾಕಿಗಳ ಬಣ್ಣಗಳನ್ನು ಪ್ರತಿಫಲಿಸುವ ಖುಷಿಯಲ್ಲಿ ಹರಿಯುತ್ತಿದೆ. ಈ ಬಾರಿಯ ಆಸ್ಟ್ರೇಲಿಯಾ ಪತ್ರದಲ್ಲಿ ಡಾ. ವಿನತೆ ಶರ್ಮ ಸಡಗರದ ಸುದ್ದಿಯನ್ನು ಬರೆದಿದ್ದಾರೆ.
ಬೇಕೋಬೇಡವೋ ಎಂಬಂತೆ ಮೆಲ್ಲಮೆಲ್ಲನೆ ಆಸ್ಟ್ರೇಲಿಯದಲ್ಲಿ ವಸಂತ ಋತು ಕಾಲಿಟ್ಟಿದೆ. ಎಲ್ಲೆಲ್ಲೂ ಜಾಜಿ ಹೂ ಕಂಪು ಪಸರಿಸಿದೆ. ಅಲ್ಲಲ್ಲಿ ಮಾವು ಚಿಗುರಿದೆ. ತರಕಾರಿ ಗಿಡಗಳು ಮೊಳೆಯುತ್ತಿವೆ, ಬೆಳೆಯುತ್ತಿವೆ. ಆದರೂ ಚಳಿಗಾಲದಲ್ಲಿ ಕೆಲ ಗಿಡಗಳಿಗೆ ಹಿಡಿದಿದ್ದ ಮೈಚಳಿ ಇನ್ನೂ ಬಿಟ್ಟಿಲ್ಲವಾಗಿ ಅವು ಮಂಕಾಗಿ ಕೂತಿವೆ. ಈ ವರ್ಷದ ಅಧಿಕ ಮಳೆಯ ಪ್ರಭಾವ ದೇಶದ ಮಧ್ಯ ಮತ್ತು ಉತ್ತರ ಪೂರ್ವತೀರದ ಪ್ರದೇಶಗಳಲ್ಲಿ ಕಾಣುತ್ತಿದೆ. ನಮ್ಮನೆಯ ಹಿತ್ತಲಿನಲ್ಲಿರುವ ಪುಟಾಣಿ ಬೇವಿನ ಗಿಡದಲ್ಲಿ ಚಿಗುರಿನ ಚಿಹ್ನೆಯೇ ಇಲ್ಲದೆ ನಮಗೆ ಚಿಂತೆಯಾಗಿದೆ. ನಮ್ಮ ಸ್ವಾರ್ಥಕ್ಕಾಗಿ ಈಗ ಬಿಸಿಲು ಬರಲಿ ಎಂದು ಆಶಿಸುತ್ತಾ ಇನ್ನೇನು ಬರಲಿರುವ ಬೇಸಗೆಯಲ್ಲಿ ಬಿಸಿಲು ಅಧಿಕವಾದರೆ ಅದನ್ನು ಹೇಗೆ ಸಹಿಸುವುದು ಎನ್ನುವ ಜಿಜ್ಞಾಸೆ. ವರ್ಷದ ಆದಿಯಿಂದಲೂ ವಿಪರೀತ ಮಳೆ, ಮಧ್ಯದಲ್ಲಿ ಎಂದೂ ಇಲ್ಲದ ಕಡುಚಳಿಯನ್ನು ಅನುಭವಿಸುತ್ತ ಇರುವ ನಾವು ಇನ್ನು ಖಂಡಿತವಾಗಿಯೂ ಕಡುಬೇಸಿಗೆಗಾಗಿ ಎದುರು ನೋಡುತ್ತಿಲ್ಲ ಈ ಎಲ್ಲದರ ಲೆಕ್ಕಾಚಾರದಲ್ಲಿ ಮುಳುಗಿ ಕಡೆಯಲ್ಲಿ ಪ್ರಕೃತಿಯ ನಿಯಮ, ನಿರ್ಧಾರಗಳಿಗೇ ಮಣಿದು ಸುಮ್ಮನಾಗುವುದು ಇದ್ದೇ ಇದೆ.
