Advertisement
“ಅಳವು ಅರಿಯದ ಭಾಷೆ” ಎಂಬ ಸಾವಿನ ಗಂಟೆ: ಕೆ. ಪಿ. ಸುರೇಶ ಬರಹ

“ಅಳವು ಅರಿಯದ ಭಾಷೆ” ಎಂಬ ಸಾವಿನ ಗಂಟೆ: ಕೆ. ಪಿ. ಸುರೇಶ ಬರಹ

ಈ ಮಾತು ಎಷ್ಟು? ಬೆಳಗಿನವರೆಗೆ ಪ್ರಸಂಗವನ್ನು ಕಟ್ಟಬೇಕಾದ ಕಾರಣ ಕ್ವಚಿತ್ತಾದ ಚೌಕಟ್ಟಿನ ಮಾತು ಪಾತ್ರಧಾರಿಗೆ ಸಾಲುವುದಿಲ್ಲ. ಆತ ಅಕ್ಷಯಾಂಬರದ ತರ ಮಾತಿನ ಎಳೆಗಳನ್ನು ಪೋಣಿಸುತ್ತಾ ಹೋಗಬೇಕು. ಈ ಸ್ವಾತಂತ್ರ್ಯವೇ ಯಕ್ಷಗಾನದ ವೃತ್ತಿ ಪ್ರದರ್ಶನಗಳ ಜೀವಾಳ ಮತ್ತು ಶಾಪ. ಇದು ಕಲಾವಿದರದ್ದೂ ಕೂಡ.  ಹೀಗಾದಾಗ ಮಾತು ಸಡಿಲವಾಗುತ್ತಾ ಸ್ವೇಚ್ಛೆಯಾಗುತ್ತಾ ಹೋಗುವ ವಿಧಿ ಈ ಪ್ರಕಾರದೊಳಗೇ ಅಂತರ್ಗತವಾಗಿದೆ.  ಈಗ ಹರಡಿರುವ ಹತ್ತಾರು ಮೇಳಗಳ ಕಲಾವಿದರ ಸಂಖ್ಯೆ ಮತ್ತು ಅವರ ಪ್ರತಿಭಾ ಶ್ರೇಣಿಯನ್ನು ಗಮನಿಸಿದರೆ ವಿದ್ವತ್ತು ಮತ್ತು ಮಾತಿನ ಪ್ರೌಢಿಮೆಗಳೆರಡೂ ಸಮಪಾಕಗೊಂಡ ಕಲಾವಿದರ ಪ್ರಮಾಣ ತೀರ ಕಡಿಮೆ ಸಂಖ್ಯೆಯದ್ದು.
ನಿತ್ಯಾನಂದ ಬಿ. ಶೆಟ್ಟಿ ಬರೆದ “ಅಳವು ಅರಿಯದ ಭಾಷೆ” ಕೃತಿಯ ಕುರಿತು ಕೆ.ಪಿ. ಸುರೇಶ ಬರಹ

ನಿತ್ಯಾನಂದ ಬಿ ಶೆಟ್ಟಿಯವರ ‘ಅಳವು ಅರಿಯದ ಭಾಷೆʼ- ಕಲೆ, ಸಮಾಜ, ಇತಿಹಾಸ ಎಂಬ ಪುಸ್ತಕ ಕಲಾ ಪ್ರಕಾರವೊಂದು ತನ್ನ  ರೂಪಾಂತರದ ಮೂಲಕ ಒಂದು ಮಾನವ ವಿರೋಧೀ ತಾತ್ವಿಕತೆಯನ್ನು ತನ್ನೊಳಗೆ ಬೇರೂರಿಸಿಕೊಂಡ ಪ್ರಕ್ರಿಯೆಯನ್ನು ದಾಖಲಿಸುತ್ತದೆ. ಈ ರೂಪಾಂತರವನ್ನು ಅವರು ದಕ್ಷಿಣ ಕನ್ನಡದ ಯಕ್ಷಗಾನ ಕಲೆಯ ಮೂಲಕ ಗುರುತಿಸುತ್ತಾರೆ. ದಕ್ಷಿಣಕನ್ನಡ ಜಿಲ್ಲೆ ಹಿಂದುತ್ವದ ಪ್ರಯೋಗಶಾಲೆಯಾಗಿ ಬದಲಾದ ಕುರಿತು ಹತ್ತು ಹಲವು ಅಧ್ಯಯನಗಳು, ವರದಿಗಳು ಬಂದಿವೆ.  ಈ  ಹಿಂದುತ್ವದ ಪ್ರಯೋಗ ಹಿಟ್ಲರನ ನಾಜೀ  ಛಾಯಾಪ್ರತಿಯೇ ಸರಿ.

ಯಕ್ಷಗಾನವನ್ನು ಕೇಂದ್ರವಾಗಿರಿಸಿಕೊಂಡು ಶೆಟ್ಟಿಯವರು  ಈ ಬದಲಾವಣೆಯನ್ನು ದಾಖಲಿಸುತ್ತಾರೆ.

ವಿಶಿಷ್ಟ ಜನಕಲೆಯಾದ ಯಕ್ಷಗಾನವು ಕೋಮು ಧ್ರುವೀಕರಣದ ಸಕ್ರಿಯ ಭಾಗೀದಾರನಾಗಿ ಪರಿವರ್ತನೆಯಾದ ಬಗೆಯನ್ನು ಅಸದೃಶ ವಿವರಗಳೊಂದಿಗೆ ಶೆಟ್ಟಿಯವರು ಇಲ್ಲಿ  ಪ್ರಸ್ತುತಪಡಿಸುತ್ತಾರೆ. ಈ ನೆರೇಟಿವ್‌ನಲ್ಲಿ ಕುಂಬ್ಳೆ ಸುಂದರ್‌ ರಾವ್‌ ಎಂಬ ಯಕ್ಷಗಾನ ಕಲಾವಿದನನ್ನು ಕೇಂದ್ರ ರೂಪಕವಾಗಿ ಇಟ್ಟು ಈ ರೂಪಾಂತರದ ಎಳೆಗಳನ್ನು ಅನ್ವೇಷಿಸುತ್ತಾರೆ. ಈ ಕೃತಿಗೆ ದೊಡ್ಡ ಕ್ಯಾನ್ವಾಸ್‌ ಇದೆ. ಈ ಅರ್ಥದಲ್ಲಿ ಇದು ಕಳೆದ ಇಪ್ಪತ್ತೈದು  ವರ್ಷಗಳಲ್ಲಿ ಬಂದ ಅತ್ಯಂತ ಮಹತ್ವಾಕಾಂಕ್ಷಿ ಕೃತಿ.

(ನಿತ್ಯಾನಂದ ಬಿ. ಶೆಟ್ಟಿ)

ಕರಾವಳಿಯ ಜೀವನ ವಿಧಾನ, ಲೋಕ ವ್ಯಾಪಾರ, ನಿತ್ಯ ನೈಮಿತ್ತಿಕ- ಹೀಗೆ ಎಲ್ಲದರಲ್ಲೂ ಹಿಂದುತ್ವದ ನಂಜು  ತುಂಬಿರುವ ದಾರುಣ ಸಾಮಾಜಿಕ ಸಾಂಸ್ಕೃತಿಕ ವಿಷಮತೆಯ ಭಾಗವಾಗಿ ಯಕ್ಷಗಾನ ಎಂಬ  ಕಲಾ ಪ್ರಕಾರದ ಭ್ರಷ್ಟತೆಯೂ  ಇದೆ. ಜನ ಜೀವನದ  ಭಾಗವಾಗಿರುವ ಯಕ್ಷಗಾನ ಈ ರೋಗಕ್ಕೆ ತುತ್ತಾಗುವ ಎಲ್ಲ ವೈಲಕ್ಷಣಗಳನ್ನೂ ಮೊದಲೇ ಹೊಂದಿತ್ತು ಎಂಬ ಐತಿಹಾಸಿಕ ವ್ಯಂಗ್ಯವೇ ಈ ಕೃತಿಯನ್ನು ಮುಖ್ಯವಾಗಿಸುತ್ತದೆ. ಈ ರೇಬಿಸ್‌ ಮನೋಧರ್ಮ ಜನರ ಕೋಶಕೋಶಕ್ಕಿಳಿವ ಮೊದಲು ಜನಸಮುದಾಯದ ನಡುವಣ  ಸಾಂಸ್ಕೃತಿಕ ಸಮರಸದ ವಿವರಗಳನ್ನು ಲೇಖಕರು ಅನನ್ಯವಾಗಿ ಮುಂದಿಡುತ್ತಾರೆ.

ಯಕ್ಷಗಾನವನ್ನು ಒಂದು ಸೈದ್ದಾಂತಿಕ ಭೂಮಿಕೆಯ ವಿಸ್ತರಣೆಗಾಗಿ ಬಳಸುವ ಅನೈತಿಕ ಕಲಾ ಕ್ರಮದ ಬಗ್ಗೆ ಲೇಖಕರು ತೀವ್ರ  ನೈತಿಕ ಆಕ್ರೋಶ ವ್ಯಕ್ತಪಡಿಸುತ್ತಾ ಇತರ ಪ್ರದರ್ಶಕ ಕಲೆಗಳ ಸಾಮಿತಿಯನ್ನು ತುಲನೆಗಾಗಿ ತರುತ್ತಾರೆ. ಯಕ್ಷಗಾನದ ವಿಶಿಷ್ಟತೆಯೆಂದರೆ ಅದರ ವಿಸ್ತಾರ ಮತ್ತು ಆಶು ಧಾರಣಾ ಸಾಮರ್ಥ್ಯ.  ಸಾಂಪ್ರದಾಯಿಕ ನಾಟಕಗಳಲ್ಲಿ ನಿಗದಿತ ಪಠ್ಯ ಇರುತ್ತದೆ. ಈ ಚೌಕಟ್ಟು ಅದಕ್ಕೊಂದು ಲಕ್ಷ್ಮಣ ರೇಖೆ ನೀಡುತ್ತದೆ. ಯಕ್ಷಗಾನ ಇದಕ್ಕೆ ತದ್ವಿರುದ್ಧವಾದದ್ದು. ಪಠ್ಯ ವ್ಯಾಖ್ಯಾನದ ಮಾತುಗಳು ಇಲ್ಲಿ ಪುನರಾವರ್ತನೆಗೊಂಡಷ್ಟೂ ಅದರ ತಾಜಾತನ ಮಸುಕುತ್ತದೆ.

ಯಕ್ಷಗಾನ ಹೇಳಿ-ಕೇಳಿ ಒಂದು ಬಗೆಯ ಮಾತಿನ ಕಲೆ. ಮಾತಿಗಿರುವ ಅಪಾರ ಮತ್ತು ಅನಂತ ಸಾಧ್ಯತೆಗಳನ್ನು ಶೋಧಿಸುವ ಪ್ರಯತ್ನ ಮಾಡದ ಹಲ-ಕೆಲವು ಕಲಾವಿದರು ಆಡುವ  ಮಾತು ಮತ್ತು ಆ ಮಾತಿನ  ಹಿಂದಿರುವ ಸಂಚು ಸಂಸ್ಕೃತಿ ಘಾತಕವಾಗುವುದನ್ನು ಲೇಖಕರು ಸೂಕ್ಷ್ಮ ಪ್ರದರ್ಶಕ ವಿವರ ಮತ್ತು ಕಾಲಗತಿಯ ಬೆಳವಣಿಗೆಯ ವಿವರಗಳೊಂದಿಗೆ ದಾಖಲಿಸುತ್ತಾರೆ. ಈ ಅನೈತಿಕ ನಡೆಯ ಬಗ್ಗೆ ತೀವ್ರ ಸಾತ್ವಿಕ ಆಕ್ರೋಶವೂ ಎಷ್ಟೋ ಕಡೆ ಈ ಪ್ರಕ್ರಿಯೆಯನ್ನು ತಡೆಯಲಾರದ ಅಸಹಾಯಕತೆಯ ಛಾಯೆಯೊಂದಿಗೆ ಇಲ್ಲಿಯ ವಿವರಗಳು ಬಿಂಬಿತವಾಗುತ್ತವೆ. ಉಳಿದ ಪ್ರಕಾರಗಳಿಗೂ ಯಕ್ಷಗಾನಕ್ಕೂ ಇರುವ ಎರಡು ಮುಖ್ಯ ವ್ಯತ್ಯಾಸದ ಅಂಶಗಳನ್ನು ಇಲ್ಲಿ ಗಮನಿಸಬೇಕು.

ಮೊದಲನೆಯದು ಉಳಿದ ಕಲಾ ಪ್ರಕಾರಗಳಲ್ಲಿ ಒಂದೋ ನಿರ್ದಿಷ್ಟ ಪಠ್ಯ ಇರುತ್ತದೆ. ಇಲ್ಲವೇ, ಮಾತು ಇಲ್ಲದ ಆಂಗಿಕವೇ ಪ್ರಧಾನವಾಗಿರುತ್ತದೆ. (ಕಥಕ್ಕಳಿ) ಇಂತಹ ಚೌಕಟ್ಟು, ಕಲಾಪ್ರಕಾರವೊಂದು ಹೊರಗಿನ ಸ್ವೇಚ್ಛಾ ಧಾಳಿಗೆ ಒಳಗಾಗದಂತೆ ತಡೆಯುತ್ತದೆ.

ಎರಡನೆಯದು; ಭೌತಿಕವಾಗಿ ಯಕ್ಷಗಾನ ಏಳೆಂಟು ಗಂಟೆಗಳ ಪ್ರದರ್ಶನ. ಕಥೆಯ ಸೂಚಿಗಳನ್ನು ಪದ್ಯಗಳ ಮೂಲಕ ಪ್ರಸ್ತುತಪಡಿಸುತ್ತಾ ಹೋದಂತೆ ಪಾತ್ರಧಾರಿ ಮಾತಿನ ಮೂಲಕ ಇಡೀ ಕತೆಯನ್ನೂ, ಸನ್ನಿವೇಶವನ್ನೂ ಕಟ್ಟಬೇಕು. ಈ ಕಾರಣಕ್ಕೇ ಯಕ್ಷಗಾನದಲ್ಲಿ ಮಾತು ಆಂಗಿಕದ ಮೇಲೆ ಸವಾರಿ ಮಾಡುತ್ತಿರುತ್ತದೆ.

ಈ ಮಾತು ಎಷ್ಟು? ಬೆಳಗಿನವರೆಗೆ ಪ್ರಸಂಗವನ್ನು ಕಟ್ಟಬೇಕಾದ ಕಾರಣ ಕ್ವಚಿತ್ತಾದ ಚೌಕಟ್ಟಿನ ಮಾತು ಪಾತ್ರಧಾರಿಗೆ ಸಾಲುವುದಿಲ್ಲ. ಆತ ಅಕ್ಷಯಾಂಬರದ ತರ ಮಾತಿನ ಎಳೆಗಳನ್ನು ಪೋಣಿಸುತ್ತಾ ಹೋಗಬೇಕು. ಈ ಸ್ವಾತಂತ್ರ್ಯವೇ ಯಕ್ಷಗಾನದ ವೃತ್ತಿ ಪ್ರದರ್ಶನಗಳ ಜೀವಾಳ ಮತ್ತು ಶಾಪ. ಇದು ಕಲಾವಿದರದ್ದೂ ಕೂಡ.  ಹೀಗಾದಾಗ ಮಾತು ಸಡಿಲವಾಗುತ್ತಾ ಸ್ವೇಚ್ಛೆಯಾಗುತ್ತಾ ಹೋಗುವ ವಿಧಿ ಈ ಪ್ರಕಾರದೊಳಗೇ ಅಂತರ್ಗತವಾಗಿದೆ.  ಈಗ ಹರಡಿರುವ ಹತ್ತಾರು ಮೇಳಗಳ ಕಲಾವಿದರ ಸಂಖ್ಯೆ ಮತ್ತು ಅವರ ಪ್ರತಿಭಾ ಶ್ರೇಣಿಯನ್ನು ಗಮನಿಸಿದರೆ ವಿದ್ವತ್ತು ಮತ್ತು ಮಾತಿನ ಪ್ರೌಢಿಮೆಗಳೆರಡೂ ಸಮಪಾಕಗೊಂಡ ಕಲಾವಿದರ ಪ್ರಮಾಣ ತೀರ ಕಡಿಮೆ ಸಂಖ್ಯೆಯದ್ದು.

