ಗಂಡಸು-ಸಮಾಜ ಹೆಣ್ಣಿಗೆ ತನಗೆ ಬೇಕಾದ ಕನಸನ್ನು ಕಾಣಲೂ ಸುಲಭವಾಗಿ ಬಿಡುವುದಿಲ್ಲ. ಅವಳ ತನ್ಮಯತೆಯೂ ಆವನಿಗೆ ಅಪಾಯದಂತೆಯೇ ಕಾಣಿಸುತ್ತದೆ. ಅವನು, ಅವನು ಕಟ್ಟಿದ ಮನೆ, ಅವನಿಂದ ಹುಟ್ಟಿದ ಮಕ್ಕಳು, ಇತ್ಯಾದಿಗಳ ಸುತ್ತಲೇ ಅವಳ ಬದುಕು ಗಿರಕಿ ಹೊಡೆಯುತ್ತಿರಬೇಕು. ಅವಳು ಅದೂ ಇದೂ ಎಂದು ಗೊಣಗೊಣವೆನ್ನುತ್ತಿರಬೇಕು. ಅವನು ಯಾಂತ್ರಿಕವಾಗಿ ಹೂಂಗುಡುತ್ತಾ ಪೇಪರ್ ಓದುತ್ತಲೊ, ಟಿವಿ ನೋಡುತ್ತಲೊ, ಫೋನಿನಲ್ಲಿ ಮಾತಾಡುತ್ತಲೊ ಇರಬೇಕು. ಓದುವಾಗ rank ಪಡೆದ ಹೆಣ್ಣುಮಕ್ಕಳನ್ನು ಸಹ ಈ ಚಾಕರಿ ಮಾಡಲೆಂದೇ ವ್ಯವಸ್ಥೆ ಯಶಸ್ವಿಯಾಗಿ ಅಟ್ಟುತ್ತದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಹದಿನೈದನೆಯ ಬರಹ
ಮೊನ್ನೆ ಶ್ರುತಿ ವೀಣಾ ವಿಶ್ವನಾಥ್ ಎಂಬ ಅದ್ಭುತ ಗಾಯಕಿಯ ದನಿಯಲ್ಲಿ ‘ಅಕ್ಕ ಕೇಳವ್ವ’ ಆಲಿಸಿ ಮೈಮರೆತುಬಿಟ್ಟೆ. ಹಿಂದೆ ಅದನ್ನು ಹಾಡಿದ್ದ ಮಲ್ಲಿಕಾರ್ಜುನ ಮನ್ಸೂರ್, ವೆಂಕಟೇಶ್ ಕುಮಾರರ ಗಾಯನಕ್ಕಿಂತ ಇದು ಅದ್ಭುತ ಅಂತನ್ನಿಸಿತು.
ದನಿಯಷ್ಟೇ ಅಲ್ಲ, ಆಕೆ ಬೋಳುಗೈಯನ್ನು ಆಡಿಸುತ್ತಾ ಹಾಡಿದ ರೀತಿಗೆ ನನ್ನಲ್ಲಿ ಮಾತೇ ಇರಲಿಲ್ಲ. ಆ ಭಾವತನ್ಮಯತೆ ಅಕ್ಕನಿಗೆ ಸಂದ ತಕ್ಕ ಗೌರವ ಅಂತನ್ನಿಸಿತು.
(ಲಿಂಕನ್ನು ಲೇಖನದ ಕೆಳಗೆ ಕೊಡಲಾಗಿದೆ)
ಹಾಡುವ ಮಂದಿ ಸಾಮಾನ್ಯವಾಗಿ ಮಹಾ ಶೋಕಿಲಾಲರು ಅಂತ ನನಗೆ ಅನ್ನಿಸಿದ್ದಿದೆ. ಅವರ ಸಿಲ್ಕ್ ಕುರ್ತಾಗಳು, ಡಿಸೈನರ್ ಸೀರೆಗಳು, ಅದರ ಮೇಲೆ ನಾಲ್ಕೈದು ಚಿನ್ನದ ಸರಗಳು, ಕೈ ಕಡಗಗಳು ಬೆರಳುಗಳಲ್ಲಿ ಹೊಳೆಯುವ ಒಂದೈದಾದರೂ ಉಂಗುರಗಳು ನನ್ನ ಕಣ್ಣಿಗೆ ನೋವೆನ್ನಿಸುತ್ತವೆ. ಹಾಗಾಗಿ ನೋಡುವುದಿಲ್ಲ, ಕೇವಲ ಆಲಿಸುತ್ತೇನೆ.
ಮನ್ಸೂರ್, ವೆಂಕಟೇಶ್ ಕುಮಾರರಂತಹ ಕೆಲವರು ಮಾತ್ರ ಅದಕ್ಕೆ ಅಪವಾದ.
ಹೆಣ್ಣು ಇಂಥದ್ದೇ ಕನಸುಗಳನ್ನು ಕಾಣಬೇಕು ಎಂದು ಮುಂಚೆಯಿಂದಲೇ ಅವಳ ಬ್ರೇನ್ ವಾಶ್ ಪ್ರಾರಂಭವಾಗಿರುತ್ತದೆ. ಬೇರೆ ರೀತಿಯ ಕನಸು ಕಾಣುವ ಧೈರ್ಯವಿದ್ದದ್ದು ಅಕ್ಕನಂತವರಿಗೆ ಮಾತ್ರ. ಭಕ್ತಿ ಎಂಬ ಡಬ್ಬಿಯೊಳಗೆ ಮಂದಿ ಆಕೆಯನ್ನು ತುರುಕಲು ಪ್ರಯತ್ನಿಸಿದರೂ ಅಕ್ಕ ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ಪ್ರೇಮಿಯೇ. ಕನಸಿನಲ್ಲಿ ಬರುವವನ ರೂಪದ ಸೂಕ್ಷ್ಮ ವಿವರಗಳೂ ಆಕೆಗೆ ಕಂಡಿವೆ. ಅಕ್ಕಿ, ಅಡಕೆ, ತೆಂಗಿನಕಾಯಿ, ಚಿಕ್ಕ ಚಿಕ್ಕ ಜಡೆಗಳ… ಸುಲಿಪಲ್ಲ ಗೊರವನು… ಭಿಕ್ಷಕ್ಕೆ ಬಂದದ್ದ ಕಂಡೆನವ್ವ… ಇತ್ಯಾದಿ.
