ಜಸ್ನಾ ಸರೋವರದ ಪ್ರವಾಸಿಗರಿಗೆ ಒಂದು ಅನಿರೀಕ್ಷಿತ ಉಡುಗೊರೆ ಕಾದಿರುತ್ತದೆ. ಅದು ಇಲ್ಲಿನ ಪ್ರಮುಖ ಆಕರ್ಷಣೆ – ಫೋಟೋ ಫ್ರೇಮ್! ಇಲ್ಲಿ ಬರುವ ಪ್ರವಾಸಿಗಳಿಗೆ ಫೋಟೊಗೋಸ್ಕರವಾಗಿ ಮರದಲ್ಲಿ ಮಾಡಿದ ಒಂದು ಸುಂದರವಾದ ಫೋಟೋ ಫ್ರೇಮ್ ಇದೆ. ಅದರ ಕೊನೆಯಲ್ಲಿ ಸ್ಲೋವೇನಿಯಾದ ಅಜ್ಜ ಪ್ರತಿಯೊಬ್ಬರ ಜೊತೆಗೂ ನೆನಪಾಗಿ ಅವರವರ ಮನೆಗಳಿಗೆ ತೆರಳುತ್ತಾನೆ. ನಾವೆಲ್ಲರೂ ಕೂತು ತೆಗೆಸಿಕೊಂಡಿರುವ ಫೋಟೋ ನೋಡಿದರೆ ನಿಮಗೊಂದು ಕ್ಷಣಕ್ಕೆ ಅಚ್ಚರಿಯಾಗುವುದು ಖಚಿತ. ಆ ಅಜ್ಜ ನಮ್ಮಲ್ಲಿಯ ಯಾರೋ ಒಬ್ಬರು ಎಂಬಂತೆ ಕಾಣುವಷ್ಟು ಚೆನ್ನಾಗಿ ಮೂಡಿ ಬಂದಿರುವ ಕೆತ್ತನೆಯ ಕಲಾವಿದನಿಗೆ ಹಾಗೂ ಈ ಕಲ್ಪನೆಯನ್ನು ಸಾಕಾರಗೊಳಿಸಿದ ಇಲ್ಲಿಯ ಪ್ರವಾಸೋದ್ಯಮ ಇಲಾಖೆಗೆ ನನ್ನ ಧನ್ಯವಾದಗಳು.
ಸ್ಲೊವೇನಿಯಾ ಪ್ರವಾಸದ ಮತ್ತಷ್ಟು ಅನುಭವಗಳನ್ನು ಹಂಚಿಕೊಂಡಿದ್ದಾರೆ ಗುರುದತ್ ಅಮೃತಾಪುರ
ಕಳೆದ ಸಂಚಿಕೆಯಲ್ಲಿ ಸ್ಲೊವೆನೆ ಭಾಷೆಯ ಬಳಕೆಯ ಬಗ್ಗೆ ವಿವರಿಸಿದ್ದೆ. ಅವರ ಭಾಷಾಭಿಮಾನದ ಬಗೆಗೆ ಆಶ್ಚರ್ಯ ವ್ಯಕ್ತಪಡಿಸಿದ್ದೆ. ಸ್ಲೊವೆನೆ ಭಾಷೆಯಲ್ಲಿ 46 ಆಡು ನುಡಿಗಳಿವೆಯಂತೆ (Dielects)! ಉದಾಹರಣೆಗೆ ನಮ್ಮ ಕರ್ನಾಟಕದಲ್ಲಿ ಕನ್ನಡ ಮಾತೃ ಭಾಷೆಯಾದರೂ, ಮಾತಾಡುವ ಶೈಲಿ ಆಯಾ ಪ್ರದೇಶಕ್ಕೆ ತಕ್ಕಂತೆ ಬದಲಾಗುತ್ತದೆ. ಮಂಡ್ಯದ ಕನ್ನಡ, ಉತ್ತರ ಕರ್ನಾಟಕದ ಕನ್ನಡ, ಉತ್ತರ ಕನ್ನಡದ ಕನ್ನಡ, ಮಂಗಳೂರಿನ ಕನ್ನಡ, ಕುಂದಾಪುರದ ಕನ್ನಡ ಇತ್ಯಾದಿ ಎಲ್ಲವೂ ಆಡು ಮಾತಿನಲ್ಲಿ ಬೇರೆ ಬೇರೆ. ಆದರೆ ಎಲ್ಲೆಡೆ ಬರೆಯುವ ಶೈಲಿ ಒಂದೇ. ಇಪ್ಪತ್ತು ಲಕ್ಷ ಜನಸಂಖ್ಯೆ ಮಾತಾಡುವ ಒಂದು ಭಾಷೆಗೆ 46 ಆಡು ನುಡಿಗಳು ಇಂದಿಗೂ ಜೀವಂತವಾಗಿರುವುದು ಪ್ರಶಂಸನಾರ್ಹ.
