ತಮ್ಮ 77ನೇ ಹುಟ್ಟುಹಬ್ಬದಂದು ಟ್ಯಾಗೋರರು ಇದೇ ಮನೆಯಿಂದ ’ಜನಮ್ ದಿನ್’ ಎನ್ನುವ ತಮ್ಮ ಕವಿತೆಯನ್ನು ಆಕಾಶವಾಣಿಯ ನೇರ ಪ್ರಸಾರದಲ್ಲಿ ಓದಿದ್ದರು. ದೇಶದ ಮೊಟ್ಟಮೊದಲ ನೇರ ಪ್ರಸಾರ ಆಕಾಶವಾಣಿಯಲ್ಲಿ ಅದಾಗಿತ್ತು. ಆದರೀಗ ಆ ಮನೆ ಇಳಿ ವೇಳೆಯ ಎಲ್ಲಾ ಅಪರ ಕೃತ್ಯಗಳಿಗೆ ಚಾವಡಿಯಾಗಿದೆಯೆಂದು ತಿಳಿಯಿತು. ಎಷ್ಟು ಆಸಕ್ತಿ ಉತ್ಸಾಹದಿಂದ ಅಲ್ಲಿಗೆ ಬಂದಿದ್ದೆನೋ ಅಷ್ಟೇ ಮನನೊಂದು ಅಲ್ಲಿ ನಿಂತಿದ್ದೆ. ನನ್ನ ಬೇಸರವನ್ನು ತುಸು ಕಡಿಮೆ ಮಾಡಲೆಂದೇ ಇರಬೇಕು, ಇಬ್ಬರು ವ್ಯಕ್ತಿಗಳು ಅಲ್ಲಿಗೆ ಬರುವುದು ಕಂಡಿತು.
‘ಕಂಡಷ್ಟು ಪ್ರಪಂಚ’ ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ
ಹಸುಗೂಸಿನ ಹಾಲ್ಗೆನ್ನೆಯಂತೆ ನುಣುಪಾದ, ಚಿಕ್ಕ-ಚೊಕ್ಕವಾದ, ಸ್ನಿಗ್ಧವಾದ, ಚೆಲುವಾದ ಗಿರಿಧಾಮ ಕೆಲಿಂಪಾಂಗ್. 150 ವರ್ಷಗಳ ಕಾಲ ಭೂಟಾನ್ ಆಡಳಿತಕ್ಕೆ ಒಳಪಟ್ಟಿದ್ದು ೧೮೬೫ರಲ್ಲಿ ಭಾರತದಲ್ಲಿದ್ದ ಬ್ರಿಟೀಷರು ಮತ್ತು ಭೂಟಾನಿಗಳ ನಡುವೆ ನಡೆದ ಯುದ್ಧದಲ್ಲಿ ಭಾರತದ ಪಾಲಿಗೆ ಬಂದ ಸುಂದರ ತಾಣ. ಸಮುದ್ರ ಮಟ್ಟದಿಂದ 4101 ಅಡಿ ಎತ್ತರದಲ್ಲಿದ್ದು 26021 ಚದರ ಮೈಲುಗಳ ಅಗಲವಿರುವ ಕೆಲಿಂಪಾಂಗ್ ತೀಸ್ತಾ ನದಿಗೆ ಮುಖ ಮಾಡಿನಿಂತಿರುವ ಬೆಟ್ಟೇಣು. ತೀಸ್ತಾ ಮತ್ತು ರಂಗೀತ್ ನದಿಗಳ ಸಂಗಮದ ರಮಣೀಯ ನೋಟ ನೀಡುವ, ಪಶ್ಚಿಮ ಬಂಗಾಳದ ತುದಿಯಲ್ಲಿದ್ದು, ಸಿಕ್ಕಿಂ ರಾಜ್ಯಕ್ಕೆ ಅಂಟಿಕೊಂಡಂತಿರುವ ಈ ಚೆಲುವೆಯ ಸೌಂದರ್ಯ, ಇತಿಹಾಸ ಎಲ್ಲವೂ ಅಭೂತಪೂರ್ವ.