ಆದರೆ ಆತ ‘ಮಿಕ್ಕು ಮೀರಿ’ ಹೋಗಬಲ್ಲಂತವನು. ಅವಳು ಬೆಂಬತ್ತಿ ಕೈ ಹಿಡಿಯಬಲ್ಲ ಶಕ್ತಿ ಇರುವವಳು. ಅದೊಂದು ಪ್ರೇಮಿಗಳ ಕಣ್ಣುಮುಚ್ಚಾಲೆ ಸರಸದಂತೆ ಕಣ್ಣೆದುರು ಬಿಚ್ಚಿಕೊಳ್ಳುತ್ತದೆ. ಶ್ರುತಿ ವಿಶ್ವನಾಥ್ ಆ ಕನಸಿನ ಆನಂದವನ್ನು ಮುಖದಲ್ಲಿ ಉಕ್ಕಿಸುತ್ತಾ ದರ್ಶನಭಾಗ್ಯ ಸಿಕ್ಕ ಭಾವದಲ್ಲಿ ದನಿಯೆತ್ತಿ ಹಾಡಿದ ರೀತಿ ಮೊನ್ನೆಯಿಂದ ಹತ್ತಾರು ಬಾರಿ ನೋಡುತ್ತಾ ಆಲಿಸುವಂತೆ ಮಾಡಿತ್ತು.

ನಿನ್ನೆ ನಮ್ಮ ಸಮುದಾಯದ ವಾಟ್ಸಾಪಿನಲ್ಲಿ ಹೆಣ್ಣಿನ ಕನಸನ್ನು, ಹೆಣ್ಣೊಬ್ಬಳು ಭಾವಪೂರ್ಣವಾಗಿ ಹಾಡಿದ್ದನ್ನು, ಹೆಣ್ಣೊಬ್ಬಳು ಕೇಳಿಸಿಕೊಂಡು ಮೈಮರೆತ ಅನುಭವದಲ್ಲಿ ಆಕೆ ಮನ್ಸೂರ್ ಮತ್ತು ವೆಂಕಟೇಶ್ ಕುಮಾರರಿಗಿಂತಲೂ ಚೆನ್ನಾಗಿ ಹಾಡಿದ್ದಾಳೆ ಎಂದು ನನ್ನ ವೈಯುಕ್ತಿಕ ನಿಲುವನ್ನು ವ್ಯಕ್ತಪಡಿಸಿದ್ದೆ.
ನಿಮಿಷಗಳಲ್ಲೇ, ಗಂಡಸೊಬ್ಬರು ‘ಹಾಗೆಲ್ಲಾ ಹೋಲಿಸುವುದು ಸರಿಯಿಲ್ಲ. ಮನ್ಸೂರರೆಂತಹ ದಿಗ್ಗಜರು! ಅವರು ‘ಅಕ್ಕ ಕೇಳವ್ವ’ ಹಾಡಿರುವ ಈ ವಿಡಿಯೋ ನೋಡಿ. ರಾಜೀವಗಾಂಧಿ, ಸೋನಿಯಾ, ರಾಹುಲ್, ಪ್ರಿಯಾಂಕಾ, ಪ್ರಣವ್ ಮುಖರ್ಜಿ ಇತ್ಯಾದಿ ಎಷ್ಟೊಂದು ಮಂದಿ ಡಿಗ್ನಿಟರಿಗಳು ಈ ಕಲಾವಿದನಿಗೆ ತಕ್ಕ ಗೌರವ ನೀಡಲು ನೆಲದ ಮೇಲೆ ಕೂತು ಮೈಮರೆತು ಕೇಳಿಸಿಕೊಳ್ಳುತ್ತಿದ್ದಾರೆ’ ಎಂದೆಲ್ಲಾ ಸ್ತುತಿಸಿದರು.
‘Thank you for illuminating us, doctor!’ ಎಂದು ಇನ್ನೊಬ್ಬ ಪುರುಷರು ಅವರಿಗೆ ಪ್ರತಿಕ್ರಿಯಿಸಿದರು.
ಅದು ಇಂದಿರಾಗಾಂಧಿಯ ಪುಣ್ಯತಿಥಿಯ ಸಂದರ್ಭ. ರಾಜಘಾಟಿಗೆ ಯಾವುದೇ ಪುಣ್ಯತಿಥಿಯ ಸಂದರ್ಭದಲ್ಲಿ ಸುಪ್ರಸಿದ್ಧ ಶಾಸ್ತ್ರೀಯ ಗಾಯಕರನ್ನು ಆಹ್ವಾನಿಸಲಾಗುತ್ತದೆ. ಬೆಳಗಿನ ಬಿಸಿಲಿನಲ್ಲಿ ಸಮಾಧಿಯ ಮೇಲೆ ಹೂಗುಚ್ಛವನ್ನರ್ಪಿಸಿದ ಮೇಲೆ ಸುಮಾರು ಒಂದು ಗಂಟೆ ಈ ಸಂಗೀತ ಕಾರ್ಯಕ್ರಮ ನಡೆಯುತ್ತದೆ. ನೆಲದ ಮೇಲೆ ಕೂರುವುದು ಶೃದ್ಧಾಂಜಲಿಯ ಸಂದರ್ಭದ ಔಚಿತ್ಯಕ್ಕೆ.