ಈ ಬಿಟ್ಟಿಮಾತಿನ ಮೈದಾನದಲ್ಲಿ ಕಡಿವಾಣವೇ ಇಲ್ಲದ ಒಂದು ಕಲಾಪ್ರಕಾರವಾಗಿ ಯಕ್ಷಗಾನ ಬೆಳೆದಿದೆ. ಈ ಬೆಳವಣಿಗೆ ಅಂತರ್ಗತವಾಗಿಯೇ ಅದರ ಸ್ವಭಾವದಲ್ಲಿದೆ.  ಶೆಟ್ಟಿಯವರು ಬೆಟ್ಟು ಮಾಡಿ ತೋರುವ ಈ ಬದಲಾವಣೆ  ಒಂದರ್ಥದಲ್ಲಿ was waiting to happen.

ಸ್ವತಃ ಶೆಟ್ಟಿಯವರು ಮತ್ತು ಈ ಕೃತಿಗೆ ಮರುಮಾತು ಬರೆದ ಎನ್ ಎ ಎಂ ಇಸ್ಮಾಯಿಲ್‌ ಮತ್ತು ಎ ನಾರಾಯಣ ಅವರು ಗುರುತಿಸಿದಂತೆ, ಇಡೀ ಯಕ್ಷಗಾನದ ಕಥಾ ಸರಕಿನ ಚೌಕಟ್ಟು ವೈದಿಕ ಪರಂಪರೆಯದ್ದಾಗಿದ್ದು, ಈ ಕಥಾ ಚೌಕಟ್ಟು ಮತ್ತು ಅದು ಬಿಂಬಿಸುವ ತಾತ್ವಿಕ ಕಾಣ್ಕೆಯನ್ನು ಸಮರ್ಥಿಸುವ ಸಾಧನವಾಗಿಯೇ ಯಕ್ಷಗಾನ ಬೆಳೆದಿದೆ. ಉಳಿದ ಪ್ರಕಾರಗಳಲ್ಲಿರುವಂಥ  ಕಥಾ ವಸ್ತುವನ್ನು ಹೊಸ ಒಳನೋಟಗಳ ಮೂಲಕ ಸೃಷ್ಟಿಸುವ ಸೃಜನಶೀಲ ಸ್ವಾತಂತ್ರ್ಯವೇ ಯಕ್ಷಗಾನಕ್ಕೆ ಇದ್ದಂತಿಲ್ಲ. ಇದ್ದರೂ ಅದನ್ನು ಬಳಸಿಕೊಂಡ ಪುರಾವೆಗಳು ಕಡಿಮೆ. ಪ್ರಾಯಶಃ ರೂಢಿಗತ ತುರ್ತಿನ ಕಾರಣಕ್ಕೆ ಅದರ ಸೃಷ್ಟಿಗೆ ಬೇಕಾದ ಪಾಂಡಿತ್ಯ ಮತ್ತು ಪ್ರತಿಭೆಗಳೆರಡೂ ಕುಂಟಿದೆ. (ಕೊನೆಗೂ ಒಂದು ಪ್ರಸಂಗವು ಛಂದೋಬದ್ಧ ರಚನೆಗಳ ಮೂಲಕವೇ ಸೃಷ್ಟಿಯಾಗಬೇಕಷ್ಟೆ.)

ಈ ಪುರಾಣಗಳ ವೈದಿಕ ಪ್ರಸ್ತುತಿಗೊಂದು ವಿಧಾನವಿದೆ. ವ್ಯಾಸಭಾರತ/ವಾಲ್ಮೀಕಿರಾಮಾಯಣದ ನಿಚ್ಚಳ ವಿವರಗಳನ್ನು ಈ ವೈದಿಕ ಪುರಾಣ ಪ್ರಸ್ತುತಿ ಎಷ್ಟು ಬೇಕೋ ಅಷ್ಟು ಮಾತ್ರ ಉಳಿಸಿಕೊಂಡು  ಇಕ್ಕಟ್ಟಿನ ವಿವರಗಳನ್ನು ಅಂಚಿಗೆ ಸರಿಸಿದೆ. ಕನ್ನಡದ ಕಾವ್ಯಪರಂಪರೆಯಲ್ಲಿ ಇದನ್ನು ಮುರಿದು ಕಟ್ಟಿದ ಅನೇಕ ಉದಾಹರಣೆಗಳಿವೆ. ಜೈನರು ಬರೆದ ಕಾವ್ಯಗಳಲ್ಲಿ ಇದಕ್ಕೆ ಪುರಾವೆಗಳಿವೆ. ಜಾನಪದ ಪ್ರಸ್ತುತಿಗಳಲ್ಲಿ ಈ ಬಗೆಯ ಪ್ರತಿಕ್ರಿಯೆಗಳಿವೆ. ಆದರೆ ಯಕ್ಷಗಾನ ತನ್ನ ಪ್ರಸಂಗಗಳಲ್ಲಿ ಚಾಚೂ ತಪ್ಪದೇ ವೈದಿಕ ಪುರಾಣ ಪ್ರಸ್ತುತಿಯ ಮಾದರಿಯನ್ನು ಇದಮಿತ್ಥಂ ಎಂದು ಅನುಸರಿಸಿದೆ. ಆಯಾ ಪಾತ್ರಗಳ ಜಿಜ್ಞಾಸೆಗಳನ್ನು ಪಾತ್ರಧಾರಿ ವ್ಯಾಖ್ಯಾನಿಸುವ ಪ್ರತ್ತುತ್ಪನ್ನಮತಿತ್ವದ ಕಾರಣಕ್ಕೆ ಇಲ್ಲಿ ಭಿನ್ನ ಅರ್ಥಗಳು ಹೊಮ್ಮಿವೆ, ಅಷ್ಟೆ.  ಆದರೆ ಇವು ಅಮಾವಾಸ್ಯೆಯ ಇರುಳಿನ ಮಿಂಚುಗಳಷ್ಟೆ. ಅಂತಿಮವಾಗಿ ಪಾತ್ರವು ದೊಡ್ಡ ಚೌಕಟ್ಟಿಗೆ ‘ಮಣಿದು ಮಂಗಳಂ ಜಯಮಂಗಳಂ’ ಎನ್ನುವ ವಿಧೇಯತೆಯನ್ನು ತೋರಿಸುತ್ತದೆ.  ಬ್ರಾಹ್ಮಣೇತರರು ಯಕ್ಷಗಾನದ ಮುಖ್ಯ ಭೂಮಿಕೆಯಲ್ಲಿ ದಶಕಗಳ ಕಾಲ ಇದ್ದಾಗಲೂ ಈ ನಿಯಂತ್ರಕ ಪಠ್ಯವೇನೂ ಬದಲಾಗಲಿಲ್ಲ ಎಂಬುದನ್ನು ಗಮನಿಸಬೇಕು.

ಪ್ರಾಸಂಗಿಕವಾಗಿ ಒಮ್ಮೆ ಲಕ್ಷ್ಮೀಶ ತೋಳ್ಪಾಡಿಯವರು ಯಕ್ಷಗಾನದ ಪ್ರಸಂಗಗಳ ಕೊನೆಯ ಸೀನಿನಲ್ಲಿ ದೇವರು ಪ್ರತ್ಯಕ್ಷವಾಗದಿದ್ದರೆ ನಮ್ಮ ಹಲವು ಕತೆಗಳು ಗ್ರೀಕ್ ಟ್ರಾಜಿಡಿಗಳಷ್ಟೇ ದುರಂತಮಯ ಎಂದಿದ್ದರು. ಅವರು ಕೊಟ್ಟ ಉದಾಹರಣೆ ಹರಿಶ್ಚಂದ್ರನ ಕತೆ.  ಹರಿಶ್ಚಂದ್ರನ ದರ್ಶನವನ್ನು ಗೋವಿಂದ ಪೈ ತಮ್ಮ “ಶ್ವಪಚನನು ಒಳಗೊಳದೆ ದಿವಕೇರ್ವನೆಂತು?” ಕವನದಲ್ಲಿ ಇಟ್ಟಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಇದರ ಹೊರತಾಗಿಯೂ ಯಕ್ಷಗಾನ ಪ್ರಸಂಗಗಳಲ್ಲಿ ವೀರರಸವನ್ನೇ ವಿಜೃಂಭಿಸುವ ಪ್ರಾಬಲ್ಯದ ಕಾರಣಕ್ಕೆ ರಾಮಾಯಣ ಮಹಾಭಾರತಗಳ ಆತ್ಯಂತಿಕ ವಿಷಾದ; ಈ ವೀರ ರಸದ ನಿಷ್ಫಲತೆಯನ್ನು ಬಿಂಬಿಸುವ ಸ್ಥಾಯೀ ಭಾವ  ನಮ್ಮ ಮನೋಭೂಮಿಕೆಯಲ್ಲಿ ಆಳವಾಗಿ ಇಳಿಯಲೇ ಇಲ್ಲ.  ಮಹಾಭಾರತದ ಸ್ತ್ರೀಪರ್ವ ಓದಿ ಮತ್ತೆ ಮಹಾಭಾರತ ಓದಿದರೆ ಒಂದು ಐರಾನಿಕ್‌ ಧ್ಯಾನ ತನ್ನಿಂತಾನೇ ಛತ್ರಿಯ ತರ ಆವರಿಸುತ್ತದೆ.   ಯಕ್ಷಗಾನ ಇಂಥದ್ದನ್ನು ವ್ಯವಸ್ಥಿತವಾಗಿ ದೂರವಿಟ್ಟಂತೆ ತೋರುತ್ತದೆ.

