ಪ್ರವಾಸದ ಹವ್ಯಾಸವಿರುವವರಿಗೆ ತಮ್ಮ ಪ್ರತಿಯೊಂದು ಪ್ರವಾಸದಲ್ಲೂ, ಒಂದಿಲ್ಲೊಂದು ಅನಿರೀಕ್ಷಿತ ಅನುಭವಗಳು ಆಗುವುದು ಖಚಿತ. ನಮಗೆ ಈ ಬಾರಿ ಇಸ್ರೇಲಿನಿಂದ ಬಂದಿದ್ದ ಪ್ರವಾಸಿಗರು ನಮ್ಮನ್ನು ಅವರಾಗಿಯೇ ಪರಿಚಯ ಮಾಡಿಕೊಂಡು, ನಾವು ಭಾರತೀಯರು ಎಂದು ತಿಳಿದ ಮೇಲೆ “ಇಸ್ರೇಲ್ – ಇಂಡಿಯಾ ಭಾಯಿ ಭಾಯಿ” ಎಂದು ಹೇಳಿ ಒಂದು ಅಪ್ಪುಗೆಯನ್ನು ಕೊಟ್ಟರು. ಅವರು ಭಾರತಕ್ಕೂ ಭೇಟಿ ನೀಡಿದ್ದರಂತೆ. “ವಾರಾಣಸಿಯ ಅನುಭವ ಪ್ರಪಂಚದ ಯಾವ ಭಾಗದಲ್ಲಿಯೂ ನನಗೆ ಸಿಕ್ಕಿಲ್ಲ..” ಎಂದು ಒಂದೈದು ನಿಮಿಷಗಳ ಕಾಲ ತಮ್ಮ ಭಾರತ ಪ್ರವಾಸದ ಮೆಲುಕು ಹಾಕಿದರು.  ʼದೂರದ ಹಸಿರುʼ ಅಂಕಣದಲ್ಲಿ ಗುರುದತ್‌ ಅಮೃತಾಪುರ ಸ್ಲೋವೇನಿಯಾ ಪ್ರವಾಸದ ಕುರಿತು ಬರೆದ ಲೇಖನ ಇಲ್ಲಿದೆ. 

 

ಸ್ಲೊವೇನಿಯಾದ ಪ್ರವಾಸ ಮುಂದುವೆರುವ ಮುಂಚೆ ಈ ಪುಟ್ಟ ದೇಶದ ಕೆಲವು ವೈಶಿಷ್ಟ್ಯಗಳನ್ನು ಹೇಳಲೇಬೇಕು. ಸ್ಲೊವೇನಿಯಾದ ವಿಸ್ತೀರ್ಣ ಕೇವಲ 20,000 ಚದರ ಕಿಲೋ ಮೀಟರ್ ಗಳು. ಅಂದರೆ ಕರ್ನಾಟಕದ ಒಂದನೇ ಹತ್ತು ಭಾಗದಷ್ಟು! ನಮ್ಮ ಹಳೆ ಮೈಸೂರು ಪ್ರಾಂತ್ಯದ ನಾಲ್ಕು ಜಿಲ್ಲೆಗಳನ್ನು ಕೂಡಿಸಿದರೆ ಸಿಗುವ ಭೂ ಭಾಗದಷ್ಟು ದೊಡ್ಡದು. ಇಲ್ಲಿನ ಜನಸಂಖ್ಯೆ ಸುಮಾರು ಇಪ್ಪತ್ತು ಲಕ್ಷದಷ್ಟು. ಇದೆಲ್ಲಕ್ಕಿಂತ ಹೆಚ್ಚಾಗಿ ನನಗೆ ಆಪ್ಯಾಯಮಾನವೆನಿಸಿದ್ದು ಇವರ ಭಾಷಾಭಿಮಾನ. ಒಟ್ಟು ಜನಸಂಖ್ಯೆಯ ಶೇಕಡ 90 ಕ್ಕಿಂತ ಹೆಚ್ಚು ಜನರು ತಮ್ಮ ನೆಲದ ಭಾಷೆಯಾದ “ಸ್ಲೊವೆನೆ” ಭಾಷೆಯನ್ನು ಯಾವುದೇ ಕೀಳರಿಮಿಯಿಲ್ಲದೆ, ಅಂಜಿಕೆಯಿಲ್ಲದೆ ಮಾತನಾಡುತ್ತಾರೆ. ಆದರೆ ದುರಭಿಮಾನ ಇಲ್ಲ. ಒಂದು ಸಣ್ಣ ದೇಶ ಹಲವಾರು ಧಾಳಿಗಳಿಗೊಳಗಾಗಿ, ವಿವಿಧ ದೇಶಗಳ ವಸಾಹತುಗಳ ಅಡಿಯಲ್ಲಿ ಗುಲಾಮಿತನವನ್ನು ಅನುಭವಿಸಿದರೂ, ಇಂದಿಗೂ ತನ್ನ ಭಾಷೆಯನ್ನು ಮಾತ್ರ ಬಿಟ್ಟು ಕೊಟ್ಟಿಲ್ಲ! ಇತ್ತೀಚಿಗೆ 1987 ರಲ್ಲಿ ಸೋವಿಯತ್ ಯೂನಿಯನ್ ನಿಂದ ಹೊರಬಂದು ಸ್ವತಂತ್ರವಾದ ದೇಶ.

