Advertisement
ಅನಾಯಾಸೇನ ಮರಣಂ……: ವಸಂತಕುಮಾರ್‌ ಕಲ್ಯಾಣಿ ಪ್ರಬಂಧ

ಅನಾಯಾಸೇನ ಮರಣಂ……: ವಸಂತಕುಮಾರ್‌ ಕಲ್ಯಾಣಿ ಪ್ರಬಂಧ

ಹೊರಗೆ ಬಂದು, ರಿಸೆಪ್ಷನಿಸ್ಟ್ ಲೆಕ್ಕ ಹಾಕಿ, “ಇನ್ನು ಎಂಟುನೂರು ಕಟ್ಟಿ ಸಾಕು” ಎಂದು ಔದಾರ್ಯ ತೋರಿ, ಅದರಂತೆ ಮಾಡಿ ಹೊರ ಬಂದಾಗ ನನ್ನ ಹೆಂಡತಿ ತುಂಬಾ ಖುಷಿಯಲ್ಲಿದ್ದಳು. “ಸದ್ಯ ದೇವರು ಕಾಪಾಡಿದ, ನೀವು ಸುಮ್ಮನೆ ಟೆನ್ಶನ್ ಮಾಡಿಕೊಳ್ಳುತ್ತೀರಾ. ಡಾಕ್ಟರ್ ತುಂಬಾ ಒಳ್ಳೆಯವರು, ಬೇರೆಯವರಿಗೂ ರೆಕಮೆಂಡ್ ಮಾಡಬಹುದು. ಇನ್ನು ನೀವು ಸುಮ್ಮನೆ ತಲೆ ಕೆಡಿಸಿಕೊಳ್ಳದೆ ಆರಾಮಾಗಿರಿ.” ಹೀಗೆ ಸತತವಾಗಿ ಹೇಳಿ, ನಾನು ಎಲ್ಲದಕ್ಕೂ ತಲೆಯಾಡಿಸಿ “ಆರು ಸಾವಿರ ಅಂದಿದ್ದರೆ ಸುಮ್ಮನೆ ಕೊಡುತ್ತಿದ್ದೆವು, ಇನ್ನೂರು ಉಳಿದಿದೆಯಲ್ಲ ಅದರಲ್ಲಿ ಸ್ವೀಟ್ ತಗೊಂಡು ಹೋಗೋಣ” ಎಂದಾಗ ಅದಕ್ಕೂ ತಲೆಯಾಡಿಸಿದೆ.
ವಸಂತ ಕುಮಾರ್‌ ಕಲ್ಯಾಣಿ ಪ್ರಬಂಧ “ಅನಾಯಾಸೇನ ಮರಣಂ…” ನಿಮ್ಮ ಓದಿಗೆ

ಒಂದು ವಾರದಿಂದ ಆಗಾಗ ಎಡಪಕ್ಕೆಯ ಬಳಿ ನೋವು ಅಥವಾ ಅದನ್ನು ಚಳುಕು ಅನ್ನಬೇಕೋ ಚುಚ್ಚುವಿಕೆ ಎನ್ನಬೇಕೋ ಏನೋ ಒಂದು, ಒಟ್ಟಾರೆ ಬೇಡದ -ಮುಖ್ಯವಾಗಿ ಗೂಗಲ್‌ನಲ್ಲಿ ಚೆಕ್ ಮಾಡಿ, ಅಲ್ಲಿ ಇಲ್ಲಿ, ಅದೂ ಇದೂ ಕೇಳಿದ್ದ- ಮನಸ್ಸಿಗೆ ಹೆದರಿಕೆ. “ಅಯ್ಯೋ ಮೊನ್ನೆ ಏನಾಯ್ತು ಗೊತ್ತಾ, ನಮ್ಮ ಉಡುಗ ಒಬ್ಬ ಇನ್ನು ಚಿಕ್ಕ ವಯಸ್ಸೇ ಐವತ್ತೂ ಆಗಿಲ್ಲ-ಬೇಡ ಐವತ್ತು ಅಂತ ಇಟ್ಕಳ್ಳಿ- ಗ್ಯಾಸು ಪಾಸು ಅಂತಿದ್ದ, ‘ಅಲ್ಲಿ ನೋವು ಇಲ್ಲಿ ಉರಿ’ ಅಂತ. ಅವನ ಹೆಂಡ್ತಿ-ನಮ್ಮ ಅಕ್ಕನ ಮಗಳು- ನನ್ನತ್ರ ಇಂಗಂತೇ ಮಾವ ಅಂದ್ಲಾ, ತಕ್ಷಣ ನಾನು ಅಂಗೆಲ್ಲಾ ಸುಮ್ಕಿರಬೇಡಿ, ಒಂದಪಾ ಡಾಕುಟ್ರು ತಾಕೆ ಓಗ್ಬನ್ನಿ ಅಂದ್ನಾ, ಓಗಿದ್ದೆ ಒಳ್ಳೇದಾಯ್ತು…. “ಇನ್ನೊಂದ್ ಅತ್ತು ನಿಮ್ಸ ಲೇಟಾಗಿದ್ರೆ ನಿಮ್ಮುಡುಗ ಸಿವನ ಪಾದ ಸೇರ್ಕೊಂತಿದ್ದ” ಅಂದ್ರಂತೆ ಡಾಕ್ಟ್ರು” ಹಿಂಗಂತ ನನ್ ಹತ್ರ ಹೇಳಿದ್ದು ನಮ್ ಟೈಲರ್ ಸುಬ್ಬಣ್ಣ. ಹಾಗೇ ಹಾಲು ತರಕ್ಕೆ ಹೋಗಿದ್ದಾಗ ನಮ್ಮ ರೋಸ್ ಮೇರಿ ಅಕ್ಕ “ಯಾಕ್ ಸಾರ್ ಒಂತರಾ ಡಲ್ ಆಗಿದ್ದೀರಾ” ಅಂದ್ರು. ಏನು ಇಲ್ಲಮ್ಮ ಯಾಕೋ ಎರಡು ಮೂರು ದಿನದಿಂದ ಇಲ್ಲಿ ಎಡಗಡೆ ಆಗಾಗ ಒಂಥರಾ ನೋವು” ಎಂದೆ. ಕೂಡಲೇ ಅವರು “ಸಾರ್ ನೆಗ್ಲೆಕ್ಟ್ ಮಾಡಬೇಡಿ; ಒಂದು ಸಲ ಎಲ್ಲ ಚೆಕಪ್ ಮಾಡ್ಸಿ” ಅಂದ್ರು.

ಈಗ್ಗೆ ಸುಮಾರು ಏಳೆಂಟು ವರ್ಷಗಳಿಂದ ವಾರ್ಷಿಕ ಚಕಪ್ ನಡೆಯುತ್ತಿತ್ತು. ಒಂದಷ್ಟು ದುಡ್ಡು ಸುರಿಯಬೇಕಿತ್ತು. ಮಗಳೇನೋ ಹೆಲ್ತ್ ಪಾಲಿಸಿ ಮಾಡಿಸಿದ್ದಳು. ಆದರೆ ಅದು ಚೆಕಪ್‌ಗಳನ್ನು ಒಳಗೊಂಡಿರಲಿಲ್ಲ. ಬಿಪಿಗೆ ಒಂದು, ಕೊಲೆಸ್ಟ್ರಾಲ್‌ಗೆ ಒಂದು ಮಾತ್ರೆ ನುಂಗುತ್ತಿದ್ದೆ. ಆದರೂ ಸಹಧರ್ಮಿಣಿಯ ಕಣ್ಣು ತಪ್ಪಿಸುವುದು ಕಷ್ಟ! ಪಕ್ಕೆಯಲ್ಲಿ ನೋವಾದಾಗ, ಒಮ್ಮೆಯಲ್ಲ ಒಮ್ಮೆ ಗಮನಿಸಿ, ಎನ್ಕ್ವೈರಿಸಿ, ಒತ್ತಾಯಿಸಿ, ದುಂಬಾಲು ಬಿದ್ದು, ನಾನು “ಈಗ ಕಡಿಮೆಯಾಗಿದೆ, ನಾಳೆ ಭಾನುವಾರ ಡಾಕ್ಟರ್ ಇರಲ್ಲ, ಸೋಮವಾರ ತುಂಬಾ ರಶ್ ಇರುತ್ತೆ, ಮಂಗಳವಾರ ಹೋಗೋಣ” ಎಂದು, ಈ ಸಲ ಬೇರೆಕಡೆ ತೋರಿಸೋಣ ಎಂದು ನಿರ್ಧರಿಸಿ, ಪುಣ್ಯಕ್ಕೆ ಹತ್ತಿರದಲ್ಲೇ ಹೊಸದಾಗಿ ಆಗಿದ್ದ ನರಸಿಂಗರಾಯರ ಮನೆ ಸ್ಸಾರಿ ನರ್ಸಿಂಗ್ ಹೋಂ ಗೆ ಹೋಗಿ ಅಲ್ಲಿ ಡಾಕ್ಟರ್ ವೇಲಣಕರ್‌ರವರನ್ನು ಭೇಟಿ ಮಾಡಲು ನಿರ್ಧರಿಸಿದೆವು. ಅಲ್ಲಿಗೆ ಹೋದಾಗ ತಿಳಿದದ್ದೇನೆಂದರೆ, ಮುಂಚೆಯೇ ಅಪಾಯಿಂಟ್ಮೆಂಟ್ ತಗೋಬೇಕು! ‘ಅಯ್ಯೋ ಹೌದಾ?’ “ನೋಡೋಣ ಮಧ್ಯಾಹ್ನ ಒಮ್ಮೆ ಬನ್ನಿ, ಒಮ್ಮೊಮ್ಮೆ ಅವರ ಭೇಟಿಯಾಗುವ ಸಾಧ್ಯತೆ ಇದೆ. ಇಲ್ಲಾಂದ್ರೆ ನಾಳೆಗೆ… ಇಲ್ಲ… ಹೂಂ… ನಾಡಿದ್ದಿಗೆ ಬೆಳಿಗ್ಗೆ ಹನ್ನೊಂದಕ್ಕೆ ಬಂದರೆ ಸಿಗುತ್ತಾರೆ”. ನಾನು ವಾಪಸ್ ಹೊರಡಲು ಸಿದ್ಧನಾದೆ. ನನ್ನ ಶ್ರೀಮತಿಗೆ ಗೊತ್ತು ‘ಕಳ್ಳನಿಗೊಂದು ಪಿಳ್ಳೆ ನೆವ’ ಅಥವಾ ‘ಬೀಸೋ ದೊಣ್ಣೆ ತಪ್ಪಿದರೆ ಸಾಕು’ ಎನ್ನುವ ಪೈಕಿ ನಾನು. ಮನೆಗೆ ಹೋದರೆ ಪುನಹ ವಾಪಸ್ ಬರುವುದಿಲ್ಲ! ಹಾಗಾಗಿ ನನ್ನ ಶ್ರೀಮತಿ “ಇನ್ನೊಂದೆರಡು ಗಂಟೆ ತಾನೇ ಇಲ್ಲೇ ಕುಳಿತು ಕಾಯೋಣ” ಎಂದಳು. ನಾನು “ಬೇಡ ಮನೆ ಇಲ್ಲೇ ಹತ್ತಿರ ಅಲ್ಲವೇ… ಹೋಗಿ ಬರೋಣ” ಎಂದು, ಕೊನೆಗೆ ನಾನು ಆಶ್ವಾಸನೆ ಕೊಟ್ಟ ಮೇಲೆ ಇವಳು ರಿಸೆಪ್ಷನಿಸ್ಟ್ ಬಳಿ ರಿಕ್ವೆಸ್ಟ್ ಮಾಡಿಕೊಂಡು “ನಾವು ಸ್ವಲ್ಪ ಬೇಗನೆ ಬರುತ್ತೇವೆ, ಇಂದೇ ಡಾಕ್ಟರ್ ಸಿಕ್ಕಿದರೆ ಅನುಕೂಲ” ಎಂದು, ಪಂಢರೀಬಾಯಿಯ ಮುಖಭಾವ ಮಾಡಿ, ಆಯಮ್ಮನಿಗೆ (ರಿಸೆಪ್ಷನಿಸ್ಟ್) ಗೆ ಏನೆನಿಸಿತೋ “ನಾನು ಡಾಕ್ಟರ್ ಬಳಿ ಮಾತನಾಡುತ್ತೇನೆ ಬನ್ನಿ” ಎಂದು ಮಾತು ಕೊಟ್ಟ ಮೇಲೆ ನಮ್ಮ ಪ್ರಯಾಣ ಮನೆಯ ಕಡೆ ಸಾಗಿತು.