ಇಂದು ಶನಿವಾರ, ಮಳೆಯ ನಡುವೆಯೂ, ನಮ್ಮೂರಿಗೆ ವಿಶೇಷ ಕಳೆ ಬಂದಿದೆ. ‘ಬ್ರಿಸ್ಬೇನ್ ಫೆಸ್ಟಿವಲ್’ ವಾರ್ಷಿಕ ಹಬ್ಬದ ಉದ್ಘಾಟನೆ ಇಂದು, ಸೆಪ್ಟೆಂಬರ್ ಮೂರನೇ ತಾರೀಕಿನಂದು. ಮೂರು ವಾರಗಳ ಕಾಲ ನಗರ ಕೇಂದ್ರದಲ್ಲಿ ಮತ್ತು ಆಸುಪಾಸು ಸ್ಥಳಗಳಲ್ಲಿ ನಡೆಯುವ ತರಾವರಿ ಬ್ರಿಸ್ಬೇನ್ ಫೆಸ್ಟಿವಲ್ ಕಾರ್ಯಕ್ರಮಗಳಿಗೆ ಚಾಲೂ ನೀಡಲು ಶನಿವಾರದ ಬೆಳಗಿನಿಂದಲೇ ಸಡಗರವಿರುತ್ತದೆ. ಈ ಬಾರಿಯಂತೂ ಸಡಗರಕ್ಕೆ ಸರಕಾರದ ಕಡೆಯಿಂದ ಇನ್ನೂ ಜಾಸ್ತಿ ಗಮನವಿದೆ. ಕಳೆದ ಎರಡು ವರ್ಷಗಳಲ್ಲಿ ಎಲ್ಲವೂ ರದ್ದಾಗಿತ್ತಲ್ಲ, ಹಾಗಾಗಿ ಕಳೆದದ್ದನ್ನ ಗಿಟ್ಟಿಸಿಕೊಳ್ಳಲು ಹಬ್ಬದ ತಯಾರಿ ಜೋರಾಗೆ ನಡೆದಿದೆಯೆಂದು ಟಿವಿ ವಾಹಿನಿಗಳು ಬಿತ್ತರಿಸುತ್ತಿವೆ.
ಇಂದು ಉದ್ಘಾಟನೆಗೆಂದು ನಗರದ ಮೇಲೆ ಆಕಾಶದಲ್ಲಿ ಆಸ್ಟೇಲಿಯನ್ ವಾಯು ಸೈನ್ಯ ಪಡೆಗೆ ಸೇರಿದ ವಿಶೇಷ ಫೈಟರ್ ಜೆಟ್ ವಿಮಾನಗಳು ಗಡಚಿಕ್ಕುವ ಶಬ್ದದೊಂದಿಗೆ ಹಾರಾಡಲಿವೆ. ಮಧ್ಯಾಹ್ನ ನಗರಕೇಂದ್ರದಲ್ಲಿ ಹರಿಯುವ ಬ್ರಿಸ್ಬೇನ್ ನದಿಯಲ್ಲಿ ಠಿಕಾಣಿ ಹೂಡಿರುವ ಜಲಸೈನ್ಯ ಪಡೆಗೆ ಸೇರಿದ ಚಿಕ್ಕ ಹಡಗಿನ ಮೇಲೆ ನಿಂತು ಸೈನಿಕರು ವಾದ್ಯ ಸಂಗೀತ ಪ್ರದರ್ಶನ ಕೊಡಲಿದ್ದಾರೆ. ಅಲ್ಲೆ ನದಿ ದಡದಲ್ಲಿರುವ ಸೌತ್ ಬ್ಯಾಂಕ್ ಉದ್ಯಾನವನದಲ್ಲಿ ಮತ್ತು ಅದರ ಸುತ್ತ ಹರಡಿರುವ ಆಕರ್ಷಕ boulevard ಪ್ರದೇಶದಲ್ಲಿನ ಕಮಾನು ಕಂಬಗಳಲ್ಲಿ ಮೈತಳೆದಿರುವ ಬಣ್ಣಬಣ್ಣದ ಹೂ ಅಲಂಕಾರಗಳು, ಸುಂದರವಾಗಿ ಅಲಂಕರಿಸಿಕೊಂಡು ಸುಳಿದಾಡುವ ಶ್ರೀಮಂತ ಜನರು, ಅಲ್ಲಲ್ಲಿ ಕೂತು ನಿಂತು ವೈನ್, ಬಿಯರ್, ಕಾಕ್ಟೇಲ್ ಸವಿಯುವವರು, ಬೇಕೆಂದೇ ಜೋರಾಗಿ ಬಿತ್ತರಿಸುವ ರೇಡಿಯೋ ವಾಹಿನಿಯ ಎಡಬಿಡದ ಕಾಮೆಂಟರಿ, ಆಗಾಗ ತೇಲಿಬರುವ ಸಂಗೀತಕ್ಕೆ ನಿಂತಲ್ಲೇ ಹೆಜ್ಜೆಹಾಕುತ್ತಾ ಮೈ ತೂಗಿಸುವ, ಮೈ ಮರೆಯುವ ಜನರು, ಅವರನ್ನು ನೋಡುತ್ತಾ ಮುಗುಳ್ನಗುವವರು, ಅಲ್ಲಲ್ಲಿ ಕುಣಿಕುಣಿಯುತ್ತಿರುವ ಮಕ್ಕಳು ಹೀಗೆ ಆನಂದದ ಲೋಕದ ಸೃಷ್ಟಿಯಾಗುತ್ತದೆ. ಅದರಲ್ಲಿ ಕಾಣೆಯಾದ ಬಡವರ ಕಥೆ ಇಲ್ಲಿ ಬೇಡ ಬಿಡಿ. ಅಂದಹಾಗೆ ಇವೆಲ್ಲವೂ ಮೂರು ವರ್ಷಗಳ ಹಿಂದಿನ ನೆನಪಿನ ಬುತ್ತಿಯ ಪಕಳೆಗಳು. ಇಂದು ಇನ್ನೂ ಬೀಳುತ್ತಿರುವ ಮಳೆಯಿಂದ ಕಾರ್ಯಕ್ರಮಗಳನ್ನು ಹೇಗೆ ನಡೆಸುತ್ತಾರೋ ತಿಳಿಯದು. ರೇಡಿಯೋ ಸುದ್ದಿ ಪ್ರಕಾರ ಮಧ್ಯಾಹ್ನ ಮಳೆ ನಿಲ್ಲಲಿದೆ, ಕಾರ್ಯಕ್ರಮಗಳು ಸುಗಮವಾಗಿ ಜರುಗುತ್ತವೆಯಂತೆ.
River Fire ಅಂದರೆ ನಗರ ಹೃದಯದಲ್ಲಿರುವ ಬ್ರಿಸ್ಬೇನ್ ನದಿ ಮಧ್ಯದಿಂದ ಆಕಾಶಕ್ಕೆ ಚಿಮ್ಮುವ ಬಣ್ಣಬಣ್ಣದ ಬೆಳಕಿನ ಕಣ್ಣುಸೆಳೆಯುವ fireworks ಶೋ. ಮುಂಚೆಯೇ ಅಲ್ಲಿ ಸ್ಥಾಪಿತವಾದ ಒಂದು ದೋಣಿಯಲ್ಲಿ ಇಟ್ಟಿರುವ fireworks ಗಳನ್ನು ನಿಗದಿತ ಸಮಯಕ್ಕೆ ಸಿಡಿಸುತ್ತಾ ಶುರುಮಾಡುತ್ತಾರೆ. ನಮ್ಮ ದೀಪಾವಳಿ ಹಬ್ಬದಂದು ಹಾರುವ ರಾಕೆಟ್ ಮುಂತಾದ ಚಿಮ್ಮುವಂತೆ
ಮತ್ತೊಮ್ಮೆ ನೆನಪಿನ ಲೋಕಕ್ಕೆ ಜಾರುತ್ತೀನಿ. ಬ್ರಿಸ್ಬೇನ್ ಫೆಸ್ಟಿವಲ್ ಎನ್ನುವ ಆನಂದದ ಲೋಕಕ್ಕೆ ಮರಳೋಣ. ಮೂರು ವಾರಗಳ ಕಾಲದಲ್ಲಿ ಬರಹಗಾರರ ಶಿಬಿರ, ಅಂತಾರಾಷ್ಟ್ರೀಯ ಚಲನಚಿತ್ರ ಪ್ರದರ್ಶನ, ಕಲೆಗಳ ಪ್ರದರ್ಶನ, ಸೌತ್ ಬ್ಯಾಂಕಿನಲ್ಲಿ ಆಹಾರ ಮೇಳ ಇನ್ನೂ ಹಲವಾರು ವೈವಿಧ್ಯತೆಗಳುಳ್ಳ ಕಾರ್ಯಕ್ರಮಗಳಿರುತ್ತವೆ.ಇವೆಲ್ಲಕ್ಕೂ ಕಳಶವಿಡುವಂತೆ ಇಂದು ಉದ್ಘಾಟನೆಯ ಶನಿವಾರದಂದು ರಾತ್ರಿ River Fire ನಡೆಯುತ್ತದೆ.