ಎಂಬತ್ತರ ದಶಕದಲ್ಲಿ ರಾಹುಲ್ ಗಾಂಧಿ ಡಿಗ್ನಿಟರಿ ಆಗಿರಲಿಲ್ಲ. ಹದಿವಯಸ್ಸು. ಕೂರಲು ಸ್ವಲ್ಪ ಕಷ್ಟವಾಗಿ ಅಕ್ಕ ಹೇಗೆ ಕೂತಿದ್ದಾಳೆ ಎಂದು ಓರೆಕಣ್ಣಿನಿಂದ ನೋಡುವುದನ್ನು ಸಹ ಗಮನಿಸಬಹುದು.
ಈ knee-jerk ಪ್ರತಿಕ್ರಿಯೆಯ ಹಿಂದೆ ಇರುವ ಪುರುಷ ಅಭದ್ರತೆಯನ್ನು ಗ್ರಹಿಸಲು ಪ್ರಯತ್ನಿಸಿದೆ. ಅಕಡೆಮಿಕ್ ಪರಿಭಾಷೆಯಲ್ಲಿ ಅದನ್ನು age-ism (ವಯಸ್ಸನ್ನು ಆಧರಿಸಿದ ತರತಮ)ಮತ್ತು sex-ism (ಲಿಂಗಾಧಾರಿತ ತರತಮ) ಎಂದು ಕರೆಯುವುದು ರೂಢಿ. ಒಬ್ಬ ಯುವತಿಯ ಗಾನವನ್ನು ದಿಗ್ಗಜರಿಗೆ ಹೋಲಿಸಿ ಅವಳನ್ನು ಮೇಲೆ ಕೂರಿಸುವುದೇ?
ದಿಗ್ಗಜರು ಹಾಡಿದ್ದು ಒಂದು ವಚನವನ್ನು. ಆದರೆ ಗಾಯಕಿಯೊಬ್ಬಳು ಹೆಣ್ಣೊಬ್ಬಳ ಕನಸನ್ನು ಅದು ತನ್ನ ಕನಸೂ ಹೌದು ಎಂದು ಎದೆಯಾಳದಿಂದ ಅನುಭವಿಸಿಕೊಂಡು ಹಾಡಿದಾಳೆ ಎಂದು ಹೇಳುವುದಷ್ಟೇ ನನ್ನ ಉದ್ದೇಶವಾಗಿತ್ತು.
ಅಷ್ಟೇ ಅಲ್ಲ, ಈ ಮೊಣಕಾಲು-ಎಳೆತದ (knee-jerk) ಪ್ರತಿಕ್ರಿಯೆಗಳು (ಜರ್ಕ್ ಎಂಬುದಕ್ಕೆ ಎಂಬ ಪದಕ್ಕೆ ಮುಠ್ಠಾಳ ಎನ್ನುವ ಅರ್ಥವೂ ಇದೆ, ಆದ್ದರಿಂದ) ಸ್ಥಾಪಿತ ನಿಲುವುಗಳನ್ನು ಪ್ರಶ್ನಿಸಬಾರದು ಅಥವಾ ಪಲ್ಲಟಿಸಬಾರದು ಎಂಬ ಜಿದ್ದಿನಿಂದ ಸಹ ಹೊಮ್ಮಿರುತ್ತವೆ. ಈ ಬೌದ್ಧಿಕ ಅಸಹನೆ ಪ್ರಸ್ತುತ ಕಾಲದ ಹವಾಮಾನವಾಗಿಬಿಟ್ಟಿರುವುದು ಕೇವಲ ಎಂಬತ್ತು ವರ್ಷಗಳ ಸ್ವಾತಂತ್ರ್ಯ ನಮ್ಮನ್ನು ಎತ್ತ ತಂದು ನಿಲ್ಲಿಸಿದೆ ಎಂದು ಬೆಚ್ಚಿಬೀಳಿಸುತ್ತದೆ.
ಇನ್ನೊಬ್ಬ ಲೇಖಕಿಯದು ಇನ್ನೊಂದು ರೀತಿಯ ಪೂರ್ವಾಗ್ರಹ. ಅಕ್ಕನ ಬಗ್ಗೆ ಇರುವ ಒಂದು ಸಂಪಾದಿತ ಕೃತಿಯಲ್ಲಿ ಅಕ್ಕನ ವಚನವೊಂದನ್ನು ವಿಶ್ಲೇಷಿಸುತ್ತಾ, ‘ಕರ್ಮವೆಂಬ ಗಂಡನ ಬಾಯ ಟೊಣೆದು/ ಹಾದರವನಾಡುವೆನು ಹರನ ಕೂಡೆ’ ಸಾಲಿನ ಬಗ್ಗೆ ಹೀಗೆ ಬರೆಯುತ್ತಾರೆ:
ಅಕ್ಕಮಹಾದೇವಿಯಂತಹ ಶರಣೆಯಿಂದ ಇಂತಹ ಶಬ್ದದ ಉಲ್ಲೇಖ ಹೇಗೆ ಆಯಿತು? ಹಾದರ ಇದರರ್ಥ ಇಂದ್ರಿಯಗಳ ಮೇಲೆ ಬಲವಂತದ ಪ್ರಯೋಗವೆನ್ನಬಹುದೆ? ಅಥವಾ ಮಾನವನ ಸಹಜ ಕ್ರಿಯೆಗಳಲ್ಲಿ ಮೂಡಿಬರುವ ನಿಸರ್ಗದ ಬಯಕೆಯೇ? ಅಕ್ಕಮಹಾದೇವಿ ಈ ಶಬ್ದವನ್ನು ಉಪಯೋಗಿಸಿದರೆ? ಅಥವಾ ತಾಳೆಗರಿಗಳಲ್ಲಿ ಮಸುಕಾಗಿ ಮೂಡಿಬಂದ ಅಹಿತಕರವಾದ ಶಬ್ದವೆ? ಇದೇ ತರಹ ಅಕ್ಕನ ಇನ್ನೊಂದು ವಚನದಲ್ಲಿ ನಿಮ್ಮ ನಿಮ್ಮ ಗಂಡಂದಿರನು ಒಲೆಯೊಳಗಿಕ್ಕು. … ಒಳೆಗರಿಯಲ್ಲಿ ‘ಆದರವ’ ಮಾಯವಾಗಿ ‘ಹಾದರ’ ಇಂದು ಕಂಡುಬಂದಿರಬಹುದು? ಇಂತಹ ಪ್ರಕ್ಷಿಪ್ತ ಅಹಿತಕರ ಶಬ್ದಗಳನ್ನು ಸರಿಪಡಿಸಿ ವಚನಗಳನ್ನು ಪರಿಷ್ಕರಿಸಿ, ಮುಂದೆ ಅಚ್ಚಾಗುವಾಗ ಜಾಗರೂಕತೆಯನ್ನು ವಹಿಸಿದರೆ ಒಳಿತೆಂಬುದು ನನ್ನ ಭಾವನೆ. ಹಳೆಗನ್ನಡದಲ್ಲಿ ಆ ಹೋಗಿ ಹಾ ಆಗಿರಬಹುದು (ಪು. 200-201)
ಈ ಲೇಖಕಿ ಒಬ್ಬ ಕರ್ನಾಟಕದ ಒಬ್ಬ ಮಾಜಿ ಸಚಿವೆ. ಇರಲಿ, ಅಕ್ಕ ‘ಒಳಗಣ ಗಂಡನವ್ವ, ಹೊರಗಣ ಮಿಂಡನವ್ವಾ’ ಅಂತ ಸಹ ಹೇಳಿದಾಳಲ್ಲ? ಅದೂ ಅಲ್ಲದೆ, ಅಕ್ಕ ‘ಸಾವಕೆಡುವ ಗಂಡರನು ತೆಗೆದು ಒಲೆಯೊಳಗಿಕ್ಕು’ ಎಂದಿದ್ದಾಳೆ ಹೊರತು ನಿಮ್ಮ ನಿಮ್ಮ ಗಂಡರನು ಎಂದು ಎಲ್ಲಿಯೂ ಹೇಳಿಲ್ಲ.
ಅಕ್ಕನಂತ ಬೆಂಕಿಯನ್ನು ಸಹ ತಂಪಾಗಿಸುವ ಪ್ರಯತ್ನವನ್ನು ಸಂಪ್ರದಾಯ ಮಾಡುತ್ತಲೇ ಇರುತ್ತದೆ.

ಗಂಡಸು-ಸಮಾಜ ಹೆಣ್ಣಿಗೆ ತನಗೆ ಬೇಕಾದ ಕನಸನ್ನು ಕಾಣಲೂ ಸುಲಭವಾಗಿ ಬಿಡುವುದಿಲ್ಲ. ಅವಳ ತನ್ಮಯತೆಯೂ ಆವನಿಗೆ ಅಪಾಯದಂತೆಯೇ ಕಾಣಿಸುತ್ತದೆ. ಅವನು, ಅವನು ಕಟ್ಟಿದ ಮನೆ, ಅವನಿಂದ ಹುಟ್ಟಿದ ಮಕ್ಕಳು, ಇತ್ಯಾದಿಗಳ ಸುತ್ತಲೇ ಅವಳ ಬದುಕು ಗಿರಕಿ ಹೊಡೆಯುತ್ತಿರಬೇಕು. ಅವಳು ಅದೂ ಇದೂ ಎಂದು ಗೊಣಗೊಣವೆನ್ನುತ್ತಿರಬೇಕು. ಅವನು ಯಾಂತ್ರಿಕವಾಗಿ ಹೂಂಗುಡುತ್ತಾ ಪೇಪರ್ ಓದುತ್ತಲೊ, ಟಿವಿ ನೋಡುತ್ತಲೊ, ಫೋನಿನಲ್ಲಿ ಮಾತಾಡುತ್ತಲೊ ಇರಬೇಕು. ಓದುವಾಗ rank ಪಡೆದ ಹೆಣ್ಣುಮಕ್ಕಳನ್ನು ಸಹ ಈ ಚಾಕರಿ ಮಾಡಲೆಂದೇ ವ್ಯವಸ್ಥೆ ಯಶಸ್ವಿಯಾಗಿ ಅಟ್ಟುತ್ತದೆ.
ಎರಿಕ್ ಫ್ರಾಮ್ ನಾನು ಬೆಳೆಯುತ್ತಿದ್ದ ವಯಸ್ಸಿನಲ್ಲಿ ಪ್ರಭಾವಿಸಿದ್ದ ಒಬ್ಬ ಚಿಂತಕ. ಅವನ Escape from Freedom ಕೃತಿ ಬದುಕನ್ನು ನೆಟ್ಟ ನೋಟದಿಂದ ನೋಡಬಲ್ಲ ಶಕ್ತಿಯನ್ನು ನೀಡಿತ್ತು.
ಮೊನ್ನೆ ಯಾರೋ ಮೂರನೆಯ ಬಾರಿಗೆ ‘ನೀವೇನು ಬಿಡಿ! ಫ್ರೀನೊಫ್ರೀ!’ ಎಂದಾಗ ಸುಮ್ಮನಿರಲು ಸಾಧ್ಯವಾಗಲಿಲ್ಲ. ಆ ಮಾತನ್ನೇ ಹಿಡಿದು ಜಗ್ಗಿದೆ.