ಈ ಬಾರಿಯ ನನ್ನ ಪಯಣದ ಗುರಿ ಕೆಲಿಂಪಾಂಗ್ ಎಂದಾದಾಗ “ಹೂಂ, ಮತ್ತೊಂದು ಗಿರಿಧಾಮ ತಾನೆ?” ಅಂದುಕೊಂಡೇ ಜಾಗದ ವಿಷಯ ಸಂಗ್ರಹಣೆಗೆ ಮುಂದಾದಾಗ ತಿಳಿದದ್ದು ಡಾರ್ಜೀಲಿಂಗ್, ಸಿಲಿಗುರಿ ಮತ್ತು ಗ್ಯಾಂಗ್ಟಾಕ್ ನಗರಗಳಿಂದ ಸಮ ದೂರದಲ್ಲಿರುವ ಈ ಊರಿನಲ್ಲಿ ರಬೀಂದ್ರನಾಥ್ ಟ್ಯಾಗೋರರ ಮನೆಯೊಂದಿದೆ ಅಂತ. ಉತ್ಸಾಹಕ್ಕೆ ಇಷ್ಟು ಸಾಕಿತ್ತಲ್ಲ? ಊರು ತಲುಪಿದಾಗ ಸೂರ್ಯ ಮನೆದಾರಿ ತುಳಿಯುತ್ತಿದ್ದ. ಇಳಿದುಕೊಂಡಿದ್ದ ರೆಸಾರ್ಟ್ ದಟ್ಟ ಕಾಡಿನ ನಡುವೆ. ಸಂಜೆ 6 ಗಂಟೆಗೆ ಮಂಜು ಮುಸುಕಿತ್ತು. ಸಹಾಯಕ “ ಇಲ್ಲಿ ಕಾಡು ಪ್ರಾಣಿಗಳ ಹಾವಳಿ. ಕಿಟಕಿ ಬಾಗಿಲು ಭದ್ರವಾಗಿ ಹಾಕಿಕೊಳ್ಳಿ. ಜೊತೆಗೆ ದಪ್ಪನಾದ ಪರದೆಯನ್ನು ಮುಚ್ಚುವುದು ಮರೆಯಬೇಡಿ. ಹೊರಬರಬೇಡಿ” ಎಂದ್ಹೇಳಿ ಹೋದಾಗ ಸ್ವಲ್ಪವೂ ಭಯವಾಗಲಿಲ್ಲ. ಕಾರಣ ನನ್ನ ಗಮನವೆಲ್ಲಾ ಮರುದಿನ ನೋಡಲಿದ್ದ ರಬೀಂದ್ರನಾಥರ ಮನೆಯಲ್ಲಿತ್ತು.
ಕೆಲಿಂಪಾಂಗಿನ ಎಲ್ಲಾ ದಿಕ್ಕುಗಳಿಂದಲೂ ಕಾಂಚನಜುಂಗ ಮತ್ತದರ ಒಡನಾಡಿ ಶಿಖರಗಳ ದರ್ಶನವೂ ಲಭ್ಯ. ಬೆಳಗ್ಗೆ 9ಕ್ಕೂ ಸೂರ್ಯನ ಸುಳಿವಿಲ್ಲ. ಮೋಡದ ಮುಸುಕು ತೂರಿ ಬೆಳಕು ಬಂದಿತ್ತು. ಕಾರಿನಲ್ಲಿ ಕುಳಿತು ಚಾಲಕನಿಗೆ “ರಬೀಂದ್ರರ ಮನೆಗೆ ಕರೆದುಕೊಂಡು ಹೋಗಪ್ಪ” ಎಂದೆ. “ಅದು ಎಲ್ಲಿದೆಯೋ ನನಗೆ ಗೊತ್ತಿಲ್ಲ” ಎನ್ನುವ ಉತ್ತರ ಬಂತು. ಓಹ್, ನನಗಾದ ತಳಮಳ ಅಷ್ಟಿಷ್ಟಲ್ಲ! ಉಹೂಂ, ಅಸೀಮವನ್ನು ಕಾಣಲು ಮೋಟಾರಲ್ಲ ಬೇಕಿರುವುದು. ಪಕೃತಿಯ ಗುಂಟ ನಿರಾಳವಾದ ಕಾಲ್ನಡಿಗೆಯಲ್ಲಿ ಕಂಡ ಕಂಡವರನೆಲ್ಲಾ ಟ್ಯಾಗೋರ್ ಮನೆಯ ವಿಳಾಸ ಕೇಳುತ್ತಾ ಎರಡು ಗಂಟೆಗಳ ಕಾಲ ಅಲೆದದ್ದಾಯ್ತು. ಅಂತೂ ಒಬ್ಬರು “ ಇಲ್ಲಿಂದ ಹೋಗಿ ಅವರ ಮನೆ ಸಿಗುತ್ತೆ. ಆ ಜಾಗಕ್ಕೆ ಗೌರಿಪುರ್ ಎಂತಲೂ ಮನೆಗೆ ಕ್ರೂಕೆಟ್ಟಿ ಹೌಸ್ ಎಂತಲೂ ಅನ್ನುತ್ತಾರೆ.” ಅಂದರು.