ಈ ಪುಟ್ಟ ದೇಶದ ವಿಶೇಷ ಎಂದರೆ ಇಲ್ಲಿನ “ಜೇನು ಸಾಕಾಣಿಕೆ”. ಇಡೀ ಯುರೋಪಿಯನ್ ಒಕ್ಕೂಟದಲ್ಲಿ ಜೇನು ಸಾಕಾಣಿಕೆಯ ಸಾಂದ್ರತೆ ಸ್ಲೊವೇನಿಯಾ ಮತ್ತು ಗ್ರೀಸ್‌ನಲ್ಲಿ ಅತ್ಯಂತ ಹೆಚ್ಚು. ಸ್ಲೊವೇನಿಯಾದಲ್ಲಿ ಪ್ರತಿ 1000 ಜನರಿಗೆ ಕಡಿಮೆ ಎಂದರೂ 5 ಜನ ಜೇನು ಸಾಕಾಣಿಕೆ ಮಾಡುತ್ತಾರೆ. ಅದರಲ್ಲಿಯೂ “ಲ್ಯಾವೆಂಡರ್” ಹೂವಿನ ತೋಟಗಳಲ್ಲಿ ಜೇನು ಸಂಗ್ರಹಣೆ ಮಾಡುವುದು ಇಲ್ಲಿನ ವಿಶೇಷ. ಇತ್ತೀಚೆಗಿನ ಜೇನು ತುಪ್ಪದ ಕಲಬೆರಕೆಗಳ ಪ್ರಸಂಗಗಳನ್ನು ಗಂಭೀರವಾಗಿ ಪರಿಗಣಿಸಿರುವ ಯೂರೋಪಿನ ಜನರ ಮನೋಭಾವದ ಕಾರಣದಿಂದ ಯುರೋಪಿಯನ್ ಒಕ್ಕೂಟದಲ್ಲಿ ಜೇನು ಸಂಗ್ರಹಣೆಗೆ ಅತ್ಯಂತ ಕಠಿಣ ಮಾನದಂಡಗಳನ್ನು ವಿಧಿಸಲಾಗಿದೆ. ಹಾಗಾಗಿ ಯುರೋಪಿಯನ್ ಒಕ್ಕೂಟ ವ್ಯವಸ್ಥೆಯಲ್ಲಿ ಸಂಗ್ರಹಿಸಿ ಮಾರಲಾಗುವ ಜೇನು ತುಪ್ಪದ ಬೆಲೆ ಸ್ವಲ್ಪ ತುಟ್ಟಿಯಾದರೂ, ಬೇಡಿಕೆ ಕಡಿಮೆಯಾಗಿಲ್ಲ. ಸ್ಲೊವೇನಿಯಾ ಜನರಿಗೆ ಇದು ವರದಾನವಾಗಿದೆ.