‘ನೋಡಿ, ಬದುಕು ನಾವು ಮಾಡಿಕೊಂಡಿರುವ ಆಯ್ಕೆಗಳ ಕಂತೆ. ಆ ಕಂತೆಯಲ್ಲಿ ಅದೂ ಇರುತ್ತದೆ, ಇದೂ ಇರುತ್ತದೆ. ನನಗಿರುವ ಸ್ವಾತಂತ್ರ್ಯ ನಿಮಗೇನಾದರೂ ಸಿಕ್ಕಿದರೆ ನಿಭಾಯಿಸಲು ಆಗದೆ ಹುಚ್ಚು ಹಿಡಿಸಿಕೊಳ್ಳುತ್ತೀರಿ. ಅದರಿಂದ ಪಲಾಯನ ಮಾಡಲು ನೋಡುತ್ತೀರಿ. ಎಲ್ಲರಿಗೂ ಅದರ ಯೋಗ್ಯತೆ ಸಾಮರ್ಥ್ಯಗಳು ಇರುವುದಿಲ್ಲ. ಈಗ ಮನೆ, ಮಠ, ಮಕ್ಕಳು, ಕೆಲಸದವಳು ಅಕ್ಕಪಕ್ಕದವರು… ಹೀಗೇ ನೂರೆಂಟು ವಿಷಯಗಳ ಬಗ್ಗೆ ಗೊಣಗುತ್ತಾ ಆರಾಮವಾಗಿದೀರಿ. ನನ್ನ ಫ್ರೀನೋ-ಫ್ರೀ ಬಗ್ಗೆ ನಿಮ್ಮ ನಾಟಕ ಬೇಡ.’
ಈಗ ಆಕೆ ನನ್ನ ದೂರದಿಂದ ನೋಡಿದರೂ ಪಲಾಯನಿಸುತ್ತಾರೆ!
ಹೆಣ್ಣಾಗಿ ನನ್ನ ಕಾಲ ಮೇಲೆ ನಿಲ್ಲುವ ಕನಸು ಅದರದ್ದೇ ಆದ ಬೆಲೆಯನ್ನು ಬೇಡಿತ್ತು. ನನ್ನ ಪೆನ್ಷನ್ ಸಹ ಸುಮ್ಮನೆ ಬರಲಿಲ್ಲ. ಇರಲೊಂದು ಸೂರು, ಅದೆಷ್ಟು ವರ್ಷಗಳ ನಂತರ!
ತಲೆ ಬೆಳ್ಳಗಾಗಿದ್ದು ಮಾತ್ರ ತನ್ನಿಂತಾನೇ! ಅದರ ಸಂಭ್ರಮವೇ ಬೇರೆ!
ಹರೆಯ ನನ್ನ ಮನಸ್ಸಿನ ಆಳದಲ್ಲಿ ಒಂದು ಹೊರೆ ಅಂತಲೇ ಅನ್ನಿಸುತ್ತಿತ್ತು. ಯಾರ ಜೊತೆ ಸಹಜವಾಗಿ ನಿರ್ಭಿಡೆಯಿಂದ ಇದ್ದರೂ ಅದಕ್ಕೊಂದು ಕಾಮಾ-ಲೆ ಕಣ್ಣಿನ ಲೇಪ ಇದ್ದೇ ಇರುತ್ತಿತ್ತು. ಈಗಲೂ ಇಲ್ಲ ಅಂತೇನಲ್ಲ. ಮೇರಾ ಭಾರತ್ ಮಹಾನ್!
ದಶಕಗಳ ಹಿಂದೆ ಒಮ್ಮೆ ಮೈಸೂರಿನ RIE ಗೆ ಬಂದಿದ್ದೆ. ತಂಗಿ ಊರಿಗೆ ಹೋಗಿದ್ದಳು ಎನ್ನುವುದು ಬಂದ ಮೇಲೆ ತಿಳಿಯಿತು. ಅವಳ ಗಂಡನನ್ನು ಮಾತಾಡಿಸಿದೆ. ಪಕ್ಕದಲ್ಲೇ ಇದ್ದ ಅವರ ಅಮ್ಮನ ಮನೆಯಿಂದ ರಾತ್ರಿ ಊಟ ತಂದುಕೊಟ್ಟರು. ಆಯಾಸವಾಗಿತ್ತು. ತಿಂದು ರೂಮಿನ ಬಾಗಿಲು ಜಡಿದು ಮಲಗಿಕೊಂಡೆ. ಬೆಳಗಿನ ಜಾವದಲ್ಲಿ ಎದ್ದು ಕೆಲಸ ಮಾಡುತ್ತಿದ್ದ ಬೆಂಗಳೂರಿಗೆ ಹೊರಟೆ. ರಜೆ ಹಾಕುವ ಹಾಗಿರಲಿಲ್ಲ.
ಮರುಬಾರಿ ಊರಿಗೆ ಹೋದಾಗ ವಿಶಾಲಮ್ಮ ಆಕ್ಷೇಪಣೆ ಎತ್ತಿದ್ದರು. ಬೆಚ್ಚಿಬಿದ್ದಿದ್ದೆ. ತಂಗಿ ‘ನಾನಿಲ್ಲದಾಗ ಯಾಕೆ ರಾತ್ರಿ ಉಳಿಯಬೇಕಿತ್ತು?’ ಎಂದು ಹೇಳಿದಳಂತೆ. ನಾನು RIE ನಿಂದ ಸೆಮಿನಾರ್ ಮುಗಿಸಿಕೊಂಡು ಹೋಗಿದ್ದೇ ಮುಸ್ಸಂಜೆಯಾದಾಗ. ನನಗೆ ಅಲ್ಲಿ ಉಳಿಯಬಾರದು ಎಂದು ಹೊಳೆಯಲೇ ಇಲ್ಲವೇ!