ಈ ವೀರ ರಸದ ಪೌರುಷದ ವಿಜೃಂಭಣೆಯೇ ಹಿಂದುತ್ವದ ಮೂಲ ಕಸುವು. ಪಾದರಸದ ಎರಡು ಗುಂಡುಗಳಂತೆ  ಹಿಂದುತ್ವ ಮತ್ತು ಯಕ್ಷಗಾನ ಎದುರಾದ ತಕ್ಷಣ ವಿಲೀನವಾಗುವ ಭೀಷಣ ಪ್ರಕ್ರಿಯೆಗೆ ಯಕ್ಷಗಾನವೂ ಒಳಗಾಗಿದೆ. ಒಂದಷ್ಟು ಲಿಬರಲ್‌ ಕಾಲಘಟ್ಟದಲ್ಲಿ ಯಕ್ಷಗಾನದ ಅಧ್ವರ್ಯುಗಳೂ ಈ ವಿಜೃಂಭಣೆಯನ್ನು ಒಂದು ಸೌಂದರ್ಯ ಮೀಮಾಂಸೆಯ ಹೆಣಿಗೆಯಲ್ಲಿ ಇಟ್ಟ ಕಾರಣ ಇದರ ಆತ್ಯಂತಿಕ ಸಾಧ್ಯತೆ ನಮ್ಮಿಂದ ಮರೆಮಾಚಲ್ಪಟ್ಟಿತು. ಉದಾ: ಅಂಬೆ-ಸಾಲ್ವ ಪ್ರಸಂಗ; ವಾಲಿಯ ಪ್ರಸಂಗ, ಧರ್ಮರಾಯನ ಪಾತ್ರದ marginalization. ಆದರೆ ಚೆಂಡೆಯ ಪೆಟ್ಟೇ ಪ್ರಧಾನವಾದಾಗ ಕಥೆಯ ಹರಿವಿನ  ಸೂಕ್ಷ್ಮಗಳು ಮರೆಯಾಗಿ ಬಿಡುತ್ತವೆ.

ಯಕ್ಷಗಾನ ಎರಡು ಮೂರು ತಲೆಮಾರಿನ ಈ ಪ್ರೇಕ್ಷಕರಿಗೆ ಉಣಬಡಿಸಿದ ಆಯ್ಕೆಗಳು ನೆನಪಿನ ಭಾವಕೋಶದಲ್ಲೇ ಸ್ಥಿರವಾಗಿ ಉಳಿದು ಬಿಟ್ಟು ಪರ್ಯಾಯ ನೆರೇಟಿವ್‌ಗೆ ಅವಕಾಶವೇ ಇಲ್ಲದಂತೆ ಮಾಡಿದ್ದನ್ನು ಈಗಲಾದರೂ ಗುರುತಿಸಬೇಕಾಗಿದೆ.   ಹಿಂದುತ್ವದ ಪ್ರಾಬಲ್ಯ ಯಕ್ಷಗಾನವನ್ನು ಆಪೋಷನ ತೆಗೆದುಕೊಂಡದ್ದನ್ನು ವೈದ್ಯಕೀಯ ಸಾಮಿತಿಯೊಂದಿಗೆ ವಿವರಿಸಬಹುದು. ಅತ್ಯಂತ ನಿರಪಾಯಕಾರಿಯಾದ ಚಿಕನ್‌ ಪಾಕ್ಸ್‌ನ ವೈರಸ್‌ ಕೆಲವೇ ಉಳಿದಿದ್ದರೂ ಅವು ನಿಧಾನ ಮೆದುಳನ್ನು ಸೇರಿ ಹತ್ತಿಪ್ಪತ್ತು ವರುಷಗಳ ಬಳಿಕ ಭೀಕರ ಸರ್ಪ ಸುತ್ತಿನ ವೈರಸ್‌ ಆಗಿ ರೂಪಾಂತರಗೊಳ್ಳುತ್ತವೆ. ನರಗಳ ಬೇರನ್ನೇ ಶಿಥಿಲಗೊಳಿಸಿ, ಅದು ತರುವ ಭೀಕರ ನೋವು ಅನುಭವಿಸಿದವರಿಗೆ ಗೊತ್ತು.  ಈಗ ಆಗಿರುವುದು ಈ ರೂಪಾಂತರದ ಧಾಳಿ.  ಸದ್ಯದ ಯಕ್ಷಗಾನದ ಭೌತಿಕ ಸ್ವರೂಪದಲ್ಲಿರುವ ವಿಶಿಷ್ಟತೆಗಳು ಅದಕ್ಕೆ ನೀಡಿರುವ ಟೆಫ್ಲಾನ್‌ ಕೋಟಿಂಗ್‌ ಹೇಗಿದೆಯೆಂದರೆ, ಅದರೊಳಗೆ ತಾತ್ವಿಕ ಮತ್ತು ತಾಂತ್ರಿಕ  ಸುಧಾರಣೆಯ ಮಧ್ಯಪ್ರವೇಶವೇ ದುಸ್ತರವೆನ್ನಿಸಿದೆ.

*****

ಯಕ್ಷಗಾನದಲ್ಲಿ ಲಾಗಾಯ್ತಿನಿಂದಲೂ ಪ್ರಸ್ತುತಿಗೊಂಡವುಗಳು ವೈದಿಕ ಪುರಾಣ ಕತೆಗಳ ಪ್ರಸಂಗಗಳು. ಇವುಗಳು ಪ್ರತಿನಿಧಿಸುವ ಸಾಂಪ್ರದಾಯಿಕ ಮೌಲ್ಯಗಳ ಸಮರ್ಥನೆಯಿಂದ ಹಿಂದುತ್ವದ ಶಕ್ತಿಗಳಿಗೆ ‘ಸಂಸ್ಕೃತಿ’ ಎಂದರೆ ‘ಇಷ್ಟೇ’ ಎಂಬ ಸಿದ್ಧಮಾದರಿಯ ಚೌಕಟ್ಟನ್ನು ನಿರ್ಮಿಸಲು ಸುಲಭ ಸಾಧ್ಯವಾಯಿತು. ‘ಯಕ್ಷಗಾನದಲ್ಲಿ ಮಾತ್ರ ಶುದ್ಧಕನ್ನಡ ಇದೆ’ ಎಂಬ ನಿರೂಪಣೆಯನ್ನು ಕಟ್ಟಲಾಗಿರುವುದು ಕೂಡ ಇಂಥದ್ದೇ ಚೌಕಟ್ಟಿನಲ್ಲಿ. ಶೆಟ್ಟಿಯವರು ಇದನ್ನು ಗುರುತಿಸಿದರೂ ಇದು ಅನಿವಾರ್ಯವಾದ ಚಾರಿತ್ರಿಕ  ತಿರುವು ಎಂಬುದನ್ನು ಸ್ವೀಕರಿಸಲು ನಿರಾಕರಿಸುತ್ತಾರೆ. ಅವರು ಈ ಪುಸ್ತಕದಲ್ಲಿ ಕೇಂದ್ರವಾಗಿಸಿಕೊಂಡಿರುವ ಪಾತ್ರಧಾರಿಯ ರೂಪಾಂತರದ ಪ್ರತಿಮೆಯನ್ನು ಎಷ್ಟು ಢಾಳಾಗಿ ಗಮನಿಸುತ್ತಾರೆಂದರೆ ಅದರಾಚೆಗಿನ  ವಿಸ್ತರಣೆಯ ವಿವರಗಳ ಬಗ್ಗೆ ಹೆಚ್ಚು ಚರ್ಚೆ ಮಾಡುವುದಿಲ್ಲ.