ಪುನಹ ಬೇಗನೆ ಬಂದು ರಿಸೆಪ್ಶನ್‌ನಲ್ಲಿ ಕೂತೆವು. ಇವಳಾಗಲೇ ರಿಸೆಪ್ಶನಿಸ್ಟ್ ಬಳಿ ವಿಚಾರಿಸಿ ಬಂದಳು. “ಹೇಳಿದ್ದೇನೆ ಇನ್ನೊಂದು ಅರ್ಧ ಗಂಟೆ ಕಾಯಿರಿ” ಎಂದರು. ನಮ್ಮ ಡಿಟೇಲ್ಸ್ ತಗೊಂಡು “ಒಂದು ಐದು ಸಾವಿರ ಕಟ್ಟಿ ಆಮೇಲೆ ಬೇಕಾದರೆ ನೋಡೋಣ” ಎಂದರು. ಜಿ ಪೇ ಮಾಡಿಯಾಯಿತು. “ಒಂದು ಕೆಲಸ ಮಾಡಿ ಈಗ ಮೊದಲು ಡಾಕ್ಟರ್ ಜಾನ್ಸಿ ಮೇಡಂ ಹತ್ರ ಹೋಗಿ ಅವರು ಫಾರ್ಮಾಲಿಟಿಸ್ ಎಲ್ಲ ಮಾಡಲಿ ಆಗ ಸರ್ ಹತ್ರ ಹೆಚ್ಚು ಸಮಯ ಬೇಕಾಗಲ್ಲ” ಎಂದಾಗ ಕುರಿಗಳಂತೆ ತಲೆಯಾಡಿಸಿ ಜಾನ್ಸಿ ರಾಣಿಯನ್ನು ಎದುರಿಸಲು ಹೊರಟೆವು. ಅವರೊಂದಷ್ಟು ಎನ್ಕ್ವೈರಿ ಮಾಡಿ, ಇಸಿಜಿ ವಗೈರೆ ಮುಗಿಸಿ, ಬಿಪಿ ಚೆಕ್ ಮಾಡಿ “ಅಂತಹ ಸಮಸ್ಯೆ ಏನೂ ಇಲ್ಲ, ಗ್ಯಾಸ್ಟ್ರಿಕ್‌ಗೆ ಏನಾದ್ರೂ ಮಾತ್ರೆ ತಗೊಳ್ತೀರಾ” ಅವರು, “ರ್ಯಾಂಟಾಕ್ ತಗೋತೀನಿ” ನಾನು, “ಸರಿ, ಸರ್ ಎದುರಲ್ಲಿ ಬೇಕಾದರೆ ಒಂದು ಇಕೋ ಮಾಡೋಣ ಓಕೆನಾ?” ಎಂದರು. ಬೇಕಾದರೆ ಏನು ಬೇಡದಿದ್ದರೂ ಮಾಡುತ್ತಾರೆ ಎಂದುಕೊಂಡೆ ಮನಸಲ್ಲಿ. ಪುನಃ ಹೊರಗೆ ಬಂದು ಇನ್ನೂ ಇಪ್ಪತ್ತು ನಿಮಿಷ ಕಾದ ಮೇಲೆ, ಸರ್ ಹೊರ ಬಂದಾಗ, ರಿಸೆಪ್ಷನಿಸ್ಟ್ ಅವಸರವಸರದಿಂದ ಅವರ ಬಳಿ ಹೋಗಿ, ನಮ್ಮ ಕಡೆ ತೋರಿಸಿ ‘ಸರ್’ ತಮ್ಮ ರಿಸ್ಟ್ ವಾಚ್ ನೋಡಿಕೊಂಡು, ತಲೆಯಾಡಿಸಿ, ನಮ್ಮ ಕಡೆ ನೋಡಿ, ನಕ್ಕ ಹಾಗೆ ಮಾಡಿ ಕರೆದರು. ಒಂದೈದು ನಿಮಿಷ ಝಾನ್ಸಿ ರಾಣಿ ಕೊಟ್ಟ ಡಿಟೇಲ್ಸ್ ಚೆಕ್ ಮಾಡಿ “ಹೆಚ್ಚೇನು ಸಮಸ್ಯೆ ಕಾಣ್ತಿಲ್ಲ, ಇಕೋ ಮಾಡಿದರೆ ಇನ್ನಷ್ಟು ಕ್ಲಿಯರ್ ಆಗುತ್ತೆ” ಅಂದು ಅವರ ಎದುರಿನಲ್ಲೇ ಇಕೋ ನಡೆದು, ಎಲ್ಲಾ ಹಿಡಿದುಕೊಂಡು ಅವರ ಚೇಂಬರ್‌ನಲ್ಲಿ ಒಂದು ಐದು ನಿಮಿಷ ನೀರವ ಮೌನದಲ್ಲಿ! ಕೊನೆಗೂ ಅವರ ತುಟಿಯಲೊಂದು ಸಣ್ಣ ನಗು ಕಂಡು, ಒಂಚೂರೆ ಚೂರು ಸಮಾಧಾನವಾಗಿ, “ನಥಿಂಗ್ ಟು ವರಿ, ಎಲ್ಲಾ ಓಕೆ, ಹಾಗೆ ನೋಡಿದರೆ ಹಳೆಯ ರಿಪೋರ್ಟ್‌ಗಿಂತ ಈಗ ಸಾಕಷ್ಟು ಸುಧಾರಿಸಿದೆ” ಎಂದಾಗ ನಾನು ಮಧ್ಯೆ ಬಾಯಿ ಹಾಕಿ “ನಾನು ಇತ್ತೀಚಿಗೆ ತುಂಬಾ ಫುಡ್ ಕಂಟ್ರೋಲ್ ಮಾಡ್ತಿದೀನಿ ಸರ್” ಎಂದು ಹೆಮ್ಮೆಯಿಂದ ಹೇಳಿ, “ಹಾಗೆ ಸ್ವಲ್ಪ ಸ್ವಲ್ಪ ವಾಕ್ ಮಾಡ್ತೀನಿ”… ಅಂತ ಸುಳ್ಳು ಹೇಳಿ- ಹೆಂಡತಿ ಪಕ್ಕನೆ ನನ್ನ ಕಡೆ ಆಶ್ಚರ್ಯ, ಸಂಶಯ, ಅಸಹನೆಯ ನೋಟ ಬೀರಿ -ಒಟ್ಟಿನಲ್ಲಿ “ಸದ್ಯಕ್ಕೆ ಹೆದರಬೇಕಾದ ಅವಶ್ಯಕತೆ ಇಲ್ಲ. ಬಿ ಹ್ಯಾಪಿ ಈ ಮಾತ್ರೆಗಳನ್ನೇ ಮುಂದುವರಿಸಿ” ಎಂದು ‘ತನ್ನದೂ ಒಂದು ಇರಲಿ’ ಎಂದು ಗ್ಯಾಸ್‌ಗೆ ಒಂದು ಮಾತ್ರೆ ಬರೆದು ಕೊಟ್ಟರು. ಇನ್ನು ಹೊರಡಬಹುದು ಎಂಬಂತೆ ಸೂಚಿಸಿದರು.