ಆತ ಹೇಳಿದ ದಿಕ್ಕಿನೆಡೆಗೆ ತಿರುಗಿದರೆ ಅಲ್ಲಿ ರಸ್ತೆಯಿರಲಿಲ್ಲ. ಅಷ್ಟೇನೂ ಆಳವಿಲ್ಲದ ಪ್ರಪಾತವಿತ್ತು. ಹೆಜ್ಜೆ ಗುರುತನ್ನು ರೂಪಿಸಿಕೊಳ್ಳುತ್ತಾ, ಜಾರುತ್ತಾ, ಏಳುತ್ತಾ ಅಂತೂ ಸ್ವಲ್ಪ ದೂರ ಕಳೆದ ನಂತರ ಒಂದು ಪಾಳು ಬಿದ್ದ ಮನೆ ಕಾಣಿಸಿತು. “ ಸಾಧ್ಯವೇ ಇಲ್ಲ, ನೋಡಿದರೇ ಉದುರಿ ಹೋಗಬಲ್ಲ ಸ್ಥಿತಿಯಲ್ಲಿರುವ ಈ ಮನೆ ಅವರ ಮನೆಯಂತೂ ಇರಲಾರದು. ದಾರಿ ತಪ್ಪಿತು” ಅಂದುಕೊಂಡೆ.
ಅದೇ ದಾರಿಯಲ್ಲಿ ಮುಂದುವರೆಯುವುದನ್ನು ಬಿಟ್ಟು, ಹಿಂದೆ ಬರಲಂತೂ ಆಗುತ್ತಲೇ ಇರಲಿಲ್ಲ. ಇನ್ನೊಂದೈದು ನಿಮಿಷ ಹಾಗೇ ಜಾರಿನಲ್ಲಿ ಇಳಿದ ನಂತರ, 60ರ ಆಸುಪಾಸಿನ, ಚರ್ಮ ಸುಕ್ಕುಗೊಂಡ ಇಬ್ಬರು ಹೆಂಗಸರು ಕಂಡರು. ಅವರಿಂದ ತಿಳಿಯಿತು, ಹೌದು ಅದೇ ರಬೀಂದ್ರನಾಥ ಟ್ಯಾಗೋರರ ಮನೆ ಮತ್ತು ಅವರುಗಳು ಆ ಮನೆ ಕಾಯುವ ಹೆಂಗಸರು ಅಂತ. ಆ ದೊಡ್ಡದಾದ ಮನೆಯ ಅವಸ್ಥೆ ನೋಡಿ ನನಗೆ ನಿಜಕ್ಕೂ ಆಘಾತವಾಯ್ತು. ಚಲನ ಚಿತ್ರಗಳಲ್ಲಿ ತೋರಿಸುವ ಭೂತ ಬಂಗ್ಲೆಯಂತ್ತಿತ್ತು. ವರ್ಷಾನುಗಟ್ಟಲೆಯ ಕಸ ರಾಶಿಯಾಗಿತ್ತು. ಗೋಡೆಗಳ ಮೇಲೆ ಪಾಚಿ ಕಟ್ಟಿತ್ತು. ಮರದ ಕಿಟಕಿಗಳೆಲ್ಲಾ ಅರ್ಧಂಬರ್ಧ ಮುರಿದು ಬಿದ್ದಿತ್ತು. ತೊಲೆಗಳ ಬಗಿಲಿನಲ್ಲಿ ನೇತಾಡುತ್ತಿದ್ದ ಬಾಗಿಲಂತೂ “ಒಂದು ಹೆಜ್ಜೆ ಮುಂದಿಟ್ಟರೆ ನಿನ್ನ ತಲೆ ಮೇಲೆ ಬೀಳುತ್ತೇನೆ” ಅಂತ ಹೆದರಿಸುತ್ತಿತ್ತು. ಆ ಮಹಿಳೆಯರು ಗ್ರಾಮ್ಯ ಬೆಂಗಾಲಿಯಲ್ಲಿ ನನಗೆ ಏನೇನೋ ಹೇಳುತ್ತಿದ್ದರು. ಬಹುಪಾಲು ನನಗೆ ಅರ್ಥವಾಗದ್ದು.