River Fire ಅಂದರೆ ನಗರ ಹೃದಯದಲ್ಲಿರುವ ಬ್ರಿಸ್ಬೇನ್ ನದಿ ಮಧ್ಯದಿಂದ ಆಕಾಶಕ್ಕೆ ಚಿಮ್ಮುವ ಬಣ್ಣಬಣ್ಣದ ಬೆಳಕಿನ ಕಣ್ಣುಸೆಳೆಯುವ fireworks ಶೋ. ಮುಂಚೆಯೇ ಅಲ್ಲಿ ಸ್ಥಾಪಿತವಾದ ಒಂದು ದೋಣಿಯಲ್ಲಿ ಇಟ್ಟಿರುವ fireworks ಗಳನ್ನು ನಿಗದಿತ ಸಮಯಕ್ಕೆ ಸಿಡಿಸುತ್ತಾ ಶುರುಮಾಡುತ್ತಾರೆ. ನಮ್ಮ ದೀಪಾವಳಿ ಹಬ್ಬದಂದು ಹಾರುವ ರಾಕೆಟ್ ಮುಂತಾದ ಚಿಮ್ಮುವ ಪಟಾಕಿಗಳನ್ನು ನೆನೆಪಿಸಿಕೊಳ್ಳಿ. ಅದರ ಸಾವಿರಪಟ್ಟು ಹೆಚ್ಚಿನ ಚಿಮ್ಮುವ ಶಕ್ತಿಯುಳ್ಳ fireworks ಆಕಾಶಕ್ಕೆ ಹಾರುತ್ತ ರಂಗಿನ, ಬೆಳಕಿನ ಲೋಕವನ್ನು ಸೃಷ್ಟಿಸುತ್ತದೆ. ಒಂದು ಕಾಮನಬಿಲ್ಲಿನ ರೂಪವಾದರೆ, ಇನ್ನೊಂದು ಗುಲಾಬಿ ಹೂವಿನ ಆಕಾರ, ಬಣ್ಣ-ಬೆಳಕು, ಇನ್ನೊಂದು ನಮ್ಮ ಮುದ್ದಿನ ಕೋಆಲಾದಂತೆ, ಕಾರಂಜಿಯಂತೆ, ಕಮಾನಿನಂತೆ, ಏನೇನೋ ಆಕೃತಿಗಳಲ್ಲಿ ಗುಂಪುಗುಂಪಾಗಿ, ಅಲೆಅಲೆಯಾಗಿ ಚಿಮ್ಮುವ ಬೆಳಕಿನ ಬಣ್ಣದ ಲೋಕವನ್ನು ವೀಕ್ಷಿಸುತ್ತ ನಾವೆಲ್ಲ ಎಲ್ಲವನ್ನೂ ಮರೆಯುತ್ತೀವಿ. ಅದು ಕೆಲನಿಮಿಷಗಳ ಮಟ್ಟಿಗಾದರೂ ಯಾವುದೂ ಸ್ವಪ್ನ ಲೋಕಕ್ಕೆ ಜಾರಿದಂತೆ.