ಸ್ಲೊವೇನಿಯಾದ ಮತ್ತೊಂದು ಹೆಗ್ಗಳಿಕೆ ಇಲ್ಲಿನ ಸಂರಕ್ಷಿತ ಪ್ರದೇಶಗಳು. ಪ್ರಪಂಚದಾದ್ಯಂತ ಅತೀ ಹೆಚ್ಚು ವನ್ಯ ಪ್ರದೇಶಗಳನ್ನು ಅಧಿಕೃತವಾಗಿ ಸಂರಕ್ಷಿಸಿರುವ ದೇಶಗಳಲ್ಲಿ ವೆನೆಜುವೆಲಾ ನಂತರದ ಸ್ಥಾನದಲ್ಲಿರುವುದು ಸ್ಲೊವೇನಿಯಾ. ದೇಶದ 54% ಭೂ ಭಾಗ ವನ್ಯ ಪ್ರದೇಶಗಳೆಂದು ಘೋಷಿಸಲಾಗಿದೆ. ಅಂದರೆ ದೇಶದ ಅರ್ಧಕ್ಕಿಂತ ಹೆಚ್ಚು ಭೂ ಭಾಗದಲ್ಲಿ ವಸತಿ ವ್ಯವಸ್ಥೆಯಾಗಲಿ, ಕಾರ್ಖಾನೆಗಳನ್ನಾಗಲಿ ತೆರೆಯಲು ಅನುಮತಿ ಇಲ್ಲ. ಮಾನವನ ಲಾಲಸೆಯ ಹಸ್ತ ಕ್ಷೇಪ ಇಲ್ಲದ ದೇಶದ ಅರ್ಧದಷ್ಟು ಭೂ ಭಾಗ ಇರುವ ಯೂರೋಪಿನ ಏಕೈಕ ದೇಶ ಸ್ಲೊವೆನಿಯಾ! ಸುಮ್ಮನೆ ಊಹಿಸಿ ನೋಡಿ, ನಮ್ಮ ಒತ್ತಡದ ಜೀವನ ಶೈಲಿಯ ನಡುವೆ ಈ ದೇಶದ ಪ್ರವಾಸ ಎಂಥಹ ಆಹ್ಲಾದಕರ ಅನುಭವವನ್ನು ನೀಡಬಹುದು. ಇಲ್ಲಿನ ಜನರ ಅನುಭೂತಿಗೆ ನಾನು ಶರಣು. ಈ ದೇಶವನ್ನು ಸುತ್ತಾಡುವ ಅವಕಾಶ ಸಿಕ್ಕ ನಾನು ಪುಣ್ಯವಂತ.
ಕ್ರಾನ್ಸ್ಕಾ ಗೋರಾ
ಈಗ ನನ್ನ ಪ್ರವಾಸದ ಅನುಭವವನ್ನು ಮುಂದುವರೆಸೋಣ. ಸ್ಲೊವೇನಿಯಾದ ಅತೀ ಪ್ರಸಿದ್ಧ ರಾಷ್ಟ್ರೀಯ ಉದ್ಯಾನವನ “ಟ್ರಿಗ್ಲವ್”. ಈ ಪ್ರದೇಶದ ಪ್ರಾರಂಭದ ತಪ್ಪಲಿನಲ್ಲಿ ಒಂದು ಸುಂದರವಾದ ಪುಟ್ಟ ಸರೋವರವಿದೆ. ಈ ಸರೋವರದ ಹೆಸರು “ಜಸ್ನಾ” ಎಂದು. ಕ್ರಾನ್ಸ್ಕಾ ಗೋರಾ (Kranjska Gora) ಎನ್ನುವ ಸಣ್ಣ ಪಟ್ಟಣದ ಕೊನೆಗಿರುವ ಈ ಸರೋವರದಲ್ಲಿ ಇರುವ ನೀರು ಶುಭ್ರ ಸ್ಪಟಿಕದಷ್ಟು ತಿಳಿ! ಇದಕ್ಕೆ ಕಾರಣ ಇದು ಬೇರೆ ಕೆರೆಗಳಂತೆ ನಿಂತ ನೀರಲ್ಲ. ಹರಿಯುವ ಪುಟ್ಟ ನದಿಗೆ ನಿಸರ್ಗ ನಿರ್ಮಿಸಿರುವ ತಂಗುದಾಣ. ಇದರ ಮೂಲ ನಿರ್ಗಲ್ಲುಗಳಿಂದ ಕರಗಿ ಬರುವ ನೀರು. ಈ ನೀರು ಹರಿಯುವಾಗ ಮಣ್ಣು ಬೆರೆಯುವುದಿಲ್ಲವಾದ್ದರಿಂದ, ಮಂಜುಗಡ್ಡೆ ಕರಗಿಸಿದರೆ ಹೇಗೆ ಶುಭ್ರ ನೀರು ಸಿಗುತ್ತದೆಯೋ, ಹಾಗೆಯೇ ಇದೆ. ಜಸ್ನಾ ಸರೋವರದ ಹಿಂದೆ ಟ್ರಿಗ್ಲವ್ ರಾಷ್ಟ್ರೀಯ ಉದ್ಯಾನವನದ ದೊಡ್ಡ ಪರ್ವತ ಶ್ರೇಣಿಗಳು. ನಿಸರ್ಗದ ಕಲೆಯನ್ನು ಕ್ಯಾಮರಾ ಎನ್ನುವ ಪುಟ್ಟ ಸಾಧನದಲ್ಲಿ ಸೆರೆ ಹಿಡಿಯಲು ಹೇಳಿ ಮಾಡಿಸಿದ ಜಾಗ. ನಾವು ಭೇಟಿ ಕೊಟ್ಟಾಗ ಗುಡುಗು-ಮಿಂಚುಗಳ ಆರ್ಭಟ ಜೋರಾಗಿತ್ತು. ಇನ್ನೇನು ಜೋರು ಮಳೆ ಸುರಿಯುವ ಹಾಗೆ ಕಂಡರೂ, ಒಂದಷ್ಟು ಒಳ್ಳೆ ಫೋಟೋಗಳು ಸಿಕ್ಕವು.