ಅಲ್ಲೊಂದು ಬೆಂಗಾಲಿ ಭಾಷೆಯಲ್ಲಿ ಬರೆದಿದ್ದ ಅಮೃತಶಿಲೆಯ ಫಲಕ ಕೂಡ ಗೋಡೆಗೆ ಆತುಕೊಂಡಿತ್ತು. ಓದಲು ಬಾರದು. ಏನು ಮಾಡೋದು? ಜೇಡ ಜಾಲವನ್ನು ಕೈಯಲ್ಲಿ ತಳ್ಳುತ್ತಾ ಕಟ್ಟಡದ ಒಂದು ಸುತ್ತು ಬಂದೆ. ನಾನಂದುಕೊಂಡು ಬಂದ ಜಾಗ ಅದಲ್ಲ ಎನ್ನುವ ಬಲವಾದ ಅನುಮಾನ ನನಗೆ. ಆದರೆ ಪರಿಹರಿಸುವವರು ಯಾರು? ನಿರಾಸೆ ಒಪ್ಪಲಾಗದ, ಹಠ ಮಾಡಲಾಗದ ಮನೋಸ್ಥಿತಿ. ಅಷ್ಟರಲ್ಲಿ ಆ ದಾರಿಯಲ್ಲೇ ಇನ್ನಿಬ್ಬರು ಬರುವುದು ಕಂಡಿತು. ಏನೋ ಭರವಸೆ. ಅವರು ಬಂಗ್ಲೆಯ ಮುಂಭಾಗಕ್ಕೆ ಬಂದಾಗ ತಿಳಿದದ್ದು ಒಬ್ಬರು ಲೆಫ್ಹ್ಟಿನೆಂಟ್. ಕರ್ನಲ್. ಜ್ಯೋತಿರ್ಮಯ ಸತ್ಪತಿ ಮತ್ತೊಬ್ಬರು ಕೆಲಿಂಪಾಂಗಿನ ಜಿಲ್ಲಾಧಿಕಾರಿ ಟಿ.ಎನ್.ಶೆರ್ಪ. ನನ್ನ ಉತ್ಸಾಹ ದುಪ್ಪಟ್ಟಾಯ್ತು. ಮರುದಿನ ಟ್ಯಾಗೋರರ ೧೫೦ನೇ ಜನ್ಮದಿನ. ಹಾಗಾಗಿ ಅವರಿದ್ದ ಈ ಮನೆಯನ್ನು ಜೀರ್ಣೋದ್ಧಾರ ಮಾಡುವ ಯೋಜನೆಯ ಭಾಗವಾಗಿ ಅವರಿಬ್ಬರು ಅಲ್ಲಿ ಬಂದಿದ್ದರು.
ಆ ಬೆಂಗಾಲಿ ಭಾಷೆಯ ಫಲಕದಲ್ಲಿ “ ರಬೀಂದ್ರರು ಗೀತಾಂಜಲಿ ಬರೆಯಲು ಪ್ರೇರಿತರಾಗಿದ್ದು ಮತ್ತು ಬಹುಪಾಲು ಬರೆದದ್ದು ಈ ಮನೆಯಲ್ಲಿ “ ಎಂದು ಬರೆಯಲಾಗಿದೆ ಅಂತ ತಿಳಿದಾಗ ಏನೋ ಫುಳಕ. ಟ್ಯಾಗೋರರು ಕುಳಿತು ಗೀತಾಂಜಲಿಯ ಹಲವಾರು ಕವಿತೆಗಳನ್ನು ಬರೆದ ಕೋಣೆಯನ್ನು ಕಿಟಕಿಯಿಂದ ಇಣುಕಿ ನೋಡಿದಾಗ ತಿಳಿಯಿತು ಅದೀಗ ಹಾವುಗಳ ವಾಸಸ್ಥಾನವಾಗಿದೆಯೆಂದು. ತಮ್ಮ 77ನೇ ಹುಟ್ಟುಹಬ್ಬದಂದು ಟ್ಯಾಗೋರರು ಇದೇ ಮನೆಯಿಂದ ’ಜನಮ್ ದಿನ್’ ಎನ್ನುವ ತಮ್ಮ ಕವಿತೆಯನ್ನು ಆಕಾಶವಾಣಿಯ ನೇರ ಪ್ರಸಾರದಲ್ಲಿ ಓದಿದ್ದರು. ದೇಶದ ಮೊಟ್ಟಮೊದಲ ನೇರ ಪ್ರಸಾರ ಆಕಾಶವಾಣಿಯಲ್ಲಿ ಅದಾಗಿತ್ತು. ಆದರೀಗ ಆ ಮನೆ ಇಳಿ ವೇಳೆಯ ಎಲ್ಲಾ ಅಪರ ಕೃತ್ಯಗಳಿಗೆ ಚಾವಡಿಯಾಗಿದೆಯೆಂದು ತಿಳಿಯಿತು. ಎಷ್ಟು ಆಸಕ್ತಿ ಉತ್ಸಾಹದಿಂದ ಅಲ್ಲಿಗೆ ಬಂದಿದ್ದೆನೋ ಅಷ್ಟೇ ಮನನೊಂದು ಅಲ್ಲಿ ನಿಂತಿದ್ದೆ. ಒಂದಷ್ಟು ಹೊತ್ತು ಅವರಿಬ್ಬರ ಜೊತೆಯಲ್ಲಿ ಮಾತನಾಡಿಕೊಂಡು ಭಾರವಾದ ಮನಸ್ಸಿನಿಂದ ಅಲ್ಲಿಂದ ಹೊರಡಲಿದ್ದೆ,