ಇದೆಂತ ಕರ್ಮ! ಎಲ್ಲ ಬಿಟ್ಟು ಅವಳ ಗಂಡನೆಂಬ ಹುಳುವನ್ನು ನೋಡುತ್ತೇನೆ ಅಥವಾ ಕಾಮಿಸುತ್ತೇನೆ ಎಂದು ಅಂದುಕೊಂಡಳೇ? ಆ ಜಂತುವೇ ಹಾಗಂದುಕೊಂಡು ಉಬ್ಬಿದ್ದಿರಬಹುದೇ?
ಡಿಗ್ರಿ ಮುಗಿದ ಮೇಲೆ ಮುಂದೆ ಓದಲು ಬಿಡದಿದ್ದರೆ ನನ್ನ ಹೆಣಕ್ಕೆ ಮದುವೆ ಮಾಡಬೇಕಾಗುತ್ತದೆ ಎಂದು ದಬಾಯಿಸಿದ್ದು ಕೇಳಿ ವಿಶಾಲಮ್ಮ ನಡುಗಿ ಹೋಗಿದ್ದರು. ಮನೆಯ ಹಿಂದೆಯೇ ಬಾವಿ ಇದೆ, ಹೋಗಿ ಧಡಮ್ಮನೆ ಬಿದ್ದರೂ ಬಿದ್ದಳೆ! ಅವಳ ಹಿಂದೆ ನಿಂತಿರುವ ತಂಗಿಯರ ಗತಿ?
ಸರಿ, ಇಬ್ಬರು ತಂಗಿಯರಿಗೂ ಮದುವೆ ಮಾಡಲಾಯಿತು. ನಾನು ಇಂಗ್ಲಿಷ್ ಭಾಷೆ, ಸಾಹಿತ್ಯ, ಪಾಠ, ವಿದ್ಯಾರ್ಥಿಗಳು, ಎಂದು ಹಾಯಾಗಿ ನನ್ನ ಲೋಕದಲ್ಲಿ ಮುಳುಗಿ ಹೋದೆ.
ಈ ಮದುವೆಯಾಗದ ಧಿಂರಂಗಿ ಅಕ್ಕ, ತಂಗಿ ಇಲ್ಲದಾಗ ಅವಳ ಮನೆಗೆ ಹೋಗುವುದು ಎಂದರೇನು!
ನಿಜ ಹೇಳಬೇಕೆಂದರೆ, ನನಗೆ ವಿದ್ಯಾರ್ಥಿಗಳ ವಿನಾ ಬೇರೆ ಯಾರನ್ನೂ ಅರೆಗಳಿಗೆಯ ಮೇಲೆ ಕಣ್ಣಿಟ್ಟು ನೋಡುವ ಅಭ್ಯಾಸವೇ ಇಲ್ಲ! ಇವತ್ತಿಗೂ ಅಷ್ಟೆ. ಈ ನಡುವೆ ನಾನೇನಾದರೂ ಕಣ್ಣಿಟ್ಟು ನೋಡಿದರೆ ಮಂಗಳಮೂರ್ತಿಯಾದ ನನ್ನ ಗಡ್ಡ-ಗುರುವನ್ನು. ಇಲ್ಲಾ, ಆ ರಸ್ತೆಯಲ್ಲಿ ಡ್ರೈವ್ ಮಾಡುವಾಗೆಲ್ಲ ಕಣ್ಣೆತ್ತಿ ನೋಡುವಂತೆ ಮಾಡಬಲ್ಲ ಧೀಮಂತ ವಿವೇಕಾನಂದರನ್ನು. ಅಂದ ಹಾಗೆ, ಒಂದೆರಡು ವರ್ಷಗಳ ಹಿಂದೆ ಸನ್ಯಾಸಿಯೊಬ್ಬರನ್ನು ಕುತೂಹಲದಲ್ಲಿ ಕಣ್ಣಿಟ್ಟು ನೋಡಿದ್ದಕ್ಕೆ ಗುಲ್ಲೆದ್ದಿತ್ತು! ತಲೆ ಬೆಳ್ಳಗಾದ ಮೇಲೂ! ಹೇಳಿದೆನಲ್ಲ, ಮೇರಾ ಭಾರತ್ ಮಹಾನ್!
ನಾನು ಕೆಲಸಕ್ಕೆ ಸೇರಿದಾಗ ಇಪ್ಪತ್ತು ತುಂಬಿತ್ತಷ್ಟೇ. (ಮನೆಯಲ್ಲಿ ನನ್ನ ಕಾಟ ತಡೆಯಲಾರದೆ ಹುಟ್ಟಿದ ತಾರೀಕನ್ನು ಎರಡು ವರ್ಷ ಹಿಂದಕ್ಕೆ ಹಾಕಿ ಆರಾಗಿಸಿ ಸ್ಕೂಲಿಗೆ ಸಾಗಿಸಿದ್ದರ ಫಲ!) ಎಂ ಎ ಮುಗಿದ ತಕ್ಷಣವೇ ಬೆಂಗಳೂರಿನ ಒಂದು ಲಿಂಗಮಿಶ್ರ ಕಾಲೇಜಿಗೆ ಪಾಠ ಮಾಡಲು ಸೇರಿದ್ದೆ. ಅಲ್ಲಿದ್ದ ಘಡವಾಗಳ ಎದುರಲ್ಲಿ ಹುಡುಗಿಯಂತೆ ಕಾಣಿಸುತ್ತಿದ್ದೆ.
ಒಂದು ಸಲ ಒಂದಿಬ್ಬರು ಬಂದು ನೀವು ಪಾಠ ಮಾಡುವಾಗೆಲ್ಲ ಬರೀ ಹೆಣ್ಣುಮಕ್ಕಳ ಕಡೆ ನೋಡುತ್ತೀರಿ ಎಂದು ದೂರಿದ್ದು ಕೇಳಿ ಹೌದೇ ಎಂದು ಆಶ್ಚರ್ಯವಾಗಿತ್ತು. ‘ನಿಮ್ಮನ್ನು ನೋಡಬೇಕಿತ್ತಾ? ಹೋಗಿ ಕನ್ನಡೀಲಿ ಮುಖ ನೋಡಿಕೊಳ್ರಯ್ಯ!’ ಎಂದು ನಗುತ್ತಾ ಉಡಾಫೆಯಲ್ಲಿ ಅಟ್ಟಿದ್ದೆ.