ಉದಾಹರಣೆಗೆ ಯಕ್ಷಗಾನದ ಮೇರು ಪ್ರತಿಭೆಗಳಾದ ಕೆರೆಮನೆ ಹೆಗಡೆ ತ್ರಯರಾಗಲೀ ಅಥವಾ ದಕ್ಷಿಣ ಕನ್ನಡದ ಎನ್ ಎಸ್ ಕಿಲ್ಲೆ, ಪೊಳಲಿ ಶಂಕರನಾರಾಯಣ ಶಾಸ್ತ್ರಿ, ಮಲ್ಪೆ ಶಂಕರನಾರಾಯಣ ಸಾಮಗ, ಶೇಣಿ ಗೋಪಾಲಕೃಷ್ಣ ಭಟ್, ಎಫ್ ಎಚ್ ವೊಡೆಯರ್, ಅರ್ಕುಳ ಸುಬ್ರಾಯಾಚಾರಿ, ಪಾತಾಳ ವೆಂಕಟರಮಣ ಭಟ್ಟ ಮುಂತಾದ ಕಲಾವಿದರ ವ್ಯಾಖ್ಯೆ ಪ್ರಸ್ತುತಿಗಳ ಮಾದರಿಯೇಕೆ ಯಕ್ಷಗಾನದ ತದನಂತರದ ತಲೆಮಾರನ್ನು ಪ್ರಭಾವಿಸಲಿಲ್ಲ? ಕುಂಬಳೆ ಒಬ್ಬರೇ ಏಕೆ ಪ್ರಭಾವಿಯಾದರು? ಎಂಬುದನ್ನು ಶೆಟ್ಟಿಯವರು ಇನ್ನೂ ಸ್ವಲ್ಪ ಹೆಚ್ಚು ಚರ್ಚಿಸುತ್ತಿದ್ದರೆ ಈ ಪುಸ್ತಕಕ್ಕೆ ಈಗಾಗಲೇ ಇರುವ ಸಂಕೀರ್ಣ ಆಯಾಮ ಇನ್ನಷ್ಟು ವಿಸ್ತಾರವಾಗುತ್ತಿತ್ತು.  ರಾಜಕೀಯದ ಕಿಲುಬು ಲೋಹ ಯಕ್ಷಗಾನ ಕಲಾವಿದನಿಗೊಂದು ಕಠೋರತೆಯನ್ನು ನೀಡಿರಬಹುದು. ಈ ಕಿಲುಬು ಲೋಹದ ಮೋಹ ಬೇಡ ಎಂದು ನಂತರದ ತಲೆಮಾರಿನ ಕಲಾವಿದರನ್ನು ಎಚ್ಚರಿಸುವವರು ಪ್ರಾಯಶಃ ಇಲ್ಲಿ ಯಾರೂ ಇರಲಿಲ್ಲ. ಹಾಗಾಗಿ ಅನೇಕ ಕಲಾವಿದರು ಪಾತ್ರ ನಿರ್ವಚನದಲ್ಲಿ ಈಗಾಗಲೇ ಸನ್ನಿಗೊಳಗಾದ ಸಮೂಹದ ನಿರೀಕ್ಷೆಗೆ ತಕ್ಕಂತೆ  ಆಡುತ್ತಾ, ಮಾತಾಡುತ್ತಾ  ಒಂದು ರಾಜಕೀಯ ನಿಲುಮೆಯನ್ನು ವಿಸ್ತೃತಗೊಳಿಸುವ ಸಾಧನವಾದರು ಎಂಬುದು ಸತ್ಯ. ಇದರಿಂದ ಯಕ್ಷಗಾನದ ಆಸ್ವಾದನಾ ಸೌಂದರ್ಯ ಬಲಿಯಾಯಿತು ಎಂಬುದೂ ನಿಜ.

ಕಣ್ಣಿಗೆ ಗಿಡಿಯುವ ಸತ್ಯವೆಂದರೆ ಹಿಂದುತ್ವ ಎಂಬ ಸೀಮಿತ ಹಳಿಗಳ ಹಿಂದೂ ವ್ಯಾಖ್ಯಾನ ಮೂಲತಃ ಬಹುಸಂಖ್ಯಾತ ಯಜಮಾನಿಕೆಯ ಚಹರೆ ಅಷ್ಟೆ. ಇದು ನೇರವಾಗಿ ಹಿಟ್ಲರನ ಪ್ರಯೋಗದಿಂದ ಸ್ಫೂರ್ತಿ ಪಡೆದಿದೆ  ಎಂಬುದರಲ್ಲಿ ಅನುಮಾನವೇ ಇಲ್ಲ. ಈ ಯಜಮಾನಿಕೆಯ ಸೀಮಿತ ಹಳಿಗಳಿಗೆ ಸಂಸ್ಕೃತಿಯ ವೈವಿಧ್ಯತೆಯ ಸೂಕ್ಷ್ಮಗಳು ಅನವಶ್ಯಕವಾದ ತೊಡಕು. ಅವುಗಳನ್ನು ಒರೆಸಿ ಹಾಕಿ ಏಕಾಕಾರದ ಪೌರುಷ ಪ್ರಧಾನ ರಾಷ್ಟ್ರದ ಕಲ್ಪನೆ ಮತ್ತು ಅದಕ್ಕೆ ವಿಧೇಯರಾಗಿ ಕಾರ್ಯ ಎಸಗಬೇಕಾದ ಕಾಲಾಳುಗಳ ಪಡೆಯಷ್ಟೇ ಅದರ ಚೌಕಟ್ಟಿನಲ್ಲಿರುವ ಹೂರಣ.

ಆದ್ದರಿಂದಲೇ ಯಕ್ಷಗಾನದೊಳಗೆ ಈ ಸಿದ್ಧಾಂತದ ಪ್ರವೇಶವಾಗುವುದನ್ನು ತಡೆಯುವ ವೈಫಲ್ಯದಲ್ಲಿ ಅಂದರೆ ಈ drift = ಒಚ್ಚುವುದರ ಹಿಂದೆ ಯಕ್ಷಗಾನದ ಅಧ್ವರ್ಯುಗಳ ನಿಷ್ಕ್ರಿಯತೆಯೂ ಇದೆ. ಈ degeneration ವ್ಯಾಪಕವಾಗಿ ಜರಗುತ್ತಿದ್ದಾಗ ಕರಾವಳಿಯ ಯಾವೊಬ್ಬ ಯಕ್ಷ ಪ್ರಾಜ್ಞನೂ ಕ್ರಿಯಾಶೀಲವಾಗಿ ಇದಕ್ಕೆ ಪ್ರತಿಕ್ರಿಯಿಸಲಿಲ್ಲ. ಈ ಕರ್ತವ್ಯ ಚ್ಯುತಿ ಚಾರಿತ್ರಿಕವಾಗಿ ಫ್ಯಾಸಿಸ್ಟ್‌ ಸಿದ್ಧಾಂತ ಏರಿಕೆಯಲ್ಲಿದ್ದಾಗ ಎಲ್ಲಾ ಕಡೆಯೂ ಜರುಗಿದೆ.

ಮಾರ್ಟಿನ್‌ ಲೂಥರ್‌ ಕಿಂಗ್‌ (ಜೂ) ಹೇಳಿದ ಮಾತು ಗಮನಾರ್ಹ. “ಈ ಕಾಲದಲ್ಲಿ ದುಷ್ಟರ ದುಷ್ಕೃತ್ಯಕ್ಕೆ ನಾನು ಕಂಬನಿ ಸುರಿಸುತ್ತಿಲ್ಲ. ಆದರೆ ಸಜ್ಜನರ ಮೌನಕ್ಕೆ ಕಂಬನಿ ಸುರಿಸುತ್ತಿದ್ದೇನೆ”