“ ನೆರಳನ್ನು ಬೆನ್ನಟ್ಟಿ ಬೆಳಕು ಬರುವಾಗ; ಬೇಸಿಗೆ ಹಾಯ್ದು ಮಳೆ ಬರುವಾಗ; ಹಾದಿ ಬದಿಯಲ್ಲಿ ನಿರೀಕ್ಷೆಯಲಿ ಕಾಯುವುದು ನನ್ನ ಸಂತೋಷ. . . . . .” ಎನ್ನುವ ಗೀತಾಂಜಲಿಯ ಪದ್ಯವೊಂದು ನೆನಪಾಯ್ತು. ಅಷ್ಟರಲ್ಲಿ ಲೆಫ್ಟಿನೆಂಟ್.ಕರ್ನಲ್.ಸತ್ಪತಿ “ನೀವು ಇವತ್ತು ನನ್ನ ಅತಿಥಿ. ನಮ್ಮ ಆರ್ಮಿ ರೆಜಿಮೆಂಟಿನ ಕೆಲವು ವಿಶೇಷಗಳನ್ನು ತೋರಿಸುತ್ತೇನೆ ಬನ್ನಿ” ಎಂದಾಗ ಮುಳುಗುವವನಿಗೆ ಹುಲುಕಡ್ಡಿಯಾಸರೆಯಂತನಿಸಿತ್ತು.
“ ಬೆಳಗಿನಿಂದ ಸಂಜೆಯವರೆಗೂ ಕೂರುತ್ತೇನೆ ನನ್ನ ಬಾಗಿಲ ಮುಂದೆ; ನನಗೆ ಗೊತ್ತು ಸಂತಸದ ಘಳಿಗೆಯ ಆಗಮನ ಅನಿರೀಕ್ಷಿತವೆಂದು; ನಾನದನ್ನು ನೋಡುತ್ತೇನೆ ಎಂದು……ಭರವಸೆಯ ಸುಗಂಧ ಗಾಳಿಯಲ್ಲಿ ತುಂಬುತ್ತಿರುವಾಗ, ನಾನು ನಗುತ್ತೇನೆ ಒಬ್ಬನೇ ಹಾಡಿಕೊಳ್ಳುತ್ತೇನೆ…….” ಗೀತಾಂಜಲಿಯ ಗುಂಗಿನಲ್ಲೇ ಮತ್ತಿನ್ನೇನೋ ನೋಡಲು ಹೊರಟೆ.
ಅಸೀಮವನ್ನು ಕಾಣಲು ಮೋಟಾರಲ್ಲ ಬೇಕಿರುವುದು. ಪಕೃತಿಯ ಗುಂಟ ನಿರಾಳವಾದ ಕಾಲ್ನಡಿಗೆಯಲ್ಲಿ ಕಂಡ ಕಂಡವರನೆಲ್ಲಾ ಟ್ಯಾಗೋರ್ ಮನೆಯ ವಿಳಾಸ ಕೇಳುತ್ತಾ ಎರಡು ಗಂಟೆಗಳ ಕಾಲ ಅಲೆದದ್ದಾಯ್ತು.
ರಬೀಂದ್ರನಾಥ್ ಟ್ಯಾಗೋರ್ ಅವರದ್ದು ನಿಜಾರ್ಥದಲ್ಲಿ ಅಸದೃಶ ವ್ಯಕ್ತಿತ್ವ. ಕವಿ, ನಾಟಕಕಾರ, ಸಂಭಾಷಣಾಕಾರ, ಕಾದಂಬರಿ ಕರ್ತೃ, ಸಂಗೀತ ಸಂಯೋಜಕ, ತತ್ತ್ವಜ್ಞಾನಿ, ಪ್ರಬಂಧಕಾರ, ನೃತ್ಯ ರೂಪಕ ರಚನೆಕಾರ, ರಾಜಕೀಯ ವಿಮರ್ಶಕ, ಚಿಂತಕ, ದೇಶಭಕ್ತ ಟ್ಯಾಗೋರ್ ಎರಡು ಆತ್ಮ ಕಥನ ಬರೆದ ಮತ್ತು ಎರಡು ದೇಶಗಳ ರಾಷ್ಟ್ರ ಗೀತೆ ಬರೆದಿರುವ ಏಕೈಕ ವ್ಯಕ್ತಿ. 1913ರಲ್ಲಿ ಸಾಹಿತ್ಯಕ್ಕೆ ನೋಬೆಲ್ ಪ್ರಶಸ್ತಿ ಪಡೆದ ಏಕೈಕ ಭಾರತೀಯ ಮಾತ್ರವಲ್ಲ ಏಷ್ಯಾ ಖಂಡ ಮೂಲದ ಒಬ್ಬನೇ ವ್ಯಕ್ತಿ ಕೂಡ.