ನನ್ನ ವಿದ್ಯಾರ್ಥಿನಿಯರಿಗೆ ಸ್ಪಷ್ಟವಾಗಿ ಹೇಳುತ್ತಿದ್ದೆ: ಒಬ್ಬ ಗಂಡಸು ನಿಮ್ಮನ್ನೇ ನೋಡುತ್ತಿದ್ದಾನೆ ಎಂದರೆ ತಲೆ ತಗ್ಗಿಸಬೇಡಿ. ಅವನಿಗೆ ಇನ್ನೂ ಅನುಕೂಲವಾಗುತ್ತದೆ. ತಿರುಗಿಸಿ ದುರ್ರನೆ ನೋಡಿ. ತೆಪ್ಪನೆ ಕಣ್ಣಿಳಿಸುತ್ತಾನೆ.
ಕೆಲವು ತಿಂಗಳುಗಳ ಹಿಂದೆ ನಮ್ಮ ಅಪಾರ್ಟ್ಮೆಂಟಿನಲ್ಲಿ ಸಿಂಕಿಂಗ್ ಫಂಡ್ ಗಲಾಟೆ ನಡೆದಿತ್ತು. ಇತ್ತ ಒಂದೋ ಎರಡೋ ರೂಮಿರುವ ಮನೆಗಳ ‘ಬಡವರು’; ಮತ್ತು ಅತ್ತ ಕೋಟಿಗಟ್ಟಲೆ ಕೊಟ್ಟು ನಾಲ್ಕೈದು ರೂಮು, ನಾಲ್ಕೈದು ಬಾತ್ -ರೂಮುಗಳಿರುವ ಫ್ಲಾಟಿಗರು; ಇಬ್ಬರೂ ಒಂದೇ ಮೊತ್ತ ಕಟ್ಟಬೇಕಂತೆ.
ನಾನಂತೂ ಕಟ್ಟುವುದಿಲ್ಲ, ಬೇಕಾದ್ದು ಮಾಡಿಕೊಳ್ಳಿ ಎಂದು ಮೀಟಿಂಗಿನಿಂದ ಹೊರ ನಡೆದಿದ್ದೆ.
ಕಟ್ಟದೇ ಹೋದವರ ಹೆಸರುಗಳ ಪಟ್ಟಿ ಊರ ತುಂಬ ಹಾರಾಡಿತು. ಪ್ರಸಿದ್ಧಳಾಗುತ್ತಿದ್ದೇನೆ ಎಂದು ಮನಸ್ಸಿನಲ್ಲೇ ಬೀಗಿದ್ದೆ. ‘ನಾಕು ಜನಕ್ಕೆ ಗೊತ್ತಾದರೆ ಏನಂತಾರೆ?’ ಅಂತ ವಿಶಾಲಮ್ಮ ಯಾವಾಗಲೂ ಹೆಣ್ಮಕ್ಕಳನ್ನು ಹೆದರಿಸುತ್ತಿದ್ದದ್ದು ನೆನಪಿಗೆ ಬಂದಿತ್ತು. ಈಗ ಆ ನಾಕರ ಮಜವೋ ಮಜಾ!
ಮೇಲಿನ ಒಂದು ದೊಡ್ಡ ಫ್ಲಾಟು ನನ್ನ ಸ್ನೇಹಿತ ದಂಪತಿಗಳದು. ವಿಜ್ಞಾನ, ಸಾಹಿತ್ಯ, ಸಂಗೀತ, ದರ್ಶನಶಾಸ್ತ್ರ ಇತ್ಯಾದಿಗಳ ಬಗ್ಗೆ ಹಾಯಾಗಿ ಹರಟೆ ಹೊಡೆಯಬಲ್ಲ ಅವರಲ್ಲಿಗೆ ನಾನು ಹಲವಾರು ಬಾರಿ ಹೋಗಿದ್ದಿದೆ. ಅವರು ಬೆಂಗಳೂರಿಗೆ ಶಿಫ್ಟ್ ಆದ ಮೇಲೆ ಈ ಮನೆ ಮಾರಾಟಕ್ಕಿತ್ತು. ನೋಡಲು ಬಂದವರಿಗೆ ಮನೆಯನ್ನು ತೋರಿಸಲಾಗುವುದಾ ಎಂದು ಸಂಕೋಚದಲ್ಲಿಯೇ ಕೇಳಿದ್ದರು. ಅದಕ್ಕೇನು ಎಂದು ಮನೆ ಕ್ಲೀನ್ ಮಾಡಿಸುವುದು, ಬಂದವರಿಗೆ ತೋರಿಸುವುದು, ಮಾಡುತ್ತಿದ್ದೆ. ದುಬಾರಿ ಎಂದು ವಾಪಸ್ ಹೋದವರೇ ಹೆಚ್ಚು.
ಯಾರೋ ಒಬ್ಬ ದುಡ್ಡಿರುವವ ಬಂದ. ಮನೆ ತೋರಿಸಿದೆ. ನನ್ನಂತವರು ಇಲ್ಲಿದಾರೆ ಎಂದು ಆತ ಇಂಪ್ರೆಸ್ ಆದನಂತೆ. ಅದರ ಅರ್ಥವೇನೊ ಗೊತ್ತಾಗಿಲ್ಲ. ಕೋಟಿಗಟ್ಟಲೆ ಕೊಟ್ಟು ಅದನ್ನು ಕೊಂಡ. ದಲ್ಲಾಳಿಗೆ ಕೊಡುವ ಲಕ್ಷಗಟ್ಟಲೆ ಹಣ ಉಳಿಯಿತು ಎಂದು ಎರಡೂ ಕಡೆಯವರು ನನಗೆ ಥ್ಯಾಂಕ್ಸ್ ಹೇಳಿದರು. ಸರಿ, ಮಜಾ ಮಾಡಿ ಎಂದೆ.