ಹೊರಗೆ ಬಂದು, ರಿಸೆಪ್ಷನಿಸ್ಟ್ ಲೆಕ್ಕ ಹಾಕಿ, “ಇನ್ನು ಎಂಟುನೂರು ಕಟ್ಟಿ ಸಾಕು” ಎಂದು ಔದಾರ್ಯ ತೋರಿ, ಅದರಂತೆ ಮಾಡಿ ಹೊರ ಬಂದಾಗ ನನ್ನ ಹೆಂಡತಿ ತುಂಬಾ ಖುಷಿಯಲ್ಲಿದ್ದಳು. “ಸದ್ಯ ದೇವರು ಕಾಪಾಡಿದ, ನೀವು ಸುಮ್ಮನೆ ಟೆನ್ಶನ್ ಮಾಡಿಕೊಳ್ಳುತ್ತೀರಾ. ಡಾಕ್ಟರ್ ತುಂಬಾ ಒಳ್ಳೆಯವರು, ಬೇರೆಯವರಿಗೂ ರೆಕಮೆಂಡ್ ಮಾಡಬಹುದು. ಇನ್ನು ನೀವು ಸುಮ್ಮನೆ ತಲೆ ಕೆಡಿಸಿಕೊಳ್ಳದೆ ಆರಾಮಾಗಿರಿ.” ಹೀಗೆ ಸತತವಾಗಿ ಹೇಳಿ, ನಾನು ಎಲ್ಲದಕ್ಕೂ ತಲೆಯಾಡಿಸಿ “ಆರು ಸಾವಿರ ಅಂದಿದ್ದರೆ ಸುಮ್ಮನೆ ಕೊಡುತ್ತಿದ್ದೆವು, ಇನ್ನೂರು ಉಳಿದಿದೆಯಲ್ಲ ಅದರಲ್ಲಿ ಸ್ವೀಟ್ ತಗೊಂಡು ಹೋಗೋಣ” ಎಂದಾಗ ಅದಕ್ಕೂ ತಲೆಯಾಡಿಸಿದೆ.

ನಾನು ಅಲ್ಲಿ ಇಲ್ಲಿ ಓದುವಾಗ, ಕೇಳುವಾಗ -ಅವರು ನಿದ್ದೆಯಲ್ಲಿ ಹಾರ್ಟ್ ಅಟ್ಟ್ಯಾಕ್ ಆಗಿ ಹೋಗ್ಬಿಟ್ಟರಂತೆ, ಇವರು ಈ ಕ್ಷಣ ಮಾತಾಡ್ತಾ ಇದ್ರಂತೆ ಮುಂದಿನ ಕ್ಷಣ ಕೂತಲ್ಲೇ ಹೋಗಿಬಿಟ್ಟಿದ್ದಾರೆ, ಮತ್ತವರು ಮುಖದಲ್ಲಿ ನಗು ಹಾಗೆ ಇದೆ ನೋಡಿದರೆ ಹೋಗೆ ಬಿಟ್ಟಿದ್ದಾರೆ. ಆದ್ರೂ ಎಂಥ ಪುಣ್ಯದ ಸಾವು- ಮುಂತಾದ ಮಾತು ಕೇಳುವಾಗ ಅದರಲ್ಲೂ ಎಪ್ಪತ್ತು ದಾಟಿದ ಮೇಲಂತೂ ‘ಅನಾಯಾಸೇನ ಮರಣ ಪ್ರಾಪ್ತಿ ರಸ್ತು’ ಎಂದು ಕೇಳಿಕೊಳ್ಳುವ ಹೊತ್ತಿನಲ್ಲಿ ಏನೋ ಒಂದು ಚಾನ್ಸ್ ಮಿಸ್ ಆದ ಹಾಗೆ ಅನ್ನಿಸಿತೆಯೇ?! ಏನೋ…ಪ್ಪ ಗೊತ್ತಿಲ್ಲ!!

About The Author

ವಸಂತಕುಮಾರ್‌ ಕಲ್ಯಾಣಿ

ವಸಂತಕುಮಾರ್‌ ಕಲ್ಯಾಣಿ ಹವ್ಯಾಸಿ ಬರಹಗಾರರು. ಕಥನ ಇವರ ಇಷ್ಟದ ಪ್ರಕಾರ. ಕನ್ನಡ ಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದವರು, ಗೋಕಾಕ್ ಚಳುವಳಿಯಲ್ಲಿ ಸಕ್ರಿಯರಾಗಿದ್ದರು, ಹಲವು ಕಿರುತೆರೆ, ಚಲನಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ 'ಬಾಲರಾಜನೂ ಕ್ರಿಕೆಟ್ಟಾಟವೂ' ಕಥೆಗೆ ಮೇವುಂಡಿ ಮಲ್ಲಾರಿ ಕಥಾ ಪುರಸ್ಕಾರ ಪ್ರಶಸ್ತಿ ದೊರಕಿದೆ. 'ಕಾಂಚನ ಮಿಣಮಿಣ'  (ಸಣ್ಣಕಥಾ ಸಂಕಲನ) ‘ಪರ್ಯಾಪ್ತ’ ಪ್ರಕಟಿತ ಕಥಾ ಸಂಕಲನಗಳು.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