ಈ ಕೃತಿಯಲ್ಲಿ ಈ ಸಾಂಸ್ಕೃತಿಕ ಧಾಳಿ ಒಬ್ಬ ವ್ಯಕ್ತಿ ಅಥವಾ ಹಿಂದುತ್ವ ಎಂಬ ಐಡಿಯಾಲಜಿಯಿಂದ ಆಗಿದೆ ಎಂಬಂತೆ ಪ್ರಸ್ತುತಗೊಂಡಿದೆ. ಇದೊಂದು ಜಾಗತಿಕ ವಿದ್ಯಮಾನವೂ ಹೌದು. ರೋಗನಿರೋಧಕ ಶಕ್ತಿ ಕಳೆದುಕೊಂಡ ದೇಹ ರೋಗಕ್ಕೆ ಪಕ್ಕಾಗುವುದು ಪ್ರಕೃತಿ ನಿಯಮ. ಯುರೋಪಿನಲ್ಲಿ ಕಾಣಿಸಿಕೊಂಡ ಫ್ಯಾಶಿಜಮಿನ ಅವಲಕ್ಷಣಗಳು ಕರಾವಳಿಯಲ್ಲೂ ಮೈದೋರಿರುವುದರ ಬಗ್ಗೆ, ಅಂದು ಜರ್ಮನಿಯಲ್ಲಿ ಮತ್ತು ಇಂದು ಇಸ್ರೇಲದಲ್ಲಿ ಆಗುತ್ತಿರುವುದು ಬೇರೆಯಲ್ಲ, ಕರಾವಳಿಯಲ್ಲಿ ನಡೆಯುತ್ತಿರುವುದು ಬೇರೆಯಲ್ಲ ಎಂಬುದನ್ನು ಪರಸ್ಪರ ಹೋಲಿಸುವಂತೆ ಈ ಪುಸ್ತಕದ ಒಟ್ಟು ಮಂಡನೆ ಇದೆ. ಹಾಗಾಗಿ ಯಕ್ಷಗಾನ ಎಂಬ ಪ್ರಾದೇಶಿಕ ಕಲೆಯ ಕನ್ನಡಿಯಲ್ಲಿ  ಸ್ಥಳೀಯ ಘಟನಾವಳಿಗಳಿಗೂ ಮತ್ತು  ಜಾಗತಿಕ ವಿದ್ಯಮಾನಕ್ಕೂ ಇರುವ ಪರಸ್ಪರ ಸಂಬಂಧ ಹಾಗೂ ಸಾಮ್ಯತೆಗಳನ್ನು ತೋರಿಸುವ  ಈ ಹೊತ್ತಗೆಯನ್ನು ಓದಿ ಮುಗಿಸಿದಾಗ ಇದು ಕರಾವಳಿಯ ಕಥೆ; ಕೇವಲ ಯಕ್ಷಗಾನದ ಕಥೆ ಅಂತ ಅನ್ನಿಸುವುದಿಲ್ಲ. ಇದು ನಮ್ಮ ಕಾಲದ ಕಥೆಯೂ ಹೌದು ಎಂದು ಬೆಚ್ಚುವಂತೆ ಆಗುತ್ತದೆ. ಫ್ಯಾಶಿಸಮ್ ನಮ್ಮ ಊರಿನಲ್ಲೂ ತನ್ನ ಪಂಜಾ ಊರಿದೆ ಎಂದು ತಿಳಿದು ಹೌಹಾರುವಂತೆ ಆಗುತ್ತದೆ. ಈ ಅರ್ಥದಲ್ಲಿ  ಶೆಟ್ಟಿಯವರು ಪುಸ್ತಕದ ಪ್ರಸ್ತಾವನೆಗೆ ಕೊಟ್ಟ “ನನ್ನ ಕಾಲದ ಸತ್ಯವನ್ನು ಇದಿರ್ಗೊಳ್ಳಬೇಕೆಂಬ ಸಂಕಲ್ಪದಿಂದ” ಎಂಬ ಶೀರ್ಷಿಕೆ ನಮ್ಮೆಲ್ಲರದ್ದೂ ಆಗುತ್ತದೆ. ಈ ಪುಸ್ತಕದ ಜೊತೆಗೆ  ಅನುಸಂಧಾನ ನಡೆಸುವುದೆಂದರೆ ನಮ್ಮ ಕಾಲದ ಸತ್ಯವನ್ನು ಮುಖಾಮುಖಿಯಾಗುವುದೂ ಆಗಿದೆ. ಶೆಟ್ಟಿಯವರು ಈ  ತಾತ್ವಿಕ ಚರ್ಚೆಯನ್ನು ಇನ್ನಷ್ಟು ವಿವರಿಸಬೇಕಾಗಿತ್ತು ಅಂತಲೂ ಅನ್ನಿಸುತ್ತದೆ.

ಯಕ್ಷಗಾನದ ಅನೇಕಾರ್ಥ ಸಂಹಿತೆಯೇ ಪ್ರದರ್ಶನಗಳ ಬಾಹುಳ್ಯದಲ್ಲಿ ಹಂತಹಂತವಾಗಿ, ವ್ಯವಸ್ಥಿತವಾಗಿ ಮಾಯವಾಗಿದೆ.  ಈ  aesthetic erasing  ಬಹುಮುಖ್ಯ. ಲೇಖಕರು ಈ  ತಾತ್ವಿಕ gap ಬಗ್ಗೆ ಹೆಚ್ಚು ಗಮನ ಹರಿಸಿಲ್ಲ.

*****

ಕರಾವಳಿಯಲ್ಲಿ ಕಳೆದ ಮೂವತ್ತು ವರ್ಷಗಳಲ್ಲಾದ ಜೀವನೋಪಾಯಗಳಲ್ಲಾದ ಬದಲಾವಣೆ, ಆರ್ಥಿಕ ಆಯ್ಕೆಗಳು  ಹೆಚ್ಚು ಉದಾರವಾದಿ ರಾಜಕಾರಣಕ್ಕೆ ಮುನ್ನುಡಿಯಾಗಬೇಕಿತ್ತು! ಜಾಗತೀಕರಣ ಮತ್ತು ಮುಕ್ತ ಆರ್ಥಿಕತೆಯ ಜಾಹೀರು ಕ್ಲೇಮು ಕೂಡ ಇದೇ ಆಗಿತ್ತು. ಜಾಗತೀಕರಣದ ಆರಂಭಿಕ ಫಲ ಉಂಡ  ಪ್ರದೇಶಗಳಲ್ಲಿ ಕರಾವಳಿಯೂ ಒಂದು. ಆದರೆ ಈ ಗಾಳಿ ಬೀಸಿದಲ್ಲೆಲ್ಲಾ ಹಿಂದುತ್ವದ ಬೇರು ಗಟ್ಟಿಗೊಳ್ಳಲು ಕಾರಣವೇನು? ಸಾಮಾಜಿಕ ಸಂಬಂಧಗಳಲ್ಲಿ ಚಾರಿತ್ರಿಕವಾಗಿ ಶೋಷಕ ಮತ್ತು ಶೋಷಿತ ಜಾತಿಗಳು ಹೊಸ ಸಂದರ್ಭದಲ್ಲಿ ಕೈ ಜೋಡಿಸಿ ಒಂದಾದ ಕಾರಣಗಳೇನು? ಹೊಸ ಶತ್ರುವನ್ನು ಸೃಷ್ಟಿಸುವಾಗ ಚಾರಿತ್ರಿಕ ಪುರಾವೆಯ ಶತ್ರುವಿನ ಬದಲು ನಿರ್ದಿಷ್ಟ ಸಮುದಾಯವನ್ನು ಶತ್ರುವಾಗಿ ಗ್ರಹಿಸಿದ ಬದಲಾವಣೆ ಹೇಗೆ ಬಂತು?

ಇದರೊಂದಿಗೆ ಗಮನಿಸಬೇಕಾದದ್ದು, ಚಾತುರ್ವಣ್ಯದ ಹಿಂದಿನ ಗ್ರಹಿಕೆಯನ್ನು ಆರೆಸ್ಸೆಸ್‌ ಮುರಿದು ಅಷ್ಟಿಷ್ಟು ಪಾಲನ್ನು ಒಬಿಸಿ ಸಮುದಾಯಗಳಿಗೆ ನೀಡುತ್ತಾ ಲಂಬ ಶ್ರೇಣಿಯ ಬದಲು ವೃತ್ತಾಕಾರದ ರಚನೆಯನ್ನು ಮುಂದಿಡುತ್ತಾ ನಿಯಂತ್ರಕ ಕೇಂದ್ರದಲ್ಲಿ ವೈದಿಕ ಲೋಕ ಕಾಣ್ಕೆಯನ್ನು ಇಟ್ಟುಕೊಂಡೂ ಗೆದ್ದಿರುವುದನ್ನು. ನಾನು ಈ ಹಿಂದೊಮ್ಮೆ ಗಮನಿಸಿದ ಹಾಗೆ  ಇತ್ತೀಚೆಗಿನ ತಲೆಮಾರುಗಳ ಬಹುತೇಕ ಸಮಾಜ ವಿಜ್ಞಾನಗಳ ಅಧ್ಯಯನ ಹೈಸ್ಕೂಲಿಗೆ ಮುಕ್ತಾಯವಾಗಿ  ಅಲ್ಲಿಂದಾಚೆಗೆ ವಿದ್ಯಾಭ್ಯಾಸ ದಕ್ಕಿದರೆ ಅದು ತಾಂತ್ರಿಕ ಶಿಕ್ಷಣವೂ ಆದರೆ ಆ ತಲೆಮಾರಿನ ಸಾಮಾಜಿಕ ಚಾರಿತ್ರಿಕ ಅರಿವು  ಕ್ರಮಬದ್ಧ  ಓದಿನ ಕೊರತೆಯಿಂದಾಗಿ ಕುಂಠಿತವಾಗುತ್ತದೆ. ಆರೆಸ್ಸೆಸ್‌ ತನ್ನ ಸೆಲೆಕ್ಟಿವ್‌ ಮಾದರಿಯ ಮೂಲಕ ತಳ್ಳುವ ಚರಿತ್ರೆಯ ಪಠ್ಯಗಳೇ ಅಲ್ಲಿನ staple ಸರಕು.  ವಾಟ್ಸಪ್‌ ಬಂದ ಮೇಲೆ ಇದೊಂದು ಅಬೇಧ್ಯ  ಗುಳ್ಳೆಯಾಗಿದೆ.