ಈ ಬಣ್ಣ-ಬೆಳಕಿನ ಲೋಕವನ್ನು ಸವಿಯಲು ಜನರು ಎರಡು-ಮೂರು ಗಂಟೆಗಳ ಮುಂಚೆಯೇ ಬಂದು ನದಿಯ ಆಸುಪಾಸಿನಲ್ಲಿ ಸರಿಯಾದ ಜಾಗ ಹಿಡಿದುಕೊಂಡು, ಅಲ್ಲೊಂದು ಪಿಕ್ನಿಕ್ ಮ್ಯಾಟ್ ಹರಡುತ್ತಾರೆ. ಹಲವಾರು ಕುಟುಂಬಗಳು ಒಂದೆಡೆ ಸೇರಿ ಸಂಧಿಸುವುದಾದರೆ ಮೂರು-ನಾಲ್ಕು ಪಿಕ್ನಿಕ್ ಮ್ಯಾಟ್ ಇಲ್ಲವೇ ದೊಡ್ಡದೊಂದು ರಗ್ ತಂದು ಹಾಸುತ್ತಾರೆ. ಕೂತು ಹರಟುತ್ತಾ, ಸ್ನಾಕ್ಸ್ ತಿನ್ನುತ್ತಾ, ತಂಪು ಪಾನೀಯ, ವೈನ್, ಬಿಯರ್, ಕಾಕ್ಟೇಲ್ ಚಪ್ಪರಿಸುತ್ತಾ ಮೈಮನಗಳನ್ನು ಹಗುರಗೊಳಿಸುತ್ತಾರೆ. ಹತ್ತು ವರ್ಷಗಳ ಹಿಂದಿನ ವರ್ಷಗಳಲ್ಲಿ River Fire ನೋಡಲು ನಾವು ಹೋಗುತ್ತಿದ್ದಾಗ ಜನಜಂಗುಳಿಯ ಪ್ರಸಿದ್ಧ ಸೌತ್ ಬ್ಯಾಂಕ್ ಬಿಟ್ಟು ಆಚೆಯ ನದಿದಡದಲ್ಲಿ ಜಾಗ ಹಿಡಿದುಕೊಂಡು ಮ್ಯಾಟ್ ಹಾಸುತ್ತಿದ್ದೆವು. ಆಗ ಅಷ್ಟೊಂದು ಜನರಿರುತ್ತಿರಲಿಲ್ಲ. ಮಕ್ಕಳು ನಿಧಾನವಾಗಿ ನದಿದಡಕ್ಕೆ ಹೊದಿಸಿದ್ದ ದೊಡ್ಡ ಕಲ್ಲುಗಳ ಮೇಲೆ ಹೆಜ್ಜೆಯಿಟ್ಟು ಅವುಗಳ ಕೊರಕಲುಗಳಲ್ಲಿ ಅಡಗಿರುತ್ತಿದ್ದ ಏಡಿಗಳನ್ನು ಹುಡುಕುತ್ತಿದ್ದರು. ಕ್ರಮೇಣ ಕತ್ತಲಾಗುತ್ತಿದ್ದಂತೆ ಆಚೆಕಡೆಯ ಸೌತ್ ಬ್ಯಾಂಕ್ ಕಟ್ಟಡಗಳಿಂದ ಬರುತ್ತಿದ್ದ ಬೆಳಕು ನದಿ ಮೈಮೇಲೆ ಬಿದ್ದು ನೀರಿನಲೆಗಳು ಫಳಫಳನೆ ಹೊಳೆಯುತ್ತಿದ್ದವು. ಮಕ್ಕಳು ಮತ್ತೂ ಧೈರ್ಯದಿಂದ ನೀರನ್ನು ಮುಟ್ಟಲು ತವಕಿಸುತ್ತಿದ್ದರು. ಆಗ ನಾನು ‘ನೀರಿನಲ್ಲಿ ಅಲೆಯ ಉಂಗುರ’ ಹಾಡನ್ನು ಗುನುಗುತ್ತಿದ್ದೆ. ಅಷ್ಟರಲ್ಲೇ ಅಲ್ಲಿಲ್ಲಿ ಸುಳಿದಾಡುತ್ತಿದ್ದ ಸೆಕ್ಯೂರಿಟಿ ಮಂದಿ ಬಂದು ಮಕ್ಕಳನ್ನು ಎಚ್ಚರಿಸುತ್ತಿದ್ದರು.