ಯೂರೋಪಿಯನ್ ಒಕ್ಕೂಟದ ಅಧಿಕೃತ ಭಾಷೆಗಳಲ್ಲಿ ಸ್ಲೊವೆನೆ ಕೂಡ ಒಂದು. ಆಸ್ಟ್ರಿಯಾ ಮತ್ತು ಇಟಲಿ ದೇಶಗಳು ಈ ಭಾಷೆಯನ್ನು ಗುರುತಿಸಿ, ಅಧಿಕೃತ ಅಲ್ಪಸಂಖ್ಯಾತ ಭಾಷೆಗಳಲ್ಲಿ ಸೇರಿಸಿವೆ. ಕೇವಲ ಇಪ್ಪತ್ತು ಲಕ್ಷ ಜನಸಂಖ್ಯೆ ಇರುವ ಈ ಜನರಿಗೆ ಇಷ್ಟು ಅಭಿಮಾನ ಇರುವುದು ನಿಜಕ್ಕೂ ಮೆಚ್ಚಲೇಬೇಕಾದ ವಿಷಯ. ಬೆಂಗಳೂರಿನಲ್ಲಿ ಕನ್ನಡಿಗರು ಎದುರಿಗೆ ಸಿಕ್ಕವರ ಭಾಷೆಗನುಸಾರವಾಗಿ ಭಾಷೆಯನ್ನು ಬದಲಿಸುವುದನ್ನು ನೋಡಿದರೆ, ನಮಗೂ ಸ್ಲೊವೇನಿಯನ್ ಜನರಿಗೂ ಉತ್ತರ ಧೃವ- ದಕ್ಷಿಣ ಧೃವದಷ್ಟು ವ್ಯತ್ಯಾಸವಿದೆ ಎಂಬ ಭಾವನೆ ಮೂಡುವುದು ತಪ್ಪಲ್ಲ.

ಬೆಂಗಳೂರಿನಲ್ಲಿ ಕನ್ನಡಿಗರು ಎದುರಿಗೆ ಸಿಕ್ಕವರ ಭಾಷೆಗನುಸಾರವಾಗಿ ಭಾಷೆಯನ್ನು ಬದಲಿಸುವುದನ್ನು ನೋಡಿದರೆ, ನಮಗೂ ಸ್ಲೊವೇನಿಯನ್ ಜನರಿಗೂ ಉತ್ತರ ಧೃವ- ದಕ್ಷಿಣ ಧೃವದಷ್ಟು ವ್ಯತ್ಯಾಸವಿದೆ ಎಂಬ ಭಾವನೆ ಮೂಡುವುದು ತಪ್ಪಲ್ಲ.