ಶೆಟ್ಟಿಯವರ ಈ ಕೃತಿ ಅಪೂರ್ವ ಲಕ್ಷ್ಯವಿಟ್ಟುಕೊಂಡು ಒಂದು ಮಾರಣಾಂತಿಕ ಬದಲಾವಣೆಯನ್ನು ಗುರುತಿಸಿದೆ. ಈ ದಾಖಲಿಸುವ ಪ್ರಕ್ರಿಯೆಯಲ್ಲಿ ಉಡಾಫೆ, ಚಿತ್ತವಿಕಲ್ಪದ ಹಾರು ಹೇಳಿಕೆಗಳಿಗೆ ಕಿಂಚಿತ್ತೂ ಎಡೆಕೊಡದಂತೆ ಒಂದು ತಾರ್ಕಿಕ ಮೆಥಡಾಲಜಿಗೆ ಬದ್ಧವಾಗಿ ಅವರಿದನ್ನು ಬರೆದಿದ್ದಾರೆ. ಅಷ್ಟೇ ಪ್ರಜ್ಞಾಪೂರ್ವಕವಾಗಿ ನಿರ್ದಿಷ್ಟ ಪ್ರಕಾರದ ಬೇಲಿ ಮುರಿದು  ತಮ್ಮ ಕೃತಿಯನ್ನು ಮುಕ್ತ ಕಥನವಾಗಿಸುವ flexibilityಯನ್ನು ತಂದಿದ್ದಾರೆ. ಕೃತಿ ಎಲ್ಲೂ ಪಾಂಡಿತ್ಯದ ಭಾಷಾ ಲೋಲುಪತೆಯಲ್ಲಿ ಬಳಲುವುದಿಲ್ಲ. ಆದರೆ ತನಗೆ ತಾನೇ ಸ್ಪಷ್ಟೀಕರಿಸಿಕೊಳ್ಳಲು ಹೊರಡುವಾಗ ಕೆಲವು ಪರಿಕಲ್ಪನೆಗಳನ್ನು ನಿರ್ವಚಿಸುವಲ್ಲಿ  ಆಂಶಿಕ ಗೋಜಲು ಕಂಡುಬರುತ್ತದೆ. (ವಿದೂಷಕ- ಹಾಸ್ಯಗಾರ; ಕಲಾಕಾರ- ಕಲಾವಿದ; ಹೀಗೆ) ಸುಲಭ ಗ್ರಹಿಕೆಯ ದ್ವೈತ ನಿರ್ವಚನಗಳಾಚೆ ಒಂದು ಸಾಂಸ್ಕೃತಿಕ ನಿರೂಪಣೆ  ಸಂಕೀರ್ಣವೂ ಬಹುಮೂಲದ್ದೂ ಇರುತ್ತದೆ.

ನಿರ್ದಿಷ್ಟ ಪಠ್ಯ ಬಂಧದ ಸಾದೃಶ್ಯದ ಮೂಲಕ ಯಕ್ಷಗಾನದ ತಿರುವುಗಳನ್ನು ಹಿಡಿಯುವುದು ಕಷ್ಟ (ಉದಾ: ಸಾಂಪ್ರದಾಯಿಕ ನಾಟಕಗಳ ಪಾತ್ರಗಳ ಸಂಕೀರ್ಣತೆ- ಶೇಕ್ಸ್‌ ಪಿಯರಿನಲ್ಲಿರುವಂತೆ) ಯಕ್ಷಗಾನದ ಅಮೀಬಾದೋಪಾದಿ ಅಸ್ತಿತ್ವ ಮತ್ತು ವಿಭಜಕತೆಗಳು ಈ ಹೆಜ್ಜೆಗತಿಗಳನ್ನು ಹಿಡಿಯಲು ಕಷ್ಟಸಾಧ್ಯವಾಗಿಸುತ್ತದೆ. ಹತ್ತಾರು ಮೇಳಗಳು ನೂರಾರು ಕಲಾವಿದರು! ಈ ಪ್ರತಿಯೊಬ್ಬ ಕಲಾವಿದನೂ ಪಾತ್ರಪೋಷಣೆಯ  ಕಾರಣಕ್ಕೆ ಮಾತಿನ ಮೊರೆ ಹೋಗುತ್ತಾ ಅದರ ಕಲಾತ್ಮಕತೆಯ ಅರಳುವಿಕೆಯ ಶಿಸ್ತಿನಿಂದ ದೂರ ಸರಿಯುವ ಅಪಾಯ ಢಾಳಾಗಿದೆ. ಆದ್ದರಿಂದಲೇ ಈ ಕೃತಿ ಸಾಂಸ್ಕೃತಿಕ ಭ್ರಷ್ಟತೆಯ ಬಗ್ಗೆ ಅನುಪಮ ವಿವರಗಳೊಂದಿಗೆ ಮಂಡಿಸುವಾಗಲೂ ಅದರ ರೋಗನಿದಾನವನ್ನು ಆಳವಾದ ತಾತ್ವಿಕ ಸ್ಪಷ್ಟತೆಯೊಂದಿಗೆ ಇಡುವಲ್ಲಿ ಸೋಲುತ್ತಿದೆ ಅನ್ನಿಸುತ್ತದೆ. ಎಲ್ಲರಿಗೂ ಕಾಣುವ ವಿವರಗಳಾಚೆ, ಈ ರೋಗಕ್ಕೆ ಪಕ್ಕಾಗುವ ವೈಲಕ್ಷಣಗಳನ್ನು ತಾತ್ವಿಕ ಚೌಕಟ್ಟಲ್ಲಿ ಹಿಡಿವ ವಿಫಲ ಯತ್ನ ಉದ್ದಕ್ಕೂ ಗೋಚರಿಸುತ್ತದೆ.  ಆದರೆ ಇದರ ಓಪನ್‌ ಎಂಡೆಡ್‌ ಗುಣ ಹೇಗಿದೆಯೆಂದರೆ ಬಿಟ್ಟಿರಬಹುದಾದ ಅಂಶಗಳನ್ನು ಇಲ್ಲಿಂದಲೇ ಎತ್ತಿಕೊಂಡು ಇನ್ನೊಬ್ಬ ಅಧ್ಯಯನ–ಮಂಡನೆ ಮಾಡುವಷ್ಟು ಈ ಕೃತಿ ಮುಕ್ತ ಉದಾರತೆ ಹೊಂದಿದೆ.

ಬಹುಸಂಖ್ಯಾತ ಯಜಮಾನಿಕೆ ಅಥವಾ ಸೈದ್ಧಾಂತಿಕ ಏಕರೂಪತೆಯ ನಿಯಂತ್ರಕ ಸನ್ನಿವೇಶಗಳಲ್ಲಿ ಮುಕ್ತ ಕಲೆ ಸೊರಗಿದೆ. ಸಾಹಿತ್ಯ ಕಲೆಗಳ ಅಭಿವ್ಯಕ್ತಿಗೆ ಧಕ್ಕೆಯಾಗಿದೆ.  ಆದರೆ ಕಲಾಪ್ರಕಾರವೊಂದು ಫ್ಯಾಸಿಸ್ಟ್‌ ಸಿದ್ಧಾಂತದ ಸಾಧನವಾಗಿ ತನ್ನನ್ನು ತಾನು ಒಪ್ಪಿಸಿಕೊಂಡ ಉದಾಹರಣೆ ಜಾಗತಿಕವಾಗಿ ಇಲ್ಲ ಅನ್ನಿಸುತ್ತದೆ. ಆದ್ದರಿಂದಲೇ ಯಕ್ಷಗಾನದ ಈ ಘೋರ ರೂಪಾಂತರ ಫ್ಯಾಸಿಸ್ಟ್‌ ಸಿದ್ಧಾಂತದ  ಸಮ್ಮೋಹಕ ವಿಜೃಂಭಣೆಯ ಹೊಸ ಪುರಾವೆಯಾಗಿ ರೂಪ ಪಡೆದಿದೆ.