ಜಸ್ನಾ ಸರೋವರದ ಪ್ರವಾಸಿಗರಿಗೆ ಒಂದು ಅನಿರೀಕ್ಷಿತ ಉಡುಗೊರೆ ಕಾದಿರುತ್ತದೆ. ಅದು ಇಲ್ಲಿನ ಪ್ರಮುಖ ಆಕರ್ಷಣೆ – ಫೋಟೋ ಫ್ರೇಮ್! ಇಲ್ಲಿ ಬರುವ ಪ್ರವಾಸಿಗಳಿಗೆ ಫೋಟೊಗೋಸ್ಕರವಾಗಿ ಮರದಲ್ಲಿ ಮಾಡಿದ ಒಂದು ಸುಂದರವಾದ ಫೋಟೋ ಫ್ರೇಮ್ ಇದೆ. ಅದರ ಕೊನೆಯಲ್ಲಿ ಸ್ಲೋವೇನಿಯಾದ ಅಜ್ಜ ಪ್ರತಿಯೊಬ್ಬರ ಜೊತೆಗೂ ನೆನಪಾಗಿ ಅವರವರ ಮನೆಗಳಿಗೆ ತೆರಳುತ್ತಾನೆ. ನಾವೆಲ್ಲರೂ ಕೂತು ತೆಗೆಸಿಕೊಂಡಿರುವ ಫೋಟೋ ನೋಡಿದರೆ ನಿಮಗೊಂದು ಕ್ಷಣಕ್ಕೆ ಅಚ್ಚರಿಯಾಗುವುದು ಖಚಿತ. ಆ ಅಜ್ಜ ನಮ್ಮಲ್ಲಿಯ ಯಾರೋ ಒಬ್ಬರು ಎಂಬಂತೆ ಕಾಣುವಷ್ಟು ಚೆನ್ನಾಗಿ ಮೂಡಿ ಬಂದಿರುವ ಕೆತ್ತನೆಯ ಕಲಾವಿದನಿಗೆ ಹಾಗೂ ಈ ಕಲ್ಪನೆಯನ್ನು ಸಾಕಾರಗೊಳಿಸಿದ ಇಲ್ಲಿಯ ಪ್ರವಾಸೋದ್ಯಮ ಇಲಾಖೆಗೆ ನನ್ನ ಧನ್ಯವಾದಗಳು.
ದೇಶದ ಅರ್ಧಕ್ಕಿಂತ ಹೆಚ್ಚು ಭೂ ಭಾಗದಲ್ಲಿ ವಸತಿ ವ್ಯವಸ್ಥೆಯಾಗಲಿ, ಕಾರ್ಖಾನೆಗಳನ್ನಾಗಲಿ ತೆರೆಯಲು ಅನುಮತಿ ಇಲ್ಲ. ಮಾನವನ ಲಾಲಸೆಯ ಹಸ್ತ ಕ್ಷೇಪ ಇಲ್ಲದ ದೇಶದ ಅರ್ಧದಷ್ಟು ಭೂ ಭಾಗ ಇರುವ ಯೂರೋಪಿನ ಏಕೈಕ ದೇಶ ಸ್ಲೊವೆನಿಯಾ! ಸುಮ್ಮನೆ ಊಹಿಸಿ ನೋಡಿ, ನಮ್ಮ ಒತ್ತಡದ ಜೀವನ ಶೈಲಿಯ ನಡುವೆ ಈ ದೇಶದ ಪ್ರವಾಸ ಎಂಥಹ ಆಹ್ಲಾದಕರ ಅನುಭವವನ್ನು ನೀಡಬಹುದು.