 

ಗೋಲ್ಡನ್ ಸ್ಟಾರ್ ಗಣೇಶ್ ಅವರ “ಮುಂಗಾರು ಮಳೆ – ೨” ಚಲನಚಿತ್ರದ ಅತ್ಯಂತ ಜನಪ್ರಿಯ ಹಾಡು “ಸರಿಯಾಗಿ ನೆನಪಿದೆ ನನಗೆ…” ಎನ್ನುವ ಸುಮಧುರ ಗೀತೆಯನ್ನು ಚಿತ್ರೀಕರಿಸಿರುವುದು ಸ್ಲೊವೇನಿಯಾದಲ್ಲಿ. ಶರತ್ಕಾಲ ಮುಗಿಯುವ ಮತ್ತು ಚಳಿಗಾಲ ಪ್ರಾರಂಭವಾಗುವ ಸಮಯದಲ್ಲಿ ಈ ಚಿತ್ರೀಕರಣ ನಡೆದಿದೆ ಅನ್ನಿಸಿತು. ಒಮ್ಮೆ ಯೂ ಟ್ಯೂಬಿನಲ್ಲಿ ನೋಡಿ, ಮತ್ತೆ ಈ ಓದನ್ನು ಮುಂದಿವರೆಸಿ. ಆದರೆ ಒಂದು ಷರತ್ತು: ಈ ಬಾರಿ ಹಾಡು ನೋಡುವಾಗ ನಾಯಕ-ನಾಯಿಕಿಗಿಂತ ಹೆಚ್ಚಾಗಿ, ಚಿತ್ರೀಕರಣದ ಪ್ರದೇಶಗಳನ್ನು ಗಮನಿಸಲು ಪ್ರಯತ್ನಿಸಿ.