ಅವರ 106 ಕವನಗಳುಳ್ಳ ’ಗೀತಾಂಜಲಿ’ ಹೆಸರಿನ ಕವನ ಸಂಕಲನಕ್ಕೆ ಸಿಕ್ಕಿದ್ದು ನೋಬೆಲ್ ಪಾರಿತೋಷಕ. ಟ್ಯಾಗೋರರೇ ಅದನ್ನು ಇಂಗ್ಲೀಷಿಗೆ ಭಾಷಾಂತರಗೊಳಿಸಿದ್ದಾರೆ. ಡ್ಬ್ಲ್ಯೂ.ಬಿ.ಯೀಟ್ಸ್ ವಿರಚಿತ ಮುನ್ನುಡಿಯಿರುವುದು ಗೀತಾಂಜಲಿಯ ಮತ್ತೊಂದು ಅಗ್ಗಳಿಕೆ. ಪ್ರಪಂಚದ ಎಲ್ಲಾ ಭಾಷೆಗಳಿಗೂ ಭಾಷಂತರಗೊಂಡಿರುವ ಒಂದೇ ಭಾರತೀಯ ಕೃತಿ. ರಬೀಂದ್ರರ ಅಗಣಿತ ಸಾಧನೆಯನ್ನು ಗುರುತಿಸಿ ಮಹಾತ್ಮ ಗಾಂಧಿ ಅವರಿಗೆ ಕೊಟ್ಟ ಬಿರುದು ’ಗುರುದೇವ್’. ಎಲ್ಲಾ ಭಾವದಿಂದಲೂ ರಬೀಂದ್ರನಾಥ್ ಟ್ಯಾಗೋರರಿಗೆ ಗುರುದೇವ್ ತುಮೀ ಆಕಾಶ್ ತುಮೀ ಸುಜೋಗ್ (ನೀನೇ ಆಕಾಶ; ನೀನೇ ಅವಕಾಶ) ಎನ್ನುವ ಹೋಲಿಕೆ ಸರಿಹೊಂದುವಂಥದ್ದೇ.
ಡರ್ಪಿನ್ ದಾರಾ ಕೆಲಿಂಪಾಂಗ್ ರೆಜಿಮೆಂಟ್
ಆರ್ಮಿ ಜನಕ್ಕೆ ವಿಪರೀತ ಉತ್ಸಾಹ ಆಷ್ಟೇ ಹೆಮ್ಮೆ ಎನ್ನುವುದು ಮತ್ತೊಮ್ಮೆ ತಿಳಿಯುತ್ತಿತ್ತು. ಕೆಲಿಂಪಾಂಗ್ ಮೂರು ಇನ್ನಿತರ ದೇಶಗಳೊಡನೆ ಸರಹದ್ದು ಹಂಚಿಕೊಂಡಿರುವುದರಿಂದ ಭಾರತೀಯ ವಾಯು ಸೇನೆಯ ಅತೀ ಸೂಕ್ಷ್ಮ ಹೆಲಿಪ್ಯಾಡ್ ಒಂದನ್ನು ಇಲ್ಲಿ ನಿರ್ಮಿಸಲಾಗಿದೆ. ಲೆಫ್ಟಿನೆಂಟ್.ಕರ್ನಲ್.ಸತ್ಪತಿ “ಇಲ್ಲಿ ಫೋಟೋ ತೆಗೆಯಬೇಡಿ” ಎನ್ನುವ ನಿರ್ದಾಕ್ಷಿಣ್ಯ ನುಡಿಯೊಂದಿಗೆ ನನ್ನನ್ನು ಪ್ರಪಂಚದ ಅತೀ ಎತ್ತರದ ಸ್ಥಳದಲ್ಲಿರುವ ಆರ್ಮಿ ಗಾಲ್ಫ್ ಅಂಕಣಕ್ಕೆ ಕರೆದೊಯ್ದರು. ಆಗತಾನೆ ಸರಿಯುತ್ತಿದ್ದ ಮೋಡ, ತುಸು ನಗುತ್ತಾ ಇಣುಕುತ್ತಿದ್ದ ಸೂರ್ಯ, ತಣ್ಣನೆಯ ಗಾಳಿ, ಹಸಿರು ಹುಲ್ಲು ಹಾಸಿದ ಭೂಮಿ ನಿಜಕ್ಕೂ ಎಲ್ಲವೂ ಸ್ವರ್ಗ ಸಮಾನವಾಗಿತ್ತು.