ಲೋಗಾರ್ ವ್ಯಾಲಿ
ಪ್ರವಾಸದ ಯೋಜನೆಯನ್ನು ತಯಾರಿಸುವಾಗ ಆದಷ್ಟೂ ಎಲೆಮರೆ ಕಾಯಿಯಂತಹ ಪ್ರದೇಶಗಳನ್ನು ನನ್ನ ಪಟ್ಟಿಯಲ್ಲಿ ಸೇರಿಸುವುದು ನನ್ನ ಹವ್ಯಾಸ. ಇದರಿಂದ ಬಹಳಷ್ಟು ಅನುಕೂಲಗಳಿವೆ. ಜನ ಜಂಗುಳಿಯಿಂದ ದೂರವಿರಬಹುದು. ಈ ಪ್ರದೇಶಗಳಿಗೆ ಭೇಟಿ ನೀಡಲು ಮಾಹಿತಿಗಳನ್ನು ಕೆದಕಿ ತೆಗೆಯಬೇಕಾಗಿರುವುದರಿಂದ, ನನ್ನ ಜ್ಞಾನಾರ್ಜನೆ ಕೂಡ ಆಗುತ್ತದೆ. ಸ್ಲೊವೇನಿಯಾ ಭೇಟಿಯ ಸಂದರ್ಭದಲ್ಲಿಯೂ ಸಹ ಇಂತಹದೊಂದು ಸ್ಥಳ ನನ್ನ ಪಟ್ಟಿಯಲ್ಲಿತ್ತು- “ಲೋಗಾರ್ ವ್ಯಾಲಿ”. ಈ ಪರ್ವತಗಳ ಕಣಿವೆ ತಲುಪಲು ಸ್ಲೊವೇನಿಯಾದ ರಾಜಧಾನಿಯಾದ ಲುಬಿಲಿಯಾನಾದಿಂದ ಎರಡು ಘಂಟೆಗಳ ಕಾರಿನ ಪ್ರಯಾಣ. ಇಲ್ಲಿ ವಾಹನಗಳಿಗೂ ಸಹ ಪ್ರವೇಶ ಶುಲ್ಕವಿದೆ. ಕಾರಿಗೆ ಏಳು ಯುರೋ ಕೊಟ್ಟು ಕಣಿವೆಯನ್ನು ಪ್ರವೇಶಿಸಬಹುದು. ಪೂರ್ಣ ಕಣಿವೆ ಒಂದು ರಾಷ್ಟ್ರೀಯ ಉದ್ಯಾನವನವಾದ್ದರಿಂದ ಈ ವ್ಯವಸ್ಥೆ.
ಲೋಗಾರ್ ವ್ಯಾಲಿಯಲ್ಲಿ ಕಾರು ಓಡಿಸುವುದು ಒಂದು ಆಹ್ಲಾದಕರ ಪ್ರಕ್ರಿಯೆ. ಪ್ರಶಾಂತವಾದ ಕಾಡುಗಳು. ಎತ್ತ ನೋಡಿದರೂ ಪರ್ವತ ಶ್ರೇಣಿಗಳು. ಮೇ ತಿಂಗಳಲ್ಲಿ ಭೇಟಿ ನೀಡಿದ್ದರಿಂದ, ಅದು ಇಲ್ಲಿನ ಚೈತ್ರ ಕಾಲ. ಹುಲ್ಲು ಹಾಸಿನ ಮೇಲೆ ನೈಸರ್ಗಿಕವಾಗಿ ಬೆಳೆದಿರುವ ಹಳದಿ ಹೂವುಗಳು ಬೇರೆಯ ಮೆರುಗನ್ನು ತಂದಿದ್ದವು. ಕಣಿವೆಯ ಕೊನೆಯ ಜಾಗದಲ್ಲಿ ಕಾರು ನಿಲ್ಲಿಸಿ, ಮನಸ್ಸಿಗೆ ಬಂದಷ್ಟು ಹೊತ್ತು ಚಾರಣ ಮಾಡಬಹುದು. ನಮ್ಮ ಜೊತೆಯಲ್ಲಿ ವಯಸ್ಸಾದ ನನ್ನಮ್ಮ, ಅತ್ತೆ-ಮಾವ ಇದ್ದಿದ್ದರಿಂದ ತುಂಬಾ ದೂರ ಹೋಗಲು ಸಾಧ್ಯವಾಗಲಿಲ್ಲ. ಆದರೆ ಕಾನನದ ನಡುವೆ, ಕಲ್ಲಿನ ದಾರಿಯಲ್ಲಿ “ರಿಂಕಾ” ಜಲಪಾತದವರೆಗೂ ಎಲ್ಲರೂ ನಡೆದು ಬಂದದ್ದು ನನಗೆ ಆಶ್ಚರ್ಯ ಮತ್ತು ಸಂತಸ ಉಂಟು ಮಾಡಿತ್ತು.