ಈ ಹಾಡಿನಲ್ಲಿ ಒಂದು ಸುಂದರ ಸರೋವರದ ಕಾಣುತ್ತದೆ. ಅದೇ “ಲೇಕ್ ಬ್ಲಡ್ (Bled)”. ಅದರ ಹೆಸರು ಸ್ವಲ್ಪ ವಿಚಿತ್ರವಾದರೂ ಸತ್ಯ. Bled ಎನ್ನುವ ಊರಿನ ಸಮೀಪವಿರುವುದರಿಂದ ಈ ಸರೋವರಕ್ಕೆ ಲೇಕ್ ಬ್ಲಡ್ ಎಂದು ಹೆಸರು ಬಂದಿದೆ. ಸರೋವರದ ಒಂದೆಡೆಗೆ ಬಂದು ನಿಂತರೆ ದೃಶ್ಯ ಕಾವ್ಯದಂತೆ ಕಾಣುತ್ತದೆ. ತಿಳಿ ನೀರ ಸರೋವರ. ಸರೋವರದ ಮಧ್ಯ ಭಾಗದಲ್ಲಿ ಒಂದು ಪುಟ್ಟ ದ್ವೀಪ. ಆ ದ್ವಿಪದಲ್ಲೊಂದು ಚರ್ಚ್. ಸರೋವರದ ಹಿಂಭಾಗದಲ್ಲಿ ಬಾನೆತ್ತರದ ಪರ್ವತ ಶ್ರೇಣಿಗಳು. ಚಳಿ ಗಾಲದಲ್ಲಿ ಹೋದರೆ ಹಿಮದ ಹೊದಿಕೆಯಿಂದ ತುಂಬಿರುವ ಪರ್ವಾಗಳು, ಬೇಸಿಗೆಯಲ್ಲಿ ಹಸಿರು ಹಾಸಿನಿಂದ ಕಂಗೊಳಿಸುತ್ತವೆ. ಆ ತುದಿಯ ಎಡ ಭಾಗದ ಕಡಿದಾದ ಬಂಡೆಯ ಮೇಲೆ ಒಂದು ಕೋಟೆ. ಪ್ರವಾಸಿಗರಿಗಾಗಿ ಕಾದು ನಿಂತ ಹಲವಾರು ಅಂಬಿಗರ ದೋಣಿಗಳು. ಹುಟ್ಟು ಹಾಕುತ್ತಾ ನಿಧಾನವಾಗಿ ಸಾಗುತ್ತಿರುವ ದೋಣಿಗಳಲ್ಲಿ ಈ ದೃಶ್ಯ ವೈಭವವನ್ನು ಸೆರೆ ಹಿಡಿಯುತ್ತಿರುವ ಪ್ರವಾಸಿಗರು. ಅದ್ಭುತ ದೃಶ್ಯ ಕಾವ್ಯ. ಶರತ್ಕಾಲದಲ್ಲಿ ಭೇಟಿ ನೀಡಿದರಂತೂ, ಪದಗಳ ಚೌಕಟ್ಟಿನಲ್ಲಿ ವರ್ಣಿಸಲು ಸಾಧ್ಯವಿಲ್ಲ. ಮರ ಗಿಡಗಳಲ್ಲಿನ ಎಳೆಗಳು ತಮ್ಮ ಸಂಧ್ಯಾಕಾಲವನ್ನು ತಲುಪಿರುತ್ತವೆ. ದ್ಯುತಿ ಸಂಶ್ಲೇಷಣ ಕ್ರಿಯೆ ನಿಂತು ಹೋಗಿರುವುದರಿಂದ ಅವುಗಳ ಬಣ್ಣ ಹಳದಿ, ಕಡು ಹಳದಿಯಿಂದ ಹಿಡಿದು ಕೆಂಪು ವರ್ಣಗಳವೆರೆಗೂ ಆಗಿರುತ್ತವೆ. ಆ ಕಾಲದಲ್ಲಿ ಈ ಸರೋವರದ ದೃಶ್ಯ ವರ್ಣಿಸಲಸಾಧ್ಯವಾದಷ್ಟು ಸುಂದರವಾಗಿ ಕಾಣುತ್ತದೆ. ಹಿಂದಿರುವ ಪರ್ವತಗಳ ಮೇಲೆ ಬಿದ್ದಿರುವ ಹಿಮದ ಹೊದಿಕೆಗಳು, ಮೆರಗನ್ನು ಇನ್ನೂ ಹೆಚ್ಚಿಸುತ್ತವೆ.
ಪ್ರವಾಸದ ಹವ್ಯಾಸವಿರುವವರಿಗೆ ತಮ್ಮ ಪ್ರತಿಯೊಂದು ಪ್ರವಾಸದಲ್ಲೂ, ಒಂದಿಲ್ಲೊಂದು ಅನಿರೀಕ್ಷಿತ ಅನುಭವಗಳು ಆಗುವುದು ಖಚಿತ. ನಮಗೆ ಈ ಬಾರಿ ಇಸ್ರೇಲಿನಿಂದ ಬಂದಿದ್ದ ಪ್ರವಾಸಿಗರು ನಮ್ಮನ್ನು ಅವರಾಗಿಯೇ ಪರಿಚಯ ಮಾಡಿಕೊಂಡು, ನಾವು ಭಾರತೀಯರು ಎಂದು ತಿಳಿದ ಮೇಲೆ “ಇಸ್ರೇಲ್ – ಇಂಡಿಯಾ ಭಾಯಿ ಭಾಯಿ” ಎಂದು ಹೇಳಿ ಒಂದು ಅಪ್ಪುಗೆಯನ್ನು ಕೊಟ್ಟರು. ಅವರು ಭಾರತಕ್ಕೂ ಭೇಟಿ ನೀಡಿದ್ದರಂತೆ. “ವಾರಾಣಸಿಯ ಅನುಭವ ಪ್ರಪಂಚದ ಯಾವ ಭಾಗದಲ್ಲಿಯೂ ನನಗೆ ಸಿಕ್ಕಿಲ್ಲ..” ಎಂದು ಒಂದೈದು ನಿಮಿಷಗಳ ಕಾಲ ತಮ್ಮ ಭಾರತ ಪ್ರವಾಸದ ಮೆಲುಕು ಹಾಕಿದರು.