ಸಾಂಸ್ಕೃತಿಕ ಲೋಕದ ಬರಹಗಾರರನೇಕರು ಇಂಥಾ ಯಜಮಾನಿಕೆಯ ಪ್ರಭಾವಕ್ಕೊಳಗಾಗಿ  ಅಲ್ಪ ಕಾಲೀನ ಮೆದುಳು ಮರೆವೆಗೆ ಒಳಗಾಗಿ ಬೆಂಬಲ ಸೂಚಿಸಿದ್ದನ್ನು ಯುರೋಪು ದಾಖಲಿಸಿದೆ. ಆದರೆ ನಮ್ಮಲ್ಲಿ ಈ ಸಿದ್ಧಾಂತ ಈಗ ಪಾರಮ್ಯದಲ್ಲಿದ್ದರೂ ಸಾಂಸ್ಕೃತಿಕ ಲೋಕದ ಮುಖ್ಯ ವಾಹಿನಿಯ ಮಂಜೂರು ಪಡೆದಂತಿಲ್ಲ ಎನ್ನುವುದನ್ನು ಗಮನಿಸಬೇಕು. ಆದ್ದರಿಂದಲೇ ಯಕ್ಷಗಾನದ ವರ್ತನೆ ನಮ್ಮನ್ನು ಚಿಂತೆಗೆ ಹಚ್ಚಬೇಕು. ನಮ್ಮ ಸಾಂಸ್ಕೃತಿಕ ಬೌದ್ಧಿಕ ಲೋಕದ ಚಿಂತನಾ ಪ್ರಭಾವ ಯಕ್ಷಗಾನದಂಥಾ ಜನಕಲೆಯ ಮೇಲೆ ಆಗದೇ, ಅದು ತೀವ್ರ ಭಾವುಕ ಅತಾರ್ಕಿಕ ಸಿದ್ಧಾಂತವೊಂದರ ಸೆರೆಯಾಳು ಆದ ಪ್ರಕ್ರಿಯೆ ನಮ್ಮ ಬೌದ್ಧಿಕ ಲೋಕದ ಪ್ರಭಾವದ ಅಸಂಗತತೆಯನ್ನೂ  ಅನಾವರಣಗೊಳಿಸಿದೆ.

 *****

ನಿತ್ಯಾನಂದ ಬಿ ಶೆಟ್ಟಿಯವರು ಈ ಕೃತಿಯ ಕೊನೆಯಲ್ಲಿ ಹೇಳಿದಂತೆ ಆಳವಾದ ಒಂದು ಅಧ್ಯಯನಕ್ಕೆ ಇದೊಂದು ಆಹ್ವಾನ, ಮಾತ್ರವಲ್ಲ, ಈ ಪ್ರಕ್ರಿಯೆಯನ್ನು ಲಕ್ಷ್ಯವಿಟ್ಟು ನೋಡಿ ದಾಖಲಿಸಲು ಬೇಕಾದ ಬೌದ್ಧಿಕ, ತಾತ್ವಿಕ vantage pointನ್ನು ಅವರು ನೀಡಿದ್ದಾರೆ. ಮುಂದಿನ ಕೃತಿಗಳೆಲ್ಲಾ ಶೆಟ್ಟರ ಸೂಚಿಗಳನ್ನೇ ಗಮನಿಸಿ ಅದನ್ನು ವಿಸ್ತರಿಸಬೇಕಲ್ಲದೇ ಈ ಕೃತಿಯನ್ನು ಪ್ರತಿಪಕ್ಷವಾಗಿಸುವುದು ಸಾಧ್ಯವೇ ಇಲ್ಲ.

ಈ ಪ್ರತಿಕ್ರಿಯೆ, ಟಿಪ್ಪಣಿ ಕೂಡಾ ಪುಸ್ತಕದ ಓದಿನ ವಿಸ್ತರಣೆಯೇ. ಏಕಕಾಲದಲ್ಲಿ ಕಲೆ, ಸಾಮಾಜಿಕ ಸಾಂಸ್ಕೃತಿಕ ಅಧ್ಯಯನಗಳ ಚಾಚುಗಳ ಮೂಲಕ ಕಲಾ ಅಧ್ಯಯನದ ಮೂಲ ಕೇಂದ್ರದೊಳಗೆ ಶೆಟ್ಟಿಯವರು ಅಸಾಧಾರಣವಾದ ತಾರ್ಕಿಕ ಸ್ಪಷ್ಟತೆಯೊಂದಿಗೆ ಪ್ರಸ್ತುತಪಡಿಸಿರುವ ಅಂಶಗಳು ಒಂದೋ ಹೊಸ ವಿಸ್ತರಣೆ ಅಥವಾ ಇನ್ನಷ್ಟು ವಿವರಗಳನ್ನು ಸಪ್ಲಿಮೆಂಟ್‌ ಮಾಡುವ ಅಂಶಗಳನ್ನು ಹೊಂದಿದೆ. ಬೌದ್ಧಿಕ ಸಂತೃಪ್ತಿಯನ್ನು ನಮ್ಮಲ್ಲಿ ಮೂಡಿಸದೆ ನಮ್ಮನ್ನು ಹೊಸ ಅರಿವಿನ ಚಾಚುಗಳತ್ತ ಚಾಲೆಂಜ್‌ ಮಾಡುವ ಕೃತಿ ಇದು.

ಈ ಅರ್ಥದಲ್ಲಿ ಕಳೆದ ಎರಡು ದಶಕಗಳಲ್ಲಿ ಕನ್ನಡದಲ್ಲಿ ಪ್ರಕಟವಾದ ಬಹುಮುಖ್ಯ ಕೃತಿ ಇದು.

About The Author

ಕೆ. ಪಿ. ಸುರೇಶ

ಕೆ.ಪಿ. ಸುರೇಶ ಮೂಲತಃ ಸುಳ್ಯದ ಕಂಜರ್ಪಣೆಯವರು. ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸ್ನಾತಕೋತ್ತರ ಪದವಿದ್ದಾರೆ.  ಕವನ ಸಂಕಲನಗಳು: ದಡ ಬಿಟ್ಟ ದೋಣಿ (ಮುದ್ದಣ ಕಾವ್ಯಪ್ರಶಸ್ತಿ), ಕೆ.ಪಿ.ಸುರೇಶ: ಕವಿತೆಗಳು,  ನಮ್ಮ ಕಾಲಕ್ಕೆ ಕೆ.ಪಿ.ಸುರೇಶ ಬರೆದ ಕಾವ್ಯ ಕುಸುಮಾಂಜಲಿ. ಅಗೇಡಿ (ಅಂಕಣ ಬರಹಗಳು). ಅನುವಾದಿತ ಕೃತಿಗಳು: ಬೆಂಕಿಯ ನೆನಪು ( ಎಡುವರ್ಡೋ ಗೆಲಿಯಾನೋ ಕೃತಿಯ ಅನುವಾದ. ಕುವೆಂಪು ಭಾಷಾ ಭಾರತಿ ಬಹುಮಾನ), ಕೊಸಿಮೊ (ಇಟಾಲೋ ಕಾಲ್ವಿನೋ ಕೃತಿಯ ಅನುವಾದ. ಕುವೆಂಪು ಭಾಷಾ ಭಾರತಿ ಪ್ರಶಸ್ತಿ), ಒಳಗಿನ ಬಿಕ್ಕಟ್ಟು ( ಜಿ.ಎನ್.ದೇವಿಯವರ ಕೃತಿ). ಗ್ರಾಮ ಭಾರತ ಮತ್ತು ಕೃಷಿ ಬಿಕ್ಕಟ್ಟುಗಳ ಮೇಲೆ ಬರೆಯುವುದು ಹಾಗೂ ಕತೆ, ಕವನ, ವಿಮರ್ಶೆ ಬರೆಯುವುದು ಇವರ ಆಸಕ್ತಿಗಳು.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