ಲುಬಿಲಿಯಾನಾ
ಈ ದೇಶದ ರಾಜಧಾನಿ ಲುಬಿಲಿಯಾನಾ (ljubljana). ಈ ನಗರದ ಜನಸಂಖ್ಯೆ ಕೇವಲ ಮೂರೂ ಲಕ್ಷ! ನಮ್ಮ ಬೆಂಗಳೂರಿನಲ್ಲಿ ಒಂದು ಕಾಲು ಕೋಟಿ ಜನರಿದ್ದಾರೆ. ಬಹುಷಃ ಜಯನಗರ ಅಥವಾ ಜೆ ಪಿ ನಗರ ಒಂದರಲ್ಲೇ ಲುಬಿಲಿಯಾನಾಗಿಂತ ಹೆಚ್ಚು ಜನಸಂಖ್ಯೆಯಿದೆ. ಪುಟ್ಟ ನಗರವಾದರೂ ಚೊಕ್ಕವಾಗಿದೆ. ಪ್ರವಾಸಿಗರಿಗೆ ನೋಡಲು ಹಲವು ಜಾಗಗಳಿವೆ. ರಾಜಧಾನಿಯ ನಡುವೆ ಇರುವ ಒಂದು ಸಣ್ಣ ಗುಡ್ಡದಲ್ಲಿ ಐತಿಹಾಸಿಕ ಕೋಟೆಯಿದೆ. ಈ ಕೋಟೆ ತಲುಪಲು ಪ್ರತ್ಯೇಕ ಪುಟಾಣಿ ರೈಲು ವ್ಯವಸ್ಥೆಯಿದೆ. ಇಲ್ಲಿಂದ ಸಂಪೂರ್ಣ ಲುಬಿಲಿಯಾನಾ ಕಾಣುತ್ತದೆ. ಇದನ್ನು ಬಿಟ್ಟರೆ ಲುಬಿಲಿಯಾನದಲ್ಲಿ ಸ್ಲೊವೇನಿಯಾದ ಪಾರ್ಲಿಮೆಂಟ್ ಇದೆ. ಹೊರಗಿನಿಂದ ಸಾಮಾನ್ಯ ಕಟ್ಟಡದಂತೆ ಕಾಣುತ್ತದೆ.
ಲುಬಿಲಿಯಾನಾ ನಗರದ ಹೃದಯ ಭಾಗದಲ್ಲಿ ಹರಿಯುವ ನದಿಯ ಹೆಸರು “Ljubljanica “. ನದಿಯ ಉದ್ದಗಲಕ್ಕೂ ಅಡ್ಡಾಡಲು ಪಾದಚಾರಿ ಮಾರ್ಗವಿದೆ. ಸಾಧ್ಯವಾದ ಕಡೆಗಳಲ್ಲಿ ಉದ್ಯಾನವನಗಳೂ ಸಹ ನದಿಯ ದಂಡೆಯಲ್ಲಿದೆ. ಅಲ್ಲಲ್ಲಿ ಹಲವಾರು ಸೇತುವೆಗಳನ್ನು ಕಟ್ಟಲಾಗಿದೆ. ಬೇಸಿಗೆಯ ಕಾಲದಲ್ಲಿ ಎಲ್ಲ ಸೇತುವೆಗಳು ಸಹ ಹೂವಿನಿಂದ ಅಲಂಕರಿಸಲಾಗಿರುತ್ತದೆ. ಕೆಲವು ಸೇತುವೆಗಳು ಪಾದಚಾರಿಗಳಿಗೆ ಮಾತ್ರ ಮೀಸಲು. ಒಂದು ಸೇತುವೆಯ ನಡೆದಾಡುವ ಜಾಗವನ್ನು ಗಾಜಿನಿಂದ ನಿರ್ಮಿಸಲಾಗಿದೆ. ಈ ಸೇತುವೆಯಲ್ಲಿ ವಿಚಿತ್ರ ಎನ್ನಿಸಿದ್ದು ಒಂದು ರೀತಿಯ (ಮೂಢ) ನಂಬಿಕೆ! ಈ ನಂಬಿಕೆ ಪ್ರೇಮಿಗಳಿಗೆ ಸಂಬಂಧಿಸಿದ್ದು. ಈ ಸೇತುವೆಗೆ ಹಾಕಿರುವ ತರಾವರಿ ಬೀಗಗಳನ್ನು ಇಲ್ಲಿ ನೋಡಬಹುದು. ಆ ನಂಬಿಕೆ ಏನೆಂದರೆ: ಬೀಗದ ಮೇಲೆ ತಮ್ಮ ಗುರುತುಗಳನ್ನು ನಮೂದಿಸಿ, ಬೀಗವನ್ನು ಇಲ್ಲಿ ಕಟ್ಟಿ ಕೀಯನ್ನು