ಮುಂದೆ ನಾವು ಸಹ ದೋಣಿಯ ಬಳಿ ಹೋದಾಗ, ಅಂಬಿಗ ನಮ್ಮನ್ನು ಒಬ್ಬೊಬ್ಬರಾಗಿಸಿ ದೋಣಿಯ ಒಳಗೆ ಹತ್ತಿಸಿ ಕೂರಿಸಿದ. ಹುಟ್ಟು ಹಾಕುವ ದೋಣಿಯಾದ್ದರಿಂದ ಮೋಟಾರಿನ ಕರ್ಕಶ ಧ್ವನಿಯಿರಲಿಲ್ಲ. ನಿಧಾನವಾಗಿ ಹುಟ್ಟು ಹಾಕುತ್ತಾ ಸಾಗುತ್ತಿರುವಾಗ, ಪುಟ್ಟ ದ್ವೀಪ ಹತ್ತಿರವಾಗುತ್ತಿತ್ತು. ಹಿಂದಿನ ಪರ್ವತ ಶ್ರೇಣಿಗಳು ಕಲಾವಿದನ ಕಲ್ಪನೆಯಂತೆ ಕಂಡವು. ಹಕ್ಕಿಗಳ ಚಿಲಿ-ಪಿಲಿ ನಾದ ಕರ್ಣಗಳಿಗೆ ಸಿಹಿ ಜೇನು ಸುರಿದಂತಿತ್ತು. ಹನ್ನೊಂದು ಘಂಟೆಗೆ ದ್ವೀಪದ ಚರ್ಚಿನ ಗಂಟೆಗಳು ಸದ್ದು ಮಾಡಿದವು. ಗಂಟೆಯ ನಾದ ಸರೋವರದ ಸುತ್ತಲೂ ಪ್ರತಿಧ್ವನಿಸಿತು. ಪ್ರತಿ ಗಂಟೆಗೊಮ್ಮೆ ಸರಿಯಾಗಿ ಗಂಟೆಗಳ ನಾದ ಈ ಚರ್ಚ್ ನಿಂದ ಹೊರಹೊಮ್ಮುತ್ತದೆ. ಇಪ್ಪತ್ತು ನಿಮಿಷಗಳ, ನಿಧಾನವಾಗಿ ಗಡಿಬಿಡಿಯಿಲ್ಲದ ಪ್ರಯಾಣದ ನಂತರ ತಲುಪಿದ್ದು ಪುಟ್ಟ ದ್ವೀಪವನ್ನು. ಅಲ್ಲಿ ದ್ವೀಪವನ್ನು ಸುತ್ತಾಡಲು ಒಂದು ತಾಸು ಸಮಯವಿತ್ತು.

ದೋಣಿಯಿಂದ ಹೊರಗೆ ಬಂದು ಮೆಟ್ಟಿಲು ಹತ್ತಿ ಸಾಗಿದರೆ ಚರ್ಚ್ ಬಳಿ ಬರಬಹುದು. ಚರ್ಚ್ ಒಳಗೆ ಅಂತಹ ವಿಶೇಷ ಎನ್ನಿಸುವಂತದ್ದು ಏನು ಇಲ್ಲವಾದರೂ, ದ್ವೀಪದ ಸುತ್ತಲೂ ಒಂದು ನಡಿಗೆ ಮನಸ್ಸಿಗೆ ಮುದ ನೀಡಿತು. ಈ ಚರ್ಚು ಯಾವಾಗ ಕಟ್ಟಿದ್ದು ಎಂದು ಯಾವ ದಾಖಲೆಗಳೂ ಲಭಿಸಿಲ್ಲ. ಆದರೆ ಇದು ಕ್ರಿ.ಪೂ. ಕಾಲದಲ್ಲಿ ರೋಮನ್ನರ ದೇವಾಲಯವಾಗಿತ್ತು ಎನ್ನುವುದಕ್ಕೆ ಕುರುಹುಗಳು ಪತ್ತೆಯಾಗಿವೆ. ನಂತರ ಏಳನೇ ಶತಮಾನದಲ್ಲಿ ಇದನ್ನು ನವೀಕರಿಸಿ, ಚರ್ಚ್ ಮಾಡಲಾಯಿತು. ಪೂರ್ತಿ ದ್ವೀಪವನ್ನು ಸುತ್ತು ಹಾಕಲು ಹದಿನೈದು ನಿಮಿಷ ಸಾಕು. ಮತ್ತೆ ದೋಣಿಯ ಬಳಿ ಬಂದು ಅಂಬಿಗನ ಜೊತೆ ಮಾತು-ಕತೆ ಶುರುಮಾಡಿದೆ. ಉಳಿದವರೆಲ್ಲರೂ ಬಂದ ನಂತರ ಮತ್ತೆ ನಮ್ಮ ನಿಧಾನವಾದ ಪಯಣ ಪ್ರಾರಂಭವಾಗಿ ದಡ ಸೇರಿದ್ದು ತಿಳಿಯಲೇ ಇಲ್ಲ.