ಆ ಕೊಂಡುಕೊಂಡವ ಮತ್ತವನ ಹೆಂಡತಿ ಥ್ಯಾಂಕ್ಸ್ ಹೇಳುವ ಸಲುವಾಗಿ ಬೇಸಿಗೆಯ ಸಂಜೆ ಒಂದು ಪುಟ್ಟ ಬೀರಡಿಕೆ (ಜಯಂತ ಕಾಯ್ಕಿಣಿ ಪದ) ಪಾರ್ಟಿಗೆ ಮನೆಗೆ ಕರೆದರು. ಹೋದೆ. ಅಷ್ಟೇ ಪರಿಚಯ. ಲಿಫ್ಟಿನಲ್ಲಿ ಅಕಸ್ಮಾತ್ ಸಿಕ್ಕಿದರೆ ‘ಹಾಯ್, ಹೇಗಿದೀರಿ,’ ಅಷ್ಟೇ!
ಆತ ಅಪಾರ್ಟ್ಮೆಂಟಿನ ಪ್ರೆಸಿಡೆಂಟೋ, ಸೆಕ್ರೆಟರಿಯೋ ಏನೋ ಆದನಂತೆ. ಪ್ರತಿ ವರ್ಷ ಒಬ್ಬರಲ್ಲ ಒಬ್ಬರು ಆಗುತ್ತಾರೆ, ನನಗೇನು! ನೀವು ಆಗಿ ಎಂದು ಯಾರೋ ಒಮ್ಮೆ ಸೂಚಿಸಿದಾಗ, ‘ಯೋ, ನನ್ನ ಸ್ವಯಂನಿವೃತ್ತಿ ನಿಮ್ಮಂತ ಕೀಚಕರ ಕೈಲಿ ಗುದ್ದಾಡೋದಕ್ಕ?’ ಎಂದು ಮುಲಾಜಿಲ್ಲದೆ ಹೇಳಿದ್ದೆ.
ಈ ಸಿಂಕಿಂಗ್ ಫಂಡ್ ಪ್ರಸ್ತಾಪ ಬಂದಾಗ ‘ಕರನಿರಾಕರಣೆ ಚಳುವಳಿ’ ಕನಾರಳ್ಳಿಯಿಂದಲೇ ಪ್ರಾರಂಭವಾಗಿದ್ದು, ಅವರನ್ನು ಬಗ್ಗಿಸಲು ಸಾಧ್ಯವಿಲ್ಲ ಅಂತ ಯಾರೋ ಹೇಳಿದರಂತೆ. ಈತ, ‘ಒಂದು ಬಾಟಲ್ ಬಿಯರ್ ಕೊಟ್ಟು ಒಪ್ಪಿಸುತ್ತೇನೆ, ಬಿಡಿ!’ ಎಂದು ಬಡಾಯಿ ಕೊಚ್ಚಿಕೊಂಡನಂತೆ.
ಕೇಳಿ ನಾನೇನೂ ಉರಿದು ಬೀಳಲಿಲ್ಲ. ‘ಅವನನ್ನು ನನ್ನ ಮನೆಗೆ ಕಳಿಸಿ. ಒಂದು ಹಂಡೆ ಬಿಯರಿನಲ್ಲಿ ಮುಳುಗಿಸಿ ಸಾಯಿಸುತ್ತೇನೆ,’ ಅಂತಷ್ಟೇ ಹೇಳಿದೆ.

ವಿಷಯ ಇದು. ತನಗೆ ಕನಾರಳ್ಳಿ ಚೆನ್ನಾಗಿ ಗೊತ್ತು ಎಂದು ಮಂದಿಯೆದುರು ಜಂಭ ಕೊಚ್ಚಿಕೊಳ್ಳುವ ಇರಾದೆ. ಮಂದಿಯ ಮಾತಿಗೆ ಕ್ಯಾರೆ ಎನ್ನದವರು ತನ್ನ ಮಾತು ಕೇಳುತ್ತಾರೆ ಎನ್ನುತ್ತಲೇ ನನ್ನನ್ನು ಒಂದು ಬಿಯರಿಗೆ ಇಳಿಸಿ ತಾನು ದೊಡ್ಡವನಾಗುವ ಸಸ್ತಾ ಬುದ್ಧಿ!
ಆಹಾ, ಪುರುಷಾಹಂಕಾರವೇ!
ಮಿಕ್ಕು ಮೀರಿ ಹೋಗುವವನನ್ನು ಬೆಂಬತ್ತಿ ಕೈ ಹಿಡಿಯುವ ಸರಸದಾಟ ಆರಾಣೆ ಗಂಡಸರಿಗೆ ಅರ್ಥವಾಗುವುದಿಲ್ಲ. ಬಿಡಿ.
ಉಲ್ಲೇಖಿಸಿದ ಕೃತಿ: ಅಕ್ಕಮಹಾದೇವಿ. ಸಂಪಾದನೆ, ಡಾ. ವಿಜಯಶ್ರೀ ಸಬರದ. ಕನ್ನಡ ಅಧ್ಯಯನ ಸಂಸ್ಥೆ, ಗುಲಬರ್ಗಾ ವಿಶ್ವವಿದ್ಯಾಲಯ, ಗುಲಬರ್ಗಾ, ೨೦೧೧.
ಉಲ್ಲೇಖಿಸಿದ ಹಾಡು