ನದಿಗೆ ಬಿಸಾಡಿ ಹೋಗುತ್ತಾರೆ. ಅಂದರೆ ಈ ನದಿ ತಮ್ಮ ಪ್ರೀತಿಯನ್ನು ಶಾಶ್ವತವಾಗಿಡುತ್ತದೆ ಎನ್ನುವ ನಂಬಿಕೆ ಈ ಜನರಿಗೆ. ಬರುವ ಪ್ರವಾಸಿಗರೂ ಸಹ ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದನ್ನು “ಲವ್ ಲಾಕ್” ಎಂದು ಕರೆಯುತ್ತಾರೆ. ಎಣಿಸಲಾರದಷ್ಟು ಬೀಗಗಳು ಈ ಸೇತುವೆಯಲ್ಲಿ ನೇತಾಡುತ್ತಿವೆ. ಉಪೇಂದ್ರ ಅಭಿನಯದ “ಸೂಪರ್ ರಂಗ” ಚಲನ ಚಿತ್ರದ “ಡಾನ್ಸ್ ರಾಜ ಡಾನ್ಸ್..” ಸಂಪೂರ್ಣ ಹಾಡನ್ನು ಲುಬಿಲಿಯಾನದಲ್ಲಿ ಚಿತ್ರೀಕರಿಸಲಾಗಿದೆ.
ಸ್ಲೊವೇನಿಯಾ ಒಂದು ಪುಟ್ಟ ರಾಷ್ಟ್ರವಾದರೂ, ಅಲ್ಲಿನ ಪ್ರವಾಸದ ಅನುಭವ ಮಾತ್ರ ಅಚ್ಚಳಿಯದೆ ಇರುವಂಥದ್ದು. ಇಲ್ಲಿನ ಜನರ ಭಾಷಾಭಿಮಾನ, ನಿಸರ್ಗದ ಪ್ರೀತಿ, ಸ್ವಾಭಿಮಾನವನ್ನು ತಕ್ಕಡಿಯ ಒಂದು ಭಾಗದಲ್ಲಿ ಹಾಕಿದರೆ, ಇನ್ನೊಂದು ಭಾಗದಲ್ಲಿ ಪ್ರವಾಸಿಗರಿಗೆ ಇರುವ ವೈವಿಧ್ಯಮಯ ಅವಕಾಶಗಳು ಸಮನಾಗಿ ತೂಗುತ್ತವೆ. ಪೋಸ್ಟಾಯ್ನಾ ಗುಹೆಗಳಿಂದ ಹಿಡಿದು ಅದ್ಭುತ ಸರೋವರಗಳು, ಪರ್ವತ ಕಣಿವೆಗಳನ್ನು ಹೊಂದಿರುವ, ಕಾಪಾಡಿಕೊಂಡಿರುವ ಈ ದೇಶದ ಜನರು ಧನ್ಯರು. ಈ ದೇಶದ ಅರ್ಧಕ್ಕಿಂತಲೂ ಹೆಚ್ಚು ಈಗಲೂ ಅಡವಿ ಎಂದರೆ, ಈ ಜನಗಳಿಗೆ ದುರಾಸೆಯೇ ಇಲ್ಲವಾ ಎನ್ನುವ ಪ್ರಶ್ನೆಗಳು ಸಹ ನನ್ನಲ್ಲಿ ಮೂಡಿವೆ. ಈ ಪುಟ್ಟ ರಾಷ್ಟ್ರದಿಂದ ನಾವು ಕಲಿಯಬೇಕಾಗಿರುವುದು, ಅಳವಡಿಸಿಕೊಳ್ಳಬೇಕಾಗಿರುವುದು ಬಹಳಷ್ಟಿದೆ. ಒಟ್ಟಿನಲ್ಲಿ ಜಗತ್ತಿನೆದುರಿಗೆ ಸ್ಲೊವೇನಿಯಾ ನನಗೆ ಕಂಡದ್ದು ಹೀಗೆ: ಇದೊಂದು ಯಾರ ಉಸಾಬರಿಗೂ ಮೂಗು ತೂರಿಸದ, ತನ್ನ ತನವನ್ನು ತಾನು ಕಾಪಾಡಿಕೊಂಡಿರುವ ಸಣ್ಣ ಸುಖೀ ಸಂಸಾರ! ಯಾರ ಕೆಟ್ಟ ದೃಷ್ಟಿ ಬೀಳದೆ ಇದು ಸದಾ ಹೀಗೆಯೇ ಇರಲಿ ಎಂದು ಪ್ರಾರ್ಥಿಸುತ್ತೇನೆ.