ಬ್ಲೆಡ್ ಕ್ಯಾಸೆಲ್

ಬ್ಲೆಡ್ ಸರೋವರದಿಂದ ಹೊರಬಂದು ಕಾರು ಹತ್ತಿ ಕಡಿದಾದ, ಘಾಟಿ ರಸ್ತೆಯಲ್ಲಿ ಚಲಿಸಿದರೆ “ಬ್ಲೆಡ್ ಕ್ಯಾಸೆಲ್” ತಲುಪುತ್ತೇವೆ. ಇದೊಂದು ಪುಟ್ಟ ಕೋಟೆ. ಬೆಟ್ಟದ ತುದಿಯಲ್ಲಿ, ಪ್ರಪಾತದ ಮೇಲೆ ಕಟ್ಟಿರುವ ಈ ಕೋಟೆ ನೇರ ಬ್ಲೆಡ್ ಸರೋವರದ ನೆತ್ತಿಯ ಮೇಲಿದೆ ಎನ್ನುವ ಹಾಗೆ ಭಾಸವಾಗುತ್ತದೆ. ನಾನು ಇದುವರೆಗೂ ಮಾಡಿರುವ ಪ್ರವಾಸಗಳಲ್ಲಿ ಇಷ್ಟು ಸುಂದರವಾದ ಕೋಟೆಯನ್ನು ನೋಡಿಲ್ಲ. ಕೋಟೆ ಅನ್ನುವುದಕ್ಕಿಂತ ಇಲ್ಲಿಂದ ಕಾಣುವ ಲೇಕ್ ಬ್ಲೆಡ್ ದೃಶ್ಯ ಅಮೋಘವಾಗಿದೆ. ಡ್ರೋನ್ ಬಳಸಿದರೆ ಹೇಗೆ ಹಕ್ಕಿಯ ದೃಷ್ಟಿಕೋನದಲ್ಲಿ ಹೇಗೆ ಕಾಣುತ್ತದೆಯೋ, ಹಾಗೆ ಬ್ಲೆಡ್ ಸರೋವರವನ್ನು ಮೇಲಿನಿಂದ ನೋಡಬಹುದು. ನೀಲಿ ಬಣ್ಣದ ಸರೋವರ, ಮಧ್ಯದಲ್ಲಿ ಒಂದು ದ್ವೀಪ. ಹಿಂದೆ ಬೆಟ್ಟ-ಕಣಿವೆಗಳ ಸಾಲು ಸಾಲು. ಚಲಿಸುತ್ತಿರುವ ಪುಟ್ಟ ಬೆಂಕಿ ಪೊಟ್ಟಣಗಳಂತೆ ಕಾಣುವ ದೋಣಿಗಳು. ಅಲ್ಲಲ್ಲಿ ಕಂಡು ಮಾಯವಾಗುವ ಮೀನುಗಳು. ಇಷ್ಟು ಎತ್ತರದಿಂದ ಕಾಣಿಸಬೇಕು ಎಂದರೆ, ಆ ಮೀನು ಎಷ್ಟು ದೊಡ್ಡದಿರಬೇಡ? ಈ ಜಾಗದಲ್ಲಿ ಫೋಟೋ, ಸೆಲ್ಫಿ ಎಲ್ಲ ಮುಗಿಯದ ಕಥೆ. ಎಷ್ಟು ಫೋಟೋ ತೆಗೆದರೂ ಕಮ್ಮಿ ಅನ್ನಿಸುತ್ತದೆ.

ಹತ್ತನೇ ಶತಮಾನದಲ್ಲಿ ಕಟ್ಟಲಾಗಿರುವ ಕೋಟೆಯನ್ನು ಹಲವಾರು ಬಾರಿ ನವೀಕರಿಸಲಾಗಿದೆ. ಕೋಟೆಯ ಒಳಗೆ ಈಗ ಒಂದು ವಸ್ತು ಸಂಗ್ರಹಾಲಯವಿದೆ. ಹಿಂದಿನ ಕಾಲದಲ್ಲಿ ಈ ಕೋಟೆಯಲ್ಲಿದ್ದ ರಾಜ ಮನೆತನದ ವಸ್ತುಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಇನ್ನೊಂದು ಭಾಗವನ್ನು ಹೋಟೆಲ್ ಆಗಿ ಪರಿವರ್ತಿಸಲಾಗಿದೆ. ಕ್ಯಾಸೆಲ್ ಒಳಗೆ ಬರಲು ಹತ್ತು ಯುರೋ ಪ್ರವೇಶ ಶುಲ್ಕವಿದೆ. ಮೇಲಿನಿಂದ ಬ್ಲೆಡ್ ಸರೋವರವನ್ನು ನೋಡುವುದಕ್ಕಾದರೂ ಇಲ್ಲಿಗೆ ಒಮ್ಮೆ ಭೇಟಿ ನೀಡಲೇಬೇಕು.