ಇಷ್ಟೆಲ್ಲಾ ಆಗುವಷ್ಟರಲ್ಲಿ ತಲೆಯ ಮೇಲೆ ಅಪ್ಪಳಿಸುವ ಶಬ್ದದಿಂದ ಹಾರಾಡುವ ಜೆಟ್ ವಿಮಾನಗಳು, ಸೈನ್ಯದ ಹೆಲಿಕಾಪ್ಟರ್, ಹಾ ಹೂ ಎಂದು ಉದ್ಗರಿಸುವ ಜನರು, ಶಬ್ದದಿಂದ ಬೆಚ್ಚಿಬಿದ್ದು ಕಿರುಚಿಕೊಂಡು ಅಳುವ ಮಕ್ಕಳು, ಅವನ್ನು ಸಮಾಧಾನಪಡಿಸಲು ಹೆಣಗಾಡುವ ತಂದೆತಾಯಂದಿರು, ತಮ್ಮ ಅನುಭವದಿಂದ ಸಲಹೆ ಕೊಡುವ ಅಜ್ಜಅಜ್ಜಿಯರು, ಇವನ್ನೆಲ್ಲ ನೋಡುತ್ತಾ ಮುಖ ತಿರುಗಿಸುವ ಯುವಜನರು, ಇದೆಲ್ಲಿಂದಲೋ ತೇಲಿ ಬರುವ ವಾದ್ಯ ಸಂಗೀತ, ಸೌತ್ ಬ್ಯಾಂಕಿನಲ್ಲಿ ಹರಡಿದ್ದ ದೊಡ್ಡ ಸ್ಟೇಜಿನೆ ಮೇಲೆ ನಿಂತು ಹಾಡುವ ಬ್ಯಾಂಡ್ ಸಂಗೀತ, ಕುರುಕಲು ತಿಂಡಿ, ಸೇವಿಸಿದ ವೈನ್ ಯಾ ಬಿಯರ್ ಹೆಚ್ಚಾಗಿ ಒಳಗಿನ ಪರಮಾತ್ಮ ಮಾತನಾಡಲಾರಂಭಿಸುವುದು, ಪುಕಸಟ್ಟೆ ಮೋಜು-ನಗು, ನದಿಯ ಆಚೆಕಡೆಯಿಂದ ಸುತ್ತಲಿನ ಕಟ್ಟಡಗಳ ಮೇಲೆ ಬೀಳುತ್ತಿರುವ ಲೇಸರ್ ಬೆಳಕಿನ ಚಿತ್ತಾರಗಳು, ಅವನ್ನು ಪ್ರತಿಫಲಿಸುವ ನದಿಯ ನೀರು, ಅದೊಂದು ಕಿರುಕಾಲದಲ್ಲೆ ಸೃಷ್ಟಿಯಾಗಿ ಕಣ್ಣೆದುರಿನಲ್ಲೇ ಕರಗುತ್ತಾ ಮಾಯವಾಗುವ ಭ್ರಮಾಲೋಕ! ಇಂಥದ್ದೊಂದು ವಾತಾವರಣ, ಮೂಡ್, ಬಣ್ಣ-ಬೆಳಕಿನ ರಂಗಿನ ಭ್ರಮಾಲೋಕ ನಮ್ಮಂಥ ಹುಲುಮಾನವರಿಗೆ ಬೇಕೇಬೇಕು. ಆಗಲೇ ನಾವು ಮನುಷ್ಯರೆಂದು ಸಾಬೀತಾಗುವುದು ಎಂದೆನಿಸುತ್ತದೆ.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.