ಅಲ್ಲಿಂದ ಭಾರತ ಸೇನೆಯ 27ನೇ ಪರ್ವತ ಶ್ರೇಣಿಯ ರೆಜಿಮೆಂಟ್ ಎನ್ನುವ ಫಲಕವಿದ್ದ ಸಂಕೀರ್ಣದೊಳಗೆ ಆತ ಕರೆದುಕೊಂಡುಹೋದರು. 200 ಎಕರೆಗಳಷ್ಟಿರುವ ಆ ಸ್ಥಳ ಒಂದು ಬೆರೆಯದೇ ಪ್ರಪಂಚ. ಅತ್ತಿಂದಿತ್ತ ಟಾಕುಠೀಕಾಗಿ ಓಡಾಡುತ್ತಿದ್ದ ಸೇನಾಧಿಕಾರಿಗಳು, ಸಾಲಾಗಿ ನಿಲ್ಲಿಸಿದ್ದ ಮಿಲಿಟರಿ ವಾಹನಗಳು, ಅಲ್ಲೇ ಒಂದು ತುದಿಯಲ್ಲಿದ್ದ ಕೇಂದ್ರೀಯ ವಿದ್ಯಾಲಯ, ಸೈನಿಕ ತರಬೇತಿ ಶಾಲೆ, ಮತ್ತೊಂದು ಕಡೆ ಆಧುನಿಕ ಯಂತ್ರ ಸುಸಜ್ಜಿತ ದೊಡ್ಡ ಅಡುಗೆ ಮನೆ. ಇಲ್ಲಿ ನಾನು ಕಂಡಿದ್ದು ಅದ್ಭುತ ಅರ್ಮಿ ಗ್ರಂಥಾಲಯ. ಸುಮಾರು 7300 ಪುಸ್ತಕಗಳನ್ನು ಕಣ್ಣಿಗೆ ಹಬ್ಬವೆನ್ನುವಂತೆ ಜೋಡಿಸಿಡಲಾಗಿದೆ. ಸದಾಕಾಲವೂ ಶೀತ ವಾತಾವರಣವಿರುವ ಕೆಲಿಂಪಾಂಗಿನ ಹವೆಯಿಂದ ಹಾಳಾಗಿಹೋಗಬಹುದಾದ ಪುಸ್ತಕಗಳ ಬೀರುವಿನಲ್ಲಿ ಶಾಖೋತ್ಪನ್ನ ಯಂತ್ರಗಳನ್ನು ಇಡಲಾಗಿದೆ. 10 ದಿನ ಪತ್ರಿಕೆಗಳನ್ನು ಮತ್ತು 70 ನಿಯತಕಾಲಿಕಗಳನ್ನು ತರಿಸಲಾಗುತ್ತಿರುವ ಈ ಗ್ರಂಥಾಲಯದಲ್ಲಿ ಧ್ವನಿ ಮತ್ತು ದೃಶ್ಯ ವಿಭಾಗವೊಂದಿದೆ. 15 ರಿಂದ 20 ಜನ ಒಟ್ಟಿಗೆ ಕುಳಿತು ಅಲ್ಲಿನ ಚಟುವಟಿಕೆಗಳಲ್ಲಿ ಭಾಗವಹಿಸಬಹುದಾಗಿರುತ್ತೆ.
ಲೆಫ್ಟಿನೆಂಟ್.ಕರ್ನಲ್ ಸತ್ಪತಿಯವರೇ ಈ ವಿಭಾಗದ ಮುಖ್ಯಸ್ಥರಾದ್ದರಿಂದ ಫೋಟೋ ತೆಗೆಯಲು ಅನುಮತಿ ಕೊಟ್ಟರು. “ಡಾ.ಗ್ರಹಾಂ ಸ್ಕೂಲ್ ನೋಡುವುದನ್ನು ಮರೆಯಬೇಡಿ” ಎಂದು ಹೇಳಿ ಬೀಳ್ಕೊಟ್ಟರು.