ರಿಯಲ್ ಸ್ಟಾರ್ ಉಪೇಂದ್ರ ಅವರ ಅಭಿನಯದ “ಸೂಪರ್ ರಂಗ” ಸಿನೆಮಾದ “ನನಗೂ ನಿನಗೂ ಉಸಿರಾಟ ಎಂದೂ ಒಂದೇ..” ಹಾಡಿನ ಚಿತ್ರೀಕರಣವನ್ನು ಸಹ ಸ್ಲೊವೇನಿಯಾದಲ್ಲಿ ಮಾಡಲಾಗಿದೆ. ಇದರಲ್ಲಿ ಬರುವ ಸರೋವರ ಕೂಡ “ಲೇಕ್ ಬ್ಲೆಡ್”. ಹಾಡಿನ ಬಹುಭಾಗ ಚಿತ್ರೀಕರಿಸಲಾಗಿರುವುದು ಬ್ಲೆಡ್ ಕ್ಯಾಸೆಲ್ ನಲ್ಲಿ. ಚೈತ್ರ ಕಾಲದಲ್ಲಿ ಚಿತ್ರೀಕರಣ ಮಾಡಿರುವುದರಿಂದ ಟುಲಿಪ್ ಹೂಗಳನ್ನು ನೋಡಬಹುದು. ಹಾಗೆಯೇ ಧ್ರುವ ಸರ್ಜಾ ಅಭಿನಯದ “ಭರ್ಜರಿ” ಸಿನೆಮಾದ “ಅಜ್ಜಿ ಹೇಳಿದ..” ಹಾಡನ್ನು ಸಹ ಸ್ಲೊವೇನಿಯಾದ ಬ್ಲೆಡ್ ಕ್ಯಾಸೆಲ್ ನಲ್ಲಿ ಚಿತ್ರೀಕರಿಸಲಾಗಿದೆ.

ಈ ಸರೋವರಕ್ಕೆ ಇನ್ನು ನೂರು ಬಾರಿ ಅವಕಾಶ ಸಿಕ್ಕರೂ ಭೇಟಿ ನೀಡುತ್ತೇನೆ. ಒಂದೊಂದು ಋತುವಿನ ಕಾಲದಲ್ಲಿ ಒಂದೊಂದು ರೀತಿ ಕಾಣುವ ಬ್ಲೆಡ್ ಸರೋವರದ ಪ್ರಾಕೃತಿಕ ಸೌಂದರ್ಯವೇ ಹಾಗಿದೆ. ನಿಮ್ಮ ಮನೆಯಲ್ಲಿ ಯಾವುದೇ ಟಿವಿ, ಕ್ರೋಮ್ ಕಾಸ್ಟ್ ಅಥವಾ ಅಮೆಜಾನ್ ಫೈರ್ ಸ್ಟಿಕ್ ಇದ್ದರೂ ಅದರ ಸ್ಕ್ರೀನ್ ಸೇವರ್ ಫೋಟೋಗಳಲ್ಲಿ ಒಂದು “ಲೇಕ್ ಬ್ಲಡ್” ಇದ್ದೇ ಇರುತ್ತದೆ. ಮುಂದಿನ ಸಂಚಿಕೆಯಲ್ಲಿ ಸ್ಲೊವೇನಿಯಾದ ಪರ್ವತ ಕಣಿವೆ “ಲೋಗಾರ್ ವ್ಯಾಲಿ” ಮತ್ತು ಇನ್ನೊಂದು ಇಷ್ಟೇ ಸುಂದರವಾದ ಸರೋವರ “ಕ್ರಾನ್ಸ್ಕಾ ಗೋರಾ” ಬಗ್ಗೆ ಬರೀತೀನಿ. ಅಲ್ಲಿ ಮಾಡಲಾಗಿರುವ ಫೋಟೋ ಫ್ರೆಮ್ ಬಗ್ಗೆ ವಿವರಿಸ್ತೀನಿ. ಅಲ್ಲಿಯವರೆಗೂ ಕಾದಿರುವಿರಿ ಎಂದು ಭಾವಿಸಿದ್ದೇನೆ.