(ಮುಂದಿನ ಸಂಚಿಕೆಯಲ್ಲಿ ಬೇರೊಂದು ದೇಶದ ಪ್ರವಾಸ ಕಥನದೊಂದಿಗೆ ನಿಮ್ಮ ಮುಂದೆ ಬರಲಿದ್ದೇನೆ.)
ಮೂಲತಃ ದಾವಣಗೆರೆಯವರಾದ ಗುರುದತ್ ಸಧ್ಯ ಜೆರ್ಮನಿಯ ಕಾನ್‌ಸ್ಟೆನ್ಸ್‌ನಲ್ಲಿ ವಾಸಿಸುತ್ತಿದ್ದಾರೆ. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಫೋಟೋಗ್ರಫಿ, ಪ್ರವಾಸ, ಚಾರಣ, ಪುಸ್ತಕಗಳ ಓದು ಇವರ ಹವ್ಯಾಸಗಳು..
Mr gurudat by his unique and fluent kannada took me nook and corner of this beautiful and small country. Kudos
ಅಬ್ಬ!!! ಸ್ಲೊವೇನಿಯಾ ನನಗೆ ತುಂಬ ಇಷ್ಟವಾದ ಪ್ರಶಾಂತ ನಿಸರ್ಗದ ತಾಣ. ಹೂವಿನ ಮೆರವಣಿಗೆ ನೆನಪಿನಂಗಳದಲ್ಲಿ ಹಸಿರು ಹಸಿರು. ಚನ್ನಾಗಿ ಮೂಡಿಬಂದಿದೆ ಲೆಖನ. ಮತ್ತೊಮ್ಮೆ ಆ ಊರು ಸುತ್ತಿದ ಅನುಭವವಾಯ್ತು ಓದಿ. ಮುಂದುವರೆಸು ಪ್ರವಾಸ ಕಥನ.
ಶುಭವಾಗಲಿ.
ನಮಸ್ಕಾರ ಗುರುದತ್
ನಿಮ್ಮ ಬರೆವಣಿಗೆ ಶೈಲಿ ಚೆನ್ನಾಗಿದೆ. ಅಲ್ಲಿಯ ಜೇನು ಸಾಕಣೆಯ ಸ್ವಾರಸ್ಯ, ಅರಣ್ಯ ಭಾಗ, ಮರದ ಅಜ್ಜ… ಹೀಗೆ ಅಲ್ಲಿ ಖುದ್ದಾಗಿ ನೋಡಿದ ಅನುಭವ ಬಣ್ಣಿಸುತ್ತ ನಡುವೆ ಕನ್ನಡ ಚಿತ್ರಗೀತೆ ಯ ಉಲ್ಲೇಖ..
ಕೊನೆಯ ಸಾರಾಂಶದ ಅರ್ಥ.
ಹೀಗೆ ಒಟ್ಟಾರೆಯಾಗಿ ಜಗತ್ತಿನ ಮೂಲೆಯಲ್ಲಿ ಕೂತು ಓದುಗನಿಗೂ ಒಳ್ಳೆಯ ಅನುಭವ ಕೊಡುತ್ತೀರಾ ನೀವು