ಡಾ.ಗ್ರಹಾಂ ಶಾಲಾ ಮನೆ
ಗಿರಿಧಾಮಗಳಲ್ಲಿನ ಬೋರ್ಡಿಂಗ್ ಶಾಲೆಗಳಿಗೆ ಅದರದ್ದೇ ಆದ ವಿಶೇಷತೆ ಇರುವುದು ಸಾಮಾನ್ಯ. ಆದರೆ ಈ ಶಾಲೆ ಉಳಿದವುಗಳಂತೆ ಹಣವುಳ್ಳವರ ಸೇವೆಗಾಗಿ ಮಾತ್ರವಲ್ಲ. 1900ರಲ್ಲಿ ಸ್ಕಾಟ್ಲ್ಯಾಂಡ್ನಿಂದ ಧರ್ಮಪ್ರಚಾರಕ್ಕಾಗಿ ಭಾರತಕ್ಕೆ ಬಂದ ಡಾ.ಜಾನ್ ಎ ಗ್ರಹಾಂ, ಮನಸ್ಸು ಬದಲಾಯಿಸಿ ಸಮಾಜ ಸೇವೆಗಾಗಿ ಕಟ್ಟಿದ ಶಾಲೆಯಿದು. 400 ಎಕರೆಗಳ ಜಾಗದಲ್ಲಿರುವ ಶಾಲೆ, ಮಕ್ಕಳಿಗಾಗಿ ಇರುವ ವಸತಿ ಸಮುಚ್ಚಯ, ಗ್ರಂಥಾಲಯ ಎಲ್ಲವನ್ನೂ ಒಳಗೊಂಡ ನೀರವ, ನೆಮ್ಮದಿಯ ಹಸಿರಿನ ವಾತವರಣ.
ಭೂಟಾನ್, ಟಿಬೇಟ್, ನೇಪಾಳ ಮತ್ತು ಭಾರತದ ನಿರ್ಗತಿಕ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುತ್ತಿರುವ ಈ ಶಾಲೆಯ ಸಂಸ್ಥಾಪಕ ಡಾ.ಗ್ರಹಾಂ ಮತ್ತು ರಬೀಂದ್ರನಾಥ್ ಟ್ಯಾಗೋರ್ ಉತ್ತಮ ಸ್ನೇಹಿತರಾಗಿದ್ದು, ಜೀವನದ ಅವಿಸ್ಮರಣೀಯ ಕ್ಷಣಗಳನ್ನು ಕೆಲಿಂಪಾಂಗಿನ ಟ್ಯಾಗೋರ್ ಮನೆಯಲ್ಲಿ ಒಟ್ಟಿಗೆ ಕಳೆದದ್ದು ಮಾತ್ರವಲ್ಲ, ರಬೀಂದ್ರರು ಆ ಮನೆಯಲ್ಲಿ ಕುಳಿತು ತಾವು ಬರೆದ ಅದೆಷ್ಟೋ ಕವಿತೆಗಳನ್ನು ಡಾ.ಗ್ರಹಾಂ ಅವರಿಗೆ ಓದಿ ಹೇಳುತ್ತಿದ್ದರಂತೆ. ಅವರಿಬ್ಬರ ನಡುವಿನ ರಾಜಕೀಯ, ಆಧ್ಯಾತ್ಮ ಮತ್ತು ಹಲವಾರು ಸಮಾಜ ಮುಖಿ ಚರ್ಚೆಗಳಿಗೆ, ಅಭಿಪ್ರಾಯ ವಿನಿಮಯಕ್ಕೆ ಸಾಕ್ಷಿಯಾಗಿ ನಿಂತಿರುವ ಕೆಲಿಂಪಾಂಗ್ ಎನ್ನುವ ಗಿರಿಕನ್ಯೆಯ ಕಡೆಯಿಂದ ಮನೆಕಡೆಗೆ ಮುಖ ಮಾಡಿದಾಗ ನೆನಪಾಗಿದ್ದು ಕೂಡ ಗೀತಾಂಜಲಿಯ ಸಾಲುಗಳೇ;
ಆಕಾಶದಂಚಿನಿಂದ ಅಪರಿಚಿತ ಯಕ್ಷ ಸಂದೇಶವಿತ್ತು; ಹಾದಿಯಲ್ಲಿ ಬಿರುಸುಗೊಳ್ಳುವಾಗ ನನ್ನ ಹೃದಯದ ಒಳಗೆಲ್ಲಾ ಹರುಷ….ಸೋಕಿಹೋಗುವ ಕುಳಿರ್ಗಾಳಿಯೂ ಸಿಹಿ…….”
ಅಂಜಲಿ ರಾಮಣ್ಣ ಲೇಖಕಿ, ಕವಯಿತ್ರಿ, ಅಂಕಣಗಾರ್ತಿ, ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತೆ. ‘ರಶೀತಿಗಳು – ಮನಸ್ಸು ಕೇಳಿ ಪಡೆದದ್ದು’, ‘ಜೀನ್ಸ್ ಟಾಕ್’ ಇವರ ಲಲಿತ ಪ್ರಬಂಧಗಳ ಸಂಕಲನ.